ಜನ ಸಾಮಾನ್ಯರತ್ತ ತಂತ್ರಜ್ಞಾನ – Gadget-Technology Info Towards Common Man

Archive for ಅಕ್ಟೋಬರ್, 2013

ವಿಸಿಟಿಂಗ್ ಕಾರ್ಡ್, ಬಯೋಡೇಟಕ್ಕೆ QR ಕೋಡ್

ವಿಜಯ ಕರ್ನಾಟಕ ಅಂಕಣ, ಮಾಹಿತಿ@ತಂತ್ರಜ್ಞಾನ: ಅಕ್ಟೋಬರ್ 28, 2013

ಪತ್ರಿಕೆಗಳಲ್ಲಿ ಕಂಡುಬರುವ ಜಾಹೀರಾತುಗಳಲ್ಲಿ ಅಥವಾ ಬೇರೆ ಎಲ್ಲಾದರೂ ಚುಕ್ಕಿಚಿತ್ರವೋ ಅಥವಾ ನವ್ಯ ಕಲೆಯೋ ಎಂಬಂತೆ ಪರಿಭಾವಿಸಬಹುದಾದ ಚೌಕಾಕಾರದ ಬಾಕ್ಸ್ ಒಂದನ್ನು ನೀವು ನೋಡಿರುತ್ತೀರಿ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್‌ನಲ್ಲಿ ಇದನ್ನು ಸ್ಕ್ಯಾನ್ ಮಾಡಿ ಅಂತ ಬೇರೆ ಬರೆದಿರುತ್ತದೆ. ಇದರ ಬಗ್ಗೆ ಕುತೂಹಲಗೊಂಡಿದ್ದೀರಾ? ಬನ್ನಿ, ಅದೇನೆಂದು ತಿಳಿದುಕೊಳ್ಳೋಣ.

ಈ ಪುಟ್ಟ ಬಾಕ್ಸ್ ಬೇರೇನಲ್ಲ, ಇದೊಂದು ಸಂಕೇತ ಭಾಷೆಯ ಚಿತ್ರ. ಇದನ್ನು ಕ್ವಿಕ್ ರೆಸ್ಪಾನ್ಸ್ ಕೋಡ್ ಅಥವಾ ಕ್ಯುಆರ್ ಕೋಡ್ ಎಂದು ಕರೆಯುತ್ತಾರೆ. ಔಷಧಿ, ಮೊಬೈಲ್ ಫೋನ್, ಬ್ಯಾಟರಿ, ಸಿದ್ಧ ಆಹಾರ ಮುಂತಾದ ಯಾವುದೇ ಉತ್ಪನ್ನಗಳ ಪೊಟ್ಟಣದಲ್ಲಿ ಬಾರ್ ಕೋಡ್‌ಗಳೆಂದು ಕರೆಯಲಾಗುವ ಉದ್ದುದ್ದ ಗೆರೆಗಳ ಸಮೂಹವೊಂದನ್ನು ನೋಡಿರುತ್ತೀರಿ. ಮಾಲ್‌ಗಳು ಅಥವಾ ಡಿಪಾರ್ಟ್‌ಮೆಂಟಲ್ ಸ್ಟೋರ್‌ಗಳಲ್ಲಿ ಅದನ್ನು ಬಾರ್ ಕೋಡ್ ರೀಡರ್ ಮೂಲಕ ಸ್ಕ್ಯಾನ್ ಮಾಡಿದಾಗ, ಕಂಪ್ಯೂಟರ್ ಪರದೆಯಲ್ಲಿ ಅದರ ಬೆಲೆ ಎಷ್ಟೆಂಬುದು ಸೇರ್ಪಡೆಯಾಗುತ್ತದೆ. ಬಾರ್ ಕೋಡ್ ಮಾದರಿಯಲ್ಲೇ ಕೆಲಸ ಮಾಡುತ್ತದೆ ಈ ಕ್ಯುಆರ್ ಕೋಡ್ ಅಂತ ಸರಳವಾಗಿ ಹೇಳಬಹುದು.

ಇದು ಹೇಗೆ ಕೆಲಸ ಮಾಡುತ್ತದೆ?
ಈ QR ಕೋಡ್‌ನ ಒಳಗೆ ವೆಬ್‌ಸೈಟ್‌ನ ವಿಳಾಸವೊಂದು ಅಡಗಿರುತ್ತದೆ. ಅದನ್ನು ಕೋಡ್ ರೀಡರ್ ಅಪ್ಲಿಕೇಶನ್ ಮೂಲಕ ಸ್ಕ್ಯಾನ್ ಮಾಡಿದರೆ, ಅದು ನಿಮ್ಮನ್ನು ಸಂಬಂಧಿತ ಮಾಹಿತಿಯು ತುಂಬಿಕೊಂಡಿರುವ ವೆಬ್ ವಿಳಾಸಕ್ಕೆ ಕರೆದೊಯ್ಯುತ್ತದೆ. ತ್ವರಿತವಾಗಿ ಪೂರ್ಣ ಮಾಹಿತಿ ಪಡೆಯಲು ಇದು ಸೂಕ್ತ.

