ಜನ ಸಾಮಾನ್ಯರತ್ತ ತಂತ್ರಜ್ಞಾನ – Gadget-Technology Info Towards Common Man

Posts tagged ‘Smart phone’

ಸ್ಮಾರ್ಟ್‌ಫೋನ್ ಕಳೆದುಹೋದಾಗ ಇದನ್ನೂ ಪ್ರಯತ್ನಿಸಿ ನೋಡಿ…

Device Managerನಾವು ಅಷ್ಟು ಆಸ್ಥೆಯಿಂದ, ನಮ್ಮೆಲ್ಲಾ ಬೇಕು ಬೇಡಗಳನ್ನು ತುಂಬಿಸಿದ್ದ ಸ್ಮಾರ್ಟ್‌ಫೋನ್ ಕಳೆದು ಹೋದರೆ ಆಗುವ ಚಡಪಡಿಕೆ ಯಾರಲ್ಲೂ ಹೇಳಿಕೊಳ್ಳಲಾಗದು. ಅಷ್ಟೊಂದು ಅಮೂಲ್ಯ ಮಾಹಿತಿಗಳನ್ನು ನಾವು ಅದಕ್ಕೆ ಊಡಿಸಿಬಿಟ್ಟಿರುತ್ತೇವೆ. ಎಲ್ಲ ಲಾಗಿನ್‌ಗಳು, ಪಾಸ್‌ವರ್ಡ್‌ಗಳು, ಕ್ರೆಡಿಟ್-ಡೆಬಿಟ್ ಕಾರ್ಡ್ ವಿವರಗಳು ಎಲ್ಲವೂ ಅದರಲ್ಲಿ ಶೇಖರವಾಗಿರುವಾಗ ಹೃದಯವೇ ಬಾಯಿಗೆ ಬಂದಂತಾಗುತ್ತದೆ. ಹೊಸದಾಗಿ ಫೋನ್ ಕೊಂಡುಕೊಂಡರಂತೂ ಎಲ್ಲೋ ಮರೆತು ಬಿಟ್ಟು ಬಂದಾಗ ಆಗುವ ಯಾತನೆ ಹೇಳತೀರದು.

ನಮ್ಮ ಕಣ್ಣ ದೃಷ್ಟಿಯಿಂದ ಮರೆಯಾದ ಫೋನನ್ನು ಹುಡುಕುವುದು ಹೇಗೆ ಎಂಬುದು ಎಲ್ಲರನ್ನೂ ಕಾಡುವ ಪ್ರಶ್ನೆ. ಫೋನ್‌ನ ಐಎಂಐಇ ಸಂಖ್ಯೆಯನ್ನು (ಅದರ ಬಾಕ್ಸ್‌ನಲ್ಲಿರುವ ಸ್ಟಿಕರ್‌ನಲ್ಲಿರುತ್ತದೆ) ತೆಗೆದುಕೊಂಡು, ಪೊಲೀಸ್ ಠಾಣೆಗೆ ದೂರು ನೀಡುವುದು ಒಂದು ವಿಷಯವಾದರೆ, ಸೈಬರ್ ಪೊಲೀಸರು ಹುಡುಕಿ ತಂದುಕೊಡುವಷ್ಟರೊಳಗೆ ಸಾಧ್ಯವಾದಲ್ಲಿ ನಾವೂ ಒಂದು ಬಾರಿ ಪ್ರಯತ್ನಿಸಿ ನೊಡಲು ಇಲ್ಲಿದೆ ವಿಧಾನ.

ಇಂಟರ್ನೆಟ್ ಸಂಪರ್ಕ ಮೂಲಕ ನಮ್ಮ ಫೋನನ್ನು ಯಾವುದೇ ಇಮೇಲ್ ಐಡಿ ಜತೆಗೆ ಸಿಂಕ್ ಮಾಡಿಟ್ಟುಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ. ಇಲ್ಲಿ ಸಂಪರ್ಕ ಸಂಖ್ಯೆಗಳೆಲ್ಲವೂ ಸಿಂಕ್ ಆಗಿರುವುದರಿಂದ ಯಾವಾಗಲಾದರೂ ಕಳೆದುಹೋದಾಗ ಅಥವಾ ಫೋನ್ ಬದಲಾಯಿಸಬೇಕಾದಾಗಲೂ, ಎಲ್ಲೋ ಮರೆತುಬಿಟ್ಟ ಫೋನ್ ಹುಡುಕಲೂ ಅನುಕೂಲ.

ಎಲ್ಲ ಸ್ಮಾರ್ಟ್‌ಫೋನ್‌ಗಳಲ್ಲಿ ಅಂತರ್ನಿರ್ಮಿತವಾದ ಒಂದು ವ್ಯವಸ್ಥೆ ಇದೆ. ಮನೆಯೊಳಗೆ ಎಲ್ಲಿ ಇಟ್ಟಿದ್ದೀರಿ, ಎಲ್ಲಿ ಮರೆಯಾಗಿದೆ ಅಂತ ಸುಲಭವಾಗಿ ತಿಳಿದುಕೊಳ್ಳಬಹುದು ಅಥವಾ ಹೊರಗೆಲ್ಲಾದರೂ ಇದ್ದರೆ ಇಲ್ಲವೇ ಕಳವಾದರೆ ಅದರ ಎಲ್ಲ ಮಾಹಿತಿಯನ್ನು ದೂರಸ್ಥವಾಗಿಯೇ ಅಳಿಸಿಬಿಡಬಹುದು ಅಥವಾ ಅದನ್ನು ಬಳಸಲಾಗದಂತೆ ಲಾಕ್ ಮಾಡಬಹುದು.

ಆಂಡ್ರಾಯ್ಡ್‌ನಲ್ಲಿ
ಆಂಡ್ರಾಯ್ಡ್ ಡಿವೈಸ್ ಮ್ಯಾನೇಜರ್ ಎಂಬ ಗೂಗಲ್‌ನ https://www.google.com/android/devicemanager ತಾಣಕ್ಕೆ ಹೋಗಿ, ನಿಮ್ಮ ಸಾಧನಕ್ಕೆ ಬಳಸಿದ ಜಿಮೇಲ್ ಖಾತೆಗೆ ಲಾಗಿನ್ ಆದಾಗ, ಹಿನ್ನೆಲೆಯಲ್ಲಿ ನಕ್ಷೆ ಇರುವ ಪುಟವೊಂದು ಕಾಣಿಸುತ್ತದೆ. ಅಲ್ಲಿ ನಿಮ್ಮ ಸಾಧನದ ಹೆಸರೂ ಕಾಣಿಸುತ್ತದೆ. ಹೆಚ್ಚು ಸಾಧನಗಳಿದ್ದರೆ, ಅಲ್ಲೇ ಕಾಣಿಸುವ ಡ್ರಾಪ್‌ಡೌನ್ ಮೆನುವಿನಿಂದ ಆಯ್ಕೆ ಮಾಡಿಕೊಳ್ಳಬಹುದು. ಆಯ್ಕೆ ಮಾಡಿದ ಬಳಿಕ, ಪಕ್ಕದಲ್ಲೇ ಕಾಣಿಸುವ ನ್ಯಾವಿಗೇಶನ್ ಬಟನ್ ಕ್ಲಿಕ್ ಮಾಡಬೇಕು. ಸಾಧನ ಕೊನೆಯ ಬಾರಿಗೆ ಎಲ್ಲಿತ್ತು ಎಂಬ ಮಾಹಿತಿ ನಕ್ಷೆ ಸಮೇತ ಕಾಣಿಸುತ್ತದೆ. ಕೆಳಗೆ ಮೂರು ಆಯ್ಕೆಗಳು ಗೋಚರಿಸುತ್ತವೆ. ಸಮೀಪದಲ್ಲೇ ಎಲ್ಲಾದರೂ ಇದ್ದರೆ ಜೋರಾಗಿ ರಿಂಗ್ ಮಾಡಿಸಬಲ್ಲ ಒಂದನೇ ಆಯ್ಕೆ, ಫೋನ್‌ನ ಸ್ಕ್ರೀನ್ ಲಾಕ್ ಬದಲಾಯಿಸಬಲ್ಲ ಎರಡನೇ ಆಯ್ಕೆ ಹಾಗೂ ಫೋನನ್ನು ಫ್ಯಾಕ್ಟರಿಯಿಂದ ಬಂದಾಗ ಹೇಗಿತ್ತೋ ಆ ಸ್ಥಿತಿಗೆ ರೀಸೆಟ್ ಮಾಡುವ ಮೂರನೇ ಆಯ್ಕೆ. ಹೀಗೆ ಮಾಡಿದರೆ, ನಿಮ್ಮ ಫೋನ್‌ನಲ್ಲಿರುವ ಎಲ್ಲ ಮಾಹಿತಿಯೂ ಅಳಿಸಿಹೋಗುತ್ತದೆ.

ಆದರೆ, ಇದಕ್ಕೆ ನಿಮ್ಮ ಸ್ಮಾರ್ಟ್‌ಫೋನ್‌ನ ಜಿಪಿಎಸ್ (ಗ್ಲೋಬಲ್ ಪೊಸಿಶನಿಂಗ್ ಸಿಸ್ಟಂ) ಎಂಬ ಲೊಕೇಶನ್ ಸೇವೆ ಹಾಗೂ ಕೆಲವೊಮ್ಮೆ ಇಂಟರ್ನೆಟ್ ಸೇವೆಯೂ ಸದಾ ಆನ್ ಆಗಿಟ್ಟಿರಬೇಕು. ಉಪಗ್ರಹ ಮೂಲಕ ಫೋನ್‌ನ ಇರುವಿಕೆಯನ್ನು ಸಂಪರ್ಕಿಸುವ ಸೇವೆಯಿದು. ಕಂಪ್ಯೂಟರ್‌ನಲ್ಲಿ ಇಲ್ಲದಿದ್ದರೆ, ಸ್ನೇಹಿತರ ಮೊಬೈಲ್ ಫೋನ್‌ನಲ್ಲಿ Device Manager ಆ್ಯಪ್ ಇನ್‌ಸ್ಟಾಲ್ ಮಾಡಿಕೊಂಡು, ಅದರ ಮೂಲಕವೂ ಇದೇ ಕೆಲಸಗಳನ್ನು ಮಾಡುವುದು ಸಾಧ್ಯವಾಗುತ್ತದೆ.

ವಿಂಡೋಸ್ ಫೋನ್‌ನಲ್ಲಿ
ಈಗಲೇ ನಿಮ್ಮ ವಿಂಡೋಸ್ 8.1 ಫೋನುಗಳಲ್ಲಿ ಮೊದಲು ಸೆಟ್ಟಿಂಗ್ಸ್‌ನಲ್ಲಿ ‘Find my phone’ ಎಂಬುದನ್ನು ಕ್ಲಿಕ್ ಮಾಡಿ, ಅಲ್ಲಿರುವ ಎರಡೂ ಚೆಕ್‌ಬಾಕ್ಸ್‌ಗಳನ್ನು ಕ್ಲಿಕ್ ಮಾಡಿಟ್ಟಿರಬೇಕು. ನಂತರ ವಿಂಡೋಸ್ ಆ್ಯಪ್‌ಗಳ ಸ್ಟೋರ್‌ಗೆ (http://www.windowsphone.com/en-in/store) ಹೋಗಿ, ನಿಮ್ಮ ಫೋನ್‌ಗೆ ಲಾಗಿನ್ ಆದ ಮೈಕ್ರೋಸಾಫ್ಟ್ ಖಾತೆ (ಲೈವ್, ಹಾಟ್‌ಮೇಲ್, ಔಟ್‌ಲುಕ್ ಇತ್ಯಾದಿ) ಮೂಲಕ ಲಾಗಿನ್ ಆಗಿ, Find My Phone ಆಯ್ಕೆ ಕ್ಲಿಕ್ ಮಾಡಿದರೆ, ರಿಂಗ್ ಮಾಡುವ, ಲಾಕ್ ಮಾಡುವ ಮತ್ತು ಫ್ಯಾಕ್ಟರಿ ಡೇಟಾ ರೀಸೆಟ್ ಮಾಡುವ ಆಯ್ಕೆಗಳು ಕಂಡುಬರುತ್ತವೆ.

ಐಫೋನ್‌ನಲ್ಲಿ
ಐಫೋನ್ ಇದ್ದವರು Settings > iCloud > Find My iPhone ಎನೇಬಲ್ ಆಗಿರುವಂತೆ ನೋಡಿಕೊಳ್ಳಬೇಕು. ನಂತರ ಫೋನ್ ಕಳೆದುಹೋದರೆ, ಸ್ನೇಹಿತರ ಐಫೋನ್ ಅಥವಾ ಐಪ್ಯಾಡ್ ಅಥವಾ ಐಒಎಸ್ ಇರುವ ಕಂಪ್ಯೂಟರ್ ಮೂಲಕ ಐಟ್ಯೂನ್ಸ್ ಎಂಬ ಸ್ಟೋರ್‌ನಿಂದ Find My iPhone ಎಂಬ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು, ನಿಮ್ಮದೇ ಇಮೇಲ್ ಖಾತೆ ಮೂಲಕ ಲಾಗಿನ್ ಆದರೆ, ಮೇಲಿನ ಮೂರೂ ಆಯ್ಕೆಗಳು ಲಭ್ಯವಾಗುತ್ತವೆ.

ಬ್ಲ್ಯಾಕ್‌ಬೆರಿ ಫೋನ್‌ಗಳಲ್ಲಿಯೂ Settings > BlackBerry Protect ಎಂಬುದನ್ನು ಹಾಗೂ ಲೊಕೇಶನ್ ಸರ್ವಿಸಸ್ ಆನ್ ಮಾಡಿದ ಬಳಿಕ http://protect.blackberry.com/ ಎಂಬಲ್ಲಿ ಹೋಗಿ ಟ್ರ್ಯಾಕ್ ಮಾಡಬಹುದು.

ಟೆಕ್ ಟಾನಿಕ್: ಕಂಪ್ಯೂಟರಿನಲ್ಲಿ ಚಿತ್ರಗಳ ಮೂಲಕ ಎಬಿಸಿಡಿ
ಮಕ್ಕಳಿಗೆ ಇಂಗ್ಲಿಷ್ ವರ್ಣಮಾಲೆ ಕಲಿಸುವಾಗ ಎ ಫಾರ್ ಆ್ಯಪಲ್, ಬಿ ಫಾರ್ ಬನಾನ ಅಂತೆಲ್ಲಾ ಹೇಳಿಕೊಡುವುದನ್ನೇ, ಕಂಪ್ಯೂಟರ್‌ನಲ್ಲಿ ಚಿತ್ರಗಳ ಮೂಲಕ ಹೇಳಿದರೆ? ಇದಕ್ಕಾಗಿ MS Prima ಎಂಬ ಒಂದು ಫಾಂಟ್ ಇದೆ. ಅದನ್ನು ಇಲ್ಲಿ http://spr.ly/6182scfu ಡೌನ್‌ಲೋಡ್ ಮಾಡಿಕೊಂಡು ನಿಮ್ಮ ಕಂಪ್ಯೂಟರಿನಲ್ಲಿ fonts ಫೋಲ್ಡರ್‌ಗೆ ಅನ್‌ಝಿಪ್ ಮಾಡಿಕೊಳ್ಳಿ. ನಂತರ ನೋಟ್‌ಪ್ಯಾಡ್, ವರ್ಡ್, ವರ್ಡ್‌ಪ್ಯಾಡ್ – ಯಾವುದಾದರೂ ತೆರೆದು, ಅದರಲ್ಲಿ MS Prima ಫಾಂಟ್ ಆಯ್ಕೆ ಮಾಡಿಕೊಳ್ಳಿ. ಕೀಬೋರ್ಡ್‌ನಲ್ಲಿ A B C D ಒತ್ತುತ್ತಾ ಹೋಗಿ. ಚಿತ್ರಗಳೇ ಮೂಡುತ್ತವೆ. ಮಕ್ಕಳಿಗೆ ಮನರಂಜನೆಯ ಜತೆಗೆ ಕಲಿಕೆಯೂ ಸುಲಭವಾಗುತ್ತದೆ.

ಮಾಹಿತಿ@ತಂತ್ರಜ್ಞಾನ: ಅವಿನಾಶ್ ಬಿ., ವಿಜಯ ಕರ್ನಾಟಕ, ಡಿಸೆಂಬರ್ 22, 2014

ಮೊಬೈಲ್ ಒನ್‌ನಲ್ಲಿ ಏನಿದೆ, ಹೇಗಿದೆ: ಕ್ವಿಕ್ ರಿಯಾಲಿಟಿ ಚೆಕ್

ಅವಿನಾಶ್ ಬಿ.
Mobile-One-1ಕರ್ನಾಟಕ ಸರಕಾರದ ಮಹತ್ವಾಕಾಂಕ್ಷಿ ಮೊಬೈಲ್-ಒನ್ ಅಪ್ಲಿಕೇಶನ್ ಒಂದೇ ಮಾತಿನಲ್ಲಿ ಹೇಳುವುದಾದರೆ, ‘ಆ್ಯಪ್‌ಗಳ ಗುಚ್ಛ’. ಹಲವಾರು ಆ್ಯಪ್‌ಗಳ ಬದಲು ಇದೊಂದನ್ನೇ ಡೌನ್‌ಲೋಡ್ ಮಾಡಿಕೊಂಡರೆ, ಹಲವು ಸೇವೆಗಳಿಗೆ ಇಲ್ಲಿಂದಲೇ ಪ್ರವೇಶ ಪಡೆಯಬಹುದು.

ಜನಸಾಮಾನ್ಯರ ಕೈಯಲ್ಲಿರಬಹುದಾದ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ನಲ್ಲಿ ಗೂಗಲ್ ಪ್ಲೇ ಸ್ಟೋರ್‍‌ಗೆ ಹೋಗಿ Karnataka Mobileone ಅಂತ ಟೈಪ್ ಮಾಡಿ ಸರ್ಚ್ ಮಾಡಿದಾಗ ಈ ಆ್ಯಪ್ ಲಭ್ಯವಾಗುತ್ತದೆ. Mobile ಮತ್ತು one ಮಧ್ಯೆ ಸ್ಪೇಸ್ ಇರಬಾರದು. ಸ್ಪೇಸ್ ನೀಡದಿದ್ದರೆ, ಕರ್ನಾಟಕ ಸರಕಾರದ ಲಾಂಛನವಿರುವ ಬೇರೊಂದು ಆ್ಯಪ್ ಕಾಣಿಸಿಕೊಳ್ಳುತ್ತದೆ.

ಸುಮಾರು 9.5 ಎಂಬಿ ತೂಕವಿರುವ ಅಧಿಕೃತ ಆ್ಯಪ್ ಡೌನ್‌ಲೋಡ್ ಆದ ಬಳಿಕ ನಿಮ್ಮ ಮೊಬೈಲ್ ಸಂಖ್ಯೆ ನೀಡಿ ನೋಂದಾಯಿಸಿಕೊಳ್ಳಬೇಕಾಗುತ್ತದೆ. ಅದೇ ಮೊಬೈಲ್‌ಗೆ ಪಿನ್ ಸಂಖ್ಯೆಯನ್ನು ಕಳುಹಿಸಲಾಗುತ್ತದೆ. ಲಾಗ್ ಇನ್ ಆಗಲು ಇದು ಬೇಕಾಗುತ್ತದೆ. ಇದರಲ್ಲಿರುವ ಸೇವೆಗಳ ಬಗ್ಗೆ ಕ್ಷಿಪ್ರನೋಟ ಇಲ್ಲಿದೆ.

* ಅಗತ್ಯ ಸೇವೆಗಳಲ್ಲಿ ಪ್ರಸ್ತುತ ಬೆಸ್ಕಾಂ, ಹೆಸ್ಕಾಂ ಹಾಗೂ ಬೆಂಗಳೂರು ಜಲಮಂಡಳಿಯ ಬಿಲ್ ಪಾವತಿ ವ್ಯವಸ್ಥೆ, ಬ್ಯಾಂಕಿಂಗ್ ಸೇವೆಗಳಡಿ ಕೆಲವು ಬ್ಯಾಂಕ್‌ಗಳ ಖಾತೆ ತೆರೆಯಬಹುದು.

