ಜನ ಸಾಮಾನ್ಯರತ್ತ ತಂತ್ರಜ್ಞಾನ – Gadget-Technology Info Towards Common Man

Posts tagged ‘Charging’

ಸ್ಮಾರ್ಟ್‌ಫೋನ್ ಬ್ಯಾಟರಿ ಪದೇ ಪದೇ ರೀಚಾರ್ಜ್ ಮಾಡಬೇಕಾಗುತ್ತದೆಯೇ? ಹೀಗೆ ಮಾಡಿ

ವಿಜಯ ಕರ್ನಾಟಕ ಅಂಕಣ ಮಾಹಿತಿ@ತಂತ್ರಜ್ಞಾನ– 37 – ಜೂನ್ 3, 2013

ಸ್ಮಾರ್ಟ್‌ಫೋನ್‌ಗಳ ಬ್ಯಾಟರಿ ಬೇಗನೇ ಚಾರ್ಜ್ ಕಳೆದುಕೊಳ್ಳುತ್ತದೆ ಎಂಬುದು ಹೆಚ್ಚಿನವರ ಕೊರಗು. ಇವು ಇಂಟರ್ನೆಟ್ ಮೂಲಕ ನಾವು ಸದಾ ಆನ್‌ಲೈನ್‌ನಲ್ಲಿ ಇರುವಂತೆ ನೋಡಿಕೊಳ್ಳುತ್ತವೆಯಾದರೂ, ಅದಕ್ಕಾಗಿ ಸಾಕಷ್ಟು ವಿದ್ಯುಚ್ಛಕ್ತಿ ವ್ಯಯವಾಗುತ್ತದೆ. ಸಾಮಾನ್ಯವಾಗಿ, ಕೇವಲ ಮಾತುಕತೆಗಾಗಿ ನಿಮ್ಮ ಸ್ಮಾರ್ಟ್‌ಫೋನನ್ನು ಬಳಸಿದರೆ ಎರಡು ಮೂರು ದಿನ ಬ್ಯಾಟರಿ ರೀಚಾರ್ಜ್ ಮಾಡುವ ಅಗತ್ಯವಿರುವುದಿಲ್ಲ. ಆದರೆ ಇಂಟರ್ನೆಟ್, ವಿಶೇಷವಾಗಿ 2ಜಿ ಗಿಂತಲೂ 3ಜಿ ಸಂಪರ್ಕವನ್ನು ಬಳಸಿದರೆ ಹೆಚ್ಚಿನ ಪ್ರಮಾಣದಲ್ಲಿ ಬ್ಯಾಟರಿ ಶಕ್ತಿ ಬೇಕಾಗುತ್ತದೆ ಎಂಬುದು ಗಮನದಲ್ಲಿರಲಿ. ಇದೇ ಕಾರಣಕ್ಕೆ, ಹೆಚ್ಚಿನ ಸ್ಮಾರ್ಟ್‌ಫೋನ್‌ಗಳನ್ನು ದಿನಕ್ಕೆ ಒಂದಕ್ಕಿಂತ ಹೆಚ್ಚು ಬಾರಿ ಚಾರ್ಜ್ ಮಾಡಬೇಕಾಗುತ್ತದೆ.

ಹೀಗಾಗಿ, ಇಂಟರ್ನೆಟ್ ಅಗತ್ಯವಿಲ್ಲದಿದ್ದಾಗ ಅದರ ಡೇಟಾ ಸಂಪರ್ಕವನ್ನು ಆಫ್ ಮಾಡಿಡುವುದು ಒಳ್ಳೆಯದು. ಯಾವುದೇ ಸ್ಮಾರ್ಟ್‌ಫೋನ್‌ನ ಸೆಟ್ಟಿಂಗ್ಸ್ ಮೆನುವಿನಲ್ಲಿ, ವೈರ್‌ಲೆಸ್ ಅಥವಾ ನೆಟ್‌ವರ್ಕ್ ಅಥವಾ ಇಂಟರ್ನೆಟ್ ಸೆಟ್ಟಿಂಗ್ ಅಥವಾ ಮೊಬೈಲ್ ನೆಟ್‌ವರ್ಕ್ ಎಂದಿರುವಲ್ಲಿ ಹೋಗಿ, ಡೇಟಾ ಕನೆಕ್ಷನ್ ಅಥವಾ ಡೇಟ ಎಂದಿರುವುದನ್ನು ಆಫ್ ಮಾಡಿಬಿಡಿ. (ಇಲ್ಲಿ ಹೆಸರಿಸಲಾದ ಡೇಟಾ, ನೆಟ್‌ವರ್ಕ್, ಕನೆಕ್ಷನ್ ಮುಂತಾದ ಪದಗಳಿಗಾಗಿ ಹುಡುಕಿ. ಯಾಕೆಂದರೆ ಕಂಪನಿಗಳಿಗೆ ಅನುಗುಣವಾಗಿ ಅವುಗಳ ಜತೆಗಿರುವ ಪದಗಳು ಬದಲಾಗಬಹುದು.)

