ಜನ ಸಾಮಾನ್ಯರತ್ತ ತಂತ್ರಜ್ಞಾನ – Gadget-Technology Info Towards Common Man

Posts tagged ‘email’

ಇಮೇಲ್ ಟೈಪ್ ಮಾಡಬೇಕಿಲ್ಲ, ಸ್ಮಾರ್ಟ್‌ಫೋನ್‌ಗೆ ಹೇಳಿದರೆ ಸಾಕು!

ವಿಜಯ ಕರ್ನಾಟಕ ಮಾಹಿತಿ@ತಂತ್ರಜ್ಞಾನ ಅಂಕಣ: ಮೇ 5, 2014

ನಾವು ಏನೆಲ್ಲಾ ಊಹಿಸಿಕೊಂಡು ಕಲ್ಪನಾ ಲೋಕದಲ್ಲಿ ವಿಹರಿಸುತ್ತಿದ್ದೆವೋ ಅಂಥಹಾ ಕನಸಿನ ಸಂಗತಿಗಳು ಈ ತಂತ್ರಜ್ಞಾನ ಯುಗದಲ್ಲಿ ಒಂದೊಂದೇ ಸಾಕಾರಗೊಳ್ಳುತ್ತಿವೆ. ತಂತ್ರಜ್ಞಾನ ಬೆಳೆದಂತೆ ಮನುಷ್ಯನ ಮೆದುಳಿಗೆ ಮತ್ತು ದೇಹಕ್ಕೆ ಕೆಲಸ ಕಡಿಮೆಯಾಗುತ್ತಿದೆ. ಇದರಿಂದ ಮನುಷ್ಯ ಆಲಸಿಯಾಗುತ್ತಾನೋ ಗೊತ್ತಿಲ್ಲ, ಆದರೆ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಬಳಕೆದಾರರು ಕುತೂಹಲದಿಂದ ಕಾಯುತ್ತಿದ್ದ ಆ್ಯಪ್ ಒಂದು ಈಗ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಜನಪ್ರಿಯವಾಗಿ, ಈ ಕುರಿತು ಚರ್ಚೆ ಹುಟ್ಟುಹಾಕಿದ್ದಂತೂ ಸುಳ್ಳಲ್ಲ.

‘ಸಿರಿ’ ಎಂಬ “ಆಪ್ತ ಸಹಾಯಕಿ”ಯಂತೆ ವರ್ತಿಸುತ್ತಿರುವ ಒಂದು ಆ್ಯಪ್, ಆ್ಯಪಲ್ ಫೋನ್ ಬಳಕೆದಾರರಲ್ಲಿ ಜನಪ್ರಿಯವಾಗಿತ್ತು. ಇದೀಗ ಅಂಥದ್ದೇ ಆ್ಯಪ್ ಆಂಡ್ರಾಯ್ಡ್ ಸ್ಮಾರ್ಟ್ ಫೋನ್‌ಗಳಿಗೂ ಲಭ್ಯವಾಗಿದೆ. ‘ಗೂಗಲ್ ನೌ’ ಎಂದು ಕರೆಯಲಾಗುವ ಈ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು, “ಓಕೆ ಗೂಗಲ್” ಅಂತ ಹೇಳಿದಾಕ್ಷಣ, ಅದು ಸ್ವಯಂಚಾಲಿತವಾಗಿ ಆ್ಯಕ್ಟಿವೇಟ್ ಆಗುತ್ತದೆ. ನಿಮ್ಮೆದುರು ಕೈಕಟ್ಟಿ ನಿಲ್ಲುವ ಆಪ್ತ ಸಹಾಯಕನಂತೆ, ನೀವೇನು ಹೇಳುತ್ತೀರೋ ಅದನ್ನು ಮಾಡಿಕೊಡಲು ಸಿದ್ಧವಾಗಿ ನಿಲ್ಲುತ್ತದೆ.

ಈ ಆ್ಯಪ್ ಅನ್ನು ಇನ್‌ಸ್ಟಾಲ್ ಮಾಡಿಕೊಂಡ ನಂತರ ಅದರಲ್ಲಿರುವ ಮೈಕ್‌ನ ಚಿತ್ರದ ಬಟನ್ ಒಮ್ಮೆ ಒತ್ತಿದರೆ, “Google Now” ಸಕ್ರಿಯವಾಗುತ್ತದೆ. ನೀವು ಕುಳಿತಲ್ಲಿಂದಲೇ ಅದಕ್ಕೆ ಸೂಚನೆಗಳನ್ನು (ಕಮಾಂಡ್‌ಗಳನ್ನು) ನೀಡಿದರಾಯಿತು. ಸದ್ಯಕ್ಕೆ ಅದು ಇಂಗ್ಲಿಷ್‌ನಲ್ಲಿ ಕೆಲಸ ಮಾಡುತ್ತದೆ. ಇದು ಕೆಲಸ ಮಾಡುವುದು ಧ್ವನಿ ಆದೇಶಗಳ ಮೂಲಕ. ನಾವು ಹೇಳಿದ್ದನ್ನು ಅದು ಇಂಗ್ಲಿಷ್ ಭಾಷೆಗೆ ಪರಿವರ್ತಿಸಿ ಅಕ್ಷರ ರೂಪದಲ್ಲಿ ಸ್ಕ್ರೀನ್ ಮೇಲೆ ಮೂಡಿಸುತ್ತದೆ. ಅದನ್ನು ಟೈಪಿಂಗ್ ಮೂಲಕ ಸರಿಪಡಿಸಿಕೊಳ್ಳಬಹುದು. ಜೊತೆಗೆ, ನಮ್ಮ ಉಚ್ಚಾರಣೆ ‘ಗೂಗಲ್ ನೌ’ಗೆ ಸರಿಯಾಗಿ ಕೇಳಿಸಿಕೊಳ್ಳದಿದ್ದರೆ, ಟೈಪ್ ಮಾಡಿ ಸರಿಪಡಿಸುವ ಆಯ್ಕೆಯೂ ಲಭ್ಯ. ಅರ್ಥವಾಗದಿದ್ದರೆ, ‘ನನಗಿದು ಅರ್ಥವಾಗಿಲ್ಲ’ ಎಂದು ನಿಮ್ಮ ಸ್ಮಾರ್ಟ್‌ಫೋನ್ ಹೇಳುತ್ತದೆ.

ಉದಾಹರಣೆಗೆ, “ಸೆಂಡ್ ಎಸ್ಸೆಮ್ಮೆಸ್ ಟು ಅವಿನಾಶ್” ಅಂತ ಹೇಳಿದರೆ, ನಿಮ್ಮ ಕಾಂಟ್ಯಾಕ್ಸ್ಟ್ ಲಿಸ್ಟ್‌ನಲ್ಲಿರುವ ‘ಅವಿನಾಶ್’ ಹೆಸರಿನ ಎಲ್ಲರ ಪಟ್ಟಿ ನಿಮ್ಮ ಸ್ಮಾರ್ಟ್ ಫೋನ್ ಪರದೆ ಮೇಲೆ ಕಾಣಿಸಿಕೊಳ್ಳುತ್ತದೆ ಮತ್ತು ಅವುಗಳಲ್ಲಿ ಯಾವ ‘ಅವಿನಾಶ್’ಗೆ ಎಸ್ಎಂಎಸ್ ಕಳುಹಿಸಬೇಕು ಅಂತ ಅದುವೇ ನಿಮ್ಮನ್ನು ಕೇಳುತ್ತದೆ!

