ಜನ ಸಾಮಾನ್ಯರತ್ತ ತಂತ್ರಜ್ಞಾನ – Gadget-Technology Info Towards Common Man

Archive for ಫೆಬ್ರವರಿ, 2013

ಮೊಬೈಲ್ ಅಥವಾ ಕಂಪ್ಯೂಟರಿನಲ್ಲಿ ಫೋಟೋ ತಿದ್ದಲು ಪಿಕ್ಸೆಲಾರ್ ತಂತ್ರಾಂಶ

ಜನ ಸಾಮಾನ್ಯರಿಗಾಗಿ ಮಾಹಿತಿ@ತಂತ್ರಜ್ಞಾನ- ವಿ.ಕ.ಅಂಕಣ-25 (ಫೆಬ್ರವರಿ 25, 2013)

ಅಡೋಬಿ ಕಂಪನಿಯ ಫೋಟೋ ಶಾಪ್ ಎಂಬುದು ಯಾವುದೇ ಫೋಟೋಗಳನ್ನು ತಿದ್ದಲು, ವಕ್ರಗೊಳಿಸಲು, ವಿರೂಪಗೊಳಿಸಲು, ಸು-ರೂಪಗೊಳಿಸಲು ಉಪಯೋಗವಾಗುವ, ಬಹುತೇಕ ವೃತ್ತಿಪರ ಛಾಯಾಗ್ರಾಹಕರು ಬಳಸುತ್ತಿರುವ ತಂತ್ರಾಂಶ. ಅದನ್ನು ಬ್ಯಾನರ್ ರಚಿಸಲು, ಅಕ್ಷರಗಳನ್ನು ಸೇರಿಸಿ ಚಿತ್ರಗಳಿಗೆ ಅಡಿಬರಹ – ಶೀರ್ಷಿಕೆ ನೀಡಲು ಕೂಡ ಬಳಸಲಾಗುತ್ತದೆ. ಆದರೆ ಇದಕ್ಕೆ ಹಣ ತೆರಬೇಕಾಗುತ್ತದೆ.

ಹೀಗಾಗಿ ಉಚಿತವಾಗಿ ಲಭ್ಯವಿರುವ, ಹೆಚ್ಚು ಭಾರವಾಗಿಲ್ಲದ ಫೋಟೋಫಿಲ್ಟರ್ (Photofiltre) ಬಗ್ಗೆ ತಿಳಿಸಿದ್ದೆ. ಯುನಿಕೋಡ್ ಬೆಂಬಲ ಇಲ್ಲವೆಂಬ ಅಂಶವೊಂದು ಬಿಟ್ಟರೆ ಇದು ಉತ್ತಮ ತಂತ್ರಾಂಶ. ಈಗ, ಫೋಟೋಶಾಪ್ ಮಾಡಬಹುದಾದ ಎಲ್ಲ ಕೆಲಸಗಳನ್ನೂ ನಿಭಾಯಿಸಬಲ್ಲ ಹಾಗೂ ಇದರೊಂದಿಗೆ ಯುನಿಕೋಡ್ ಅಕ್ಷರಗಳನ್ನೂ ಬೆಂಬಲಿಸಬಲ್ಲ ಹೊಸದೊಂದು ಫೋಟೋ ಎಡಿಟರ್ ಬಗ್ಗೆ ತಿಳಿದುಕೊಳ್ಳೋಣ. ಇದರ ವಿಶೇಷತೆಯೆಂದರೆ, ಇದನ್ನು ಕಂಪ್ಯೂಟರಿನಲ್ಲಿ ಇನ್‌ಸ್ಟಾಲ್ ಮಾಡಿಕೊಳ್ಳಬೇಕಿಲ್ಲ! ಆದರೆ ಸದಾ ಕಾಲ ಇಂಟರ್ನೆಟ್ ಸಂಪರ್ಕ ಬೇಕಿರುವ ಆನ್‌ಲೈನ್ ಟೂಲ್ ಇದು.

