ಜನ ಸಾಮಾನ್ಯರತ್ತ ತಂತ್ರಜ್ಞಾನ – Gadget-Technology Info Towards Common Man

Posts tagged ‘Facebook’

ಆಕರ್ಷಣೆ ಕಳೆದುಕೊಳ್ಳುತ್ತಿದೆ ಫೇಸ್‌ಬುಕ್…

ನಗರದ ಆ ಮೂಲೆಯಲ್ಲಿ….
Facebookರಸ್ತೆ ಬದಿ ನಡೆದಾಡುತ್ತಿರುವಾಗ, ಬಸ್ ನಿಲ್ದಾಣದಲ್ಲಿ ಕಾಯುತ್ತಿರುವಾಗ, ಟ್ರಾಫಿಕ್ ಸಿಗ್ನಲ್‌ನಲ್ಲಿ ಬೈಕು ನಿಲ್ಲಿಸಲೇಬೇಕಾದಾಗ… ಕುದಿ ಹೃದಯದ ಹದಿ ಹರೆಯದ ಮಂದಿಯ ಎರಡೂ ಕಿವಿಗಳಲ್ಲಿ ಉದ್ದನೆಯ ದಾರ ನೇತಾಡುತ್ತಿರುತ್ತದೆ; ಜತೆಗೇ ತಲೆಯೂ ಸಣ್ಣಗೆ ಆಡುತ್ತಿದ್ದರೆ, ಕೈಯಲ್ಲಿರುವ ಮೊಬೈಲ್ ಸ್ಕ್ರೀನ್‌ನ ಮೇಲೆ ಎರಡೂ ಕರಗಳ ಹೆಬ್ಬೆರಳುಗಳು ಅತ್ತಿಂದಿತ್ತ ಸರಿದಾಡುತ್ತಿರುತ್ತವೆ; ಮಂದಹಾಸ, ನಗು, ಕೋಪ, ಬೇಸರ, ತುಂಟತನ… ಇತ್ಯಾದಿ ಕ್ಷಣಕ್ಷಣಕ್ಕೂ ಗೋಚರಿಸುವ ನವರಸ ಮುಖಭಾವಗಳು… ಅವರ ಕೈಯಲ್ಲಿರುವುದು ಹಳೆಯ ಫೀಚರ್ ಫೋನ್ ಆಗಿದ್ದರಂತೂ ಅದರ ಕೀಪ್ಯಾಡ್‌ನ ಸಂಖ್ಯೆ/ಅಕ್ಷರಗಳೇ ಗೋಚರಿಸದಷ್ಟು ಮಾಸಿ ಹೋಗಿರುತ್ತವೆ. “ಅಯ್ಯೋ, ಏನಾಯಿತೇ ನಿನ್ನ ಉಗುರಿಗೆ? ಸವೆದೇ ಹೋಗಿವೆಯಲ್ಲ” ಎಂಬ ಮಾತನ್ನು ನಾವು ಆಗೀಗ್ಗೆ ತಮಾಷೆಗಾಗಿಯಾದರೂ ಕೇಳಿರುತ್ತೇವೆ.

ಹೀಗೆ ಬನ್ನಿ….

ಇದು ಭ್ರಮಾಧೀನ ಲೋಕವಲ್ಲ, ಕ್ಷಿಪ್ರ ಸಂದೇಶ ಯುಗದ ವಾಸ್ತವಿಕ ಜಗತ್ತು.

ಇತ್ತ ಮತ್ತೊಂದು ಕಡೆಯಲ್ಲಿ….
ದೊಡ್ಡ ಕಂಪ್ಯೂಟರ್ ಪರದೆಯಲ್ಲಿ, ಗುಡ್ ಮಾರ್ನಿಂಗ್ ಎಂದೋ, ಗುಡ್ ನೈಟ್ ಎಂದೋ… ಮಾಡಿದ ಪೋಸ್ಟ್‌ಗಳಿಗೆ ಒಂದೊಂದು ‘ಲೈಕ್’ ಬಿದ್ದಾಗಲೂ ಮನಸ್ಸಿಗೊಂದಿಷ್ಟು ಪುಳಕ, ಒಂದೊಂದು ಕಾಮೆಂಟಿಗೂ ಲೈಕ್ ಮಾಡಿ ಅವರಿಗೆ ಕೃತಜ್ಞತೆ ಸಲ್ಲಿಸುವ ಆವುಟ; ಇನ್ನೊಂದೆಡೆ, ಆಪ್ತ ಬಂಧುವೋ, ಸ್ನೇಹಿತರೋ “ಈಗಷ್ಟೇ ಹೃದಯಾಘಾತದಿಂದ ನಿಧನರಾದರು” ಅಂತ ಬೇಸರದಿಂದಲೇ ಹಾಕಿದ ಪೋಸ್ಟಿಗೂ ಒಂದಷ್ಟು ‘ಲೈಕ್’ ಮುದ್ರೆ (ಇದರ ಹಿಂದೆ ಗಮನ ಸೆಳೆಯುವ ಮತ್ತು ಸಾಂತ್ವನ ನೀಡುವ ಮನಸ್ಸೂ ಇದ್ದಿರಬಹುದು) – ಜತೆಗೆ ನಮ್ಮ ಟೈಮ್‌ಲೈನ್‌ನಲ್ಲಿ ಬೇಕು-ಬೇಡವಾದ ಪೋಸ್ಟುಗಳೆಲ್ಲವೂ ಭರಪೂರ ಪ್ರವಹಿಸುವ ಅವಾಸ್ತವಿಕ ಮತ್ತು ಒಂದು ರೀತಿಯಲ್ಲಿ ಭ್ರಾಮಕ ಸ್ವರ್ಗ…

ಇವೆರಡರಲ್ಲಿ, ದಿನದಿಂದ ದಿನಕ್ಕೆ ಗೋಜಲಾಗತೊಡಗುತ್ತಿರುವ ಸಾಮಾಜಿಕ ಜಾಲತಾಣಗಳನ್ನು ಹೊಸ ಪೀಳಿಗೆಯ ಮಂದಿ ಡಿಸ್‌ಲೈಕ್ ಮಾಡುತ್ತಿದ್ದಾರೆ! ವಾಸ್ತವ ಮಿತ್ರರೊಂದಿಗೆ ಮನದ ತುಮುಲಗಳನ್ನು ಸುಲಭವಾಗಿ ಹಂಚಿಕೊಳ್ಳಬಲ್ಲ, ಪ್ರಮುಖ ಸಂದೇಶಗಳನ್ನು ಕ್ಷಿಪ್ರವಾಗಿ ರವಾನಿಸಬಲ್ಲ, ಸರಳ ಇಮೋಟಿಕಾನ್‌ಗಳ ಮೂಲಕ ಭಾವನೆಗಳನ್ನು ವ್ಯಕ್ತಪಡಿಸಬಲ್ಲ, ತ್ವರಿತವಾಗಿ ಫೋಟೋ, ವೀಡಿಯೋ, ಆಡಿಯೋ ಹಂಚಿಕೊಳ್ಳಲು ಸಾಧ್ಯವಾಗುವ, ಸ್ಪ್ಯಾಮ್ ಹಾವಳಿ ಇಲ್ಲದ, ಗೊತ್ತಿಲ್ಲದ ಅಪರಿಚಿತರ ನೆರಳೂ ಸೋಕದ ವಾಟ್ಸಾಪ್, ಹೈಕ್, ಲೈನ್, ವಿಚಾಟ್ ಮುಂತಾದ ಸಂದೇಶವಾಹಕ ಸೇವೆಗಳಿಗೆ ಥಂಬ್ಸ್ ಅಪ್ ಹೇಳುತ್ತಿದ್ದಾರೆ! ಇದು ಈಗಿನ ಟ್ರೆಂಡ್…..

ನೀರು ನಿಂತಲ್ಲಿ ರೋಗಬಾಧೆ ಇರುತ್ತದೆ. ತಂತ್ರಜ್ಞಾನ ನಿಂತ ನೀರಾಗಿದ್ದರಂತೂ ಜಗತ್ತು ಈ ಪರಿ ಬೆಳೆಯುತ್ತಿರಲಿಲ್ಲ. ಬದಲಾವಣೆ ಸಹಜ ಮತ್ತು ಅನಿವಾರ್ಯ. ಪ್ರಕೃತಿ ಸಹಜವಾದ ಈ ಮೂಲಮಂತ್ರಗಳ ತಳಹದಿಯೊಂದಿಗೆ ಸಾಮಾಜಿಕ ಜಾಲತಾಣಗಳ ಪೋಷಕವರ್ಗವೆಂದು ಪ್ರತಿಪಾದಿತವಾಗಿದ್ದ ಯುವ ಸಮೂಹ, ಈಗ ನಿಧಾನವಾಗಿ ಮೆಸೇಜಿಂಗ್ ಕಿರು ತಂತ್ರಾಂಶಗಳತ್ತ ಹೊರಳುತ್ತಿದೆ ಮತ್ತು ಭವಿಷ್ಯದ ಆನ್‌ಲೈನ್ ಪ್ರಜೆಗಳು ಇವರೇ ಆಗಿರುವುದರಿಂದ, ವೆಬ್ ಆಧಾರಿತ ಸಾಮಾಜಿಕ ಮಾಧ್ಯಮಗಳು ಹಿಂದೆ ಸರಿಯುತ್ತಿವೆ.

ಕಿರಿದೇ ಹಿರಿದಾಗುತ್ತಿದೆ
ಕಳೆದರ್ಧ ದಶಕದಲ್ಲಿ ಮಾಹಿತಿ ತಂತ್ರಜ್ಞಾನ ರಂಗದಲ್ಲಿ ನಡೆದ ಕ್ಷಿಪ್ರಕ್ರಾಂತಿಯು ಜಗತ್ತನ್ನು ಕಂಪ್ಯೂಟರಿನ ದೊಡ್ಡ ಪರದೆಯಿಂದ ಸ್ಮಾರ್ಟ್‌ಫೋನ್‌ನ ಅಂಗೈಯಗಲಕ್ಕೆ ಇಳಿಸಿದೆ. ಫೇಸ್‌ಬುಕ್, ಟ್ವಿಟರ್ ಜಾಲತಾಣಗಳೀಗ ಆ್ಯಪ್‌ಗಳೆಂದು ಮುದ್ದಾಗಿ ಕರೆಯಬಲ್ಲ ಕಿರು ತಂತ್ರಾಂಶಗಳ ರೂಪದಲ್ಲಿ ಸ್ಮಾರ್ಟ್‌ಫೋನ್‌ನೊಳಗೆ ಬಂದು ಕುಳಿತಿವೆ. ಇದುವರೆಗೆ ಯುವ ಮನಸ್ಸುಗಳ ಆಟದಂಗಳವಾಗಿದ್ದ ಫೇಸ್‌ಬುಕ್, ಡೆಲೀಷಿಯಸ್, ಕೋರಾ, ಫ್ಲಿಕರ್, ಬ್ಲಾಗ್, ಗೂಗಲ್ ಪ್ಲಸ್, ಹೈಫೈವ್, ಐಬಿಬೋ, ಇನ್‌ಸ್ಟಾಗ್ರಾಂ, ಟ್ವಿಟರ್, ಲಿಂಕ್ಡ್ಇನ್, ನಿಂಗ್, ಪಿನ್‌ಟರೆಸ್ಟ್, ಸ್ಪೇಸಸ್, ಟಂಬ್ಲರ್, ವಾಕ್ಸ್, ಯಾಮರ್, ಲೈವ್‌ಜರ್ನಲ್ ಮುಂತಾದ ತಾಣಗಳು, ಜನಮಾನಸದಿಂದ ಮರೆಯಾಗಿ ಹೋಗಿರುವ ಓರ್ಕುಟ್ ಸಾಲಿಗೆ ಸೇರುತ್ತಿವೆಯೇ?