* ಪೊಲೀಸ್ ಸೇವೆಗಳಲ್ಲಿ, ಬೆಂಗಳೂರು ಪೊಲೀಸ್, ಬೆಂಗಳೂರು ಸಂಚಾರಿ ಪೊಲೀಸ್ ಹಾಗೂ ರಾಜ್ಯ ಅಪರಾಧ ದಾಖಲೆಗಳ ಬ್ಯುರೋದ ಲಿಂಕ್ ಇವೆ. (ಸಮೀಪದ ಪೊಲೀಸ್ ಠಾಣೆ ಯಾವುದು ಮತ್ತು ಅದರ ಸಂಪರ್ಕ ಸಂಖ್ಯೆ, ಇಮೇಲ್, ಅಲ್ಲದೆ, ಜಿಪಿಎಸ್ ಆನ್ ಮಾಡಿದರೆ ಅಲ್ಲಿಗೆ ಹೋಗುವ ನಕ್ಷೆಯೂ ಗೂಗಲ್ ಮ್ಯಾಪ್ ಮೂಲಕ ಲಭ್ಯ. ಪೊಲೀಸರಿಗೆ ದೂರು/ಸಲಹೆ ನೀಡುವ ವ್ಯವಸ್ಥೆ ಸದ್ಯಕ್ಕೆ ಕಾರ್ಯತತ್ಪರವಾಗಿಲ್ಲ. ವಾಹನದ ಸಂಖ್ಯೆ ನೋಂದಾಯಿಸಿ, ದಂಡ ಕಟ್ಟುವ ಅವಕಾಶವಿದೆ. ಪೊಲೀಸ್ ದೃಢೀಕರಣ, ಧ್ವನಿವರ್ಧಕ (ಮೈಕ್) ಅಳವಡಿಸಲು ಅನುಮತಿ, ಕಳವು ವಾಹನದ ದೂರು ನೀಡಲು ಇಲ್ಲಿ ಸಾಧ್ಯ.

* ಆಸ್ಪತ್ರೆಗಳು ಹಾಗೂ ವೈದ್ಯರ ಅಪಾಯಿಂಟ್‌ಮೆಂಟ್ ಪಡೆಯುವ ಅವಕಾಶವಿದ್ದು, ಪೂರ್ಣರೂಪದಲ್ಲಿ ಇನ್ನಷ್ಟೇ ಕಾರ್ಯಾಚರಿಸಬೇಕಿದೆ.

* ಸಾರಿಗೆ ವಿಭಾಗದಲ್ಲಿ, ಮೇರು ಕ್ಯಾಬ್ಸ್, ಓಲಾ ಕ್ಯಾಬ್ಸ್, ರೈಡಿಂಗೋ ಹಾಗೂ ಮೈಸೂರಿನ ಐಟಿಎಸ್ ವ್ಯವಸ್ಥೆಯ ಲಿಂಕ್ ಇವೆ. ಆರ್‌ಟಿಒ ಸೇವೆಯಡಿ, ಚಾಲನಾ ಪರವಾನಗಿ (ಡಿಎಲ್), ಕಲಿಕಾ ಪರವಾನಗಿ (ಎಲ್ಎಲ್)ಗೆ ಅರ್ಜಿ ಸಲ್ಲಿಸಬಹುದು. ಮೆಟ್ರೋ ರೈಲಿನ ದರ ಮಾಹಿತಿ, ಸ್ಮಾರ್ಟ್ ಕಾರ್ಡ್ ರೀಚಾರ್ಜ್ ವ್ಯವಸ್ಥೆಯಿದೆ.

* ಟೆಲಿಕಾಂ ಸೇವೆಯಡಿ, ಪೋಸ್ಟ್‌ಪೇಯ್ಡ್ ಬಿಲ್ ಪಾವತಿ ಹಾಗೂ ಪ್ರೀಪೇಯ್ಡ್ ರೀಚಾರ್ಜ್ ಆಯ್ಕೆಗಳಿವೆ.

* ಮುನಿಸಿಪಲ್ ಸೇವೆಗಳ ಅಡಿ, ಬೆಂಗಳೂರಿನ ಆಸ್ತಿ ತೆರಿಗೆ ಪಾವತಿ ಆಯ್ಕೆಯಿದ್ದರೆ, ಪೌರಾಡಳಿತ ನಿರ್ದೇಶನಾಲಯದ ಲಿಂಕ್ ಮೂಲಕ ರಾಜ್ಯದ ಯಾವುದೇ ಸ್ಥಳದಿಂದ ಜನನ ಮತ್ತು ಮರಣ ಪ್ರಮಾಣಪತ್ರಕ್ಕೆ ಅರ್ಜಿ ಸಲ್ಲಿಸಬಹುದು.

* ಪ್ರವಾಸ ಸೇವೆಯಡಿ, ಕೆಎಸ್ಸಾರ್ಟಿಸಿ, ರೆಡ್‌ಬಸ್ ಮೂಲಕ ಬಸ್ಸು ಟಿಕೆಟ್, ಐಆರ್‌ಸಿಟಿಸಿ ಮೂಲಕ ರೈಲು ಟಿಕೆಟ್ ಹಾಗೂ ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ಲಿಂಕ್ ಮೂಲಕ ಪ್ಯಾಕೇಜ್ ವಿಚಾರಿಸುವ, ಕಾಯ್ದಿರಿಸುವ ಆಯ್ಕೆಯಿದೆ.

* ಉದ್ಯೋಗ ಸೇವೆಯಡಿ ಬಾಬಾ ಜಾಬ್ ಪೋರ್ಟಲ್‌ನ ಲಿಂಕ್ ಇದ್ದು, ನೋಂದಾಯಿಸಿಕೊಳ್ಳಬೇಕಾಗುತ್ತದೆ.Mobile-One

* ಆಸ್ತಿ ತೆರಿಗೆ, ಆದಾಯ ತೆರಿಗೆ ಇಲಾಖೆಗಳ ಲಿಂಕ್, ತೆರಿಗೆ ಪಾವತಿಗಾಗಿ ಕ್ಲಿಯರ್‌ಟ್ಯಾಕ್ಸ್ ಎಂಬ ಸೇವೆಯ ಲಿಂಕ್ ಇದೆ.

* ಏಕಾಂಗಿಯಾಗಿ ಓಡಾಡುತ್ತಿರುವ ಮಹಿಳೆಯರು, ವಯೋವೃದ್ಧರು, ಮಕ್ಕಳ ಭದ್ರತೆಗಾಗಿ ಎಂ-ಪವರ್ ಎಂಬ ಆ್ಯಪ್ ವ್ಯವಸ್ಥೆಯಿದ್ದು, ಕಾರ್ಯಾಚರಿಸುತ್ತಿದೆ.

* ಟ್ರಾಫಿಕ್ ಪೊಲೀಸರಿಗೆ, ಆರ್‌ಟಿಒಗೆ ಮತ್ತು ಬಿಬಿಎಂಪಿಗೆ ಯಾವುದೇ ಸಮಸ್ಯೆಯ ಬಗ್ಗೆ ದೂರು ನೀಡಬೇಕಿದ್ದರೆ, ಮೊಬೈಲ್‌ನಿಂದಲೇ ಫೋಟೋ ತೆಗೆದು ಅಪ್‌ಲೋಡ್ ಮಾಡಿ ಸಾಕ್ಷ್ಯಾಧಾರ ಸಮೇತ ದೂರು ನೀಡುವ ಆ್ಯಪ್ ಕೂಡ ಅಡಕವಾಗಿದೆ.

* ಕೃಷಿ ಸೇವೆಯಡಿ ರಾಜ್ಯ ಕೃಷಿ ಇಲಾಖೆಯು ಉಚಿತ ಎಸ್ಎಂಎಸ್ ಬೆಳೆಗಳ ಬೆಲೆ ತಿಳಿದುಕೊಳ್ಳಲು, ಪ್ರಕೃತಿ ವಿಕೋಪ, ಹವಾಮಾನ ಮುನ್ಸೂಚನೆ ಪಡೆಯುವ, ಬೆಳೆ ರಕ್ಷಣೆಗೆ ಯೋಜನೆ ರೂಪಿಸಲು ನೆರವಾಗುವ ಆ್ಯಪ್ ಇದೆ.

* ಪಾಸ್‌ಪೋರ್ಟ್, ಮುದ್ರಾಂಕ ಮತ್ತು ನೋಂದಣಿ ಇಲಾಖೆ, ಕಾನೂನು ಸಹಾಯ, ಸಕಾಲ, ಬಿ2ಸಿ (ಉದ್ದಿಮೆಗಳಿಂದ ಗ್ರಾಹಕನ ಬಳಿಗೆ) ಆ್ಯಪ್‌ಗಳ ಗುಚ್ಛವಿದೆ.

* ಪಿಯುಸಿ ಅಂಕಗಳ ಮರುಮಾಪನಕ್ಕೆ ಅರ್ಜಿ, ನಕಲು ಪ್ರತಿಗೆ ಅರ್ಜಿ ಸಲ್ಲಿಸಲು ಮತ್ತು ಎಸ್ಸೆಸ್ಸೆಲ್ಸಿ ಫಲಿತಾಂಶ ತಿಳಿದುಕೊಳ್ಳುವ ಆ್ಯಪ್ ಇದರಲ್ಲೇ ಅಡಕವಾಗಿದೆ.

* ಅಂಚೆ ಇಲಾಖೆ ಮೂಲಕ ಕಳುಹಿಸಲಾದ ಸರಕು, ಲಕೋಟೆಗಳ ಸ್ಥಿತಿಗತಿ ತಿಳಿದುಕೊಳ್ಳಬಹುದು. ಸರಕಾರಿ ನೌಕರರು ತಾವು ಕೆಲಸಕ್ಕೆ ಸೇರಿದಂದಿನಿಂದ ನಿವೃತ್ತಿಯಾಗುವವರೆಗಿನ ಕೆಲಸದ ಮಾಹಿತಿಯನ್ನು ಪಡೆದುಕೊಳ್ಳುವ ಹೆಚ್ಆರ್‌ಎಂಎಸ್ ವ್ಯವಸ್ಥೆಯಿದೆ.

ಬೆಂಗಳೂರು ಕೇಂದ್ರಿತ

ಇವಿಷ್ಟು ಸೇವೆಗಳಿರುವ ಈ ಆ್ಯಪ್ ಅನ್ನು ಹಲವರು ಈಗಾಗಲೇ ಇನ್‌ಸ್ಟಾಲ್ ಮಾಡಿಕೊಂಡಿದ್ದಾರೆ, ಶಹಭಾಸ್ ನೀಡಿದ್ದಾರೆ. ಆದರೆ ಬೆಂಗಳೂರು ಕೇಂದ್ರಿತವಾಗಿಯೇ ಸೇವೆಗಳಿವೆ ಎಂಬ ಬಗ್ಗೆ ಈ ಆ್ಯಪ್‌ನ ಕೆಳಗೆಯೇ ಕಾಮೆಂಟ್‌ಗಳ ಮೂಲಕ ಗಮನ ಸೆಳೆದು, ರಾಜ್ಯದ ಬೇರೆಡೆಯ ಸೇವೆಗಳನ್ನೂ ಸೇರ್ಪಡೆಗೊಳಿಸಲು ಕೋರಿದ್ದಾರೆ.

ಕನ್ನಡ
Screenshot_2014-12-08-15-57-51ಇದೇ ಆ್ಯಪ್ ಅನ್ನು ಕನ್ನಡದಲ್ಲಿ ನೋಡಿದರೆ, ಕೆಲವು ಪದಪ್ರಯೋಗಗಳು, ಅಕ್ಷರ ತಪ್ಪುಗಳು ಜನರು ಆಡಿಕೊಳ್ಳುವಂತೆ ಮಾಡಿವೆ. ಉದಾಹರಣೆಗೆ, ಸಹಾಯ ವಿಭಾಗದಲ್ಲಿ, ಸಹಾಯಕ ‘ಐಕೆ’ಗಳು ಎಂದಿದೆ. ಮರುಪಾವತನೆ (ಮರುಪಾವತಿ), ರಾದ್ಧುಪಡಿಸುವಿಕೆ (ರದ್ದುಪಡಿಸುವಿಕೆ), ಸಂಬಾಂಧಿಸಿದ (ಸಂಬಂಧಿಸಿದ), ನಮ್ಮನು (ನಮ್ಮನ್ನು) ಸಂಪರ್ಕಿಸಿ, ನಿಯಮ ಮತ್ತು ನಿರ್ಭಂಧಿಗಳು (ನಿಯಮ ಮತ್ತು ನಿಬಂಧನೆಗಳು), ವೈದ್ಯರ ಭೇಟಿ ನಿಗದಿಪಡಿಸಲು ಅಪಾಯಿಂಟ್‌ಮೆಂಟ್ ಅನ್ನು ‘ವೈದ್ಯರ ನೇಮಕಾತಿ’ ಅಂತಲೂ, ಹೋಂ (ಮುಖ್ಯಪುಟಕ್ಕೆ) ‘ಮನೆ’ ಎಂದು ಭಾಷಾಂತರಿಸಿ ಬರೆಯಲಾಗಿದೆ. ಮುಂದಿನ ಆವೃತ್ತಿಯಲ್ಲಿ ಇವನ್ನೆಲ್ಲಾ ಸರಿಪಡಿಸುವ ನಿರೀಕ್ಷೆ ಇದೆ.

ಪ್ರಮುಖಾಂಶಗಳು
ಆಂಡ್ರಾಯ್ಡ್ ಮತ್ತು ಆ್ಯಪಲ್ ಸ್ಮಾರ್ಟ್‌ಫೋನ್‌ಗಳಲ್ಲಿ Karnataka Mobileone ಆ್ಯಪ್ ಲಭ್ಯವಿದೆ.
ಸಾಮಾನ್ಯ ಫೀಚರ್ ಫೋನ್‌ಗಳಲ್ಲಿ *161# ಅಂತ ಟೈಪ್ ಮಾಡಿ ಕಳುಹಿಸುವ ಮೂಲಕ, ಸೇವೆಗಳ ಮಾಹಿತಿ ಪಡೆಯಬಹುದು.
ಕಂಪ್ಯೂಟರಿನಲ್ಲೇ ನೋಡುವವರಿಗೆ mobile.karnataka.gov.in ತಾಣವಿದೆ.
ಗ್ರಾಹಕ ಸಹಾಯವಾಣಿಗೆ ಕರೆ ಮಾಡಿ ವಿಚಾರಿಸಲು: 1800-425-425-426
1800-425-425-425 ಗೆ ಮಿಸ್ಡ್ ಕಾಲ್ ನೀಡಿದರೆ, ಈ ಮೇಲಿನ ವಿವರ ಎಸ್ಎಂಎಸ್ ರೂಪದಲ್ಲಿ ಲಭ್ಯ.
161 ಗೆ ಎಸ್ಎಂಎಸ್ ಸೇವೆ ಇದೆ ಎಂದು ಹೇಳಲಾಗಿದೆ. ಪ್ರಯೋಗಕ್ಕಾಗಿ ಹಲೋ ಎಂದು ಟೈಪ್ ಮಾಡಿ ಕಳುಹಿಸಿದ ತಕ್ಷಣ, ನಿರ್ದಿಷ್ಟ ಸೇವೆಗೆ ನಿರ್ದಿಷ್ಟ ಪದಗಳನ್ನು ಎಸ್ಎಂಎಸ್ ರೂಪದಲ್ಲಿ ಕಳುಹಿಸಿ ಎಂಬ ಪ್ರತ್ಯುತ್ತರವೂ ಜತೆಗೆ ಸಂಪೂರ್ಣ ಲಿಂಕ್‌ಗಳ ವಿವರವುಳ್ಳ ಮಾಹಿತಿಯೂ ಬಂದಿದೆ.

ವಿಜಯ ಕರ್ನಾಟಕ, ಡಿಸೆಂಬರ್ 09, 2014

ನಿಮ್ಮ ಫೋನ್ ಲಾಲಿಪಾಪ್‌ಗೆ ಅಪ್‌ಗ್ರೇಡ್ ಆಯಿತೇ? ಇದನ್ನು ತಿಳಿದುಕೊಳ್ಳಿ

ಅವಿನಾಶ್ ಬಿ.
Avinash Column-Newಆಂಡ್ರಾಯ್ಡ್ ಫೋನುಗಳ ಕಾರ್ಯಾಚರಣಾ ವ್ಯವಸ್ಥೆಯ (ಒಎಸ್) ತಾಜಾ ಆವೃತ್ತಿ 5.0 ಅಂದರೆ ಲಾಲಿಪಾಪ್‌ಗೆ ಅಪ್‌ಗ್ರೇಡ್ ಆಗಲು ಹಲವರು ಕಾಯುತ್ತಿದ್ದಾರೆ. ಗೂಗಲ್ ನೆಕ್ಸಸ್ ಸರಣಿಯ ಸಾಧನಗಳ ಬಳಿಕ, ಮೋಟೋರೋಲ ಹಾಗೂ ಉಳಿದ (ಸ್ಯಾಮ್ಸಂಗ್, ಹೆಚ್‌ಟಿಸಿ, ಎಲ್‌ಜಿ, ಸೋನಿ ಇತ್ಯಾದಿ) ಬ್ರ್ಯಾಂಡ್‌ಗಳ ಕಿಟ್‌ಕ್ಯಾಟ್ ಸಾಧನಗಳಿಗೆ ಇದು ಅಪ್‌ಗ್ರೇಡ್ ಆಗಲಿದೆ. ಈಗಾಗಲೇ ಅಪ್‌ಗ್ರೇಡ್ ಆಗಿರುವ ಕೆಲವೇ ಸಾಧನಗಳಲ್ಲಿ ನೆಕ್ಸಸ್ 7 ಟ್ಯಾಬ್ಲೆಟ್ ಒಂದಾಗಿದ್ದು, ನಾನೂ ಅಪ್‌ಗ್ರೇಡ್ ಮಾಡಿಕೊಂಡಿದ್ದೇನೆ. ತಟ್ಟನೇ ಗೋಚರವಾದ ಕೆಲವೊಂದು ವೈಶಿಷ್ಟ್ಯಗಳು ಹಾಗೂ ಬದಲಾಯಿಸಿಕೊಳ್ಳಬಹುದಾದ ಸೆಟ್ಟಿಂಗ್ ಬಗ್ಗೆ ಇಲ್ಲಿ ಕೊಂಚ ಮಾಹಿತಿ ಇದೆ. ನಿಮ್ಮ ಸ್ಮಾರ್ಟ್‌ಫೋನ್‌ಗಳು ಅಪ್‌ಗ್ರೇಡ್ ಆದಾಗ, ನಿಮಗೂ ಉಪಯುಕ್ತವಾಗಬಹುದು.

ಮೊದಲನೆಯದಾಗಿ, ಆಕರ್ಷಕ ನೋಟವಿದೆ. ಸಾಧನದ ಕಾರ್ಯಾಚರಣೆಯ ವೇಗ, ಬ್ಯಾಟರಿ ಚಾರ್ಜ್ ಆಗುವ ವೇಗ ಗಮನ ಸೆಳೆಯುತ್ತದೆ. ಬ್ಯಾಟರಿಯು ಹೆಚ್ಚು ಸಮಯ ಬಾಳಿಕೆ ಬರುತ್ತದೆ. ಚಾರ್ಜ್ ಆಗುತ್ತಿರುವಾಗ, ಚಾರ್ಜ್ ಆಗಲು ಎಷ್ಟು ಸಮಯ ಬೇಕೆಂಬುದು ಲಾಕ್ ಸ್ಕ್ರೀನ್‌ನಲ್ಲೇ ಕಾಣಿಸುತ್ತದೆ. ಪ್ರಮುಖವಾಗಿ ಸೆಟ್ಟಿಂಗ್ಸ್ ಸ್ಕ್ರೀನ್ ಬದಲಾಗಿದೆ. ಜತೆಗೆ, ಈಗಾಗಲೇ ಕಿಟ್‌ಕ್ಯಾಟ್ ಸಾಧನಗಳಲ್ಲಿನ ಐಕಾನ್‌ಗಳ (ವಿಶೇಷವಾಗಿ ಮ್ಯಾಪ್ಸ್, ಜಿಮೇಲ್, ಪ್ಲೇಸ್ಟೋರ್ ಇತ್ಯಾದಿ) ಬಣ್ಣ ಮತ್ತು ವಿನ್ಯಾಸಗಳು ಇತ್ತೀಚೆಗೆ ಬದಲಾಗಿ ಅಪ್‌ಡೇಟ್ ಆಗಿರುವುದು ಹೆಚ್ಚಿನವರ ಗಮನಕ್ಕೆ ಬಂದಿರಬಹುದು. ಇದು ಲಾಲಿಪಾಪ್‌ಗಾಗಿಯೇ ರೂಪುಗೊಂಡ ಬದಲಾವಣೆ.

