ಜನ ಸಾಮಾನ್ಯರತ್ತ ತಂತ್ರಜ್ಞಾನ – Gadget-Technology Info Towards Common Man

Posts tagged ‘OS’

ಆಂಡ್ರಾಯ್ಡ್, ವಿಂಡೋಸ್, ಬ್ಲ್ಯಾಕ್‌ಬೆರಿ ಆಪಲ್… ಯಾವುದನ್ನು ಆಯ್ದುಕೊಳ್ಳಲಿ?

ವಿಜಯ ಕರ್ನಾಟಕ ಮಾಹಿತಿ@ತಂತ್ರಜ್ಞಾನ ಅಂಕಣ-45, ಜುಲೈ 29, 2013
ಇಂಟರ್ನೆಟ್ ಸೌಲಭ್ಯ ಇರುವ ಮೊಬೈಲ್ ಫೋನ್‌ಗಳು ಸ್ಮಾರ್ಟ್‌ಫೋನ್ ಎಂಬ ಕೆಟಗರಿಯಲ್ಲಿ ಬರುತ್ತವೆ. ಇವುಗಳಲ್ಲಿ ಆಂಡ್ರಾಯ್ಡ್, ವಿಂಡೋಸ್, ಬ್ಲ್ಯಾಕ್‌ಬೆರಿ, ಆಪಲ್ ಐಒಎಸ್ ಮುಂತಾದ ಹೆಸರುಗಳನ್ನು ಕೇಳಿರಬಹುದು. ನಗರ ವಾಸಿಗಳಿಗೆ ಅದರಲ್ಲೂ ಟೆಕ್ನಾಲಜಿ ಬಗ್ಗೆ ಕುತೂಹಲ ಹೊಂದಿದ್ದವರಿಗೆ ಇವುಗಳ ಬಗ್ಗೆ ತಿಳಿದಿರಬಹುದು. ಆದರೆ ಸಾಮಾನ್ಯ ಜನರಿಗೆ ಈ ಹೆಸರುಗಳು ಗೊಂದಲ ಹುಟ್ಟಿಸಬಹುದು. ಆಂಡ್ರಾಯ್ಡ್ ಫೋನ್‌ಗಳು ಒಳ್ಳೆಯವೇ? ವಿಂಡೋಸ್ ಫೋನ್ ಉತ್ತಮವೇ, ಅಥವಾ ಐಫೋನ್ ಚೆನ್ನಾಗಿರುತ್ತದೆಯೇ, ಬ್ಲ್ಯಾಕ್‌ಬೆರಿ ಹೇಗಿದೆ ಎಂಬಿತ್ಯಾದಿ ಪ್ರಶ್ನೆಗಳು ಅವರನ್ನು ಕಾಡುವುದು ಸಹಜ. ಈ ಕುರಿತು ತಿಳಿಯದವರಿಗಾಗಿ ಒಂದಿಷ್ಟು ಸ್ಥೂಲ ಮಾಹಿತಿ.

ನೋಕಿಯಾ, ಸ್ಯಾಮ್ಸಂಗ್, ಮೈಕ್ರೋಮ್ಯಾಕ್ಸ್, ಕಾರ್ಬನ್, ಆಪಲ್, ಎಲ್ಜಿ, ವೀಡಿಯೋಕಾನ್ ಮುಂತಾಗಿ ಹೆಸರು ಕೇಳಿರುತ್ತೀರಿ. ಇವೆಲ್ಲವೂ ಮೊಬೈಲ್ ತಯಾರಿಯಾ ಕಂಪನಿಗಳಾದರೆ,  ಸದ್ಯಕ್ಕೆ ಭಾರತದಲ್ಲಿ ಹೆಚ್ಚು ಚಾಲ್ತಿಯಲ್ಲಿರುವ ಆಂಡ್ರಾಯ್ಡ್, ಬ್ಲ್ಯಾಕ್‌ಬೆರಿ, ಐಒಎಸ್ ಹಾಗೂ ವಿಂಡೋಸ್ ಎಂಬವು ಮೊಬೈಲ್ ಫೋನುಗಳನ್ನು ಕಾರ್ಯಾಚರಿಸುವಂತೆ ಮಾಡಬಲ್ಲ ಕಾರ್ಯಾಚರಣಾ ವ್ಯವಸ್ಥೆ (ಆಪರೇಟಿಂಗ್ ಸಿಸ್ಟಂ)ಗಳು. ಇಲ್ಲಿ ಆಂಡ್ರಾಯ್ಡ್ ತಂತ್ರಾಂಶವನ್ನು ಸ್ಯಾಮ್ಸಂಗ್, ಗೂಗಲ್, ಎಲ್ಜಿ, ಎಚ್‌ಟಿಸಿ ಮುಂತಾದ ಮೊಬೈಲ್ ಫೋನ್ ಕಂಪನಿಗಳು ಬಳಸಿಕೊಳ್ಳುತ್ತವೆ. ಅದೇ ರೀತಿ ವಿಂಡೋಸ್ ಫೋನನ್ನೂ ಸ್ಯಾಮ್ಸಂಗ್, ಎಚ್‌ಟಿಸಿ ಜೊತೆಗೆ ನೋಕಿಯಾ ಕಂಪನಿಗಳೂ ಬಳಸಿಕೊಂಡು, ಮಾರುಕಟ್ಟೆಗೆ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುತ್ತವೆ. (ಬೇಸಿಕ್ ಫೋನ್‌ಗಳಲ್ಲಿ ಜಾವಾ, ಸಿಂಬಿಯಾನ್ ಮುಂತಾದ ಕಾರ್ಯಾಚರಣಾ ವ್ಯವಸ್ಥೆಯಿರುತ್ತವೆ.)

