ಜನ ಸಾಮಾನ್ಯರತ್ತ ತಂತ್ರಜ್ಞಾನ – Gadget-Technology Info Towards Common Man

Archive for ಜನವರಿ, 2014

ಫೇಸ್‌ಬುಕ್‌ನಲ್ಲಿ ಟ್ಯಾಗ್ ಮಾಡಿದರೆ ಏನು ಮಾಡುತ್ತೀರಿ?

ಮಾಹಿತಿ@ತಂತ್ರಜ್ಞಾನ: ಅವಿನಾಶ್ ಬಿ. (ಜನವರಿ 20, 2014)
ಸಾಮಾಜಿಕ ಜಾಲ ತಾಣಗಳಲ್ಲಿ ಯಾರ್ಯಾರೋ ಫ್ರೆಂಡ್ ಆಗ್ತಾರೆ, ದೂರದಲ್ಲೆಲ್ಲೋ ಇದ್ದವರು ಆತ್ಮೀಯರಾಗಿಬಿಡುತ್ತಾರೆ, ನಿಮ್ಮ ಪೋಸ್ಟ್‌ಗಳಿಗೆ ಕಾಮೆಂಟ್ ಮಾಡುತ್ತಾರೆ, ಒಂದೊಳ್ಳೆಯ ಚರ್ಚೆ ನಡೆಯುತ್ತದೆ. ಸಮಾಜದ ಆಗುಹೋಗುಗಳ ಬಗ್ಗೆ, ಒಳಿತು ಕೆಡುಕುಗಳ ಬಗ್ಗೆ ಪರ-ವಿರೋಧ ಚರ್ಚೆಯಾಗುತ್ತದೆ ಮತ್ತು ಅಲ್ಲೊಂದು ಅವಾಸ್ತವಿಕ ಸಾಮಾಜಿಕ ಜಗತ್ತು ಸೃಷ್ಟಿಯಾಗಿರುತ್ತದೆ.

ಇಷ್ಟೆಲ್ಲಾ ಆಗುವ ಹೊತ್ತಿಗೆ, ಯಾವಾಗ ಫೋಟೋಗಳನ್ನೂ ಸಾಮಾಜಿಕ ತಾಣದಲ್ಲಿ ಹಂಚಿಕೊಳ್ಳುವ ಆಯ್ಕೆ ಬಂದಿತೋ, ಆಗಿನಿಂದ ಫೇಸ್‌ಬುಕ್ ಬಳಕೆದಾರರದು ಒಂದೇ ವೇದನೆ, ರೋದನೆ… ಫೋಟೋಗಳಿಗೆ ಟ್ಯಾಗ್ ಮಾಡಿದರೆ ಜೋಕೆ ಎಂಬ ಸಾರಾಂಶವುಳ್ಳ ಎಚ್ಚರಿಕೆ. ಈ ಎಚ್ಚರಿಕೆ ಸಾತ್ವಿಕವಾಗಿಯೂ ಇರಬಹುದು, ವ್ಯಂಗ್ಯವಾಗಿಯೂ ಇರಬಹುದು, ರೋಷಭರಿತವಾಗಿಯೂ ಇರಬಹುದು.

ಕಾರಣವಿಷ್ಟೆ. ಯಾರಾದರೂ ತಮ್ಮ ಟೈಮ್‌ಲೈನ್‌ನಲ್ಲಿ ತಮಗಿಷ್ಟವಾದ ಫೋಟೋ ಅಪ್‌ಲೋಡ್ ಮಾಡುತ್ತಾರೆ. ಅಷ್ಟೇ ಆದರೆ ಸುಮ್ಮನಿರಬಹುದಿತ್ತು. ಆದರೆ, ಆ ಫೋಟೋಗಳನ್ನು ಅಪ್‌ಲೋಡ್ ಮಾಡುವಾಗಲೇ, “ನಿಮ್ಮ ಮಿತ್ರರನ್ನು ಟ್ಯಾಗ್ ಮಾಡಿ” ಎನ್ನುವ ಆಯ್ಕೆಯೊಂದನ್ನು ಒತ್ತಿ, ಫ್ರೆಂಡ್ಸ್ ಪಟ್ಟಿಯಲ್ಲಿರುವ ಹಲವಾರು ಹೆಸರುಗಳನ್ನು ಸೇರಿಸುತ್ತಾ ಹೋಗುತ್ತಾರೆ.

ಇದರ ಬಗ್ಗೆ ಒಂದು ನೋಟಿಫಿಕೇಶನ್ (ಸೂಚನಾ ಸಂದೇಶ) ಆಯಾ ಹೆಸರಿನವರಿಗೆ ಹೋಗುತ್ತದೆ. ಅಷ್ಟೇ ಆದರೂ ತೊಂದರೆಯಿರಲಿಲ್ಲ. ಅವರ ಸ್ನೇಹಿತರು ಸಾವಿರ ಸಾವಿರ ಸಂಖ್ಯೆಯಲ್ಲಿ ಆ ಫೋಟೋ ಲೈಕ್ ಮಾಡಿದರೆ, ಕಾಮೆಂಟ್ ಮಾಡಿದರೆ, ಬೈದಾಡಿದರೆ… ಹೊಗಳಿದರೆ… ಎಲ್ಲದಕ್ಕೂ ನೋಟಿಫಿಕೇಶನ್ ಬರುತ್ತಲೇ ಇರುತ್ತವೆ! ಮೊಬೈಲ್‌ನಲ್ಲಿ ಫೇಸ್‌ಬುಕ್ ಲಾಗಿನ್ ಆಗಿದ್ದರಂತೂ ಫೇಸ್‌ಬುಕ್ ಸೂಚನಾ ಸಂದೇಶ ಬಂತೆಂಬ ಧ್ವನಿ ಪದೇ ಪದೇ ಗುಂಯ್‌ಗುಡುತ್ತಲೇ ಇರುತ್ತದೆ. ಕಚೇರಿಯಲ್ಲಿದ್ದಾಗ ಇದರಷ್ಟು ಕಿರಿಕಿರಿ ಬೇರೆ ಇರಲಾರದು. ಸಂಬಂಧವೇ ಇಲ್ಲದ ಫೋಟೋಗಳಿಗೆ ಟ್ಯಾಗ್ ಆಗಿದ್ದನ್ನು ನೋಡಿದಾಗ ಮನಸ್ಸು ಆಕ್ರೋಶಿತವಾಗುತ್ತದೆ, ವಿಶೇಷವಾಗಿ ಮಿತ್ರವರ್ಗದ ಸಂಖ್ಯೆ ಹೆಚ್ಚಿರುವ ಫೇಸ್‌ಬುಕ್ ಬಳಕೆದಾರರಿಗೆ.

