ಜನ ಸಾಮಾನ್ಯರತ್ತ ತಂತ್ರಜ್ಞಾನ – Gadget-Technology Info Towards Common Man

Archive for ಏಪ್ರಿಲ್, 2014

ವೈರ್ ಇಲ್ಲದೆಯೇ ಮೊಬೈಲ್ ಫೋನನ್ನು ಕಂಪ್ಯೂಟರಿಗೆ ಸಂಪರ್ಕಿಸಿ!

ಮಾಹಿತಿ@ತಂತ್ರಜ್ಞಾನ ಅಂಕಣ: ವಿಜಯ ಕರ್ನಾಟಕ ಏಪ್ರಿಲ್ 28, 2014
ನಿಮ್ಮಲ್ಲಿ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಅಥವಾ ಟ್ಯಾಬ್ಲೆಟ್ಟೋ ಇದೆ, ಅದರಲ್ಲಿರುವ ಹಾಡು, ವೀಡಿಯೋ, ಫೋಟೋ ಅಥವಾ ಬೇರಾವುದೇ ಫೈಲುಗಳನ್ನು ನಿಮ್ಮ ಕಂಪ್ಯೂಟರ್‌ನಲ್ಲಿ ಸೇವ್ ಮಾಡಿಕೊಳ್ಳಲು ಇಚ್ಛಿಸುತ್ತೀರಿ. ಅಥವಾ ಕಂಪ್ಯೂಟರಿನಲ್ಲಿರುವ ಹಾಡುಗಳನ್ನು ಮೊಬೈಲ್‌ನಲ್ಲಿ ಕೇಳಲು ಇಚ್ಛಿಸುತ್ತೀರಿ. ಆದರೆ ಇದಕ್ಕಾಗಿ ಡೇಟಾ ಕೇಬಲ್ ಮೂಲಕ ಎರಡೂ ಸಾಧನಗಳನ್ನು ಸಂಪರ್ಕಿಸುವುದು ಒಂದು ದೊಡ್ಡ ಕಿರಿಕಿರಿ ಅಥವಾ ಯುಎಸ್‌ಬಿ ಕೇಬಲ್ಲೇ ಇಲ್ಲ ಅಂತಿಟ್ಟುಕೊಳ್ಳಿ. ಅಂಥವರಿಗಾಗಿಯೇ ಇದೆ ಏರ್‌ಡ್ರಾಯ್ಡ್ (Airdroid) ಎಂಬ ಒಂದು ಅತ್ಯುತ್ತಮ ಆ್ಯಪ್.

ಆಂಡ್ರಾಯ್ಡ್ ಬಳಕೆದಾರರಿಗೆ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಈ ಆ್ಯಪ್ ಉಚಿತವಾಗಿ ಲಭ್ಯವಿದೆ. ಇಂಟರ್ನೆಟ್ ಎಂಬ ದೈತ್ಯಶಕ್ತಿ ನಿಮ್ಮ ಸ್ಮಾರ್ಟ್‌ಫೋನ್ ಹಾಗೂ ಕಂಪ್ಯೂಟರ್‌ನಲ್ಲಿದೆಯೆಂದಾದರೆ, ಎಲ್ಲ ಫೈಲುಗಳನ್ನು ಅಕ್ಷರಶಃ ‘ಗಾಳಿಯಲ್ಲೇ (ಏರ್)’ ಅತ್ತಿಂದಿತ್ತ ನಕಲು ಮಾಡಿಕೊಳ್ಳಬಹುದು. ಈ ರೀತಿಯಾಗಿ ಪರಸ್ಪರ ಹಂಚಿಕೊಳ್ಳಲು ಏರ್‌ಡ್ರಾಯ್ಡ್ ಅತ್ಯಂತ ಸರಳವೂ, ಬಳಕೆಗೆ ಸುಲಭವೂ ಆಗಿದೆ.

