ಜನ ಸಾಮಾನ್ಯರತ್ತ ತಂತ್ರಜ್ಞಾನ – Gadget-Technology Info Towards Common Man

Posts tagged ‘ಮೊಬೈಲ್’

ಫ್ಯಾಬ್ಲೆಟ್/ಟ್ಯಾಬ್ಲೆಟ್‌ಗೆ ಅನುಕೂಲವಿರುವ ಕನ್ನಡ ಕೀಬೋರ್ಡ್

SwaraChakraಸ್ಮಾರ್ಟ್‌ಫೋನ್‌ನಲ್ಲಿ ಎಸ್ಎಂಎಸ್ ಸಂದೇಶ, ಇಮೇಲ್, ಚಾಟಿಂಗ್ ಇತ್ಯಾದಿಗಳಿಗಾಗಿ ಕನ್ನಡದಲ್ಲೇ ಸಂವಹನ ನಡೆಸಲು ಅನುಕೂಲ ಮಾಡಿಕೊಡುವ ಸಾಕಷ್ಟು ಕೀಬೋರ್ಡ್ (ಕೀಲಿಮಣೆ) ಕಿರುತಂತ್ರಾಂಶಗಳಿವೆ. ಅತ್ಯಾಧುನಿಕ ಆಂಡ್ರಾಯ್ಡ್ ಫೋನ್‌ಗಳಿಗೆ ಸ್ವತಃ ಗೂಗಲ್ ತನ್ನ ಕೀಬೋರ್ಡ್‌ನಲ್ಲಿ ಕನ್ನಡ ಸೇರಿದಂತೆ ಭಾರತೀಯ ಭಾಷೆಗಳ ಟೈಪಿಂಗ್‌ಗೆ ಅವಕಾಶ ಮಾಡಿಕೊಟ್ಟಿದೆ. ಅದನ್ನು ನಾವು ಎನೇಬಲ್ ಮಾಡಿಕೊಳ್ಳುವುದು ಹೇಗೆಂದು ಈ ಹಿಂದೆಯೇ ತಿಳಿಸಿದ್ದೆ. ಅಂತೆಯೇ, ಸರಕಾರ ಇತ್ತೀಚೆಗೆ ಬಿಡುಗಡೆ ಮಾಡಿದ ಕನ್ನಡ ಕೀ ಹಾಗೂ ಇತರ ಕನ್ನಡ ತಂತ್ರಾಂಶ ನಿಪುಣರು ಸಿದ್ಧಪಡಿಸಿ ಉಚಿತವಾಗಿಯೇ ಜನರಿಗೆ ಒದಗಿಸಿರುವ ಜಸ್ಟ್ ಕನ್ನಡ, ಎನಿಸಾಫ್ಟ್, ಪಾಣಿನಿ, ಮಲ್ಟಿಲಿಂಗ್ ಕೀಬೋರ್ಡ್, ಪದ ಕನ್ನಡ, ಇಂಡಿಕ್ ಕೀಬೋರ್ಡ್, ಅಕ್ಷರ ಕನ್ನಡ, ಈಝೀಟೈಪ್ ಕನ್ನಡ, ಸ್ವಿಫ್ಟ್‌ಕೀ, ಟೈಪ್ ಕನ್ನಡ ಮುಂತಾಗಿ ಅಸಂಖ್ಯ ಕೀಲಿಮಣೆಗಳಿವೆ. ಇವುಗಳ ಸಾಲಿಗೆ ಹೊಸ ಸೇರ್ಪಡೆ ಸ್ವರ ಚಕ್ರ. ಇದನ್ನು ಸಿದ್ಧಪಡಿಸಿರುವುದು ಐಐಟಿ ಬಾಂಬೇ ತಂಡ. ಬಳಕೆಗೆ ಸುಲಭವಾಗಿರುವ ಜಸ್ಟ್ ಕನ್ನಡ ಮತ್ತು ಪದ ಕೀಲಿಮಣೆಗಳ ಬಗ್ಗೆ ಹಿಂದೆ ಉಲ್ಲೇಖಿಸಿದ್ದೆ. ಈ ಸ್ವರಚಕ್ರ ಕೀಬೋರ್ಡ್ ಇವೆಲ್ಲವುಗಳಿಗಿಂತ ಭಿನ್ನವಾಗಿದೆ.

ಯುನಿಕೋಡ್ ಬೆಂಬಲಿಸುವ ಯಾವುದೇ ಆಂಡ್ರಾಯ್ಡ್ ಫೋನ್‌ಗಳಿಗೆ ಈ ಆ್ಯಪ್ ಹೊಂದಿಕೊಳ್ಳುತ್ತದೆ. ಗೂಗಲ್ ಪ್ಲೇ ಸ್ಟೋರ್‌ನಲ್ಲಿ ‘Swarachakra Kannada’ ಅಂತ ಹುಡುಕಿ ಇನ್‌ಸ್ಟಾಲ್ ಮಾಡಿಕೊಂಡ ಬಳಿಕ, ಅದನ್ನು ಡೀಫಾಲ್ಟ್ ಕೀಬೋರ್ಡ್ ಆಗಿ ಹೊಂದಿಸಬೇಕು. ಹೊಂದಿಸುವುದು ಹೇಗೆ ಎಂದು ಈ ಕೀಲಿಮಣೆಯೇ ನಿಮಗೆ ದಾರಿ ತೋರಿಸುತ್ತದೆ. ಹೀಗೆ ಮಾಡಿದರೆ, ಇಂಗ್ಲಿಷ್‌ನಲ್ಲಿ ಟೈಪ್ ಮಾಡುವುದಕ್ಕೆ ಯಾವುದೇ ಸಮಸ್ಯೆಯಾಗುವುದಿಲ್ಲ; ಒಂದು ಬಟನ್ ಪ್ರೆಸ್ ಮಾಡಿದರೆ, ಇಂಗ್ಲಿಷ್ ಅಥವಾ ಕನ್ನಡ ಕೀಬೋರ್ಡ್‌ಗೆ ಬದಲಾಗಬಹುದು. ಬೇರೆ ಬೇರೆ ಭಾಷೆಗಳಿಗೆ ಸ್ವರಚಕ್ರ ಪ್ರತ್ಯೇಕವಾಗಿ ಲಭ್ಯವಿದೆ.

ಇದು ವಿಭಿನ್ನ ಅಂದೆನಲ್ಲ, ಹೇಗೆಂದರೆ, ಇಡೀ ಕೀಲಿಮಣೆಯು ಕನ್ನಡ ವರ್ಣಮಾಲೆಯ ಅನುಕ್ರಮಣಿಕೆಯಲ್ಲಿದೆ. ಇಲ್ಲಿ ಕಗಪ, ಇನ್‌ಸ್ಕ್ರಿಪ್ಟ್, ಫೋನೆಟಿಕ್ (ಟ್ರಾನ್ಸ್‌ಲಿಟರೇಶನ್ – ಲಿಪ್ಯಂತರ) ಹೀಗೆಲ್ಲಾ ವೈವಿಧ್ಯವಿಲ್ಲ. ಸ್ವರಾಕ್ಷರಗಳೆಲ್ಲವೂ ಒಂದೇ ಕೀಲಿಯಲ್ಲಿ ಗುಂಪುಗೂಡಿವೆ. ವ್ಯಂಜನಾಕ್ಷರಗಳು ನಾವು ಕನ್ನಡ ಕಲಿಯಲಾರಂಭಿಸಿದಾಗ ಬಳಪದಲ್ಲಿ ಬರೆದಂತಹಾ ಸ್ಥಾನಗಳಲ್ಲೇ ಇವೆ. ಇದಲ್ಲದೆ, ಒತ್ತಕ್ಷರ, ಮಾತ್ರಾ ಸಂಯೋಜನೆ… ಇವೆಲ್ಲವೂ ಚಕ್ರಾಕಾರದ ಪರದೆಯಲ್ಲಿ ಕಾಣಿಸುವುದರಿಂದಲೇ ಇದಕ್ಕೆ ಸ್ವರಚಕ್ರ ಎಂದು ಹೆಸರಿಸಲಾಗಿದೆ. ಫ್ಯಾಬ್ಲೆಟ್ (ಸ್ಕ್ರೀನ್ ಗಾತ್ರ 5 ರಿಂದ 7 ಇಂಚಿನ ನಡುವೆ ಇರುವವು) ಅಥವಾ ಟ್ಯಾಬ್ಲೆಟ್‌ಗಳಲ್ಲಿ (7 ಇಂಚಿಗಿಂತ ದೊಡ್ಡ ಸ್ಕ್ರೀನ್ ಉಳ್ಳವು) ಸ್ಟೈಲಸ್ ಎಂಬ ಸ್ಮಾರ್ಟ್ ಪೆನ್ ಬಳಸುವವರಿಗೆ ಈ ಕೀಬೋರ್ಡ್ ಹೆಚ್ಚು ಸೂಕ್ತ ಅನಿಸುತ್ತದೆ.

ಕನ್ನಡ ಅಥವಾ ಯಾವುದೇ ಭಾರತೀಯ ಲಿಪಿಯು ಇಂಗ್ಲಿಷ್‌ನಂತಿಲ್ಲದೆ ಸಂಕೀರ್ಣ. ಒಂದು ಅಕ್ಷರವೆಂದರೆ ವ್ಯಂಜನ ಹಾಗೂ ಮಾತ್ರೆಯ (ಸ್ವರಾಕ್ಷರ ಭಾಗ) ಸಂಯೋಗ. ಉದಾಹರಣೆಗೆ, ‘ದೊ’ ಬರೆಯಬೇಕಿದ್ದರೆ ದ + ‘ೊ’ ಬೇಕು. ಈ ಕೀಬೋರ್ಡ್‌ನಲ್ಲಿ ನೀವು ಯಾವುದೇ ಅಕ್ಷರವನ್ನು ಒತ್ತಿಹಿಡಿದುಕೊಂಡಾಗ, ವ್ಯಂಜನ ಮತ್ತು ಮಾತ್ರೆಗಳ ವೈವಿಧ್ಯಮಯ ಸ್ವರ ಸಂಯೋಜನೆಯಿರುವ ಚಕ್ರ ಕಾಣಿಸುತ್ತದೆ. ನಮಗೆ ಬೇಕಾದ ಅಕ್ಷರದತ್ತ ನಮ್ಮ ಕೈಬೆರಳು ಅಥವಾ ಸ್ಟೈಲಸ್ ಅನ್ನು ಸ್ಲೈಡ್ ಮಾಡಿದರಾಯಿತು.

ಸಂಯುಕ್ತಾಕ್ಷರಗಳು ಭಾರತೀಯ ಭಾಷೆಗಳ ಜೀವಾಳ. ಸಂಯುಕ್ತಾಕ್ಷರಗಳ ಸಮೂಹವನ್ನು ಚಕ್ರದಲ್ಲಿ ನೋಡಬೇಕಿದ್ದರೆ, ವ್ಯಂಜನದ ಬಳಿಕ ಹಲಂತ (ಅರ್ಧಸ್ವರ) ಅಕ್ಷರವಾಗಿರುವ ‘್’ ಒತ್ತಿಹಿಡಿದಾಗ, ಎಲ್ಲ ಒತ್ತಕ್ಷರಗಳ ಸಾಧ್ಯತೆಗಳು ಚಕ್ರದಲ್ಲಿ ಗೋಚರಿಸುತ್ತವೆ. ಬೇಕಾಗಿರುವುದನ್ನು ಆಯ್ಕೆ ಮಾಡಿಕೊಳ್ಳಲು ಅದು ಇರುವ ಕಡೆ ಸ್ವೈಪ್ ಮಾಡಿಕೊಂಡರಾಯಿತು.

ಈಗಾಗಲೇ ಬೇರೆ ಕೀಬೋರ್ಡ್ ಬಳಸುತ್ತಿರುವವರಿಗೆ ಇದುವೇ ಶ್ರೇಷ್ಠ ಅಂತನ್ನಿಸದು. ಆದರೆ, ಹೊಸದಾಗಿ ಕನ್ನಡದಲ್ಲಿ ಟೈಪ್ ಮಾಡಲು ಆರಂಭಿಸುವವರಿಗೆ ಸೂಕ್ತ ಇದು. ಈಗಾಗಲೇ ‘ಕಂಗ್ಲಿಷ್’ ಬಳಸುತ್ತಿರುವವರಿಗೆ ಜಸ್ಟ್ ಕನ್ನಡ, ಗೂಗಲ್ ಕೀಬೋರ್ಡ್ ಅಥವಾ ಪದ ಕನ್ನಡ ಅನುಕೂಲಕರ.

ಟೆಕ್ ಟಾನಿಕ್: ಸಮಯ ತಿಳಿಯಲು ಗೂಗಲ್
ಗೂಗಲ್ ಎಂಬ ಹುಡುಕಾಟದ ದೈತ್ಯನಿಂದ ಏನನ್ನು ಬೇಕಾದರೂ ಮಾಹಿತಿ ತಿಳಿಯಬಹುದು. ಅದೇ ರೀತಿ, ಹೊರದೇಶಗಳ ವೆಬ್‌ಸೈಟ್ ಜಾಲಾಡುವಾಗ ಅಥವಾ ಆನ್‌ಲೈನ್ ಮೀಟಿಂಗ್ ಏರ್ಪಡಿಸಿದಾಗ, ಅಲ್ಲಿನ ಸಮಯ ವಲಯದ ಪ್ರಕಾರ ಸಮಯವನ್ನು ನಮೂದಿಸಿರುತ್ತಾರೆ. ಅದನ್ನು ನಮ್ಮ ಭಾರತೀಯ ಕಾಲಮಾನ ಪ್ರಕಾರ ತಿಳಿದುಕೊಳ್ಳುವುದು ಹೇಗೆ? ತೀರಾ ಸುಲಭ. ಗೂಗಲ್ ಸರ್ಚ್ ಬಾಕ್ಸ್‌ನಲ್ಲಿ, ಉದಾಹರಣೆಗೆ, 01 pm est to India time ಅಂತ ಬರೆದರೆ ಸಾಕು, ಪೌರಾತ್ಯದ ಸಮಯವನ್ನು ಭಾರತೀಯ ಕಾಲಮಾನ ಪ್ರಕಾರ ತೋರಿಸುತ್ತದೆ.

ವಿಜಯ ಕರ್ನಾಟಕ ಅಂಕಣ ಡಿಸೆಂಬರ್ 29, 2014: ಮಾಹಿತಿ@ತಂತ್ರಜ್ಞಾನ: ಅವಿನಾಶ್ ಬಿ.

ಆಂಡ್ರಾಯ್ಡ್ 5 ಲಾಲಿಪಾಪ್‌ನ 5 ವಿಶೇಷತೆಗಳು

‘’ಟೆಕ್ನೋ’ ವಿಶೇಷ
#ನೆಟ್ಟಿಗ

Lollipop2ಆಂಡ್ರಾಯ್ಡ್‌ನ ಅಲಿಖಿತ ಸಂಪ್ರದಾಯದಂತೆ ಇಂಗ್ಲಿಷ್ ಅಕ್ಷರಾನುಕ್ರಮಣಿಕೆ ಪ್ರಕಾರ ‘L’ನಿಂದ ಆರಂಭವಾಗಬೇಕಿದ್ದ ಹೊಚ್ಚ ಹೊಸ 5.0 ಆವೃತ್ತಿಯ ಹೆಸರು ಕೊನೆಗೂ ಭಾರತೀಯರಿಗೂ ಇಷ್ಟವಾಗಿರುವ ‘ಲಾಲಿಪಾಪ್’ ಎಂದು ಘೋಷಣೆಯಾಗಿದೆ. ಇತ್ತೀಚಿನ 4.4.4 ಆವೃತ್ತಿಯಾಗಿರುವ ಕಿಟ್‌ಕ್ಯಾಟ್ ಕಾರ್ಯಾಚರಣಾ ವ್ಯವಸ್ಥೆಗೂ, ಲಾಲಿಪಾಪ್‌ಗೂ ಅತ್ಯಂತ ಪ್ರಮುಖವಾದ ವ್ಯತ್ಯಾಸಗಳೇನು ಎಂಬುದನ್ನು ತಿಳಿದುಕೊಳ್ಳೋಣ.

ಮೊದಲ ನೋಟ…
1. ಕಾರ್ಯಾಚರಣಾ ವ್ಯವಸ್ಥೆ (ಒಎಸ್) ತಕ್ಷಣಕ್ಕೆ ನೋಡುವಾಗಲೇ ಸಾಕಷ್ಟು ಬದಲಾವಣೆಗಳು ಕಾಣಿಸುತ್ತವೆ. ಹಲವು ತಿಂಗಳುಗಳಿಂದ ‘ಮೆಟೀರಿಯಲ್ ವಿನ್ಯಾಸ’ದ ಮೇಲೆ ಕೆಲಸ ಮಾಡಿದ್ದ ಗೂಗಲ್, ಲಾಲಿಪಾಪ್ ಮೂಲಕ ಅದನ್ನು ಹೊರಬಿಟ್ಟಿದೆ. ಸ್ಪಷ್ಟವಾದ, ಬೋಲ್ಡ್ ಗೆರೆಗಳು ಮತ್ತು ಬಣ್ಣಗಳು ವಿನೋದಮಯವಾದ ಆನಿಮೇಶನ್‌ಗಳೊಂದಿಗೆ ಗಮನ ಸೆಳೆಯುತ್ತವೆ. ಆ್ಯಪ್ ಐಕಾನ್‌ಗಳು, ಫಾಂಟ್‌ಗಳು, ಹೊಸ ನ್ಯಾವಿಗೇಶನ್ ಬಟನ್‌ಗಳು, ನೋಟಿಫಿಕೇಶನ್ ಬಾರ್‌ನಲ್ಲಿರುವ ಐಕಾನ್‌ಗಳು – ಇವನ್ನೆಲ್ಲಾ ನೋಡಿದರೆ ಬದಲಾವಣೆಗಳು ಗೋಚರಿಸುತ್ತವೆ. ಕಣ್ಣಿಗೆ ಕಾಣದಿರುವ ಬದಲಾವಣೆಯೆಂದರೆ, ಧ್ವನಿ ಆಧಾರಿತ “ಓಕೆ ಗೂಗಲ್” ಎಂಬ ಆದೇಶವನ್ನು ನೀವು ಸ್ಕ್ರೀನ್ ಲಾಕ್ ಇರುವಾಗಲೂ ನೀಡಬಹುದು.