ನಮಗೆ ಉಪಯುಕ್ತವಾದ ಪ್ರಮುಖ ಮೂರು ಅಂಶಗಳ ಬದಲಾವಣೆಯ ಮಾಹಿತಿ ಇಲ್ಲಿದೆ:
1. ಕನ್ನಡ ಕೀಬೋರ್ಡ್: ಮುಖ್ಯವಾಗಿ ಕನ್ನಡ ಕೀಬೋರ್ಡ್ ಇನ್‌ಬಿಲ್ಟ್ (ಅಂತರ್‌ನಿರ್ಮಿತ) ಆಗಿದೆ. ಎನೇಬಲ್ ಮಾಡಲು, ಸೆಟ್ಟಿಂಗ್ಸ್ > ಲಾಂಗ್ವೇಜ್ & ಇನ್‌ಪುಟ್ ಎಂಬಲ್ಲಿರುವ, ಗೂಗಲ್ ಕೀಬೋರ್ಡ್ ಒತ್ತಿದರೆ, ಅದರ ಸೆಟ್ಟಿಂಗ್ಸ್‌ನಲ್ಲಿ, ಇಂಗ್ಲಿಷ್ ಜತೆಗೆ ಕನ್ನಡ, ತಮಿಳು, ಮಲಯಾಳಂ, ಹಿಂದಿ, ತೆಲುಗು ಮುಂತಾದ ಭಾರತೀಯ ಭಾಷೆಗಳ ಆಯ್ಕೆ ದೊರೆಯುತ್ತದೆ. ಆದರೆ ಕನ್ನಡ ಕೀಬೋರ್ಡ್‌ನಲ್ಲಿ ಒಂದು ಸಮಸ್ಯೆಯಿದೆ. ಸ್ವರಾಕ್ಷರ ‘ಒ’ ಇದೆಯಾದರೂ, ವ್ಯಂಜನಕ್ಕೆ ಹೃಸ್ವ ಸ್ವರ ಸೇರಿಸಲು ಇರುವ ಒ ಅಕ್ಷರ ಭಾಗಕ್ಕೆ ಸೇರಿಸಲು ಕೀ ಇಲ್ಲ. ಹೀಗಾಗಿ ‘ಕೊ’ ಬರೆಯುವ ಬದಲಾಗಿ ದೀರ್ಘ ಸ್ವರವನ್ನು ಸೇರಿಸಿ ‘ಕೋ’ ಅಂತ (ಸಮೀಪದ ಅಕ್ಷರ) ಸದ್ಯಕ್ಕೆ ಬರೆಯಬೇಕಾಗುತ್ತದೆ. ಇದನ್ನು ಗೂಗಲ್ ಗಮನಕ್ಕೆ ತರಲಾಗಿದೆ, ಗಮನಿಸಿ ಸರಿಪಡಿಸುವ ಆಶಾವಾದವಿದೆ.

2. ಫೇಸ್ ಲಾಕ್: ನಮ್ಮ ಮುಖವನ್ನೇ ಅನ್‌ಲಾಕ್ ಪಾಸ್‌ವರ್ಡ್ ಆಗಿ ಹೊಂದಿಸಬಹುದು. ಸೆಟ್ಟಿಂಗ್ಸ್ > ಸೆಕ್ಯುರಿಟಿ > ಸ್ಮಾರ್ಟ್‌ಲಾಕ್ > ಟ್ರಸ್ಟೆಡ್ ಫೇಸ್ ಎಂಬಲ್ಲಿ ಹೋಗಿ ನಿಮ್ಮ ಮುಖವನ್ನು (ಎದುರಿನ ಕ್ಯಾಮೆರಾ ಮೂಲಕ) ದಾಖಲಿಸಿದರೆ, ಈ ಸಾಧನದ ಸ್ಕ್ರೀನ್ ಅನ್‌ಲಾಕ್ ಮಾಡಬೇಕಿದ್ದರೆ, ನಿಮ್ಮ ಮುಖವೇ ಆಗಬೇಕು. ಬೇರೆಯವರಿಗೆ ಅನ್‌ಲಾಕ್ ಮಾಡಲಾಗದು. ಆದರೆ ಇದು ಅಷ್ಟೇನೂ ಸುರಕ್ಷಿತವಲ್ಲ ಯಾಕೆಂದರೆ, ಮುಖವನ್ನು ಕ್ಯಾಮೆರಾಕ್ಕೆ ನಿಖರವಾಗಿ ಗುರುತಿಸುವುದು ಕಷ್ಟ ಮತ್ತು ಕೆಲವರ ಮುಖವು ನಿರ್ದಿಷ್ಟ ಭಾಗದಲ್ಲಿ ಒಂದೇ ರೀತಿಯಾಗಿರಲೂಬಹುದು. ಬೇರೆ ಕಂಪನಿಗಳು (ಮೋಟೋ ಜಿ, ಝೆನ್‌ಫೋನ್, ಗ್ಯಾಲಕ್ಸಿ ಇತ್ಯಾದಿ) ಬದಲಾವಣೆ ಮಾಡಿರುವ ಆಂಡ್ರಾಯ್ಡ್ ಆವೃತ್ತಿಗಳಲ್ಲಿ ಈಗಾಗಲೇ ಫೇಸ್ ಅನ್‌ಲಾಕ್ ತಂತ್ರಜ್ಞಾನವನ್ನು ಅಳವಡಿಸಲಾಗಿದೆ.

3. ಗೂಗಲ್ ನೌ: ಹಿಂದಿನ ಆವೃತ್ತಿಗಳಲ್ಲಿ ಗೂಗಲ್ ನೌ ಎಂಬ, ನಾವು ಹೇಳಿದ್ದನ್ನು ಸರ್ಚ್ ಮಾಡಿ ತೋರಿಸುವ ಧ್ವನಿ ಆಧಾರಿತ ಆಪ್ತ ಸಹಾಯಕವನ್ನು ಸ್ಕ್ರೀನ್ ಅನ್‌ಲಾಕ್ ಮಾಡಿದ ಮೇಲಷ್ಟೇ ತೆರೆಯಬಹುದಾಗಿತ್ತು. ಆದರೆ, ಲಾಲಿಪಾಪ್‌ನಲ್ಲಿ ಒಂದಿಷ್ಟು ಕೆಲಸ ಮಾಡಿದರೆ, ಸ್ಕ್ರೀನ್ ಆಫ್ ಆಗಿರುವಾಗಲೇ, ‘ಓಕೆ ಗೂಗಲ್’ ಅಂತ ಹೇಳಿದರೆ, ನಿಮ್ಮ ಆದೇಶಕ್ಕಾಗಿ ಕಾಯುವ ಮೈಕ್ ಐಕಾನ್ ತೆರೆದುಕೊಂಡು, “ಈಗ ಹೇಳಿ” ಅಂತ ನಿಮ್ಮನ್ನು ಕೇಳುತ್ತದೆ. ಇದನ್ನು ಎನೇಬಲ್ ಮಾಡಲು, ಸೆಟ್ಟಿಂಗ್ಸ್ > ಲ್ಯಾಂಗ್ವೇಜ್ & ಇನ್‌ಪುಟ್ > ವಾಯ್ಸ್ ಇನ್‌ಪುಟ್ > ಎನ್‌ಹ್ಯಾನ್ಸ್‌ಡ್ ಗೂಗಲ್ ಸರ್ವಿಸಸ್ ಎಂಬಲ್ಲಿರುವ ಗಿಯರ್ ಐಕಾನ್ ಒತ್ತಿರಿ. ಅದರಲ್ಲಿ ಭಾಷೆಯನ್ನು English (India) ಅಂತ ಹೊಂದಿಸಿ, ಬಳಿಕ “Ok Google Detection” ಅಂತ ಕ್ಲಿಕ್ ಮಾಡಿ. ಅಲ್ಲಿರುವ When Locked ಎಂಬ ಆಯ್ಕೆಯನ್ನು ಆನ್ ಮಾಡಿದರೆ, ಸ್ಕ್ರೀನ್ ಲಾಕ್ ಆಗಿದ್ದಾಗಲೂ “ಓಕೆ ಗೂಗಲ್” ಅಂತ ಹೇಳಿದರೆ ಸ್ಕ್ರೀನ್ ಓಪನ್ ಆಗುತ್ತದೆ.

ಟೆಕ್ ಟಾನಿಕ್: ಆಂಡ್ರಾಯ್ಡ್‌ನಲ್ಲಿ ಅಡಗಿರುವ ಆಟ
ಆಂಡ್ರಾಯ್ಡ್ ಜೆಲ್ಲಿಬೀನ್, ಕಿಟ್‌ಕ್ಯಾಟ್ ಹಾಗೂ ಲಾಲಿಪಾಪ್ ಕಾರ್ಯಾಚರಣಾ ವ್ಯವಸ್ಥೆ ಇರುವ ಸ್ಮಾರ್ಟ್‌ಫೋನ್‌ಗಳಲ್ಲಿ ಗೌಪ್ಯವಾದ ಗೇಮ್ ಇದೆ ಎಂಬುದು ಹೆಚ್ಚಿನವರಿಗೆ ಗೊತ್ತಿಲ್ಲ. ಹಲವು ಫೋನ್‌ಗಳಲ್ಲಿ ಪರೀಕ್ಷಿಸಿ ನೋಡಿದೆ. ನೀವೂ ಮಾಡಿ ನೋಡಿ. ಸೆಟ್ಟಿಂಗ್ಸ್‌ನಲ್ಲಿ About Phone (ಅಥವಾ Tablet) ಎಂದಿರುವಲ್ಲಿ ನಾಲ್ಕೈದು ಬಾರಿ ಬೆರಳಿಂದ ತಟ್ಟಿರಿ. ಕಿಟ್‌ಕ್ಯಾಟ್ ಅಥವಾ ಲಾಲಿಪಾಪ್ ಚಿತ್ರ ಕಾಣಿಸುತ್ತದೆ. ಅದನ್ನು ತಟ್ಟಿರಿ ಮತ್ತು ಒಂದು ಮೂರ್ನಾಲ್ಕು ಸೆಕೆಂಡು ಒತ್ತಿಹಿಡಿಯಿರಿ. ಫ್ಲ್ಯಾಪಿಬರ್ಡ್ ಮಾದರಿಯ ಗೇಮ್ ತೆರೆದುಕೊಳ್ಳುತ್ತದೆ! ಸಮಯ ಕಳೆಯಲು ಯಾರ ಕಣ್ಣಿಗೂ ಕಾಣಿಸದಿರುವ ರಹಸ್ಯ ವ್ಯವಸ್ಥೆ. ಎಲ್ಲೆಲ್ಲಾ ಏನೇನು ಅಡಗಿದೆಯೋ! ಇದು ನಿಮಗೆ ಬೋನಸ್ ಮಾಹಿತಿ. (ಜಿಂಜರ್‌ಬ್ರೆಡ್‌ನಲ್ಲಿ ಒಂದು ಚಿತ್ರ ಕಾಣಿಸುತ್ತದೆ.)
ವಿಜಯ ಕರ್ನಾಟಕದಲ್ಲಿ ಮಾಹಿತಿ@ತಂತ್ರಜ್ಞಾನ: ಡಿಸೆಂಬರ್ 08, 2014

ಸ್ಮಾರ್ಟ್‌ಫೋನ್ ಸ್ಕ್ರೀನ್ ಕ್ಲೀನ್ ಆಗಿರಿಸಿಕೊಳ್ಳಿ…

ವಿಜಯ ಕರ್ನಾಟಕ ಅಂಕಣ ಮಾಹಿತಿ@ತಂತ್ರಜ್ಞಾನ 92- ಸೆಪ್ಟೆಂಬರ್ 8, 2014
Avinash Column-1ಟಚ್ ಸ್ಕ್ರೀನ್ ಇರುವ ಸ್ಮಾರ್ಟ್‌ಫೋನ್‌ಗಳು ಈಗ ಕಡಿಮೆ ದರದಲ್ಲಿ ಕೈಗೆಟಕುತ್ತಿವೆ. ಇಂಟರ್ನೆಟ್ ಜತೆಗೆ, ಕೈ ಬೆರಳಿಂದ ಸ್ಕ್ರೀನ್ ಸ್ಪರ್ಶಿಸಿದರೆ ಎಲ್ಲ ಕೆಲಸ ಮಾಡುವುದೇ ಈ ಸ್ಮಾರ್ಟ್‌ಫೋನ್‌ಗಳ ವೈಶಿಷ್ಟ್ಯ. ಆದರೆ, ಅವುಗಳನ್ನು ಎಚ್ಚರಿಕೆಯಿಂದ ಬಳಸದಿದ್ದರೆ ಆರೋಗ್ಯ ಸಂಬಂಧಿತ ಸಮಸ್ಯೆಯೂ ಉಂಟಾಗಬಹುದು ಎಂಬುದು ಹೆಚ್ಚಿನವರಿಗೆ ಗೊತ್ತಿಲ್ಲ.

ಶಾಲೆಗಳಲ್ಲಿ ಉಗುರು ಕತ್ತರಿಸಿ ಸ್ವಚ್ಛವಾಗಿಟ್ಟಿರುತ್ತಾರೆಯೇ, ಕೈಗಳಲ್ಲಿ ಕೊಳೆಯಿದೆಯೇ, ಬಾಯಿಗೆ ಕೈ ಹಾಕುತ್ತಾರೆಯೇ ಎಂದೆಲ್ಲಾ ಪರೀಕ್ಷಿಸುವ ಜವಾಬ್ದಾರಿಯನ್ನು ಶಾಲಾ ಮಂತ್ರಿಮಂಡಲದ ‘ಆರೋಗ್ಯ ಸಚಿವರಿಗೆ’ ವಹಿಸುವ ಪರಿಪಾಠವಿತ್ತು. ಯಾವುದೇ ಕಾಯಿಲೆ ಹರಡದಂತೆ ಅಥವಾ ಬಾರದಂತೆ ಕೈಗಳ ಸ್ವಚ್ಛತೆಗೆ ಅಷ್ಟೊಂದು ಪ್ರಾಧಾನ್ಯವಿದೆ. ಊಟ ಮಾಡಿದ ಕೈಯಲ್ಲಿ, ಅಥವಾ ತಮಗರಿವಿಲ್ಲದಂತೆಯೇ ಮೂಗು, ಕಿವಿ, ಬಾಯಿಗೆ ಕೈ ಹಾಕುವುದು, ಪುಟ ತಿರುಗಿಸಲೂ ಬಾಯಿಗೆ ಕೈ, ಊಟ ಮಾಡುತ್ತಿರುವಾಗಲೂ ಸ್ಮಾರ್ಟ್‌ಫೋನ್ ಬಳಸುವವರಿದ್ದಾರೆ… ಇವೇ ಕೈಗಳು ಸದಾ ಕಾಲ ಸ್ಮಾರ್ಟ್‌ಫೋನ್‌ಗಳ ಸಂಪರ್ಕದಲ್ಲಿರುವುದರಿಂದ ಇದನ್ನು ನೆನಪಿಸಬೇಕಾಯಿತು.

ಸ್ಮಾರ್ಟ್‌ಫೋನ್‌ಗಳ ಸ್ಕ್ರೀನ್ ಕೈ, ಕಿವಿ, ಮತ್ತು ಬಾಯಿಗೆ ಸದಾ ಸಂಪರ್ಕದಲ್ಲಿರುವುದರಿಂದಾಗಿ ಅದು ಕೀಟಾಣು, ವೈರಸ್, ಬ್ಯಾಕ್ಟೀರಿಯಾಗಳ ಆವಾಸ ಸ್ಥಾನವಾಗಬಲ್ಲುದು ಎಂಬುದನ್ನು ಹಲವು ಸಂಶೋಧನೆಗಳೂ ತೋರಿಸಿಕೊಟ್ಟಿವೆ. ಕೈಗಳನ್ನಾದರೆ ನೀರು ಹಾಕಿ ಆಗಾಗ್ಗೆ ಶುಚಿ ಮಾಡಬಹುದು, ಆದರೆ ಈ ಟಚ್ ಸ್ಕ್ರೀನ್‌ಗಳನ್ನು? ಅವುಗಳನ್ನು ಆರೋಗ್ಯಪೂರ್ಣವಾಗಿಡುವುದು, ಸೋಂಕು ತಗುಲದಂತೆ ನೋಡಿಕೊಳ್ಳುವುದು ಹೇಗೆ? ಇಲ್ಲಿವೆ ಕೆಲವು ಸಲಹೆಗಳು.

ಕೆಲವರು ಸ್ಕ್ರೀನ್ ಗಾರ್ಡ್ (ಸ್ಕ್ರೀನ್ ಪ್ರೊಟೆಕ್ಟರ್) ಎಂಬ ತೆಳುವಾದ ಪದರವನ್ನು ಅಂಟಿಸಿಕೊಂಡಿರುತ್ತಾರೆ. ಇದರಲ್ಲಿ ಗ್ಲಾಸಿ (Glossy) ಬದಲು ಒಂದಿಷ್ಟು ದೊರಗು ಮೇಲ್ಮೈ ಇರುವ ಮ್ಯಾಟ್ (matt) ಸ್ಕ್ರೀನ್ ಗಾರ್ಡ್‌ಗಳನ್ನು ಆಯ್ದುಕೊಂಡರೆ, ಬೆವರು-ಧೂಳು ಸೇರಿ ಆಗುವ ಕಲೆಯಾಗುವುದನ್ನು ಕೊಂಚ ಮಟ್ಟಿಗೆ ತಡೆಯಬಹುದು. ಆದರೆ ಆಗಾಗ್ಗೆ ಅದನ್ನು ಬದಲಿಸುತ್ತಿರಬೇಕು. ಇನ್ನೊಂದು ಗಮನಿಸಬೇಕಾದ ಅಂಶವೆಂದರೆ, ಯಾವುದೇ ಎಲೆಕ್ಟ್ರಾನಿಕ್ ಸಾಧನವನ್ನು ಸ್ವಚ್ಛಗೊಳಿಸುವ ಮುನ್ನ ಅದನ್ನು ಸ್ವಿಚ್ ಆಫ್ ಮಾಡಬೇಕು, ತೆಗೆಯಬಹುದಾಗಿದ್ದರೆ ಅವುಗಳ ಬ್ಯಾಟರಿ ತೆಗೆದ ಬಳಿಕವೇ ಕ್ಲೀನ್ ಮಾಡುವುದು ಉತ್ತಮ.

ಸ್ಕ್ರೀನ್ ಒರೆಸಲು, ಧೂಳಿನ ಕಣ, ಕಣ್ಣಿಗೆ ಕಾಣಬಲ್ಲ ಕೊಳೆ ಹಾಗೂ ಬೆರಳಚ್ಚಿನ ಕಲೆಗಳನ್ನು ನಿವಾರಿಸಲು ಮೆದುವಾದ ಬಟ್ಟೆ ಅಥವಾ ಮೈಕ್ರೋಫೈಬರ್ ಬಟ್ಟೆಯಿಂದ ಒರೆಸಿ. ಟಿಶ್ಯೂಪೇಪರ್ ಅಥವಾ ಪೇಪರ್ ಟವೆಲ್‌ಗಳನ್ನು ಬಳಸಿದಲ್ಲಿ, ಅವುಗಳಲ್ಲಿರಬಹುದಾದ ಧೂಳಿನ ಕಣಗಳಿಂದಾಗಿ ಸ್ಕ್ರೀನ್‌ಗೆ ಹಾನಿಯಾಗುವ ಸಾಧ್ಯತೆಗಳಿರಬಹುದು. ಮಾರುಕಟ್ಟೆಯಲ್ಲಿ 700-800 ರೂ. ಆಸುಪಾಸಿನಲ್ಲಿ ಗ್ಯಾಜೆಟ್ ಕ್ಲೀನಿಂಗ್ ಕಿಟ್ ದೊರೆಯುತ್ತದೆ. ಇದರಲ್ಲಿ ಸ್ಕ್ರೀನ್ ಅಥವಾ ಲೆನ್ಸ್ ಕ್ಲೀನ್ ಮಾಡಲು, ಧೂಳು ನಿವಾರಿಸಲು ಜೆಲ್, ಮೈಕ್ರೋಫೈಬರ್ ಬಟ್ಟೆ, ಹ್ಯಾಂಡ್ ಬ್ಲೋ ಪಂಪ್, ಬ್ರಶ್ ಮುಂತಾದವು ಇರುತ್ತದೆ. ಒಂದು ಕಿಟ್ ತಂದಿಟ್ಟುಕೊಂಡರೆ ಕ್ಯಾಮೆರಾ, ಲ್ಯಾಪ್‌ಟಾಪ್, ಟ್ಯಾಬ್ಲೆಟ್, ಸ್ಮಾರ್ಟ್‌ಫೋನ್, ಕೀಬೋರ್ಡ್, ಮಾನಿಟರ್ ಇತ್ಯಾದಿ ಗ್ಯಾಜೆಟ್‌ಗಳನ್ನು ಶುಚಿಗೊಳಿಸಲು ಬಳಸಬಹುದು.