ಸಾಮಾನ್ಯವಾಗಿ ಫೈಲುಗಳ ವರ್ಗಾವಣೆಗೆ ಸಣ್ಣ ಡೇಟಾ ಕೇಬಲ್ ಅಥವಾ ಯುಎಸ್‌ಬಿ ಕೇಬಲ್ ಬಳಸುತ್ತೇವೆ. ಇಲ್ಲವೆಂದಾದರೆ, ಮೊಬೈಲ್‌ನಿಂದ ನಮ್ಮ ಹೆಸರಿಗೇ ಇಮೇಲ್‌ನಲ್ಲಿ ಆ ಫೈಲನ್ನು ಲಗತ್ತಿಸಿ ಕಳುಹಿಸಿಕೊಳ್ಳುತ್ತೇವೆ. ಅದೂ ಇಲ್ಲವೆಂದಾದರೆ, ಬ್ಲೂಟೂತ್ ವ್ಯವಸ್ಥೆ (ಕಂಪ್ಯೂಟರಿನಲ್ಲಿಯೂ ಬ್ಲೂಟೂತ್ ಇರಬೇಕು) ಬಳಸುತ್ತೇವೆ. ಮತ್ತೊಂದು ವಿಧಾನವೂ ಇದೆ. ಫೋನ್‌ನ ಮೆಮೊರಿ ಕಾರ್ಡ್‌ಗೆ ಆ ಫೈಲನ್ನು ಸೇವ್ ಮಾಡಿ, ಬಳಿಕ ಅದನ್ನು ತೆಗೆದು ಮೆಮೊರಿ ಕಾರ್ಡ್ ರೀಡರ್ ಮೂಲಕ ಕಂಪ್ಯೂಟರಿಗೆ ಲಗತ್ತಿಸಿ, ಫೈಲುಗಳನ್ನು ನಕಲು ಮಾಡುವುದು. ಇದಂತೂ ತೀರಾ ಗೊಂದಲದ ಕೆಲಸ.

ಈ ರೀತಿಯ ಗೊಂದಲಗಳನ್ನು ಸುಲಭವಾಗಿಸಲು ಮತ್ತು ಸಮಯ ಉಳಿತಾಯ ಮಾಡಲು ನೆರವಾಗುವ ಆ್ಯಪ್ ಏರ್‌ಡ್ರಾಯ್ಡ್. ಯಾವುದೇ ರೀತಿಯ ಫೈಲುಗಳನ್ನೂ ನೀವು ಮೊಬೈಲ್ ಮತ್ತು ಕಂಪ್ಯೂಟರ್ ನಡುವೆ ವಿನಿಮಯ ಮಾಡಿಕೊಳ್ಳಬಹುದಷ್ಟೇ ಅಲ್ಲ; ಫೋನನ್ನು ಎಲ್ಲೋ ಇರಿಸಿದರೆ, ಅದನ್ನು ನಿಮ್ಮ ಕಂಪ್ಯೂಟರಿನಿಂದಲೇ ನಿಯಂತ್ರಿಸಬಹುದು; ಕರೆಯನ್ನೂ ಮಾಡಬಹುದು, ಎಸ್ಎಂಎಸ್ ಸಂದೇಶವನ್ನೂ ಕಳುಹಿಸಬಹುದು!

ಹೌದು ಇದು ಸಾಧ್ಯ. ಇದಕ್ಕೆ ಬೇಕಾಗಿರುವುದು ಕಂಪ್ಯೂಟರ್ ಹಾಗೂ ಮೊಬೈಲ್ ಸಾಧನಗಳೆರಡರಲ್ಲೂ ಇಂಟರ್ನೆಟ್ ಸಂಪರ್ಕ (ವೈಫೈ ಅಥವಾ ಮೊಬೈಲ್ ಇಂಟರ್ನೆಟ್). ಮೊಬೈಲ್ ಸಾಧನದಲ್ಲಿ AirDroid ಆ್ಯಪ್ ಅನ್ನು ಡೌನ್‌ಲೋಡ್ ಮಾಡಿಕೊಂಡ ಬಳಿಕ ಅದಕ್ಕೆ ಸೈನ್ ಇನ್ ಆಗಬೇಕು. ಸೈನ್ ಇನ್ ಆಗಲು ನೀವು ನಿಮ್ಮ ಫೇಸ್‌ಬುಕ್, ಜಿಮೇಲ್ ಅಥವಾ ಟ್ವಿಟರ್ ಐಡಿ ಬಳಸಬಹುದು. AirDroid ಗಾಗಿಯೇ ಒಂದು ಪಾಸ್‌ವರ್ಡ್ ರಚಿಸಿ. ಇದನ್ನು ನೆನಪಿಟ್ಟುಕೊಳ್ಳಿ.