ನೋಟಿಫಿಕೇಶನ್‌ಗಳು
2. ಯಾವುದೇ ಸಂದೇಶ ಬಂದಾಗ ಧುತ್ತನೇ ಕಾಣಿಸಿಕೊಳ್ಳುವ ನೋಟಿಫಿಕೇಶನ್‌ಗಳಲ್ಲಿ ಮಹತ್ವದ ಬದಲಾವಣೆಯಿದೆ. ಸ್ಕ್ರೀನ್ ಲಾಕ್ ಆಗಿರುವಾಗಲೇ ನಿಮ್ಮ ಮೊಬೈಲ್‌ಗೆ ಬಂದ ಸೂಚನೆಗಳನ್ನು, ಸಂದೇಶಗಳನ್ನು ನೋಡಬಹುದು ಮಾತ್ರವಲ್ಲದೆ, ಲಾಕ್ ಸ್ಕ್ರೀನ್‌ನಿಂದಲೇ ಅವುಗಳಿಗೆ ಪ್ರತಿಕ್ರಿಯೆ ನೀಡಬಹುದು. ಅನ್‌ಲಾಕ್ ಇರುವಾಗ, ನೀವೇನಾದರೂ ಕೆಲಸ ಮಾಡುತ್ತಿದ್ದರೆ, ಈ ನೋಟಿಫಿಕೇಶನ್‌ಗಳು ನಿಮ್ಮ ಕೆಲಸಕ್ಕೆ ತೊಂದರೆ ಮಾಡದೆ ಮೇಲ್ಭಾಗದಲ್ಲಿ ಕಾಣಿಸಿಕೊಳ್ಳುತ್ತವೆ. ಉದಾ. ಗೇಮ್ ಆಡುತ್ತಿದ್ದರೆ, ಕರೆಯನ್ನು ಅಲ್ಲಿಂದಲೇ ರಿಜೆಕ್ಟ್ ಮಾಡಬಹುದು ಅಥವಾ ಎಸ್ಎಂಎಸ್‌ಗೆ ಉತ್ತರಿಸಬಹುದು. ಅದೇ ರೀತಿ, ಐಒಎಸ್‌ನಲ್ಲಿರುವಂತೆ, ನಿರ್ದಿಷ್ಟ ಸಮಯಕ್ಕೆ Do not Disturb ಎಂದು ನಿಮಗೆ ಬೇಕಾದ ಆ್ಯಪ್‌ಗಳಿಗೆ ಮಾತ್ರವೇ ಹೊಂದಿಸುವ ಆಯ್ಕೆಯೂ ಇದೆ.

ಸಂಪರ್ಕ
3. ಸಂಪರ್ಕ ವ್ಯವಸ್ಥೆ ಬಗ್ಗೆ ಗೂಗಲ್ ಹೆಚ್ಚಿನ ಗಮನ ಹರಿಸಿದೆ. ಆಂಡ್ರಾಯ್ಡ್ ಟಿವಿಯ ಬೆಂಬಲವನ್ನು ಲಾಲಿಪಾಪ್‌ನಲ್ಲೇ ಅಳವಡಿಸಲಾಗಿದ್ದು, ಸ್ಮಾರ್ಟ್‌ವಾಚ್ ಧ್ವನಿ ಕಮಾಂಡ್‌ಗಳು, ಫೋನ್ ಸನ್ನೆಗಳ ಮೂಲಕ ಸುಲಭವಾಗಿ ದೊಡ್ಡ ಪರದೆಯಲ್ಲಿಯೂ ನ್ಯಾವಿಗೇಟ್ ಮಾಡಬಹುದಾಗಿದೆ. ಟ್ಯಾಬ್ಲೆಟ್, ಸ್ಮಾರ್ಟ್‌ಫೋನ್, ಟಿವಿ, ಸ್ಮಾರ್ಟ್‌ವಾಚ್‌ಗಳೇ ಮುಂತಾದ ವಿಭಿನ್ನ ಸಾಧನಗಳಲ್ಲಿ ನಿಮ್ಮ ಆಂಡ್ರಾಯ್ಡ್ ಅನುಭವ ಏಕರೀತಿಯದ್ದಾಗಿರುತ್ತದೆ. ಬ್ಲೂಟೂತ್ ಹಾಗೂ ವೈಫೈ ಮೂಲಕ ಸಂಪರ್ಕ ಮಾಡುವ ವ್ಯವಸ್ಥೆಯನ್ನೂ ಸುಲಭಗೊಳಿಸಲಾಗಿದೆ. ಉದಾಹರಣೆಗೆ, ನಿಜವಾಗಿಯೂ ಒಂದು ಒಳ್ಳೆಯ ಸಿಗ್ನಲ್ ಇರುವ ವೈಫೈ ಸಂಪರ್ಕವಿದೆ ಎಂದಾದರೆ ಮಾತ್ರವೇ ವೈಫೈ ನೆಟ್‌ವರ್ಕ್‌ಗೆ ಕನೆಕ್ಟ್ ಆಗುತ್ತದೆ.

ಭದ್ರತೆ
4. ಭದ್ರತೆಯ ದೃಷ್ಟಿಯಿಂದ ಲಾಲಿಪಾಪ್‌ನಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಲಾಗಿದೆ. ಉದಾಹರಣೆಗೆ, “ಸುರಕ್ಷಿತ ವಲಯಗಳು” ಎಂದು ಜಿಪಿಎಸ್ ಆಧರಿಸಿ ನೀವು ಭೌಗೋಳಿಕವಾಗಿ ಕೆಲವೊಂದು ಪ್ರದೇಶವನ್ನು ಹೊಂದಿಸಿಟ್ಟುಕೊಂಡರೆ, ಅಲ್ಲಿ ಅನ್‌ಲಾಕ್ ಮಾಡಬೇಕಿದ್ದರೆ ನಿಮಗೆ ಪಿನ್ ಅಗತ್ಯವಿರುವುದಿಲ್ಲ. ಆಂಡ್ರಾಯ್ಡ್ ವೇರ್ ಸ್ಮಾರ್ಟ್‌ವಾಚು, ಇಯರ್‌ಫೋನ್ ಮುಂತಾದ ನಿರ್ದಿಷ್ಟ ಬ್ಲೂಟೂತ್ ಸಾಧನಗಳಿಗೂ ನೀವಿದನ್ನು ಹೊಂದಿಸಬಹುದು. ಇದಲ್ಲದೆ, ನೋಟಿಫಿಕೇಶನ್‌ಗಳು ಧುತ್ತನೇ ಕಾಣಿಸಿಕೊಳ್ಳುವಾಗ, ಆ ಸಂದೇಶದಲ್ಲಿ ಸೂಕ್ಷ್ಮ, ರಹಸ್ಯ ಮಾಹಿತಿಯಿರುತ್ತದೆ ಎಂದೇನಾದರೂ ನಿಮ್ಮ ಗಮನಕ್ಕೆ ಬಂದರೆ, ಅಂತಹಾ ಸೂಚನೆಗಳನ್ನು ಮರೆ ಮಾಡುವ ವ್ಯವಸ್ಥೆ ಇರುತ್ತದೆ. ಮಾಲ್‌ವೇರ್‌ಗಳಿಗೆ ತುತ್ತಾಗದಂತಿರಲು SELinux ತಂತ್ರಜ್ಞಾನವನ್ನು ಬಳಸಲಾಗಿದೆ. ಇದಲ್ಲದೆ, ಕಂಪ್ಯೂಟರಲ್ಲಿರುವಂತೆ ಲಾಗಿನ್ ಮಾಡಲು ಪ್ರತ್ಯೇಕ ಯೂಸರ್ ಪ್ರೊಫೈಲ್ ರಚಿಸುವ ಅವಕಾಶವಿದೆ. ಇದರಿಂದ ನಿಮ್ಮ ಫೋನನ್ನು ತಾತ್ಕಾಲಿಕ ಬಳಕೆಗೆ ಬೇರೆಯವರಿಗೂ ನೀಡಬಹುದು. ಕುಟುಂಬಿಕರೊಂದಿಗೆ ಯಾವುದೇ ಗ್ಯಾಲರಿಯನ್ನು ಹಂಚಿಕೊಳ್ಳಲು ಇದು ಅನುಕೂಲ.

ಕಾರ್ಯಕ್ಷಮತೆ
5. ಲಾಲಿಪಾಪ್‌ನ ಅತ್ಯುತ್ತಮ ಕಾರ್ಯನಿರ್ವಹಣೆಗಾಗಿ ಗೂಗಲ್ ಸಾಕಷ್ಟು ಶ್ರಮ ವಹಿಸಿದೆ. ಸದ್ಯೋಭವಿಷ್ಯದಲ್ಲಿ ಬರಲಿರುವ 64-ಬಿಟ್ ಸ್ಮಾರ್ಟ್‌ಫೋನ್‌ಗಳಿಗೂ ಹೊಂದುವಂತೆ ಲಾಲಿಪಾಪ್ ಆಪರೇಟಿಂಗ್ ಸಿಸ್ಟಂ ಅನ್ನು ಅಭಿವೃದ್ಧಿಪಡಿಸಲಾಗಿದ್ದು, ಸಾಕಷ್ಟು ವೇಗದ ಕಾರ್ಯಾಚರಣೆಯಿದೆ. ಅಂದರೆ, ಈ ಫೋನ್‌ಗಳಲ್ಲಿ ಹೆಚ್ಚಿನ RAM ಅಗತ್ಯವಿರುತ್ತದೆ. ಹೀಗಾಗಿ ಭವಿಷ್ಯದ ಹ್ಯಾಂಡ್‌ಸೆಟ್‌ಗಳಿಗೆ ಪೂರಕವಾಗಿದೆ ಈ ಲಾಲಿಪಾಪ್. ಅಲ್ಲದೆ, ಕಿಟ್‌ಕ್ಯಾಟ್‌ನಷ್ಟು ಪ್ರಮಾಣದಲ್ಲಿ ಬ್ಯಾಟರಿಯನ್ನು ಲಾಲಿಪಾಪ್ ಹೀರಿಕೊಳ್ಳುವುದಿಲ್ಲ ಎಂದು ಹೇಳಿದೆ ಗೂಗಲ್. ಮಲ್ಟಿಟಾಸ್ಕಿಂಗ್ (ಏಕಕಾಲದಲ್ಲಿ ಹಲವು ಆ್ಯಪ್‌ಗಳಲ್ಲಿ, ಸ್ಕ್ರೀನ್‌ಗಳಲ್ಲಿ ಕೆಲಸ ಮಾಡುವುದು) ಸುಲಭ ಮತ್ತು ಶೀಘ್ರವಾಗಲಿದೆ.

  • * ಕಿಟ್‌ಕ್ಯಾಟ್ ಹೋಲಿಸಿದರೆ 90 ನಿಮಿಷ ಬ್ಯಾಟರಿ ಬಾಳಿಕೆ ಹೆಚ್ಚಿಸುವ ಬ್ಯಾಟರಿ ಸೇವಿಂಗ್ ಆಯ್ಕೆ
    * ಕನ್ನಡ, ತಮಿಳು, ಮಲಯಾಳಂ, ತೆಲುಗು, ಹಿಂದಿ, ಬಂಗಾಳಿ, ಮರಾಠಿ ಸಹಿತ ದೇಶ ವಿದೇಶದ ಒಟ್ಟು 68 ಭಾಷೆಗಳಲ್ಲಿ ಲಾಲಿಪಾಪ್ ಲಭ್ಯ
    * ಬ್ಯಾಟರಿ ಚಾರ್ಜಿಂಗ್ ಶೀಘ್ರ ಆಗಲಿದೆ
    * ಎನ್ಕ್ರಿಪ್ಷನ್ ಸ್ವಯಂಚಾಲಿತವಾಗಿ ಆನ್ ಇರುತ್ತದೆ. ಇದರಿಂದ ಹೆಚ್ಚಿನ ಸುರಕ್ಷತೆ ಸಾಧ್ಯ
    * ಹಲವು ಬಳಕೆದಾರರಿಗೆ ಪ್ರತ್ಯೇಕ ಲಾಗಿನ್ ವ್ಯವಸ್ಥೆ
    * ಫ್ಲ್ಯಾಶ್‌ಲೈಟ್, ಹಾಟ್‌ಸ್ಪಾಟ್, ಸ್ಕ್ರೀನ್ ರೊಟೇಶನ್ ಇತ್ಯಾದಿಗೆ ಕೈಗೆ ಸುಲಭವಾಗಿ ಎಟುಕುವ ನಿಯಂತ್ರಣ ಬಟನ್‌ಗಳು
    * ಆಂಡ್ರಾಯ್ಡ್ ಟಿವಿಗೆ, ಆಂಡ್ರಾಯ್ಡ್ ಸ್ಮಾರ್ಟ್‌ವಾಚ್‌ಗೆ ಸೂಕ್ತ ಬೆಂಬಲ

ಫೋನ್ ವಿನಿಮಯಕ್ಕೆ ಕೊಡುವ ಮುನ್ನ ಎಲ್ಲ ಫೈಲುಗಳನ್ನು ಅಳಿಸಿ

ಮಾಹಿತಿ@ತಂತ್ರಜ್ಞಾನ – 98: ವಿಜಯ ಕರ್ನಾಟಕ ಸೋಮವಾರ ಅಕ್ಟೋಬರ್ 20, 2014

Avinash Column-1ಹಬ್ಬದ ಸೀಸನ್. ಸಾಕಷ್ಟು ಕೊಡುಗೆಗಳಿಂದ ಆಕರ್ಷಿತರಾಗಿ ಫೋನ್ ಬದಲಾಯಿಸುವ, ವಿನಿಮಯ ಮಾಡುವ, ಹಳೆಯದನ್ನು ಮಾರಿ ಹೊಸತು ತೆಗೆದುಕೊಳ್ಳುವ ಪ್ರಕ್ರಿಯೆಗೆ ಕೆಲವರು ಚಾಲನೆ ನೀಡಿರಬಹುದು. ಆದರೆ ಹಳೆಯ ಫೋನ್‌ನಲ್ಲಿದ್ದ, ನಮಗೆ ಗೊತ್ತಾಗದಂತೆ ಉಳಿದುಕೊಳ್ಳಬಹುದಾದ ಫೈಲ್, ಡಾಕ್ಯುಮೆಂಟ್, ಫೋಟೋ, ವೀಡಿಯೋ ಹಾಗೂ ಲಾಗಿನ್ ಐಡಿ, ಪಾಸ್‌ವರ್ಡ್ ಮುಂತಾದ ಇತರ ಯಾವುದೇ ಸೂಕ್ಷ್ಮ ಮಾಹಿತಿಗಳು ಅದರಲ್ಲೇ ಉಳಿದುಕೊಂಡಿದ್ದರೆ, ಭವಿಷ್ಯದಲ್ಲಿ ತೊಂದರೆಯಾಗುವ ಸಾಧ್ಯತೆಗಳು ಹೆಚ್ಚು.

ಯಾಕೆಂದರೆ, ಆ ಫೋನನ್ನು ಇನ್ನೊಬ್ಬರು ಬಳಸಿದಾಗ, ನಿಮ್ಮೆಲ್ಲಾ ಫೈಲುಗಳು ಅದರಲ್ಲೇ ಇದ್ದರೆ ಮತ್ತು ಅವರು ನಿಮ್ಮದೇ ಅಕೌಂಟ್ ಮೂಲಕ ಲಾಗಿನ್ ಆದರೆ (ಪಾಸ್‌ವರ್ಡ್ ಸೇವ್ ಆಗಿರುತ್ತದೆ) ಎದುರಿಸಬೇಕಾದ ತೊಂದರೆಗಳು ಸಾಕಷ್ಟು. ಈ ತೊಂದರೆ ತಪ್ಪಿಸಲು, ವಿಂಡೋಸ್ 8 ಫೋನ್‌ಗಳನ್ನು ಗಮನದಲ್ಲಿಟ್ಟುಕೊಂಡು ಈ ಮಾಹಿತಿ ನೀಡಲಾಗುತ್ತಿದೆಯಾದರೂ, ಆಂಡ್ರಾಯ್ಡ್ ಫೋನ್‌ಗಳಿಗೂ ಇದುವೇ ಹೆಚ್ಚೂಕಡಿಮೆ ಅನ್ವಯವಾಗುತ್ತದೆ.

ಮೊದಲು, ವಿಲೇವಾರಿ ಮಾಡುವ ಮುನ್ನ, ಅದರಲ್ಲಿರುವ ನಮ್ಮ ಫೈಲುಗಳನ್ನು ಬ್ಯಾಕ್ಅಪ್ ಇರಿಸಿಕೊಳ್ಳಬೇಕು. ಅದಕ್ಕೆ ಹೀಗೆ ಮಾಡಿ: ಇಂಟರ್ನೆಟ್ ಕನೆಕ್ಷನ್ ಇದ್ದರೆ ಮತ್ತು ನೀವು ಮೈಕ್ರೋಸಾಫ್ಟ್‌ನ (ಹಾಟ್‌ಮೇಲ್, ಲೈವ್, ಔಟ್‌ಲುಕ್ ಮುಂತಾದ) ಖಾತೆ ಹೊಂದಿದ್ದರೆ, ಆನ್‌ಲೈನ್‌ನಲ್ಲಿ ಬ್ಯಾಕಪ್ ಇರಿಸುವ ವ್ಯವಸ್ಥೆ ಇದೆ. ಜತೆಯಲ್ಲೇ ಮೈಕ್ರೋಸಾಫ್ಟ್‌ನವರೇ ಒದಗಿಸಿದ ಒನ್‌ಡ್ರೈವ್ ಎಂಬ ಕ್ಲೌಡ್ ಸ್ಟೋರೇಜ್ ಇದೆ. ಅದರ ಆ್ಯಪ್ ಇನ್‌ಸ್ಟಾಲ್ ಮಾಡಿಕೊಂಡಿಲ್ಲವಾದರೆ, onedrive.com ಗೆ ಹೋಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು.

