ಜನ ಸಾಮಾನ್ಯರತ್ತ ತಂತ್ರಜ್ಞಾನ – Gadget-Technology Info Towards Common Man

Archive for ಆಗಷ್ಟ್, 2013

ನಿಮ್ಮದಾಗಿಸಿಕೊಳ್ಳಿ ಕಡಿಮೆ ದರದಲ್ಲಿ ಉತ್ಕೃಷ್ಟ ದರ್ಜೆಯ ಕಂಪ್ಯೂಟರ್

ವಿಜಯ ಕರ್ನಾಟಕ ಮಾಹಿತಿ@ತಂತ್ರಜ್ಞಾನ ಅಂಕಣ-49, ಆಗಸ್ಟ್ 26, 2013
ಮಕ್ಕಳ ಪಠ್ಯ ಕ್ರಮದಲ್ಲೂ ಕಂಪ್ಯೂಟರ್ ಇದೆ, ಹಿರಿಯರಿಗೂ ಅದು ಎಲ್ಲ ರೀತಿಯಲ್ಲಿಯೂ ಉಪಯುಕ್ತ. ಹೀಗಿರುವಾಗ ಮನೆಗೊಂದು ಕಂಪ್ಯೂಟರ್ ಬೇಡವೇ? ಪೈಪೋಟಿಯಿಂದಾಗಿ ಬ್ರ್ಯಾಂಡೆಡ್ ಕಂಪ್ಯೂಟರ್‌ಗಳು ಸುಲಭ ದರದಲ್ಲಿಯೇ ಲಭ್ಯವಾಗುತ್ತಿದ್ದರೂ, ಮತ್ತಷ್ಟು ಕಡಿಮೆ ಖರ್ಚಿನಲ್ಲಿ ಉತ್ತಮ ಆಧುನಿಕ ವೈಶಿಷ್ಟ್ಯಗಳಿರುವ ಉತ್ಕೃಷ್ಟ ಕಂಪ್ಯೂಟರ್ ಹೊಂದಿಸಬಹುದು ಎಂಬುದು ಬಹುತೇಕರಿಗೆ ತಿಳಿದಿರಲಾರದು.
ಹೇಗೆಂದರೆ, ಬ್ರ್ಯಾಂಡೆಡ್ ಕಂಪ್ಯೂಟರುಗಳಲ್ಲಿ ಬಳಕೆಯಾಗುವ ಬಿಡಿ ಭಾಗಗಳು ಕಂಪ್ಯೂಟರ್ ಮಳಿಗೆಗಳಲ್ಲಿ ಸ್ಫರ್ಧಾತ್ಮಕ ದರಗಳಲ್ಲಿ ಸಿಗುತ್ತವೆ. ಕಂಪನಿಗಳು ಅವುಗಳನ್ನು ಅಸೆಂಬ್ಲ್ ಮಾಡಿದ್ದಕ್ಕೆ ಮತ್ತು ತಮ್ಮ ಬ್ರ್ಯಾಂಡ್ ಮುದ್ರೆ ಹಾಕಿದ್ದಕ್ಕೆ ಹೆಚ್ಚುವರಿ ಹಣ ತೆರುವ ಬದಲು ನಾವಾಗಿಯೇ ಕಂಪ್ಯೂಟರನ್ನು ನಮಗೆ ಬೇಕಾದಂತೆ ಸಿದ್ಧಪಡಿಸಿಕೊಂಡರೆ?

ಮುಖ್ಯವಾಗಿ ಕಂಪ್ಯೂಟರುಗಳಿಗೆ ಬೇಕಾಗಿರುವುದು ಮಾನಿಟರ್, ಕೀಬೋರ್ಡ್, ಮೌಸ್, ಪ್ರೊಸೆಸರ್, ಮದರ್‌ಬೋರ್ಡ್, ರಾಮ್ (RAM), ಹಾರ್ಡ್ ಡಿಸ್ಕ್,  ಕ್ಯಾಬಿನೆಟ್ ಅಥವಾ ಚಾಸೀ ಮತ್ತು ಪವರ್ ಸಪ್ಲೈ ಯುನಿಟ್ ಹಾಗೂ ಆಪ್ಟಿಕಲ್ ಡ್ರೈವ್. ಬೇಕಿದ್ದರೆ ಗ್ರಾಫಿಕ್ಸ್ ಕಾರ್ಡ್.

ಈಗ ಒಂದೊಂದಾಗಿ ನೋಡೋಣ.
ಮಾನಿಟರ್: ಹಳೆಯ ಟಿವಿಯಂತೆ ತೋರುವ ಸಿಆರ್‌ಟಿ ಮಾನಿಟರ್‌ಗಳ ಕಾಲ ಹೋಗಿದೆ. ಎಲ್‌ಸಿಡಿ ಅಥವಾ ಎಲ್‌ಇಡಿ ಮಾನಿಟರುಗಳು (ಒಳ್ಳೆಯ ಕಂಪನಿಯವು) ಈಗ 3 ಸಾವಿರ ರೂ.ನಿಂದಲೇ ಗಾತ್ರಕ್ಕೆ ಅನುಗುಣವಾದ ಬೆಲೆಯಲ್ಲಿ ದೊರೆಯುತ್ತವೆ.

ಕೀಬೋರ್ಡ್: ಮಾರುಕಟ್ಟೆಯಲ್ಲಿ ಮುನ್ನೂರು ರೂಪಾಯಿ ಆಸುಪಾಸಿನಲ್ಲಿ ಒಳ್ಳೆಯ ಕಂಪನಿಯ, ಮಲ್ಟಿಮೀಡಿಯಾ ಕೀಬೋರ್ಡ್ ಲಭಿಸುತ್ತದೆ. ಸ್ವಲ್ಪ ಅನುಕೂಲವಿದ್ದರೆ ಹೆಚ್ಚು ಬೆಲೆಯ ಕೀಬೋರ್ಡ್‌ಗೆ ಹೋಗಬಹುದು.

ಮೌಸ್: ಮೋಸರ್‌ಬೇರ್, ಲಾಜಿಟೆಕ್ ಮುಂತಾದ ಒಳ್ಳೆಯ ಕಂಪನಿಗಳ ಮೌಸ್‌ಗಳು ಇನ್ನೂರು ರೂಪಾಯಿ ಆಸುಪಾಸಿನಲ್ಲಿ ದೊರೆಯುತ್ತವೆ.