ಇಷ್ಟಾದ ಬಳಿಕ ನಿಮ್ಮ ಕಂಪ್ಯೂಟರ್‌ನಲ್ಲಿ http://web.airdroid.com/ ಎಂಬ ತಾಣಕ್ಕೆ ಹೋಗಿ, ಅಲ್ಲಿ ಕೂಡ ಇದೇ ಸೈನ್-ಇನ್ ಐಡಿ ಹಾಗೂ ಪಾಸ್‌ವರ್ಡ್‌ಗಳನ್ನು ಬಳಸಿ. ಹಲವು ಆಂಡ್ರಾಯ್ಡ್ ಸಾಧನಗಳಿದ್ದರೆ ಅವುಗಳನ್ನೂ ಸೇರಿಸಿಕೊಳ್ಳಬಹುದು. ಈಗ ನಿಮ್ಮ ಸಾಧನದಲ್ಲಿರುವ ಎಲ್ಲ ಫೋಲ್ಡರ್‌ಗಳನ್ನು ನೀವು ಕಂಪ್ಯೂಟರ್ ಪರದೆಯಲ್ಲೇ ನೋಡಬಹುದು. ಬೇಕಾದ ಫೋಲ್ಡರ್‌ನ ಐಕಾನ್ ಮೇಲೆ ಕ್ಲಿಕ್ ಮಾಡಿದರೆ, ನಿಮ್ಮ ಮೊಬೈಲ್‌ನ ಸಂಪೂರ್ಣ ನಿಯಂತ್ರಣ ನಿಮ್ಮ ಕಂಪ್ಯೂಟರ್ ಪರದೆಯಿಂದಲೇ ಸಾಧ್ಯ. ಮೊಬೈಲಿಗೆ ಕರೆ ಬಂದರೆ, ಎಸ್ಎಂಎಸ್ ಬಂದರೆ, ನಿಮ್ಮ ಕಂಪ್ಯೂಟರ್ ಪರದೆ ಮೇಲೆ ನೋಟಿಫಿಕೇಶನ್ ಕಾಣಿಸುತ್ತದೆ!

ಮೊಬೈಲ್ ಮತ್ತು ಕಂಪ್ಯೂಟರುಗಳ ಮಧ್ಯೆ ಫೈಲುಗಳನ್ನು Drag and Drop (ಅಂದರೆ ಮೌಸ್‌ನ ಪಾಯಿಂಟರ್ ಒತ್ತಿಹಿಡಿಯುತ್ತಾ ಬೇಕಾಗಿರುವ ಫೋಲ್ಡರ್‌ಗೆ ಎಳೆದು ಬಿಡುವುದು) ಮೂಲಕ ವಿನಿಮಯ ಮಾಡಿಕೊಳ್ಳಬಹುದು. ಕಂಪ್ಯೂಟರ್‌ಗೆ ಮೈಕ್ ಇರುವ ಹೆಡ್‌ಫೋನ್ ತಗುಲಿಸಿದರೆ, ಕಂಪ್ಯೂಟರಿನಿಂದಲೇ ಕರೆಗಳನ್ನು ಮಾಡಬಹುದು; ಎಸ್ಎಂಎಸ್ ಕಳುಹಿಸಬಹುದು; ಮೊಬೈಲ್‌ನಲ್ಲಿರುವ ಸಂಗೀತ ಅಥವಾ ಎಫ್ಎಂ ರೇಡಿಯೋ ಆಲಿಸಬಹುದು. ಅಷ್ಟೇ ಅಲ್ಲ, ಮೊಬೈಲ್‌ನಲ್ಲಿರುವ ಕ್ಯಾಮರಾ ಬಳಸಿ ಚಿತ್ರವನ್ನೂ ತೆಗೆಯಬಹುದು! ಜತೆಗೆ ಕಾಂಟಾಕ್ಟ್ ನಂಬರ್‌ಗಳ, ಹೆಸರಿನ ತಿದ್ದುಪಡಿಯನ್ನೂ ಕಂಪ್ಯೂಟರಿನಲ್ಲೇ ನಿಭಾಯಿಸಬಹುದು.