ಜಾಸ್ತಿ ಕೊಳೆ ಇದ್ದರೆ ಒಂದಿಷ್ಟು ಡಿಸ್ಟಿಲ್ಡ್ ವಾಟರ್ ತೆಗೆದುಕೊಂಡು, ಸ್ಪ್ರೇಯರ್ ಮೂಲಕ ಮೆದುವಾಗಿ ಹಾಗೂ ಒಳಗಿನ ಭಾಗಗಳಿಗೆ ತಗುಲದಂತೆ ಎಚ್ಚರಿಕೆಯಿಂದ ಸ್ಪ್ರೇ ಮಾಡಿ, ಬಳಿಕ ಮೈಕ್ರೋಫೈಬರ್ ಬಟ್ಟೆಯಿಂದ ಒರೆಸಿರಿ. ಕೊಳೆಯ ಅಂಶ ಗಟ್ಟಿಯಿದ್ದರೆ, ಈ ಡಿಸ್ಟಿಲ್ಡ್ ವಾಟರ್ ಜತೆ ಕೊಂಚ ವಿನೆಗರ್ ಬಳಸಿ. ನೀರಿನಂಶವೇನಾದರೂ ಒಳಭಾಗಕ್ಕೆ ಹೋಯಿತು ಎಂಬ ಶಂಕೆ ಬಂದಲ್ಲಿ ಅಕ್ಕಿ ಅಥವಾ ಸಿಲಿಕಾ ಜೆಲ್ ಹರಳುಗಳ ಮಧ್ಯೆ ಸ್ಮಾರ್ಟ್‌ಫೋನನ್ನು ಸ್ವಲ್ಪ ಹೊತ್ತು ಇರಿಸಿ ತೆಗೆಯಿರಿ. ಇದು ನೀರಿನಂಶವನ್ನು ಹೀರಿಕೊಳ್ಳಬಲ್ಲುದು. ಆದರೆ ತೇವಾಂಶ ನಿವಾರಿಸಲು ಹೇರ್ ಡ್ರೈಯರ್ ಯಾವತ್ತೂ ಬಳಸಬಾರದು. ಸೂಕ್ಷ್ಮ ಭಾಗಗಳಿರುವುದರಿಂದ, ಬಿಸಿ ಜಾಸ್ತಿಯಾಗಿ ಅಥವಾ ವೇಗದ ಗಾಳಿಯಿಂದ ಬಿಡಿಭಾಗಗಳಿಗೆ ತೊಂದರೆಯಾಗಬಹುದು.

ಲ್ಯಾಪ್‌ಟಾಪ್ ಅಥವಾ ಟ್ಯಾಬ್ಲೆಟ್‌ಗೆ ಉಪಯೋಗಿಸುವ ಕೀಬೋರ್ಡ್‌ಗಳನ್ನು ಕೂಡ ಇದೇ ಮಾದರಿ ಸ್ವಚ್ಛಗೊಳಿಸಬಹುದು. ಈ ಗ್ಯಾಜೆಟ್‌ಗಳ ಪೋರ್ಟ್‌ಗಳನ್ನು ಸ್ವಚ್ಛಗೊಳಿಸಬೇಕೆಂದಾದರೆ, ತುಂಬಾ ಎಚ್ಚರಿಕೆಯಿಂದ ಮೆದುವಾಗಿ ಕಾಟನ್ ಬಡ್ ಬಳಸಿ. ಒಳಗಿನ ಧೂಳು, ಕೊಳೆ ನಿವಾರಿಸಲು, ಗ್ಯಾಜೆಟ್ ಕ್ಲೀನಿಂಗ್ ಕಿಟ್‌ನಲ್ಲಿ ಅಥವಾ ಪ್ರತ್ಯೇಕವಾಗಿ ದೊರೆಯಬಹುದಾದ ಹ್ಯಾಂಡ್ ಪಂಪ್ (ಕೈಯಿಂದ ಅದುಮಿ ಜೋರಾಗಿ ಬ್ಲೋ ಮಾಡುವ ಸಾಧನ) ಬಳಸಿ. ಒಟ್ಟಿನಲ್ಲಿ, ನಮ್ಮ ಕೈಗಳನ್ನು ಸ್ವಚ್ಛವಾಗಿಟ್ಟುಕೊಂಡರೆ, ಗ್ಯಾಜೆಟ್‌ಗಳೂ ಸ್ವಚ್ಛವಾಗಿರುತ್ತವೆ.

‘ನಾನು’ ಆ್ಯಪ್ ಮತ್ತೆ ಬಂತು
2ಜಿ ಸಂಪರ್ಕದಲ್ಲಿಯೇ ಉಚಿತ ಕರೆಗಳನ್ನು ಮಾಡಲು ಅನುಕೂಲ ಮಾಡಿಕೊಡುವ ಘೆಚ್ಞ್ಠ ಆ್ಯಪ್ ಬಗ್ಗೆ ಎರಡು ವಾರಗಳ ಹಿಂದೆ ಬರೆದಿದ್ದೆ. ತಾಂತ್ರಿಕತೆಯ ಸುಧಾರಣೆಗಾಗಿ ಅದು ಆಂಡ್ರಾಯ್ಡ್ ಪ್ಲೇ ಸ್ಟೋರ್‌ನಲ್ಲಿ ಇರಲಿಲ್ಲ. ಈಗ ಸರಿಪಡಿಸಲಾಗಿದೆ. ಆಸಕ್ತರು ಘೆಚ್ಞ್ಠ ಅಳವಡಿಸಿಕೊಳ್ಳಬಹುದು. ಕಿರು ವಿಳಾಸ ಇಲ್ಲಿದೆ: http://bit.ly/NanuApp

ಟೆಕ್ ಟಾನಿಕ್
Notable PDF

ನೋಟೆಬಲ್ ಪಿಡಿಎಫ್ ಎಂಬ ಎಕ್ಸ್‌ಟೆನ್ಷನ್ ಒಂದನ್ನು ನಿಮ್ಮ ಗೂಗಲ್ ಕ್ರೋಮ್ ಬ್ರೌಸರ್‌ಗೆ ಅಳವಡಿಸಿಕೊಂಡು ಬಿಟ್ಟರೆ, ಬ್ರೌಸರಿನಲ್ಲೇ ಪಿಡಿಎಫ್ ಫೈಲುಗಳನ್ನು ಎಡಿಟ್ ಮಾಡಲು ಅನುಕೂಲವಾಗುತ್ತದೆ. ಇದಕ್ಕಾಗಿ ಪ್ರತ್ಯೇಕ ಸಾಫ್ಟ್‌ವೇರ್ ಖರೀದಿಸಬೇಕಾಗಿಲ್ಲ. ಈ ಎಕ್ಸ್‌ಟೆನ್ಷನ್ ಅನ್ನು ಇನ್‌ಸ್ಟಾಲ್ ಮಾಡಿಕೊಂಡು ಖಾತೆ ರಚಿಸಿಕೊಂಡರೆ, ಪಿಡಿಎಫ್ ತಿದ್ದುಪಡಿ ಮಾಡಿ, ಅದಕ್ಕೆ ಕಾಮೆಂಟ್‌ಗಳನ್ನು ಹಾಕಬಹುದು. ಡ್ರಾಪ್‌ಬಾಕ್ಸ್ ಮತ್ತು ಬಾಕ್ಸ್ ಎಂಬ ಕ್ಲೌಡ್ ಸೇವೆಗಳಿಂದಲೂ ಪಿಡಿಎಫ್ ಓಪನ್ ಮಾಡಲು ಮತ್ತು ಸೇವ್ ಮಾಡಲು ಸಾಧ್ಯ. ಗೂಗಲ್ ಡ್ರೈವ್‌ಗೆ ಸೇವ್ ಮಾಡಬೇಕಿದ್ದರೆ ಅಥವಾ ಡಿಜಿಟಲ್ ಸಹಿ ಹಾಕಬೇಕಿದ್ದರೆ ತಿಂಗಳಿಗೆ ಸುಮಾರು 5 ಡಾಲರ್ ಪಾವತಿಸಬೇಕಾಗುತ್ತದೆ. ಗೂಗಲ್ ಕ್ರೋಮ್ ಆ್ಯಪ್ ಸ್ಟೋರ್‌ನಲ್ಲಿ Notable PDF ಅಂತ ಸರ್ಚ್ ಮಾಡಿದರೆ ಅದರ ಲಿಂಕ್ ಸಿಗುತ್ತದೆ.

ಹಳೆಯ ಸ್ಮಾರ್ಟ್‌ಫೋನ್ ವಿಲೇವಾರಿಗೆ ಮುನ್ನ

ಮಾಹಿತಿ @ ತಂತ್ರಜ್ಞಾನ: ವಿಜಯ ಕರ್ನಾಟಕ ಅಂಕಣ ಜುಲೈ 14, 2014

ಈಗಿನ ಆಕರ್ಷಕ ಕೊಡುಗೆಗಳು, ಕ್ಷಣಕ್ಷಣಕ್ಕೆ ಬದಲಾಗುತ್ತಿರುವ ತಂತ್ರಜ್ಞಾನ, ಇರುವ ಸಾಫ್ಟ್‌ವೇರ್‌ನ ಉನ್ನತೀಕರಣ… ಇವುಗಳೆಲ್ಲವುಗಳಿಂದಾಗಿ ಜನರಲ್ಲಿ ಸ್ಮಾರ್ಟ್‌ಫೋನ್ ಬಗ್ಗೆ ವಿಶೇಷ ಆಕರ್ಷಣೆ. ಹಳೆಯ ಸ್ಮಾರ್ಟ್‌ಫೋನ್‌ಗಳನ್ನು ಎಕ್ಸ್‌ಚೇಂಜ್ ಮಾಡಿಸಲೆಂದು ಹೋದಾಗ ದೊರೆಯುವ ಮೌಲ್ಯ ತೀರಾ ಕಡಿಮೆಯೇ ಆದರೂ, ಭರ್ಜರಿ ಕೊಡುಗೆ ನೀಡಲಾಗುತ್ತಿದೆಯೆಂಬ ಪ್ರಚಾರಕ್ಕೆ ಮರುಳಾಗಿ, ಹೊಸ ಸ್ಮಾರ್ಟ್‌ಫೋನ್ ಕೊಳ್ಳುವವರೂ ಸಾಕಷ್ಟು ಮಂದಿ ಇದ್ದಾರೆ. ಅಗ್ಗದ ದರದಲ್ಲಿ ಅತ್ಯುನ್ನತ ತಂತ್ರಜ್ಞಾನ ಲಭ್ಯವಿರುವ ಆಂಡ್ರಾಯ್ಡ್ ಫೋನ್‌ಗಳ ಬಳಕೆದಾರರು ಫೋನ್ ಬದಲಿಸುವ ಮುನ್ನ ಕೆಲವು ಕ್ರಮಗಳನ್ನು ಅನುಸರಿಸಿದರೆ ಸುರಕ್ಷಿತ.

ಸ್ಮಾರ್ಟ್‌ಫೋನ್ ಎಂದರೆ, ಅದರಲ್ಲಿ ಇಮೇಲ್, ವಾಟ್ಸ್‌ಆ್ಯಪ್, ಫೇಸ್‌ಬುಕ್, ಟ್ವಿಟರ್ ಇತ್ಯಾದಿ ಖಾತೆಗಳಿಗೆ ಸದಾ ಲಾಗಿನ್ ಆಗಿರುತ್ತೀರಿ. ನಿಮ್ಮ ಇಷ್ಟದ ಫೋಟೋಗಳು, ಸಂದೇಶಗಳು, ಆಡಿಯೋ-ವೀಡಿಯೋ ಫೈಲುಗಳನ್ನು ಸೇವ್ ಮಾಡಿಟ್ಟುಕೊಂಡಿರುತ್ತೀರಿ. ಮೆಮೊರಿ ಕಾರ್ಡ್‌ನಲ್ಲಿ ಫೈಲ್‌ಗಳು ಸೇವ್ ಆಗಿದ್ದರೆ ಏನೂ ತೊಂದರೆಯಾಗುವುದಿಲ್ಲ. ಆದರೆ, ಹ್ಯಾಂಡ್‌ಸೆಟ್‌ನ ಇಂಟರ್ನಲ್ ಮೆಮೊರಿಯಲ್ಲಿ ಸೇವ್ ಆಗಿರುವ ಫೈಲುಗಳ ಬಗ್ಗೆ ನೀವು ಅತ್ಯಂತ ಹೆಚ್ಚು ಕಾಳಜಿ ವಹಿಸಬೇಕಾಗುತ್ತದೆ.

ಹಳೆಯ ಸ್ಮಾರ್ಟ್‌ಫೋನ್‌ಗಳನ್ನು ಬೇರೆಯವರಿಗೆ ಮಾರುವ ಅಥವಾ ವಿನಿಮಯ ಮಾಡುವ ಮುನ್ನ, ಅದರಲ್ಲಿರುವ ಫೈಲುಗಳನ್ನು ಅಳಿಸಿಹಾಕಲೇಬೇಕು. ಯಾಕೆಂದರೆ, ಈ ಸ್ಮಾರ್ಟ್‌ಫೋನ್‌ನ್ನು ಅವರು ಬಳಸಲಾರಂಭಿಸಿದಾಗ, ನಿಮ್ಮ ಇಮೇಲ್‌ಗೆ ಲಾಗಿನ್ ಆಗಬಹುದು; ಸಂದೇಶಗಳನ್ನು ನೋಡಬಹುದು ಹಾಗೂ ಇತರ ಫೈಲ್‌ಗಳನ್ನು ಬಳಸಿಕೊಳ್ಳುವ ಸಾಧ್ಯತೆಗಳಿರುತ್ತವೆ. ಹೀಗಾಗಿ, ಅದನ್ನು ಬೇರೆಯವರಿಗೆ ಹಸ್ತಾಂತರಿಸುವ ಮುನ್ನ ಈ ಕ್ರಮಗಳನ್ನು ಅನುಸರಿಸಿ.

ಮೊದಲನೆಯದಾಗಿ, ಅದರಲ್ಲಿರುವ ಎಲ್ಲ ಫೈಲುಗಳು, ಸೆಟ್ಟಿಂಗ್‌ಗಳನ್ನು ನಿಮ್ಮಲ್ಲಿ ಬ್ಯಾಕಪ್ ಇಟ್ಟುಕೊಳ್ಳಬೇಕು. ಕೆಲವು ಫೋನ್‌ಗಳಲ್ಲಿ ಮೆಮೊರಿ ಕಾರ್ಡ್‌ಗೆ ಬ್ಯಾಕಪ್ ಮಾಡಿಕೊಳ್ಳುವ ಆಯ್ಕೆಯಿದ್ದರೆ, ಹೆಚ್ಚಿನ ಆಂಡ್ರಾಯ್ಡ್ ಫೋನ್‌ಗಳಲ್ಲಿ ಗೂಗಲ್ ಸರ್ವರ್‌ನಲ್ಲೇ ಬ್ಯಾಕಪ್ ಇರಿಸಿಕೊಳ್ಳುವ ಆಯ್ಕೆಯಿರುತ್ತದೆ.

ಬ್ಯಾಕಪ್ ಮಾಡಬೇಕಿದ್ದರೆ, ಮೆನುವಿನಲ್ಲಿ ಸೆಟ್ಟಿಂಗ್‌ಗೆ ಹೋದರೆ, ಅಲ್ಲಿ ‘ಬ್ಯಾಕಪ್ ಆ್ಯಂಡ್ ರೀಸೆಟ್’ ಎಂಬ ವಿಭಾಗವಿರುತ್ತದೆ. ಇಂಟರ್ನೆಟ್ ಆನ್ ಮಾಡಿಕೊಂಡು, ‘ಬ್ಯಾಕಪ್ ಮೈ ಡೇಟಾ’ ಕ್ಲಿಕ್ ಮಾಡಿದರೆ, ಎಲ್ಲ ಮಾಹಿತಿ ಹಾಗೂ ಫೈಲ್‌ಗಳು ನೀವು ಆಂಡ್ರಾಯ್ಡ್ ಸಾಧನಕ್ಕೆ ಲಾಗಿನ್ ಆಗಿರುವ ನಿಮ್ಮ ಜಿಮೇಲ್ ಮೂಲಕ ಗೂಗಲ್ ಸರ್ವರ್‌ನಲ್ಲಿ ಸೇವ್ ಆಗುತ್ತದೆ. ಹೊಸ ಆಂಡ್ರಾಯ್ಡ್ ಸಾಧನ ಕೊಂಡುಕೊಂಡಾಗ, ಅದಕ್ಕೆ ಅದೇ ಜಿಮೇಲ್ ಐಡಿಯಲ್ಲಿಯೇ ಲಾಗಿನ್ ಆಗಿ. ಬಳಿಕ ಅದರಲ್ಲಿನ ಸೆಟ್ಟಿಂಗ್ಸ್‌ನ ಬ್ಯಾಕಪ್ ವಿಭಾಗಕ್ಕೆ ಹೋದರೆ, ‘ಆಟೋಮ್ಯಾಟಿಕ್ ರೀಸ್ಟೋರ್’ ಆಯ್ಕೆ ಮಾಡಿಕೊಂಡರೆ ಸಾಕು. ನಿಮ್ಮೆಲ್ಲ ಸಂಪರ್ಕ ಸಂಖ್ಯೆಗಳು (ಕಾಂಟಾಕ್ಟ್ ನಂಬರ್‌ಗಳು), ಫೈಲ್‌ಗಳು, ಸೆಟ್ಟಿಂಗ್‌ಗಳೆಲ್ಲವೂ ಹೊಸ ಫೋನ್‌ನಲ್ಲಿ ಸಿಂಕ್ರನೈಜ್ ಆಗಿರುತ್ತವೆ. ಇದರಿಂದ, ನೀವು ಮತ್ತೆ ಎಲ್ಲ ಸಂಪರ್ಕ ಸಂಖ್ಯೆಗಳನ್ನು ಒಂದೊಂದಾಗಿ ಟೈಪ್ ಮಾಡುವ ತ್ರಾಸ ತಪ್ಪುತ್ತದೆ; ಎಸ್‌ಎಂಎಸ್ ಸಂದೇಶಗಳನ್ನು, ಇತರ ಫೈಲುಗಳನ್ನು ಮತ್ತೆ ಕಾಪಿ ಮಾಡಿಟ್ಟುಕೊಳ್ಳುವ ಪ್ರಮೇಯವೂ ಇರುವುದಿಲ್ಲ.