ಯಾವುದಾದರೂ ಕಮಾಂಡ್ ಕೊಟ್ಟರೆ, ಉದಾಹರಣೆಗೆ, ಇಮೇಲ್, ಮೆಸೇಜ್, ಕಾಲ್ ಇತ್ಯಾದಿ… ಸ್ಮಾರ್ಟ್‌ಫೋನ್‌ನಲ್ಲಿರುವ ಪ್ರೋಗ್ರಾಂಗಳನ್ನು ಅದು ನಿಮ್ಮೆದುರು ತೆರೆದಿಡುತ್ತದೆ. ‘ಇಂಥವರಿಗೆ ಮೇಲ್ ಮಾಡು’ ಅಂತ ಇಂಗ್ಲಿಷ್‌ನಲ್ಲಿ ಹೇಳಿದಾಕ್ಷಣ, ಇ-ಮೇಲ್ ಫಾರ್ಮ್ ಓಪನ್ ಮಾಡಿ, ಯಾವ ಸಂದೇಶ ಕಳುಹಿಸಬೇಕು ಅಂತ ಕೇಳುತ್ತದೆ. ಇಂಗ್ಲಿಷಿನಲ್ಲಿ ಸಂದೇಶ ಹೇಳಿದರೆ, ಅದು ಫೋನ್‌ನಲ್ಲಿ ಟೈಪ್ ಆಗಿರುತ್ತದೆ. ಅದೇ ರೀತಿ, ನೀವು ಕೇಳಿದ್ದಕ್ಕೆ ಸೂಕ್ತವಾದ ಆ್ಯಪ್ ಸ್ಮಾರ್ಟ್ ಫೋನ್‌ನಲ್ಲಿ ಇಲ್ಲದಿದ್ದರೆ, ಅದು ಗೂಗಲ್ ಮೂಲಕ ಸರ್ಚ್ ಮಾಡಿ, ಸಂಬಂಧಪಟ್ಟ ಮಾಹಿತಿಯನ್ನು ನಿಮ್ಮ ಮುಂದಿಡುತ್ತದೆ.

ಅಂತೆಯೇ, “ಡಿಸ್ಟೆನ್ಸ್ ಬಿಟ್ವೀನ್ ಬ್ಯಾಂಗಲೋರ್ ಆ್ಯಂಡ್ ಮ್ಯಾಂಗಲೋರ್” ಅಂತ ಹೇಳಿದರೆ ಇಂಟರ್ನೆಟ್‌ನಲ್ಲಿ ಸರ್ಚ್ ಮಾಡಿ ಎಷ್ಟು ಕಿಲೋಮೀಟರ್ ದೂರವಿದೆ, ಎಷ್ಟು ಗಂಟೆಯಲ್ಲಿ ತಲುಪಬಹುದು ಹಾಗೂ ಹೇಗೆ ಹೋಗುವುದೆಂಬ ರೂಟ್ ಮ್ಯಾಪ್ ಕೂಡ ತೋರಿಸುತ್ತದೆ. ನೀವು ಕೇಳಿದ ಪ್ರಶ್ನೆಗೆ ಧ್ವನಿ ಮೂಲಕ ಉತ್ತರವೂ ದೊರೆಯುತ್ತದೆ. “ಹೌಟು ರೀಚ್ ನಿಯರ್‌ಬೈ ರೈಲ್ವೇ ಸ್ಟೇಶನ್” ಅಂತ ಕೇಳಿದರೆ, ಗೂಗಲ್ ಮ್ಯಾಪ್ ಮೂಲಕ ಮಾರ್ಗ ತೋರಿಸುತ್ತದೆ. “ವಿಚ್ ಈಸ್ ದಿ ಬೆಸ್ಟ್ ಹೋಟೆಲ್ ನಿಯರ್ ಮೈ ಪ್ಲೇಸ್” ಅಂತ ಕೇಳಿದರೆ, ನೀವಿರುವ ಸ್ಥಳವನ್ನು ಜಿಪಿಎಸ್ ಮೂಲಕ ಗುರುತಿಸಿ, ಆ ಪ್ರದೇಶದ ಸುತ್ತಮುತ್ತವಿರುವ ಹೋಟೆಲ್‌ಗಳ ಪಟ್ಟಿ, ಸಂಪರ್ಕ ವಿವರಗಳನ್ನು ನಿಮ್ಮ ಸ್ಕ್ರೀನ್‌ನಲ್ಲಿ ತೋರಿಸುತ್ತದೆ.

‘ಗೂಗಲ್ ನೌ’ ಇನ್‌ಸ್ಟಾಲ್ ಮಾಡಿಕೊಳ್ಳುವುದು ಹೀಗೆ: ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಗೂಗಲ್ ಸರ್ಚ್ ಎಂಬ ಟೂಲ್ ಇಲ್ಲದಿದ್ದರೆ, ಗೂಗಲ್ ಪ್ಲೇ ಸ್ಟೋರ್‌ನಲ್ಲಿ Google Search ಆ್ಯಪ್ ಹುಡುಕಿ, ಡೌನ್‌ಲೋಡ್ ಮಾಡಿಕೊಳ್ಳಿ. ಅದನ್ನು ಹೋಂ ಸ್ಕ್ರೀನ್‌ನಲ್ಲಿ ಇರಿಸಿಕೊಳ್ಳಿ. ಒಮ್ಮೆ ಆನ್ ಮಾಡಬೇಕಿದ್ದರೆ, ಮೈಕ್ ಇರುವ ಬಟನ್ ಅದುಮಿದರೆ ಸಾಕು. ಒಂದು ಕಮಾಂಡ್‌ನ ಕೆಲಸ ಮುಗಿದ ಬಳಿಕ ಪುನಃ ಮಾತುಕತೆ ಆರಂಭಿಸಬೇಕಿದ್ದರೆ, “ಓಕೆ ಗೂಗಲ್” ಅಂತ ಹೇಳಿದರೆ, ಆ ಮೈಕ್ ಚಿಹ್ನೆಯಿರುವ ಬಟನ್, ಕೆಂಪು ಬಣ್ಣದಲ್ಲಿ ಮಿನುಗುತ್ತದೆ. ಆಗ ನಿಮಗೆ ಬೇಕಾದ ಪ್ರಶ್ನೆ ಕೇಳಿದರೆ ಆಯಿತು. ನಿಮ್ಮ ಆಪ್ತ ಸಹಾಯಕ ಸಿದ್ಧ. ಇಂತಹಾ ಸಾಕಷ್ಟು ಆ್ಯಪ್‌ಗಳು ಪ್ಲೇ ಸ್ಟೋರ್‌ನಲ್ಲಿ ಲಭ್ಯ ಇವೆ. ಟ್ರೈ ಮಾಡಬೇಕಿದ್ದರೆ “Voice Assistant” ಅಂತ ಪ್ಲೇ ಸ್ಟೋರ್‌ನಲ್ಲಿ ಸರ್ಚ್ ಮಾಡಿದರೆ ಸಿಗುತ್ತವೆ.

‘ಔಟ್‌ಲುಕ್’ನಲ್ಲಿ ಇಮೇಲ್‌ಗಳನ್ನು ವ್ಯವಸ್ಥಿತವಾಗಿರಿಸುವುದು ಹೇಗೆ…

ಮಾಹಿತಿ @ ತಂತ್ರಜ್ಞಾನ: ವಿಜಯ ಕರ್ನಾಟಕ ಅಂಕಣ -ಜುಲೈ 15, 2013

ಕಂಪ್ಯೂಟರ್‌ನಲ್ಲಿ ಕೆಲಸ ಮಾಡುವವರು ಮತ್ತು ಹೆಚ್ಚಾಗಿ ಇಮೇಲ್ ಸಂವಹನದಲ್ಲಿ ತೊಡಗಿರುವವರು ಮೈಕ್ರೋಸಾಫ್ಟ್ ಔಟ್‌ಲುಕ್ (ಹಳೆಯವುಗಳಲ್ಲಿ ಔಟ್‌ಲುಕ್ ಎಕ್ಸ್‌ಪ್ರೆಸ್) ಎಂಬ ಇಮೇಲ್ ಕ್ಲಯಂಟ್ (ಅಂದರೆ, ನಿಮ್ಮ ಇಮೇಲ್‌ಗಳನ್ನು ನಿಮ್ಮ ಕಂಪ್ಯೂಟರಿಗೆ ಇಳಿಸಿಕೊಳ್ಳಲು ನೆರವಾಗುವ, ಮೈಕ್ರೋಸಾಫ್ಟ್ ಕಂಪನಿಯ ಆಫೀಸ್ ತಂತ್ರಾಂಶದಲ್ಲಿ ಅಡಕವಾಗಿರುವ ಒಂದು ಇಮೇಲ್ ಅಪ್ಲಿಕೇಶನ್) ಬಳಸಿದರೆ, ನಮಗೆ ಬರುವ ಇಮೇಲ್‌ಗಳನ್ನು ವ್ಯವಸ್ಥಿತವಾಗಿಡಬಹುದು. ಆದರೆ, ಎಲ್ಲ ಇಮೇಲ್‌ಗಳು ಅದಕ್ಕೆ ಬರುವುದರಿಂದಾಗಿ, ಮೇಲ್ ಬಾಕ್ಸ್ ತುಂಬಿ ತುಳುಕಾಡಿ, ಯಾವುದನ್ನು ಓದುವುದು, ಯಾವುದನ್ನು ಬಿಡುವುದು ಎಂಬಿತ್ಯಾದಿ ಗೊಂದಲ ಉಂಟಾಗಬಹುದು.