ಪ್ರೊಸೆಸರ್: ಇಂಟೆಲ್ ಕಂಪನಿಯ ಪೆಂಟಿಯಂ ಪ್ರೊಸೆಸರ್‌ಗಳು ಜನಮನ್ನಣೆ ಗಳಿಸಿವೆ. ಸಾಮಾನ್ಯ ವೆಬ್ ಬ್ರೌಸಿಂಗ್, ಕಚೇರಿ ಕಾರ್ಯ, ಇಮೇಲ್, ವೀಡಿಯೋ-ಚಿತ್ರ ಎಡಿಟಿಂಗ್ ಇತ್ಯಾದಿಗಳಿಗೆ, ಗೇಮ್ಸ್‌ಗೆ ಸಾಕಾಗುವ ಪೆಂಟಿಯಂ ಜಿ2020 ಬೆಲೆ ಸುಮಾರು 3,500 ರೂ. ಇರಬಹುದು. ಉತ್ತಮ ಕಾರ್ಯಕ್ಷಮತೆಯುಳ್ಳ ಕೋರ್ ಐ3 ಅಥವಾ ಅದಕ್ಕಿಂತ ಮೇಲ್ಪಟ್ಟವುಗಳಿಗೆ ಕೊಂಚ ಹೆಚ್ಚು ಹಣ.

ಮದರ್‌ಬೋರ್ಡ್: ಕಂಪ್ಯೂಟರಿನ ಪ್ರಮುಖ ಅಂಗವಿದು. ನಿಮ್ಮ ಪ್ರೊಸೆಸರ್‌ಗೆ ಹೊಂದಿಕೆಯಾಗಬಲ್ಲ ಮದರ್‌ಬೋರ್ಡ್ ಆಯ್ಕೆ ಮಾಡಿಕೊಳ್ಳಿ. ಗಿಗಾಬೈಟ್ ಕಂಪನಿಯ ಮದರ್‌ಬೋರ್ಡ್ ಬೆಲೆ ಸುಮಾರು 3 ಸಾವಿರದ ಆಸುಪಾಸು ಇರುತ್ತದೆ.

ರಾಂ (RAM): ಈಗಿನ ಆಧುನಿಕ ಕೆಲಸ ಕಾರ್ಯಗಳಿಗೆ 4ಜಿಬಿ ಡಿಡಿಆರ್3 RAM ಗಳನ್ನೇ ಆಯ್ದುಕೊಳ್ಳಿ. ಟ್ರಾನ್ಸೆಂಡ್ ಅಥವಾ ಕಿಂಗ್‌ಸ್ಟನ್ ಕಂಪನಿಯವು 2 ಸಾವಿರ ರೂ. ಆಸುಪಾಸಿನಲ್ಲಿ ದೊರೆಯುತ್ತವೆ.

ಹಾರ್ಡ್ ಡಿಸ್ಕ್: ಇದು ನಿಮ್ಮ ಕಂಪ್ಯೂಟರಿನಲ್ಲಿ ಫೈಲುಗಳನ್ನು ಸೇವ್ ಮಾಡಿಟ್ಟುಕೊಳ್ಳಲು ಸಹಾಯಕವಾಗುವ ಸ್ಟೋರೇಜ್ ಭಾಗ. ಸೀಗೇಟ್ ಅಥವಾ ವೆಸ್ಟರ್ನ್ ಡಿಜಿಟಲ್ ಮುಂತಾದ ಕಂಪನಿಗಳ, ಕನಿಷ್ಠ 500 ಜಿಬಿ ಸಾಮರ್ಥ್ಯವುಳ್ಳ ಹಾರ್ಡ್ ಡಿಸ್ಕ್ ಉತ್ತಮ. ಬೆಲೆ ಸುಮಾರು 3 ಸಾವಿರ ರೂ. ಆಸುಪಾಸು.

ಚಾಸೀ ಮತ್ತು ಪವರ್ ಸಪ್ಲೈ ಯುನಿಟ್ (ಕ್ಯಾಬಿನೆಟ್): ಸೀಗೇಟ್, ಕೂಲರ್ ಮಾಸ್ಟರ್, ಕಾರ್ಸೇರ್ ಮುಂತಾದ ಕಂಪನಿಗಳ ಚಾಸೀ ಹಾಗೂ ಪಿಎಸ್‌ಯುಗಳು ಅಥವಾ ಕ್ಯಾಬಿನೆಟ್‌ಗಳು ಲಭ್ಯವಿರುತ್ತವೆ. ಇವುಗಳ ಬೆಲೆಯೂ 2 ಸಾವಿರ ರೂ. ಆಸುಪಾಸಿನಲ್ಲಿರುತ್ತವೆ.

ಆಪ್ಟಿಕಲ್ ಡ್ರೈವ್ (ಡಿವಿಡಿ ಡ್ರೈವ್): ಎಲ್‌ಜಿ ಅಥವಾ ಸ್ಯಾಮ್ಸಂಗ್ ಕಂಪನಿಗಳ ಡಿವಿಡಿ (ಆಪ್ಟಿಕಲ್) ಡ್ರೈವ್‌ಗಳು 1 ಸಾವಿರ ರೂ. ಆಸುಪಾಸಿನಲ್ಲಿ ದೊರೆಯುತ್ತವೆ.

ಗ್ರಾಫಿಕ್ಸ್ ಕಾರ್ಡ್: ವೀಡಿಯೋ ಎಡಿಟಿಂಗ್ ಕೆಲಸ ಮಾಡಬೇಕಿದ್ದರೆ ಮತ್ತು ಗೇಮಿಂಗ್ ಇಷ್ಟವಿದ್ದರೆ ಗ್ರಾಫಿಕ್ಸ್ ಕಾರ್ಡ್ ಹಾಕಿಕೊಳ್ಳಬಹುದು. ಇದು ಐಚ್ಛಿಕ. ಪವರ್‌ಕಲರ್, ಗಿಗಾಬೈಟ್ ಮುಂತಾದ ಕಂಪನಿಗಳ ಉತ್ಪನ್ನವನ್ನು ಕೊಳ್ಳಬಹುದು.