ಬ್ಯಾಕ್ಅಪ್ ಇರಿಸುವುದು: Settings > Backup > App list + settings > Backup ಎಂದಿರುವಲ್ಲಿ On ಇರುವಂತೆ ನೋಡಿಕೊಳ್ಳಿ. ಅದೇ ರೀತಿ ಎಸ್‌ಎಂಎಸ್ ಸಂದೇಶಗಳನ್ನು ಮತ್ತು ಫೋಟೋ-ವೀಡಿಯೋಗಳನ್ನು ಕೂಡ ಬ್ಯಾಕಪ್ ಮಾಡಿಕೊಳ್ಳಲು ಪ್ರತ್ಯೇಕ ವಿಭಾಗಗಳು ಅಲ್ಲೇ ಕಾಣಿಸುತ್ತವೆ. Backup Now ಅಂತ ಇರುವಲ್ಲಿ ಒತ್ತಿಬಿಡಿ.

ರೀಸೆಟ್ ಮಾಡುವುದು: ಈಗ ಅದರಲ್ಲಿರುವ ಫೈಲ್‌ಗಳನ್ನು ಡಿಲೀಟ್ ಮಾಡಬೇಕಲ್ಲವೇ? ಮೊದಲು ಫೋನ್‌ನಲ್ಲಿರುವ ಮೆಮೊರಿ ಕಾರ್ಡನ್ನು ತೆಗೆದು ಬೇರೆಡೆ ಇರಿಸಿಕೊಳ್ಳಿ. ಬಳಿಕ ಫೋನ್‌ನಲ್ಲಿ Settings > About > Reset ಎಂಬಲ್ಲಿ ಹೋಗಿ ರೀಸೆಟ್ ಮಾಡಿಬಿಡಿ. ಫೈಲುಗಳೆಲ್ಲಾ ಡಿಲೀಟ್ ಆಗುತ್ತವೆ ಮತ್ತು ನಮ್ಮ ಕಣ್ಣಿಗೆ ಅವುಗಳು ಕಾಣಿಸುವುದಿಲ್ಲ ಅಷ್ಟೆ. ಅವೆಲ್ಲವೂ ಫೋನ್‌ನಲ್ಲೇ ಅಗೋಚರವಾಗಿ ಇರುತ್ತವೆ ಎಂಬುದು ನೆನಪಿರಲಿ. ಹಿಂದೆಯೇ ಹೇಳಿದಂತೆ, ಫೋನ್‌ನಿಂದ ಡಿಲೀಟ್ ಮಾಡುವುದು ಎಂದರೆ, ಅದನ್ನು ಪುನಃ ರಿಕವರ್ ಮಾಡಲಾಗದು ಎಂದೇನಿಲ್ಲ. ಡಿಲೀಟ್ ಮಾಡುವುದೆಂದರೆ, ಹೊಸ ಫೈಲುಗಳು ಓವರ್‌ರೈಟ್ ಆಗಲು ಜಾಗ ಮಾಡಿಕೊಡುವುದು ಎಂದಷ್ಟೇ ಅರ್ಥ.

ರೀಸೆಟ್ ಮಾಡಿದ ಬಳಿಕ, ದೊಡ್ಡ ಗಾತ್ರದ (ಉದಾಹರಣೆಗೆ ಚಲನಚಿತ್ರದ ವೀಡಿಯೋ, ಫೋಟೋ ಇತ್ಯಾದಿ) ಫೈಲುಗಳನ್ನು ನಿಮ್ಮ ಕಂಪ್ಯೂಟರ್‌ನಿಂದ ಇದೇ ಫೋನ್‌ಗೆ ವರ್ಗಾಯಿಸಿಬಿಡಿ. ಅದರ ಇಂಟರ್ನಲ್ ಮೆಮೊರಿ ಭರ್ತಿಯಾಗುವಂತೆ ನೋಡಿಕೊಳ್ಳಿ. ಹೀಗಾದಾಗ, ಫೋನ್‌ನಲ್ಲಿ ಅಗೋಚರ ಸ್ಥಿತಿಯಲ್ಲಿರುವ ನಿಮ್ಮ ವೈಯಕ್ತಿಕ ಫೈಲ್‌ಗಳನ್ನು ಇವುಗಳು ರೀಪ್ಲೇಸ್ ಮಾಡುತ್ತವೆ. ಈ ಮೂಲಕ ನಿಮ್ಮ ಹಿಂದಿನ ಫೈಲುಗಳು ಮತ್ತೆಂದೂ ರೀಕವರ್ ಆಗಲಾರವು. ಒಂದು ಸಲ ಇಂಟರ್ನಲ್ ಮೆಮೊರಿ ಭರ್ತಿಯಾದ ಬಳಿಕ, ಅವೆಲ್ಲಾ ಫೈಲುಗಳನ್ನು ಪುನಃ ಡಿಲೀಟ್ ಮಾಡಿಬಿಡಿ. ಇದೇ ಪ್ರಕ್ರಿಯೆ ಪುನರಾವರ್ತಿಸಿ. ಈ ರೀತಿ ಮಾಡುವುದರಿಂದ ಹಳೆಯ ಫೈಲುಗಳ ಕುರುಹು ಕೂಡ ಉಳಿಯುವುದಿಲ್ಲ, ಯಾರಿಗೂ ರೀಕವರ್ ಮಾಡುವುದು ಸಾಧ್ಯವಾಗುವುದೂ ಇಲ್ಲ.

ಮೈಕ್ರೋ ಎಸ್‌ಡಿ ಕಾರ್ಡನ್ನು (ಅಂದರೆ ಮೆಮೊರಿ ಕಾರ್ಡನ್ನು) ಕೂಡ ನೀವು ಕೊಡುತ್ತಿದ್ದೀರಿ ಎಂದಾದರೆ, ಅದಕ್ಕೂ ಇದೇ ಹಂತಗಳನ್ನು ಪುನರಾವರ್ತಿಸಿ.

ಬ್ಯಾಕಪ್ ಮಾಡಿರುವ ಫೈಲುಗಳನ್ನು ಮರಳಿ ಪಡೆಯುವುದು: ಹೊಸ ಫೋನನ್ನು ಕೊಳ್ಳುತ್ತೀರಿ ಅಥವಾ ಹಳೆಯ ಫೋನ್‌ನಲ್ಲಿ ಸಮಸ್ಯೆ ಬಂದು ಅದನ್ನು ಫ್ಯಾಕ್ಟರಿ ಡೇಟಾ ರೀಸೆಟ್ ಮಾಡಿರುತ್ತೀರಿ. ಮೊದಲೇ ನೀವು ಬ್ಯಾಕಪ್ ಮಾಡಿಟ್ಟುಕೊಂಡಿರುವ ಫೈಲುಗಳನ್ನು, ಈಗ ಮರಳಿ ಫೋನ್‌ಗೆ ಸೇರಿಸಬೇಕಲ್ಲಾ? ಎಲ್ಲ ಫೈಲುಗಳೂ ಒನ್‌ಡ್ರೈವ್‌ನಲ್ಲಿ ಸ್ಟೋರ್ ಆಗಿರುತ್ತವೆ. ಅವುಗಳನ್ನು ಮರಳಿ ಪಡೆಯಲು ಹೀಗೆ ಮಾಡಿ:

ನಿಮ್ಮ ಅದೇ ಮೈಕ್ರೋಸಾಫ್ಟ್ ಖಾತೆಯೊಂದಿಗೆ ಫೋನ್‌ಗೆ ಲಾಗಿನ್ ಆಗಿ. ಸ್ವಲ್ಪ ಹೊತ್ತು ಕಾದಾಗ, ಮೈಕ್ರೋಸಾಫ್ಟ್ ಅಕೌಂಟಿನೊಂದಿಗೆ ಹೊಂದಿಕೊಂಡಿರುವ ಎಲ್ಲ ಮಾಹಿತಿಯನ್ನೂ ಸಿಂಕ್ರನೈಜ್/ರೀಸ್ಟೋರ್ ಮಾಡಬೇಕೇ ಎಂದು ಆ ಫೋನೇ ನಿಮ್ಮನ್ನು ಕೇಳುತ್ತದೆ. ಸೂಚನೆಗಳನ್ನು ಅನುಸರಿಸಿದರೆ, ಕೆಲವೇ ಸಮಯದಲ್ಲಿ ನಿಮ್ಮೆಲ್ಲ ಆ್ಯಪ್‌ಗಳು, ಸೆಟ್ಟಿಂಗ್‌ಗಳು ನಿಮ್ಮ ಫೋನ್‌ನಲ್ಲಿ ಬಂದಿರುತ್ತವೆ.
ಟೆಕ್-ಟಾನಿಕ್: DuckDuckGo
ಇಂಟರ್ನೆಟ್‌ನಲ್ಲಿ ಶೋಧ ನಡೆಸುವುದೆಂದರೆ ಗೂಗಲ್ ಮಾಡುವುದೆಂದೇ ಜನಜನಿತವಾಗಿಬಿಟ್ಟಿದೆ. ಅಂದರೆ ಗೂಗಲ್ ಕಂಪನಿಯೇ ಸರ್ಚ್ ಎಂಜಿನ್ ಒದಗಿಸುತ್ತಿದ್ದು, ಅದನ್ನೇ ಹೆಚ್ಚಿನವರು ಬಳಸುತ್ತಿರುವುದರಿಂದ ಈ ಮಾತು. ಮೈಕ್ರೋಸಾಫ್ಟ್‌ನ Bing ಕೂಡ ಉತ್ತಮ ಸರ್ಚ್ ಆಯ್ಕೆ ನೀಡುತ್ತದೆ. ಆದರೆ DuckDuckGo ಎಂಬ ಸರ್ಚ್ ತಾಣವೂ ಇತ್ತೀಚೆಗೆ ಗಮನ ಸೆಳೆಯುತ್ತಿದೆ. ಗೂಗಲ್‌ನಲ್ಲಿ ನಿರ್ದಿಷ್ಟ ಪದದ ಮೂಲಕ ವಿಷಯ ಹುಡುಕಿದರೆ, ಎಲ್ಲ ಕಡೆ ಒಂದೇ ರೀತಿಯ ಮಾಹಿತಿ ದೊರೆಯುವುದಿಲ್ಲ; ಒಬ್ಬರಿಗೊಂದೊಂದು ರೀತಿಯಲ್ಲಿ, ಅಂದರೆ ಆಯಾ ವ್ಯಕ್ತಿಯು ಏನೆಲ್ಲಾ ಬ್ರೌಸ್ ಮಾಡುತ್ತಾರೆ ಎಂಬುದರ ಆಧಾರದಲ್ಲಿ ಫಲಿತಾಂಶ ದೊರೆಯುತ್ತದೆ. ಅದರಲ್ಲಿ ನಮ್ಮ ಪ್ರೈವೆಸಿಗೆ ಕನ್ನ ಹಾಕಲಾಗುತ್ತಿದೆ ಎಂಬ ಆರೋಪ ಕೇಳಿಬರುತ್ತಿದ್ದರೆ, ಡಕ್‌ಡಕ್‌ಗೋದಲ್ಲಿ ಹಾಗಲ್ಲ. ಎಲ್ಲ ಕಡೆಯೂ ಒಂದೇ ರೀತಿಯ ಫಲಿತಾಂಶವಿರುತ್ತದೆ.

ಕಂಪ್ಯೂಟರ್, ಮೊಬೈಲ್ ವೇಗ ಹೆಚ್ಚಿಸಲು, ಸೇಫ್ ಮೋಡ್ ಬಳಸಿ

ಮಾಹಿತಿ@ತಂತ್ರಜ್ಞಾನ ಅಂಕಣ – 97: ಅವಿನಾಶ್ ಬಿ. (ವಿಜಯ ಕರ್ನಾಟಕ, ಅಕ್ಟೋಬರ್ 13, 2014)

ಇತ್ತೀಚೆಗೆ ನನ್ನ ಸ್ಮಾರ್ಟ್‌ಫೋನ್ ಪದೇ ಪದೇ ರೀಸ್ಟಾರ್ಟ್ ಆಗುವ ಸಮಸ್ಯೆಗೆ ಸಿಲುಕಿತ್ತು. ಈ ಸಮಸ್ಯೆಗೆ ಕಾರಣ ಮತ್ತು ಪರಿಹಾರ ಕಂಡುಹಿಡಿಯಲು ಅಂತರ್ಜಾಲದಲ್ಲಿ ಜಾಲಾಡಿದಾಗ ಮತ್ತು ಕಸ್ಟಮರ್ ಕೇರ್‌ಗೆ ಇಮೇಲ್ ಮೂಲಕ ಸಂಪರ್ಕಿಸಿದ ಬಳಿಕ ಉತ್ತರ ಸಿಕ್ಕಿತು. ವಿಂಡೋಸ್ ಅಥವಾ ಮ್ಯಾಕ್ ಕಂಪ್ಯೂಟರ್‌ಗಳಲ್ಲಿ ಕೂಡ ಯಾವುದೇ ಸಮಸ್ಯೆ ಬಂದಾಗ, ಅದರಲ್ಲಿನ ತಾಂತ್ರಿಕ ದೋಷಗಳನ್ನು ಪತ್ತೆ ಮಾಡಿ ಸರಿಪಡಿಸುವ ನಿಟ್ಟಿನಲ್ಲಿ (ಟ್ರಬಲ್ ಶೂಟಿಂಗ್ ಎನ್ನುತ್ತಾರೆ) “ಸೇಫ್ ಮೋಡ್”ನಲ್ಲಿ ರೀಬೂಟ್ ಅಥವಾ ರೀಸ್ಟಾರ್ಟ್ ಮಾಡಲಾಗುತ್ತದೆ ಮತ್ತು ವೈರಸ್ ಸ್ಕ್ಯಾನ್ ಮಾಡಲಾಗುತ್ತದೆ. ಆಂಡ್ರಾಯ್ಡ್ ಮೊಬೈಲ್ ಫೋನ್‌ಗಳನ್ನು ಕೂಡ ಸೇಫ್ ಮೋಡ್‌ನಲ್ಲಿ ಆನ್ ಮಾಡಬಹುದು ಎಂಬುದು ಆಗಲೇ ನನಗೆ ಗೊತ್ತಾಗಿದ್ದು. ನಿಮ್ಮ ಸಾಧನದ ವೇಗ ಹೆಚ್ಚಿಸಲು ತೀರಾ ಸುಲಭವಾದ ವಿಧಾನವನ್ನು ನೀವೂ ಮಾಡಿ ನೋಡಬಹುದು.

ಸೇಫ್ ಮೋಡ್ ಯಾಕೆ: ಕಂಪ್ಯೂಟರ್ ಅಥವಾ ಯಾವುದೇ ಸಾಧನವನ್ನು ಸೀಮಿತ ಬಳಕೆಗೆ ಆನ್ ಮಾಡುವ ಮೂಲಕ, ಸಮಸ್ಯೆಗಳನ್ನು ಪತ್ತೆ ಹಚ್ಚಲು ಸೇಫ್ ಮೋಡ್ ಅಥವಾ ಸುರಕ್ಷಿತ ಮೋಡ್ ಸಹಕಾರಿ. ಈ ಮೋಡ್‌ನಲ್ಲಿ ಕಂಪ್ಯೂಟರ್ ಆನ್ ಚಾಲನೆಯಾಗಲು ಅಗತ್ಯವಿರುವ ಮೂಲಭೂತ ಫೈಲುಗಳು, ಡ್ರೈವರ್‌ಗಳು ಮಾತ್ರ ಸ್ಟಾರ್ಟ್ ಆಗುತ್ತವೆ. ಈ ಮೋಡ್‌ನಲ್ಲಿರುವಾಗ ಸ್ಕ್ರೀನ್‌ನ ನಾಲ್ಕೂ ಮೂಲೆಗಳಲ್ಲಿ Safe Mode ಎಂಬ ಪದಗಳು ಕಾಣಿಸುತ್ತವೆ. ಸಾಮಾನ್ಯ ಮೋಡ್‌ನಲ್ಲಿ ಕಾಣಿಸಿಕೊಂಡ ದೋಷಗಳು ಸೇಫ್ ಮೋಡ್‌ನಲ್ಲಿ ಬರುವುದಿಲ್ಲ ಎಂದಾದರೆ, ಕಂಪ್ಯೂಟರಿನಲ್ಲಿನ ಮೂಲ ಡ್ರೈವರ್‌ಗಳು ಹಾಗೂ ಸೆಟ್ಟಿಂಗ್‌ಗಳಿಂದಾಗಿ ಏನೂ ಸಮಸ್ಯೆ ಇಲ್ಲ ಎಂದರ್ಥ. ಬಳಿಕ, ನಿಮ್ಮ ಸಿಸ್ಟಂಗೆ ನೀವಾಗಿಯೇ ಇನ್‌ಸ್ಟಾಲ್ ಮಾಡಿದ್ದ ಪ್ರೋಗ್ರಾಂ, ಆ್ಯಪ್ ಅಥವಾ ಸಾಫ್ಟ್‌ವೇರ್‌ಗಳನ್ನು ಒಂದೊಂದಾಗಿ ರನ್ ಮಾಡಿ ನೋಡಿದರೆ, ಯಾವುದು ಲಾಂಚ್ ಆಗುವುದಿಲ್ಲವೋ ಅಥವಾ ಕ್ರ್ಯಾಶ್ ಆಗುತ್ತದೆಯೋ ಅದುವೇ ಸಮಸ್ಯೆ ಮೂಲ ಎಂದು ತಿಳಿದುಕೊಳ್ಳಬಹುದು.

ಹೇಗೆ: ವಿಂಡೋಸ್ ಎಕ್ಸ್‌ಪಿ ಮತ್ತು ವಿಂಡೋಸ್ 7ರಲ್ಲಾದರೆ, ಸ್ವಿಚ್ ಆನ್ ಮಾಡಿದಾಗ ವಿಂಡೋಸ್ ಲೋಗೋ ಕಾಣಿಸಿಕೊಳ್ಳುವ ಮೊದಲು F8 ಒತ್ತಿ ಹಿಡಿದುಕೊಂಡರೆ, ಅದು ಸೇಫ್ ಮೋಡ್‌ನಲ್ಲಿ ಸ್ಟಾರ್ಟ್ ಆಗುತ್ತದೆ. ವಿಂಡೋಸ್ 8ರಲ್ಲಾದರೆ, ಸ್ಕ್ರೀನ್ ಮೇಲೆ ಪವರ್ ಬಟನ್ ಕ್ಲಿಕ್ ಮಾಡಿ, ರೀಸ್ಟಾರ್ಟ್ ಎಂಬ ಆಯ್ಕೆಯನ್ನು ಒತ್ತುವ ಮುನ್ನ ಕೀಬೋರ್ಡ್‌ನಲ್ಲಿ ಶಿಫ್ಟ್ ಕೀಲಿ ಒತ್ತಿ ಹಿಡಿದುಕೊಂಡರಾಯಿತು.