ಬಳಸುತ್ತಿರುವಾಗಲೇ ಈ ರೀತಿ ಆಗಾಗ್ಗೆ ಬ್ಯಾಕಪ್ ಮಾಡಿಟ್ಟುಕೊಳ್ಳುವುದರಿಂದ ಅಥವಾ ಅನಿಯಮಿತ ಇಂಟರ್ನೆಟ್ ಸಂಪರ್ಕ (ಅನ್‌ಲಿಮಿಟೆಡ್ ಡೇಟಾ ಪ್ಯಾಕ್) ಇದೆಯೆಂದಾದರೆ ‘ಆಟೋಮ್ಯಾಟಿಕ್ ಬ್ಯಾಕಪ್’ ಆಯ್ಕೆ ಮಾಡಿಟ್ಟುಕೊಂಡರೆ, ತುಂಬಾ ಅನುಕೂಲ. ಯಾಕೆಂದರೆ, ಆಕಸ್ಮಿಕವಾಗಿ ನಿಮ್ಮ ಸ್ಮಾರ್ಟ್‌ಫೋನ್ ಕಳೆದು ಹೋದರೆ ನಿಮ್ಮ ಎಲ್ಲ ಗೌಪ್ಯ ಮಾಹಿತಿ, ಪಿನ್, ಪಾಸ್‌ವರ್ಡ್, ಸಂಪರ್ಕ ಸಂಖ್ಯೆ, ಫೈಲುಗಳು, ಸಂದೇಶಗಳು ನಿಮಗೆ ಪುನಃ ಲಭ್ಯವಾಗುತ್ತವೆ.

ಇದಾದ ಬಳಿಕ, ಲಾಗಿನ್ ಅಗತ್ಯವಿರುವ ಪ್ರತಿಯೊಂದು ಆ್ಯಪ್‌ಗೂ ಹೋಗಿ (ಫೇಸ್‌ಬುಕ್, ಮೆಸೆಂಜರ್, ಟ್ವಿಟರ್, ಇಮೇಲ್, ವಾಟ್ಸ್‌ಆ್ಯಪ್… ಇತ್ಯಾದಿ) ಲಾಗೌಟ್ ಮಾಡುತ್ತಾ ಬನ್ನಿ.

ಇಷ್ಟೆಲ್ಲ ಆದಮೇಲೆ ಫೋನನ್ನು ಫ್ಯಾಕ್ಟರಿಯಿಂದ ಬಂದಾಗ ಹೇಗಿತ್ತೋ, ಆ ಸ್ಥಿತಿಗೆ ಮರಳಿಸುವ ‘ಫ್ಯಾಕ್ಟರಿ ಡೇಟಾ ರೀಸೆಟ್’ ಎಂಬ ಕ್ರಮವನ್ನು ಅನುಸರಿಸಬೇಕು. ಅದಕ್ಕಾಗಿ, ‘ಬ್ಯಾಕಪ್ ಆ್ಯಂಡ್ ರೀಸೆಟ್’ ವಿಭಾಗದಲ್ಲಿ ‘ಫ್ಯಾಕ್ಟರಿ ಡೇಟಾ ರೀಸೆಟ್’ ಆಯ್ದುಕೊಂಡರೆ, ಎಲ್ಲ ಫೈಲ್, ಮಾಹಿತಿ, ಲಾಗಿನ್ ಮಾಹಿತಿ ಎಲ್ಲವೂ ಡಿಲೀಟ್ ಆಗಿಬಿಡುತ್ತವೆ.

ಕೆಲವೊಮ್ಮೆ, ಈ ರೀತಿ ಮಾಡಿದಾಗಲೂ ತಾಂತ್ರಿಕ ಕಾರಣಗಳಿಗಾಗಿ, ಕೆಲವು ಫೈಲುಗಳು, ಲಾಗಿನ್ ಕ್ರೆಡೆನ್ಷಿಯಲ್‌ಗಳು ಉಳಿದುಕೊಳ್ಳುವ ಸಾಧ್ಯತೆಗಳಿರುತ್ತವೆ. ಈ ಕಾರಣಕ್ಕೆ, ಪುನಃ ಎಸ್‌ಎಂಎಸ್ ವಿಭಾಗವನ್ನು ಮತ್ತೊಮ್ಮೆ ಪರಿಶೀಲಿಸಿ, ಇಮೇಲ್, ಫೇಸ್‌ಬುಕ್, ಮೆಸೆಂಜರ್, ವಾಟ್ಸ್‌ಆ್ಯಪ್ ಮತ್ತಿತರ ಖಾತೆಗಳಿಗೆ ಲಾಗಿನ್ ಆಗಲು ಮತ್ತೊಮ್ಮೆ ಪ್ರಯತ್ನಿಸಿ ನೋಡಿ. ಪುನಃ ಸೈನ್ ಇನ್ ಆಗಬೇಕೆಂದು ಕೇಳಿದರೆ, ಎಲ್ಲವೂ ಸರಿ ಇದೆ ಎಂದರ್ಥ. ಈ ಎಲ್ಲವನ್ನೂ ಖಚಿತಪಡಿಸಿಕೊಂಡು, ಸ್ಮಾರ್ಟ್‌ಫೋನ್‌ನಿಂದ ಮೆಮೊರಿ ಕಾರ್ಡ್ ಹಾಗೂ ಸಿಮ್ ಕಾರ್ಡ್‌ಗಳನ್ನು ತೆಗೆದು ಅದನ್ನು ಮಾರಲು ಅಥವಾ ವಿನಿಮಯಕ್ಕೆ ಕೊಟ್ಟುಬಿಡಿ.

ಟೆಕ್-ಟಾನಿಕ್
ಪ್ರಯಾಣದ ದೂರ, ಮಾರ್ಗ ತಿಳಿಯಲು
ಯಾವುದಾದರೂ ಬೇರೆ ಊರಿಗೆ ಹೋಗೋ ಪ್ಲಾನ್ ಇದೆಯಾ? ನಿಮ್ಮೂರಿಂದ ಅಲ್ಲಿಗೆ ಎಷ್ಟು ದೂರ ಅಂತ ತಿಳಿದುಕೊಳ್ಳಬೇಕೇ? ಗೂಗಲ್ ಮ್ಯಾಪ್ಸ್ ಮಾತ್ರವೇ ಅಲ್ಲ, ಈ ಕುರಿತು ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು DistanceBetween2.Com ಎಂಬ ಜಾಲತಾಣವಿದೆ. ಅಲ್ಲಿ ಪರಸ್ಪರ ಸಂಪರ್ಕಿಸಬೇಕಾದ ಊರುಗಳ ಹೆಸರು ಟೈಪ್ ಮಾಡಿದರೆ ಸಾಕು. ಎರಡು ಊರುಗಳ ನಡುವಿನ ಅಂತರ, ಬಸ್ಸಿನಲ್ಲಿ ಹೋಗಲು ಎಷ್ಟು ಸಮಯ ಬೇಕಾಗುತ್ತದೆ, ನಡುವೆ ಇರಬಹುದಾದ ಪ್ರೇಕ್ಷಣಿಯ ಸ್ಥಳಗಳು ಯಾವುವು ಎಂದು ಮಾತ್ರವಲ್ಲದೆ, ಗೂಗಲ್ ನಕ್ಷೆಯ ಮೂಲಕ ಹೇಗೆ ಹೋಗಬೇಕು ಎಂಬ ಮಾಹಿತಿಯನ್ನೂ ಒದಗಿಸಲಾಗುತ್ತದೆ. ಮಾರ್ಗ ನಿರ್ದೇಶನವೂ ಇದೆ. ಟ್ರೈ ಮಾಡಿ ನೋಡಬಹುದು.

ಆಂಡ್ರಾಯ್ಡ್ ಸಾಧನ ಬಳಕೆಯಲ್ಲಿ ವ್ಯತ್ಯಾಸ

ಮಾಹಿತಿ@ತಂತ್ರಜ್ಞಾನ: ವಿಜಯ ಕರ್ನಾಟಕ ಅಂಕಣ -81, ಜೂನ್ 09, 2014
ಜಗತ್ತಿನಾದ್ಯಂತ ವೇಗವಾಗಿ ಜನಪ್ರಿಯತೆ ಗಳಿಸುತ್ತಿರುವುದು ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಂ ಇರುವ ಸ್ಮಾರ್ಟ್‌ಫೋನ್ ಹಾಗೂ ಟ್ಯಾಬ್ಲೆಟ್‌ಗಳು. ಇತ್ತೀಚೆಗೆ ಬಂದ ಮೈಕ್ರೋಸಾಫ್ಟ್ ಕಂಪನಿ ಒಡೆತನದಲ್ಲಿರುವ ವಿಂಡೋಸ್ 8 ಆಪರೇಟಿಂಗ್ ಸಿಸ್ಟಂ ಇರುವ ಸಾಧನಗಳು ಆಂಡ್ರಾಯ್ಡ್‌ಗೆ ಸಡ್ಡು ಹೊಡೆಯುವ ಲಕ್ಷಣಗಳಿವೆಯಾದರೂ, ಗೂಗಲ್ ಒಡೆತನದಲ್ಲಿರುವ ಆಂಡ್ರಾಯ್ಡ್, ಭಾರತದಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸಲು ಪ್ರಮುಖ ಕಾರಣವೆಂದರೆ, ಅದು ಅಗ್ಗದ ದರದಲ್ಲಿ ಮತ್ತು ಮುಕ್ತವಾಗಿ ಲಭ್ಯ.

ಈ ಓಪನ್ ಸೋರ್ಸ್ (ಮುಕ್ತವಾಗಿ ಲಭ್ಯವಿರುವ) ತಂತ್ರಾಂಶವನ್ನು ಬಳಸಿಕೊಂಡು ಮೊಬೈಲ್ ಹ್ಯಾಂಡ್‌ಸೆಟ್ ತಯಾರಕರು ಕಡಿಮೆ ಬೆಲೆಯ ಸಾಧನಗಳನ್ನು ಮಾರುಕಟ್ಟೆಗೆ ಬಿಡುತ್ತಿದ್ದಾರೆ. ಇಂತಹಾ ಆಂಡ್ರಾಯ್ಡ್ ಸಾಧನಗಳು 2-3 ಸಾವಿರ ರೂಪಾಯಿಯಷ್ಟು ಕನಿಷ್ಠ ಬೆಲೆಗೆ ಮಾರುಕಟ್ಟೆಯಲ್ಲಿ ಲಭ್ಯ. ಚೀನಾ ಮತ್ತು ಕೊರಿಯಾದ (ಬ್ರ್ಯಾಂಡೆಡ್ ಅಲ್ಲದ) ಹ್ಯಾಂಡ್‌ಸೆಟ್ ತಯಾರಕರೆಲ್ಲಾ ಈ ತಂತ್ರಾಂಶ ಬಳಸಿಕೊಂಡು ಹ್ಯಾಂಡ್‌ಸೆಟ್‌ಗಳನ್ನು ಮಾರುಕಟ್ಟೆಗೆ ಬಿಡುತ್ತಿರುವುದರಿಂದಾಗಿ, ಸ್ಪರ್ಧೆಯೂ ಹೆಚ್ಚಿದೆ. ಇದರಿಂದ ಪ್ರೇರಣೆ ಪಡೆದು, ವಿಂಡೋಸ್ ಕೂಡ ತನ್ನ ವಿಂಡೋಸ್ 8.1 ಫೋನ್ ಕಾರ್ಯಾಚರಣಾ ವ್ಯವಸ್ಥೆಯನ್ನು ಭಾರತದಲ್ಲಿ ಮೊಬೈಲ್ ತಯಾರಿಸುತ್ತಿರುವ ದೇಶೀ ಕಂಪನಿಗಳಿಗೆ ಉಚಿತವಾಗಿ ಒದಗಿಸುವುದಾಗಿ ಇತ್ತೀಚೆಗೆ ಘೋಷಿಸಿತ್ತು.

ಬ್ರ್ಯಾಂಡ್ ಕಂಪನಿಗಳಾದ ಸ್ಯಾಮ್ಸಂಗ್, ಎಲ್‌ಜಿ, ಹೆಚ್‌ಟಿಸಿ ಮುಂತಾದವುಗಳೆಲ್ಲವೂ ಆಂಡ್ರಾಯ್ಡ್ ತಂತ್ರಾಂಶವನ್ನು ಪಡೆದುಕೊಂಡು, ಅದನ್ನು ತಮ್ಮ ಇಷ್ಟಕ್ಕೆ ತಕ್ಕದಾಗಿ ಬದಲಾಯಿಸಿ, ಗ್ರಾಹಕರಿಗೆ ಉತ್ತಮ ಅನುಕೂಲಗಳನ್ನು ಕಲ್ಪಿಸಿಕೊಡುತ್ತಿವೆ. ಈ ಕಾರಣದಿಂದಾಗಿಯೇ, ಬ್ರ್ಯಾಂಡೆಡ್ ಹ್ಯಾಂಡ್‌ಸೆಟ್‌ಗಳ ಬಳಕೆ ತುಂಬಾ ಸುಲಭವಾಗಿರುತ್ತದೆ.

ಅಂದರೆ, ಬ್ರ್ಯಾಂಡ್ ಇಲ್ಲದ, ಅಗ್ಗದ ಹ್ಯಾಂಡ್‌ಸೆಟ್ ತಯಾರಕರು ಆಂಡ್ರಾಯ್ಡ್‌ನ ಆಪರೇಟಿಂಗ್ ಸಿಸ್ಟಂಗಳನ್ನು ಇದ್ದದ್ದು ಇದ್ದ ಹಾಗೆಯೇ ತಮ್ಮ ಹ್ಯಾಂಡ್‌ಸೆಟ್‌ಗಳಲ್ಲಿ ಅಳವಡಿಸಿರುತ್ತಾರಾದರೆ, ಬ್ರ್ಯಾಂಡ್ ಹೆಸರಿರುವ ಕಂಪನಿಗಳು, ಈ ಮುಕ್ತ ತಂತ್ರಾಂಶವನ್ನು ಮಾರ್ಪಡಿಸಿ ತಮ್ಮ ಸೆಟ್‌ಗಳಿಗೆ ಅಳವಡಿಸುತ್ತಾರೆ. ಈ ವಿಧಾನಕ್ಕೆ ಟ್ವೀಕಿಂಗ್ ಅನ್ನುತ್ತಾರೆ.

ಒಂದು ಸಣ್ಣ ಉದಾಹರಣೆಯೆಂದರೆ, ಸ್ಯಾಮ್ಸಂಗ್ ಸೆಟ್‌ನ ‘ಸೆಟ್ಟಿಂಗ್ಸ್’ ಮೆನುವಿನಲ್ಲಿ, ವೈರ್‌ಲೆಸ್ ಆಂಡ್ ನೆಟ್‌ವರ್ಕ್ಸ್ ವಿಭಾಗದಲ್ಲಿರುವ ‘ಮೊಬೈಲ್ ನೆಟ್‌ವರ್ಕ್ಸ್’ ಎಂಬಲ್ಲಿ ಹೋಗಿ ನೋಡಿದರೆ, ಅಲ್ಲಿ ನೆಟ್‌ವರ್ಕ್ ಮೋಡ್ ಎಂಬುದು ಇರುತ್ತದೆ. ಸ್ಮಾರ್ಟ್‌ಫೋನ್‌ನಲ್ಲಿ ಇಂಟರ್ನೆಟ್ ಸಂಪರ್ಕಕ್ಕಾಗಿ ನಾವು 3ಜಿ (WCDMA only) ಅಥವಾ 2ಜಿ (GSM Only) ಇಲ್ಲವೇ GSM/WCDMA (auto mode) ಎಂಬುದನ್ನು ಆಯ್ದುಕೊಳ್ಳಲು ಅವಕಾಶವಿದೆ. ಅಂದರೆ, 3ಜಿ ಕವರೇಜ್ ಇಲ್ಲದ ಕಡೆಗಳಲ್ಲಿ 2ಜಿ ಮೋಡ್ ಕೆಲಸ ಮಾಡುತ್ತದೆ. ಇಂತಹಾ ಆಯ್ಕೆಯು ಕೆಲವೊಂದು ಅಗ್ಗದ ಮೊಬೈಲ್ ಫೋನ್‌ಗಳಲ್ಲಿ ಇರುವುದಿಲ್ಲ.

ಅದೇ ರೀತಿ, ನೀವು ನಿಮ್ಮ ಮೊಬೈಲ್ ಸೇವಾ ಪೂರೈಕೆದಾರರ ವ್ಯಾಪ್ತಿಯಿಂದ ಹೊರಗೆ, ಅಂದರೆ ಬೇರೆ ರಾಜ್ಯ ಇಲ್ಲವೇ ದೇಶಕ್ಕೆ ಹೋದರೆ, ರೋಮಿಂಗ್ ದರ ಹೆಚ್ಚುವರಿಯಾಗಿ ಇರುತ್ತದೆ. ನೀವು ರೋಮಿಂಗ್‌ನಲ್ಲಿರುವಾಗ ಡೇಟಾ ಬಳಕೆ (ಇಂಟರ್ನೆಟ್ ಬಳಕೆ) ಬೇಕೇ ಬೇಡವೇ ಎಂದು ಆಫ್ ಮಾಡುವ ವ್ಯವಸ್ಥೆಯೂ ಬ್ರ್ಯಾಂಡೆಡ್ ಹ್ಯಾಂಡ್‌ಸೆಟ್‌ಗಳಲ್ಲಿ ಇರುತ್ತವೆ.

ಆಂಡ್ರಾಯ್ಡ್ ವ್ಯವಸ್ಥೆಯು ಟಚ್ ಸ್ಕ್ರೀನ್ (ಸ್ಪರ್ಶ ಸಂವೇದಿ ಪರದೆ) ಇರುವ ಸ್ಮಾರ್ಟ್‌ಫೋನ್‌ಗಳಿಗೇ ಬಳಕೆಯಾಗುತ್ತಿರುವುದರಿಂದಾಗಿ, ಈ ಸ್ಪರ್ಶದ ತಂತ್ರಜ್ಞಾನವೂ ಬ್ರ್ಯಾಂಡೆಡ್ ಕಂಪನಿಗಳಲ್ಲಿ ಆಧುನೀಕರಣಗೊಂಡಿರುತ್ತದೆ. ಬ್ರ್ಯಾಂಡ್ ಇಲ್ಲದ ಚೀನಾ ಅಥವಾ ಕೊರಿಯಾ ಕಂಪನಿಗಳು ಇಲ್ಲವೇ ಕೆಲವು ಭಾರತೀಯ ಕಂಪನಿಗಳು ಅಗ್ಗದ ದರದಲ್ಲಿ ಒದಗಿಸುವ ಹ್ಯಾಂಡ್‌ಸೆಟ್‌ಗಳ ಪರದೆಯನ್ನು ಕೈಬೆರಳಿನಿಂದ ಸ್ವಲ್ಪ ಹೆಚ್ಚು ಒತ್ತಬೇಕಾಗುತ್ತದೆ, ಇದಕ್ಕೆ ಕಾರಣವೆಂದರೆ ಕಡಿಮೆ ಗುಣಮಟ್ಟದ ಸ್ಕ್ರೀನ್ ಬಳಸಿರುವುದು. ಅದೇ ಬ್ರ್ಯಾಂಡೆಡ್ ಹ್ಯಾಂಡ್‌ಸೆಟ್‌ಗಳಲ್ಲಿ ಈ ಸ್ಪರ್ಶದ ಅನುಭವ ತೀರಾ ಸುಲಲಿತವಾಗಿರುತ್ತದೆ.

ಅಗ್ಗದ ಸ್ಮಾರ್ಟ್‌ಫೋನ್‌ಗಳಲ್ಲಿ ಹೆಚ್ಚಿನವು ಆಂಡ್ರಾಯ್ಡ್‌ನ ಮುಂದುವರಿದ ಆವೃತ್ತಿಗಳಿಗೆ (ಉದಾಹರಣೆಗೆ ಫ್ರೋಯೋ ಆವೃತ್ತಿಯಿಂದ ಜಿಂಜರ್‌ಬ್ರೆಡ್‌ಗೆ, ಅಥವಾ ಐಸ್‌ಕ್ರೀಮ್ ಸ್ಯಾಂಡ್‌ವಿಚ್ ಆವೃತ್ತಿಯಿಂದ ಜೆಲ್ಲಿಬೀನ್ ಅಥವಾ ಕಿಟ್ ಕ್ಯಾಟ್‌ಗೆ) ಅಪ್‌ಡೇಟ್ ಆಗುವ ಅವಕಾಶವನ್ನು ಹೊಂದಿರುವುದಿಲ್ಲ. ಆದರೆ ಬ್ರ್ಯಾಂಡೆಡ್ ಕಂಪನಿಗಳ ಯಂತ್ರಾಂಶಗಳು (ವೇಗದ ಪ್ರೊಸೆಸರ್, RAM ಮುಂತಾದ ಹಾರ್ಡ್‌ವೇರ್‌ಗಳು) ಆಧುನಿಕ ಮಟ್ಟದಲ್ಲಿ ಮತ್ತು ಭವಿಷ್ಯಕ್ಕೆ ಸಿದ್ಧವಾಗಿಯೇ ಇರುವುದರಿಂದಾಗಿ, ಆಂಡ್ರಾಯ್ಡ್ ತಂತ್ರಾಂಶವನ್ನು ಹೊಚ್ಚ ಹೊಸ ಆವೃತ್ತಿಗೆ (ಪ್ರಸ್ತುತ ಕಿಟ್‌ಕ್ಯಾಟ್) ಅಪ್‌ಗ್ರೇಡ್ ಮಾಡುವ ಅವಕಾಶವನ್ನು ಆಯಾ ಕಂಪನಿಗಳೇ ಒದಗಿಸುತ್ತವೆ.

