ಜನ ಸಾಮಾನ್ಯರತ್ತ ತಂತ್ರಜ್ಞಾನ – Gadget-Technology Info Towards Common Man

Archive for ಮಾರ್ಚ್, 2013

ನೆನಪಾದಾಗ ನೋಟ್ ಮಾಡಿಕೊಳ್ಳಲು ‘ಗೂಗಲ್ ಕೀಪ್’

ಜನ ಸಾಮಾನ್ಯರಿಗಾಗಿ ಮಾಹಿತಿ @ ತಂತ್ರಜ್ಞಾನ: ವಿಜಯ ಕರ್ನಾಟಕ ಅಂಕಣ 29 (ಮಾರ್ಚ್ 25, 2013)
ಕಚೇರಿಯಲ್ಲೋ, ಮನೆಯಲ್ಲೋ, ಸಾಕಷ್ಟು ಐಡಿಯಾಗಳು ಹೊಳೆಯುತ್ತಿರುತ್ತವೆ. ಅಥವಾ ಮಾಡಬೇಕಾದ ಕೆಲಸಗಳು ಥಟ್ಟನೆ ನೆನಪಾಗಿಬಿಡುತ್ತವೆ. ಅದನ್ನು ಎಲ್ಲಾದರೂ ಬರೆದಿಟ್ಟರೆ ಬಚಾವ್, ಇಲ್ಲವಾದಲ್ಲಿ ದೊಡ್ಡ ಅವಾಂತರವಾಗೂವ ಸಾಧ್ಯತೆಯೂ ಇಲ್ಲದಿಲ್ಲ. ಅದೇ ರೀತಿ, ಶಾಪಿಂಗ್‌ಗೆ ಹೋದಾಗ ಮನೆಗೆ ಏನೆಲ್ಲಾ ಸಾಮಾನು-ಸರಂಜಾಮು ತರಬೇಕೆಂಬುದನ್ನೂ ನೆನಪಾದಾಗ ಬರೆದಿಟ್ಟುಕೊಳ್ಳಬೇಕಾಗುತ್ತದೆ. ಇಂತಹಾ ಕೆಲಸಗಳಿಗೆ ನೆರವಿಗೆ ಬರುವುದೇ ಗೂಗಲ್ ಹೊರತಂದಿರುವ ‘ಕೀಪ್’ ಎಂಬ ಹೊಸ ವ್ಯವಸ್ಥೆ. ಆನ್‌ಲೈನ್‌ನಲ್ಲಿ ಜಿಮೇಲ್ ಮೂಲಕ ಲಾಗಿನ್ ಆಗಿ, ಗೂಗಲ್ ಡ್ರೈವ್ ಎಂಬ ಉಚಿತ ಸ್ಟೋರೇಜ್ ಸ್ಥಳದಲ್ಲಿ ಈ ಟಿಪ್ಪಣಿಗಳನ್ನು ಸೇವ್ ಮಾಡಿಟ್ಟುಕೊಳ್ಳಬಹುದು.

ಮನಸ್ಸಿಗೆ ಹೊಳೆದಿದ್ದನ್ನೆಲ್ಲಾ ಟಿಪ್ಪಣಿ ಮಾಡಿಕೊಳ್ಳಲೆಂದು ಈಗಾಗಲೇ ಎವರ್‌ನೋಟ್ ಎಂಬುದೊಂದು ಅಪ್ಲಿಕೇಶನ್ ಜನಪ್ರಿಯವಾಗಿದೆ. ಇದರ ರೂಪದಲ್ಲಿಯೇ ಗೂಗಲ್ ಈ ಅಪ್ಲಿಕೇಶನನ್ನು ಉಚಿತವಾಗಿ ಒದಗಿಸಿದ್ದು, ಕಳೆದ ವಾರವಷ್ಟೇ ತನ್ನ ಬಳಕೆದಾರರಿಗೆ ಇದನ್ನು ಪರಿಚಯಿಸಿದೆ.

ಇಂಟರ್ನೆಟ್ ಮೂಲಕ ನೀವು ಇದರ ಪ್ರಯೋಜನ ಪಡೆಯುವುದಾದರೆ, https://drive.google.com/keep/ ಎಂಬಲ್ಲಿ ನಿಮ್ಮ ಜಿಮೇಲ್ ಖಾತೆಯ ಮೂಲಕ ಲಾಗಿನ್ ಆದಾಗ, ಟಿಪ್ಪಣಿ ಮಾಡಿಕೊಳ್ಳುವ ವಿಂಡೋ ಕಾಣಿಸುತ್ತದೆ. ಇದರಲ್ಲಿ ನಿಮಗೆ ಬೇಕಾದ ಚಿತ್ರಗಳನ್ನು ಸೇರಿಸಬಹುದು (ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ನಲ್ಲಾದರೆ, ಕ್ಯಾಮರಾ ಮೂಲಕ ಚಿತ್ರ ತೆಗೆದು ಸೇರಿಸಬಹುದು). ಇದಲ್ಲದೆ, ಆಯಾ ದಿನಗಳಂದು ಮಾಡಬೇಕಾಗಿರುವ ಕೆಲಸಗಳ ಪಟ್ಟಿಯನ್ನೋ, ದಿನಸಿ ಅಂಗಡಿಯಿಂದ ತರಬೇಕಾಗಿರುವ ವಸ್ತುಗಳ ಪಟ್ಟಿಯನ್ನೋ ಟೈಪ್ ಮಾಡಿಟ್ಟುಕೊಳ್ಳಬಹುದು. ಕೆಲಸ ಮುಗಿಸಿದ ಬಳಿಕ ಅದನ್ನು ಟಿಕ್ ಗುರುತು ಮಾಡಿ ಉಳಿಸಿಕೊಳ್ಳಬಹುದು ಇಲ್ಲವೇ ಡಿಲೀಟ್ ಮಾಡಬಹುದು ಅಥವಾ ಐಡಿಯಾವೊಂದನ್ನು ಬರೆದಿಟ್ಟುಕೊಳ್ಳಬಹುದು. ಈ ಟಿಪ್ಪಣಿಗಳಿಗೆ ಬಣ್ಣ ಹಚ್ಚಿಡುವ ವ್ಯವಸ್ಥೆಯೂ ಇಲ್ಲಿದೆ.

