ಜನ ಸಾಮಾನ್ಯರತ್ತ ತಂತ್ರಜ್ಞಾನ – Gadget-Technology Info Towards Common Man

Archive for the ‘Web’ Category

ಹ್ಯಾಕರ್‌ಗಳಿಂದ ರಕ್ಷಿಸಿಕೊಳ್ಳಲು ಮೇಲ್, ಫೋನ್, ಬ್ರೌಸರ್ ಸುರಕ್ಷಿತವಾಗಿಟ್ಟುಕೊಳ್ಳಿ

ಭಾರತದಲ್ಲಿ ಗೂಗಲ್ ಸೇವೆ ಬಳಸದಿರುವ ವ್ಯಕ್ತಿಯೇ ಇಲ್ಲ ಎನ್ನಬಹುದೇನೋ. ಜಿಮೇಲ್ ಇಮೇಲ್, ಹ್ಯಾಂಗೌಟ್ಸ್, ಕ್ರೋಮ್ ಬ್ರೌಸರ್, ಮೊಬೈಲ್ ಆಪರೇಟಿಂಗ್ ಸಿಸ್ಟಂ (ಆಂಡ್ರಾಯ್ಡ್), ಗೂಗಲ್ ಮ್ಯಾಪ್, ಗೂಗಲ್ ಕ್ಯಾಲೆಂಡರ್, ಸರ್ಚ್ ಎಂಜಿನ್… ಹೀಗೆ Browserಕಂಪ್ಯೂಟರಲ್ಲಿ ತೊಡಗಿಕೊಂಡವರಿಗೆ ಪ್ರತಿಯೊಂದು ಕೂಡ ಅತ್ಯುಪಯುಕ್ತ ವ್ಯವಸ್ಥೆಗಳನ್ನು ಅಮೆರಿಕದ ತಂತ್ರಜ್ಞಾನ ದಿಗ್ಗಜ ಸಂಸ್ಥೆಯಾಗಿರುವ ಗೂಗಲ್ ಒದಗಿಸಿದೆ. ಜನ ಸಾಮಾನ್ಯರಿಗೆ ಹತ್ತಿರವಾಗುತ್ತಲೇ, ಆನ್‌ಲೈನ್ ಚಟುವಟಿಕೆಯ ವೇಳೆ ಸುರಕ್ಷಿತವಾಗಿರುವುದರ ಬಗ್ಗೆಯೂ ಅದು ಮಾಹಿತಿ ನೀಡುತ್ತದೆ. ಇದಕ್ಕಾಗಿಯೇ ಗೂಗಲ್ ಟಿಪ್ಸ್ ಎಂಬ ಜಾಲ ತಾಣವನ್ನೂ ತೆರೆದಿದೆ. ಸದಾ ಕಾಲ ಸ್ಮಾರ್ಟ್‌ಫೋನ್ ಮೂಲಕ ಆನ್‌ಲೈನ್ ಸಂಪರ್ಕದಲ್ಲೇ ಇರುವುದರಿಂದ, ನಮ್ಮ ಸೂಕ್ಷ್ಮ ಮಾಹಿತಿಯ ಬಗ್ಗೆ ಸುರಕ್ಷಿತವಾಗಿರುವುದು ನಮ್ಮ ಕೈಯಲ್ಲೇ ಇದೆ. ಹ್ಯಾಕರ್‌ಗಳಿಂದ ರಕ್ಷಿಸಿಕೊಳ್ಳಲು ನಾವು-ನೀವು ಮಾಡಬಹುದಾದ ಕೆಲವು ಪ್ರಮುಖ ಮತ್ತು ಸುಲಭ ಸಲಹೆಗಳು ಇಲ್ಲಿವೆ.

ಬ್ರೌಸರ್: ಕಂಪ್ಯೂಟರಿನಲ್ಲಿ ಅಥವಾ ಮೊಬೈಲ್‌ನಲ್ಲಿ ಯಾವುದೇ ಬ್ರೌಸರ್‌ಗೆ ಆಯಾ ಸಂಸ್ಥೆಗಳು ಒದಗಿಸುವ ಅಪ್‌ಡೇಟ್‌ಗಳನ್ನು ತಪ್ಪದೇ ಇನ್‌ಸ್ಟಾಲ್ ಮಾಡಿಕೊಳ್ಳಿ. ಹೊಸ ವೈರಸ್/ಮಾಲ್‌ವೇರ್ ಬೆದರಿಕೆಗಳು ಬಂದಾಗ ಅವುಗಳನ್ನು ಎದುರಿಸಲು  ಮೈಕ್ರೋಸಾಫ್ಟ್‌ನ ಇಂಟರ್ನೆಟ್ ಎಕ್ಸ್‌ಪ್ಲೋರರ್, ಮೋಝಿಲ್ಲಾದ ಫೈರ್‌ಫಾಕ್ಸ್, ಒಪೆರಾ, ಆ್ಯಪಲ್‌ನ ಸಫಾರಿ ಇತ್ಯಾದಿಗಳು ಕಾಲ ಕಾಲಕ್ಕೆ ಅಪ್‌ಡೇಟ್‌ಗಳನ್ನು ಬಳಕೆದಾರರಿಗೆ ಒದಗಿಸುತ್ತಲೇ ಇರುತ್ತವೆ. ಅಪ್‌ಡೇಟ್ ಮಾಡಿಕೊಳ್ಳದಿದ್ದರೆ ಮಾಹಿತಿ ಕದ್ದು, ವಂಚನೆ ಎಸಗುವ ಹ್ಯಾಕರ್‌ಗಳ ಕೆಲಸ ಸುಲಭವಾಗುತ್ತದೆ.

ಆಂಡ್ರಾಯ್ಡ್: ನಿಮ್ಮ ಸ್ಮಾರ್ಟ್‌ಫೋನ್‌ನ ಸ್ಕ್ರೀನ್ ಯಾವತ್ತೂ ಪಾಸ್‌ವರ್ಡ್, ಪಿನ್ ಅಥವಾ ಸ್ಕ್ರೀನ್‌ನಲ್ಲಿ ಗೆರೆ ಎಳೆಯುವ ‘ಪ್ಯಾಟರ್ನ್’ ಮೂಲಕ ಇಲ್ಲವೇ ನಿಮ್ಮ ಮುಖ ನೋಡಿದರಷ್ಟೇ ಅನ್‌ಲಾಕ್ ಆಗುವಂತೆ ನೋಡಿಕೊಳ್ಳಿ. ಯಾಕೆಂದರೆ, ಅದರೊಳಗಿರುವ ನಿಮ್ಮ ಸೂಕ್ಷ್ಮ ಮಾಹಿತಿಯನ್ನು ಬೇರೆಯವರು ನೋಡಬಹುದು ಅಥವಾ ಪಾಸ್‌ವರ್ಡ್ ಬದಲಾಯಿಸಲೂಬಹುದು. ಈ ಮೂಲಕ ನಿಮ್ಮ ಫೋನನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಬಹುದು.

ಆಂಡ್ರಾಯ್ಡ್ ಡಿವೈಸ್ ಮ್ಯಾನೇಜರ್: ರಿಮೋಟ್ ಆಗಿ ನಿಮ್ಮ ಸ್ಮಾರ್ಟ್ ಸಾಧನವನ್ನು ಪತ್ತೆ ಮಾಡಬಲ್ಲ, ರಿಂಗ್ ಮಾಡಬಲ್ಲ ಹಾಗೂ ತುರ್ತು ಸಂದರ್ಭಗಳಲ್ಲಿ ಅದರಲ್ಲಿನ ಎಲ್ಲ ಮಾಹಿತಿಯನ್ನು ಅಳಿಸಿಹಾಕಬಲ್ಲ ಸಾಮರ್ಥ್ಯ ಆಂಡ್ರಾಯ್ಡ್ ಡಿವೈಸ್ ಮ್ಯಾನೇಜರ್ ಎಂಬ (www.google.com/android/devicemanager) ತಾಣದಲ್ಲಿದೆ. ಇದನ್ನು ಫೋನ್‌ನಲ್ಲಿ ಮೊದಲೇ ಎನೇಬಲ್ ಮಾಡಿಕೊಳ್ಳಿ. (ಗೂಗಲ್ ಸೆಟ್ಟಿಂಗ್ಸ್ > ಸೆಕ್ಯುರಿಟಿ > ಆಂಡ್ರಾಯ್ಡ್ ಡಿವೈಸ್ ಮ್ಯಾನೇಜರ್ ಎಂಬಲ್ಲಿ Remotely Locate this device ಮತ್ತು Allow Remote lock and erase ಎಂಬುದನ್ನು ಆನ್ ಮಾಡಿಕೊಳ್ಳಿ).

ಗೂಗಲ್ ಖಾತೆಗೆ 2 ಹಂತದ ಭದ್ರತೆ: ನಿಮ್ಮ ಖಾತೆಗೆ ಯಾರಾದರೂ ಮಾಮೂಲಿ ಸ್ಥಳದ ಹೊರತಾಗಿ ಬೇರೆಡೆ ಇರುವ ಅಪರಿಚಿತ ಕಂಪ್ಯೂಟರ್‌ನಿಂದ ಲಾಗಿನ್ ಆಗದಂತೆ ತಡೆಯುವ ನಿಟ್ಟಿನಲ್ಲಿ ಎರಡು ಹಂತದ ದೃಢೀಕರಣ ವ್ಯವಸ್ಥೆಯನ್ನು ಆನ್ ಮಾಡಿಕೊಳ್ಳಿ. (ಜಿಮೇಲ್ ಲಾಗಿನ್ ಆಗಿ, ನಿಮ್ಮ ಫೋಟೋ ಇರುವ ಜಾಗ ಕ್ಲಿಕ್ ಮಾಡಿದರೆ, Accounts ಅಂತ ಕ್ಲಿಕ್ ಮಾಡಿ. ನಂತರ Signing in ಎಂದಿರುವಲ್ಲಿ 2-step Verification ಆನ್ ಮಾಡಿಕೊಳ್ಳಿ.) ಪ್ರತಿ ಬಾರಿ ಲಾಗಿನ್ ಆಗುವ ಮುನ್ನ ನಿಮ್ಮ ಮೊಬೈಲ್‌ಗೆ ಒಂದು ಪ್ರತ್ಯೇಕ ಕೋಡ್ ಕಳುಹಿಸಲಾಗುತ್ತದೆ. ಅದನ್ನು ಬಳಸಿದಲ್ಲಿ ಮಾತ್ರ ಲಾಗಿನ್ ಆಗಲು ಸಾಧ್ಯವಾಗುವುದರಿಂದ ಹೆಚ್ಚು ಸುರಕ್ಷಿತ.

ಗೂಗಲ್ ಪ್ಲೇ ಸ್ಟೋರ್‌ಗೂ ಲಾಕ್: ಮಕ್ಕಳು ಅಥವಾ ಬೇರೆಯವರು ನಿಮ್ಮ ಮೊಬೈಲ್ ಮೂಲಕ ಪ್ಲೇ ಸ್ಟೋರ್‌ನಲ್ಲಿ ಅಪರಿಚಿತ ಆ್ಯಪ್ ಖರೀದಿ ಅಥವಾ ಇನ್‌ಸ್ಟಾಲ್ ಮಾಡದಂತೆ, ಪಾಸ್‌ವರ್ಡ್ ಮೂಲಕ ರಕ್ಷಣೆ ಮಾಡಿಕೊಳ್ಳಿ. Play Store ನ ಸೆಟ್ಟಿಂಗ್ಸ್‌ನಲ್ಲಿ, User Controls ನಲ್ಲಿ Require Authentication ಎಂಬುದನ್ನು ಆನ್ ಮಾಡಿಡಿ.

ಪಾಸ್‌ವರ್ಡ್ ಬಗ್ಗೆ ಕಟ್ಟುನಿಟ್ಟು: ಆನ್‌ಲೈನ್‌ನಲ್ಲಿ ಬಹುತೇಕ ಎಲ್ಲಕ್ಕೂ ಇಮೇಲ್ ಖಾತೆಯೇ ಪ್ರಧಾನವಾಗಿರುವುದರಿಂದ, ನಿಮ್ಮ ಇಮೇಲ್ ಹ್ಯಾಕ್ ಮಾಡದಂತಾಗಲು, ಕ್ಲಿಷ್ಟವಾದ, ಬೇರೆಯವರಿಗೆ ಊಹಿಸಲು ಸಾಧ್ಯವಾಗದ ಪಾಸ್‌ವರ್ಡ್ ಬಳಸಿ (ಜನ್ಮದಿನ, ಪತ್ನಿಯ, ಪತಿಯ ಹೆಸರು ಇತ್ಯಾದಿ ಬೇಡ). ಪ್ರತಿಯೊಂದು ಐಡಿಗೆ ಪ್ರತ್ಯೇಕ ಪಾಸ್‌ವರ್ಡ್ ಇಟ್ಟುಕೊಳ್ಳಿ. ಪಾಸ್‌ವರ್ಡ್ ರಿಕವರಿ ಆಯ್ಕೆಗಳನ್ನು (ಬೇರೊಂದು ಇಮೇಲ್, ಸೆಕ್ಯುರಿಟಿ ಪ್ರಶ್ನೆ, ಜನ್ಮ ದಿನ, ಮೊಬೈಲ್ ಸಂಖ್ಯೆ ಇತ್ಯಾದಿ) ಅಪ್‌ಡೇಟ್ ಮಾಡಿಕೊಳ್ಳಿ.
ಟೆಕ್ ಟಾನಿಕ್: ಟೈಪ್ ಅಲ್ಲ ಸ್ವೈಪ್ ಮಾಡಿ ಬರೆಯಿರಿ
ಇತ್ತೀಚಿನ ಸ್ಮಾರ್ಟ್‌ಫೋನ್ ಸಾಧನಗಳಲ್ಲಿ ಸ್ಕ್ರೀನ್ ಮೇಲೆ ಬೆರಳಿನಿಂದ ಗೀಚುವ (ಸ್ವೈಪ್ ಮಾಡುವ) ಮೂಲಕ ಇಂಗ್ಲಿಷನ್ನು ಸುಲಲಿತವಾಗಿ ಟೈಪ್ ಮಾಡಬಹುದೆಂಬುದು ಎಷ್ಟು ಮಂದಿಗೆ ಗೊತ್ತು? ಹೌದು ಇದು ಸಾಧ್ಯ. ಆ್ಯಪಲ್, ಆಂಡ್ರಾಯ್ಡ್ ಮತ್ತು ವಿಂಡೋಸ್‌ನ ಹೊಸ ಆವೃತ್ತಿಯ ಫೋನ್‌ಗಳಲ್ಲಿ, ಅಪ್‌ಡೇಟ್ ಆಗಿರುವ ಕೀಬೋರ್ಡ್ ಇದ್ದರೆ ಇದು ಸಾಧ್ಯ. ಚಿತ್ರದಲ್ಲಿರುವಂತೆ ಸ್ವೈಪ್ ಮಾಡಿದರಾಯಿತು. ಇಂಗ್ಲಿಷ್ ಪದಗಳನ್ನು ಸ್ವೈಪ್ ಮಾಡುವಾಗ ನಿಮ್ಮ ಸಾಧನವೇ ಆ ಪದವನ್ನು ಊಹಿಸುತ್ತದೆ. ಅದರ ಸ್ಪೆಲ್ಲಿಂಗ್‌ಗಳನ್ನು ಜೋಡಿಸುವಂತೆ ಸ್ಕ್ರೀನ್ ಮೇಲೆ ಬೆರಳಿನಿಂದ ಉಜ್ಜಿದರಾಯಿತು. ನೀವು ಅಂದುಕೊಂಡಿದ್ದಕ್ಕಿಂತ ಬೇರೆ ಪದಗಳಿದ್ದರೆ, ಅವುಗಳ ಸಲಹೆಯೂ ಗೋಚರಿಸುತ್ತದೆ ಮತ್ತು ಅವುಗಳಿಂದ ನಮಗೆ ಬೇಕಾದ ಪದವನ್ನು ಆಯ್ಕೆ ಮಾಡಿಕೊಳ್ಳಬಹುದು.
ವಿಜಯ ಕರ್ನಾಟಕ ಅಂಕಣ 109: ಮಾಹಿತಿ@ತಂತ್ರಜ್ಞಾನ: ಅವಿನಾಶ್ ಬಿ

2015 ಅಧಿಕ ವರ್ಷ ಅಲ್ಲ, ಅಧಿಕ ಕ್ಷಣ!

Leap Second2ಬೆಂಗಳೂರು: ಕ್ಷಣ ಕ್ಷಣವೂ ಅಮೂಲ್ಯ. ಅಧಿಕ ವರ್ಷದಂತೆಯೇ 2015ನ್ನು ಅಧಿಕ ಸೆಕೆಂಡಿನ ವರ್ಷ ಎನ್ನಬಹುದು. ಅಂದರೆ ಈ ವರ್ಷದ ಸಮಯಕ್ಕೆ ಒಂದು ಸೆಕೆಂಡು ಹೆಚ್ಚುವರಿಯಾಗಿ ಸೇರ್ಪಡೆಯಾಗಲಿದೆ. ಇದರಿಂದಾಗಿ 2015ರ ಜೂನ್‌ 30ರ ಮಧ್ಯರಾತ್ರಿ ಹಲವಾರು ವೆಬ್‌ಸೈಟ್‌ಗಳು ಕ್ರ್ಯಾಶ್‌ ಆಗುವುದಕ್ಕೂ ಕಾರಣವಾಗಬಹುದು.

ಅಂದು ಮಧ್ಯರಾತ್ರಿ 23:59:59 (ಗಂಟೆ:ನಿಮಿಷ:ಸೆಕೆಂಡು) ಬಳಿಕ, 23:59:60 ಎಂದು ಪ್ಯಾರಿಸ್‌ನಲ್ಲಿರುವ ಅಂತಾರಾಷ್ಟ್ರೀಯ ಭೂ ಪರಿಭ್ರಮಣ ಸೇವೆಯು (IERS) ಜಾಗತಿಕ ಪರಮಾಣು ಗಡಿಯಾರದ ಸಮಯವನ್ನು (ಅಣುಗಳ ಕಂಪನ ಆಧರಿಸಿ ರಚಿಸಲಾಗಿರುವ ಕರಾರುವಾಕ್ಕಾಗಿರುವ ಗಡಿಯಾರ) ಅಧಿಕೃತವಾಗಿ ಬದಲಾಯಿಸಲಿದೆ. ಪ್ರತಿ ರಾತ್ರಿಯೂ ಅದು 00:00:00 ಎಂದು ಬದಲಾಗುತ್ತದೆಯಾದರೆ, ಆ ರಾತ್ರಿ ಮಾತ್ರ ವಿಶಿಷ್ಟ.

ಯಾಕಾಗಿ…
ವಿಜ್ಞಾನಿಗಳು ಹೇಳುವಂತೆ, ಭೂಮಿಯ ತಿರುಗುವಿಕೆಯು ದಿನಕ್ಕೆ ಒಂದು ಸೆಕೆಂಡಿನ ಎರಡುಸಾವಿರದ ಒಂದನೇ ಭಾಗದಷ್ಟು ವಿಳಂಬವಾಗುತ್ತಲೇ ಬಂದಿದೆ. ಇದಕ್ಕೆ ನೈಸರ್ಗಿಕ ಕಾರಣಗಳಿವೆ. ಅಲ್ಲಲ್ಲಿ ಆಗುವ ಭೂಕಂಪಗಳು, ಸಮುದ್ರದಲೆಗಳ ಉಬ್ಬರ-ಇಳಿತ ಮತ್ತು ವಾತಾವರಣದಲ್ಲಾಗುವ ಇತರ ಬದಲಾವಣೆಗಳು ಭೂಮಿಯ ಸಹಜ ಸುತ್ತುವಿಕೆಗೆ ಅಡಚಣೆಯೊಡ್ಡುತ್ತವೆ.

ಏನಾಗುತ್ತದೆ…
ಜನ ಸಾಮಾನ್ಯರ ಮೇಲೆ ಯಾವುದೇ ಪರಿಣಾಮವಾಗದಿದ್ದರೂ, ಜಾಗತಿಕ ಪರಮಾಣು ಗಡಿಯಾರವನ್ನು ಅವಲಂಬಿಸಿರುವ ಕಂಪ್ಯೂಟರ್‌ ಸಿಸ್ಟಂಗಳ ಮೇಲೆ ಇದು ದುಷ್ಪರಿಣಾಮ ಬೀರುತ್ತದೆ. ದಶಕಗಳಿಂದ ಈ ಪ್ರಕ್ರಿಯೆ ನಡೆಯುತ್ತಿದ್ದರೂ, ಇತ್ತೀಚಿನ ದಿನಗಳಲ್ಲಿ ನಾವು ಜಿಪಿಎಸ್‌ ಸೇರಿದಂತೆ ಕಂಪ್ಯೂಟರ್‌ ಮೇಲೆ ಹೆಚ್ಚು ಅವಲಂಬಿತರಾಗಿದ್ದೇವೆ. ಕಂಪ್ಯೂಟರಿನ ಅಥವಾ ವೆಬ್‌ ಸೈಟುಗಳ ಸರ್ವರ್‌ನ ಸಮಯವನ್ನು ಜಾಗತಿಕ ಸಮಯಕ್ಕೆ ನಿಖರವಾಗಿ ಹೊಂದಿಸಬೇಕಾಗುವುದರಿಂದ ಈಗ ಹೆಚ್ಚು ಕಳಕಳಿ.

ಅಂದರೆ, 23:59:59 ರ ಸಮಯಕ್ಕೆ ನಿರ್ದಿಷ್ಟ ಕಾರ್ಯ ಮಾಡುವಂತೆ ಕಂಪ್ಯೂಟರನ್ನು ನಾವು ಹೊಂದಿಸಿಟ್ಟರೆ, ಒಂದು ಸೆಕೆಂಡು ದಿಢೀರನೇ ಬದಲಾದಾಗ, ಏನು ಮಾಡಬೇಕೆಂಬುದನ್ನು ತಿಳಿಯದೆ ಕಂಪ್ಯೂಟರೇ ಗೊಂದಲಕ್ಕೀಡಾಗುತ್ತದೆ. ಅದರೊಳಗಿನ ವ್ಯವಸ್ಥೆಯೆಲ್ಲವೂ ಬುಡಮೇಲಾಗುತ್ತದೆ. ಉದಾಹರಣೆಗೆ, ಆ ಸಮಯದಲ್ಲೇ ಒಂದು ಇಮೇಲ್‌ ಬರುತ್ತದೆಯೆಂದಿಟ್ಟುಕೊಳ್ಳೋಣ; ಎಲ್ಲವೂ ಕ್ಷಣ ಮಾತ್ರದಲ್ಲಿ ನಡೆಯುವುದರಿಂದ, ದಿಢೀರನೇ ಒಂದು ಸೆಕೆಂಡು ಕಳೆದುಹೋದಾಗ ಈ ಇಮೇಲ್‌ ಗೊಂದಲಕ್ಕೀಡಾಗಿ, ಸರ್ವರ್‌ನ ನಿಗದಿತ ಪಥದಿಂದ ಬೇರೆಯೇ ಪಥಕ್ಕೆ ಸರಿಯಬಹುದು; ಇಮೇಲ್‌ ನಾಪತ್ತೆಯಾಗಲೂಬಹುದು.