ದರ ವ್ಯತ್ಯಾಸ ತೀರಾ ಹೆಚ್ಚಿದೆಯೆಂದರೆ ಮತ್ತು ಆಂಡ್ರಾಯ್ಡ್ ಫೋನ್‌ಗಳನ್ನು ನೀವು ಸಾಮಾನ್ಯ ಬಳಕೆಗಾಗಿ ಮಾತ್ರ ಖರೀದಿಸುತ್ತಿದ್ದೀರೆಂದಾದರೆ, ಬ್ರ್ಯಾಂಡ್ ಇಲ್ಲದ ಆದರೆ ಒಳ್ಳೆಯ ಹೆಸರಿರುವ ಕಂಪನಿಗಳ ಸೆಟ್‌ಗಳನ್ನು ಖರೀದಿಸಲು ಅಡ್ಡಿಯೇನಿಲ್ಲ. ಆದರೆ, ಒಳ್ಳೆಯ User Interface, ಉತ್ತಮ ಬಳಕೆಯ ಅನುಭವ ಹೊಂದಿರಬೇಕೆಂದಾದರೆ, ಬ್ರ್ಯಾಂಡೆಡ್ ಸೆಟ್‌ಗಳನ್ನು ಖರೀದಿಸುವುದು ಸೂಕ್ತ.

ಸ್ಮಾರ್ಟ್‌ಫೋನ್‌ನಲ್ಲಿ ಬ್ಯಾಟರಿ ಉಳಿಸಿ

ಮಾಹಿತಿ@ತಂತ್ರಜ್ಞಾನ: ವಿಜಯ ಕರ್ನಾಟಕ ಅಂಕಣ -80, ಜೂನ್ 02, 2014

ಸ್ಮಾರ್ಟ್‌ಫೋನ್ ಬಳಸುವವರು ಹೆಚ್ಚಾಗಿ ದೂರುವ ಸಂಗತಿಯೆಂದರೆ ಬ್ಯಾಟರಿ ಚಾರ್ಜ್ ನಿಲ್ಲುವುದಿಲ್ಲ ಅಂತ. ಸಾಮಾನ್ಯ ಫೀಚರ್ ಫೋನ್‌ಗಳಲ್ಲಾದರೆ ಎರಡು – ಮೂರು ದಿನಕ್ಕೊಮ್ಮೆ, ತೀರಾ ಕಡಿಮೆ ಮಾತನಾಡುವವರಾದರೆ ನಾಲ್ಕೈದು ದಿನಕ್ಕೊಮ್ಮೆ ಬ್ಯಾಟರಿ ಚಾರ್ಜ್ ಮಾಡಿದರೆ ಸಾಕಾಗುತ್ತದೆ. ಫೀಚರ್ ಫೋನ್‌ಗಳಲ್ಲಿ ಎಫ್ಎಂ, ಹಾಡುಗಳು, ವೀಡಿಯೋ ಮತ್ತು ಕರೆಗಳು ಹೊರತುಪಡಿಸಿ, ಇನ್ಯಾವುದೇ ವಿಶೇಷ ಸೌಕರ್ಯಗಳ ಬಳಕೆ ಕಡಿಮೆಯಿರುವುದು ಇದಕ್ಕೆ ಕಾರಣ.

ಆದರೆ ಸ್ಮಾರ್ಟ್‌ಫೋನ್‌ಗಳಲ್ಲಿ ಹಾಗಲ್ಲ. ಬಹುತೇಕ ದಿನಕ್ಕೊಮ್ಮೆ ಚಾರ್ಜ್ ಮಾಡಬೇಕಾಗುತ್ತದೆ. ಜಾಸ್ತಿ ಬಳಸಿದರೆ ಕೆಲವೇ ಗಂಟೆಗಳಲ್ಲಿ ಬ್ಯಾಟರಿ ಡೌನ್ ಆಗಿರುತ್ತದೆ. ಇದಕ್ಕಾಗಿ, ಬ್ಯಾಟರಿ ಉಳಿತಾಯ ಮಾಡಿ, ಸ್ವಲ್ಪ ಹೆಚ್ಚು ಕಾಲ ಚಾರ್ಜ್ ಉಳಿಯುವಂತೆ ಮಾಡುವ ವಿಧಾನಗಳು ಇಲ್ಲಿವೆ.

ಸ್ಮಾರ್ಟ್‌ಫೋನ್ ಎಂದರೆ ಇಂಟರ್ನೆಟ್ (ಮೊಬೈಲ್ ಡೇಟ) ಬೇಕೇಬೇಕು. ಇಂಟರ್ನೆಟ್ ಬಳಕೆಗೆ ಹೆಚ್ಚು ಬ್ಯಾಟರಿ ಬೇಕಾಗುತ್ತದೆ; ವಿಶೇಷವಾಗಿ 2ಜಿಗಿಂತಲೂ 3ಜಿ ಇಂಟರ್ನೆಟ್ ಸಂಪರ್ಕ ಬಳಸಿದರೆ ಅದು ಹೆಚ್ಚು ಬ್ಯಾಟರಿ ಹೀರಿಕೊಳ್ಳುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡರೆ, ಬೇಕಾದಾಗ ಮಾತ್ರ ಇಂಟರ್ನೆಟ್ ಆನ್ ಮಾಡಿಕೊಳ್ಳುವುದು ಸೂಕ್ತ. ಇದಕ್ಕಾಗಿ ನೋಟಿಫಿಕೇಶನ್ ಪ್ರದೇಶದಲ್ಲಿ ಡೇಟ ಆನ್/ಆಫ್ ಮಾಡುವ ಶಾರ್ಟ್‌ಕಟ್ ಬಟನ್ ಬಳಸಬಹುದು. ಅದರ ಹೊರತಾಗಿ, ಮೊಬೈಲ್ ಇಂಟರ್ನೆಟ್ ಬದಲು, ಲಭ್ಯವಿರುವಲ್ಲೆಲ್ಲಾ ವೈ-ಫೈ ಸಂಪರ್ಕವನ್ನು ಬಳಸಿಕೊಳ್ಳಿ. ಯಾಕೆಂದರೆ, ವೈ-ಫೈಗೆ ಮೊಬೈಲ್ ಇಂಟರ್ನೆಟ್‌ನಷ್ಟು ಬ್ಯಾಟರಿ ಬೇಕಾಗುವುದಿಲ್ಲ.

ಇನ್ನು, ಗೇಮ್ಸ್, ಮ್ಯಾಪ್, ವೆಬ್ ಸರ್ಫಿಂಗ್ ಜತೆಗೆ ಕರೆಗಳು, ಸಂದೇಶಗಳನ್ನು ಕಳುಹಿಸಲು ಕೂಡ ಸಾಕಷ್ಟು ಬ್ಯಾಟರಿ ಬಳಕೆಯಾಗುತ್ತದೆ. ಸಾಕಷ್ಟು ಆ್ಯಪ್‌ಗಳನ್ನು (ಅಪ್ಲಿಕೇಶನ್) ಅಳವಡಿಸಿಕೊಂಡಿರುತ್ತೀರಿ. ಅವುಗಳು ಕೂಡ ಬ್ಯಾಕ್‌ಗ್ರೌಂಡ್‌ನಲ್ಲಿ ಚಲಾವಣೆಯಾಗುತ್ತಾ, ಬ್ಯಾಟರಿಯನ್ನು ಹೀರಿಕೊಳ್ಳುತ್ತವೆ. ಹೆಚ್ಚಿನ ಸ್ಮಾರ್ಟ್‌ಫೋನ್‌ಗಳಲ್ಲಿರುವ ಹೋಂ ಬಟನ್ ಅನ್ನು ಎರಡು ಬಾರಿ ಕ್ಲಿಕ್ ಮಾಡಿದಾಗ, ಇತ್ತೀಚೆಗೆ ಬಳಕೆಯಾಗಿರುವ ಅಪ್ಲಿಕೇಶನ್‌ಗಳು ಕಾಣಿಸಿಕೊಳ್ಳುತ್ತವೆ. ಅವುಗಳನ್ನೆಲ್ಲಾ ಬೆರಳಿನಿಂದ ಸ್ಪರ್ಶಿಸಿ, ಸ್ವೈಪ್ (ಬಲದಿಂದ ಎಡಕ್ಕೆ ಅಥವಾ ಎಡದಿಂದ ಬಲಕ್ಕೆ) ಮಾಡಿದರೆ, ಅವುಗಳು ಹಿನ್ನೆಲೆಯಲ್ಲಿ ಚಾಲನೆಯಲ್ಲಿರುವುದನ್ನು ನಿಲ್ಲಿಸಬಹುದು.

ಮತ್ತೊಂದು ಬ್ಯಾಟರಿ ಉಳಿತಾಯ ವಿಧಾನವೆಂದರೆ, ಸ್ಕ್ರೀನ್‌ನ ಬ್ರೈಟ್‌ನೆಸ್ ಕಡಿಮೆ ಮಾಡುವುದು. ಹೊರಗೆ ಬಿಸಿಲಿನಲ್ಲಿರುವಾಗ ಮಾತ್ರ ಸ್ಕ್ರೀನ್ ಬ್ರೈಟ್‌ನೆಸ್ ಹೆಚ್ಚಿಸಿಕೊಳ್ಳಿ. ಅದನ್ನು ಬದಲಾಯಿಸಿಕೊಳ್ಳಲು ಕೂಡ ನಿಮ್ಮ ಫೋನ್‌ನಲ್ಲಿಯೇ ಇರುವ ವಿಡ್ಗೆಟ್ (ಬಟನ್‌ಗಳು) ಬಳಸಿ. ಸ್ಕ್ರೀನ್ ಬ್ರೈಟ್‌ನೆಸ್ ಅನ್ನು ಆಟೋಮ್ಯಾಟಿಕ್‌ಗೆ ಹೊಂದಿಸಬಹುದು ಅಥವಾ ಅದಕ್ಕೂ ಕಡಿಮೆ ಮಾಡಿಕೊಳ್ಳಬಹುದು. ಅಂತೆಯೇ, ಫೋನ್ ಕೆಲಸ ಆದ ತಕ್ಷಣ ಅದರ ಸ್ಕ್ರೀನ್ ಡಿಸ್‌ಪ್ಲೇ ಆಫ್ ಮಾಡಿ ಅಥವಾ ಸ್ಕ್ರೀನ್ ಡಿಸ್‌ಪ್ಲೇ ಸಮಯವನ್ನು 1 ನಿಮಿಷ ಇಲ್ಲವೇ 30 ಸೆಕೆಂಡುಗಳಿಗೆ ಹೊಂದಿಸಿಟ್ಟರೆ, ಸಾಕಷ್ಟು ಬ್ಯಾಟರಿ ಉಳಿತಾಯವಾಗುತ್ತದೆ.

ಸೆಲ್ಯುಲಾರ್ ಸಿಗ್ನಲ್ ಕ್ಷೀಣವಾಗಿದ್ದರೆ ಕೂಡ ಬ್ಯಾಟರಿ ಚಾರ್ಜ್ ಸಾಕಷ್ಟು ಖರ್ಚಾಗುತ್ತದೆ, ಯಾಕೆಂದರೆ ಸೆಲ್ ಫೋನು ನೆಟ್‌ವರ್ಕ್ ಸಿಗ್ನಲ್‌ಗಾಗಿ ಸರ್ಚ್ ಮಾಡುತ್ತಾ ಇರುತ್ತದೆ. ಇದನ್ನು ತಡೆಯಬೇಕಿದ್ದರೆ, ವಾಹನದಲ್ಲಿ ದೂರದೂರಿಗೆ ಪ್ರಯಾಣ ಮಾಡುತ್ತಿರುವಾಗ ಹಾಗೂ ಸಿಗ್ನಲ್ ಸಾಮರ್ಥ್ಯ ಕಡಿಮೆ ಇರುವಲ್ಲಿ ಅಗತ್ಯವಿದ್ದ ಹೊರತಾಗಿ, ಫೋನನ್ನು ಏರೋಪ್ಲೇನ್/ಫ್ಲೈಟ್ ಮೋಡ್‌ನಲ್ಲಿ ಇರಿಸಿ. ಈ ಮೋಡ್‌ನಲ್ಲಿ ನೆಟ್‌ವರ್ಕ್ ಸಿಗ್ನಲ್ ಆಫ್ ಆಗುವುದರಿಂದ ಕರೆಗಳಾಗಲೀ, ಸಂದೇಶವಾಗಲೀ ಬರುವುದಿಲ್ಲ ಎಂಬುದು ನೆನಪಿರಲಿ.

ಮ್ಯಾಪ್ ಹಾಗೂ ನ್ಯಾವಿಗೇಶನ್‌ಗೆ ಬಳಕೆಯಾಗುವ ಜಿಪಿಎಸ್ (ಗ್ಲೋಬಲ್ ಪೊಸಿಶನಿಂಗ್ ಸಿಸ್ಟಂ – ಅಂದರೆ ನೀವಿರುವ ಸ್ಥಳವನ್ನು ಉಪಗ್ರಹ ಮೂಲಕ ಗುರುತಿಸುವ ವ್ಯವಸ್ಥೆ) ಅಗತ್ಯವಿಲ್ಲದಿದ್ದರೆ ಆಫ್ ಮಾಡಿ. ಅಂತೆಯೇ ಬ್ಲೂಟೂತ್ ಮತ್ತು ವೈ-ಫೈಗಳನ್ನು ಅಗತ್ಯವಿದ್ದರೆ ಮಾತ್ರವೇ ಆನ್ ಮಾಡಿ.

ಸಾಕಷ್ಟು ವೈರ್‌ಲೆಸ್ ಡೇಟ ಬಳಸುವಂತಹಾ, ಉದಾಹರಣೆಗೆ ಆನ್‌ಲೈನ್ ವೀಡಿಯೋ, ಗೇಮ್ಸ್ ಅಥವಾ ಸಂಗೀತ, ಮ್ಯಾಪ್/ನ್ಯಾವಿಗೇಶನ್ ಮುಂತಾದವು ಡೇಟ ಸ್ವೀಕರಿಸಲು ಮತ್ತು ಕಳುಹಿಸಲು ಸಾಕಷ್ಟು ಬ್ಯಾಟರಿ ಉಪಯೋಗಿಸಿಕೊಳ್ಳುತ್ತವೆ. ಆಗಾಗ್ಗೆ ಅಪ್‌ಡೇಟ್ ಆಗುವ ಫೇಸ್‌ಬುಕ್, ಟ್ವಿಟರ್, ಇಮೇಲ್, ಸಂದೇಶ ಸೇವೆ ಮುಂತಾದ ಅಪ್ಲಿಕೇಶನ್‌ಗಳು ಬ್ಯಾಟರಿ ಚಾರ್ಜ್ ಕಬಳಿಸುತ್ತವೆ. ಮತ್ತೊಂದು ಗಮನಿಸಬೇಕಾದ ಅಂಶವೆಂದರೆ, ಲೈವ್ ವಾಲ್‌ಪೇಪರ್‌ಗಳನ್ನು (ಅಂದರೆ ಸ್ಕ್ರೀನ್‌ನಲ್ಲಿ ಚಲಿಸುವಂತೆ ಕಂಡುಬರುವ ಚಿತ್ರಗಳು) ಸಕ್ರಿಯಗೊಳಿಸಿದರೆ ಬ್ಯಾಟರಿ ಬೇಗನೇ ಖಾಲಿಯಾಗುವುದು ಖಚಿತ.

ವಾರಕ್ಕೊಂದು ಬಾರಿಯಾದರೂ ನಿಮ್ಮ ಫೋನನ್ನು ರೀಬೂಟ್ (ಆಫ್ ಮಾಡಿ ಆನ್ ಮಾಡುವುದು) ಮಾಡುವುದರಿಂದ ನಿಮಗೆ ಗೊತ್ತಿಲ್ಲದಂತೆ ಬ್ಯಾಕ್‌ಗ್ರೌಂಡ್‌ನಲ್ಲಿ ರನ್ ಆಗುವ ಹಾಗೂ ಕೆಲವೊಮ್ಮೆ ಹ್ಯಾಂಗ್ ಆಗುವ ಅಪ್ಲಿಕೇಶನ್‌ಗಳನ್ನು ಸ್ಥಗಿತಗೊಳಿಸಬಹುದು. ಬ್ಯಾಟರಿಯು ಹೆಚ್ಚು ಕಾಲ ಬರಬೇಕೆಂದಾದರೆ, ಪೂರ್ತಿ ಚಾರ್ಜ್ ಆದ ಬಳಿಕ ಪ್ಲಗ್‌ನಿಂದ ಬೇರ್ಪಡಿಸಬೇಕು. ಸುಮ್ಮನೇ ಚಾರ್ಜ್‌ಗಿಟ್ಟರೆ ಬ್ಯಾಟರಿ ಸವಕಳಿಯಾಗುತ್ತದೆ, ಅದರ ಆಯುಷ್ಯ ಕಡಿಮೆಯಾಗುತ್ತದೆ.

ಸ್ಮಾರ್ಟ್‌ಫೋನ್‌ನಲ್ಲಿ ಸ್ಕ್ರೀನ್ ಚಿತ್ರ ತೆಗೆಯುವುದು

ಮಾಹಿತಿ@ತಂತ್ರಜ್ಞಾನ: ವಿಜಯ ಕರ್ನಾಟಕ ಅಂಕಣ ಡಿಸೆಂಬರ್ 30

ಕಂಪ್ಯೂಟರಿನಲ್ಲಿ ಏನಾದರೂ ಸಮಸ್ಯೆಯಾದರೆ, ಅಥವಾ ಯಾವುದೇ ಸಾಫ್ಟ್‌ವೇರ್‌ನಲ್ಲಿ ತೊಂದರೆ ಕಾಣಿಸಿಕೊಂಡರೆ ನಿಮ್ಮ ಸ್ನೇಹಿತರು ಅಥವಾ ಸಿಸ್ಟಂ ತಜ್ಞರಿಂದ ಸಲಹೆ ಕೇಳಿದಾಗ, ಸಮಸ್ಯೆಯ ಕುರಿತು ಸ್ಕ್ರೀನ್‌ಶಾಟ್ ತೆಗೆದು ಕಳುಹಿಸಿ ಅಂತ ನಿಮಗವರು ಹೇಳಿರಬಹುದು. ಇದರಿಂದ, ಯಾವ ಹಂತದಲ್ಲಿ ಏನು ದೋಷ ಕಂಡುಬಂದಿದೆ ಮತ್ತು ನಿಮ್ಮ ಕಂಪ್ಯೂಟರಿನಲ್ಲಿ ಯಾವ ರೀತಿಯ ಸಂದೇಶ (Error Message) ತೋರಿಸಲಾಗಿದೆ ಎಂದು ತಿಳಿದುಕೊಂಡು, ಅದಕ್ಕೆ ಪರಿಹಾರ ಸೂಚಿಸುವುದು ಸುಲಭವಾಗುತ್ತದೆ. ಕಂಪ್ಯೂಟರಿನ ಕೀಬೋರ್ಡ್‌ನಲ್ಲಿ ಇದಕ್ಕಾಗಿ ಪ್ರತ್ಯೇಕ ಸ್ಕ್ರೀನ್‌ಶಾಟ್ ಕೀ ಇರುತ್ತದೆ. ಆದರೆ, ಕಂಪ್ಯೂಟರುಗಳದ್ದೇ ಮಿನಿ ರೂಪವಾಗಿರುವ ಸ್ಮಾರ್ಟ್‌ಫೋನ್‌ಗಳು ಮತ್ತು ಟ್ಯಾಬ್ಲೆಟ್‌ಗಳಲ್ಲಿ ಕೂಡ ಇಂಥದ್ದೇ ಸ್ಕ್ರೀನ್ ಶಾಟ್ (ಅಂದರೆ ಕಾಣಿಸಿಕೊಳ್ಳುವ ಸ್ಕ್ರೀನ್‌ನ ಚಿತ್ರ) ತೆಗೆಯಬಹುದು ಎಂಬುದು ಬಹುತೇಕರಿಗೆ ಗೊತ್ತಿರಲಾರದು. ಇಲ್ಲಿದೆ ಈ ಕುರಿತ ಮಾಹಿತಿ.

