ಜನ ಸಾಮಾನ್ಯರತ್ತ ತಂತ್ರಜ್ಞಾನ – Gadget-Technology Info Towards Common Man

Archive for ನವೆಂಬರ್, 2013

ಕೆಲಸದ ವೇಗ ಹೆಚ್ಚಿಸಲು ಕಂಪ್ಯೂಟರ್ ಶಾರ್ಟ್‌ಕಟ್ಸ್

ಮಾಹಿತಿ@ತಂತ್ರಜ್ಞಾನ ಅಂಕಣ, ವಿಜಯ ಕರ್ನಾಟಕ, ನವೆಂಬರ್ 25, 2013

ಪ್ರತಿದಿನ ಕಂಪ್ಯೂಟರ್ ಬಳಸುತ್ತಿರುವವರು, ಅಂತರ್ಜಾಲದಲ್ಲಿ ಸುತ್ತಾಡುತ್ತಿರುವವರು, ಫೇಸ್‌ಬುಕ್‌, ಟ್ವಿಟರ್‌ಗಳಲ್ಲಿ ಸರಿದಾಡುತ್ತಿರುವವರಲ್ಲಿ ಕೇಳಿಬರುತ್ತಿರುವ ಒಂದು ವಾಕ್ಯವೆಂದರೆ, ‘ಸಮಯವೇ ಇಲ್ಲ’! ಹೀಗಾಗಿ ಕಂಪ್ಯೂಟರಿನಲ್ಲೇ ಮುಳುಗಿರುವವರಿಗೆ, ಕಂಪ್ಯೂಟರ್ ಕೆಲಸ ಕಾರ್ಯವನ್ನು ಶೀಘ್ರವಾಗಿಸಲು, ಕೀಬೋರ್ಡ್‌ಗಳ ಕೆಲವೊಂದು ಶಾರ್ಟ್‌ಕಟ್‌ಗಳು ಉಪಯೋಗಕ್ಕೆ ಬರುತ್ತವೆ. ಈ ರೀತಿ ಕೊಂಚವಾದರೂ ಸಮಯ ಉಳಿಸಬಹುದು. ಅವುಗಳಲ್ಲಿ ಅತ್ಯಂತ ಸಾಮಾನ್ಯಾಗಿರುವ ಕೆಲವನ್ನು ತಿಳಿದುಕೊಳ್ಳೋಣ.

ಯಾವುದೇ ಅಕ್ಷರ, ವಾಕ್ಯಗಳನ್ನು ಕಾಪಿ ಮಾಡಲು Ctrl+C, ಬೇರೆ ಕಡೆ ಪೇಸ್ಟ್ ಮಾಡಲು Ctrl+V ಹಾಗೂ ವಾಕ್ಯದಿಂದಲೇ ಆ ಭಾಗವನ್ನು ತೆಗೆದುಹಾಕಲು Ctrl+X ಒತ್ತಿದರೆ ಸಾಕಾಗುತ್ತದೆ ಎಂಬುದು ಹೆಚ್ಚಿನವರಿಗೆ ತಿಳಿದಿರುವ ಶಾರ್ಟ್‌ಕಟ್‌ಗಳು.

ಪದ ಸಂಸ್ಕರಣಾ ತಂತ್ರಾಂಶ (ವರ್ಡ್‌ಪ್ಯಾಡ್, ಎಂಎಸ್ ವರ್ಡ್, ಎಕ್ಸೆಲ್, ನೋಟ್ ಪ್ಯಾಡ್ ಇತ್ಯಾದಿ), ವೆಬ್ ಜಾಲಾಟ ಅಥವಾ ಮಲ್ಟಿಟಾಸ್ಕಿಂಗ್ ಮಾಡುತ್ತಿರುವಾಗ, ಫೈಲ್ ತೆರೆಯುವುದು, ಹೊಸ ಟ್ಯಾಬ್ ಓಪನ್ ಮಾಡುವುದು, ವಿಂಡೋ ಮಿನಿಮೈಸ್ ಮಾಡುವುದು, ತೆರೆದಿರುವ ವಿಂಡೋಗಳಲ್ಲೇ ಅತ್ತಿಂದಿತ್ತ ನೋಡುವುದು, ಪದ ಅಥವಾ ವಾಕ್ಯ ಡಿಲೀಟ್ ಮಾಡುವುದು, ದೊಡ್ಡ ಲೇಖನಗಳಲ್ಲಿ ಕರ್ಸರ್ ಮೂವ್ ಮಾಡುವುದು… ಮುಂತಾದ ಕೆಲವೊಂದು ಮೂಲಭೂತ ಕೆಲಸಗಳನ್ನು ನಾವು ಯಾವಾಗಲೂ ಮಾಡುತ್ತಿರುತ್ತೇವೆ.

ಈ ರೀತಿಯ ಸಾಮಾನ್ಯ ಕೆಲಸಗಳಿಗೆ ಮೌಸ್ ಬಳಸುವವರು ಬಹಳಷ್ಟು ಮಂದಿ. ಆದರೆ ಕೀಬೋರ್ಡ್‌ನ ಕೆಲವೊಂದು ಶಾರ್ಟ್‌ಕಟ್‌ಗಳಿಂದ ಕೆಲಸವನ್ನು ಮತ್ತಷ್ಟು ವೇಗವಾಗಿಸಬಹುದು ಎಂಬುದು ಹೆಚ್ಚಿನವರಿಗೆ ಗೊತ್ತಿರಲಾರದು. ಎಲ್ಲೋ ಒಂದು ಅಧ್ಯಯನ ವರದಿ ಓದಿದ ನೆನಪು. ಅದರ ಪ್ರಕಾರ, ಜನರು ಮೌಸ್ ಬಳಸುವುದರಿಂದ ನಿಮಿಷಕ್ಕೆ 2 ಸೆಕೆಂಡು ಕೆಲಸ ನಷ್ಟ ಮಾಡಿಕೊಂಡರೆ, ಕೀಬೋರ್ಡ್ ಶಾರ್ಟ್‌ಕಟ್ ಬಳಸಿ ವರ್ಷಕ್ಕೆ 8 ದಿನಗಳಷ್ಟು ಕೆಲಸವನ್ನು ಹೆಚ್ಚು ಮಾಡಬಹುದಂತೆ.

ಮತ್ತಷ್ಟು ಶಾರ್ಟ್‌ಕಟ್‌ಗಳು ಇಲ್ಲಿವೆ:
ವಿಂಡೋಸ್‌ (ಲಾಂಛನವಿರುವ) ಬಟನ್‌ ಮತ್ತು D ಒತ್ತಿದರೆ ಯಾವುದೇ ವಿಂಡೋದಲ್ಲಿದ್ದರೂ, ಡೆಸ್ಕ್‌ಟಾಪ್‌ಗೆ ನೇರವಾಗಿ ನಿಮ್ಮನ್ನು ಕರೆದೊಯ್ಯುತ್ತದೆ. ಪುನಃ ನೀವು ಕೆಲಸ ಮಾಡುತ್ತಿದ್ದ ವಿಂಡೋಗೆ ಮರಳಲು ಮರಳಿ Ctrl+D ಒತ್ತಿ.

