ಜನ ಸಾಮಾನ್ಯರತ್ತ ತಂತ್ರಜ್ಞಾನ – Gadget-Technology Info Towards Common Man

Posts tagged ‘Gmail’

ಜಿಮೇಲ್‌ನಲ್ಲಿ ಬೇಡವಾದ ಮೇಲ್‌ಗಳನ್ನು ನಿವಾರಿಸಿ, ಸ್ಥಳಾವಕಾಶ ಹೆಚ್ಚಿಸಿಕೊಳ್ಳಿ

ಮಾಹಿತಿ@ತಂತ್ರಜ್ಞಾನ ವಿಜಯ ಕರ್ನಾಟಕ ಅಂಕಣ 94: ಸೆಪ್ಟೆಂಬರ್ 22, 2014
Avinash Columnಇತ್ತೀಚಿನ ದಿನಗಳಲ್ಲಿ ಆನ್‌ಲೈನ್ ವ್ಯವಹಾರಗಳು ಹೆಚ್ಚಾಗುತ್ತಿವೆ. ಫೇಸ್‌ಬುಕ್, ಟ್ವಿಟರ್ ಮಾತ್ರವಲ್ಲದೆ ಹಲವಾರು ಚಿತ್ರವಿಚಿತ್ರ ಸೇವೆಗಳಿಗೆ, ಆ್ಯಪ್‌ಗಳಿಗೆ ನಮಗರಿವಿದ್ದೋ, ಇಲ್ಲದೆಯೋ ನಾವು ನಮ್ಮ ಇಮೇಲ್ ಖಾತೆಯನ್ನು ಬಳಸಿಯೇ ಲಾಗಿನ್/ಸೈನ್ ಅಪ್ ಆಗಿಬಿಡುತ್ತೇವೆ. ಈ ಕಾರಣದಿಂದಾಗಿ, ನಮ್ಮ ಇಮೇಲ್ ವಿಳಾಸ ಬಟಾಬಯಲಾಗುತ್ತಿದೆ. ಇದರಿಂದಾಗಿ ಸ್ಪ್ಯಾಮ್ (ಅನಗತ್ಯ, ಮಾರುಕಟ್ಟೆ ಉದ್ದೇಶಕ್ಕಾಗಿಯೇ ಇರುವ) ಸಂದೇಶಗಳ ಹಾವಳಿಯೂ ಜಾಸ್ತಿಯಾಗುತ್ತಿದೆ.

ಇದಲ್ಲದೆ, ಇಮೇಲ್ ಮೂಲಕ ಫೋಟೋ, ವೀಡಿಯೋ ಅಟ್ಯಾಚ್ಮೆಂಟ್ ಕಳುಹಿಸುವುದು ಮತ್ತು ಸ್ವೀಕರಿಸುವ ಪ್ರಕ್ರಿಯೆಯೂ ಜಾಸ್ತಿಯಾಗತೊಡಗಿದೆ. ಇದರಿಂದಾಗಿ ಉಚಿತವಾಗಿ ಇಮೇಲ್ ಸೇವೆ ನೀಡುತ್ತಿರುವವರೆಲ್ಲರೂ ಈಗಾಗಲೇ ಇದರ ಮಿತಿಯನ್ನು 15 ಜಿಬಿ (ಗಿಗಾಬೈಟ್)ಗೆ ಏರಿಸಿದ್ದಾರೆ. ಹಲವಾರು ವರ್ಷಗಳಿಂದ ಇಮೇಲ್ ಬಳಸುತ್ತಿರುವವರಲ್ಲಿ ಇತ್ತೀಚೆಗೆ ಅವರ 15 ಜಿಬಿ ಕೋಟಾ ಬೇಗಬೇಗನೇ ತುಂಬುತ್ತಿರುವಂತೆ ಅನ್ನಿಸಿರಬಹುದು.

ಹೊಸಬರು ಹಾಗೂ ಹಳೆಯ ಬಳಕೆದಾರರು ಈಗಲೇ ಇಮೇಲ್ ಖಾತೆಯನ್ನು ಕ್ಲೀನ್ ಆಗಿರಿಸಿಕೊಂಡರೆ, ಇರುವ ಸ್ಥಳಾವಕಾಶವನ್ನು ಸಮರ್ಥವಾಗಿ ಬಳಸಿಕೊಳ್ಳಬಹುದು. ಜಿಮೇಲ್‌ನಲ್ಲಿ ಸಾಕಷ್ಟು ಫಿಲ್ಟರ್‌ಗಳು ಲಭ್ಯ ಇರುವುದರಿಂದಾಗಿ ಹಳೆಯ ಮತ್ತು ಅನಗತ್ಯ ಇಮೇಲ್‌ಗಳನ್ನು ಅಳಿಸಿಹಾಕಬಹುದು; ಸ್ಟೋರೇಜ್ ಜಾಗ ಮುಕ್ತವಾಗಿಸಬಹುದು. ಇದು ತೀರಾ ಕಷ್ಟದ ಕೆಲಸ ಏನಲ್ಲ, ಅದಕ್ಕಾಗಿಯೇ ಇರುವ ಕೆಲವೊಂದು ಶಾರ್ಟ್‌ಕಟ್ ವಿಧಾನಗಳ ಮೂಲಕ ಯಾರು ಕೂಡ ಕ್ಲೀನ್ ಮಾಡಿಕೊಳ್ಳಬಹುದು.

ಜಿಮೇಲ್ ಎಂಬುದು ಸರ್ಚ್ ಎಂಜಿನ್ ದೈತ್ಯ ಕಂಪನಿ ಗೂಗಲ್‌ನದ್ದೇ ಆಗಿರುವುದರಿಂದ, ಅದೇ ಸರ್ಚ್ ಎಂಜಿನ್ ಮೂಲಕ ನಿರ್ದಿಷ್ಟ ಇಮೇಲ್‌ಗಳನ್ನು ಫಿಲ್ಟರ್ ಮಾಡಿ, ನಮಗೆ ಬೇಕಾದ್ದನ್ನು ಮಾತ್ರ ಅಳಿಸಲು ಇಲ್ಲಿ ಕೆಲವು ಸಲಹೆಗಳಿವೆ.

ಮೊದಲನೆಯದಾಗಿ ಅತಿದೊಡ್ಡ ಗಾತ್ರದ, ಅಂದರೆ ಹೆಚ್ಚು ಜಾಗ ಆಕ್ರಮಿಸುವ ಫೋಟೋ, ವೀಡಿಯೋ ಅಟ್ಯಾಚ್‌ಮೆಂಟುಗಳಿರುವ ಮೇಲ್‌ಗಳನ್ನು ಅಳಿಸಬೇಕು. ಇಂಥವನ್ನು ಹುಡುಕಲು ಒಂದು ಫಿಲ್ಟರ್ ಕಮಾಂಡ್ ಬಳಸಿದರಾಯಿತು. ಅದಕ್ಕಾಗಿ ಹೀಗೆ ಮಾಡಿ: ಜಿಮೇಲ್ ಲಾಗಿನ್ ಆದ ಬಳಿಕ, ಮೇಲ್ಭಾಗದಲ್ಲಿ ಸರ್ಚ್ ಬಾರ್ (ಹುಡುಕಾಡಲು ಇರುವ ಪಟ್ಟಿ) ಕಾಣಿಸುತ್ತದೆ. ಅದರಲ್ಲಿ Larger:10M ಎಂದು ಟೈಪ್ ಮಾಡಿ, ಹುಡುಕುವ ಚಿಹ್ನೆ (ಭೂತಕನ್ನಡಿ ಚಿತ್ರ) ಕ್ಲಿಕ್ ಮಾಡಿಬಿಡಿ. ಅಂದರೆ 10 ಎಂಬಿಗಿಂತ ಹೆಚ್ಚು ಗಾತ್ರ ಇರುವ ಇಮೇಲ್‌ಗಳೆಲ್ಲವೂ ಕಾಣಿಸುತ್ತವೆ. 10M ಎಂಬುದರ ಬದಲು, ವಿಭಿನ್ನ ಗಾತ್ರದ ಫೈಲ್‌ಗಳಿಗಾಗಿ ಹುಡುಕಾಡಿ ಅವನ್ನು ಡಿಲೀಟ್ ಮಾಡಬಹುದು. ಸರ್ಚ್ ಬಾರ್ ಕೆಳಭಾಗದಲ್ಲಿರುವ ಒಂದು ಬಾಕ್ಸ್ ಕ್ಲಿಕ್ ಮಾಡಿದರೆ, ಕಾಣಿಸುವ ಎಲ್ಲ ಮೇಲ್‌ಗಳನ್ನೂ ಏಕಕಾಲದಲ್ಲಿ ಸೆಲೆಕ್ಟ್ ಮಾಡಬಹುದು, ಎಲ್ಲವುಗಳ ಮೇಲೆ ಕಣ್ಣು ಹಾಯಿಸಿ, ನಿಮಗೆ ಬೇಕಾಗಿರುವ ಮೇಲ್‌ಗಳನ್ನು ಡೀಸೆಲೆಕ್ಟ್ ಮಾಡಿ (ಪ್ರತೀ ಇಮೇಲ್ ಎಡಭಾಗದಲ್ಲಿರುವ ಬಾಕ್ಸ್ ಕ್ಲಿಕ್ ಮಾಡಿದರಾಯಿತು), ಡಿಲೀಟ್ ಬಟನ್ ಒತ್ತಿ.

older_than:1y ಅಂತ ಸರ್ಚ್ ಬಾರ್‌ನಲ್ಲಿ ಹಾಕಿ ಎಂಟರ್ ಕೊಟ್ಟರೆ (ಅಥವಾ ಸರ್ಚ್ ಬಟನ್ ಕ್ಲಿಕ್ ಮಾಡಿದರೆ), 1 ವರ್ಷದ ಹಿಂದಿನ ಮೇಲ್‌ಗಳು ಕಾಣಿಸುತ್ತವೆ. ಬೇಕಿದ್ದರೆ ವರ್ಷದ ಸಂಖ್ಯೆಯನ್ನು ಬದಲಾಯಿಸಿಕೊಳ್ಳಬಹುದು. ಅದೇ ರೀತಿ ನಿರ್ದಿಷ್ಟ ದಿನಾಂಕದ, ಉದಾಹರಣೆಗೆ ಈ ವರ್ಷದ ಜನವರಿ 31ರ ಹಿಂದಿನ ಇಮೇಲ್‌ಗಳು ಬೇಡವೆಂದಾದರೆ, ಅವುಗಳನ್ನು ಹುಡುಕಲು Before:2014/01/31 ಅಂತ ಸರ್ಚ್‌ಬಾರ್‌ನಲ್ಲಿ ಹಾಕಿದರಾಯಿತು. ಇದು ಇಸವಿ/ತಿಂಗಳು/ದಿನಾಂಕ ಮಾದರಿಯಲ್ಲಿರುತ್ತದೆ. ಇದೇ ರೀತಿ, ಇಂತಿಷ್ಟು ವರ್ಷ ಹಿಂದಿನ ಮತ್ತು 1 ಎಂಬಿಗಿಂತ ಹೆಚ್ಚು ಗಾತ್ರವಿರುವ ಇಮೇಲ್‌ಗಳನ್ನು ಫಿಲ್ಟರ್ ಮಾಡಿ ಅಳಿಸಬೇಕೆಂದಾದರೆ, ಸರ್ಚ್ ಬಾರ್‌ನಲ್ಲಿ has:attachment larger:1M older_than:1y ಅಂತ ಟೈಪ್ ಮಾಡಿದರಾಯಿತು. ಸರ್ಚ್ ರಿಸಲ್ಟ್ ಬಂದ ಬಳಿಕ, ನೋಡಿ ಡಿಲೀಟ್ ಮಾಡಿಬಿಡಬಹುದು.