ಇನ್ನು, ಆಯಾ ಸ್ಮಾರ್ಟ್‌ಫೋನ್‌ಗಳ ಕಾರ್ಯಾಚರಣಾ ವ್ಯವಸ್ಥೆಯ (ಆಂಡ್ರಾಯ್ಡ್, ಐಫೋನ್, ವಿಂಡೋಸ್ ಮುಂತಾದ) ಅಪ್ಲಿಕೇಶನ್ ಸ್ಟೋರ್‌ಗಳಲ್ಲಿ ತ್ರಾಸವಿಲ್ಲದೆ ಡೇಟಾ ಆಫ್ ಮಾಡುವ ಆಪ್‌ಗಳೂ ಲಭ್ಯ. ಇವು ಬ್ಯಾಟರಿ ಉಳಿತಾಯ ಮಾಡಿಸಬಲ್ಲ ಆಪ್‌ಗಳ (ಬ್ಯಾಟರಿ ಸೇವರ್ ಅಂತ ಹುಡುಕಿದರೆ ದೊರೆಯುತ್ತವೆ) ಜತೆಯಲ್ಲಿಯೇ ಇರುತ್ತವೆ.

ಇದಲ್ಲದೆ, ಬ್ರಾಂಡೆಡ್ ಮೊಬೈಲ್ ಫೋನ್‌ಗಳಲ್ಲಿ, ಉದಾಹರಣೆಗೆ ಸ್ಯಾಮ್ಸಂಗ್‌ನ ಸುಧಾರಿತ ಗ್ಯಾಲಕ್ಸಿ ಫೋನ್‌ಗಳಲ್ಲಿ, ಆನ್/ಆಫ್ ಮಾಡುವ ಸ್ವಿಚ್ಚನ್ನು ಒಮ್ಮೆ ಒತ್ತಿದರೆ, ಅಲ್ಲಿ ಫ್ಲೈಟ್/ಸೈಲೆಂಟ್ ಮೋಡ್, ಸ್ವಿಚ್ ಆಫ್ ಹಾಗೂ ಡೇಟಾ ಆಫ್ ಎಂಬ ಮೋಡ್‌ಗಳ ಆಯ್ಕೆ ಲಭ್ಯವಿರುತ್ತದೆ. ಅಲ್ಲಿಂದಲೇ ನೆಟ್ ಕನೆಕ್ಷನ್ ನಿಯಂತ್ರಿಸಬಹುದು. ಇತ್ತೀಚಿನ ಕೆಲವು ಆವೃತ್ತಿಗಳಲ್ಲಿ ಸ್ಕ್ರೀನ್ ಮೇಲ್ಭಾಗದಿಂದ ಕೆಳಗೆ ಸ್ವೈಪ್ ಮಾಡಿದರೆ, ಬ್ಯಾಟರಿ ಉಳಿತಾಯಕ್ಕೆ ಅನುಕೂಲ ಮಾಡಿಕೊಡುವ ಬಟನ್‌ಗಳು ಇರುತ್ತವೆ. ಈ ಬಟನ್‌ಗಳನ್ನು ಬಳಸಿ ಬ್ಲೂಟೂತ್, ವೈಫೈ, ಜಿಪಿಎಸ್ (ಅಗತ್ಯವಿದ್ದಾಗ ಮಾತ್ರ) ಆನ್ ಅಥವಾ ಆಫ್ ಮಾಡಬಹುದು. ಆಫ್ ಇದ್ದರೆ ಬ್ಯಾಟರಿ ಉಳಿತಾಯ ಜಾಸ್ತಿ. ಸ್ಕ್ರೀನ್‌ನ ಬ್ರೈಟ್‌ನೆಸ್ ಕಡಿಮೆ ಮಾಡುವುದು ಕೂಡ ಬ್ಯಾಟರಿ ಉಳಿತಾಯಕ್ಕೆ ಪೂರಕ.