ಗೂಗಲ್ ಡ್ರೈವ್ ಎಂಬ ಆನ್‌ಲೈನ್ ಸ್ಟೋರೇಜ್ ಸ್ಥಳದಲ್ಲಿ ಸೇವ್ ಆಗಿರುವ ಈ ಮಾಹಿತಿಯನ್ನು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿಯೂ ಉಪಯೋಗಿಸಬಹುದು. ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲಿ (ಆವೃತ್ತಿ 4.0 -ಐಸ್ ಕ್ರೀಂ ಸ್ಯಾಂಡ್‌ವಿಚ್ ಹಾಗೂ ಮೇಲ್ಪಟ್ಟವುಗಳು) ಅಪ್ಲಿಕೇಶನ್ ರೂಪದಲ್ಲಿ ಲಭ್ಯವಿರುತ್ತದೆ. ಒಂದೇ ಜಿಮೇಲ್ ಐಡಿಯಿಂದ ಲಾಗಿನ್ ಆಗುವುದರಿಂದ, ಕಂಪ್ಯೂಟರಿನಲ್ಲೋ, ಸ್ಮಾರ್ಟ್‌ಫೋನ್‌ನಲ್ಲೋ ಮಾಡಿದ ತಿದ್ದುಪಡಿ, ಸೇರ್ಪಡಿಸಿದ ವಿಷಯಗಳು ಸಿಂಕ್ರನೈಸ್ ಆಗುತ್ತವೆ. ಸ್ಮಾರ್ಟ್‌ಫೋನ್‌ನಲ್ಲಿ ಹೆಚ್ಚುವರಿಯಾದ ಒಂದು ಪ್ರಯೋಜನವೆಂದರೆ, ಇಂಗ್ಲಿಷ್‌ನಲ್ಲಿ ನೀವು ಬರೆದಿಡಬೇಕಾಗಿರುವುದನ್ನು ಟೈಪ್ ಮಾಡಬೇಕಾಗಿಲ್ಲ, ಅಕ್ಷರಶಃ ‘ಹೇಳಿದರೆ’ ಸಾಕು. ಗೂಗಲ್‌ನ ಧ್ವನಿ ತಂತ್ರಾಂಶವು ಅದನ್ನು ಸ್ಮಾರ್ಟ್‌ಫೋನ್‌ನ ಸ್ಪೀಕರ್ ಮೂಲಕ ಅದನ್ನು ಸ್ವೀಕರಿಸಿ, ಪಠ್ಯ ರೂಪಕ್ಕೆ ಪರಿವರ್ತಿಸಿ, ಗೂಗಲ್ ಕೀಪ್‌ನಲ್ಲಿ ಇರಿಸುತ್ತದೆ! ಹೀಗೆ ಮಾಡಲು ಈ ಅಪ್ಲಿಕೇಶನ್‌ನಲ್ಲಿ ಲಭ್ಯವಿರುವ ಮೈಕ್ರೋಫೋನ್‌ನ ಒಂದು ಐಕಾನ್ ಒತ್ತಿಬಿಟ್ಟರಾಯಿತು.

ಕೆಲವು ಕಚೇರಿಗಳಲ್ಲಿ ಅಥವಾ ಮನೆಗಳಲ್ಲಿ ಫ್ರಿಜ್ ಮೇಲೆ, ಬಾಗಿಲಿನ ಮೇಲೆ ಕಾಗದದ ತುಂಡುಗಳಲ್ಲಿ ಏನನ್ನೋ ಟಿಪ್ಪಣಿ ಮಾಡಿ, ಪಟ್ಟಿ ಮಾಡಿ ಅಂಟಿಸಿರುವುದನ್ನು ನೋಡಿರಬಹುದು. ಸ್ಟೇಶನರಿ ಅಂಗಡಿಗಳಲ್ಲಿ ‘ಸ್ಟಿಕಿ ನೋಟ್’ ಎಂಬ ಈ ಅಂಟಿಸುವ ಕಾಗದದ ಕಂತೆಯೇ ಸಿಗುತ್ತದೆ. ಇದರ ಬದಲಾಗಿ ಇನ್ನು ಸ್ಮಾರ್ಟ್‌ಫೋನ್‌ಗಳನ್ನು ಬಳಸಬಹುದು, ಇದರಿಂದ ಕಾಗದವೂ ಉಳಿತಾಯ, ಪರಿಸರ ರಕ್ಷಣೆಗೂ ಕೊಂಚ ಕೊಡುಗೆ ನೀಡಿದಂತೆ.

ಕನ್ನಡ ಟೈಪಿಂಗ್‌ಗೆ ಮೈಕ್ರೋಸಾಫ್ಟ್‌ನ ಈ ಟೂಲ್ ಬಳಸಿ

ವಿಕ ಅಂಕಣ: ಜನ ಸಾಮಾನ್ಯರಿಗಾಗಿ ಮಾಹಿತಿ @ ತಂತ್ರಜ್ಞಾನ – 28 (18 ಮಾರ್ಚ್, 2013)

ಇತ್ತೀಚಿನ ದಿನಗಳಲ್ಲಿ ಫೇಸ್‌ಬುಕ್‌ನಂತಹಾ ಸಾಮಾಜಿಕ ಜಾಲ ತಾಣಗಳಿಗೆ ಗ್ರಾಮಾಂತರ ಪ್ರದೇಶಗಳ ಮಂದಿಯೂ ಆಕರ್ಷಿತರಾಗುತ್ತಿದ್ದಾರೆ ಮತ್ತು ಸಾಕಷ್ಟು ಸ್ವಂತ ಕೆಲಸ ಕಾರ್ಯಗಳನ್ನು ಕಂಪ್ಯೂಟರಿನಲ್ಲಿಯೇ ಮಾಡಿಕೊಳ್ಳುವ ಮೂಲಕ, ‘ಕಂಪ್ಯೂಟರ್ ಸಾಕ್ಷರರು’ ಎಂಬ ಪಟ್ಟಿಗೆ ಸೇರಿಕೊಳ್ಳುತ್ತಿದ್ದಾರೆ. ಆದರೆ ಕಂಪ್ಯೂಟರಿನಲ್ಲಿ ಕನ್ನಡ ಬಳಸುವ ಬಗ್ಗೆ ಅವರಿಗೆ ಗೊಂದಲಗಳಿದ್ದೇ ಇವೆ. ಅಂಥವರ ಅನುಕೂಲಕ್ಕಾಗಿ ಈ ಮಾಹಿತಿ.

