ಜನ ಸಾಮಾನ್ಯರತ್ತ ತಂತ್ರಜ್ಞಾನ – Gadget-Technology Info Towards Common Man

Archive for ಸೆಪ್ಟೆಂಬರ್, 2013

ಇನ್ನಾದರೂ ಕಂಗ್ಲಿಷ್ ನಿಲ್ಲಿಸಿ

ವಿಜಯ ಕರ್ನಾಟಕ ಅಂಕಣ, ಮಾಹಿತಿ@ತಂತ್ರಜ್ಞಾನ, ಸೆಪ್ಟೆಂಬರ್ 30, 2013

ಫೇಸ್‌ಬುಕ್‌ನಲ್ಲಾಗಲೀ, ಯಾವುದೇ ವೆಬ್ ತಾಣಗಳಾಗಲೀ, ಇಲ್ಲವೇ  ಬ್ಲಾಗ್ ತಾಣಗಳಲ್ಲೇ ಆಗಲೀ… ಕಂಪ್ಯೂಟರ್‌ನಲ್ಲಿ ಕನ್ನಡ ಬರೆಯಲು ತಿಳಿದಿಲ್ಲದವರು ಇಂಗ್ಲಿಷ್ ಲಿಪಿಯಲ್ಲಿ ಕನ್ನಡ ಪದಗಳನ್ನು (ಕಂಗ್ಲಿಷ್) ಬರೆದು ತಮ್ಮ ಅಭಿಪ್ರಾಯಗಳನ್ನು ಮಂಡಿಸುತ್ತಾರೆ. ಇದನ್ನು ಓದುವವರಿಗೆ ಹಿಂಸೆಯೋ ಹಿಂಸೆ. ಒಂದೋ ಇಂಗ್ಲಿಷಿನಲ್ಲೇ ಇಂಗ್ಲಿಷ್ ಬರೆಯಿರಿ, ಇಲ್ಲವಾದರೆ, ಕನ್ನಡದಲ್ಲಿ ಕನ್ನಡ ಬರೆಯಿರಿ ಎಂಬ ಕೋಪೋದ್ರಿಕ್ತ ಮಾತುಗಳನ್ನೂ ಅಲ್ಲಲ್ಲಿ ಓದಿರುತ್ತೇವೆ ನಾವು.

ದೇಶದಲ್ಲಿ ಪ್ರಧಾನವಾಗಿ ಹಿಂದಿ ಮತ್ತು ದಕ್ಷಿಣ ಭಾರತದ ನಾಲ್ಕು ಭಾಷೆಗಳು ಇಂಟರ್ನೆಟ್ ಜಗತ್ತಿನಲ್ಲಿ ಭದ್ರವಾಗಿ ನೆಲೆಯೂರಿವೆಯಾದರೂ, ಈ ಐದರಲ್ಲಿ ಕನ್ನಡ ಮಾತ್ರ ಐದನೆಯದಾಗಿಯೇ ಉಳಿದಿದೆ. ಇದಕ್ಕೆ ಪ್ರಮುಖ ಕಾರಣವೆಂದರೆ, ಕನ್ನಡಿಗರು ಅಂತರ್ಜಾಲ ತಾಣಗಳಲ್ಲಿ ಕನ್ನಡ ಬರವಣಿಗೆಯ ಬಗ್ಗೆ ಆಸ್ಥೆ ತೋರದಿರುವುದು. ಕನ್ನಡದ ವಿಷಯ, ಕನ್ನಡ ಸಾಹಿತ್ಯ ಸಮೃದ್ಧವಾಗಿದ್ದರೆ ಅಂತರ್ಜಾಲದಲ್ಲಿಯೂ ಕನ್ನಡಕ್ಕೆ ಒಳ್ಳೆಯ ಸ್ಥಾನಮಾನ ಸಿಗಬಹುದಾಗಿತ್ತು.

ಇದಕ್ಕೆ ಹಿಂದೆ ಇದ್ದ ಮೊದಲ ತೊಡಕು ಎಂದರೆ, ಏಕರೂಪದ ಫಾಂಟ್ (ಅಕ್ಷರ) ಇಲ್ಲದೇ ಇದ್ದಿದ್ದು. ಶ್ರೀಲಿಪಿ, ಬರಹ, ನುಡಿ ಮುಂತಾದವು ಜನಪ್ರಿಯವಾಗುತ್ತಿರುವ ಹಂತದಲ್ಲಿ, ಸಾರ್ವತ್ರಿಕವಾಗಿ ಎಲ್ಲ ಭಾಷೆಗಳಿಗೂ ಪೂರಕವಾದ ಯುನಿಕೋಡ್ ಎಂಬ ಫಾಂಟ್ ಶಿಷ್ಟತೆ ನೆಲೆಯೂರಿತು. ಆದರೆ ಸೂಕ್ತ ಮಾಹಿತಿಯ ಕೊರತೆಯಿಂದಾಗಿ ಇದನ್ನು ಒಪ್ಪಿಕೊಳ್ಳುವಲ್ಲಿಯೂ ಆನ್‌ಲೈನ್ ಕನ್ನಡಿಗರು ಹಿಂದೆ ಬಿದ್ದರು. ತತ್ಪರಿಣಾಮವಾಗಿ ಅಂತರ್ಜಾಲದಲ್ಲಿ ಕನ್ನಡದ ವಿಷಯ-ಸಮೃದ್ಧಿಗೆ ಕೊರತೆ ಬಂದಿತು.

ಇಷ್ಟು ಯಾಕೆ ಹೇಳಿದ್ದೆಂದರೆ, ಕನ್ನಡಿಗರಿಗೆ ಕಂಪ್ಯೂಟರಿನಲ್ಲಿ ಕನ್ನಡ ಬರೆಯಲು ಸೂಕ್ತ ಮಾಹಿತಿಯ ಕೊರತೆ ಇದೆ. ಫೇಸ್‌ಬುಕ್ ತಾಣವಂತೂ ಈಗ ಹಳ್ಳಿ ಹಳ್ಳಿಗಳಿಗೂ ತಲುಪಿದೆಯಾದರೂ, ಅದರಲ್ಲಿ ಕನ್ನಡದಲ್ಲಿ ಟೈಪ್ ಮಾಡುವುದು ಹೇಗೆಂಬುದು ತಿಳಿದಿಲ್ಲದಿರುವುದು ಓದುವವರಿಗೆ ಬಲು ದೊಡ್ಡ ಸಮಸ್ಯೆ. ಇದಕ್ಕಾಗಿ ಸಾಕಷ್ಟು ಟೂಲ್‌ಗಳು ಲಭ್ಯವಿದ್ದರೂ, “ಅದರ ಬಳಕೆ ಕಷ್ಟ, ಅದನ್ನು ಇನ್‌ಸ್ಟಾಲ್ ಮಾಡಿಕೊಳ್ಳುವುದು ತಿಳಿದಿಲ್ಲ” ಎಂಬ ಕಲ್ಪನೆಗಳಿಂದಾಗಿಯೇ ಕನ್ನಡಿಗರು ಕನ್ನಡದಲ್ಲಿ ಬರೆಯುತ್ತಿಲ್ಲ ಎಂದುಕೊಳ್ಳಬಹುದೇನೋ.

ವೆಬ್ ತಾಣಗಳಲ್ಲಿ ಅಚ್ಚ ಕನ್ನಡದಲ್ಲಿ ಕಾಮೆಂಟ್ ಬರೆಯುವಂತಾಗಲಿ, ಈ ಕಂಗ್ಲಿಷ್ ಬರವಣಿಗೆ ನಿಲ್ಲಲಿ ಎಂಬ ಉದ್ದೇಶಕ್ಕೆ ಈ ಬಾರಿ ಎರಡು ಆನ್‌ಲೈನ್ ತಾಣಗಳನ್ನು ಇಲ್ಲಿ ಪರಿಚಯಿಸಲಾಗುತ್ತಿದೆ.

ಕ್ವಿಲ್‌ಪ್ಯಾಡ್
http://www.quillpad.in/ ಎಂಬ ತಾಣಕ್ಕೆ ಹೋಗಿ ನೋಡಿದರೆ, ಭಾರತದ ಹಲವಾರು ಭಾಷೆಗಳಲ್ಲಿ ಬರೆಯಬಹುದಾದ ಆಯ್ಕೆ ಅಲ್ಲಿದೆ. ಕನ್ನಡದ ಟ್ಯಾಬ್ ಕ್ಲಿಕ್ ಮಾಡಿ, ನೀವು ಅದೇ ಕಂಗ್ಲಿಷಿನಲ್ಲಿ (ಉದಾ: vijaya karnataka ಅಂತ) ಬರೆಯುತ್ತಾ ಹೋಗಿ. ಅದು ಸುಂದರವಾದ ಕನ್ನಡ ಲಿಪಿಗೆ (‘ವಿಜಯ ಕರ್ನಾಟಕ’ ಅಂತ) ಪರಿವರ್ತನೆಯಾಗುವ ಬಗೆಯನ್ನು ನೋಡಿ. ಇಲ್ಲಿಂದ ಕಾಪಿ ಮಾಡಿ, ಫೇಸ್‌ಬುಕ್‌ಗೋ, ಬ್ಲಾಗಿಗೋ, ಅಥವಾ ಯಾವುದೇ ವೆಬ್‌ತಾಣಗಳ ಕಾಮೆಂಟ್ ವಿಭಾಗದಲ್ಲಿಯೋ, ಪೇಸ್ಟ್ ಮಾಡಿಬಿಡಿ. ಇಂಗ್ಲಿಷ್ ಮತ್ತು ಕನ್ನಡದ ಅಕ್ಷರಗಳ ನಡುವೆ ಬದಲಾಯಿಸಿಕೊಳ್ಳಲು F8 ಬಟನ್ ಒತ್ತಿ ನೋಡಿ. ಅಲ್ಲಿಗೆ, ವೆಬ್ ಜಗತ್ತನ್ನು ಕಂಗ್ಲಿಷ್ ಕಸದಿಂದ ಮುಕ್ತವಾಗಿಸಬಹುದು.

