ಜನ ಸಾಮಾನ್ಯರತ್ತ ತಂತ್ರಜ್ಞಾನ – Gadget-Technology Info Towards Common Man

Posts tagged ‘battery’

ಬ್ಯಾಟರಿ ಚಾರ್ಜ್ ಮಾಡಲು ವಿದ್ಯುತ್ ಕಡಿತದ ಸಮಸ್ಯೆಯೇ? ಪವರ್ ಬ್ಯಾಂಕ್ ಇದೆ!

ವಿಜಯ ಕರ್ನಾಟಕ ಅಂಕಣ, ಮಾಹಿತಿ @ ತಂತ್ರಜ್ಞಾನ: ನವೆಂಬರ್ 11, 2013

ಆಂಡ್ರಾಯ್ಡ್ ಇರಲಿ, ಬೇರಾವುದೇ ಮೊಬೈಲ್ ಅಥವಾ ಟ್ಯಾಬ್ಲೆಟ್, ಸ್ಮಾರ್ಟ್‌ಫೋನ್, ಫ್ಯಾಬ್ಲೆಟ್‌ಗಳಿರಲಿ; ಎಲ್ಲಕ್ಕೂ ಅತೀ ಹೆಚ್ಚು ಕಾಡುವ ಸಮಸ್ಯೆಯೆಂದರೆ ಬ್ಯಾಟರಿ. ಬಳಕೆ ಹೆಚ್ಚು ಮಾಡಿದಷ್ಟೂ ಅದರ ಬ್ಯಾಟರಿ ಚಾರ್ಜ್ ದಿಢೀರನೇ ಖಾಲಿಯಾಗಿಬಿಡುತ್ತದೆ. ತಂತ್ರಜ್ಞಾನದಲ್ಲಿ ಎಷ್ಟೇ ಸುಧಾರಣೆ ಮಾಡಲಾಗಿದ್ದರೂ, ಬ್ಯಾಟರಿ ಪವರ್ ಹೆಚ್ಚು ಕಾಲ ಬರುವುದು ಹೇಗೆಂಬುದರತ್ತ ಮೊಬೈಲ್ ಸಾಧನ ತಯಾರಿಸುವ ಕಂಪನಿಗಳು ಹೆಚ್ಚು ಗಮನ ಹರಿಸಿದಂತಿಲ್ಲ.

ಆಂಡ್ರಾಯ್ಡ್, ವಿಂಡೋಸ್, ಬ್ಲ್ಯಾಕ್‌ಬೆರಿ, ಐಒಎಸ್ (ಆ್ಯಪಲ್), ಸಿಂಬಿಯಾನ್ ಮುಂತಾದ ಕಾರ್ಯಾಚರಣಾ ವ್ಯವಸ್ಥೆಗಳುಳ್ಳ ಸ್ಮಾರ್ಟ್ ಫೋನ್‌ಗಳಲ್ಲಿ 2ಜಿ ಅಥವಾ 3ಜಿ ಇಂಟರ್ನೆಟ್ ಸಂಪರ್ಕ, ವೈಫೈ, ಬ್ಲೂಟೂತ್, ಮ್ಯಾಪ್ ಮಾತ್ರವಲ್ಲದೆ ಗೇಮ್ಸ್, ವೀಡಿಯೋ ವೀಕ್ಷಣೆ… ಇತ್ಯಾದಿಗಳ ಸಾಧ್ಯತೆಗಳಿಂದಾಗಿ ಬ್ಯಾಟರಿಯ ಆವಶ್ಯಕತೆ ಮತ್ತು ಬಳಕೆ ಸಹಜವಾಗಿ ಹೆಚ್ಚಿರುತ್ತದೆ. “ಟಾಕ್ ಟೈಮ್ 11 ಗಂಟೆ, ಸ್ಟ್ಯಾಂಡ್‌ಬೈ ಟೈಮ್ 300 ಗಂಟೆ” ಅಂತೆಲ್ಲಾ ಆಯಾ ಸೆಲ್ ಫೋನ್‌ಗಳ ಸ್ಪೆಸಿಫಿಕೇಶನ್ ವಿಭಾಗಗಳಲ್ಲಿ ಬರೆಯಲಾಗಿರುತ್ತದೆ. ಇದನ್ನೇ ಉದಾಹರಣೆಯಾಗಿ ತೆಗೆದುಕೊಂಡರೆ, ಫೋನ್‌ನಲ್ಲಿ ಬೇರಾವುದೇ ಕೆಲಸ ಮಾಡದೆ, 11 ಗಂಟೆ ನಿರಂತರವಾಗಿ ಮಾತನಾಡಬಹುದು ಮತ್ತು ಏನೂ ಬಳಸದೆ ಇಟ್ಟರೆ 300 ಗಂಟೆಗಳ ಕಾಲ ಬ್ಯಾಟರಿ ಇರುತ್ತದೆ ಎಂದರ್ಥ. ಇಲ್ಲಿ ಟಾಕ್ ಟೈಮ್ 11 ಗಂಟೆ ಇದೆ ಎಂದುಕೊಂಡು ಬೀಗಬೇಕಾಗಿಲ್ಲ. ಇಂಟರ್ನೆಟ್ ಇದ್ದರೆ ಮತ್ತು ನಿಮ್ಮ ಸಾಧನದ ಸ್ಕ್ರೀನ್‌ನ ಬ್ರೈಟ್‌ನೆಸ್ ಜಾಸ್ತಿ ಇದ್ದರೆ ಬ್ಯಾಟರಿ ಚಾರ್ಜ್ ಬೇಗನೇ ಕಡಿಮೆಯಾಗುತ್ತದೆ ಎಂಬುದು ನೆನಪಿರಲಿ. ಇದಲ್ಲದೆ, ಬ್ಯಾಟರಿ ಸ್ಪೆಸಿಫಿಕೇಶನ್ ವಿಭಾಗದಲ್ಲಿ, ಕನಿಷ್ಠ 2000- 3000 mAh ಗಿಂತಲೂ ಹೆಚ್ಚು ಸಂಖ್ಯೆ ನಮೂದಿಸಿರುವ ಬ್ಯಾಟರಿಗಳುಳ್ಳ ಸಾಧನಗಳನ್ನೇ ಖರೀದಿಸುವುದು ಆರಂಭದ ಜಾಣತನವೆನ್ನಿಸಬಹುದು.