Shift+Home ಅಥವಾ Shift+End ಒತ್ತಿದರೆ, ಒಂದು ಲೇಖನದಲ್ಲಿ ಕರ್ಸರ್ ಇರುವಲ್ಲಿಂದ ಒಂದು ಸಾಲಿನ ಆದಿ ಭಾಗದವರೆಗೆ ಅಥವಾ ಅಲ್ಲಿಂದ ಅಂತ್ಯಭಾಗದವರೆಗೆ ವಾಕ್ಯವನ್ನು ಸೆಲೆಕ್ಟ್ ಮಾಡಬಹುದು. ಸೆಲೆಕ್ಟ್ ಆದ ಭಾಗವನ್ನು ಡಿಲೀಟ್ ಮಾಡಲು ಅಥವಾ ಕಟ್ ಮಾಡಲು ಇದು ಪೂರಕ.

Ctrl+t ಒತ್ತಿದರೆ, ಬ್ರೌಸರ್‌ನಲ್ಲಿ ಜಾಲಾಡುತ್ತಿರುವಾಗ ಹೊಸ ಟ್ಯಾಬ್ ತೆರೆಯಲು (ಟ್ಯಾಬ್ಡ್ ಬ್ರೌಸಿಂಗ್ ಎನ್ನುತ್ತಾರೆ) ಪೂರಕ.

Ctrl+l (ಎಲ್‌) ಒತ್ತಿದಾಗ, ಕರ್ಸರ್ ಬ್ರೌಸರಿನ ಅಡ್ರೆಸ್ ಫೀಲ್ಡ್‌ನಲ್ಲಿರುವ ಪದಗಳನ್ನು ಸೆಲೆಕ್ಟ್ ಆಗಿಸುತ್ತದೆ. ನೇರವಾಗಿ ಅಲ್ಲಿ ಬೇರೆ ಯುಆರ್ಎಲ್ ಟೈಪ್ ಮಾಡಬಹುದು.

Ctrl ಬಳಿಕ ಬಲ ಅಥವಾ ಎಡ ಬಾಣ ಗುರುತಿನ ಕೀಲಿ ಒತ್ತಿದರೆ, ಮುಂದಿನ ಪದಕ್ಕೆ ಅಥವಾ ಹಿಂದಿನ ಪದಕ್ಕೆ ಕರ್ಸರ್ ಸರಿಸಬಹುದಾಗಿದೆ.

ಅದೇ ರೀತಿ, Ctrl ಹಾಗೂ Shift ಒಟ್ಟಿಗೆ ಒತ್ತಿಕೊಂಡು ಬಲ ಅಥವಾ ಎಡ ಬಾಣ ಗುರುತಿನ ಕೀ ಒತ್ತಿದರೆ, ಪದಗಳನ್ನು ಸೆಲೆಕ್ಟ್ ಮಾಡುತ್ತದೆ.

ವಿಂಡೋಸ್‌ ಲಾಂಛನದ ಕೀಲಿ ಮತ್ತು m ಒತ್ತಿದರೆ, ತೆರೆದಿರುವ ಎಲ್ಲ ವಿಂಡೋಗಳನ್ನು ಏಕಕಾಲದಲ್ಲಿ ಮಿನಿಮೈಸ್‌ ಮಾಡಬಹುದು.

ವಿಂಡೋಸ್‌ ಲಾಂಛನದ ಕೀಲಿ ಮತ್ತು l (ಎಲ್‌) ಕೀಲಿ ಒತ್ತಿದರೆ ಕಂಪ್ಯೂಟರ್ ಪರದೆಯು ಲಾಕ್ ಆಗುತ್ತದೆ. ನಿಮ್ಮ ಕಂಪ್ಯೂಟರಿನಿಂದ ಎದ್ದು ಹೋಗಬೇಕಾದಾಗ ಇದು ಅನುಕೂಲವಾಗುತ್ತದೆ.

Ctrl+Shift+t ಕೀಲಿ ಒತ್ತಿದರೆ, ಇತ್ತೀಚೆಗೆ ಕ್ಲೋಸ್ ಮಾಡಿದ ಟ್ಯಾಬ್ ಪುನಃ ತೆರೆದುಕೊಳ್ಳುತ್ತದೆ.

Ctrl+Shift+Esc ಒತ್ತಿದರೆ, ಟಾಸ್ಕ್‌ ಮ್ಯಾನೇಜರ್ ಪರದೆ ಲಾಂಚ್ ಆಗುತ್ತದೆ.

ಲೇಖನ ಓದುತ್ತಿರುವಾಗ ಅಥವಾ ತಿದ್ದುಪಡಿ ಮಾಡುತ್ತಿರುವಾಗ, ಒಂದು ಇಡೀ ಸಾಲನ್ನು ಬೇರೆ ಕಡೆ ಸೇರಿಸಬೇಕು ಅಥವಾ ಡಿಲೀಟ್/ಕಟ್ ಮಾಡಬೇಕು ಅಂತ ಅನ್ನಿಸಿದರೆ, ಸಾಲಿನ ಆರಂಭದಲ್ಲಿ ಕರ್ಸರ್ ಇರಿಸಿ, Shift+End ಕೀಲಿ ಒತ್ತಿದರೆ, (ಸಾಲಿನ ಅಂತ್ಯದಲ್ಲಿ ಕರ್ಸರ್ ಇದ್ದರೆ, Shift+Home) ಇಡೀ ಸಾಲು ಸೆಲೆಕ್ಟ್ ಆಗುತ್ತದೆ. ಕಟ್ ಮಾಡಬಹುದು (Ctrl+X), ಕಾಪಿ ಮಾಡಬಹುದು (Ctrl+C) ಅಥವಾ ಬೇಕಾದಲ್ಲಿಗೆ ಪೇಸ್ಟ್ (Ctrl+V) ಮಾಡಬಹುದು.

ಎಲ್ಲರೂ ತ್ರಾಸಪಡುತ್ತಿರುವ ಕೆಲಸಕ್ಕೊಂದು ಸುಲಭೋಪಾಯ: ಉದಾ. ವಿಜಯಕರ್ನಾಟಕದ ವೆಬ್‌ಸೈಟಿಗೆ ಹೋಗಲು http, www, \ : ಹಾಗೂ .com ಅಂತೆಲ್ಲಾ ಮರೆತುಹೋಗಬಹುದಾದ, ಉದ್ದನೆಯ ಅಕ್ಷರಗಳನ್ನು ಟೈಪ್ ಮಾಡಲು ತ್ರಾಸಪಡಬೇಕಿಲ್ಲ. ಅಡ್ರೆಸ್ ಬಾರ್‌ನಲ್ಲಿ vijaykarnataka ಇಷ್ಟೇ ಬರೆದು, Ctrl ಒತ್ತಿ Enter ಒತ್ತಿಬಿಡಿ. (ಇದು ಡಾಟ್ ಕಾಂ ಸೈಟುಗಳಿಗೆ ಎಲ್ಲದಕ್ಕೂ ಆಗುತ್ತದೆ. ಡಾಟ್ ನೆಟ್, ಡಾಟ್ ಆರ್ಗ್ ಇತ್ಯಾದಿಗಳಿಗೆ ಅಲ್ಲ). www. ಮತ್ತು .com ಎಂಬುದನ್ನು ಅದು ತಾನಾಗಿಯೇ ಸೇರಿಸಿಕೊಳ್ಳುತ್ತದೆ.