ಒಂದೇ ಕ್ಲಿಕ್ ಮೂಲಕ ಬ್ಯಾಟರಿ ಬಳಕೆಯನ್ನು ತಗ್ಗಿಸುವ ಮೂಲಕ, ಸ್ಮಾರ್ಟ್‌ಫೋನ್‌ಗಳು ದೀರ್ಘ ಕಾಲ ಚಾರ್ಜ್ ಆಗಿರುವಂತೆ ಈ ಬ್ಯಾಟರಿ ಸೇವರ್ ಅಪ್ಲಿಕೇಶನ್‌ಗಳು ನೋಡಿಕೊಳ್ಳುತ್ತವೆ. ಇವು ಮುಖ್ಯವಾಗಿ ಸ್ಕ್ರೀನ್ ಬ್ರೈಟ್‌ನೆಸ್ ಹೊಂದಿಸುತ್ತವೆ ಮತ್ತು ಬ್ಯಾಕ್‌ಗ್ರೌಂಡ್‌ನಲ್ಲಿ ರನ್ ಆಗುತ್ತಿರುವ ಅನಗತ್ಯ ಅಪ್ಲಿಕೇಶನ್‌ಗಳನ್ನು ಸ್ಥಗಿತಗೊಳಿಸುತ್ತವೆ.

ಇಷ್ಟು ನೆನಪಿಡಿ: ಇಂಟರ್ನೆಟ್ (ಡೇಟಾ) ಸಂಪರ್ಕ, ಜಿಪಿಎಸ್ (ಮ್ಯಾಪ್‌ನಲ್ಲಿ ನಿಮ್ಮ ಇರುವಿಕೆಯನ್ನು ತಿಳಿಯಲು ಬಳಸಲಾಗುವ ವ್ಯವಸ್ಥೆ), ವೈ-ಫೈ, ಬ್ಲೂಟೂತ್‌ – ಇವುಗಳನ್ನು ಅವಶ್ಯವಿದ್ದಾಗ ಮಾತ್ರ ಆನ್ ಮಾಡಿ. ಸ್ಕ್ರೀನ್ ಬ್ರೈಟ್‌ನೆಟ್ ಕಡಿಮೆಯಾಗಿರಲಿ, ರಿಂಗಿಂಗ್ ವಾಲ್ಯೂಮ್ ಕೂಡ ಕೇಳಿಸುವಷ್ಟು ಮಟ್ಟದಲ್ಲಿರಲಿ. ಬಳಕೆಯಲ್ಲಿಲ್ಲದಾಗ ಸ್ಕ್ರೀನ್ ಆಫ್ ಆಗುವಂತೆ (5-10 ಸೆಕೆಂಡ್ ಅಂತರದಲ್ಲಿ) ಸೆಟ್ಟಿಂಗ್ಸ್‌ನಲ್ಲಿ ಹೊಂದಿಸಿಕೊಳ್ಳಿ. ದೂರ ಪ್ರಯಾಣದಲ್ಲಿದ್ದರೆ, ನೆಟ್‌ವರ್ಕ್ ಸಿಗ್ನಲ್‌ಗಾಗಿ ನಿಮ್ಮ ಫೋನ್ ಸರ್ಚ್ ಮಾಡುತ್ತಲೇ ಇರುವುದರಿಂದಲೂ ಬ್ಯಾಟರಿ ಖರ್ಚಾಗುವುದರಿಂದ, ಅದನ್ನು ಫ್ಲೈಟ್ ಮೋಡ್‌ನಲ್ಲಿಡುವುದು ಸೂಕ್ತ. ಇವುಗಳನ್ನು ಪಾಲಿಸಿದಲ್ಲಿ, ಪದೇ ಪದೇ ಚಾರ್ಜ್ ಮಾಡುವ ಶ್ರಮ ತಪ್ಪಿಸಬಹುದು.