ಇಮೇಲ್‌ಗಳು ಬರುವಾಗಲೇ ಅವುಗಳಿಗೆ ಒಂದು ದಾರಿ ತೋರಿಸಿ, ನಿರ್ದಿಷ್ಟ ಸ್ಥಳದಲ್ಲಿ ಲಭಿಸುವಂತೆ ಮಾಡಿದರೆ ಓದುವುದೂ ಸುಲಭ, ಆದ್ಯತೆ ನೀಡುವುದೂ ಸುಲಭವಾಗುತ್ತದೆ. ಉದಾಹರಣೆಗೆ, ಖಾಸಗಿ ಇಮೇಲ್‌ಗಳು ಒಂದು ಫೋಲ್ಡರ್‌ನಲ್ಲಿ, ಮೇಲಧಿಕಾರಿಯಿಂದ ಬಂದ ಇಮೇಲ್‌ಗಳು ಒಂದು ಫೋಲ್ಡರ್‌ನಲ್ಲಿ, ನಿಮ್ಮ ಕೈಕೆಳಗಿನವರಿಂದ ರಜಾ ಅರ್ಜಿ ಇರುವ ಇಮೇಲ್‌ಗಳು ಒಂದು ಕಡೆ, ನಿಮ್ಮ ಪ್ರಾಜೆಕ್ಟ್‌ಗೆ ಸಂಬಂಧಿಸಿದ ಅಥವಾ ವಿಭಿನ್ನ ವಿಭಾಗಗಳಿಗೆ ಸಂಬಂಧಿಸಿದ ಮೇಲ್‌ಗಳನ್ನು ಒಂದು ಫೋಲ್ಡರ್‌ನಲ್ಲಿ ಇರಿಸಬಹುದು.

ಇದಕ್ಕೆ ಮಾಡಬೇಕಾದುದೆಂದರೆ, ಔಟ್‌ಲುಕ್‌ನಲ್ಲಿರುವ ಇನ್‌ಬಾಕ್ಸ್‌ನಲ್ಲಿ ನೀವು ಹಲವು ಫೋಲ್ಡರ್‌ಗಳನ್ನು ರಚಿಸಬೇಕು. ಉದಾಹರಣೆಗೆ, Friend, Leave, Future Reference, Important ಅಂತೆಲ್ಲಾ ಫೋಲ್ಡರ್‌ಗಳನ್ನು ಕ್ರಿಯೇಟ್ ಮಾಡಿಕೊಳ್ಳಿ. ಅದೇ ರೀತಿ, ಕಚೇರಿಯ ಮೇಲ್ ಐಡಿ ಹೊರತಾಗಿ, ಖಾಸಗಿ ಜಿಮೇಲ್/ಯಾಹೂ ಮೇಲ್ ಇತ್ಯಾದಿ ಖಾತೆಗಳಿದ್ದರೆ, ಅವುಗಳಿಗಾಗಿ ಪ್ರತ್ಯೇಕ ಫೋಲ್ಡರ್ ರಚಿಸಿ.

ಈಗ, ನಿಮಗೆ ಬರುವ ಇಮೇಲ್‌ಗಳನ್ನು ಆಯಾ ಫೋಲ್ಡರ್‌ಗಳಿಗೆ ತನ್ನಿಂತಾನಾಗಿಯೇ ಕಳುಹಿಸುವುದು ಹೇಗೆ? ಉದಾಹರಣೆಗೆ, Leave Application ಎಂಬ ಸಬ್ಜೆಕ್ಟ್ ಲೈನ್‌ನೊಂದಿಗೆ ನಿಮ್ಮ ಕೈಕೆಳಗೆ ಕೆಲಸ ಮಾಡುತ್ತಿರುವವರು ಸಲ್ಲಿಸಿದ ರಜಾ ಅರ್ಜಿಯೆಲ್ಲವೂ “Leave” ಎಂಬ ಫೋಲ್ಡರ್‌ಗೆ ಬರುವಂತೆ ಹೀಗೆ ಮಾಡಿ:

ಮೊದಲು ಇನ್‌ಬಾಕ್ಸ್‌ನಲ್ಲಿ Leave ಎಂಬ ಫೋಲ್ಡರ್ ಕ್ರಿಯೇಟ್ ಮಾಡಿ. ಬಳಿಕ, ಬಂದಿರುವ ಇಮೇಲ್ Right Click ಮಾಡಿ,ಸಿಗುವ ಹಲವಾರು Option ಗಳಲ್ಲಿ Create Rule ಕ್ಲಿಕ್ ಮಾಡಿ. ಅಲ್ಲಿರುವ ಆಯ್ಕೆಗಳಲ್ಲಿ Subject Contains ಎಂಬ ಚೆಕ್ ಬಾಕ್ಸ್ ಕ್ಲಿಕ್ ಮಾಡಿ, ಪಕ್ಕದ ಬಾಕ್ಸ್‌ನಲ್ಲಿ “Leave Application” ಎಂದು ಟೈಪ್ ಮಾಡಿ. (ರಜೆಯ ಸಬ್ಜೆಕ್ಟ್ ಲೈನ್ ಏಕರೂಪದಲ್ಲಿರುವಂತೆ ಮೊದಲೇ ನಿಮ್ಮ ಕೈಕೆಳಗಿನವರಿಗೆ ಸೂಚಿಸಬೇಕು. ಕೆಲವು ಕಂಪನಿಗಳಲ್ಲಿ ರಜೆಗೆ ಅರ್ಜಿ ಸಲ್ಲಿಸಲು ಪ್ರತ್ಯೇಕವಾದ ಆನ್‌ಲೈನ್ ವ್ಯವಸ್ಥೆಯಿದ್ದು, ಸ್ವಯಂಚಾಲಿತವಾಗಿ ಸಬ್ಜೆಕ್ಟ್ ಲೈನ್‌ನಲ್ಲಿ Leave Application ಅಥವಾ ಬೇರೇನಾದರೂ ಪದ ಪುಂಜ ಇರುತ್ತದೆ.)

ನಂತರ ಕೆಳಗೆ, ಅದೇ ಪಾಪ್-ಅಪ್ ವಿಂಡೋದಲ್ಲಿ Do the Following ಎಂಬುದರ ಅಡಿಯಲ್ಲಿ, Move the item to folder ಅಂತ ಕಾಣಿಸುತ್ತದೆ. ಪಕ್ಕದಲ್ಲೇ ಸಂಬಂಧಪಟ್ಟ ಫೋಲ್ಡರ್ ಬ್ರೌಸ್ ಮಾಡಿ ಆಯ್ಕೆ ಮಾಡಲು ಬಟನ್ ಇರುತ್ತದೆ. ಅಲ್ಲಿ Leave ಫೋಲ್ಡರ್ ಆಯ್ಕೆ ಮಾಡಿ. OK ಒತ್ತಿ.

ಮತ್ತೊಂದು ಪಾಪ್-ಅಪ್ ವಿಂಡೋ ಕಾಣಿಸುತ್ತದೆ. Leave Application ರೂಲ್ ಕ್ರಿಯೇಟ್ ಮಾಡಲಾಗಿದೆ ಎಂದು ತೋರಿಸಲಾಗುತ್ತದೆ. ಅದರ ಕೆಳಗೊಂದು ಚೆಕ್ ಬಾಕ್ಸ್ ಇರುತ್ತದೆ. Run this rule now on messages already in the current folder ಎಂದಿರುವ ಅದನ್ನು ಕ್ಲಿಕ್ ಮಾಡಿ OK ಒತ್ತಿದರೆ, ನಿಮ್ಮ ಇನ್‌ಬಾಕ್ಸ್‌ನಲ್ಲಿರುವ ಹಳೆಯ ಎಲ್ಲ ರಜಾ ಅರ್ಜಿಗಳು, Leave ಎಂಬ ಫೋಲ್ಡರ್‌ಗೆ ರವಾನೆಯಾಗುತ್ತವೆ.