ಒಂದು ಮೊಬೈಲ್‌ನ ಇಂಟರ್ನೆಟ್ ಸಂಪರ್ಕ ಮತ್ತೊಂದರಲ್ಲಿ ಬಳಸುವ ಬಗೆ

ವಿಜಯ ಕರ್ನಾಟಕ ಅಂಕಣ, ಮಾಹಿತಿ@ತಂತ್ರಜ್ಞಾನ: ನವೆಂಬರ್ 18, 2013

ಹೊಸದಾಗಿ ಮಾರುಕಟ್ಟೆಗೆ ಬರುತ್ತಿರುವ ಸ್ಮಾರ್ಟ್‌ಫೋನ್‌ಗಳಲ್ಲಿ ಇಂಟರ್ನೆಟ್‌ನ ಅದ್ಭುತ ಪ್ರಯೋಜನವೊಂದು ಇದೆ ಎಂಬುದು ಬಹುತೇಕರಿಗೆ ಗೊತ್ತಿರಲಾರದು. ಈ ಸ್ಮಾರ್ಟ್‌ಫೋನ್‌ಗಳು ಇಮೇಲ್, ಚಾಟಿಂಗ್, ಫೇಸ್‌ಬುಕ್-ಇಂಟರ್ನೆಟ್ ಬ್ರೌಸಿಂಗ್, ಗೇಮ್ಸ್ ಇವುಗಳ ಹೊರತಾಗಿ ಟಿದರಿಂಗ್ (Tethering) ಎಂಬ ಒಂದು ವ್ಯವಸ್ಥೆಯನ್ನು ಹೊಂದಿರುತ್ತವೆ. ಟಿದರಿಂಗ್ ಅಂದರೆ, ನಿಮ್ಮ ಮೊಬೈಲ್‌ನಲ್ಲಿರುವ ಇಂಟರ್ನೆಟ್ ಸಂಪರ್ಕವನ್ನು ಬೇರೆ ಮೊಬೈಲ್ ಅಥವಾ ವೈ-ಫೈ ಸೌಲಭ್ಯವುಳ್ಳ ಕಂಪ್ಯೂಟರಿಗೆ ಹಂಚಲು ಅನುಕೂಲ ಮಾಡಿಕೊಡುವ ವ್ಯವಸ್ಥೆ.

ಇದರಿಂದೇನು ಪ್ರಯೋಜನ ಎಂಬ ಕುತೂಹಲವೇ? ಮುಂದೆ ಓದಿ. ಇತ್ತೀಚೆಗೆ ಮೊಬೈಲ್ ಫೋನ್‌ಗಳ ಆಕರ್ಷಣೆ ಹೆಚ್ಚಾಗುತ್ತಿದೆ. ಒಂದಲ್ಲ, ಕನಿಷ್ಠ ಎರಡು ಸಿಮ್ ಕಾರ್ಡ್‌ಗಳನ್ನು ಹೊಂದುವುದೂ ಒಂದು ಕ್ರೇಜ್ ಆಗಿಬಿಟ್ಟಿದೆ. ಎರಡೆರಡು ಸಂಖ್ಯೆಗಳಲ್ಲಿ ಮಾತನಾಡಬಹುದು ಅಥವಾ ಒಂದನ್ನು ಇಂಟರ್ನೆಟ್ ಸಂಪರ್ಕಕ್ಕಾಗಿ ಹಾಗೂ ಇನ್ನೊಂದನ್ನು ಕರೆ, ಎಸ್ಎಂಎಸ್ ಮುಂತಾದ ಕಾರ್ಯಗಳಿಗಾಗಿ ಬಳಸಬಹುದು ಎಂಬ ಆಲೋಚನೆ. ಇದಕ್ಕಾಗಿಯೇ ಡ್ಯುಯಲ್ ಸಿಮ್ (ಎರಡು ಸಿಮ್ ಕಾರ್ಡ್) ಹಾಕಬಲ್ಲ ಮೊಬೈಲ್/ಸ್ಮಾರ್ಟ್‌ಫೋನ್‌ಗಳು ಬಂದಿವೆಯಾದರೂ, ಅದರ ಕಾರ್ಯಕ್ಷಮತೆ ಮತ್ತು ಕಾರ್ಯವಿಧಾನದ ಬಗ್ಗೆ ಸಂದೇಹಗಳು ಮತ್ತು ಅಪಸ್ವರಗಳು ಕೇಳಿಬರುತ್ತಿರುವುದರಿಂದ ಎರಡೆರಡು ಪ್ರತ್ಯೇಕ ಮೊಬೈಲ್ ಫೋನ್‌ಗಳನ್ನೇ ಇಟ್ಟುಕೊಳ್ಳುವವರೂ ಇದ್ದಾರೆ.

ಒಂದು ಸ್ಮಾರ್ಟ್ ಫೋನ್‌ನಲ್ಲಿ ಇಂಟರ್ನೆಟ್ ಸಂಪರ್ಕವನ್ನೇ ಮುಖ್ಯ ಕಾರ್ಯವಾಗಿ ಬಳಸಿಕೊಂಡು, ಅದಕ್ಕೆ ತಕ್ಕಂತೆ ಅನ್‌ಲಿಮಿಟೆಡ್ ಡೇಟಾ ವರ್ಗಾವಣೆಯ ಪ್ಯಾಕ್ (ಅಂದರೆ ಎಷ್ಟು ಬೇಕಾದರೂ ಇಂಟರ್ನೆಟ್ ಬಳಸಬಹುದಾದ, ಮಾಸಿಕ ನಿಗದಿತ ಶುಲ್ಕವಿರುವ ಪ್ಯಾಕೇಜ್) ಹಾಕಿಸಿಕೊಂಡರೆ ಎರಡೂ ಮೊಬೈಲ್‌ಗಳಲ್ಲಿ ಹಾಗೂ ಬೇಕಿದ್ದರೆ ನಿಮ್ಮ ಕಂಪ್ಯೂಟರಿನಲ್ಲಿಯೂ ಇದರ ಮೂಲಕ ಇಂಟರ್ನೆಟ್ ಜಾಲಾಡಬಹುದು. ಯಾವುದೇ ಹೆಚ್ಚುವರಿ ಸಾಧನ ಖರೀದಿಸಬೇಕಾಗಿಲ್ಲ. ಇದರಿಂದ, ಎರಡೆರಡು ಮೊಬೈಲ್/ಸ್ಮಾರ್ಟ್ ಫೋನ್‌ಗಳಿಗೆ ಇಂಟರ್ನೆಟ್ ಪ್ಯಾಕ್ ಹಾಕಿಸುವ ಶ್ರಮ/ಹಣ ವ್ಯಯ ತಪ್ಪುತ್ತದೆ.