ವೈರ್ ಇಲ್ಲದೆ ಚಾರ್ಜಿಂಗ್ ಮತ್ತು ಎನ್‌ಎಫ್‌ಸಿ ತಂತ್ರಜ್ಞಾನ

ಜನ ಸಾಮಾನ್ಯರಿಗಾಗಿ ಮಾಹಿತಿ@ತಂತ್ರಜ್ಞಾನ- ವಿ.ಕ.ಅಂಕಣ-23 (ಫೆಬ್ರವರಿ 11, 2013)

ಬ್ಲೂಟೂತ್ ಮೂಲಕ, ವೈ-ಫೈ ಮೂಲಕ ಯಾವುದೇ ವೈರ್ (ಅಥವಾ ಕೇಬಲ್) ಸಂಪರ್ಕವಿಲ್ಲದೆಯೇ ಮೊಬೈಲ್ ಫೋನ್‌ಗಳ ನಡುವೆ ಯಾವುದೇ ಹಾಡುಗಳು, ಚಿತ್ರಗಳು ಮತ್ತಿತರ ಫೈಲುಗಳನ್ನು ಶೇರ್ ಮಾಡಿಕೊಳ್ಳುವುದು ಬಹುಶಃ ಹೆಚ್ಚಿನವರಿಗೆ ಗೊತ್ತಿದೆ. ಈಗ ಸ್ಮಾರ್ಟ್‌ಫೋನ್‌ಗಳಲ್ಲಿ (ಅಂದರೆ ಇಂಟರ್ನೆಟ್ ಸಂಪರ್ಕವಿರುವ, ವೈ-ಫೈ ತಂತ್ರಜ್ಞಾನವುಳ್ಳ ಹಾಗೂ ಹಲವು ಆಧುನಿಕ ತಂತ್ರಜ್ಞಾನ ಕಾರ್ಯಗಳನ್ನು ಮಾಡಬಲ್ಲ ಮೊಬೈಲ್ ಫೋನ್‌ಗಳು) ಹೊಸದೊಂದು ಸ್ಪೆಸಿಫಿಕೇಶನ್ ಕೇಳಿಬರುತ್ತಿದೆ. ಅದುವೇ ಎನ್‌ಎಫ್‌ಸಿ (ನಿಯರ್ ಫೀಲ್ಡ್ ಕಮ್ಯುನಿಕೇಷನ್).

ಇದರರ್ಥ ಯಾವುದೇ ಎರಡು ಮೊಬೈಲ್ ಫೋನ್‌ಗಳಲ್ಲಿ ಎನ್ಎಫ್‌ಸಿ ವ್ಯವಸ್ಥೆ ಇದೆಯೆಂದಾದರೆ, ಅವುಗಳನ್ನು ಒಂದಿಷ್ಟು ನಿರ್ದಿಷ್ಟ ಅಂತರದೊಳಗೆ ಪರಸ್ಪರ ಇರಿಸಿದರೆ ಅಥವಾ ಪರಸ್ಪರ ತಗುಲಿಸಿದರೆ, ಯಾವುದೇ ಫೈಲ್‌ಗಳನ್ನು ಶೇರ್ ಮಾಡಿಕೊಳ್ಳುವುದು (ಹಂಚುವುದು) ಸುಲಭ. ಇದನ್ನು ತಂತ್ರಜ್ಞಾನದ ಪರಿಭಾಷೆಯಲ್ಲಿ ‘ಡೇಟಾ ಎಕ್ಸ್‌ಚೇಂಜ್’ ಅಂತಾನೂ ಕರೀತಾರೆ.

ವೈ-ಫೈ ಅಥವಾ ಬ್ಲೂಟೂತ್ ತಂತ್ರಜ್ಞಾನಗಳಿಗೆ ಹೋಲಿಸಿದರೆ ಇದು ಅತ್ಯಂತ ಸರಳ. ಈಗ ಮಾರುಕಟ್ಟೆಯಲ್ಲಿರುವ ಸಾಕಷ್ಟು ಬಗೆಯ ಕಂಪನಿಗಳ ಸ್ಮಾರ್ಟ್‌ಫೋನ್‌ಗಳಲ್ಲಿ ಕೆಲಸ ಮಾಡುವಂತಾಗಲು, ಪ್ರಮುಖ ಮೊಬೈಲ್ ತಯಾರಿಕಾ ಕಂಪನಿಗಳಾದ ನೋಕಿಯಾ, ಫಿಲಿಪ್ಸ್, ಸೋನಿ ಮುಂತಾದ 160 ಕಂಪನಿಗಳು ಸೇರಿಕೊಂಡು 2004ರಲ್ಲೇ ಎನ್‌ಎಫ್‌ಸಿ ಫೋರಂ ಎಂಬ ಸಂಘಟನೆಯೊಂದನ್ನು ಕಟ್ಟಿಕೊಂಡಿದ್ದವು. ಹೀಗಾಗಿ ಮುಂಬರುವ ಆಧುನಿಕ ಸ್ಮಾರ್ಟ್‌ಫೋನ್‌ಗಳಲ್ಲಿ ಎನ್ಎಫ್‌ಸಿ ಎಂಬುದು ಹೊಸ ಅನುಕೂಲಕರ ಸೌಲಭ್ಯವಾಗಲಿದೆ.