ಇದೇ ರೀತಿ ಆಂಡ್ರಾಯ್ಡ್ ಫೋನನ್ನು ಸೇಫ್ ಮೋಡ್‌ನಲ್ಲಿ ಆನ್ ಮಾಡಲು, ಪವರ್ ಬಟನ್ ಒತ್ತಿ ಹಿಡಿದಾಗ, ಪವರ್ ಆಫ್ ಎಂಬ ಬಟನ್ ಗೋಚರಿಸುತ್ತದೆ. ಅದನ್ನು ಒತ್ತಿ ಹಿಡಿದುಕೊಳ್ಳಿ. ಸೇಫ್‌ಮೋಡ್‌ನಲ್ಲಿ ರೀಸ್ಟಾರ್ಟ್ ಆಗುತ್ತದೆ.

ಪ್ರಯೋಜನಗಳು: ಮುಖ್ಯವಾಗಿ ಈ ಮೋಡ್ ನಿಮ್ಮ ಸಿಸ್ಟಂ ಅನ್ನು ಸಂಪೂರ್ಣವಾಗಿ ರೀಫ್ರೆಶ್ ಮಾಡುತ್ತದೆ. ಡ್ರೈವರ್‌ಗಳೇನಾದರೂ ದೋಷಪೂರಿತವಾಗಿದ್ದರೆ (ಕರಪ್ಟ್), ಸೇಫ್ ಮೋಡ್‌ನಲ್ಲಿ ಸರಿಯಾಗುವ ಸಾಧ್ಯತೆಗಳಿವೆ. ಸೇಫ್ ಮೋಡ್‌ನಿಂದ ನಿರ್ಗಮಿಸಲು ಶಟ್ ಡೌನ್ ಮಾಡಿ ರೀಸ್ಟಾರ್ಟ್ ಮಾಡಿ; ನಾರ್ಮಲ್ ಮೋಡ್‌ಗೆ ಮರಳುತ್ತದೆ. ಸಿಸ್ಟಂ ಹಿಂದಿಗಿಂತ ವೇಗವಾಗಿ ಕಾರ್ಯಾಚರಿಸುತ್ತದೆ. ಯಾಕೆಂದರೆ ಅದರ ಡ್ರೈವರ್‌ಗಳು, ಅಪ್ಲಿಕೇಶನ್‌ಗಳು ಪುನಶ್ಚೇತನಗೊಂಡಿರುತ್ತವೆ. ಕೆಲವೊಂದು ಆ್ಯಂಟಿ ವೈರಸ್ ತಂತ್ರಾಂಶಗಳನ್ನು ಸೇಫ್ ಮೋಡ್‌ನಲ್ಲೇ ರನ್ ಮಾಡಿ ಸಿಸ್ಟಂ ಸ್ಕ್ಯಾನ್ ಮಾಡಿಸಬೇಕೆಂದು ಕಡ್ಡಾಯವಾಗಿ ಸೂಚಿಸಿರುತ್ತಾರೆ.

ಸ್ಮಾರ್ಟ್‌ಫೋನ್ ಸೇಫ್ ಮೋಡ್‌ನಲ್ಲಿ ರೀಬೂಟ್ ಆದಾಗ, ಫ್ಯಾಕ್ಟರಿ ಇನ್‌ಸ್ಟಾಲ್ ಮಾಡಿರುವ ಆ್ಯಪ್‌ಗಳು ಮಾತ್ರ ಗೋಚರಿಸುತ್ತವೆ. ಉಳಿದವನ್ನು ನೋಡಲು ಸೆಟ್ಟಿಂಗ್ಸ್‌ನಲ್ಲಿ ಆ್ಯಪ್ಸ್ ಅಂತ ಇರುವಲ್ಲಿ ಹೋಗಿ ನೋಡಿದರಾಯಿತು. ನಿಮ್ಮ ಸ್ಮಾರ್ಟ್‌ಫೋನ್ ನಿಧಾನವಾಗಿ ಕೆಲಸ ಮಾಡುತ್ತಿದೆಯೆಂದಾದರೆ, ಅದನ್ನು ವೇಗವಾಗಿಸಲು, ಫ್ಯಾಕ್ಟರಿ ಡೇಟಾ ರೀಸೆಟ್ ಎಂಬ ಆಯ್ಕೆಯ (ಇದರಲ್ಲಿ, ನೀವು ಇನ್‌ಸ್ಟಾಲ್ ಮಾಡಿದ ಎಲ್ಲ ಆಯ್ಕೆಗಳು, ನಿಮ್ಮ ಎಲ್ಲ ಮಾಹಿತಿ, ಸಂಪರ್ಕ, ಫೈಲ್‌ಗಳು ಡಿಲೀಟ್ ಆಗಿಬಿಡುತ್ತವೆ) ಬದಲಾಗಿ, ಸೇಫ್ ಮೋಡ್‌ನಲ್ಲಿ ಒಮ್ಮೆ ರೀಬೂಟ್ ಮಾಡಿದರೆ ಸಾಕಾಗಬಹುದು. ನಂತರ ಸಾಮಾನ್ಯ ಮೋಡ್‌ನಲ್ಲಿ ರೀಸ್ಟಾರ್ಟ್ ಮಾಡಿದಾಗ, ಗೂಗಲ್‌ನ ಆ್ಯಪ್‌ಗಳನ್ನು ಹೊರತುಪಡಿಸಿ, ಬೇರೆಲ್ಲಾ ಆ್ಯಪ್‌ಗಳಿಗೆ (ಫೇಸ್‌ಬುಕ್, ಟ್ವಿಟರ್ ಇತ್ಯಾದಿ) ನೀವು ಪುನಃ ಲಾಗಿನ್ ಮಾಡಬೇಕಾಗುತ್ತದೆ ಎಂಬುದು ನೆನಪಿರಲಿ.

ಟೆಕ್ ಟಾನಿಕ್
ಮಂಗಳನಲ್ಲಿಗೆ ಹೋಗಲು ಎಲ್ಲರಿಗೂ ಸಾಧ್ಯವಾಗದಿದ್ದರೂ, ಕನಿಷ್ಠ ನಮ್ಮ ಹೆಸರನ್ನಾದರೂ ಮೈಕ್ರೋಚಿಪ್ ಮೂಲಕ ಬಾಹ್ಯಾಕಾಶಕ್ಕೆ ತಲುಪಿಸುವ ಅವಕಾಶವೊಂದನ್ನು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಮಾಡಿಕೊಟ್ಟಿದೆ. ಜಾಗತಿಕ ಬಾಹ್ಯಾಕಾಶ ಆಸಕ್ತರ ಸಮಾಜ ರಚಿಸುವ ಗುರಿ ನಾಸಾ ಸಂಸ್ಥೆಯದು. ಓರಿಯಾನ್ ಎಂಬ ಬಾಹ್ಯಾಕಾಶ ನೌಕೆಯ ಪರೀಕ್ಷಾ ಪ್ರಯೋಗ ಡಿ.4ರಂದು ನಡೆಯಲಿದ್ದು, ಆ ನೌಕೆ ಪೆಸಿಫಿಕ್ ಸಾಗರಕ್ಕೆ ಬೀಳುತ್ತದೆಯಾದರೂ, ಮುಂದೆ ಮಂಗಳನತ್ತ ಯಾವುದೇ ನೌಕೆಯನ್ನು ಹಾರಿಬಿಟ್ಟಾಗ ನಿಮ್ಮ ಹೆಸರಿಗೆ ಇಂತಿಷ್ಟು ಮೈಲುಗಳು ಸೇರ್ಪಡೆಯಾಗುತ್ತವೆ. ಇದಕ್ಕಾಗಿ ನಿಮ್ಮ ಹೆಸರಿಗೆ ಬಾಹ್ಯಾಕಾಶ ಯಾನದ ಬೋರ್ಡಿಂಗ್ ಪಾಸ್ ದೊರೆಯಬೇಕಿದ್ದರೆ go.usa.gov/vcpz ಎಂಬಲ್ಲಿ ಹೋಗಿ ಹೆಸರು ದಾಖಲಿಸಿ.

‌ವೈಫೈ ಡೇಟಾ ಕಾರ್ಡ್: ಒಂದೇ ಸಿಮ್‌, ಹಲವು ಸಾಧನಗಳಿಗೆ ಇಂಟರ್ನೆಟ್‌

ಮಾಹಿತಿ@ತಂತ್ರಜ್ಞಾನ ಅಂಕಣ – 96: ಅವಿನಾಶ್ ಬಿ. (ವಿಜಯ ಕರ್ನಾಟಕ, ಅಕ್ಟೋಬರ್ 06, 2014)

ಅಂತರ್ಜಾಲ ಈಗ ಬದುಕಿನ ಅವಿಭಾಜ್ಯ ಅಂಗವಾಗಿರುವ ಕಾರಣಕ್ಕೆ ಹೆಚ್ಚಾಗಿ ಮನೆಗಳಲ್ಲಿ, ಕಚೇರಿಗಳಲ್ಲಿ ಬ್ರಾಡ್‌ಬ್ಯಾಂಡ್ ಇಂಟರ್ನೆಟ್ ಸಂಪರ್ಕ ಇರುತ್ತದೆ. ಮನೆಯಲ್ಲಾದರೆ ಅದಕ್ಕೆ ವೈರ್‌ಗಳು, ಕೇಬಲ್‌ಗಳ ಕಿರಿಕಿರಿ. ಹೀಗಾಗಿಯೇ ಪುಟ್ಟದಾದ ಇಂಟರ್ನೆಟ್ ಡಾಂಗಲ್‌ಗಳು ಎಂದು ಕರೆಯಲಾಗುವ, ಎಲ್ಲಿ ಬೇಕಾದರೂ ಹೊತ್ತೊಯ್ಯಬಹುದಾದ ಯುಎಸ್‌ಬಿ ಡೇಟಾ ಕಾರ್ಡ್‌ಗಳು ಜನಪ್ರಿಯವಾಗಿವೆ. ಈ ನಿಟ್ಟಿನಲ್ಲಿ ಬಿಎಸ್ಸೆನ್ನೆಲ್, ಏರ್‌ಟೆಲ್, ವೊಡಾಫೋನ್, ಟಾಟಾ ಡೊಕೊಮೊ, ರಿಲಯನ್ಸ್, ಎಂಟಿಎಸ್, ಐಡಿಯಾ, ಏರ್‌ಸೆಲ್ ಮುಂತಾದ ಎಲ್ಲ ಮೊಬೈಲ್ ಆಪರೇಟರ್ ಕಂಪನಿಗಳೂ ತಮ್ಮದೇ ಡಾಂಗಲ್‌ಗಳನ್ನು ಮಾರುಕಟ್ಟೆಗಿಳಿಸಿವೆ. ಅವುಗಳಲ್ಲಿ ಹೊಸ ಟ್ರೆಂಡ್ ಎಂದರೆ ಪ್ಲಗ್-ಆ್ಯಂಡ್-ಪ್ಲೇ ವ್ಯವಸ್ಥೆಯ ವೈ-ಫೈ ಡಾಂಗಲ್‌ಗಳು ಕಮ್ ರೌಟರ್‌ಗಳು.

ಇಂತಹಾ ಉಪಯುಕ್ತ ವೈಫೈ ತಂತ್ರಜ್ಞಾನದ ಬಗ್ಗೆ ಅರಿವಿಲ್ಲದವರಿಗೆ, ವಿಶೇಷವಾಗಿ ಗ್ರಾಮೀಣ ಭಾಗದವರಿಗಾಗಿ ಈ ಸಲಹೆ.

ಮುಖ್ಯವಾಗಿ ನಾಲ್ಕು ವಿಧದ ವೈ-ಫೈ ಡಾಂಗಲ್‌ಗಳಿವೆ. 1. ಸಿಮ್ ಆಧಾರಿತ ವೈಫೈ ಡಾಂಗಲ್, 2. ಯುಎಸ್‌ಬಿ/ಡೇಟಾ ಕಾರ್ಡ್ ಆಧಾರಿತ ವೈಫೈ ಸಾಧನ, 3. ವೈಫೈ ಹಾಟ್‌ಸ್ಪಾಟ್ ಅವಕಾಶವಿರುವ ಯುಎಸ್‌ಬಿ ಡೇಟಾ ಕಾರ್ಡ್ ಮತ್ತು 4. ಯಾವುದೇ (ಯೂನಿವರ್ಸಲ್) ಸಿಮ್, ಬ್ಯಾಟರಿ, ಮೆಮೊರಿ ಕಾರ್ಡ್ ಸ್ಲಾಟ್ ಇರುವ ಪ್ಲಗ್-ಆ್ಯಂಡ್-ಪ್ಲೇ ಕೂಡ ಆಗಬಲ್ಲ ವೈಫೈ ಡಾಂಗಲ್.

ಇಂಟರ್ನೆಟ್ ಸಂಪರ್ಕಕ್ಕಾಗಿ ಮೋಡೆಮ್, ಕಂಪ್ಯೂಟರ್ ಆನ್ ಮಾಡುವುದು, ಆಫ್ ಮಾಡುವುದು ದೊಡ್ಡ ಕಿರಿಕಿರಿ. ಕರೆಂಟ್ ಹೋದಾಗಲಂತೂ ಮತ್ತಷ್ಟು ಸಮಸ್ಯೆ. ಬದಲಾಗಿ, ಪ್ಲಗ್‌ಗೆ ಒಂದು ಡಾಂಗಲ್ ಸಿಕ್ಕಿಸಿದರೆ, ಅದನ್ನೇ ವೈ-ಫೈ ಹಾಟ್‌ಸ್ಪಾಟ್ ಆಗಿಸಿ ಮೊಬೈಲ್, ಕಂಪ್ಯೂಟರ್, ಲ್ಯಾಪ್‌ಟಾಪ್ ಎಲ್ಲದಕ್ಕೂ ಸಂಪರ್ಕ ದೊರೆಯುವಂತಾದರೆ? ಒಂದು ಇಂಟರ್ನೆಟ್ ಸಂಪರ್ಕ ಪಡೆದುಕೊಂಡು ಅದನ್ನೇ ನೀವು ಹಾಗೂ ಮನೆಯವರಲ್ಲಿರುವ ಎಲ್ಲರ ಮೊಬೈಲ್/ಲ್ಯಾಪ್‌ಟಾಪ್/ಟ್ಯಾಬ್ಲೆಟ್ ಸಾಧನಗಳೂ ಬಳಸುವಂತಾದರೆ?

ಇದಕ್ಕೆ ನೆರವಿಗೆ ಬರುವುದೇ ಪ್ಲಗ್-ಆ್ಯಂಡ್-ಪ್ಲೇ ವೈಫೈ ಇಂಟರ್ನೆಟ್ ಡಾಂಗಲ್ ಅಥವಾ ಡೇಟಾ ಕಾರ್ಡ್. ಈ ಡಾಂಗಲ್ ಅನ್ನು ಅದರ ಜತೆಗೆ ಬರುವ ಅಡಾಪ್ಟರ್ ಮೂಲಕ ಕರೆಂಟ್ ಪ್ಲಗ್‌ಗೆ ಸಿಕ್ಕಿಸಿದರೆ ಸಾಕು, ಇಂಟರ್ನೆಟ್ ಸಂಪರ್ಕ ಆನ್ ಆಗುತ್ತದೆ ಮತ್ತು ವೈ-ಫೈ ಮೂಲಕ ಈ ಡಾಂಗಲ್‌ಗೆ ಕನಿಷ್ಠ ಐದು ಸಾಧನಗಳನ್ನು (ಸ್ಮಾರ್ಟ್‌ಫೋನ್, ಟ್ಯಾಬ್ಲೆಟ್, ಕಂಪ್ಯೂಟರ್ ಇತ್ಯಾದಿ) ಸಂಪರ್ಕಿಸಬಹುದು. ಇದಕ್ಕೆ ಪಾಸ್‌ವರ್ಡ್ ರಕ್ಷಣೆ ಇರುತ್ತದೆ. ಆದರೆ ಎಲ್ಲ ಸಾಧನಗಳಲ್ಲೂ ವೈ-ಫೈ ಸೌಲಭ್ಯ ಇರಬೇಕು. ಈ ಡೇಟಾ ಕಾರ್ಡ್‌ಗೆ ಅಪರಿಮಿತ ಡೇಟಾ (ಅನ್‌ಲಿಮಿಟೆಡ್ ಇಂಟರ್ನೆಟ್) ಸೌಕರ್ಯವಿರುವ ಒಂದು ಸಿಮ್ ಕಾರ್ಡ್ ಅಳವಡಿಸಿದರಾಯಿತು. ಕೆಲವು ಡಾಂಗಲ್‌ಗಳಲ್ಲಿ ರೀಚಾರ್ಜೆಬಲ್ ಬ್ಯಾಟರಿಯೂ ಇರುತ್ತದೆ. ಪವರ್ ಕಟ್ ಸಂದರ್ಭ ಸುಮಾರು ನಾಲ್ಕು ಗಂಟೆ ಇದು ಅನುಕೂಲ ಕಲ್ಪಿಸುತ್ತದೆ.

ಬಹುತೇಕ ಎಲ್ಲ ಮೊಬೈಲ್ ಆಪರೇಟರ್‌ಗಳೂ ಇಂತಹಾ ವೈ-ಫೈ ಡಾಂಗಲ್ ಮಾರುಕಟ್ಟೆಗೆ ಬಿಟ್ಟಿದ್ದಾರಾದರೂ, ನಿರ್ದಿಷ್ಟ ನೆಟ್‌ವರ್ಕ್‌ಗೆ ಸೀಮಿತವಾಗದೆ, ಹೆಚ್ಚುವರಿ ಅನುಕೂಲಗಳಿರುವ ಡಾಂಗಲ್ ನೀವು ಖರೀದಿಸಬೇಕೆಂದರೆ, ಅಂಗಡಿಯಾತನಲ್ಲಿ ನೀವು ಕೇಳಬೇಕಾದ ವಿಷಯಗಳು – ವೈ-ಫೈ ಹಾಟ್‌ಸ್ಪಾಟ್, ರೀಚಾರ್ಜೆಬಲ್ ಬ್ಯಾಟರಿ, ಮೆಮೊರಿ ಕಾರ್ಡ್ ಸ್ಲಾಟ್, ಯೂನಿವರ್ಸಲ್ ಡಾಂಗಲ್ (ಇದರಲ್ಲಿ ಯಾವುದೇ ಕಂಪನಿಯ ಸಿಮ್ ಕಾರ್ಡ್ ಹಾಕಬಹುದು). ಹ್ಯುವೈ (Huawei), ಬೀಟೆಲ್, ಇಂಟೆಕ್ಸ್, ಅಲ್ಕಾಟೆಲ್, ಡಿ-ಲಿಂಕ್ ಮುಂತಾದ ಕಂಪನಿಗಳ ಡೇಟಾ ಕಾರ್ಡ್‌ಗಳನ್ನು ಪರಿಗಣಿಸಬಹುದು. 3-4 ಸಾವಿರ ರೂ. ಆಸುಪಾಸಿನಲ್ಲಿ ಈ ಸೌಕರ್ಯಗಳಿರುವ ಡಾಂಗಲ್ ಸಿಗುತ್ತದೆ.