ಈ ‘ತಾಗಿಸುವ’ ಪ್ರಕ್ರಿಯೆಯಿಂದಾಗಿಯೇ ಹಲವು ‘ಫೇಸ್‌ಬುಕ್’ ಸ್ನೇಹಗಳು ಮುರಿದುಬಿದ್ದದ್ದೂ ಇವೆ ಎಂದರೆ ಖಂಡಿತಾ ಉತ್ಪ್ರೇಕ್ಷೆಯಾಗಲಾರದು. ಫೇಸ್‌ಬುಕ್ಕಿಗರ ಮೊರೆಗೆ ಓಗೊಟ್ಟಿರುವ ಫೇಸ್‌ಬುಕ್, ಟ್ಯಾಗ್ ಮಾಡದಂತೆ ಪೂರ್ತಿಯಾಗಿ ತಡೆಯುವ ಆಯುಧ ನೀಡಿಲ್ಲವಾದರೂ, ಟ್ಯಾಗ್ ಮಾಡುವವರಿಗೆ ಸುಲಭವಾಗಿ ಶಾಸ್ತಿ ಮಾಡುವ ಆಯ್ಕೆಯೊಂದನ್ನು ತೀರಾ ಇತ್ತೀಚೆಗೆ ನೀಡಿದೆ.

ಮೊದಲು ನೀವು ಮಾಡಬೇಕಾದದ್ದೆಂದರೆ, ಫೇಸ್‌ಬುಕ್‌ನ ಸೆಟ್ಟಿಂಗ್ಸ್‌ನಲ್ಲಿ, ಪ್ರೈವೆಸಿ ಸೆಟ್ಟಿಂಗ್ಸ್ ಎಂಬಲ್ಲಿ ಹೋಗಿ. ಎಡಭಾಗದಲ್ಲಿ Timeline and Tagging ಅಂತ ಇರುತ್ತದೆ. ಅದರಲ್ಲಿ ಸಾಕಷ್ಟು ಆಯ್ಕೆಗಳು ಕಾಣಿಸಿಕೊಳ್ಳುತ್ತವೆ. Who can add things to my timeline? ಎಂಬುದರ ಅಡಿ, ಯಾರು ನಿಮ್ಮ ಟೈಮ್‌ಲೈನ್‌ಗೆ ಪೋಸ್ಟ್ ಮಾಡಬಹುದು ಅಂತ ಇರುವಲ್ಲಿ “Only Me” ಅಥವಾ “Friends” ಆಯ್ಕೆ ಮಾಡಿ. ಎರಡನೆಯದು, ಈ ಪೋಸ್ಟನ್ನು ರಿವ್ಯೂ ಮಾಡಬೇಕೇ ಎಂಬ ಆಯ್ಕೆ. ಅದನ್ನು “ಆನ್” ಇರುವಂತೆ ನೋಡಿಕೊಳ್ಳಿ. ಅಲ್ಲೇ ಕೆಳಗೆ, ‘ಜನ ಟ್ಯಾಗ್ ಮಾಡಿದರೆ ಹೇಗೆ ನಿಭಾಯಿಸಲಿ’ ಎಂಬ ಶೀರ್ಷಿಕೆಯಲ್ಲಿ, ಫೇಸ್‌ಬುಕ್‌ನಲ್ಲಿ ನಿಮ್ಮ ಹೆಸರಿನ ಟ್ಯಾಗ್ ಕಾಣಿಸಿಕೊಳ್ಳುವ ಮೊದಲು ಮರುವಿಮರ್ಶಿಸುವ (review) ಆಯ್ಕೆಯನ್ನು ‘ON’ ಮಾಡಿಕೊಳ್ಳಿ. ಇಷ್ಟು ಪೂರ್ವ ತಯಾರಿ.

ಈಗ, ನಿಮ್ಮನ್ನು ಯಾವುದೋ ಫೋಟೋಗೆ ತಾಗಿಸಿದ್ದಾರೆ (ಟ್ಯಾಗ್ ಮಾಡಿದ್ದಾರೆ) ಅಂತ ನಿಮಗೆ ಸೂಚನೆ ಬಂದೇ ಬರುತ್ತದೆ. ಆ ಸೂಚನಾ ಸಂದೇಶವನ್ನು ಕ್ಲಿಕ್ ಮಾಡಿದರೆ ನೇರವಾಗಿ ಟೈಮ್‌ಲೈನ್ ಮರುಪರಿಶೀಲಿಸುವ ಆಯ್ಕೆ ದೊರೆಯುತ್ತದೆ. ಅಲ್ಲಿ ಕಾಣಿಸುವ ಎರಡು ಬಟನ್‌ಗಳಲ್ಲಿ ‘Hide’ ಒತ್ತಿದರೆ, ಈ ಚಿತ್ರವು ನಿಮ್ಮ ಟೈಮ್‌ಲೈನ್‌ನಿಂದ (ಟೈಮ್‌ಲೈನ್ ಎಂದರೆ, ನಿಮ್ಮದೇ ವಾಲ್, ನೀವು ಏನನ್ನು ಪೋಸ್ಟ್ ಮಾಡುತ್ತೀರೋ, ಅವೆಲ್ಲವೂ ಕಾಣಿಸಿಕೊಳ್ಳುವ ಸ್ಥಳ) ಮರೆಯಾಗುತ್ತದೆ. ಬೇರೆಯವರಿಗೂ ಯಾರಿಗೂ ಕಾಣಿಸುವುದಿಲ್ಲ. Hide ಮಾಡಿದ ತಕ್ಷಣ Report/Remove Tag ಎಂಬ ಕೊಂಡಿಯೊಂದು ಗೋಚರಿಸುತ್ತದೆ.

ನೀವು ಕರುಣಾಮಯಿಯಾದರೆ, ಮೊದಲ ಆಯ್ಕೆ (I want to remove this tag) ಕ್ಲಿಕ್ ಮಾಡಿ ಸುಮ್ಮನಿರಬಹುದು. ಅದಕ್ಕೆ ಬರುವ ಯಾವುದೇ ಲೈಕ್‌ಗಳು ಅಥವಾ ಕಾಮೆಂಟ್‌ಗಳ ಬಗ್ಗೆ ನೋಟಿಫಿಕೇಶನ್ ನಿಮ್ಮ ಬಳಿ ಸುಳಿಯುವುದಿಲ್ಲ. ಕಂಟಿನ್ಯೂ ಅಂತ ಒತ್ತಿದರೆ, ಮತ್ತೆ ಮೂರು ಆಯ್ಕೆಗಳು ದೊರೆಯುತ್ತವೆ – ಟ್ಯಾಗ್ ತೆಗೆಯುವ, ಈ ಪೋಸ್ಟನ್ನು ತೆಗೆಯಲು ನಿಮ್ಮ ಸ್ನೇಹಿತರಿಗೆ ಸೂಚನೆ ನೀಡುವ ಮತ್ತು ನೇರವಾಗಿ ಬ್ಲಾಕ್ ಮಾಡುವ ಆಯ್ಕೆಗಳವು. ಬೇಕಾದುದನ್ನು ಆಯ್ದುಕೊಳ್ಳಿ.