ನಿರ್ದಿಷ್ಟ ವ್ಯಕ್ತಿಯಿಂದ ಅಥವಾ ಸ್ಪ್ಯಾಮ್ ಇಮೇಲ್ ವಿಳಾಸದಿಂದ ಬಂದಿರುವ ಇಮೇಲ್‌ಗಳನ್ನು ಫಿಲ್ಟರ್ ಮಾಡಬೇಕಿದ್ದರೆ, ಸರ್ಚ್ ಬಾರ್‌ನಲ್ಲಿ ಆಯಾ ಆ ಇಮೇಲ್ ವಿಳಾಸ ನಮೂದಿಸಿದರಾಯಿತು. ಎಲ್ಲವೂ ಒಂದೇ ಕಡೆ ಸಿಗುತ್ತವೆ ಮತ್ತು ಏಕಕಾಲದಲ್ಲಿ ಡಿಲೀಟ್ ಮಾಡಬಹುದು. ಸರ್ಚ್ ಬಟನ್ ಸಮೀಪ, ತ್ರಿಕೋನಾಕೃತಿ ಐಕಾನ್ ಕ್ಲಿಕ್ ಮಾಡಿದರೆ, ಹುಡುಕಾಟಕ್ಕೆ ಮತ್ತಷ್ಟು ಆಯ್ಕೆಗಳನ್ನು ಸೇರಿಸಬಹುದು. ಟ್ರೈ ಮಾಡಿ ನೋಡಿ.

ಟೆಕ್ ಟಾನಿಕ್
ಆ್ಯಪ್‌ಗಳಿಗೆ ನಿರ್ಬಂಧ:
ಗೂಗಲ್ ಪ್ಲೇ ಸ್ಟೋರ್‌ನಲ್ಲಿ ನಿಮಗೆ ಬೇಕಾಗಿರುವ, ಬೇಡವಾಗಿರುವ ಆ್ಯಪ್‌ಗಳೆಲ್ಲವೂ ಧುತ್ತನೇ ಕಾಣಿಸಿಕೊಳ್ಳುತ್ತವೆ. ಆದರೆ ಯಾವ ರೀತಿಯ ಆ್ಯಪ್‌ಗಳು ಕಾಣಿಸಿಕೊಳ್ಳಬೇಕು ಎಂಬುದನ್ನು ನಿಮ್ಮ ಆಂಡ್ರಾಯ್ಡ್ ಫೋನ್ ಅಥವಾ ಟ್ಯಾಬ್ಲೆಟ್‌ನಲ್ಲಿ ನೀವೇ ನಿರ್ಬಂಧಿಸಬಹುದಾಗಿದೆ ಎಂಬುದು ಗೊತ್ತೇ? ಮಕ್ಕಳೇನಾದರೂ ನಿಮ್ಮ ಮೊಬೈಲ್ ತೆಗೆದುಕೊಂಡು ಪ್ಲೇ ಸ್ಟೋರ್‌ನಿಂದ ಯದ್ವಾ ತದ್ವಾ ಗೇಮ್‌ಗಳನ್ನು ಡೌನ್‌ಲೋಡ್ ಮಾಡಿಕೊಂಡರೆ? ಇದಕ್ಕಾಗಿ ಆ್ಯಪ್ ನಿರ್ಬಂಧಿಸಬೇಕಿದ್ದರೆ, ಗೂಗಲ್ ಪ್ಲೇ ಸ್ಟೋರ್ ಓಪನ್ ಮಾಡಿ, ಅದರ ಸೆಟ್ಟಿಂಗ್ಸ್ ಮೆನುವಿಗೆ ಹೋಗಿ, ಯೂಸರ್ ಕಂಟ್ರೋಲ್ಸ್ ಎಂಬಲ್ಲಿ ಕಂಟೆಂಟ್ ಫಿಲ್ಟರಿಂಗ್ ಎಂಬ ಆಯ್ಕೆಯೊಂದಿದೆ. ಕಡಿಮೆ ಮೆಚುರಿಟಿ ಉಳ್ಳವನ್ನು, ಹೆಚ್ಚು ಪ್ರಬುದ್ಧವಾಗಿರುವವುಗಳನ್ನು ಅಥವಾ ಎಲ್ಲ ಆ್ಯಪ್‌ಗಳನ್ನು ತೋರಿಸುವ ಆಯ್ಕೆ ಲಭ್ಯವಾಗುತ್ತದೆ. ಇದನ್ನು ಬದಲಾಯಿಸಬೇಕಿದ್ದರೆ ನೀವೇ ಆಯ್ಕೆ ಮಾಡಿಕೊಳ್ಳುವ ಒಂದು ಪಿನ್ ನಂಬರ್ ಹಾಕಬೇಕಾಗುತ್ತದೆ.

ಇಂಟರ್ನೆಟ್ ಇಲ್ಲದೆ ಗೂಗಲ್ ಮೇಲ್ ಉಪಯೋಗಿಸುವುದು

ವಿಜಯ ಕರ್ನಾಟಕ ಅಂಕಣ ಮಾಹಿತಿ@ತಂತ್ರಜ್ಞಾನ 91- ಸೆಪ್ಟೆಂಬರ್ 1, 2014
Avinash Column-1ಎಲ್ಲಾದರೂ ದೂರ ಅಂದರೆ ಇಂಟರ್ನೆಟ್ ಸಂಪರ್ಕವಿಲ್ಲದ ರಿಮೋಟ್ ಪ್ರದೇಶಕ್ಕೆ ಹೋಗಿರುತ್ತೀರಿ ಅಥವಾ ವಿಮಾನದಲ್ಲೋ, ರೈಲಿನಲ್ಲೋ ಪ್ರಯಾಣಿಸುತ್ತಿರುವಾಗ, ಪ್ರಯಾಣದ ಸಮಯವನ್ನು ಸದುಪಯೋಗ ಮಾಡಿಕೊಳ್ಳಬೇಕೆಂಬ ಕಾರಣಕ್ಕೆ, ಲ್ಯಾಪ್‌ಟಾಪ್ ಮೂಲಕ ಜಿಮೇಲ್‌ನಲ್ಲಿರುವ ಇಮೇಲ್‌ಗಳನ್ನು ಚೆಕ್ ಮಾಡಬೇಕು, ಅದರಲ್ಲಿನ ವಿವರಗಳನ್ನು ಓದಬೇಕು ಎಂದು ಅನ್ನಿಸುತ್ತಿದೆ. ಆದರೆ ಇಂಟರ್ನೆಟ್ ಇಲ್ಲದ ಚಿಂತೆ. ಹೀಗಿರುವಾಗ ಏನು ಮಾಡಬಹುದು? ಇಂಥವರಿಗಾಗಿಯೇ ಗೂಗಲ್‌ನ ಜಿಮೇಲ್ ತಂಡವು ಒಂದು ಆಯ್ಕೆಯನ್ನು ಒದಗಿಸಿದೆ. ಅದೇ ಆಫ್‌ಲೈನ್ ಜಿಮೇಲ್.

ಇದರ ಮೂಲಕ, ಇಂಟರ್ನೆಟ್ ಸಂಪರ್ಕವಿಲ್ಲದಿದ್ದರೂ ಕೂಡ ಈಗಾಗಲೇ ಇರುವ ಮೇಲ್‌ಗಳನ್ನು ಓದಬಹುದು ಮತ್ತು ಹೊಸದಾಗಿ ಮೇಲ್ ಬರೆಯಬೇಕಿದ್ದರೆ ಕಂಪೋಸ್ ಮಾಡಬಹುದು. ಇಂಟರ್ನೆಟ್ ಸಂಪರ್ಕ ನಿಧಾನವಾಗಿದ್ದರೂ ಕೂಡ ಆಫ್‌ಲೈನ್ ಜಿಮೇಲ್ ಉಪಯೋಗಕ್ಕೆ ಬರುತ್ತದೆ. ಮತ್ತೆ ಸಂಪರ್ಕ ದೊರೆತಾಗ, ನೀವು ಕಳುಹಿಸಿದ ಮೇಲ್‌ಗಳು ರವಾನೆಯಾಗುತ್ತವೆ.

ಇಂಟರ್ನೆಟ್ ಸಂಪರ್ಕವಿದ್ದರೆ ಆನ್‌ಲೈನ್ ಅಂತ ಅರ್ಥ. ಆಫ್‌ಲೈನ್‌ನಲ್ಲಿ ಇಮೇಲ್‌ಗಳನ್ನು ನೋಡಲು ಈಗಾಗಲೇ ಸಾಕಷ್ಟು ಥರ್ಡ್ ಪಾರ್ಟಿ ತಂತ್ರಾಂಶಗಳಿವೆ. ಉದಾಹರಣೆಗೆ, ಔಟ್‌ಲುಕ್, ಥಂಡರ್‌ಬರ್ಡ್ ಇತ್ಯಾದಿ ಇಮೇಲ್ ಪ್ರೋಗ್ರಾಂಗಳನ್ನು ಇನ್‌ಸ್ಟಾಲ್ ಮಾಡಿಕೊಳ್ಳಬೇಕಾಗುತ್ತದೆ. ಅದಿಲ್ಲದೆಯೇ, ಬರೇ ಒಂದು ಬ್ರೌಸರ್ ಪ್ಲಗ್-ಇನ್ (ಅಂದರೆ ಕಿರು ತಂತ್ರಾಂಶ) ಬಳಸಿದರೆ ಆಫ್‌ಲೈನ್ ಜಿಮೇಲ್ ಉಪಯೋಗಿಸಬಹುದಾಗಿದೆ.