ಕೀಬೋರ್ಡ್‌ನಲ್ಲಿ ಇಂಗ್ಲಿಷ್ ಅಕ್ಷರಗಳಿರುವಾಗ ಕನ್ನಡ ಟೈಪ್ ಮಾಡುವುದು ಹೇಗೆ ಎಂಬುದು ಜನಸಾಮಾನ್ಯನ ಪ್ರಶ್ನೆ. ಜನ ಸಾಮಾನ್ಯರು ಬಳಸುವ ಬಹುತೇಕ ಕಂಪ್ಯೂಟರ್‌ಗಳು ಮೈಕ್ರೋಸಾಫ್ಟ್ ಕಂಪನಿಯ ವಿಂಡೋಸ್ ಎಕ್ಸ್‌ಪಿ ಹಾಗೂ ವಿಂಡೋಸ್-7 ಅಥವಾ ವಿಂಡೋಸ್-8 ಕಾರ್ಯಾಚರಣಾ ವ್ಯವವಸ್ಥೆಗಳನ್ನು ಹೊಂದಿವೆ. ಮೈಕ್ರೋಸಾಫ್ಟ್ ಕಂಪನಿಯೇ ಯುನಿಕೋಡ್ ಟೈಪ್ ಮಾಡಲು ಒಂದು ಟೂಲ್ ನೀಡಿದೆ ಎಂಬುದು ಹೆಚ್ಚಿನವರಿಗೆ ಗೊತ್ತಿರಲಾರದು.

ಈ ಟೂಲ್ ಇನ್‌ಸ್ಟಾಲ್ ಮಾಡಿಕೊಳ್ಳಲು ಹೀಗೆ ಮಾಡಿ: ಇಂಟರ್ನೆಟ್ ಸಂಪರ್ಕವಿರುವ ನಿಮ್ಮ ಕಂಪ್ಯೂಟರಿನ ಬ್ರೌಸರಿನಲ್ಲಿ http://www.bhashaindia.com/ilit/Kannada.aspx ವಿಳಾಸ ಟೈಪ್ ಮಾಡಿ. ಅಲ್ಲಿ Install Desktop Version ಅಂತ ಇರುವಲ್ಲಿ ಕ್ಲಿಕ್ ಮಾಡಿದರೆ, kannada.exe ಎಂಬ ಫೈಲೊಂದು ಡೌನ್‌ಲೋಡ್ ಆಗುತ್ತದೆ. ಅದನ್ನು ಕ್ಲಿಕ್ ಮಾಡಿದರೆ, ಸೂಚನೆಗಳನ್ನು ಸರಿಯಾಗಿ ಓದಿ ನೋಡಿ ಕ್ಲಿಕ್ ಮಾಡುತ್ತಾ ಹೋದರೆ, ತಂತ್ರಾಂಶವು ನಿಮ್ಮ ಕಂಪ್ಯೂಟರಿನಲ್ಲಿ ಸ್ಥಾಪನೆಯಾಗುತ್ತದೆ. (ಇದಕ್ಕೆ Microsoft ನ .NET framework 2 ಎಂಬ ಪೂರಕ ತಂತ್ರಾಂಶವೂ ಬೇಕಿರುತ್ತದೆ. ಅದು ನಿಮ್ಮ ಕಂಪ್ಯೂಟರಿನಲ್ಲಿ ಇಲ್ಲದಿದ್ದರೆ, ಈ ಟೂಲ್ ಸ್ಥಾಪನೆಯಾಗುವಾಗಲೇ ಇನ್‌ಸ್ಟಾಲ್ ಮಾಡಲು ಅವಕಾಶವಿದೆ. ಇದರ ಸ್ಥಾಪನೆಗೆ 5-10 ನಿಮಿಷ ಬೇಕಾಗಬಹುದು.)

ಈ ರೀತಿ ಇನ್‌ಸ್ಟಾಲ್ ಆದ ಟೂಲ್ ಅನ್ನು ಎನೇಬಲ್ ಮಾಡಲು ಹೀಗೆ ಮಾಡಿ: Start ಬಟನ್ ಕ್ಲಿಕ್ ಮಾಡಿ, Control Panel ಕ್ಲಿಕ್ ಮಾಡಿದ ಬಳಿಕ  Regional and Language Options ಎಂಬ ಐಕಾನ್ ಕ್ಲಿಕ್ ಮಾಡಿ. ಕಾಣಿಸುವ 3 ಟ್ಯಾಬ್‌ಗಳಲ್ಲಿ Languages ಎಂಬ ಟ್ಯಾಬ್ ಕ್ಲಿಕ್ ಮಾಡಿ. (ಅಲ್ಲಿ Install files for complex script and right-to-left languages (including Thai) ಎಂಬ ಚೆಕ್‌ಬಾಕ್ಸ್‌ನಲ್ಲಿ ರೈಟ್ (√) ಮಾರ್ಕ್ ಇದ್ದರೆ, ಯುನಿಕೋಡ್ ಟೈಪ್ ಮಾಡಲು ಅನುಕೂಲವಾಗುತ್ತದೆ. ಚೆಕ್ ಮಾರ್ಕ್ ಇಲ್ಲದಿದ್ದರೆ, ಅದಕ್ಕೆ ವಿಂಡೋಸ್ ಕಾರ್ಯಾಚರಣಾ ವ್ಯವಸ್ಥೆಯ ಸಿಡಿ ಬೇಕಾಗುತ್ತದೆ ಎಂಬುದು ನೆನಪಿರಲಿ.) ಬಳಿಕ Details ಬಟನ್ ಒತ್ತಿರಿ. (ಚಿತ್ರ ನೋಡಿ.)

ಇಲ್ಲಿ English ಮಾತ್ರ ಇರುತ್ತದೆ. ಕನ್ನಡ ಇನ್‌ಪುಟ್ ಟೂಲ್ ಸೇರಿಸಲು ‘Add’ ಬಟನ್ ಕ್ಲಿಕ್ ಮಾಡಿ, ಕನ್ನಡದಲ್ಲಿ Microsoft Indic Language Input Tool ಆಯ್ದುಕೊಂಡು OK ಬಟನ್ ಒತ್ತಿರಿ.

ಇಲ್ಲಿಗೆ ನಿಮ್ಮ ಪ್ರಕ್ರಿಯೆ ಮುಗಿಯಿತು. ಮೈಕ್ರೋಸಾಫ್ಟ್ ವರ್ಡ್, ನೋಟ್‌ಪ್ಯಾಡ್, ವರ್ಡ್‌ಪ್ಯಾಡ್, ಎಕ್ಸೆಲ್ ಮುಂತಾದ ಬರವಣಿಗೆ ಪ್ರೋಗ್ರಾಂಗಳನ್ನು ತೆರೆದು Alt + Shift ಒತ್ತಿದರೆ ನಿಮ್ಮ ಇನ್‌ಪುಟ್ ವಿಧಾನವು ಕನ್ನಡಕ್ಕೆ, ಪುನಃ ಅದನ್ನೇ ಒತ್ತಿದರೆ ಇಂಗ್ಲಿಷಿಗೆ ಬದಲಾಗುತ್ತದೆ.