ಯಾವಾಗಿನಿಂದ…
1972ರಲ್ಲಿ ಈ ರೀತಿಯಾಗಿ ಹೆಚ್ಚುವರಿ ಸೆಕೆಂಡು ಸೇರಿಸುವ ಪ್ರಕ್ರಿಯೆ ಆರಂಭವಾದ ಬಳಿಕ ಇದುವರೆಗೆ 25 ಬಾರಿ ಗಡಿಯಾರವನ್ನು ಮರುಹೊಂದಿಸಲಾಗಿದೆ. 1979ರವರೆಗೂ ವರ್ಷಕ್ಕೊಮ್ಮೆ ಹೆಚ್ಚುವರಿ ಸೆಕೆಂಡು ಸೇರಿಸಲಾಗುತ್ತಿತ್ತು. ಆ ಬಳಿಕ ಬದಲಾವಣೆಯ ಸಮಯದ ಅಂತರ ಹೆಚ್ಚಾಗಿದೆ. ಆದರೆ, ಕಂಪ್ಯೂಟರುಗಳು ಹಾಗೂ ವೆಬ್‌ ಸರ್ವರ್‌ಗಳು ಪರಮಾಣು ಗಡಿಯಾರಗಳ ಸಮಯದ ಜತೆ ಸಮ್ಮಿಳಿತವಾಗುವ (ಸಿಂಕ್ರನೈಸ್‌) ಪ್ರಕ್ರಿಯೆ ಹೆಚ್ಚಾಗಿರುವುದರಿಂದಾಗಿ, ಅವುಗಳ ಮೇಲೆ ದುಷ್ಪರಿಣಾಮವೂ ಹೆಚ್ಚು.

ಹಿಂದೆ ಏನಾಗಿತ್ತು…
2012ರಲ್ಲಿಯೂ ಒಂದು ಸೆಕೆಂಡು ಹೆಚ್ಚುವರಿ ಸೇರಿಸಲಾಗಿತ್ತು. ಈ ಸಂದರ್ಭದಲ್ಲಿಮೋಝಿಲ್ಲಾ, ರೆಡ್ಡಿಟ್‌, ಫೋರ್‌ಸ್ಕೇರ್‌, ಯೆಲ್ಪ್, ಲಿಂಕ್ಡ್ಇನ್‌ ಮುಂತಾದ ವೆಬ್‌ಸೈಟ್‌ಗಳು ಕ್ರ್ಯಾಶ್‌ ಆಗಿದ್ದವು; ಮಾತ್ರವಲ್ಲದೆ ಲಿನಕ್ಸ್ ಆಪರೇಟಿಂಗ್‌ ಸಿಸ್ಟಂ ಹಾಗೂ ಜಾವಾ ಆಧಾರಿತ ಪ್ರೋಗ್ರಾಂಗಳು ಕೂಡ ಬಾಧೆಗೀಡಾಗಿದ್ದವು.

ವೈ2ಕೆಗಿಂತ ಹೇಗೆ ಭಿನ್ನ…
2000ನೇ ವರ್ಷಕ್ಕೆ ಕಾಲಿಟ್ಟಾಗ ವೈ2ಕೆ (ಇಯರ್‌ ಟು ಕಿಲೋ) ಬಗ್‌ ಎಲ್ಲರನ್ನೂ ಧೃತಿಗೆಡಿಸಿತ್ತು. ಇದಕ್ಕೆ ಕಾರಣವೆಂದರೆ, ವಿಶೇಷವಾಗಿ ವರ್ಷವನ್ನು  ಕೊನೆಯ ಎರಡೇ ಅಂಕಿಗಳನ್ನು ಬಳಸಿ ಗುರುತಿಸುವಾಗ ಕಂಪ್ಯೂಟರಿಗೆ ಗೊಂದಲವಾಗುವುದು ಸಹಜ (ಉದಾಹರಣೆಗೆ, 2000ನೇ ಇಸವಿ ಹಾಗೂ 1900ನೇ ಇಸವಿ – ಎರಡನ್ನೂ “00” ಎಂದು ಗುರುತಿಸುವಾಗ). ಇದೇನೋ ಸಾವಿರ ವರ್ಷಗಳಿಗೊಮ್ಮೆ ಬರುವ ಸಮಸ್ಯೆಯಾದರೆ, ಒಂದು ಸೆಕೆಂಡು ಸೇರ್ಪಡೆಯು ಪದೇ ಪದೇ ಆಗುತ್ತಿರುವ ಸಂಕೀರ್ಣ ಸಮಸ್ಯೆ.

ಪರಿಹಾರವಿದೆಯೇ…
ಇದಕ್ಕೆ ತಂತ್ರಾಂಶ ದಿಗ್ಗಜ ಗೂಗಲ್‌ ಕಂಪನಿಯು ಒಂದು ಪರಿಹಾರ ಕಂಡುಕೊಂಡಿದೆ. ಕೋಡ್‌ ಮೂಲಕವೇ ಎಲ್ಲವೂ ನಡೆಯಬೇಕಾಗಿರುವುದರಿಂದ, ಅದು 2011ರಲ್ಲಿ ತನ್ನದೇ ಆದ “ಲೀಪ್‌ ಸ್ಮಿಯರ್” ಎಂಬ ತಂತ್ರಜ್ಞಾನವನ್ನು ರೂಪಿಸಿ, ನಿರ್ದಿಷ್ಟ ಸಮಯಕ್ಕೆ ಮೊದಲೇ ತಾನಾಗಿ ಈ ಹೆಚ್ಚುವರಿ ಸಮಯವನ್ನು ಹೊಂದಿಸಿಕೊಳ್ಳುವ ವ್ಯವಸ್ಥೆ ಮಾಡಿಕೊಂಡಿದೆ. ಅಂದರೆ, ಆ ಹೆಚ್ಚುವರಿ ಸೆಕೆಂಡನ್ನು ಮಿಲಿ ಸೆಕೆಂಡುಗಳಾಗಿ ವಿಂಗಡಿಸಿ, ಕಾಲದ ಈ ಪುಟ್ಟ ಭಾಗಗಳನ್ನು ಸಿಸ್ಟಂಗೆ ಇಡೀ ದಿನ ಊಡಿಸುವ ಪ್ರಕ್ರಿಯೆಯಿದು. ಆ ಮಧ್ಯರಾತ್ರಿ ಒಮ್ಮೆಗೇ ಒಂದು ಸೆಕೆಂಡು ಸೇರಿಸುವ ಬದಲಾಗಿ, ಇಡೀ ದಿನದಲ್ಲೇ ಸ್ವಲ್ಪ ಸ್ವಲ್ಪವೇ ಮಿಲಿ ಸೆಕೆಂಡುಗಳನ್ನು ಸೇರ್ಪಡಿಸಿ, ಸಮಯಕ್ಕೆ ಬದ್ಧವಾಗಿರುವುದು.

ಪರ-ವಿರೋಧ…
ಈ ಹೆಚ್ಚುವರಿ ಸೆಕೆಂಡು ಸೇರ್ಪಡೆಯನ್ನು ಅಮೆರಿಕ ವಿರೋಧಿಸುತ್ತಾ ಬಂದಿದ್ದು, ಸಮಸ್ಯೆಗಳೇ ಜಾಸ್ತಿ ಎಂಬುದು ಅದರ ವಾದ. ಆದರೆ, ಇದಕ್ಕೆ ಬೇರೆ ರಾಷ್ಟ್ರಗಳ ಸಹಮತವಿಲ್ಲ. ಉದಾಹರಣೆಗೆ, ಬ್ರಿಟನ್‌, ಅಧಿಕ ಕ್ಷಣದ ಸೇರ್ಪಡೆ ಬೇಕು ಎನ್ನುತ್ತಿದೆ. ಯಾಕೆಂದರೆ, ಅದರ ಬದಲಾವಣೆ ನಿಲ್ಲಿಸಿಬಿಟ್ಟರೆ, ಸೂರ್ಯನ ಚಲನೆ ಆಧಾರಿತವಾಗಿ ಸಮಯ ನಿರ್ಧರಿಸುವ ಗ್ರೀನ್ವಿಚ್‌ ಮೀನ್‌ ಟೈಮ್‌ಗೆ (ಜಿಎಂಟಿ) ಅರ್ಥವೇ ಬಾರದು, ಜಿಎಂಟಿ ಕೂಡ ನಿಖರವಾಗಿರಲಾರದು ಎನ್ನುತ್ತದೆ ಅದು.

ಎಲ್ಲ ಕಂಪನಿಗಳೂ ಗೂಗಲ್‌ನಂತಹಾ ವ್ಯವಸ್ಥೆಯನ್ನು ಅಳವಡಿಸಿಕೊಂಡಿಲ್ಲದಿರುವುದರಿಂದ, ಆ ದಿನ, ಆ ಸಮಯಕ್ಕೆ ಕೆಲವು ವೆಬ್‌ ಸೈಟ್‌ಗಳಲ್ಲಿ ತೊಂದರೆ ಕಾಣಿಸಿಕೊಳ್ಳಬಹುದು. ಆ ಸಮಯಕ್ಕೆ ನಿಮಗೆ ಬರಬಹುದಾದ ಇಮೇಲ್‌ ನಾಪತ್ತೆಯಾಗಲೂಬಹುದು.

ವಿಜಯ ಕರ್ನಾಟಕದ ಮುಖಪುಟದಲ್ಲಿ ಜನವರಿ 09, 2015: ಅವಿನಾಶ್ ಬಿ.

108: ಮೊಬೈಲ್‌ನಲ್ಲಿ ಕಂಪ್ಯೂಟರ್ ಜಾಲಾಡಿ; ಬೇರೆಲ್ಲೋ ಇರುವ ಕಂಪ್ಯೂಟರನ್ನೂ ನಿಯಂತ್ರಿಸಿ

Team Viewerಕಚೇರಿಯಲ್ಲಿ ಕಂಪ್ಯೂಟರಲ್ಲಿ ಟೈಪ್ ಮಾಡಿಟ್ಟ ಇಮೇಲ್ ಅನ್ನು ಮನೆಯಿಂದಲೇ ಮುಂದುವರಿಸಬೇಕೇ? ದೂರದಲ್ಲೆಲ್ಲೋ ಇರುವ ನಿಮ್ಮ ಡೆಸ್ಕ್‌ಟಾಪ್‌ನಲ್ಲಿರುವ ಫೈಲನ್ನು ನಿಮ್ಮ ಮೊಬೈಲ್ ಮೂಲಕವೇ ಓದಬೇಕೇ? ಸಾಧ್ಯವಿಲ್ಲ ಎಂದುಕೊಂಡಿರಾ? ಇದು ಸಾಧ್ಯ ಮತ್ತು ತೀರಾ ಸುಲಭ ಕೂಡ. ಇಂಟರ್ನೆಟ್ ಸಂಪರ್ಕವಿದ್ದರೆ ಜಗತ್ತೇ ಅಂಗೈಯಲ್ಲಿ ಅಂತ ಹೇಳೋದು ಇದಕ್ಕೇ.

ಟೀಮ್ ವ್ಯೂವರ್ ಎಂಬೊಂದು ಉಚಿತ ತಂತ್ರಾಂಶದ ಮೂಲಕ ಬೆಂಗಳೂರಿನಿಂದ ಕುಳಿತು ಮಂಗಳೂರಿನಲ್ಲಿರುವ ಕಂಪ್ಯೂಟರನ್ನು ನಿಯಂತ್ರಿಸಬಹುದು. ಸಾಫ್ಟ್‌ವೇರ್ ಉದ್ಯೋಗಿಗಳಲ್ಲಿ ಹೆಚ್ಚು ಮನೆಮಾತಾಗಿರುವ ಈ ತಂತ್ರಾಂಶವನ್ನು ಯಾರು ಬೇಕಿದ್ದರೂ ಸುಲಭವಾಗಿ ಉಪಯೋಗಿಸಬಹುದು.

ಮನೆಯಲ್ಲಿ ಕಂಪ್ಯೂಟರ್ ಬಗ್ಗೆ ಹೆಚ್ಚೇನೂ ತಿಳಿಯದ ಹಿರಿಯರು ಅಥವಾ ಮಕ್ಕಳೋ ಅದರಲ್ಲಿ ಕೆಲಸ/ಆಟದಲ್ಲಿ ತೊಡಗಿದ್ದಾಗ ಕಂಪ್ಯೂಟರ್‌ನಲ್ಲಿ ಏನೋ ಸಮಸ್ಯೆ ಬಂತು ಅಂತಿಟ್ಟುಕೊಳ್ಳಿ. ಇಲ್ಲವೇ, ನೀವು ತುಂಬಾ ದೂರದಲ್ಲಿರುವ ನಿಮ್ಮ ಕಚೇರಿಗೆ ಹೋಗಿರುತ್ತೀರಿ, ಮನೆಯ ಕಂಪ್ಯೂಟರಿನಲ್ಲಿರುವ ಒಂದು ಫೈಲ್ ತುರ್ತಾಗಿ ಬೇಕಾಗಿತ್ತು. ಇಂತಹಾ ಪರಿಸ್ಥಿತಿಯಲ್ಲಿ ಒಂದು ಕಂಪ್ಯೂಟರ್‌ನಿಂದ ಮತ್ತೊಂದನ್ನು ರಿಮೋಟ್ ಆಗಿ ಸಂಪರ್ಕಿಸಲು ನೆರವಾಗುತ್ತದೆ ಟೀಂ ವ್ಯೂವರ್. ಅದನ್ನು ಮೊದಲು http://www.teamviewer.com/ ಎಂಬಲ್ಲಿಂದ ಡೌನ್‌ಲೋಡ್ ಮಾಡಿಕೊಂಡು ಇನ್‌ಸ್ಟಾಲ್ ಮಾಡಿಕೊಳ್ಳಿ. ಇದು 10 ಎಂಬಿಯೊಳಗಿನ ಗಾತ್ರದ ಎಕ್ಸಿಕ್ಯೂಟೆಬಲ್ (ಇಎಕ್ಸ್‌ಇ) ಫೈಲ್ ಆಗಿದ್ದು, ಎರಡೂ ಕಂಪ್ಯೂಟರುಗಳಲ್ಲಿ ಇನ್‌ಸ್ಟಾಲ್ ಮಾಡಿಕೊಳ್ಳಬೇಕು.

ಮನೆ ಮತ್ತು ಕಚೇರಿ ಎರಡೂ ಕಂಪ್ಯೂಟರುಗಳಲ್ಲಿ ಟೀಂ ವ್ಯೂವರ್ ಇರಬೇಕು ಮತ್ತು ಇಂಟರ್ನೆಟ್ ಸಂಪರ್ಕ ಆನ್ ಇರಬೇಕು ಎಂಬುದು ನೆನಪಿನಲ್ಲಿರಲಿ. ಟೀಂ ವ್ಯೂವರ್ ಓಪನ್ ಆಗಿ, ಒಂದು ಕೆಲವು ಸೆಕೆಂಡು ಕಾಯಬೇಕಾಗುತ್ತದೆ. ಆರಂಭದಲ್ಲಿ ಟೀಂ ವ್ಯೂವರ್ ವಿಂಡೋದ ಕೆಳ ಭಾಗದಲ್ಲಿ ಕೆಂಪು ಬಟನ್ ಜತೆಗೆ ‘Not ready, check your internet connection’ ಅಂತ ಬರುತ್ತದೆ. ನಂತರ ಇಂಟರ್ನೆಟ್ ಸಂಪರ್ಕವಾದಾಗ Ready to Connect (Secure Connection) ಅಂತ ಹಸಿರು ಬಟನ್ ಜತೆಗೆ ಮಾಹಿತಿ ಡಿಸ್‌ಪ್ಲೇ ಆಗುತ್ತದೆ.

ಆ ವಿಂಡೋದಲ್ಲೇ ನಿಮ್ಮ ಟೀಂ ವ್ಯೂವರ್ (ಅಥವಾ ಕಂಪ್ಯೂಟರ್‌ನ) ಐಡಿ ಮತ್ತು ತಾತ್ಕಾಲಿಕ ಪಾಸ್‌ವರ್ಡ್ ಪ್ರದರ್ಶನವಾಗುತ್ತದೆ. ಐಡಿ ಯಾವಾಗಲೂ ಒಂದೇ ರೀತಿಯಾಗಿರುತ್ತದೆ, ಆದರೆ ಪಾಸ್‌ವರ್ಡ್ ಪ್ರತಿ ಬಾರಿ ಟೀಂ ವ್ಯೂವರ್ ಓಪನ್ ಮಾಡಿದಾಗಲೂ ಬದಲಾಗುತ್ತದೆ. ನೀವೇ ಸ್ವಂತ ಪಾಸ್‌ವರ್ಡ್ ರಚಿಸಿಕೊಳ್ಳುವುದಕ್ಕೂ ಆ ವಿಂಡೋದಲ್ಲೇ ಅವಕಾಶವಿದೆ. ಮನೆಯಲ್ಲಿರುವವರು ಈ ಕಂಪ್ಯೂಟರಿನ ಐಡಿ ಮತ್ತು ಪಾಸ್‌ವರ್ಡನ್ನು ನಿಮಗೆ ತಿಳಿಸಬೇಕಾಗುತ್ತದೆ.

ಇನ್ನು ನೀವು ಕಚೇರಿಯಲ್ಲಿ ನಿಮ್ಮ ಲ್ಯಾಪ್‌ಟಾಪ್ ಅಥವಾ ಡೆಸ್ಕ್‌ಟಾಪ್‌ನಲ್ಲಿ ಟೀಂ ವ್ಯೂವರ್ ಪ್ರಾರಂಭಿಸಿ, ಬಲಭಾಗದಲ್ಲಿರುವ Control Remote Computer ಎಂಬ ಶೀರ್ಷಿಕೆ ಇರುವಲ್ಲಿ, Partner ID ಎಂದಿರುವಲ್ಲಿ, ಮನೆಯಲ್ಲಿರುವವರು ಕೊಟ್ಟ ಐಡಿ ನಮೂದಿಸಿ. ಪಾಸ್‌ವರ್ಡ್ ಕೇಳಿದಾಗ ಅದನ್ನೂ ಒತ್ತಿಬಿಡಿ. ಅಷ್ಟೆ. ಮನೆಯಲ್ಲಿರುವವರಿಗಾದ ಕಂಪ್ಯೂಟರ್ ಸಮಸ್ಯೆಯನ್ನು ಕುಳಿತಲ್ಲಿಂದಲೇ ಏನಾಗಿದೆ ಅಂತ ತಿಳಿದುಕೊಂಡು ನೀವು ಬಗೆಹರಿಸಬಹುದು. ಇಲ್ಲವೆಂದಾದರೆ, ಆ ಕಂಪ್ಯೂಟರಿನಲ್ಲಿ ನಿಮಗೆ ಬೇಕಾಗಿರುವ ಫೈಲನ್ನು ಕಚೇರಿಯಿಂದಲೇ ಓಪನ್ ಮಾಡಿ ನಿಮ್ಮ ಕಂಪ್ಯೂಟರಿಗೆ ಸೇವ್ ಮಾಡಿಕೊಳ್ಳಬಹುದು.

ನಿಮಗೆ ತಿಳಿಯದ ಸಮಸ್ಯೆಯಾದರೆ ಮತ್ತು ತುರ್ತಾಗಿ ಪರಿಹಾರವಾಗಬೇಕಿದ್ದರೆ, ಟೆಕ್ ನಿಪುಣ ಸ್ನೇಹಿತರ ಮೂಲಕ ಕಂಪ್ಯೂಟರ್ ದುರಸ್ತಿ ಮಾಡಿಸಿಕೊಳ್ಳಲು ಈ ತಂತ್ರಾಂಶ ಬಳಸಬಹುದು. ಫೋನ್ ಮೂಲಕ ಹೇಳುವುದು ಅವರಿಗೆ ಅರ್ಥವಾಗಲಾರದು, ನೇರವಾಗಿ ನೋಡಿದರಷ್ಟೇ ಸಮಸ್ಯೆ ಅರಿತುಕೊಳ್ಳುವ ಸಾಧ್ಯತೆಗಳು ಹೆಚ್ಚಿರುವುದರಿಂದ ಟೀಮ್ ವ್ಯೂವರ್ ನೆರವಿಗೆ ಬರುತ್ತದೆ.

ಅಲ್ಲದೆ, ಕಚೇರಿಯಲ್ಲಿರುವ ಕಂಪ್ಯೂಟರಿನಲ್ಲಿ ಯಾವುದೋ ಫೈಲ್ ಬರೆದಿಟ್ಟಿದ್ದೀರಿ, ನೀವೆಲ್ಲೋ ಹೊರ ಊರಿಗೆ ಹೋಗಿರುತ್ತೀರಿ. ಆದರೆ ಅದನ್ನು ತುರ್ತಾಗಿ ಇಮೇಲ್ ಮಾಡಬೇಕಿದೆ ಎಂದಾದಾಗ ಕೂಡ, ಯಾರಿಗಾದರೂ ಕಚೇರಿಯ ಕಂಪ್ಯೂಟರ್ ಆನ್ ಮಾಡಲು ಹೇಳಿದರೆ, ನಿಮ್ಮದೇ ಲಾಗಿನ್ ಪಾಸ್‌ವರ್ಡ್ ಬಳಸಿ ಟೀಂ ವ್ಯೂವರ್ ಮೂಲಕ ಮನೆಯಲ್ಲಿ ಕೆಲಸ ಮಾಡಬಹುದು.

ಹೊಸ ವರ್ಷದ ಬೋನಸ್ ಏನು ಗೊತ್ತೇ? ನಿಮ್ಮ ಆಂಡ್ರಾಯ್ಡ್, ಐಫೋನ್, ವಿಂಡೋಸ್, ಬ್ಲ್ಯಾಕ್‌ಬೆರಿ ಸ್ಮಾರ್ಟ್‌ಫೋನ್‌ಗಳಿಗೂ ಟೀಂ ವ್ಯೂವರ್ ಆ್ಯಪ್ ಲಭ್ಯವಿದ್ದು, ಅದನ್ನು ಸ್ಮಾರ್ಟ್‌ಫೋನ್‌ನಲ್ಲಿ ಇನ್‌ಸ್ಟಾಲ್ ಮಾಡಿಕೊಂಡು, ರಿಮೋಟ್ ಆಗಿ ಮೊಬೈಲ್‌ನಿಂದಲೇ ಯಾವುದೇ ಕಂಪ್ಯೂಟರುಗಳಲ್ಲಿ ಕೆಲಸ ಮಾಡಬಹುದು. ಮೊಬೈಲ್ ಸ್ಕ್ರೀನ್ ಕಿರಿದಾಗಿರುವುದರಿಂದ ಮತ್ತು ಬಳಕೆ ಕೊಂಚ ಕ್ಲಿಷ್ಟಕರವಾಗಿರುವುದರಿಂದಾಗಿ ತುರ್ತು ಕೆಲಸಗಳನ್ನು ಮಾತ್ರ ಮೊಬೈಲ್ ಮೂಲಕ ಮಾಡಬಹುದು. ಟ್ಯಾಬ್ಲೆಟ್‌ನಲ್ಲಿ ಹೆಚ್ಚು ಸುಲಭವಾಗಿ ಕಾರ್ಯ ನಿರ್ವಹಿಸಬಹುದು.