ಈಗ ಆಯಾ ಮೊಬೈಲ್ ಕಾರ್ಯಾಚರಣಾ ವ್ಯವಸ್ಥೆಗಳ ಆನ್‌ಲೈನ್ ಮಾರುಕಟ್ಟೆಗಳಲ್ಲಿ (ಅಂದರೆ ಗೂಗಲ್ ಪ್ಲೇ, ವಿಂಡೋಸ್ ಮುಂತಾದ ಆ್ಯಪ್ ಸ್ಟೋರ್‌ಗಳು), ಬ್ಯಾಟರಿ ಉಳಿತಾಯಕ್ಕಾಗಿ ಸಾಕಷ್ಟು ಬ್ಯಾಟರಿ ಸೇವರ್ ಆ್ಯಪ್‌ಗಳಿರುತ್ತವೆ. ಅವುಗಳನ್ನು ಅಳವಡಿಸಿಕೊಂಡರೆ, ನಿಮಗೆ ತಿಳಿಯದಂತೆ ಬ್ಯಾಕ್‌ಗ್ರೌಂಡ್‌ನಲ್ಲಿ ಚಾಲನೆಯಲ್ಲಿರುವ ಆ್ಯಪ್‌ಗಳನ್ನು ನಿಲ್ಲಿಸಬಹುದು ಮತ್ತು ಸ್ಕ್ರೀನ್‌ನ ಬ್ರೈಟ್‌ನೆಸ್ ಅನ್ನು ಬೇಕಾದಷ್ಟೇ ಹೊಂದಿಸಿಕೊಳ್ಳಬಹುದು. ಇನ್ನು ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಂತೂ ಪವರ್ ಕಟ್ ಸಮಸ್ಯೆ ಇದ್ದೇ ಇರುವುದರಿಂದ ಮೊಬೈಲ್‌ಗೆ ಚಾರ್ಜ್ ಮಾಡುವುದು ಕಷ್ಟವಾಗಬಹುದು. ಪದೇ ಪದೇ ಕರೆಂಟ್ ಹೋದಾಗ, ಬ್ಯಾಟರಿಗೆ ಚಾರ್ಜ್ ನೀಡಬಲ್ಲ ಬ್ಯಾಂಕ್ ಒಂದಿದ್ದರೆ? ಹೀಗೆ ಯೋಚಿಸಿದಾಗಲೇ ಹುಟ್ಟಿಕೊಂಡಿದ್ದು ಪವರ್ ಬ್ಯಾಂಕ್, ಬ್ಯಾಟರಿ ಬ್ಯಾಂಕ್‌ಗಳೆಂದೂ ಕರೆಯಲಾಗುವ ಪೋರ್ಟಬಲ್ ಚಾರ್ಜಿಂಗ್ ಉಪಕರಣಗಳು.

ಬ್ಯಾಟರಿ ಸಮಸ್ಯೆಗೆ ಇಂತಹಾ ಪರ್ಯಾಯ ವ್ಯವಸ್ಥೆಯಿರುವುದು ಹೆಚ್ಚಿನವರಿಗೆ ಗೊತ್ತಿರಲಾರದು. ಹೊಸ ಸ್ಮಾರ್ಟ್ ಫೋನ್‌ಗಳೆಲ್ಲವೂ ಯುಎಸ್‌ಬಿ ಪೋರ್ಟ್ ಹೊಂದಿರುತ್ತವೆ. ಮಿನಿ ಪೋರ್ಟ್‌ನಿಂದ ಯುಎಸ್‌ಬಿ ಪೋರ್ಟ್‌ಗೆ ಸಂಪರ್ಕಿಸುವ ಕೇಬಲ್‌ಗಳು ಕೂಡ ದೊರೆಯುತ್ತವೆ. ಯಾವುದೇ ಮೊಬೈಲ್ ಫೋನನ್ನು ಕಂಪ್ಯೂಟರ್‌ಗೆ ಸಂಪರ್ಕಿಸಲು ಈ ಡೇಟಾ ಕಾರ್ಡ್ ಎಂದೂ ಕರೆಯಲಾಗುವ ಕೇಬಲ್‌ಗಳು ಸಹಕಾರಿ.