ಇದು ಲಿಪ್ಯಂತರ (ಟ್ರಾನ್ಸ್‌ಲಿಟರೇಶನ್ – ಅಂದರೆ ‘kannada’ ಅಂತ ಟೈಪ್ ಮಾಡಿದರೆ ‘ಕನ್ನಡ’ ಎಂದು ಆಗುವ) ಮಾದರಿಯಲ್ಲಿ ಬರೆದು ಅಭ್ಯಾಸವಿರುವ ಹೆಚ್ಚಿನವರಿಗೆ ಅನುಕೂಲಕರ ಕನ್ನಡ ಟೈಪಿಂಗ್ ಟೂಲ್.

ಗೂಗಲ್‌ನಿಂದ ನಮಗೆ ಬೇಕಿದ್ದನ್ನು ತಿಳಿದುಕೊಳ್ಳುವುದು ಹೇಗೆ?

ಜನ ಸಾಮಾನ್ಯರಿಗಾಗಿ ಮಾಹಿತಿ@ತಂತ್ರಜ್ಞಾನ- ವಿ.ಕ.ಅಂಕಣ-27 (ಮಾರ್ಚ್ 11, 2013)
ಅಂತರ್ಜಾಲ ಎಂದರೆ ಏನು ಬೇಕಾದರೂ ತಿಳಿಸಬಲ್ಲ, ಮಾಹಿತಿಯ ವಿಶ್ವಕೋಶವೆಂದು ‘ತಿಳಿದವರು’ ಹೇಳುತ್ತಾರೆ ಅಂತ ಗ್ರಾಮೀಣ ಪ್ರದೇಶದಲ್ಲಿರುವವರು ಸುಮ್ಮನಿರಬೇಕಾಗಿಲ್ಲ. ಇದಕ್ಕೆ ಸರಿಯಾಗಿ ಇಂಗ್ಲಿಷ್ ಗೊತ್ತಿರುವುದು ಕಡ್ಡಾಯ ಅಂತಲೂ ಕೊರಗಬೇಕಾಗಿಲ್ಲ. ಅಲ್ಪಸ್ವಲ್ಪ ಇಂಗ್ಲಿಷ್ ಗೊತ್ತಿದ್ದರೆ, ಕನ್ನಡ ಟೈಪ್ ಮಾಡಲು ಗೊತ್ತಿದ್ದರೆ ಯಾರು ಕೂಡ ಮಾಹಿತಿ ವಿಶ್ವಕೋಶದಿಂದ ತಮಗೆ ಬೇಕಾದ್ದನ್ನು ತಿಳಿದುಕೊಳ್ಳಬಹುದು.

ನಾವು ಕೇಳಿದ್ದನ್ನು ಇಂಟರ್ನೆಟ್‌ನಿಂದ ಹುಡುಕಿ ತಂದುಕೊಡುವುದು ಸರ್ಚ್ ಎಂಜಿನ್‌ಗಳು ಎಂದು ಕರೆಯಲಾಗುವ ಕೆಲವೊಂದು ಜಾಲ ತಾಣಗಳು. ಬ್ರೌಸರ್ ಮೂಲಕ ನಮಗೆ ಬೇಕಾದ ಮಾಹಿತಿ ಹುಡುಕಬೇಕಿದ್ದರೆ ಪ್ರಮುಖವಾಗಿ ಮೂರು ಸರ್ಚ್ ತಾಣಗಳಿವೆ. ಮುಂಚೂಣಿಯಲ್ಲಿರುವುದು ಗೂಗಲ್ (google.com), ಬಳಿಕ ಬಿಂಗ್ (ಮೈಕ್ರೋಸಾಫ್ಟ್ ಕಂಪನಿಯದು) (bing.com) ಹಾಗೂ ಯಾಹೂ (search.yahoo.com) ಸರ್ಚ್ ಎಂಜಿನ್‌ಗಳು.

ಇವುಗಳು ಕೇವಲ ಸರ್ಚ್ ಎಂಜಿನ್‌ಗಳಲ್ಲ, ಸರ್ಚ್ ಮಾಡಿ ಎಲ್ಲವನ್ನೂ ನಿಮ್ಮ ಮುಂದೆ ತಂದಿರಿಸುವ ಸಾಧನಗಳು. ಈಗ, ಗೂಗಲ್‌ನಲ್ಲಿ ಅತ್ಯಂತ ಹೆಚ್ಚು ಉಪಯೋಗವಾಗುವ ಕೆಲವು ತಂತ್ರಗಳು ಇಲ್ಲಿವೆ. Google.co.in ಓಪನ್ ಮಾಡಿ, ಸರ್ಚ್ ಬಾಕ್ಸ್‌ನಲ್ಲಿ ನೀವು ಕೆಲವೇ ಇಂಗ್ಲಿಷ್ ಪದಗಳನ್ನು ಟೈಪ್ ಮಾಡಿದರಾಯಿತು (ಸಂಖ್ಯೆಗಳು ಉದಾಹರಣೆ ಮಾತ್ರ) :

* ಯುಎಇಯ ದಿರ್ರಂ ಕರೆನ್ಸಿಯನ್ನು ರೂಪಾಯಿಗೆ ಪರಿವರ್ತಿಸಲು “900 AED to Rs”, ಡಾಲರನ್ನು ರೂಪಾಯಿಗೆ ಪರಿವರ್ತಿಸಲು “1000 Dollar in Rs”, ರೂಪಾಯಿಯನ್ನು ಡಾಲರ್‌ಗೆ ಪರಿವರ್ತಿಸಲು “120 Rs in USD”, ಸ್ವಿಸ್ ಫ್ರ್ಯಾಂಕ್ ಅನ್ನು ರೂಪಾಯಿಗೆ ಪರಿವರ್ತಿಸಲು, “150 Swiss Franc in Rs” ಟೈಪ್ ಮಾಡಿ.

* ಇಂಚನ್ನು ಸೆಂಟಿಮೀಟರಿಗೆ ಪರಿವರ್ತಿಸಲು “12 inch in cm”, ಅಡಿಯನ್ನು ಮೀಟರ್‌ಗೆ ಪರಿವರ್ತಿಸಲು “12 feet in meters” ಅಂತ ಟೈಪ್ ಮಾಡಿ.