ಇದೇ ರೀತಿಯಾಗಿ, Subject Line Contains ಎಂದು ಆಯ್ಕೆ ಮಾಡುವ ಬದಲು, From ಎಂಬುದನ್ನು ಆಯ್ಕೆ ಮಾಡಿದರೆ, ನಿರ್ದಿಷ್ಟ ಇಮೇಲ್ ಐಡಿಯಿಂದ ಬಂದಿರುವ ಮೇಲ್‌ಗಳನ್ನು ಆಯಾ ಫೋಲ್ಡರ್‌ಗೆ ಕಳುಹಿಸುವ ವ್ಯವಸ್ಥೆಯನ್ನೂ ಮಾಡಿಕೊಳ್ಳಬಹುದು. ಅಥವಾ To ಎಂಬುದನ್ನು ಕ್ಲಿಕ್ ಮಾಡಿದರೆ, ನಿಮ್ಮ ಖಾಸಗಿ ಇಮೇಲ್ ಐಡಿಗೆ ಬರುವ ಮೇಲ್‌ಗಳನ್ನು ನಿರ್ದಿಷ್ಟ ಫೋಲ್ಡರ್‌ಗೆ ರವಾನಿಸಬಹುದು.

ಮೇಲೆ ಹೇಳಿದ್ದು ಶಾರ್ಟ್‌ಕಟ್ ವಿಧಾನ. ಕಂಪ್ಯೂಟರ್ ಬಗ್ಗೆ ಸ್ವಲ್ಪ ಹೆಚ್ಚು ಗೊತ್ತಿರುವವರಾದರೆ, ನೇರವಾಗಿ ಟೂಲ್ಸ್ ಮೆನುವಿನಲ್ಲಿ ‘Rules & Alerts’ ಎಂಬಲ್ಲಿಂದ ಹೊಸ ರೂಲ್‌ಗಳನ್ನು ಕ್ರಿಯೇಟ್ ಮಾಡಬಹುದಾಗಿದೆ.

ಔಟ್‌ಲುಕ್ ಬಳಸುವುದು ಹೀಗೆ…

ಜನ ಸಾಮಾನ್ಯರಿಗಾಗಿ ಮಾಹಿತಿ @ ತಂತ್ರಜ್ಞಾನ: ವಿಜಯ ಕರ್ನಾಟಕ ಅಂಕಣ -40- 24 ಜುಲೈ 2013
ನಿಮಗೆ ಬರುವ ಯಾವುದೇ ಇಮೇಲ್‌ಗಳನ್ನು (ಜಿಮೇಲ್, ಹಾಟ್‌ಮೇಲ್, ರಿಡಿಫ್ ಮೇಲ್, ಯಾಹೂ ಮೇಲ್ ಅಥವಾ ಕಂಪನಿ ಇಮೇಲ್) ನಮ್ಮ ಡೆಸ್ಕ್‌ಟಾಪ್ ಅಥವಾ ಲ್ಯಾಪ್‌ಟಾಪ್ ಕಂಪ್ಯೂಟರಿಗೆ ಇಳಿಸಿಕೊಂಡು ಒಂದೇ ಕಡೆ ನೋಡಲು ಅನುಕೂಲ ಮಾಡಿಕೊಡುವ ಪ್ರೋಗ್ರಾಂ ‘ಇಮೇಲ್ ಡೆಸ್ಕ್‌ಟಾಪ್ ಕ್ಲೈಂಟ್’. ಇದನ್ನು ಬಳಸಿದರೆ, ನಮ್ಮೆಲ್ಲಾ ವಿಭಿನ್ನ ಖಾತೆಗಳಿಗೆ ಬರುವ ಮೇಲ್‌ಗಳನ್ನು ವ್ಯವಸ್ಥಿತವಾಗಿರಿಸಬಹುದು; ಒಮ್ಮೆ ಡೌನ್‌ಲೋಡ್ ಆದ ಮೇಲ್‌ಗಳನ್ನು ಇಂಟರ್ನೆಟ್ ಸಂಪರ್ಕವಿಲ್ಲದಿದ್ದರೂ ಮತ್ತೆ ಮತ್ತೆ ಓದಬಹುದು ಹಾಗೂ ಬೇಕಾದ ಮೇಲ್‌ಗಳನ್ನು ಸುಲಭವಾಗಿ ಹುಡುಕಬಹುದು. ಇದರೊಂದಿಗೆ, ಮೀಟಿಂಗ್, ಮದುವೆ, ಬರ್ತ್‌ಡೇ ಇತ್ಯಾದಿಗಳನ್ನು ನೆನಪಿನಲ್ಲಿಟ್ಟುಕೊಳ್ಳುವ ಕ್ಯಾಲೆಂಡರ್ ಸೌಲಭ್ಯವೂ ಇದರಲ್ಲಿದೆ.

ಔಟ್‌ಲುಕ್: ಮೈಕ್ರೋಸಾಫ್ಟ್ ವಿಂಡೋಸ್‌ನ ಕಾರ್ಯಾಚರಣೆಯುಳ್ಳ ಕಂಪ್ಯೂಟರ್‌ಗಳಲ್ಲಿ ‘ಆಫೀಸ್’ ಎಂಬ ತಂತ್ರಾಂಶವಿರುತ್ತದೆ. ಇದು ಪಠ್ಯ ಪರಿಷ್ಕರಣೆ (ಟೆಕ್ಸ್ಟ್ ಎಡಿಟರ್) ತಂತ್ರಾಂಶಗಳ ಸಮೂಹ. ಇಲ್ಲಿ ಮೈಕ್ರೋಸಾಫ್ಟ್ ವರ್ಡ್, ಎಕ್ಸೆಲ್, ಪವರ್‌ಪಾಯಿಂಟ್ ಇತ್ಯಾದಿಗಳ ಜತೆಗೆ ಔಟ್‌ಲುಕ್ ಎಂಬ ಟೂಲ್ ಕೂಡ ಇದೆ. ಈ ಔಟ್‌ಲುಕ್/ಔಟ್‌ಲುಕ್ ಎಕ್ಸ್‌ಪ್ರೆಸ್ ಇಲ್ಲವೇ ಮೈಕ್ರೋಸಾಫ್ಟ್ ಔಟ್‌ಲುಕ್ ಎಂಬುದೇ ನಿಮ್ಮ ಇಮೇಲ್ ಕ್ಲೈಂಟ್.

ಇದಲ್ಲದೆ, ನಿಮ್ಮ ಔಟ್‌ಲುಕ್ ಒಳಗೆ ವಿವಿಧ ಫೋಲ್ಡರ್‌ಗಳನ್ನು ರಚಿಸಿ, ಬರುವ ಮೇಲ್‌ಗಳನ್ನು ಆಯಾ ಫೋಲ್ಡರ್‌ಗಳಿಗೆ ಹೋಗುವಂತೆ ಮಾಡುವ ‘ರೂಲ್’ ಕ್ರಿಯೇಟ್ ಮಾಡಿದರೆ ಇನ್‌ಬಾಕ್ಸ್ ಕ್ಲೀನ್ ಆಗಿರುತ್ತದೆ. ಉದಾಹರಣೆಗೆ, ನಿಮ್ಮ ಸ್ನೇಹಿತ ವರ್ಗದಿಂದ ಬರುವ ಮೇಲ್‌ಗಳನ್ನು ‘ಫ್ರೆಂಡ್ಸ್’ ಎಂಬ ಫೋಲ್ಡರ್ ಮಾಡಿಕೊಂಡರೆ, ಅವರಿಂದ ಬರುವ ಮೇಲ್‌ಗಳು ನಿಮ್ಮ ಇನ್‌ಬಾಕ್ಸ್ ಬದಲಾಗಿ, ‘ಫ್ರೆಂಡ್ಸ್’ ಫೋಲ್ಡರ್‌ನಲ್ಲಿ ಕಾಣಿಸಿಕೊಳ್ಳುತ್ತವೆ. ಇದಕ್ಕೆ ಸ್ನೇಹಿತ ವರ್ಗದ ಎಲ್ಲ ಇಮೇಲ್ ಐಡಿಗಳನ್ನು ಒಂದು ‘ರೂಲ್’ ಮೂಲಕ ಸೇರಿಸಬೇಕಾಗುತ್ತದೆ. ಅದೇ ರೀತಿ, ಕಚೇರಿಗೆ ಸಂಬಂಧಿಸಿದ ಮೇಲ್‌ಗಳನ್ನು ‘ಆಫೀಸ್’ ಫೋಲ್ಡರ್‌ಗೆ, ಉದ್ಯೋಗಕ್ಕೆ ಸಂಬಂಧಿಸಿದವುಗಳನ್ನು ‘ಜಾಬ್ಸ್’ ಫೋಲ್ಡರ್ ಮಾಡಿಕೊಂಡು… ಅವೆಲ್ಲವೂ ಪ್ರತ್ಯೇಕವಾಗಿ ಇಡುವಂತೆ ನೋಡಿಕೊಳ್ಳಬಹುದು.