ನಿಮ್ಮ ಬ್ರೌಸರ್‌ನಲ್ಲಿ (ಗೂಗಲ್ ಕ್ರೋಮ್/ಇಂಟರ್ನೆಟ್ ಎಕ್ಸ್‌ಪ್ಲೋರರ್/ಮೊಝಿಲ್ಲಾ ಫೈರ್‌ಫಾಕ್ಸ್) pixlr.com/editor/ ಎಂಬ ಯುಆರ್‌ಎಲ್‌ಗೆ ಹೋದರೆ ನಿಮ್ಮ ಕಂಪ್ಯೂಟರಿನಲ್ಲಿ ಫೋಟೋಶಾಪ್ ತಂತ್ರಾಂಶವನ್ನೇ ಅಳವಡಿಸಲಾಗಿದೆಯೇ ಎಂಬಷ್ಟು ಅಚ್ಚರಿಯಾಗಿ ಇರುವ ಪುಟವೊಂದು ಕಾಣಿಸಿಕೊಳ್ಳುತ್ತದೆ. ಇದರ ಮೂಲಕ ನಿಮ್ಮ ಕಂಪ್ಯೂಟರಿನಲ್ಲಿರುವ ಯಾವುದೇ ಫೋಟೋ ಓಪನ್ ಮಾಡಿದರೆ, ನಿಮಗೆ ಬೇಕಾದಂತೆ ಅದನ್ನು ತಿದ್ದುಪಡಿ ಮಾಡಬಹುದು, ಚಿತ್ರ-ವಿಚಿತ್ರವಾದ ಮತ್ತು ಶಿಷ್ಟ-ವಿಶಿಷ್ಟವಾದ ಎಫೆಕ್ಟ್‌ಗಳನ್ನೂ ಚಿತ್ರಕ್ಕೆ ನೀಡಬಹುದು.

ಸ್ಮಾರ್ಟ್‌ಫೋನ್‌ಗಳಲ್ಲಿಯೂ ಇದನ್ನು ಬಳಸಬಹುದು. ಆಂಡ್ರಾಯ್ಡ್ ಅಥವಾ ಐಫೋನ್ ಬಳಸುತ್ತಿರುವವರಿಗೆ ಇದರ ಪರಿಚಯವಿರಬಹುದು. ಇಲ್ಲವೆಂದಾದರೆ, ಆಂಡ್ರಾಯ್ಡ್‌ನ ಗೂಗಲ್ ಪ್ಲೇ ಅಥವಾ ಐಫೋನ್‌ನ ಐಟ್ಯೂನ್ಸ್ ಎಂಬ ಅಪ್ಲಿಕೇಶನ್ ಸ್ಟೋರ್‌ಗೆ ಹೋಗಿ, pixlr ಅಂತ ಹುಡುಕಿದರೆ, ತಕ್ಷಣವೇ ಈ ಆಪ್ ಕಾಣಿಸಿಕೊಳ್ಳುತ್ತದೆ. ಅದನ್ನು ಡೌನ್‌ಲೋಡ್ ಮಾಡಿಕೊಂಡು ಇನ್‌ಸ್ಟಾಲ್ ಮಾಡಿಕೊಂಡುಬಿಡಿ. ಇನ್ನು ಫೋಟೋಗಳಿಗೆ ವಿಭಿನ್ನ ಎಫೆಕ್ಟ್‌ಗಳನ್ನು ನೀಡಬೇಕಿದ್ದರೆ, Pixlr-o-matic ಎಂಬುದನ್ನು ಹುಡುಕಿ ಇನ್‌ಸ್ಟಾಲ್ ಮಾಡಿಕೊಳ್ಳಿ.

ಹಾಗಾದರೆ, ಫೋಟೋ ತಿದ್ದುಪಡಿಯ ತಂತ್ರಾಂಶಗಳಿಂದ ನಮಗೆ ಯಾಕೆ ಬೇಕು ಅಂತ ಕೇಳುವವರಿಗಾಗಿ ಕೊಂಚ ಮಾಹಿತಿ ಇಲ್ಲಿದೆ:

* ನಿಮ್ಮಲ್ಲಿರುವ ಶುಭ ಸಮಾರಂಭದ ಫೋಟೋಗಳನ್ನು ಯಾರಿಗಾದರೂ ಕಳುಹಿಸಬೇಕಿದ್ದರೆ, ಚಿತ್ರವನ್ನು ಚಿಕ್ಕದಾಗಿಸಿ ಅದರ ಗಾತ್ರವನ್ನು ಕುಗ್ಗಿಸಿದರೆ, ಕಳುಹಿಸುವಾಗ ಇಂಟರ್ನೆಟ್ ವೆಚ್ಚದಲ್ಲಿ ಉಳಿತಾಯವಾಗುತ್ತದೆ. ಇಲ್ಲವಾದಲ್ಲಿ ಕೆಲವು ಫೋಟೋಗಳಂತೂ 5-6 ಎಂಬಿಯಷ್ಟು ತೂಕವಿರುತ್ತವೆ.

* ನಿಮ್ಮ ಡಿಜಿಟಲ್ ಕ್ಯಾಮರಾದಿಂದ ನೀವು ಫೋಟೋ ತೆಗೆದಾಗ, ಕೆಲವರ ಕಣ್ಣುಗಳು ಮಾತ್ರವೇ ಕೆಂಪಗೆ ಕಾಣುವುದನ್ನು ಗಮನಿಸಿರಬಹುದು. ಈ ಕೆಂಪು ಎಫೆಕ್ಟ್ ತೆಗೆಯಬೇಕಿದ್ದರೆ Red Eye Reduction ಅನ್ನೋ ಟೂಲ್ ಬಳಸಬಹುದು.