ಮೊಬೈಲ್ ಸಾಧನವನ್ನು ಇಂಟರ್ನೆಟ್ ಸಿಗ್ನಲ್ ಇರುವ ಸ್ಥಳದಲ್ಲಿ ಇಟ್ಟುಬಿಟ್ಟರಾಯಿತು. ಅದಕ್ಕೆ ಸಂಬಂಧಿಸಿದ ಎಲ್ಲ ಕೆಲಸವನ್ನೂ ಕಂಪ್ಯೂಟರಿನಿಂದ ಕುಳಿತಲ್ಲೇ ನಿಭಾಯಿಸಬಹುದು. ಇದೊಂದು ರೀತಿಯಲ್ಲಿ ವೈಫೈ (ವೈರ್‌ಲೆಸ್) ಸಂಪರ್ಕದಂತೆಯೇ ಕೆಲಸ ಮಾಡುತ್ತದೆ.

ಆದರೊಂದು ವಿಷಯ ನೆನಪಿಡಬೇಕು. ಫೈಲ್ ನಕಲು ಮಾಡುವುದು, ಕರೆ ಮಾಡುವುದು ಎಲ್ಲವೂ ಇಂಟರ್ನೆಟ್ ಸಂಪರ್ಕದ ಮೂಲಕವೇ ಆಗುತ್ತದೆ. ಭಾರದ ಫೈಲುಗಳನ್ನು ಅತ್ತಿಂದಿತ್ತ ವರ್ಗಾಯಿಸಿದರೆ, ಅಪ್‌ಲೋಡ್/ಡೌನ್‌ಲೋಡ್ ಆಗುವುದರಿಂದ ಇಂಟರ್ನೆಟ್ ವೆಚ್ಚವು ಮಿತಿ ಮೀರಬಹುದು. ಆದರೆ, ತುರ್ತು ಸಂದರ್ಭಗಳಲ್ಲಿ ಮಾತ್ರ, ಅಥವಾ ಅಪರಿಮಿತ (ಅನ್‌ಲಿಮಿಟೆಡ್) ಇಂಟರ್ನೆಟ್ ಸಂಪರ್ಕವಿದ್ದರೆ ಎಲ್ಲವನ್ನೂ ನಿಶ್ಚಿಂತೆಯಿಂದ ಮಾಡಬಹುದು.

ವಿಂಡೋಸ್ ಎಕ್ಸ್‌ಪಿ ಇರುವವರು ಗಮನಿಸಿ!

ಮಾಹಿತಿ@ತಂತ್ರಜ್ಞಾನ: ವಿಜಯ ಕರ್ನಾಟಕ ಅಂಕಣ, ಏಪ್ರಿಲ್ 21, 2014
ಬಹುತೇಕ ಮಂದಿ ತಮ್ಮ ಕಂಪ್ಯೂಟರ್‌ನಲ್ಲಿ ಹೊಂದಿರುವ ವಿಂಡೋಸ್ ಎಕ್ಸ್‌ಪಿ ಎಂಬ ಕಾರ್ಯಾಚರಣಾ ವ್ಯವಸ್ಥೆ (ಆಪರೇಟಿಂಗ್ ಸಿಸ್ಟಂ – OS) ಗೆ ಅದರ ಕಂಪನಿ ಮೈಕ್ರೋಸಾಫ್ಟ್ ನೀಡುತ್ತಿರುವ ಅಪ್‌ಡೇಟ್‌ಗಳ ಬೆಂಬಲವು ಏಪ್ರಿಲ್ 8ಕ್ಕೆ ಸ್ಥಗಿತಗೊಂಡಿದೆ. ಇದರಿಂದ ಎಕ್ಸ್‌ಪಿ ಸಿಸ್ಟಮ್ಮೇ ಕೆಲಸ ಮಾಡುವುದಿಲ್ಲ, ಯಾವಾಗ ಬೇಕಾದರೂ ನಿಲ್ಲಬಹುದು ಎಂಬುದು ತಪ್ಪು ಕಲ್ಪನೆ. ಕಾಲಕಾಲಕ್ಕೆ ವಿಭಿನ್ನ ರೀತಿಯ ವೈರಸ್‌ಗಳು, ಮಾಲ್‌ವೇರ್‌ಗಳು, ಸ್ಪೈ‌ವೇರ್‌ಗಳೆಂಬ ನಮ್ಮ ಮಾಹಿತಿ ಕದಿಯುವ ತಂತ್ರಾಂಶಗಳು ಸಿಸ್ಟಂಗೆ ಸೋಕದಂತೆ ತಡೆಯುವ ವ್ಯವಸ್ಥೆಯನ್ನು ಮೈಕ್ರೋಸಾಫ್ಟ್ ಇದುವರೆಗೆ ‘ಅಪ್‌ಡೇಟ್’ಗಳ ರೂಪದಲ್ಲಿ ತನ್ನ ಗ್ರಾಹಕರಿಗೆ ನೀಡುತ್ತಿತ್ತು. ಅಂತಹಾ ಆಧುನಿಕ ತಂತ್ರಜ್ಞಾನದ ಭದ್ರತೆ ಇನ್ನು ಮುಂದೆ ವಿಂಡೋಸ್ ಎಕ್ಸ್‌ಪಿಗೆ ಇರುವುದಿಲ್ಲ. ಹಾಗಾಗಿ, ವಿಂಡೋಸ್ ಎಕ್ಸ್‌ಪಿ ಸಿಸ್ಟಂಗಳನ್ನು ಹೊಂದಿರುವವರು ಏನು ಮಾಡಬೇಕು? ಇಂಥವರಿಗಾಗಿ ಮುಖ್ಯವಾಗಿ ಮೂರು ಆಯ್ಕೆಗಳಿವೆ.