ಒಂದು ಫೋನಿನಲ್ಲಿರುವ ಇಂಟರ್ನೆಟ್ ಸಂಪರ್ಕವನ್ನು ಬೇರೆ ಫೋನ್/ಅಥವಾ ಕಂಪ್ಯೂಟರಿನಲ್ಲಿ ಬಳಸಿಕೊಳ್ಳಲು ಹೀಗೆ ಮಾಡಿ.

ಸೆಟ್ಟಿಂಗ್ಸ್‌ನಲ್ಲಿ Wireless & Networks ಎಂಬ ವಿಭಾಗದ ಅಡಿಯಲ್ಲಿ Tethering & Portable Hotspot ಎಂದು ಬರೆದಿರುತ್ತದೆ (ಕೆಲವು ಸ್ಮಾರ್ಟ್‌ಫೋನ್‌ಗಳಲ್ಲಿ More ಎಂದು ಕ್ಲಿಕ್ ಮಾಡಿದರೆ ಈ ಸೌಲಭ್ಯ ಕಾಣಿಸುತ್ತದೆ). ಅದನ್ನು ಕ್ಲಿಕ್ ಮಾಡಿದಾಗ, ಅದರ ಬೇಸಿಕ್ ಸೆಟ್ಟಿಂಗ್ಸ್ ಎಂದಿರುವಲ್ಲಿ ಹಲವು ಆಯ್ಕೆಗಳು ಗೋಚರಿಸುತ್ತವೆ.

ಅದರಲ್ಲಿ, Set up Wi-Fi hotspot ಎಂದಿರುವಲ್ಲಿ, Network SSID ಜಾಗದಲ್ಲಿ ನಿಮ್ಮದೇ ವೈ-ಫೈ ಹಾಟ್‌ಸ್ಪಾಟ್‌ಗೊಂದು ಹೆಸರು ಕೊಡಿ (ಉದಾ. Avinash-Wi-Fi). ನಂತರ, Security ಅಂತ ಇರುವಲ್ಲಿ, WPA PSK ಅಥವಾ WPA2 PSK ಅಂತ ಆಯ್ಕೆ ಮಾಡಿ. ಮುಂದಿನ ಸಾಲಿನಲ್ಲಿ, ನಿಮ್ಮದೇ ಪಾಸ್‌ವರ್ಡ್ ಒಂದನ್ನು ಕ್ರಿಯೇಟ್ ಮಾಡಿಕೊಳ್ಳಿ. ಈ ವೈ-ಫೈ ಪಾಸ್‌ವರ್ಡ್ ನಿಮ್ಮ ಮೊಬೈಲ್‌ಗೆ ಸಂಪರ್ಕಿಸಲಿರುವ ಮತ್ತೊಂದು ಸಾಧನಕ್ಕೆ ಬೇಕಾಗುತ್ತದೆ. ಈ ಪಾಸ್‌ವರ್ಡನ್ನು ಎಲ್ಲಾದರೂ ಬರೆದಿಟ್ಟುಕೊಳ್ಳಿ. ಇದಾದ ನಂತರ, ಎಷ್ಟು ಬಳಕೆದಾರರು ನಿಮ್ಮ ಮೊಬೈಲ್‌ನಲ್ಲಿರುವ ಇಂಟರ್ನೆಟ್ ಸಂಪರ್ಕವನ್ನು ಬಳಸಿಕೊಳ್ಳಬೇಕೆಂಬ ಸಂಖ್ಯೆಯನ್ನೂ ಆಯ್ಕೆ ಮಾಡಿಕೊಳ್ಳಬಹುದು. ಕೊನೆಯಲ್ಲಿ Save ಬಟನ್ ಒತ್ತಿಬಿಡಿ. ಬಳಿಕ ಹಿಂದಕ್ಕೆ ಹೋಗಿ, Wi-Fi Hotspot ಎದುರಿರುವ ಬಟನ್ ಒತ್ತುವ ಮೂಲಕ ಆನ್ ಮಾಡಿ.

ಈಗ, ಇನ್ನೊಂದು ಮೊಬೈಲ್‌ನಲ್ಲಿ ವೈಫೈ ಆನ್ ಮಾಡಿದ ತಕ್ಷಣ, ಲಭ್ಯವಿರುವ ವೈ-ಫೈ ಸಂಪರ್ಕಗಳಿಗಾಗಿ ಅದು ಸ್ವಯಂ ಆಗಿ ಹುಡುಕಾಡುತ್ತದೆ. ಮೊದಲ ಮೊಬೈಲ್‌ಗೆ ನೀವು ಕೊಟ್ಟಿರುವ ಹೆಸರು (ಉದಾ. Avinash-Wi-Fi) ಅಲ್ಲಿ ಗೋಚರಿಸುತ್ತದೆ. ಅದನ್ನು ಕ್ಲಿಕ್ ಮಾಡಿದ ತಕ್ಷಣ, ಪಾಸ್‌ವರ್ಡ್ ಕೇಳುತ್ತದೆ. ನೀವೇ ಕ್ರಿಯೇಟ್ ಮಾಡಿರುವ ಪಾಸ್‌ವರ್ಡ್ ಹಾಕಿದ ತಕ್ಷಣ, ಮೊದಲಿನ ಫೋನ್‌ನ ಇಂಟರ್ನೆಟ್ ಸಂಪರ್ಕವನ್ನು, ಎರಡನೇ ಫೋನ್‌ನಲ್ಲಿ ವೆಬ್ ಬ್ರೌಸಿಂಗ್, ಚಾಟಿಂಗ್, ಇಮೇಲ್, ಸಾಫ್ಟ್‌ವೇರ್ ಅಪ್‌ಡೇಟ್ ಮುಂತಾದವುಗಳಿಗೆ ಸುಲಭವಾಗಿ ಬಳಸಬಹುದು.

ಇದರ ಪಾಸ್‌ವರ್ಡನ್ನು ನಿಮ್ಮ ಸ್ನೇಹಿತರಿಗೆ ನೀಡಿದರೆ, ಅವರು ಕೂಡ ನಿಮ್ಮ ಇಂಟರ್ನೆಟ್ ಸಂಪರ್ಕ ಬಳಸಿ ತಮ್ಮ ಮೊಬೈಲ್‌ಗಳಲ್ಲಿ ಅಂತರ್ಜಾಲ ಜಾಲಾಡಬಹುದು. ಪಾಸ್‌ವರ್ಡನ್ನು ಬದಲಾಯಿಸುವ ಆಯ್ಕೆಯೂ ಇದೆ. ಮತ್ತು ನಿಮ್ಮ ಕೆಲಸವಾದ ಬಳಿಕ Wi-Fi hotspot ಆಫ್ ಮಾಡುವುದನ್ನು ಮರೆಯಬೇಡಿ. ಯಾಕೆಂದರೆ, ವೈಫೈ ಆನ್ ಇದ್ದರೆ, ಬ್ಯಾಟರಿ ಬಳಕೆ ಹೆಚ್ಚು.