ಮೊಬೈಲ್ ಕಂಪನಿ ಯಾವುದು ಒಳ್ಳೆಯದು ಎಂಬುದರ ಆಯ್ಕೆ ಅವರವರಿಗೆ ಬಿಟ್ಟದ್ದು. ಆದರೆ, ಯಾವ ಕಾರ್ಯಾಚರಣಾ ವ್ಯವಸ್ಥೆ ಇರಬೇಕು ಅಂತ ನಿಮ್ಮ ಆಯ್ಕೆಗೆ ಅನುಕೂಲವಾಗಲು ಇಲ್ಲಿ ಕೊಂಚ ಮಾಹಿತಿ ಇದೆ.

1. ಆಂಡ್ರಾಯ್ಡ್: ಇದು ಈಗ ಗೂಗಲ್ ಒಡೆತನದಲ್ಲಿರುವ, ಲಿನಕ್ಸ್ ಮುಕ್ತ ತಂತ್ರಾಂಶದ ಆಧಾರದಲ್ಲಿ ರೂಪಿತವಾದ ಕಾರ್ಯಾಚರಣಾ ವ್ಯವಸ್ಥೆಯಾಗಿದ್ದು, ಉಚಿತವಾಗಿ ದೊರೆಯುವುದರಿಂದ ಹೆಚ್ಚಿನ ಮೊಬೈಲ್ ಕಂಪನಿಗಳು ಇದನ್ನು ಬಳಸಿಕೊಂಡು ತಮ್ಮ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಬಿಟ್ಟಿವೆ. ಮೊಬೈಲ್‌ನಲ್ಲಿ ವೈವಿಧ್ಯಮಯ ಕಾರ್ಯಗಳನ್ನು ಕೈಗೊಳ್ಳಲು (ಚಾಟಿಂಗ್, ಫೇಸ್‌ಬುಕ್, ಸಂಗೀತ, ಟಿಪ್ಪಣಿ ಇತ್ಯಾದಿ) 8.5 ಲಕ್ಷಕ್ಕೂ ಹೆಚ್ಚು ಕಿರು ತಂತ್ರಾಂಶಗಳು (ಅಪ್ಲಿಕೇಶನ್ಸ್ ಅಥವಾ ಆಪ್ಸ್ ಅಂತಲೂ ಕರೀತಾರೆ) ಗೂಗಲ್ ಪ್ಲೇ ಎಂಬ ಆಪ್ ಸಂಗ್ರಹಾಗಾರದಲ್ಲಿ ದೊರೆಯುವುದರಿಂದ ಹೆಚ್ಚು ಜನಪ್ರಿಯವಾಗಿದೆ. ಓಎಸ್ ಉಚಿತವಾಗಿರುವುದರಿಂದ ನಾಲ್ಕೈದು ಸಾವಿರ ರೂ.ನಿಂದ ನಲುವತ್ತೈದು ಸಾವಿರ ರೂ.ವರೆಗೂ ಫೋನುಗಳಿವೆ. ಭಾರತದಲ್ಲಿ ಹೆಚ್ಚು ಜನಪ್ರಿಯ.

2. ವಿಂಡೋಸ್ ಫೋನ್: ಇದು ಕಂಪ್ಯೂಟರ್ ದಿಗ್ಗಜ ಮೈಕ್ರೋಸಾಫ್ಟ್ ಕಂಪನಿಯ ಮೊಬೈಲ್ ಕಾರ್ಯಾಚರಣಾ ವ್ಯವಸ್ಥೆ. ವಿಂಡೋಸ್ 8 ಹೊಚ್ಚ ಹೊಸ ಆವೃತ್ತಿ. ವಿಂಡೋಸ್ ಫೋನ್ ಸ್ಟೋರ್‌ನಲ್ಲಿ ಸುಮಾರು ಒಂದೂ ಕಾಲು ಲಕ್ಷ ಆಪ್‌ಗಳಿವೆ. ವಿಂಡೋಸ್ 8 ಕಂಪ್ಯೂಟರ್ ಬಳಸಿದವರಿಗೆ ಇದರ ಬಳಕೆ ತುಂಬಾ ಸುಲಭ. 10 ಸಾವಿರ ರೂ.ನಿಂದ ವಿಂಡೋಸ್ 8 ಸ್ಮಾರ್ಟ್‌ಫೋನ್‌ಗಳು ಆರಂಭವಾಗುತ್ತವೆ.

3. ಆಪಲ್‌ನ ಐಒಎಸ್: ಆಪಲ್ ಕಂಪನಿಯ ಫೋನುಗಳಿಗೆ ಮಾತ್ರ ಲಭ್ಯವಿರುವ ಐಒಎಸ್ ಇರುವ ಐಫೋನ್/ಐಪ್ಯಾಡ್‌ಗಳ ಬೆಲೆ ಉಳಿದವಕ್ಕೆ ಹೋಲಿಸಿದರೆ ಹೆಚ್ಚು. ಆಪ್ ಸ್ಟೋರ್‌ನಲ್ಲಿ ಸುಮಾರು 6.5 ಲಕ್ಷ ಅಪ್ಲಿಕೇಶನ್‌ಗಳಿವೆ. ಸ್ಮಾರ್ಟ್ ಫೋನ್ ಬೆಲೆ ಇಪ್ಪತ್ತೈದು ಸಾವಿರ ರೂ.ಗಿಂತ ಹೆಚ್ಚು.