1. ಇರುವ ಸಿಸ್ಟಮ್ಮನ್ನೇ ವಿಂಡೋಸ್ 8.1ಕ್ಕೆ ಅಪ್‌ಗ್ರೇಡ್ ಮಾಡಿಕೊಳ್ಳುವುದು.

2. ಇರುವ ಎಕ್ಸ್‌ಪಿಯಲ್ಲೇ ಮುಂದುವರಿದು, ಎಚ್ಚರಿಕೆಯಿಂದ ಇಂಟರ್ನೆಟ್ ಬಳಸುವುದು ಅಥವಾ ಇಂಟರ್ನೆಟ್ ತಂಟೆಗೇ ಹೋಗದಿರುವುದು.

3. ಹೊಸ ಕಂಪ್ಯೂಟರ್ ಖರೀದಿಸುವುದು.

ಅಪ್‌ಗ್ರೇಡ್: ಮೊದಲು, ವಿಂಡೋಸ್ 8.1 ಎಂಬ ಮೈಕ್ರೋಸಾಫ್ಟ್‌ನ ಹೊಚ್ಚ ಹೊಸ ಕಾರ್ಯಾಚರಣಾ ವ್ಯವಸ್ಥೆಗೆ ನಿಮ್ಮಲ್ಲಿರುವ ಕಂಪ್ಯೂಟರ್ ಹೊಂದಿಕೊಳ್ಳುತ್ತದೆಯೇ ಎಂದು ನೋಡಲು http://go.microsoft.com/fwlink/p/?LinkId=321548 ಎಂಬಲ್ಲಿಂದ ‘ವಿಂಡೋಸ್ ಅಪ್‌ಗ್ರೇಡ್ ಅಸಿಸ್ಟೆಂಟ್’ ಕಿರು ತಂತ್ರಾಂಶ ಡೌನ್‌ಲೋಡ್ ಮಾಡಿಕೊಂಡು, ರನ್ ಮಾಡಿ. ಆಧುನಿಕ ತಂತ್ರಜ್ಞಾನಕ್ಕೆ ಸೂಕ್ತವಾದ ಹಾರ್ಡ್‌ವೇರ್ ನಿಮ್ಮ ಕಂಪ್ಯೂಟರಲ್ಲಿದೆಯೇ ಎಂಬ ವರದಿಯನ್ನು ಅದು ನಿಮಗೊಪ್ಪಿಸುತ್ತದೆ. ಎಲ್ಲವೂ ಹೊಂದಿಕೆಯಾಗುತ್ತದೆ ಅಂತ ರಿಪೋರ್ಟ್ ಬಂದರೆ, ಅಪ್‌ಗ್ರೇಡ್ ಮಾಡಿಕೊಳ್ಳಬಹುದು. ಈ ಹಿಂದೆ 699 ರೂ.ಗೆ ವಿಂಡೋಸ್ ಅಪ್‌ಗ್ರೇಡ್ ಮಾಡಿಕೊಳ್ಳುವ ಅವಕಾಶದ ಬಗ್ಗೆ ಇದೇ ಅಂಕಣದಲ್ಲಿ ಪ್ರಸ್ತಾಪಿಸಿದಾಗ ಎಷ್ಟು ಮಂದಿ ಪ್ರಯೋಜನ ಪಡೆದುಕೊಂಡಿದ್ದಾರೋ ಗೊತ್ತಿಲ್ಲ. ಉಪಯೋಗಿಸಿಕೊಳ್ಳದಿದ್ದವರು ಬಹುಶಃ ಈಗ ಕೈಕೈ ಹಿಸುಕಿಕೊಳ್ಳಬೇಕಾಗುತ್ತದೆ. ಇದಕ್ಕೆ ಕಾರಣವೆಂದರೆ, ವಿಂಡೋಸ್ 7 ಅಥವಾ ವಿಂಡೋಸ್ 8 ಓಎಸ್ ಖರೀದಿಗೆ ಈಗ ತೆರಬೇಕಾದ ಹಣ ಕನಿಷ್ಠವೆಂದರೆ 4ರಿಂದ 10 ಸಾವಿರ ರೂ.!