* ಆಸ್ಟ್ರೇಲಿಯನ್ ಓಪನ್ ಟೆನಿಸ್ ಕೂಟದ ಆಟಗಳ ಫಲಿತಾಂಶ ತಿಳಿಯಲು “australian open” ಅಂತ ಟೈಪ್ ಮಾಡಿದರೆ ಸಾಕು.

* ಕೊಡಗಿನಿಂದ ಬೆಂಗಳೂರಿಗೆ ಹೋಗಬೇಕಿದ್ದರೆ ದೂರವೆಷ್ಟು, ಹೇಗೆ ಹೋಗಬೇಕೆಂದು ತಿಳಿಯಬೇಕಿದ್ದರೆ, “how far is coorg from bangalore” ಟೈಪ್ ಮಾಡಿ ಗೂಗಲ್‌ನಲ್ಲಿ ಸರ್ಚ್ ಮಾಡಿ. ಇವುಗಳನ್ನು ಟೈಪ್ ಮಾಡುವಾಗ ಮೊದಲ ಫಲಿತಾಂಶವಾಗಿ ಕಾಣಿಸುವುದನ್ನು ನೋಡಿ.

* ಇನ್ನು ಕ್ಯಾಲ್ಕುಲೇಟರ್ ಆಗಿಯೂ ಗೂಗಲ್ ಸರ್ಚ್ ಎಂಜಿನನ್ನು ಬಳಸಬಹುದು. ಉದಾಹರಣೆಗೆ ಹೀಗೆ ಮಾಡಿ ನೋಡಿ: ಗುಣಿಸಲು 530 x 106, ಭಾಗಿಸಲು 900 / 300, ಕೂಡಿಸಲು 400 + 12, ಕಳೆಯಲು 10000 – 12 ಬರೆದು ನೋಡಿ.

* ನಿಘಂಟು ಆಗಿಯೂ, ಪದಗಳ ವಿವರಣೆ ನೀಡಬಲ್ಲ ಗ್ರಂಥವಾಗಿಯೂ ಗೂಗಲ್ ಕೆಲಸ ಮಾಡುತ್ತದೆ. ಉದಾ: dog meaning in kannada ಅಂತ ಕೇಳಿದ್ರೆ, http://kannada.indiandictionaries.com/ ಗೆ ಅದು ಕರೆದೊಯ್ಯುತ್ತದೆ. What is the Kannada word for walnut ಅಂತ ಕೇಳಿದ್ರೆ ನಿಮ್ಮನ್ನು Answer.com ಎಂಬ ಜಾಲತಾಣಕ್ಕೆ ಕರೆದೊಯ್ಯುತ್ತದೆ.

* ಇಷ್ಟು ಮಾತ್ರವೇ ಅಲ್ಲ, ನೀವು ಕೇಳುವ ಪ್ರಶ್ನೆಗಳಿಗೂ ಅದು ಉತ್ತರಿಸಬಲ್ಲುದು. ಉದಾಹರಣೆಗೆ ಈ ಕೆಳಗಿನ ಪ್ರಶ್ನೆಗಳನ್ನು ಟೈಪ್ ಮಾಡಿ ನೋಡಿ: * Where is bangalore * Who is Indian prime minister * which is the best school in Bangalore * which is best Kannada movie * what is the score of india now

* ಇಷ್ಟು ಟೈಪ್ ಮಾಡಲು ಅಪಾರ ಇಂಗ್ಲಿಷ್ ಜ್ಞಾನವೇನೂ ಬೇಕಾಗಿಲ್ಲ. ಸ್ಪೆಲ್ಲಿಂಗ್ ಸರಿಯಾಗಿ ಟೈಪ್ ಮಾಡಬೇಕು. ಸ್ಪೆಲ್ಲಿಂಗ್ ಗೊತ್ತಿಲ್ಲದಿದ್ದರೆ, ಅದುವೇ ನಿಮಗೆ ಸಲಹೆ ಮಾಡುತ್ತದೆ ಎಂಬುದು ಗೊತ್ತೇ? schwarzenegger ಎಂಬುದರ ಸ್ಪೆಲ್ಲಿಂಗನ್ನು ನೀವು shwazene ಅಂತ ಬರೆಯಲು ಹೊರಟರೆ, ಡ್ರಾಪ್‌ಡೌನ್ ಮೆನುವಿನಲ್ಲಿ ನಿಮಗೆ ಸರಿಯಾದ ಸ್ಪೆಲ್ಲಿಂಗನ್ನೂ ಅದೂ ತೋರಿಸುತ್ತದೆ. ಅಷ್ಟೇ ಅಲ್ಲ, ಇದನ್ನು ಹೇಗೆ ಉಚ್ಚರಿಸುವುದು ಅಂತ ತಿಳಿಯಬೇಕಿದ್ದರೆ, schwarzenegger pronunciation ಅಂತ ಬರೆದುಬಿಡಿ. ಆಡಿಯೋ ಅಥವಾ ವೀಡಿಯೋಗೆ ಅದು ನಿಮ್ಮನ್ನು ಒಯ್ಯುತ್ತದೆ.

ಇವೆಲ್ಲವೂ ಬಳಕೆದಾರರಿಂದಲೇ ಸಮೃದ್ಧಗೊಂಡಿರುವ ಮಾಹಿತಿಕೋಶ. ಇಂಟರ್ನೆಟ್‌ನಲ್ಲಿ ಇಂಗ್ಲಿಷ್ ಎಂಬುದು ಏಕಸ್ವಾಮ್ಯ ಹೊಂದಿದ್ದಾಗ ಮತ್ತು ಪ್ರಾದೇಶಿಕ ಭಾಷೆಗಳಿಗೆ ಫಾಂಟ್‌ಗಳ ಸಮಸ್ಯೆಯಿದ್ದಾಗ ಎಲ್ಲರೂ ಇಂಗ್ಲಿಷಿನಲ್ಲೇ ಅವುಗಳನ್ನು ಬಳಸಿದ ಕಾರಣದಿಂದಾಗಿ ಈ ಮಾಹಿತಿಕೋಶವು ಸಮೃದ್ಧವಾಗಿಬಿಟ್ಟಿದೆ. ಈಗ ಪ್ರಾದೇಶಿಕ ಭಾಷೆಗಳಿಗೆ ಏಕರೂಪದ ಯುನಿಕೋಡ್ ಫಾಂಟ್ ಬಂದ ಬಳಿಕ ಕನ್ನಡದಲ್ಲಿಯೂ ಮಾಹಿತಿ ಭರಪೂರವಾಗಿ ಲಭಿಸತೊಡಗಿದೆಯಾದರೂ ಸಾಕಾಗುತ್ತಿಲ್ಲ. ಕನ್ನಡಿಗರು ಸಾಕಷ್ಟು ಮಾಹಿತಿಯನ್ನು ವೆಬ್‌ಗೆ ಊಡಿಸಿದಲ್ಲಿ ಮಾತ್ರವೇ ಅದು ನಾವು ಅಥವಾ ಮುಂದಿನ ಪೀಳಿಗೆಯವರು ಕೇಳಿದ ಎಲ್ಲ ಪ್ರಶ್ನೆಗಳಿಗೆ ಕನ್ನಡದಲ್ಲೇ ಉತ್ತರಿಸಬಲ್ಲುದು.