ಅದಕ್ಕೆ ನೀವು ಮಾಡಬೇಕಾಗಿರುವುದಿಷ್ಟೆ. ಇಂಟರ್ನೆಟ್ ಸಂಪರ್ಕವಿರಲಿ. ಬಳಿಕ ಗೂಗಲ್ ಕ್ರೋಮ್ ಬ್ರೌಸರ್ ತೆರೆಯಿರಿ. ಅದರಲ್ಲಿ ಕೆಳ ಭಾಗದಲ್ಲಿ ಬಲ ಮೂಲೆಯಲ್ಲಿ ವೆಬ್ ಸ್ಟೋರ್ ಎಂದು ಬರೆದಿರುವುದನ್ನು ಕ್ಲಿಕ್ ಮಾಡಿ. ಆಗ ನಿಮಗೆ ವೈವಿಧ್ಯಮಯ ಆ್ಯಪ್‌ಗಳಿರುವ ಪುಟ ಗೋಚರಿಸುತ್ತದೆ. ಅಲ್ಲಿರುವ ಸರ್ಚ್ ಬಾರ್‌ನಲ್ಲಿ Gmail Offline ಅಂತ ಸರ್ಚ್ ಮಾಡಿ. ಅಲ್ಲಿ ನಿಮಗೆ ಅದರ ಆ್ಯಪ್ ದೊರೆಯುತ್ತದೆ. ನಿಮ್ಮ ಬ್ರೌಸರ್‌ಗೆ ಅಳವಡಿಸಿಕೊಳ್ಳಲು ಇರುವ ಬಟನ್ ಕ್ಲಿಕ್ ಮಾಡಿ. ಆ್ಯಪ್ ಸಿಗದೇ ಇದ್ದರೆ, http://bit.ly/GmailOfflline ಎಂಬಲ್ಲಿ ಹೋಗಿ. ಇನ್‌ಸ್ಟಾಲ್ ಮಾಡಿಕೊಳ್ಳಿ. ನಂತರ ಕ್ರೋಮ್ ಬ್ರೌಸರ್ ಓಪನ್ ಮಾಡಿ. ಒಂದೋ ಎಡ ಮೇಲ್ಭಾಗದ ಮೂಲೆಯಲ್ಲಿರುವ Apps ಎಂಬ ಬಣ್ಣಬಣ್ಣದ ಚೌಕಗಳಿರುವ ಬಟನ್ ಕ್ಲಿಕ್ ಮಾಡಿ ಅಥವಾ ಅಡ್ರೆಸ್ ಬಾರ್‌ನಲ್ಲಿ chrome://apps/ ಎಂಬ ಯುಆರ್‌ಎಲ್ ಟೈಪ್ ಮಾಡಿ ಎಂಟರ್ ಕೊಡಿ. ಆಗ ನಿಮಗೆ ಕ್ರೋಮ್ ಬ್ರೌಸರ್‌ನಲ್ಲಿ ಇನ್‌ಸ್ಟಾಲ್ ಆಗಿರುವ ಎಲ್ಲ ಆ್ಯಪ್‌ಗಳು, ಪ್ಲಗಿನ್‌ಗಳ ಬಟನ್‌ಗಳು ಗೋಚರಿಸುತ್ತವೆ. ಅಲ್ಲೇ Gmail Offline ಅಂತ ಇರೋದನ್ನು ಕ್ಲಿಕ್ ಮಾಡಿ. ಲಾಗಿನ್ ಆಗಿ. ನಿಮ್ಮ ಹಳೆಯ ಮೇಲ್‌ಗಳೆಲ್ಲವೂ ಒಂದು ಬಾರಿ ನಿಮ್ಮ ಕಂಪ್ಯೂಟರಿಗೆ ಡೌನ್‌ಲೋಡ್ ಆಗುತ್ತವೆ. ಪದೇ ಪದೇ ಹಳೆಯದೆಲ್ಲವೂ ಡೌನ್‌ಲೋಡ್ ಆಗುವುದಿಲ್ಲ.

ಇಷ್ಟಾದರೆ ಆಯಿತು. ಇಂಟರ್ನೆಟ್ ಸಂಪರ್ಕವಿಲ್ಲದಿದ್ದರೂ ಕೂಡ ನೀವು ಆಫ್‌ಲೈನ್ ಜಿಮೇಲ್ ಓಪನ್ ಮಾಡಿಕೊಂಡು, ಬೇಕಾದ ಕೆಲಸಗಳನ್ನು ಮಾಡಬಹುದು. ಮತ್ತೆ ಆನ್‌ಲೈನ್ ಆದಾಗ, ಅಂದರೆ ಇಂಟರ್ನೆಟ್ ಸಂಪರ್ಕ ದೊರೆತಾಗ, ಈ ಫೋಲ್ಡರ್‌ನಲ್ಲಿರುವ ಎಲ್ಲ ಮೇಲ್‌ಗಳೂ ಸಿಂಕ್ರನೈಸ್ ಆಗುತ್ತವೆ. ಆಫ್‌ಲೈನ್ ಜಿಮೇಲ್‌ನಲ್ಲಿ, ಒಂದು ವಾರ ಅಥವಾ ಒಂದು ತಿಂಗಳ ಮೇಲ್‌ಗಳು ಮಾತ್ರ ಲಭ್ಯವಾಗಲಿ ಅಂತ ಆಯ್ಕೆ ಮಾಡಿಕೊಳ್ಳಲೂಬಹುದು. ಸೆಟ್ಟಿಂಗ್ಸ್ ಬಟನ್ ಕ್ಲಿಕ್ ಮಾಡಿದರೆ, Download mails from past week, 2 weeks, month ಅನ್ನುವ ಆಯ್ಕೆಗಳಿವೆ. ಈ ರೀತಿ ಮಾಡುವುದರಿಂದ, ಡೇಟಾ ವೆಚ್ಚವನ್ನೂ, ಕಂಪ್ಯೂಟರಿನಲ್ಲಿರುವ ಮೆಮೊರಿ ಸ್ಪೇಸ್ ಅನ್ನೂ ಉಳಿಸಬಹುದಾಗಿದೆ.

ಆದರೆ ನೆನಪಿಟ್ಟುಕೊಳ್ಳಲೇಬೇಕಾದ ವಿಷಯ ಎಂದರೆ, ನಿಮ್ಮ ಸ್ವಂತ ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್ ಆಗಿದ್ದರೆ ಮಾತ್ರ ಆಫ್‌ಲೈನ್ ಜಿಮೇಲ್ ಬಳಸಿ. ಬೇರೆಯವರ ಕಂಪ್ಯೂಟರ್/ಲ್ಯಾಪ್‌ಟಾಪಲ್ಲಿ ಬಳಸಬೇಡಿ. ಯಾಕೆಂದರೆ, ಈ ಸಂದೇಶಗಳು ಡೌನ್‌ಲೋಡ್ ಆಗುವುದು ಆಯಾ ಕಂಪ್ಯೂಟರುಗಳಿಗೆ. ಹೀಗಾಗಿ, ಬೇರೆಯವರು ಈ ಕಂಪ್ಯೂಟರ್ ಬಳಸುತ್ತಾರೆಂದಾದರೆ, ಅವರು ನಿಮ್ಮ ಇಮೇಲ್ ಸಂದೇಶಗಳನ್ನು ಓದುವ ಸಾಧ್ಯತೆ ಇರುತ್ತದೆ. ಹಾಗಾಗದಂತೆ ನೋಡಿಕೊಳ್ಳಿ.

ಟೆಕ್ ಟಾನಿಕ್
ಕ್ಲೋಸ್ ಮಾಡಿದ ಬ್ರೌಸರ್ ತೆರೆಯಲು

ಹೆಚ್ಚಿನವರು ಇಂಟರ್ನೆಟ್ ಜಾಲಾಡಲು ವೇಗವಾಗಿ ಕಾರ್ಯಾಚರಿಸುತ್ತದೆ ಎಂಬ ಕಾರಣಕ್ಕೆ ಗೂಗಲ್‌ನ ಕ್ರೋಮ್ ಅಥವಾ ಫೈರ್‌ಫಾಕ್ಸ್ ಬ್ರೌಸರನ್ನು ಇನ್‌ಸ್ಟಾಲ್ ಮಾಡಿಕೊಂಡು ಬಳಸುತ್ತಾರೆ. ಏಕ ಕಾಲಕ್ಕೆ ಹಲವು ವೆಬ್ ಪುಟಗಳನ್ನು ತೆರೆದಿಡಲು ಇಲ್ಲಿರುವ ಟ್ಯಾಬ್‌ಗಳು ನೆರವಾಗುತ್ತವೆ. ಆದರೆ, ಆಕಸ್ಮಿಕವಾಗಿ ಒಂದು ಟ್ಯಾಬ್ ಅನ್ನು ಕ್ಲೋಸ್ ಮಾಡಿದರೆ, ಅದರಲ್ಲಿ ನೋಡಲು ಏನೋ ಬಾಕಿಯಾಗಿದೆ ಎಂದುಕೊಂಡರೆ ಆ ವೆಬ್ ಪುಟವನ್ನು ಮರಳಿ ನೋಡುವುದು ಹೇಗೆ? ಕಂಟ್ರೋಲ್ ಶಿಫ್ಟ್ ಟಿ (Ctrl+Shift+t) ಅಂತ ಒತ್ತಿದರೆ, ಕೊನೆಯದಾಗಿ ಕ್ಲೋಸ್ ಮಾಡಿದ ಟ್ಯಾಬ್‌ನಲ್ಲಿದ್ದ ವೆಬ್ ಪುಟ ಪುನಃ ತೆರೆದುಕೊಳ್ಳುತ್ತದೆ. ಮತ್ತೊಂದು ಸಲ ಕಂಟ್ರೋಲ್ ಶಿಫ್ಟ್ ಟಿ ಒತ್ತಿದರೆ, ಅದಕ್ಕೂ ಹಿಂದೆ ಕ್ಲೋಸ್ ಮಾಡಿದ್ದ ವೆಬ್ ಪುಟ ಓಪನ್ ಆಗುತ್ತದೆ. ಈ ಕಮಾಂಡ್ ಉಪಯೋಗಿಸದಿದ್ದರೆ, ಹಿಸ್ಟರಿ ಎಂಬಲ್ಲಿ ಹೋಗಿ, ಈಗಷ್ಟೇ ಕ್ಲೋಸ್ ಮಾಡಿದ ಟ್ಯಾಬ್ ಯಾವುದು ಅಂತೆಲ್ಲಾ ಹುಡುಕಬಹುದು. ಆದರೆ ಇದಕ್ಕೆ ತಗುಲುವ ಸಮಯವು ಈ ಶಾರ್ಟ್‌ಕಟ್ ಮೂಲಕ ಉಳಿತಾಯವಾಗುತ್ತದೆ.