ಮೇಲೆ ಹೇಳಿದ ಮೊದಲ ಆಯ್ಕೆಯ ಬಳಿಕ, ಉಳಿದವು ನಿಜಕ್ಕೂ ನಿಮಗೆ ಸಿಕ್ಕಾಪಟ್ಟೆ ಕೋಪ ಬಂದಿದ್ದರೆ ಪ್ರಯೋಗಿಸಲು ಇರುವಂಥವು. ಕಿರಿಕಿರಿಯುಂಟು ಮಾಡುವ, ಅಸಭ್ಯ, ದ್ವೇಷಪೂರಿತ, ಹಾನಿಕಾರಕ ಫೋಟೋಗಳ ಬಗ್ಗೆ ನೇರವಾಗಿ ಫೇಸ್‌ಬುಕ್‌ಗೆ ಸುಳಿವು ನೀಡುವುದಕ್ಕಾಗಿಯೇ ಇವು ಇವೆ. ಅವುಗಳನ್ನು ಕ್ಲಿಕ್ ಮಾಡಿದರೆ, ಫೇಸ್‌ಬುಕ್ಕೇ ಅಂತಹಾ ವ್ಯಕ್ತಿಯ ಮೇಲೆ ಕ್ರಮ ಕೈಗೊಳ್ಳುವ ಸಾಧ್ಯತೆಗಳೂ ಇವೆ.

ಟ್ಯಾಗ್ ಮಾಡದಂತೆ ತಡೆಯುವ ಯಾವುದೇ ಆಯುಧವನ್ನು ಫೇಸ್‌ಬುಕ್ ಇನ್ನೂ ಕೊಟ್ಟಿಲ್ಲವಾದರೂ, ಟ್ಯಾಗ್ ಮಾಡಿದ ವ್ಯಕ್ತಿಗೆ ನೇರವಾಗಿ ಮನವಿ ಮಾಡುವ, ಎಚ್ಚರಿಕೆ ನೀಡುವ ಆಯ್ಕೆ ದೊರೆತಿದೆ.

ತೂಕಡಿಕೆಯೇ? ಇಗೋ ಬರಲಿದೆ ‘ವಿಗೋ’!

ವಿಜಯ ಕರ್ನಾಟಕದಲ್ಲಿ ಪ್ರಕಟವಾದ ಮುಖಪುಟ ವರದಿ(ಜನವರಿ 19, 2014)
ಶಾಲಾ-ಕಾಲೇಜುಗಳಲ್ಲಿ ಪಾಠ ಕೇಳುವಾಗ ತೂಕಡಿಸದವರು ಕಡಿಮೆ. ಯಾವುದಾದರೂ ಸೆಮಿನಾರ್‌ಗೆ ಹೋಗಿರುತ್ತೀರಿ. ಭಾಷಣ ಕೇಳಿ ಬೋರ್ ಆಗಿರುತ್ತಾ, ಕಣ್ಣು ಎಳೆಯುತ್ತಿರುತ್ತದೆ. ಎದುರಿಗಿರುವ ಡೆಸ್ಕ್‌ಗೆ ತಲೆ ಬಡಿಯುವ ಮುನ್ನ ಸಾವರಿಸಿಕೊಂಡು, ಯಾರಾದರೂ ನೋಡಿಬಿಟ್ಟರೋ ಅಂತ ಕಣ್ಣಾಲಿಗಳನ್ನು ಅತ್ತಿತ್ತ ಹೊರಳಿಸಿ ದೃಢಪಡಿಸಿಕೊಳ್ಳುತ್ತೀರಿ. ಇನ್ನು, ಇತ್ತೀಚೆಗೆ ರಾತ್ರಿ ಪ್ರಯಾಣದ ಬಸ್‌ಗಳ ಅಪಘಾತದ ಸುದ್ದಿಗಳನ್ನು ಕೇಳುತ್ತಿದ್ದೇವೆ. ಚಾಲಕನಿಗೇನಾದರೂ ನಿದ್ದೆಯ ಮಂಪರು ಬಡಿಯಿತೋ, ಅಪಾಯ ತಪ್ಪಿದ್ದಲ್ಲ.

ಇವೆಲ್ಲವೂ ‘ತೂಕ’ದ ಸಂಗತಿಗಳೇ ಆದರೂ, ತೂಕಡಿಸುವವರಿಂದ, ತೂಕಡಿಸುವವರಿಗಾಗಿ, ತೂಕಡಿಕೆ ತಡೆಯುವುದಕ್ಕೋಸ್ಕರವೇ ಸಾಧನವೊಂದು ರೂಪುಗೊಳ್ಳುತ್ತಿದೆ. ಇದನ್ನು ಧರಿಸಿದವರನ್ನು ನೋಡಿದರೆ, ‘ಈತ ಹಾಡು ಕೇಳಲು ಕಿವಿಯಲ್ಲಿ ಹೆಡ್‌ಸೆಟ್ ಇರಿಸಿಕೊಂಡಿದ್ದಾನೆ’ ಎಂದಷ್ಟೇ ಅಂದುಕೊಳ್ಳಬಹುದು, ಆದರೆ ಒಳಗಿನ ವಿಷಯ ಮಂಪರಿನಲ್ಲಿದ್ದವರಿಗೆ ಮಾತ್ರ ಗೊತ್ತು. ಇದುವೇ ತೂಕಡಿಸುವವರನ್ನು ತಿವಿದು ಎಚ್ಚರಿಸಬಲ್ಲ ಸಾಧನ ‘ವಿಗೋ’.

ವಿಶೇಷತಃ ರಾತ್ರಿ ಚಾಲಕರಿಗಾಗಿಯೇ ಇದನ್ನು ವಿನ್ಯಾಸಪಡಿಸಲಾಗಿದೆ. ಚಾಲಕನ ಕಣ್ಣು ರೆಪ್ಪೆಯ ಚಲನೆ ಮತ್ತು ದೇಹದ ಚಲನೆಯನ್ನು ಅಳೆಯುತ್ತಾ, ಆತ ನಿದ್ದೆಗೆ ಜಾರುತ್ತಿದ್ದಾನೆಯೇ ಎಂದು ತಿಳಿದುಕೊಳ್ಳುತ್ತದೆ ಈ ವಿಗೋ. ತೂಕಡಿಸುವ ಸಾಧ್ಯತೆ ಇದೆಯೆಂದಾದರೆ ಮೆದುವಾದ ಕಂಪನ, ಎಲ್ಇಡಿ ಬೆಳಕು, ಅಥವಾ ಜೋರಾದ ಹಾಡಿನ ಮೂಲಕ ಎಚ್ಚರಿಸುವ ಕೆಲಸ ಮಾಡುತ್ತದೆ.