ಕಳೆದ ದಶಕದ ಉತ್ತರಾರ್ಧವನ್ನೇ ಗಮನಿಸಿ ನೋಡಿ. ಬ್ಲಾಗ್‌ಗಳೆಂಬ ವೆಬ್ ಲಾಗ್‌ಗಳ ಮೂಲಕವಾಗಿ ಸ್ನೇಹ ಸೇತುವನ್ನು ರಚಿಸುತ್ತಿದ್ದವರದೆಷ್ಟು ಮಂದಿ! ಬ್ಲಾಗ್ ಬರೆಯುವುದು, ನನಗೂ ಒಂದು ವೆಬ್ ಸೈಟ್ ಇದೆ ಎಂದು ಹೆಮ್ಮೆ ಪಟ್ಟುಕೊಳ್ಳುತ್ತಿದ್ದ ದಿನಗಳವು. ಬೇರೊಬ್ಬರ ಬ್ಲಾಗಿಗೆ ಇಣುಕಿ, ಇಷ್ಟವಾದರೆ ಒಂದು ಕಾಮೆಂಟ್ ಚಿಟುಕುವುದು, ಕುಟುಕುವುದು, ವಿರೋಧಿಸುವುದು, ಚರ್ಚಿಸುವುದು, ಉಭಯ ಕುಶಲೋಪರಿ… ಹೀಗೆ ಬ್ಲಾಗುಗಳಲ್ಲೇ ಸಂಬಂಧದ ಬೆಸುಗೆಯಾಗುತ್ತಿತ್ತು. ಆ ಕಾಲದಲ್ಲಿ, ಸರಿಸುಮಾರು 11 ವರ್ಷಗಳ ಹಿಂದೆ, 2004ರ ಫೆಬ್ರವರಿ ತಿಂಗಳಲ್ಲಿ, ಮಾರ್ಕ್ ಜುಕರ್‌ಬರ್ಗ್ ತನ್ನ ಹಾರ್ವರ್ಡ್ ವಿಶ್ವವಿದ್ಯಾನಿಲಯದ ಕಾಲೇಜು ಸಹಪಾಠಿಗಳಾದ ಆ್ಯಂಡ್ರ್ಯೂ ಮೆಕಲಮ್, ಎಡ್ವರ್ಡೋ ಸವೆರಿನ್, ಕ್ರಿಸ್ ಹ್ಯೂಸ್ ಹಾಗೂ ಡಸ್ಟಿನ್ ಮಾಸ್ಕೊವಿಜ್ ಜತೆಗೆ ಸೇರಿಕೊಂಡು, ಕಾಲೇಜಿನವರಿಗಾಗಿ ಹಚ್ಚಿದ ಕಿಡಿಯೊಂದು ಈ ಪರಿ ಜಾಗತಿಕವಾಗಿ 135 ಕೋಟಿ ಮಾಸಿಕ ಸಕ್ರಿಯ ಬಳಕೆದಾರರೊಂದಿಗೆ ಅಗಾಧವಾಗಿ ಬೆಳೆಯುತ್ತದೆಂದು ಯಾರೂ ಪರಿಭಾವಿಸಿರಲಿಲ್ಲ. ಇಂದು ಬಲುದೊಡ್ಡ ಕಂಪನಿಯಾಗಿ ಬೆಳೆದ ಫೇಸ್‌ಬುಕ್‌ನಲ್ಲಿ ಕೆಲಸ ಮಾಡುತ್ತಿರುವವರ ಸಂಖ್ಯೆ ಎಂಟೂವರೆ ಸಾವಿರ; ಅದರ ಆಸ್ತಿಯ ಮೌಲ್ಯ 1790 ಕೋಟಿ ಡಾಲರ್; ಭಾರತದಲ್ಲಿ ಇರುವ ಮಾಸಿಕ ಸಕ್ರಿಯ ಬಳಕೆದಾರರ ಸಂಖ್ಯೆ 11.20 ಕೋಟಿ; ಇದರಲ್ಲಿ ಪ್ರತಿ ದಿನ ಬಳಸುತ್ತಿರುವ ಭಾರತೀಯರ ಸರಾಸರಿ ಸಂಖ್ಯೆ ಸುಮಾರು ಅರ್ಧದಷ್ಟು, ಅಂದರೆ 5 ಕೋಟಿಯಷ್ಟು ಮಾತ್ರ.

ಸ್ವಲ್ಪವೇ ಹಿಂದೆ ಕಣ್ಣು ಹಾಯಿಸಿದರೆ, ಹುಟ್ಟುಹಬ್ಬದ ದಿನದಂದು ರಾಶಿ ರಾಶಿ ಶುಭಾಶಯಗಳ ಕಾಮೆಂಟ್ ನೋಡಿ ಬೀಗಿದವರು ನಾವು ನೀವು. ಈ ವರ್ಷ ಸಾಮಾನ್ಯ ಪ್ರೊಫೈಲ್ ಒಂದಕ್ಕೆ ಬಿದ್ದಿರುವ ಶುಭಾಶಯಗಳ ಪ್ರಮಾಣ ನೋಡಿದರೆ, ಜನರಿಗೆ ಸಮಯವಿಲ್ಲವೆಂಬೋದು ಗೊತ್ತಾಗುತ್ತದೆ. ಫೇಸ್‌ಬುಕ್ ತಾಣವನ್ನೇ ಅವಲೋಕಿಸಿದರೆ, ಕೆಲವೊಂದಿಷ್ಟು ಅಪವಾದಗಳ ಹೊರತಾಗಿ, ನಮ್ಮ ಸ್ನೇಹಿತ ವರ್ಗದಲ್ಲಿಯೇ ಅಪ್‌ಡೇಟ್‌ಗಳು ಕಡಿಮೆಯಾಗತೊಡಗಿವೆ ಎಂಬುದು ಗಮನಕ್ಕೆ ಬರುತ್ತದೆ. ಅದರಲ್ಲಿನ ಪ್ರೈವೆಸಿ ವಿಚಾರಗಳು, ಅನವಶ್ಯಕ ಕಾಲೆಳೆದಾಟ, ಗುಡ್-ಮಾರ್ನಿಂಗ್-ಗುಡ್ ನೈಟ್‌ಗಷ್ಟೇ ಸೀಮಿತವಾದ ಪೋಸ್ಟುಗಳನ್ನು ನೋಡಿ ಬೇಸತ್ತವರು, ತಮಗೆ ಆತ್ಮೀಯರೆನ್ನಿಸಿಕೊಂಡವರನ್ನು ಕರೆದುಕೊಂಡು ವಾಟ್ಸಾಪ್, ಲೈನ್, ಹೈಕ್, ಟೆಲಿಗ್ರಾಂ, ವೈಬರ್, ವಿಚಾಟ್, ಗೂಗಲ್ ಹ್ಯಾಂಗೌಟ್ಸ್, ಸ್ಕೈಪ್, ಎಫ್‌ಬಿ ಮೆಸೆಂಜರ್ ಮುಂತಾದ ಸಂದೇಶವಾಹಕ ಆ್ಯಪ್‌ಗಳತ್ತ ಮುಖ ಮಾಡುತ್ತಿದ್ದಾರೆ.

ಈ ಅಂಶವು ನಮ್ಮ ಗಮನಕ್ಕೆ ಮಾತ್ರವೇ ಬಂದಿರುವುದಲ್ಲ. ಸ್ವತಃ ಫೇಸ್‌ಬುಕ್ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್ ಸಂಸ್ಥೆಯ ಕಳೆದ ವರ್ಷದ ಮಹಾಸಭೆಯಲ್ಲಿ. ವಿಶೇಷವಾಗಿ ಹದಿಹರೆಯದ ಬಳಕೆದಾರರ ಸಂಖ್ಯೆ ಕುಸಿಯುತ್ತಿರುವುದರ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು. ಅಮೆರಿಕ ಮಾರುಕಟ್ಟೆಯಲ್ಲಿ ಫೇಸ್‌ಬುಕ್ ಶೇರು ಬೆಲೆಗಳು ಕುಸಿತವಾಗಿ ‘ಇಲ್ಲಿ ಎಲ್ಲವೂ ಸರಿ ಇಲ್ಲ’ ಎಂಬ ಸಂದೇಶವೂ ಬಂದಿದೆ. ಫೇಸ್‌ಬುಕ್ ಉದ್ಯೋಗಿಗಳ ಕುಸಿಯುತ್ತಿರುವ ಮನಸ್ಥೈರ್ಯ ವರ್ಧಿಸಲೆಂದೇ ಇತ್ತೀಚೆಗೊಂದು ಸಭೆ ನಡೆದಿತ್ತು ಎಂಬುದನ್ನು ವಾಲ್ ಸ್ಟ್ರೀಟ್ ಜರ್ನಲ್ ಈಗಾಗಲೇ ಜಗಜ್ಜಾಹೀರು ಮಾಡಿದೆ.

ಟೀನೇಜರ್‌ಗಳು ಹಿಂದಿನಷ್ಟು ಉಮೇದಿನಿಂದ ಸಾಮಾಜಿಕ ಜಾಲದಲ್ಲಿ ಸಕ್ರಿಯರಾಗಿಲ್ಲ ಎಂಬುದಕ್ಕೂ, ಫೇಸ್‌ಬುಕ್ ವ್ಯಕ್ತಪಡಿಸಿರುವ ಕಳವಳಕ್ಕೂ, ಈಗಿನ ವಿದ್ಯಮಾನಕ್ಕೂ ಸಾಕಷ್ಟು ತಾಳೆಯಾಗುತ್ತದೆ.

ಅಮೆರಿಕದ ಫ್ರ್ಯಾಂಕ್ ಎನ್ ಮ್ಯಾಗಿಡ್ ಅಸೋಸಿಯೇಟ್ಸ್ ನಡೆಸಿದ ಸಮೀಕ್ಷೆಯಲ್ಲಿ ಕಂಡುಬಂದಿರುವುದೂ ಇದೇ. ಕಳೆದ ವರ್ಷ ಅಮೆರಿಕದ ಶೇ.94ರಷ್ಟು ಟೀನೇಜರ್‌ಗಳು ಫೇಸ್‌ಬುಕ್ ಬಳಸುತ್ತಿದ್ದರೆ, ಈ ವರ್ಷ ಇದೇ ಹದಿಹರೆಯದವರ ಪ್ರಮಾಣ ಶೇ.88 ಮಾತ್ರ. ಅಂತೆಯೇ ಎಲ್ಲ ವಯಸ್ಸಿನವರನ್ನೂ ಸೇರಿಸಿದರೆ, ಎರಡು ವರ್ಷಗಳ ಹಿಂದೆ ಶೇ.93 ಮಂದಿ ಫೇಸ್‌ಬುಕ್‌ಗೆ ಲಾಗಿನ್ ಆಗುತ್ತಿದ್ದರೆ, ಈ ವರ್ಷ ಇದರ ಪ್ರಮಾಣ ಶೇ.90ಕ್ಕೆ ಇಳಿದಿದೆ.