ಜಿಮೇಲ್‌ನಲ್ಲೇ ಬೇರೆ ಇಮೇಲ್ ಐಡಿ ಮೂಲಕ ಮೇಲ್ ಕಳುಹಿಸಿ

ವಿಜಯ ಕರ್ನಾಟಕ ಮಾಹಿತಿ@ತಂತ್ರಜ್ಞಾನ ಅಂಕಣ -89 ಆಗಸ್ಟ್ 18, 2014
Avinash Column-1ಮಾಹಿತಿಯ ಅಬ್ಬರದ ಯುಗದಲ್ಲಿ ಒಂದೇ ಒಂದು ಇಮೇಲ್ ಖಾತೆ ಮಾತ್ರ ಹೊಂದಿದ್ದರೆ ಸಾಕಾಗುವುದಿಲ್ಲ. ಹಲವರು ಔಟ್‌ಲುಕ್, ಯಾಹೂ, ರಿಡಿಫ್ ಮುಂತಾದವುಗಳಲ್ಲಿ ಇಮೇಲ್ ಖಾತೆಗಳನ್ನು ಹೊಂದಿರುತ್ತಾರೆ. ಅಲ್ಲದೆ, ನಮ್ಮದೇ ಆದ ಆಫೀಸ್ ಇಮೇಲ್ ಕೂಡ ಜತೆಗಿರುತ್ತದೆ. ಪ್ರತಿಯೊಂದು ಇಮೇಲ್ ಖಾತೆಗೂ ಕಂಪ್ಯೂಟರಿನಲ್ಲಿ ಪ್ರತ್ಯೇಕವಾಗಿ ಲಾಗಿನ್ ಆಗುವುದು ಕಷ್ಟವಾಗಿದ್ದರೆ, ಸ್ಮಾರ್ಟ್‌ಫೋನ್‌ನಲ್ಲಿ ಪ್ರತ್ಯೇಕ ಅಪ್ಲಿಕೇಶನ್‌ಗಳನ್ನು ಸ್ಥಾಪಿಸಿಕೊಳ್ಳಬೇಕಾಗುತ್ತದೆ. ಹೀಗಿರುವಾಗ, ಒಂದು ಜಿಮೇಲ್ ಖಾತೆ ಹೊಂದಿದ್ದರೆ, ಹಲವಾರು ಖಾತೆಗಳನ್ನು ಅದರಿಂದಲೇ ನಿಭಾಯಿಸಬಹುದು. ಅಂದರೆ, ಜಿಮೇಲ್ ಖಾತೆಗೆ ಲಾಗಿನ್ ಆದರೆ, ಬೇರೆ ಯಾವುದೇ ಖಾತೆಗಳ ಮೂಲಕ ಇಮೇಲ್ ಕಳುಹಿಸಬಹುದು ಎಂಬುದು ನಿಮಗೆ ಗೊತ್ತೇ?

ಇದರಲ್ಲಿ ಒಂದಿಷ್ಟು ಸುಲಭವಾದ ಕಸರತ್ತು ಮಾಡಬೇಕಾಗುತ್ತದೆ ಮತ್ತು ಒಂದು ಬಾರಿ ಇದಕ್ಕಾಗಿ ಸಮಯ ವ್ಯಯಿಸಿದರೆ ಸಾಕಾಗುತ್ತದೆ. ಬಳಿಕ ಎಲ್ಲ ಮೇಲ್‌ಗಳನ್ನೂ ಜಿಮೇಲ್ ಖಾತೆಯಿಂದಲೇ ಕಳುಹಿಸಬಹುದು. ಅಂದರೆ ನೀವು ಜಿಮೇಲ್ ಮೂಲಕವಾಗಿ ಉತ್ತರಿಸಿದರೂ, ಅದು ಆಯಾ ಇಮೇಲ್ ಐಡಿಗಳ (ಯಾಹೂ, ಕಚೇರಿ ಮೇಲ್, ಔಟ್‌ಲುಕ್ ಇತ್ಯಾದಿ) ಮೂಲಕವೇ ಸಂಬಂಧಪಟ್ಟವರಿಗೆ ತಲುಪುತ್ತದೆ. ಇಲ್ಲವಾದರೆ, ಪ್ರತ್ಯೇಕ ಆ್ಯಪ್‌ಗಳನ್ನು ತೆರೆದುಕೊಂಡು, ಮತ್ತು ಹಲವಾರು ವಿಂಡೋಗಳನ್ನು ತೆರೆದಿಟ್ಟುಕೊಂಡು ಒಂದೊಂದಾಗಿ ಮೇಲ್ ಕಳುಹಿಸಬೇಕಾಗುತ್ತದೆ.

ಜಿಮೇಲ್ ಖಾತೆಯೊಳಗಿನಿಂದಲೇ ನಿಮ್ಮ ಎಲ್ಲ ಇಮೇಲ್ ವಿಳಾಸಗಳ ಮೂಲಕವಾಗಿ ಮೇಲ್ ಕಳುಹಿಸಬೇಕಿದ್ದರೆ ಅದರಲ್ಲಿಯೇ ಒಂದು ಆಯ್ಕೆ ಇದೆ. ಅಂದರೆ, ನೀವು ಜಿಮೇಲ್ ಖಾತೆಯಿಂದ ಇಮೇಲ್ ಕಳುಹಿಸಿದರೂ, ಅದು ನಿಮ್ಮ ಬೇರೆ ಮೇಲ್ ಸರ್ವರ್ ಮೂಲಕವೇ ಕಳುಹಿಸಿದ್ದೆಂಬಂತೆ ಬೇರೆಯವರಿಗೆ ಕಾಣಿಸುತ್ತದೆ. ಇದಕ್ಕಾಗಿ ಕಂಪ್ಯೂಟರಿನಲ್ಲಿ ಜಿಮೇಲ್‌ಗೆ ಲಾಗಿನ್ ಆಗಿ, ಬಲ ಮೇಲ್ಭಾಗದಲ್ಲಿ ಕಾಣಿಸುವ ಗಿಯರ್ ಐಕಾನ್ ಕ್ಲಿಕ್ ಮಾಡಿ, ಸೆಟ್ಟಿಂಗ್ಸ್ ಆಯ್ಕೆ ಮಾಡಿಕೊಳ್ಳಿ. ಅದರಲ್ಲಿ ಹಲವಾರು ಟ್ಯಾಬ್‌ಗಳಿರುತ್ತವೆ. General, Labels, Inbox ಆದಮೇಲೆ ಕಾಣಿಸುವ Accounts and Import ಎಂಬ ಟ್ಯಾಬ್ ಆಯ್ಕೆ ಮಾಡಿಕೊಳ್ಳಿ.

ಕೆಳಗೆ ನೋಡಿದರೆ, Send mail as ಎಂಬ ವಿಭಾಗ ಕಾಣಿಸುತ್ತದೆ. ಅದರಲ್ಲಿ, Add another email address you own ಎಂಬ ಆಯ್ಕೆ ಲಭ್ಯವಾಗುತ್ತದೆ. ಅದನ್ನು ಕ್ಲಿಕ್ ಮಾಡಿ. ಅಲ್ಲಿ ನಿಮ್ಮ ಇಮೇಲ್ ಐಡಿ ದಾಖಲಿಸಿ. ಮುಂದಿನ ಹಂತಕ್ಕೆ ಹೋಗಿ. ನಿಮ್ಮ ಹೆಸರು ನಮೂದಿಸಬೇಕಾಗುತ್ತದೆ. ನಿಮ್ಮ ಇಮೇಲ್ ವಿಳಾಸವೂ ಇರುತ್ತದೆ. ಆದರೆ, ಈ ವಿಳಾಸವನ್ನು ಆಲಿಯಾಸ್ ವಿಳಾಸ ಎಂದು ಪರಿಗಣಿಸಲಾಗುತ್ತದೆ. ಸಾಮಾನ್ಯವಾಗಿ ಯಾಹೂ, ರಿಡಿಫ್, ಔಟ್‌ಲುಕ್ ಮುಂತಾದ ಇಮೇಲ್ ಪ್ರೊವೈಡರ್‌ಗಳಲ್ಲಿರುವ ಖಾತೆಗಳನ್ನು ಜಿಮೇಲ್ ತಾನಾಗಿಯೇ ಕಾನ್ಫಿಗರ್ ಮಾಡಿಕೊಳ್ಳುತ್ತದೆ. ನೀವು ಆ ಅನ್ಯ ಇಮೇಲ್ ಖಾತೆಯ ಪಾಸ್‌ವರ್ಡ್ ದಾಖಲಿಸಬೇಕಾಗುತ್ತದೆ. ಮುಂದಿನ ಹಂತಗಳನ್ನು ನಿಧಾನವಾಗಿ ಓದಿಯೇ ಕ್ಲಿಕ್ ಮಾಡುತ್ತಾ ಹೋಗಿ. Add Account ಅಂತ ಕ್ಲಿಕ್ ಮಾಡಬೇಕು. ಆಗ, ನಿಮ್ಮ ಅನ್ಯ ಇಮೇಲ್ ಖಾತೆಗೊಂದು ದೃಢೀಕರಣ ಇಮೇಲ್ ಕಳುಹಿಸಲಾಗುತ್ತದೆ. ಅದನ್ನು ತೆರೆದು, ಲಿಂಕ್ ಕ್ಲಿಕ್ ಮಾಡಬಹುದು ಅಥವಾ ಅದರಲ್ಲಿರುವ ಕೋಡ್ ಅನ್ನು ಇಲ್ಲಿನ ಸೆಟ್ಟಿಂಗ್‌ನಲ್ಲಿ ನಮೂದಿಸಿದರೂ ಸಾಕಾಗುತ್ತದೆ. ಇದು ಯಾಕೆಂದರೆ, ನೀವು ನಮೂದಿಸಿರುವ ಇಮೇಲ್ ಖಾತೆಯು ನಿಜವಾಗಿಯೂ ನಿಮ್ಮದೇ ಒಡೆತನದಲ್ಲಿದೆ ಎಂಬುದನ್ನು ಗೂಗಲ್ ಖಚಿತಪಡಿಸಿಕೊಳ್ಳಲು. ಇದು ಕೆಲವೊಮ್ಮೆ Spam ಫೋಲ್ಡರ್‌ನಲ್ಲೂ ಇರುವ ಸಾಧ್ಯತೆಗಳಿವೆ. ಸರಿಯಾಗಿ ನೋಡಿಕೊಳ್ಳಿ.

ಈಗ ಸೆಟಪ್ ಪೂರ್ಣಗೊಂಡಿತು. ಇನ್ನು ಜಿಮೇಲ್ ಒಳಗಿನಿಂದಲೇ ನೀವು ನಿಮ್ಮ ಮತ್ತೊಂದು ಇಮೇಲ್ ವಿಳಾಸವನ್ನು ಆಯ್ದುಕೊಂಡು, ಅದರ ಪರವಾಗಿ ಇಮೇಲ್ ಕಳುಹಿಸಬಹುದಾಗಿದೆ.