ಕನ್ನಡದ ಸ್ಲೇಟ್
ಕಂಗ್ಲಿಷ್ ಬರೆಯುವವರಿಗೆ ನೆರವಾಗಲು ಮತ್ತೊಂದು ತಾಣ ಇಲ್ಲಿದೆ. ಸ್ಲೇಟು ಹಿಡಿಯಬೇಕಷ್ಟೆ. http://www.kannadaslate.com/ ತಾಣಕ್ಕೆ ಹೋದರೆ, ಅಲ್ಲೊಂದು ಸ್ಲೇಟ್ ಕಾಣಿಸುತ್ತದೆ. ಫೇಸ್‌ಬುಕ್‌ನಲ್ಲಿ ಓದಲು ಕಷ್ಟವಾಗುವಂತೆ ಕನ್ನಡವನ್ನೂ ಇಂಗ್ಲಿಷಲ್ಲೇ ಬರೆಯುವವರಿಗೆ ಇದು ಕೂಡ ಸೂಕ್ತ. ಸಾಮಾನ್ಯ ಅಕ್ಷರಗಳ ಹೊರತಾಗಿ, ದೀರ್ಘಾಕ್ಷರಗಳಿಗೆ ಮತ್ತು ಮಹಾಪ್ರಾಣ ಅಕ್ಷರಗಳಿಗೆ ಕೀಬೋರ್ಡ್‌ನಲ್ಲಿ Shift ಬಟನ್ ಒತ್ತಿ ಟೈಪ್ ಮಾಡಿದರಾಯಿತು. ಈ ಸ್ಲೇಟಿನಲ್ಲಿ ಬರೆದು ನಿಮಗೆ ಬೇಕಾದಲ್ಲಿ, ಕಾಮೆಂಟ್ ಹಾಕುವಲ್ಲಿ ಪೇಸ್ಟ್ ಮಾಡಿದರೆ, ನೀವು ಇಂಗ್ಲಿಷಿನಲ್ಲಿ ಬರೆದುದನ್ನು ಓದಲು ಮತ್ತು ಅರ್ಥ ಮಾಡಿಕೊಳ್ಳಲು ತ್ರಾಸ ಪಡುವವರು ಖುಷ್ ಖುಷ್.

ಇದೇ ಸ್ಲೇಟನ್ನು ಫೇಸ್‌ಬುಕ್ ಅಪ್ಲಿಕೇಶನ್ ಆಗಿಯೂ ಬಳಸಿಕೊಳ್ಳಬಹುದು. ಫೇಸ್‌ಬುಕ್‌ಗೆ ಲಾಗಿನ್ ಆಗಿ, ಈ ಅಪ್ಲಿಕೇಶನ್ ಅನ್ನು ಫೇಸ್‌ಬುಕ್‌ನಲ್ಲಿ ಇನ್‌ಸ್ಟಾಲ್ ಮಾಡಿಕೊಂಡರೆ, ಎಡಭಾಗದಲ್ಲಿ Apps ಎಂದಿರುವಲ್ಲಿ kannadaslate ಅಂತ ಕಾಣಿಸುತ್ತದೆ. ಅದನ್ನು ಕ್ಲಿಕ್ ಮಾಡಿ, ಅದರಲ್ಲೇ ಬರೆದು, ಅಲ್ಲಿಯೇ ಫೇಸ್‌ಬುಕ್‌ಗೆ ಪೋಸ್ಟ್ ಮಾಡುವ ಅನುಕೂಲ ಇದೆ.

ಗೂಗಲ್, ಮೈಕ್ರೋಸಾಫ್ಟ್ ಸಹಿತ ಇಂತಹಾ ಸೇವೆ ಒದಗಿಸುವ ಸಾಕಷ್ಟು ಆನ್‌ಲೈನ್ ತಾಣಗಳಿವೆ. ಕನಿಷ್ಠ ಪಕ್ಷ ಈ ಮೇಲಿನವುಗಳನ್ನಾದರೂ ಬಳಸಿ, ಫೇಸ್‌ಬುಕ್‌ನಲ್ಲಿ kanglish ಬರೆಯುವುದನ್ನು ನಿಲ್ಲಿಸಲು ಪ್ರಯತ್ನಿಸಿ!

ಏನಿದು ಟ್ಯಾಬ್ಲೆಟ್, ಫ್ಯಾಬ್ಲೆಟ್, ಸ್ಮಾರ್ಟ್‌ಫೋನ್?

ವಿಜಯ ಕರ್ನಾಟಕ ಅಂಕಣ, ಸೆಪ್ಟೆಂಬರ್ 23, 2013 ಮಾಹಿತಿ @ ತಂತ್ರಜ್ಞಾನ.
ಒಂದು ವರದಿಯ ಪ್ರಕಾರ, ಟ್ಯಾಬ್ಲೆಟ್ ಮತ್ತು ಲ್ಯಾಪ್‌ಟಾಪ್ ಕಂಪ್ಯೂಟರುಗಳನ್ನು ಫ್ಯಾಬ್ಲೆಟ್ ಹಿಂದಿಕ್ಕಿದೆ. ಹಾಗಿದ್ದರೆ, ಬೇಸಿಕ್ ಫೋನ್, ಸ್ಮಾರ್ಟ್‌ಫೋನ್, ಫ್ಯಾಬ್ಲೆಟ್, ಟ್ಯಾಬ್ಲೆಟ್ ಎಂದರೇನು ಎಂಬುದು ಹಲವರ ಕುತೂಹಲ. ಈ ಕುರಿತು ಸ್ಥೂಲವಾಗಿ ತಿಳಿದುಕೊಳ್ಳೋಣ.

ಬೇಸಿಕ್ ಫೋನ್: ಇವು ಹೆಚ್ಚಿನವರು ಬಳಸುತ್ತಿರುವ ಮೊಬೈಲ್ ಫೋನ್‌ಗಳು. ಕರೆ, ಎಸ್ಎಂಎಸ್ ಮತ್ತು ಎಫ್ಎಂ ರೇಡಿಯೋ, ಕ್ಯಾಲ್ಕುಲೇಟರ್ ಮುಂತಾದ ಮೂಲಭೂತ ಅನುಕೂಲಗಳು ಇದರಲ್ಲಿರುತ್ತವೆ. ಕೆಲವು ಹ್ಯಾಂಡ್‌ಸೆಟ್‌ಗಳಲ್ಲಿ ಪುಟ್ಟ ಕ್ಯಾಮರಾ, ಟಾರ್ಚ್ ಲೈಟ್, ಇನ್ನು ಕೆಲವಲ್ಲಿ ಎರಡು ಸಿಮ್ ಕಾರ್ಡ್ ವ್ಯವಸ್ಥೆಯೂ ಇರಬಹುದು. ಬ್ಯಾಟರಿ ಚಾರ್ಜ್‌ನಲ್ಲಿ ಇವುಗಳನ್ನು ಮೀರಿಸುವುದು ಕೆಳಗೆ ಹೇಳಿದ ಯಾವುದೇ ಗ್ಯಾಜೆಟ್‌ಗಳಿಗೆ ಅಸಾಧ್ಯ. ಬೆಲೆ ತೀರಾ ಕಡಿಮೆ, 700 ರೂಪಾಯಿಯಿಂದ ಆರಂಭವಾಗುತ್ತವೆ.

ಸ್ಮಾರ್ಟ್‌ಫೋನ್: ಕಳೆದೆರಡು ವರ್ಷಗಳಲ್ಲಿ ಹೆಚ್ಚು ಸದ್ದು ಮಾಡಿದ್ದು ಸ್ಮಾರ್ಟ್‌ಫೋನ್‌ಗಳು. ಇಂಟರ್ನೆಟ್ ಸಂಪರ್ಕಿಸಬಹುದಾದ, ನಾಲ್ಕೈದು ಇಂಚಿಗಿಂತ ಕಡಿಮೆ ವಿಶಾಲವಾಗಿರುವ ಟಚ್ ಸ್ಕ್ರೀನ್ ಇರುವ (ಕೈಯಲ್ಲೇ ಸ್ಪರ್ಶಿಸುವ ಮೂಲಕ ಕಾರ್ಯಾಚರಿಸಬಹುದಾದ) ಮೊಬೈಲ್ ಫೋನ್‌ಗಳಿವು. ಬೇಸಿಕ್ ಫೋನ್‌ನ ಎಲ್ಲ ಸಾಮರ್ಥ್ಯಗಳಲ್ಲದೆ, ಫೇಸ್‌ಬುಕ್, ಟ್ವಿಟರ್ ಬೆಂಬಲದೊಂದಿಗೆ, ಉತ್ತಮ ಸಾಮರ್ಥ್ಯದ ಫೋಟೋ ಕ್ಯಾಮರಾ, ವೀಡಿಯೋ ಕ್ಯಾಮರಾಗಳು ಇದರಲ್ಲಿ ಅಡಕವಾಗಿರುತ್ತವೆ. ಎರಡು ಸಿಮ್ ಕಾರ್ಡ್ ವ್ಯವಸ್ಥೆಯೂ ಇರುತ್ತದೆ. ಬೆಲೆ ಮೂರು ಸಾವಿರ ರೂ. ಆಸುಪಾಸಿನಿಂದ ಆರಂಭವಾಗುತ್ತವೆ.