ಪ್ರಸ್ತುತ ಫೇಸ್‌ಬುಕ್‌ನಲ್ಲಿ ಸಕ್ರಿಯರಾಗಿರುವವರಲ್ಲಿ ಅಪ್ಪ, ಅಮ್ಮ, ಆಂಟಿ, ಅಂಕಲ್, ಅಜ್ಜಿ, ತಾತ ಎಲ್ಲರೂ ಸೇರಿದ್ದಾರೆ. ನಾವೇನು ಮಾಡುತ್ತಿದ್ದೇವೆಂಬುದು ನಮ್ಮ ಶಿಕ್ಷಕರಿಗೋ, ನಮ್ಮ ಬಾಸ್‌ಗೋ… ಹೀಗೆ ಇಡೀ ಜಗತ್ತಿಗೇ ತಿಳಿಯುತ್ತದೆ ಎಂಬ ಆತಂಕವೂ ಯುವಜನರನ್ನು ಈ ಜಾಲತಾಣಗಳಿಂದ ವಿಮುಖರನ್ನಾಗಿಸಿರಬಹುದು.

ಹದಿಹರೆಯದ ಪ್ರೇಮ ಸಂಭಾಷಣೆಯಿಂದಾಗಿಯೇ ಸಾಕಷ್ಟು ದುಡ್ಡು ಮಾಡುತ್ತಿದ್ದ ಮೊಬೈಲ್ ಸೇವಾ ಕಂಪನಿಗಳಿಗೆ ಬಲುದೊಡ್ಡ ಹೊಡೆತ ಬಿದ್ದಿದ್ದು ಐದು ವರ್ಷಗಳ ಹಿಂದೆ ಚಾಲ್ತಿಗೆ ಬಂದಿದ್ದ ಈ ಮೊಬೈಲ್ ಟೆಕ್ಸ್ಟ್ ಮೆಸೇಜಿಂಗ್ ಟೂಲ್‌ಗಳಿಂದ. ಇನ್‌ಸ್ಟಾಲ್ ಮಾಡಿಕೊಂಡು ಇಂಟರ್ನೆಟ್ ಪ್ಯಾಕ್ ಹಾಕಿಸಿಕೊಂಡುಬಿಟ್ಟರೆ, ಅನಿಯಮಿತವಾಗಿ ಸಂದೇಶಗಳನ್ನು, ಫೋಟೋ-ವೀಡಿಯೋಗಳನ್ನು ಹಂಚಿಕೊಳ್ಳಬಹುದಷ್ಟೇ ಅಲ್ಲದೆ, ಬೇರೆ ಇಂಟರ್ನೆಟ್ ತಾಣಗಳಲ್ಲಿಯೂ ಆನ್‌ಲೈನ್ ವಿಹಾರ ಮಾಡಬಹುದಾಗಿದೆ. ಎಸ್ಸೆಮ್ಮೆಸ್ ಸಂದೇಶಗಳು ಕೇವಲ ಅಧಿಕೃತವಾದ ಸಂವಹನಕ್ಕಷ್ಟೇ ಸೀಮಿತವಾಗುತ್ತಿರುವುದು ಕಹಿ ಸತ್ಯ.

ಫೇಸ್‌ಬುಕ್‌ನಿಂದ ವಿಮುಖವಾದ ಮನಸ್ಸುಗಳು ಈ ಚಾಟಿಂಗ್ ಆ್ಯಪ್‌ಗಳಲ್ಲಿ ಸಾಕಷ್ಟು ಗ್ರೂಪ್‌ಗಳನ್ನು ಕಟ್ಟಿಕೊಂಡವು. ಕ್ಲಾಸ್‌ಮೇಟ್ಸ್ ಅಂತ ಒಂದು ಗ್ರೂಪ್, ಟೀನ್ ಅಡ್ಡಾ ಅಂತ ತುಂಟತನ ಮತ್ತು ಪೋಲಿ ಸಂದೇಶಗಳನ್ನು ಹಂಚಿಕೊಳ್ಳುವುದಕ್ಕಾಗಿಯೇ ಇರುವ ಗ್ರೂಪ್, ಕ್ಲೋಸ್ ಫ್ರೆಂಡ್ಸ್ ಅಂತ ಮತ್ತೊಂದು ಗ್ರೂಪ್, ಕಲೆ-ಸಂಸ್ಕೃತಿ ಮುಂತಾದವುಗಳಲ್ಲಿ ಆಸಕ್ತಿಯಿದ್ದರೆ ಅದಕ್ಕಾಗಿಯೇ ಮತ್ತೊಂದು ಗ್ರೂಪ್…. ಹೀಗೆ, ಸೀಮಿತ ವಿಷಯಗಳಿಗೆ ಸಂಬಂಧಿಸಿದ ಪ್ರತ್ಯೇಕ ಬಳಗ ಕಟ್ಟಿಕೊಂಡು ಪ್ರತಿ ದಿನ ಪ್ರತಿ ಕ್ಷಣ ಸಂವಹನ ನಡೆಸುವುದು ಸಾಧ್ಯ. ಫೇಸ್‌ಬುಕ್‌ನಲ್ಲಿರುವಂತೆ ನಾವು ಲೈಕ್ ಮಾಡಿದವರೆಲ್ಲರ ಚಟುವಟಿಕೆಗಳು ನಮ್ಮ ನ್ಯೂಸ್‌ಫೀಡ್‌ನಲ್ಲಿ ಬರುವುದು, ಪದೇ ಪದೇ ಅನವಶ್ಯ ನೋಟಿಫಿಕೇಶನ್ ಬರುವುದು… ಈ ತ್ರಾಸ ಇರುವುದಿಲ್ಲ. ಪ್ರೈವೆಸಿಯೂ ಇದೆ. ಇಂಟರ್ನೆಟ್ ದರ ಮತ್ತು ಕೈಗೆಟಕುವಷ್ಟು ಅಗ್ಗವಾಗಿಬಿಟ್ಟಿರುವ ಹ್ಯಾಂಡ್‌ಸೆಟ್‌ಗಳು ಕೂಡ ಈ ಟೆಕ್ಟ್ಸ್ ಮೆಸೇಜಿಂಗ್ ಆ್ಯಪ್‌ಗಳ ಜನಪ್ರಿಯತೆಗೆ ಪೂರಕ ವಾತಾವರಣ ಕಲ್ಪಿಸಿದ್ದು ಸುಳ್ಳಲ್ಲ.

ಫೇಸ್‌ಬುಕ್‌ನಲ್ಲಿ ಒಂದರ್ಧ ಗಂಟೆ ಜಾಲಾಡಿಬಿಟ್ಟರೆ, ಅದು ನಮ್ಮ ಬ್ಯಾಟರಿಯನ್ನಷ್ಟೇ ಕ್ಷಿಪ್ರಗತಿಯಲ್ಲಿ ಹೀರಿಕೊಳ್ಳುವುದಲ್ಲ, ಬದಲಾಗಿ, ನ್ಯೂಸ್‌ಫೀಡ್ ಸ್ಕ್ರಾಲ್ ಮಾಡುತ್ತಿದ್ದಂತೆ ಲೋಡ್ ಆಗುತ್ತಲೇ ಇರುವ ಫೋಟೋಗಳಿಂದಾಗಿ ಡೇಟಾ ಪ್ಯಾಕ್ ಕೂಡ (ಅನಿಯಮಿತ ಇಲ್ಲದಿದ್ದರೆ) ಬೇಗನೇ ಖಾಲಿಯಾಗಿಬಿಡುತ್ತದೆ. ಆದರೆ, ಮೆಸೇಜಿಂಗ್ ಸೇವೆಗಳಿಗೆ ಹಾಗಲ್ಲ, ಬೇಕಾಗಿರುವುದನ್ನು ಮಾತ್ರವೇ ಡೌನ್‌ಲೋಡ್ ಮಾಡಿಕೊಳ್ಳುವ ಆಯ್ಕೆ ಇದೆ. 2ಜಿ ಸಂಪರ್ಕದಲ್ಲೂ ಸಿಗ್ನಲ್ ದುರ್ಬಲ ಎಂಬ ಅಡ್ಡಿಯಿಲ್ಲದೆ ಸುಲಲಿತವಾಗಿ, ಕ್ಷಿಪ್ರವಾಗಿ ಇವು ಕಾರ್ಯನಿರ್ವಹಿಸುತ್ತವೆ; ಜಾಹೀರಾತುಗಳ ಕಿರಿಕಿರಿಯೂ ಇರುವುದಿಲ್ಲ.

ಮೆಸೇಜಿಂಗ್ ಆ್ಯಪ್‌ಗಳು ವಾಸ್ತವ ಬದುಕಿಗೆ ಹತ್ತಿರವಾಗಿದ್ದರೆ, ಫೇಸ್‌ಬುಕ್ ಅವಾಸ್ತವಿಕ ಜಗತ್ತಿನ ಪ್ರತಿನಿಧಿಯಷ್ಟೆ. ನಮಗೆ ಏನೇನೂ ಗೊತ್ತಿಲ್ಲದವರೊಂದಿಗೆ ಹರಟುವುದಕ್ಕಿಂತ ಗೊತ್ತಿರುವವರ ಜತೆಗೆ ನೇರ ಸಂಭಾಷಣೆ ನಡೆಸುವುದರಲ್ಲಿ ಅರ್ಥವಿದೆ ಮತ್ತು ಸುರಕ್ಷಿತ ಎಂಬುದು ಯುವಜನರಿಗೂ ಅನ್ನಿಸತೊಡಗಿದೆ.

ಸ್ವತಃ ಫೇಸ್‌ಬುಕ್ಕೇ ಕೆಲವು ತಿಂಗಳ ಹಿಂದೆ ವಾಟ್ಸಾಪ್ ಅನ್ನು ಖರೀದಿಸಿಬಿಟ್ಟಿತು ಅಂದರೆ ಮೆಸೇಜಿಂಗ್ ಆ್ಯಪ್‌ಗಳ ಜನಪ್ರಿಯತೆಗೆ ಇದಕ್ಕಿಂತ ಬೇರೆ ಸಾಕ್ಷಿ ಬೇಕೇ? ಇದೇ ಕಾರಣಕ್ಕೆ, ಮೈಕ್ರೋಸಾಫ್ಟ್ (ಸ್ಕೈಪ್), ಗೂಗಲ್ (ಹ್ಯಾಂಗೌಟ್), ಬ್ಲ್ಯಾಕ್‌ಬೆರಿ (ಬಿಬಿ ಮೆಸೆಂಜರ್), ಆ್ಯಪಲ್ (ಐ-ಮೆಸೇಜ್) ಜತೆಗೆ, ಫೇಸ್‌ಬುಕ್ ಕೂಡ ಪ್ರತ್ಯೇಕವಾದ ಮೆಸೆಂಜರ್ ಆ್ಯಪ್‌ಗಳನ್ನು ರೂಪಿಸಿ, ಅದರ ಬೆಳವಣಿಗೆಗೆ ಹೆಚ್ಚು ಒತ್ತು ನೀಡುತ್ತಿವೆ.

ಇಷ್ಟಾಗಿಯೂ ಬದಲಾವಣೆಯೇ ಜಗದ ನಿಯಮ. ಈ ಮೆಸೇಜಿಂಗ್ ಆ್ಯಪ್‌ಗಳ ಜಾಗದಲ್ಲಿ ಹೊಸತನದ ನಿರೀಕ್ಷೆಯಲ್ಲಿ, ನವೀನ ತಂತ್ರಜ್ಞಾನವನ್ನು ಅಪ್ಪಿ-ಒಪ್ಪಿಕೊಳ್ಳಲು ಕಾತರಿಸುತ್ತಿದೆ ಯುವ ಜಗತ್ತು.