ತೀರಾ ಸಮೀಪದಲ್ಲಿ ಎರಡು ಎನ್‌ಎಫ್‌ಸಿ ಸಾಧನಗಳನ್ನು ಇರಿಸಿದಾಗ ಮಾತ್ರವೇ ಫೈಲುಗಳನ್ನು ಹಂಚಲು ಅಥವಾ ಬೇರಾವುದೇ ಕಾರ್ಯ ಮಾಡಲು ಸಾಧ್ಯವಾಗುವುದರಿಂದಾಗಿ, ಸುರಕ್ಷತೆ ಹೆಚ್ಚು. (ವೈ-ಫೈ ಅಥವಾ ಬ್ಲೂಟೂತ್‌ಗಳು ಆನ್ ಆಗಿದ್ದರೆ, ಬೇರೆ ಸಾಧನಗಳ ಕಣ್ಣಿಗೆ ಬೀಳುವ ಮತ್ತು ಅವುಗಳಿಂದ ವೈರಸ್‌ಗಳು ಇಲ್ಲವೇ ಅನಗತ್ಯ ಫೈಲುಗಳು ಬರುವ ಸಾಧ್ಯತೆ ಇರುತ್ತವೆ). ಇಲ್ಲಿ ಒಂದೆರಡು ಸೆಂಟಿಮೀಟರು ಅಂತರದೊಳಗೇ ಎರಡೂ ಫೋನುಗಳು ಅಥವಾ ಸಾಧನಗಳು ಇರಬೇಕಾಗುತ್ತದೆ.

ವೈರ್‌ಲೆಸ್ ಚಾರ್ಜಿಂಗ್
ವೈರ್‌ಲೆಸ್ ಚಾರ್ಜಿಂಗ್ ಕೂಡ ಹೊಸ ತಂತ್ರಜ್ಞಾನ. ಅತ್ಯಾಧುನಿಕ ಸ್ಮಾರ್ಟ್‌ಫೋನ್‌ಗಳು ವೈರ್‌ಲೆಸ್ ಚಾರ್ಜಿಂಗ್ (ಅಂದರೆ ಚಾರ್ಜರ್ ವೈರ್ ಇಲ್ಲದೆಯೇ ಬ್ಯಾಟರಿ ಚಾರ್ಜ್ ಮಾಡುವ ಪ್ರಕ್ರಿಯೆ) ಸೌಲಭ್ಯದೊಂದಿಗೆ ಮಾರುಕಟ್ಟೆಗೆ ಬರಲಾರಂಭಿಸಿವೆ.

Qi (ಉಚ್ಚಾರಣೆ ‘ಚೀ’) ತಂತ್ರಜ್ಞಾನದ ಒಂದು ತೆಳು ಹಾಳೆಯ ಮೇಲೆ ನಿಮ್ಮ ಫೋನನ್ನು ಇರಿಸಿದರೆ ಆಯಿತು, ತಾನಾಗಿಯೇ ಚಾರ್ಜ್ ಆಗುತ್ತದೆ. ಅದಕ್ಕೆ ಮತ್ತು ಮೊಬೈಲ್ ಸಾಧನಕ್ಕೆ ಪರಸ್ಪರ ಪಿನ್, ವೈರ್ ಜೋಡಿಸುವ, ತೆಗೆಯುವ ತ್ರಾಸ ಇರುವುದಿಲ್ಲ.