4. ಬ್ಲ್ಯಾಕ್‌ಬೆರಿ ಒಎಸ್: ಇದು ಬ್ಲ್ಯಾಕ್‌ಬೆರಿ ಫೋನುಗಳಲ್ಲಿ ಮಾತ್ರ ಲಭ್ಯ. ಇದರ ತಯಾರಿಕಾ ಸಂಸ್ಥೆ ರಿಸರ್ಚ್ ಇನ್ ಮೋಷನ್ (ರಿಮ್). ಆಫೀಸ್ ಕೆಲಸಕ್ಕಾಗಿ ಹೆಚ್ಚು ಜನಪ್ರಿಯವಾಗಿದ್ದು, ಬೆಲೆ 9 ಸಾವಿರಕ್ಕಿಂತ ಹೆಚ್ಚು. ಇದರ ಸ್ಟೋರ್‌ನಲ್ಲಿ ಒಂದೂ ಕಾಲು ಲಕ್ಷದಷ್ಟು ಆಪ್‌ಗಳಿವೆ.

ಇವುಗಳಲ್ಲಿ ಶ್ರೀಸಾಮಾನ್ಯರ ಮೆಚ್ಚುಗೆ ಗಳಿಸಿದ್ದು ಆಂಡ್ರಾಯ್ಡ್ ಫೋನ್‌ಗಳು. ಆಪಲ್ ಮತ್ತು ಬ್ಲ್ಯಾಕ್‌ಬೆರಿಗಳು ಪ್ರತಿಷ್ಠೆಯ ಸಂಕೇತವಾಗಿ ಬೆಳೆದಿವೆ. ವಿಂಡೋಸ್ 8 ಇತ್ತೀಚೆಗಷ್ಟೇ ಜನಸಾಮಾನ್ಯರ ಕೈಗೆಟುಕುವ ದರದಲ್ಲಿಯೂ ದೊರೆಯತೊಡಗಿದೆ. ಆಯ್ಕೆ ನಿಮ್ಮದು.

ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಖರೀದಿಸುತ್ತಿದ್ದೀರಾ? ಇಲ್ಲಿ ಕೊಂಚ ನೋಡಿ

ಜನ ಸಾಮಾನ್ಯರಿಗಾಗಿ ಮಾಹಿತಿ@ತಂತ್ರಜ್ಞಾನ- ವಿ.ಕ.ಅಂಕಣ-26 (ಮಾರ್ಚ್ 04, 2013)

ಐಒಎಸ್ ಕಾರ್ಯಾಚರಣಾ ವ್ಯವಸ್ಥೆ ಇರುವ ‘ಐಫೋನ್’ ದುಬಾರಿ, ‘ಬ್ಲ್ಯಾಕ್‌ಬೆರಿ’ ಬಿಜಿನೆಸ್ ಮಂದಿಗೆ ಸೂಕ್ತ ಮತ್ತು ಈಗ ಸುದ್ದಿ ಮಾಡುತ್ತಿರುವ ‘ವಿಂಡೋಸ್’ ಕಾರ್ಯಾಚರಣಾ ವ್ಯವಸ್ಥೆಯ ಮೊಬೈಲುಗಳಲ್ಲಿ ಅಪ್ಲಿಕೇಶನ್‌ಗಳು ಕಡಿಮೆ ಎಂಬ ಭಾವನೆ ಇರುವುದರಿಂದಾಗಿ ಭಾರತದಲ್ಲಿ ಈಗ ‘ಆಂಡ್ರಾಯ್ಡ್’ ಕಾರ್ಯಾಚರಣಾ ವ್ಯವಸ್ಥೆಯುಳ್ಳ ಫೋನ್‌ಗಳಿಗೆ ಬೇಡಿಕೆಯೂ ಹೆಚ್ಚು, ಜೇಬಿಗೆ ಭಾರವೂ ಕಡಿಮೆ ಮತ್ತು ತಂತ್ರಜ್ಞಾನ ದೈತ್ಯ ಸಂಸ್ಥೆ ‘ಗೂಗಲ್’ನಿಂದಲೇ ಆಂಡ್ರಾಯ್ಡ್ ಅಭಿವೃದ್ಧಿಯಾಗುತ್ತಿರುವುದರಿಂದ ಅದಕ್ಕೆ ಆಕರ್ಷಣೆಯೂ ಹೆಚ್ಚು. ಹೀಗಾಗಿ ಹೆಚ್ಚು ಹೆಚ್ಚು ಜನ ಆಕರ್ಷಿತರಾಗುತ್ತಿರುವ ಆಂಡ್ರಾಯ್ಡ್ ಫೋನ್‌ಗಳ ಬಗ್ಗೆ ಒಂದಿಷ್ಟು ಮೂಲಭೂತ ಮಾಹಿತಿ ಇಲ್ಲಿದೆ.