ಆ್ಯಪ್ ಅನುಕೂಲಗಳು
* ಗೊತ್ತಿರುವವರನ್ನು ಮಾತ್ರವೇ ಸ್ನೇಹಿತರಾಗಿಸಿಕೊಳ್ಳಬಹುದು. ಮೊಬೈಲ್ ಸಂಖ್ಯೆ ಇರಲೇಬೇಕಲ್ಲ!
* ಕ್ಷಿಪ್ರ ಸಂದೇಶ ರವಾನೆ, ಸಿಗ್ನಲ್ ವೀಕ್ ಎಂಬ ಕಿರಿಕಿರಿ ಇರುವುದಿಲ್ಲ
* ಇವು ಕೇವಲ ಟೆಕ್ಸ್ಟ್ ಕಳುಹಿಸುವ ಆ್ಯಪ್‌ಗಳಾಗಿ ಉಳಿದಿಲ್ಲ; ವೀಡಿಯೋ, ಫೋಟೋ, ಧ್ವನಿ ಸಂದೇಶವೂ ಕ್ಷಿಪ್ರ ರವಾನೆ
* ಸ್ಪ್ಯಾಮ್ ಇಲ್ಲ, ಪರಿಚಯವಿಲ್ಲದವರು ಹಾಯ್ ಹಲೋ!, ಊಟವಾಯಿತಾ? ತಿಂಡಿಯಾಯಿತಾ? ಕೇಳುವುದಿಲ್ಲ
* ಗೊತ್ತಿದ್ದೂ, ಗೊತ್ತಿಲ್ಲದೆಯೂ, ಕ್ಯಾಂಡಿ ಕ್ರಶ್ ಆಟಕ್ಕೋ, ಇನ್ಯಾವುದೋ ಆಟಕ್ಕೋ ಕರೆಯುವ ಫಜೀತಿ ಇಲ್ಲ
* ನಮ್ಮ ಅಕೌಂಟ್ ಹ್ಯಾಕ್ ಮಾಡಿ, ನಮ್ಮ ಪರವಾಗಿ ಅಸಭ್ಯ, ಅಶ್ಲೀಲ ಸಂದೇಶ ರವಾನಿಸುವ ಆತಂಕವಿಲ್ಲ.

[ವಿಜಯ ನೆಕ್ಸ್ಟ್ ವಾರ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ]
http://vijayanextepaper.com/Details.aspx?id=4443&boxid=61211171
http://vijayanextepaper.com/Details.aspx?id=4445&boxid=61253125

ಫೇಸ್‌ಬುಕ್‌ನಲ್ಲಿ ಆಡಲು ಕರೆಯುತ್ತಿದ್ದಾರೆಯೇ?

ಮಾಹಿತಿ@ತಂತ್ರಜ್ಞಾನ: ವಿಜಯ ಕರ್ನಾಟಕ ಅಂಕಣ, ಜೂನ್ 30, 2014

ಫೇಸ್‌ಬುಕ್ ಸಾಮಾಜಿಕ ಜಾಲತಾಣದಲ್ಲಿ ಈಗೀಗ ಸ್ನೇಹಿತರ ಸಂಖ್ಯೆ ಹೆಚ್ಚಾಗಿ, ಗೇಮ್ಸ್ ಆಡಲು ಆಹ್ವಾನ ನೀಡುತ್ತಿರುವವರ ಕಾಟದಿಂದಾಗಿಯೋ, ಸಾಕಪ್ಪಾ ಸಾಕು ಈ ಫೇಸ್‌ಬುಕ್ ಅಂತ ಕೆಲವರಿಗೆ ಅನ್ನಿಸಿರಬಹುದು. ಅದೇ ರೀತಿ, ಅನಗತ್ಯ ಸಂದೇಶಗಳು ಎಫ್‌ಬಿ ಮೆಸೆಂಜರ್ ಮೂಲಕ ಕಿರಿಕಿರಿಯುಂಟು ಮಾಡಬಹುದು. ಇದರ ಕಾಟದಿಂದ ಪಾರಾಗುವುದು ಹೇಗೆಂಬ ಬಗ್ಗೆ ಯೋಚಿಸುವವರು ಮುಂದೆ ಓದಿ.

ಯಾವುದೇ ಆಟದ ರಿಕ್ವೆಸ್ಟ್ ಬಂದ್ರೆ (ಉದಾಹರಣೆಗೆ, ಇತ್ತೀಚೆಗೆ ಹೆಚ್ಚು ಕಾಟ ಕೊಡುತ್ತಾ ಇರೋದು ಕ್ಯಾಂಡಿ ಕ್ರಶ್ ಸಾಗಾ ಎಂಬ ಆನ್‌ಲೈನ್ ಆಟ) ಅಲ್ಲೊಂದು ನೋಟಿಫಿಕೇಶನ್, ಟ್ರಿಣ್ ಎಂಬ ಸದ್ದಿನೊಂದಿಗೆ ನಿಮ್ಮ ಮೊಬೈಲ್ ಪರದೆಯಲ್ಲಿ ಕಿರಿಕಿರಿ ಮಾಡುತ್ತದೆ. ಅದನ್ನು ಆಡುವ ಮನಸ್ಸಿಲ್ಲ, ಆದರೂ ನೋಟಿಫಿಕೇಶನ್ ನೋಡದಿರಲು ಸಾಧ್ಯವಿಲ್ಲ. ನೋಡಿದ ಮೇಲೆ ಸಮಯ ವ್ಯರ್ಥವಾಗಿರುವುದು ಅರಿವಾಗುತ್ತದೆ. ಪ್ರತಿಯೊಂದು ಆಟದ ಆಹ್ವಾನಕ್ಕೂ ನೋಟಿಫಿಕೇಶನ್, ಪ್ರತಿಯೊಂದು ಲೈಕ್‌ಗೂ ಟ್ರಿಣ್ ಸದ್ದು… ಇತ್ಯಾದಿ ನಮ್ಮ ಗಮನ ಬೇರೆಡೆ ಸೆಳೆಯುತ್ತವೆ ಮತ್ತು ಏಕಾಗ್ರತೆಗೆ ಭಂಗವುಂಟು ಮಾಡುತ್ತವೆ. ಆ ಆಟಗಳನ್ನೇ ಕ್ರಶ್ ಮಾಡುವುದು ಹೇಗೆ?

ನೀವು ಫೇಸ್‌ಬುಕ್‌ಗೆ ಲಾಗಿನ್ ಆಗಿರುವಾಗ ನಿಮಗೆ ಬಂದಿರುವ ನೋಟಿಫಿಕೇಶನ್ ಕ್ಲಿಕ್ ಮಾಡಿ…
ಪ್ಲೇ ನೌ ಎಂಬ ಬಟನ್ ಅನ್ನು ಕಣ್ಣೆತ್ತಿಯೂ ನೋಡಬೇಡಿ. ಹಾಗೆಯೇ ಕೆಳಗೆ ನೋಡಿ, ಕೆಳ ಬಲಭಾಗದಲ್ಲಿ View in App Centre ಎಂಬ ಲಿಂಕ್ ಇದೆ, ಅದನ್ನು ಕ್ಲಿಕ್ ಮಾಡಿ.
ಬಲ ಭಾಗದಲ್ಲಿ Visit App Website, Visit App Page, Share, Block, Report a Problem ಮುಂತಾದ ಲಿಂಕ್‌ಗಳಿರುತ್ತವೆ. ನಿಮಗೆ ಬೇಕಾದ ಲಿಂಕ್ ಸಿಕ್ಕಿಯೇಬಿಟ್ಟಿತಲ್ಲವೇ? ಬ್ಲಾಕ್ ಒತ್ತಿ, Confirm ಮಾಡಿಬಿಡಿ. ಮತ್ತೆ ನಿಮಗೆ ಆ ಆಟಕ್ಕೆ ಯಾರೇ ಕರೆದರೂ, ಅವುಗಳ ನೋಟಿಫಿಕೇಶನ್ ಬರುವುದಿಲ್ಲ. ಆದರೆ, ಪ್ರತಿಯೊಂದು ಆಟಕ್ಕೂ ಪ್ರತ್ಯೇಕವಾಗಿ ನೀವು ಹೀಗೆಯೇ ಮಾಡಬೇಕಾಗುತ್ತದೆ ಎಂಬುದೊಂದು ತ್ರಾಸ ತೆಗೆದುಕೊಳ್ಳಲೇಬೇಕು. ಹಾಗಿದ್ದರೆ ಮಾತ್ರ, ಆ ಆಟಕ್ಕೆ ಕರೆಯುವ ನೂರಾರು ಮಂದಿಯಿಂದ ಪಾರಾಗಬಹುದು.

ಇನ್ನು, ಯಾರೋ ಯಾವುದೋ ಪೋಸ್ಟ್‌ಗೆ ಕಾಮೆಂಟ್ ಮಾಡಿದ್ದಕ್ಕೆ, ಯಾರೋ ಯಾರ ಜತೆನೋ ಫ್ರೆಂಡ್‌ಶಿಪ್ ಮಾಡಿಕೊಂಡಿದ್ದಕ್ಕೆ, ಬೇರೆಯವರ ಫೋಟೋವನ್ನು ಶೇರ್ ಮಾಡಿದ್ದಕ್ಕೆ, ಬೇರೆಯವರ ಪೋಸ್ಟನ್ನು ಲೈಕ್ ಮಾಡಿದ್ದಕ್ಕೆ ನಿಮಗೆ ನೋಟಿಫಿಕೇಶನ್ ಬಂದು ಕಿರಿಕಿರಿಯಾಗುತ್ತಿದೆಯೇ?

ಅವರನ್ನು ನಿಮ್ಮ ಸ್ನೇಹಿತರಾಗಿಯೇ ಉಳಿಸಿಕೊಂಡು ನೀವು ಈ ನೋಟಿಫಿಕೇಶನ್‌ಗಳನ್ನು ಇಲ್ಲವಾಗಿಸಬಹುದು. ಹೇಗೆಂದರೆ, ಯಾರ ಫೇಸ್‌ಬುಕ್ ಚಟುವಟಿಕೆಗಳ ಕುರಿತಾಗಿ ನಿಮಗೆ ನೋಟಿಫಿಕೇಶನ್‌ಗಳು ಬರುತ್ತಿವೆಯೋ, ಅಂಥವರ ಹೆಸರಿನ ಮೇಲೆ ಅಥವಾ ಗ್ರೂಪ್‌ನ ಮೇಲೆ ಮೌಸ್ ಪಾಯಿಂಟರ್ ಹೋವರ್ ಮಾಡಿ (ಕ್ಲಿಕ್ ಮಾಡೋದಲ್ಲ, ತೋರಿಸೋದು ಮಾತ್ರ). Following ಎಂಬ ಬಟನ್ ಕಾಣಿಸುತ್ತದೆ. ಕ್ಲಿಕ್ ಮಾಡಿ. ರೈಟ್ ಗುರುತು ಹೋಗುತ್ತದೆ. ಆಗ ನೀವು ಅವರ ಫೇಸ್‌ಬುಕ್ ಚಟುವಟಿಕೆಗಳನ್ನು ಫಾಲೋ ಮಾಡುತ್ತಿಲ್ಲ ಎಂದಾಗುತ್ತದೆ. ನೋಟಿಫಿಕೇಶನ್‌ಗಳು ಬರುವುದಿಲ್ಲ.