ಯಾವುದೇ ಸ್ಮಾರ್ಟ್ ಫೋನ್ ಕೊಂಡರೂ (ಆಂಡ್ರಾಯ್ಡ್, ಐಫೋನ್, ಬ್ಲ್ಯಾಕ್‌ಬೆರಿ, ವಿಂಡೋಸ್ ಇತ್ಯಾದಿ) ಅದರ ಅಪ್ಲಿಕೇಶನ್ (ಆ್ಯಪ್) ಸ್ಟೋರ್‌ನಲ್ಲಿ QR Code Reader ಅಂತ ಸರ್ಚ್ ಮಾಡಿದರೆ, ಸಂಬಂಧಪಟ್ಟ ಆ್ಯಪ್ ಸಿಗುತ್ತದೆ. ಅದನ್ನು ಸ್ಮಾರ್ಟ್‌ಫೋನ್‌ಗೆ ಅಳವಡಿಸಿ, QR ಕೋಡ್ ಇರುವ ಯಾವುದೇ ಬಾಕ್ಸ್ ಮೇಲೆ ಕ್ಯಾಮರಾ ಮೂಲಕ ಸ್ಕ್ಯಾನ್ ಮಾಡಿದರೆ, ಅದು ಇಂಟರ್ನೆಟ್ ಸಂಪರ್ಕದ ಮೂಲಕವಾಗಿ ನಿಮ್ಮನ್ನು ಸಂಬಂಧಿತ ವೆಬ್‌ಸೈಟ್‌ನ ಎದುರು ನಿಲ್ಲಿಸುತ್ತದೆ. ಪರಿಪೂರ್ಣ ಮಾಹಿತಿಯನ್ನು ಸುಲಭವಾಗಿ ಓದಬಹುದು. ದೊಡ್ಡ ದೊಡ್ಡ ಯುಆರ್‌ಎಲ್‌ಗಳನ್ನು ನೆನಪಿಟ್ಟುಕೊಳ್ಳುವ ಅಥವಾ ಟೈಪ್ ಮಾಡುವ ಗೋಜಲು ತಪ್ಪುತ್ತದೆ.

ನೀವು ಹೇಗೆ ಉಪಯೋಗ ಪಡೆದುಕೊಳ್ಳಬಹುದು?
ಮೂಲತಃ ಈ QR ಕೋಡನ್ನು ಕೈಗಾರಿಕೆಗಳಿಗಾಗಿ, ಅದರ ಉತ್ಪನ್ನಗಳಿಗಾಗಿ ಕಂಡುಹಿಡಿಯಲಾಗಿದ್ದರೂ, ಸ್ಮಾರ್ಟ್‌ಫೋನ್ ಬಂದ ಬಳಿಕ ಅವುಗಳ ಬಳಕೆಯ ವ್ಯಾಪ್ತಿ ವಿಸ್ತಾರವಾಗಿದೆ. ಉದಾಹರಣೆಗೆ,, ಆಟೊಮೊಬೈಲ್ ಬಿಡಿಭಾಗಗಳ ಸಾಚಾತನಕ್ಕಾಗಿ ಆ ಕಂಪನಿಗಳು ತಮ್ಮ ಉತ್ಪನ್ನಗಳ ಮೇಲೆ ಈ ಕೋಡ್ ಅಳವಡಿಸುತ್ತವೆ.

ಉದ್ಯೋಗ ಹುಡುಕಾಟದಲ್ಲಿರುವ, ವಿಶೇಷವಾಗಿ ತಂತ್ರಜ್ಞಾನ ಕ್ಷೇತ್ರದಲ್ಲಿ ದುಡಿಯಲು ಇಚ್ಛಿಸುವ ಯುವ ಜನಾಂಗಕ್ಕೆ ಇದೊಂದು ಅತ್ಯುತ್ತಮ ವರವಾಗಬಲ್ಲುದು. ಬಯೋ ಡೇಟವನ್ನು ಸಂಪೂರ್ಣ ವಿವರಗಳೊಂದಿಗೆ ನಿಮ್ಮ ಬ್ಲಾಗಿನಲ್ಲೋ, ಅಥವಾ ಫೇಸ್‌ಬುಕ್ ತಾಣದ ಪ್ರೊಫೈಲ್‌ನಲ್ಲೋ, ಲಿಂಕ್ಡ್‌-ಇನ್ ಎಂಬ ಸಾಮಾಜಿಕ ಜಾಲ ತಾಣದಲ್ಲಿ ಅಥವಾ ಸ್ವಂತ ವೆಬ್ ಸೈಟ್‌ನಲ್ಲೋ ನಮೂದಿಸಿರುತ್ತೀರಿ. ಆಯಾ ಕ್ಷೇತ್ರಗಳಲ್ಲಿ ನಿಮ್ಮ ಅನುಭವದ ವಿವರಗಳು, ಅರ್ಹತೆಗಳು ಪ್ರತ್ಯೇಕ ವಿಭಾಗಗಳಲ್ಲಿ ಪಟ್ಟಿ ಮಾಡಿರುತ್ತೀರಿ. ಹೀಗೆ ಸಿದ್ಧಪಡಿಸಿಟ್ಟುಕೊಂಡ ವೆಬ್ ಪುಟದ ಒಂದು ಯುಆರ್‌ಎಲ್ (ವಿಳಾಸ) ಅಥವಾ ಹಲವು ಯುಆರ್‌ಎಲ್‌ಗಳನ್ನು QR ಕೋಡ್‌ಗೆ ಪರಿವರ್ತಿಸಿಟ್ಟುಕೊಂಡರೆ ಅನುಕೂಲ.