ಆಂಡ್ರಾಯ್ಡ್ ಮೊಬೈಲ್ ಅಥವಾ ಟ್ಯಾಬ್ಲೆಟನ್ನು ಮೊದಲ ಬಾರಿ ಖರೀದಿಸಿದ್ದರೆ ಹೇಗೆ ಮುಂದುವರಿಯುವುದೆಂಬ ಸಂದೇಹ ನಿಮ್ಮಲ್ಲಿ ಇರಬಹುದು. ಈಗ ಹ್ಯಾಂಡ್‌ಸೆಟ್‌ಗಳಲ್ಲಿ ಇಂಟರ್ನೆಟ್ ಸಂಪರ್ಕ ಹೊಂದುವುದು ನಗರ ಪ್ರದೇಶಗಳಲ್ಲಿ ಸರ್ವೇ ಸಾಮಾನ್ಯವಾಗಿಬಿಟ್ಟಿದ್ದರೆ, ಗ್ರಾಮಾಂತರ ಪ್ರದೇಶಗಳಲ್ಲಿಯೂ ಜನರು ಟೆಕ್-ಸ್ಯಾವಿ ಆಗುತ್ತಿದ್ದಾರೆ. ಹೀಗಾಗಿ ಇಂಟರ್ನೆಟ್ ಸಂಪರ್ಕವಿದ್ದರೆ ಆಂಡ್ರಾಯ್ಡ್ ಸಾಧನಗಳನ್ನು ಪರಿಪೂರ್ಣವಾಗಿ ಅನುಭವಿಸಬಹುದು ಎಂಬುದು ಗಮನದಲ್ಲಿರಲಿ ಮತ್ತು ಟಚ್ ಸ್ಕ್ರೀನ್ (ಸ್ಪರ್ಶ ಸಂವೇದಿ ಪರದೆ) ಇದರ ಜೀವಾಳ ಎಂಬುದೂ ಗಮನದಲ್ಲಿರಲಿ.

ಸಾಧನಗಳನ್ನು ಖರೀದಿಸುವಾಗಲೇ, ಅದರಲ್ಲಿರುವ ಆಂಡ್ರಾಯ್ಡ್ ಕಾರ್ಯಾಚರಣಾ ವ್ಯವಸ್ಥೆ (ಆಪರೇಟಿಂಗ್ ಸಿಸ್ಟಂ) ಯಾವ ಆವೃತ್ತಿ ಎಂದು ನೋಡಿಕೊಳ್ಳುವುದು ಮುಖ್ಯ. ಅಂದರೆ ಜಿಂಜರ್‌ಬ್ರೆಡ್, ಐಸ್ ಕ್ರೀಂ ಸ್ಯಾಂಡ್‌ವಿಚ್ ಮತ್ತು ಹೊಚ್ಚ ಹೊಸ ಆವೃತ್ತಿ ಜೆಲ್ಲಿಬೀನ್. ಹಳೆಯ ಆವೃತ್ತಿಯುಳ್ಳ ಹ್ಯಾಂಡ್‌ಸೆಟ್ ಖರೀದಿಸುವುದಿದ್ದರೆ, ಅದನ್ನು ಜೆಲ್ಲಿಬೀನ್‌ನ ಹೊಸ ಆವೃತ್ತಿಗೆ ಅಪ್‌ಗ್ರೇಡ್ ಮಾಡಿಕೊಳ್ಳಬಹುದೇ ಅಂತ ತಿಳಿದುಕೊಳ್ಳುವುದು ಜಾಣತನ. ಯಾಕೆಂದರೆ ಹೊಸ ಆವೃತ್ತಿಗಳ ಕಾರ್ಯಾಚರಣೆ ಹೆಚ್ಚು ಅನುಕೂಲಕರವಾಗಿರುತ್ತದೆ, ಆಧುನಿಕ ತಂತ್ರಜ್ಞಾನದಿಂದಲೂ ಕೂಡಿರುತ್ತದೆ.

ಆಂಡ್ರಾಯ್ಡ್ ಫೋನ್‌ಗಳ ಬಳಕೆಯ ಪರಿಪೂರ್ಣ ಅನುಭವ ಪಡೆಯಬೇಕಿದ್ದರೆ ಜಿಮೇಲ್ ಖಾತೆ ಇರುವುದು ಅವಶ್ಯ. (ಇಲ್ಲದಿದ್ದರೂ ನಡೆಯುತ್ತದೆ.) ಅದು ಇದ್ದರೆ ಮಾತ್ರ, ಗೂಗಲ್ ಪ್ಲೇ ಎಂದು ಕರೆಯಲಾಗುವ ಆಂಡ್ರಾಯ್ಡ್‌ನ ಅಪ್ಲಿಕೇಶನ್‌ಗಳ ಮಾರುಕಟ್ಟೆಗೆ ನೀವು ಮೊಬೈಲಿನಿಂದಲೇ ಪ್ರವೇಶಿಸಬಹುದು. ಮತ್ತು ಅಲ್ಲಿ ಉಚಿತವಾಗಿ ಲಭ್ಯವಿರುವ ಸಾಕಷ್ಟು ಅಪ್ಲಿಕೇಶನ್‌ಗಳು, ಗೇಮ್ಸ್, ಸಂಗೀತ… ಇತ್ಯಾದಿ ಎಲ್ಲವನ್ನೂ ಡೌನ್‌ಲೋಡ್ ಮಾಡಿಕೊಳ್ಳಬಹುದು ಮತ್ತು ಇನ್‌ಸ್ಟಾಲ್ ಮಾಡಿಕೊಳ್ಳಬಹುದು.