ವಾಷಿಂಗ್ಟನ್‌ನಲ್ಲಿ ಈ ಸಾಧನವನ್ನು ಈಗಾಗಲೇ ಪ್ರಾಯೋಗಿಕವಾಗಿ ಹೊರಬಿಡಲಾಗಿದೆ. ಇದರಲ್ಲಿ ಇನ್‌ಫ್ರಾರೆಡ್ ಸೆನ್ಸರ್, ಅಕ್ಸೆಲರೋಮೀಟರ್ ಇದೆ. ಹ್ಯಾಂಡ್ಸ್‌ಫ್ರೀ ಬ್ಲೂಟೂತ್ ಸಾಧನವಾಗಿಯೂ ಕಾರ್ಯನಿರ್ವಹಿಸುತ್ತದೆ ಅಂದರೆ ಕಿವಿಯಲ್ಲಿ ಇದನ್ನು ಇರಿಸಿಕೊಂಡು ಸ್ಮಾರ್ಟ್ ಫೋನ್‌ನಲ್ಲಿ ಮಾತನಾಡಬಹುದು, ಹಾಡು ಕೇಳಬಹುದು. ಯಾವಾಗ, ಹೇಗೆ ತಮ್ಮನ್ನು ಎಚ್ಚರಿಸಬೇಕೆಂಬುದನ್ನು ಬಳಕೆದಾರರೇ ನಿರ್ಣಯಿಸಬಹುದು. ಅಲ್ಲದೆ, ನಮ್ಮ ಶರೀರದ ಪೂರ್ತಿ ಎಚ್ಚರದ ಸ್ಥಿತಿ ಮತ್ತು ಅತ್ಯಂತ ಕ್ಷಮತೆ ಇರುವ ಸಮಯವನ್ನೂ ವಿಗೋ ಸಾಧನವು ತಿಳಿಸುತ್ತದೆ.

ತೂಕಡಿಸುವಾಗಲೇ ಹೊಳೆದ ಐಡಿಯಾ
ಕುತೂಹಲವೆಂದರೆ, ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸ ಕೇಳುತ್ತಿದ್ದಾಗ ತೂಕಡಿಸುತ್ತಲೇ ಇಂಥದ್ದೊಂದು ಸಾಧನ ಅಭಿವೃದ್ಧಿಪಡಿಸಬೇಕೆಂಬ ಐಡಿಯಾ ಹೊಳೆಯಿತು ಎಂದಿದ್ದಾರೆ ಇದರ ಡೆವಲಪರ್‌ಗಳಾದ ಜೇಸನ್ ಗುಯ್, ಡ್ರ್ಯೂ ಕ್ಯಾರಾಬಿನೊಸ್ ಮತ್ತು ಜೊನಾಥನ್ ಕೆರ್ನ್.

ಈ ತಿಂಗಳಾಂತ್ಯದೊಳಗೆ ಆ್ಯಪಲ್ ಮತ್ತು ಆಂಡ್ರಾಯ್ಡ್‌ಗೆ ಆ್ಯಪ್‌ಗಳನ್ನು ಸಿದ್ಧಪಡಿಸಲಾಗುತ್ತಿದೆ. ಏಪ್ರಿಲ್ ವೇಳೆಗೆ ಉತ್ಪಾದನೆ ಆರಂಭವಾಗಲಿದ್ದು, ಮೇ ತಿಂಗಳಲ್ಲಿ ವಿಶ್ವಾದ್ಯಂತ ಮಾರುಕಟ್ಟೆಗೆ ಆಗಮಿಸಲಿದೆ. ಚೀನಾದ ಶೆಂಝೆನ್‌ನ ಹಾರ್ಡ್‌ವೇರ್ ಅಭಿವೃದ್ಧಿ ಕಾರ್ಯಕ್ರಮವೊಂದರ ಅಡಿಯಲ್ಲಿ ಮೂರು ತಿಂಗಳಿಂದ ವಿಗೋ ಅಭಿವೃದ್ಧಿಯಾಗುತ್ತಿದೆ. ಅಂದ ಹಾಗೆ ಈ ಪ್ರಾಜೆಕ್ಟ್ ಸಾಗುತ್ತಿರುವುದು ಕ್ರೌಡ್ ಸೋರ್ಸಿಂಗ್ ಅಂದರೆ, ಸಾರ್ವಜನಿಕರಿಂದ ಹಣ ಸಂಗ್ರಹಿಸುವ ಮೂಲಕ.

* ಹೆಚ್ಚು ಸಮಯ ನಿದ್ದೆಗೆಟ್ಟು ಎಚ್ಚರದಲ್ಲಿರಬೇಕಾದರೆ ವಿಗೋ ಧರಿಸಬಹುದು
* ವಿಗೋ ಸಾಧನವನ್ನು ಬ್ಲೂಟೂತ್ ಮೂಲಕ ನಿಮ್ಮ ಮೊಬೈಲ್ ಸಾಧನಕ್ಕೂ ಸಂಪರ್ಕಿಸಬಹುದು.
* ಹೇಗೆ, ಯಾವಾಗ ನಿಮ್ಮನ್ನು ಬಡಿದೆಬ್ಬಿಸಬೇಕು ಎಂಬುದನ್ನು ನೀವೇ ಹೊಂದಿಸಬಹುದು

* 20 ಗ್ರಾಂ ತೂಕ
* ರೀಚಾರ್ಜೆಬಲ್ ಲೀಥಿಯಂ-ಪಾಲಿಮರ್ ಬ್ಯಾಟರಿ (ಒಮ್ಮೆ ಚಾರ್ಜ್ ಮಾಡಿದರೆ 2-3 ದಿನಕ್ಕೆ ಸಾಕು)
* ಕಣ್ಣು ಮತ್ತು ಕಣ್ರೆಪ್ಪೆ ಚಲನೆ ಗುರುತಿಸುವ ಸಾಮರ್ಥ್ಯವುಳ್ಳ ಇನ್‌ಫ್ರಾರೆಡ್ ಸೆನ್ಸರ್
* ಬ್ಲೂಟೂತ್ 4.0 ಚಿಪ್
* RM Cortex-M0 16MHz ಪ್ರೊಸೆಸರ್

ಡಿಲೀಟ್ ಆದ ಫೈಲ್‌ಗಳನ್ನು ಪುನಃ ಪಡೆಯುವುದು

ವಿಜಯ ಕರ್ನಾಟಕದಲ್ಲಿ ಮಾಹಿತಿ@ ತಂತ್ರಜ್ಞಾನ: ಜನವರಿ 13, 2014
ಆಕಸ್ಮಿಕವಾಗಿ ಇಲ್ಲವೇ ಯಾವುದೇ ವೈರಸ್‌ನಿಂದ ನಿಮ್ಮದೊಂದು ಅಮೂಲ್ಯ ಡಾಕ್ಯುಮೆಂಟ್ ಅಥವಾ ಫೈಲ್ ಕಂಪ್ಯೂಟರಿನಿಂದ ಡಿಲೀಟ್ ಆಗಬಹುದು. ಹೀಗಾದಾಗ ಇಷ್ಟು ಕಾಲ ಮಾಡಿದ್ದೆಲ್ಲವೂ ವ್ಯರ್ಥವಾಯಿತು, ಮತ್ತೆ ಮೊದಲಿಂದ ಆರಂಭಿಸಬೇಕಲ್ಲಾ ಎಂದು ಬೇಸರಿಸಿಕೊಳ್ಳುವವರೇ ಹೆಚ್ಚು. ಇದರ ಬಗ್ಗೆ ಮಾಹಿತಿ ಕೊರತೆಯಿರುವವರು ಕೊರಗುವುದು ಹೆಚ್ಚು.