* ಒಳ್ಳೆಯ ಹೂವಿನ, ಸುಂದರ ಪ್ರಕೃತಿಯ, ಅತ್ಯುತ್ತಮ ದೃಶ್ಯವುಳ್ಳ ಚಿತ್ರ ತೆಗೆದಿದ್ದೀರಿ. ಇದನ್ನೇ ನೀವು ಶುಭಾಶಯ ಪತ್ರದ ರೂಪದಲ್ಲಿ ನಿಮ್ಮ ಗೆಳೆಯರಿಗೆ ಕಳುಹಿಸಲು ಇಚ್ಛಿಸಿದರೆ, ಅದರಲ್ಲೇ ಕನ್ನಡದಲ್ಲಿ/ಇಂಗ್ಲಿಷಿನಲ್ಲಿ ಶುಭಾಶಯ ಬರೆದು, ನಿಮ್ಮ ಹೆಸರು ಹಾಕಿ ಇಮೇಲ್ ಮಾಡಬಹುದು ಅಥವಾ ಅದರ ಕಲರ್ ಪ್ರಿಂಟೌಟ್ ತೆಗೆದು ಸಾಮಾನ್ಯ ಅಂಚೆಯ ಮೂಲಕ ಕಳುಹಿಸಬಹುದು. ಇದು ಯುನಿಕೋಡ್ ಅಕ್ಷರಗಳನ್ನು ಕೂಡ ಬೆಂಬಲಿಸುತ್ತದೆ.

* ಜೀವನದ ಸುಂದರ ಕ್ಷಣಗಳ ಫೋಟೋ ತೆಗೆದಿದ್ದರೆ, ಅದರ ದಿನಾಂಕ ಮತ್ತು ಇತರ ಬರಹಗಳನ್ನು ಬರೆದು, ನಿಮಗೆ ಬೇಕಾದ ಗಾತ್ರಕ್ಕೆ ಹಿಗ್ಗಿಸಿ ಪ್ರಿಂಟೌಟ್ ತೆಗೆದು, ಆಲ್ಬಂ ಮಾಡಿಸಿಟ್ಟುಕೊಳ್ಳಬಹುದು.

* ಯಾರದೇ ಮನಸ್ಸಿಗೆ ನೋಯದಂತೆ ಕೀಟಲೆ ಮಾಡಬೇಕಿದ್ದರೆ, ಅವರ ಅಥವಾ ನಿಮ್ಮದೇ ಫೋಟೋ ತೆಗೆದು, ಮುಖಕ್ಕೆ ಮೀಸೆಯನ್ನೋ, ದಾಡಿಯನ್ನೋ ಬಿಡಿಸಬಹುದು; ಮೂಗನ್ನು ವಕ್ರವಾಗಿಸಿಯೋ, ಮುಖವನ್ನೇ ಎಳೆದಾಡಿದಂತೆ ಉದ್ದವಾಗಿಸಿಯೋ ತಿದ್ದಿ, ಅವರೊಂದಿಗೆ ಹಂಚಿಕೊಂಡು ನಗು ಅರಳಿಸಬಹುದು.

* ಯಾರದ್ದೋ ದೇಹಕ್ಕೆ ಯಾರದ್ದೋ ತಲೆಯನ್ನು ಜೋಡಿಸಿ (ಮಾರ್ಫಿಂಗ್ ಮಾಡಿ) ಬ್ಲ್ಯಾಕ್‌ಮೇಲ್ ಮಾಡುವ ದುಷ್ಕೃತ್ಯಗಳಿಗೂ ಇದೇ ತಂತ್ರಾಂಶವನ್ನು ಬಳಸುವ ಅಪಾಯವೂ ಇರುವುದರಿಂದ ಈ ಬಗ್ಗೆ ಕಟ್ಟೆಚ್ಚರ ವಹಿಸಬೇಕಾಗುತ್ತದೆ. ಫೋಟೋ ಒರಿಜಿನಲ್ಲೋ ಅಥವಾ ಮಾರ್ಪಡಿಸಿದ್ದೋ ಅಂತ ಪೊಲೀಸರು ಕಂಡುಹಿಡಿಯಬಲ್ಲಷ್ಟು ತಂತ್ರಜ್ಞಾನ ಮುಂದುವರಿದಿದೆ ಎಂಬುದು ಗಮನದಲ್ಲಿರಲಿ.