ಟ್ಯಾಬ್ಲೆಟ್: ಸ್ಮಾರ್ಟ್‌ಫೋನ್ ಬಳಿಕ ಹೆಚ್ಚು ಜನಪ್ರಿಯವಾಗತೊಡಗಿದ್ದು ಟ್ಯಾಬ್ಲೆಟ್. ಸ್ಮಾರ್ಟ್‌ಫೋನ್‌ಗೂ ಟ್ಯಾಬ್ಲೆಟ್ ಕಂಪ್ಯೂಟರ್‌ಗಳಿಗೂ ಇರಬಹುದಾದ ಮೂಲಭೂತ ವ್ಯತ್ಯಾಸವೆಂದರೆ ಪರದೆಯ ಗಾತ್ರ. 7 ಇಂಚಿಗಿಂತ ಮೇಲ್ಪಟ್ಟು 10 ಇಂಚು ಒಳಗಿರುವಷ್ಟು ವಿಶಾಲವಾದ ಪರದೆಯುಳ್ಳ, ಪುಟ್ಟ ಕಂಪ್ಯೂಟರ್‌ಗಳಿವು. ಕೆಲವು ಟ್ಯಾಬ್ಲೆಟ್ ಕಂಪ್ಯೂಟರ್‌ಗಳಲ್ಲಿ ಕರೆ ಮಾಡುವ ವ್ಯವಸ್ಥೆಯೂ ಇರುತ್ತದೆ. ಇಲ್ಲವಾದಲ್ಲಿ, ಸಿಮ್ ಕಾರ್ಡ್ ಹಾಕಲು ಸಾಧ್ಯವಿಲ್ಲದ, ಕೇವಲ ವೈ-ಫೈ ಅಥವಾ ಇಂಟರ್ನೆಟ್ ಡಾಂಗಲ್‌ಗಳ (ಇಂಟರ್ನೆಟ್ ಸಂಪರ್ಕಕ್ಕೆ ಏರ್‌ಟೆಲ್, ಬಿಎಸ್ಎನ್ಎಲ್, ಟಾಟಾ ಡೊಕೊಮೊ, ರಿಲಯನ್ಸ್, ವೊಡಾಫೋನ್, ಏರ್‌ಸೆಲ್, ಐಡಿಯಾ ಮುಂತಾದ ಕಂಪನಿಗಳು ಒದಗಿಸುತ್ತಿರುವ, ಪೆನ್‌ಡ್ರೈವ್‌ನಂತಹಾ ಸಾಧನ) ಮೂಲಕ ಮಾತ್ರ ಇಂಟರ್ನೆಟ್ ಸಂಪರ್ಕಿಸುವ ಅವಕಾಶವಿರುತ್ತದೆ. ಟ್ಯಾಬ್ಲೆಟ್‌ಗಳಿಗೆ ಬಾಹ್ಯ ಕೀಬೋರ್ಡ್ ಅಳವಡಿಸಿ ಟೈಪ್ ಮಾಡುವ ಅವಕಾಶವಿದ್ದು, ಪರದೆಯೇ ವಿಶಾಲವಾಗಿರುವುದರಿಂದ ಮೇಜಿನ ಮೇಲಿಟ್ಟು ಟೈಪ್ ಮಾಡಲು ಸ್ಮಾರ್ಟ್‌ಫೋನ್‌ಗಳಿಗಿಂತ ಹೆಚ್ಚಿನ ಅನುಕೂಲವಿದೆ. ಬೆಲೆ ನಾಲ್ಕು ಸಾವಿರ ರೂಪಾಯಿಯಿಂದಲೇ ಆರಂಭವಾಗುತ್ತದೆ. ಬ್ರ್ಯಾಂಡೆಡ್ ಕಂಪನಿಯ ಟ್ಯಾಬ್ಲೆಟ್‌ಗಳ ಬೆಲೆ ಹತ್ತು ಸಾವಿರ ರೂಪಾಯಿಗಿಂತ ಮೇಲಿರುತ್ತದೆ.

ಟ್ಯಾಬ್ಲೆಟ್ ಕೊಳ್ಳುವವರು ಕೆಲವೊಮ್ಮೆ ಮೋಸ ಹೋಗುವುದೂ ಉಂಟು. ಯಾಕೆಂದರೆ, ಕಾಲಿಂಗ್ ವ್ಯವಸ್ಥೆಯುಳ್ಳ, ಅಂದರೆ ಸಿಮ್ ಕಾರ್ಡ್ ಹಾಕಲು ಅವಕಾಶವುಳ್ಳ ಟ್ಯಾಬ್ಲೆಟ್‌ಗಳಿಗೆ ಬೆಲೆ ಹೆಚ್ಚು. ಸಿಮ್ ಆಯ್ಕೆ ಇಲ್ಲದಿರುವ, ವೈಫೈ ಅಥವಾ ಡಾಂಗಲ್ ಮೂಲಕ ಮಾತ್ರ ಇಂಟರ್ನೆಟ್ ಸಂಪರ್ಕಿಸಬಹುದಾಗಿರುವ ಟ್ಯಾಬ್ಲೆಟ್‌ಗಳಿಗೆ ಬೆಲೆ ಕಡಿಮೆ. ಮಾಡೆಲ್ ಹೆಸರು ಒಂದೇ ರೀತಿಯಾಗಿದ್ದರೂ, ಮಾಡೆಲ್ ಸಂಖ್ಯೆಯಲ್ಲಿ ವ್ಯತ್ಯಾಸ ಇರುತ್ತದೆ. ಇದನ್ನು ಗಮನಿಸಬೇಕು.

ಫ್ಯಾಬ್ಲೆಟ್: ಇನ್ನು ಇತ್ತೀಚೆಗೆ ಎಲ್ಲರ ಕುತೂಹಲ ಕೆರಳಿಸಿರುವುದು ಫ್ಯಾಬ್ಲೆಟ್. ಇದು ಮೂಲತಃ ಸ್ಮಾರ್ಟ್‌ಫೋನ್ ಮತ್ತು ಟ್ಯಾಬ್ಲೆಟ್‌ಗಳ ನಡುವೆ ಇರುವ ಮೊಬೈಲ್ ಫೋನ್ (Phone + Tablet = Phablet). ಅಂದರೆ, ಸ್ಮಾರ್ಟ್‌ಫೋನ್‌ಗಳ ಹಾಗೂ ಟ್ಯಾಬ್ಲೆಟ್‌ಗಳ ಕೆಲಸದೊಂದಿಗೆ ಮುಖ್ಯವಾಗಿ ಎದ್ದುಕಾಣುವ ಗುಣವೈಶಿಷ್ಟ್ಯವೆಂದರೆ ಅದರ ಸ್ಕ್ರೀನ್ ಗಾತ್ರ. ಇದರ ಪರದೆಯು ನಾಲ್ಕೈದು ಮೇಲ್ಪಟ್ಟು, 7 ಇಂಚಿಗಿಂತ ಕಡಿಮೆ ಇರುತ್ತದೆ. ಟ್ಯಾಬ್ಲೆಟ್‌ನಂಥದ್ದೇ ಕೆಲಸ ಮಾಡುವುದರಿಂದ ಜೇಬಿನಲ್ಲಿ ಹೊತ್ತೊಯ್ಯಲು ಸುಲಭ. ದೊಡ್ಡ ಗಾತ್ರದಲ್ಲಿ ಇಂಟರ್ನೆಟ್‌ನಲ್ಲಿ ಸೈಟ್‌ಗಳನ್ನು ನೋಡಬಹುದು ಮತ್ತು ಪಿಡಿಎಫ್ ರೀಡರ್ ಮೂಲಕ ಪಿಡಿಎಫ್ ರೂಪದ ಪುಸ್ತಕಗಳನ್ನೂ ಓದಬಹುದು. ಎರಡು ಸಿಮ್ ಕಾರ್ಡ್‌ಗಳನ್ನೂ ಬಳಸಬಹುದು. ಒಂದನ್ನು ಕರೆ-ಎಸ್ಎಂಎಸ್‌ಗಳಿಗಾಗಿ ಮತ್ತೊಂದನ್ನು ಇಂಟರ್ನೆಟ್ ಸಂಪರ್ಕಕ್ಕಾಗಿ ಬಳಸಬಹುದು.