ಎರಡನೇ ಸಾಧ್ಯತೆ, ಎಕ್ಸ್‌ಪಿಯನ್ನೇ ಬಳಸುವುದು. ಇದಕ್ಕಾಗಿ ಕೆಲವೊಂದು ಕ್ರಮಗಳನ್ನು ಅನುಸರಿಸಬೇಕಾಗುತ್ತದೆ. ಕಾರ್ಯಾಚರಣೆ ವ್ಯವಸ್ಥೆ ಎಕ್ಸ್‌ಪಿ ಆಗಿದ್ದರೂ, ಇಂಟರ್ನೆಟ್ ಜಾಲಾಡಲು ಮೈಕ್ರೋಸಾಫ್ಟ್‌ನ ‘ಇಂಟರ್ನೆಟ್ ಎಕ್ಸ್‌ಪ್ಲೋರರ್’ ಬಳಸಬಾರದು. ಒಂದು ಅತ್ಯುತ್ತಮ, ವಿಶ್ವಾಸಾರ್ಹ ಆ್ಯಂಟಿ ವೈರಸ್ ತಂತ್ರಾಂಶವೊಂದನ್ನು ಇನ್‌ಸ್ಟಾಲ್ ಮಾಡಿಕೊಳ್ಳಬೇಕು. ಬಳಿಕ, ಇಂಟರ್ನೆಟ್ ಎಕ್ಸ್‌ಪ್ಲೋರರ್ ಬದಲು ಮೊಝಿಲ್ಲಾ ಫೈರ್‌ಫಾಕ್ಸ್ ಅಥವಾ ಗೂಗಲ್‌ನ ಕ್ರೋಮ್ ಬ್ರೌಸರ್ ಅಳವಡಿಸಿಕೊಂಡು, ಅದರ ಮೂಲಕವೇ ಇಂಟರ್ನೆಟ್‌ನಲ್ಲಿ ಜಾಲಾಡಬೇಕು. ಇಂಟರ್ನೆಟ್ ಬಳಸದೇ ಇದ್ದರೆ ಹಾಗೂ ಅದಕ್ಕೆ ಬೇರಾವುದೇ ಬಾಹ್ಯ ಸಾಧನಗಳು (ಪೆನ್ ಡ್ರೈವ್, ಕ್ಯಾಮರಾ, ಮೊಬೈಲ್) ಇತ್ಯಾದಿಗಳನ್ನು ಸಂಪರ್ಕಿಸದೇ ಇದ್ದರೆ, ಎಕ್ಸ್‌ಪಿಯನ್ನು ಮುಂದುವರಿಸಬಹುದು. ಆದರೆ, ಹೆಚ್ಚಿನ ಹೊಸ ತಂತ್ರಾಂಶಗಳನ್ನು ಈಗ ಹೊಚ್ಚ ಹೊಸ ವಿಂಡೋಸ್ ಆವೃತ್ತಿಗಳಿಗಾಗಿಯೇ ರೂಪಿಸಲಾಗುತ್ತಿರುವುದರಿಂದ, ಎಕ್ಸ್‌ಪಿಯಲ್ಲಿ ಅವುಗಳು ಕೆಲಸ ಮಾಡದಿರುವ ಸಾಧ್ಯತೆಯೂ ಇದೆ.