ಆದರೆ ಫೈಲ್ ಡಿಲೀಟ್ ಆದರೆ ಆಕಾಶವೇ ಕಳಚಿಬಿದ್ದಂತೆ ಕೂರಬೇಕಾಗಿಲ್ಲ. ಡಿಲೀಟ್ ಆದ ಫೈಲುಗಳನ್ನು ವಾಪಸ್ ಪಡೆಯಬಹುದು ಮತ್ತು ವೈರಸ್ ದಾಳಿಯಿಂದ ಕರಪ್ಟ್ (Corrupt) ಆದ ಫೈಲ್‌ಗಳನ್ನು ಕೂಡ ಬಹುತೇಕ ರೀಕವರ್ ಮಾಡಿಕೊಳ್ಳಬಹುದು.

ವಿಂಡೋಸ್ ಕಂಪ್ಯೂಟರ್‌ನಲ್ಲಿ ಡಿಲೀಟ್ ಬಟನ್ ಅದುಮಿದ ಬಳಿಕ ಆ ಫೈಲ್ ಮೊದಲು ಹೋಗುವುದು ರೀಸೈಕಲ್ ಬಿನ್ ಎಂಬ ಸ್ಥಳಕ್ಕೆ. ಡೆಸ್ಕ್ ಟಾಪ್ ಮೇಲೆಯೇ ಇರುವ ರೀಸೈಕಲ್ ಬಿನ್ ಐಕಾನ್ ಕ್ಲಿಕ್ ಮಾಡಿದರೆ, ಡಿಲೀಟ್ ಆಗಿರುವ ಎಲ್ಲ ಫೈಲ್‌ಗಳನ್ನು ಅಲ್ಲಿ ಕಾಣಬಹುದು. ಈ ರೀಸೈಕಲ್ ಬಿನ್ ಎಂಬ ಜಾಗವು ಕಂಪ್ಯೂಟರಿನ ಕಾರ್ಯಾಚರಣಾ ವ್ಯವಸ್ಥೆಯೂ ಇರುವ ‘ಸಿ’ ಡ್ರೈವ್‌ನಲ್ಲಿಯೇ ಇರುವುದರಿಂದ, ಆಗಾಗ್ಗೆ ರೀಸೈಕಲ್ ಬಿನ್ ಅನ್ನು ಕೂಡ ಖಾಲಿ ಮಾಡುತ್ತಿರಬೇಕು. ಇದರಿಂದ ಸಿಸ್ಟಂ ಸ್ಲೋ ಆಗುವುದೂ ತಗ್ಗುತ್ತದೆ.

ಡಿಲೀಟ್ ಮಾಡುವ ಮತ್ತೊಂದು ವಿಧಾನವೆಂದರೆ, ಶಿಫ್ಟ್ ಬಟನ್ ಒತ್ತಿ ಹಿಡಿದು, ಡಿಲೀಟ್ ಬಟನ್ ಒತ್ತುವುದು. ಇದರಿಂದ ಫೈಲ್ ರೀಸೈಕಲ್ ಬಿನ್‌ಗೂ ಹೋಗದೆ, ಕಂಪ್ಯೂಟರಿನಲ್ಲಿ ಎಲ್ಲೂ ಕಾಣದಂತೆ ಮರೆಯಾಗುತ್ತದೆ. ಮರೆಯಾಗುತ್ತದೆ ಎಂದು ಹೇಳಿದ್ದೇಕೆಂದರೆ, ನೀವು ಅಳಿಸಿದ ಯಾವುದೇ ಫೈಲ್, ವಾಸ್ತವವಾಗಿ ಕಂಪ್ಯೂಟರ್‌ನಿಂದ ಹೊರಗೆ ಹೋಗುವುದಿಲ್ಲ. ಅದರಲ್ಲೇ, ಯಾರ ಕಣ್ಣಿಗೂ ಬೀಳದಂತೆ, ಸರ್ಚ್ ಮಾಡಿದರೂ ಸಿಗದಂತೆ ಅಡಗಿ ಕುಳಿತಿರುತ್ತದೆ. ಡಿಲೀಟ್ ಮಾಡುವುದು ಎಂದರೆ ಆ ಫೈಲ್‌ನ ಜಾಡು ತಿಳಿಯದಂತೆ ಕಂಪ್ಯೂಟರ್ ಅದನ್ನು ಬೇರೆಲ್ಲೋ ಅಡಗಿಸುವುದಷ್ಟೆ. ಕಣ್ಣಿಗೆ ಕಾಣುವುದಿಲ್ಲವಾದ್ದರಿಂದ ಅದು ಶಾಶ್ವತವಾಗಿ ಅಳಿಸಿ ಹೋಗಿದೆ ಎಂದು ನಾವು ಅಂದುಕೊಳ್ಳುತ್ತೇವೆ. ಒಟ್ಟಿನಲ್ಲಿ, ಫೈಲ್ ಡಿಲೀಟ್ ಮಾಡುವುದೆಂದರೆ, ಆ ಫೈಲ್ ಇರುವ ಸ್ಥಳದಲ್ಲಿ ಬೇರೆ ಫೈಲ್‌ಗಳು ಬಂದು ಕೂರಲು ಸ್ಥಳಾವಕಾಶವೊಂದು ಸೃಷ್ಟಿಯಾಗುತ್ತದೆ ಎಂದಷ್ಟೇ ಅರ್ಥ.

ತಾಂತ್ರಿಕವಾಗಿ ಆ ಫೈಲ್ ಕಂಪ್ಯೂಟರಿನ ಹಾರ್ಡ್ ಡ್ರೈವ್‌ನಲ್ಲೇ ಇರುವುದರಿಂದ, ಡೇಟಾ ರಿಕವರಿ ಸಾಫ್ಟ್‌ವೇರ್ ಮೂಲಕ ಅಳಿಸಿಹೋದ ಫೈಲನ್ನು ಪುನಃ ಪಡೆಯುವುದು ಸಾಧ್ಯವಾಗುತ್ತದೆ. ಈ ತಂತ್ರಾಂಶಗಳು, ಅಗೋಚರವಾದ ಫೈಲ್‌ಗಳನ್ನು ಕಂಪ್ಯೂಟರ್‌ಗೆ ಮತ್ತೆ ಕಾಣಿಸುವಂತೆ ಮಾಡುತ್ತವೆ. ಆದರೆ, ಅದರ ಜಾಗವನ್ನು ಬೇರೆ ಫೈಲ್ ಅತಿಕ್ರಮಣ ಮಾಡಿದ್ದರೆ (ಅಂದರೆ, ಅದರ ಸ್ಥಳದಲ್ಲಿ ಬೇರೆ ಫೈಲ್ ಏನಾದರೂ ಸೇವ್ ಆಗಿದ್ದರೆ) ಅಥವಾ ಹಾರ್ಡ್ ಡ್ರೈವ್ ಅನ್ನು ಫಾರ್ಮ್ಯಾಟ್ ಮಾಡಿದ್ದರೆ, ರಿಕವರ್ ಮಾಡುವುದು ಕಷ್ಟ.