ಟೆಕ್ ಟಾನಿಕ್: ಬ್ರೌಸರ್ ವೇಗವಾಗಿಸಲು
ಯಾವುದಾದರೊಂದು ಬ್ರೌಸರ್‌ನಲ್ಲಿ ನೀವು ಹಲವಾರು ಟ್ಯಾಬ್‌ಗಳನ್ನು ತೆರೆದು ಇಂಟರ್ನೆಟ್‌ನ ವಿಭಿನ್ನ ವೆಬ್‌ಸೈಟುಗಳ ಪುಟಗಳನ್ನು ನೋಡುತ್ತೀರಿ. ವೆಬ್ ಪುಟಗಳೆಲ್ಲವೂ ಸ್ಥಳೀಯ ಡಿಸ್ಕ್‌ಗೆ ತಾತ್ಕಾಲಿಕ ಫೈಲ್‌ಗಳ ರೂಪದಲ್ಲಿ (cache – ಟೆಂಪರರಿ ಇಂಟರ್ನೆಟ್ ಫೈಲುಗಳು) ಡೌನ್‌ಲೋಡ್ ಆಗಿರುತ್ತವೆ. ಈ ಫೈಲುಗಳ ಸಂಖ್ಯೆ ಹೆಚ್ಚಾದಾಗ ಬ್ರೌಸಿಂಗ್ ಸ್ಲೋ ಆಗುತ್ತದೆ. ಇದನ್ನು ನಿವಾರಿಸಲು ಬೇರೆಲ್ಲಾ ಬ್ರೌಸರುಗಳನ್ನು ಮುಚ್ಚಿ, ಖಾಲಿ ಬ್ರೌಸರೊಂದನ್ನು ತೆರೆದು ಶಿಫ್ಟ್, ಕಂಟ್ರೋಲ್ ಮತ್ತು ಡಿಲೀಟ್ ಬಟನ್ ಒತ್ತಿ. ಮೊದಲ ಡ್ರಾಪ್‌ಡೌನ್ ಮೆನುವಿನಲ್ಲಿ the beginning of time ಅಂತ ಇರಲಿ. ಅದರ ಕೆಳಗೆ ಹಲವಾರು ಆಯ್ಕೆಗಳು ಕಂಡುಬರುತ್ತವೆ. ಬೇಕಾಗಿರುವುದಕ್ಕೆ ಟಿಕ್ ಮಾರ್ಕ್ ಹಾಕಿ, Clear Browsing Data ಕ್ಲಿಕ್ ಮಾಡಿಬಿಡಿ.

ವಿಜಯ ಕರ್ನಾಟಕದಲ್ಲಿ ಮಾಹಿತಿ@ತಂತ್ರಜ್ಞಾನ ಅಂಕಣ: ಅವಿನಾಶ್ ಬಿ.

ಆಕರ್ಷಣೆ ಕಳೆದುಕೊಳ್ಳುತ್ತಿದೆ ಫೇಸ್‌ಬುಕ್…

ನಗರದ ಆ ಮೂಲೆಯಲ್ಲಿ….
Facebookರಸ್ತೆ ಬದಿ ನಡೆದಾಡುತ್ತಿರುವಾಗ, ಬಸ್ ನಿಲ್ದಾಣದಲ್ಲಿ ಕಾಯುತ್ತಿರುವಾಗ, ಟ್ರಾಫಿಕ್ ಸಿಗ್ನಲ್‌ನಲ್ಲಿ ಬೈಕು ನಿಲ್ಲಿಸಲೇಬೇಕಾದಾಗ… ಕುದಿ ಹೃದಯದ ಹದಿ ಹರೆಯದ ಮಂದಿಯ ಎರಡೂ ಕಿವಿಗಳಲ್ಲಿ ಉದ್ದನೆಯ ದಾರ ನೇತಾಡುತ್ತಿರುತ್ತದೆ; ಜತೆಗೇ ತಲೆಯೂ ಸಣ್ಣಗೆ ಆಡುತ್ತಿದ್ದರೆ, ಕೈಯಲ್ಲಿರುವ ಮೊಬೈಲ್ ಸ್ಕ್ರೀನ್‌ನ ಮೇಲೆ ಎರಡೂ ಕರಗಳ ಹೆಬ್ಬೆರಳುಗಳು ಅತ್ತಿಂದಿತ್ತ ಸರಿದಾಡುತ್ತಿರುತ್ತವೆ; ಮಂದಹಾಸ, ನಗು, ಕೋಪ, ಬೇಸರ, ತುಂಟತನ… ಇತ್ಯಾದಿ ಕ್ಷಣಕ್ಷಣಕ್ಕೂ ಗೋಚರಿಸುವ ನವರಸ ಮುಖಭಾವಗಳು… ಅವರ ಕೈಯಲ್ಲಿರುವುದು ಹಳೆಯ ಫೀಚರ್ ಫೋನ್ ಆಗಿದ್ದರಂತೂ ಅದರ ಕೀಪ್ಯಾಡ್‌ನ ಸಂಖ್ಯೆ/ಅಕ್ಷರಗಳೇ ಗೋಚರಿಸದಷ್ಟು ಮಾಸಿ ಹೋಗಿರುತ್ತವೆ. “ಅಯ್ಯೋ, ಏನಾಯಿತೇ ನಿನ್ನ ಉಗುರಿಗೆ? ಸವೆದೇ ಹೋಗಿವೆಯಲ್ಲ” ಎಂಬ ಮಾತನ್ನು ನಾವು ಆಗೀಗ್ಗೆ ತಮಾಷೆಗಾಗಿಯಾದರೂ ಕೇಳಿರುತ್ತೇವೆ.

ಹೀಗೆ ಬನ್ನಿ….

ಇದು ಭ್ರಮಾಧೀನ ಲೋಕವಲ್ಲ, ಕ್ಷಿಪ್ರ ಸಂದೇಶ ಯುಗದ ವಾಸ್ತವಿಕ ಜಗತ್ತು.

ಇತ್ತ ಮತ್ತೊಂದು ಕಡೆಯಲ್ಲಿ….
ದೊಡ್ಡ ಕಂಪ್ಯೂಟರ್ ಪರದೆಯಲ್ಲಿ, ಗುಡ್ ಮಾರ್ನಿಂಗ್ ಎಂದೋ, ಗುಡ್ ನೈಟ್ ಎಂದೋ… ಮಾಡಿದ ಪೋಸ್ಟ್‌ಗಳಿಗೆ ಒಂದೊಂದು ‘ಲೈಕ್’ ಬಿದ್ದಾಗಲೂ ಮನಸ್ಸಿಗೊಂದಿಷ್ಟು ಪುಳಕ, ಒಂದೊಂದು ಕಾಮೆಂಟಿಗೂ ಲೈಕ್ ಮಾಡಿ ಅವರಿಗೆ ಕೃತಜ್ಞತೆ ಸಲ್ಲಿಸುವ ಆವುಟ; ಇನ್ನೊಂದೆಡೆ, ಆಪ್ತ ಬಂಧುವೋ, ಸ್ನೇಹಿತರೋ “ಈಗಷ್ಟೇ ಹೃದಯಾಘಾತದಿಂದ ನಿಧನರಾದರು” ಅಂತ ಬೇಸರದಿಂದಲೇ ಹಾಕಿದ ಪೋಸ್ಟಿಗೂ ಒಂದಷ್ಟು ‘ಲೈಕ್’ ಮುದ್ರೆ (ಇದರ ಹಿಂದೆ ಗಮನ ಸೆಳೆಯುವ ಮತ್ತು ಸಾಂತ್ವನ ನೀಡುವ ಮನಸ್ಸೂ ಇದ್ದಿರಬಹುದು) – ಜತೆಗೆ ನಮ್ಮ ಟೈಮ್‌ಲೈನ್‌ನಲ್ಲಿ ಬೇಕು-ಬೇಡವಾದ ಪೋಸ್ಟುಗಳೆಲ್ಲವೂ ಭರಪೂರ ಪ್ರವಹಿಸುವ ಅವಾಸ್ತವಿಕ ಮತ್ತು ಒಂದು ರೀತಿಯಲ್ಲಿ ಭ್ರಾಮಕ ಸ್ವರ್ಗ…

ಇವೆರಡರಲ್ಲಿ, ದಿನದಿಂದ ದಿನಕ್ಕೆ ಗೋಜಲಾಗತೊಡಗುತ್ತಿರುವ ಸಾಮಾಜಿಕ ಜಾಲತಾಣಗಳನ್ನು ಹೊಸ ಪೀಳಿಗೆಯ ಮಂದಿ ಡಿಸ್‌ಲೈಕ್ ಮಾಡುತ್ತಿದ್ದಾರೆ! ವಾಸ್ತವ ಮಿತ್ರರೊಂದಿಗೆ ಮನದ ತುಮುಲಗಳನ್ನು ಸುಲಭವಾಗಿ ಹಂಚಿಕೊಳ್ಳಬಲ್ಲ, ಪ್ರಮುಖ ಸಂದೇಶಗಳನ್ನು ಕ್ಷಿಪ್ರವಾಗಿ ರವಾನಿಸಬಲ್ಲ, ಸರಳ ಇಮೋಟಿಕಾನ್‌ಗಳ ಮೂಲಕ ಭಾವನೆಗಳನ್ನು ವ್ಯಕ್ತಪಡಿಸಬಲ್ಲ, ತ್ವರಿತವಾಗಿ ಫೋಟೋ, ವೀಡಿಯೋ, ಆಡಿಯೋ ಹಂಚಿಕೊಳ್ಳಲು ಸಾಧ್ಯವಾಗುವ, ಸ್ಪ್ಯಾಮ್ ಹಾವಳಿ ಇಲ್ಲದ, ಗೊತ್ತಿಲ್ಲದ ಅಪರಿಚಿತರ ನೆರಳೂ ಸೋಕದ ವಾಟ್ಸಾಪ್, ಹೈಕ್, ಲೈನ್, ವಿಚಾಟ್ ಮುಂತಾದ ಸಂದೇಶವಾಹಕ ಸೇವೆಗಳಿಗೆ ಥಂಬ್ಸ್ ಅಪ್ ಹೇಳುತ್ತಿದ್ದಾರೆ! ಇದು ಈಗಿನ ಟ್ರೆಂಡ್…..

ನೀರು ನಿಂತಲ್ಲಿ ರೋಗಬಾಧೆ ಇರುತ್ತದೆ. ತಂತ್ರಜ್ಞಾನ ನಿಂತ ನೀರಾಗಿದ್ದರಂತೂ ಜಗತ್ತು ಈ ಪರಿ ಬೆಳೆಯುತ್ತಿರಲಿಲ್ಲ. ಬದಲಾವಣೆ ಸಹಜ ಮತ್ತು ಅನಿವಾರ್ಯ. ಪ್ರಕೃತಿ ಸಹಜವಾದ ಈ ಮೂಲಮಂತ್ರಗಳ ತಳಹದಿಯೊಂದಿಗೆ ಸಾಮಾಜಿಕ ಜಾಲತಾಣಗಳ ಪೋಷಕವರ್ಗವೆಂದು ಪ್ರತಿಪಾದಿತವಾಗಿದ್ದ ಯುವ ಸಮೂಹ, ಈಗ ನಿಧಾನವಾಗಿ ಮೆಸೇಜಿಂಗ್ ಕಿರು ತಂತ್ರಾಂಶಗಳತ್ತ ಹೊರಳುತ್ತಿದೆ ಮತ್ತು ಭವಿಷ್ಯದ ಆನ್‌ಲೈನ್ ಪ್ರಜೆಗಳು ಇವರೇ ಆಗಿರುವುದರಿಂದ, ವೆಬ್ ಆಧಾರಿತ ಸಾಮಾಜಿಕ ಮಾಧ್ಯಮಗಳು ಹಿಂದೆ ಸರಿಯುತ್ತಿವೆ.

ಕಿರಿದೇ ಹಿರಿದಾಗುತ್ತಿದೆ
ಕಳೆದರ್ಧ ದಶಕದಲ್ಲಿ ಮಾಹಿತಿ ತಂತ್ರಜ್ಞಾನ ರಂಗದಲ್ಲಿ ನಡೆದ ಕ್ಷಿಪ್ರಕ್ರಾಂತಿಯು ಜಗತ್ತನ್ನು ಕಂಪ್ಯೂಟರಿನ ದೊಡ್ಡ ಪರದೆಯಿಂದ ಸ್ಮಾರ್ಟ್‌ಫೋನ್‌ನ ಅಂಗೈಯಗಲಕ್ಕೆ ಇಳಿಸಿದೆ. ಫೇಸ್‌ಬುಕ್, ಟ್ವಿಟರ್ ಜಾಲತಾಣಗಳೀಗ ಆ್ಯಪ್‌ಗಳೆಂದು ಮುದ್ದಾಗಿ ಕರೆಯಬಲ್ಲ ಕಿರು ತಂತ್ರಾಂಶಗಳ ರೂಪದಲ್ಲಿ ಸ್ಮಾರ್ಟ್‌ಫೋನ್‌ನೊಳಗೆ ಬಂದು ಕುಳಿತಿವೆ. ಇದುವರೆಗೆ ಯುವ ಮನಸ್ಸುಗಳ ಆಟದಂಗಳವಾಗಿದ್ದ ಫೇಸ್‌ಬುಕ್, ಡೆಲೀಷಿಯಸ್, ಕೋರಾ, ಫ್ಲಿಕರ್, ಬ್ಲಾಗ್, ಗೂಗಲ್ ಪ್ಲಸ್, ಹೈಫೈವ್, ಐಬಿಬೋ, ಇನ್‌ಸ್ಟಾಗ್ರಾಂ, ಟ್ವಿಟರ್, ಲಿಂಕ್ಡ್ಇನ್, ನಿಂಗ್, ಪಿನ್‌ಟರೆಸ್ಟ್, ಸ್ಪೇಸಸ್, ಟಂಬ್ಲರ್, ವಾಕ್ಸ್, ಯಾಮರ್, ಲೈವ್‌ಜರ್ನಲ್ ಮುಂತಾದ ತಾಣಗಳು, ಜನಮಾನಸದಿಂದ ಮರೆಯಾಗಿ ಹೋಗಿರುವ ಓರ್ಕುಟ್ ಸಾಲಿಗೆ ಸೇರುತ್ತಿವೆಯೇ?

ಕಳೆದ ದಶಕದ ಉತ್ತರಾರ್ಧವನ್ನೇ ಗಮನಿಸಿ ನೋಡಿ. ಬ್ಲಾಗ್‌ಗಳೆಂಬ ವೆಬ್ ಲಾಗ್‌ಗಳ ಮೂಲಕವಾಗಿ ಸ್ನೇಹ ಸೇತುವನ್ನು ರಚಿಸುತ್ತಿದ್ದವರದೆಷ್ಟು ಮಂದಿ! ಬ್ಲಾಗ್ ಬರೆಯುವುದು, ನನಗೂ ಒಂದು ವೆಬ್ ಸೈಟ್ ಇದೆ ಎಂದು ಹೆಮ್ಮೆ ಪಟ್ಟುಕೊಳ್ಳುತ್ತಿದ್ದ ದಿನಗಳವು. ಬೇರೊಬ್ಬರ ಬ್ಲಾಗಿಗೆ ಇಣುಕಿ, ಇಷ್ಟವಾದರೆ ಒಂದು ಕಾಮೆಂಟ್ ಚಿಟುಕುವುದು, ಕುಟುಕುವುದು, ವಿರೋಧಿಸುವುದು, ಚರ್ಚಿಸುವುದು, ಉಭಯ ಕುಶಲೋಪರಿ… ಹೀಗೆ ಬ್ಲಾಗುಗಳಲ್ಲೇ ಸಂಬಂಧದ ಬೆಸುಗೆಯಾಗುತ್ತಿತ್ತು. ಆ ಕಾಲದಲ್ಲಿ, ಸರಿಸುಮಾರು 11 ವರ್ಷಗಳ ಹಿಂದೆ, 2004ರ ಫೆಬ್ರವರಿ ತಿಂಗಳಲ್ಲಿ, ಮಾರ್ಕ್ ಜುಕರ್‌ಬರ್ಗ್ ತನ್ನ ಹಾರ್ವರ್ಡ್ ವಿಶ್ವವಿದ್ಯಾನಿಲಯದ ಕಾಲೇಜು ಸಹಪಾಠಿಗಳಾದ ಆ್ಯಂಡ್ರ್ಯೂ ಮೆಕಲಮ್, ಎಡ್ವರ್ಡೋ ಸವೆರಿನ್, ಕ್ರಿಸ್ ಹ್ಯೂಸ್ ಹಾಗೂ ಡಸ್ಟಿನ್ ಮಾಸ್ಕೊವಿಜ್ ಜತೆಗೆ ಸೇರಿಕೊಂಡು, ಕಾಲೇಜಿನವರಿಗಾಗಿ ಹಚ್ಚಿದ ಕಿಡಿಯೊಂದು ಈ ಪರಿ ಜಾಗತಿಕವಾಗಿ 135 ಕೋಟಿ ಮಾಸಿಕ ಸಕ್ರಿಯ ಬಳಕೆದಾರರೊಂದಿಗೆ ಅಗಾಧವಾಗಿ ಬೆಳೆಯುತ್ತದೆಂದು ಯಾರೂ ಪರಿಭಾವಿಸಿರಲಿಲ್ಲ. ಇಂದು ಬಲುದೊಡ್ಡ ಕಂಪನಿಯಾಗಿ ಬೆಳೆದ ಫೇಸ್‌ಬುಕ್‌ನಲ್ಲಿ ಕೆಲಸ ಮಾಡುತ್ತಿರುವವರ ಸಂಖ್ಯೆ ಎಂಟೂವರೆ ಸಾವಿರ; ಅದರ ಆಸ್ತಿಯ ಮೌಲ್ಯ 1790 ಕೋಟಿ ಡಾಲರ್; ಭಾರತದಲ್ಲಿ ಇರುವ ಮಾಸಿಕ ಸಕ್ರಿಯ ಬಳಕೆದಾರರ ಸಂಖ್ಯೆ 11.20 ಕೋಟಿ; ಇದರಲ್ಲಿ ಪ್ರತಿ ದಿನ ಬಳಸುತ್ತಿರುವ ಭಾರತೀಯರ ಸರಾಸರಿ ಸಂಖ್ಯೆ ಸುಮಾರು ಅರ್ಧದಷ್ಟು, ಅಂದರೆ 5 ಕೋಟಿಯಷ್ಟು ಮಾತ್ರ.

ಸ್ವಲ್ಪವೇ ಹಿಂದೆ ಕಣ್ಣು ಹಾಯಿಸಿದರೆ, ಹುಟ್ಟುಹಬ್ಬದ ದಿನದಂದು ರಾಶಿ ರಾಶಿ ಶುಭಾಶಯಗಳ ಕಾಮೆಂಟ್ ನೋಡಿ ಬೀಗಿದವರು ನಾವು ನೀವು. ಈ ವರ್ಷ ಸಾಮಾನ್ಯ ಪ್ರೊಫೈಲ್ ಒಂದಕ್ಕೆ ಬಿದ್ದಿರುವ ಶುಭಾಶಯಗಳ ಪ್ರಮಾಣ ನೋಡಿದರೆ, ಜನರಿಗೆ ಸಮಯವಿಲ್ಲವೆಂಬೋದು ಗೊತ್ತಾಗುತ್ತದೆ. ಫೇಸ್‌ಬುಕ್ ತಾಣವನ್ನೇ ಅವಲೋಕಿಸಿದರೆ, ಕೆಲವೊಂದಿಷ್ಟು ಅಪವಾದಗಳ ಹೊರತಾಗಿ, ನಮ್ಮ ಸ್ನೇಹಿತ ವರ್ಗದಲ್ಲಿಯೇ ಅಪ್‌ಡೇಟ್‌ಗಳು ಕಡಿಮೆಯಾಗತೊಡಗಿವೆ ಎಂಬುದು ಗಮನಕ್ಕೆ ಬರುತ್ತದೆ. ಅದರಲ್ಲಿನ ಪ್ರೈವೆಸಿ ವಿಚಾರಗಳು, ಅನವಶ್ಯಕ ಕಾಲೆಳೆದಾಟ, ಗುಡ್-ಮಾರ್ನಿಂಗ್-ಗುಡ್ ನೈಟ್‌ಗಷ್ಟೇ ಸೀಮಿತವಾದ ಪೋಸ್ಟುಗಳನ್ನು ನೋಡಿ ಬೇಸತ್ತವರು, ತಮಗೆ ಆತ್ಮೀಯರೆನ್ನಿಸಿಕೊಂಡವರನ್ನು ಕರೆದುಕೊಂಡು ವಾಟ್ಸಾಪ್, ಲೈನ್, ಹೈಕ್, ಟೆಲಿಗ್ರಾಂ, ವೈಬರ್, ವಿಚಾಟ್, ಗೂಗಲ್ ಹ್ಯಾಂಗೌಟ್ಸ್, ಸ್ಕೈಪ್, ಎಫ್‌ಬಿ ಮೆಸೆಂಜರ್ ಮುಂತಾದ ಸಂದೇಶವಾಹಕ ಆ್ಯಪ್‌ಗಳತ್ತ ಮುಖ ಮಾಡುತ್ತಿದ್ದಾರೆ.

ಈ ಅಂಶವು ನಮ್ಮ ಗಮನಕ್ಕೆ ಮಾತ್ರವೇ ಬಂದಿರುವುದಲ್ಲ. ಸ್ವತಃ ಫೇಸ್‌ಬುಕ್ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್ ಸಂಸ್ಥೆಯ ಕಳೆದ ವರ್ಷದ ಮಹಾಸಭೆಯಲ್ಲಿ. ವಿಶೇಷವಾಗಿ ಹದಿಹರೆಯದ ಬಳಕೆದಾರರ ಸಂಖ್ಯೆ ಕುಸಿಯುತ್ತಿರುವುದರ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು. ಅಮೆರಿಕ ಮಾರುಕಟ್ಟೆಯಲ್ಲಿ ಫೇಸ್‌ಬುಕ್ ಶೇರು ಬೆಲೆಗಳು ಕುಸಿತವಾಗಿ ‘ಇಲ್ಲಿ ಎಲ್ಲವೂ ಸರಿ ಇಲ್ಲ’ ಎಂಬ ಸಂದೇಶವೂ ಬಂದಿದೆ. ಫೇಸ್‌ಬುಕ್ ಉದ್ಯೋಗಿಗಳ ಕುಸಿಯುತ್ತಿರುವ ಮನಸ್ಥೈರ್ಯ ವರ್ಧಿಸಲೆಂದೇ ಇತ್ತೀಚೆಗೊಂದು ಸಭೆ ನಡೆದಿತ್ತು ಎಂಬುದನ್ನು ವಾಲ್ ಸ್ಟ್ರೀಟ್ ಜರ್ನಲ್ ಈಗಾಗಲೇ ಜಗಜ್ಜಾಹೀರು ಮಾಡಿದೆ.

ಟೀನೇಜರ್‌ಗಳು ಹಿಂದಿನಷ್ಟು ಉಮೇದಿನಿಂದ ಸಾಮಾಜಿಕ ಜಾಲದಲ್ಲಿ ಸಕ್ರಿಯರಾಗಿಲ್ಲ ಎಂಬುದಕ್ಕೂ, ಫೇಸ್‌ಬುಕ್ ವ್ಯಕ್ತಪಡಿಸಿರುವ ಕಳವಳಕ್ಕೂ, ಈಗಿನ ವಿದ್ಯಮಾನಕ್ಕೂ ಸಾಕಷ್ಟು ತಾಳೆಯಾಗುತ್ತದೆ.