ಹಳೆಯ ಸ್ಮಾರ್ಟ್‌ಫೋನ್ ಇದೆಯೇ? ಅದೇ ಸಾಕು: ನಿಮ್ಮಲ್ಲಿ ಹಳೆಯ ಸ್ಮಾರ್ಟ್‌ಫೋನ್ ಇದ್ದರೆ ಅದನ್ನೂ ವೈಫೈ ಹಾಟ್‌ಸ್ಪಾಟ್ ಆಗಿ ಬಳಸಿ ಸದುಪಯೋಗ ಮಾಡಿಕೊಳ್ಳಬಹುದು. ಅದರಲ್ಲಿರುವ ಟಿದರಿಂಗ್ ಆ್ಯಂಡ್ ಹಾಟ್‌ಸ್ಪಾಟ್ ಎಂಬ ಸೌಕರ್ಯವನ್ನು ಉಪಯೋಗಿಸಿಕೊಳ್ಳಬೇಕು. ಆ ಮೊಬೈಲಿಗೊಂದು ಅನ್‌ಲಿಮಿಟೆಡ್ ಇಂಟರ್ನೆಟ್ ಪ್ಯಾಕ್ ಹಾಕಿಸಿಕೊಂಡರೆ ಸಾಕು. ಅದರ ಸಂಪರ್ಕವನ್ನೇ ವೈಫೈ ಮೂಲಕ ಬೇರೆ 4-5 ಸಾಧನಗಳಿಗೆ ಹಂಚಬಹುದು.

ಇನ್ನು, ಈಗಾಗಲೇ ಬ್ರಾಡ್‌ಬ್ಯಾಂಡ್ ಸಂಪರ್ಕ ಪಡೆದುಕೊಂಡವರು ಕೂಡ ವೈಫೈ ಮೂಲಕ ವಿವಿಧ ಸಾಧನಗಳನ್ನು ಸಂಪರ್ಕಿಸಿಕೊಳ್ಳಬಹುದು. ಇದಕ್ಕಾಗಿಯೇ ಮೋಡೆಮ್‌ಗೆ ಅಳವಡಿಸುವ ಮತ್ತು ಬೇರೆ ಡೇಟಾ ಕಾರ್ಡನ್ನೂ ಅಳವಡಿಸಬಹುದಾದ ವೈಫೈ ರೌಟರ್‌ಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ.

ಟೆಕ್ ಟಾನಿಕ್
ಆನ್‌ಲೈನ್‌ನಲ್ಲಿರುವಾಗ ಬುದ್ಧಿಮತ್ತೆ ಹೆಚ್ಚಿಸಿಕೊಳ್ಳಿ:
ಫೇಸ್‌ಬುಕ್, ಟ್ವಿಟರ್ ಮತ್ತು ಮೆಸೇಜಿಂಗ್ ಮುಂತಾದ ಇಂಟರ್ನೆಟ್ ಜಮಾನದಲ್ಲಿ ಹಾಗೂ ಎಲ್ಲದಕ್ಕೂ ಗೂಗಲ್ ಇದೆ ಎಂಬ ಭರವಸೆಯ ನಡುವೆ ನಮ್ಮ ಐಕ್ಯೂ ಅಂದರೆ ಬೌದ್ಧಿಕ ಕೌಶಲ್ಯ ಅಥವಾ ಜಾಣ್ಮೆ ತುಕ್ಕು ಹಿಡಿಯುತ್ತಿದೆ ಎಂಬ ಮಾತುಗಳನ್ನಿಂದು ಕೇಳುತ್ತಿದ್ದೇವೆ. ಮೆದುಳಿಗೆ ಕೆಲಸ ಕೊಟ್ಟರೆ ಮಾತ್ರ ಅದು ಹರಿತವಾಗಿರುತ್ತದೆ. ಹೀಗಾಗಿ ಇಂಟರ್ನೆಟ್‌ನಲ್ಲಿರುವಾಗ ಸಮಯ ಮಾಡಿಕೊಂಡು ಈ ತಾಣಕ್ಕೆ ಭೇಟಿ ನೀಡಿದರೆ, ಬುದ್ಧಿಮತ್ತೆಯನ್ನು ಒರೆಗೆ ಹಚ್ಚಬಹುದು. ಮಕ್ಕಳಿಗೆ ಅತ್ಯಂತ ಸೂಕ್ತ ತಾಣವಿದು. ದೊಡ್ಡವರಿಗೂ ಕೂಡ. https://memorado.com/

ಮೊಬೈಲ್, ಕಂಪ್ಯೂಟರಲ್ಲಿ ಕನ್ನಡದಲ್ಲಿ ಬರೆಯೋದು ಈಗ ತುಂಬಾ ಸುಲಭ

ಮಾಹಿತಿ@ತಂತ್ರಜ್ಞಾನ: ವಿಜಯ ಕರ್ನಾಟಕ ಅಂಕಣ, ಮಾರ್ಚ್ 03, 2014
ಅಂತರ್ಜಾಲದಲ್ಲಿ ಕನ್ನಡದ ಬಳಕೆ ಹೆಚ್ಚಾದರೆ, ಕನ್ನಡಕ್ಕೆ ಶ್ರೇಯಸ್ಸು. ಆದರೆ, ಇಂಟರ್ನೆಟ್‌ನಲ್ಲಿ ಕಂಗ್ಲಿಷ್ (ಕನ್ನಡವನ್ನು ಓದಲು ತ್ರಾಸವಾಗುವ ರೀತಿಯಲ್ಲಿ ಇಂಗ್ಲಿಷ್‌ನಲ್ಲಿ ಬರೆಯುವ ವಿಧಾನ) ಬಳಕೆ ಆತಂಕಕಾರಿಯಾಗಿ ಹೆಚ್ಚಾಗುತ್ತಿದೆ. ಇದಕ್ಕೆ ಕಾರಣಗಳು ಹಲವು. ಕನ್ನಡ ಬಳಕೆ ತುಂಬಾ ಸುಲಭವೆಂಬ ಜ್ಞಾನವಿಲ್ಲದಿರುವುದು; ಅದಕ್ಕೆ ದೊಡ್ಡ ತಂತ್ರಾಂಶವೇ ಬೇಕೆಂಬ ಅಜ್ಞಾನ; ಇಂಗ್ಲಿಷ್ ಅಕ್ಷರಗಳಿರುವ ಕೀಬೋರ್ಡ್‌ನಲ್ಲಿ ಇಂಗ್ಲಿಷ್ ಬದಲು ಕನ್ನಡವನ್ನು ಟೈಪ್ ಮಾಡುವುದು (ಲಿಪ್ಯಂತರಣ) ತೀರಾ ಕಷ್ಟ ಎಂಬ ಭಾವನೆ. ಆದರೆ ಇಂಗ್ಲಿಷಿನಲ್ಲಿಯೇ ಕನ್ನಡವನ್ನು ಬರೆದರೆ ಎಲ್ಲರಿಗೂ ಓದಲು ತ್ರಾಸ ಆಗುತ್ತದೆ. ಬಹುಶಃ ಅಂಥವರಿಗಾಗಿಯೇ ಇರಬಹುದು, ಒಂದು ಕೀಬೋರ್ಡ್ ರೂಪಿಸಲಾಗಿದೆ. ಅಂದರೆ ಇಂಗ್ಲಿಷಿನಲ್ಲೇ ಕನ್ನಡ ಬರೆಯುತ್ತಾ ಹೋದರೂ, ಅಕ್ಷರವು ಕನ್ನಡದಲ್ಲೇ ಮೂಡುತ್ತದೆ. ಇದು ತೀರಾ ಸುಲಭ ಮತ್ತು ಉಚಿತ.

ಜನರು ಕಂಗ್ಲಿಷ್ ಟೈಪ್ ಮಾಡದಿರಲೆಂದೇ ‘ವಿಕಿಮೀಡಿಯಾ’ದವರು ಉಚಿತವಾಗಿ ಕೊಟ್ಟಿರುವ ಕೀಬೋರ್ಡನ್ನು (ಎಕ್ಸ್‌ಟೆನ್ಷನ್ ರೂಪದಲ್ಲಿ) ಗೂಗಲ್ ಕ್ರೋಮ್ ಎಂಬ ಬ್ರೌಸರ್‌ಗೆ ಅಳವಡಿಸಿಕೊಂಡರಾಯಿತು. ಕಂಗ್ಲಿಷಿನಲ್ಲೇ ಬರೆದುದನ್ನು ಅದು ಕನ್ನಡಕ್ಕೆ ಪರಿವರ್ತಿಸಿ ತೋರಿಸಿ, ಕನ್ನಡದಲ್ಲೇ ಬರೆಯಿರಿ ಎಂಬ ಬಗ್ಗೆ ಜಾಗೃತಿ ಮೂಡಿಸುತ್ತದೆ. ನೀವು ಮಾಡಬೇಕಾದುದಿಷ್ಟೆ. ಇಂಟರ್ನೆಟ್ ಜಾಲಾಡಲು ಕ್ರೋಮ್ (Chrome) ಎಂಬ ಬ್ರೌಸರ್ ಬಳಸಿ. (http://goo.gl/kH4Q ಎಂಬಲ್ಲಿ ಡೌನ್‌ಲೋಡ್ ಮಾಡಿಕೊಂಡು ಇನ್‌ಸ್ಟಾಲ್ ಮಾಡಿಕೊಳ್ಳಿ). ಅದೇ ಕ್ರೋಮ್ ಬ್ರೌಸರ್‌ನಲ್ಲಿ http://goo.gl/NrVKGJ ವಿಳಾಸವನ್ನು ಹಾಕಿದಾಗ, ಬಲ ಮೇಲ್ಭಾಗದಲ್ಲಿ +FREE ಎಂಬ ನೀಲಿ ಬಣ್ಣದ ಬಟನ್ ಇರುತ್ತದೆ. ಕ್ಲಿಕ್ ಮಾಡಿ. ಪಾಪ್-ಅಪ್ ವಿಂಡೋ ಒಂದು ಕಾಣಿಸಿ, ನಿಮ್ಮಿಂದ ಕನ್ಫರ್ಮೇಶನ್ ಕೇಳುತ್ತದೆ. Add ಎಂಬ ಬಟನ್ ಒತ್ತಿದರಾಯಿತು. ಸ್ವಲ್ಪ ಹೊತ್ತಿನಲ್ಲೇ ಹಸಿರು ಬಣ್ಣದಲ್ಲಿ Added to Chrome ಎಂಬ ಸಂದೇಶ ಬರುತ್ತದೆ.

ನಂತರ ನೀವು ಇಂಟರ್ನೆಟ್‌ನಲ್ಲಿ ಎಲ್ಲೇ ಕನ್ನಡ ಬರೆಯಬೇಕಿದ್ದರೂ, ಆ ಬಾಕ್ಸ್‌ನ ಬಲತುದಿಯಲ್ಲಿ ಪುಟ್ಟ ಕೀಬೋರ್ಡ್ ಚಿಹ್ನೆಯೊಂದು ಕಾಣಿಸುತ್ತದೆ. ಅದನ್ನು ಕ್ಲಿಕ್ ಮಾಡಿ. ಮೂಲತಃ ಇಂಗ್ಲಿಷ್ ತೋರಿಸುತ್ತದೆ. ಅದರಲ್ಲಿ Other Languages ಬರೆದಿರುವುದರ ಕೆಳಗೆ ಇರುವ ಡಾಟ್‌ಗಳನ್ನು ಕ್ಲಿಕ್ ಮಾಡಿದಾಗ, ನಿಮ್ಮ ಭಾಷೆ ಆಯ್ದುಕೊಳ್ಳಲು ವಿಂಡೋ ಗೋಚರಿಸುತ್ತದೆ. ಕೆಳಗೆ ಸ್ಕ್ರಾಲ್ ಮಾಡಿದರೆ, Asia ಭಾಷೆಗಳ ಅಡಿಯಲ್ಲಿ, ಅಚ್ಚ ಕನ್ನಡದಲ್ಲಿ ಬರೆದಿರುವ ‘ಕನ್ನಡ’ ಎಂಬುದನ್ನು ಆಯ್ಕೆ ಮಾಡಿಕೊಳ್ಳಿ.

ಕಾಮೆಂಟ್ ಮಾಡಲು, ಫೇಸ್‌ಬುಕ್‌ನ ವಾಲ್‌ನಲ್ಲಿ ಬರೆಯಲು ಹೋದಾಗ ಕಾಣಿಸಿಕೊಳ್ಳುವ ಪುಟ್ಟ ಕೀಬೋರ್ಡ್ ಚಿಹ್ನೆಯನ್ನು ಒತ್ತಿದಾಗ, ಕನ್ನಡದಲ್ಲೇ ಲಿಪ್ಯಂತರಣ (ಇಂಗ್ಲಿಷಿನಲ್ಲಿ ಬರೆದುದನ್ನು ಕನ್ನಡಕ್ಕೆ ಪರಿವರ್ತಿಸುವುದು) ಆಯ್ದುಕೊಳ್ಳಬಹುದು ಅಥವಾ ಈಗಾಗಲೇ ಕೆಜಿಪಿ, ನುಡಿ, ಕೆ.ಪಿ.ರಾವ್ ಮಾದರಿಯ ಕೀಬೋರ್ಡ್‌ನಲ್ಲಿ ಟೈಪ್ ಮಾಡುತ್ತಿದ್ದವರಿಗಾಗಿ ಆಯಾ ಕೀಬೋರ್ಡ್ ಶೈಲಿಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಇಂಗ್ಲಿಷಿನಲ್ಲಿಯೇ ಕನ್ನಡ ಟೈಪ್ ಮಾಡುವ ಅಭ್ಯಾಸವಿದ್ದರೆ ಲಿಪ್ಯಂತರಣ ಆಯ್ಕೆ ಮಾಡಿಬಿಡಿ. ಈ ಸೆಟ್ಟಿಂಗ್ ಅನ್ನು ಒಂದು ಸಲ ಮಾಡಿಟ್ಟುಕೊಂಡರೆ ಆಯಿತು, ಪದೇ ಪದೇ ಮಾಡಿಕೊಳ್ಳಬೇಕಾಗಿಲ್ಲ.

ನಂತರ ಬರೆಯಬೇಕಾದಾಗಲೆಲ್ಲಾ Ctrl+M (ಕಂಟ್ರೋಲ್ ಮತ್ತು M) ಬಟನ್‌ಗಳನ್ನು ಒಮ್ಮೆ ಒತ್ತಿದಾಗ ಕನ್ನಡಕ್ಕೂ, ಮತ್ತೊಮ್ಮೆ Ctrl+M ಒತ್ತಿದರೆ ಇಂಗ್ಲಿಷ್‌ಗೂ ಬದಲಾಗುತ್ತದೆ. ಈ ಟೂಲ್ ಇದೆಯೆಂದಾದರೆ, ಬ್ಲಾಗುಗಳಿಗೆ, ಫೇಸ್‌ಬುಕ್ ಪೋಸ್ಟ್‌ಗಳಿಗೆ, ಸುದ್ದಿ-ಲೇಖನ ವಿಭಾಗಗಳಿಗೆ ಕಾಮೆಂಟ್ ಮಾಡಲು ಈ ಕಂಗ್ಲಿಷ್ ಭೂತ ಅಡ್ಡ ಬರುವುದೇ ಇಲ್ಲ.

ಮೊಬೈಲ್‌ನಲ್ಲಿ: ಯಾವುದೇ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲಿ ಕನ್ನಡದಲ್ಲಿ ಬರೆಯಲು ಪಾಣಿನಿ, ಎನಿಸಾಫ್ಟ್, ಸ್ವರಚಕ್ರ, ಮಲ್ಟಿಲಿಂಗ್ ಕೀಬೋರ್ಡ್ ಮುಂತಾದ ಹಲವು ಆ್ಯಪ್‌ಗಳು ಗೂಗಲ್‌ನ ಪ್ಲೇ ಸ್ಟೋರ್‌ನಲ್ಲಿ ಲಭ್ಯ ಇವೆಯಾದರೂ, ಜಸ್ಟ್ ಕನ್ನಡ ಎಂಬ ಆ್ಯಪ್ ಇವೆಲ್ಲವುಗಳ ಸಾಲಿನಲ್ಲಿ ಎದ್ದು ನಿಲ್ಲುತ್ತದೆ. ಬೆಂಗಳೂರಿನ ಯುವ ಟೆಕ್ಕಿ ಶ್ರೀಧರ್ ಎನ್.ಆರ್. ಇದನ್ನು ನಿರ್ಮಿಸಿದ್ದಾರೆ ಮತ್ತು ಬಂದ ಸಲಹೆಗಳ ಆಧಾರದಲ್ಲಿ ಇತ್ತೀಚೆಗೆ ಅಪ್‌ಡೇಟ್ ಕೂಡ ಮಾಡಿದ್ದಾರೆ. ತತ್ಫಲವಾಗಿ ಮೊಬೈಲ್‌ನಲ್ಲಿ ಕನ್ನಡ ಟೈಪ್ ಮಾಡುವುದು ಇನ್ನಷ್ಟು ಸುಲಭವಾಗಿದೆ. ಪ್ಲೇಸ್ಟೋರ್‌ನಲ್ಲಿ Just Kannada ಅಂತ ಸರ್ಚ್ ಮಾಡಿದರೆ ಇದು ನಿಮಗೆ ಲಭ್ಯ. ಅತ್ಯಂತ ಕಡಿಮೆ ಕೀಲಿಗಳನ್ನು ಬಳಸಿ ಕನ್ನಡ ಬರೆಯುವ ಸಾಧ್ಯತೆ ಇದರ ಹೆಗ್ಗಳಿಕೆ. ಇದರ ಬಳಕೆಯನ್ನು ಮತ್ತಷ್ಟು ಸುಲಭವಾಗಿಸಲು ಶ್ರೀಧರ್ ಹಾಗೂ ಮತ್ತೊಬ್ಬ ಕನ್ನಡದ ಮನಸ್ಸಿನ ಟೆಕ್ಕೀ ಓಂಶಿವಪ್ರಕಾಶ್ ಹೆಚ್.ಎಲ್. ಸೇರಿಕೊಂಡು ಇದರ ಸುಧಾರಿತ ರೂಪವನ್ನು ಶೀಘ್ರದಲ್ಲೇ ಹೊರತರುತ್ತಿದ್ದಾರೆ. ಟ್ಯಾಬ್ಲೆಟ್‌ಗಳಲ್ಲಿಯೂ ಕೆಲಸ ಮಾಡುವ ಈ ಉಚಿತ ಆ್ಯಪ್‌ನ ಸದುಪಯೋಗಪಡಿಸಿಕೊಳ್ಳಿ.