ಆದರೆ ನೆನಪಿಡಿ, ನೀವು ಜಿಮೇಲ್ ಮೂಲಕ ಕಳುಹಿಸುವ ಇಮೇಲ್, ನಿಮ್ಮ ಬೇರೆ ಖಾತೆಯಲ್ಲಿ ಸಿಂಕ್ರನೈಜ್ ಆಗಿರುವುದಿಲ್ಲ. ಅತ್ಯಂತ ಅಗತ್ಯ ಬಿದ್ದಾಗ, ನಿಮ್ಮ ಅನ್ಯ ಮೇಲ್ ಖಾತೆಯಿಂದ ಸಂದೇಶ ಕಳುಹಿಸಲು ಈ ವ್ಯವಸ್ಥೆಯನ್ನು ಬಳಸಬಹುದು.

ಈ ರೀತಿ ಕಂಪ್ಯೂಟರ್ ಬ್ರೌಸರ್‌ನಲ್ಲಿ ಒಮ್ಮೆ ಸೆಟ್ಟಿಂಗ್ ಮಾಡಿಕೊಂಡರೆ, ಸ್ಮಾರ್ಟ್‌ಫೋನ್‌ಗಳಲ್ಲಿ ಕೂಡ ಮೇಲ್ ಕಳುಹಿಸುವಾಗ, ಯಾವ ಮೇಲ್ ಐಡಿಯಿಂದ ಕಳುಹಿಸಬೇಕು ಎಂದು ಆಯ್ಕೆ ಮಾಡುವ ಅವಕಾಶ ದೊರೆಯುತ್ತದೆ.


ಟೆಕ್-ಟಾನಿಕ್
ಆ್ಯಪ್‌ಗಳನ್ನು ಗುಂಪುಗೂಡಿಸಿ

ಆಂಡ್ರಾಯ್ಡ್‌ನ ಇತ್ತೀಚಿನ ಆವೃತ್ತಿಯ ಸ್ಮಾರ್ಟ್‌ಫೋನ್‌ಗಳಲ್ಲಿ ಹೋಂ ಸ್ಕ್ರೀನ್‌ನಲ್ಲಿ ಆ್ಯಪ್‌ಗಳ ಸಂಖ್ಯೆ ಕಡಿಮೆ ಮಾಡಿ, ಬ್ಯಾಕ್‌ಗ್ರೌಂಡ್ ಚಿತ್ರ ಚೆನ್ನಾಗಿ ಕಾಣಿಸುವಂತೆ ಮಾಡಬಹುದು. ಸಂಬಂಧಿತ ಆ್ಯಪ್‌ಗಳನ್ನು ಗುಂಪುಗೂಡಿಸುವ ಮೂಲಕ ಇದು ಸಾಧ್ಯ. ಉದಾಹರಣೆಗೆ, ಎಲ್ಲ ಇಮೇಲ್ ಆ್ಯಪ್‌ಗಳು ಅಥವಾ ಮೆಸೇಜಿಂಗ್ ಆ್ಯಪ್‌ಗಳನ್ನು ಗುಂಪು ಮಾಡಿ, ಅದಕ್ಕೆ ಇಮೇಲ್ ಅಥವಾ ಮೆಸೇಜ್ ಅಂತ ಹೆಸರಿಡಬಹುದು. ಇದನ್ನು ಮಾಡಲು, ನಿಮಗೆ ಅಗತ್ಯವಿರುವ ಎಲ್ಲ ಆ್ಯಪ್‌ಗಳನ್ನು ಹೋಂ ಸ್ಕ್ರೀನ್‌ಗೆ ತನ್ನಿ. ಅಲ್ಲಿ ಒಂದೇ ರೀತಿಯ ಆ್ಯಪ್‌ಗಳನ್ನು ಡ್ರ್ಯಾಗ್ ಮಾಡಿ, ಒಂದರ ಮೇಲೊಂದರಂತೆ ಎಳೆದು ಬಿಡಿ. ಅವುಗಳು ಎಲ್ಲವೂ ಒಂದೇ ಆ್ಯಪ್‌ನ ಜಾಗದಲ್ಲಷ್ಟೇ ಗುಂಪಾಗಿರುತ್ತವೆ. ಆ ಗುಂಪಿನ ಹೆಸರು ಟಚ್ ಮಾಡಿದರೆ, ಅದನ್ನು ನಿಮಗೆ ಬೇಕಾದಂತೆ ಬದಲಿಸಲು ಅವಕಾಶ ಲಭ್ಯವಾಗುತ್ತದೆ.

ಜಿಮೇಲ್‌ನಲ್ಲಿ ಕನ್ನಡ ಟೈಪಿಂಗ್: ಇನ್ನಾದರೂ ಕಂಗ್ಲಿಷ್ ನಿಲ್ಲಿಸಿ

ಮಾಹಿತಿ@ತಂತ್ರಜ್ಞಾನ: ಅವಿನಾಶ್ ಬಿ. ವಿಕ ಅಂಕಣ 50, 02 ಸೆಪ್ಟೆಂಬರ್ 2013
ಭಾರತೀಯ ಭಾಷೆಗಳನ್ನು ಬೆಂಬಲಿಸುವಲ್ಲಿ ಗೂಗಲ್ ಮುಂದಿದೆ. ಅದು ಸೇವೆ ಒದಗಿಸುತ್ತಿರುವ ಜಿಮೇಲ್‌ನಲ್ಲಿ ಕನ್ನಡ ಟೈಪಿಂಗ್‌ಗೆ ಕೂಡ ಅವಕಾಶವಿದೆ ಎನ್ನೋದು ಬಹುತೇಕರಿಗೆ ಗೊತ್ತಿಲ್ಲ ಎಂಬುದು ಅವರಿಂದ ಬರುವ ಇಮೇಲ್‌ಗಳಲ್ಲಿರುವ ಕಂಗ್ಲಿಷ್‌ನಿಂದಲೇ (ಇಂಗ್ಲಿಷ್ ಲಿಪಿಯಲ್ಲಿ ಕನ್ನಡ ಪದಗಳು) ತಿಳಿಯುತ್ತದೆ.

ಜಿಮೇಲ್ ಪೂರ್ತಿಯಾಗಿ ಕನ್ನಡದಲ್ಲೇ ನೋಡುವುದು ಮತ್ತು ಅದರಲ್ಲಿ ಕನ್ನಡ ಟೈಪಿಂಗ್ ಎನೇಬಲ್ ಮಾಡುವುದು ಹೇಗೆ ಅಂತ ತಿಳಿದುಕೊಳ್ಳೋಣ.

ನಿಮ್ಮ ಜಿಮೇಲ್‌ಗೆ ಸೈನ್ ಇನ್ ಆದ ಬಳಿಕ ಮೇಲ್ಭಾಗದ ಬಲ ತುದಿಯಲ್ಲಿ ಸೆಟ್ಟಿಂಗ್ಸ್‌ನ ಚಿಹ್ನೆ ಕಾಣಿಸುತ್ತದೆ. ಅದನ್ನು ಕ್ಲಿಕ್ ಮಾಡಿದ ತಕ್ಷಣ, ಪಾಪ್-ಅಪ್ ವಿಂಡೋ ಕಾಣಿಸಿಕೊಳ್ಳುತ್ತದೆ. ಅದರಲ್ಲಿ ಕೆಳಗೆ ಸೆಟ್ಟಿಂಗ್ಸ್ ಎಂಬುದನ್ನು ಆಯ್ದುಕೊಳ್ಳಿ. ಹಲವಾರು ಟ್ಯಾಬ್‌ಗಳಿರುತ್ತವೆಯಾದರೂ, ಜನರಲ್ ಎಂಬ ಮೊದಲ ಟ್ಯಾಬ್ ತೆರೆದುಕೊಳ್ಳುತ್ತದೆ.

ಅದರಲ್ಲಿ ಮೊದಲು ಕಾಣಿಸಿಕೊಳ್ಳುವುದು Gmail display language ಎಂಬ ಆಯ್ಕೆ. ಅದರಲ್ಲಿ ನೀವು ಕನ್ನಡವನ್ನು ಆಯ್ದುಕೊಂಡರೆ, ಪೂರ್ತಿಯಾಗಿ ಜಿಮೇಲ್‌ನ ಪುಟದಲ್ಲಿರುವ ಎಲ್ಲವೂ ಕನ್ನಡದಲ್ಲಿಯೇ ಕಾಣಿಸುತ್ತದೆ. ಕೆಳಗೆ Save Changes ಅಂತ ಮಾಡಿದಾಗ, ಪುಟದಲ್ಲಿರುವ ಬಹುತೇಕ ಅಂದರೆ, ಮೂಲತಃ ಜಿಮೇಲ್‌ನಲ್ಲಿ ಅಡಕವಾಗಿರುವ ಪದಗಳು (ಇನ್‌ಬಾಕ್ಸೃ್, ದಿನಾಂಕ ಇತ್ಯಾದಿ) ಕನ್ನಡದಲ್ಲಿಯೇ ಕಾಣಿಸಿಕೊಳ್ಳುತ್ತವೆ. ಅದು ಬೇಡವೆಂದಾದರೆ ಮತ್ತೆ ಭಾಷೆ ಬದಲಾಯಿಸಿಕೊಳ್ಳಬಹುದು.

ಭಾಷೆ ಆಯ್ಕೆ ಮಾಡಿಕೊಂಡ ಸ್ಥಳದಲ್ಲೇ ಕೆಳಗಡೆ Show all language options ಅಂತ ಕ್ಲಿಕ್ ಮಾಡಿದಾಗ, Enable input tools ಎಂಬಲ್ಲಿ ಚೆಕ್ ಬಾಕ್ಸ್‌ನಲ್ಲಿ ರೈಟ್ ಮಾರ್ಕ್ ಹಾಕಿದರೆ, ಕನ್ನಡ ಸಹಿತವಾಗಿ ಎಲ್ಲ ಭಾಷೆಗಳಲ್ಲಿ ಟೈಪ್ ಮಾಡುವ ಟೂಲ್ ಎನೇಬಲ್ ಆಗುತ್ತದೆ. ಟ್ರಾನ್ಸ್‌ಲಿಟರೇಶನ್ (ಲಿಪ್ಯಂತರ) ಹಾಗೂ ಇನ್‌ಸ್ಕ್ರಿಪ್ಟ್ ಎಂಬ ಶೈಲಿಗಳಲ್ಲಿ ಟೈಪ್ ಮಾಡುವವರಿಗೆ ಇದು ಅನುಕೂಲ. ಲಿಪ್ಯಂತರ ಅಥವಾ ಟ್ರಾನ್ಸ್‌ಲಿಟರೇಶನ್ ಎಂದರೆ, ಓದಲು ಮತ್ತು ಅರ್ಥ ಮಾಡಿಕೊಳ್ಳಲು ತ್ರಾಸವಾಗುವ ಕಂಗ್ಲಿಷ್‌ನಲ್ಲಿ (ಕನ್ನಡ+ಇಂಗ್ಲಿಷ್ ಅಂದರೆ ಕನ್ನಡವನ್ನು kannada, ವಿಜಯ ಕರ್ನಾಟಕ ಎಂಬುದನ್ನು vijaya karnataka ಅಂತ) ಬರೆದಿರುವುದು ಕನ್ನಡಕ್ಕೆ ಪರಿವರ್ತನೆಗೊಳ್ಳುತ್ತದೆ.