ಹೇಗೆಂದರೆ, ಯಾವುದೇ ಉದ್ಯೋಗದಾತರಿಗೆ ಸುದೀರ್ಘ ಬಯೋ ಡೇಟ ಓದುವಷ್ಟು ತಾಳ್ಮೆ ಇರುವುದಿಲ್ಲ. ನಿಮ್ಮಲ್ಲಿರುವ ಸಾಮರ್ಥ್ಯವನ್ನು ಉಲ್ಲೇಖಿಸಿ, ಹೆಚ್ಚಿನ ವಿವರ ಬೇಕಿದ್ದರೆ ಈ QR ಕೋಡ್ ನೋಡಿ ಅಂತ ಒಂದು ಅಡಿಬರಹ ಹಾಕಿ, ಕೋಡ್‌ನ ಬಾಕ್ಸ್ ಅಲ್ಲಿಗೆ ಹಾಕಿಬಿಟ್ಟರೆ, ಬಯೋಡೇಟಕ್ಕೊಂದು ತೂಕವೂ ಬರುತ್ತದೆ, ಉದ್ಯೋಗದಾತರ ಗಮನವನ್ನೂ ಸೆಳೆದಂತಾಗುತ್ತದೆ.

ವಿಸಿಟಿಂಗ್ ಕಾರ್ಡ್‌ನಲ್ಲಿಯೂ QR ಕೋಡ್‌ಗಳನ್ನು ಹಾಕಿದರೆ, ಮನೆ ಅಥವಾ ಕಚೇರಿಗೆ ಬರುವ ಮಾರ್ಗವುಳ್ಳ ನಕ್ಷೆ, ಮನೆಯ ವಿಳಾಸದ ಡೀಟೇಲ್ಸ್, ವಹಿವಾಟಿನ ವಿವರಗಳು, ನೀವು ಮಾಡುತ್ತಿರುವ ವೃತ್ತಿಯ ವಿವರಗಳು ಮತ್ತು ನಿಮ್ಮ ವೆಬ್‌ಸೈಟ್… ಇವೆಲ್ಲವನ್ನೂ ಸಂಪರ್ಕಿಸಬಹುದಾಗಿದೆ. ಅದೇ ರೀತಿ, ಯಾವುದಾದರೂ ಯು-ಟ್ಯೂಬ್ ವೀಡಿಯೋ ಲಿಂಕ್, ನಿಮ್ಮ ವಿಳಾಸ, ನಿಗದಿತ ಮೀಟಿಂಗ್ ಅಥವಾ ಕಾರ್ಯಕ್ರಮದ ವಿವರ, ನಿಮ್ಮ ಮನೆಯಲ್ಲಿ ನಡೆಯುವ ಶುಭ ಸಮಾರಂಭಕ್ಕೆ ಮನೆಗೆ ಬರುವ ನಕಾಶೆ ತೋರಿಸಲು ಗೂಗಲ್ ಮ್ಯಾಪ್ಸ್ ಲಿಂಕ್… ಮುಂತಾದವನ್ನೂ QR ಕೋಡ್ ಮೂಲಕವೇ ನೀಡಬಹುದು.

http://goqr.me/ ಅಥವಾ http://www.qrstuff.com/ ಮುಂತಾದ ವೆಬ್ ತಾಣಗಳು (QR ಕೋಡ್ ಜನರೇಟರ್ ತಾಣಗಳು) ಉಚಿತವಾಗಿ ಕೋಡ್ ಮಾಡಿ ಕೊಡುತ್ತವೆ. ಈ ತಾಣಗಳಿಗೆ ಹೋಗಿ, ನಿಮ್ಮ ವೆಬ್‌ಸೈಟಿನ ವಿಳಾಸವನ್ನು ಪೇಸ್ಟ್ ಮಾಡಿದ ತಕ್ಷಣ, ಅಲ್ಲೇ QR ಕೋಡ್ ಪ್ರದರ್ಶನವಾಗುತ್ತದೆ. ಅವುಗಳನ್ನು ನೀವು ಚಿತ್ರ ರೂಪದಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದು ಅಥವಾ ನಿಮ್ಮ ಬ್ಲಾಗ್/ವೆಬ್‌ಸೈಟ್‌ಗೆ ಎಂಬೆಡ್ ಮಾಡಬಹುದಾದ ಕೋಡ್ ಕೂಡ ದೊರೆಯುತ್ತದೆ.

ನಿಮ್ಮ ಮೊಬೈಲ್ ಮೂಲಕ ಉಚಿತ ಚಾಟಿಂಗ್, ಆಡಿಯೋ ಧ್ವನಿ, ಚಿತ್ರ ಕಳುಹಿಸುವುದು ಹೀಗೆ

ವಿಜಯ ಕರ್ನಾಟಕ ಅಂಕಣ, ಮಾಹಿತಿ@ತಂತ್ರಜ್ಞಾನ: ಅಕ್ಟೋಬರ್ 21, 2013

ಕೈಯಲ್ಲೊಂದು ಮೊಬೈಲ್ ಫೋನ್, ಅದಕ್ಕೊಂದು ಇಂಟರ್ನೆಟ್ ಸಂಪರ್ಕವಿದ್ದರೆ ಮತ್ತು ಅದನ್ನು ಸಮರ್ಪಕವಾಗಿ ಬಳಸಲು ತಿಳಿದಿದ್ದರೆ, ‘ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ’ ಅಂದುಕೊಳ್ಳಬಹುದು. ಕಾರಣವಿಷ್ಟೆ. ಮೊಬೈಲ್ ಸಾಧನಗಳು ಬಹುತೇಕ ಯುವಜನತೆಯಲ್ಲಿ ಹುಚ್ಚೆಬ್ಬಿಸಿದ್ದೇ ಅದರ ಎಸ್ಎಂಎಸ್ ಕಿರು ಸಂದೇಶ ಸೇವೆಯಿಂದ. ಇದರೊಂದಿಗೆ, ಮೊಬೈಲ್ ಸೇವಾ ಪೂರೈಕೆದಾರ ಕಂಪನಿಗಳು ಕೂಡ ಸಾಕಷ್ಟು ಅಗ್ಗದ ದರದಲ್ಲಿ, ವಿಶೇಷ ಎಸ್ಎಂಎಸ್ ಪ್ಯಾಕೇಜ್‌ಗಳನ್ನೂ ಒದಗಿಸಿ, ಯುವಜನರು ತಮ್ಮಿಂದ ದೂರವಾಗದಂತೆ ನೋಡಿಕೊಳ್ಳಲು ಹೆಣಗಾಡುತ್ತಿವೆ.