ಡೆಸ್ಕ್‌ಟಾಪ್ ಇಮೇಲ್ ಕ್ಲೈಂಟ್‌ಗಳು ನಿಮ್ಮ ವೆಬ್ ಮೇಲ್ ಇಂಟರ್ಫೇಸ್‌ನ ಎಲ್ಲ ಕೆಲಸಗಳನ್ನೂ ಮಾಡುತ್ತವೆ. ಅಂದರೆ ನೀವು ರಿಪ್ಲೈ ಮಾಡಿದ ಇಮೇಲ್ ಐಡಿಗಳು ಸ್ವಯಂಚಾಲಿತವಾಗಿ ಅಡ್ರೆಸ್ ಬುಕ್‌ನಲ್ಲಿ ಸೇವ್ ಆಗುತ್ತವೆ; ಕಳುಹಿಸಿದ ಮೇಲ್‌ಗಳು ‘ಸೆಂಟ್’ ಫೋಲ್ಡರ್‌ನಲ್ಲಿ ಉಳಿಯುತ್ತವೆ; ಸ್ಪ್ಯಾಮ್ ಸಂದೇಶಗಳ ಪ್ರತ್ಯೇಕ ಫೋಲ್ಡರ್ ಇರುತ್ತದೆ. ಅಂತೆಯೇ ಫಾಲೋ ಅಪ್ ಮಾಡಬೇಕಾದ ಮೇಲ್‌ಗಳಿಗೆ ಬಣ್ಣ ಹಚ್ಚಿ ಅಥವಾ ಲೇಬಲ್ ಹಚ್ಚಿ, ಆದ್ಯತೆಯನ್ನು ಹೊಂದಿಸಬಹುದು.

ಯಾವುದೇ ಡೆಸ್ಕ್‌ಟಾಪ್ ಇಮೇಲ್ ಕ್ಲೈಂಟ್‌ಗಳನ್ನು ಬಳಸಬೇಕಿದ್ದರೆ ಮೊದಲು ನಿಮ್ಮ ಇಮೇಲ್‌ಗೆ ಬ್ರೌಸರ್‌ನಲ್ಲಿ ಲಾಗಿನ್ ಆಗಿ ಸೆಟ್ಟಿಂಗ್‌ನಲ್ಲಿ, ಜಿಮೇಲ್‌ನಲ್ಲಾದರೆ, “ಫಾರ್ವರ್ಡಿಂಗ್ ಮತ್ತು POP/IMAP” ಎನೇಬಲ್ ಮಾಡಬೇಕಾಗುತ್ತದೆ. ಅಲ್ಲದೆ, ಇನ್ನು ಮುಂದೆ ಬರುವ ಮೇಲ್‌ಗಳನ್ನು ಮಾತ್ರ ಫಾರ್ವರ್ಡ್ ಮಾಡುವ ಮತ್ತು ಮೇಲ್‌ಗಳನ್ನು ವೆಬ್ ಇಂಟರ್ಫೇಸ್‌ನ ಇನ್‌ಬಾಕ್ಸ್‌ನಲ್ಲೇ ಇರಿಸಬೇಕೇ ಅಥವಾ ಆರ್ಕೀವ್‌ಗೆ ತಳ್ಳಬೇಕೇ, ಡಿಲೀಟ್ ಮಾಡಬೇಕೇ ಎಂದೆಲ್ಲಾ ಆಯ್ಕೆ ಮಾಡುವ ಅವಕಾಶಗಳಿರುತ್ತವೆ. ಯಾಹೂ ಮೇಲ್‌ನಲ್ಲಾದರೆ, ಸೆಟ್ಟಿಂಗ್‌ನಲ್ಲಿ POP & Forwarding ಎಂಬಲ್ಲಿAccess your Yahoo! Mail elsewhere ಎಂಬುದನ್ನು ಸೇವ್ ಮಾಡಿಬಿಡಿ.

ಕಾನ್ಫಿಗರ್ ಮಾಡುವುದು: ಔಟ್‌ಲುಕ್ ಓಪನ್ ಮಾಡಿ. ಅದರಲ್ಲಿ ಟೂಲ್ಸ್ ಎಂದಿರುವಲ್ಲಿ ಕ್ಲಿಕ್ ಮಾಡಿದಾಗ, ಅಕೌಂಟ್ ಸೆಟ್ಟಿಂಗ್ಸ್ ಕಾಣಿಸುತ್ತದೆ. ಕ್ಲಿಕ್ ಮಾಡಿದ ಬಳಿಕ, ಮೊದಲ ಟ್ಯಾಬ್ ‘ಇಮೇಲ್’ ಅಂತ ಇರುತ್ತದೆ. ಅಲ್ಲೇ ಅದರ ಕೆಳಗೆ ‘ನ್ಯೂ’ ಕ್ಲಿಕ್ ಮಾಡಿದಾಗ, ಇಮೇಲ್ ಸರ್ವರ್ ಆಯ್ಕೆ ಮಾಡುವ ಅವಕಾಶವಿರುತ್ತದೆ. ‘ನೆಕ್ಸ್ಟ್’ ಕ್ಲಿಕ್ ಮಾಡಿದಾಗ, ನಿಮ್ಮ ಹೆಸರು, ಇಮೇಲ್ ವಿಳಾಸ, ಪಾಸ್‌ವರ್ಡ್ ನಮೂದಿಸಬೇಕಾಗುತ್ತದೆ.

ಹಾಟ್‌ಮೇಲ್ ಅಥಲಾ ಲೈವ್ ಮೇಲ್ ಇಲ್ಲವೇ ಔಟ್‌ಲುಕ್ ಮೇಲ್‌ನ ನಿಮ್ಮ ಖಾತೆ ಸೇರಿಸಬೇಕಿದ್ದರೆ ಅದು ಇಮೇಲ್‌ನ ಸರ್ವರ್ ಸೆಟ್ಟಿಂಗ್‌ಗಳನ್ನು ತಾನಾಗಿಯೇ ಕಾನ್ಫಿಗರ್ ಮಾಡಿಕೊಳ್ಳುತ್ತದೆ.

ಸ್ವಯಂ ಕಾನ್ಫಿಗರ್ ಆಗಲಾರದ ಇಮೇಲ್‌ಗಳನ್ನು ನಾವಾಗಿಯೇ ಹೊಂದಿಸಬೇಕಾಗುತ್ತದೆ. ಇದಕ್ಕೆ ಆಯಾ ಇಮೇಲ್‌ನ ವೆಬ್ ತಾಣದಲ್ಲಿ (ರೆಡಿಫ್, ಯಾಹೂ, ಜಿಮೇಲ್ ಇತ್ಯಾದಿ) ಲಾಗಿನ್ ಆದಾಗ ದೊರೆಯುವ ‘help’ ಎಂಬಲ್ಲಿ ಹೋಗಿ, outlook settings ಅಂತ ಹುಡುಕಿದರೆ, ಔಟ್‌ಲುಕ್‌ಗೆ ಅಥವಾ ಬೇರಾವುದೇ ಇಮೇಲ್ ಕ್ಲೈಂಟ್‌ಗೆ ನಿಮ್ಮ ಇಮೇಲ್ ಅನ್ನು ಹೊಂದಿಸುವುದು ಎಂಬ ಬಗ್ಗೆ ಹಂತ ಹಂತವಾದ ಮಾಹಿತಿ ಇರುತ್ತದೆ.