ಇನ್‌ಸ್ಕ್ರಿಪ್ಟ್ ಕಲಿತುಕೊಳ್ಳಲು ಸ್ವಲ್ಪ ಕಷ್ಟ, ಆದರೆ ಕಲಿತ ಮೇಲೆ ಟೈಪಿಂಗ್ ವೇಗವಾಗುತ್ತದೆ. ಮೇಲ್ ಬರೆಯುವಾಗ ಮೇಲ್ಭಾಗದಲ್ಲಿ ಕೀಬೋರ್ಡ್ ಚಿಹ್ನೆ ಕಾಣಿಸಿಕೊಳ್ಳುತ್ತದೆ. ಅದನ್ನು ಕ್ಲಿಕ್ ಮಾಡಿದರೆ, ಯಾವ ಇಂಗ್ಲಿಷ್ ಅಕ್ಷರ ಟೈಪ್ ಮಾಡಿದರೆ ಯಾವ ಕನ್ನಡ ಅಕ್ಷರ ಮೂಡುತ್ತದೆಂದು ತಿಳಿಯುವ ಕಾರಣ, ಇನ್‌ಸ್ಕ್ರಿಪ್ಟ್ ಶೈಲಿಯನ್ನು ತಮ್ಮದಾಗಿಸಿಕೊಳ್ಳಬಹುದು.

ಹೀಗಾಗಿ, ಇಂಟರ್ನೆಟ್ ಸಂಪರ್ಕವಿದ್ದರೆ, ಇದೇ ಜಿಮೇಲ್‌ನಲ್ಲಿ ಲಭ್ಯವಿರುವ ಕನ್ನಡ ಅಥವಾ ದೇಶದ ಬೇರಾವುದೇ ಭಾಷೆಯ ಲಿಪಿಯಲ್ಲಿ ಬರೆಯುವ ಅವಕಾಶವನ್ನು ಉಪಯೋಗಿಸಿ, ಅಲ್ಲಿಂದ ಕಾಪಿ ಮಾಡಿಕೊಂಡರೆ, ಫೇಸ್‌ಬುಕ್ ಅಥವಾ ಬ್ಲಾಗಿನಲ್ಲಿ (ಜಿಮೇಲ್‌ನಲ್ಲಿರುವಂತೆಯೇ ಬ್ಲಾಗ್‌ಸ್ಪಾಟ್‌ನಲ್ಲಿಯೂ ಕನ್ನಡ ಬಳಸಬಹುದು) ಕಂಗ್ಲಿಷ್ ಬರೆಯುವುದನ್ನು ನಿಲ್ಲಿಸಬಹುದು.

ಜಿಮೇಲ್‌ನಲ್ಲಿ ಕನ್ನಡ ಡಿಕ್ಷನರಿ: ಜಿಮೇಲ್‌ನಲ್ಲಿ ನೀವು ಚಾಟ್ ಎನೇಬಲ್ ಮಾಡಿದ್ದರೆ ನಿಮಗೊಂದು ಅನುಕೂಲವಿದೆ. ಅಲ್ಲೇ ಕನ್ನಡ ಡಿಕ್ಷನರಿ ಇದೆ ಎಂಬುದು ಎಷ್ಟು ಮಂದಿಗೆ ಗೊತ್ತಿದೆ? Kn.dict.botjabber.org ಎಂಬುದನ್ನು ನಿಮ್ಮ ಚಾಟಿಂಗ್‌ಗೆ ಆಹ್ವಾನಿಸಿ ಫ್ರೆಂಡ್ ಮಾಡಿಕೊಳ್ಳಿ. ಆಹ್ವಾನ ಸ್ವೀಕಾರವಾದ ತಕ್ಷಣ, ಚಾಟಿಂಗ್ ಬಾಕ್ಸ್‌ನಲ್ಲಿ ಹಸಿರು ಬಟನ್ ಕಾಣಿಸುತ್ತಿದ್ದರೆ, ನಿಮಗೆ ಬೇಕಾದ ಇಂಗ್ಲಿಷ್ ಪದವನ್ನು ಚಾಟ್ ಸಂದೇಶವಾಗಿ ಕಳುಹಿಸಿ. ತಕ್ಷಣವೇ, ಅದರ ಕನ್ನಡ ಪದವು ಉತ್ತರ ರೂಪದಲ್ಲಿ ನಿಮಗೆ ಬರುತ್ತದೆ. ನೀವು ಕೇಳಿದ ಪದ ಇಲ್ಲದಿದ್ದರೆ, ಲಭ್ಯವಿಲ್ಲ ಎಂದೂ ತಿಳಿಸುತ್ತದೆ. ಒಂದು ವಾಕ್ಯವನ್ನೇ ಟೈಪ್ ಮಾಡಿದರೆ, ಒಂದು ಪದವನ್ನು ಮಾತ್ರ ಕಳುಹಿಸಿ ಅಂತ ಉತ್ತರಿಸುತ್ತದೆ. ಕನ್ನಡದ ಕೆಲವು ಶಬ್ದಗಳ ಪರ್ಯಾಯ ಪದಗಳೂ ಇಲ್ಲಿ ಲಭ್ಯವಿರುತ್ತದೆ.

ಕಳುಹಿಸಿದ ಮೇಲ್ ರದ್ದು ಮಾಡುವುದು: ಜಿಮೇಲ್‌ನಲ್ಲಿ ಇನ್ನೂ ಒಂದು ವಿಶಿಷ್ಟ ಅವಕಾಶವಿದೆ. ಅದೆಂದರೆ, ನೀವು ಮೇಲ್ ಕಳುಹಿಸಿದ ತಕ್ಷಣ, ‘ಛೆ, ಕಳುಹಿಸಬಾರದಿತ್ತು’ ಎಂದು ನೊಂದುಕೊಂಡರೆ, ನಿಮ್ಮ ತಪ್ಪು ಸರಿಪಡಿಸಿಕೊಳ್ಳಲು ಗೂಗಲ್ ಕೆಲವೇ ಕ್ಷಣಗಳ ಅವಕಾಶ ನೀಡುತ್ತದೆ. ಮೇಲ್ ಕಳುಹಿಸಿದ ತಕ್ಷಣ, ಪುಟದ ಮೇಲ್ಭಾಗದಲ್ಲಿ your message has been sent ಎಂಬ ಸಂದೇಶ ಕಾಣಿಸುತ್ತದೆ. ಪಕ್ಕದಲ್ಲೇ Undo ಎಂಬ ಬಟನ್ ಕ್ಲಿಕ್ ಮಾಡಿದರೆ ನೀವು ಕಳುಹಿಸಿದ ಮೇಲ್ ವಾಪಸ್ ಬರುತ್ತದೆ. ಅಂದರೆ, ಗೂಗಲ್ ಸರ್ವರ್‌ನಲ್ಲಿ ಕೆಲವೇ ಸೆಕೆಂಡುಗಳ ಕಾಲ ಇರುವ ಅದು, ಅಲ್ಲಿಂದ ವರ್ಗಾವಣೆಯಾಗುವ ಮೊದಲು ಎಚ್ಚೆತ್ತುಕೊಂಡು ನೀವು Undo ಒತ್ತಿಬಿಟ್ಟರೆ, ತಪ್ಪು ಸರಿಪಡಿಸಿಕೊಳ್ಳಬಹುದು! Sending has been undone ಎಂಬ ಸಂದೇಶದೊಂದಿಗೆ, ನಿಮ್ಮ ಮೇಲ್ ಪುನಃ ತೆರೆದುಕೊಳ್ಳುತ್ತದೆ. ಅಲ್ಲಿಯೇ ತಿದ್ದುಪಡಿ ಮಾಡಿ ನೀವು ಅದನ್ನು ಪುನಃ ಕಳುಹಿಸಬಹುದು.

ನಿಮ್ಮ ಜಿ-ಮೇಲ್‌ಗೆ ಬೇರೆ ಯಾರಾದ್ರೂ ಲಾಗಿನ್ ಆಗಿದ್ದಾರೆಯೇ ಅಂತ ತಿಳಿಯಿರಿ

ಜನ ಸಾಮಾನ್ಯರಿಗಾಗಿ ಮಾಹಿತಿ@ತಂತ್ರಜ್ಞಾನ – 32 (ಏಪ್ರಿಲ್ 15, 2013)

ಅತ್ಯಂತ ಮಹತ್ವದ, ಸೂಕ್ಷ್ಮ ಮಾಹಿತಿಗಳಿರುವ ಇಮೇಲ್ ಖಾತೆಯನ್ನು ಉಪಯೋಗಿಸುವಾಗ ಸಾಕಷ್ಟು ಎಚ್ಚರ ವಹಿಸುವುದು ಅಗತ್ಯ. ಗೂಗಲ್ ಮೇಲ್ ಅಥವಾ ಜಿ-ಮೇಲ್ ಬಳಸುತ್ತಿರುವವರಿಗೆ ಒಂದು ಅನುಕೂಲ ಇದೆ. ಅದೆಂದರೆ, ನಿಮ್ಮ ಇಮೇಲ್ ಖಾತೆಯನ್ನು ಬೇರೆ ಯಾರಾದರೂ ಉಪಯೋಗಿಸುತ್ತಿದ್ದಾರಾ, ಹ್ಯಾಕರ್‌ಗಳು ಕನ್ನ ಹಾಕಿದ್ದಾರಾ, ಎಲ್ಲಿಂದ ನಿಮ್ಮ ಮೇಲ್‌ಗೆ ಲಾಗ್ ಇನ್ ಆಗಿದೆ ಮುಂತಾದ ವಿವರಗಳನ್ನು (ಕೊನೆಯ 10 ಚಟುವಟಿಕೆಗಳನ್ನು) ತಿಳಿದುಕೊಳ್ಳಬಹುದು.