ನಿಮಗೆ ಬೇಕಾದ ಅಪ್ಲಿಕೇಶನ್‌ಗಳನ್ನು ಇನ್‌ಸ್ಟಾಲ್ ಮಾಡಿಕೊಳ್ಳಬೇಕಿದ್ದರೆ, ಸಾಕಷ್ಟು ಪ್ರಮಾಣದಲ್ಲಿ ಮೆಮರಿ ಇರುವುದು ಅಗತ್ಯ. ಕನಿಷ್ಠ 8 GB ಸಾಮರ್ಥ್ಯವುಳ್ಳ ಬಾಹ್ಯ ಮೆಮರಿ ಕಾರ್ಡ್ (External SD Card ಅಥವಾ Micro SD Card) ಹಾಕಿಕೊಳ್ಳಬೇಕಾಗುತ್ತದೆ. ಹೆಚ್ಚಿನ ಸಾಧನಗಳಲ್ಲಿ 32 GBವರೆಗಿನ ಮೆಮರಿ ಕಾರ್ಡ್ ಸೇರಿಸಲು ಅವಕಾಶ ಇರುತ್ತದೆ. ಹಾಗಂತ, 8 ಜಿಬಿ ಮೆಮರಿ ಕಾರ್ಡ್ ಇದೆ ಎಂದುಕೊಂಡು, ಅದರಲ್ಲಿ ಇದ್ದ ವೀಡಿಯೋ, ಫೋಟೋ ಇತ್ಯಾದಿ ಸೇರಿಸಿ, ಎಲ್ಲವನ್ನೂ ತುಂಬಿಸಿಬಿಟ್ಟರೆ, ನಿಮ್ಮ ಸಾಧನದ ಕಾರ್ಯಾಚರಣೆಯು ನಿಧಾನವಾಗಬಹುದು, ಇಲ್ಲವೇ ಕೆಲವು ಅಪ್ಲಿಕೇಶನ್‌ಗಳೂ ಕೆಲಸ ಮಾಡದಿರಬಹುದು. ಅದಕ್ಕಾಗಿ ಇರುವ ಸಾಮರ್ಥ್ಯಕ್ಕಿಂತ ಕನಿಷ್ಠ 1 GB ಕಡಿಮೆ (8 GB ಮೆಮರಿ ಇದ್ದರೆ, ಗರಿಷ್ಠ 7 GB ಮಾತ್ರ) ಫೈಲುಗಳನ್ನು/ಅಪ್ಲಿಕೇಶನ್‌ಗಳನ್ನು ಇರಿಸಿಕೊಳ್ಳಬೇಕಾಗುತ್ತದೆ.

ಕೆಲವು ಸಾಧನಗಳಲ್ಲಿ ಇಂಟರ್ನಲ್ ಮೆಮರಿ 2 GB ಯಷ್ಟಿದ್ದರೆ, ಕೆಲವು ಸೆಟ್‌ಗಳಲ್ಲಿ ಅದಕ್ಕಿಂತಲೂ ಕಡಿಮೆ ಇರುತ್ತದೆ. ಹೀಗಾಗಿ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಿಕೊಂಡು ಸೇರಿಸಿದರೆ, ಆಂತರಿಕ ಮೆಮರಿ ತುಂಬಿ ಹೋಗುತ್ತದೆ. ಇದಕ್ಕಾಗಿ ಏನು ಮಾಡಬೇಕು? ಹೆಚ್ಚಿನ ಹ್ಯಾಂಡ್‌ಸೆಟ್‌ಗಳಲ್ಲಿ ‘ಸೆಟ್ಟಿಂಗ್ಸ್’ನಲ್ಲಿ ‘ಅಪ್ಲಿಕೇಶನ್ಸ್’ಗೆ ಹೋಗಿ, ‘ಮ್ಯಾನೇಜ್ ಅಪ್ಲಿಕೇಶನ್ಸ್’ ಅಂತ ಕ್ಲಿಕ್ ಮಾಡಿ. ಒಂದೊಂದೇ ಅಪ್ಲಿಕೇಶನ್‌ಗಳನ್ನು ಮುಟ್ಟಿದರೆ, ಅದನ್ನು SD Card ಗೆ ವರ್ಗಾಯಿಸುವ ಆಯ್ಕೆ ಸಿಗುತ್ತದೆ.

ಇಂಥ ಆಯ್ಕೆ ಇಲ್ಲದಿದ್ದರೆ, ಗೂಗಲ್ ಪ್ಲೇ ಎಂಬ ಆಪ್ ಸ್ಟೋರ್‌ನಿಂದ ಅಪ್ಲಿಕೇಶನ್‌ಗಳನ್ನು ಇಂಟರ್ನಲ್ ಮೆಮರಿಯಿಂದ ಮೆಮರಿ ಕಾರ್ಡ್‌ಗೆ ವರ್ಗಾಯಿಸಬಲ್ಲ ಉಚಿತ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಿಕೊಂಡು ಸ್ಥಾಪಿಸಿಕೊಳ್ಳಬಹುದು (Google Pay ಯಲ್ಲಿ ‘App Manager’ ಅಂತ ಸರ್ಚ್ ಮಾಡಿದರೆ ಸಾಕಷ್ಟು ಸಿಗುತ್ತವೆ). ಅದನ್ನು ಅಳವಡಿಸಿ ಕ್ಲಿಕ್ ಮಾಡಿದರೆ, ಇರುವ ಅಪ್ಲಿಕೇಶನ್‌ಗಳ ಪಟ್ಟಿಯನ್ನು ಅದು ತೋರಿಸುತ್ತಾ, ಒಂದೊಂದನ್ನೇ ಮೆಮರಿ ಕಾರ್ಡ್‌ಗೆ ವರ್ಗಾಯಿಸಬಹುದು. ಇಲ್ಲಿ ನಮ್ಮ ಮುಖ್ಯ ಉದ್ದೇಶವೆಂದರೆ, ಸಾಧನದ ಆಂತರಿಕ ಮೆಮರಿಯನ್ನು ಸಾಧ್ಯವಾದಷ್ಟು ಬರಿದು ಮಾಡುವುದು. ಇದರಲ್ಲಿ ಎಲ್ಲವನ್ನೂ ತುಂಬಿಸಿಟ್ಟರೆ, ಸಾಧನದ ಕಾರ್ಯಾಚರಣೆ ನಿಧಾನವಾಗಬಹುದು.