ಅಮೆರಿಕದ ಫ್ರ್ಯಾಂಕ್ ಎನ್ ಮ್ಯಾಗಿಡ್ ಅಸೋಸಿಯೇಟ್ಸ್ ನಡೆಸಿದ ಸಮೀಕ್ಷೆಯಲ್ಲಿ ಕಂಡುಬಂದಿರುವುದೂ ಇದೇ. ಕಳೆದ ವರ್ಷ ಅಮೆರಿಕದ ಶೇ.94ರಷ್ಟು ಟೀನೇಜರ್‌ಗಳು ಫೇಸ್‌ಬುಕ್ ಬಳಸುತ್ತಿದ್ದರೆ, ಈ ವರ್ಷ ಇದೇ ಹದಿಹರೆಯದವರ ಪ್ರಮಾಣ ಶೇ.88 ಮಾತ್ರ. ಅಂತೆಯೇ ಎಲ್ಲ ವಯಸ್ಸಿನವರನ್ನೂ ಸೇರಿಸಿದರೆ, ಎರಡು ವರ್ಷಗಳ ಹಿಂದೆ ಶೇ.93 ಮಂದಿ ಫೇಸ್‌ಬುಕ್‌ಗೆ ಲಾಗಿನ್ ಆಗುತ್ತಿದ್ದರೆ, ಈ ವರ್ಷ ಇದರ ಪ್ರಮಾಣ ಶೇ.90ಕ್ಕೆ ಇಳಿದಿದೆ.

ಪ್ರಸ್ತುತ ಫೇಸ್‌ಬುಕ್‌ನಲ್ಲಿ ಸಕ್ರಿಯರಾಗಿರುವವರಲ್ಲಿ ಅಪ್ಪ, ಅಮ್ಮ, ಆಂಟಿ, ಅಂಕಲ್, ಅಜ್ಜಿ, ತಾತ ಎಲ್ಲರೂ ಸೇರಿದ್ದಾರೆ. ನಾವೇನು ಮಾಡುತ್ತಿದ್ದೇವೆಂಬುದು ನಮ್ಮ ಶಿಕ್ಷಕರಿಗೋ, ನಮ್ಮ ಬಾಸ್‌ಗೋ… ಹೀಗೆ ಇಡೀ ಜಗತ್ತಿಗೇ ತಿಳಿಯುತ್ತದೆ ಎಂಬ ಆತಂಕವೂ ಯುವಜನರನ್ನು ಈ ಜಾಲತಾಣಗಳಿಂದ ವಿಮುಖರನ್ನಾಗಿಸಿರಬಹುದು.

ಹದಿಹರೆಯದ ಪ್ರೇಮ ಸಂಭಾಷಣೆಯಿಂದಾಗಿಯೇ ಸಾಕಷ್ಟು ದುಡ್ಡು ಮಾಡುತ್ತಿದ್ದ ಮೊಬೈಲ್ ಸೇವಾ ಕಂಪನಿಗಳಿಗೆ ಬಲುದೊಡ್ಡ ಹೊಡೆತ ಬಿದ್ದಿದ್ದು ಐದು ವರ್ಷಗಳ ಹಿಂದೆ ಚಾಲ್ತಿಗೆ ಬಂದಿದ್ದ ಈ ಮೊಬೈಲ್ ಟೆಕ್ಸ್ಟ್ ಮೆಸೇಜಿಂಗ್ ಟೂಲ್‌ಗಳಿಂದ. ಇನ್‌ಸ್ಟಾಲ್ ಮಾಡಿಕೊಂಡು ಇಂಟರ್ನೆಟ್ ಪ್ಯಾಕ್ ಹಾಕಿಸಿಕೊಂಡುಬಿಟ್ಟರೆ, ಅನಿಯಮಿತವಾಗಿ ಸಂದೇಶಗಳನ್ನು, ಫೋಟೋ-ವೀಡಿಯೋಗಳನ್ನು ಹಂಚಿಕೊಳ್ಳಬಹುದಷ್ಟೇ ಅಲ್ಲದೆ, ಬೇರೆ ಇಂಟರ್ನೆಟ್ ತಾಣಗಳಲ್ಲಿಯೂ ಆನ್‌ಲೈನ್ ವಿಹಾರ ಮಾಡಬಹುದಾಗಿದೆ. ಎಸ್ಸೆಮ್ಮೆಸ್ ಸಂದೇಶಗಳು ಕೇವಲ ಅಧಿಕೃತವಾದ ಸಂವಹನಕ್ಕಷ್ಟೇ ಸೀಮಿತವಾಗುತ್ತಿರುವುದು ಕಹಿ ಸತ್ಯ.

ಫೇಸ್‌ಬುಕ್‌ನಿಂದ ವಿಮುಖವಾದ ಮನಸ್ಸುಗಳು ಈ ಚಾಟಿಂಗ್ ಆ್ಯಪ್‌ಗಳಲ್ಲಿ ಸಾಕಷ್ಟು ಗ್ರೂಪ್‌ಗಳನ್ನು ಕಟ್ಟಿಕೊಂಡವು. ಕ್ಲಾಸ್‌ಮೇಟ್ಸ್ ಅಂತ ಒಂದು ಗ್ರೂಪ್, ಟೀನ್ ಅಡ್ಡಾ ಅಂತ ತುಂಟತನ ಮತ್ತು ಪೋಲಿ ಸಂದೇಶಗಳನ್ನು ಹಂಚಿಕೊಳ್ಳುವುದಕ್ಕಾಗಿಯೇ ಇರುವ ಗ್ರೂಪ್, ಕ್ಲೋಸ್ ಫ್ರೆಂಡ್ಸ್ ಅಂತ ಮತ್ತೊಂದು ಗ್ರೂಪ್, ಕಲೆ-ಸಂಸ್ಕೃತಿ ಮುಂತಾದವುಗಳಲ್ಲಿ ಆಸಕ್ತಿಯಿದ್ದರೆ ಅದಕ್ಕಾಗಿಯೇ ಮತ್ತೊಂದು ಗ್ರೂಪ್…. ಹೀಗೆ, ಸೀಮಿತ ವಿಷಯಗಳಿಗೆ ಸಂಬಂಧಿಸಿದ ಪ್ರತ್ಯೇಕ ಬಳಗ ಕಟ್ಟಿಕೊಂಡು ಪ್ರತಿ ದಿನ ಪ್ರತಿ ಕ್ಷಣ ಸಂವಹನ ನಡೆಸುವುದು ಸಾಧ್ಯ. ಫೇಸ್‌ಬುಕ್‌ನಲ್ಲಿರುವಂತೆ ನಾವು ಲೈಕ್ ಮಾಡಿದವರೆಲ್ಲರ ಚಟುವಟಿಕೆಗಳು ನಮ್ಮ ನ್ಯೂಸ್‌ಫೀಡ್‌ನಲ್ಲಿ ಬರುವುದು, ಪದೇ ಪದೇ ಅನವಶ್ಯ ನೋಟಿಫಿಕೇಶನ್ ಬರುವುದು… ಈ ತ್ರಾಸ ಇರುವುದಿಲ್ಲ. ಪ್ರೈವೆಸಿಯೂ ಇದೆ. ಇಂಟರ್ನೆಟ್ ದರ ಮತ್ತು ಕೈಗೆಟಕುವಷ್ಟು ಅಗ್ಗವಾಗಿಬಿಟ್ಟಿರುವ ಹ್ಯಾಂಡ್‌ಸೆಟ್‌ಗಳು ಕೂಡ ಈ ಟೆಕ್ಟ್ಸ್ ಮೆಸೇಜಿಂಗ್ ಆ್ಯಪ್‌ಗಳ ಜನಪ್ರಿಯತೆಗೆ ಪೂರಕ ವಾತಾವರಣ ಕಲ್ಪಿಸಿದ್ದು ಸುಳ್ಳಲ್ಲ.

ಫೇಸ್‌ಬುಕ್‌ನಲ್ಲಿ ಒಂದರ್ಧ ಗಂಟೆ ಜಾಲಾಡಿಬಿಟ್ಟರೆ, ಅದು ನಮ್ಮ ಬ್ಯಾಟರಿಯನ್ನಷ್ಟೇ ಕ್ಷಿಪ್ರಗತಿಯಲ್ಲಿ ಹೀರಿಕೊಳ್ಳುವುದಲ್ಲ, ಬದಲಾಗಿ, ನ್ಯೂಸ್‌ಫೀಡ್ ಸ್ಕ್ರಾಲ್ ಮಾಡುತ್ತಿದ್ದಂತೆ ಲೋಡ್ ಆಗುತ್ತಲೇ ಇರುವ ಫೋಟೋಗಳಿಂದಾಗಿ ಡೇಟಾ ಪ್ಯಾಕ್ ಕೂಡ (ಅನಿಯಮಿತ ಇಲ್ಲದಿದ್ದರೆ) ಬೇಗನೇ ಖಾಲಿಯಾಗಿಬಿಡುತ್ತದೆ. ಆದರೆ, ಮೆಸೇಜಿಂಗ್ ಸೇವೆಗಳಿಗೆ ಹಾಗಲ್ಲ, ಬೇಕಾಗಿರುವುದನ್ನು ಮಾತ್ರವೇ ಡೌನ್‌ಲೋಡ್ ಮಾಡಿಕೊಳ್ಳುವ ಆಯ್ಕೆ ಇದೆ. 2ಜಿ ಸಂಪರ್ಕದಲ್ಲೂ ಸಿಗ್ನಲ್ ದುರ್ಬಲ ಎಂಬ ಅಡ್ಡಿಯಿಲ್ಲದೆ ಸುಲಲಿತವಾಗಿ, ಕ್ಷಿಪ್ರವಾಗಿ ಇವು ಕಾರ್ಯನಿರ್ವಹಿಸುತ್ತವೆ; ಜಾಹೀರಾತುಗಳ ಕಿರಿಕಿರಿಯೂ ಇರುವುದಿಲ್ಲ.

ಮೆಸೇಜಿಂಗ್ ಆ್ಯಪ್‌ಗಳು ವಾಸ್ತವ ಬದುಕಿಗೆ ಹತ್ತಿರವಾಗಿದ್ದರೆ, ಫೇಸ್‌ಬುಕ್ ಅವಾಸ್ತವಿಕ ಜಗತ್ತಿನ ಪ್ರತಿನಿಧಿಯಷ್ಟೆ. ನಮಗೆ ಏನೇನೂ ಗೊತ್ತಿಲ್ಲದವರೊಂದಿಗೆ ಹರಟುವುದಕ್ಕಿಂತ ಗೊತ್ತಿರುವವರ ಜತೆಗೆ ನೇರ ಸಂಭಾಷಣೆ ನಡೆಸುವುದರಲ್ಲಿ ಅರ್ಥವಿದೆ ಮತ್ತು ಸುರಕ್ಷಿತ ಎಂಬುದು ಯುವಜನರಿಗೂ ಅನ್ನಿಸತೊಡಗಿದೆ.

ಸ್ವತಃ ಫೇಸ್‌ಬುಕ್ಕೇ ಕೆಲವು ತಿಂಗಳ ಹಿಂದೆ ವಾಟ್ಸಾಪ್ ಅನ್ನು ಖರೀದಿಸಿಬಿಟ್ಟಿತು ಅಂದರೆ ಮೆಸೇಜಿಂಗ್ ಆ್ಯಪ್‌ಗಳ ಜನಪ್ರಿಯತೆಗೆ ಇದಕ್ಕಿಂತ ಬೇರೆ ಸಾಕ್ಷಿ ಬೇಕೇ? ಇದೇ ಕಾರಣಕ್ಕೆ, ಮೈಕ್ರೋಸಾಫ್ಟ್ (ಸ್ಕೈಪ್), ಗೂಗಲ್ (ಹ್ಯಾಂಗೌಟ್), ಬ್ಲ್ಯಾಕ್‌ಬೆರಿ (ಬಿಬಿ ಮೆಸೆಂಜರ್), ಆ್ಯಪಲ್ (ಐ-ಮೆಸೇಜ್) ಜತೆಗೆ, ಫೇಸ್‌ಬುಕ್ ಕೂಡ ಪ್ರತ್ಯೇಕವಾದ ಮೆಸೆಂಜರ್ ಆ್ಯಪ್‌ಗಳನ್ನು ರೂಪಿಸಿ, ಅದರ ಬೆಳವಣಿಗೆಗೆ ಹೆಚ್ಚು ಒತ್ತು ನೀಡುತ್ತಿವೆ.

ಇಷ್ಟಾಗಿಯೂ ಬದಲಾವಣೆಯೇ ಜಗದ ನಿಯಮ. ಈ ಮೆಸೇಜಿಂಗ್ ಆ್ಯಪ್‌ಗಳ ಜಾಗದಲ್ಲಿ ಹೊಸತನದ ನಿರೀಕ್ಷೆಯಲ್ಲಿ, ನವೀನ ತಂತ್ರಜ್ಞಾನವನ್ನು ಅಪ್ಪಿ-ಒಪ್ಪಿಕೊಳ್ಳಲು ಕಾತರಿಸುತ್ತಿದೆ ಯುವ ಜಗತ್ತು.

ಆ್ಯಪ್ ಅನುಕೂಲಗಳು
* ಗೊತ್ತಿರುವವರನ್ನು ಮಾತ್ರವೇ ಸ್ನೇಹಿತರಾಗಿಸಿಕೊಳ್ಳಬಹುದು. ಮೊಬೈಲ್ ಸಂಖ್ಯೆ ಇರಲೇಬೇಕಲ್ಲ!
* ಕ್ಷಿಪ್ರ ಸಂದೇಶ ರವಾನೆ, ಸಿಗ್ನಲ್ ವೀಕ್ ಎಂಬ ಕಿರಿಕಿರಿ ಇರುವುದಿಲ್ಲ
* ಇವು ಕೇವಲ ಟೆಕ್ಸ್ಟ್ ಕಳುಹಿಸುವ ಆ್ಯಪ್‌ಗಳಾಗಿ ಉಳಿದಿಲ್ಲ; ವೀಡಿಯೋ, ಫೋಟೋ, ಧ್ವನಿ ಸಂದೇಶವೂ ಕ್ಷಿಪ್ರ ರವಾನೆ
* ಸ್ಪ್ಯಾಮ್ ಇಲ್ಲ, ಪರಿಚಯವಿಲ್ಲದವರು ಹಾಯ್ ಹಲೋ!, ಊಟವಾಯಿತಾ? ತಿಂಡಿಯಾಯಿತಾ? ಕೇಳುವುದಿಲ್ಲ
* ಗೊತ್ತಿದ್ದೂ, ಗೊತ್ತಿಲ್ಲದೆಯೂ, ಕ್ಯಾಂಡಿ ಕ್ರಶ್ ಆಟಕ್ಕೋ, ಇನ್ಯಾವುದೋ ಆಟಕ್ಕೋ ಕರೆಯುವ ಫಜೀತಿ ಇಲ್ಲ
* ನಮ್ಮ ಅಕೌಂಟ್ ಹ್ಯಾಕ್ ಮಾಡಿ, ನಮ್ಮ ಪರವಾಗಿ ಅಸಭ್ಯ, ಅಶ್ಲೀಲ ಸಂದೇಶ ರವಾನಿಸುವ ಆತಂಕವಿಲ್ಲ.

[ವಿಜಯ ನೆಕ್ಸ್ಟ್ ವಾರ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ]
http://vijayanextepaper.com/Details.aspx?id=4443&boxid=61211171
http://vijayanextepaper.com/Details.aspx?id=4445&boxid=61253125

2014: ಸ್ಮಾರ್ಟ್‌ಫೋನ್‌ಗಳದ್ದೇ ಕಾರುಬಾರು

ಹಿನ್ನೋಟ 2014 – ಅವಿನಾಶ್ ಬಿ., ವಿಜಯ ಕರ್ನಾಟಕ
————-
ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಪಾಲಿಗೆ ಹೆಚ್ಚು ಧೂಳೆಬ್ಬಿಸಿದ ವರ್ಷ 2014. ಮೊಬೈಲ್ ಪ್ಲ್ಯಾಟ್‌ಫಾರ್ಮ್‌ಗಳಾದ ಆಂಡ್ರಾಯ್ಡ್, ವಿಂಡೋಸ್ ಹಾಗೂ ಆ್ಯಪಲ್‌ಗಳು ಅತ್ಯಾಧುನಿಕ ತಂತ್ರಜ್ಞಾನದ ಕಾರ್ಯಾಚರಣಾ ವ್ಯವಸ್ಥೆಯೊಂದಿಗೆ ಸ್ಮಾರ್ಟ್‌ಫೋನ್ ಜಗತ್ತಿನಲ್ಲಿ ಬಿರುಗಾಳಿಯೆಬ್ಬಿಸಿದರೆ, ನವನವೀನ ತಂತ್ರಜ್ಞಾನದ ಕಂಪ್ಯೂಟರ್‌ಗಳು, ಟು-ಇನ್-ಒನ್ ಕೈಗೆಟಕುವ ದರದಲ್ಲಿ ಲಭ್ಯವಾದವು. ಆನ್‌ಲೈನ್ ಮಾರಾಟದ ಮೂಲಕ ಕುಳಿತಲ್ಲೇ ಶಾಪಿಂಗ್ ಅನುಭವ ನೀಡಿದ ಇ-ಟೇಲರ್‌ಗಳು, ಮಳಿಗೆಗಳನ್ನಿಟ್ಟು ಗ್ರಾಹಕರ ಸೆಳೆಯಲು ಸಂಕಷ್ಟಪಡುತ್ತಿದ್ದ ರೀಟೇಲರ್‌ಗಳ ಕಣ್ಣು ಕೆಂಪಗಾಗಿಸಿದವು. ಚೀನೀ ಮೊಬೈಲ್‌ಗಳ ದಾಂಗುಡಿಯಿಂದ ಸ್ಮಾರ್ಟ್‌ಫೋನ್ ದೈತ್ಯರು ಕಂಗೆಟ್ಟರು. ಸ್ಮಾರ್ಟ್ ವಾಚ್‌ಗಳ ಯುಗವೂ ಆರಂಭವಾಯಿತು.
—————
ಮೊಬೈಲ್, ಕಂಪ್ಯೂಟರ್, ಟ್ಯಾಬ್ಲೆಟ್, ಫ್ಯಾಬ್ಲೆಟ್ ಕ್ರಾಂತಿ
Smart Look Backವಿನೂತನ ತಂತ್ರಜ್ಞಾನಗಳು, ಆ್ಯಪ್‌ಗಳು, ಸ್ಟಾರ್ಟಪ್‌ಗಳ ರೂಪದಲ್ಲಿ ಜನರನ್ನು ಆಕರ್ಷಿಸತೊಡಗಿದರೆ, ಸ್ಮಾರ್ಟ್‌ಫೋನ್ ದಿಗ್ಗಜರು ಸಾವಿರಾರು ಸಂಖ್ಯೆಯ ಹೊಸ ಹೊಸ ಸಾಧನಗಳನ್ನು ಪೈಪೋಟಿ ದರದಲ್ಲಿ ಜನರಿಗೆ ನೀಡತೊಡಗಿದವು. ಚೀನಾದ ಪ್ರಮುಖ ಕಂಪನಿಗಳೂ ಭಾರತಕ್ಕೆ ಲಗ್ಗೆ ಇಟ್ಟಿದ್ದು ಪ್ರಧಾನ ಕಾರಣ. ಶ್ವೋಮಿ, ಹ್ಯುವೈ, ಒನ್‌ಪ್ಲಸ್, ಜಿಯೋನಿ, ಹೆಯರ್, ಒಪ್ಪೋ, ಝಡ್‌ಟಿಇ ಮುಂತಾದ ಚೀನೀ ಕಂಪನಿಗಳು ಸ್ಯಾಮ್ಸಂಗ್, ಸೋನಿ, ಹೆಚ್‌ಟಿಸಿ, ಆ್ಯಪಲ್‌ಗಳ 40-50 ಸಾವಿರ ರೂ. ಬೆಲೆ ಬಾಳುವ ಸ್ಮಾರ್ಟ್‌ಫೋನ್‌ಗೆ ಸರಿಸಮವಾದ ಸ್ಮಾರ್ಟ್‌ಫೋನ್‌ಗಳು 10ರಿಂದ 20 ಸಾವಿರ ರೂ. ಆಸುಪಾಸಿನಲ್ಲಿ ದೊರೆಯುವಂತೆ ಮಾಡಿದವು. ಭಾರತೀಯ ಗ್ರಾಹಕನಿಗೆ ಲಾಭವಾಗಿದ್ದಂತೂ ನಿಜ.

3 ಕಾರ್ಯಾಚರಣಾ ವ್ಯವಸ್ಥೆಗಳು: ಲಾಲಿಪಾಪ್, ವಿಂಡೋಸ್ 8.1, ಐಒಎಸ್ 8,
ಟಚ್ ಸ್ಕ್ರೀನ್ ಸ್ಮಾರ್ಟ್‌ಫೋನ್‌ಗಳ ಬೆಲೆಯೂ ಇಳಿಮುಖವಾಗಿ ಜನಾಕರ್ಷಣೆ ಹೆಚ್ಚಾಗಿರುವುದರೊಂದಿಗೆ ಜನರಿಗೆ ಅತ್ಯುತ್ತಮ ಸೌಕರ್ಯ ಒದಗಿಸಲು ಪ್ರಮುಖ ತಂತ್ರಾಂಶ ದಿಗ್ಗಜರು ಪೈಪೋಟಿ ನಡೆಸಿದವು. ಆಂಡ್ರಾಯ್ಡ್ ಕಾರ್ಯಾಚರಣಾ ವ್ಯವಸ್ಥೆಯಡಿ ಕಾರ್ಯಾಚರಿಸುವ ಮೊಬೈಲ್‌ಗಳಿಗೆ ಹೊಸ ಆವೃತ್ತಿ 5.0 ಲಾಲಿಪಾಪ್ ಹೆಸರಿನೊಂದಿಗೆ ಘೋಷಣೆಯಾದರೆ, ವಿಂಡೋಸ್ ಕೂಡ ಹಿಂದೆ ಬೀಳಲಿಲ್ಲ. ಟ್ಯಾಬ್ಲೆಟ್, ಲ್ಯಾಪ್‌ಟಾಪ್, ಸ್ಮಾರ್ಟ್‌ಫೋನ್ ಎಲ್ಲದಕ್ಕೂ ಹೊಂದಿಕೆಯಾಗುವ ವಿಂಡೋಸ್ 8.1 ಕಾರ್ಯಾಚರಣಾ ವ್ಯವಸ್ಥೆ ಹೊರತಂದಿತಲ್ಲದೆ, ಮುಂದಿನ ವರ್ಷ ವಿಂಡೋಸ್ 10 ಬಿಡುಗಡೆ ಮಾಡುವುದಾಗಿ ಘೋಷಿಸಿತು. ಆ್ಯಪಲ್ ಕಂಪನಿ ಐಒಎಸ್ 8 ಮೂಲಕ ತಂತ್ರಜ್ಞಾನದ ಉತ್ತುಂಗ ಅನುಭವವನ್ನು ಜನರಿಗೆ ಒದಗಿಸಿತು. ಜಾವಾ, ಸಿಂಬಿಯಾನ್ ಆಧಾರಿತ ಮೊಬೈಲುಗಳು ಬಹುತೇಕ ಅವಸಾನದ ಹಂತ ತಲುಪಿದವು.