ಒಂದು ಫೋನ್ ಹಾಗೂ ಮತ್ತೊಂದು ಟ್ಯಾಬ್ಲೆಟ್ ಹೊಂದಿರುವುದು ಇತ್ತೀಚೆಗೆ ನಗರ ಪ್ರದೇಶಗಳಲ್ಲಿ ಸಾಮಾನ್ಯವಾಗುತ್ತಿದೆ. ಕಾರಣವೆಂದರೆ, ಇಂಟರ್ನೆಟ್ ಸಂಪರ್ಕಕ್ಕೆ ಬ್ಯಾಟರಿಯ ಅಗತ್ಯ ಹೆಚ್ಚಿರುತ್ತದೆ, ಬಲುಬೇಗನೇ ಪದೇ ಪದೇ ಚಾರ್ಜ್ ಮಾಡಬೇಕಾಗುತ್ತದೆ. ಹೀಗಾಗಿ ಫೋನ್ ಕರೆಗಳಿಗೆ ಸಮಸ್ಯೆಯಾಗುತ್ತದೆ. ಇದಕ್ಕಾಗಿಯೇ ಕರೆಗಳಿಗಾಗಿ ಪ್ರತ್ಯೇಕ ಬೇಸಿಕ್/ಸ್ಮಾರ್ಟ್‌ಫೋನ್, ಇಂಟರ್ನೆಟ್ ಸಂಪರ್ಕಕ್ಕೆ, ವೀಡಿಯೋ ವೀಕ್ಷಣೆಗೆ ಒಂದು ಟ್ಯಾಬ್ಲೆಟ್.

ಸದಾಕಾಲ ಎರಡನ್ನೂ ಒಯ್ಯುವುದು ಕಷ್ಟ ಎಂದುಕೊಳ್ಳುವವರು, ಫ್ಯಾಬ್ಲೆಟ್‌ಗಳ ಮೊರೆ ಹೋಗುತ್ತಿರುವುದರಿಂದಾಗಿಯೇ ಅವುಗಳ ಮಾರಾಟ ಹೆಚ್ಚಾಗಿರುವುದು. ಇಂಟರ್‌ನ್ಯಾಷನಲ್ ಡೇಟಾ ಕಾರ್ಪೊರೇಶನ್ ವರದಿ ಪ್ರಕಾರ, ಏಷ್ಯಾ ಪೆಸಿಫಿಕ್ ಪ್ರದೇಶಕ್ಕಾಗಿ 2013ರ ಎರಡನೇ ತ್ರೈಮಾಸಿಕ (ಏಪ್ರಿಲ್‌ನಿಂದ ಸೆಪ್ಟೆಂಬರ್) ಅವಧಿಯಲ್ಲಿ 2.52 ಕೋಟಿ ಫ್ಯಾಬ್ಲೆಟ್‌ಗಳು ಮಾರುಕಟ್ಟೆಗೆ ಬಂದಿದ್ದರೆ, 1.26 ಕೋಟಿ ಟ್ಯಾಬ್ಲೆಟ್‌ಗಳು ಮತ್ತು 1.27 ಕೋಟಿ ಪೋರ್ಟೆಬಲ್ ಕಂಪ್ಯೂಟರುಗಳು ರವಾನೆಯಾಗಿವೆ. ಕಳೆದ ವರ್ಷದ 2ನೇ ತ್ರೈಮಾಸಿಕ ಅವಧಿಯಲ್ಲಿ ಶೇ.5ರ ಮಾರುಕಟ್ಟೆ ಪಾಲು ಹೊಂದಿದ್ದ ಫ್ಯಾಬ್ಲೆಟ್‌ಗಳು ಈ ವರ್ಷ ಶೇ.30ಕ್ಕೆ ಜಿಗಿದಿವೆ.

ಸ್ಮಾರ್ಟ್‌ಫೋನ್‌ನಲ್ಲಿ ಇನ್‌ಬಿಲ್ಟ್ ಕನ್ನಡ ಟೈಪಿಂಗ್ ತಂತ್ರಾಂಶ

ಮಾಹಿತಿ@ತಂತ್ರಜ್ಞಾನ: ವಿಕ ಅಂಕಣ-52, 16 ಸೆಪ್ಟೆಂಬರ್ 2013
ಸ್ಮಾರ್ಟ್‌ಫೋನ್‌ಗಳ ಬಗ್ಗೆ ಭಾರತೀಯರಿಗೆ ಆಸಕ್ತಿ/ಆಕರ್ಷಣೆ ಹೆಚ್ಚಾಗುತ್ತಿರುವುದನ್ನು ಅಗ್ಗದ ಫೋನ್ ತಯಾರಕ ಕಂಪನಿಗಳು ಸರಿಯಾಗಿಯೇ ಮನಗಂಡಿವೆ. ಬ್ರ್ಯಾಂಡೆಡ್ ಫೋನ್‌ಗಳ ಬೆಲೆಯಿಂದಾಗಿ ಕಂಗೆಟ್ಟಿರುವ ಗ್ರಾಹಕರಿಗೆ ದೇಶೀ ಕಂಪನಿಗಳು ಸಾಕಷ್ಟು ವೈಶಿಷ್ಟ್ಯಗಳನ್ನು ಕಡಿಮೆ ದರದಲ್ಲಿ ನೀಡುತ್ತಾ ಆಕರ್ಷಿಸುತ್ತಿವೆ. ಭಾರತೀಯರಿಗೆ ತಮ್ಮ ಭಾಷೆಯ ಮೇಲೆ ಅಭಿಮಾನ ಹೆಚ್ಚು ಎಂಬುದನ್ನು ಅವುಗಳು ತಿಳಿದುಕೊಂಡಷ್ಟು ಬ್ರ್ಯಾಂಡೆಡ್ ಕಂಪನಿಗಳು ಅರ್ಥ ಮಾಡಿಕೊಂಡಂತಿಲ್ಲ. ನಮ್ಮ ನಮ್ಮ ಮಾತೃ ಭಾಷೆಯಲ್ಲೇ (ನಮಗಾದರೆ ಕನ್ನಡ) ಓದಬೇಕು ಮತ್ತು ಬರೆಯುವಂತಾಗಬೇಕು ಎಂಬ ಭಾರತೀಯರ ತುಡಿತವನ್ನು ಮನಗಂಡ ಸ್ಥಳೀಯ ಕಂಪನಿಗಳು ಇದಕ್ಕೆ ಪೂರಕವಾಗಿ ಕೆಲಸ ಮಾಡಿವೆ ಎಂಬುದಕ್ಕೆ ಒಂದು ಉದಾಹರಣೆ ಇಲ್ಲಿದೆ.

ದೊಡ್ಡ ದೊಡ್ಡ ಮೊಬೈಲ್ ಫೋನ್ ತಯಾರಕ ಸಂಸ್ಥೆಗಳು ಮಾಡದೇ ಇರುವುದನ್ನು ಇಂಟೆಕ್ಸ್ ಎಂಬ ಎಲೆಕ್ಟ್ರಾನಿಕ್ಸ್ ತಯಾರಕ ತಂತ್ರಜ್ಞಾನ ಸಂಸ್ಥೆಯೊಂದು ಮಾಡಿ ತೋರಿಸಿದೆ. ಅದರ ಕೆಲವು ಆಂಡ್ರಾಯ್ಡ್ ಕಾರ್ಯಾಚರಣಾ ವ್ಯವಸ್ಥೆಯುಳ್ಳ (ಆಪರೇಟಿಂಗ್ ಸಿಸ್ಟಂ) ಸ್ಮಾರ್ಟ್‌ಫೋನ್‌ಗಳಲ್ಲಿ ಕನ್ನಡ ಸಹಿತ ಭಾರತದ ಒಟ್ಟು 17 ಭಾಷೆಗಳಲ್ಲಿ ಟೈಪ್ ಮಾಡುವ ತಂತ್ರಾಂಶವು ಇನ್-ಬಿಲ್ಟ್ ಆಗಿಯೇ ಬರುತ್ತಿದೆ ಎಂಬುದು ತಿಳಿದದ್ದೇ ಅದನ್ನು ಕೊಂಡುಕೊಂಡ ಬಳಿಕ.

ಈ ಅಪ್ಲಿಕೇಶನ್ ಹೆಸರು “ಮಾತೃಭಾಷಾ”. ನನಗೆ ತಿಳಿದ ಮಟ್ಟಿಗೆ ಈ ಆ್ಯಪ್ ಸದ್ಯಕ್ಕೆ ಬೇರೆ ಯಾವುದೇ ಮೊಬೈಲ್/ಸ್ಮಾರ್ಟ್‌ಫೋನ್‌ಗಳಿಗೆ ಲಭ್ಯವಿಲ್ಲ.