ನಿಮ್ಮ ಪರಿಚಯದ ಕಂಪ್ಯೂಟರ್ ಸ್ಟೋರ್‌ಗಳಲ್ಲಿ ಹೋದರೆ, ನಿಮ್ಮ ಆವಶ್ಯಕತೆ ಹೇಳಿದರೆ, ಅಸೆಂಬಲ್ಡ್ ಕಂಪ್ಯೂಟರ್‌ಗೆ ಎಷ್ಟಾಗುತ್ತದೆ ಎಂದು ಅವರೇ ಲೆಕ್ಕಾಚಾರ ಹಾಕಿ ಕೊಡುತ್ತಾರೆ. ಬ್ರ್ಯಾಂಡೆಡ್ ಕಂಪ್ಯೂಟರ್‌ಗಳಿಗಿಂತ ಅಗ್ಗದ ದರದಲ್ಲಿ (ಸುಮಾರು 20 ಸಾವಿರ ರೂ. ಆಸುಪಾಸಿನಲ್ಲಿ) ಉತ್ತಮ ಕಾನ್ಫಿಗರೇಶನ್ ಇರುವ ಪಿಸಿ ನಿಮ್ಮದಾಗುತ್ತದೆ. ಕಾರ್ಯಕ್ಷಮತೆ ಬಗ್ಗೆ ಸಂದೇಹ ಬೇಡ, ಯಾಕೆಂದರೆ ಒಳಗಿರುವ ಬಿಡಿಭಾಗಗಳೆಲ್ಲವೂ ಬ್ರ್ಯಾಂಡೆಡ್ ಕಂಪನಿಗಳದ್ದೇ ಅಲ್ಲವೇ?

ಸ್ಮಾರ್ಟ್‌ಫೋನ್, ಟ್ಯಾಬ್ಲೆಟ್, ಲ್ಯಾಪ್‌ಟಾಪ್: ಯಾವುದು ಸೂಕ್ತ?

ಮಾಹಿತಿ@ತಂತ್ರಜ್ಞಾನ, ವಿಜಯ ಕರ್ನಾಟಕ ಅಂಕಣ-48, ಆಗಸ್ಟ್ 19, 2013
ಇತ್ತೀಚೆಗೆ ಟೈಮ್ಸ್ ಆಫ್ ಇಂಡಿಯಾದಲ್ಲಿ ಒಂದು ವರದಿ ಬಂದಿತ್ತು. ರಾಜ್ಯದ 300 ಶಾಸಕರಿಗೆ (ವಿಧಾನ ಪರಿಷತ್ ಸಹಿತ) ತಲಾ 46,900 ರೂ. ಬೆಲೆಯ ಐಪ್ಯಾಡ್ 2ಎಸ್ ಎಂಬ ಟ್ಯಾಬ್ಲೆಟನ್ನು 1.4 ಕೋಟಿ ರೂ. ವೆಚ್ಚದಲ್ಲಿ ಒದಗಿಸಲಾಗಿದ್ದು, ಶೇ.10ರಷ್ಟು ಮಂದಿಗೆ ಮಾತ್ರ ಇದನ್ನು ಬಳಕೆಯ ಜ್ಞಾನ ಇದೆ ಅಂತ. ಆಳುವವರನ್ನು ಇ-ಸಾಕ್ಷರರನ್ನಾಗಿಸಿ, ಕೆಲಸ ಕಾರ್ಯ ಶೀಘ್ರವಾಗಲಿ, ತಂತ್ರಜ್ಞಾನವನ್ನು ರಾಜ್ಯದ ಅಭಿವೃದ್ಧಿಗೆ, ಪ್ರಜೆಗಳ ಉನ್ನತಿಗೆ ಬಳಸಬೇಕೆಂಬ ಹಿರಿದಾಸೆ ಅಲ್ಲಿತ್ತು.

ಹಾಗಿದ್ದರೆ, ಈ ಟ್ಯಾಬ್ಲೆಟ್‌ಗಳೆಂದೇ ಕರೆಯಲಾಗುವ, ಅತ್ತ ಸ್ಮಾರ್ಟ್‌ಫೋನೂ ಅಲ್ಲದ, ಇತ್ತ ಲ್ಯಾಪ್‌ಟಾಪೂ ಅಲ್ಲದ ಮತ್ತು ಈಗ ಸುಲಭವಾಗಿ ಕೈಗೆ ಸಿಗಬಹುದಾದಂತಹಾ ಬೆಲೆಯಲ್ಲಿ ದೊರೆಯುವ ಮಿನಿ ಕಂಪ್ಯೂಟರುಗಳು ನಮಗೆ ನಿಮಗೆ ಯಾಕೆ ಬೇಕು ಮತ್ತು ನಮ್ಮನ್ನು ಆಳುವವರಿಗೆ ಯಾವ ರೀತಿಯಲ್ಲಿ ಪ್ರಯೋಜನಕಾರಿಯಾಗಬಹುದು ಎಂಬ ಕುರಿತು ಮೇಲುನೋಟ ಇಲ್ಲಿದೆ.

ಟ್ಯಾಬ್ಲೆಟನ್ನು ಫೋನ್‌ಗೆ ಪರ್ಯಾಯವಾಗಿ ಬಳಸಲು ಸಾಧ್ಯವಿದ್ದರೂ, ಬಳಕೆಗೆ ತ್ರಾಸ ಜಾಸ್ತಿ. ಸಿಮ್ ಕಾರ್ಡ್ ಮೂಲಕ ಇಂಟರ್ನೆಟ್ ಪ್ಯಾಕ್ ಹಾಕಿಸಿಕೊಂಡರೆ ಟ್ಯಾಬ್ಲೆಟ್ ಅತ್ಯಂತ ಪರಿಣಾಮಕಾರಿಯಾಗಿರುತ್ತದೆ (ವೈ-ಫೈ ಸೌಲಭ್ಯ ಹೆಚ್ಚು ಅನುಕೂಲಕರ, ಹೋದಲ್ಲೆಲ್ಲಾ ಈ ಸೌಲಭ್ಯ ದೊರೆಯದಿರಬಹುದು). ಆದರೆ ಕರೆ ಮಾಡಲು ಮೊಬೈಲ್ ಫೋನೇ ಸೂಕ್ತ. ಪ್ರಮುಖ ಕಾರಣವೆಂದರೆ ಟ್ಯಾಬ್ಲೆಟ್‌ನ ಗಾತ್ರ – 7, 8 ಅಥವಾ 10 ಇಂಚಿನ ಟ್ಯಾಬ್ಲೆಟನ್ನು ಕಿವಿಗೆ ಹಿಡಿಯುವುದು ಕಷ್ಟ, ಇಯರ್‌ಫೋನ್/ಬ್ಲೂಟೂತ್ ಹೆಡ್‌ಸೆಟ್ ಇಟ್ಟುಕೊಂಡು ಮಾತನಾಡಬೇಕಷ್ಟೆ.