ನೀವು ತೆಗೆಯುವ ಫೋಟೋ, ವೀಡಿಯೋಗಳು, ಸ್ವೀಕರಿಸುವ ಸಂದೇಶಗಳು, ಬ್ಲೂಟೂತ್ ಮೂಲಕ ಬರುವ ಫೈಲ್‌ಗಳು… ಹೀಗೆ ಹೆಚ್ಚು ಗಾತ್ರವಿರುವ ಫೈಲ್‌ಗಳು ಮೆಮರಿ ಕಾರ್ಡ್‌ನಲ್ಲಿಯೇ ಡೀಫಾಲ್ಟ್ ಆಗಿ ಸೇವ್ ಆಗುವಂತೆ ಮಾಡಿಕೊಳ್ಳಬೇಕಾಗುತ್ತದೆ. ಸೆಟ್ಟಿಂಗ್ಸ್‌ನಲ್ಲಿ ಹೋಗಿ ‘SD Cards and Phone Storage’  (ಕೆಲವು ಸೆಟ್‌ಗಳಲ್ಲಿ ‘Storage’ ಅಂತ ಇರುತ್ತದೆ) ಕ್ಲಿಕ್ ಮಾಡಿ ನೋಡಿದರೆ, ಎಷ್ಟು ಸ್ಥಳಾವಕಾಶ ಖಾಲಿ ಇದೆ ಎಂಬ ಮಾಹಿತಿಯನ್ನು ಅದು ತೋರಿಸುತ್ತದೆ. ಬಳಿಕ ಆಯಾ ಅಪ್ಲಿಕೇಶನ್‌ಗಳ (ಉದಾ: ಕ್ಯಾಮರಾ, ಮೆಸೇಜ್ ಮುಂತಾದವುಗಳ) ‘ಸೆಟ್ಟಿಂಗ್ಸ್’ ವಿಭಾಗವನ್ನು ನೋಡಿದರೆ ಅದರಲ್ಲಿ ‘ಸ್ಟೋರೇಜ್’ ಅಂತ ಕ್ಲಿಕ್ ಮಾಡಿದರೆ, ‘ಮೆಮರಿ ಕಾರ್ಡ್’ ಎಂದಿರುವಲ್ಲಿ ಗುರು ಮಾಡಿದೆಯಾ ಅಥವಾ ‘ಫೋನ್/ಡಿವೈಸ್’ ಅಂತ ಇದೆಯಾ ನೋಡಿಕೊಳ್ಳಿ. ಮೆಮರಿ ಕಾರ್ಡ್‌ಗೇ ಸೇವ್ ಆಗುವಂತೆ ನೋಡಿಕೊಂಡರೆ ಫೋನ್ ಸೇಫ್ ಆಗಿರುತ್ತದೆ.

ಏನಿವು ಆಂಡ್ರಾಯ್ಡ್, ಬ್ಲ್ಯಾಕ್‌ಬೆರಿ, ವಿಂಡೋಸ್?

ಜನ ಸಾಮಾನ್ಯರಿಗಾಗಿ ಮಾಹಿತಿ@ತಂತ್ರಜ್ಞಾನ- ವಿ.ಕ.ಅಂಕಣ-11 (ನವೆಂಬರ್ 5, 2012)

ಜಗತ್ತಿನ ಸ್ಮಾರ್ಟ್‌ಫೋನ್‌ಗಳ ಶೇ.75 ಭಾಗವನ್ನೂ ಆಂಡ್ರಾಯ್ಡ್ ಆವರಿಸಿಕೊಂಡಿದೆ ಎಂಬ ಸುದ್ದಿಯನ್ನು ನಾವು ಕಳೆದ ವಾರವಷ್ಟೇ ಓದಿದ್ದೇವೆ. ಈ ಆಂಡ್ರಾಯ್ಡ್, ಬ್ಲ್ಯಾಕ್‌ಬೆರಿ, ವಿಂಡೋಸ್, iOS ಮುಂತಾದವುಗಳೆಲ್ಲಾ ಏನು? ಯಾವುದನ್ನು ಆರಿಸಬೇಕು ಎಂದೆಲ್ಲಾ ಗೊಂದಲದಲ್ಲಿರುವ ಜನಸಾಮಾನ್ಯರಿಗೆ ಈ ಮಾಹಿತಿ.

ಕಂಪ್ಯೂಟರುಗಳು ಕಾರ್ಯಾಚರಿಸಲು ವಿಂಡೋಸ್, ಮ್ಯಾಕ್, ಲಿನಕ್ಸ್ ಮುಂತಾದ ಆಪರೇಟಿಂಗ್ ಸಿಸ್ಟಂ (OS – ಕಾರ್ಯಾಚರಣಾ ವ್ಯವಸ್ಥೆ)ಗಳು ಹೇಗೆ ಅನಿವಾರ್ಯವೋ, ಮೊಬೈಲ್ ಫೋನುಗಳಿಗೂ ಇಂಥದ್ದೊಂದು ವ್ಯವಸ್ಥೆ ಅಗತ್ಯ. ಮೇಲೆ ಹೇಳಿರುವುದೆಲ್ಲವೂ ಅದರಲ್ಲಿರುವ ವಿಧಗಳಷ್ಟೇ.