4ಜಿ ತಂತ್ರಜ್ಞಾನ
ಭಾರತದಲ್ಲಿ ಜಿಪಿಆರ್‌ಎಸ್/ಎಡ್ಜ್ (2ಜಿ) ಇಂಟರ್ನೆಟ್ ಸಂಪರ್ಕ ವ್ಯವಸ್ಥೆ ಇನ್ನೂ ಕೂಡ ಸರಿಯಾಗಿ ದೇಶದ ಮೂಲೆ ಮೂಲೆಗೆ ತಲುಪಿಲ್ಲ. ಅಷ್ಟರಲ್ಲಾಗಲೇ 3ಜಿ ತಂತ್ರಜ್ಞಾನದ ಮೂಲಕ ಇಂಟರ್ನೆಟ್ ಸಂಪರ್ಕವು ನಗರ ಪ್ರದೇಶಗಳಲ್ಲಿ ತನ್ನ ಛಾಪು ಮೂಡಿಸಿತು. ವರ್ಷದ ಕೊನೆ ಕೊನೆಗೆ ಮತ್ತಷ್ಟು ವೇಗದ ತರಂಗಾಂತರವಿರುವ, ವೇಗವಾಗಿ ವೆಬ್ ಬ್ರೌಸ್ ಮಾಡುವ ಸಾಮರ್ಥ್ಯವಿರುವ 4ಜಿ ತಂತ್ರಜ್ಞಾನವೂ ಬೆಂಗಳೂರು ಸಹಿತ ದೇಶದ ಕೆಲವೇ ನಗರಗಳಲ್ಲಿ ಆರಂಭವಾಯಿತು. ಬೆಂಗಳೂರು, ಮೈಸೂರು, ಮೈಸೂರು ಮುಂತಾದ ಪಟ್ಟಣಗಳಲ್ಲಿ ವೈ-ಫೈ ಇಂಟರ್ನೆಟ್ ವಲಯವೂ ರೂಪುಗೊಂಡಿತು.

ನೋಕಿಯಾ ಇಳಿಮುಖ -ಮೈಕ್ರೋಸಾಫ್ಟ್ ಮೇಲುಗೈ
ಭಾರತೀಯರ ನೆಚ್ಚಿನ ಮೊಬೈಲ್ ಬ್ರ್ಯಾಂಡ್ ನೋಕಿಯಾದ ಮೊಬೈಲ್ ತಯಾರಿಕಾ ಘಟಕವನ್ನು ಮೈಕ್ರೋಸಾಫ್ಟ್ ಕಂಪನಿಯು 750 ಕೋಟಿ ಡಾಲರ್‌ಗೆ ಖರೀದಿಸುವ ಮೂಲಕ ಜಗತ್ತಿನ ಎರಡು ಅತಿ ಜನಪ್ರಿಯ ತಂತ್ರಜ್ಞಾನಗಳು ಒಂದಾದವು. ಸ್ಮಾರ್ಟ್‌ಫೋನ್‌ಗಳ ಅಬ್ಬರಕ್ಕೆ ಒಗ್ಗಿಕೊಳ್ಳಲಾಗದೆ ತೀರಾ ಹಿನ್ನಡೆ ಅನುಭವಿಸಿದ ನೋಕಿಯಾ, ಆಂಡ್ರಾಯ್ಡ್ ಎಕ್ಸ್ ಸರಣಿಯ ಮೂಲಕ ಚೇತರಿಸಿಕೊಳ್ಳಲು ಪ್ರಯತ್ನಿಸಿತಾದರೂ, ವಿಫಲವಾಯಿತು. ಮೈಕ್ರೋಸಾಫ್ಟ್‌ನ ವಿಂಡೋಸ್ ತಂತ್ರಾಂಶದ ಲುಮಿಯಾ ಫೋನುಗಳು ಮಾರುಕಟ್ಟೆಯಲ್ಲಿ ಛಾಪು ಮೂಡಿಸುತ್ತಿರುವಂತೆಯೇ, ಆ ಕಂಪನಿಯೇ ನೋಕಿಯಾ ವಿಭಾಗವನ್ನು ತನ್ನದಾಗಿಸಿಕೊಂಡು, ಮೈಕ್ರೋಸಾಫ್ಟ್ ಲುಮಿಯಾ 535 ಮೂಲಕ ಪರಿಪೂರ್ಣವಾಗಿ, ತನ್ನದೇ ಬ್ರ್ಯಾಂಡ್ ಬಲದಲ್ಲಿ ಮೊಬೈಲ್ ಮಾರುಕಟ್ಟೆಗೆ ಜಿಗಿಯಿತು. ನೋಕಿಯಾ ವರ್ಷಾಂತ್ಯದಲ್ಲಿ ಆಂಡ್ರಾಯ್ಡ್ ಆಧಾರಿತ ಟ್ಯಾಬ್ಲೆಟ್ ತಯಾರಿಗೆ ಮುಂದಾಗಿ, ಮುಂದಿನ ವರ್ಷಾರಂಭದಲ್ಲಿ ಎನ್1 ಸಾಧನದೊಂದಿಗೆ ಮತ್ತೆ ಮಾರುಕಟ್ಟೆಗೆ ಮರಳುವುದಾಗಿ ಘೋಷಿಸಿತು.

ಸ್ಮಾರ್ಟ್‌ವಾಚ್‌ಗಳ ಯುಗ
ಜನರಲ್ಲಿ ಫಿಟ್ನೆಸ್ ಬಗ್ಗೆ ಜಾಗೃತಿ ಹೆಚ್ಚಾಗಿ, ನಾವು ನಡೆದ ಹೆಜ್ಜೆಗಳ ಲೆಕ್ಕ ತಿಳಿಸುವ, ಕ್ಯಾಲೊರಿ ಲೆಕ್ಕಾಚಾರ ನೀಡುವ, ಜತೆಗೆ ಫೋನ್‌ಗೆ ಬಂದ ಸಂದೇಶಗಳನ್ನು ಕೈಯಲ್ಲಿ ಓದಲು ಅನುಕೂಲ ಮಾಡುವ ಸ್ಮಾರ್ಟ್‌ಫೋನುಗಳು ಮಾರುಕಟ್ಟೆಗೆ ಆಗಮಿಸತೊಡಗಿದವು. ಇದಕ್ಕಾಗಿಯೇ ಗೂಗಲ್, ‘ಆಂಡ್ರಾಯ್ಡ್ ವೇರ್’ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿತು. ಇದರ ಆಧಾರದಲ್ಲಿ ಎಲ್‌ಜಿ ಜಿ ವಾಚ್, ಮೋಟೋರೋಲ ಮೋಟೋ 360, ಸ್ಯಾಮ್ಸಂಗ್ ಗಿಯರ್ ಲೈವ್, ಆಸುಸ್ ಝೆನ್‌ವಾಚ್ ಮುಂತಾದ ಸ್ಮಾರ್ಟ್‌ವಾಚ್‌ಗಳ ಆಗಮನವಾಯಿತು. ಆ್ಯಪಲ್ ಕೂಡ ಐವಾಚ್ ಸಿದ್ಧಪಡಿಸುತ್ತಿದೆ ಎಂಬ ಸುದ್ದಿಯು ಈ ಕಂಪನಿಗಳನ್ನು ತರಾತುರಿಗೊಳಿಸಿತು. ಮೈಕ್ರೋಸಾಫ್ಟ್ ಕೂಡ ಹಿಂದೆ ಬೀಳಲಿಲ್ಲ, ಫಿಟ್‌ಬಿಟ್ ಆ್ಯಪ್ ಮೂಲಕ ಮೈಕ್ರೋಸಾಫ್ಟ್ ಬ್ಯಾಂಡ್ ಅನ್ನು ಮಾರುಕಟ್ಟೆಗಿಳಿಸಿತು.

ದೇಶೀ ತಯಾರಕರಿಗೆ ಆಂಡ್ರಾಯ್ಡ್ ಒನ್, ವಿಂಡೋಸ್ 8
ದೇಶೀ ಮೊಬೈಲ್ ತಯಾರಕರಿಗೆ ಉತ್ತೇಜನ ನೀಡಿ ಜನ ಸಾಮಾನ್ಯರನ್ನು ತಂತ್ರಜ್ಞಾನದತ್ತ ಸೆಳೆಯುವ ನಿಟ್ಟಿನಲ್ಲಿ ಗೂಗಲ್ ಕಂಪನಿಯು, ಆಂಡ್ರಾಯ್ಡ್ ಒನ್ ಎಂಬ ವ್ಯವಸ್ಥೆಯನ್ನು ಪರಿಚಯಿಸಿ, ಆಂಡ್ರಾಯ್ಡ್ ಕಾರ್ಯಾಚರಣಾ ವ್ಯವಸ್ಥೆಯನ್ನು ಕಾರ್ಬನ್, ಮೈಕ್ರೋಸಾಫ್ಟ್ ಹಾಗೂ ಸ್ಪೈಸ್ ಕಂಪನಿಗಳಿಗೆ ವಿತರಿಸಿತು. ತತ್ಫಲವಾಗಿ 6 ಸಾವಿರ ರೂ. ಆಸುಪಾಸಿನಲ್ಲಿ ಆಧುನಿಕ ಸೌಲಭ್ಯದ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಗೆ ಬಂದವು. ಅವು ಅಷ್ಟೇನೂ ಛಾಪು ಮೂಡಿಸಿದಂತೆ ತೋರುವುದಿಲ್ಲ. ಇದರಿಂದ ಪ್ರೇರಿತವಾದ ಮೈಕ್ರೋಸಾಫ್ಟ್ ಕೂಡ, ವಿಂಡೋಸ್ ಕಾರ್ಯಾಚರಣಾ ವ್ಯವಸ್ಥೆಯನ್ನು ದೇಶೀ ತಯಾರಕ ಕಂಪನಿಗಳಿಗೆ ಒದಗಿಸಿದ ಪರಿಣಾಮ, ವಿಂಡೋಸ್ ಆಧಾರಿತ ಟ್ಯಾಬ್ಲೆಟ್‌ಗಳು, ಸ್ಮಾರ್ಟ್‌ಫೋನುಗಳು ಅಗ್ಗದ ದರದಲ್ಲಿ ಮಾರುಕಟ್ಟೆಗೆ ಬಂದವು.

ಸೆಲ್ಫೀ ಎಂಬ ಮೇನಿಯಾ
Largest Selfie 730-1ಮೊಬೈಲ್ ಫೋನ್‌ಗಳಲ್ಲಿ ತಮ್ಮ ಫೋಟೋ ತಾವೇ ತೆಗೆದುಕೊಳ್ಳುವ ಕ್ರೇಜ್ ಜನರಲ್ಲಿ ಹೆಚ್ಚಾಯಿತು. ಇದರ ಜತೆಗೆ ಮೊಬೈಲ್ ತಯಾರಿಕಾ ಕಂಪನಿಗಳು ಕೂಡ ಈ ರೀತಿಯ ಸೆಲ್ಫೀ ಚಿತ್ರಗಳಿಗೆ ಅನುಕೂಲವಾಗುವಂತೆ ಮುಂಭಾಗದ ಕ್ಯಾಮೆರಾಗಳ ರೆಸೊಲ್ಯುಶನ್ ಅನ್ನು ವರ್ಧಿಸತೊಡಗಿದವು. ತೀರಾ ಕಡಿಮೆ ರೆಸೊಲ್ಯುಶನ್ ಇದ್ದ ಮುಂಭಾಗದ ಕ್ಯಾಮೆರಾಗಳು ಐದರಿಂದ ಎಂಟು ಮೆಗಾಪಿಕ್ಸೆಲ್‌ವರೆಗೂ ವಿಸ್ತರಣೆಯಾದವು. ಹಲವು ಬ್ರ್ಯಾಂಡ್‌ಗಳು ಸೆಲ್ಫೀ ಫೋನ್ ಎನ್ನುತ್ತಲೇ ಮಾರುಕಟ್ಟೆಗೆ ಲಗ್ಗೆಯಿಟ್ಟವು. ಜನರಿಗಿದ್ದ ಮೇನಿಯಾವನ್ನು ಮಾರುಕಟ್ಟೆಗೆ ಬಳಸಿಕೊಂಡವು. ಇಲ್ಲೂ ಪೈಪೋಟಿಯಿಂದಾಗಿ ಕಡಿಮೆ ದರದಲ್ಲಿ ಉತ್ತಮ ಕ್ಯಾಮೆರಾ ಫೋನುಗಳು ಕೈಗೆ ಸಿಗುವಂತಾಯಿತು.

ಆನ್‌ಲೈನ್ ಶಾಪಿಂಗ್ ಉತ್ಸವ
ಪ್ರತಿವರ್ಷದಂತೆ ಗೂಗಲ್ ಕಂಪನಿಯು ಆನ್‌ಲೈನ್ ಶಾಪಿಂಗ್ ಉತ್ಸವವನ್ನು Gosf.in ತಾಣದ ಮೂಲಕ ವರ್ಷಾಂತ್ಯದಲ್ಲಿ ನಡೆಸಿತು. ಇದಕ್ಕೆ ಮುನ್ನವೇ, ವಿದೇಶದಲ್ಲಿ ಬ್ಲ್ಯಾಕ್ ಫ್ರೈಡೇ, ಸೈಬರ್ ಮಂಡೇ ಮುಂತಾದ ಹೆಸರಿನಲ್ಲಿ ನಡೆಯುತ್ತಿದ್ದ ಭರ್ಜರಿ ಆನ್‌ಲೈನ್ ವಹಿವಾಟು ಭಾರತದಲ್ಲಿಯೂ ಛಾಪು ಮೂಡಿಸಿತು. ಮುಖ್ಯವಾಗಿ ಫ್ಲಿಪ್ ಕಾರ್ಟ್, ಅಮೆಜಾನ್ ಹಾಗೂ ಸ್ನ್ಯಾಪ್‌ಡೀಲ್ ಅಂತರ್ಜಾಲ ತಾಣಗಳು, ಭರ್ಜರಿ ಕೊಡುಗೆಯ ಮೂಲಕ ಗ್ರಾಹಕರ ಖರೀದಿ ಚಾಳಿಗೆ ಹುಚ್ಚೆಬ್ಬಿಸಿದವು. ವಿಶೇಷವಾಗಿ ಎಲೆಕ್ಟ್ರಾನಿಕ್ ವಸ್ತುಗಳು ಅತ್ಯಂತ ಕಡಿಮೆ ಬೆಲೆಗೆ, ಸ್ಫರ್ಧಾತ್ಮಕ ಬೆಲೆಗೆ ಲಭ್ಯವಾದವು. ಫ್ಲಿಪ್‌ಕಾರ್ಟ್ ಅಕ್ಟೋಬರ್ ಆರರಂದು ನಡೆಸಿದ ‘ಬಿಗ್ ಬಿಲಿಯನ್ ಡೇ’ ಮಾರಾಟ ಅಂತಾರಾಷ್ಟ್ರೀಯವಾಗಿ ಸದ್ದು ಮಾಡಿತು. ತೀರಾ ಅಗ್ಗದ ದರದಲ್ಲಿ ಸರಕುಗಳು ದೊರೆತಾಗ, ರೀಟೇಲ್ ವ್ಯಾಪಾರಿಗಳು ತಕರಾರೆತ್ತಿದರು. ಸರಕಾರ ತನಿಖೆ ನಡೆಸುತ್ತದೆ ಎಂಬ ಮಟ್ಟಿಗೂ ವಿವಾದ ಹೋಯಿತು. ಅದೇ ದಿನ, ಪ್ರತಿಸ್ಫರ್ಧಿಗಳಾದ ಅಮೆಜಾನ್ ಮತ್ತು ಸ್ನ್ಯಾಪ್‌ಡೀಲ್ ಕೂಡ ಭರ್ಜರಿ ಕೊಡುಗೆ ಪ್ರಕಟಿಸಿ, ತಾವೂ ಲಾಭಾಂಶ ಬಾಚಿಕೊಂಡವು. ಗ್ರಾಹಕರಿಗೆ ಕಡಿಮೆ ದರದಲ್ಲಿ ಸರಕು ಲಭ್ಯವಾಯಿತು. ಅಗ್ಗದ ದರದಲ್ಲಿ ಎಲೆಕ್ಟ್ರಾನಿಕ್ ವಸ್ತುಗಳನ್ನು ಪಡೆಯುವ ಅವಕಾಶ ವಂಚಿತರು ಕೈಕೈ ಹಿಸುಕಿಕೊಂಡರು.

ಸ್ಯಾಮ್ಸಂಗ್‌ಗೆ ಹಿನ್ನಡೆ
ಜಾಗತಿಕವಾಗಿ ಸ್ಮಾರ್ಟ್‌ಫೋನ್ ಜಗತ್ತಿನಲ್ಲಿ ಸ್ಯಾಮ್ಸಂಗ್‌ನ ಪ್ರಾಬಲ್ಯವೂ, ವಾರ್ಷಿಕ ಆದಾಯವೂ ಕುಸಿಯತೊಡಗಿತು. ಹತ್ತು ಹಲವು ವಿಭಿನ್ನ ಮಾಡೆಲ್‌ಗಳನ್ನು ಮಾರುಕಟ್ಟೆಗಿಳಿಸಿ ಗೊಂದಲ ಮೂಡಿಸಿದ್ದೇ ಇದಕ್ಕೆ ಕಾರಣ ಎಂಬ ವಿಶ್ಲೇಷಣೆ ಒಂದೆಡೆಯಿಂದ ವ್ಯಕ್ತವಾಯಿತಾದರೂ, ಧೃತಿಗೆಡದ ಅದು ಗೆಲಾಕ್ಸಿ ಎಸ್ 5 ಸೇರಿದಂತೆ ಐಷಾರಾಮಿ ಫೋನುಗಳನ್ನು ಬಿಡುಗಡೆ ಮಾಡಿತು. ಆಂಡ್ರಾಯ್ಡ್ ಕಾರ್ಯಾಚರಣಾ ವ್ಯವಸ್ಥೆಗೆ ಗುಡ್‌ಬೈ ಹೇಳುವ ಮೊದಲ ಹೆಜ್ಜೆಯಾಗಿ, ತಾನೇ ರೂಪಿಸಿದ ಟೈಜೆನ್ ಎಂಬ ಕಾರ್ಯಾಚರಣಾ ವ್ಯವಸ್ಥೆಯಿರುವ ಫೋನುಗಳನ್ನು ಮಾರುಕಟ್ಟೆಗೆ ಬಿಡುವುದಾಗಿ ಘೋಷಿಸಿತು. ವರ್ಷಾಂತ್ಯಕ್ಕೆ ಮಾರುಕಟ್ಟೆಗೆ ಗೆಲಾಕ್ಸಿ ನೋಟ್ ಎಡ್ಜ್ ಎಂಬ ಅರುವತ್ತೈದು ಸಾವಿರ ಬೆಲೆಬಾಳುವ ಮಾಡೆಲ್ ಪರಿಚಯಿಸಿತು.

ಜಿಗಿದು ಕುಳಿತ ಮೋಟೋರೋಲ
ಭಾರತದಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸಿದ ಬಳಿಕ, ಗೂಗಲ್‌ನಿಂದ ಖರೀದಿಗೊಳಪಟ್ಟು, ಆ ಬಳಿಕ ಲೆನೋವೋ ಕಂಪನಿಯ ಪಾಲಾದ ಮೋಟೋರೋಲ ಕಂಪನಿ, ಫ್ಲಿಪ್ ಕಾರ್ಟ್‌ನ ಮೂಲಕವಾಗಿ ಮರುಹುಟ್ಟು ಪಡೆಯಿತು. ಅಗ್ಗದ ದರದಲ್ಲಿ ಅತ್ಯಾಧುನಿಕ ತಂತ್ರಜ್ಞಾನವಿರುವ ಮೋಟೋ ಜಿ, ತದನಂತರದಲ್ಲಿ ಮೋಟೋ ಇ, ಮೋಟೋ ಎಕ್ಸ್ ಸ್ಮಾರ್ಟ್‌ಫೋನ್‌ಗಳ ಮೂಲಕವಾಗಿ, ಆನ್‌ಲೈನ್‌ನಲ್ಲಿ ಮಾತ್ರ ಲಭ್ಯ ಎಂಬ ಮಿತಿಯೊಂದಿಗೆ ಭಾರತೀಯರ ಮನ ಸೆಳೆದಿದ್ದು ವಿಶೇಷ. ಇದು ಆನ್‌ಲೈನ್ ಮಾರಾಟದ ವಿನೂತನ ತಂತ್ರಗಾರಿಕೆಯಾಗಿಯೂ ಜನ ಮಾನಸದಲ್ಲಿ ಉಳಿಯಿತು.

ಎದ್ದು ಬಿದ್ದ ಟ್ಯಾಕ್ಸಿ ಆ್ಯಪ್‌ಗಳು
ಮೊಬೈಲ್‌ನಲ್ಲೇ ಟ್ಯಾಕ್ಸಿ ಬುಕ್ ಮಾಡುವ ಆ್ಯಪ್‌ಗಳಾದ ಉಬೆರ್, ಓಲಾ ಕ್ಯಾಬ್ಸ್, ಟ್ಯಾಕ್ಸಿಫಾರ್‌ಶೂರ್, ಮೇರು ಮುಂತಾದವು ಅತ್ಯಂತ ಅಗ್ಗದ ದರದಲ್ಲಿ ಜನರಿಗೆ ಸೇವೆ ಒದಗಿಸತೊಡಗಿದವು. ಕರೆದಲ್ಲಿಗೆ ಬಾರದೆ, ಮೀಟರ್ ಹಾಕದೆ ಎರ್ರಾಬಿರ್ರಿ ದರ ವಿಧಿಸುವ ಕೆಲವು ಆಟೋ ರಿಕ್ಷಾದವರು ಮತ್ತು ಉತ್ತಮ ಸೇವೆ ನೀಡುತ್ತಿರುವ ಆಟೋವಾಲಾರೂ ಆತಂಕಕ್ಕೊಳಗಾದರು. ಒಂದು ಹಂತದಲ್ಲಿ, ಪ್ರಯಾಣ ದರ ಇಳಿಸದಿದ್ದರೆ ಉಳಿಗಾಲವಿಲ್ಲ ಎಂದು ಸ್ವತಃ ಆಟೋ ಚಾಲಕರೇ ತಮ್ಮ ಯೂನಿಯನ್ ಮೊರೆ ಹೋದ ಪ್ರಸಂಗವೂ ನಡೆಯಿತು. ಆದರೆ, ಅಷ್ಟರಲ್ಲಿ, ನವೆಂಬರ್ ತಿಂಗಳಲ್ಲಿ ದಿಲ್ಲಿಯಲ್ಲಿ ಉಬರ್ ಟ್ಯಾಕ್ಸಿ ಚಾಲಕನೊಬ್ಬ ಅತ್ಯಾಚಾರವೆಸಗಿ ಸಿಕ್ಕಿಬಿದ್ದದ್ದು ದೇಶಾದ್ಯಂತ ಸುದ್ದಿಯಾಯಿತು. ಪರಿಣಾಮ, ಆ್ಯಪ್ ಆಧಾರಿತ ಆಟೋ, ಟ್ಯಾಕ್ಸಿಗಳಿಗೆ ದೇಶಾದ್ಯಂತ ಮೂಗುದಾರ ತೊಡಿಸಲಾಯಿತು.