ಇಮೇಲ್, ಚಾಟ್‌ನಲ್ಲಿ ಬರುವ ಮಾಲ್‌ವೇರ್ ಬಗ್ಗೆ ಎಚ್ಚರಿಕೆ!

ಮಾಹಿತಿ@ತಂತ್ರಜ್ಞಾನ – ವಿಜಯ ಕರ್ನಾಟಕ ಅಂಕಣ –38, ಜೂನ್ 10, 2013
ಮೊಬೈಲ್ ಫೋನ್‌ನಲ್ಲಾಗಲೀ, ಟ್ಯಾಬ್ಲೆಟ್ ಆಗಲೀ, ಕಂಪ್ಯೂಟರೇ ಆಗಿರಲಿ, ಇಂಟರ್ನೆಟ್‌ಗೆ ಸಂಪರ್ಕಿಸುತ್ತೀರಿ ಎಂದಾದರೆ ಅತ್ಯಂತ ಎಚ್ಚರಿಕೆ ವಹಿಸಬೇಕಾಗಿರುವುದು ಅಗತ್ಯ. ಯಾವುದೇ ಸಾಧನದಲ್ಲಿರುವ ಗೌಪ್ಯ, ಖಾಸಗಿ ವಿಷಯವನ್ನೆಲ್ಲಾ ಕದಿಯುವ ನಿಟ್ಟಿನಲ್ಲಿ ಕಂಪ್ಯೂಟರ್ ವೈರಸ್‌ಗಳು, ಫೀಶಿಂಗ್ ತಂತ್ರಾಂಶಗಳನ್ನು ಹ್ಯಾಕರ್‌ಗಳು ರವಾನಿಸುತ್ತಲೇ ಇರುತ್ತಾರೆ. ಈ ಬಗ್ಗೆ ಎಚ್ಚರಿಕೆ ವಹಿಸಲು ಇಲ್ಲಿದೆ ಪ್ರಮುಖ ಮಾಹಿತಿ.

ಮುಖ್ಯವಾಗಿ, ಈ ಇಂಟರ್ನೆಟ್ ಪೋಕರಿಗಳು ಇ-ಮೇಲ್‌ಗಳ ಮೂಲಕ ಹ್ಯಾಕಿಂಗ್ ತಂತ್ರಾಂಶಗಳನ್ನು ಕಳುಹಿಸುತ್ತಿರುತ್ತಾರೆ. ಕೆಲವೊಮ್ಮೆ ನಿಮ್ಮ ಸ್ನೇಹಿತರ ಇ-ಮೇಲ್ ಅಡ್ರೆಸ್ ಮೂಲಕವೂ ಇಂತಹಾ ತಂತ್ರಾಂಶಗಳು ಬರಬಹುದು. ಈ ವೈರಸ್‌ಗಳು ಯಾವೆಲ್ಲಾ ರೂಪದಲ್ಲಿರಬಹುದು ಎಂಬುದನ್ನು ತಿಳಿದರೆ ನಿಮಗೇ ಅಚ್ಚರಿಯಾಗಬಹುದು. ಡಾಕ್ ಫೈಲ್ (ಮೈಕ್ರೋಸಾಫ್ಟ್ ವರ್ಡ್ ಫೈಲ್), ಎಕ್ಸೆಲ್ ಫೈಲ್, ಅಥವಾ ಚಿತ್ರದ ಫೈಲ್ (ಜೆಪಿಜಿ/ಜೆಪಿಇಜಿ) ಮುಂತಾದ ಅಟ್ಯಾಚ್‌ಮೆಂಟ್‌ಗಳು ನಿಮಗೆ ಮೇಲ್ ಮೂಲಕ ಬರಬಹುದಾಗಿದೆ.

ಮೇಲ್‌ಗಳನ್ನು ಸರಿಯಾಗಿ ಓದಿ ನೋಡದೆ, ನೀವು ಆ ಅಟ್ಯಾಚ್‌ಮೆಂಟ್‌ಗಳನ್ನು ಕ್ಲಿಕ್ ಮಾಡಿದಿರಿ ಎಂದಾದರೆ, ತನ್ನಿಂತಾನೇ ಈ ಮಾಲ್‌ವೇರ್‌ಗಳು ನಿಮ್ಮ ಕಂಪ್ಯೂಟರ್‌ನಲ್ಲಿ ಇನ್‌ಸ್ಟಾಲ್ ಆಗಿಬಿಡುತ್ತವೆ. ಮತ್ತು ನೀವು ಮಾಡುತ್ತಿರುವ ಸಂಗತಿಗಳೆಲ್ಲವನ್ನೂ, ನಿಮ್ಮ ಕಂಪ್ಯೂಟರಿನಲ್ಲಿ ನೀವು ಸೇವ್ ಮಾಡಿಟ್ಟಿರುವ ಪಾಸ್‌ವರ್ಡ್‌ಗಳನ್ನೂ ಸಂಗ್ರಹಿಸಿ, ಅದನ್ನು ಕಳುಹಿಸಿದವರಿಗೆ ರವಾನಿಸಿಬಿಡುತ್ತದೆ. ಮುಖ್ಯವಾಗಿ ಕಂಪ್ಯೂಟರಿನಲ್ಲಿ ನೀವು ಬ್ಯಾಂಕಿಂಗ್ ವ್ಯವಹಾರ ನಡೆಸಲು ಬಳಸುವ ಯೂಸರ್ ಐಡಿ ಹಾಗೂ ಪಾಸ್‌ವರ್ಡ್‌ಗಳು, ಕ್ರೆಡಿಟ್ ಕಾರ್ಡ್ ಪೇಮೆಂಟ್‌ಗೆ ಬಳಸುವ ಪಾಸ್‌ವರ್ಡ್ ಅಥವಾ ಸಂಖ್ಯೆಗಳು… ಇವುಗಳೆಲ್ಲವೂ ಹ್ಯಾಕರ್‌ಗಳ ಪಾಲಾಗುತ್ತವೆ.

ಮತ್ತೆ ಕೆಲವರು, ‘ಹಾಯ್ ಡಿಯರ್, ನನ್ನ ಚಿತ್ರ ನೋಡಿ’ ಅಂತಲೋ ‘ಇಂತಹಾ ಸೈಟ್ ನೋಡಿ’ ಅಂತಲೋ ನಿಮ್ಮನ್ನು ಮರುಳು ಮಾಡುವ ಮೇಲ್‌ನೊಂದಿಗೆ ಬರುವ ಅಟ್ಯಾಚ್‌ಮೆಂಟ್‌ಗಳನ್ನೋ ಅಥವಾ ಲಿಂಕ್‌ಗಳನ್ನೋ ಕ್ಲಿಕ್ ಮಾಡಿದರೆ, ಕೆಟ್ಟಿರೆಂದೇ ಅರ್ಥ!

ಇದಲ್ಲದೆ, ಸ್ನೇಹಿತರ ಇಮೇಲ್ ಖಾತೆಯನ್ನು ಹ್ಯಾಕ್ ಮಾಡಿ, ಅದರಲ್ಲಿರುವ ಎಲ್ಲ ವಿಳಾಸಗಳಿಗೆ ಈ ಮಾಲ್‌ವೇರ್ ಕಳುಹಿಸಬಹುದು ಮತ್ತು ನಿಮ್ಮ ಪರವಾಗಿ ಅಸಭ್ಯ ಮೇಲ್‌ಗಳನ್ನೂ ಅವರು ಕಳುಹಿಸಬಹುದಾಗಿದೆ. ಇಲ್ಲವೇ, “ನಾನು ಈ ದೇಶಕ್ಕೆ ಬಂದು ಅಪಾಯದಲ್ಲಿ ಸಿಲುಕಿದ್ದೇನೆ. ವಾಪಸ್ ಬರಲು ಹಣವಿಲ್ಲ. ದಯವಿಟ್ಟು ಒಂದಿಷ್ಟು ಹಣವನ್ನು ಇಂತಹಾ ಖಾತೆಗೆ ಜಮಾ ಮಾಡಿಬಿಡಿ” ಅಂತೆಲ್ಲಾ ಕೋರಿಕೆಗಳಿರುವ ಮೇಲ್‌ಗಳನ್ನು ನಿಮ್ಮ ಪರವಾಗಿ ನಿಮ್ಮ ಸ್ನೇಹಿತರಿಗೆಲ್ಲರಿಗೂ ಕಳುಹಿಸಲಾಗುತ್ತದೆ. ಸ್ನೇಹಿತ ಅಪಾಯದಲ್ಲಿದ್ದಾನೆ ಅಂತ ಕನಿಕರ ತೋರಿಸಿ ಹಣ ಕಳುಹಿಸಿದವರು ವಂಚನೆಗೀಡಾಗುವ ಸಾಧ್ಯತೆಗಳೂ ಇವೆ.