ಈ ರೀತಿ ಮಾಡುವುದರಿಂದ, ನಿಮ್ಮ ಸ್ನೇಹಿತರ ಪ್ರೈವೆಸಿಗೆ ರಕ್ಷಣೆ ದೊರೆತಂತಾಗುತ್ತದೆ ಅಂತಲೂ ಮನಸ್ಸು ಉದಾರ ಮಾಡಿಕೊಂಡರೆ ನಿಮಗೂ ಒಳಿತು. ನೋಟಿಫಿಕೇಶನ್‌ಗಳ ಕಿರಿಕಿರಿ ಇರುವುದಿಲ್ಲ.

ಅದೇ ರೀತಿ, ಯಾರೋ ನಿಮ್ಮನ್ನು ನಿಮಗಿಷ್ಟವಿಲ್ಲದ ಗ್ರೂಪ್‌ಗೆ ಸೇರಿಸಿಬಿಟ್ಟಿರುತ್ತಾರೆ. ಅದು ಬಿಡಲು ಮನಸ್ಸಿಲ್ಲದ ಗ್ರೂಪ್ ಕೂಡ ಆಗಿರಬಹುದು. ಆ ಗ್ರೂಪ್‌ನ ಪುಟದಲ್ಲಿ ಯಾರೇ ಪೋಸ್ಟ್ ಮಾಡಿದರೂ ನಿಮಗೆ ನೋಟಿಫಿಕೇಶನ್ ಬರುತ್ತದೆ. ಇದನ್ನು ತಡೆಯಲು ಎರಡು ವಿಧಾನಗಳಿವೆ. ಒಂದನೆಯದು ಆ ಗ್ರೂಪ್‌ನ ಪುಟಕ್ಕೆ ಹೋಗುವುದು ಮತ್ತು ಗ್ರೂಪ್‌ನ ಕವರ್ ಫೋಟೋದ ಕೆಳ-ಬಲಭಾಗದಲ್ಲಿ ನೋಟಿಫಿಕೇಶನ್ಸ್ ಎಂಬ ಬಟನ್ ಇರುತ್ತದೆ. ಅದನ್ನು ಕ್ಲಿಕ್ ಮಾಡಿದರೆ All Posts, Friends Posts ಮತ್ತು Off ಎಂಬ ಮೆನು ಕಾಣಿಸುತ್ತದೆ. ನಿಮಗೆ ಬೇಕಾಗಿರುವುದನ್ನು ಕ್ಲಿಕ್ ಮಾಡಿ. ಗ್ರೂಪ್ ಅಥವಾ ಪುಟವೇ ನಿಮಗಿಷ್ಟವಿಲ್ಲವೆಂದಾದರೆ, ಕವರ್ ಫೋಟೋದ ಕೆಳಗೆ ಬಲ ತುದಿಯಲ್ಲಿ ಚಕ್ರದ (ಗಿಯರ್) ಐಕಾನ್ ಇರುವ ಬಟನ್ ಇರುತ್ತದೆ. ಅದು ಸೆಟ್ಟಿಂಗ್ಸ್ ಎಂಬುದರ ಸೂಚನೆ. ಅದನ್ನು ಕ್ಲಿಕ್ ಮಾಡಿದಾಗ ಡ್ರಾಪ್‌ಡೌನ್ ಮೆನು ಕಾಣಿಸಿಕೊಳ್ಳುತ್ತದೆ, ತಳ ಭಾಗದಲ್ಲಿ, Leave Group ಎಂಬ ಬಟನ್ ಕ್ಲಿಕ್ ಮಾಡಿದರಾಯಿತು.

ಫೇಸ್‌ಬುಕ್‌ನಲ್ಲಿ ಟ್ಯಾಗ್ ಮಾಡಿದರೆ ಏನು ಮಾಡುತ್ತೀರಿ?

ಮಾಹಿತಿ@ತಂತ್ರಜ್ಞಾನ: ಅವಿನಾಶ್ ಬಿ. (ಜನವರಿ 20, 2014)
ಸಾಮಾಜಿಕ ಜಾಲ ತಾಣಗಳಲ್ಲಿ ಯಾರ್ಯಾರೋ ಫ್ರೆಂಡ್ ಆಗ್ತಾರೆ, ದೂರದಲ್ಲೆಲ್ಲೋ ಇದ್ದವರು ಆತ್ಮೀಯರಾಗಿಬಿಡುತ್ತಾರೆ, ನಿಮ್ಮ ಪೋಸ್ಟ್‌ಗಳಿಗೆ ಕಾಮೆಂಟ್ ಮಾಡುತ್ತಾರೆ, ಒಂದೊಳ್ಳೆಯ ಚರ್ಚೆ ನಡೆಯುತ್ತದೆ. ಸಮಾಜದ ಆಗುಹೋಗುಗಳ ಬಗ್ಗೆ, ಒಳಿತು ಕೆಡುಕುಗಳ ಬಗ್ಗೆ ಪರ-ವಿರೋಧ ಚರ್ಚೆಯಾಗುತ್ತದೆ ಮತ್ತು ಅಲ್ಲೊಂದು ಅವಾಸ್ತವಿಕ ಸಾಮಾಜಿಕ ಜಗತ್ತು ಸೃಷ್ಟಿಯಾಗಿರುತ್ತದೆ.

ಇಷ್ಟೆಲ್ಲಾ ಆಗುವ ಹೊತ್ತಿಗೆ, ಯಾವಾಗ ಫೋಟೋಗಳನ್ನೂ ಸಾಮಾಜಿಕ ತಾಣದಲ್ಲಿ ಹಂಚಿಕೊಳ್ಳುವ ಆಯ್ಕೆ ಬಂದಿತೋ, ಆಗಿನಿಂದ ಫೇಸ್‌ಬುಕ್ ಬಳಕೆದಾರರದು ಒಂದೇ ವೇದನೆ, ರೋದನೆ… ಫೋಟೋಗಳಿಗೆ ಟ್ಯಾಗ್ ಮಾಡಿದರೆ ಜೋಕೆ ಎಂಬ ಸಾರಾಂಶವುಳ್ಳ ಎಚ್ಚರಿಕೆ. ಈ ಎಚ್ಚರಿಕೆ ಸಾತ್ವಿಕವಾಗಿಯೂ ಇರಬಹುದು, ವ್ಯಂಗ್ಯವಾಗಿಯೂ ಇರಬಹುದು, ರೋಷಭರಿತವಾಗಿಯೂ ಇರಬಹುದು.

ಕಾರಣವಿಷ್ಟೆ. ಯಾರಾದರೂ ತಮ್ಮ ಟೈಮ್‌ಲೈನ್‌ನಲ್ಲಿ ತಮಗಿಷ್ಟವಾದ ಫೋಟೋ ಅಪ್‌ಲೋಡ್ ಮಾಡುತ್ತಾರೆ. ಅಷ್ಟೇ ಆದರೆ ಸುಮ್ಮನಿರಬಹುದಿತ್ತು. ಆದರೆ, ಆ ಫೋಟೋಗಳನ್ನು ಅಪ್‌ಲೋಡ್ ಮಾಡುವಾಗಲೇ, “ನಿಮ್ಮ ಮಿತ್ರರನ್ನು ಟ್ಯಾಗ್ ಮಾಡಿ” ಎನ್ನುವ ಆಯ್ಕೆಯೊಂದನ್ನು ಒತ್ತಿ, ಫ್ರೆಂಡ್ಸ್ ಪಟ್ಟಿಯಲ್ಲಿರುವ ಹಲವಾರು ಹೆಸರುಗಳನ್ನು ಸೇರಿಸುತ್ತಾ ಹೋಗುತ್ತಾರೆ.

ಇದರ ಬಗ್ಗೆ ಒಂದು ನೋಟಿಫಿಕೇಶನ್ (ಸೂಚನಾ ಸಂದೇಶ) ಆಯಾ ಹೆಸರಿನವರಿಗೆ ಹೋಗುತ್ತದೆ. ಅಷ್ಟೇ ಆದರೂ ತೊಂದರೆಯಿರಲಿಲ್ಲ. ಅವರ ಸ್ನೇಹಿತರು ಸಾವಿರ ಸಾವಿರ ಸಂಖ್ಯೆಯಲ್ಲಿ ಆ ಫೋಟೋ ಲೈಕ್ ಮಾಡಿದರೆ, ಕಾಮೆಂಟ್ ಮಾಡಿದರೆ, ಬೈದಾಡಿದರೆ… ಹೊಗಳಿದರೆ… ಎಲ್ಲದಕ್ಕೂ ನೋಟಿಫಿಕೇಶನ್ ಬರುತ್ತಲೇ ಇರುತ್ತವೆ! ಮೊಬೈಲ್‌ನಲ್ಲಿ ಫೇಸ್‌ಬುಕ್ ಲಾಗಿನ್ ಆಗಿದ್ದರಂತೂ ಫೇಸ್‌ಬುಕ್ ಸೂಚನಾ ಸಂದೇಶ ಬಂತೆಂಬ ಧ್ವನಿ ಪದೇ ಪದೇ ಗುಂಯ್‌ಗುಡುತ್ತಲೇ ಇರುತ್ತದೆ. ಕಚೇರಿಯಲ್ಲಿದ್ದಾಗ ಇದರಷ್ಟು ಕಿರಿಕಿರಿ ಬೇರೆ ಇರಲಾರದು. ಸಂಬಂಧವೇ ಇಲ್ಲದ ಫೋಟೋಗಳಿಗೆ ಟ್ಯಾಗ್ ಆಗಿದ್ದನ್ನು ನೋಡಿದಾಗ ಮನಸ್ಸು ಆಕ್ರೋಶಿತವಾಗುತ್ತದೆ, ವಿಶೇಷವಾಗಿ ಮಿತ್ರವರ್ಗದ ಸಂಖ್ಯೆ ಹೆಚ್ಚಿರುವ ಫೇಸ್‌ಬುಕ್ ಬಳಕೆದಾರರಿಗೆ.

ಈ ‘ತಾಗಿಸುವ’ ಪ್ರಕ್ರಿಯೆಯಿಂದಾಗಿಯೇ ಹಲವು ‘ಫೇಸ್‌ಬುಕ್’ ಸ್ನೇಹಗಳು ಮುರಿದುಬಿದ್ದದ್ದೂ ಇವೆ ಎಂದರೆ ಖಂಡಿತಾ ಉತ್ಪ್ರೇಕ್ಷೆಯಾಗಲಾರದು. ಫೇಸ್‌ಬುಕ್ಕಿಗರ ಮೊರೆಗೆ ಓಗೊಟ್ಟಿರುವ ಫೇಸ್‌ಬುಕ್, ಟ್ಯಾಗ್ ಮಾಡದಂತೆ ಪೂರ್ತಿಯಾಗಿ ತಡೆಯುವ ಆಯುಧ ನೀಡಿಲ್ಲವಾದರೂ, ಟ್ಯಾಗ್ ಮಾಡುವವರಿಗೆ ಸುಲಭವಾಗಿ ಶಾಸ್ತಿ ಮಾಡುವ ಆಯ್ಕೆಯೊಂದನ್ನು ತೀರಾ ಇತ್ತೀಚೆಗೆ ನೀಡಿದೆ.