ಬ್ಯಾಟರಿ ಚಾರ್ಜ್ ಮಾಡಲು ವಿದ್ಯುತ್ ಕಡಿತದ ಸಮಸ್ಯೆಯೇ? ಪವರ್ ಬ್ಯಾಂಕ್ ಇದೆ!

ವಿಜಯ ಕರ್ನಾಟಕ ಅಂಕಣ, ಮಾಹಿತಿ @ ತಂತ್ರಜ್ಞಾನ: ನವೆಂಬರ್ 11, 2013

ಆಂಡ್ರಾಯ್ಡ್ ಇರಲಿ, ಬೇರಾವುದೇ ಮೊಬೈಲ್ ಅಥವಾ ಟ್ಯಾಬ್ಲೆಟ್, ಸ್ಮಾರ್ಟ್‌ಫೋನ್, ಫ್ಯಾಬ್ಲೆಟ್‌ಗಳಿರಲಿ; ಎಲ್ಲಕ್ಕೂ ಅತೀ ಹೆಚ್ಚು ಕಾಡುವ ಸಮಸ್ಯೆಯೆಂದರೆ ಬ್ಯಾಟರಿ. ಬಳಕೆ ಹೆಚ್ಚು ಮಾಡಿದಷ್ಟೂ ಅದರ ಬ್ಯಾಟರಿ ಚಾರ್ಜ್ ದಿಢೀರನೇ ಖಾಲಿಯಾಗಿಬಿಡುತ್ತದೆ. ತಂತ್ರಜ್ಞಾನದಲ್ಲಿ ಎಷ್ಟೇ ಸುಧಾರಣೆ ಮಾಡಲಾಗಿದ್ದರೂ, ಬ್ಯಾಟರಿ ಪವರ್ ಹೆಚ್ಚು ಕಾಲ ಬರುವುದು ಹೇಗೆಂಬುದರತ್ತ ಮೊಬೈಲ್ ಸಾಧನ ತಯಾರಿಸುವ ಕಂಪನಿಗಳು ಹೆಚ್ಚು ಗಮನ ಹರಿಸಿದಂತಿಲ್ಲ.

ಆಂಡ್ರಾಯ್ಡ್, ವಿಂಡೋಸ್, ಬ್ಲ್ಯಾಕ್‌ಬೆರಿ, ಐಒಎಸ್ (ಆ್ಯಪಲ್), ಸಿಂಬಿಯಾನ್ ಮುಂತಾದ ಕಾರ್ಯಾಚರಣಾ ವ್ಯವಸ್ಥೆಗಳುಳ್ಳ ಸ್ಮಾರ್ಟ್ ಫೋನ್‌ಗಳಲ್ಲಿ 2ಜಿ ಅಥವಾ 3ಜಿ ಇಂಟರ್ನೆಟ್ ಸಂಪರ್ಕ, ವೈಫೈ, ಬ್ಲೂಟೂತ್, ಮ್ಯಾಪ್ ಮಾತ್ರವಲ್ಲದೆ ಗೇಮ್ಸ್, ವೀಡಿಯೋ ವೀಕ್ಷಣೆ… ಇತ್ಯಾದಿಗಳ ಸಾಧ್ಯತೆಗಳಿಂದಾಗಿ ಬ್ಯಾಟರಿಯ ಆವಶ್ಯಕತೆ ಮತ್ತು ಬಳಕೆ ಸಹಜವಾಗಿ ಹೆಚ್ಚಿರುತ್ತದೆ. “ಟಾಕ್ ಟೈಮ್ 11 ಗಂಟೆ, ಸ್ಟ್ಯಾಂಡ್‌ಬೈ ಟೈಮ್ 300 ಗಂಟೆ” ಅಂತೆಲ್ಲಾ ಆಯಾ ಸೆಲ್ ಫೋನ್‌ಗಳ ಸ್ಪೆಸಿಫಿಕೇಶನ್ ವಿಭಾಗಗಳಲ್ಲಿ ಬರೆಯಲಾಗಿರುತ್ತದೆ. ಇದನ್ನೇ ಉದಾಹರಣೆಯಾಗಿ ತೆಗೆದುಕೊಂಡರೆ, ಫೋನ್‌ನಲ್ಲಿ ಬೇರಾವುದೇ ಕೆಲಸ ಮಾಡದೆ, 11 ಗಂಟೆ ನಿರಂತರವಾಗಿ ಮಾತನಾಡಬಹುದು ಮತ್ತು ಏನೂ ಬಳಸದೆ ಇಟ್ಟರೆ 300 ಗಂಟೆಗಳ ಕಾಲ ಬ್ಯಾಟರಿ ಇರುತ್ತದೆ ಎಂದರ್ಥ. ಇಲ್ಲಿ ಟಾಕ್ ಟೈಮ್ 11 ಗಂಟೆ ಇದೆ ಎಂದುಕೊಂಡು ಬೀಗಬೇಕಾಗಿಲ್ಲ. ಇಂಟರ್ನೆಟ್ ಇದ್ದರೆ ಮತ್ತು ನಿಮ್ಮ ಸಾಧನದ ಸ್ಕ್ರೀನ್‌ನ ಬ್ರೈಟ್‌ನೆಸ್ ಜಾಸ್ತಿ ಇದ್ದರೆ ಬ್ಯಾಟರಿ ಚಾರ್ಜ್ ಬೇಗನೇ ಕಡಿಮೆಯಾಗುತ್ತದೆ ಎಂಬುದು ನೆನಪಿರಲಿ. ಇದಲ್ಲದೆ, ಬ್ಯಾಟರಿ ಸ್ಪೆಸಿಫಿಕೇಶನ್ ವಿಭಾಗದಲ್ಲಿ, ಕನಿಷ್ಠ 2000- 3000 mAh ಗಿಂತಲೂ ಹೆಚ್ಚು ಸಂಖ್ಯೆ ನಮೂದಿಸಿರುವ ಬ್ಯಾಟರಿಗಳುಳ್ಳ ಸಾಧನಗಳನ್ನೇ ಖರೀದಿಸುವುದು ಆರಂಭದ ಜಾಣತನವೆನ್ನಿಸಬಹುದು.