ಅಂದರೆ, ಕನ್ನಡದಲ್ಲಿ ಪ್ರಶ್ನೆಗಳನ್ನು ಹಿಂದೆ ಕೇಳಿದ್ದಿದ್ದರೆ, ಅದಕ್ಕೆ ಸಮರ್ಥರಾದವರು ಉತ್ತರಿಸಿದ್ದಿದ್ದರೆ ಅಥವಾ ಇಂತಹಾ ಮಾಹಿತಿಯನ್ನೇ ನೀಡುವ kanaja.in, Wikipedia ಮುಂತಾದವುಗಳಲ್ಲಿ ಸಮರ್ಪಕ ದತ್ತಾಂಶಗಳಿದ್ದರೆ ಮಾತ್ರವೇ ಅದು ಗೂಗಲ್ ಮೂಲಕ ನಮ್ಮೆದುರು ಬಂದು ನಿಲ್ಲುತ್ತದೆ.

ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಖರೀದಿಸುತ್ತಿದ್ದೀರಾ? ಇಲ್ಲಿ ಕೊಂಚ ನೋಡಿ

ಜನ ಸಾಮಾನ್ಯರಿಗಾಗಿ ಮಾಹಿತಿ@ತಂತ್ರಜ್ಞಾನ- ವಿ.ಕ.ಅಂಕಣ-26 (ಮಾರ್ಚ್ 04, 2013)

ಐಒಎಸ್ ಕಾರ್ಯಾಚರಣಾ ವ್ಯವಸ್ಥೆ ಇರುವ ‘ಐಫೋನ್’ ದುಬಾರಿ, ‘ಬ್ಲ್ಯಾಕ್‌ಬೆರಿ’ ಬಿಜಿನೆಸ್ ಮಂದಿಗೆ ಸೂಕ್ತ ಮತ್ತು ಈಗ ಸುದ್ದಿ ಮಾಡುತ್ತಿರುವ ‘ವಿಂಡೋಸ್’ ಕಾರ್ಯಾಚರಣಾ ವ್ಯವಸ್ಥೆಯ ಮೊಬೈಲುಗಳಲ್ಲಿ ಅಪ್ಲಿಕೇಶನ್‌ಗಳು ಕಡಿಮೆ ಎಂಬ ಭಾವನೆ ಇರುವುದರಿಂದಾಗಿ ಭಾರತದಲ್ಲಿ ಈಗ ‘ಆಂಡ್ರಾಯ್ಡ್’ ಕಾರ್ಯಾಚರಣಾ ವ್ಯವಸ್ಥೆಯುಳ್ಳ ಫೋನ್‌ಗಳಿಗೆ ಬೇಡಿಕೆಯೂ ಹೆಚ್ಚು, ಜೇಬಿಗೆ ಭಾರವೂ ಕಡಿಮೆ ಮತ್ತು ತಂತ್ರಜ್ಞಾನ ದೈತ್ಯ ಸಂಸ್ಥೆ ‘ಗೂಗಲ್’ನಿಂದಲೇ ಆಂಡ್ರಾಯ್ಡ್ ಅಭಿವೃದ್ಧಿಯಾಗುತ್ತಿರುವುದರಿಂದ ಅದಕ್ಕೆ ಆಕರ್ಷಣೆಯೂ ಹೆಚ್ಚು. ಹೀಗಾಗಿ ಹೆಚ್ಚು ಹೆಚ್ಚು ಜನ ಆಕರ್ಷಿತರಾಗುತ್ತಿರುವ ಆಂಡ್ರಾಯ್ಡ್ ಫೋನ್‌ಗಳ ಬಗ್ಗೆ ಒಂದಿಷ್ಟು ಮೂಲಭೂತ ಮಾಹಿತಿ ಇಲ್ಲಿದೆ.

ಆಂಡ್ರಾಯ್ಡ್ ಮೊಬೈಲ್ ಅಥವಾ ಟ್ಯಾಬ್ಲೆಟನ್ನು ಮೊದಲ ಬಾರಿ ಖರೀದಿಸಿದ್ದರೆ ಹೇಗೆ ಮುಂದುವರಿಯುವುದೆಂಬ ಸಂದೇಹ ನಿಮ್ಮಲ್ಲಿ ಇರಬಹುದು. ಈಗ ಹ್ಯಾಂಡ್‌ಸೆಟ್‌ಗಳಲ್ಲಿ ಇಂಟರ್ನೆಟ್ ಸಂಪರ್ಕ ಹೊಂದುವುದು ನಗರ ಪ್ರದೇಶಗಳಲ್ಲಿ ಸರ್ವೇ ಸಾಮಾನ್ಯವಾಗಿಬಿಟ್ಟಿದ್ದರೆ, ಗ್ರಾಮಾಂತರ ಪ್ರದೇಶಗಳಲ್ಲಿಯೂ ಜನರು ಟೆಕ್-ಸ್ಯಾವಿ ಆಗುತ್ತಿದ್ದಾರೆ. ಹೀಗಾಗಿ ಇಂಟರ್ನೆಟ್ ಸಂಪರ್ಕವಿದ್ದರೆ ಆಂಡ್ರಾಯ್ಡ್ ಸಾಧನಗಳನ್ನು ಪರಿಪೂರ್ಣವಾಗಿ ಅನುಭವಿಸಬಹುದು ಎಂಬುದು ಗಮನದಲ್ಲಿರಲಿ ಮತ್ತು ಟಚ್ ಸ್ಕ್ರೀನ್ (ಸ್ಪರ್ಶ ಸಂವೇದಿ ಪರದೆ) ಇದರ ಜೀವಾಳ ಎಂಬುದೂ ಗಮನದಲ್ಲಿರಲಿ.