ಮೊಬೈಲ್ ಸಾಧನದ IMEI ಸಂಖ್ಯೆ ಭದ್ರವಾಗಿ ಕಾಯ್ದಿಟ್ಟುಕೊಳ್ಳಿ

ಜನ ಸಾಮಾನ್ಯರಿಗಾಗಿ ಮಾಹಿತಿ@ತಂತ್ರಜ್ಞಾನ- ವಿ.ಕ.ಅಂಕಣ-24 (ಫೆಬ್ರವರಿ 18, 2013)

ನಿಮ್ಮ ಮೊಬೈಲ್ ಫೋನ್ ಕಳೆದುಹೋಗಿರುತ್ತದೆ ಅಥವಾ ನೀವೆಲ್ಲೋ ಮರೆತಿರುತ್ತೀರಿ, ಯಾರಾದರೂ ಅದಕ್ಕೆ ಕೈ ಕೊಟ್ಟಿರುತ್ತಾರೆ. ಏನು ಮಾಡಬೇಕು ಅಂತ ಯೋಚಿಸುತ್ತಿದ್ದೀರಾ? ವರ್ಷಗಳ ಹಿಂದೆ, ಎಲ್ಲ ಮೊಬೈಲ್ ಫೋನ್‌ಗಳಿಗೆ ಐಎಂಇಐ (IMEI) ಸಂಖ್ಯೆ ಕಡ್ಡಾಯ ಎಂದು ಸರಕಾರವು ಆದೇಶ ಹೊರಡಿಸಿದ್ದು ನೆನಪಿದೆಯೇ? ಅಲ್ಲದೆ, ಚೈನಾ ಸೆಟ್‌ಗಳನ್ನು ತೆಗೆದುಕೊಳ್ಳಬೇಡಿ, ಅದರಲ್ಲಿ ಐಎಂಇಐ ಸಂಖ್ಯೆ ಇರುವುದಿಲ್ಲ ಅಂತೆಲ್ಲಾ ಹೇಳುತ್ತಿದ್ದುದನ್ನು ಕೇಳಿದ್ದೀರಾ?

ಹೌದು. ಮೊಬೈಲ್ ಫೋನ್‌ಗಳಲ್ಲಿ ಐಎಂಇಐ ಸಂಖ್ಯೆ ಎಂಬುದು ಅತ್ಯಂತ ಮಹತ್ವದ್ದು. ಇದನ್ನು ಬಳಸಿ ನಿಮ್ಮ ಕಳೆದುಹೋದ ಮೊಬೈಲ್ ಫೋನನ್ನು ಪತ್ತೆ ಹಚ್ಚಬಹುದು, ಅಥವಾ ಉಗ್ರಗಾಮಿಗಳೋ, ಕಳ್ಳಕಾಕರೋ ನಿಮ್ಮ ಮೊಬೈಲ್ ಬಳಸಿ ಮಾಡಬಾರದ್ದನ್ನು ಮಾಡದಂತೆ ತಡೆಗಟ್ಟಲೂಬಹುದು. ಅದು ಹೇಗಂತೀರಾ?

ಐಎಂಇಐ ಎಂದರೆ ಇಂಟರ್‌ನ್ಯಾಷನಲ್ ಮೊಬೈಲ್ ಇಕ್ವಿಪ್‌ಮೆಂಟ್ ಐಡೆಂಟಿಟಿ (ಮೊಬೈಲ್ ಉಪಕರಣದ ಅಂತಾರಾಷ್ಟ್ರೀಯ ಗುರುತಿನ ಸಂಖ್ಯೆ). ಪ್ರತಿ ಮೊಬೈಲ್ ಫೋನ್‌ಗೂ ಇದು ಪ್ರತ್ಯೇಕ ಮತ್ತು ವಿಶಿಷ್ಟವಾಗಿದ್ದು, 15 ಅಂಕಿಗಳನ್ನು ಹೊಂದಿರುತ್ತದೆ. ಹೆಚ್ಚಾಗಿ ಬ್ಯಾಟರಿ ತೆಗೆದಾಗ ಅಲ್ಲಿನ ಕುಳಿಯಲ್ಲಿ ಇದು ಗೋಚರಿಸುತ್ತದೆ. ಮೊಬೈಲ್ ಸಾಧನಗಳ ಪ್ಯಾಕೇಜ್‌ನ ಹೊರಗೆ ಕೂಡ ಈ ಸಂಖ್ಯೆಯನ್ನು ನಮೂದಿಸಲಾಗಿರುತ್ತದೆ. ಹೀಗಾಗಿ ಈ ಸಂಖ್ಯೆಯನ್ನು ಎಲ್ಲಾದರೂ ಜೋಪಾನವಾಗಿ ತೆಗೆದಿಡುವುದು ಅತೀ ಅಗತ್ಯ.