ಪುಟ್ಟ ಕಂಪ್ಯೂಟರ್ ರೂಪದಲ್ಲಿ ಮತ್ತು ಹಿತ-ಮಿತವಾಗಿ ಮಾತ್ರ ಬಳಸಬಹುದು ಎಂಬುದಷ್ಟೇ ಉದ್ದೇಶವಾದರೆ, ಟ್ಯಾಬ್ಲೆಟ್ ಖರೀದಿಗೆ ಮುಂದಾಗಬಹುದು. ಹೆಚ್ಚೇನಾದರೂ ಬರೆಯಬೇಕಾಗಿದ್ದರೆ ಮತ್ತು ಲ್ಯಾಪ್‌ಟಾಪ್ ಒಯ್ಯುವುದು ಕಷ್ಟವೆಂದಾದರೆ ಮಾತ್ರ ಟ್ಯಾಬ್ಲೆಟ್ ಆಯ್ಕೆಗೆ ಮುಂದಾಗಬಹುದು. ಕೇವಲ ಕರೆ, ಇಮೇಲ್, ಇಂಟರ್ನೆಟ್ ಸರ್ಫಿಂಗ್‌ಗೆ ಮಾತ್ರವೇ ಆದರೆ ಸ್ಮಾರ್ಟ್‌ಫೋನ್ ಸಾಕು.

ಹಾಗಿದ್ದರೆ, ಟ್ಯಾಬ್ಲೆಟ್ ಕಂಪ್ಯೂಟರ್ ತೆಗೆದುಕೊಂಡ ಬಳಿಕ ಮುಖ್ಯವಾಗಿ ಅದನ್ನು ಬಳಸುವುದು ಹೇಗೆ ಬಗ್ಗೆ ಒಂದಿಷ್ಟು ಸಲಹೆಗಳಿವೆ. ಈ ಎಲ್ಲ ಕಾರ್ಯಗಳನ್ನೂ ಟ್ಯಾಬ್ಲೆಟ್, ಸ್ಮಾರ್ಟ್‌ಫೋನ್ ಮತ್ತು ಲ್ಯಾಪ್‌ಟಾಪ್‌ಗಳಲ್ಲಿಯೂ ಮಾಡಬಹುದು. ಆದರೆ ಅನುಕೂಲ ನೋಡಿಕೊಂಡು ನಿಮಗೆ ಯಾವುದು ಸೂಕ್ತ ಎಂಬುದನ್ನು ನಿರ್ಧರಿಸಿ.