ಇದರೊಂದಿಗೆ, ಮತ್ತೊಂದು ಆಧುನಿಕ ವ್ಯವಸ್ಥೆಯೂ ಕಾಣಿಸಿಕೊಳ್ಳತೊಡಗಿದೆ. ಅದೆಂದರೆ ಪವರ್‌ಅಪ್ ವೈರ್‌ಲೆಸ್ ಚಾರ್ಜಿಂಗ್ ಸ್ಪೀಕರ್ ಅಂತ. ಅಂದರೆ, ನಿಮ್ಮ ಫೋನಿನಲ್ಲಿ ಎನ್‌ಎಫ್‌ಸಿ ತಂತ್ರಜ್ಞಾನವಿದ್ದು, ಸಾಕಷ್ಟು ಹಾಡುಗಳಿವೆಯೆಂದಾದರೆ, ಈ ಸ್ಪೀಕರ್ ಖರೀದಿಸಿ, ಅದರ ಮೇಲಿಟ್ಟರೆ, ಸ್ಪೀಕರ್ ಮೂಲಕ ನಿಮ್ಮ ಫೋನಿನಲ್ಲಿರುವ ಹಾಡನ್ನೂ ಕೇಳಬಹುದು, ಜತೆಜತೆಗೇ Qi ತಂತ್ರಜ್ಞಾನದ ಮೂಲಕ ನಿಮ್ಮ ಫೋನ್ ಜಾರ್ಜ್ ಕೂಡ ಆಗಬಹುದು!

ಈಗ ಪ್ರಮುಖ ಕಾರು ತಯಾರಿಕಾ ಕಂಪನಿಗಳು ಕೂಡ ಈ ಮೊಬೈಲ್ ಹ್ಯಾಂಡ್‌ಸೆಟ್ ತಯಾರಕ ಕಂಪನಿಗಳ ಕೂಟದಲ್ಲಿ ಸೇರಿಕೊಂಡಿದ್ದು, ಕಾರುಗಳಲ್ಲಿಯೂ ಚಾರ್ಜಿಂಗ್‌ಗೆ ಅಥವಾ ಇತರ ಸಂವಹನಕ್ಕೆ ಈ ತಂತ್ರಜ್ಞಾನ ಅಳವಡಿಸಲು ಮುಂದಾಗಿವೆ. ಹೀಗಾಗಿ, ಸ್ಮಾರ್ಟ್‌ಫೋನ್ ಖರೀದಿಸಲು ತೊಡಗುವಾಗ, ಎನ್‌ಎಫ್‌ಸಿ ತಂತ್ರಜ್ಞಾನವಿದೆಯೇ ಅಂತ ಕೇಳಿಕೊಂಡೇ ಮುಂದುವರಿದರೆ ಒಳ್ಳೆಯದು. ಗೂಗಲ್ ನೆಕ್ಸಸ್, ನೋಕಿಯಾ ಮತ್ತು ಎಚ್‌ಟಿಸಿಯ ಕೆಲವು ವಿಂಡೋಸ್ 8 ಫೋನುಗಳು, ಮೋಟೋರೋಲಾ, ಸೋನಿಯ ಕೆಲವು ಎಕ್ಸ್‌ಪೆರಿಯಾದ ಕೆಲವು ಮಾಡೆಲ್‌ಗಳು ಮುಂತಾದವುಗಳಲ್ಲಿ ಈ ಸೌಲಭ್ಯ ಈಗಾಗಲೇ ಲಭ್ಯ. ಅಲ್ಲದೆ ನೆಕ್ಸಸ್ ಟ್ಯಾಬ್ಲೆಟ್‌ಗಳಲ್ಲಿಯೂ ಇವೆ. ವೈರ್‌ಲೆಸ್ ಚಾರ್ಜರ್/ಅಥವಾ ಸ್ಪೀಕರ್‌ಗಳನ್ನು ಖರೀದಿಸಿದರೆ ಮಾತ್ರ ಇದರ ಪ್ರಯೋಜನ.

ಹೀಗಾಗಿ, ಹೊಸದಾಗಿ ಸ್ಮಾರ್ಟ್‌ಫೋನ್ ಖರೀದಿಸಲು ಹೊರಟಿದ್ದರೆ, ಇದೊಂದು ಸ್ಪೆಸಿಫಿಕೇಶನ್ನು ನಿಮ್ಮ ಪಟ್ಟಿಗೆ ಹೊಸ ಸೇರ್ಪಡೆ.