ಹಳೆಯ ಮೊಬೈಲ್ ಫೋನ್‌ಗಳ ಪ್ಯಾಕೇಜ್ ಬಾಕ್ಸ್ ನಿಮ್ಮಲ್ಲಿಲ್ಲದಿದ್ದರೆ, ಅಥವಾ ಬ್ಯಾಟರಿಯ ಅಡಿಯಲ್ಲಿ ಈ ಸಂಖ್ಯೆ ಕಾಣಿಸದೇ ಇದ್ದರೆ, ಮೊಬೈಲ್ ಫೋನ್‌ನಲ್ಲಿ *#06# ಅಂತ ಟೈಪ್ ಮಾಡಿ, ಕರೆ ಬಟನ್ ಒತ್ತಿದರೆ, ನಿಮ್ಮ ಸಾಧನದ ಐಎಂಇಐ ಸಂಖ್ಯೆಯು ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳುತ್ತದೆ. ಅತ್ಯಾಧುನಿಕ ಸ್ಮಾರ್ಟ್‌ಫೋನ್‌ಗಳಲ್ಲಿ ಸೆಟ್ಟಿಂಗ್ಸ್‌ನಲ್ಲಿ “About the Device” ಅಂತ ಇರುವಲ್ಲಿ ಈ ಸಂಖ್ಯೆಯನ್ನು ಕಾಣಬಹುದು.

ಈಗ ನಿಮ್ಮ ಮೊಬೈಲ್ ಫೋನ್ ಕಳೆದುಹೋಯಿತು ಅಂತ ಇಟ್ಟುಕೊಳ್ಳೋಣ. ಆವಾಗ ನೀವು ಪೊಲೀಸರಿಗೆ ದೂರು ನೀಡಬೇಕಿದ್ದರೂ, ಹ್ಯಾಂಡ್‌ಸೆಟ್‌ನ ಐಎಂಇಐ ಸಂಖ್ಯೆಯನ್ನು ಕೇಳಲಾಗುತ್ತದೆ. ಹೀಗಾಗಿ ಇದು ಅತ್ಯಗತ್ಯ. ಅಂತೆಯೇ, ನಿಮ್ಮ ಸೆಲ್ ಆಪರೇಟರ್‌ಗೆ ಹ್ಯಾಂಡ್‌ಸೆಟ್ ಕಳೆದುಹೋಗಿರುವ ಸಂಗತಿಯನ್ನು ತಿಳಿಸಿದರೆ, ಅವರು ಕೂಡ ಐಎಂಇಐ ಸಂಖ್ಯೆಯನ್ನು ಕೇಳುತ್ತಾರೆ.

ಯಾಕೆ? ಈ ಸಂಖ್ಯೆಯನ್ನು ಮೊಬೈಲ್ ಆಪರೇಟರ್‌ಗಳು ಪಡೆದುಕೊಂಡು, ಆ ಸಂಖ್ಯೆಯನ್ನು ಬ್ಲ್ಯಾಕ್‌ಲಿಸ್ಟ್‌ನಲ್ಲಿ ಸೇರಿಸಿ, ಅದಕ್ಕೆ (ಅಂದರೆ ಹ್ಯಾಂಡ್‌ಸೆಟ್‌ಗೆ) ತಮ್ಮ ಸೇವೆಯನ್ನು ನಿಲ್ಲಿಸುತ್ತಾರೆ. ಹೀಗಾಗಿ ಮೊಬೈಲ್ ಫೋನನ್ನು ಕದ್ದವರಿಗೆ ಸಿಮ್ ಕಾರ್ಡ್ ಬದಲಾಯಿಸಿದರೂ, ಇದು ಕೇಂದ್ರೀಕೃತ ವ್ಯವಸ್ಥೆಯಾಗಿರುವುದರಿಂದ ಆ ಫೋನನ್ನು ಬಳಸುವುದು ಸಾಧ್ಯವಾಗುವುದಿಲ್ಲ. ಅಂದರೆ ಅದನ್ನು ಕದ್ದರೂ ಅವನಿಗದು ಪ್ರಯೋಜನವಾಗುವುದಿಲ್ಲ! ಅದೇ ರೀತಿ, ಪೊಲೀಸರು ಉಪಗ್ರಹ ಆಧಾರಿತ ಜಿಪಿಎಸ್ (ಗ್ಲೋಬಲ್ ಪೊಸಿಶನಿಂಗ್ ಸಿಸ್ಟಂ) ತಂತ್ರಜ್ಞಾನದ ಮೂಲಕ, ಈ ನಿರ್ದಿಷ್ಟ ಐಎಂಇಐ ಸಂಖ್ಯೆಯುಳ್ಳ ಸಾಧನವು ಎಲ್ಲಿದೆ ಎಂದು ಪತ್ತೆಹಚ್ಚಬಲ್ಲರು.

ಕೆಲವು ವರ್ಷಗಳಿಂದೀಚೆಗೆ ಉಗ್ರಗಾಮಿಗಳು, ಕ್ರಿಮಿನಲ್‌ಗಳು ಮೊಬೈಲ್ ಫೋನ್‌ಗಳ ಮೂಲಕ ಕಾರ್ಯಾಚರಿಸುತ್ತಿರುವುದರಿಂದ ಐಎಂಇಐ ಸಂಖ್ಯೆ ಕಡ್ಡಾಯ ಮಾಡಿ ಭಾರತ ಸರಕಾರ ಆದೇಶ ಹೊರಡಿಸಿದೆ. ಇದರಿಂದ ಜಿಪಿಎಸ್ ಬಳಸಿ ಕ್ರಿಮಿನಲ್‌ಗಳ ಜಾಡು ಹಿಡಿಯಬಹುದಾಗಿದೆ.