ಈ ಕಾರಣಕ್ಕಾಗಿಯೇ, ಒಂದೇ ಕ್ಯಾರಿಯರ್‌ನಲ್ಲಿ ಹರಿದಾಡುವ (ಅಂದರೆ, ಬಿಎಸ್ಸೆನ್ನೆಲ್‌ನಿಂದ ಬಿಎಸ್ಸೆನ್ನೆಲ್‌ಗೆ, ಏರ್‌ಟೆಲ್‌ನಿಂದ ಏರ್‌ಟೆಲ್ ಮೊಬೈಲ್‌ಗೆ… ಇತ್ಯಾದಿ) ಸಂದೇಶಗಳಿಗೆ ಮತ್ತಷ್ಟು ದರ ಕಡಿತದ ಯೋಜನೆಗಳೂ ಇವೆ. ಇವೆಲ್ಲವೂ ಗ್ರಾಹಕರನ್ನು ತನ್ನ ಹಿಡಿತದಲ್ಲಿಟ್ಟುಕೊಳ್ಳಲು ಮೊಬೈಲ್ ಸೇವಾ ಪೂರೈಕೆದಾರರ ತಂತ್ರಗಳು. ಇಂಟರ್ನೆಟ್ ವ್ಯವಸ್ಥೆ ಈ ಪುಟ್ಟ ಸಾಧನಗಳಿಗೆ ಯಾವಾಗ ಅಳವಡಿಕೆಯಾಯಿತೋ, ಈ ಎಸ್ಎಂಎಸ್ ಎಂಬ ವ್ಯವಸ್ಥೆ ಮೂಲೆಗುಂಪಾಗುತ್ತಿದೆ. ಇದಕ್ಕೆ ಕಾರಣವೆಂದರೆ, ಇಂಟರ್ನೆಟ್ ಇದ್ದರೆ ಉಚಿತವಾಗಿ ಸಂದೇಶ, ಚಾಟಿಂಗ್ ಜತೆಗೆ, ಚಿತ್ರ, ವೀಡಿಯೋ, ಆಡಿಯೋ ಫೈಲ್‌ಗಳನ್ನು ಕೂಡ ಕಳುಹಿಸಬಹುದು. ಮಾತ್ರವಲ್ಲದೆ, ಉಚಿತ ಕರೆಗಳನ್ನೂ ಮಾಡಬಹುದು. ಹೌದು ಇಂತಹಾ ಅಪ್ಲಿಕೇಶನ್‌ಗಳಿವೆ (ಆ್ಯಪ್‌ಗಳು) ಎಂಬುದು ನಗರ ಪ್ರದೇಶದಲ್ಲಿ ಹೆಚ್ಚಿನವರಿಗೆ ಗೊತ್ತಿದ್ದರೆ, ಗ್ರಾಮೀಣ ಭಾಗದಲ್ಲಿ ಈ ಕುರಿತು ಅರಿವು ಕಡಿಮೆ.

ಇಂಥವುಗಳಲ್ಲಿ ಹೆಚ್ಚಾಗಿ ಕೇಳಿಬರುತ್ತಿರುವುದು WhatsApp, We-Chat, Viber, Skype ಮುಂತಾದ ಅಪ್ಲಿಕೇಶನ್‌ಗಳು. ಇದಕ್ಕೆ ಹೊಸದಾಗಿ Line ಸೇರ್ಪಡೆಯಾಗಿದೆ.

ನಿಮ್ಮ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್, ಬ್ಲ್ಯಾಕ್‌ಬೆರಿ, ಐಒಎಸ್ (ಆ್ಯಪಲ್), ವಿಂಡೋಸ್ ಅಥವಾ ನೋಕಿಯಾದ ಸಿಂಬಿಯಾನ್ – ಹೀಗೆ ಯಾವುದೇ ಕಾರ್ಯಾಚರಣಾ ವ್ಯವಸ್ಥೆಗಳನ್ನು ಹೊಂದಿರಲಿ, ಅವೆಲ್ಲದರಲ್ಲೂ ಕಾರ್ಯಾಚರಿಸುವಂತೆ ಈ ಅಪ್ಲಿಕೇಶನ್‌ಗಳನ್ನು ರೂಪಿಸಲಾಗಿದೆ. ಹೀಗಾಗಿ, ನಿಮ್ಮ ಸ್ನೇಹಿತರ ಬಳಿ ಯಾವುದೇ ಮೊಬೈಲ್ ಸಾಧನವಿರಲಿ, ಇಂಟರ್ನೆಟ್ ಸಂಪರ್ಕ ಇದೆಯೆಂದಾದರೆ ಅದರಲ್ಲಿ ವೆಬ್ ಸೈಟುಗಳನ್ನು ನೋಡುವುದು, ಫೇಸ್‌ಬುಕ್ ಚಾಟಿಂಗ್ ಮಾತ್ರವಷ್ಟೇ ಅಲ್ಲದೆ ಈ ಆ್ಯಪ್‌ಗಳ ಮೂಲಕ ಉಚಿತವಾಗಿ ಚಾಟಿಂಗ್ ಮಾಡಬಹುದು, ಧ್ವನಿ ಅಥವಾ ವೀಡಿಯೋ ರೆಕಾರ್ಡ್ ಮಾಡಿ ಆಡಿಯೋ/ವೀಡಿಯೋ/ಚಿತ್ರ ಸಂದೇಶಗಳನ್ನೂ ಉಚಿತವಾಗಿ ಕಳುಹಿಸಬಹುದು.