ಆಪರೇಟಿಂಗ್ ಸಿಸ್ಟಂಗಳಲ್ಲಿ ಬಳಕೆಯ ಕ್ರಮಗಳು ಕೊಂಚ ವ್ಯತ್ಯಾಸವಿರುತ್ತವೆ. ಬೇಸಿಕ್ ಮೊಬೈಲ್ ಫೋನುಗಳಲ್ಲಿ ಅಪ್‌ಗ್ರೇಡ್ ಮಾಡಿಕೊಳ್ಳುವ ಅವಕಾಶವಾಗಲೀ, ಅಪ್ಲಿಕೇಶನ್‌ಗಳಾಗಲೀ ದೊರೆಯುವುದಿಲ್ಲ.

ಜಗತ್ತಿನ ಸ್ಮಾರ್ಟ್‌ಫೋನ್‌ಗಳಲ್ಲಿ ಆಂಡ್ರಾಯ್ಡ್ ತಂತ್ರಾಂಶ ಅತೀಹೆಚ್ಚು ಬಳಕೆಯಲ್ಲಿರಲು ಕಾರಣವೂ ಇದೆ. ಪ್ರಮುಖ ಮೊಬೈಲ್ ಫೋನ್ ತಯಾರಿಕಾ ಕಂಪನಿಗಳಾದ ಸ್ಯಾಮ್ಸಂಗ್, ಮೋಟೋರೋಲ, ಎಲ್‌ಜಿ, ಸೋನಿ, ಎಚ್‌ಟಿಸಿ ಮುಂತಾದವುಗಳು ಮಾತ್ರವಲ್ಲದೆ, ದೇಶೀಯವಾದ ಕಾರ್ಬನ್, ಮೈಕ್ರೋಮ್ಯಾಕ್ಸ್ ಜೊತೆಗೆ, ಚೀನಾ-ಕೊರಿಯಾದ ಸಾಕಷ್ಟು ಹೇಳಹೆಸರಿಲ್ಲದ, ಅಗ್ಗದ ಬೆಲೆಯಲ್ಲಿ ಆಧುನಿಕ ಫೋನ್‌ಗಳನ್ನು ನೀಡುವ ಕಂಪನಿಗಳೂ ಆಂಡ್ರಾಯ್ಡ್ ಬಳಸಿಕೊಂಡು ತಮ್ಮ ತಮ್ಮ ಮೊಬೈಲ್-ಸ್ಮಾರ್ಟ್‌ಫೋನ್‌ಗಳು ಹಾಗೂ ಟ್ಯಾಬ್ಲೆಟ್ ಫೋನುಗಳನ್ನು ಮಾರುಕಟ್ಟೆಗೆ ಹರಿಯಬಿಡುತ್ತಿವೆ. ಆಂಡ್ರಾಯ್ಡ್ ಸಿಸ್ಟಂನಲ್ಲಿರುವ ವಿಭಿನ್ನ ಆವೃತ್ತಿಗಳ ಬಗ್ಗೆ (ಜಿಂಜರ್‌ಬ್ರೆಡ್, ಐಸ್‌ಕ್ರೀಂ ಸ್ಯಾಂಡ್‌ವಿಚ್(ಐಸಿಎಸ್), ಜೆಲ್ಲಿಬೀನ್… ಇತ್ಯಾದಿ) ಹಿಂದೆಯೇ ತಿಳಿಸಿದ್ದೆ. ಆಂಡ್ರಾಯ್ಡ್ ಸಿಸ್ಟಂ ಇರುವ ಮೊಬೈಲುಗಳನ್ನು ಖರೀದಿಸಿದರೆ ಒಂದು ಅನುಕೂಲವೆಂದರೆ, ಇದು ಸಾಫ್ಟ್‌ವೇರ್ ದೈತ್ಯ ಸಂಸ್ಥೆ ಗೂಗಲ್ ಒಡೆತನದ್ದು. ಹೀಗಾಗಿ ಗೂಗಲ್‌ನ ಎಲ್ಲ ಸೇವೆಗಳು (ಜಿಮೇಲ್, ಗೂಗಲ್ ಮ್ಯಾಪ್, ಚಾಟ್) ಇತ್ಯಾದಿಗಳ ಜೊತೆ ಸಿಂಕ್ರನೈಸ್ ಮಾಡುವುದು ಸುಲಭ ಮತ್ತು ಕೋಟ್ಯಂತರ ಅಪ್ಲಿಕೇಶನ್‌ಗಳನ್ನು ಆಂಡ್ರಾಯ್ಡ್‌ನ ಅಪ್ಲಿಕೇಶನ್ ಸ್ಟೋರ್‌ನಲ್ಲಿ ಉಚಿತವಾಗಿಯೂ, ಹಣ ಪಾವತಿಸಿಯೂ ತಮ್ಮದಾಗಿಸಿಕೊಳ್ಳಬಹುದು.