ನಿಮ್ಮಲ್ಲಿರಲೇಬೇಕಾದ ಆಂಡ್ರಾಯ್ಡ್ ಆ್ಯಪ್‌ಗಳು

ಮಾಹಿತಿ@ತಂತ್ರಜ್ಞಾನ: ವಿಜಯ ಕರ್ನಾಟಕ ಅಂಕಣ, ಫೆಬ್ರವರಿ 24, 2014
ಹೊಸದಾಗಿ ಕೊಂಡುಕೊಂಡ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ನಲ್ಲಿ ಮುಖ್ಯವಾಗಿ ಇರಬೇಕಾದ ಕಿರುತಂತ್ರಾಂಶಗಳು (ಆ್ಯಪ್‌ಗಳು) ಯಾವುವು ಅಂತ ಗೊಂದಲದಲ್ಲಿದ್ದರೆ ಈ ಅಂಕಣ ಓದಿ.

ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಪರಿಪೂರ್ಣ ಪ್ರಯೋಜನ ಪಡೆಯಬೇಕಿದ್ದರೆ, ಇಂಟರ್ನೆಟ್ ಸಂಪರ್ಕ ಮತ್ತು ಜಿಮೇಲ್ ಖಾತೆ ಅತ್ಯಗತ್ಯ. ಮುಖ್ಯವಾಗಿ ಮ್ಯೂಸಿಕ್, ವೀಡಿಯೋ, ಎಫ್ಎಂ ರೇಡಿಯೋ, ಕ್ಯಾಲೆಂಡರ್, ಫೇಸ್‌ಬುಕ್ ಅಡೋಬ್ ರೀಡರ್, ಗಡಿಯಾರ, ಮ್ಯಾಪ್, ಯೂಟ್ಯೂಬ್ ಮುಂತಾದ ಆ್ಯಪ್‌ಗಳು ಹೆಚ್ಚಿನ ಸ್ಮಾರ್ಟ್‌ಫೋನ್‌ಗಳಲ್ಲಿ ಅಳವಡಿಕೆಯಾಗಿಯೇ ಇರುತ್ತವೆ. ಮತ್ತೆ ಕೆಲವನ್ನು ನಾವು ಜಿಮೇಲ್ ಖಾತೆಯ ಮೂಲಕ Play Store ಎಂಬ ಆಂಡ್ರಾಯ್ಡ್ ಮಾರುಕಟ್ಟೆಯ ತಾಣಕ್ಕೆ ಲಾಗ್ ಇನ್ ಆಗಿ ಡೌನ್‌ಲೋಡ್ ಮಾಡಿಕೊಳ್ಳಬೇಕಾಗುತ್ತದೆ.

ಕ್ಲೀನ್ ಮಾಸ್ಟರ್: ನಿಮಗೆ ಅತ್ಯಂತ ಮಹತ್ವವಾಗುವುದು Clean Master ಎಂಬ ಆ್ಯಪ್. ಇದು ಯಾವುದೇ ಜಂಕ್ ಫೈಲ್‌ಗಳನ್ನು ಗುಡಿಸಿ ತೆಗೆಯುತ್ತದೆ, ತಾತ್ಕಾಲಿಕ ಫೈಲ್‌ಗಳನ್ನು (cache) ಅಳಿಸುತ್ತದೆ, ಅನವಶ್ಯವಾಗಿ ಬ್ಯಾಕ್‌ಗ್ರೌಂಡ್‌ನಲ್ಲಿ (ಅಂದರೆ ನಿಮ್ಮ ಕಣ್ಣಿಗೆ ಕಾಣಿಸದಂತೆ) ಚಾಲನೆಯಲ್ಲಿರುವ ಅಪ್ಲಿಕೇಶನ್‌ಗಳನ್ನು ಸ್ಥಗಿತಗೊಳಿಸುತ್ತದೆ ಹಾಗೂ ಆ್ಯಪ್‌ಗಳನ್ನು ಫೋನ್ ಮೆಮೊರಿಯಿಂದ ಬಾಹ್ಯ ಮೆಮೊರಿ ಕಾರ್ಡ್‌ಗೆ ವರ್ಗಾವಣೆ ಮಾಡಲು ಸಹಕರಿಸುತ್ತದೆ. ಅಲ್ಲದೆ, ಕೇವಲ ಒಂದು ಬಟನ್ ಮುಟ್ಟಿದಾಕ್ಷಣ ಮೆಮೊರಿ ಬೂಸ್ಟ್ ಮಾಡುವ ವ್ಯವಸ್ಥೆಯೂ ಇದರಲ್ಲಿದೆ. ಇದರಿಂದ ನಿಮ್ಮ ಸಾಧನವು ವೇಗವಾಗಿ ಕೆಲಸ ಮಾಡಲು ಅನುಕೂಲವಾಗುತ್ತದೆ. ಈ ಆ್ಯಪ್ ಇತ್ತೀಚೆಗೆ ಅಪ್‌ಡೇಟ್ ಆಗಿದ್ದು, ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಎಲ್ಇಡಿ ಫ್ಲ್ಯಾಶ್ ಇದೆಯೆಂದಾದರೆ, ಬಟನ್ ಒತ್ತಿದರೆ ನಿಮ್ಮ ಫೋನ್ ಟಾರ್ಚ್ ಆಗಿಯೂ ಕೆಲಸ ಮಾಡಬಲ್ಲುದು. ಇದರಲ್ಲೇ ಅಲಾರಂ ಇದ್ದು, ಸ್ಕ್ರೀನ್‌ನ ಬ್ರೈಟ್‌ನೆಸ್ ಬದಲಾಯಿಸುವ, ವೈಫೈ ಅಥವಾ ಮೊಬೈಲ್ ಡೇಟ ಆನ್/ಆಫ್ ಮಾಡುವ ಬಟನ್‌ಗಳೂ ಇರುವುದರಿಂದ, ಬ್ಯಾಟರಿ ಉಳಿಸುವುದಕ್ಕಾಗಿ ನೀವು ಪ್ರತ್ಯೇಕವಾಗಿ ಬ್ಯಾಟರಿ ಸೇವರ್ ಆ್ಯಪ್ ಅಳವಡಿಸಿಕೊಳ್ಳಬೇಕಾಗಿರುವುದಿಲ್ಲ. ಇದೊಂದು ರೀತಿಯಲ್ಲಿ ನಿಮ್ಮ ಸ್ಮಾರ್ಟ್‌ಫೋನ್‌ಗೆ ಡಾಕ್ಟರ್ ಇದ್ದಂತೆ.

ಚಾಟಿಂಗ್‌ಗೆ: ಇಂಟರ್ನೆಟ್ ಸಂಪರ್ಕದೊಂದಿಗೆ ಮೊಬೈಲ್ ನಂಬರ್ ತಿಳಿದಿರುವ ಸ್ನೇಹಿತರೊಂದಿಗೆ ಉಚಿತವಾಗಿ ಹರಟಲು (ಚಾಟಿಂಗ್ ಮಾಡಲು) ಅಥವಾ ಅವರಿಗೆ ಫೋಟೋ, ವೀಡಿಯೋ ಕಳುಹಿಸಲು Whatsapp, WeChat ಅಥವಾ Line ಆ್ಯಪ್‌ಗಳನ್ನು ಅಳವಡಿಸಿಕೊಳ್ಳಬಹುದು.

ಫೇಸ್‌ಬುಕ್ ಮೆಸೆಂಜರ್: ಫೇಸ್‌ಬುಕ್ ಸ್ನೇಹಿತರೊಂದಿಗೆ ಚಾಟ್ ಮಾಡಲು ಈ ಆ್ಯಪ್ ಅನುಕೂಲ ಕಲ್ಪಿಸುತ್ತದೆ. ಸೆಟ್ಟಿಂಗ್ಸ್‌ನಲ್ಲಿ (ಮೆಸೆಂಜರ್ ತೆರೆದ ಬಳಿಕ ಬಲ-ಮೇಲ್ಭಾಗದಲ್ಲಿ ಚಕ್ರದಂತಹಾ ಐಕಾನ್ ಕ್ಲಿಕ್ ಮಾಡಿದಾಗ), ನೋಟಿಫಿಕೇಶನ್‌ಗಳನ್ನು ಆನ್/ಆಫ್ ಮಾಡುವ ಆಯ್ಕೆ ಇರುತ್ತದೆ. ಯಾರಾದರೂ ನಿಮ್ಮ ಸ್ನೇಹಿತರು ಕಾಮೆಂಟ್ ಮಾಡಿದರೆ, ಪೋಸ್ಟ್ ಮಾಡಿದರೆ, ಬೇರೆಯವರು ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದರೆ, ನಿಮ್ಮ ಸ್ಕ್ರೀನ್ ಮೇಲೆಯೇ ಇವು ಬಂದುಹೋಗುತ್ತವೆ. ಕಿರಿಕಿರಿಯಾಗುತ್ತದೆಯೆಂದಾದರೆ ಇದನ್ನು ಆಫ್ ಮಾಡಬಹುದು. ಇದರಲ್ಲಿರುವ ಇನ್ನೂ ಒಂದು ಉತ್ತಮ ಆಯ್ಕೆ Chat heads. ಆನ್ ಮಾಡಿದರೆ, ಮೆಸೆಂಜರ್‌ನಲ್ಲಿ ಯಾರಾದರೂ ಚಾಟ್ ಸಂದೇಶ ಕಳುಹಿಸಿದರೆ, ಅವರ ಪ್ರೊಫೈಲ್ ಚಿತ್ರ ಸಹಿತವಾದ ಗುಳ್ಳೆಯೊಂದು ನಿಮ್ಮ ಸ್ಕ್ರೀನ್ ಮೇಲೆ ಕಾಣಿಸುತ್ತದೆ. ಅದನ್ನು ಕ್ಲಿಕ್ ಮಾಡಿದರೆ, ಚಾಟಿಂಗ್ ಮುಂದುವರಿಸಬಹುದು. ಬೇಡವೆಂದಾದರೆ ಚಾಟ್ ಹೆಡ್ಸ್ ಆಫ್ ಮಾಡಿ.

ಆ್ಯಂಟಿ ವೈರಸ್: ಸದಾ ಇಂಟರ್ನೆಟ್ ಸಂಪರ್ಕದಲ್ಲಿರುವುದರಿಂದ ಆ್ಯಂಟಿ ವೈರಸ್ ಆ್ಯಪ್ ಅಳವಡಿಸಿಕೊಳ್ಳುವುದು ಸೂಕ್ತ. ಉಚಿತ AVG Antivirus ಉಪಯೋಗಿಸಬಹುದು. ಇದರಲ್ಲಿ ನಮ್ಮ ಫೋನನ್ನು ರಕ್ಷಿಸಿಕೊಳ್ಳುವ ವ್ಯವಸ್ಥೆಯೂ ಇದೆ. ಅಂದರೆ, ಇಮೇಲ್ ಮೂಲಕ ರಿಜಿಸ್ಟರ್ ಮಾಡಿಕೊಂಡರೆ, ಫೋನ್ ಕಳೆದುಹೋದರೆ ಎಲ್ಲಿದೆ ಅಂತ ಹುಡುಕಬಹುದು. ನಿರ್ದಿಷ್ಟ ನಂಬರ್‌ನಿಂದ ಬರುವ ಕರೆ ಹಾಗೂ ಸಂದೇಶಗಳನ್ನು ಬ್ಲಾಕ್ ಮಾಡುವ (ನಿರ್ಬಂಧಿಸುವ) ವ್ಯವಸ್ಥೆಯೂ ಇದರಲ್ಲಿದೆ. ನಿರ್ದಿಷ್ಟವಾದ ಫೋಲ್ಡರ್‌ಗಳನ್ನು ಅಳಿಸುವ, ಫ್ಯಾಕ್ಟರಿ ಡೇಟಾ ರೀಸೆಟ್ ಮಾಡುವ, ಬ್ಯಾಟರಿ ಬಳಕೆ ಉತ್ಕೃಷ್ಟಗೊಳಿಸುವ, ನಿಮ್ಮ ಇಂಟರ್ನೆಟ್ ಬಳಕೆಗೆ ಮಿತಿ ಹೇರುವ, ಅನವಶ್ಯಕ ಟಾಸ್ಕ್‌ಗಳನ್ನು ನಿಲ್ಲಿಸುವ ವ್ಯವಸ್ಥೆಯೂ ಇದೆ.

ಸಂಗೀತ-ವೀಡಿಯೋ: ಕೆಲವು ಫೋನ್‌ಗಳು ಕೆಲವೊಂದು ವೀಡಿಯೋ/ಆಡಿಯೋ ಫೈಲ್ ನಮೂನೆಗಳನ್ನು (ಎಂಪಿಇಜಿ4, ಎವಿಐ… ಇತ್ಯಾದಿ) ಪ್ಲೇ ಮಾಡಲಾರವು. ಹೆಚ್ಚಿನವನ್ನು ಪ್ಲೇ ಮಾಡಬಲ್ಲ MX Player ಅಳವಡಿಸಿಕೊಳ್ಳಿ.

ಅಂಗೈಯಲ್ಲೇ ನಿಘಂಟು ಇರುವಂತಾಗಲು Dictionary ಆ್ಯಪ್ ಇನ್‌ಸ್ಟಾಲ್ ಮಾಡಿಕೊಳ್ಳಿ. ಉಳಿದಂತೆ ಬೇಕಾದ ಗೇಮ್‌ಗಳು, ಸುದ್ದಿ ನೀಡುವ ಪತ್ರಿಕೆಗಳ ಆ್ಯಪ್‌ಗಳು, ಫೋಟೋ ತಿದ್ದಲು Photoshop Express, ಸಂಗೀತಾಭ್ಯಾಸಿಗಳಿಗೆ ಶ್ರುತಿಪೆಟ್ಟಿಗೆಯಂತೆ ಕೆಲಸ ಮಾಡಬಲ್ಲ Tanpura Droid, ಕನ್ನಡ ಟೈಪ್ ಮಾಡಲು Just Kannada ಆ್ಯಪ್ – ಇವು ಅತ್ಯಗತ್ಯವಾದ ಪ್ರಮುಖ ಆ್ಯಪ್‌ಗಳು.

ಸ್ಮಾರ್ಟ್‌ಫೋನ್ ಬದಲಿಸುತ್ತಿದ್ದರೆ ಫೋನ್ ನಂಬರ್, ಹೆಸರು ಉಳಿಸಿಕೊಳ್ಳಿ

ವಿಜಯ ಕರ್ನಾಟಕ ಅಂಕಣ: ಮಾಹಿತಿ@ತಂತ್ರಜ್ಞಾನ: ಅವಿನಾಶ್ ಬಿ. (ಫೆಬ್ರವರಿ 17, 2014 )
ಇತ್ತೀಚೆಗೆ ಸಾಕಷ್ಟು ಮೊಬೈಲ್ ಫೋನ್ ಎಕ್ಸ್‌ಚೇಂಜ್ ಆಫರ್‌ಗಳು ಬರುತ್ತಿವೆ. ನೋಡಿದಾಗ ಕೊಂಡುಕೊಳ್ಳೋಣವೆನಿಸುತ್ತದೆ. ಹಳೆಯ ಆಂಡ್ರಾಯ್ಡ್ ಅಥವಾ ಬೇರಾವುದೇ ಫೋನನ್ನು ಎಕ್ಸ್‌ಚೇಂಜ್ ಮಾಡಿಯೋ, ಅಥವಾ ಬೇರೆಯವರಿಗೆ ಮಾರಾಟ ಮಾಡಿಯೋ, ಹೊಸದನ್ನು ಕೊಳ್ಳಬೇಕೆಂದಿದ್ದೀರಾದರೆ, ಎರಡು ವಿಷಯಗಳನ್ನು ಪ್ರಮುಖವಾಗಿ ನೆನಪಿಡಿ. ಮೊದಲನೆಯದು ಆ ಫೋನಿನಲ್ಲಿರುವ ಮೆಮೊರಿ ಕಾರ್ಡ್ ತೆಗೆದಿರಿಸಬೇಕು ಅಥವಾ ಫಾರ್ಮ್ಯಾಟ್ ಮಾಡಬೇಕು ಮತ್ತು ಎರಡನೆಯದು ಮೊಬೈಲ್ ಸಾಧನದ ಮೆಮೊರಿಯಲ್ಲಿರುವ ಎಲ್ಲ ವೈಯಕ್ತಿಕ ಮಾಹಿತಿಗಳೆಲ್ಲವನ್ನೂ (ಡೇಟಾ) ಅಳಿಸಿಬಿಡಬೇಕು.