ಈ ಕನ್ನಡ ಕೀಬೋರ್ಡ್ ಉಳಿದೆಲ್ಲ ಕೀಬೋರ್ಡ್ ಶೈಲಿಗಳಿಗಿಂತ (ಟ್ರಾನ್ಸ್‌ಲಿಟರೇಶನ್/ಕೆಜಿಪಿ/ಇನ್‌ಸ್ಕ್ರಿಪ್ಟ್ ಇತ್ಯಾದಿ) ವಿಭಿನ್ನ. ಯಾವುದೇ ಒಂದು ವ್ಯಂಜನಾಕ್ಷರವನ್ನು ಒತ್ತಿದರೆ, ಅದು ಸ್ವರಾಕ್ಷರದೊಂದಿಗೆ ಕೂಡಿಕೊಂಡು ಆಗುವ ಗುಣಿತಾಕ್ಷರಗಳೆಲ್ಲವೂ ಕೀಬೋರ್ಡ್ ಮೇಲೆ ಪ್ರದರ್ಶಿತವಾಗುತ್ತದೆ. ಉದಾ. ಕ ಎಂಬ ಕೀಲಿ ಒತ್ತಿದರೆ, ಅದರ ಕಾಗುಣಿತಾಕ್ಷರಗಳಾದ ಕಾ, ಕಿ, ಕೀ, ಕು, ಕೂ…. ಹೀಗೆ ಎಲ್ಲವೂ ಪ್ರದರ್ಶಿತಗೊಳ್ಳುತ್ತವೆ. ಎಲ್ಲ ವ್ಯಂಜನಾಕ್ಷರಗಳಿಗೂ ಈ ವ್ಯವಸ್ಥೆ ಇದೆ. ಹೀಗಾಗಿ ವ್ಯಂಜನಗಳನ್ನು ಒತ್ತಿದ ಬಳಿಕ ಸ್ವರಾಕ್ಷರದ ಕೂಡಿಕೆಗಳಿಗಾಗಿ ತಡಕಾಡಬೇಕಾದ ಪ್ರಮೇಯ ಇಲ್ಲಿರುವುದಿಲ್ಲ.

ಈ ಸ್ಮಾರ್ಟ್‌ಫೋನ್‌ನಲ್ಲಿ ಕನ್ನಡ (ಅಥವಾ ಬೇರಾವುದೇ ಭಾರತೀಯ) ಭಾಷೆಯ ಕೀಬೋರ್ಡ್ ‘ಮಾತೃಭಾಷಾ’ ಎನೇಬಲ್ ಮಾಡಬೇಕಿದ್ದರೆ ನೀವು ಮಾಡಬೇಕಾದುದಿಷ್ಟು: ಅದರ ಸೆಟ್ಟಿಂಗ್ಸ್ ಪುಟಕ್ಕೆ ಹೋಗಿ. ಲ್ಯಾಂಗ್ವೇಜ್ ಆಂಡ್ ಇನ್‌ಪುಟ್ಸ್ ಎಂದಿರುವಲ್ಲಿ ಕ್ಲಿಕ್ ಮಾಡಿ, ಡೀಫಾಲ್ಟ್ ಅಂತ ಇರುವಲ್ಲಿ ಕನ್ನಡ ಆಯ್ಕೆ ಮಾಡಿಕೊಳ್ಳಿ.

ಯಾವುದೇ ಎಸ್ಎಂಎಸ್/ಇಮೇಲ್ ಅಥವಾ ಇನ್ಯಾವುದೇ ಸಂದೇಶ ಬರೆಯಬೇಕಿದ್ದರೆ, ಸ್ಕ್ರೀನ್ ಮೇಲೆ ಕೀಬೋರ್ಡ್ ಕಾಣಿಸಿಕೊಳ್ಳುತ್ತದೆ. ಅಲ್ಲಿ ಬಲಭಾಗದಲ್ಲಿ ‘ಕನ್ನ’ ಎಂಬ ಬಟನ್ ಕ್ಲಿಕ್ ಮಾಡಿದರೆ, ಕನ್ನಡದಲ್ಲಿ ಟೈಪ್ ಮಾಡಬಹುದು. ಕನ್ನಡ ಆ್ಯಕ್ಟಿವ್ ಆದ ಬಳಿಕ ಅದೇ ಕೀಲಿಯು ABC ಆಗಿ ಪರಿವರ್ತಿಸುತ್ತದೆ. ಅದನ್ನು ಕ್ಲಿಕ್ ಮಾಡಿದರೆ ಇಂಗ್ಲಿಷ್ ಟೈಪ್ ಮಾಡಬಹುದು.

ಓದಲು ತೀರಾ ಕಷ್ಟವಾಗುವ, ಅಥವಾ ಓದುವುದೇ ಬೇಡ ಅನ್ನಿಸುವ ರೀತಿಯಲ್ಲಿ ಬರೆಯಲಾಗುವ ಕಂಗ್ಲಿಷ್ (ಇಂಗ್ಲಿಷ್ ಲಿಪಿಯಲ್ಲಿ ಕನ್ನಡ) ಭಾಷೆಗೆ ತಿಲಾಂಜಲಿ ನೀಡುವ ನಿಟ್ಟಿನಲ್ಲಿ ಇದು ಕೂಡ ಒಂದು ಪ್ರಮುಖ ಹೆಜ್ಜೆ ಎಂದುಕೊಳ್ಳಬಹುದು. ಇಂಟೆಕ್ಸ್ ಕಂಪನಿಯ ಆಕ್ವಾ ಸರಣಿಯ ಸ್ಮಾರ್ಟ್‌ಫೋನ್‌ಗಳಲ್ಲಿ ಈ ವ್ಯವಸ್ಥೆ ಲಭ್ಯವಿದೆ. ಈ ಕೀಬೋರ್ಡನ್ನು ಬಳಸಿ, ಫೇಸ್‌ಬುಕ್, ಟ್ವಿಟರ್ ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ, ಅದೇ ರೀತಿ ವಿಜಯ ಕರ್ನಾಟಕ ಡಾಟ್ ಕಾಂ ತಾಣದಲ್ಲಿನ ಸುದ್ದಿ/ಲೇಖನಗಳಿಗೆ ನಿಮ್ಮ ಅನಿಸಿಕೆಗಳನ್ನು ಕೂಡ ಅಚ್ಚ ಕನ್ನಡದಲ್ಲಿ ಪ್ರಕಟಿಸಬಹುದು. ಕನ್ನಡ ಮಾತ್ರವಲ್ಲದೆ, ನಿಮಗೆ ಬೇರಾವುದೇ ಭಾಷೆಗಳು ಗೊತ್ತಿದ್ದರೆ, ಆಯಾ ಭಾಷೆಯ ಸ್ನೇಹಿತರೊಂದಿಗೆ ವ್ಯವಹರಿಸಲು ಈ ಕೀಬೋರ್ಡನ್ನು ಬಳಸಬಹುದು. ಹಿಂದಿ, ಉರ್ದು, ತಮಿಳು, ಬಂಗಾಳಿ, ಅಸ್ಸಾಮೀಸ್, ಪಂಜಾಬಿ, ಗುಜರಾತಿ, ಸಂಸ್ಕೃತ, ಮೈಥಿಲಿ, ಮರಾಠಿ, ಬೋಡೋ, ಸಂತಾಲಿ, ಮಣಿಪುರಿ, ಸಿಂಧಿ, ಡೋಗ್ರಿ, ಕೊಂಕಣಿ, ನೇಪಾಳಿ, ಮಲಯಾಳಂ, ಒಡಿಯಾ ಮತ್ತು ತೆಲುಗು ಭಾಷೆಗಳ ಕೀಬೋರ್ಡ್‌ಗಳು ಇಲ್ಲಿ ಲಭ್ಯ ಇವೆ.

ಮೊಬೈಲ್ ಫೋನ್ ದಿಗ್ಗಜ ಸಂಸ್ಥೆಗಳೇ ಒದಗಿಸದ ಮತ್ತು ಕೇವಲ ಹೊರಗಿನ ಅಪ್ಲಿಕೇಶನ್‌ಗಳನ್ನು ಸ್ಥಾಪಿಸಿದರೆ ಮಾತ್ರವೇ ಕನ್ನಡ ಟೈಪಿಂಗ್ ಅವಕಾಶ ನೀಡುವ ಸ್ಮಾರ್ಟ್‌ಫೋನ್‌ಗಳ ನಡುವೆ, ಬಳಕೆಗೆ ಸರಳವೂ ಆಗಿರುವ ಕೀಬೋರ್ಡ್ ತಂತ್ರಾಂಶವನ್ನು ಅಷ್ಟೇನೂ ಹೆಸರು ಮಾಡದ ಕಂಪನಿಯೊಂದು ತನ್ನ ಸ್ಮಾರ್ಟ್‌ಫೋನ್‌ನಲ್ಲಿ ಅಳವಡಿಸಿಯೇ ನೀಡುತ್ತದೆ ಎಂಬುದು ಬ್ರ್ಯಾಂಡೆಡ್ ಕಂಪನಿಗಳು ಎಚ್ಚೆತ್ತುಕೊಳ್ಳುವಂತೆ ಮಾಡಬೇಕಾದ ಕರೆಗಂಟೆಯೂ ಹೌದು.