ಜಿ-ಮೇಲ್‌ಗೆ ಲಾಗಿನ್ ಆದ ತಕ್ಷಣ ಕೆಳ ಭಾಗದ ಬಲ ಮೂಲೆಯಲ್ಲಿ “Last account Activity” ಅಂತ ಇರುತ್ತದೆ. ಎಷ್ಟು ಸಮಯದ ಹಿಂದೆ ಲಾಗಿನ್ ಆಗಿದೆ ಅಂತ ಅದು ತೋರಿಸುತ್ತದೆ. ಪಕ್ಕದಲ್ಲೇ Details ಕ್ಲಿಕ್ ಮಾಡಿದರೆ, ಒಂದು ವಿಂಡೋ ಪಾಪ್-ಅಪ್ ಆಗುತ್ತದೆ. ಯಾವ ರೀತಿ (ಬ್ರೌಸರ್, ಮೊಬೈಲ್/ಇಮೇಲ್ ಕ್ಲೈಂಟ್) ಆಕ್ಸೆಸ್ ಆಗಿದೆ, ಆ ಕಂಪ್ಯೂಟರ್‌ನ IP ವಿಳಾಸ (ಇಂಟರ್ನೆಟ್ ಪ್ರೋಟೋಕಾಲ್ – ಯಾವುದೇ ಕಂಪ್ಯೂಟರ್ ಎಲ್ಲಿದೆ, ಎಲ್ಲಿಂದ ಮೇಲ್ ಕಳುಹಿಸಲಾಗಿದೆ ಎಂಬಿತ್ಯಾದಿಯನ್ನು ತಿಳಿಯಲು ಬಳಸಲಾಗುತ್ತದೆ) ಯಾವುದು, ಯಾವ ಸಮಯ ಹಾಗೂ ಎಷ್ಟು ಕಾಲದ ಹಿಂದೆ ಅಂತೆಲ್ಲಾ ಇಲ್ಲಿ ಬರೆದಿರುತ್ತದೆ.

ಆಕ್ಸೆಸ್ ಮಾಡಿದ ಬ್ರೌಸರ್‌ಗಳ ಹೆಸರು (ಮೋಝಿಲ್ಲಾ, ಕ್ರೋಮ್, ಇಂಟರ್ನೆಟ್ ಎಕ್ಸ್‌ಪ್ಲೋರರ್ ಇತ್ಯಾದಿ) ಅಲ್ಲಿ ಕಾಣಿಸುತ್ತದೆ. POP3/IMAP ಅಂತ ಇದ್ದರೆ ನಿಮ್ಮ ಮೇಲ್‌ಗಳನ್ನು ಔಟ್‌ಲುಕ್, ಥಂಡರ್‌ಬರ್ಡ್, ಇಲ್ಲವೇ ಮೊಬೈಲ್ ಫೋನ್‌ಗಳಲ್ಲಿ ಲಭ್ಯವಿರುವ ಇಮೇಲ್ ಅಪ್ಲಿಕೇಶನ್ ಮುಂತಾದ ಇಮೇಲ್ ಕ್ಲೈಂಟ್ ಮೂಲಕ ಡೌನ್‌ಲೋಡ್ ಮಾಡಿದ್ದೀರಿ ಎಂದರ್ಥ. ಅಂತೆಯೇ, ನೀವೇನಾದರೂ ಮೇಲ್ ಫಾರ್ವರ್ಡಿಂಗ್ ಆಯ್ಕೆ (ಅಂದರೆ ನಿಮ್ಮ ಪ್ರಸ್ತುತ ಜಿಮೇಲ್‌ಗೆ ಬಂದಿರುವ ಸಂದೇಶಗಳನ್ನು ಬೇರೆ ಇಮೇಲ್ ಐಡಿಗೆ ಸ್ವಯಂಚಾಲಿತವಾಗಿ ಫಾರ್ವರ್ಡ್ ಮಾಡುವ ವ್ಯವಸ್ಥೆ) ಆಯ್ಕೆ ಮಾಡಿಕೊಂಡಿದ್ದರೆ ಅದು ಕೂಡ POP3 ಕೆಟಗರಿಯಲ್ಲಿ ಬರುತ್ತವೆ.

ನಿಮ್ಮ ಪ್ರಸ್ತುತ ಕಂಪ್ಯೂಟರಿನ ಐಪಿ ವಿಳಾಸ ಅಲ್ಲಿ ಕಾಣಿಸುತ್ತದೆ. ಆದರೆ ಕೆಲವೊಮ್ಮೆ ಬೇರೆ ಬೇರೆ ದೇಶಗಳು, ರಾಜ್ಯಗಳನ್ನು ತೋರಿಸುವ ಈ ಐಪಿ ವಿಳಾಸಗಳನ್ನು ನೋಡಿ ಗಾಬರಿ ಬೀಳಬೇಕಾಗಿಲ್ಲ. ಸಾಮಾನ್ಯವಾಗಿ ಮನೆಯಲ್ಲಿ ಇಂಟರ್ನೆಟ್ ಬಳಸುವವರು ಸ್ಥಿರ ಐಪಿ ವಿಳಾಸಗಳನ್ನು ಹೊಂದಿರುವುದಿಲ್ಲ. ನಿಮ್ಮ ಇಂಟರ್ನೆಟ್ ಸರ್ವಿಸ್ ಪ್ರೊವೈಡರ್ (ಬಿಎಸ್ಸೆನ್ನೆಲ್, ಏರ್‌ಟೆಲ್, ವೊಡಾಫೋನ್, ಡೊಕೊಮೊ, ರಿಲಯನ್ಸ್ ಇತ್ಯಾದಿ) ಯಾವ ಸರ್ವರ್‌ನ ಐಪಿ ವಿಳಾಸವನ್ನು ಬಳಸುತ್ತಿದೆಯೋ ಅದರ ವಿಳಾಸವನ್ನು ತೋರಿಸುತ್ತದೆ (ನೆನಪಿಡಿ, ಇದು ಆಗಾಗ್ಗೆ ಬದಲಾಗುತ್ತಾ ಇರುತ್ತದೆ). ಕಚೇರಿಗಳಲ್ಲಾದರೆ, ನಿರ್ದಿಷ್ಟ ಐಪಿ ವಿಳಾಸವನ್ನು ಇಂಟರ್ನೆಟ್ ಸರ್ವಿಸ್ ಪ್ರೊವೈಡರ್‌ಗಳಿಂದ ಖರೀದಿ ಮಾಡಿ, ಪ್ರಾಕ್ಸಿ ಸರ್ವರ್ ಮೂಲಕ ಹಲವು ಕಂಪ್ಯೂಟರುಗಳಿಗೆ ಹಂಚಿರುತ್ತಾರೆ. ಹೀಗಾಗಿ ನಿಮ್ಮ ಕಂಪ್ಯೂಟರಿನ ಐಪಿ ವಿಳಾಸದ ಬದಲು ಮೂಲ ಐಪಿ ವಿಳಾಸವನ್ನಷ್ಟೇ ತೋರಿಸುತ್ತದೆ.

ಅದೇ ರೀತಿ, ಉದಾಹರಣೆಗೆ, ಜಿಮೇಲ್‌ನಿಂದ ಮೈಕ್ರೋಸಾಫ್ಟ್‌ನ ಔಟ್‌ಲುಕ್ ಡಾಟ್ ಕಾಂನಲ್ಲಿರುವ ನಿಮ್ಮ ಇಮೇಲ್ ವಿಳಾಸಕ್ಕೆ ಫಾರ್ವರ್ಡ್ ಆಗುವಂತೆ ಮಾಡಿಕೊಂಡಿದ್ದರೆ, ಆ 2ನೇ ಮೇಲ್ ಐಡಿ ಒದಗಿಸುವ ಸಂಸ್ಥೆಯ ಸರ್ವರ್ ಇರುವ ಯುನೈಟೆಡ್ ಸ್ಟೇಟ್ಸ್‌ನ ಐಪಿ ವಿಳಾಸ ಕಾಣಿಸುತ್ತದೆ.

ನಿಮಗೆ ಮತ್ತೂ ಸಮಾಧಾನವಾಗಿಲ್ಲವೇ? ಅಲ್ಲಿ ತೋರಿಸುವ ಐಪಿ ವಿಳಾಸವು ಯಾವ ಊರಿನದ್ದು, ಯಾರು ಅದರ ಒಡೆಯರು ಎಂಬಿತ್ಯಾದಿ ಸಂಪೂರ್ಣ ಮಾಹಿತಿಯನ್ನೂ ನೀವೇ ತಿಳಿದುಕೊಳ್ಳಬಹುದು. ಅದಕ್ಕಾಗಿ http://ip-lookup.net/ ಎಂಬ ತಾಣಕ್ಕೆ ಹೋಗಿ, ನಿಮಗೆ ದೊರೆತ ಐಪಿ ವಿಳಾಸವನ್ನು Lookup an IP address ಎಂದಿರುವಲ್ಲಿ ಹಾಕಿದರೆ ಎಲ್ಲ ವಿವರ ಲಭ್ಯ.

ಇನ್ನೊಂದು ಅನುಕೂಲ ಇಲ್ಲೇ ಇದೆ. ನಿಮಗೆ ಗೊತ್ತಿದ್ದೋ, ಗೊತ್ತಿಲ್ಲದೆಯೋ ಬೇರೆಲ್ಲಾದರೂ ಲಾಗಿನ್ ಆಗಿದ್ದರೆ, ಅದನ್ನು ಲಾಗಾಫ್ ಮಾಡಲು Sign out all other sessions ಎಂಬ ಆಯ್ಕೆ ಈ ವಿಂಡೋದ ಮೇಲ್ಭಾಗದಲ್ಲಿ ಕಾಣಿಸುತ್ತದೆ. ಅಲ್ಲಿ ಕ್ಲಿಕ್ ಮಾಡಿದರೆ, ಬೇರೆಲ್ಲೇ (ಉದಾಹರಣೆಗೆ, ಸ್ಮಾರ್ಟ್‌ಫೋನ್‌ನಲ್ಲಿ) ಸದಾ ಲಾಗಿನ್ ಆಗಿಯೇ ಇದ್ದರೆ, ಲಾಗೌಟ್ ಆಗುತ್ತದೆ. ಮತ್ತೂ ಸಂಶಯ ಇದ್ದರೆ ಅಥವಾ ನಿಮಗೆ ಖಚಿತತೆ ಇಲ್ಲವೆಂದಾದರೆ ಪಾಸ್‌ವರ್ಡ್ ಬದಲಾಯಿಸುವುದೇ ಒಳಿತು.

Gmail ನಲ್ಲಿ ಉಚಿತ ಎಸ್ಸೆಮ್ಮೆಸ್: ಹೀಗೆ ಮಾಡಿ!