ಆಂಡ್ರಾಯ್ಡ್
ಹೆಚ್ಚಿನವರು ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಅಥವಾ ಟ್ಯಾಬ್ಲೆಟ್ ಹೊಂದಿರುತ್ತಾರೆ. ಕೆಲವೊಮ್ಮೆ ಅವರು ತಮ್ಮ ಸಾಧನದ ಫೋಟೋ ಗ್ಯಾಲರಿ ವಿಭಾಗಕ್ಕೆ ಹೋದಾಗ, ಸ್ಕ್ರೀನ್‌ನಲ್ಲಿ ಆ್ಯಪ್‌ಗಳು ಇರುವ ಚಿತ್ರವೊಂದನ್ನು ಆಕಸ್ಮಿಕವಾಗಿ ನೋಡಿರಬಹುದು. ಅದು ಕೂಡ ಚಿತ್ರ, ಇಲ್ಲಿ ಹೇಗೆ ಬಂತೆಂಬುದು ಹೊಳೆಯುತ್ತಲೇ ಇಲ್ಲ! ಅದಕ್ಕೆ ಕಾರಣವಿದೆ. ಆಂಡ್ರಾಯ್ಡ್ ಸಾಧನಗಳಲ್ಲಿ ವಾಲ್ಯೂಮ್ ಮತ್ತು ಪವರ್ ಕೀಗಳು ವಿರುದ್ಧ ದಿಕ್ಕಿನಲ್ಲಿರುತ್ತವೆ. ಸಾಧನವನ್ನು ಕೈಯಲ್ಲಿ ಹಿಡಿದುಕೊಂಡಿರುವಾಗ ಆಕಸ್ಮಿಕವಾಗಿ ಈ ಎರಡೂ ಕೀಗಳು ಒತ್ತಲ್ಪಟ್ಟು ಆಟೋಮ್ಯಾಟಿಕ್ ಆಗಿ ಸ್ಕ್ರೀನ್ ಶಾಟ್ ಬಂದಿರುತ್ತದೆ. ಈ ಸ್ಕ್ರೀನ್ ಶಾಟ್ ತೆಗೆಯಲು ಮಾಡಬೇಕಾಗಿರುವುದು ಇಷ್ಟೆ – ವಾಲ್ಯೂಮ್ ಕಡಿಮೆ ಮಾಡುವ ಕೀ ಮತ್ತು ಪವರ್ ಕೀಲಿಯನ್ನು ಒಟ್ಟಿಗೆ ಒತ್ತಿದರೆ ನೀವು ಯಾವ ಸ್ಕ್ರೀನ್‌ನಲ್ಲಿದ್ದೀರೋ, ಆ ಸ್ಕ್ರೀನ್‌ನ ಚಿತ್ರವು ಗ್ಯಾಲರಿಯಲ್ಲಿ ಸೇವ್ ಆಗಿರುತ್ತದೆ. ಆಂಡ್ರಾಯ್ಡ್ ಹೊಸ ಆವೃತ್ತಿಯ ಫೋನ್‌ಗಳಲ್ಲಿ ನೋಟಿಫಿಕೇಶನ್ ಪಟ್ಟಿ (ಮೇಲ್ಭಾಗದಲ್ಲಿ ಬ್ಯಾಟರಿ, ಮೊಬೈಲ್ ಸಿಗ್ನಲ್ ತೋರಿಸುವ ಪ್ರದೇಶ) ನೋಡಿದರೆ, ಅಲ್ಲಿ Saving Screenshot ಅಂತ ಕಾಣಿಸಬಹುದು. ಗ್ಯಾಲರಿಗೆ ಹೋಗಿ ನೋಡಿದರೆ, ಸ್ಕ್ರೀನ್‌ಶಾಟ್ ಹೆಸರಿನ ಒಂದು ಫೋಲ್ಡರ್ ಕ್ರಿಯೇಟ್ ಆಗಿರುತ್ತದೆ. ಅದರೊಳಗಿನ ಚಿತ್ರ ಕ್ಲಿಕ್ ಮಾಡಿದರೆ, ಅದೊಂದು ಚಿತ್ರವೆಂದು ಗೊತ್ತೇ ಆಗಲಾರದು, ಯಾಕೆಂದರೆ ಅದು ಸ್ಮಾರ್ಟ್‌ಫೋನ್‌ನಲ್ಲಿನ ಸ್ಕ್ರೀನ್‌ನಂತೆಯೇ ಕಾಣಿಸುತ್ತದೆ. ಅದರಲ್ಲಿರುವ ಆ್ಯಪ್‌ನ ಚಿತ್ರಗಳನ್ನು ಕ್ಲಿಕ್ ಮಾಡಲು ಹೋಗಿ, ‘ಈ ಆ್ಯಪ್’ ಕೆಲಸ ಮಾಡೋದೇ ಇಲ್ಲ ಅಂತ ಬೇಸ್ತು ಬೀಳಬಹುದು! ಇಷ್ಟಲ್ಲದೆ, ನಿಮ್ಮ ಸ್ಮಾರ್ಟ್‌ಫೋನ್‌ನ ಸ್ಕ್ರೀನ್ ಹೀಗಿದೆ ಅಂತ ಸ್ನೇಹಿತರಿಗೆ ತಿಳಿಸಲು, ಈ ಚಿತ್ರಗಳನ್ನು ಅಲ್ಲಿಂದಲೇ ಒಂದು ಸಲ ಬೆರಳಿನಿಂದ ಸ್ಪರ್ಶಿಸಿ, ಫೇಸ್‌ಬುಕ್, ಟ್ವಿಟರ್ ಅಥವಾ ಇಮೇಲ್ ಮೂಲಕ ಹಂಚಿಕೊಳ್ಳುವ ಆಯ್ಕೆಯೂ ಇದೆ. ಇದಕ್ಕೆ ಇಂಟರ್ನೆಟ್ ಸಂಪರ್ಕ ಬೇಕಾಗುತ್ತದೆ.

ಐಫೋನ್
ಆ್ಯಪಲ್ ಐಫೋನ್‌ನ ಇತ್ತೀಚಿನ ಐಒಎಸ್ ಆವೃತ್ತಿಗಳಲ್ಲಾದರೆ, ಇದೇ ರೀತಿ ಎರಡು ಕೀಗಳನ್ನು ಪ್ರೆಸ್ ಮಾಡುವ ಮೂಲಕ ಸ್ಕ್ರೀನ್ ಶಾಟ್ ತೆಗೆಯಬಹುದು. ಸ್ಲೀಪ್/ವೇಕ್ (ಆನ್/ಆಫ್ ಎಂದೂ ಕರೆಯಲಾಗುವ) ಕೀಲಿ ಹಾಗೂ ಹೋಮ್ ಬಟನ್ ಒಟ್ಟಿಗೆ ಒತ್ತಿ ಹಿಡಿದರೆ, ನಿಮ್ಮ ಸ್ಕ್ರೀನ್‌ನ ಚಿತ್ರವು ಫೋಟೋಸ್ ಎಂಬಲ್ಲಿರುವ ಕ್ಯಾಮೆರಾ ರೋಲ್ ಫೋಲ್ಡರ್‌ನಲ್ಲಿ ಸೇವ್ ಆಗುತ್ತದೆ. ಹೊಸ ಐಫೋನ್‌ಗಳಲ್ಲಾದರೆ, ಕ್ಯಾಮರಾದ ಶಟರ್ ಧ್ವನಿ ಕೇಳಿಸುತ್ತದೆ. ಐಪ್ಯಾಡ್ ಮತ್ತು ಐಪಾಡ್-ಟಚ್‌ನಲ್ಲಿಯೂ ಬಹುತೇಕ ಇದೇ ರೀತಿಯಾಗಿ ಸ್ಕ್ರೀನ್ ಶಾಟ್ ತೆಗೆಯಬಹುದು. ಸಾಮಾಜಿಕ ಜಾಲತಾಣಗಳಲ್ಲಿ ಅಲ್ಲಿಂದಲೇ ಶೇರ್ ಮಾಡಿಕೊಳ್ಳಬಹುದು.

ಬ್ಲ್ಯಾಕ್‌ಬೆರಿ
ಪ್ರತಿಷ್ಠೆಯ ಫೋನ್ ಎಂದೇ ಕರೆಸಿಕೊಳ್ಳುವ ಬ್ಲ್ಯಾಕ್‌ಬೆರಿ ಕಂಪನಿಯ ಫೋನ್‌ಗಳಲ್ಲಿ ಸ್ಕ್ರೀನ್ ಶಾಟ್ ತೆಗೆಯಲು ವ್ಯವಸ್ಥೆ ಇಲ್ಲ. ಆದರೆ Capture It ಎಂಬ ಆ್ಯಪ್ ಅನ್ನು ಡೌನ್‌ಲೋಡ್ ಮಾಡಿಕೊಂಡು ಇನ್‌ಸ್ಟಾಲ್ ಮಾಡಿಕೊಳ್ಳಬೇಕು. ಮೊಬೈಲ್ ಫೋನ್‌ನ ಬ್ರೌಸರ್‌ನಲ್ಲಿ http://www.captureitota.com ಟೈಪ್ ಮಾಡಿದರೆ, ಕೆಳಗೆ ಡೌನ್‌ಲೋಡ್ ಮಾಡಿಕೊಳ್ಳುವ ಆಯ್ಕೆ ಇರುತ್ತದೆ. ಇನ್‌ಸ್ಟಾಲ್ ಮಾಡಿದ ಬಳಿಕ, ನಿಮ್ಮ ಫೋನ್‌ನಲ್ಲಿ Options ಎಂಬಲ್ಲಿ, Application Management ಗೆ ಹೋದರೆ, ಅಲ್ಲಿ Capture It ಇರುತ್ತದೆ. ಮೆನು ಒತ್ತಿ, Edit Permissions ಕ್ಲಿಕ್ ಮಾಡಿ, Allow ಎಂದು ಬದಲಾಯಿಸಿ.

ವಿಂಡೋಸ್ 8 ಫೋನ್
ಇತ್ತೀಚಿನ ವಿಂಡೋಸ್ ಫೋನ್‌ಗಳಲ್ಲಿ ವಿಂಡೋಸ್ ಚಿಹ್ನೆ ಇರುವ ಬಟನ್ ಮತ್ತು ಪವರ್ ಬಟನ್ ಒಟ್ಟಾಗಿ ಒತ್ತಿ ಹಿಡಿದರೆ, ಸ್ಕ್ರೀನ್ ಶಾಟ್ ಚಿತ್ರ ತೆಗೆಯಬಹುದು. ಫೋಟೋ ಗ್ಯಾಲರಿಯಲ್ಲಿ ಪ್ರತ್ಯೇಕವಾದ ಸ್ಕ್ರೀನ್‌ಶಾಟ್ ಎಂಬ ಫೋಲ್ಡರ್ ತಾನಾಗಿಯೇ ರಚನೆಯಾಗಿ, ಅದರೊಳಗೆ ಸ್ಕ್ರೀನ್‌ಶಾಟ್‌ಗಳು ಸೇವ್ ಆಗುತ್ತವೆ. ಈ ಚಿತ್ರವನ್ನು ಕೂಡ ಸ್ನೇಹಿತರೊಂದಿಗೆ ಫೇಸ್‌ಬುಕ್, ಟ್ವಿಟರ್ ಮೂಲಕ ಹಂಚಿಕೊಳ್ಳಬಹುದು, ಇಮೇಲ್ ಮಾಡಬಹುದು.

ಸ್ಕ್ರೀನ್ ಬಾಗಿಸಬಹುದಾದ ಸ್ಮಾರ್ಟ್‌ಫೋನ್‌ಗಳು

ಮಾಹಿತಿ@ತಂತ್ರಜ್ಞಾನ: ವಿಜಯ ಕರ್ನಾಟಕ ಅಂಕಣ, ಡಿ.23

2013 ಅಂತ್ಯವಾಗುತ್ತಿದೆ. ಈ ವರ್ಷ ಸ್ಮಾರ್ಟ್‌ಫೋನ್ ಕ್ಷೇತ್ರದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ನೋಡಿದರೆ, ನಮ್ಮ ಕೈಯಲ್ಲಿರುವ ಸ್ಮಾರ್ಟ್‌ಫೋನ್‌ಗಳು ತೀರಾ ಹಳೆಯವು ಅನ್ನಿಸುವ ಸಾಧ್ಯತೆಗಳು ಹೆಚ್ಚಾಗಿದೆ.

ಈಗ ಬರುತ್ತಿರುವ ಮತ್ತು ಮುಂದೆ ಬರಲಿರುವ ಸ್ಮಾರ್ಟ್‌ಫೋನ್‌ಗಳಲ್ಲಿ ಹೈಡೆಫಿನಿಷನ್ ಡಿಸ್‌ಪ್ಲೇಗಳು ಸಾಮಾನ್ಯವಾಗಿಬಿಟ್ಟಿವೆ. ಐದರಿಂದ 7 ಇಂಚಿನ ಸ್ಕ್ರೀನ್‌ಗಳಿಗೆ ಹೆಚ್ಚು ಬೇಡಿಕೆ ಬರುತ್ತಿದೆ, ಅದರಲ್ಲಿ ಕನಿಷ್ಠ 12 ಮೆಗಾಪಿಕ್ಸೆಲ್ ಸಾಮರ್ಥ್ಯದ ಕ್ಯಾಮರಾಗಳು ಕೂಡ ಸಾಮಾನ್ಯವಾಗುತ್ತಿವೆ.

ಇಷ್ಟೆಲ್ಲಾ ಸಾಕಾಗುತ್ತದೆ ಎಂದುಕೊಂಡು ಖರೀದಿಸಿದವರಿಗೆ ವರ್ಷಾಂತ್ಯದಲ್ಲಿ ನಡೆದಿರುವ ತಂತ್ರಜ್ಞಾನ ಪ್ರಗತಿಯು ಆಘಾತ ನೀಡಿರುವುದಂತೂ ಸುಳ್ಳಲ್ಲ. ಕಾರಣವಿದೆ. ಸ್ಮಾರ್ಟ್‌ಫೋನ್‌ಗಳ ವಿನ್ಯಾಸದಲ್ಲಿ ಅಭೂತಪೂರ್ವ ಬದಲಾವಣೆಯಾಗುತ್ತಿದೆ. ಹೇಗೆ ಬೇಕೋ ಹಾಗೆ ಬಾಗಬಲ್ಲ ಸ್ಕ್ರೀನ್ (Curved) ಇರುವ ಸ್ಮಾರ್ಟ್ ಫೋನ್‌ಗಳು ಮಾರುಕಟ್ಟೆಗಿಳಿದಿವೆ. ಈ ನಿಟ್ಟಿನಲ್ಲಿ ಎಲ್‌ಜಿ ಕಂಪನಿಯು ‘ಜಿ-ಫ್ಲೆಕ್ಸ್’ ಹಾಗೂ ಸ್ಯಾಮ್ಸಂಗ್ ‘ಗ್ಯಾಲಕ್ಸಿ ರೌಂಡ್’ ಎಂಬ ಮಾಡೆಲ್‌ಗಳ ಮೂಲಕ ಬಾಗುವ ಸ್ಕ್ರೀನ್ ಇರುವ ಸ್ಮಾರ್ಟ್‌ಫೋನ್‌ಗಳಿಗೆ ಮುನ್ನುಡಿ ಬರೆದಿವೆ.

ಇದು ಆರಂಭಿಕ ತಂತ್ರಜ್ಞಾನವಷ್ಟೆ. ಇನ್ನೆರಡು ವರ್ಷಗಳಲ್ಲಿ ಬಹುಶಃ ಜೇಬಿನಲ್ಲಿ ಸುತ್ತಿಡಬಲ್ಲ, ಮಡಚಿಡಬಲ್ಲ ಸ್ಮಾರ್ಟ್ ಫೋನ್‌ಗಳು ಮತ್ತು ಟ್ಯಾಬ್ಲೆಟ್‌ಗಳು ಬಂದರೂ ಅಚ್ಚರಿಯಿಲ್ಲ. ತಂತ್ರಜ್ಞಾನ ಅಷ್ಟು ಮುಂದುವರಿದಿದೆ. ದೊಡ್ಡ ಗಾತ್ರದ ಫೋನ್ ಅಥವಾ ಟ್ಯಾಬ್ಲೆಟ್‌ಗಳನ್ನು ಒಯ್ಯುವುದು ನಮಗೆಲ್ಲಾ ದೊಡ್ಡ ಸಮಸ್ಯೆಯ ವಿಷಯ. ಆದರೆ ಅವು ಈಗ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿಬಿಟ್ಟಿರುವುದರಿಂದ ಸಾಫ್ಟ್‌ವೇರ್ ತಯಾರಕರು ಫೋನ್‌ಗಳನ್ನು ಮನುಷ್ಯನಿಗೆ ಮತ್ತಷ್ಟು ಆಪ್ತವಾಗಿಸುವ ನಿಟ್ಟಿನಲ್ಲಿ ಕಾರ್ಯನಿರತರಾಗಿದ್ದು, ಈ ಮಡಚುವ ತಂತ್ರಜ್ಞಾನಕ್ಕೆ ಹೆಚ್ಚಿನ ಒತ್ತು ನೀಡಲಿದ್ದಾರೆ. ಈಗಾಗಲೇ ನಮ್ಮ ಬಳಕೆಯ ವಿಧಾನವನ್ನು, ದೈನಂದಿನ ಚಲನ ವಲನಗಳನ್ನು ಆಧರಿಸಿ, ಧ್ವನಿ ಗುರುತಿಸುವಿಕೆ ಹಾಗೂ ಮುಖ ಗುರುತಿಸುವಿಕೆ ತಂತ್ರಜ್ಞಾನಗಳ ಮೂಲಕ ಸ್ಮಾರ್ಟ್‌ಫೋನನ್ನು ನಮ್ಮ ಮನೆಯ ಸದಸ್ಯನಂತೆಯೇ ರೂಪಿಸುವ ಕಾರ್ಯವೊಂದು ನಡೆಯುತ್ತಿದೆ ಎಂದರೆ ತಪ್ಪಾಗದು.

ಹಾಗಿದ್ದರೆ, ಮುಂದೆ ಬರಲಿರುವ ಸ್ಮಾರ್ಟ್‌ಫೋನ್‌ಗಳು ಹೇಗಿರಬಲ್ಲವು? ಸ್ಮಾರ್ಟ್‌ಫೋನ್‌ನ ಬಗ್ಗೆ ಯೋಚನೆಯನ್ನೇ ಬಿಟ್ಟು, ಸದಾ ಕಾಲ ಅದು ನಮ್ಮೊಂದಿಗೆ ಇರುವಂತೆ ಮತ್ತು ಅದು ಇಲ್ಲದೆ ಬದುಕುವುದೇ ಕಷ್ಟ ಎಂಬಂತೆ ಇರಬಲ್ಲವು ಎಂಬುದೇ ಉತ್ತರ. ಜಿ ಫ್ಲೆಕ್ಸ್ ಹಾಗೂ ಗ್ಯಾಲಕ್ಸಿ ರೌಂಡ್ ಮೊಬೈಲ್‌ಗಳ ಬೆಲೆ ಸದ್ಯಕ್ಕೆ ಅರ್ಧ ಲಕ್ಷ ಆಸುಪಾಸು ಇದ್ದು, ಅದು ಜನ ಸಾಮಾನ್ಯರ ಕೈಗೆಟುಕುವುದು ಕಷ್ಟ. ಆದರೆ, ಕಾಲ ಸರಿದಂತೆ ಎಲ್ಲರಿಗೂ ಇದು ಲಭ್ಯವಾಗಬಹುದೆಂಬುದು ನಿರೀಕ್ಷೆ.