ಕಂಪ್ಯೂಟರ್ ಸ್ಪೀಡ್ ಹೆಚ್ಚಿಸಬೇಕೇ? ಅನಗತ್ಯ ಸರ್ವಿಸ್‌ಗಳನ್ನು ನಿಲ್ಲಿಸಿ

ಮಾಹಿತಿ@ತಂತ್ರಜ್ಞಾನ: ಅವಿನಾಶ್ ಬಿ. ವಿಕ ಅಂಕಣ-51:  09, ಸೆಪ್ಟೆಂಬರ್, 2013

ವಿಂಡೋಸ್ ಎಕ್ಸ್‌ಪಿ ಕಂಪ್ಯೂಟರಿನಲ್ಲಿ ಕೆಲಸ ಮಾಡುತ್ತಿರುವಾಗ ಕೆಲವೊಮ್ಮೆ ತೀರಾ ಸ್ಲೋ ಇದೆ ಅಂತ ನಿಮಗೆ ಅನ್ನಿಸಿರಬಹುದು. ಇದಕ್ಕೆ ಪ್ರಮುಖ ಕಾರಣಗಳಲ್ಲೊಂದು, ಹಲವಾರು ಪ್ರೋಗ್ರಾಂಗಳು, ಸರ್ವಿಸ್‌ಗಳು ಡೀಫಾಲ್ಟ್ ಆಗಿ ಚಲಾವಣೆಯಲ್ಲಿರುವುದು ಅಥವಾ ಬ್ಯಾಕ್‌ಗ್ರೌಂಡ್‌ನಲ್ಲೇ ರನ್ ಆಗುತ್ತಿರುವುದು. ಹೀಗೆ ರನ್ ಆಗುತ್ತಿರುವ ಸರ್ವಿಸ್‌ಗಳಲ್ಲಿ ಅಗತ್ಯವಿಲ್ಲದಿರುವುದನ್ನು ನಿಲ್ಲಿಸುವ ಮೂಲಕ, ಸಿಸ್ಟಮ್ ವೇಗವಾಗಿ ಕಾರ್ಯಾಚರಿಸುವಂತೆ ಮಾಡಬಹುದು.

ಕೆಲವೊಂದು ಅನಗತ್ಯವಾದ ಮೈಕ್ರೋಸಾಫ್ಟ್ ಸರ್ವಿಸ್‌ಗಳನ್ನು ಕೆಳಗೆ ಉಲ್ಲೇಖಿಸಲಾಗಿದೆ. ಅವುಗಳನ್ನು ಡಿಸೇಬಲ್ ಮಾಡಿ, ಕಂಪ್ಯೂಟರ್ ರೀಸ್ಟಾರ್ಟ್ ಮಾಡಿದರೆ, ನಿಮ್ಮ ಪಿಸಿ ವೇಗವಾಗಿ ಕೆಲಸ ಮಾಡಬಲ್ಲುದು.

ಮೈಕ್ರೋಸಾಫ್ಟ್ ಸರ್ವಿಸಸ್‌ಗೆ ಹೋಗುವುದು ಹೇಗೆಂದರೆ…

Start ಬಟನ್ ಒತ್ತಿ, Settings ಗೆ ಹೋಗಿ, Control Panel ನಲ್ಲಿ Administrative Tools ಡಬಲ್ ಕ್ಲಿಕ್ ಮಾಡಿ. ನಂತರ Services ಡಬಲ್ ಕ್ಲಿಕ್ ಮಾಡಿ, ನಿಮಗೆ ಬೇಕಾದ ಸರ್ವಿಸ್ ಅನ್ನು ಆಯ್ದುಕೊಳ್ಳಿ. ಎಡ ಭಾಗದಲ್ಲಿ ಸ್ಟಾಪ್ ಅಥವಾ ಮ್ಯಾನ್ಯುಯಲ್ ಎಂಬ ಬಟನ್ ಕಾಣಿಸುತ್ತದೆ. ಇಲ್ಲವೇ, ರೈಟ್-ಕ್ಲಿಕ್ ಮಾಡಿ, ಅದರ ಪ್ರಾಪರ್ಟೀಸ್ ನೋಡಿದರೆ, ಸ್ಟಾಪ್ ಬಟನ್ ಕಾಣಿಸುತ್ತದೆ. ಡಿಸೇಬಲ್ ಮಾಡಿದರೆ ನಿಷ್ಕ್ರಿಯಗೊಳಿಸಬಹುದು, ಮ್ಯಾನ್ಯುಯಲ್ ಒತ್ತಿದರೆ ಬೇಕಾದಾಗ ಮಾತ್ರ ಓಪನ್ ಮಾಡಬಹುದು.

ಕಂಪ್ಯೂಟರನ್ನು ತೀರಾ ಸಾಮಾನ್ಯ ಕಾರ್ಯಗಳಿಗೆ ಬಳಸುವವರಿಗೆ ಅಷ್ಟೇನೂ ಅಗತ್ಯವಿಲ್ಲದ ಈ ಕೆಳಗಿನ ಸರ್ವಿಸ್‌ಗಳನ್ನು ಡಿಸೇಬಲ್ ಮಾಡಬಹುದು:

1. ಸ್ಮಾರ್ಟ್ ಕಾರ್ಡ್/ಸ್ಮಾರ್ಟ್ ಕಾರ್ಡ್ ಹೆಲ್ಪರ್: ನಿಮ್ಮ ಪಿಸಿಯಲ್ಲಿ ಸ್ಮಾರ್ಟ್ ಕಾರ್ಡ್ ಸಿಸ್ಟಂ ಇಲ್ಲದಿದ್ದರೆ, ಇದರ ಅಗತ್ಯವೇ ಇರುವುದಿಲ್ಲ.

2. ಟಿಸಿಪಿ/ಐಪಿ ನೆಟ್‌ಬಯೋಸ್ ಹೆಲ್ಪರ್: ನೆಟ್‌ಬಯೋಸ್ ರನ್ ಮಾಡುವವರಿಗೆ ಮಾತ್ರ ಇದರ ಅಗತ್ಯವಿರುವುದರಿಂದ, ಇದನ್ನೂ ನಿಲ್ಲಿಸಬಹುದು.

3. ಅನ್‌ಇಂಟರಪ್ಟಿಬಲ್ ಪವರ್ ಸಪ್ಲೈ: ಯುಪಿಎಸ್ ಇಲ್ಲವೆಂದಾದರೆ ಈ ಸರ್ವಿಸ್ ಅನ್ನು ಡಿಸೇಬಲ್ ಮಾಡಬಹುದು.

4. ರಿಮೋಟ್ ರಿಜಿಸ್ಟ್ರಿ ಸರ್ವಿಸ್: ನೆಟ್‌ವರ್ಕ್ ಕನೆಕ್ಷನ್ ಮೂಲಕ ರಿಮೋಟ್ ಆಗಿ ರಿಜಿಸ್ಟ್ರಿ ಎಡಿಟ್ ಮಾಡಲು ಈ ಸರ್ವಿಸ್ ಬೇಕಾಗುತ್ತದೆ. ಗೊತ್ತಿದ್ದರೆ ಮಾತ್ರ ಆನ್ ಇರಿಸಿ, ಇಲ್ಲವೆಂದಾದರೆ ಸೆಕ್ಯುರಿಟಿ ಉದ್ದೇಶಕ್ಕಾಗಿ ಅದನ್ನು ನಿಲ್ಲಿಸಿಬಿಡಿ.

5. ಎರರ್ ರಿಪೋರ್ಟಿಂಗ್ ಸರ್ವಿಸ್: ಪ್ರೋಗ್ರಾಂ ಕ್ರ್ಯಾಶ್ ಆದಾಗ, ಅದರ ಬಗ್ಗೆ ವರದಿ ತಿಳಿಯಲು ಮೈಕ್ರೋಸಾಫ್ಟ್ ಬಯಸುತ್ತದೆ. ಇನ್ನು ಮುಂದೆ ಎಕ್ಸ್‌ಪಿ ಸಿಸ್ಟಂಗಳಿಗೆ ಮೈಕ್ರೋಸಾಫ್ಟ್ ಯಾವುದೇ ಬೆಂಬಲ ನೀಡುವುದಿಲ್ಲ ಎಂಬುದು ಖಚಿತವಾಗಿರುವುದರಿಂದ, ಇದನ್ನೂ ನಿಲ್ಲಿಸಬಹುದು.

6. ವೈರ್‌ಲೆಸ್ ಜೀರೋ ಕಾನ್ಫಿಗರೇಶನ್: ವೈಫೈ ಬಳಸುತ್ತಿದ್ದರೆ ಮಾತ್ರ ಇದನ್ನು ಆನ್ ಆಗಿರಿಸಿ. ಇಲ್ಲವೆಂದಾದರೆ ನಿಲ್ಲಿಸಿ.

7. ಅಲರ್ಟರ್: ಇದನ್ನೂ ಆಫ್ ಮಾಡಿಡಬಹುದು.

8. ಕ್ಲಿಪ್‌ಬುಕ್: ಖಾಸಗಿ ನೆಟ್‌ವರ್ಕ್‌ನಾದ್ಯಂತವಾಗಿ ಕಟ್ ಆಂಡ್ ಪೇಸ್ಟ್ ಮಾಡಲು ಈ ಸರ್ವಿಸ್ ಅನುಕೂಲ ಕಲ್ಪಿಸುತ್ತದೆ. ಹೆಚ್ಚಿನ ಪ್ರೋಗ್ರಾಂಗಳಲ್ಲೇ ಈ ವ್ಯವಸ್ಥೆ ಇರುವುದರಿಂದ ಇದನ್ನು ನಿಲ್ಲಿಸಬಹುದು.

9. ಕಂಪ್ಯೂಟರ್ ಬ್ರೌಸರ್: ನೀವು LAN (ಲೋಕಲ್ ಏರಿಯಾ ನೆಟ್‌ವರ್ಕ್)ನಲ್ಲಿದ್ದರೆ, ಇದು ಎನೇಬಲ್ ಆಗಿರಲಿ. ಇಲ್ಲವೆಂದಾದರೆ, ನಿಲ್ಲಿಸಿಬಿಡಿ. ನೆಟ್‌ವರ್ಕ್‌ನಲ್ಲಿರುವ ಬೇರೆ ಕಂಪ್ಯೂಟರ್‌ಗಳನ್ನು ನೋಡಲು ಇದು ಅನುಕೂಲ ಕಲ್ಪಿಸುತ್ತದೆ.