ಮೊಬೈಲ್ ಒನ್
ಕೇಂದ್ರದಲ್ಲಿ ನರೇಂದ್ರ ಮೋದಿ ಸರಕಾರ ಅಧಿಕಾರಕ್ಕೆ ಬಂದಾಕ್ಷಣವೇ ದೇಶದಲ್ಲಿ ಡಿಜಿಟಲ್ ಇಂಡಿಯಾ ಯೋಜನೆ ಘೋಷಿಸಿದರು. ಅದರ ಪರಿಣಾಮವಾಗಿ ಕೇಂದ್ರ ಸರಕಾರದ ಹಲವು ಇಲಾಖೆಗಳ ವೆಬ್ ತಾಣಗಳು ಬದಲಾದವು. ಕೇಂದ್ರವು Mygov.in ಎಂಬ ತಾಣದ ಮೂಲಕ, ನಾಗರಿಕರ ಸಲಹೆ ಪಡೆಯುವ ಕಾರ್ಯಕ್ಕೆ ಮುಂದಾಯಿತು. ಇತ್ತ, ಡಿಜಿಟಲ್ ಕ್ರಾಂತಿಯಲ್ಲಿ ಕರ್ನಾಟಕವೂ ಹಿಂದೆ ಬೀಳಲಿಲ್ಲ. ಸಿದ್ದರಾಮಯ್ಯ ನೇತೃತ್ವದ ಸರಕಾರವು ಬೆರಳ ತುದಿಯಲ್ಲಿ ಸರಕಾರ ಎಂಬ ಘೋಷಾ ವಾಕ್ಯದೊಂದಿಗೆ, ಮೊಬೈಲ್ ಒನ್ ಎಂಬ, ಸಕಲ ಸೇವೆಗಳ ಗುಚ್ಛವೊಂದನ್ನು ಅಕ್ಟೋಬರ್ ತಿಂಗಳಲ್ಲಿ ರಾಜ್ಯಕ್ಕೆ ಪರಿಚಯಿಸಿತು. ಆ್ಯಪ್ ಅಥವಾ ವೆಬ್ ಮೂಲಕ ಒಂದೇ ಕಡೆ ವಿವಿಧ ಸರಕಾರಿ ಸೇವೆಗಳು, ಕರೆನ್ಸಿ ರೀಚಾರ್ಜ್, ಬಿಲ್ ಪಾವತಿ, ಆರೋಗ್ಯ, ಮಹಿಳಾ ರಕ್ಷಣೆ… ಮುಂತಾದ ಸೇವೆಗಳು ಲಭ್ಯವಾಗಿ, ಹೊಸ ಅಧ್ಯಾಯ ಆರಂಭವಾಯಿತು.

ಮತ್ತಷ್ಟು ಗಮನಾರ್ಹ ಸಂಗತಿಗಳು
* ಮೈಕ್ರೋಸಾಫ್ಟ್ ಸಿಇಒ ಆಗಿ ಭಾರತದ ಸತ್ಯ ನಾಡೆಳ್ಲಾ ನೇಮಕ
* ಟ್ವಿಟರ್ ಮಾದರಿಯಲ್ಲೇ ಫೇಸ್‌ಬುಕ್‌ನಿಂದ ‘ಟ್ರೆಂಡಿಂಗ್ ಸುದ್ದಿ’
* ಸ್ಯಾನ್‌ಡಿಸ್ಕ್‌ನಿಂದ 128 ಜಿಬಿ ಸಾಮರ್ಥ್ಯದ, 200 ಡಾಲರ್ ಬೆಲೆಯ ಮೈಕ್ರೋ ಎಸ್‌ಡಿ ಕಾರ್ಡ್
* ಆತಂಕ ಮೂಡಿಸಿದ ಹಾರ್ಟ್‌ಬ್ಲೀಡ್ ಹೆಸರಿನ ಕಂಪ್ಯೂಟರ್ ವೈರಸ್
* ಚೀನಾದ ಶ್ವೋಮಿ ಕಂಪನಿಯ ಎಂಐ3, ರೆಡ್‌ಮಿ ಸಾಧನಗಳಿಗೆ ಮಾರುಹೋದ ಭಾರತೀಯರು
* ರೈಲು ಟಿಕೆಟ್ ಬುಕ್ ಮಾಡುವ ಐಆರ್‌ಸಿಟಿಸಿ ವೆಬ್ ತಾಣದ ಸಾಮರ್ಥ್ಯ ಹೆಚ್ಚಳ
* ಆ್ಯಪಲ್‌ನಿಂದ ಐಫೋನ್ 6, ಹಾಗೂ 6 ಪ್ಲಸ್ ಬಿಡುಗಡೆ
* ಗೂಗಲ್ ನೆಕ್ಸಸ್ 6 ಹಾಗೂ ನೆಕ್ಸಸ್ 9 ಟ್ಯಾಬ್ಲೆಟ್ ಬಿಡುಗಡೆ
* ಆ್ಯಪಲ್‌ನ ಐಕ್ಲೌಡ್‌ಗೆ ಹ್ಯಾಕರ್‌ಗಳು ಕನ್ನ, ಪರಿಣಾಮ ಹಾಲಿವುಡ್ ತಾರೆಯರ ನಗ್ನ ಚಿತ್ರಗಳು ಇಂಟರ್ನೆಟ್‌ನಲ್ಲಿ ಹರಿದಾಡಿದವು
* ಕೊನೆಯುಸಿರೆಳೆದ ಓರ್ಕುಟ್ ಎಂಬ ಸಾಮಾಜಿಕ ಜಾಲತಾಣ
* ಕ್ಲೌಡ್ ಸ್ಟೋರೇಜ್ ಸೇವೆ ಒದಗಿಸುವ ಕಂಪನಿ ಡ್ರಾಪ್‌ಬಾಕ್ಸ್‌ನ 70 ಲಕ್ಷ ಮಂದಿ ಬಳಕೆದಾರರ ಪಾಸ್‌ವರ್ಡ್ ಬಹಿರಂಗ
* ಫೇಸ್‌ಬುಕ್ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್,ಅಮೆಜಾನ್‌ನ ಜೆಫ್ ಬೆಜೋಸ್ ಅವರಿಂದ ಭಾರತ ಭೇಟಿ
* ಸೋನಿ ಪಿಕ್ಟರ್ಸ್ ಕಂಪನಿಯ ಕಂಪ್ಯೂಟರ್ ಹ್ಯಾಕ್, ದಕ್ಷಿಣ ಕೊರಿಯಾ ಮತ್ತು ಅಮೆರಿಕ ಮಧ್ಯೆ ತಿಕ್ಕಾಟ, ‘ದಿ ಇಂಟರ್ವ್ಯೂ’ ಚಲನಚಿತ್ರ ಬಿಡುಗಡೆಗೆ ಅಡ್ಡಿ

ಮೊಬೈಲ್ ಒನ್‌ನಲ್ಲಿ ಏನಿದೆ, ಹೇಗಿದೆ: ಕ್ವಿಕ್ ರಿಯಾಲಿಟಿ ಚೆಕ್

ಅವಿನಾಶ್ ಬಿ.
Mobile-One-1ಕರ್ನಾಟಕ ಸರಕಾರದ ಮಹತ್ವಾಕಾಂಕ್ಷಿ ಮೊಬೈಲ್-ಒನ್ ಅಪ್ಲಿಕೇಶನ್ ಒಂದೇ ಮಾತಿನಲ್ಲಿ ಹೇಳುವುದಾದರೆ, ‘ಆ್ಯಪ್‌ಗಳ ಗುಚ್ಛ’. ಹಲವಾರು ಆ್ಯಪ್‌ಗಳ ಬದಲು ಇದೊಂದನ್ನೇ ಡೌನ್‌ಲೋಡ್ ಮಾಡಿಕೊಂಡರೆ, ಹಲವು ಸೇವೆಗಳಿಗೆ ಇಲ್ಲಿಂದಲೇ ಪ್ರವೇಶ ಪಡೆಯಬಹುದು.

ಜನಸಾಮಾನ್ಯರ ಕೈಯಲ್ಲಿರಬಹುದಾದ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ನಲ್ಲಿ ಗೂಗಲ್ ಪ್ಲೇ ಸ್ಟೋರ್‍‌ಗೆ ಹೋಗಿ Karnataka Mobileone ಅಂತ ಟೈಪ್ ಮಾಡಿ ಸರ್ಚ್ ಮಾಡಿದಾಗ ಈ ಆ್ಯಪ್ ಲಭ್ಯವಾಗುತ್ತದೆ. Mobile ಮತ್ತು one ಮಧ್ಯೆ ಸ್ಪೇಸ್ ಇರಬಾರದು. ಸ್ಪೇಸ್ ನೀಡದಿದ್ದರೆ, ಕರ್ನಾಟಕ ಸರಕಾರದ ಲಾಂಛನವಿರುವ ಬೇರೊಂದು ಆ್ಯಪ್ ಕಾಣಿಸಿಕೊಳ್ಳುತ್ತದೆ.

ಸುಮಾರು 9.5 ಎಂಬಿ ತೂಕವಿರುವ ಅಧಿಕೃತ ಆ್ಯಪ್ ಡೌನ್‌ಲೋಡ್ ಆದ ಬಳಿಕ ನಿಮ್ಮ ಮೊಬೈಲ್ ಸಂಖ್ಯೆ ನೀಡಿ ನೋಂದಾಯಿಸಿಕೊಳ್ಳಬೇಕಾಗುತ್ತದೆ. ಅದೇ ಮೊಬೈಲ್‌ಗೆ ಪಿನ್ ಸಂಖ್ಯೆಯನ್ನು ಕಳುಹಿಸಲಾಗುತ್ತದೆ. ಲಾಗ್ ಇನ್ ಆಗಲು ಇದು ಬೇಕಾಗುತ್ತದೆ. ಇದರಲ್ಲಿರುವ ಸೇವೆಗಳ ಬಗ್ಗೆ ಕ್ಷಿಪ್ರನೋಟ ಇಲ್ಲಿದೆ.

* ಅಗತ್ಯ ಸೇವೆಗಳಲ್ಲಿ ಪ್ರಸ್ತುತ ಬೆಸ್ಕಾಂ, ಹೆಸ್ಕಾಂ ಹಾಗೂ ಬೆಂಗಳೂರು ಜಲಮಂಡಳಿಯ ಬಿಲ್ ಪಾವತಿ ವ್ಯವಸ್ಥೆ, ಬ್ಯಾಂಕಿಂಗ್ ಸೇವೆಗಳಡಿ ಕೆಲವು ಬ್ಯಾಂಕ್‌ಗಳ ಖಾತೆ ತೆರೆಯಬಹುದು.

* ಪೊಲೀಸ್ ಸೇವೆಗಳಲ್ಲಿ, ಬೆಂಗಳೂರು ಪೊಲೀಸ್, ಬೆಂಗಳೂರು ಸಂಚಾರಿ ಪೊಲೀಸ್ ಹಾಗೂ ರಾಜ್ಯ ಅಪರಾಧ ದಾಖಲೆಗಳ ಬ್ಯುರೋದ ಲಿಂಕ್ ಇವೆ. (ಸಮೀಪದ ಪೊಲೀಸ್ ಠಾಣೆ ಯಾವುದು ಮತ್ತು ಅದರ ಸಂಪರ್ಕ ಸಂಖ್ಯೆ, ಇಮೇಲ್, ಅಲ್ಲದೆ, ಜಿಪಿಎಸ್ ಆನ್ ಮಾಡಿದರೆ ಅಲ್ಲಿಗೆ ಹೋಗುವ ನಕ್ಷೆಯೂ ಗೂಗಲ್ ಮ್ಯಾಪ್ ಮೂಲಕ ಲಭ್ಯ. ಪೊಲೀಸರಿಗೆ ದೂರು/ಸಲಹೆ ನೀಡುವ ವ್ಯವಸ್ಥೆ ಸದ್ಯಕ್ಕೆ ಕಾರ್ಯತತ್ಪರವಾಗಿಲ್ಲ. ವಾಹನದ ಸಂಖ್ಯೆ ನೋಂದಾಯಿಸಿ, ದಂಡ ಕಟ್ಟುವ ಅವಕಾಶವಿದೆ. ಪೊಲೀಸ್ ದೃಢೀಕರಣ, ಧ್ವನಿವರ್ಧಕ (ಮೈಕ್) ಅಳವಡಿಸಲು ಅನುಮತಿ, ಕಳವು ವಾಹನದ ದೂರು ನೀಡಲು ಇಲ್ಲಿ ಸಾಧ್ಯ.

* ಆಸ್ಪತ್ರೆಗಳು ಹಾಗೂ ವೈದ್ಯರ ಅಪಾಯಿಂಟ್‌ಮೆಂಟ್ ಪಡೆಯುವ ಅವಕಾಶವಿದ್ದು, ಪೂರ್ಣರೂಪದಲ್ಲಿ ಇನ್ನಷ್ಟೇ ಕಾರ್ಯಾಚರಿಸಬೇಕಿದೆ.

* ಸಾರಿಗೆ ವಿಭಾಗದಲ್ಲಿ, ಮೇರು ಕ್ಯಾಬ್ಸ್, ಓಲಾ ಕ್ಯಾಬ್ಸ್, ರೈಡಿಂಗೋ ಹಾಗೂ ಮೈಸೂರಿನ ಐಟಿಎಸ್ ವ್ಯವಸ್ಥೆಯ ಲಿಂಕ್ ಇವೆ. ಆರ್‌ಟಿಒ ಸೇವೆಯಡಿ, ಚಾಲನಾ ಪರವಾನಗಿ (ಡಿಎಲ್), ಕಲಿಕಾ ಪರವಾನಗಿ (ಎಲ್ಎಲ್)ಗೆ ಅರ್ಜಿ ಸಲ್ಲಿಸಬಹುದು. ಮೆಟ್ರೋ ರೈಲಿನ ದರ ಮಾಹಿತಿ, ಸ್ಮಾರ್ಟ್ ಕಾರ್ಡ್ ರೀಚಾರ್ಜ್ ವ್ಯವಸ್ಥೆಯಿದೆ.

* ಟೆಲಿಕಾಂ ಸೇವೆಯಡಿ, ಪೋಸ್ಟ್‌ಪೇಯ್ಡ್ ಬಿಲ್ ಪಾವತಿ ಹಾಗೂ ಪ್ರೀಪೇಯ್ಡ್ ರೀಚಾರ್ಜ್ ಆಯ್ಕೆಗಳಿವೆ.

* ಮುನಿಸಿಪಲ್ ಸೇವೆಗಳ ಅಡಿ, ಬೆಂಗಳೂರಿನ ಆಸ್ತಿ ತೆರಿಗೆ ಪಾವತಿ ಆಯ್ಕೆಯಿದ್ದರೆ, ಪೌರಾಡಳಿತ ನಿರ್ದೇಶನಾಲಯದ ಲಿಂಕ್ ಮೂಲಕ ರಾಜ್ಯದ ಯಾವುದೇ ಸ್ಥಳದಿಂದ ಜನನ ಮತ್ತು ಮರಣ ಪ್ರಮಾಣಪತ್ರಕ್ಕೆ ಅರ್ಜಿ ಸಲ್ಲಿಸಬಹುದು.

* ಪ್ರವಾಸ ಸೇವೆಯಡಿ, ಕೆಎಸ್ಸಾರ್ಟಿಸಿ, ರೆಡ್‌ಬಸ್ ಮೂಲಕ ಬಸ್ಸು ಟಿಕೆಟ್, ಐಆರ್‌ಸಿಟಿಸಿ ಮೂಲಕ ರೈಲು ಟಿಕೆಟ್ ಹಾಗೂ ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ಲಿಂಕ್ ಮೂಲಕ ಪ್ಯಾಕೇಜ್ ವಿಚಾರಿಸುವ, ಕಾಯ್ದಿರಿಸುವ ಆಯ್ಕೆಯಿದೆ.

* ಉದ್ಯೋಗ ಸೇವೆಯಡಿ ಬಾಬಾ ಜಾಬ್ ಪೋರ್ಟಲ್‌ನ ಲಿಂಕ್ ಇದ್ದು, ನೋಂದಾಯಿಸಿಕೊಳ್ಳಬೇಕಾಗುತ್ತದೆ.Mobile-One

* ಆಸ್ತಿ ತೆರಿಗೆ, ಆದಾಯ ತೆರಿಗೆ ಇಲಾಖೆಗಳ ಲಿಂಕ್, ತೆರಿಗೆ ಪಾವತಿಗಾಗಿ ಕ್ಲಿಯರ್‌ಟ್ಯಾಕ್ಸ್ ಎಂಬ ಸೇವೆಯ ಲಿಂಕ್ ಇದೆ.

* ಏಕಾಂಗಿಯಾಗಿ ಓಡಾಡುತ್ತಿರುವ ಮಹಿಳೆಯರು, ವಯೋವೃದ್ಧರು, ಮಕ್ಕಳ ಭದ್ರತೆಗಾಗಿ ಎಂ-ಪವರ್ ಎಂಬ ಆ್ಯಪ್ ವ್ಯವಸ್ಥೆಯಿದ್ದು, ಕಾರ್ಯಾಚರಿಸುತ್ತಿದೆ.

* ಟ್ರಾಫಿಕ್ ಪೊಲೀಸರಿಗೆ, ಆರ್‌ಟಿಒಗೆ ಮತ್ತು ಬಿಬಿಎಂಪಿಗೆ ಯಾವುದೇ ಸಮಸ್ಯೆಯ ಬಗ್ಗೆ ದೂರು ನೀಡಬೇಕಿದ್ದರೆ, ಮೊಬೈಲ್‌ನಿಂದಲೇ ಫೋಟೋ ತೆಗೆದು ಅಪ್‌ಲೋಡ್ ಮಾಡಿ ಸಾಕ್ಷ್ಯಾಧಾರ ಸಮೇತ ದೂರು ನೀಡುವ ಆ್ಯಪ್ ಕೂಡ ಅಡಕವಾಗಿದೆ.

* ಕೃಷಿ ಸೇವೆಯಡಿ ರಾಜ್ಯ ಕೃಷಿ ಇಲಾಖೆಯು ಉಚಿತ ಎಸ್ಎಂಎಸ್ ಬೆಳೆಗಳ ಬೆಲೆ ತಿಳಿದುಕೊಳ್ಳಲು, ಪ್ರಕೃತಿ ವಿಕೋಪ, ಹವಾಮಾನ ಮುನ್ಸೂಚನೆ ಪಡೆಯುವ, ಬೆಳೆ ರಕ್ಷಣೆಗೆ ಯೋಜನೆ ರೂಪಿಸಲು ನೆರವಾಗುವ ಆ್ಯಪ್ ಇದೆ.

* ಪಾಸ್‌ಪೋರ್ಟ್, ಮುದ್ರಾಂಕ ಮತ್ತು ನೋಂದಣಿ ಇಲಾಖೆ, ಕಾನೂನು ಸಹಾಯ, ಸಕಾಲ, ಬಿ2ಸಿ (ಉದ್ದಿಮೆಗಳಿಂದ ಗ್ರಾಹಕನ ಬಳಿಗೆ) ಆ್ಯಪ್‌ಗಳ ಗುಚ್ಛವಿದೆ.

* ಪಿಯುಸಿ ಅಂಕಗಳ ಮರುಮಾಪನಕ್ಕೆ ಅರ್ಜಿ, ನಕಲು ಪ್ರತಿಗೆ ಅರ್ಜಿ ಸಲ್ಲಿಸಲು ಮತ್ತು ಎಸ್ಸೆಸ್ಸೆಲ್ಸಿ ಫಲಿತಾಂಶ ತಿಳಿದುಕೊಳ್ಳುವ ಆ್ಯಪ್ ಇದರಲ್ಲೇ ಅಡಕವಾಗಿದೆ.

* ಅಂಚೆ ಇಲಾಖೆ ಮೂಲಕ ಕಳುಹಿಸಲಾದ ಸರಕು, ಲಕೋಟೆಗಳ ಸ್ಥಿತಿಗತಿ ತಿಳಿದುಕೊಳ್ಳಬಹುದು. ಸರಕಾರಿ ನೌಕರರು ತಾವು ಕೆಲಸಕ್ಕೆ ಸೇರಿದಂದಿನಿಂದ ನಿವೃತ್ತಿಯಾಗುವವರೆಗಿನ ಕೆಲಸದ ಮಾಹಿತಿಯನ್ನು ಪಡೆದುಕೊಳ್ಳುವ ಹೆಚ್ಆರ್‌ಎಂಎಸ್ ವ್ಯವಸ್ಥೆಯಿದೆ.

ಬೆಂಗಳೂರು ಕೇಂದ್ರಿತ

ಇವಿಷ್ಟು ಸೇವೆಗಳಿರುವ ಈ ಆ್ಯಪ್ ಅನ್ನು ಹಲವರು ಈಗಾಗಲೇ ಇನ್‌ಸ್ಟಾಲ್ ಮಾಡಿಕೊಂಡಿದ್ದಾರೆ, ಶಹಭಾಸ್ ನೀಡಿದ್ದಾರೆ. ಆದರೆ ಬೆಂಗಳೂರು ಕೇಂದ್ರಿತವಾಗಿಯೇ ಸೇವೆಗಳಿವೆ ಎಂಬ ಬಗ್ಗೆ ಈ ಆ್ಯಪ್‌ನ ಕೆಳಗೆಯೇ ಕಾಮೆಂಟ್‌ಗಳ ಮೂಲಕ ಗಮನ ಸೆಳೆದು, ರಾಜ್ಯದ ಬೇರೆಡೆಯ ಸೇವೆಗಳನ್ನೂ ಸೇರ್ಪಡೆಗೊಳಿಸಲು ಕೋರಿದ್ದಾರೆ.

ಕನ್ನಡ
Screenshot_2014-12-08-15-57-51ಇದೇ ಆ್ಯಪ್ ಅನ್ನು ಕನ್ನಡದಲ್ಲಿ ನೋಡಿದರೆ, ಕೆಲವು ಪದಪ್ರಯೋಗಗಳು, ಅಕ್ಷರ ತಪ್ಪುಗಳು ಜನರು ಆಡಿಕೊಳ್ಳುವಂತೆ ಮಾಡಿವೆ. ಉದಾಹರಣೆಗೆ, ಸಹಾಯ ವಿಭಾಗದಲ್ಲಿ, ಸಹಾಯಕ ‘ಐಕೆ’ಗಳು ಎಂದಿದೆ. ಮರುಪಾವತನೆ (ಮರುಪಾವತಿ), ರಾದ್ಧುಪಡಿಸುವಿಕೆ (ರದ್ದುಪಡಿಸುವಿಕೆ), ಸಂಬಾಂಧಿಸಿದ (ಸಂಬಂಧಿಸಿದ), ನಮ್ಮನು (ನಮ್ಮನ್ನು) ಸಂಪರ್ಕಿಸಿ, ನಿಯಮ ಮತ್ತು ನಿರ್ಭಂಧಿಗಳು (ನಿಯಮ ಮತ್ತು ನಿಬಂಧನೆಗಳು), ವೈದ್ಯರ ಭೇಟಿ ನಿಗದಿಪಡಿಸಲು ಅಪಾಯಿಂಟ್‌ಮೆಂಟ್ ಅನ್ನು ‘ವೈದ್ಯರ ನೇಮಕಾತಿ’ ಅಂತಲೂ, ಹೋಂ (ಮುಖ್ಯಪುಟಕ್ಕೆ) ‘ಮನೆ’ ಎಂದು ಭಾಷಾಂತರಿಸಿ ಬರೆಯಲಾಗಿದೆ. ಮುಂದಿನ ಆವೃತ್ತಿಯಲ್ಲಿ ಇವನ್ನೆಲ್ಲಾ ಸರಿಪಡಿಸುವ ನಿರೀಕ್ಷೆ ಇದೆ.