ಇದು ಹೇಗೆ ಕೆಲಸ ಮಾಡುತ್ತದೆಯೆಂದರೆ, ಪೋರ್ಟಬಲ್ ಚಾರ್ಜರ್‌ಗಳನ್ನು ನಾವು ಒಮ್ಮೆ ಪೂರ್ತಿಯಾಗಿ ಚಾರ್ಜ್ ಮಾಡಿಸಿಟ್ಟುಕೊಂಡರಾಯಿತು. ಅದನ್ನು ಈ ಡೇಟಾ ಕೇಬಲ್ ಮೂಲಕ ನಿಮ್ಮ ಮೊಬೈಲ್ ಸಾಧನಕ್ಕೆ ಸಂಪರ್ಕಿಸಿದರೆ, ಬೇಕೆಂದಾಗ ಚಾರ್ಜ್ ಮಾಡುತ್ತಿರಬಹುದು. ಇದು ಜೇಬಿನಲ್ಲಿಟ್ಟುಕೊಂಡು ಅಥವಾ ಕೈಚೀಲದಲ್ಲಿಟ್ಟುಕೊಂಡು ಒಯ್ಯುವುದಕ್ಕೂ ಸುಲಭವಾದ ಗಾತ್ರದಲ್ಲಿರುತ್ತದೆ. ವಿವಿಧ ಗಾತ್ರಗಳು, ಆಕಾರಗಳಲ್ಲಿ ಮಾರುಕಟ್ಟೆಗೆ ಬಂದಿರುವ ಈ ಪೋರ್ಟಬಲ್ ಬ್ಯಾಟರಿ ಯುನಿಟ್‌ಗಳು, ವಿದ್ಯುತ್ ಕಡಿತದಂತಹಾ ಅದೆಷ್ಟೋ ಸಂದರ್ಭಗಳಲ್ಲಿ ಹೆಚ್ಚು ನೆರವಿಗೆ ಬರಬಹುದು.

ಇತ್ತೀಚೆಗೆ ಕೆಲವು ಸ್ಮಾರ್ಟ್ ಫೋನ್ ಕಂಪನಿಗಳು ತಮ್ಮ ಸಾಧನವನ್ನು ಕೊಳ್ಳುವವರಿಗೆ ಉಚಿತವಾಗಿಯೇ ಈ ಪವರ್ ಬ್ಯಾಂಕ್ ಅಥವಾ ಟ್ರಾವೆಲ್ ಚಾರ್ಜರ್‌ಗಳ ಕೊಡುಗೆಗಳನ್ನು ಒದಗಿಸುತ್ತವೆ. ಯಾವುದೇ ಮೊಬೈಲ್ ಮಳಿಗೆಗಳಲ್ಲಿ ಲಭ್ಯವಿರುವ ಈ ಪವರ್ ಬ್ಯಾಂಕ್‌ಗಳ ಬೆಲೆಯು 800 ರೂ. ಆಸುಪಾಸಿನಿಂದ ಆರಂಭವಾಗಿ ಬ್ಯಾಟರಿ ಸಾಮರ್ಥ್ಯಕ್ಕೆ ಅನುಗುಣವಾಗಿ ಐದಾರು ಸಾವಿರ ರೂ.ವರೆಗೂ ಇರುತ್ತದೆ. ಕಡಿಮೆ ಬ್ಯಾಟರಿ ಸಾಮರ್ಥ್ಯವಿರುವವುಗಳನ್ನು ಖರೀದಿಸಿದರೆ, ಒಮ್ಮೆ ಮೊಬೈಲ್ ಚಾರ್ಜ್ ಮಾಡುವಾಗಲೇ ಬ್ಯಾಟರಿಯ ಚಾರ್ಜ್ ಖಾಲಿಯಾಗಬಹುದು. ಹೀಗಾಗಿ ಕನಿಷ್ಠ 2000 mAh ಇರುವ ಪವರ್ ಬ್ಯಾಂಕ್‌ಗಳನ್ನು ಆಯ್ದುಕೊಳ್ಳಿ. ಈ ಪವರ್ ಬ್ಯಾಂಕನ್ನು ಚಾರ್ಜ್ ಮಾಡಿಟ್ಟುಕೊಂಡರೆ ರೈಲಿನಲ್ಲಿ, ಬಸ್ಸಿನಲ್ಲಿ ಪ್ರಯಾಣಿಸುವಾಗಲೂ ಮೊಬೈಲ್‌ನ ಬ್ಯಾಟರಿ ಚಾರ್ಜ್ ಖಾಲಿಯಾದ ಸಂದರ್ಭದಲ್ಲಿ ಅನುಕೂಲಕ್ಕೆ ಬರಬಹುದು. ಸೋನಿ, ನೋಕಿಯಾ, ಎವರೆಡಿ ಮುಂತಾದ ಪರಿಚಿತ ಬ್ರ್ಯಾಂಡ್‌ಗಳ ಪವರ್ ಬ್ಯಾಂಕ್‌ಗಳು ಲಭ್ಯ ಇವೆ.