ಮೂರನೇ ಸಾಧ್ಯತೆ ಎಂದರೆ, ಹೊಸ ವಿಂಡೋಸ್ 8 ಸಿಸ್ಟಂ ಖರೀದಿಸುವುದು. ಇದರ ಬಗ್ಗೆ ಹೆಚ್ಚೇನೂ ಹೇಳಬೇಕಾಗಿಲ್ಲ.

12 ವರ್ಷಗಳಿಂದ ನಮ್ಮೊಡನಿದ್ದ ಎಕ್ಸ್‌ಪಿ ಕಾರ್ಯಾಚರಣೆ ವ್ಯವಸ್ಥೆ ನಿಧಾನವಾಗಿ ತೆರೆಮರೆಗೆ ಸರಿಯುತ್ತಿರುವುದಕ್ಕೆ ಪ್ರಮುಖ ಕಾರಣವೆಂದರೆ, ತಂತ್ರಜ್ಞಾನದಲ್ಲಿ ಆಗುತ್ತಿರುವ ನವೀನ ಬದಲಾವಣೆಗಳು. ಹೊಸ ತಂತ್ರಾಂಶಗಳು ಹಳೆಯ ಎಕ್ಸ್‌ಪಿ ಕಾರ್ಯಾಚರಣಾ ವ್ಯವಸ್ಥೆಯಲ್ಲಿ ಕೆಲಸ ಮಾಡದಿರುವ ಸಾಧ್ಯತೆಗಳೂ ಇವೆ.

ಒಂದು ಆಶಾದಾಯಕ ಮಾತಿದೆ. ವಿಂಡೋಸ್ 8ರ ಬೇಸಿಕ್ ಕಾರ್ಯಾಚರಣಾ ವ್ಯವಸ್ಥೆಯನ್ನು ಉಚಿತವಾಗಿಯೇ ಆ ಕಂಪನಿಯು ಒದಗಿಸುವ ಸಾಧ್ಯತೆಗಳಿವೆ. ಆದರೆ, ಇದು ಓಎಸ್ ಅನ್ನು ಎಲ್ಲರಿಗೂ ಉಚಿತವಾಗಿ ನೀಡುತ್ತದೆಯೋ, ಅಥವಾ ಹೊಸ ಕಂಪ್ಯೂಟರ್ ಖರೀದಿಸುವವರಿಗೆ ಮಾತ್ರ ಈ ಕೊಡುಗೆಯೋ, ಸ್ಪಷ್ಟವಾಗಿಲ್ಲ. ಮಾರುಕಟ್ಟೆಯಲ್ಲಿ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು, ಜನರು ವಿಂಡೋಸ್ ಬದಲು, ಆ್ಯಪಲ್ ಕಂಪನಿಯ ಮ್ಯಾಕ್ ಹಾಗೂ ಉಚಿತವಾಗಿಯೇ ಲಭ್ಯವಿರುವ ಉಬುಂಟು (http://www.ubuntu.com/) ಕಾರ್ಯಾಚರಣಾ ವ್ಯವಸ್ಥೆಗಳತ್ತ ಮುಖ ಮಾಡದಂತಿರಲು ಮೈಕ್ರೋಸಾಫ್ಟ್ ಈ ಕ್ರಮಕ್ಕೆ ಮುಂದಾಗುತ್ತಿದೆ ಎನ್ನಲಾಗುತ್ತಿದೆ. ಈ ಊಹಾಪೋಹ ಎಷ್ಟು ನಿಜ ಎಂಬುದಕ್ಕಾಗಿ ಸ್ವಲ್ಪ ದಿನ ಕಾದು ನೋಡಬೇಕು.