ವಿಜಯ ಕರ್ನಾಟಕ ಅಂಕಣ “ಮಾಹಿತಿ@ತಂತ್ರಜ್ಞಾನ”-8 ಅಕ್ಟೋಬರ್ 15, 2012

ಕಳೆದ ಬುಧವಾರ ಗೂಗಲ್‌ನ ಇಮೇಲ್ ಸೇವೆ Gmail ತೆರೆದವರಿಗೊಂದು ಅಚ್ಚರಿ ಕಾದಿತ್ತು. ಅದೆಂದರೆ ಇಮೇಲ್ ಮೂಲಕವೇ SMS ಕಳುಹಿಸಬಹುದೆಂಬ ಸೂಚನೆ! ವಾಸ್ತವವಾಗಿ ಈ ವ್ಯವಸ್ಥೆ ಹಿಂದಿನಿಂದಲೂ ಇದ್ದರೂ ಭಾರತದಲ್ಲಿ ಮಾತ್ರ ಲಭ್ಯವಾಗಿರಲಿಲ್ಲ. ಈಗ ಭಾರತ ಸಹಿತ ಸುಮಾರು 50 ರಾಷ್ಟ್ರಗಳಲ್ಲಿ ಇದು ಲಭ್ಯವಾಗಿದೆ.

ಹೇಗೆ ಮಾಡುವುದು?
ನಿಮ್ಮ ಜಿಮೇಲ್ ತೆರೆಯಿರಿ. ಅದರಲ್ಲಿ ಚಾಟಿಂಗ್ ವಿಂಡೋದಲ್ಲಿ ಗೆಳೆಯ/ಗೆಳತಿಯರ ಪಟ್ಟಿ ಇರುತ್ತದೆ. ಸಂದೇಶ ಕಳುಹಿಸಬೇಕಾದವರ ಹೆಸರಿನ ಮೇಲೆ ಮೌಸ್ ಪಾಯಿಂಟರನ್ನು ಇರಿಸಿದ ತಕ್ಷಣ (ಕ್ಲಿಕ್ ಮಾಡಬಾರದು) ಒಂದು ವಿಂಡೋ ತೆರೆದುಕೊಳ್ಳುತ್ತದೆ. ಅದರ ಕೆಳ-ಬಲ ಮೂಲೆಯಲ್ಲಿ, ಒಂದು ಕೆಳಮುಖವಾಗಿರುವ ತ್ರಿಕೋನಾಕೃತಿಯ ಮೇಲೆ ಮೌಸ್ ಹಿಡಿದರೆ, more options ಕಾಣಿಸುತ್ತದೆ. ಅಲ್ಲಿ Send SMS ಅಂತ ಮೊದಲ ಆಯ್ಕೆ ಗೋಚರಿಸುತ್ತದೆ. ಅದನ್ನು ಕ್ಲಿಕ್ ಮಾಡಿ. ಆಗ, ನಿಮ್ಮ ಆಪ್ತರ ಮೊಬೈಲ್ ಸಂಖ್ಯೆ ನಮೂದಿಸಲು ಮತ್ತೊಂದು ವಿಂಡೋ ಕಾಣಿಸಿಕೊಳ್ಳುತ್ತದೆ. ಅದರಲ್ಲಿ ದೇಶವನ್ನು ಸೆಲೆಕ್ಟ್ ಮಾಡಿ ನಂಬರ್ ನಮೂದಿಸಿ, Save ಮಾಡಿಟ್ಟುಕೊಳ್ಳಿ. ಅಷ್ಟೇ! SMS ರವಾನೆ ಆರಂಭಿಸಬಹುದು. ಮುಂದಿನ ಬಾರಿ ಅವರಿಗೆ SMS ಕಳುಹಿಸಬೇಕೆಂದಿದ್ದರೆ, ಅವರ ಹೆಸರಿನ ಮುಂದೆ ಮೌಸ್ ಹೋವರ್ ಮಾಡಿದಾಗ, ಅಂದರೆ ಮೌಸ್‌ನ ಪಾಯಿಂಟರ್ ಅನ್ನು ಹಿಡಿದಾಗ, ಕಾಣಿಸಿಕೊಳ್ಳುವ ವಿಂಡೋದಲ್ಲೇ Send SMS ಅನ್ನೋ ಆಯ್ಕೆ ಗೋಚರಿಸುತ್ತದೆ.

ಜಿಮೇಲ್ ಖಾತೆ ಇಲ್ಲದವರ ಮೊಬೈಲಿಗೂ ನೀವು ಸಂದೇಶ ಕಳುಹಿಸಬಹುದು. ಚಾಟ್ ಬಾಕ್ಸ್ ನಲ್ಲಿ Search, Chat, or SMS ಅಂತ ಕಾಣಿಸುತ್ತದೆಯಲ್ಲವೇ? ಅಲ್ಲಿ ಹೆಸರು ದಾಖಲಿಸಿ, ಅಲ್ಲೇ ನಿಮಗೆ ಮೂರು ಆಯ್ಕೆಗಳು ಕಾಣಿಸಿಕೊಳ್ಳುತ್ತವೆ, Mail, Invite to Chat ಮತ್ತು Send SMS ಅಂತ.

ಅಷ್ಟೇ ಅಲ್ಲ. ನಿಮ್ಮ ಆಪ್ತರು ನಿಮಗೆ ತಮ್ಮ ಮೊಬೈಲಿನಿಂದಲೇ ಆ ಸಂದೇಶಕ್ಕೆ ಉತ್ತರಿಸುವ ಅವಕಾಶವೂ ಇದೆ. ಅದಕ್ಕೆ ಅವರ ಮೊಬೈಲ್ ನೆಟ್‌ವರ್ಕ್ ಆಪರೇಟರುಗಳು SMS ಶುಲ್ಕ ವಿಧಿಸುತ್ತಾರೆ. ಅವರು ಉತ್ತರಿಸಿದರೆ ನಿಮಗೊಂದಿಷ್ಟು ಲಾಭವಿದೆ. ಒಂದು ದಿನಕ್ಕೆ ಉಚಿತ SMS ಮಿತಿ 50 ಮಾತ್ರ. ನಿಮ್ಮ ಚಾಟ್ SMSಗೆ ರಿಪ್ಲೈ ಬಂದರೆ, ನಿಮ್ಮ ಸಂದೇಶದ ಕ್ರೆಡಿಟ್ 5 ಹೆಚ್ಚಾಗುತ್ತದೆ! ಆದರೆ, ಒಂದು ನಿರ್ದಿಷ್ಟ ಸಮಯದಲ್ಲಿ ನಿಮ್ಮ SMS ಕ್ರೆಡಿಟ್ ಮಿತಿಯು 50 ದಾಟದಂತೆ ಜಿಮೇಲ್ ನೋಡಿಕೊಳ್ಳುತ್ತದೆ.

ಚಾಟ್ ಸಂದೇಶ ಸ್ವೀಕರಿಸುವವರು ಆ ಮೊಬೈಲ್ ನಂಬರನ್ನು ಸೇವ್ ಮಾಡಿಟ್ಟುಕೊಂಡರೆ, ಭವಿಷ್ಯದಲ್ಲಿ ಆ ಗೆಳೆಯನಿಗೆ ಸಂದೇಶ ರವಾನಿಸಬೇಕಿದ್ದರೆ, ಅದೇ ನಂಬರಿಗೆ ಸಂದೇಶ ಕಳುಹಿಸಿದರಾಯಿತು. ಅದು ಜಿಮೇಲ್ ಚಾಟ್‌ನಲ್ಲಿ ಅವರಿಗೆ ತಲುಪುತ್ತದೆ.

ಮತ್ತೂ ಒಂದು ನೆನಪಿಡಬೇಕಾದ ಅಂಶವೆಂದರೆ, ಇದು ಉಚಿತ ಅಂತೆಲ್ಲಾ ಯಾರಿಗಾದರೂ ನೀವು ಕಿರಿಕಿರಿ ಕಿರುಸಂದೇಶ ಕಳುಹಿಸಲು ಆರಂಭಿಸಿದರೆ, ಆ SMS ಸ್ವೀಕರಿಸುವವರು ಅದನ್ನು ಬ್ಲಾಕ್ ಮಾಡುವ ಆಯ್ಕೆಯನ್ನೂ ಹೊಂದಿರುತ್ತಾರೆ. ಬ್ಲಾಕ್ ಮಾಡಬೇಕಿದ್ದರೆ, ಬಂದಿರುವ ಸಂದೇಶಕ್ಕೆ BLOCK ಅಂತ ರಿಪ್ಲೈ ಮಾಡಿದರಾಯಿತು. ಮುಂದೆಂದಾದರೂ ಚಾಟ್ ಮಾಡಬೇಕೆಂದೆಂದಾದರೆ ಅದೇ ನಂಬರಿಗೆ UNBLOCK ಅಂತ ಕಳುಹಿಸಿದರಾಯಿತು.

ಇನ್ನು ಯಾವುದೇ ಜಿಮೇಲ್ ಚಾಟ್ ಸಂದೇಶಗಳು ಬೇಡವೇ ಬೇಡ ಅಂತ ಅಂದುಕೊಂಡರೆ, STOP ಅಂತ +918082801060 ನಂಬರಿಗೆ SMS ಕಳುಹಿಸಿ. ಅದನ್ನು ರಿ-ಆಕ್ಟಿವೇಟ್ ಮಾಡಬೇಕಿದ್ದರೆ ಅದೇ ನಂಬರಿಗೆ START ಅಂತ SMS ಕಳುಹಿಸಿಬಿಡಿ.

ನೆನಪಿಡಬೇಕಾದದ್ದು
* ಒಂದು ನಿರ್ದಿಷ್ಟ ಸಂಖ್ಯೆಗೆ ಸಿಕ್ಕಾಪಟ್ಟೆ ಸಂದೇಶ ಕಳುಹಿಸಿದರೆ, ಅದಕ್ಕೆ ಒಂದೇ ಒಂದು ಉತ್ತರವೂ ಬಾರದಿದ್ದರೆ, ಈ ಸಂದೇಶವು ಸ್ವಯಂಚಾಲಿತವಾಗಿ ಬ್ಲಾಕ್ ಆಗುತ್ತದೆ!
* ಮೊಬೈಲ್ ಸಂಖ್ಯೆಯನ್ನು ತಿದ್ದುಪಡಿ ಮಾಡಬಹುದಾಗಿದೆ.
* ಸಂದೇಶವು ತಕ್ಷಣವೇ ಮೊಬೈಲಿಗೆ ರವಾನೆಯಾಗುತ್ತದೆ ಎಂಬುದು ಗ್ಯಾರಂಟಿ ಇಲ್ಲ.
* ಅನಾಮಿಕ ಸಂದೇಶ ಕಳುಹಿಸುವುದು ಅಸಾಧ್ಯ. ಯಾಕೆಂದರೆ ನಿಮ್ಮ ಇ-ಮೇಲ್ ಐಡಿ ಕೂಡ ನಿಮ್ಮ ಗೆಳೆಯರು ಪಡೆಯುವ SMS ಸಂದೇಶದಲ್ಲಿ ಇರುತ್ತದೆ!