ಇನ್ನೂ ಒಂದು ವ್ಯವಸ್ಥೆಯಿದೆ. ನೀವು http://www.trackimei.com ಎಂಬಲ್ಲಿ ನಿಮ್ಮ ಮೊಬೈಲ್ ಫೋನನ್ನು ಐಎಂಇಐ ಸಂಖ್ಯೆ, ಖರೀದಿ ಮಾಡಿದ್ದೆಲ್ಲಿಂದ, ಅದರ ಬಿಲ್ ಮುಂತಾದ ವಿವರಗಳೊಂದಿಗೆ ನೋಂದಾಯಿಸಿಕೊಂಡರೆ, ಮೊಬೈಲ್ ಕಳವಾದರೆ ಈ ಐಎಂಇಐ ಸಂಖ್ಯೆಯಿರುವ ಮೊಬೈಲ್ ಫೋನ್ ಎಲ್ಲಿದೆ ಎಂದು ಪತ್ತೆ ಹಚ್ಚಲು ನಕ್ಷೆಯ ಮೂಲಕ ನೆರವು ದೊರೆಯುತ್ತದೆ.

ವೈರ್ ಇಲ್ಲದೆ ಚಾರ್ಜಿಂಗ್ ಮತ್ತು ಎನ್‌ಎಫ್‌ಸಿ ತಂತ್ರಜ್ಞಾನ

ಜನ ಸಾಮಾನ್ಯರಿಗಾಗಿ ಮಾಹಿತಿ@ತಂತ್ರಜ್ಞಾನ- ವಿ.ಕ.ಅಂಕಣ-23 (ಫೆಬ್ರವರಿ 11, 2013)

ಬ್ಲೂಟೂತ್ ಮೂಲಕ, ವೈ-ಫೈ ಮೂಲಕ ಯಾವುದೇ ವೈರ್ (ಅಥವಾ ಕೇಬಲ್) ಸಂಪರ್ಕವಿಲ್ಲದೆಯೇ ಮೊಬೈಲ್ ಫೋನ್‌ಗಳ ನಡುವೆ ಯಾವುದೇ ಹಾಡುಗಳು, ಚಿತ್ರಗಳು ಮತ್ತಿತರ ಫೈಲುಗಳನ್ನು ಶೇರ್ ಮಾಡಿಕೊಳ್ಳುವುದು ಬಹುಶಃ ಹೆಚ್ಚಿನವರಿಗೆ ಗೊತ್ತಿದೆ. ಈಗ ಸ್ಮಾರ್ಟ್‌ಫೋನ್‌ಗಳಲ್ಲಿ (ಅಂದರೆ ಇಂಟರ್ನೆಟ್ ಸಂಪರ್ಕವಿರುವ, ವೈ-ಫೈ ತಂತ್ರಜ್ಞಾನವುಳ್ಳ ಹಾಗೂ ಹಲವು ಆಧುನಿಕ ತಂತ್ರಜ್ಞಾನ ಕಾರ್ಯಗಳನ್ನು ಮಾಡಬಲ್ಲ ಮೊಬೈಲ್ ಫೋನ್‌ಗಳು) ಹೊಸದೊಂದು ಸ್ಪೆಸಿಫಿಕೇಶನ್ ಕೇಳಿಬರುತ್ತಿದೆ. ಅದುವೇ ಎನ್‌ಎಫ್‌ಸಿ (ನಿಯರ್ ಫೀಲ್ಡ್ ಕಮ್ಯುನಿಕೇಷನ್).

ಇದರರ್ಥ ಯಾವುದೇ ಎರಡು ಮೊಬೈಲ್ ಫೋನ್‌ಗಳಲ್ಲಿ ಎನ್ಎಫ್‌ಸಿ ವ್ಯವಸ್ಥೆ ಇದೆಯೆಂದಾದರೆ, ಅವುಗಳನ್ನು ಒಂದಿಷ್ಟು ನಿರ್ದಿಷ್ಟ ಅಂತರದೊಳಗೆ ಪರಸ್ಪರ ಇರಿಸಿದರೆ ಅಥವಾ ಪರಸ್ಪರ ತಗುಲಿಸಿದರೆ, ಯಾವುದೇ ಫೈಲ್‌ಗಳನ್ನು ಶೇರ್ ಮಾಡಿಕೊಳ್ಳುವುದು (ಹಂಚುವುದು) ಸುಲಭ. ಇದನ್ನು ತಂತ್ರಜ್ಞಾನದ ಪರಿಭಾಷೆಯಲ್ಲಿ ‘ಡೇಟಾ ಎಕ್ಸ್‌ಚೇಂಜ್’ ಅಂತಾನೂ ಕರೀತಾರೆ.