ಫೋನ್ ಖರೀದಿಸಿದ ಮೇಲೆ ಅದಕ್ಕೆ ಯಾವ್ಯಾವುದೋ ಆ್ಯಪ್‌ಗಳನ್ನು ಸೇರಿಸಿ, ಅದನ್ನು ನಿಮಗೆ ಬೇಕಾದಂತೆ ಬದಲಾಯಿಸಿಕೊಂಡಿರುತ್ತೀರಿ. ಆ ಬದಲಾವಣೆಗಳನ್ನೆಲ್ಲಾ ಸೆಟ್ಟಿಂಗ್‌ನಲ್ಲಿರುವ ‘ಫ್ಯಾಕ್ಟರಿ ಡೇಟಾ ರೀಸೆಟ್’ ಮಾಡುವ ಮೂಲಕ ಅಳಿಸಬಹುದು. ಮೊಬೈಲ್‌ನಲ್ಲಿ ಸೇವ್ ಆಗಿರುವ ನಿಮ್ಮ ಜಿಮೇಲ್ ಮತ್ತು ಇತರ ಆ್ಯಪ್‌ಗಳಿಗೆ ನೀವು ಲಾಗ್ ಇನ್ ಆಗಲು ನಮೂದಿಸಿರುವ ಐಡಿ ಹಾಗೂ ಪಾಸ್‌ವರ್ಡ್‌ಗಳೆಲ್ಲವೂ ಆ ಫೋನ್‌ನಿಂದ ಅಳಿಸಿಹೋಗುವ ಮೂಲಕ ನಿಮ್ಮ ಖಾತೆಯನ್ನು ಬೇರೆಯವರು ಬಳಸದಂತೆ ಮಾಡಲು, ಅದರ ದುರ್ಬಳಕೆ ತಡೆಯಲು ಸಾಧ್ಯ.

ಫೋನ್ ನಂಬರ್ ಕಾಪಿ ಮಾಡುವುದು: ಹೊಸದಾಗಿ ಮೊಬೈಲ್ ಫೋನ್ ಕೊಂಡಾಗ ಹಳೆಯ ಫೋನ್‌ನಲ್ಲಿರುವ ಕಾಂಟ್ಯಾಕ್ಟ್‌ಗಳನ್ನು (ಫೋನ್ ನಂಬರ್ ಮತ್ತು ಹೆಸರು) ಕಾಪಿ ಮಾಡುವುದು, ಪುನಃ ಟೈಪ್ ಮಾಡುವುದು ಹರ ಸಾಹಸವೇ ಸರಿ. ಇದಕ್ಕಾಗಿ ಉಪಾಯ ಇಲ್ಲಿದೆ.

ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ನ ಪರಿಪೂರ್ಣ ಪ್ರಯೋಜನ ಪಡೆಯಬೇಕಿದ್ದರೆ ನೀವು ಅದಕ್ಕೆ ಜಿಮೇಲ್ ಮೂಲಕ ಲಾಗ್ ಇನ್ ಆಗಲೇಬೇಕಾಗುತ್ತದೆಯಲ್ಲವೇ? ಲಾಗಿನ್ ಆದ ಬಳಿಕ ಸೆಟ್ಟಿಂಗ್ಸ್‌ಗೆ ಹೋಗಿ, ಅಲ್ಲಿ Accounts ಎಂದಿರುವಲ್ಲಿ, ನೀವು ಯಾವೆಲ್ಲಾ ಖಾತೆಗಳಿಗೆ ನಿಮ್ಮ ಫೋನ್‌ನಲ್ಲಿ ಲಾಗ್‌-ಇನ್ ಆಗಿದ್ದೀರಿ ಎಂಬ ಪಟ್ಟಿ ಇರುತ್ತದೆ. ಗೂಗಲ್ ಆಯ್ದುಕೊಳ್ಳಿ. ಆಗ ನಿಮ್ಮ ಇಮೇಲ್ ಐಡಿ ಕಾಣಿಸುತ್ತದೆ. Sync is Off ಅಂತ ಇದ್ದರೆ, ಆ ಬಟನ್ ಕ್ಲಿಕ್ ಮಾಡಿ.

ಯಾವುದನ್ನೆಲ್ಲಾ ಸಿಂಕ್ ಮಾಡಬೇಕು ಅಂತ ಅದುವೇ ಒಂದು ಪಟ್ಟಿ ತೋರಿಸುತ್ತದೆ. ಅದರಲ್ಲಿ App Data, Browser, Calendar, Contacts ಅಂತೆಲ್ಲಾ ಇರುತ್ತದೆ. ಕಾಂಟಾಕ್ಟ್ಸ್ ಒತ್ತಿದರೆ, ನಿಮ್ಮ ಫೋನ್‌ನಲ್ಲಿ ಮತ್ತು ಜಿಮೇಲ್‌ನಲ್ಲಿರುವ ಕಾಂಟಾಕ್ಟ್‌ಗಳ ಪಟ್ಟಿ ಪರಸ್ಪರ ಸಮ್ಮಿಳಿತವಾಗುತ್ತವೆ. ಇದು ಒಂದು ರೀತಿಯಲ್ಲಿ ಕಾಂಟಾಕ್ಟ್‌ಗಳನ್ನು ಬ್ಯಾಕಪ್ ಮಾಡಿಡುವ ವ್ಯವಸ್ಥೆಯಂತೆಯೂ ಕೆಲಸ ಮಾಡುತ್ತದೆ.

ಈಗ ಹೊಸದಾಗಿ ನೀವು ಖರೀದಿಸಿರುವ ಫೋನ್‌ನಲ್ಲಿ ಅದೇ ಜಿಮೇಲ್ ಐಡಿ ಮೂಲಕ ಲಾಗಿನ್ ಆದರೆ, ಮೇಲಿನ ಮಾದರಿಯಲ್ಲೇ ಕಾಂಟಾಕ್ಟ್‌ಗಳ ಸಿಂಕ್ರನೈಜ್ ಮಾಡಿದರೆ ಆಯಿತು. ಎಲ್ಲ ಫೋನ್ ನಂಬರ್‌ಗಳು ಹೆಸರಿನೊಂದಿಗೆ ನಿಮ್ಮ ಮೊಬೈಲ್ ಫೋನ್‌ನಲ್ಲಿಯೂ ಲಭ್ಯವಾಗುತ್ತವೆ.

ಫೋನ್ ಸ್ಟೋರೇಜ್ ಖಾಲಿ ಇರಿಸಿ
ಸ್ಮಾರ್ಟ್‌ಫೋನ್‌ಗಳಲ್ಲಿ RAM ಎಂಬ ಮೆಮೊರಿ ಸ್ಥಳವು ಅತ್ಯಂತ ಮಹತ್ವವಾದದ್ದು. ಈಗಿನ ಫೋನ್‌ಗಳಲ್ಲಿ ಕನಿಷ್ಠ 1 ಅಥವಾ 2 ಜಿಬಿ RAM ಇರಬಹುದು. ಇದು ಖಾಲಿ ಇದ್ದಷ್ಟೂ ನಿಮ್ಮ ಫೋನ್ ವೇಗವಾಗಿ ಕೆಲಸ ಮಾಡಬಲ್ಲುದು. ಇದರಲ್ಲಿ ಸಿಸ್ಟಂ ಮತ್ತು ಮೊದಲೇ ಅಳವಡಿಕೆಯಾಗಿರುವ ಆ್ಯಪ್‌ಗಳು ಮಾತ್ರ ಇರಲಿ. ಮುಂದೆ ನೀವು ಇನ್‌ಸ್ಟಾಲ್ ಮಾಡಿಕೊಳ್ಳುವ ಯಾವುದೇ ಆ್ಯಪ್‌ಗಳನ್ನು, ತೆಗೆದ ಚಿತ್ರ ಅಥವಾ ವೀಡಿಯೋಗಳನ್ನು, ರೆಕಾರ್ಡಿಂಗ್‌ಗಳನ್ನು… ಎಲ್ಲವನ್ನೂ ಮೆಮೊರಿ ಕಾರ್ಡ್‌ನಲ್ಲಿ (ಎಸ್‌ಡಿ ಕಾರ್ಡ್, ಬಾಹ್ಯ ಮೆಮೊರಿ ಕಾರ್ಡ್) ಸೇವ್ ಆಗುವಂತೆ ನೋಡಿಕೊಳ್ಳಿ. RAM ಅಲ್ಲದೆ, ಕೆಲವು ಸ್ಮಾರ್ಟ್‌ಫೋನ್‌ಗಳಲ್ಲಿ ಇಂಟರ್ನಲ್ ಮೆಮೊರಿ ಅಥವಾ ಫೋನ್ ಸ್ಟೋರೇಜ್ ಎಂಬ ಸ್ಥಳವೂ ಇರುತ್ತದೆ. ಪ್ರಮುಖ ಆ್ಯಪ್‌ಗಳನ್ನು ಮಾತ್ರ ಇದರಲ್ಲಿ ಸ್ಥಾಪಿಸಿಕೊಂಡು, ಆದಷ್ಟೂ ಖಾಲಿ ಇರಿಸಿ, ಎಲ್ಲವನ್ನೂ ಎಸ್‌ಡಿ ಕಾರ್ಡ್‌ನಲ್ಲೇ ಉಳಿಸಿಕೊಳ್ಳುವುದು ಜಾಣತನ.

ಬ್ಲೂಟೂತ್‌ನಿಂದ ಬಂದ ಅಥವಾ ನೀವು ತೆಗೆದ ಫೋಟೋ, ವೀಡಿಯೋಗಳು ಫೋನ್ ಸ್ಟೋರೇಜ್ ಬದಲಾಗಿ ಬಾಹ್ಯ ಮೆಮೊರಿ ಕಾರ್ಡ್‌ನಲ್ಲೇ ಸೇವ್ ಆಗುವಂತೆ ಮಾಡಲು ಹೀಗೆ ಮಾಡಿ: ಸೆಟ್ಟಿಂಗ್ಸ್‌ನಲ್ಲಿ ಸ್ಟೋರೇಜ್ ಎಂಬುದನ್ನು ಕ್ಲಿಕ್ ಮಾಡಿದರೆ, ಡೀಫಾಲ್ಟ್ ಆಗಿ ಸಂಗ್ರಹವಾಗಬೇಕಿರುವ ಸ್ಥಳ ಆಯ್ದುಕೊಳ್ಳಲು ಫೋನ್ ಸ್ಟೋರೇಜ್ ಅಥವಾ ಎಸ್‌ಡಿ ಕಾರ್ಡ್ ಆಯ್ಕೆಗಳು ಕಾಣಿಸುತ್ತವೆ. ಎಸ್‌ಡಿ ಕಾರ್ಡ್ ಕ್ಲಿಕ್ ಮಾಡಿದರೆ, ನಿಮ್ಮ ಕೆಲಸ ಮುಗಿಯಿತು. ಡೌನ್‌ಲೋಡ್ ಆಗುವ ಎಲ್ಲವೂ ಮೆಮೊರಿ ಕಾರ್ಡ್‌ನಲ್ಲೇ ಉಳಿಯುತ್ತವೆ.

ಆಂಡ್ರಾಯ್ಡ್ ಫೋನ್ ಕಳೆದುಹೋದರೆ…

ಮಾಹಿತಿ@ತಂತ್ರಜ್ಞಾನ: ವಿಜಯ ಕರ್ನಾಟಕ ಅಂಕಣ (ಫೆಬ್ರವರಿ 10, 2014)
ನಿಮ್ಮ ಫೋನ್ ಕಳೆದುಹೋದರೆ ಅಥವಾ ಆಕಸ್ಮಿಕವಾಗಿ ಎಲ್ಲೋ ಮರೆತುಬಿಟ್ಟರೆ, ಅದು ದುರುಪಯೋಗವಾಗುವ ಸಾಧ್ಯತೆಗಳು ಹೆಚ್ಚು. ಅದರಲ್ಲಿ ನಿಮ್ಮ ಮಹತ್ವದ ಫೈಲುಗಳು, ಮಾಹಿತಿ ಇರುತ್ತವೆ ಮತ್ತು ಜಿಮೇಲ್ ಖಾತೆಗೂ ಲಾಗಿನ್ ಆಗಿಯೇ ಇರುತ್ತೀರಿ. ಅದು ಬೇರೆಯವರ ಕೈಗೆ ಸಿಲುಕಿ, ನಿಮಗೆ ಸಮಸ್ಯೆಯಾಗುವುದನ್ನು ತಡೆಯಲು ಮತ್ತು ಅದು ಎಲ್ಲಿದೆ ಅಂತ ಪತ್ತೆ ಹಚ್ಚಲು Andoid Device Manager ಎಂಬ ವ್ಯವಸ್ಥೆ ನೆರವಾಗುತ್ತದೆ ಎಂಬ ಬಗ್ಗೆ ಹಿಂದಿನ ವಾರದ ಅಂಕಣದಲ್ಲಿ ಪ್ರಸ್ತಾಪಿಸಿದ್ದೆ. ಈ ಬಗ್ಗೆ ಓದುಗರು ಮತ್ತಷ್ಟು ವಿಸ್ತೃತ ವಿವರಣೆ ಕೇಳಿದ್ದಾರೆ. ಇದಕ್ಕಾಗಿ ಈ ಮಾಹಿತಿ.

ಆಂಡ್ರಾಯ್ಡ್ ಡಿವೈಸ್ ಮ್ಯಾನೇಜರ್ ಎಂಬುದು ಫೋನ್ ಅಥವಾ ಟ್ಯಾಬ್ಲೆಟ್‌ಗಳನ್ನು ವೆಬ್ ಮೂಲಕ ನಿಯಂತ್ರಿಸಬಹುದಾದ ವ್ಯವಸ್ಥೆ. ಹೊಸದಾಗಿ ಮಾರುಕಟ್ಟೆಗೆ ಬರುವ ಬಹುತೇಕ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲಿ ಈ ಉಪಯುಕ್ತ ಆಯ್ಕೆ ಇದೆ. ಇದನ್ನು ಎನೇಬಲ್ ಮಾಡಿಟ್ಟರೆ, ಆಕಸ್ಮಿಕವಾಗಿ ಫೋನ್ ಕಳೆದುಹೋದಲ್ಲಿ ಅದರಲ್ಲಿರುವ ಫೈಲ್ ಮತ್ತಿತರ ಸೂಕ್ಷ್ಮ ಹಾಗೂ ಖಾಸಗಿ ಮಾಹಿತಿಗಳನ್ನು (ದತ್ತಾಂಶ) ಗೂಗಲ್‌ನ ವೆಬ್‌ಸೈಟಿಗೆ ಹೋಗಿ ರಿಮೋಟ್ ಆಗಿಯೇ ಡಿಲೀಟ್ ಮಾಡಬಹುದು. ಇದಲ್ಲದೆ, ಫೋನ್ ಯಾವ ಜಾಗದಲ್ಲಿದೆ ಎಂಬುದನ್ನು ಗೂಗಲ್ ಮ್ಯಾಪ್ ಮೂಲಕ ಪತ್ತೆ ಹಚ್ಚಿ, ಅದಕ್ಕೆ ರಿಂಗ್ ಮಾಡಿ ಅದು ಎಲ್ಲಿದೆ, ಮನೆಯಲ್ಲೆಲ್ಲೋ ಮರೆತಿರಾ ಅಂತ ತಿಳಿದುಕೊಳ್ಳಬಹುದು. ವೆಬ್‌ಸೈಟ್ ಮೂಲಕವೇ ಆ ಫೋನನ್ನು ಬೇರೆಯವರು ಬಳಸದಂತೆ ಲಾಕ್ ಮಾಡುವುದು ಕೂಡ ಸಾಧ್ಯವಾಗುತ್ತದೆ.

ಇದನ್ನು ಎನೇಬಲ್ ಮಾಡುವುದು ಹೀಗೆ: ಆ್ಯಪ್‌ಗಳ ಪಟ್ಟಿಯಲ್ಲಿ (ಮೆನು) ‘ಗೂಗಲ್ ಸೆಟ್ಟಿಂಗ್ಸ್’ ಎಂಬ ಐಕಾನ್ ಹುಡುಕಿ, ಕ್ಲಿಕ್ ಮಾಡಿ. ಅಲ್ಲಿ Android Device Manager ಒತ್ತಿದ ಬಳಿಕ Remotely Locate this device ಹಾಗೂ Allow Remote lock and factory reset ಎಂಬ ಎರಡು ಚೆಕ್ ಬಾಕ್ಸ್‌ಗಳ ಮೇಲೆ ಸರಿ ಚಿಹ್ನೆ (right mark) ಒತ್ತಿಬಿಡಿ.

ಇನ್ನು ನೀವು ಆಕಸ್ಮಿಕವಾಗಿ ಫೋನನ್ನು ಎಲ್ಲೋ ಮರೆತುಬಿಟ್ಟಿರಿ ಅಥವಾ ಅದು ಕಳೆದುಹೋಯಿತು ಎಂದಾದರೆ, ಇಂಟರ್ನೆಟ್ ಸಂಪರ್ಕವಿರುವ ಕಂಪ್ಯೂಟರಿನಲ್ಲಿ ಗೂಗಲ್‌ನ ಡಿವೈಸ್ ಮ್ಯಾನೇಜರ್ ತಾಣಕ್ಕೆ (https://android.com/devicemanager) ಹೋಗಿ, ಅಲ್ಲಿ ಜಿಮೇಲ್ ಐಡಿ ಬಳಸಿ ಲಾಗಿನ್ ಆಗಿ. ನಿಮಗೆ ನಕ್ಷೆ ಇರುವ ಒಂದು ಪುಟ್ಟ ವಿಂಡೋ ಕಾಣಿಸುತ್ತದೆ. ಅದರಲ್ಲಿ ಫೋನನ್ನು ಜೋರಾಗಿ ರಿಂಗ್ ಮಾಡುವ, ಫೋನನ್ನು ಲಾಕ್ ಮಾಡಿಬಿಡುವ, ಅದರಲ್ಲಿರುವ ಡೇಟ ಅಳಿಸಿಬಿಡುವ ಬಟನ್‌ಗಳಿರುತ್ತವೆ. ನಿಮ್ಮ ಸಾಧನ ಎಲ್ಲಿದೆ ಅಂತ ಗೂಗಲ್ ಮ್ಯಾಪ್ಸ್‌ನಲ್ಲಿ ಅಂದಾಜು ಸ್ಥಳವನ್ನೂ ತೋರಿಸಲಾಗುತ್ತದೆ ಹಾಗೂ ಯಾವಾಗ ಕೊನೆಯ ಬಾರಿಗೆ ಅದನ್ನು ಬಳಸಲಾಗಿದೆ, ಇಲ್ಲವೇ ಕೊನೆಯ ಬಾರಿ ಇಂಟರ್ನೆಟ್‌ಗೆ/ಜಿಪಿಎಸ್ ವ್ಯವಸ್ಥೆಗೆ ಸಂಪರ್ಕಿಸಿದೆ ಎಂಬ ದಿನಾಂಕವೂ ಕಾಣಿಸುತ್ತದೆ.