10. ಫಾಸ್ಟ್‌ಯೂಸರ್ ಸ್ವಿಚಿಂಗ್ ಕಂಪ್ಯಾಟಿಬಿಲಿಟಿ: ನಿಮ್ಮ ಕಂಪ್ಯೂಟರಿನಲ್ಲಿ ಹಲವು ಬಳಕೆದಾರರಿಗೆ ಪ್ರತ್ಯೇಕ ಲಾಗಿನ್/ಯೂಸರ್ ಐಡಿ ಸೃಷ್ಟಿಸಿದ್ದರೆ ಮಾತ್ರ ಇದು ಅಗತ್ಯ. ಒಬ್ಬರೇ, ಒಂದೇ ಲಾಗಿನ್ ಮೂಲಕ ಕಂಪ್ಯೂಟರ್ ಬಳಸುತ್ತೀರೆಂದಾದರೆ ಇದರ ಅವಶ್ಯಕತೆಯಿರುವುದಿಲ್ಲ.

11. ಮೆಸೆಂಜರ್ ಸರ್ವಿಸ್: ಇದನ್ನು ನಿಷ್ಕ್ರಿಯಗೊಳಿಸಬಹುದು. ಯಾಕೆಂದರೆ ಹೆಚ್ಚಿನವರು ಇದನ್ನು ಬಳಸುತ್ತಿಲ್ಲ.

12. ನೆಟ್‌ಮೀಟಿಂಗ್ ರಿಮೋಟ್ ಡೆಸ್ಕ್‌ಟಾಪ್ ಶೇರಿಂಗ್: ನೆಟ್‌ಮೀಟಿಂಗ್ ಉಪಯೋಗಿಸುತ್ತಿಲ್ಲವೆಂದಾದರೆ, ಇದನ್ನು ನಿಲ್ಲಿಸಿ.

13. ನೆಟ್‌ವರ್ಕ್ ಡಿಡಿಇ/ನೆಟ್‌ವರ್ಕ್ ಡಿಡಿಇ ಡಿಎಸ್‌ಡಿಎಂ: ಇದರ ಅಗತ್ಯವಿರುವುದಿಲ್ಲವಾಗಿರುವುದರಿಂದ ಸ್ಟಾಪ್ ಮಾಡಿಬಿಡಿ.

14. ಟೆಲ್‌ನೆಟ್ ಸರ್ವಿಸ್: ರಿಮೋಟ್ ಸ್ಥಳದಿಂದ ನಿಮ್ಮ ಕಂಪ್ಯೂಟರಿಗೆ ಲಾಗಿನ್ ಆಗಲು ಇದು ಅನುಕೂಲ ಕಲ್ಪಿಸುತ್ತದೆ. ಇದರಲ್ಲಿ ಸೆಕ್ಯುರಿಟಿ ರಿಸ್ಕ್ ಇದೆ. ಹೀಗಾಗಿ ಬಳಸುತ್ತಿಲ್ಲವಾದರೆ, ನಿಲ್ಲಿಸಿಬಿಡಿ.

15. ರಿಮೋಟ್ ಡೆಸ್ಕ್‌ಟಾಪ್ ಹೆಲ್ಪ್ ಸೆಶನ್ ಮ್ಯಾನೇಜರ್: ರಿಮೋಟ್ ಡೆಸ್ಕ್‌ಟಾಪ್ ಬಳಸುತ್ತೀರೆಂದಾದರೆ ಮಾತ್ರ ಉಪಯೋಗಿಸಿ, ಇಲ್ಲವೆಂದಾದರೆ ಡಿಸೇಬಲ್ ಮಾಡಿ.

ಜಿಮೇಲ್‌ನಲ್ಲಿ ಕನ್ನಡ ಟೈಪಿಂಗ್: ಇನ್ನಾದರೂ ಕಂಗ್ಲಿಷ್ ನಿಲ್ಲಿಸಿ

ಮಾಹಿತಿ@ತಂತ್ರಜ್ಞಾನ: ಅವಿನಾಶ್ ಬಿ. ವಿಕ ಅಂಕಣ 50, 02 ಸೆಪ್ಟೆಂಬರ್ 2013
ಭಾರತೀಯ ಭಾಷೆಗಳನ್ನು ಬೆಂಬಲಿಸುವಲ್ಲಿ ಗೂಗಲ್ ಮುಂದಿದೆ. ಅದು ಸೇವೆ ಒದಗಿಸುತ್ತಿರುವ ಜಿಮೇಲ್‌ನಲ್ಲಿ ಕನ್ನಡ ಟೈಪಿಂಗ್‌ಗೆ ಕೂಡ ಅವಕಾಶವಿದೆ ಎನ್ನೋದು ಬಹುತೇಕರಿಗೆ ಗೊತ್ತಿಲ್ಲ ಎಂಬುದು ಅವರಿಂದ ಬರುವ ಇಮೇಲ್‌ಗಳಲ್ಲಿರುವ ಕಂಗ್ಲಿಷ್‌ನಿಂದಲೇ (ಇಂಗ್ಲಿಷ್ ಲಿಪಿಯಲ್ಲಿ ಕನ್ನಡ ಪದಗಳು) ತಿಳಿಯುತ್ತದೆ.

ಜಿಮೇಲ್ ಪೂರ್ತಿಯಾಗಿ ಕನ್ನಡದಲ್ಲೇ ನೋಡುವುದು ಮತ್ತು ಅದರಲ್ಲಿ ಕನ್ನಡ ಟೈಪಿಂಗ್ ಎನೇಬಲ್ ಮಾಡುವುದು ಹೇಗೆ ಅಂತ ತಿಳಿದುಕೊಳ್ಳೋಣ.

ನಿಮ್ಮ ಜಿಮೇಲ್‌ಗೆ ಸೈನ್ ಇನ್ ಆದ ಬಳಿಕ ಮೇಲ್ಭಾಗದ ಬಲ ತುದಿಯಲ್ಲಿ ಸೆಟ್ಟಿಂಗ್ಸ್‌ನ ಚಿಹ್ನೆ ಕಾಣಿಸುತ್ತದೆ. ಅದನ್ನು ಕ್ಲಿಕ್ ಮಾಡಿದ ತಕ್ಷಣ, ಪಾಪ್-ಅಪ್ ವಿಂಡೋ ಕಾಣಿಸಿಕೊಳ್ಳುತ್ತದೆ. ಅದರಲ್ಲಿ ಕೆಳಗೆ ಸೆಟ್ಟಿಂಗ್ಸ್ ಎಂಬುದನ್ನು ಆಯ್ದುಕೊಳ್ಳಿ. ಹಲವಾರು ಟ್ಯಾಬ್‌ಗಳಿರುತ್ತವೆಯಾದರೂ, ಜನರಲ್ ಎಂಬ ಮೊದಲ ಟ್ಯಾಬ್ ತೆರೆದುಕೊಳ್ಳುತ್ತದೆ.

ಅದರಲ್ಲಿ ಮೊದಲು ಕಾಣಿಸಿಕೊಳ್ಳುವುದು Gmail display language ಎಂಬ ಆಯ್ಕೆ. ಅದರಲ್ಲಿ ನೀವು ಕನ್ನಡವನ್ನು ಆಯ್ದುಕೊಂಡರೆ, ಪೂರ್ತಿಯಾಗಿ ಜಿಮೇಲ್‌ನ ಪುಟದಲ್ಲಿರುವ ಎಲ್ಲವೂ ಕನ್ನಡದಲ್ಲಿಯೇ ಕಾಣಿಸುತ್ತದೆ. ಕೆಳಗೆ Save Changes ಅಂತ ಮಾಡಿದಾಗ, ಪುಟದಲ್ಲಿರುವ ಬಹುತೇಕ ಅಂದರೆ, ಮೂಲತಃ ಜಿಮೇಲ್‌ನಲ್ಲಿ ಅಡಕವಾಗಿರುವ ಪದಗಳು (ಇನ್‌ಬಾಕ್ಸೃ್, ದಿನಾಂಕ ಇತ್ಯಾದಿ) ಕನ್ನಡದಲ್ಲಿಯೇ ಕಾಣಿಸಿಕೊಳ್ಳುತ್ತವೆ. ಅದು ಬೇಡವೆಂದಾದರೆ ಮತ್ತೆ ಭಾಷೆ ಬದಲಾಯಿಸಿಕೊಳ್ಳಬಹುದು.