ಸ್ಮಾರ್ಟ್‌ಫೋನ್ ಬ್ಯಾಟರಿ ಪದೇ ಪದೇ ರೀಚಾರ್ಜ್ ಮಾಡಬೇಕಾಗುತ್ತದೆಯೇ? ಹೀಗೆ ಮಾಡಿ

ವಿಜಯ ಕರ್ನಾಟಕ ಅಂಕಣ ಮಾಹಿತಿ@ತಂತ್ರಜ್ಞಾನ– 37 – ಜೂನ್ 3, 2013

ಸ್ಮಾರ್ಟ್‌ಫೋನ್‌ಗಳ ಬ್ಯಾಟರಿ ಬೇಗನೇ ಚಾರ್ಜ್ ಕಳೆದುಕೊಳ್ಳುತ್ತದೆ ಎಂಬುದು ಹೆಚ್ಚಿನವರ ಕೊರಗು. ಇವು ಇಂಟರ್ನೆಟ್ ಮೂಲಕ ನಾವು ಸದಾ ಆನ್‌ಲೈನ್‌ನಲ್ಲಿ ಇರುವಂತೆ ನೋಡಿಕೊಳ್ಳುತ್ತವೆಯಾದರೂ, ಅದಕ್ಕಾಗಿ ಸಾಕಷ್ಟು ವಿದ್ಯುಚ್ಛಕ್ತಿ ವ್ಯಯವಾಗುತ್ತದೆ. ಸಾಮಾನ್ಯವಾಗಿ, ಕೇವಲ ಮಾತುಕತೆಗಾಗಿ ನಿಮ್ಮ ಸ್ಮಾರ್ಟ್‌ಫೋನನ್ನು ಬಳಸಿದರೆ ಎರಡು ಮೂರು ದಿನ ಬ್ಯಾಟರಿ ರೀಚಾರ್ಜ್ ಮಾಡುವ ಅಗತ್ಯವಿರುವುದಿಲ್ಲ. ಆದರೆ ಇಂಟರ್ನೆಟ್, ವಿಶೇಷವಾಗಿ 2ಜಿ ಗಿಂತಲೂ 3ಜಿ ಸಂಪರ್ಕವನ್ನು ಬಳಸಿದರೆ ಹೆಚ್ಚಿನ ಪ್ರಮಾಣದಲ್ಲಿ ಬ್ಯಾಟರಿ ಶಕ್ತಿ ಬೇಕಾಗುತ್ತದೆ ಎಂಬುದು ಗಮನದಲ್ಲಿರಲಿ. ಇದೇ ಕಾರಣಕ್ಕೆ, ಹೆಚ್ಚಿನ ಸ್ಮಾರ್ಟ್‌ಫೋನ್‌ಗಳನ್ನು ದಿನಕ್ಕೆ ಒಂದಕ್ಕಿಂತ ಹೆಚ್ಚು ಬಾರಿ ಚಾರ್ಜ್ ಮಾಡಬೇಕಾಗುತ್ತದೆ.

ಹೀಗಾಗಿ, ಇಂಟರ್ನೆಟ್ ಅಗತ್ಯವಿಲ್ಲದಿದ್ದಾಗ ಅದರ ಡೇಟಾ ಸಂಪರ್ಕವನ್ನು ಆಫ್ ಮಾಡಿಡುವುದು ಒಳ್ಳೆಯದು. ಯಾವುದೇ ಸ್ಮಾರ್ಟ್‌ಫೋನ್‌ನ ಸೆಟ್ಟಿಂಗ್ಸ್ ಮೆನುವಿನಲ್ಲಿ, ವೈರ್‌ಲೆಸ್ ಅಥವಾ ನೆಟ್‌ವರ್ಕ್ ಅಥವಾ ಇಂಟರ್ನೆಟ್ ಸೆಟ್ಟಿಂಗ್ ಅಥವಾ ಮೊಬೈಲ್ ನೆಟ್‌ವರ್ಕ್ ಎಂದಿರುವಲ್ಲಿ ಹೋಗಿ, ಡೇಟಾ ಕನೆಕ್ಷನ್ ಅಥವಾ ಡೇಟ ಎಂದಿರುವುದನ್ನು ಆಫ್ ಮಾಡಿಬಿಡಿ. (ಇಲ್ಲಿ ಹೆಸರಿಸಲಾದ ಡೇಟಾ, ನೆಟ್‌ವರ್ಕ್, ಕನೆಕ್ಷನ್ ಮುಂತಾದ ಪದಗಳಿಗಾಗಿ ಹುಡುಕಿ. ಯಾಕೆಂದರೆ ಕಂಪನಿಗಳಿಗೆ ಅನುಗುಣವಾಗಿ ಅವುಗಳ ಜತೆಗಿರುವ ಪದಗಳು ಬದಲಾಗಬಹುದು.)

ಇನ್ನು, ಆಯಾ ಸ್ಮಾರ್ಟ್‌ಫೋನ್‌ಗಳ ಕಾರ್ಯಾಚರಣಾ ವ್ಯವಸ್ಥೆಯ (ಆಂಡ್ರಾಯ್ಡ್, ಐಫೋನ್, ವಿಂಡೋಸ್ ಮುಂತಾದ) ಅಪ್ಲಿಕೇಶನ್ ಸ್ಟೋರ್‌ಗಳಲ್ಲಿ ತ್ರಾಸವಿಲ್ಲದೆ ಡೇಟಾ ಆಫ್ ಮಾಡುವ ಆಪ್‌ಗಳೂ ಲಭ್ಯ. ಇವು ಬ್ಯಾಟರಿ ಉಳಿತಾಯ ಮಾಡಿಸಬಲ್ಲ ಆಪ್‌ಗಳ (ಬ್ಯಾಟರಿ ಸೇವರ್ ಅಂತ ಹುಡುಕಿದರೆ ದೊರೆಯುತ್ತವೆ) ಜತೆಯಲ್ಲಿಯೇ ಇರುತ್ತವೆ.