ಇನ್ನು ಐಫೋನ್ ಖ್ಯಾತಿಯ ಆಪಲ್ ಕಂಪನಿಯ iOS ಹಾಗೂ ಬ್ಲ್ಯಾಕ್‌ಬೆರಿ ಮೊಬೈಲ್‌ಗಳನ್ನು ಒದಗಿಸುತ್ತಿರುವ ರಿಸರ್ಚ್ ಇನ್ ಮೋಷನ್ ಕಂಪನಿಗಳು ತಮ್ಮದೇ ಆದ OS ಗಳನ್ನು ಹೊಂದಿದ್ದು, ಅವುಗಳು ಕೂಡ ಆಯಾ ಆಪ್ಲಿಕೇಶನ್ ಸ್ಟೋರ್ (App Store) ಗಳನ್ನು ಹೊಂದಿರುತ್ತವೆ. ಅಲ್ಲಿ ನಮಗೆ ಬೇಕು ಬೇಕಾದ ಅಪ್ಲಿಕೇಶನ್‌ಗಳು ದೊರೆಯುತ್ತವೆ ಮತ್ತು ಇವು ತಮ್ಮದೇ ಆದ ಇಮೇಲ್ ಸೇವೆಯನ್ನು ಒದಗಿಸುತ್ತಿದ್ದು, ಅದಕ್ಕೆ ನಿರ್ದಿಷ್ಟ ಮಾಸಿಕ ಶುಲ್ಕ ಪಾವತಿಸಬೇಕಾಗುತ್ತದೆ. ಅದಿಲ್ಲದೆ ಸಿಮ್ ಕಾರ್ಡ್ ಮೂಲಕ 2ಜಿ, 3ಜಿ ಇಂಟರ್ನೆಟ್ ಸಂಪರ್ಕ ಪಡೆದುಕೊಳ್ಳುವ ಆಯ್ಕೆಯೂ ಲಭ್ಯ. ಇದನ್ನು ಕಚೇರಿ ಉಪಯೋಗಕ್ಕಾಗಿ ಬಳಸುವವರೇ ಹೆಚ್ಚು.

ಭಾರತದಲ್ಲಿ ಜನ ಸಾಮಾನ್ಯರ ಕೈಯಲ್ಲಿಯೂ ಕಂಡುಬರುತ್ತಿರುವುದೆಂದರೆ ನೋಕಿಯಾ ಕಂಪನಿಯ ಮೊಬೈಲ್‌ಗಳು. ಸೀರೀಸ್40, ಸೀರೀಸ್60 ಮುಂತಾಗಿ ಸಿಂಬಿಯಾನ್ ಕಾರ್ಯಾಚರಣಾ ವ್ಯವಸ್ಥೆಯುಳ್ಳ ಮೊಬೈಲ್ ಫೋನುಗಳನ್ನು ಇದು ವಿತರಿಸುತ್ತಿದೆ. ಅಲ್ಲದೆ, ಸಾಫ್ಟ್‌ವೇರ್ ದಿಗ್ಗಜ ಮೈಕ್ರೋಸಾಫ್ಟ್‌ನವರು ಹೊರತಂದಿರುವ ವಿಂಡೋಸ್ ಕಾರ್ಯಾಚರಣಾ ವ್ಯವಸ್ಥೆಯನ್ನೂ ಅದು ಬಳಸಿಕೊಳ್ಳುತ್ತಿದೆ. ನೋಕಿಯಾ ಕೂಡ ತನ್ನದೇ ಆದ Ovi ಸ್ಟೋರ್ ಮೂಲಕ ವಿಭಿನ್ನ ಅಪ್ಲಿಕೇಶನ್‌ಗಳನ್ನು ಒದಗಿಸುತ್ತಿದೆ.

ಯಾವುದು ಒಳ್ಳೆಯದು?
ಸ್ಯಾಮ್ಸಂಗ್ ಮತ್ತು ಆಪಲ್ ಕಂಪನಿಗಳ ನಡುವೆ ನಡೆದ ಪೇಟೆಂಟ್ ಕುರಿತಾದ ಕಾನೂನು ಹೋರಾಟವನ್ನು ಗಮನಿಸಿದರೆ, ಆಧುನಿಕ ಫೋನ್‌ಗಳ ಕಾರ್ಯಾಚರಣಾ ವ್ಯವಸ್ಥೆಗಳು ಒಂದಕ್ಕೊಂದು ಹೋಲಿಕೆಯಿದೆ ಎಂಬುದು ಮನದಟ್ಟಾಗುತ್ತದೆ.

ಕಳೆದ ವಾರ ಬಿಡುಗಡೆಯಾಗಿರುವ ಅಂಕಿಅಂಶಗಳ ಪ್ರಕಾರ, ಜಗತ್ತಿನಲ್ಲಿ ಶೇ.75 ಸ್ಮಾರ್ಟ್‌ಫೋನ್‌ಗಳು ಆಂಡ್ರಾಯ್ಡ್‌ನಲ್ಲಿ, ಶೇ. 14.9ರಷ್ಟು ಆಪಲ್‌ನ iOS, ಶೇ. 4.3 ಬ್ಲ್ಯಾಕ್‌ಬೆರಿ, ಶೇ.2.3 ಸಿಂಬಿಯಾನ್ ಹಾಗೂ ಶೇ.2 ವಿಂಡೋಸ್ ಮತ್ತು ಶೇ.1.5 ಲಿನಕ್ಸ್ OS ನಲ್ಲಿ ಚಲಾವಣೆಯಲ್ಲಿವೆ. ಇವುಗಳಲ್ಲಿ ಯಾವುದು ಒಳ್ಳೆಯದು? ಎಲ್ಲದರಲ್ಲಿಯೂ ಎಲ್ಲ ಸೌಕರ್ಯಗಳೂ ಲಭ್ಯವಿರುವುದರಿಂದ, ಈ ಬಗ್ಗೆ ನಿರ್ಧರಿಸುವುದು ಅವರವರ ಆಸಕ್ತಿಗೆ, ಅನುಕೂಲಕ್ಕೆ ಬಿಟ್ಟ ವಿಷಯ.