ಇದು ಹೇಗೆ?: ಹಾರ್ಡ್ ಡ್ರೈವ್‌ನಲ್ಲಿ ಡೇಟಾ ಸೇವ್ ಮಾಡುವಾಗ, ಆ ಡ್ರೈವ್ ನಿಮ್ಮ ಮಾಹಿತಿಯನ್ನು ಮೆಮೊರಿ ಸ್ಥಳದಲ್ಲಿ ಇರಿಸುತ್ತದೆ. ದೊಡ್ಡ ಫೈಲುಗಳನ್ನು ಸಣ್ಣ ಸಣ್ಣ ವಿಭಾಗಗಳಾಗಿ ವಿಂಗಡಿಸಿ, ಹಲವು ಮೆಮೊರಿ ಸ್ಥಳಗಳಲ್ಲಿ ಸ್ಟೋರ್ ಮಾಡಲಾಗುತ್ತದೆ. ಬಳಿಕ ಹಾರ್ಡ್ ಡ್ರೈವ್, ಈ ಸ್ಥಳಗಳಿಗೆ ಪಥವನ್ನು (ಪಾಯಿಂಟರ್) ರಚಿಸುತ್ತದೆ. ಯಾರಾದರೂ ಫೈಲ್ ಓಪನ್ ಮಾಡಿದರೆ, ಹಾರ್ಡ್ ಡ್ರೈವ್ ಆ ಮಾಹಿತಿಯನ್ನು ತಂದು ತೋರಿಸಲು ಈ ಪಾಯಿಂಟರ್‌ಗಳನ್ನೇ ಬಳಸುತ್ತದೆ. ಫೈಲನ್ನು ಡಿಲೀಟ್ ಮಾಡಿದಾಗ, ಈ ಪಥವು ಡಿಲೀಟ್ ಆಗುತ್ತದೆಯಾದರೂ ಡೇಟವು ಮೆಮೊರಿ ಸ್ಥಳಗಳಲ್ಲೇ ಇರುತ್ತದೆ. ರಿಕವರಿ ಮಾಡುವುದು ಎಂದರೆ, ತಪ್ಪಿ ಹೋದ ಮಾರ್ಗವನ್ನು ಮತ್ತೆ ಜೋಡಿಸುವುದಷ್ಟೆ. ಆದರೆ ಮೊದಲೇ ಇರುವ ಡೇಟದ (ದತ್ತಾಂಶ) ಮೇಲೆ ಬೇರೆ ಫೈಲ್‌ಗಳು ಓವರ್‌ರೈಟ್ (ಒಂದು ಡೇಟದ ಮೇಲೆ ಬೇರೆ ಡೇಟ ಬಂದು ಕೂರುತ್ತದೆ) ಆಗಬಹುದು. ಈ ರೀತಿ ಆದರೆ, ಫೈಲ್ ರಿಕವರಿ ಮಾಡುವುದು ಅಸಾಧ್ಯ.

ಆಕಸ್ಮಿಕವಾಗಿಯೋ, ಬೇರೆ ಪ್ರೋಗ್ರಾಂನಿಂದಾಗಿಯೋ ಫೈಲ್ ಡಿಲೀಟ್ ಆದರೆ, ಅವುಗಳನ್ನು ಮತ್ತೆ ಯಥಾಸ್ಥಿತಿಗೆ ಮರಳಿಸಲು (ಅಂದರೆ ನಿಮಗೆ ಗೋಚರಿಸುವಂತೆ ಮಾಡಲು) ಸಾಕಷ್ಟು ಉಚಿತ ತಂತ್ರಾಂಶಗಳು ಅಂತರ್ಜಾಲದಲ್ಲಿ ಲಭ್ಯ ಇವೆ. ಅವುಗಳಲ್ಲಿ ಪ್ರಮುಖವಾದವು Recuva, Restoration, Undelete Plus, FreeUndelete, Photorec ಮುಂತಾದವು. ಯಾವುದಾದರೂ ಒಂದನ್ನು ಇನ್‌ಸ್ಟಾಲ್ ಮಾಡಿಕೊಂಡು, ಅದು ನೀಡುವ ಸೂಚನೆಗಳನ್ನು ಅನುಸರಿಸುತ್ತಾ ಹೋದಲ್ಲಿ, ಡಿಲೀಟ್ ಆಗಿದೆ ಎಂದು ನೀವು-ನಾವು ಅಂದುಕೊಂಡಿರುವ ಫೈಲ್‌ಗಳನ್ನು ವಾಪಸ್ ಪಡೆದುಕೊಳ್ಳಬಹುದು. ಆಕಸ್ಮಿಕವಾಗಿ ಫೈಲ್ ಡಿಲೀಟ್ ಆದರೆ ಇನ್ನು ಮುಂದೆ ಹೆಚ್ಚು ಧೃತಿಗೆಡಬೇಕಿಲ್ಲ, ಆಶಾವಾದ ಇರಿಸಿಕೊಳ್ಳಬಹುದು.

ಏಕ ಕಾಲದಲ್ಲಿ ಲ್ಯಾಪ್‌ಟಾಪ್, ಮೊಬೈಲ್‌ನಲ್ಲಿ ಇಂಟರ್ನೆಟ್ ಜಾಲಾಡಲು ವೈ-ಫೈ ರೂಟರ್

ಮಾಹಿತಿ@ತಂತ್ರಜ್ಞಾನ: ಅವಿನಾಶ್ ಬಿ., ಜನವರಿ 06, 2014
ಮೊಬೈಲ್ ಫೋನ್‌ನಲ್ಲಿ ಇಂಟರ್ನೆಟ್ ಸಂಪರ್ಕ ಈಗ ಜನಸಾಮಾನ್ಯರ ಕೈಗೆಟಕುತ್ತಿದೆ. ಜನರಲ್ಲಿ ಹೊಸ ತಂತ್ರಜ್ಞಾನಗಳ ಬಗೆಗಿನ ತುಡಿತವೂ ಹೆಚ್ಚಾಗುತ್ತಿದೆ. ಲ್ಯಾಪ್‌ಟಾಪ್ ಅಥವಾ ಡೆಸ್ಕ್‌ಟಾಪ್, ಎರಡೆರಡು ಸ್ಮಾರ್ಟ್- ಮೊಬೈಲ್ ಫೋನ್‌ಗಳು ಇರುವ ಸಾಧ್ಯತೆಗಳು ಹೆಚ್ಚು. ಸಾಲದೆಂಬಂತೆ ಒಂದು ಟ್ಯಾಬ್ಲೆಟ್ ಕೂಡ ಸೇರಿಸಿಕೊಳ್ಳಬಹುದು. ಇಂತಹಾ ಪರಿಸ್ಥಿತಿಗೆ ಕಾರಣವೆಂದರೆ, ಒಂದನೆಯದಾಗಿ ಗ್ಯಾಜೆಟ್ ಬಗೆಗಿನ ಕ್ರೇಜ್ ಮತ್ತು ಎರಡನೆಯದು ಮಧ್ಯಮ ವರ್ಗದ ಕೈಗೆಟಕುವ ಬೆಲೆ.