ಹಾಗಿದ್ದರೆ, ಉಚಿತವಾಗಿಯೇ ಆಡಿಯೋ ಸಂದೇಶ, ಚಿತ್ರ ಅಥವಾ ಪಠ್ಯ ಸಂದೇಶ ಹೇಗೆ ಕಳುಹಿಸಬಹುದು? ಇಲ್ಲಿದೆ ಮಾಹಿತಿ.

ಮೊದಲಾಗಿ, ನಿಮ್ಮ ಮೊಬೈಲ್ ಮತ್ತು ಸ್ನೇಹಿತರ ಮೊಬೈಲ್‌ಗೆ ಇಂಟರ್ನೆಟ್ ಸಂಪರ್ಕ ಇರಬೇಕಾಗುತ್ತದೆ. ಯಾವುದಾದರೂ ಆ್ಯಪ್ (ಹೆಚ್ಚು ಪ್ರಸಿದ್ಧವಾಗಿರುವುದು WhatsApp, ಮತ್ತು ಈಗೀಗ ಜನಪ್ರಿಯತೆ ಪಡೆದುಕೊಳ್ಳುತ್ತಿರುವುದು Line) ಡೌನ್‌ಲೋಡ್ ಮಾಡಿಕೊಳ್ಳಿ. ನಿಮ್ಮ ಸ್ನೇಹಿತವರ್ಗವೂ ಅದೇ ಆ್ಯಪ್ ಬಳಸಬೇಕಾಗುತ್ತದೆ. ಬಳಿಕ ಆ ಆ್ಯಪ್‌ಗೆ ನಿಮ್ಮ ಮೊಬೈಲ್ ಸಂಖ್ಯೆಯನ್ನು ಫೀಡ್ ಮಾಡಿ, ಒಂದು ಸಲ ರಿಜಿಸ್ಟರ್ ಮಾಡಿಕೊಳ್ಳಬೇಕಾಗುತ್ತದೆ.

ರಿಜಿಸ್ಟರ್ ಆದ ಬಳಿಕ, ಆ ಅಪ್ಲಿಕೇಶನ್ ನಿಮ್ಮ ಮೊಬೈಲ್ ಫೋನ್‌ನಲ್ಲಿರುವ ಸ್ನೇಹಿತರ ಸಂಖ್ಯೆಯನ್ನೆಲ್ಲಾ ಹುಡುಕಿ, ಯಾರೆಲ್ಲಾ ಈ ಅಪ್ಲಿಕೇಶನ್ ಬಳಸುತ್ತಿದ್ದಾರೆ ಎಂದು ನಿಮಗೆ ತೋರಿಸುತ್ತದೆ. ಅವರೊಂದಿಗೆ ಹಾಯ್ ಹೇಳುವ ಮೂಲಕ ಮಾತುಕತೆ ಆರಂಭಿಸಬಹುದು, ಚಿತ್ರಗಳನ್ನು ಹಂಚಿಕೊಳ್ಳಬಹುದು. ನಿಮ್ಮದೇ ಒಂದು ಗ್ರೂಪ್ ಕಟ್ಟಿಕೊಂಡು, ಚಾಟಿಂಗ್ ನಡೆಸಬಹುದು. ಇಂತಹಾ ಆ್ಯಪ್‌ಗಳಲ್ಲಿ ಸ್ಮೈಲಿಗಳು ಅಥವಾ ಎಮೋಟಿಕಾನ್‌ಗಳು ಎಂದು ಕರೆಯಲಾಗುವ ವಿಭಿನ್ನ ಭಾವನೆಗಳನ್ನು ತೋರ್ಪಡಿಸುವ ಮುಖಭಾವಗಳ ಚಿತ್ರಗಳು ಉಚಿತವಾಗಿ ಲಭ್ಯವಾಗಿದ್ದು, ನಿಮ್ಮ ಸಂಭಾಷಣೆಗಳಿಗೆ ಭಾವನೆಗಳನ್ನು ಸೇರಿಸಬಹುದು!