ಭಾಷೆ ಆಯ್ಕೆ ಮಾಡಿಕೊಂಡ ಸ್ಥಳದಲ್ಲೇ ಕೆಳಗಡೆ Show all language options ಅಂತ ಕ್ಲಿಕ್ ಮಾಡಿದಾಗ, Enable input tools ಎಂಬಲ್ಲಿ ಚೆಕ್ ಬಾಕ್ಸ್‌ನಲ್ಲಿ ರೈಟ್ ಮಾರ್ಕ್ ಹಾಕಿದರೆ, ಕನ್ನಡ ಸಹಿತವಾಗಿ ಎಲ್ಲ ಭಾಷೆಗಳಲ್ಲಿ ಟೈಪ್ ಮಾಡುವ ಟೂಲ್ ಎನೇಬಲ್ ಆಗುತ್ತದೆ. ಟ್ರಾನ್ಸ್‌ಲಿಟರೇಶನ್ (ಲಿಪ್ಯಂತರ) ಹಾಗೂ ಇನ್‌ಸ್ಕ್ರಿಪ್ಟ್ ಎಂಬ ಶೈಲಿಗಳಲ್ಲಿ ಟೈಪ್ ಮಾಡುವವರಿಗೆ ಇದು ಅನುಕೂಲ. ಲಿಪ್ಯಂತರ ಅಥವಾ ಟ್ರಾನ್ಸ್‌ಲಿಟರೇಶನ್ ಎಂದರೆ, ಓದಲು ಮತ್ತು ಅರ್ಥ ಮಾಡಿಕೊಳ್ಳಲು ತ್ರಾಸವಾಗುವ ಕಂಗ್ಲಿಷ್‌ನಲ್ಲಿ (ಕನ್ನಡ+ಇಂಗ್ಲಿಷ್ ಅಂದರೆ ಕನ್ನಡವನ್ನು kannada, ವಿಜಯ ಕರ್ನಾಟಕ ಎಂಬುದನ್ನು vijaya karnataka ಅಂತ) ಬರೆದಿರುವುದು ಕನ್ನಡಕ್ಕೆ ಪರಿವರ್ತನೆಗೊಳ್ಳುತ್ತದೆ.

ಇನ್‌ಸ್ಕ್ರಿಪ್ಟ್ ಕಲಿತುಕೊಳ್ಳಲು ಸ್ವಲ್ಪ ಕಷ್ಟ, ಆದರೆ ಕಲಿತ ಮೇಲೆ ಟೈಪಿಂಗ್ ವೇಗವಾಗುತ್ತದೆ. ಮೇಲ್ ಬರೆಯುವಾಗ ಮೇಲ್ಭಾಗದಲ್ಲಿ ಕೀಬೋರ್ಡ್ ಚಿಹ್ನೆ ಕಾಣಿಸಿಕೊಳ್ಳುತ್ತದೆ. ಅದನ್ನು ಕ್ಲಿಕ್ ಮಾಡಿದರೆ, ಯಾವ ಇಂಗ್ಲಿಷ್ ಅಕ್ಷರ ಟೈಪ್ ಮಾಡಿದರೆ ಯಾವ ಕನ್ನಡ ಅಕ್ಷರ ಮೂಡುತ್ತದೆಂದು ತಿಳಿಯುವ ಕಾರಣ, ಇನ್‌ಸ್ಕ್ರಿಪ್ಟ್ ಶೈಲಿಯನ್ನು ತಮ್ಮದಾಗಿಸಿಕೊಳ್ಳಬಹುದು.

ಹೀಗಾಗಿ, ಇಂಟರ್ನೆಟ್ ಸಂಪರ್ಕವಿದ್ದರೆ, ಇದೇ ಜಿಮೇಲ್‌ನಲ್ಲಿ ಲಭ್ಯವಿರುವ ಕನ್ನಡ ಅಥವಾ ದೇಶದ ಬೇರಾವುದೇ ಭಾಷೆಯ ಲಿಪಿಯಲ್ಲಿ ಬರೆಯುವ ಅವಕಾಶವನ್ನು ಉಪಯೋಗಿಸಿ, ಅಲ್ಲಿಂದ ಕಾಪಿ ಮಾಡಿಕೊಂಡರೆ, ಫೇಸ್‌ಬುಕ್ ಅಥವಾ ಬ್ಲಾಗಿನಲ್ಲಿ (ಜಿಮೇಲ್‌ನಲ್ಲಿರುವಂತೆಯೇ ಬ್ಲಾಗ್‌ಸ್ಪಾಟ್‌ನಲ್ಲಿಯೂ ಕನ್ನಡ ಬಳಸಬಹುದು) ಕಂಗ್ಲಿಷ್ ಬರೆಯುವುದನ್ನು ನಿಲ್ಲಿಸಬಹುದು.

ಜಿಮೇಲ್‌ನಲ್ಲಿ ಕನ್ನಡ ಡಿಕ್ಷನರಿ: ಜಿಮೇಲ್‌ನಲ್ಲಿ ನೀವು ಚಾಟ್ ಎನೇಬಲ್ ಮಾಡಿದ್ದರೆ ನಿಮಗೊಂದು ಅನುಕೂಲವಿದೆ. ಅಲ್ಲೇ ಕನ್ನಡ ಡಿಕ್ಷನರಿ ಇದೆ ಎಂಬುದು ಎಷ್ಟು ಮಂದಿಗೆ ಗೊತ್ತಿದೆ? Kn.dict.botjabber.org ಎಂಬುದನ್ನು ನಿಮ್ಮ ಚಾಟಿಂಗ್‌ಗೆ ಆಹ್ವಾನಿಸಿ ಫ್ರೆಂಡ್ ಮಾಡಿಕೊಳ್ಳಿ. ಆಹ್ವಾನ ಸ್ವೀಕಾರವಾದ ತಕ್ಷಣ, ಚಾಟಿಂಗ್ ಬಾಕ್ಸ್‌ನಲ್ಲಿ ಹಸಿರು ಬಟನ್ ಕಾಣಿಸುತ್ತಿದ್ದರೆ, ನಿಮಗೆ ಬೇಕಾದ ಇಂಗ್ಲಿಷ್ ಪದವನ್ನು ಚಾಟ್ ಸಂದೇಶವಾಗಿ ಕಳುಹಿಸಿ. ತಕ್ಷಣವೇ, ಅದರ ಕನ್ನಡ ಪದವು ಉತ್ತರ ರೂಪದಲ್ಲಿ ನಿಮಗೆ ಬರುತ್ತದೆ. ನೀವು ಕೇಳಿದ ಪದ ಇಲ್ಲದಿದ್ದರೆ, ಲಭ್ಯವಿಲ್ಲ ಎಂದೂ ತಿಳಿಸುತ್ತದೆ. ಒಂದು ವಾಕ್ಯವನ್ನೇ ಟೈಪ್ ಮಾಡಿದರೆ, ಒಂದು ಪದವನ್ನು ಮಾತ್ರ ಕಳುಹಿಸಿ ಅಂತ ಉತ್ತರಿಸುತ್ತದೆ. ಕನ್ನಡದ ಕೆಲವು ಶಬ್ದಗಳ ಪರ್ಯಾಯ ಪದಗಳೂ ಇಲ್ಲಿ ಲಭ್ಯವಿರುತ್ತದೆ.

ಕಳುಹಿಸಿದ ಮೇಲ್ ರದ್ದು ಮಾಡುವುದು: ಜಿಮೇಲ್‌ನಲ್ಲಿ ಇನ್ನೂ ಒಂದು ವಿಶಿಷ್ಟ ಅವಕಾಶವಿದೆ. ಅದೆಂದರೆ, ನೀವು ಮೇಲ್ ಕಳುಹಿಸಿದ ತಕ್ಷಣ, ‘ಛೆ, ಕಳುಹಿಸಬಾರದಿತ್ತು’ ಎಂದು ನೊಂದುಕೊಂಡರೆ, ನಿಮ್ಮ ತಪ್ಪು ಸರಿಪಡಿಸಿಕೊಳ್ಳಲು ಗೂಗಲ್ ಕೆಲವೇ ಕ್ಷಣಗಳ ಅವಕಾಶ ನೀಡುತ್ತದೆ. ಮೇಲ್ ಕಳುಹಿಸಿದ ತಕ್ಷಣ, ಪುಟದ ಮೇಲ್ಭಾಗದಲ್ಲಿ your message has been sent ಎಂಬ ಸಂದೇಶ ಕಾಣಿಸುತ್ತದೆ. ಪಕ್ಕದಲ್ಲೇ Undo ಎಂಬ ಬಟನ್ ಕ್ಲಿಕ್ ಮಾಡಿದರೆ ನೀವು ಕಳುಹಿಸಿದ ಮೇಲ್ ವಾಪಸ್ ಬರುತ್ತದೆ. ಅಂದರೆ, ಗೂಗಲ್ ಸರ್ವರ್‌ನಲ್ಲಿ ಕೆಲವೇ ಸೆಕೆಂಡುಗಳ ಕಾಲ ಇರುವ ಅದು, ಅಲ್ಲಿಂದ ವರ್ಗಾವಣೆಯಾಗುವ ಮೊದಲು ಎಚ್ಚೆತ್ತುಕೊಂಡು ನೀವು Undo ಒತ್ತಿಬಿಟ್ಟರೆ, ತಪ್ಪು ಸರಿಪಡಿಸಿಕೊಳ್ಳಬಹುದು! Sending has been undone ಎಂಬ ಸಂದೇಶದೊಂದಿಗೆ, ನಿಮ್ಮ ಮೇಲ್ ಪುನಃ ತೆರೆದುಕೊಳ್ಳುತ್ತದೆ. ಅಲ್ಲಿಯೇ ತಿದ್ದುಪಡಿ ಮಾಡಿ ನೀವು ಅದನ್ನು ಪುನಃ ಕಳುಹಿಸಬಹುದು.