* ಇಮೇಲ್ ಚೆಕ್ ಮಾಡಲು, ಹೆಚ್ಚು ಇಮೇಲ್ ಸಂವಹನ ಮಾಡುವ ಹಾಗಿದ್ದರೆ (ಸ್ಮಾರ್ಟ್‌ಫೋನ್‌ಗಿಂತ ಆನ್ ಸ್ಕ್ರೀನ್ ಕೀಬೋರ್ಡ್ ದೊಡ್ಡದಾಗಿರುವುದರಿಂದ ಟೈಪ್ ಮಾಡುವುದು ಸುಲಭ) ಟ್ಯಾಬ್ಲೆಟ್ ಬಳಸಬಹುದು.
* ಫೇಸ್‌ಬುಕ್, ಟ್ವಿಟರ್ ಮುಂತಾದ ಸಾಮಾಜಿಕ ಜಾಲ ತಾಣಗಳನ್ನು ಸುಲಭವಾಗಿ ಜಾಲಾಡಬಹುದು.
* ಸುದ್ದಿ ನೀಡುವ ವೆಬ್‌ಸೈಟುಗಳನ್ನು ನೋಡುತ್ತಾ ಮಾಹಿತಿ ಪಡೆಯಬಹುದು, ಅಲ್ಲಿ ಕಾಮೆಂಟ್ ದಾಖಲಿಸಬಹುದು.
* ಬೇಕಾದ ಮಾಹಿತಿಯನ್ನು ತಕ್ಷಣವೇ ತಿಳಿದುಕೊಳ್ಳಬಹುದು (ಸರ್ಚ್ ಎಂಜಿನ್ ವೆಬ್ ಸೈಟ್‌ಗಳ ಮೂಲಕ).
* ಶಾಸಕರಿಗಾದರೆ ತಮ್ಮ ಕ್ಷೇತ್ರದ ಜನರೊಂದಿಗೆ ಆನ್‌ಲೈನ್ ಸಂವಹನ ನಡೆಸಬಹುದು.
* ಆಯಾ ದಿನದ ಪತ್ರಿಕೆಯನ್ನು ನೋಡಿ, ವಿಧಾನ ಮಂಡಲದಲ್ಲಿ ನಿರ್ದಿಷ್ಟ ಸಮಸ್ಯೆಯ ಬಗ್ಗೆ ಸರಕಾರದ ಗಮನ ಸೆಳೆಯಬಹುದು.
* ಕ್ಷಣ ಕ್ಷಣದ ಸುದ್ದಿಗಳನ್ನು ನ್ಯೂಸ್ ಆರ್‌ಎಸ್‌ಎಸ್ ಫೀಡ್‌ಗಳ ಮೂಲಕವಾಗಿಯೋ, ನ್ಯೂಸ್ ಅಗ್ರಿಗೇಟರ್‌ಗಳ ಮೂಲಕವಾಗಿಯೋ ಕ್ಷಿಪ್ರವಾಗಿ ತಿಳಿದುಕೊಳ್ಳಬಹುದು.
* ಹಿಂದಿನ ದಾಖಲೆಯ ಪುಟಗಳನ್ನು ತೋರಿಸಿ, ಸರಕಾರ ಮಾಡಿದ ವಾಗ್ದಾನಗಳನ್ನು ನೆನಪಿಸಬಹುದು.
* ವಿಕ ಗ್ರಾಮ ವಾಸ್ತವ್ಯವೇ ಮೊದಲಾದ ಜನಪರ ವರದಿಗಳಲ್ಲಿ ಉಲ್ಲೇಖವಾಗಿರುವ ಪ್ರದೇಶದ ಕುಂದು ಕೊರತೆ ನಿವಾರಿಸುವ ನಿಟ್ಟಿನಲ್ಲಿ ಸರಕಾರದ ಗಮನ ಸೆಳೆಯಬಹುದು.
* ತಾವು ಸದನದಲ್ಲಿ ಕೇಳಲಾಗುವ ಲಿಖಿತ ಪ್ರಶ್ನೆಗಳಿಗೆ ಸರಕಾರ/ಸಚಿವರಿಂದ ದೊರೆಯುವ ಉತ್ತರವನ್ನು ಓದಿಕೊಳ್ಳಬಹುದು, ಆಕ್ಷೇಪ ಎತ್ತಬಹುದು, ಮುಂದಿನ ಕ್ರಮಕ್ಕಾಗಿ ಮನವಿ ಮಾಡಬಹುದು.
* ಬಜೆಟ್ ಭಾಷಣವನ್ನು, ತಮ್ಮ ಮತ್ತು ಅನ್ಯ ಪಕ್ಷಗಳ ಚುನಾವಣಾ ಪ್ರಣಾಳಿಕೆಯನ್ನು ಓದಲು (ಈಗಾಗಲೇ ಪಿಡಿಎಫ್ ಪ್ರತಿಗಳು ಕನ್ನಡದಲ್ಲಿಯೇ ದೊರೆಯುತ್ತವೆ) ಹಾಗೂ ಕಾಲ ಕಾಲಕ್ಕೆ ತಾವೂ ನೆನಪಿಸಿಕೊಳ್ಳಲು ಮತ್ತು ಪಕ್ಷಕ್ಕೂ ನೆನಪಿಸಬಹುದು.
* ಅದರಲ್ಲಿರುವ ಕ್ಯಾಲೆಂಡರ್ ಎಂಬ ಪ್ರೋಗ್ರಾಂ ಬಳಸಿಕೊಂಡು, ದಿನದ ನಿಗದಿತ ಕಾರ್ಯಕ್ರಮಗಳನ್ನು ಪಟ್ಟಿ ಮಾಡಿಟ್ಟುಕೊಳ್ಳಬಹುದು ಮತ್ತು ಸಕಾಲಕ್ಕೆ ಅಲಾರಂ ಸೂಚನೆ ಪಡೆಯಬಹುದು. ನಿಮ್ಮ ಕೆಲಸವನ್ನು ನಿಮಗೆ ನೆನಪಿಸುವ ಆಪ್ತ ಸಹಾಯಕನ ಕಾರ್ಯವನ್ನು ಈ ಕ್ಯಾಲೆಂಡರ್ ಎಂಬ ಪ್ರೋಗ್ರಾಂ ಮಾಡಬಲ್ಲುದು.
* ಮಾಡಬೇಕಾಗಿರುವ ಕೆಲಸಗಳು ಅಥವಾ ಜನರಿಂದ ಬಂದ ಕುಂದುಕೊರತೆಗಳ ಟಿಪ್ಪಣಿ (ನೋಟ್ಸ್ ಆ್ಯಪ್ ಮೂಲಕ) ಮಾಡಿಕೊಳ್ಳಬಹುದು.
* ಹವಾಮಾನ ಮುನ್ಸೂಚನೆ (Weather App ಮೂಲಕ) ಪಡೆದುಕೊಳ್ಳಬಹುದು.
* ಲೈವ್ ಟಿವಿಯಲ್ಲಿ ಸದನದ ಕಲಾಪಗಳ ನೇರ ಪ್ರಸಾರ ವೀಕ್ಷಿಸಲು ಮತ್ತು ಯಾವುದಾದರೂ ಅತ್ಯಂತ ತುರ್ತು ವಿಷಯಗಳನ್ನು ಇಮೇಲ್ ಮೂಲಕ ಸಂಬಂಧಿತರಿಗೆ ರವಾನಿಸಬಹುದು.
* ಇಂಟರ್ನೆಟ್, ತಂತ್ರಜ್ಞಾನ ಬಗ್ಗೆ ಹೆಚ್ಚು ಮಾಹಿತಿಯಿದ್ದರೆ, ವೈವಿಧ್ಯಮಯ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡಿಕೊಂಡು, ತಂತ್ರಜ್ಞಾನದ ಸಂಪೂರ್ಣ ಪ್ರಯೋಜನಗಳನ್ನು ಪಡೆಯಬಹುದು. ಉದಾಹರಣೆಗೆ, ಆಪಲ್‌ನಲ್ಲಿ ಸಿರಿ ಎಂಬ ತಂತ್ರಜ್ಞಾನವೊಂದು, ಆಪ್ತಸಹಾಯಕನಂತೆ ಕೆಲಸ ಮಾಡುತ್ತದೆ. ನೀವು ಹೇಳಿದ್ದನ್ನು ಅದು ಅರ್ಥ ಮಾಡಿಕೊಂಡು ವೆಬ್‌ನಲ್ಲಿ ಹುಡುಕಿ, ಮಾಹಿತಿಯನ್ನು ನಿಮ್ಮ ಮುಂದಿಡುತ್ತದೆ. ಗೂಗಲ್ ಸರ್ಚ್ ಎಂಜಿನ್‌ನಲ್ಲಿಯೂ ಧ್ವನಿ ಆಧಾರಿತ ಸರ್ಚ್ ಆಯ್ಕೆ ಲಭ್ಯವಿದೆ. ಅಂದರೆ, ನೀವು ಹೇಳಿದ್ದನ್ನು ಇಂಟರ್ನೆಟ್ ಎಂಬ ಮಾಹಿತಿ ಸಾಗರದಿಂದ ತಂದು ನಿಮ್ಮ ಮುಂದಿಡುವ ತಂತ್ರಜ್ಞಾನವಿದು.

ಇಷ್ಟವಿರಲಿ, ಇಲ್ಲದಿರಲಿ; ಟ್ಯಾಬ್ಲೆಟ್‌ಗಳಿಗೆ ಭವಿಷ್ಯವಿದೆ. ಸ್ಮಾರ್ಟ್‌ಫೋನ್‌ಗಿಂತ ಕೊಂಚ ದೊಡ್ಡ ಗಾತ್ರದಲ್ಲಿರುವ ಇವು ಕಂಪ್ಯೂಟರ್‌ಗಳ ಸ್ಥಾನವನ್ನು ಆಕ್ರಮಿಸಿಕೊಳ್ಳುವ ಎಲ್ಲ ಸಾಧ್ಯತೆಗಳಿವೆ. ಗ್ರಾಫಿಕ್ಸ್, ಸ್ಕ್ಯಾನಿಂಗ್, ಫೋಟೋ ಎಡಿಟಿಂಗ್, ವೀಡಿಯೋ ಎಡಿಟಿಂಗ್ ಮತ್ತಿತರ ಹೆಚ್ಚು ಶ್ರಮದ ಕಾರ್ಯ ಇಲ್ಲವೆಂದಾದರೆ ಟ್ಯಾಬ್ಲೆಟ್ ಸೂಕ್ತ.