WhatsApp ಎಂಬ ಆ್ಯಪ್ ಮೊದಲ ಒಂದು ವರ್ಷ ಉಚಿತ ಮತ್ತು ಎರಡನೇ ವರ್ಷದಿಂದಾಚೆಗೆ ವರ್ಷಕ್ಕೆ ಸುಮಾರು ಐವತ್ತು ರೂಪಾಯಿ ನೀಡಬೇಕಾಗುತ್ತದೆ. ಆದರೆ, ಇದೀಗ Line ಎಂಬ ಹೊಸ ಮತ್ತು ಹೆಚ್ಚು ವೈಶಿಷ್ಟ್ಯಗಳಿರುವ ಉಚಿತ ಅಪ್ಲಿಕೇಶನ್ ಬಂದಿರುವುದರಿಂದ, ಬಹುಶಃ WhatsApp ಕೂಡ ಉಚಿತ ಸೇವೆಯನ್ನೇ ಮುಂದುವರಿಸಬಹುದೆಂಬುದು ನಿರೀಕ್ಷೆ. Line ಅಪ್ಲಿಕೇಶನ್‌ನ ಒಂದು ಅನುಕೂಲವೆಂದರೆ, 3ಜಿ ಸಂಪರ್ಕದ ಮೂಲಕ ಉಚಿತವಾಗಿ ಕರೆಯನ್ನೂ ಮಾಡಬಹುದು. ಇತ್ತೀಚೆಗಷ್ಟೇ ಭಾರತಕ್ಕೆ ಕಾಲಿರಿಸಿರುವ ಜಪಾನ್‌ನ ಈ ಕಂಪನಿ, ಮೂರೇ ತಿಂಗಳಲ್ಲಿ 1 ಕೋಟಿ ಬಳಕೆದಾರರನ್ನು ಹೊಂದಿದೆ ಅಂತ ಹೇಳಿಕೊಂಡಿದೆ. ಹೀಗಾಗಿ ಇದನ್ನೂ ಟ್ರೈ ಮಾಡಬಹುದು.

ಉಚಿತ ಎಂದರೇನರ್ಥ?: ಇಲ್ಲಿ ಉಚಿತ ಎಂದರೆ ಇಂಟರ್ನೆಟ್ ಸಂಪರ್ಕ ಇದ್ದರೆ ಎಸ್ಎಂಎಸ್ ಅಥವಾ ಎಂಎಂಎಸ್ (ಚಿತ್ರ ಅಥವಾ ವೀಡಿಯೋ ಸಂದೇಶ) ಹೆಚ್ಚುವರಿ ಶುಲ್ಕ ನೀಡದೆ ಕಳುಹಿಸಬಹುದು ಎಂದರ್ಥ. ಇಂಟರ್ನೆಟ್‌ಗೆ ಮಾತ್ರ ಮಾಸಿಕ ಇಂತಿಷ್ಟು ಅಂತ ಶುಲ್ಕ ತಗುಲುತ್ತದೆ. ಇದರಿಂದ ಮೊಬೈಲ್‌ನಲ್ಲಿ ಇಂಟರ್ನೆಟ್ ಜಾಲಾಡಬಹುದಷ್ಟೇ ಅಲ್ಲದೆ, ಕರೆಗಳಿಗೆ, ಎಸ್ಎಂಎಸ್ ಸಂದೇಶಕ್ಕೆ ಹೆಚ್ಚುವರಿ ಹಣ ನೀಡುವ ಬದಲು, ಈ ಆ್ಯಪ್ ಬಳಸಿ ಮಾಡಿದರೆ ಉಳಿತಾಯವಾಗುತ್ತದೆ.

ನಿಮ್ಮ ಫೇಸ್‌ಬುಕ್ ಪೋಸ್ಟ್‌ಗಳನ್ನು ಈಗ ಎಡಿಟ್ ಕೂಡ ಮಾಡಬಹುದು

ವಿಜಯ ಕರ್ನಾಟಕ ಅಂಕಣ, ಮಾಹಿತಿ @ ತಂತ್ರಜ್ಞಾನ, ಅಕ್ಟೋಬರ್ 07, 2013

ದೇಶದಲ್ಲಿ ಅಂತರ್ಜಾಲ ಕ್ರಾಂತಿಯಾಗಿ ಬ್ಲಾಗ್, ಓರ್ಕುಟ್ ಮುಂತಾದ ವಿಶ್ವಾದ್ಯಂತವಿರುವ ಜನರನ್ನು ಬೆಸೆಯುವ ತಾಣಗಳ ಬಳಿಕ ಇತ್ತೀಚೆಗೆ ನಮ್ಮ ನಿಮ್ಮೆಲ್ಲರನ್ನು ಸಂಪೂರ್ಣವಾಗಿ ‘ಬ್ಯುಸಿ’ಯಾಗಿಸುತ್ತಿರುವುದು ಫೇಸ್‌ಬುಕ್ ಎಂಬ ಸಾಮಾಜಿಕ ಜಾಲ ತಾಣ. ವಯಸ್ಕರು, ಹರೆಯದವರು, ಎಳೆಯರೆನ್ನದೆ ಎಲ್ಲರನ್ನೂ ಸೆಳೆದುಕೊಂಡುಬಿಟ್ಟಿದೆ ಇದು. ಈ ಜಾಲ ತಾಣದಲ್ಲಿ ವಿಶ್ವಾದ್ಯಂತ ಸುಮಾರು 128 ಕೋಟಿ (ಅಂದರೆ ಭಾರತದ ಒಟ್ಟಾರೆ ಜನಸಂಖ್ಯೆಗೂ ಹೆಚ್ಚು) ಮಂದಿ ಸಕ್ರಿಯ ಸದಸ್ಯರಿದ್ದಾರೆ.