ಮೊದಲು ನೀವು ಮಾಡಬೇಕಾದದ್ದೆಂದರೆ, ಫೇಸ್‌ಬುಕ್‌ನ ಸೆಟ್ಟಿಂಗ್ಸ್‌ನಲ್ಲಿ, ಪ್ರೈವೆಸಿ ಸೆಟ್ಟಿಂಗ್ಸ್ ಎಂಬಲ್ಲಿ ಹೋಗಿ. ಎಡಭಾಗದಲ್ಲಿ Timeline and Tagging ಅಂತ ಇರುತ್ತದೆ. ಅದರಲ್ಲಿ ಸಾಕಷ್ಟು ಆಯ್ಕೆಗಳು ಕಾಣಿಸಿಕೊಳ್ಳುತ್ತವೆ. Who can add things to my timeline? ಎಂಬುದರ ಅಡಿ, ಯಾರು ನಿಮ್ಮ ಟೈಮ್‌ಲೈನ್‌ಗೆ ಪೋಸ್ಟ್ ಮಾಡಬಹುದು ಅಂತ ಇರುವಲ್ಲಿ “Only Me” ಅಥವಾ “Friends” ಆಯ್ಕೆ ಮಾಡಿ. ಎರಡನೆಯದು, ಈ ಪೋಸ್ಟನ್ನು ರಿವ್ಯೂ ಮಾಡಬೇಕೇ ಎಂಬ ಆಯ್ಕೆ. ಅದನ್ನು “ಆನ್” ಇರುವಂತೆ ನೋಡಿಕೊಳ್ಳಿ. ಅಲ್ಲೇ ಕೆಳಗೆ, ‘ಜನ ಟ್ಯಾಗ್ ಮಾಡಿದರೆ ಹೇಗೆ ನಿಭಾಯಿಸಲಿ’ ಎಂಬ ಶೀರ್ಷಿಕೆಯಲ್ಲಿ, ಫೇಸ್‌ಬುಕ್‌ನಲ್ಲಿ ನಿಮ್ಮ ಹೆಸರಿನ ಟ್ಯಾಗ್ ಕಾಣಿಸಿಕೊಳ್ಳುವ ಮೊದಲು ಮರುವಿಮರ್ಶಿಸುವ (review) ಆಯ್ಕೆಯನ್ನು ‘ON’ ಮಾಡಿಕೊಳ್ಳಿ. ಇಷ್ಟು ಪೂರ್ವ ತಯಾರಿ.

ಈಗ, ನಿಮ್ಮನ್ನು ಯಾವುದೋ ಫೋಟೋಗೆ ತಾಗಿಸಿದ್ದಾರೆ (ಟ್ಯಾಗ್ ಮಾಡಿದ್ದಾರೆ) ಅಂತ ನಿಮಗೆ ಸೂಚನೆ ಬಂದೇ ಬರುತ್ತದೆ. ಆ ಸೂಚನಾ ಸಂದೇಶವನ್ನು ಕ್ಲಿಕ್ ಮಾಡಿದರೆ ನೇರವಾಗಿ ಟೈಮ್‌ಲೈನ್ ಮರುಪರಿಶೀಲಿಸುವ ಆಯ್ಕೆ ದೊರೆಯುತ್ತದೆ. ಅಲ್ಲಿ ಕಾಣಿಸುವ ಎರಡು ಬಟನ್‌ಗಳಲ್ಲಿ ‘Hide’ ಒತ್ತಿದರೆ, ಈ ಚಿತ್ರವು ನಿಮ್ಮ ಟೈಮ್‌ಲೈನ್‌ನಿಂದ (ಟೈಮ್‌ಲೈನ್ ಎಂದರೆ, ನಿಮ್ಮದೇ ವಾಲ್, ನೀವು ಏನನ್ನು ಪೋಸ್ಟ್ ಮಾಡುತ್ತೀರೋ, ಅವೆಲ್ಲವೂ ಕಾಣಿಸಿಕೊಳ್ಳುವ ಸ್ಥಳ) ಮರೆಯಾಗುತ್ತದೆ. ಬೇರೆಯವರಿಗೂ ಯಾರಿಗೂ ಕಾಣಿಸುವುದಿಲ್ಲ. Hide ಮಾಡಿದ ತಕ್ಷಣ Report/Remove Tag ಎಂಬ ಕೊಂಡಿಯೊಂದು ಗೋಚರಿಸುತ್ತದೆ.

ನೀವು ಕರುಣಾಮಯಿಯಾದರೆ, ಮೊದಲ ಆಯ್ಕೆ (I want to remove this tag) ಕ್ಲಿಕ್ ಮಾಡಿ ಸುಮ್ಮನಿರಬಹುದು. ಅದಕ್ಕೆ ಬರುವ ಯಾವುದೇ ಲೈಕ್‌ಗಳು ಅಥವಾ ಕಾಮೆಂಟ್‌ಗಳ ಬಗ್ಗೆ ನೋಟಿಫಿಕೇಶನ್ ನಿಮ್ಮ ಬಳಿ ಸುಳಿಯುವುದಿಲ್ಲ. ಕಂಟಿನ್ಯೂ ಅಂತ ಒತ್ತಿದರೆ, ಮತ್ತೆ ಮೂರು ಆಯ್ಕೆಗಳು ದೊರೆಯುತ್ತವೆ – ಟ್ಯಾಗ್ ತೆಗೆಯುವ, ಈ ಪೋಸ್ಟನ್ನು ತೆಗೆಯಲು ನಿಮ್ಮ ಸ್ನೇಹಿತರಿಗೆ ಸೂಚನೆ ನೀಡುವ ಮತ್ತು ನೇರವಾಗಿ ಬ್ಲಾಕ್ ಮಾಡುವ ಆಯ್ಕೆಗಳವು. ಬೇಕಾದುದನ್ನು ಆಯ್ದುಕೊಳ್ಳಿ.

ಮೇಲೆ ಹೇಳಿದ ಮೊದಲ ಆಯ್ಕೆಯ ಬಳಿಕ, ಉಳಿದವು ನಿಜಕ್ಕೂ ನಿಮಗೆ ಸಿಕ್ಕಾಪಟ್ಟೆ ಕೋಪ ಬಂದಿದ್ದರೆ ಪ್ರಯೋಗಿಸಲು ಇರುವಂಥವು. ಕಿರಿಕಿರಿಯುಂಟು ಮಾಡುವ, ಅಸಭ್ಯ, ದ್ವೇಷಪೂರಿತ, ಹಾನಿಕಾರಕ ಫೋಟೋಗಳ ಬಗ್ಗೆ ನೇರವಾಗಿ ಫೇಸ್‌ಬುಕ್‌ಗೆ ಸುಳಿವು ನೀಡುವುದಕ್ಕಾಗಿಯೇ ಇವು ಇವೆ. ಅವುಗಳನ್ನು ಕ್ಲಿಕ್ ಮಾಡಿದರೆ, ಫೇಸ್‌ಬುಕ್ಕೇ ಅಂತಹಾ ವ್ಯಕ್ತಿಯ ಮೇಲೆ ಕ್ರಮ ಕೈಗೊಳ್ಳುವ ಸಾಧ್ಯತೆಗಳೂ ಇವೆ.

ಟ್ಯಾಗ್ ಮಾಡದಂತೆ ತಡೆಯುವ ಯಾವುದೇ ಆಯುಧವನ್ನು ಫೇಸ್‌ಬುಕ್ ಇನ್ನೂ ಕೊಟ್ಟಿಲ್ಲವಾದರೂ, ಟ್ಯಾಗ್ ಮಾಡಿದ ವ್ಯಕ್ತಿಗೆ ನೇರವಾಗಿ ಮನವಿ ಮಾಡುವ, ಎಚ್ಚರಿಕೆ ನೀಡುವ ಆಯ್ಕೆ ದೊರೆತಿದೆ.

ನಿಮ್ಮ ಫೇಸ್‌ಬುಕ್ ಪೋಸ್ಟ್‌ಗಳನ್ನು ಈಗ ಎಡಿಟ್ ಕೂಡ ಮಾಡಬಹುದು

ವಿಜಯ ಕರ್ನಾಟಕ ಅಂಕಣ, ಮಾಹಿತಿ @ ತಂತ್ರಜ್ಞಾನ, ಅಕ್ಟೋಬರ್ 07, 2013

ದೇಶದಲ್ಲಿ ಅಂತರ್ಜಾಲ ಕ್ರಾಂತಿಯಾಗಿ ಬ್ಲಾಗ್, ಓರ್ಕುಟ್ ಮುಂತಾದ ವಿಶ್ವಾದ್ಯಂತವಿರುವ ಜನರನ್ನು ಬೆಸೆಯುವ ತಾಣಗಳ ಬಳಿಕ ಇತ್ತೀಚೆಗೆ ನಮ್ಮ ನಿಮ್ಮೆಲ್ಲರನ್ನು ಸಂಪೂರ್ಣವಾಗಿ ‘ಬ್ಯುಸಿ’ಯಾಗಿಸುತ್ತಿರುವುದು ಫೇಸ್‌ಬುಕ್ ಎಂಬ ಸಾಮಾಜಿಕ ಜಾಲ ತಾಣ. ವಯಸ್ಕರು, ಹರೆಯದವರು, ಎಳೆಯರೆನ್ನದೆ ಎಲ್ಲರನ್ನೂ ಸೆಳೆದುಕೊಂಡುಬಿಟ್ಟಿದೆ ಇದು. ಈ ಜಾಲ ತಾಣದಲ್ಲಿ ವಿಶ್ವಾದ್ಯಂತ ಸುಮಾರು 128 ಕೋಟಿ (ಅಂದರೆ ಭಾರತದ ಒಟ್ಟಾರೆ ಜನಸಂಖ್ಯೆಗೂ ಹೆಚ್ಚು) ಮಂದಿ ಸಕ್ರಿಯ ಸದಸ್ಯರಿದ್ದಾರೆ.

ಆದರೆ ಈ ತಾಣದಲ್ಲಿ ಮೊನ್ನೆ ಮೊನ್ನೆಯವರೆಗೂ ನಾವು ಮಾಡಿರುವ ಕಾಮೆಂಟುಗಳನ್ನಷ್ಟೇ ತಿದ್ದುಪಡಿ ಮಾಡಲು ನಮಗೆ ಅವಕಾಶವಿತ್ತು. ಈಗ ನಮ್ಮ ಸ್ಟೇಟಸ್ (ನಾವು ನಮ್ಮ ವಾಲ್‌ನಲ್ಲಿ ಮಾಡಿರುವ ಪೋಸ್ಟ್‌ಗಳು) ಅಪ್‌ಡೇಟ್‌ಗಳ ತಿದ್ದುಪಡಿಗೂ ಫೇಸ್‌ಬುಕ್ ಅವಕಾಶ ಮಾಡಿಕೊಟ್ಟಿದೆ. ಮೊದಲಾಗಿದ್ದರೆ, ಏನಾದರೂ ತಪ್ಪು ಬರೆದಿದ್ದರೆ, ಅಥವಾ ಅದು ಇನ್ನೊಬ್ಬರಿಗೆ ನೋವುಂಟು ಮಾಡುವಂತಿದ್ದರೆ, ಇಡೀ ಪೋಸ್ಟನ್ನು ಡಿಲೀಟ್ ಮಾಡಿ, ಸರಿಪಡಿಸಿ ಮತ್ತೆ ಹೊಸದಾಗಿ ಪೋಸ್ಟ್ ಮಾಡಬೇಕಾಗುತ್ತಿತ್ತು. ಅಷ್ಟು ಹೊತ್ತಿಗೆ ನಿಮ್ಮ ಪೋಸ್ಟನ್ನು ಸಾಕಷ್ಟು ಮಂದಿ ಲೈಕ್ ಮಾಡಿರುತ್ತಾರೆ ಅಥವಾ ಕಾಮೆಂಟ್ ಮಾಡಿರುತ್ತಾರೆ. ಆದರೆ ಇನ್ನು ಹಾಗಿಲ್ಲ. ಮಾಡಿದ ಪೋಸ್ಟನ್ನು ಯಾವಾಗ ಬೇಕಾದರೂ, ಎಷ್ಟು ಬಾರಿ ಬೇಕಾದರೂ ತಿದ್ದಬಹುದು.