ವೈ-ಫೈ ಅಥವಾ ಬ್ಲೂಟೂತ್ ತಂತ್ರಜ್ಞಾನಗಳಿಗೆ ಹೋಲಿಸಿದರೆ ಇದು ಅತ್ಯಂತ ಸರಳ. ಈಗ ಮಾರುಕಟ್ಟೆಯಲ್ಲಿರುವ ಸಾಕಷ್ಟು ಬಗೆಯ ಕಂಪನಿಗಳ ಸ್ಮಾರ್ಟ್‌ಫೋನ್‌ಗಳಲ್ಲಿ ಕೆಲಸ ಮಾಡುವಂತಾಗಲು, ಪ್ರಮುಖ ಮೊಬೈಲ್ ತಯಾರಿಕಾ ಕಂಪನಿಗಳಾದ ನೋಕಿಯಾ, ಫಿಲಿಪ್ಸ್, ಸೋನಿ ಮುಂತಾದ 160 ಕಂಪನಿಗಳು ಸೇರಿಕೊಂಡು 2004ರಲ್ಲೇ ಎನ್‌ಎಫ್‌ಸಿ ಫೋರಂ ಎಂಬ ಸಂಘಟನೆಯೊಂದನ್ನು ಕಟ್ಟಿಕೊಂಡಿದ್ದವು. ಹೀಗಾಗಿ ಮುಂಬರುವ ಆಧುನಿಕ ಸ್ಮಾರ್ಟ್‌ಫೋನ್‌ಗಳಲ್ಲಿ ಎನ್ಎಫ್‌ಸಿ ಎಂಬುದು ಹೊಸ ಅನುಕೂಲಕರ ಸೌಲಭ್ಯವಾಗಲಿದೆ.

ತೀರಾ ಸಮೀಪದಲ್ಲಿ ಎರಡು ಎನ್‌ಎಫ್‌ಸಿ ಸಾಧನಗಳನ್ನು ಇರಿಸಿದಾಗ ಮಾತ್ರವೇ ಫೈಲುಗಳನ್ನು ಹಂಚಲು ಅಥವಾ ಬೇರಾವುದೇ ಕಾರ್ಯ ಮಾಡಲು ಸಾಧ್ಯವಾಗುವುದರಿಂದಾಗಿ, ಸುರಕ್ಷತೆ ಹೆಚ್ಚು. (ವೈ-ಫೈ ಅಥವಾ ಬ್ಲೂಟೂತ್‌ಗಳು ಆನ್ ಆಗಿದ್ದರೆ, ಬೇರೆ ಸಾಧನಗಳ ಕಣ್ಣಿಗೆ ಬೀಳುವ ಮತ್ತು ಅವುಗಳಿಂದ ವೈರಸ್‌ಗಳು ಇಲ್ಲವೇ ಅನಗತ್ಯ ಫೈಲುಗಳು ಬರುವ ಸಾಧ್ಯತೆ ಇರುತ್ತವೆ). ಇಲ್ಲಿ ಒಂದೆರಡು ಸೆಂಟಿಮೀಟರು ಅಂತರದೊಳಗೇ ಎರಡೂ ಫೋನುಗಳು ಅಥವಾ ಸಾಧನಗಳು ಇರಬೇಕಾಗುತ್ತದೆ.

ವೈರ್‌ಲೆಸ್ ಚಾರ್ಜಿಂಗ್
ವೈರ್‌ಲೆಸ್ ಚಾರ್ಜಿಂಗ್ ಕೂಡ ಹೊಸ ತಂತ್ರಜ್ಞಾನ. ಅತ್ಯಾಧುನಿಕ ಸ್ಮಾರ್ಟ್‌ಫೋನ್‌ಗಳು ವೈರ್‌ಲೆಸ್ ಚಾರ್ಜಿಂಗ್ (ಅಂದರೆ ಚಾರ್ಜರ್ ವೈರ್ ಇಲ್ಲದೆಯೇ ಬ್ಯಾಟರಿ ಚಾರ್ಜ್ ಮಾಡುವ ಪ್ರಕ್ರಿಯೆ) ಸೌಲಭ್ಯದೊಂದಿಗೆ ಮಾರುಕಟ್ಟೆಗೆ ಬರಲಾರಂಭಿಸಿವೆ.

Qi (ಉಚ್ಚಾರಣೆ ‘ಚೀ’) ತಂತ್ರಜ್ಞಾನದ ಒಂದು ತೆಳು ಹಾಳೆಯ ಮೇಲೆ ನಿಮ್ಮ ಫೋನನ್ನು ಇರಿಸಿದರೆ ಆಯಿತು, ತಾನಾಗಿಯೇ ಚಾರ್ಜ್ ಆಗುತ್ತದೆ. ಅದಕ್ಕೆ ಮತ್ತು ಮೊಬೈಲ್ ಸಾಧನಕ್ಕೆ ಪರಸ್ಪರ ಪಿನ್, ವೈರ್ ಜೋಡಿಸುವ, ತೆಗೆಯುವ ತ್ರಾಸ ಇರುವುದಿಲ್ಲ.