ಸಾಧನಗಳನ್ನು ಖರೀದಿಸುವಾಗಲೇ, ಅದರಲ್ಲಿರುವ ಆಂಡ್ರಾಯ್ಡ್ ಕಾರ್ಯಾಚರಣಾ ವ್ಯವಸ್ಥೆ (ಆಪರೇಟಿಂಗ್ ಸಿಸ್ಟಂ) ಯಾವ ಆವೃತ್ತಿ ಎಂದು ನೋಡಿಕೊಳ್ಳುವುದು ಮುಖ್ಯ. ಅಂದರೆ ಜಿಂಜರ್‌ಬ್ರೆಡ್, ಐಸ್ ಕ್ರೀಂ ಸ್ಯಾಂಡ್‌ವಿಚ್ ಮತ್ತು ಹೊಚ್ಚ ಹೊಸ ಆವೃತ್ತಿ ಜೆಲ್ಲಿಬೀನ್. ಹಳೆಯ ಆವೃತ್ತಿಯುಳ್ಳ ಹ್ಯಾಂಡ್‌ಸೆಟ್ ಖರೀದಿಸುವುದಿದ್ದರೆ, ಅದನ್ನು ಜೆಲ್ಲಿಬೀನ್‌ನ ಹೊಸ ಆವೃತ್ತಿಗೆ ಅಪ್‌ಗ್ರೇಡ್ ಮಾಡಿಕೊಳ್ಳಬಹುದೇ ಅಂತ ತಿಳಿದುಕೊಳ್ಳುವುದು ಜಾಣತನ. ಯಾಕೆಂದರೆ ಹೊಸ ಆವೃತ್ತಿಗಳ ಕಾರ್ಯಾಚರಣೆ ಹೆಚ್ಚು ಅನುಕೂಲಕರವಾಗಿರುತ್ತದೆ, ಆಧುನಿಕ ತಂತ್ರಜ್ಞಾನದಿಂದಲೂ ಕೂಡಿರುತ್ತದೆ.

ಆಂಡ್ರಾಯ್ಡ್ ಫೋನ್‌ಗಳ ಬಳಕೆಯ ಪರಿಪೂರ್ಣ ಅನುಭವ ಪಡೆಯಬೇಕಿದ್ದರೆ ಜಿಮೇಲ್ ಖಾತೆ ಇರುವುದು ಅವಶ್ಯ. (ಇಲ್ಲದಿದ್ದರೂ ನಡೆಯುತ್ತದೆ.) ಅದು ಇದ್ದರೆ ಮಾತ್ರ, ಗೂಗಲ್ ಪ್ಲೇ ಎಂದು ಕರೆಯಲಾಗುವ ಆಂಡ್ರಾಯ್ಡ್‌ನ ಅಪ್ಲಿಕೇಶನ್‌ಗಳ ಮಾರುಕಟ್ಟೆಗೆ ನೀವು ಮೊಬೈಲಿನಿಂದಲೇ ಪ್ರವೇಶಿಸಬಹುದು. ಮತ್ತು ಅಲ್ಲಿ ಉಚಿತವಾಗಿ ಲಭ್ಯವಿರುವ ಸಾಕಷ್ಟು ಅಪ್ಲಿಕೇಶನ್‌ಗಳು, ಗೇಮ್ಸ್, ಸಂಗೀತ… ಇತ್ಯಾದಿ ಎಲ್ಲವನ್ನೂ ಡೌನ್‌ಲೋಡ್ ಮಾಡಿಕೊಳ್ಳಬಹುದು ಮತ್ತು ಇನ್‌ಸ್ಟಾಲ್ ಮಾಡಿಕೊಳ್ಳಬಹುದು.

ನಿಮಗೆ ಬೇಕಾದ ಅಪ್ಲಿಕೇಶನ್‌ಗಳನ್ನು ಇನ್‌ಸ್ಟಾಲ್ ಮಾಡಿಕೊಳ್ಳಬೇಕಿದ್ದರೆ, ಸಾಕಷ್ಟು ಪ್ರಮಾಣದಲ್ಲಿ ಮೆಮರಿ ಇರುವುದು ಅಗತ್ಯ. ಕನಿಷ್ಠ 8 GB ಸಾಮರ್ಥ್ಯವುಳ್ಳ ಬಾಹ್ಯ ಮೆಮರಿ ಕಾರ್ಡ್ (External SD Card ಅಥವಾ Micro SD Card) ಹಾಕಿಕೊಳ್ಳಬೇಕಾಗುತ್ತದೆ. ಹೆಚ್ಚಿನ ಸಾಧನಗಳಲ್ಲಿ 32 GBವರೆಗಿನ ಮೆಮರಿ ಕಾರ್ಡ್ ಸೇರಿಸಲು ಅವಕಾಶ ಇರುತ್ತದೆ. ಹಾಗಂತ, 8 ಜಿಬಿ ಮೆಮರಿ ಕಾರ್ಡ್ ಇದೆ ಎಂದುಕೊಂಡು, ಅದರಲ್ಲಿ ಇದ್ದ ವೀಡಿಯೋ, ಫೋಟೋ ಇತ್ಯಾದಿ ಸೇರಿಸಿ, ಎಲ್ಲವನ್ನೂ ತುಂಬಿಸಿಬಿಟ್ಟರೆ, ನಿಮ್ಮ ಸಾಧನದ ಕಾರ್ಯಾಚರಣೆಯು ನಿಧಾನವಾಗಬಹುದು, ಇಲ್ಲವೇ ಕೆಲವು ಅಪ್ಲಿಕೇಶನ್‌ಗಳೂ ಕೆಲಸ ಮಾಡದಿರಬಹುದು. ಅದಕ್ಕಾಗಿ ಇರುವ ಸಾಮರ್ಥ್ಯಕ್ಕಿಂತ ಕನಿಷ್ಠ 1 GB ಕಡಿಮೆ (8 GB ಮೆಮರಿ ಇದ್ದರೆ, ಗರಿಷ್ಠ 7 GB ಮಾತ್ರ) ಫೈಲುಗಳನ್ನು/ಅಪ್ಲಿಕೇಶನ್‌ಗಳನ್ನು ಇರಿಸಿಕೊಳ್ಳಬೇಕಾಗುತ್ತದೆ.