ಎಡಿಟ್ ಮಾಡಬೇಕಿದ್ದರೆ ಹೀಗೆ ಮಾಡಿ: ಟೈಮ್‌ಲೈನ್ ಎಂದೂ ಕರೆಯಲಾಗುವ ನಿಮ್ಮ ವಾಲ್‌ಗೆ ಹೋಗಿ. ಯಾವುದೇ ಪೋಸ್ಟ್‌ನ ಬಲ ಮೇಲ್ಭಾಗದಲ್ಲಿ v ಆಕಾರದ ಚಿಹ್ನೆಯೊಂದು ಕಾಣಿಸುತ್ತದೆ. ಅದನ್ನು ಕ್ಲಿಕ್ ಮಾಡಿ (ಚಿತ್ರ ನೋಡಿ). ಆಗ ಹಲವು ಆಯ್ಕೆಗಳು ಗೋಚರಿಸುತ್ತವೆ. ಅದರಲ್ಲಿ ಎಡಿಟ್ ಎಂಬುದನ್ನು ಕ್ಲಿಕ್ ಮಾಡಿದರೆ, ನಿಮ್ಮ ಪೋಸ್ಟನ್ನು ಸರಿಪಡಿಸಬಹುದಾಗಿದೆ. ಆದರೆ, ಈ ಎಡಿಟ್ ಆಯ್ಕೆಯು ಫೇಸ್‌ಬುಕ್ ಪುಟಗಳಿಗೆ (ಪೇಜಸ್) ಲಭ್ಯವಿಲ್ಲ.

ಹೀಗೆ ತಿದ್ದುಪಡಿಯಾದ ಪೋಸ್ಟ್‌ನಲ್ಲಿ ಒಂದು ಕಡೆ ‘ಎಡಿಟೆಡ್’ ಅಂತ ಕಾಣುತ್ತದೆ. ಏನೇನು ಎಡಿಟ್ ಮಾಡಿದ್ದೀರಿ ಎಂಬುದನ್ನು ನೋಡಬೇಕಿದ್ದರೆ ಈ ಎಡಿಟೆಡ್ ಎಂದಿರುವುದನ್ನು ಕ್ಲಿಕ್ ಮಾಡಿದಾಗ, ಎಡಿಟ್ ಆಗಿರುವ ಹಿಸ್ಟರಿ ತೋರುತ್ತದೆ.

ಇಷ್ಟು ಮಾತ್ರವಲ್ಲದೆ, ಅದರಲ್ಲಿರುವ ಇತರ ಆಯ್ಕೆಗಳನ್ನೂ ಕೂಡ ನೀವು ಬಳಸಿಕೊಳ್ಳಬಹುದು. ಅಂದರೆ, ಯಾರಾದರೂ ನಿಮ್ಮ ವಾಲ್‌ನಲ್ಲಿ ಸಂಬಂಧವಿಲ್ಲದ ಮಾಹಿತಿಯನ್ನು ಪೋಸ್ಟ್ ಮಾಡಿದರೆ, ಅಥವಾ ಅನಗತ್ಯ ಲಿಂಕ್‌ಗಳನ್ನು ನೀಡಿದ್ದರೆ, ನೀವು ಅದನ್ನು ಟೈಮ್‌ಲೈನ್‌ನಲ್ಲಿ ಕಾಣಿಸದಂತೆ (Hide from Timeline) ಮಾಡಬಹುದು ಅಥವಾ ‘ಡಿಲೀಟ್’ ಮಾಡುವ ಮೂಲಕ ಅದನ್ನು ಅಳಿಸಬಹುದು. ತೀರಾ ಅನರ್ಥಕಾರಿ ಸಂದೇಶಗಳಿದ್ದರೆ, ಸ್ಪ್ಯಾಮ್ ಎಂದು ಗುರುತು ಮಾಡಬಹುದು. ಹೀಗೆ ಮಾಡಿದರೆ ನಿಮ್ಮ ಸ್ನೇಹಿತ ವರ್ಗದವರಿಗೆ ನಿಮ್ಮ ಟೈಮ್‌ಲೈನ್‌ನಲ್ಲಿ ಈ ಅನಗತ್ಯ ಸಂದೇಶಗಳು ಕಾಣಿಸುವುದಿಲ್ಲ.

128 ಕೋಟಿ ಸದಸ್ಯರನ್ನೂ ಒಂದೇ ಕಡೆ ನೋಡಿ!
ಈಗ ಫೇಸ್‌ಬುಕ್‌ನಲ್ಲಿ ದೇಶ-ವಿದೇಶದಲ್ಲಿ ಸಕ್ರಿಯವಾಗಿರುವ 128 ಕೋಟಿಗೂ ಹೆಚ್ಚು ಮಂದಿ ಪರಸ್ಪರ ‘ಫ್ರೆಂಡ್‌ಶಿಪ್’ ಮೂಲಕ ಬೆಸೆದುಕೊಂಡಿದ್ದಾರೆ. ಇವರೆಲ್ಲರೂ ಆನ್‌ಲೈನ್ ಸಮಾಜದ ಸದಸ್ಯರು. ಆದರೆ ಎಲ್ಲರನ್ನೂ ಒಂದೇ ಕಡೆ ನೋಡುವಂತಾಗುವುದು ಇದುವರೆಗೆ ಸಾಧ್ಯವಾಗಿರಲಿಲ್ಲ… ಇತ್ತೀಚಿನವರೆಗೂ.

ಈಗ ಫ್ರೀಲ್ಯಾನ್ಸ್ ವಿನ್ಯಾಸಕಾರ್ತಿ ನತಾಲಿಯಾ ರೋಜಸ್ ಎಂಬವರು ‘ದಿ ಫೇಸಸ್ ಆಫ್ ಫೇಸ್‌ಬುಕ್’ ಎಂಬ ಆನ್‌ಲೈನ್ ಪುಟವನ್ನು ರೂಪಿಸಿ ಫೇಸ್‌ಬುಕ್‌ನ ಎಲ್ಲ ಸದಸ್ಯರ ಮುಖಗಳನ್ನು ಒಂದೆಡೆ ತಂದಿದ್ದಾರೆ. http://thefacesoffacebook.com/ ಎಂಬ ತಾಣಕ್ಕೆ ಹೋಗಿ ನೋಡಿ. ಮೌಸ್‌ನ ಕರ್ಸರ್ (ಪಾಯಿಂಟರ್) ಆಚೀಚೆ ಸರಿಸಿದಾಗ ಪುಟ್ಟ ಚಿತ್ರಗಳಲ್ಲಿ ಸಂಖ್ಯೆಗಳು ಕ್ರಮಾಗತವಾಗಿ ಕಾಣಿಸುತ್ತವೆ. ಮೌಸ್‌ನ ಸ್ಕ್ರಾಲ್ ವೀಲ್ ಮೂಲಕ ಝೂಮ್ ಮಾಡಿದರೆ, ಪ್ರೊಫೈಲ್ ಚಿತ್ರಗಳನ್ನು ಸರಿಯಾಗಿ ನೋಡಬಹುದು. ಯಾವುದೇ ಚಿತ್ರ ಕ್ಲಿಕ್ ಮಾಡಿದರೆ, ಅದು ನಿಮ್ಮ ಫೇಸ್‌ಬುಕ್ ಲಾಗಿನ್ ಐಡಿ-ಪಾಸ್ವರ್ಡ್ ಕೇಳುತ್ತದೆ. ಲಾಗಿನ್ ಆದರೆ, ಆ ಪ್ರೊಫೈಲ್ ವೀಕ್ಷಿಸಬಹುದು.

ಈ ಪ್ರಾಜೆಕ್ಟ್‌ನಲ್ಲಿ ಫೇಸ್‌ಬುಕ್‌ನ ಒಂದೂ ಕಾಲು ಶತಕೋಟಿಗೂ ಮಿಗಿಲಾದ ಜನರ ಮುಖಗಳು ಒಂದೇ ಕಡೆ ನೋಡಸಿಗುತ್ತವೆ. ಪಕ್ಕನೇ ನೋಡಿದರೆ, ಟೀವಿಯಲ್ಲಿ ಸಿಗ್ನಲ್ ಇಲ್ಲದಿದ್ದಾಗ ಚುಕ್ಕಿಗಳು ಕಾಣಿಸುತ್ತಿರುತ್ತದಲ್ಲವೇ? ಆ ರೀತಿ ಇರುತ್ತದೆ. ಝೂಮ್ ಮಾಡಿದರೆ ಮುಖಗಳು ದೊಡ್ಡದಾಗಿ ಕಾಣಿಸುತ್ತವೆ. ಮೌಸ್‌ನ ಕರ್ಸರ್ ಅನ್ನು ಯಾವುದೇ ಫೋಟೋದ ಮೇಲೆ ರೋಲ್ ಮಾಡಿದರೆ, ಹೆಸರು ಕೂಡ ಗೋಚರಿಸುತ್ತದೆ. ಒಂದೇ ವೆಬ್ ಪುಟದಲ್ಲಿ ನೂರಿಪ್ಪತ್ತೆಂಟು ಕೋಟಿ ಜನರು!

ಫೇಸ್‌ಬುಕ್ ಮೆಸೆಂಜರ್ ಮೂಲಕ ಸುಲಭ, ಕ್ಷಿಪ್ರ ವಾಯ್ಸ್ ಮೆಸೇಜ್

ವಿಜಯ ಕರ್ನಾಟಕ ಅಂಕಣ: ಮಾಹಿತಿ @ ತಂತ್ರಜ್ಞಾನ – 33 – ಏಪ್ರಿಲ್ 22, 2013
ಇಂಟರ್ನೆಟ್ ಎಂಬ ಅದ್ಭುತವು ಕೈಗೆಟುಕತೊಡಗಿರುವಂತೆಯೇ ಸಾಮಾಜಿಕ ಜಾಲತಾಣ ‘ಫೇಸ್‌ಬುಕ್’ ಗ್ರಾಮೀಣ ಪ್ರದೇಶಗಳಿಗೂ ವ್ಯಾಪಿಸತೊಡಗಿದೆ. ಹೀಗಾಗಿ ಹೆಚ್ಚಿನವರೀಗ ಸದಾಕಾಲ ‘ಆನ್‌ಲೈನ್’. ಫೇಸ್‌ಬುಕ್ ಬಳಕೆಯಿಂದಾಗಿ ಒಂದಿಷ್ಟು ಮಾಹಿತಿ ತಿಳಿದುಕೊಳ್ಳುವುದು, ಸ್ನೇಹಿತ ವರ್ಗದ ವೃದ್ಧಿಯ ಹೊರತಾಗಿ ಒಂದು ಲಾಭವೂ ಇದೆ. ಇದು ಫೇಸ್‌ಬುಕ್ ಬಳಕೆದಾರರಿಗೆ ಸಂತಸದ ಸುದ್ದಿ.