ಇದಲ್ಲದೆ, ಬ್ರಾಂಡೆಡ್ ಮೊಬೈಲ್ ಫೋನ್‌ಗಳಲ್ಲಿ, ಉದಾಹರಣೆಗೆ ಸ್ಯಾಮ್ಸಂಗ್‌ನ ಸುಧಾರಿತ ಗ್ಯಾಲಕ್ಸಿ ಫೋನ್‌ಗಳಲ್ಲಿ, ಆನ್/ಆಫ್ ಮಾಡುವ ಸ್ವಿಚ್ಚನ್ನು ಒಮ್ಮೆ ಒತ್ತಿದರೆ, ಅಲ್ಲಿ ಫ್ಲೈಟ್/ಸೈಲೆಂಟ್ ಮೋಡ್, ಸ್ವಿಚ್ ಆಫ್ ಹಾಗೂ ಡೇಟಾ ಆಫ್ ಎಂಬ ಮೋಡ್‌ಗಳ ಆಯ್ಕೆ ಲಭ್ಯವಿರುತ್ತದೆ. ಅಲ್ಲಿಂದಲೇ ನೆಟ್ ಕನೆಕ್ಷನ್ ನಿಯಂತ್ರಿಸಬಹುದು. ಇತ್ತೀಚಿನ ಕೆಲವು ಆವೃತ್ತಿಗಳಲ್ಲಿ ಸ್ಕ್ರೀನ್ ಮೇಲ್ಭಾಗದಿಂದ ಕೆಳಗೆ ಸ್ವೈಪ್ ಮಾಡಿದರೆ, ಬ್ಯಾಟರಿ ಉಳಿತಾಯಕ್ಕೆ ಅನುಕೂಲ ಮಾಡಿಕೊಡುವ ಬಟನ್‌ಗಳು ಇರುತ್ತವೆ. ಈ ಬಟನ್‌ಗಳನ್ನು ಬಳಸಿ ಬ್ಲೂಟೂತ್, ವೈಫೈ, ಜಿಪಿಎಸ್ (ಅಗತ್ಯವಿದ್ದಾಗ ಮಾತ್ರ) ಆನ್ ಅಥವಾ ಆಫ್ ಮಾಡಬಹುದು. ಆಫ್ ಇದ್ದರೆ ಬ್ಯಾಟರಿ ಉಳಿತಾಯ ಜಾಸ್ತಿ. ಸ್ಕ್ರೀನ್‌ನ ಬ್ರೈಟ್‌ನೆಸ್ ಕಡಿಮೆ ಮಾಡುವುದು ಕೂಡ ಬ್ಯಾಟರಿ ಉಳಿತಾಯಕ್ಕೆ ಪೂರಕ.

ಒಂದೇ ಕ್ಲಿಕ್ ಮೂಲಕ ಬ್ಯಾಟರಿ ಬಳಕೆಯನ್ನು ತಗ್ಗಿಸುವ ಮೂಲಕ, ಸ್ಮಾರ್ಟ್‌ಫೋನ್‌ಗಳು ದೀರ್ಘ ಕಾಲ ಚಾರ್ಜ್ ಆಗಿರುವಂತೆ ಈ ಬ್ಯಾಟರಿ ಸೇವರ್ ಅಪ್ಲಿಕೇಶನ್‌ಗಳು ನೋಡಿಕೊಳ್ಳುತ್ತವೆ. ಇವು ಮುಖ್ಯವಾಗಿ ಸ್ಕ್ರೀನ್ ಬ್ರೈಟ್‌ನೆಸ್ ಹೊಂದಿಸುತ್ತವೆ ಮತ್ತು ಬ್ಯಾಕ್‌ಗ್ರೌಂಡ್‌ನಲ್ಲಿ ರನ್ ಆಗುತ್ತಿರುವ ಅನಗತ್ಯ ಅಪ್ಲಿಕೇಶನ್‌ಗಳನ್ನು ಸ್ಥಗಿತಗೊಳಿಸುತ್ತವೆ.