ವಿಂಡೋಸ್‌ನಲ್ಲಿ ಕನ್ನಡ ಟೈಪ್ ಮಾಡಲು ಟೂಲ್

ಮಾಹಿತಿ@ತಂತ್ರಜ್ಞಾನ, ವಿಜಯ ಕರ್ನಾಟಕ ಅಂಕಣ, ಆಗಸ್ಟ್ 12, 2013

ವಿಂಡೋಸ್ ಎಕ್ಸ್‌ಪಿ ಕಂಪ್ಯೂಟರ್ ಸಿಸ್ಟಂಗಳಲ್ಲಿ ಯುನಿಕೋಡ್ ಕನ್ನಡ ಅಕ್ಷರಗಳು ಕಾಣಿಸಬೇಕಿದ್ದರೆ ಏನು ಮಾಡಬೇಕೆಂದು ಕಳೆದ ವಾರ ಓದಿದ್ದೀರಿ. Inscript ಎಂಬ ಕೀಬೋರ್ಡ್ ವಿನ್ಯಾಸದ ಅರಿವು ಇರುವವರಿಗೆ ಟೈಪ್ ಮಾಡಲೂ ಅದು ಅನುಕೂಲ ಮಾಡುತ್ತದೆ. ಆದರೆ, Inscript ತಿಳಿಯದವರಿಗೆ ಮತ್ತು ಕೆಜಿಪಿ/ನುಡಿ ಕೀಬೋರ್ಡ್ ಟೈಪಿಂಗ್ ಶೈಲಿ ಗೊತ್ತಿರುವವರಿಗೆ ಕನ್ನಡದಲ್ಲಿ ಟೈಪ್ ಮಾಡುವುದು ಕಷ್ಟವಾಗುತ್ತದೆಯಲ್ಲವೇ? ಅದರ ನಿವಾರಣೆಗಾಗಿ ಮೈಕ್ರೋಸಾಫ್ಟ್ ಕಂಪನಿಯೇ ಒಂದು ಇನ್‌ಪುಟ್ ಮೆಥಡ್ ಎಡಿಟರ್ (IME) ಅನ್ನು ತನ್ನ ಗ್ರಾಹಕರಿಗೆ ಉಚಿತವಾಗಿ ಒದಗಿಸುತ್ತಿರುವುದು ಹೆಚ್ಚಿನವರಿಗೆ ತಿಳಿದಿಲ್ಲ. ಎಲ್ಲ ಭಾಷೆಗಳಿಗೂ ಲಭ್ಯವಿರುವ ಈ ಉಚಿತ ಟೂಲ್‌ಗಳಲ್ಲಿ ಕನ್ನಡದ IME ಡೌನ್‌ಲೋಡ್ ಮಾಡಿಕೊಂಡು (http://www.bhashaindia.com/Downloads/pages/home.aspx) ಇನ್‌ಸ್ಟಾಲ್ ಮಾಡಿಕೊಂಡರೆ ನಿಮ್ಮ ಕೆಲಸ ಸುಲಭ.

ಡೌನ್‌ಲೋಡ್ ಮಾಡಿದ ಕನ್ನಡ ಸೆಟಪ್ ಎಂಬ EXE ಫೈಲನ್ನು ರನ್ ಮಾಡಿದ ಬಳಿಕ ನಿಮ್ಮ ಕಂಪ್ಯೂಟರನ್ನು ರೀಸ್ಟಾರ್ಟ್ ಮಾಡಿ. ನಂತರ, ಕಂಟ್ರೋಲ್ ಪ್ಯಾನೆಲ್‌ಗೆ ಹೋಗಿ, Regional And Language Options ಎಂಬಲ್ಲಿ ಹೋಗಿ, Languages ಟ್ಯಾಬ್‌ನಲ್ಲಿ Details ಕ್ಲಿಕ್ ಮಾಡಿದಾಗ ಕಾಣಿಸಿಕೊಳ್ಳುವ ಪಾಪ್-ಅಪ್ ವಿಂಡೋದಲ್ಲಿ ಮಧ್ಯೆ ಒಂದು ಕಡೆ Add ಎಂಬ ಬಟನ್ ಇರುತ್ತದೆ. ಅಲ್ಲಿ Input Language ಎಂಬಲ್ಲಿ ಕನ್ನಡ ಆಯ್ದುಕೊಳ್ಳಿ, Keyboard layout/IME ಎಂದಿರುವಲ್ಲಿ Kannada Indic IME 1 ಎಂಬುದನ್ನು ಆಯ್ಕೆ ಮಾಡಿ. ಅದನ್ನು ಅಪ್ಲೈ ಮಾಡಿದ ಬಳಿಕ ಕನ್ನಡ ಟೈಪಿಂಗ್ ಸಾಧ್ಯವಾಗುತ್ತದೆ.

ಅದು ಹೇಗೆಂದರೆ, ಬರವಣಿಗೆ ತಂತ್ರಾಂಶಗಳಾದ ನೋಟ್‌ಪ್ಯಾಡ್, ವರ್ಡ್, ಎಕ್ಸೆಲ್ ಯಾವುದನ್ನಾದರೂ ಓಪನ್ ಮಾಡಿದಾಗ ನಿಮ್ಮ ಇನ್‌ಪುಟ್ ಮೆಥಡ್ ಎಡಿಟರ್ ಸಕ್ರಿಯವಾಗುತ್ತದೆ. Alt+Shift ಒತ್ತಿದರೆ, ಕೆಳ-ಬಲ ಮೂಲೆಯಲ್ಲಿನ ಸಿಸ್ಟಂ ಟ್ರೇಯಲ್ಲಿ ಐಕಾನ್‌ನ ಸಾಲು ಕಾಣಿಸುತ್ತದೆ (ಚಿತ್ರ ನೋಡಿ). ಅದರಲ್ಲಿ ಕೀಬೋರ್ಡ್ ಚಿತ್ರದ ಮೇಲೆ ಕ್ಲಿಕ್ ಮಾಡಿದಾಗ, ನಿಮಗೆ ತಿಳಿದಿರುವ ಕೀಬೋರ್ಡ್ ವಿನ್ಯಾಸಗಳ ಪಟ್ಟಿ ಕಾಣಿಸುತ್ತದೆ. ಕನ್ನಡ ಟ್ರಾನ್ಸ್‌ಲಿಟರೇಶನ್ (ಲಿಪ್ಯಂತರ), ಕೆಜಿಪಿ, ಇನ್‌ಸ್ಕ್ರಿಪ್ಟ್ ಮತ್ತು ಟೈಪ್‌ರೈಟರ್ ಶೈಲಿಗಳಲ್ಲಿ ಒಂದನ್ನು ಒಮ್ಮೆ ಕ್ಲಿಕ್ ಮಾಡಿದರೆ ಸಾಕು. ನಿಮ್ಮ ಕಂಪ್ಯೂಟರ್ ಅದನ್ನು ನೆನಪಿಟ್ಟುಕೊಳ್ಳುತ್ತದೆಯಾದುದರಿಂದ, ನೀವು ಪದೇ ಪದೇ ಈ ವಿಧಿಯನ್ನು ಮಾಡಬೇಕಾಗಿರುವುದಿಲ್ಲ. ಎರಡನೇ ಬಾರಿ Alt+Shift ಕೀಲಿ ಒತ್ತಿದರೆ ಮರಳಿ ಇಂಗ್ಲಿಷ್ ಟೈಪ್ ಮಾಡಬಹುದು.