ಅದೆಂದರೆ, ಫೇಸ್‌ಬುಕ್ ಮೆಸೆಂಜರ್ (Facebook Messenger) ಎಂಬ ಸಂದೇಶವಾಹಕ ಅಪ್ಲಿಕೇಶನ್ ಒಂದನ್ನು ನಿಮ್ಮ ಕಂಪ್ಯೂಟರಿನಲ್ಲಿ ಅಥವಾ ಸ್ಮಾರ್ಟ್‌ಫೋನ್‌ಗಳಲ್ಲಿ ಸ್ಥಾಪಿಸಿಕೊಂಡಲ್ಲಿ, ದೇಶ-ವಿದೇಶಗಳಲ್ಲಿರುವ ನಿಮ್ಮ ಸ್ನೇಹಿತರ ಜತೆಗೆ ಉಚಿತವಾಗಿ ಮಾತನಾಡಬಹುದು. VoIP (ವಾಯ್ಸ್ ಓವರ್ ಇಂಟರ್ನೆಟ್ ಪ್ರೊಟೋಕಾಲ್) ಎಂಬ ತಂತ್ರಜ್ಞಾನದ ಮೂಲಕ ಇದು ಸಾಧ್ಯ. ಅಂದರೆ, ಫೇಸ್‌ಬುಕ್ ಮೆಸೆಂಜರ್‌ನಲ್ಲಿ ನಿಮ್ಮ ಯೂಸರ್ ನೇಮ್ ಹಾಗೂ ಪಾಸ್‌ವರ್ಡ್ ನಮೂದಿಸಿದರೆ, ಇಂಟರ್ನೆಟ್ ಸಂಪರ್ಕದ ಮೂಲಕವಾಗಿ ಪರ ಊರಿನಲ್ಲಿರುವವರೊಂದಿಗೆ ಉಚಿತವಾಗಿ (ಇಂಟರ್ನೆಟ್ ಸಂಪರ್ಕಕ್ಕೆ ಮಾತ್ರ ವೆಚ್ಚ ತಗುಲುತ್ತದೆ, ನಿಮ್ಮ ಡೇಟ ಪ್ಲ್ಯಾನ್ ಆಧಾರದಲ್ಲಿ) ಮಾತನಾಡಬಹುದು.

ಆದರೆ, ಪೂರ್ತಿ ಸಂತೋಷ ಪಡಬೇಕಿದ್ದರೆ ನಾವಿನ್ನೂ ಕಾಯಬೇಕು. ಈ ವ್ಯವಸ್ಥೆಯು ಈಗ ಅಮೆರಿಕದ ಆಂಡ್ರಾಯ್ಡ್ ಬಳಕೆದಾರರಿಗಷ್ಟೇ ಲಭ್ಯವಿದ್ದು, ಪರೀಕ್ಷಾ ಹಂತದಲ್ಲಿದೆ. ಕೆಲವೇ ದಿನಗಳಲ್ಲಿ ಭಾರತಕ್ಕೂ ಬರಲಿದೆ. ಹಾಗಿದ್ದರೆ ಅದುವರೆಗೆ ಏನು ಮಾಡೋಣ ಎಂದುಕೊಂಡಿರಾ? ಚಾಟಿಂಗ್ ಅಂತೂ ಮಾಡುತ್ತಿರಬಹುದು. ಅದರ ಹೊರತಾಗಿ, ವಾಯ್ಸ್ ಮೆಸೇಜ್ ಕಳುಹಿಸಬಹುದು. ಅಂದರೆ ನೀವು ಹೇಳಬೇಕಾಗಿರುವುದನ್ನು ರೆಕಾರ್ಡ್ ಮಾಡಿ ಅದನ್ನು ತಕ್ಷಣವೇ ಆಪ್ತರಿಗೆ ತಲುಪಿಸಬಹುದು. ಅದಕ್ಕೆ ಹೀಗೆ ಮಾಡಿ:

ಮೊದಲು Facebook Messenger ಎಂಬ ಕಿರುತಂತ್ರಾಂಶವನ್ನು (ಅಪ್ಲಿಕೇಶನ್) ನಿಮ್ಮ ಐಫೋನ್, ಆಂಡ್ರಾಯ್ಡ್, ಬ್ಲ್ಯಾಕ್‌ಬೆರಿ ಮೊಬೈಲ್ ಸಾಧನಗಳಲ್ಲಿ ಆಯಾ ಅಪ್ಲಿಕೇಶನ್ ಸ್ಟೋರ್‌ನಿಂದ ಅಳವಡಿಸಿಕೊಳ್ಳಿ. ಅದಕ್ಕೆ ಫೇಸ್‌ಬುಕ್ ಐಡಿ ಮೂಲಕ ಲಾಗಿನ್ ಆಗಿ. ನಿಮ್ಮ ಸ್ನೇಹಿತರ ಪಟ್ಟಿ ಕಾಣಿಸಿಕೊಳ್ಳುತ್ತದೆಯಲ್ಲವೇ? ಅದರಲ್ಲಿ ನೀವು ಯಾರಿಗೆ ಸಂದೇಶ ಕಳುಹಿಸಬೇಕೋ, ಅವರ ಹೆಸರಿನ ಮುಂದೆ ಕ್ಲಿಕ್ ಮಾಡಿ. ಕೆಳಗಡೆ ಸಂದೇಶ ಬರೆಯುವ ಬಾಕ್ಸ್‌ನ (Write text here ಅಂತಿರುತ್ತದೆ) ಎಡಭಾಗದಲ್ಲಿ ಪ್ಲಸ್ (+) ಗುರುತು ಒತ್ತಿದರೆ, ಅಲ್ಲಿ Choose Photo, Take Photo, Image Search ಮತ್ತು Record Voice ಎಂಬ ನಾಲ್ಕು ಆಯ್ಕೆಗಳಿರುತ್ತವೆ.

ಇದನ್ನು ನೀವು ನಿಮ್ಮ ಮೊಬೈಲ್ ಸಾಧನದಲ್ಲಿ ಇರುವ ಫೋಟೋಗಳನ್ನು ಕಳುಹಿಸಲು, ನಿಂತಲ್ಲೇ ನಿಮ್ಮ ಮೊಬೈಲ್ ಫೋನ್ ಕ್ಯಾಮರಾದಿಂದ ಒಂದು ಫೋಟೋ ತೆಗೆದು ಕಳುಹಿಸಲು ಬಳಸಬಹುದು. ಕೊನೆಯ Record Voice ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿದರೆ, ಕೆಂಪು ಗುಂಡಿ ಇರುವ ವೃತ್ತವೊಂದು ಕಾಣಿಸುತ್ತದೆ. ಆ ಕೆಂಪು ಗುಂಡಿಯನ್ನು ಒತ್ತಿ ಹಿಡಿಯುತ್ತಾ, ನಿಮ್ಮ ಸಂದೇಶವನ್ನು ಹೇಳಿ. ಬಳಿಕ ಕೆಂಪು ಬಟನ್ ಮೇಲಿಂದ ಬೆರಳು ತೆಗೆದು “Send” ಒತ್ತಿ ಬಿಡಿ. ನಿಮ್ಮ ಸ್ನೇಹಿತ-ಸ್ನೇಹಿತೆಯರು ಆನ್‌ಲೈನ್ ಇದ್ದರೆ, ಕೂಡಲೇ ಅವರಿಗೆ ನಿಮ್ಮ ಧ್ವನಿ ಸಂದೇಶ ದೊರೆಯುತ್ತದೆ. ಅವರು ಅದನ್ನು ತಮ್ಮ ಕಂಪ್ಯೂಟರ್ ಬ್ರೌಸರಿನ ಮೂಲಕವೂ ತೆರೆದು ಆಲಿಸಬಹುದು, ಫೋಟೋ ನೋಡಬಹುದು.

ಇನ್‌ಸ್ಟಂಟ್ ಮೆಸೇಜಿಂಗ್ (ಕ್ಷಿಪ್ರ ಸಂದೇಶ) ವ್ಯವಸ್ಥೆಯ ಅನುಕೂಲವಿದು. ತಕ್ಷಣ ಸಂದೇಶ ಅಥವಾ ಫೋಟೋ ರವಾನೆಯಾಗಿಬಿಡುತ್ತದೆ. ಫೇಸ್‌ಬುಕ್ ಮೆಸೆಂಜರ್ ಅಪ್ಲಿಕೇಶನ್ ಅನ್ನು ನೀವು ನಿಮ್ಮ ಡೆಸ್ಕ್‌ಟಾಪ್/ಲ್ಯಾಪ್‌ಟಾಪ್‌ಗಳಲ್ಲಿಯೂ ಬಳಸಬಹುದು (http://www.facebook.com/about/messenger).

ಚಾಟ್ ಹೆಡ್ಸ್
ಕೆಲವು ಆಂಡ್ರಾಯ್ಡ್ ಫೋನ್‌ಗಳ ಬಳಕೆದಾರರು ಅದೃಷ್ಟವಂತರು. ಫೇಸ್‌ಬುಕ್ ಮೆಸೆಂಜರ್‌ನಲ್ಲಿ ಚಾಟ್ ಹೆಡ್ಸ್ ಎಂಬ ವ್ಯವಸ್ಥೆಯೊಂದು ಕೆಲವು ಫೋನ್‌ಗಳಲ್ಲಿ (ಅಪ್‌ಡೇಟ್ ಆಗಿರುವ ಫೇಸ್‌ಬುಕ್ ಮೆಸೆಂಜರ್‌ನಲ್ಲಿ) ಲಭ್ಯವಿದೆ. ಸ್ನೇಹಿತರು ನಿಮಗೆ ಫೇಸ್‌ಬುಕ್ ಚಾಟ್ ಸಂದೇಶ ಕಳುಹಿಸಿದರೆ, ನೀವು ಆನ್‌ಲೈನ್ ಆಗಿದ್ದರೆ, ಅವರ ಪ್ರೊಫೈಲ್ ಚಿತ್ರವು ಒಂದು ಗುಳ್ಳೆಯ ರೂಪದಲ್ಲಿ ನಿಮ್ಮ ಮೊಬೈಲ್ ಸಾಧನದ ಸ್ಕ್ರೀನ್ ಮೇಲೆ ಗೋಚರಿಸುತ್ತದೆ. ಆ ಸಚಿತ್ರ ಗುಳ್ಳೆಯನ್ನು ಅತ್ತಿತ್ತ ಸರಿಸಬಹುದು. ಅದರ ಮೇಲೆ ಬೆರಳಿನಲ್ಲಿ ಸ್ಪರ್ಶಿಸಿದರೆ, ಅದು ಸಂದೇಶವೇನೆಂಬುದನ್ನು ತೋರಿಸುತ್ತದೆ. ಸಂದೇಶ ಓದಿದ ಬಳಿಕವೂ ಈ ಪ್ರೊಫೈಲ್ ಚಿತ್ರ ನಿಮ್ಮ ಪರದೆಯ ಮೇಲೆಯೇ ಇರುತ್ತದೆ. ಅದನ್ನು ತೆಗೆದುಹಾಕಬೇಕಿದ್ದರೆ, ಈ ಚಿತ್ರದ ಮೇಲೆ ಬೆರಳಿನಿಂದ ಒತ್ತಿಹಿಡಿದುಕೊಳ್ಳಿ, ಆಗ ಸ್ಕ್ರೀನ್‌ನ ತಳಭಾಗದಲ್ಲಿ ‘X’ ಗುರುತು ಕಾಣಿಸುತ್ತದೆ. ಅಲ್ಲಿಗೆ ಆ ಚಿತ್ರವನ್ನು ಎಳೆದುತಂದುಬಿಡಿ. ನಿಮ್ಮ ಸ್ಕ್ರೀನ್ ಮೇಲಿಂದ ಚಿತ್ರ ಮರೆಯಾಗುತ್ತದೆ.