ಇಷ್ಟು ನೆನಪಿಡಿ: ಇಂಟರ್ನೆಟ್ (ಡೇಟಾ) ಸಂಪರ್ಕ, ಜಿಪಿಎಸ್ (ಮ್ಯಾಪ್‌ನಲ್ಲಿ ನಿಮ್ಮ ಇರುವಿಕೆಯನ್ನು ತಿಳಿಯಲು ಬಳಸಲಾಗುವ ವ್ಯವಸ್ಥೆ), ವೈ-ಫೈ, ಬ್ಲೂಟೂತ್‌ – ಇವುಗಳನ್ನು ಅವಶ್ಯವಿದ್ದಾಗ ಮಾತ್ರ ಆನ್ ಮಾಡಿ. ಸ್ಕ್ರೀನ್ ಬ್ರೈಟ್‌ನೆಟ್ ಕಡಿಮೆಯಾಗಿರಲಿ, ರಿಂಗಿಂಗ್ ವಾಲ್ಯೂಮ್ ಕೂಡ ಕೇಳಿಸುವಷ್ಟು ಮಟ್ಟದಲ್ಲಿರಲಿ. ಬಳಕೆಯಲ್ಲಿಲ್ಲದಾಗ ಸ್ಕ್ರೀನ್ ಆಫ್ ಆಗುವಂತೆ (5-10 ಸೆಕೆಂಡ್ ಅಂತರದಲ್ಲಿ) ಸೆಟ್ಟಿಂಗ್ಸ್‌ನಲ್ಲಿ ಹೊಂದಿಸಿಕೊಳ್ಳಿ. ದೂರ ಪ್ರಯಾಣದಲ್ಲಿದ್ದರೆ, ನೆಟ್‌ವರ್ಕ್ ಸಿಗ್ನಲ್‌ಗಾಗಿ ನಿಮ್ಮ ಫೋನ್ ಸರ್ಚ್ ಮಾಡುತ್ತಲೇ ಇರುವುದರಿಂದಲೂ ಬ್ಯಾಟರಿ ಖರ್ಚಾಗುವುದರಿಂದ, ಅದನ್ನು ಫ್ಲೈಟ್ ಮೋಡ್‌ನಲ್ಲಿಡುವುದು ಸೂಕ್ತ. ಇವುಗಳನ್ನು ಪಾಲಿಸಿದಲ್ಲಿ, ಪದೇ ಪದೇ ಚಾರ್ಜ್ ಮಾಡುವ ಶ್ರಮ ತಪ್ಪಿಸಬಹುದು.

ಸ್ಮಾರ್ಟ್ ಫೋನ್ ಖರೀದಿಗೆ ಟಿಪ್ಸ್

ವಿಜಯ ಕರ್ನಾಟಕ ಅಂಕಣ “ಮಾಹಿತಿ@ತಂತ್ರಜ್ಞಾನ-9” ಅಕ್ಟೋಬರ್ 22, 2012

ಸಾಮಾನ್ಯ ಮೊಬೈಲ್ ಫೋನ್‌ಗಳಲ್ಲಿರುವ ವೈಶಿಷ್ಟ್ಯಗಳೊಂದಿಗೆ ಇಂಟರ್ನೆಟ್, ವೈ-ಫೈ, ಟಚ್ ಸ್ಕ್ರೀನ್, ಜಿಪಿಎಸ್ ಮ್ಯಾಪ್ ಮುಂತಾದವುಗಳೂ ಇರುವವು ಸ್ಮಾರ್ಟ್ ಫೋನ್‌ಗಳು. ಮಾರುಕಟ್ಟೆಯಲ್ಲೀಗ ಕೈಗೆಟಕುವ ಬೆಲೆಗಳಲ್ಲಿ ಸ್ಮಾರ್ಟ್‌ಫೋನ್ ಹಾಗೂ ಅಗಲ ಪರದೆಯುಳ್ಳ ಟ್ಯಾಬ್ಲೆಟ್‌ಫೋನ್‌ಗಳು ದಿನಕ್ಕೊಂದರಂತೆ ಬಿಡುಗಡೆಯಾಗುತ್ತಿವೆ. ಆಯ್ಕೆಗಳು ಹೆಚ್ಚಿರುವಾಗ ಗೊಂದಲವೂ ಹೆಚ್ಚು. ಹೀಗಾಗಿ ಇವನ್ನು ಖರೀದಿಸುವ ಮೊದಲು ನೀವು ಮುಖ್ಯವಾಗಿ ಪರಿಗಣಿಸಬೇಕಾಗಿರುವ ಅಂಶಗಳು ಇಲ್ಲಿವೆ:

ಬ್ಯಾಟರಿ: ಮೊಬೈಲ್ ಫೋನ್‌ಗಳಲ್ಲಿ ಬ್ಯಾಟರಿ ಉಳಿಸುವ ಕುರಿತು ಹಿಂದಿನ ಅಂಕಣವೊಂದರಲ್ಲಿ ತಿಳಿಸಿದ್ದೆ. ಮತ್ತಷ್ಟು ಮಾಹಿತಿ. ಫೋನ್ ಖರೀದಿಸುವಾಗಲೇ ಬ್ಯಾಟರಿ ಬಗ್ಗೆ ಗಮನ ಹರಿಸಿ. ಮಿಲಿ ಆಂಪೀರ್ ಅವರ್ (milliampere hours) mAh ನಿಂದ ಬ್ಯಾಟರಿ ಸಾಮರ್ಥ್ಯ ಅಳೆಯಲಾಗುತ್ತದೆ. ಹಲವು ಅಪ್ಲಿಕೇಶನ್‌ಗಳು ರನ್ ಆಗಬೇಕಿದ್ದರೆ ಹೆಚ್ಚು ಬ್ಯಾಟರಿಗಳು ಬೇಕಾಗಿರುವುದರಿಂದ ಹೆಚ್ಚು ಮೌಲ್ಯವಿರುವುದನ್ನು ನೋಡಬೇಕು. ಸಾಮಾನ್ಯವಾಗಿ ಈಗ ಬಹುತೇಕ ಫೋನ್‌ಗಳ ಬ್ಯಾಟರಿ ಮೌಲ್ಯವು 1200 mAh ದಿಂದಲೇ ಆರಂಭವಾಗಿ 4000 mAh, 8000 mAh ವರೆಗೂ ಸಾಮರ್ಥ್ಯ ಹೊಂದಿವೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಬ್ಯಾಟರಿಯ ಮೌಲ್ಯ ಹೆಚ್ಚಿದ್ದರೂ, ನಿಮ್ಮ ಸಾಧನದ ಸ್ಕ್ರೀನ್ ಗಾತ್ರ ದೊಡ್ಡದಾಗಿದ್ದರೆ, ಬ್ಯಾಟರಿ ಹೆಚ್ಚು ಹೀರಿಕೊಳ್ಳುತ್ತದೆ. ಸದ್ಯಕ್ಕೆ ಬ್ಯಾಟರಿ ತಂತ್ರಜ್ಞಾನದಲ್ಲಿ ನೋಕಿಯಾ ಮತ್ತು ಮೋಟೋರೋಲಗಳು ಮುಂಚೂಣಿಯಲ್ಲಿದ್ದರೆ, ಆಪಲ್ ಮತ್ತು ಸ್ಯಾಮ್ಸಂಗ್‌ಗಳು ನಂತರದ ಸ್ಥಾನದಲ್ಲಿವೆ. ನೀವು ಖರೀದಿಸುವ ಸ್ಮಾರ್ಟ್‌ಫೋನ್ ಬ್ಯಾಟರಿ 1500 mAh ಗಿಂತ ಜಾಸ್ತಿ ಇರುವಂತೆ ನೋಡಿಕೊಳ್ಳಿ.

ಸ್ಕ್ರೀನ್: ಎರಡನೇ ವಿಚಾರ ಸ್ಕ್ರೀನ್ ರೆಸೊಲ್ಯುಶನ್. ಇದು ನಿಮ್ಮ ಫೋನ್‌ನಲ್ಲಿ ಚಿತ್ರಗಳು, ವೀಡಿಯೊಗಳು ಎಷ್ಟು ಸ್ಫುಟವಾಗಿ, ಸ್ಪಷ್ಟವಾಗಿ ಕಾಣಿಸಬಲ್ಲವು ಎಂಬುದನ್ನು ಸೂಚಿಸುತ್ತದೆ. ಸ್ಕ್ರೀನ್‌ನ ರೆಸೊಲ್ಯುಶನ್ ನಿರ್ಧರಿಸಲು Pixel ಎಂಬ ಮಾನಕವನ್ನು ಬಳಸಲಾಗುತ್ತದೆ. ಹೆಚ್ಚು ಪಿಕ್ಸೆಲ್ ಇದ್ದಷ್ಟೂ ಸ್ಕ್ರೀನ್, ಚಿತ್ರಗಳು ತುಂಬಾ ನಿಖರವಾಗಿ ಕಾಣಿಸುತ್ತವೆ. ಆದರೆ ಸಾಧನದ ಸ್ಕ್ರೀನ್ ದೊಡ್ಡದಾಗಿದ್ದರೆ? ಶಾರ್ಪ್‌ನೆಸ್ ಕಡಿಮೆಯಾಗುವುದು ಸಹಜ. ಉದಾಹರಣೆಗೆ, ಒಂದು ಸ್ಮಾರ್ಟ್‌ಫೋನ್‌ನ ರೆಸೊಲ್ಯುಶನ್ 1136×640 ಪಿಕ್ಸೆಲ್ಸ್ ಇದ್ದು, ಅದರ ಸ್ಕ್ರೀನ್ ಗಾತ್ರ 4 ಇಂಚು. ಇನ್ನೊಂದರ ರೆಸೊಲ್ಯುಶನ್ 1280×720 ಇದ್ದು, ಅದರ ಸ್ಕ್ರೀನ್ ಗಾತ್ರವು 4.8 ಇಂಚು ಇದೆಯೆಂದಾದರೆ, ಪಿಕ್ಸೆಲ್ ನೋಡಿದಾಗ ಎರಡನೆಯದು ಜಾಸ್ತಿಯಾದರೂ, ಅದರ ಸ್ಕ್ರೀನ್ ಗಾತ್ರ ದೊಡ್ಡದಿರುವುದರಿಂದ ಚಿತ್ರದ ಶಾರ್ಪ್‌ನೆಸ್ ಚೆನ್ನಾಗಿರುವುದು ಮೊದಲನೆಯದರಲ್ಲಿ!