ವಿಂಡೋಸ್ ಎಕ್ಸ್‌ಪಿಗೆ ಅಲ್ಲದೆ, ಮುಂದಿನ ಆವೃತ್ತಿಗಳಾದ ವಿಂಡೋಸ್ ವಿಸ್ತಾ ಹಾಗೂ ವಿಂಡೋಸ್ 7 ಆವೃತ್ತಿಗಳಿಗೂ ಪ್ರತ್ಯೇಕ IME ಮೇಲೆ ತಿಳಿಸಿದ ಯುಆರ್‌ಎಲ್‌ನಲ್ಲಿಯೇ ದೊರೆಯುತ್ತದೆ.

ಇನ್ನೇಕೆ ತಡ? ಟೈಪಿಂಗ್ ಮಾಡಲು ಆರಂಭಿಸಿ. ಫೇಸ್‌ಬುಕ್ – ಟ್ವಿಟರ್‌ಗಳಲ್ಲಿಯೋ, ಇಮೇಲ್‌ಗಳಲ್ಲಿಯೋ, ಓದುವವರಿಗೆ ಬಹಳ ತ್ರಾಸ ನೀಡುವ ಕಂಗ್ಲಿಷ್ (ಇಂಗ್ಲಿಷ್ ಲಿಪಿಯಲ್ಲಿ ಕನ್ನಡ) ಬರೆಯುವುದನ್ನು ತಕ್ಷಣದಿಂದ ನಿಲ್ಲಿಸಿಬಿಡಿ!

ವಿಂಡೋಸ್ ಎಕ್ಸ್‌ಪಿ ಸಿಸ್ಟಂನಲ್ಲಿ ಕನ್ನಡ ಅಕ್ಷರ ಬಾಕ್ಸ್‌ನಂತೆ ಕಾಣಿಸುತ್ತಿದೆಯೇ?

ವಿಜಯ ಕರ್ನಾಟಕ ಅಂಕಣ: ಮಾಹಿತಿ @ ತಂತ್ರಜ್ಞಾನ 46, ಆಗಸ್ಟ್ 5, 2013

ವಿಂಡೋಸ್ ಎಕ್ಸ್‌ಪಿ ಕಂಪ್ಯೂಟರುಗಳಿಗೆ ಅದರ ತಯಾರಕ ಸಂಸ್ಥೆ ಮೈಕ್ರೋಸಾಫ್ಟ್ ತನ್ನ ಬೆಂಬಲ (ಸಪೋರ್ಟ್) ನಿಲ್ಲಿಸುತ್ತಿದ್ದರೂ, ಗ್ರಾಮಾಂತರ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವುದು ವಿಂಡೋಸ್ ಎಕ್ಸ್‌ಪಿ ಕಂಪ್ಯೂಟರುಗಳೇ. ಅದರ ನಂತರ ಬಂದಿರುವ ವಿಂಡೋಸ್ ವಿಸ್ತಾ, ವಿಂಡೋಸ್ 7 ಮತ್ತು ವಿಂಡೋಸ್ 8 ಕಾರ್ಯಾಚರಣಾ ವ್ಯವಸ್ಥೆಯುಳ್ಳ ಕಂಪ್ಯೂಟರುಗಳಲ್ಲಿ ಸುಲಭವಾಗಿ ಯುನಿಕೋಡ್ ಕನ್ನಡವು ಚೆನ್ನಾಗಿ ಕಾಣಿಸುತ್ತದೆ ಮತ್ತು ಟೈಪ್ ಮಾಡುವುದು ಸುಲಭ ಎಂದು ಹಿಂದಿನ ಅಂಕಣದಲ್ಲಿ (http://nudi.in/5x0qwe) ಹೇಳಿದ್ದೆ.

“ವಿಂಡೋಸ್ ಎಕ್ಸ್‌ಪಿಯಲ್ಲಿ ಬರವಣಿಗೆಗೆ ಬಳಸಲಾಗುವ ಮೈಕ್ರೋಸಾಫ್ಟ್ ವರ್ಡ್, ಎಕ್ಸೆಲ್ ಮುಂತಾದವುಗಳಲ್ಲಿ ಹಾಗೂ ಮುಖ್ಯವಾಗಿ ನೋಟ್‌ಪ್ಯಾಡ್‌ನಲ್ಲಿ ಕನ್ನಡ ಯುನಿಕೋಡ್ ಅಕ್ಷರಗಳು ಕಾಣಿಸುವುದಿಲ್ಲ, vijaykarnataka.com ನೋಡಿದರೆ, ಅಕ್ಷರಗಳು ಬಾಕ್ಸ್‌ಗಳ ರೂಪದಲ್ಲಿ ಕಾಣಿಸುತ್ತವೆ’ ಅಂತ ಹಲವು ಮಂದಿ ಹೇಳಿಕೊಂಡಿದ್ದಾರೆ. ಅವರಿಗಾಗಿ ಈ ಮಾಹಿತಿ.

ಈ ರೀತಿ ಬಾಕ್ಸ್‌ಗಳು ಕಾಣಿಸದಂತಿರಲು ನಿಮ್ಮ ಪಿಸಿಯಲ್ಲಿ ಭಾರತೀಯ ಭಾಷೆಗಳನ್ನು ಎನೇಬಲ್ ಮಾಡಬೇಕಾಗುತ್ತದೆ. ಅದನ್ನು ಮಾಡಬೇಕಿದ್ದರೆ, ನೀವು ಕಂಪ್ಯೂಟರ್ ಖರೀದಿಸಿದಾಗ ಜತೆಗೆ ನೀಡಲಾಗಿರುವ ವಿಂಡೋಸ್ ಎಕ್ಸ್‌ಪಿ ಆಪರೇಟಿಂಗ್ ಸಿಸ್ಟಂ ಇರುವ ಸಿಡಿ ಬೇಕಾಗುತ್ತದೆ.