ಈ ಸಾಧನಗಳನ್ನು ಖರೀದಿಸಲು ಒಂದು ಬಾರಿ ಹಣ ಹೂಡಿದರೆ ಸಾಕು, ಆದರೆ ಅವುಗಳಲ್ಲಿ ಎಲ್ಲದಕ್ಕೂ ಇಂಟರ್ನೆಟ್ ಸಂಪರ್ಕ ಕಲ್ಪಿಸಬೇಕಿದ್ದರೆ, ಸದಾ ಕಾಲ ಹಣ ಊಡಿಸುತ್ತಲೇ ಇರಬೇಕು. ವೈ-ಫೈ ಸಾಮರ್ಥ್ಯವಿರುವ ಈ ಗ್ಯಾಜೆಟ್‌ಗಳನ್ನು ಖರೀದಿಸಿದರೆ ನಿರಂತರವಾಗಿ ಬಳಸಬೇಕಾಗುತ್ತದೆ, ಬಳಸಿ ಪೂರ್ಣವಾಗಿ ಆನಂದಿಸಬೇಕಿದ್ದರೆ, ಇಂಟರ್ನೆಟ್ ಸಂಪರ್ಕ ಬೇಕೇಬೇಕು. ಹಲವು ಸಾಧನಗಳಿಗೆ ಇಂಟರ್ನೆಟ್ ಸಂಪರ್ಕಕ್ಕಾಗಿ ಪ್ರತ್ಯೇಕ ಸಿಮ್ ಖರಾದಿಸಿ, ಅದಕ್ಕೆ ನಿಗದಿತ ಮಾಸಿಕ ವೆಚ್ಚ ತುಂಬುವುದು ಹೆಚ್ಚುವರಿ ಖರ್ಚು. ಹೀಗಾಗಿ ಒಂದೇ ಸಿಮ್ ಕಾರ್ಡ್ ಇಟ್ಟುಕೊಂಡು, ಅದರಲ್ಲಿನ ಇಂಟರ್ನೆಟ್ ಸಂಪರ್ಕವನ್ನು ಈ ಎಲ್ಲ ಗ್ಯಾಜೆಟ್‌ಗಳಿಗೂ ಬಳಸಬಲ್ಲ ವ್ಯವಸ್ಥೆಗಾಗಿ ಜನರು ತುಡಿಯುತ್ತಿದ್ದಾರೆ.

ತಂತ್ರಜ್ಞಾನವೇ ಪ್ರಧಾನವಾಗಿರುವ ಕಚೇರಿಗಳಲ್ಲಿ ಕೆಲಸ ಮಾಡುತ್ತಿರುವವರಿಗೆ ಅಲ್ಲೇ ವೈ-ಫೈ ಸೌಲಭ್ಯ ಒದಗಿಸಲಾಗಿರುತ್ತದೆ. ಪ್ರಯಾಣದಲ್ಲಿರುವಾಗ ವಿಮಾನ ನಿಲ್ದಾಣಗಳಲ್ಲಿಯೋ, ಕೆಲವು ರೈಲುಗಳಲ್ಲಿಯೋ, ವೈ-ಫೈ ಸೌಲಭ್ಯವನ್ನು ಉಚಿತವಾಗಿ ಒದಗಿಸಲಾಗುತ್ತದೆ. ಜನರು ಸದಾ ಸಂಪರ್ಕದಲ್ಲಿರುವಂತೆ ಮಾಡುವುದು ಇದರ ಉದ್ದೇಶ.

ಇದೇ ರೀತಿ, ಮನೆಯಲ್ಲಿಯೂ ವೈರುಗಳ ಕಿರಿಕಿರಿಯಿಲ್ಲದೆಯೇ ಈ ಎಲ್ಲ ಗ್ಯಾಜೆಟ್‌ಗಳನ್ನು ಏಕಕಾಲದಲ್ಲಿ ಇಂಟರ್ನೆಟ್‌ಗೆ ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿಕೊಡುವುದು ಈ ಲೇಖನದ ಉದ್ದೇಶ.. ಅದಕ್ಕೆ ಬೇಕಾಗಿರುವುದು ವೈ-ಫೈ ರೂಟರ್ (router) ಎಂಬ ಸಾಧನ. ಮನೆಯಲ್ಲಿ ಬ್ರಾಡ್‌ಬ್ಯಾಂಡ್ ಇಂಟರ್ನೆಟ್ ಸಂಪರ್ಕ ಹೊಂದಿರುವವರು ವೈರ್‌ಲೆಸ್ ರೂಟರ್‌ಗಳನ್ನು ಖರೀದಿಸಬಹುದು. ಸುಮಾರು ಎರಡು ಸಾವಿರ ರೂಪಾಯಿ ಆಸುಪಾಸಿನ ಬೆಲೆಯಲ್ಲಿ ಇದು ಲಭ್ಯ. ಬಿಎಸ್‌ಎನ್ಎಲ್‌ನಲ್ಲಿ ವೈ-ಫೈ ರೂಟರ್‌ಗಳು ಮಾಸಿಕ ಬಾಡಿಗೆ ಆಧಾರದಲ್ಲಿಯೂ ದೊರೆಯುತ್ತದೆ. ಅಲ್ಲಿ ವಿಚಾರಿಸಬೇಕಷ್ಟೆ. ಇಲ್ಲದಿದ್ದರೆ, ಮನೆಯಲ್ಲಿ ಯಾವ ಕಂಪನಿಯ ಬ್ರಾಡ್‌ಬ್ಯಾಂಡ್ ಇಂಟರ್ನೆಟ್ ಸಂಪರ್ಕ ಹೊಂದಿದ್ದೀರೋ, ಅವರಲ್ಲಿಯೂ ವೈಫೈ ರೂಟರ್‌ಗಳ ಲಭ್ಯತೆ ಬಗ್ಗೆ ವಿಚಾರಿಸಬಹುದು.