ಜಿ-ಫ್ಲೆಕ್ಸ್ ಹೇಗೆ ಕೆಲಸ ಮಾಡುತ್ತದೆಯೆಂದರೆ, ಈ ಸ್ಮಾರ್ಟ್‌ಫೋನನ್ನು ಮೇಲಿನಿಂದ ಕೆಳಕ್ಕೆ (ಲಂಬವಾಗಿ) ಕೊಂಚವೇ ಬಾಗಿಸಬಹುದು. ಅದರ ಸ್ಪೀಕರ್ ಭಾಗವು ಬಾಯಿಗೆ ಸಮೀಪ ಬರಲು ಇದು ಸಹಕಾರಿಯಾಗುತ್ತದೆ. ಇದರ ಬ್ಯಾಟರಿ ಕೂಡ ಬಾಗಿದ ಆಕಾರದಲ್ಲಿಯೇ ಇದೆ. ಅಲ್ಲದೆ, ಇದರ ಹೊರ ಕವಚದಲ್ಲಿ ಯಾವುದೇ ಸಣ್ಣಪುಟ್ಟ ಗೀರುಗಳಾಗಿದ್ದರೆ, ಸ್ವಯಂ ಆಗಿ ಸರಿಯಾಗಬಲ್ಲ ರಕ್ಷಣಾತ್ಮಕ ಕೋಟ್ ಕೂಡ ಇದೆ ಅಂತ ಕಂಪನಿಯು ಹೇಳಿಕೊಂಡಿದೆ. ಜಿ-ಫ್ಲೆಕ್ಸ್‌ಗಿಂತ ಗ್ಯಾಲಕ್ಸಿ ರೌಂಡ್ ಹೇಗೆ ಭಿನ್ನವೆಂದರೆ, ಇದು ಅಡ್ಡಡ್ಡ ಬಾಗಿರುತ್ತದೆ.

ಎಲ್ಲಕ್ಕಿಂತ ಹೆಚ್ಚಾಗಿ ಸ್ಮಾರ್ಟ್‌ಫೋನ್‌ಗಳು ಯಾವ ಹಾದಿ ತುಳಿಯುತ್ತಿವೆ ಎಂಬುದರ ಮುನ್ಸೂಚನೆಯೇ ಈ ವಿನೂತನ ಫೋನ್. ಈ ತಂತ್ರಜ್ಞಾನವು ಮುಂದೆ ಸ್ಕ್ರೀನನ್ನು ಪೂರ್ತಿಯಾಗಿ ಬಾಗಿಸಬಲ್ಲ, ನಂತರ ಮಡಚಬಲ್ಲ ತಂತ್ರಜ್ಞಾನಗಳಿಗೂ ನಾಂದಿ ಹಾಡಬಹುದು. ಈ ಮೂಲಕ ದೊಡ್ಡ ಫೋನ್‌ಗಳನ್ನು ಜೇಬಿಗೆ ಹೊಂದುವಂತೆ ಚಿಕ್ಕದಾಗಿ ಮಡಚಿ ಎಲ್ಲಿ ಬೇಕಾದರೂ ತ್ರಾಸವಿಲ್ಲದೆ ಒಯ್ಯಬಹುದು. ಅದುವರೆಗೆ ಕಾಯೋಣ ಅಂತೀರಾ?

ಏನಿದು ಟ್ಯಾಬ್ಲೆಟ್, ಫ್ಯಾಬ್ಲೆಟ್, ಸ್ಮಾರ್ಟ್‌ಫೋನ್?

ವಿಜಯ ಕರ್ನಾಟಕ ಅಂಕಣ, ಸೆಪ್ಟೆಂಬರ್ 23, 2013 ಮಾಹಿತಿ @ ತಂತ್ರಜ್ಞಾನ.
ಒಂದು ವರದಿಯ ಪ್ರಕಾರ, ಟ್ಯಾಬ್ಲೆಟ್ ಮತ್ತು ಲ್ಯಾಪ್‌ಟಾಪ್ ಕಂಪ್ಯೂಟರುಗಳನ್ನು ಫ್ಯಾಬ್ಲೆಟ್ ಹಿಂದಿಕ್ಕಿದೆ. ಹಾಗಿದ್ದರೆ, ಬೇಸಿಕ್ ಫೋನ್, ಸ್ಮಾರ್ಟ್‌ಫೋನ್, ಫ್ಯಾಬ್ಲೆಟ್, ಟ್ಯಾಬ್ಲೆಟ್ ಎಂದರೇನು ಎಂಬುದು ಹಲವರ ಕುತೂಹಲ. ಈ ಕುರಿತು ಸ್ಥೂಲವಾಗಿ ತಿಳಿದುಕೊಳ್ಳೋಣ.

ಬೇಸಿಕ್ ಫೋನ್: ಇವು ಹೆಚ್ಚಿನವರು ಬಳಸುತ್ತಿರುವ ಮೊಬೈಲ್ ಫೋನ್‌ಗಳು. ಕರೆ, ಎಸ್ಎಂಎಸ್ ಮತ್ತು ಎಫ್ಎಂ ರೇಡಿಯೋ, ಕ್ಯಾಲ್ಕುಲೇಟರ್ ಮುಂತಾದ ಮೂಲಭೂತ ಅನುಕೂಲಗಳು ಇದರಲ್ಲಿರುತ್ತವೆ. ಕೆಲವು ಹ್ಯಾಂಡ್‌ಸೆಟ್‌ಗಳಲ್ಲಿ ಪುಟ್ಟ ಕ್ಯಾಮರಾ, ಟಾರ್ಚ್ ಲೈಟ್, ಇನ್ನು ಕೆಲವಲ್ಲಿ ಎರಡು ಸಿಮ್ ಕಾರ್ಡ್ ವ್ಯವಸ್ಥೆಯೂ ಇರಬಹುದು. ಬ್ಯಾಟರಿ ಚಾರ್ಜ್‌ನಲ್ಲಿ ಇವುಗಳನ್ನು ಮೀರಿಸುವುದು ಕೆಳಗೆ ಹೇಳಿದ ಯಾವುದೇ ಗ್ಯಾಜೆಟ್‌ಗಳಿಗೆ ಅಸಾಧ್ಯ. ಬೆಲೆ ತೀರಾ ಕಡಿಮೆ, 700 ರೂಪಾಯಿಯಿಂದ ಆರಂಭವಾಗುತ್ತವೆ.

ಸ್ಮಾರ್ಟ್‌ಫೋನ್: ಕಳೆದೆರಡು ವರ್ಷಗಳಲ್ಲಿ ಹೆಚ್ಚು ಸದ್ದು ಮಾಡಿದ್ದು ಸ್ಮಾರ್ಟ್‌ಫೋನ್‌ಗಳು. ಇಂಟರ್ನೆಟ್ ಸಂಪರ್ಕಿಸಬಹುದಾದ, ನಾಲ್ಕೈದು ಇಂಚಿಗಿಂತ ಕಡಿಮೆ ವಿಶಾಲವಾಗಿರುವ ಟಚ್ ಸ್ಕ್ರೀನ್ ಇರುವ (ಕೈಯಲ್ಲೇ ಸ್ಪರ್ಶಿಸುವ ಮೂಲಕ ಕಾರ್ಯಾಚರಿಸಬಹುದಾದ) ಮೊಬೈಲ್ ಫೋನ್‌ಗಳಿವು. ಬೇಸಿಕ್ ಫೋನ್‌ನ ಎಲ್ಲ ಸಾಮರ್ಥ್ಯಗಳಲ್ಲದೆ, ಫೇಸ್‌ಬುಕ್, ಟ್ವಿಟರ್ ಬೆಂಬಲದೊಂದಿಗೆ, ಉತ್ತಮ ಸಾಮರ್ಥ್ಯದ ಫೋಟೋ ಕ್ಯಾಮರಾ, ವೀಡಿಯೋ ಕ್ಯಾಮರಾಗಳು ಇದರಲ್ಲಿ ಅಡಕವಾಗಿರುತ್ತವೆ. ಎರಡು ಸಿಮ್ ಕಾರ್ಡ್ ವ್ಯವಸ್ಥೆಯೂ ಇರುತ್ತದೆ. ಬೆಲೆ ಮೂರು ಸಾವಿರ ರೂ. ಆಸುಪಾಸಿನಿಂದ ಆರಂಭವಾಗುತ್ತವೆ.

ಟ್ಯಾಬ್ಲೆಟ್: ಸ್ಮಾರ್ಟ್‌ಫೋನ್ ಬಳಿಕ ಹೆಚ್ಚು ಜನಪ್ರಿಯವಾಗತೊಡಗಿದ್ದು ಟ್ಯಾಬ್ಲೆಟ್. ಸ್ಮಾರ್ಟ್‌ಫೋನ್‌ಗೂ ಟ್ಯಾಬ್ಲೆಟ್ ಕಂಪ್ಯೂಟರ್‌ಗಳಿಗೂ ಇರಬಹುದಾದ ಮೂಲಭೂತ ವ್ಯತ್ಯಾಸವೆಂದರೆ ಪರದೆಯ ಗಾತ್ರ. 7 ಇಂಚಿಗಿಂತ ಮೇಲ್ಪಟ್ಟು 10 ಇಂಚು ಒಳಗಿರುವಷ್ಟು ವಿಶಾಲವಾದ ಪರದೆಯುಳ್ಳ, ಪುಟ್ಟ ಕಂಪ್ಯೂಟರ್‌ಗಳಿವು. ಕೆಲವು ಟ್ಯಾಬ್ಲೆಟ್ ಕಂಪ್ಯೂಟರ್‌ಗಳಲ್ಲಿ ಕರೆ ಮಾಡುವ ವ್ಯವಸ್ಥೆಯೂ ಇರುತ್ತದೆ. ಇಲ್ಲವಾದಲ್ಲಿ, ಸಿಮ್ ಕಾರ್ಡ್ ಹಾಕಲು ಸಾಧ್ಯವಿಲ್ಲದ, ಕೇವಲ ವೈ-ಫೈ ಅಥವಾ ಇಂಟರ್ನೆಟ್ ಡಾಂಗಲ್‌ಗಳ (ಇಂಟರ್ನೆಟ್ ಸಂಪರ್ಕಕ್ಕೆ ಏರ್‌ಟೆಲ್, ಬಿಎಸ್ಎನ್ಎಲ್, ಟಾಟಾ ಡೊಕೊಮೊ, ರಿಲಯನ್ಸ್, ವೊಡಾಫೋನ್, ಏರ್‌ಸೆಲ್, ಐಡಿಯಾ ಮುಂತಾದ ಕಂಪನಿಗಳು ಒದಗಿಸುತ್ತಿರುವ, ಪೆನ್‌ಡ್ರೈವ್‌ನಂತಹಾ ಸಾಧನ) ಮೂಲಕ ಮಾತ್ರ ಇಂಟರ್ನೆಟ್ ಸಂಪರ್ಕಿಸುವ ಅವಕಾಶವಿರುತ್ತದೆ. ಟ್ಯಾಬ್ಲೆಟ್‌ಗಳಿಗೆ ಬಾಹ್ಯ ಕೀಬೋರ್ಡ್ ಅಳವಡಿಸಿ ಟೈಪ್ ಮಾಡುವ ಅವಕಾಶವಿದ್ದು, ಪರದೆಯೇ ವಿಶಾಲವಾಗಿರುವುದರಿಂದ ಮೇಜಿನ ಮೇಲಿಟ್ಟು ಟೈಪ್ ಮಾಡಲು ಸ್ಮಾರ್ಟ್‌ಫೋನ್‌ಗಳಿಗಿಂತ ಹೆಚ್ಚಿನ ಅನುಕೂಲವಿದೆ. ಬೆಲೆ ನಾಲ್ಕು ಸಾವಿರ ರೂಪಾಯಿಯಿಂದಲೇ ಆರಂಭವಾಗುತ್ತದೆ. ಬ್ರ್ಯಾಂಡೆಡ್ ಕಂಪನಿಯ ಟ್ಯಾಬ್ಲೆಟ್‌ಗಳ ಬೆಲೆ ಹತ್ತು ಸಾವಿರ ರೂಪಾಯಿಗಿಂತ ಮೇಲಿರುತ್ತದೆ.

ಟ್ಯಾಬ್ಲೆಟ್ ಕೊಳ್ಳುವವರು ಕೆಲವೊಮ್ಮೆ ಮೋಸ ಹೋಗುವುದೂ ಉಂಟು. ಯಾಕೆಂದರೆ, ಕಾಲಿಂಗ್ ವ್ಯವಸ್ಥೆಯುಳ್ಳ, ಅಂದರೆ ಸಿಮ್ ಕಾರ್ಡ್ ಹಾಕಲು ಅವಕಾಶವುಳ್ಳ ಟ್ಯಾಬ್ಲೆಟ್‌ಗಳಿಗೆ ಬೆಲೆ ಹೆಚ್ಚು. ಸಿಮ್ ಆಯ್ಕೆ ಇಲ್ಲದಿರುವ, ವೈಫೈ ಅಥವಾ ಡಾಂಗಲ್ ಮೂಲಕ ಮಾತ್ರ ಇಂಟರ್ನೆಟ್ ಸಂಪರ್ಕಿಸಬಹುದಾಗಿರುವ ಟ್ಯಾಬ್ಲೆಟ್‌ಗಳಿಗೆ ಬೆಲೆ ಕಡಿಮೆ. ಮಾಡೆಲ್ ಹೆಸರು ಒಂದೇ ರೀತಿಯಾಗಿದ್ದರೂ, ಮಾಡೆಲ್ ಸಂಖ್ಯೆಯಲ್ಲಿ ವ್ಯತ್ಯಾಸ ಇರುತ್ತದೆ. ಇದನ್ನು ಗಮನಿಸಬೇಕು.

ಫ್ಯಾಬ್ಲೆಟ್: ಇನ್ನು ಇತ್ತೀಚೆಗೆ ಎಲ್ಲರ ಕುತೂಹಲ ಕೆರಳಿಸಿರುವುದು ಫ್ಯಾಬ್ಲೆಟ್. ಇದು ಮೂಲತಃ ಸ್ಮಾರ್ಟ್‌ಫೋನ್ ಮತ್ತು ಟ್ಯಾಬ್ಲೆಟ್‌ಗಳ ನಡುವೆ ಇರುವ ಮೊಬೈಲ್ ಫೋನ್ (Phone + Tablet = Phablet). ಅಂದರೆ, ಸ್ಮಾರ್ಟ್‌ಫೋನ್‌ಗಳ ಹಾಗೂ ಟ್ಯಾಬ್ಲೆಟ್‌ಗಳ ಕೆಲಸದೊಂದಿಗೆ ಮುಖ್ಯವಾಗಿ ಎದ್ದುಕಾಣುವ ಗುಣವೈಶಿಷ್ಟ್ಯವೆಂದರೆ ಅದರ ಸ್ಕ್ರೀನ್ ಗಾತ್ರ. ಇದರ ಪರದೆಯು ನಾಲ್ಕೈದು ಮೇಲ್ಪಟ್ಟು, 7 ಇಂಚಿಗಿಂತ ಕಡಿಮೆ ಇರುತ್ತದೆ. ಟ್ಯಾಬ್ಲೆಟ್‌ನಂಥದ್ದೇ ಕೆಲಸ ಮಾಡುವುದರಿಂದ ಜೇಬಿನಲ್ಲಿ ಹೊತ್ತೊಯ್ಯಲು ಸುಲಭ. ದೊಡ್ಡ ಗಾತ್ರದಲ್ಲಿ ಇಂಟರ್ನೆಟ್‌ನಲ್ಲಿ ಸೈಟ್‌ಗಳನ್ನು ನೋಡಬಹುದು ಮತ್ತು ಪಿಡಿಎಫ್ ರೀಡರ್ ಮೂಲಕ ಪಿಡಿಎಫ್ ರೂಪದ ಪುಸ್ತಕಗಳನ್ನೂ ಓದಬಹುದು. ಎರಡು ಸಿಮ್ ಕಾರ್ಡ್‌ಗಳನ್ನೂ ಬಳಸಬಹುದು. ಒಂದನ್ನು ಕರೆ-ಎಸ್ಎಂಎಸ್‌ಗಳಿಗಾಗಿ ಮತ್ತೊಂದನ್ನು ಇಂಟರ್ನೆಟ್ ಸಂಪರ್ಕಕ್ಕಾಗಿ ಬಳಸಬಹುದು.

ಒಂದು ಫೋನ್ ಹಾಗೂ ಮತ್ತೊಂದು ಟ್ಯಾಬ್ಲೆಟ್ ಹೊಂದಿರುವುದು ಇತ್ತೀಚೆಗೆ ನಗರ ಪ್ರದೇಶಗಳಲ್ಲಿ ಸಾಮಾನ್ಯವಾಗುತ್ತಿದೆ. ಕಾರಣವೆಂದರೆ, ಇಂಟರ್ನೆಟ್ ಸಂಪರ್ಕಕ್ಕೆ ಬ್ಯಾಟರಿಯ ಅಗತ್ಯ ಹೆಚ್ಚಿರುತ್ತದೆ, ಬಲುಬೇಗನೇ ಪದೇ ಪದೇ ಚಾರ್ಜ್ ಮಾಡಬೇಕಾಗುತ್ತದೆ. ಹೀಗಾಗಿ ಫೋನ್ ಕರೆಗಳಿಗೆ ಸಮಸ್ಯೆಯಾಗುತ್ತದೆ. ಇದಕ್ಕಾಗಿಯೇ ಕರೆಗಳಿಗಾಗಿ ಪ್ರತ್ಯೇಕ ಬೇಸಿಕ್/ಸ್ಮಾರ್ಟ್‌ಫೋನ್, ಇಂಟರ್ನೆಟ್ ಸಂಪರ್ಕಕ್ಕೆ, ವೀಡಿಯೋ ವೀಕ್ಷಣೆಗೆ ಒಂದು ಟ್ಯಾಬ್ಲೆಟ್.

ಸದಾಕಾಲ ಎರಡನ್ನೂ ಒಯ್ಯುವುದು ಕಷ್ಟ ಎಂದುಕೊಳ್ಳುವವರು, ಫ್ಯಾಬ್ಲೆಟ್‌ಗಳ ಮೊರೆ ಹೋಗುತ್ತಿರುವುದರಿಂದಾಗಿಯೇ ಅವುಗಳ ಮಾರಾಟ ಹೆಚ್ಚಾಗಿರುವುದು. ಇಂಟರ್‌ನ್ಯಾಷನಲ್ ಡೇಟಾ ಕಾರ್ಪೊರೇಶನ್ ವರದಿ ಪ್ರಕಾರ, ಏಷ್ಯಾ ಪೆಸಿಫಿಕ್ ಪ್ರದೇಶಕ್ಕಾಗಿ 2013ರ ಎರಡನೇ ತ್ರೈಮಾಸಿಕ (ಏಪ್ರಿಲ್‌ನಿಂದ ಸೆಪ್ಟೆಂಬರ್) ಅವಧಿಯಲ್ಲಿ 2.52 ಕೋಟಿ ಫ್ಯಾಬ್ಲೆಟ್‌ಗಳು ಮಾರುಕಟ್ಟೆಗೆ ಬಂದಿದ್ದರೆ, 1.26 ಕೋಟಿ ಟ್ಯಾಬ್ಲೆಟ್‌ಗಳು ಮತ್ತು 1.27 ಕೋಟಿ ಪೋರ್ಟೆಬಲ್ ಕಂಪ್ಯೂಟರುಗಳು ರವಾನೆಯಾಗಿವೆ. ಕಳೆದ ವರ್ಷದ 2ನೇ ತ್ರೈಮಾಸಿಕ ಅವಧಿಯಲ್ಲಿ ಶೇ.5ರ ಮಾರುಕಟ್ಟೆ ಪಾಲು ಹೊಂದಿದ್ದ ಫ್ಯಾಬ್ಲೆಟ್‌ಗಳು ಈ ವರ್ಷ ಶೇ.30ಕ್ಕೆ ಜಿಗಿದಿವೆ.