ಆದರೆ ಈ ತಾಣದಲ್ಲಿ ಮೊನ್ನೆ ಮೊನ್ನೆಯವರೆಗೂ ನಾವು ಮಾಡಿರುವ ಕಾಮೆಂಟುಗಳನ್ನಷ್ಟೇ ತಿದ್ದುಪಡಿ ಮಾಡಲು ನಮಗೆ ಅವಕಾಶವಿತ್ತು. ಈಗ ನಮ್ಮ ಸ್ಟೇಟಸ್ (ನಾವು ನಮ್ಮ ವಾಲ್‌ನಲ್ಲಿ ಮಾಡಿರುವ ಪೋಸ್ಟ್‌ಗಳು) ಅಪ್‌ಡೇಟ್‌ಗಳ ತಿದ್ದುಪಡಿಗೂ ಫೇಸ್‌ಬುಕ್ ಅವಕಾಶ ಮಾಡಿಕೊಟ್ಟಿದೆ. ಮೊದಲಾಗಿದ್ದರೆ, ಏನಾದರೂ ತಪ್ಪು ಬರೆದಿದ್ದರೆ, ಅಥವಾ ಅದು ಇನ್ನೊಬ್ಬರಿಗೆ ನೋವುಂಟು ಮಾಡುವಂತಿದ್ದರೆ, ಇಡೀ ಪೋಸ್ಟನ್ನು ಡಿಲೀಟ್ ಮಾಡಿ, ಸರಿಪಡಿಸಿ ಮತ್ತೆ ಹೊಸದಾಗಿ ಪೋಸ್ಟ್ ಮಾಡಬೇಕಾಗುತ್ತಿತ್ತು. ಅಷ್ಟು ಹೊತ್ತಿಗೆ ನಿಮ್ಮ ಪೋಸ್ಟನ್ನು ಸಾಕಷ್ಟು ಮಂದಿ ಲೈಕ್ ಮಾಡಿರುತ್ತಾರೆ ಅಥವಾ ಕಾಮೆಂಟ್ ಮಾಡಿರುತ್ತಾರೆ. ಆದರೆ ಇನ್ನು ಹಾಗಿಲ್ಲ. ಮಾಡಿದ ಪೋಸ್ಟನ್ನು ಯಾವಾಗ ಬೇಕಾದರೂ, ಎಷ್ಟು ಬಾರಿ ಬೇಕಾದರೂ ತಿದ್ದಬಹುದು.

ಎಡಿಟ್ ಮಾಡಬೇಕಿದ್ದರೆ ಹೀಗೆ ಮಾಡಿ: ಟೈಮ್‌ಲೈನ್ ಎಂದೂ ಕರೆಯಲಾಗುವ ನಿಮ್ಮ ವಾಲ್‌ಗೆ ಹೋಗಿ. ಯಾವುದೇ ಪೋಸ್ಟ್‌ನ ಬಲ ಮೇಲ್ಭಾಗದಲ್ಲಿ v ಆಕಾರದ ಚಿಹ್ನೆಯೊಂದು ಕಾಣಿಸುತ್ತದೆ. ಅದನ್ನು ಕ್ಲಿಕ್ ಮಾಡಿ (ಚಿತ್ರ ನೋಡಿ). ಆಗ ಹಲವು ಆಯ್ಕೆಗಳು ಗೋಚರಿಸುತ್ತವೆ. ಅದರಲ್ಲಿ ಎಡಿಟ್ ಎಂಬುದನ್ನು ಕ್ಲಿಕ್ ಮಾಡಿದರೆ, ನಿಮ್ಮ ಪೋಸ್ಟನ್ನು ಸರಿಪಡಿಸಬಹುದಾಗಿದೆ. ಆದರೆ, ಈ ಎಡಿಟ್ ಆಯ್ಕೆಯು ಫೇಸ್‌ಬುಕ್ ಪುಟಗಳಿಗೆ (ಪೇಜಸ್) ಲಭ್ಯವಿಲ್ಲ.

ಹೀಗೆ ತಿದ್ದುಪಡಿಯಾದ ಪೋಸ್ಟ್‌ನಲ್ಲಿ ಒಂದು ಕಡೆ ‘ಎಡಿಟೆಡ್’ ಅಂತ ಕಾಣುತ್ತದೆ. ಏನೇನು ಎಡಿಟ್ ಮಾಡಿದ್ದೀರಿ ಎಂಬುದನ್ನು ನೋಡಬೇಕಿದ್ದರೆ ಈ ಎಡಿಟೆಡ್ ಎಂದಿರುವುದನ್ನು ಕ್ಲಿಕ್ ಮಾಡಿದಾಗ, ಎಡಿಟ್ ಆಗಿರುವ ಹಿಸ್ಟರಿ ತೋರುತ್ತದೆ.

ಇಷ್ಟು ಮಾತ್ರವಲ್ಲದೆ, ಅದರಲ್ಲಿರುವ ಇತರ ಆಯ್ಕೆಗಳನ್ನೂ ಕೂಡ ನೀವು ಬಳಸಿಕೊಳ್ಳಬಹುದು. ಅಂದರೆ, ಯಾರಾದರೂ ನಿಮ್ಮ ವಾಲ್‌ನಲ್ಲಿ ಸಂಬಂಧವಿಲ್ಲದ ಮಾಹಿತಿಯನ್ನು ಪೋಸ್ಟ್ ಮಾಡಿದರೆ, ಅಥವಾ ಅನಗತ್ಯ ಲಿಂಕ್‌ಗಳನ್ನು ನೀಡಿದ್ದರೆ, ನೀವು ಅದನ್ನು ಟೈಮ್‌ಲೈನ್‌ನಲ್ಲಿ ಕಾಣಿಸದಂತೆ (Hide from Timeline) ಮಾಡಬಹುದು ಅಥವಾ ‘ಡಿಲೀಟ್’ ಮಾಡುವ ಮೂಲಕ ಅದನ್ನು ಅಳಿಸಬಹುದು. ತೀರಾ ಅನರ್ಥಕಾರಿ ಸಂದೇಶಗಳಿದ್ದರೆ, ಸ್ಪ್ಯಾಮ್ ಎಂದು ಗುರುತು ಮಾಡಬಹುದು. ಹೀಗೆ ಮಾಡಿದರೆ ನಿಮ್ಮ ಸ್ನೇಹಿತ ವರ್ಗದವರಿಗೆ ನಿಮ್ಮ ಟೈಮ್‌ಲೈನ್‌ನಲ್ಲಿ ಈ ಅನಗತ್ಯ ಸಂದೇಶಗಳು ಕಾಣಿಸುವುದಿಲ್ಲ.