ಪ್ರಮುಖಾಂಶಗಳು
ಆಂಡ್ರಾಯ್ಡ್ ಮತ್ತು ಆ್ಯಪಲ್ ಸ್ಮಾರ್ಟ್‌ಫೋನ್‌ಗಳಲ್ಲಿ Karnataka Mobileone ಆ್ಯಪ್ ಲಭ್ಯವಿದೆ.
ಸಾಮಾನ್ಯ ಫೀಚರ್ ಫೋನ್‌ಗಳಲ್ಲಿ *161# ಅಂತ ಟೈಪ್ ಮಾಡಿ ಕಳುಹಿಸುವ ಮೂಲಕ, ಸೇವೆಗಳ ಮಾಹಿತಿ ಪಡೆಯಬಹುದು.
ಕಂಪ್ಯೂಟರಿನಲ್ಲೇ ನೋಡುವವರಿಗೆ mobile.karnataka.gov.in ತಾಣವಿದೆ.
ಗ್ರಾಹಕ ಸಹಾಯವಾಣಿಗೆ ಕರೆ ಮಾಡಿ ವಿಚಾರಿಸಲು: 1800-425-425-426
1800-425-425-425 ಗೆ ಮಿಸ್ಡ್ ಕಾಲ್ ನೀಡಿದರೆ, ಈ ಮೇಲಿನ ವಿವರ ಎಸ್ಎಂಎಸ್ ರೂಪದಲ್ಲಿ ಲಭ್ಯ.
161 ಗೆ ಎಸ್ಎಂಎಸ್ ಸೇವೆ ಇದೆ ಎಂದು ಹೇಳಲಾಗಿದೆ. ಪ್ರಯೋಗಕ್ಕಾಗಿ ಹಲೋ ಎಂದು ಟೈಪ್ ಮಾಡಿ ಕಳುಹಿಸಿದ ತಕ್ಷಣ, ನಿರ್ದಿಷ್ಟ ಸೇವೆಗೆ ನಿರ್ದಿಷ್ಟ ಪದಗಳನ್ನು ಎಸ್ಎಂಎಸ್ ರೂಪದಲ್ಲಿ ಕಳುಹಿಸಿ ಎಂಬ ಪ್ರತ್ಯುತ್ತರವೂ ಜತೆಗೆ ಸಂಪೂರ್ಣ ಲಿಂಕ್‌ಗಳ ವಿವರವುಳ್ಳ ಮಾಹಿತಿಯೂ ಬಂದಿದೆ.

ವಿಜಯ ಕರ್ನಾಟಕ, ಡಿಸೆಂಬರ್ 09, 2014

‌ವೈಫೈ ಡೇಟಾ ಕಾರ್ಡ್: ಒಂದೇ ಸಿಮ್‌, ಹಲವು ಸಾಧನಗಳಿಗೆ ಇಂಟರ್ನೆಟ್‌

ಮಾಹಿತಿ@ತಂತ್ರಜ್ಞಾನ ಅಂಕಣ – 96: ಅವಿನಾಶ್ ಬಿ. (ವಿಜಯ ಕರ್ನಾಟಕ, ಅಕ್ಟೋಬರ್ 06, 2014)

ಅಂತರ್ಜಾಲ ಈಗ ಬದುಕಿನ ಅವಿಭಾಜ್ಯ ಅಂಗವಾಗಿರುವ ಕಾರಣಕ್ಕೆ ಹೆಚ್ಚಾಗಿ ಮನೆಗಳಲ್ಲಿ, ಕಚೇರಿಗಳಲ್ಲಿ ಬ್ರಾಡ್‌ಬ್ಯಾಂಡ್ ಇಂಟರ್ನೆಟ್ ಸಂಪರ್ಕ ಇರುತ್ತದೆ. ಮನೆಯಲ್ಲಾದರೆ ಅದಕ್ಕೆ ವೈರ್‌ಗಳು, ಕೇಬಲ್‌ಗಳ ಕಿರಿಕಿರಿ. ಹೀಗಾಗಿಯೇ ಪುಟ್ಟದಾದ ಇಂಟರ್ನೆಟ್ ಡಾಂಗಲ್‌ಗಳು ಎಂದು ಕರೆಯಲಾಗುವ, ಎಲ್ಲಿ ಬೇಕಾದರೂ ಹೊತ್ತೊಯ್ಯಬಹುದಾದ ಯುಎಸ್‌ಬಿ ಡೇಟಾ ಕಾರ್ಡ್‌ಗಳು ಜನಪ್ರಿಯವಾಗಿವೆ. ಈ ನಿಟ್ಟಿನಲ್ಲಿ ಬಿಎಸ್ಸೆನ್ನೆಲ್, ಏರ್‌ಟೆಲ್, ವೊಡಾಫೋನ್, ಟಾಟಾ ಡೊಕೊಮೊ, ರಿಲಯನ್ಸ್, ಎಂಟಿಎಸ್, ಐಡಿಯಾ, ಏರ್‌ಸೆಲ್ ಮುಂತಾದ ಎಲ್ಲ ಮೊಬೈಲ್ ಆಪರೇಟರ್ ಕಂಪನಿಗಳೂ ತಮ್ಮದೇ ಡಾಂಗಲ್‌ಗಳನ್ನು ಮಾರುಕಟ್ಟೆಗಿಳಿಸಿವೆ. ಅವುಗಳಲ್ಲಿ ಹೊಸ ಟ್ರೆಂಡ್ ಎಂದರೆ ಪ್ಲಗ್-ಆ್ಯಂಡ್-ಪ್ಲೇ ವ್ಯವಸ್ಥೆಯ ವೈ-ಫೈ ಡಾಂಗಲ್‌ಗಳು ಕಮ್ ರೌಟರ್‌ಗಳು.

ಇಂತಹಾ ಉಪಯುಕ್ತ ವೈಫೈ ತಂತ್ರಜ್ಞಾನದ ಬಗ್ಗೆ ಅರಿವಿಲ್ಲದವರಿಗೆ, ವಿಶೇಷವಾಗಿ ಗ್ರಾಮೀಣ ಭಾಗದವರಿಗಾಗಿ ಈ ಸಲಹೆ.

ಮುಖ್ಯವಾಗಿ ನಾಲ್ಕು ವಿಧದ ವೈ-ಫೈ ಡಾಂಗಲ್‌ಗಳಿವೆ. 1. ಸಿಮ್ ಆಧಾರಿತ ವೈಫೈ ಡಾಂಗಲ್, 2. ಯುಎಸ್‌ಬಿ/ಡೇಟಾ ಕಾರ್ಡ್ ಆಧಾರಿತ ವೈಫೈ ಸಾಧನ, 3. ವೈಫೈ ಹಾಟ್‌ಸ್ಪಾಟ್ ಅವಕಾಶವಿರುವ ಯುಎಸ್‌ಬಿ ಡೇಟಾ ಕಾರ್ಡ್ ಮತ್ತು 4. ಯಾವುದೇ (ಯೂನಿವರ್ಸಲ್) ಸಿಮ್, ಬ್ಯಾಟರಿ, ಮೆಮೊರಿ ಕಾರ್ಡ್ ಸ್ಲಾಟ್ ಇರುವ ಪ್ಲಗ್-ಆ್ಯಂಡ್-ಪ್ಲೇ ಕೂಡ ಆಗಬಲ್ಲ ವೈಫೈ ಡಾಂಗಲ್.

ಇಂಟರ್ನೆಟ್ ಸಂಪರ್ಕಕ್ಕಾಗಿ ಮೋಡೆಮ್, ಕಂಪ್ಯೂಟರ್ ಆನ್ ಮಾಡುವುದು, ಆಫ್ ಮಾಡುವುದು ದೊಡ್ಡ ಕಿರಿಕಿರಿ. ಕರೆಂಟ್ ಹೋದಾಗಲಂತೂ ಮತ್ತಷ್ಟು ಸಮಸ್ಯೆ. ಬದಲಾಗಿ, ಪ್ಲಗ್‌ಗೆ ಒಂದು ಡಾಂಗಲ್ ಸಿಕ್ಕಿಸಿದರೆ, ಅದನ್ನೇ ವೈ-ಫೈ ಹಾಟ್‌ಸ್ಪಾಟ್ ಆಗಿಸಿ ಮೊಬೈಲ್, ಕಂಪ್ಯೂಟರ್, ಲ್ಯಾಪ್‌ಟಾಪ್ ಎಲ್ಲದಕ್ಕೂ ಸಂಪರ್ಕ ದೊರೆಯುವಂತಾದರೆ? ಒಂದು ಇಂಟರ್ನೆಟ್ ಸಂಪರ್ಕ ಪಡೆದುಕೊಂಡು ಅದನ್ನೇ ನೀವು ಹಾಗೂ ಮನೆಯವರಲ್ಲಿರುವ ಎಲ್ಲರ ಮೊಬೈಲ್/ಲ್ಯಾಪ್‌ಟಾಪ್/ಟ್ಯಾಬ್ಲೆಟ್ ಸಾಧನಗಳೂ ಬಳಸುವಂತಾದರೆ?

ಇದಕ್ಕೆ ನೆರವಿಗೆ ಬರುವುದೇ ಪ್ಲಗ್-ಆ್ಯಂಡ್-ಪ್ಲೇ ವೈಫೈ ಇಂಟರ್ನೆಟ್ ಡಾಂಗಲ್ ಅಥವಾ ಡೇಟಾ ಕಾರ್ಡ್. ಈ ಡಾಂಗಲ್ ಅನ್ನು ಅದರ ಜತೆಗೆ ಬರುವ ಅಡಾಪ್ಟರ್ ಮೂಲಕ ಕರೆಂಟ್ ಪ್ಲಗ್‌ಗೆ ಸಿಕ್ಕಿಸಿದರೆ ಸಾಕು, ಇಂಟರ್ನೆಟ್ ಸಂಪರ್ಕ ಆನ್ ಆಗುತ್ತದೆ ಮತ್ತು ವೈ-ಫೈ ಮೂಲಕ ಈ ಡಾಂಗಲ್‌ಗೆ ಕನಿಷ್ಠ ಐದು ಸಾಧನಗಳನ್ನು (ಸ್ಮಾರ್ಟ್‌ಫೋನ್, ಟ್ಯಾಬ್ಲೆಟ್, ಕಂಪ್ಯೂಟರ್ ಇತ್ಯಾದಿ) ಸಂಪರ್ಕಿಸಬಹುದು. ಇದಕ್ಕೆ ಪಾಸ್‌ವರ್ಡ್ ರಕ್ಷಣೆ ಇರುತ್ತದೆ. ಆದರೆ ಎಲ್ಲ ಸಾಧನಗಳಲ್ಲೂ ವೈ-ಫೈ ಸೌಲಭ್ಯ ಇರಬೇಕು. ಈ ಡೇಟಾ ಕಾರ್ಡ್‌ಗೆ ಅಪರಿಮಿತ ಡೇಟಾ (ಅನ್‌ಲಿಮಿಟೆಡ್ ಇಂಟರ್ನೆಟ್) ಸೌಕರ್ಯವಿರುವ ಒಂದು ಸಿಮ್ ಕಾರ್ಡ್ ಅಳವಡಿಸಿದರಾಯಿತು. ಕೆಲವು ಡಾಂಗಲ್‌ಗಳಲ್ಲಿ ರೀಚಾರ್ಜೆಬಲ್ ಬ್ಯಾಟರಿಯೂ ಇರುತ್ತದೆ. ಪವರ್ ಕಟ್ ಸಂದರ್ಭ ಸುಮಾರು ನಾಲ್ಕು ಗಂಟೆ ಇದು ಅನುಕೂಲ ಕಲ್ಪಿಸುತ್ತದೆ.

ಬಹುತೇಕ ಎಲ್ಲ ಮೊಬೈಲ್ ಆಪರೇಟರ್‌ಗಳೂ ಇಂತಹಾ ವೈ-ಫೈ ಡಾಂಗಲ್ ಮಾರುಕಟ್ಟೆಗೆ ಬಿಟ್ಟಿದ್ದಾರಾದರೂ, ನಿರ್ದಿಷ್ಟ ನೆಟ್‌ವರ್ಕ್‌ಗೆ ಸೀಮಿತವಾಗದೆ, ಹೆಚ್ಚುವರಿ ಅನುಕೂಲಗಳಿರುವ ಡಾಂಗಲ್ ನೀವು ಖರೀದಿಸಬೇಕೆಂದರೆ, ಅಂಗಡಿಯಾತನಲ್ಲಿ ನೀವು ಕೇಳಬೇಕಾದ ವಿಷಯಗಳು – ವೈ-ಫೈ ಹಾಟ್‌ಸ್ಪಾಟ್, ರೀಚಾರ್ಜೆಬಲ್ ಬ್ಯಾಟರಿ, ಮೆಮೊರಿ ಕಾರ್ಡ್ ಸ್ಲಾಟ್, ಯೂನಿವರ್ಸಲ್ ಡಾಂಗಲ್ (ಇದರಲ್ಲಿ ಯಾವುದೇ ಕಂಪನಿಯ ಸಿಮ್ ಕಾರ್ಡ್ ಹಾಕಬಹುದು). ಹ್ಯುವೈ (Huawei), ಬೀಟೆಲ್, ಇಂಟೆಕ್ಸ್, ಅಲ್ಕಾಟೆಲ್, ಡಿ-ಲಿಂಕ್ ಮುಂತಾದ ಕಂಪನಿಗಳ ಡೇಟಾ ಕಾರ್ಡ್‌ಗಳನ್ನು ಪರಿಗಣಿಸಬಹುದು. 3-4 ಸಾವಿರ ರೂ. ಆಸುಪಾಸಿನಲ್ಲಿ ಈ ಸೌಕರ್ಯಗಳಿರುವ ಡಾಂಗಲ್ ಸಿಗುತ್ತದೆ.

ಹಳೆಯ ಸ್ಮಾರ್ಟ್‌ಫೋನ್ ಇದೆಯೇ? ಅದೇ ಸಾಕು: ನಿಮ್ಮಲ್ಲಿ ಹಳೆಯ ಸ್ಮಾರ್ಟ್‌ಫೋನ್ ಇದ್ದರೆ ಅದನ್ನೂ ವೈಫೈ ಹಾಟ್‌ಸ್ಪಾಟ್ ಆಗಿ ಬಳಸಿ ಸದುಪಯೋಗ ಮಾಡಿಕೊಳ್ಳಬಹುದು. ಅದರಲ್ಲಿರುವ ಟಿದರಿಂಗ್ ಆ್ಯಂಡ್ ಹಾಟ್‌ಸ್ಪಾಟ್ ಎಂಬ ಸೌಕರ್ಯವನ್ನು ಉಪಯೋಗಿಸಿಕೊಳ್ಳಬೇಕು. ಆ ಮೊಬೈಲಿಗೊಂದು ಅನ್‌ಲಿಮಿಟೆಡ್ ಇಂಟರ್ನೆಟ್ ಪ್ಯಾಕ್ ಹಾಕಿಸಿಕೊಂಡರೆ ಸಾಕು. ಅದರ ಸಂಪರ್ಕವನ್ನೇ ವೈಫೈ ಮೂಲಕ ಬೇರೆ 4-5 ಸಾಧನಗಳಿಗೆ ಹಂಚಬಹುದು.

ಇನ್ನು, ಈಗಾಗಲೇ ಬ್ರಾಡ್‌ಬ್ಯಾಂಡ್ ಸಂಪರ್ಕ ಪಡೆದುಕೊಂಡವರು ಕೂಡ ವೈಫೈ ಮೂಲಕ ವಿವಿಧ ಸಾಧನಗಳನ್ನು ಸಂಪರ್ಕಿಸಿಕೊಳ್ಳಬಹುದು. ಇದಕ್ಕಾಗಿಯೇ ಮೋಡೆಮ್‌ಗೆ ಅಳವಡಿಸುವ ಮತ್ತು ಬೇರೆ ಡೇಟಾ ಕಾರ್ಡನ್ನೂ ಅಳವಡಿಸಬಹುದಾದ ವೈಫೈ ರೌಟರ್‌ಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ.

ಟೆಕ್ ಟಾನಿಕ್
ಆನ್‌ಲೈನ್‌ನಲ್ಲಿರುವಾಗ ಬುದ್ಧಿಮತ್ತೆ ಹೆಚ್ಚಿಸಿಕೊಳ್ಳಿ:
ಫೇಸ್‌ಬುಕ್, ಟ್ವಿಟರ್ ಮತ್ತು ಮೆಸೇಜಿಂಗ್ ಮುಂತಾದ ಇಂಟರ್ನೆಟ್ ಜಮಾನದಲ್ಲಿ ಹಾಗೂ ಎಲ್ಲದಕ್ಕೂ ಗೂಗಲ್ ಇದೆ ಎಂಬ ಭರವಸೆಯ ನಡುವೆ ನಮ್ಮ ಐಕ್ಯೂ ಅಂದರೆ ಬೌದ್ಧಿಕ ಕೌಶಲ್ಯ ಅಥವಾ ಜಾಣ್ಮೆ ತುಕ್ಕು ಹಿಡಿಯುತ್ತಿದೆ ಎಂಬ ಮಾತುಗಳನ್ನಿಂದು ಕೇಳುತ್ತಿದ್ದೇವೆ. ಮೆದುಳಿಗೆ ಕೆಲಸ ಕೊಟ್ಟರೆ ಮಾತ್ರ ಅದು ಹರಿತವಾಗಿರುತ್ತದೆ. ಹೀಗಾಗಿ ಇಂಟರ್ನೆಟ್‌ನಲ್ಲಿರುವಾಗ ಸಮಯ ಮಾಡಿಕೊಂಡು ಈ ತಾಣಕ್ಕೆ ಭೇಟಿ ನೀಡಿದರೆ, ಬುದ್ಧಿಮತ್ತೆಯನ್ನು ಒರೆಗೆ ಹಚ್ಚಬಹುದು. ಮಕ್ಕಳಿಗೆ ಅತ್ಯಂತ ಸೂಕ್ತ ತಾಣವಿದು. ದೊಡ್ಡವರಿಗೂ ಕೂಡ. https://memorado.com/

ಜಿಮೇಲ್‌ನಲ್ಲಿ ಬೇಡವಾದ ಮೇಲ್‌ಗಳನ್ನು ನಿವಾರಿಸಿ, ಸ್ಥಳಾವಕಾಶ ಹೆಚ್ಚಿಸಿಕೊಳ್ಳಿ

ಮಾಹಿತಿ@ತಂತ್ರಜ್ಞಾನ ವಿಜಯ ಕರ್ನಾಟಕ ಅಂಕಣ 94: ಸೆಪ್ಟೆಂಬರ್ 22, 2014
Avinash Columnಇತ್ತೀಚಿನ ದಿನಗಳಲ್ಲಿ ಆನ್‌ಲೈನ್ ವ್ಯವಹಾರಗಳು ಹೆಚ್ಚಾಗುತ್ತಿವೆ. ಫೇಸ್‌ಬುಕ್, ಟ್ವಿಟರ್ ಮಾತ್ರವಲ್ಲದೆ ಹಲವಾರು ಚಿತ್ರವಿಚಿತ್ರ ಸೇವೆಗಳಿಗೆ, ಆ್ಯಪ್‌ಗಳಿಗೆ ನಮಗರಿವಿದ್ದೋ, ಇಲ್ಲದೆಯೋ ನಾವು ನಮ್ಮ ಇಮೇಲ್ ಖಾತೆಯನ್ನು ಬಳಸಿಯೇ ಲಾಗಿನ್/ಸೈನ್ ಅಪ್ ಆಗಿಬಿಡುತ್ತೇವೆ. ಈ ಕಾರಣದಿಂದಾಗಿ, ನಮ್ಮ ಇಮೇಲ್ ವಿಳಾಸ ಬಟಾಬಯಲಾಗುತ್ತಿದೆ. ಇದರಿಂದಾಗಿ ಸ್ಪ್ಯಾಮ್ (ಅನಗತ್ಯ, ಮಾರುಕಟ್ಟೆ ಉದ್ದೇಶಕ್ಕಾಗಿಯೇ ಇರುವ) ಸಂದೇಶಗಳ ಹಾವಳಿಯೂ ಜಾಸ್ತಿಯಾಗುತ್ತಿದೆ.

ಇದಲ್ಲದೆ, ಇಮೇಲ್ ಮೂಲಕ ಫೋಟೋ, ವೀಡಿಯೋ ಅಟ್ಯಾಚ್ಮೆಂಟ್ ಕಳುಹಿಸುವುದು ಮತ್ತು ಸ್ವೀಕರಿಸುವ ಪ್ರಕ್ರಿಯೆಯೂ ಜಾಸ್ತಿಯಾಗತೊಡಗಿದೆ. ಇದರಿಂದಾಗಿ ಉಚಿತವಾಗಿ ಇಮೇಲ್ ಸೇವೆ ನೀಡುತ್ತಿರುವವರೆಲ್ಲರೂ ಈಗಾಗಲೇ ಇದರ ಮಿತಿಯನ್ನು 15 ಜಿಬಿ (ಗಿಗಾಬೈಟ್)ಗೆ ಏರಿಸಿದ್ದಾರೆ. ಹಲವಾರು ವರ್ಷಗಳಿಂದ ಇಮೇಲ್ ಬಳಸುತ್ತಿರುವವರಲ್ಲಿ ಇತ್ತೀಚೆಗೆ ಅವರ 15 ಜಿಬಿ ಕೋಟಾ ಬೇಗಬೇಗನೇ ತುಂಬುತ್ತಿರುವಂತೆ ಅನ್ನಿಸಿರಬಹುದು.

ಹೊಸಬರು ಹಾಗೂ ಹಳೆಯ ಬಳಕೆದಾರರು ಈಗಲೇ ಇಮೇಲ್ ಖಾತೆಯನ್ನು ಕ್ಲೀನ್ ಆಗಿರಿಸಿಕೊಂಡರೆ, ಇರುವ ಸ್ಥಳಾವಕಾಶವನ್ನು ಸಮರ್ಥವಾಗಿ ಬಳಸಿಕೊಳ್ಳಬಹುದು. ಜಿಮೇಲ್‌ನಲ್ಲಿ ಸಾಕಷ್ಟು ಫಿಲ್ಟರ್‌ಗಳು ಲಭ್ಯ ಇರುವುದರಿಂದಾಗಿ ಹಳೆಯ ಮತ್ತು ಅನಗತ್ಯ ಇಮೇಲ್‌ಗಳನ್ನು ಅಳಿಸಿಹಾಕಬಹುದು; ಸ್ಟೋರೇಜ್ ಜಾಗ ಮುಕ್ತವಾಗಿಸಬಹುದು. ಇದು ತೀರಾ ಕಷ್ಟದ ಕೆಲಸ ಏನಲ್ಲ, ಅದಕ್ಕಾಗಿಯೇ ಇರುವ ಕೆಲವೊಂದು ಶಾರ್ಟ್‌ಕಟ್ ವಿಧಾನಗಳ ಮೂಲಕ ಯಾರು ಕೂಡ ಕ್ಲೀನ್ ಮಾಡಿಕೊಳ್ಳಬಹುದು.

ಜಿಮೇಲ್ ಎಂಬುದು ಸರ್ಚ್ ಎಂಜಿನ್ ದೈತ್ಯ ಕಂಪನಿ ಗೂಗಲ್‌ನದ್ದೇ ಆಗಿರುವುದರಿಂದ, ಅದೇ ಸರ್ಚ್ ಎಂಜಿನ್ ಮೂಲಕ ನಿರ್ದಿಷ್ಟ ಇಮೇಲ್‌ಗಳನ್ನು ಫಿಲ್ಟರ್ ಮಾಡಿ, ನಮಗೆ ಬೇಕಾದ್ದನ್ನು ಮಾತ್ರ ಅಳಿಸಲು ಇಲ್ಲಿ ಕೆಲವು ಸಲಹೆಗಳಿವೆ.