ಈಗ ಆಯಾ ಮೊಬೈಲ್ ಕಾರ್ಯಾಚರಣಾ ವ್ಯವಸ್ಥೆಗಳ ಆನ್‌ಲೈನ್ ಮಾರುಕಟ್ಟೆಗಳಲ್ಲಿ (ಅಂದರೆ ಗೂಗಲ್ ಪ್ಲೇ, ವಿಂಡೋಸ್ ಮುಂತಾದ ಆ್ಯಪ್ ಸ್ಟೋರ್‌ಗಳು), ಬ್ಯಾಟರಿ ಉಳಿತಾಯಕ್ಕಾಗಿ ಸಾಕಷ್ಟು ಬ್ಯಾಟರಿ ಸೇವರ್ ಆ್ಯಪ್‌ಗಳಿರುತ್ತವೆ. ಅವುಗಳನ್ನು ಅಳವಡಿಸಿಕೊಂಡರೆ, ನಿಮಗೆ ತಿಳಿಯದಂತೆ ಬ್ಯಾಕ್‌ಗ್ರೌಂಡ್‌ನಲ್ಲಿ ಚಾಲನೆಯಲ್ಲಿರುವ ಆ್ಯಪ್‌ಗಳನ್ನು ನಿಲ್ಲಿಸಬಹುದು ಮತ್ತು ಸ್ಕ್ರೀನ್‌ನ ಬ್ರೈಟ್‌ನೆಸ್ ಅನ್ನು ಬೇಕಾದಷ್ಟೇ ಹೊಂದಿಸಿಕೊಳ್ಳಬಹುದು. ಇನ್ನು ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಂತೂ ಪವರ್ ಕಟ್ ಸಮಸ್ಯೆ ಇದ್ದೇ ಇರುವುದರಿಂದ ಮೊಬೈಲ್‌ಗೆ ಚಾರ್ಜ್ ಮಾಡುವುದು ಕಷ್ಟವಾಗಬಹುದು. ಪದೇ ಪದೇ ಕರೆಂಟ್ ಹೋದಾಗ, ಬ್ಯಾಟರಿಗೆ ಚಾರ್ಜ್ ನೀಡಬಲ್ಲ ಬ್ಯಾಂಕ್ ಒಂದಿದ್ದರೆ? ಹೀಗೆ ಯೋಚಿಸಿದಾಗಲೇ ಹುಟ್ಟಿಕೊಂಡಿದ್ದು ಪವರ್ ಬ್ಯಾಂಕ್, ಬ್ಯಾಟರಿ ಬ್ಯಾಂಕ್‌ಗಳೆಂದೂ ಕರೆಯಲಾಗುವ ಪೋರ್ಟಬಲ್ ಚಾರ್ಜಿಂಗ್ ಉಪಕರಣಗಳು.

ಬ್ಯಾಟರಿ ಸಮಸ್ಯೆಗೆ ಇಂತಹಾ ಪರ್ಯಾಯ ವ್ಯವಸ್ಥೆಯಿರುವುದು ಹೆಚ್ಚಿನವರಿಗೆ ಗೊತ್ತಿರಲಾರದು. ಹೊಸ ಸ್ಮಾರ್ಟ್ ಫೋನ್‌ಗಳೆಲ್ಲವೂ ಯುಎಸ್‌ಬಿ ಪೋರ್ಟ್ ಹೊಂದಿರುತ್ತವೆ. ಮಿನಿ ಪೋರ್ಟ್‌ನಿಂದ ಯುಎಸ್‌ಬಿ ಪೋರ್ಟ್‌ಗೆ ಸಂಪರ್ಕಿಸುವ ಕೇಬಲ್‌ಗಳು ಕೂಡ ದೊರೆಯುತ್ತವೆ. ಯಾವುದೇ ಮೊಬೈಲ್ ಫೋನನ್ನು ಕಂಪ್ಯೂಟರ್‌ಗೆ ಸಂಪರ್ಕಿಸಲು ಈ ಡೇಟಾ ಕಾರ್ಡ್ ಎಂದೂ ಕರೆಯಲಾಗುವ ಕೇಬಲ್‌ಗಳು ಸಹಕಾರಿ.

ಇದು ಹೇಗೆ ಕೆಲಸ ಮಾಡುತ್ತದೆಯೆಂದರೆ, ಪೋರ್ಟಬಲ್ ಚಾರ್ಜರ್‌ಗಳನ್ನು ನಾವು ಒಮ್ಮೆ ಪೂರ್ತಿಯಾಗಿ ಚಾರ್ಜ್ ಮಾಡಿಸಿಟ್ಟುಕೊಂಡರಾಯಿತು. ಅದನ್ನು ಈ ಡೇಟಾ ಕೇಬಲ್ ಮೂಲಕ ನಿಮ್ಮ ಮೊಬೈಲ್ ಸಾಧನಕ್ಕೆ ಸಂಪರ್ಕಿಸಿದರೆ, ಬೇಕೆಂದಾಗ ಚಾರ್ಜ್ ಮಾಡುತ್ತಿರಬಹುದು. ಇದು ಜೇಬಿನಲ್ಲಿಟ್ಟುಕೊಂಡು ಅಥವಾ ಕೈಚೀಲದಲ್ಲಿಟ್ಟುಕೊಂಡು ಒಯ್ಯುವುದಕ್ಕೂ ಸುಲಭವಾದ ಗಾತ್ರದಲ್ಲಿರುತ್ತದೆ. ವಿವಿಧ ಗಾತ್ರಗಳು, ಆಕಾರಗಳಲ್ಲಿ ಮಾರುಕಟ್ಟೆಗೆ ಬಂದಿರುವ ಈ ಪೋರ್ಟಬಲ್ ಬ್ಯಾಟರಿ ಯುನಿಟ್‌ಗಳು, ವಿದ್ಯುತ್ ಕಡಿತದಂತಹಾ ಅದೆಷ್ಟೋ ಸಂದರ್ಭಗಳಲ್ಲಿ ಹೆಚ್ಚು ನೆರವಿಗೆ ಬರಬಹುದು.