ಮನೆಗೆ ವೈ-ಫೈ ರೂಟರ್ ಖರೀದಿಸಬೇಕೆಂದಿದ್ದರೆ, ಗಮನಿಸಬೇಕಾದ ಪ್ರಮುಖ ಅಂಶಗಳು ಇಲ್ಲಿವೆ:
ರೂಟರ್ ಖರೀದಿಸುವಾಗ ಸಿಂಗಲ್ ಬ್ಯಾಂಡ್ (2.4 ಗಿಗಾಹರ್ಟ್ಜ್) ಅಥವಾ ಡ್ಯುಯಲ್ ಬ್ಯಾಂಡ್ (5 ಗಿಗಾಹರ್ಟ್ಜ್‌ವರೆಗಿನ ಸಾಮರ್ಥ್ಯ) ತೆಗೆದುಕೊಳ್ಳಬೇಕೇ ಎಂಬ ಪ್ರಶ್ನೆ ಎದುರಾಗುತ್ತದೆ. ಸಾಮಾನ್ಯ ಬಳಕೆಗೆ ಸಿಂಗಲ್ ಬ್ಯಾಂಡ್ ರೂಟರ್‌ಗಳೇ ಸಾಕು. ಆದರೆ ತೀರಾ ಜನಸಾಂದ್ರತೆ ಇರುವ ಪ್ರದೇಶಗಳಲ್ಲಿ ವಾಸಿಸುತ್ತೀರಾದರೆ, ಬೇರೆ ವೈರ್‌ಲೆಸ್ ರೂಟರ್‌ಗಳೂ ಸಾಕಷ್ಟು ಬಳಕೆಯಲ್ಲಿರುತ್ತವೆ ಮತ್ತು ಮೈಕ್ರೋವೇವ್ ಓವೆನ್‌ಗಳು ಅಥವಾ ಕಾರ್ಡ್‌ಲೆಸ್ (Cordless) ಫೋನ್‌ಗಳು ಬಳಕೆಯಲ್ಲಿವೆ ಎಂದಾದರೆ, ಸ್ವಲ್ಪ ಹೆಚ್ಚು ಬೆಲೆಯ ಡ್ಯುಯಲ್ ಬ್ಯಾಂಡ್ ರೂಟರ್‌ಗಳಿಗೆ ಹೋಗುವುದೇ ಸೂಕ್ತ. ಅದರಲ್ಲಿ ಡ್ಯುಯಲ್ ಬ್ಯಾಂಡ್ ವೈ-ಫೈ ಕೂಡ ಇರುವುದನ್ನು ಖಾತ್ರಿಪಡಿಸಿಕೊಳ್ಳಬೇಕು. ಡ್ಯುಯಲ್ ಬ್ಯಾಂಡ್ ರೂಟರ್‌ಗಳ ಬಳಕೆ ಸಿಂಗಲ್ ಬ್ಯಾಂಡ್ ರೂಟರ್‌ಗಳ ಹಾಗಲ್ಲ. ಈ ರೂಟರ್‌ಗಳಿಗೆ ಸಮೀಪದಲ್ಲಿಯೇ ಕುಳಿತು ಕೆಲಸ ಮಾಡಬೇಕಾಗುತ್ತದೆ. ಇದನ್ನು ಖರೀದಿಸುವ ಮುನ್ನ ನಿಮ್ಮಲ್ಲಿರುವ ಗ್ಯಾಜೆಟ್‌ಗಳು 5 ಗಿಗಾಹರ್ಟ್ಜ್ ಸಾಮರ್ಥ್ಯವನ್ನು ಬೆಂಬಲಿಸುತ್ತವೆಯೇ ಎಂದೂ ಪರಿಶೀಲಿಸಿಕೊಳ್ಳಬೇಕು.

ಹೆಚ್ಚಿನ ರೂಟರ್‌ಗಳಲ್ಲಿ ನಿಮ್ಮ ಮನೆಯಲ್ಲಿಯೇ ಲ್ಯಾನ್ (ಲೋಕಲ್ ಏರಿಯಾ ನೆಟ್‌ವರ್ಕ್) ಸ್ಥಾಪಿಸಿ ಬೇರೆ ಬೇರೆ ಕಂಪ್ಯೂಟರುಗಳನ್ನು ಸಂಪರ್ಕಿಸಲೆಂದು 2 ಅಥವಾ ಹೆಚ್ಚು ಈಥರ್ನೆಟ್ ಪೋರ್ಟ್‌ಗಳಿರುತ್ತವೆ. ಬೇರೆ ಗ್ಯಾಜೆಟ್‌ಗಳನ್ನು (ಪ್ರಿಂಟರ್ ಅಥವಾ ಎಕ್ಸ್‌ಟರ್ನಲ್ ಹಾರ್ಡ್ ಡಿಸ್ಕ್) ಸಂಪರ್ಕಿಸಬೇಕಿದ್ದರೆ ಅದರಲ್ಲಿ ಯುಎಸ್‌ಬಿ ಪೋರ್ಟ್ ಕೂಡ ಇರಬೇಕಾಗುತ್ತದೆ.

ಇನ್ನು ನೀವು ಈ ರೀತಿಯ ರೂಟರ್‌ಗಳನ್ನು ಖರೀದಿಸುವಾಗ, 3ಜಿ ಯುಎಸ್‌ಬಿ ಡಾಂಗಲ್ ಅನ್ನು ಕೂಡ ಅದರಲ್ಲಿ ಅಳವಡಿಸಬಹುದೇ ಎಂದು ವಿಚಾರಿಸಿ. ಅವುಗಳು ಕೂಡ ಮಾರುಕಟ್ಟೆಯಲ್ಲಿ ಲಭ್ಯವಿರುವುದರಿಂದ, ಬ್ರಾಡ್‌ಬ್ಯಾಂಡ್ ಸಂಪರ್ಕಕ್ಕೆ ಪರ್ಯಾಯವಾಗಿ ಇಂಟರ್ನೆಟ್ ಸಂಪರ್ಕ ಒದಗಿಸುವ 3ಜಿ ಡಾಂಗಲ್ ಬಳಸುತ್ತೀರೆಂದಾದರೆ, ಅನುಕೂಲವಾಗುತ್ತದೆ.

ಮತ್ತು ಈ ರೂಟರ್‌ನಿಂದ ಬೇರೆ ಕೊಠಡಿಗಳಲ್ಲಿಯೂ ವೈ-ಫೈ ಸಂಪರ್ಕವನ್ನು ಬಳಸಬೇಕೆಂದಿದ್ದರೆ, (ಗೋಡೆಗಳು, ಗಾಜಿನ ಬಾಗಿಲುಗಳು ಇತ್ಯಾದಿ ಇರುವಲ್ಲಿ) ಒಂದು ಅಥವಾ ಹೆಚ್ಚು ಆಂಟೆನಾಗಳು ಇರುವಂಥಹಾ ರೂಟರ್‌ಗಳನ್ನೇ ಖರೀದಿಸಬೇಕಾಗುತ್ತದೆ. ಸಣ್ಣ ಮನೆಯಾದರೆ ಒಂದೇ ಆಂಟೆನಾ, ಮಧ್ಯಮ ಅಥವಾ ದೊಡ್ಡ ಮನೆಗಳಿಗೆ ಎರಡು ಬಾಹ್ಯ ಆಂಟೆನಾ ಇರುವಂಥವು ಸಾಕು. ಆಂತರಿಕ ಆಂಟೆನಾ ಇರುವ ರೂಟರ್‌ಗಳು ನೋಡಲು ಚೆಂದ ಮತ್ತು ಸಣ್ಣ ಮನೆಗಳಿಗೆ ಸಾಕಾಗುತ್ತದೆ. ವೈ-ಫೈ ಇರುವ ರೂಟರ್‌ಗಳಿದ್ದರೆ, ಮಾಡೆಮ್ ಇರುವಲ್ಲಿಯೇ ಹೋಗಿ ನಿಮ್ಮ ಸ್ಮಾರ್ಟ್‌ಫೋನ್ ಅಥವಾ ಟ್ಯಾಬ್ಲೆಟನ್ನು ಬಳಸಬೇಕಿಲ್ಲ. ಹಜಾರದಲ್ಲೋ, ಬೆಡ್ ರೂಮ್‌ನಲ್ಲೋ ಕುಳಿತುಕೊಂಡು ವೈ-ಫೈ ಮೂಲಕ ಇಂಟರ್ನೆಟ್ ಸಂಪರ್ಕ ಪಡೆದುಕೊಂಡು ವೆಬ್ ಜಾಲಾಡಬಹುದು.