128 ಕೋಟಿ ಸದಸ್ಯರನ್ನೂ ಒಂದೇ ಕಡೆ ನೋಡಿ!
ಈಗ ಫೇಸ್‌ಬುಕ್‌ನಲ್ಲಿ ದೇಶ-ವಿದೇಶದಲ್ಲಿ ಸಕ್ರಿಯವಾಗಿರುವ 128 ಕೋಟಿಗೂ ಹೆಚ್ಚು ಮಂದಿ ಪರಸ್ಪರ ‘ಫ್ರೆಂಡ್‌ಶಿಪ್’ ಮೂಲಕ ಬೆಸೆದುಕೊಂಡಿದ್ದಾರೆ. ಇವರೆಲ್ಲರೂ ಆನ್‌ಲೈನ್ ಸಮಾಜದ ಸದಸ್ಯರು. ಆದರೆ ಎಲ್ಲರನ್ನೂ ಒಂದೇ ಕಡೆ ನೋಡುವಂತಾಗುವುದು ಇದುವರೆಗೆ ಸಾಧ್ಯವಾಗಿರಲಿಲ್ಲ… ಇತ್ತೀಚಿನವರೆಗೂ.

ಈಗ ಫ್ರೀಲ್ಯಾನ್ಸ್ ವಿನ್ಯಾಸಕಾರ್ತಿ ನತಾಲಿಯಾ ರೋಜಸ್ ಎಂಬವರು ‘ದಿ ಫೇಸಸ್ ಆಫ್ ಫೇಸ್‌ಬುಕ್’ ಎಂಬ ಆನ್‌ಲೈನ್ ಪುಟವನ್ನು ರೂಪಿಸಿ ಫೇಸ್‌ಬುಕ್‌ನ ಎಲ್ಲ ಸದಸ್ಯರ ಮುಖಗಳನ್ನು ಒಂದೆಡೆ ತಂದಿದ್ದಾರೆ. http://thefacesoffacebook.com/ ಎಂಬ ತಾಣಕ್ಕೆ ಹೋಗಿ ನೋಡಿ. ಮೌಸ್‌ನ ಕರ್ಸರ್ (ಪಾಯಿಂಟರ್) ಆಚೀಚೆ ಸರಿಸಿದಾಗ ಪುಟ್ಟ ಚಿತ್ರಗಳಲ್ಲಿ ಸಂಖ್ಯೆಗಳು ಕ್ರಮಾಗತವಾಗಿ ಕಾಣಿಸುತ್ತವೆ. ಮೌಸ್‌ನ ಸ್ಕ್ರಾಲ್ ವೀಲ್ ಮೂಲಕ ಝೂಮ್ ಮಾಡಿದರೆ, ಪ್ರೊಫೈಲ್ ಚಿತ್ರಗಳನ್ನು ಸರಿಯಾಗಿ ನೋಡಬಹುದು. ಯಾವುದೇ ಚಿತ್ರ ಕ್ಲಿಕ್ ಮಾಡಿದರೆ, ಅದು ನಿಮ್ಮ ಫೇಸ್‌ಬುಕ್ ಲಾಗಿನ್ ಐಡಿ-ಪಾಸ್ವರ್ಡ್ ಕೇಳುತ್ತದೆ. ಲಾಗಿನ್ ಆದರೆ, ಆ ಪ್ರೊಫೈಲ್ ವೀಕ್ಷಿಸಬಹುದು.

ಈ ಪ್ರಾಜೆಕ್ಟ್‌ನಲ್ಲಿ ಫೇಸ್‌ಬುಕ್‌ನ ಒಂದೂ ಕಾಲು ಶತಕೋಟಿಗೂ ಮಿಗಿಲಾದ ಜನರ ಮುಖಗಳು ಒಂದೇ ಕಡೆ ನೋಡಸಿಗುತ್ತವೆ. ಪಕ್ಕನೇ ನೋಡಿದರೆ, ಟೀವಿಯಲ್ಲಿ ಸಿಗ್ನಲ್ ಇಲ್ಲದಿದ್ದಾಗ ಚುಕ್ಕಿಗಳು ಕಾಣಿಸುತ್ತಿರುತ್ತದಲ್ಲವೇ? ಆ ರೀತಿ ಇರುತ್ತದೆ. ಝೂಮ್ ಮಾಡಿದರೆ ಮುಖಗಳು ದೊಡ್ಡದಾಗಿ ಕಾಣಿಸುತ್ತವೆ. ಮೌಸ್‌ನ ಕರ್ಸರ್ ಅನ್ನು ಯಾವುದೇ ಫೋಟೋದ ಮೇಲೆ ರೋಲ್ ಮಾಡಿದರೆ, ಹೆಸರು ಕೂಡ ಗೋಚರಿಸುತ್ತದೆ. ಒಂದೇ ವೆಬ್ ಪುಟದಲ್ಲಿ ನೂರಿಪ್ಪತ್ತೆಂಟು ಕೋಟಿ ಜನರು!