ಇತ್ತೀಚೆಗೆ ಕೆಲವು ಸ್ಮಾರ್ಟ್ ಫೋನ್ ಕಂಪನಿಗಳು ತಮ್ಮ ಸಾಧನವನ್ನು ಕೊಳ್ಳುವವರಿಗೆ ಉಚಿತವಾಗಿಯೇ ಈ ಪವರ್ ಬ್ಯಾಂಕ್ ಅಥವಾ ಟ್ರಾವೆಲ್ ಚಾರ್ಜರ್‌ಗಳ ಕೊಡುಗೆಗಳನ್ನು ಒದಗಿಸುತ್ತವೆ. ಯಾವುದೇ ಮೊಬೈಲ್ ಮಳಿಗೆಗಳಲ್ಲಿ ಲಭ್ಯವಿರುವ ಈ ಪವರ್ ಬ್ಯಾಂಕ್‌ಗಳ ಬೆಲೆಯು 800 ರೂ. ಆಸುಪಾಸಿನಿಂದ ಆರಂಭವಾಗಿ ಬ್ಯಾಟರಿ ಸಾಮರ್ಥ್ಯಕ್ಕೆ ಅನುಗುಣವಾಗಿ ಐದಾರು ಸಾವಿರ ರೂ.ವರೆಗೂ ಇರುತ್ತದೆ. ಕಡಿಮೆ ಬ್ಯಾಟರಿ ಸಾಮರ್ಥ್ಯವಿರುವವುಗಳನ್ನು ಖರೀದಿಸಿದರೆ, ಒಮ್ಮೆ ಮೊಬೈಲ್ ಚಾರ್ಜ್ ಮಾಡುವಾಗಲೇ ಬ್ಯಾಟರಿಯ ಚಾರ್ಜ್ ಖಾಲಿಯಾಗಬಹುದು. ಹೀಗಾಗಿ ಕನಿಷ್ಠ 2000 mAh ಇರುವ ಪವರ್ ಬ್ಯಾಂಕ್‌ಗಳನ್ನು ಆಯ್ದುಕೊಳ್ಳಿ. ಈ ಪವರ್ ಬ್ಯಾಂಕನ್ನು ಚಾರ್ಜ್ ಮಾಡಿಟ್ಟುಕೊಂಡರೆ ರೈಲಿನಲ್ಲಿ, ಬಸ್ಸಿನಲ್ಲಿ ಪ್ರಯಾಣಿಸುವಾಗಲೂ ಮೊಬೈಲ್‌ನ ಬ್ಯಾಟರಿ ಚಾರ್ಜ್ ಖಾಲಿಯಾದ ಸಂದರ್ಭದಲ್ಲಿ ಅನುಕೂಲಕ್ಕೆ ಬರಬಹುದು. ಸೋನಿ, ನೋಕಿಯಾ, ಎವರೆಡಿ ಮುಂತಾದ ಪರಿಚಿತ ಬ್ರ್ಯಾಂಡ್‌ಗಳ ಪವರ್ ಬ್ಯಾಂಕ್‌ಗಳು ಲಭ್ಯ ಇವೆ.

ಕಡಿಮೆ ಬೆಲೆಗೆ ಆಲ್-ಇನ್-ಒನ್ ಪ್ರಿಂಟರ್: ನಿಮಗೆ ಯಾವುದು ಸೂಕ್ತ?

ವಿಜಯ ಕರ್ನಾಟಕ ಅಂಕಣ, ಮಾಹಿತಿ ತಂತ್ರಜ್ಞಾನ: ನವೆಂಬರ್ 4, 2013

ಮನೆಗೆ ಕಂಪ್ಯೂಟರ್ ಈಗ ಅನಿವಾರ್ಯ ಎಂಬಂತಾಗಿಬಿಟ್ಟಿರುವುದರೊಂದಿಗೆ, ನಮ್ಮದೇ ಆದ ಸಣ್ಣ ಪುಟ್ಟ ಕೆಲಸಗಳಾದ, ಫೋಟೋ/ಡಾಕ್ಯುಮೆಂಟ್ ಸ್ಕ್ಯಾನಿಂಗ್ ಹಾಗೂ ಫೋಟೋ ಕಾಪಿ (ಜೆರಾಕ್ಸೃ್ ಎಂದೇ ಜನಜನಿತವಾಗಿರುವ ನಕಲು ಪ್ರತಿ) ತೆಗೆಯಲು ಮತ್ತು ಮನೆಯಲ್ಲೇ ಕೆಲವೊಂದು ವಿಷಯಗಳ ಪ್ರಿಂಟ್ ತೆಗೆಯಲು ‘ಆಲ್-ಇನ್-ಒನ್’ (ಅಂದರೆ, ಪ್ರಿಂಟ್, ಸ್ಕ್ಯಾನ್, ಕಾಪಿ) ಪ್ರಿಂಟರ್ ಕೂಡ ಅನಿವಾರ್ಯ ಮತ್ತು ಅನುಕೂಲಕರವೂ ಹೌದು.

ಯಾವುದೇ ಬ್ಯಾಂಕಿಂಗ್, ಸರಕಾರಿ ಕೆಲಸಗಳಿಗೆ ಬೇಕಾಗಬಹುದಾದ ವಿಳಾಸದ ಪ್ರೂಫ್, ಐಡೆಂಟಿಟಿ ಪ್ರೂಫ್ (ಗುರುತಿನ ಚೀಟಿ) ಇವುಗಳಿಗಾಗಿ ಪದೇ ಪದೇ ಪಕ್ಕದ ಜೆರಾಕ್ಸೃ್ ಅಂಗಡಿಗೆ ಅಲೆದಾಡುವುದು ಇದರಿಂದ ತಪ್ಪುತ್ತದೆ. ಈಗ ಸ್ಕ್ಯಾನ್/ಕಾಪಿ ಮಾಡಬಲ್ಲ ಪ್ರಿಂಟರ್‌ಗಳು ಕೈಗೆಟುಕಬಹುದಾದ ಬೆಲೆಯಲ್ಲೇ (3500 ರೂ. ಆಸುಪಾಸು ಆರಂಭವಾಗುತ್ತದೆ) ಲಭ್ಯ ಇವೆ.

ನಿಮ್ಮ ಆವಶ್ಯಕತೆಗಳಿಗನುಗುಣವಾಗಿ ಪ್ರಿಂಟರ್ ಆಯ್ಕೆ ಮಾಡಿಕೊಳ್ಳಲು ಎರಡು ನಮೂನೆಗಳಿರುತ್ತವೆ – ಇಂಕ್ ಜೆಟ್ ಪ್ರಿಂಟರ್‌ಗಳು ಮತ್ತು ಲೇಸರ್ ಜೆಟ್ ಪ್ರಿಂಟರುಗಳು. ಇವುಗಳಲ್ಲಿ ಯಾವುದನ್ನು ಆಯ್ಕೆ ಮಾಡಿಕೊಳ್ಳಲಿ ಎಂಬ ಗೊಂದಲ ನಿವಾರಣೆಗೆ ಕೆಳಗಿನ ಅಂಶಗಳನ್ನು ಗಮನಿಸಿ:

* ಹೆಚ್ಚು ಗುಣಮಟ್ಟದ, ಕಪ್ಪು ಬಿಳುಪಿನ ಪ್ರಿಂಟೌಟ್‌ಗಳು ಸಾಕು ಮತ್ತು ತೀರಾ ಕಡಿಮೆ ಸಂಖ್ಯೆಯಲ್ಲಿ (ಅಂದರೆ ತಿಂಗಳಿಗೆ ನಾಲ್ಕೈದು ಪುಟ) ಪ್ರಿಂಟ್ ಮಾಡಬೇಕಾಗುತ್ತದೆ ಎಂದಾದರೆ, ಲೇಸರ್ ಪ್ರಿಂಟರ್ ಒಳ್ಳೆಯದು. ಐದಾರು ತಿಂಗಳು ಪ್ರಿಂಟ್ ತೆಗೆಯದೇ ಇದ್ದರೂ, ಅದರ ಇಂಕ್ ಟೋನರ್ ಗಟ್ಟಿಯಾಗುವುದಿಲ್ಲ. ಆದರೆ ಬೆಲೆ ಕೊಂಚ ಜಾಸ್ತಿ.