ಇದರೊಂದಿಗೆ, ಮತ್ತೊಂದು ಆಧುನಿಕ ವ್ಯವಸ್ಥೆಯೂ ಕಾಣಿಸಿಕೊಳ್ಳತೊಡಗಿದೆ. ಅದೆಂದರೆ ಪವರ್‌ಅಪ್ ವೈರ್‌ಲೆಸ್ ಚಾರ್ಜಿಂಗ್ ಸ್ಪೀಕರ್ ಅಂತ. ಅಂದರೆ, ನಿಮ್ಮ ಫೋನಿನಲ್ಲಿ ಎನ್‌ಎಫ್‌ಸಿ ತಂತ್ರಜ್ಞಾನವಿದ್ದು, ಸಾಕಷ್ಟು ಹಾಡುಗಳಿವೆಯೆಂದಾದರೆ, ಈ ಸ್ಪೀಕರ್ ಖರೀದಿಸಿ, ಅದರ ಮೇಲಿಟ್ಟರೆ, ಸ್ಪೀಕರ್ ಮೂಲಕ ನಿಮ್ಮ ಫೋನಿನಲ್ಲಿರುವ ಹಾಡನ್ನೂ ಕೇಳಬಹುದು, ಜತೆಜತೆಗೇ Qi ತಂತ್ರಜ್ಞಾನದ ಮೂಲಕ ನಿಮ್ಮ ಫೋನ್ ಜಾರ್ಜ್ ಕೂಡ ಆಗಬಹುದು!

ಈಗ ಪ್ರಮುಖ ಕಾರು ತಯಾರಿಕಾ ಕಂಪನಿಗಳು ಕೂಡ ಈ ಮೊಬೈಲ್ ಹ್ಯಾಂಡ್‌ಸೆಟ್ ತಯಾರಕ ಕಂಪನಿಗಳ ಕೂಟದಲ್ಲಿ ಸೇರಿಕೊಂಡಿದ್ದು, ಕಾರುಗಳಲ್ಲಿಯೂ ಚಾರ್ಜಿಂಗ್‌ಗೆ ಅಥವಾ ಇತರ ಸಂವಹನಕ್ಕೆ ಈ ತಂತ್ರಜ್ಞಾನ ಅಳವಡಿಸಲು ಮುಂದಾಗಿವೆ. ಹೀಗಾಗಿ, ಸ್ಮಾರ್ಟ್‌ಫೋನ್ ಖರೀದಿಸಲು ತೊಡಗುವಾಗ, ಎನ್‌ಎಫ್‌ಸಿ ತಂತ್ರಜ್ಞಾನವಿದೆಯೇ ಅಂತ ಕೇಳಿಕೊಂಡೇ ಮುಂದುವರಿದರೆ ಒಳ್ಳೆಯದು. ಗೂಗಲ್ ನೆಕ್ಸಸ್, ನೋಕಿಯಾ ಮತ್ತು ಎಚ್‌ಟಿಸಿಯ ಕೆಲವು ವಿಂಡೋಸ್ 8 ಫೋನುಗಳು, ಮೋಟೋರೋಲಾ, ಸೋನಿಯ ಕೆಲವು ಎಕ್ಸ್‌ಪೆರಿಯಾದ ಕೆಲವು ಮಾಡೆಲ್‌ಗಳು ಮುಂತಾದವುಗಳಲ್ಲಿ ಈ ಸೌಲಭ್ಯ ಈಗಾಗಲೇ ಲಭ್ಯ. ಅಲ್ಲದೆ ನೆಕ್ಸಸ್ ಟ್ಯಾಬ್ಲೆಟ್‌ಗಳಲ್ಲಿಯೂ ಇವೆ. ವೈರ್‌ಲೆಸ್ ಚಾರ್ಜರ್/ಅಥವಾ ಸ್ಪೀಕರ್‌ಗಳನ್ನು ಖರೀದಿಸಿದರೆ ಮಾತ್ರ ಇದರ ಪ್ರಯೋಜನ.

ಹೀಗಾಗಿ, ಹೊಸದಾಗಿ ಸ್ಮಾರ್ಟ್‌ಫೋನ್ ಖರೀದಿಸಲು ಹೊರಟಿದ್ದರೆ, ಇದೊಂದು ಸ್ಪೆಸಿಫಿಕೇಶನ್ನು ನಿಮ್ಮ ಪಟ್ಟಿಗೆ ಹೊಸ ಸೇರ್ಪಡೆ.