ಸಿಡಿಯನ್ನು ಸಿದ್ಧಪಡಿಸಿಟ್ಟುಕೊಂಡು, Control Panel ನಲ್ಲಿ Regional and Language Options ಎಂಬ ಐಕಾನ್ ಕ್ಲಿಕ್ ಮಾಡಿ. ಕಾಣಿಸುವ 3 ಟ್ಯಾಬ್‌ಗಳಲ್ಲಿ Languages ಟ್ಯಾಬ್ ಕ್ಲಿಕ್ ಮಾಡಿ. ಅಲ್ಲಿ Install files for complex script and right-to-left languages (including Thai) ಎಂಬ ಚೆಕ್‌ಬಾಕ್ಸ್ ಕ್ಲಿಕ್ ಮಾಡಿ. (ಇಲ್ಲಿ ಭಾರತೀಯ (Indic) ಭಾಷೆಗಳನ್ನು  “right-to-left languages (including Thai)” ಎಂಬ ವಿಭಾಗದಲ್ಲಿ ಯಾಕೆ ಸೇರಿಸಿದ್ದಾರೆಂಬುದು ಇನ್ನೂ ಗೊತ್ತಾಗಿಲ್ಲ!)

ಚೆಕ್ ಬಾಕ್ಸ್ ಕ್ಲಿಕ್ ಮಾಡಿದ ತಕ್ಷಣ, ಸಂಬಂಧಪಟ್ಟ dll ಫೈಲ್‌ಗಾಗಿ ನಿಮ್ಮ ಕಂಪ್ಯೂಟರ್ ಹುಡುಕಾಟ ನಡೆಸುತ್ತದೆ. ಆಗ ಡ್ರೈವ್‌ನಲ್ಲಿ ಸಿಡಿ ತೂರಿಸಿದರೆ, ಸಂಬಂಧಪಟ್ಟ ಕೆಲವು ಫೈಲ್‌ಗಳು ಇನ್‌ಸ್ಟಾಲ್ ಆಗುತ್ತವೆ. ಬಳಿಕ ನಿಮ್ಮ ಕಂಪ್ಯೂಟರಿನಲ್ಲಿ ಕನ್ನಡ, ಹಿಂದಿ, ತೆಲುಗು ಮತ್ತು ಮಲಯಾಳಂ ಯುನಿಕೋಡ್ ಅಕ್ಷರಗಳನ್ನು ನೋಡಬಹುದು.

ಇಷ್ಟಾಯಿತು ಎಂದರೆ, ಕನ್ನಡ ಸರಿಯಾಗಿ ಕಾಣಿಸುತ್ತದೆ. ಅದಲ್ಲದೆ, ನಿಮಗೆ Inscript ಕೀಬೋರ್ಡ್ ಶೈಲಿಯ ಟೈಪಿಂಗ್ ಗೊತ್ತಿದ್ದರೆ, ಅದರ ಮೂಲಕ ಬೇರಾವುದೇ ತಂತ್ರಾಂಶಗಳ ನೆರವಿಲ್ಲದೆ ಯುನಿಕೋಡ್‌ನಲ್ಲಿ ಕನ್ನಡ ಟೈಪ್ ಮಾಡಬಹುದು. ಅದನ್ನು ಎನೇಬಲ್ ಮಾಡಲು ಮೇಲೆ ತಿಳಿಸಿದಂತೆ Language ಟ್ಯಾಬ್‌ನಲ್ಲಿ Details ಬಟನ್ ಕ್ಲಿಕ್ ಮಾಡಿ. ಸ್ವಲ್ಪ ಕೆಳಗೆ Add ಎಂಬ ಬಟನ್ ಕ್ಲಿಕ್ ಮಾಡಿದಾಗ ಬರುವ ವಿಂಡೋದಲ್ಲಿ Kannada ಆಯ್ಕೆ ಮಾಡಿಕೊಂಡರೆ ಆಯಿತು. Apply ಮಾಡಿದ ಬಳಿಕ, Alt+Shift ಕೀಗಳನ್ನು ಒಮ್ಮೆ ಒತ್ತಿದರೆ ಕನ್ನಡದಲ್ಲಿಯೂ, ಮತ್ತೊಮ್ಮೆ ಒತ್ತಿದರೆ ಇಂಗ್ಲಿಷ್‌ನಲ್ಲೂ ಬರೆಯಬಹುದು.

ಕಿರು ಮಾಹಿತಿ: ಕಿರು ಯುಆರ್‌ಎಲ್
ಮೇಲೆ nudi.in ಎಂಬ ತಾಣದ ಯುಆರ್‌ಎಲ್ ನೀವು ನೋಡಿದ್ದೀರಿ. ಅದನ್ನು ನೀವು ಬ್ರೌಸರ್‌ನ ಅಡ್ರೆಸ್ ಬಾರ್‌ನಲ್ಲಿ ಟೈಪ್ ಮಾಡಿ ಎಂಟರ್ ಒತ್ತಿದಾಕ್ಷಣ ತೆರೆದುಕೊಳ್ಳುವ ಪುಟದ ಯುಆರ್‌ಎಲ್ http://vijaykarnataka.indiatimes.com/articleshow/20140182.cms ಎಂದಿರುತ್ತದೆ. ಇಷ್ಟುದ್ದದ ಯುಆರ್‌ಎಲ್ ಟೈಪ್ ಮಾಡುವುದು ಕಷ್ಟ. ಹೀಗಾಗಿ ಯುಆರ್‌ಎಲ್ ಶಾರ್ಟ್ ಮಾಡುವ ಜಾಲ ತಾಣಗಳು ಸಾಕಷ್ಟಿವೆ. ಉದಾ: http://is.gd/, http://goo.gl, http://bit.ly/, http://tinyurl.com/. ಈ ಸಾಲಿಗೆ ಇತ್ತೀಚೆಗೆ ಸೇರ್ಪಡೆಯಾಗಿರುವುದು ಕನ್ನಡ ನಾಡಿನ ನುಡಿ ತಂತ್ರಾಂಶ ಒದಗಿಸುತ್ತಿರುವ ಗಣಕ ಪರಿಷತ್‌ನ ಯುಆರ್‌ಎಲ್ ಶಾರ್ಟನಿಂಗ್ ತಾಣ nudi.in. ನಿಮಗೆ ಬೇಕಾದ ಯುಆರ್‌ಎಲ್ ಅನ್ನು ಅಲ್ಲಿರುವ ಬಾಕ್ಸ್‌ನಲ್ಲಿ ಹಾಕಿದರೆ, ಯುಆರ್‌ಎಲ್ (ಲಿಂಕ್) ಅನ್ನು ಕಿರಿದಾಗಿಸಿ ನಿಮಗೆ ಅಲ್ಲೇ ತೋರಿಸುತ್ತದೆ.