ಅಲ್ಲದೆ, “ಕೋಟ್ಯಂತರ ಡಾಲರ್ ಸಂಪತ್ತಿದೆ, ಅದನ್ನು ಹಂಚಿಕೊಳ್ಳಲು ನಿಮ್ಮ ಸಹಾಯ ಬೇಕು. ನಿಮಗೂ ಪಾಲು ನೀಡಲಾಗುತ್ತದೆ” ಅಂತೆಲ್ಲಾ ಹೇಳಿ ನಿಮ್ಮ ಬ್ಯಾಂಕ್ ಖಾತೆಯ ವಿವರವನ್ನೋ, ಅಥವಾ ಇಂತಿಷ್ಟು ಹಣ ಕಳುಹಿಸುವಂತೆಯೋ ಮರುಳು ಮಾಡುವ ಇಮೇಲ್‌ಗಳ ಕುರಿತಾಗಿಯೂ ಎಚ್ಚರಿಕೆ ವಹಿಸಿ.

ಇಷ್ಟು ಮಾತ್ರವೇ ಅಲ್ಲ. ನೀವು ಫೇಸ್‌ಬುಕ್‌ನಲ್ಲಿ, ಇಮೇಲ್‌ನಲ್ಲಿ ಚಾಟ್ ಮಾಡುತ್ತಿರುವಾಗ, ನಿಮ್ಮ ಸ್ನೇಹಿತರಿಂದಲೇ ಯಾವುದಾದರೂ ಲಿಂಕ್ ಅಥವಾ ಅಟ್ಯಾಚ್‌ಮೆಂಟ್ ದಿಢೀರನೇ ಬರಬಹುದು. ನೋಡಲು ಜೆಪಿಜಿ, ಡಾಕ್ ಫೈಲ್ ಇತ್ಯಾದಿಯಂತೆ ಕಂಡುಬಂದರೂ, ಅದನ್ನು ಕ್ಲಿಕ್ ಮಾಡಿದರೆ ಒಂದು ಎಕ್ಸಿಕ್ಯುಟೆಬಲ್ (.exe) ಫೈಲ್ ಡೌನ್‌ಲೋಡ್ ಆಗಿ, ತನ್ನಿಂತಾನೇ ಇನ್‌ಸ್ಟಾಲ್ ಆಗಬಹುದು. ಇ-ಮೇಲ್‌ಗಳಲ್ಲಿಯೂ ಇಂಥದ್ದೇ ಫೈಲ್‌ಗಳು ಬರುತ್ತವೆ.

ಇವೆಲ್ಲವೂ ಮಾಲ್‌ವೇರ್‌ಗಳಾಗಿರುವ ಸಾಧ್ಯತೆಯಿರುವುದರಿಂದ, ಯಾವುದೇ ಸ್ನೇಹಿತರಿಂದ, ಅಪರಿಚಿತರಿಂದ ಬರುವ ಮೇಲ್‌ಗಳಲ್ಲಿರುವ ಅಟ್ಯಾಚ್‌ಮೆಂಟ್‌ಗಳನ್ನು, ಲಿಂಕ್‌ಗಳನ್ನು ಹಿಂದೆ ಮುಂದೆ ಯೋಚಿಸದೆ ಕ್ಲಿಕ್ ಮಾಡಬೇಡಿ. ಅಪರಿಚಿತರ ಕುರಿತು ಸ್ವಲ್ಪವೇ ಶಂಕೆ ಬಂದರೂ ನಿರ್ಲಕ್ಷಿಸಿಬಿಟ್ಟರಾಯಿತು. ಆದರೆ ಸ್ನೇಹಿತರಿಂದ ಅಂಥವು ಬಂದರೆ, ಅವರಲ್ಲೇ ಮತ್ತೊಮ್ಮೆ ದೃಢಪಡಿಸಿಕೊಳ್ಳಿ, ನಿಮ್ಮ ಡೇಟಾ ಸುರಕ್ಷಿತವಾಗಿರಿಸಿಕೊಳ್ಳಿ.

ಇ-ಮೇಲ್ ಖಾತೆ ನಿಮಗೇಕೆ ಅಗತ್ಯ?

ಜನ ಸಾಮಾನ್ಯರಿಗಾಗಿ ಮಾಹಿತಿ@ತಂತ್ರಜ್ಞಾನ 30– 01-ಏಪ್ರಿಲ್-2013

ಹಿಂದೆಲ್ಲಾ ಪತ್ರ ಬರೆದು ಅಂಚೆ ಕಚೇರಿಗೆ ಹೋಗಿ ಡಬ್ಬಕ್ಕೆ ಹಾಕಿ ಮೂರ್ನಾಲ್ಕು ದಿನ ಕಾದ ಬಳಿಕ ಸಂದೇಶ ರವಾನೆಯಾಗುತ್ತಿತ್ತು. ಈ ಕ್ಷಿಪ್ರ ಯುಗದಲ್ಲಿ ಪತ್ರ ಬರೆದು ಮುಗಿಸಿದಾಕ್ಷಣ ಸಂದೇಶವನ್ನು ತಲುಪಬೇಕಾದವರಿಗೆ ತಲುಪಿಸುವುದು ಈಗಿನ ಇ-ಮೇಲ್‌ಗಳ ಪಾತ್ರ. ನಗರ ಪ್ರದೇಶಗಳಲ್ಲಿ ಹೆಚ್ಚಿನವರು ಇ-ಮೇಲ್ ಮೂಲಕವೇ ಎಲ್ಲ ಕೆಲಸಗಳನ್ನೂ ಮಾಡಿಸಿಕೊಳ್ಳುತ್ತಾರೆ. ಬಹುತೇಕ ಕಚೇರಿಗಳಲ್ಲಿ ಪ್ರತಿಯೊಬ್ಬರಿಗೂ ಕಂಪನಿ ಮೇಲ್ ಐಡಿ ಇರುತ್ತದೆ. ಆದರೆ ಗ್ರಾಮೀಣ ಭಾಗದಲ್ಲಿರುವ ಕೆಲವರಿಗೆ ಇಮೇಲ್ ಖಾತೆ ತೆರೆಯಲು ಜ್ಞಾನದ ಕೊರತೆಯೂ, ಆತಂಕವೂ, ಹಿಂಜರಿಕೆಯೂ, ಅದೊಂದು ದೊಡ್ಡ ತಲೆನೋವಿನ ಸಂಗತಿ ಎಂಬ ಭಾವನೆಯೂ ಇದೆ ಎಂಬುದು ಇತ್ತೀಚೆಗಷ್ಟೇ ಕೆಲವರೊಂದಿಗೆ ಮಾತನಾಡುತ್ತಿದ್ದಾಗ ಗಮನಕ್ಕೆ ಬಂದ ಅಂಶ. ಅಂಥವರಿಗಾಗಿ, ಇಮೇಲ್‍ನ ಕೆಲವು ಪ್ರಯೋಜನಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ:

* ಹಳ್ಳಿಯಲ್ಲೇ ಕುಳಿತುಕೊಂಡು ದೂರದ ಅಮೆರಿಕ ಅಥವಾ ಲಂಡನ್‌ನಲ್ಲಿರುವ ತಮ್ಮ ಮಗ/ಮಗಳೊಂದಿಗೆ ನೇರವಾಗಿ ಮಾತನಾಡುವಂತಾದರೆ? ಹೀಗೆ ಇಂಟರ್ನೆಟ್ ಮೂಲಕ ಮಾತುಕತೆ (ಚಾಟಿಂಗ್), ವೀಡಿಯೋ ಸಂವಾದ ನಡೆಸಬೇಕಿದ್ದರೆ ಇ-ಮೇಲ್ ಖಾತೆ ಅವಶ್ಯ.