ಇದೇ ಡಿವೈಸ್ ಮ್ಯಾನೇಜರ್‌ನ ಆ್ಯಪ್ ಕೂಡ ‘ಗೂಗಲ್ ಪ್ಲೇ’ ಎಂಬ ಆಂಡ್ರಾಯ್ಡ್ ಆ್ಯಪ್‌ಗಳ ತಾಣದಲ್ಲಿ ಲಭ್ಯವಿದೆ. ಬ್ರೌಸರ್‌ನಲ್ಲಾದರೆ ವೆಬ್ ತಾಣಕ್ಕೆ ಹೋಗಬೇಕಾಗುತ್ತದೆ, ಸ್ಮಾರ್ಟ್‌ಫೋನ್‌ನಲ್ಲಾದರೆ ಈ ಆ್ಯಪ್ ಸ್ಪರ್ಶಿಸಿದರಾಯಿತು.

ಇದರ ಮತ್ತೊಂದು ಉಪಯೋಗವೆಂದರೆ, ನಿಮ್ಮ ಸ್ನೇಹಿತರ ಆಂಡ್ರಾಯ್ಡ್ ಫೋನ್ ಕಳೆದುಹೋದರೆ ನಿಮ್ಮ ಫೋನ್‌ನಲ್ಲಿಯೇ ಅದೆಲ್ಲಿದೆ ಅಂತ ಪತ್ತೆ ಮಾಡಬಹುದು. ಅಂದರೆ Device manager ಪುಟಕ್ಕೆ ಸ್ನೇಹಿತರು ಅವರ ಆಂಡ್ರಾಯ್ಡ್ ಫೋನ್‌ನಲ್ಲಿ ಲಾಗಿನ್ ಆಗಿರುವ ಜಿಮೇಲ್ ಐಡಿ ಬಳಸಬೇಕು ಮತ್ತು ಅವರೂ ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ಡಿವೈಸ್ ಮ್ಯಾನೇಜರ್ ಸೆಟ್ಟಿಂಗ್ಸ್ ಎನೇಬಲ್ ಮಾಡಿರಬೇಕು.

ಇಲ್ಲಿ ನೆನಪಿಡಬೇಕಾದ ಸಂಗತಿಯೆಂದರೆ ಜಿಪಿಎಸ್ (ಗ್ಲೋಬಲ್ ಪೊಸಿಶನಿಂಗ್ ಸಿಸ್ಟಂ) ಸದಾ ಆನ್‌ನಲ್ಲಿ ಇರಿಸಬೇಕು. ಉಪಗ್ರಹ ಆಧರಿಸಿ, ಈ ಸಾಧನವು ಎಲ್ಲಿದೆ ಎಂದು ತಿಳಿದುಕೊಳ್ಳಲು ಅನುಕೂಲ ಮಾಡುವ ವ್ಯವಸ್ಥೆ ಅದು. ಮ್ಯಾಪ್ಸ್ (ನಕ್ಷೆ) ಆ್ಯಪ್ ಇರುವ ಎಲ್ಲ ಸ್ಮಾರ್ಟ್‌ಫೋನ್‌ಗಳಲ್ಲಿ ಇದು ಇದ್ದೇ ಇರುತ್ತದೆ. ಜತೆಗೆ ಇಂಟರ್ನೆಟ್ ಸಂಪರ್ಕವೂ ಆನ್ ಆಗಿರಬೇಕಾಗುತ್ತದೆ.

ಕೆಲವೊಮ್ಮೆ ನೆಲಮಾಳಿಗೆಯಲ್ಲೋ ಅಥವಾ ತೀರಾ ರೀಮೋಟ್ ಪ್ರದೇಶದಲ್ಲಿಯೋ ಇದ್ದರೆ, ಅಂದರೆ ಸಿಗ್ನಲ್ ವ್ಯಾಪ್ತಿಯಿಂದ ಹೊರಗಿದ್ದರೆ ಜಿಪಿಎಸ್‌ಗೆ ನಿಮ್ಮ ಫೋನ್ ಎಲ್ಲಿದೆ ಎಂದು ತಿಳಿಯುವುದು ಕಷ್ಟವಾಗಬಹುದು. ಸ್ವಿಚ್ ಆಫ್ ಮಾಡಿದ್ದರಂತೂ ಕಂಡುಹಿಡಿಯುವುದು ಸಾಧ್ಯವಾಗದು. ಕಳವಾಗಿದ್ದ ಫೋನ್ ಆನ್ ಆದಾಗ ಹಾಗೂ ಇಂಟರ್ನೆಟ್/ಜಿಪಿಎಸ್ ಸಂಪರ್ಕಿಸಿದಾಗ ನೀವು ವೆಬ್‌ಸೈಟ್ ಮೂಲಕ ನೀಡಿದ ಕಮಾಂಡ್‌ಗಳು (ಡಿಲೀಟ್, ರಿಂಗ್, ಇರೇಸ್) ಕೆಲಸ ಮಾಡುತ್ತವೆ.

ಹೊಸ ಆಂಡ್ರಾಯ್ಡ್ ಮೊಬೈಲ್ ಖರೀದಿಸಿದ್ದೀರಾ?

ಮಾಹಿತಿ@ತಂತ್ರಜ್ಞಾನ, ವಿಜಯ ಕರ್ನಾಟಕ ಅಂಕಣ (ಫೆಬ್ರವರಿ 3, 2014)
ಟಚ್ ಸ್ಕ್ರೀನ್ ಮೊಬೈಲ್‌ಗಳ ಕ್ರೇಜ್ ಹೆಚ್ಚಾಗಿದೆ. ನೀವು ಕೂಡ ಅಂಥದ್ದೇ ಆಕರ್ಷಕ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಕೊಂಡಿದ್ದೀರಿ, ಹೇಗೆ ಪ್ರಾರಂಭಿಸಬೇಕು, ಏನೆಲ್ಲಾ ಮಾಡಬಹುದು ಎಂಬುದು ತಿಳಿಯುತ್ತಿಲ್ಲವೇ? ಮುಂದೆ ಓದಿ.

ಇಂಟರ್ನೆಟ್ ಇದ್ದರೆ ಮಾತ್ರ ಸ್ಮಾರ್ಟ್‌ಫೋನಿನ ಪರಿಪೂರ್ಣ ಪ್ರಯೋಜನ ಪಡೆಯಬಹುದು ಎಂಬುದು ತಿಳಿದಿರಲಿ. ಹೀಗಾಗಿ ನಿಮ್ಮ ಸಿಮ್ ಕಾರ್ಡ್‌ನಲ್ಲಿ ಇಂಟರ್ನೆಟ್ ಸಂಪರ್ಕ ಹಾಗೂ ನಿಮಗೊಂದು ಜಿಮೇಲ್ ಖಾತೆ ಇದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಆಂಡ್ರಾಯ್ಡ್ ಎಂಬುದು ಗೂಗಲ್ ಒಡೆತನದ ಕಾರ್ಯಾಚರಣೆ ವ್ಯವಸ್ಥೆಯಾಗಿರುವುದರಿಂದ ಜಿಮೇಲ್ ಐಡಿ ಇದ್ದರೆ ಮಾತ್ರ ನಿಮಗೆ ಬೇಕಾದ ಆ್ಯಪ್‌ಗಳನ್ನು ಗೂಗಲ್‌ನ ‘ಪ್ಲೇ ಸ್ಟೋರ್’ನಿಂದ ಇನ್‌ಸ್ಟಾಲ್ ಮಾಡಿಕೊಳ್ಳಬಹುದು ಮತ್ತು ಸ್ಮಾರ್ಟ್‌ಫೋನನ್ನು ಪೂರ್ಣವಾಗಿ ಆನಂದಿಸಬಹುದು.

ಇಂಟರ್ನೆಟ್ ಸಂಪರ್ಕ ಆನ್ ಮಾಡಲು ಹೀಗೆ ಮಾಡಿ: ಸೆಟ್ಟಿಂಗ್ಸ್ ಐಕಾನ್ ಕ್ಲಿಕ್ ಮಾಡಿದರೆ, ‘Wireless & Networks’ ಎಂದಿರುವಲ್ಲಿ, ಡೇಟಾ ಕನೆಕ್ಷನ್ ಅಥವಾ ಯೂಸ್ ಪ್ಯಾಕೆಟ್ ಡೇಟಾ ಅಂತ ಇರಬಹುದು (ವಿಭಿನ್ನ ಬ್ರ್ಯಾಂಡ್‌ನ ಫೋನ್ ಮಾಡೆಲ್‌ಗಳಲ್ಲಿ ಬೇರೆ ಬೇರೆ ಇರುತ್ತದೆ). ಒಟ್ಟಿನಲ್ಲಿ ಡೇಟಾ ಎಂದರೆ ಬೇರೇನಲ್ಲ, ಅದುವೇ ಇಂಟರ್ನೆಟ್ ಸಂಪರ್ಕ. ಅಲ್ಲಿಂದಲೇ ಆನ್ ಅಥವಾ ಆಫ್ ಮಾಡಬಹುದು.

ಶಾರ್ಟ್‌ಕಟ್: ಫೋನ್ ಆನ್ ಮಾಡಿದ ತಕ್ಷಣ ಸ್ಕ್ರೀನ್‌ನಲ್ಲಿ ಮೇಲ್ಭಾಗದಿಂದ (ಇದನ್ನು ನೋಟಿಫಿಕೇಶನ್ ಏರಿಯಾ ಅಂತಲೂ ಕರೆಯುತ್ತಾರೆ) ಕೆಳಕ್ಕೆ ಬೆರಳಿನಲ್ಲಿ ಎಳೆದಾಗ ಹಲವು ಶಾರ್ಟ್‌ಕಟ್‌ಗಳು ಕಾಣಿಸುತ್ತವೆ. ಈ ಶಾರ್ಟ್‌ಕಟ್‌ಗಳಲ್ಲಿ ಪ್ರಮುಖವಾಗಿ ವೈ-ಫೈ, ಬ್ಲೂಟೂತ್, ಡೇಟಾ ಕನೆಕ್ಷನ್, ಸ್ಕ್ರೀನ್ ಬ್ರೈಟ್‌ನೆಸ್, ಆಟೋ ರೊಟೇಶನ್ ಮುಂತಾದವುಗಳಿರುತ್ತವೆ. ಬೆರಳಿನಿಂದ ಸ್ಪರ್ಶಿಸಿದರೆ ಇವು ಆನ್ ಅಥವಾ ಆಫ್ ಆಗುತ್ತವೆ. ಡೇಟಾ ಸಂಪರ್ಕ ಆನ್ ಅಥವಾ ಆಫ್ ಮಾಡಲು ಈ ಶಾರ್ಟ್‌ಕಟ್ ಬಳಸಬಹುದು. ಬೇಕಾದಾಗ ಮಾತ್ರ ಆನ್ ಮಾಡಿದಲ್ಲಿ, ಇಂಟರ್ನೆಟ್ ವೆಚ್ಚದಲ್ಲಿ ಉಳಿತಾಯ ಮಾಡಬಹುದು. ಅನ್‌ಲಿಮಿಟೆಡ್ ಡೇಟಾ ಪ್ಯಾಕೇಜ್ ಇದೆ ಎಂದುಕೊಂಡು ಸದಾ ಕಾಲ ಆನ್ ಇಟ್ಟರೆ ಬ್ಯಾಟರಿ ಬೇಗನೇ ಖರ್ಚಾಗುತ್ತದೆ.

ಫೋನ್ ಸುರಕ್ಷತೆ: ನಿರ್ದಿಷ್ಟ ಸಮಯದ ಬಳಿಕ ನಿಮ್ಮ ಫೋನ್‌ನ ಸ್ಕ್ರೀನ್ ಆಫ್/ಲಾಕ್ ಮಾಡಬೇಕಾದುದು ಅಗತ್ಯ (ಹಳೆಯ ಫೋನ್‌ಗಳಲ್ಲಿ ಕೀಪ್ಯಾಡ್ ಲಾಕ್ ಇರುವಂತೆ). ಅದಕ್ಕೆ ನೀವು ಮಾಡಬೇಕಾದುದೆಂದರೆ, ಸೆಟ್ಟಿಂಗ್ಸ್‌ನಲ್ಲಿ, ಸೆಕ್ಯುರಿಟಿ ಎಂಬಲ್ಲಿ, Screen Lock ಕ್ಲಿಕ್ ಮಾಡಿ. ಅಲ್ಲಿ Pattern ಎಂಬುದನ್ನು ಕ್ಲಿಕ್ ಮಾಡಿದರೆ, ಯಾವುದಾದರೂ ವಿನ್ಯಾಸದಲ್ಲಿ ಗೆರೆ ಎಳೆದು, ಸ್ಲೈಡ್ ಮಾಡಿ, ಕ್ಯಾಮರಾ ಮೂಲಕ ಮುಖ ನೋಡಿ, ಧ್ವನಿ ಮೂಲಕ, ಪಿನ್ ನಂಬರ್ ಅಥವಾ ಪಾಸ್‌ವರ್ಡ್ ಮೂಲಕವೂ ಅನ್‌ಲಾಕ್ ಮಾಡುವ ಆಯ್ಕೆಗಳಿರುತ್ತವೆ. ನಿಮಗೆ ಬೇಕಾದುದನ್ನು ಆಯ್ದುಕೊಳ್ಳಿ. ಜತೆಗೇ 15-30 ಸೆಕೆಂಡುಗಳ ಬಳಿಕ ಸ್ಕ್ರೀನ್ ಲಾಕ್ ಆಗುವಂತೆ ಹೊಂದಿಸಿ. ಈಗ ನಿಮ್ಮ ಫೋನನ್ನು ಬೇರೆಯವರು ದುರ್ಬಳಕೆ ಮಾಡುವ ಅಪಾಯವೂ ತಪ್ಪುತ್ತದೆ, ಅನಗತ್ಯವಾಗಿ ಸ್ಕ್ರೀನ್ ಆನ್ ಇರುವಾಗ ಬ್ಯಾಟರಿ ಖರ್ಚಾಗುವುದೂ ತಪ್ಪುತ್ತದೆ.

ಇತ್ತೀಚಿನ ಆಂಡ್ರಾಯ್ಡ್ ಫೋನ್‌ಗಳ ಸೆಟ್ಟಿಂಗ್‌ನಲ್ಲಿ Android Device Manager ಎಂಬ ಆಯ್ಕೆಯೊಂದಿದೆ. ಮರೆತುಬಿಟ್ಟ ಇಲ್ಲವೇ ಎಲ್ಲಾದರೂ ಕಳೆದುಹೋದ ಫೋನ್ ಎಲ್ಲಿದೆ ಎಂಬುದರ ಜಾಡು ಹಿಡಿಯಲು ಇದು ಸಹಾಯ ಮಾಡುತ್ತದೆ. ಗೂಗಲ್ ಸಹಾಯದಿಂದ ಅದರಲ್ಲಿರುವ ದತ್ತಾಂಶವನ್ನು (ಫೈಲ್, ಮಾಹಿತಿ, ಸಂಪರ್ಕ ಸಂಖ್ಯೆ ಇತ್ಯಾದಿ) ಡಿಲೀಟ್ ಮಾಡಬಹುದು ಅಥವಾ ಫೋನನ್ನು ಲಾಕ್ ಕೂಡ ಮಾಡಬಹುದು.

ಪ್ಲೇ ಸ್ಟೋರ್: ಸ್ಮಾರ್ಟ್‌ಫೋನ್ ಆನ್ ಮಾಡಿದ ಬಳಿಕ, ಮೆನು ಬಟನ್ ಒತ್ತಿದರೆ, ಅಪ್ಲಿಕೇಶನ್‌ಗಳ (ಆ್ಯಪ್) ಐಕಾನ್‌ಗಳು ಹಲವಾರು ಪುಟಗಳಲ್ಲಿ ಕಾಣಿಸಿಕೊಳ್ಳುತ್ತವೆ. ಆ್ಯಪ್ ಜಾಸ್ತಿ ಇದ್ದಷ್ಟೂ ಸ್ಕ್ರೀನ್‌ಗಳ ಸಂಖ್ಯೆ ಹೆಚ್ಚುತ್ತಾ ಹೋಗುತ್ತದೆ. ಫೇಸ್‌‍ಬುಕ್, ಟ್ವಿಟರ್, ಒಪೆರಾ ಮಿನಿ ಬ್ರೌಸರ್, ಯೂಟ್ಯೂಬ್ ಮುಂತಾದ ಕೆಲವು ಆ್ಯಪ್‌ಗಳು (ಅಪ್ಲಿಕೇಶನ್‌ಗಳೆಂಬ ಕಿರು ತಂತ್ರಾಂಶಗಳು) ಮೊದಲೇ ಇರುತ್ತವೆ.

ಇಂಟರ್ನೆಟ್ ಸಂಪರ್ಕ ಆನ್ ಮಾಡಿ, ಮೊದಲು Play Store ಐಕಾನ್ ಕ್ಲಿಕ್ ಮಾಡಿ. ಸೈನ್ ಇನ್ ಆಗಬೇಕೆಂದು ಕೇಳುತ್ತದೆ. ನಿಮ್ಮ ಜಿಮೇಲ್ ವಿಳಾಸ ಮತ್ತು ಪಾಸ್‌ವರ್ಡ್ ನಮೂದಿಸಿದರೆ ಆಯಿತು. ಈಗಾಗಲೇ ಇರುವ ಆ್ಯಪ್‌ಗಳ ಪರಿಷ್ಕೃತ ಆವೃತ್ತಿ ಲಭ್ಯವಿದ್ದರೆ, ಅದನ್ನು ಡೌನ್‌ಲೋಡ್ ಮಾಡಿಕೊಳ್ಳುವಂತೆ ನಿಮ್ಮ ಫೋನೇ ನಿಮಗೆ ಸೂಚಿಸುತ್ತದೆ. ಬಳಿಕ ಇದೇ ಪ್ಲೇ ಸ್ಟೋರ್‌ನಿಂದ ನಿಮಗೆ ಬೇಕಾದಾಗ ಒಂದೊಂದೇ ಆ್ಯಪ್‍ಗಳನ್ನು ಹುಡುಕಿ ಡೌನ್‌ಲೋಡ್ ಮಾಡಿಕೊಳ್ಳಬಹುದು.