ಕನೆಕ್ಟಿವಿಟಿ: ಸ್ಮಾರ್ಟ್‌ಫೋನ್‌ಗಳನ್ನು ಮಾತಿಗಿಂತಲೂ ಹೆಚ್ಚಾಗಿ ಇಮೇಲ್, ಅಂತರಜಾಲ ಜಾಲಾಟ ಮುಂತಾದ ಚಟುವಟಿಕೆಗಳಿಗಾಗಿಯೇ ಬಳಸುತ್ತಿರುವುದರಿಂದ ನೆಟ್‌ವರ್ಕ್ ಸ್ಪೀಡ್ ಬಗ್ಗೆ ನಾವು ಹೆಚ್ಚು ಗಮನ ಹರಿಸಬೇಕಾಗುತ್ತದೆ. ಈಗ ಸಾಮಾನ್ಯ ಮೊಬೈಲು ಫೋನ್‌ಗಳಲ್ಲಿ ಬಳಸುತ್ತಿರುವುದು ಜಿಎಸ್‌ಎಂ, ಅಥವಾ 2ಜಿ ನೆಟ್‌ವರ್ಕ್ ಮತ್ತು ಕೊಂಚ ಮುಂದುವರಿದ 2.5ಜಿ (GPRS/EDGE) ತಂತ್ರಜ್ಞಾನ. ಇದು ಇತ್ತೀಚೆಗೆ ಹಳೆಯದಾಗುತ್ತಿದೆ. 3ಜಿ (UMTS) ಅಥವಾ 3.5ಜಿ (HSPA) ಇಲ್ಲವೇ ಮುಂದಿನ 4ಜಿ (LTE) ಬೆಂಬಲಿಸುವ ಸ್ಮಾರ್ಟ್‌ಫೋನ್‌ಗಳನ್ನೇ ಖರೀದಿಸುವುದು ಜಾಣತನ. 4ಜಿ ತಂತ್ರಜ್ಞಾನ ಭಾರತದಲ್ಲಿ ಈಗಷ್ಟೇ ಕಾಲಿಟ್ಟಿದ್ದು, ಬೆಂಗಳೂರು, ಕೋಲ್ಕತಾ, ಪುಣೆಗಳಲ್ಲಿ ಏರ್‌ಟೆಲ್ ಒದಗಿಸುತ್ತಿದೆ. ಈಗಿನ ಅತ್ಯಾಧುನಿಕ ಸ್ಮಾರ್ಟ್‌ಫೋನ್‌ಗಳು 4ಜಿ ತಂತ್ರಜ್ಞಾನಕ್ಕೆ ಸಜ್ಜಾಗಿಯೇ ಮಾರುಕಟ್ಟೆಗೆ ಬರುತ್ತಿವೆ.

ಪ್ರೊಸೆಸರ್: ಇನ್ನು ಅತ್ಯಂತ ಪ್ರಮುಖವಾದ ಅಂಶವೆಂದರೆ ಪ್ರೊಸೆಸರ್‌ಗಳು. ಸಾಧನವು ಹಲವು ಕಾರ್ಯಗಳನ್ನು ಏಕಕಾಲದಲ್ಲಿ (ಮಲ್ಟಿಟಾಸ್ಕಿಂಗ್) ಮಾಡಲು ಇವು ಸಹಾಯಕ. ಪ್ರೊಸೆಸರ್‌ಗಳ ವೇಗ – ಮೆಗಾಹರ್ಟ್ಸ್ (MHz) ಮತ್ತು ಗಿಗಾಹರ್ಟ್ಸ್ (GHz) ಅಲ್ಲದೆ ಅವು ಸಿಂಗಲ್ ಕೋರ್, ಡ್ಯುಯಲ್ ಕೋರ್ ಅಥವಾ ಕ್ವಾಡ್ (4) ಕೋರ್ ಪ್ರೊಸೆಸರುಗಳೇ ಎಂಬುದೂ ಪ್ರಧಾನವಾಗುತ್ತದೆ. ಸಿಂಪಲ್ಲಾಗಿ ಹೇಳುವುದಾದರೆ, ಮೆಗಾಹರ್ಟ್ಸ್ ಮರೆತುಬಿಡಿ, ಕನಿಷ್ಠ 1 GHz (1.2, 1.5 ಅಥವಾ 2ರವರೆಗೂ ಲಭ್ಯ) ಇರುವ ಮತ್ತು ಕನಿಷ್ಠ Dual Core ಪ್ರೊಸೆಸರ್‌ಗಳಿರುವ ಸಾಧನಗಳನ್ನೇ ಖರೀದಿಸಿ.

ಉಳಿದಂತೆ, ಸಾಧ್ಯವಿದ್ದಷ್ಟೂ ಇಂಟರ್ನಲ್ ಮೆಮೊರಿ ಜಾಸ್ತಿ (1ಜಿಬಿಗಿಂತ ಹೆಚ್ಚು) ಇರಲಿ, ಕ್ಯಾಮರಾ ಪ್ರಿಯರಾಗಿದ್ದರೆ 1ಕ್ಕಿಂತ ಹೆಚ್ಚು ಮೆಗಾಪಿಕ್ಸೆಲ್ ಇರಲಿ, ಸಾಧನದ ಕಾರ್ಯಾಚರಣಾ ವ್ಯವಸ್ಥೆ (ಒಎಸ್)ಯನ್ನು ಉನ್ನತೀಕರಿಸಬಹುದೇ (ಉದಾ. ಆಂಡ್ರಾಯ್ಡ್ ಜಿಂಜರ್‌ಬ್ರೆಡ್‌ನಿಂದ ಜೆಲ್ಲಿಬೀನ್‌ಗೆ ಅಥವಾ ಐಒಎಸ್ 4ರಿಂದ ಐಒಎಸ್5ಕ್ಕೆ…. ಅಪ್‌ಗ್ರೇಡ್ ಮಾಡಬಹುದೇ) ಅಂತಾನೂ ಕೇಳಿಕೊಳ್ಳಿ