* ಮನೆಯಲ್ಲೇ ಕುಳಿತು ಬ್ಯಾಂಕ್ ಖಾತೆಯ ನಿಭಾವಣೆ, ಒಂದು ಖಾತೆಯಿಂದ ಇನ್ನೊಂದಕ್ಕೆ ಹಣ ವರ್ಗಾವಣೆ ಹಾಗೂ ಮೊಬೈಲ್ ರೀಚಾರ್ಜಿಂಗ್, ಡಿಟಿಎಚ್ ಟಿವಿ ಸಂಪರ್ಕಗಳಿಗೆ ರೀಚಾರ್ಜಿಂಗ್… ಇತ್ಯಾದಿಗಳಿಗೆ ಅನುಕೂಲಕರವಾದ ಇಂಟರ್ನೆಟ್ ಬ್ಯಾಂಕ್ ಸೌಲಭ್ಯ ಹೊಂದಬೇಕಿದ್ದರೆ ಇ-ಮೇಲ್ ಅತ್ಯಗತ್ಯ.

* ಕೆಲವು ನಗರಗಳಲ್ಲಿ ಕರೆಂಟ್ ಬಿಲ್, ನೀರಿನ ಬಿಲ್ ಅಥವಾ ದೂರವಾಣಿ ಬಿಲ್ ಕಟ್ಟಲು ಉದ್ದ ಕ್ಯೂನಲ್ಲಿ ನಿಲ್ಲಬೇಕಾಗುತ್ತದೆ. ಇದು ತಪ್ಪಿಸಬೇಕಿದ್ದರೆ, ಮನೆಯಲ್ಲೇ ಕುಳಿತು ಆಯಾ ಸರಕಾರಿ ಇಲಾಖೆಗಳ ವೆಬ್‌ಸೈಟ್ ಮೂಲಕ ಬಿಲ್ ಪಾವತಿ ವ್ಯವಸ್ಥೆ ಇರುತ್ತದೆ. ಇದಕ್ಕೆ ಇ-ಮೇಲ್ ಮತ್ತು ದೂರವಾಣಿ ಸಂಖ್ಯೆಯೇ ಮೂಲ ಆಧಾರ.

* ಉದ್ಯೋಗ ಹುಡುಕಾಟಕ್ಕಾಗಲೀ, ಇಂಟರ್ನೆಟ್ ಮೂಲಕ ವೈವಾಹಿಕ ಸಂಬಂಧಗಳನ್ನು ಕುದುರಿಸುವುದಕ್ಕಾಗಲೀ, ಆಯಾ ವೆಬ್ ಸೈಟ್‌ಗಳಲ್ಲಿ ನೋಂದಾಯಿಸಬೇಕಿದ್ದರೆ ಇ-ಮೇಲ್ ಐಡಿ ಕಡ್ಡಾಯವಾಗಿರುತ್ತದೆ.

* ಈಗ ಜನಪ್ರಿಯವಾಗುತ್ತಿರುವ ಸಾಮಾಜಿಕ ಅಂತರ್ಜಾಲ ತಾಣಗಳಾದ ಫೇಸ್‌ಬುಕ್, ಟ್ವಿಟರ್ ಮುಂತಾದವುಗಳಲ್ಲಿ ಖಾತೆ ತೆರೆಯಲು ಕೂಡ ಇ-ಮೇಲ್ ಬೇಕೇಬೇಕು.

* ಬಸ್ಸು, ರೈಲು ಅಥವಾ ವಿಮಾನ ಪ್ರಯಾಣಕ್ಕೆ ಮನೆಯಲ್ಲೇ ಕುಳಿತು ಸೀಟು ಕಾದಿರಿಸಬೇಕಿದ್ದರೆ ಇ-ಮೇಲ್ ಖಾತೆ ಅವಶ್ಯ.

* ಈಗಿನ ಅತ್ಯಾಧುನಿಕ ಸ್ಮಾರ್ಟ್‌ಫೋನ್/ಟ್ಯಾಬ್ಲೆಟ್ ಖರೀದಿಸಿದರೆ, ಆಯಾ ಕಂಪನಿಗಳ ತಂತ್ರಾಂಶಗಳ ಪರಿಪೂರ್ಣ ಪ್ರಯೋಜನ ಪಡೆದುಕೊಳ್ಳಲು, ಅಪ್ಲಿಕೇಶನ್‌ಗಳನ್ನು ಇನ್‌ಸ್ಟಾಲ್ ಮಾಡಿಕೊಳ್ಳಲು, ಸಾಫ್ಟ್‌ವೇರ್ ಅಪ್‌ಗ್ರೇಡ್ ಮಾಡಿಕೊಳ್ಳಲು ಇ-ಮೇಲ್ ಅತ್ಯಗತ್ಯ.

* ಗೃಹ ಸಾಲ, ವಿಮಾ ಪಾಲಿಸಿಗಳ ಕಂತು ಪಾವತಿಸಬೇಕಿದ್ದರೆ, ಆಯಾ ಕಚೇರಿಗೆ ಹೋಗಬೇಕಾಗಿಲ್ಲ. ಒಂದು ಸಲ ಇ-ಮೇಲ್ ಮೂಲಕ ನೋಂದಾಯಿಸಿಕೊಂಡರೆ ಮನೆಯಿಂದ ಕುಳಿತುಕೊಂಡೇ ಇವೆಲ್ಲವನ್ನೂ ನಿಭಾಯಿಸಬಹುದು.

* ಅಂತರ್ಜಾಲದಲ್ಲಿ ನಿಮ್ಮದೇ ಆದ ಬ್ಲಾಗ್ ತೆರೆಯಲು ಇ-ಮೇಲ್ ಐಡಿಯೇ ಮೂಲಾಧಾರ.

* ಅಂತರ್ಜಾಲ ಮೂಲಕ ಆನ್‌ಲೈನ್ ಶಾಪಿಂಗ್ ಮಾಡಬೇಕಿದ್ದರೆ ಇ-ಮೇಲ್ ಕಡ್ಡಾಯ.

* ದೂರದೂರಿನಲ್ಲಿರುವ ಗೆಳೆಯರನ್ನು, ಬಂಧುಗಳನ್ನು, ಆತ್ಮೀಯರನ್ನು ಸಂಪರ್ಕಿಸುವುದು, ಅವರೊಂದಿಗೆ ನಮ್ಮ ಮನೆಯಲ್ಲಾದ ಕಾರ್ಯಕ್ರಮದ ಚಿತ್ರಗಳನ್ನು ಹಂಚಿಕೊಳ್ಳುವುದು ಇ-ಮೇಲ್‌ನ ಅತ್ಯಂತ ಸಾಮಾನ್ಯ ಉದ್ದೇಶ.

* ಇ-ಮೇಲ್‌ನ ಪಾಸ್‌ವರ್ಡ್ ಮರೆತು ಹೋದರೆ, ಅದನ್ನು ಆಯಾ ಕಂಪನಿಯಿಂದ ಪುನಃ ತಿಳಿದುಕೊಳ್ಳಲು ಮತ್ತೊಂದು ಇ-ಮೇಲ್ ಐಡಿ ಹೊಂದಿರಬೇಕಾಗುತ್ತದೆ.

ಇವಿಷ್ಟು ಇ-ಮೇಲ್ ಹೊಂದುವುದರ ಮೂಲಭೂತ ಪ್ರಯೋಜನಗಳು.

ಇ-ಮೇಲ್ ಖಾತೆ ಹೊಂದಲು ಯಾವುದೇ ರೀತಿ ಹಣ ಖರ್ಚು ಮಾಡಬೇಕಾಗಿಲ್ಲ, ಇಂಟರ್ನೆಟ್ ಸಂಪರ್ಕ, ಹೆಸರು ಮತ್ತು ಮೊಬೈಲ್ ಫೋನ್ ಸಂಖ್ಯೆ ಇದ್ದರೆ ಸಾಕಾಗುತ್ತದೆ. ಬೇಕಿದ್ದರೆ ವಿಳಾಸ, ವಯಸ್ಸು, ಜನ್ಮದಿನ ಇತ್ಯಾದಿ ವಿವರ-ಪ್ರವರ ನಮೂದಿಸಬಹುದು. ಅಷ್ಟೇ.