* ಲೇಸರ್ ಜೆಟ್‌ಗೂ ಕಡಿಮೆ ಬೆಲೆಯಲ್ಲಿ, ಕಪ್ಪು-ಬಿಳುಪು ಮತ್ತು ಬಣ್ಣದ ಪ್ರಿಂಟಿಂಗ್ ಬೇಕೆಂದಾದರೆ, ಇಂಕ್ ಜೆಟ್ ಪ್ರಿಂಟರ್ ತೆಗೆದುಕೊಳ್ಳಿ. ಆದರೆ, ಗಮನಿಸಿ, ಹಲವು ದಿನಗಳ ಕಾಲ ಪ್ರಿಂಟ್ ಬಳಸದೇ ಇದ್ದರೆ, ಕಾರ್ಟ್ರಿಡ್ಜ್‌ನಲ್ಲಿರುವ ಕಪ್ಪು ಮತ್ತು ಬಣ್ಣದ ಇಂಕ್ ಗಟ್ಟಿಯಾಗಿಬಿಡಬಹುದು. ಕಾರ್ಟ್ರಿಡ್ಜ್ ಬೆಲೆಯೇ ಸುಮಾರು 400-500 ರೂ. ಇರುತ್ತದೆ. ನಿರಂತರವಾಗಿ (ತಿಂಗಳಿಗೆ 30-40 ಪುಟ ಪ್ರಿಂಟ್) ಬಳಸುತ್ತಿದ್ದರೆ ಮತ್ತು ಲೇಸರ್‌ಜೆಟ್‌ಗೆ ಹೋಲಿಸಿದರೆ ಖರ್ಚು ಕಡಿಮೆ.

* ಲೇಸರ್ ಜೆಟ್ ಪ್ರಿಂಟರ್‌ನಲ್ಲಾದರೆ, ಒಂದು ಟೋನರ್‌ನಲ್ಲಿ ಹೆಚ್ಚಿನ ಸಂಖ್ಯೆಯ ಪ್ರತಿಗಳನ್ನು ಮುದ್ರಿಸಬಹುದು, ಹೀಗಾಗಿ ಹೆಚ್ಚು ಪ್ರಿಂಟಿಂಗ್ ಇದ್ದರೆ ನಿರ್ವಹಣಾ ವೆಚ್ಚ ಕಡಿಮೆ. ಇದರ ಗುಣಮಟ್ಟವೂ ಚೆನ್ನಾಗಿರುತ್ತದೆ ಮತ್ತು ವೇಗವಾಗಿ ಪ್ರಿಂಟ್ ಆಗುತ್ತದೆ. ಟೋನರ್ ಒಂದು ಸಲ ಹಾಕಿದರೆ, ಸಾವಿರಾರು ಸಂಖ್ಯೆಯಲ್ಲಿ ಪುಟಗಳನ್ನು (ಎ4 ಗಾತ್ರ) ಮುದ್ರಿಸಬಹುದು.

* ಇಂಕ್ ಜೆಟ್‌ನಲ್ಲಾದರೆ, ಪ್ರಿಂಟಿಂಗ್ ನಿಧಾನ (ಲೇಸರ್‌ಜೆಟ್‌ಗೆ ಹೋಲಿಸಿದರೆ) ಮತ್ತು ಒಂದು ಕಾರ್ಟ್ರಿಡ್ಜ್‌ನಲ್ಲಿ ಮುದ್ರಿಸಬಹುದಾದ ಪ್ರತಿಗಳ ಸಂಖ್ಯೆಯೂ ಕಡಿಮೆ. ಹೀಗಾಗಿ ಹೆಚ್ಚು ಪ್ರಿಂಟಿಂಗ್ ಬೇಕಿದ್ದರೆ ಇಲ್ಲಿ ನಿರ್ವಹಣಾ ವೆಚ್ಚ ಜಾಸ್ತಿ ಅಂದುಕೊಳ್ಳಬಹುದು.

* ಮನೆಯಲ್ಲಿ ಬ್ಯಾನರ್, ಪ್ಯಾಂಪ್ಲೆಟ್ ಮುಂತಾಗಿ ಕಲರ್ ಪ್ರಿಂಟ್‌ಗಳನ್ನು ಮಾಡುತ್ತೀರೆಂದಾದರೆ, ಇಂಕ್ ಜೆಟ್ ಪ್ರಿಂಟರ್ ಅನುಕೂಲ.

ಒಟ್ಟಿನಲ್ಲಿ, ಕಡಿಮೆಯಿಂದ ಮಧ್ಯಮ ಪ್ರಮಾಣದ ಪ್ರಿಂಟಿಂಗ್‌ಗಾದರೆ ಇಂಕ್ ಜೆಟ್ ಪ್ರಿಂಟರ್ ಸೂಕ್ತವಾದರೆ, ಒಂದೋ ತೀರಾ ಕಡಿಮೆ ಬಳಕೆ (ಟೋನರ್ ಬಾಳಿಕೆಯ ನಿಟ್ಟಿನಲ್ಲಿ), ಇಲ್ಲವೇ ತೀರಾ ಹೆಚ್ಚು ಪ್ರಮಾಣದ ಪ್ರಿಂಟಿಂಗ್‌ಗೆ (ಪ್ರತೀ ಪ್ರಿಂಟ್‌ಗೆ ತಗುಲುವ ವೆಚ್ಚ ನೋಡಿದರೆ) ಲೇಸರ್ ಜೆಟ್ ಪ್ರಿಂಟರ್ ಸೂಕ್ತ ಎಂಬುದು ನೆನಪಿನಲ್ಲಿರಲಿ. ಗುಣಮಟ್ಟದಲ್ಲಿ ಲೇಸರ್ ಜೆಟ್ ಮುಂದು, ಬೆಲೆಯೂ ಹೆಚ್ಚು. ಬಣ್ಣದ ಪುಟಗಳು ಸಾಂದರ್ಭಿಕವಾಗಿ ಬೇಕೆಂದಾದರೆ, ಸೈಬರ್ ಕೆಫೆಗೆ ಹೋಗಿ ಮುದ್ರಿಸಿಕೊಳ್ಳಬಹುದು. ಯಾಕೆಂದರೆ ಕಲರ್ ಲೇಸರ್ ಜೆಟ್ ಪ್ರಿಂಟರ್‌ಗಳ ಬೆಲೆ ತುಂಬಾ ಹೆಚ್ಚು.

* ಇಂಕ್ ಜೆಟ್: ಇಲ್ಲಿ ಇಂಕ್ ಸ್ಪ್ರೇ ಮಾಡಲಾಗುತ್ತಿದೆ. ಸಮಯ ಕಳೆದಂತೆ, ಪ್ರಿಂಟ್ ತೆಗೆಯುವಾಗ ಸಣ್ಣ ಪುಟ್ಟ ಡಾಟ್‌ಗಳು ಕಾಗದದಲ್ಲಿ ಗೋಚರಿಸಬಹುದು.

* ಲೇಸರ್ ಜೆಟ್: ಪೌಡರನ್ನು ಲೇಸರ್ ಮೂಲಕ ಸ್ಪ್ರೇ ಮಾಡುವ ತಂತ್ರಜ್ಞಾನ.