ಕೆಲವು ಸಾಧನಗಳಲ್ಲಿ ಇಂಟರ್ನಲ್ ಮೆಮರಿ 2 GB ಯಷ್ಟಿದ್ದರೆ, ಕೆಲವು ಸೆಟ್‌ಗಳಲ್ಲಿ ಅದಕ್ಕಿಂತಲೂ ಕಡಿಮೆ ಇರುತ್ತದೆ. ಹೀಗಾಗಿ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಿಕೊಂಡು ಸೇರಿಸಿದರೆ, ಆಂತರಿಕ ಮೆಮರಿ ತುಂಬಿ ಹೋಗುತ್ತದೆ. ಇದಕ್ಕಾಗಿ ಏನು ಮಾಡಬೇಕು? ಹೆಚ್ಚಿನ ಹ್ಯಾಂಡ್‌ಸೆಟ್‌ಗಳಲ್ಲಿ ‘ಸೆಟ್ಟಿಂಗ್ಸ್’ನಲ್ಲಿ ‘ಅಪ್ಲಿಕೇಶನ್ಸ್’ಗೆ ಹೋಗಿ, ‘ಮ್ಯಾನೇಜ್ ಅಪ್ಲಿಕೇಶನ್ಸ್’ ಅಂತ ಕ್ಲಿಕ್ ಮಾಡಿ. ಒಂದೊಂದೇ ಅಪ್ಲಿಕೇಶನ್‌ಗಳನ್ನು ಮುಟ್ಟಿದರೆ, ಅದನ್ನು SD Card ಗೆ ವರ್ಗಾಯಿಸುವ ಆಯ್ಕೆ ಸಿಗುತ್ತದೆ.

ಇಂಥ ಆಯ್ಕೆ ಇಲ್ಲದಿದ್ದರೆ, ಗೂಗಲ್ ಪ್ಲೇ ಎಂಬ ಆಪ್ ಸ್ಟೋರ್‌ನಿಂದ ಅಪ್ಲಿಕೇಶನ್‌ಗಳನ್ನು ಇಂಟರ್ನಲ್ ಮೆಮರಿಯಿಂದ ಮೆಮರಿ ಕಾರ್ಡ್‌ಗೆ ವರ್ಗಾಯಿಸಬಲ್ಲ ಉಚಿತ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಿಕೊಂಡು ಸ್ಥಾಪಿಸಿಕೊಳ್ಳಬಹುದು (Google Pay ಯಲ್ಲಿ ‘App Manager’ ಅಂತ ಸರ್ಚ್ ಮಾಡಿದರೆ ಸಾಕಷ್ಟು ಸಿಗುತ್ತವೆ). ಅದನ್ನು ಅಳವಡಿಸಿ ಕ್ಲಿಕ್ ಮಾಡಿದರೆ, ಇರುವ ಅಪ್ಲಿಕೇಶನ್‌ಗಳ ಪಟ್ಟಿಯನ್ನು ಅದು ತೋರಿಸುತ್ತಾ, ಒಂದೊಂದನ್ನೇ ಮೆಮರಿ ಕಾರ್ಡ್‌ಗೆ ವರ್ಗಾಯಿಸಬಹುದು. ಇಲ್ಲಿ ನಮ್ಮ ಮುಖ್ಯ ಉದ್ದೇಶವೆಂದರೆ, ಸಾಧನದ ಆಂತರಿಕ ಮೆಮರಿಯನ್ನು ಸಾಧ್ಯವಾದಷ್ಟು ಬರಿದು ಮಾಡುವುದು. ಇದರಲ್ಲಿ ಎಲ್ಲವನ್ನೂ ತುಂಬಿಸಿಟ್ಟರೆ, ಸಾಧನದ ಕಾರ್ಯಾಚರಣೆ ನಿಧಾನವಾಗಬಹುದು.

ನೀವು ತೆಗೆಯುವ ಫೋಟೋ, ವೀಡಿಯೋಗಳು, ಸ್ವೀಕರಿಸುವ ಸಂದೇಶಗಳು, ಬ್ಲೂಟೂತ್ ಮೂಲಕ ಬರುವ ಫೈಲ್‌ಗಳು… ಹೀಗೆ ಹೆಚ್ಚು ಗಾತ್ರವಿರುವ ಫೈಲ್‌ಗಳು ಮೆಮರಿ ಕಾರ್ಡ್‌ನಲ್ಲಿಯೇ ಡೀಫಾಲ್ಟ್ ಆಗಿ ಸೇವ್ ಆಗುವಂತೆ ಮಾಡಿಕೊಳ್ಳಬೇಕಾಗುತ್ತದೆ. ಸೆಟ್ಟಿಂಗ್ಸ್‌ನಲ್ಲಿ ಹೋಗಿ ‘SD Cards and Phone Storage’  (ಕೆಲವು ಸೆಟ್‌ಗಳಲ್ಲಿ ‘Storage’ ಅಂತ ಇರುತ್ತದೆ) ಕ್ಲಿಕ್ ಮಾಡಿ ನೋಡಿದರೆ, ಎಷ್ಟು ಸ್ಥಳಾವಕಾಶ ಖಾಲಿ ಇದೆ ಎಂಬ ಮಾಹಿತಿಯನ್ನು ಅದು ತೋರಿಸುತ್ತದೆ. ಬಳಿಕ ಆಯಾ ಅಪ್ಲಿಕೇಶನ್‌ಗಳ (ಉದಾ: ಕ್ಯಾಮರಾ, ಮೆಸೇಜ್ ಮುಂತಾದವುಗಳ) ‘ಸೆಟ್ಟಿಂಗ್ಸ್’ ವಿಭಾಗವನ್ನು ನೋಡಿದರೆ ಅದರಲ್ಲಿ ‘ಸ್ಟೋರೇಜ್’ ಅಂತ ಕ್ಲಿಕ್ ಮಾಡಿದರೆ, ‘ಮೆಮರಿ ಕಾರ್ಡ್’ ಎಂದಿರುವಲ್ಲಿ ಗುರು ಮಾಡಿದೆಯಾ ಅಥವಾ ‘ಫೋನ್/ಡಿವೈಸ್’ ಅಂತ ಇದೆಯಾ ನೋಡಿಕೊಳ್ಳಿ. ಮೆಮರಿ ಕಾರ್ಡ್‌ಗೇ ಸೇವ್ ಆಗುವಂತೆ ನೋಡಿಕೊಂಡರೆ ಫೋನ್ ಸೇಫ್ ಆಗಿರುತ್ತದೆ.