ಮೊದಲನೆಯದಾಗಿ ಅತಿದೊಡ್ಡ ಗಾತ್ರದ, ಅಂದರೆ ಹೆಚ್ಚು ಜಾಗ ಆಕ್ರಮಿಸುವ ಫೋಟೋ, ವೀಡಿಯೋ ಅಟ್ಯಾಚ್‌ಮೆಂಟುಗಳಿರುವ ಮೇಲ್‌ಗಳನ್ನು ಅಳಿಸಬೇಕು. ಇಂಥವನ್ನು ಹುಡುಕಲು ಒಂದು ಫಿಲ್ಟರ್ ಕಮಾಂಡ್ ಬಳಸಿದರಾಯಿತು. ಅದಕ್ಕಾಗಿ ಹೀಗೆ ಮಾಡಿ: ಜಿಮೇಲ್ ಲಾಗಿನ್ ಆದ ಬಳಿಕ, ಮೇಲ್ಭಾಗದಲ್ಲಿ ಸರ್ಚ್ ಬಾರ್ (ಹುಡುಕಾಡಲು ಇರುವ ಪಟ್ಟಿ) ಕಾಣಿಸುತ್ತದೆ. ಅದರಲ್ಲಿ Larger:10M ಎಂದು ಟೈಪ್ ಮಾಡಿ, ಹುಡುಕುವ ಚಿಹ್ನೆ (ಭೂತಕನ್ನಡಿ ಚಿತ್ರ) ಕ್ಲಿಕ್ ಮಾಡಿಬಿಡಿ. ಅಂದರೆ 10 ಎಂಬಿಗಿಂತ ಹೆಚ್ಚು ಗಾತ್ರ ಇರುವ ಇಮೇಲ್‌ಗಳೆಲ್ಲವೂ ಕಾಣಿಸುತ್ತವೆ. 10M ಎಂಬುದರ ಬದಲು, ವಿಭಿನ್ನ ಗಾತ್ರದ ಫೈಲ್‌ಗಳಿಗಾಗಿ ಹುಡುಕಾಡಿ ಅವನ್ನು ಡಿಲೀಟ್ ಮಾಡಬಹುದು. ಸರ್ಚ್ ಬಾರ್ ಕೆಳಭಾಗದಲ್ಲಿರುವ ಒಂದು ಬಾಕ್ಸ್ ಕ್ಲಿಕ್ ಮಾಡಿದರೆ, ಕಾಣಿಸುವ ಎಲ್ಲ ಮೇಲ್‌ಗಳನ್ನೂ ಏಕಕಾಲದಲ್ಲಿ ಸೆಲೆಕ್ಟ್ ಮಾಡಬಹುದು, ಎಲ್ಲವುಗಳ ಮೇಲೆ ಕಣ್ಣು ಹಾಯಿಸಿ, ನಿಮಗೆ ಬೇಕಾಗಿರುವ ಮೇಲ್‌ಗಳನ್ನು ಡೀಸೆಲೆಕ್ಟ್ ಮಾಡಿ (ಪ್ರತೀ ಇಮೇಲ್ ಎಡಭಾಗದಲ್ಲಿರುವ ಬಾಕ್ಸ್ ಕ್ಲಿಕ್ ಮಾಡಿದರಾಯಿತು), ಡಿಲೀಟ್ ಬಟನ್ ಒತ್ತಿ.

older_than:1y ಅಂತ ಸರ್ಚ್ ಬಾರ್‌ನಲ್ಲಿ ಹಾಕಿ ಎಂಟರ್ ಕೊಟ್ಟರೆ (ಅಥವಾ ಸರ್ಚ್ ಬಟನ್ ಕ್ಲಿಕ್ ಮಾಡಿದರೆ), 1 ವರ್ಷದ ಹಿಂದಿನ ಮೇಲ್‌ಗಳು ಕಾಣಿಸುತ್ತವೆ. ಬೇಕಿದ್ದರೆ ವರ್ಷದ ಸಂಖ್ಯೆಯನ್ನು ಬದಲಾಯಿಸಿಕೊಳ್ಳಬಹುದು. ಅದೇ ರೀತಿ ನಿರ್ದಿಷ್ಟ ದಿನಾಂಕದ, ಉದಾಹರಣೆಗೆ ಈ ವರ್ಷದ ಜನವರಿ 31ರ ಹಿಂದಿನ ಇಮೇಲ್‌ಗಳು ಬೇಡವೆಂದಾದರೆ, ಅವುಗಳನ್ನು ಹುಡುಕಲು Before:2014/01/31 ಅಂತ ಸರ್ಚ್‌ಬಾರ್‌ನಲ್ಲಿ ಹಾಕಿದರಾಯಿತು. ಇದು ಇಸವಿ/ತಿಂಗಳು/ದಿನಾಂಕ ಮಾದರಿಯಲ್ಲಿರುತ್ತದೆ. ಇದೇ ರೀತಿ, ಇಂತಿಷ್ಟು ವರ್ಷ ಹಿಂದಿನ ಮತ್ತು 1 ಎಂಬಿಗಿಂತ ಹೆಚ್ಚು ಗಾತ್ರವಿರುವ ಇಮೇಲ್‌ಗಳನ್ನು ಫಿಲ್ಟರ್ ಮಾಡಿ ಅಳಿಸಬೇಕೆಂದಾದರೆ, ಸರ್ಚ್ ಬಾರ್‌ನಲ್ಲಿ has:attachment larger:1M older_than:1y ಅಂತ ಟೈಪ್ ಮಾಡಿದರಾಯಿತು. ಸರ್ಚ್ ರಿಸಲ್ಟ್ ಬಂದ ಬಳಿಕ, ನೋಡಿ ಡಿಲೀಟ್ ಮಾಡಿಬಿಡಬಹುದು.

ನಿರ್ದಿಷ್ಟ ವ್ಯಕ್ತಿಯಿಂದ ಅಥವಾ ಸ್ಪ್ಯಾಮ್ ಇಮೇಲ್ ವಿಳಾಸದಿಂದ ಬಂದಿರುವ ಇಮೇಲ್‌ಗಳನ್ನು ಫಿಲ್ಟರ್ ಮಾಡಬೇಕಿದ್ದರೆ, ಸರ್ಚ್ ಬಾರ್‌ನಲ್ಲಿ ಆಯಾ ಆ ಇಮೇಲ್ ವಿಳಾಸ ನಮೂದಿಸಿದರಾಯಿತು. ಎಲ್ಲವೂ ಒಂದೇ ಕಡೆ ಸಿಗುತ್ತವೆ ಮತ್ತು ಏಕಕಾಲದಲ್ಲಿ ಡಿಲೀಟ್ ಮಾಡಬಹುದು. ಸರ್ಚ್ ಬಟನ್ ಸಮೀಪ, ತ್ರಿಕೋನಾಕೃತಿ ಐಕಾನ್ ಕ್ಲಿಕ್ ಮಾಡಿದರೆ, ಹುಡುಕಾಟಕ್ಕೆ ಮತ್ತಷ್ಟು ಆಯ್ಕೆಗಳನ್ನು ಸೇರಿಸಬಹುದು. ಟ್ರೈ ಮಾಡಿ ನೋಡಿ.

ಟೆಕ್ ಟಾನಿಕ್
ಆ್ಯಪ್‌ಗಳಿಗೆ ನಿರ್ಬಂಧ:
ಗೂಗಲ್ ಪ್ಲೇ ಸ್ಟೋರ್‌ನಲ್ಲಿ ನಿಮಗೆ ಬೇಕಾಗಿರುವ, ಬೇಡವಾಗಿರುವ ಆ್ಯಪ್‌ಗಳೆಲ್ಲವೂ ಧುತ್ತನೇ ಕಾಣಿಸಿಕೊಳ್ಳುತ್ತವೆ. ಆದರೆ ಯಾವ ರೀತಿಯ ಆ್ಯಪ್‌ಗಳು ಕಾಣಿಸಿಕೊಳ್ಳಬೇಕು ಎಂಬುದನ್ನು ನಿಮ್ಮ ಆಂಡ್ರಾಯ್ಡ್ ಫೋನ್ ಅಥವಾ ಟ್ಯಾಬ್ಲೆಟ್‌ನಲ್ಲಿ ನೀವೇ ನಿರ್ಬಂಧಿಸಬಹುದಾಗಿದೆ ಎಂಬುದು ಗೊತ್ತೇ? ಮಕ್ಕಳೇನಾದರೂ ನಿಮ್ಮ ಮೊಬೈಲ್ ತೆಗೆದುಕೊಂಡು ಪ್ಲೇ ಸ್ಟೋರ್‌ನಿಂದ ಯದ್ವಾ ತದ್ವಾ ಗೇಮ್‌ಗಳನ್ನು ಡೌನ್‌ಲೋಡ್ ಮಾಡಿಕೊಂಡರೆ? ಇದಕ್ಕಾಗಿ ಆ್ಯಪ್ ನಿರ್ಬಂಧಿಸಬೇಕಿದ್ದರೆ, ಗೂಗಲ್ ಪ್ಲೇ ಸ್ಟೋರ್ ಓಪನ್ ಮಾಡಿ, ಅದರ ಸೆಟ್ಟಿಂಗ್ಸ್ ಮೆನುವಿಗೆ ಹೋಗಿ, ಯೂಸರ್ ಕಂಟ್ರೋಲ್ಸ್ ಎಂಬಲ್ಲಿ ಕಂಟೆಂಟ್ ಫಿಲ್ಟರಿಂಗ್ ಎಂಬ ಆಯ್ಕೆಯೊಂದಿದೆ. ಕಡಿಮೆ ಮೆಚುರಿಟಿ ಉಳ್ಳವನ್ನು, ಹೆಚ್ಚು ಪ್ರಬುದ್ಧವಾಗಿರುವವುಗಳನ್ನು ಅಥವಾ ಎಲ್ಲ ಆ್ಯಪ್‌ಗಳನ್ನು ತೋರಿಸುವ ಆಯ್ಕೆ ಲಭ್ಯವಾಗುತ್ತದೆ. ಇದನ್ನು ಬದಲಾಯಿಸಬೇಕಿದ್ದರೆ ನೀವೇ ಆಯ್ಕೆ ಮಾಡಿಕೊಳ್ಳುವ ಒಂದು ಪಿನ್ ನಂಬರ್ ಹಾಕಬೇಕಾಗುತ್ತದೆ.

ಇಂಟರ್ನೆಟ್ ಇಲ್ಲದೆ ಗೂಗಲ್ ಮೇಲ್ ಉಪಯೋಗಿಸುವುದು

ವಿಜಯ ಕರ್ನಾಟಕ ಅಂಕಣ ಮಾಹಿತಿ@ತಂತ್ರಜ್ಞಾನ 91- ಸೆಪ್ಟೆಂಬರ್ 1, 2014
Avinash Column-1ಎಲ್ಲಾದರೂ ದೂರ ಅಂದರೆ ಇಂಟರ್ನೆಟ್ ಸಂಪರ್ಕವಿಲ್ಲದ ರಿಮೋಟ್ ಪ್ರದೇಶಕ್ಕೆ ಹೋಗಿರುತ್ತೀರಿ ಅಥವಾ ವಿಮಾನದಲ್ಲೋ, ರೈಲಿನಲ್ಲೋ ಪ್ರಯಾಣಿಸುತ್ತಿರುವಾಗ, ಪ್ರಯಾಣದ ಸಮಯವನ್ನು ಸದುಪಯೋಗ ಮಾಡಿಕೊಳ್ಳಬೇಕೆಂಬ ಕಾರಣಕ್ಕೆ, ಲ್ಯಾಪ್‌ಟಾಪ್ ಮೂಲಕ ಜಿಮೇಲ್‌ನಲ್ಲಿರುವ ಇಮೇಲ್‌ಗಳನ್ನು ಚೆಕ್ ಮಾಡಬೇಕು, ಅದರಲ್ಲಿನ ವಿವರಗಳನ್ನು ಓದಬೇಕು ಎಂದು ಅನ್ನಿಸುತ್ತಿದೆ. ಆದರೆ ಇಂಟರ್ನೆಟ್ ಇಲ್ಲದ ಚಿಂತೆ. ಹೀಗಿರುವಾಗ ಏನು ಮಾಡಬಹುದು? ಇಂಥವರಿಗಾಗಿಯೇ ಗೂಗಲ್‌ನ ಜಿಮೇಲ್ ತಂಡವು ಒಂದು ಆಯ್ಕೆಯನ್ನು ಒದಗಿಸಿದೆ. ಅದೇ ಆಫ್‌ಲೈನ್ ಜಿಮೇಲ್.

ಇದರ ಮೂಲಕ, ಇಂಟರ್ನೆಟ್ ಸಂಪರ್ಕವಿಲ್ಲದಿದ್ದರೂ ಕೂಡ ಈಗಾಗಲೇ ಇರುವ ಮೇಲ್‌ಗಳನ್ನು ಓದಬಹುದು ಮತ್ತು ಹೊಸದಾಗಿ ಮೇಲ್ ಬರೆಯಬೇಕಿದ್ದರೆ ಕಂಪೋಸ್ ಮಾಡಬಹುದು. ಇಂಟರ್ನೆಟ್ ಸಂಪರ್ಕ ನಿಧಾನವಾಗಿದ್ದರೂ ಕೂಡ ಆಫ್‌ಲೈನ್ ಜಿಮೇಲ್ ಉಪಯೋಗಕ್ಕೆ ಬರುತ್ತದೆ. ಮತ್ತೆ ಸಂಪರ್ಕ ದೊರೆತಾಗ, ನೀವು ಕಳುಹಿಸಿದ ಮೇಲ್‌ಗಳು ರವಾನೆಯಾಗುತ್ತವೆ.

ಇಂಟರ್ನೆಟ್ ಸಂಪರ್ಕವಿದ್ದರೆ ಆನ್‌ಲೈನ್ ಅಂತ ಅರ್ಥ. ಆಫ್‌ಲೈನ್‌ನಲ್ಲಿ ಇಮೇಲ್‌ಗಳನ್ನು ನೋಡಲು ಈಗಾಗಲೇ ಸಾಕಷ್ಟು ಥರ್ಡ್ ಪಾರ್ಟಿ ತಂತ್ರಾಂಶಗಳಿವೆ. ಉದಾಹರಣೆಗೆ, ಔಟ್‌ಲುಕ್, ಥಂಡರ್‌ಬರ್ಡ್ ಇತ್ಯಾದಿ ಇಮೇಲ್ ಪ್ರೋಗ್ರಾಂಗಳನ್ನು ಇನ್‌ಸ್ಟಾಲ್ ಮಾಡಿಕೊಳ್ಳಬೇಕಾಗುತ್ತದೆ. ಅದಿಲ್ಲದೆಯೇ, ಬರೇ ಒಂದು ಬ್ರೌಸರ್ ಪ್ಲಗ್-ಇನ್ (ಅಂದರೆ ಕಿರು ತಂತ್ರಾಂಶ) ಬಳಸಿದರೆ ಆಫ್‌ಲೈನ್ ಜಿಮೇಲ್ ಉಪಯೋಗಿಸಬಹುದಾಗಿದೆ.

ಅದಕ್ಕೆ ನೀವು ಮಾಡಬೇಕಾಗಿರುವುದಿಷ್ಟೆ. ಇಂಟರ್ನೆಟ್ ಸಂಪರ್ಕವಿರಲಿ. ಬಳಿಕ ಗೂಗಲ್ ಕ್ರೋಮ್ ಬ್ರೌಸರ್ ತೆರೆಯಿರಿ. ಅದರಲ್ಲಿ ಕೆಳ ಭಾಗದಲ್ಲಿ ಬಲ ಮೂಲೆಯಲ್ಲಿ ವೆಬ್ ಸ್ಟೋರ್ ಎಂದು ಬರೆದಿರುವುದನ್ನು ಕ್ಲಿಕ್ ಮಾಡಿ. ಆಗ ನಿಮಗೆ ವೈವಿಧ್ಯಮಯ ಆ್ಯಪ್‌ಗಳಿರುವ ಪುಟ ಗೋಚರಿಸುತ್ತದೆ. ಅಲ್ಲಿರುವ ಸರ್ಚ್ ಬಾರ್‌ನಲ್ಲಿ Gmail Offline ಅಂತ ಸರ್ಚ್ ಮಾಡಿ. ಅಲ್ಲಿ ನಿಮಗೆ ಅದರ ಆ್ಯಪ್ ದೊರೆಯುತ್ತದೆ. ನಿಮ್ಮ ಬ್ರೌಸರ್‌ಗೆ ಅಳವಡಿಸಿಕೊಳ್ಳಲು ಇರುವ ಬಟನ್ ಕ್ಲಿಕ್ ಮಾಡಿ. ಆ್ಯಪ್ ಸಿಗದೇ ಇದ್ದರೆ, http://bit.ly/GmailOfflline ಎಂಬಲ್ಲಿ ಹೋಗಿ. ಇನ್‌ಸ್ಟಾಲ್ ಮಾಡಿಕೊಳ್ಳಿ. ನಂತರ ಕ್ರೋಮ್ ಬ್ರೌಸರ್ ಓಪನ್ ಮಾಡಿ. ಒಂದೋ ಎಡ ಮೇಲ್ಭಾಗದ ಮೂಲೆಯಲ್ಲಿರುವ Apps ಎಂಬ ಬಣ್ಣಬಣ್ಣದ ಚೌಕಗಳಿರುವ ಬಟನ್ ಕ್ಲಿಕ್ ಮಾಡಿ ಅಥವಾ ಅಡ್ರೆಸ್ ಬಾರ್‌ನಲ್ಲಿ chrome://apps/ ಎಂಬ ಯುಆರ್‌ಎಲ್ ಟೈಪ್ ಮಾಡಿ ಎಂಟರ್ ಕೊಡಿ. ಆಗ ನಿಮಗೆ ಕ್ರೋಮ್ ಬ್ರೌಸರ್‌ನಲ್ಲಿ ಇನ್‌ಸ್ಟಾಲ್ ಆಗಿರುವ ಎಲ್ಲ ಆ್ಯಪ್‌ಗಳು, ಪ್ಲಗಿನ್‌ಗಳ ಬಟನ್‌ಗಳು ಗೋಚರಿಸುತ್ತವೆ. ಅಲ್ಲೇ Gmail Offline ಅಂತ ಇರೋದನ್ನು ಕ್ಲಿಕ್ ಮಾಡಿ. ಲಾಗಿನ್ ಆಗಿ. ನಿಮ್ಮ ಹಳೆಯ ಮೇಲ್‌ಗಳೆಲ್ಲವೂ ಒಂದು ಬಾರಿ ನಿಮ್ಮ ಕಂಪ್ಯೂಟರಿಗೆ ಡೌನ್‌ಲೋಡ್ ಆಗುತ್ತವೆ. ಪದೇ ಪದೇ ಹಳೆಯದೆಲ್ಲವೂ ಡೌನ್‌ಲೋಡ್ ಆಗುವುದಿಲ್ಲ.

ಇಷ್ಟಾದರೆ ಆಯಿತು. ಇಂಟರ್ನೆಟ್ ಸಂಪರ್ಕವಿಲ್ಲದಿದ್ದರೂ ಕೂಡ ನೀವು ಆಫ್‌ಲೈನ್ ಜಿಮೇಲ್ ಓಪನ್ ಮಾಡಿಕೊಂಡು, ಬೇಕಾದ ಕೆಲಸಗಳನ್ನು ಮಾಡಬಹುದು. ಮತ್ತೆ ಆನ್‌ಲೈನ್ ಆದಾಗ, ಅಂದರೆ ಇಂಟರ್ನೆಟ್ ಸಂಪರ್ಕ ದೊರೆತಾಗ, ಈ ಫೋಲ್ಡರ್‌ನಲ್ಲಿರುವ ಎಲ್ಲ ಮೇಲ್‌ಗಳೂ ಸಿಂಕ್ರನೈಸ್ ಆಗುತ್ತವೆ. ಆಫ್‌ಲೈನ್ ಜಿಮೇಲ್‌ನಲ್ಲಿ, ಒಂದು ವಾರ ಅಥವಾ ಒಂದು ತಿಂಗಳ ಮೇಲ್‌ಗಳು ಮಾತ್ರ ಲಭ್ಯವಾಗಲಿ ಅಂತ ಆಯ್ಕೆ ಮಾಡಿಕೊಳ್ಳಲೂಬಹುದು. ಸೆಟ್ಟಿಂಗ್ಸ್ ಬಟನ್ ಕ್ಲಿಕ್ ಮಾಡಿದರೆ, Download mails from past week, 2 weeks, month ಅನ್ನುವ ಆಯ್ಕೆಗಳಿವೆ. ಈ ರೀತಿ ಮಾಡುವುದರಿಂದ, ಡೇಟಾ ವೆಚ್ಚವನ್ನೂ, ಕಂಪ್ಯೂಟರಿನಲ್ಲಿರುವ ಮೆಮೊರಿ ಸ್ಪೇಸ್ ಅನ್ನೂ ಉಳಿಸಬಹುದಾಗಿದೆ.

ಆದರೆ ನೆನಪಿಟ್ಟುಕೊಳ್ಳಲೇಬೇಕಾದ ವಿಷಯ ಎಂದರೆ, ನಿಮ್ಮ ಸ್ವಂತ ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್ ಆಗಿದ್ದರೆ ಮಾತ್ರ ಆಫ್‌ಲೈನ್ ಜಿಮೇಲ್ ಬಳಸಿ. ಬೇರೆಯವರ ಕಂಪ್ಯೂಟರ್/ಲ್ಯಾಪ್‌ಟಾಪಲ್ಲಿ ಬಳಸಬೇಡಿ. ಯಾಕೆಂದರೆ, ಈ ಸಂದೇಶಗಳು ಡೌನ್‌ಲೋಡ್ ಆಗುವುದು ಆಯಾ ಕಂಪ್ಯೂಟರುಗಳಿಗೆ. ಹೀಗಾಗಿ, ಬೇರೆಯವರು ಈ ಕಂಪ್ಯೂಟರ್ ಬಳಸುತ್ತಾರೆಂದಾದರೆ, ಅವರು ನಿಮ್ಮ ಇಮೇಲ್ ಸಂದೇಶಗಳನ್ನು ಓದುವ ಸಾಧ್ಯತೆ ಇರುತ್ತದೆ. ಹಾಗಾಗದಂತೆ ನೋಡಿಕೊಳ್ಳಿ.

ಟೆಕ್ ಟಾನಿಕ್
ಕ್ಲೋಸ್ ಮಾಡಿದ ಬ್ರೌಸರ್ ತೆರೆಯಲು

ಹೆಚ್ಚಿನವರು ಇಂಟರ್ನೆಟ್ ಜಾಲಾಡಲು ವೇಗವಾಗಿ ಕಾರ್ಯಾಚರಿಸುತ್ತದೆ ಎಂಬ ಕಾರಣಕ್ಕೆ ಗೂಗಲ್‌ನ ಕ್ರೋಮ್ ಅಥವಾ ಫೈರ್‌ಫಾಕ್ಸ್ ಬ್ರೌಸರನ್ನು ಇನ್‌ಸ್ಟಾಲ್ ಮಾಡಿಕೊಂಡು ಬಳಸುತ್ತಾರೆ. ಏಕ ಕಾಲಕ್ಕೆ ಹಲವು ವೆಬ್ ಪುಟಗಳನ್ನು ತೆರೆದಿಡಲು ಇಲ್ಲಿರುವ ಟ್ಯಾಬ್‌ಗಳು ನೆರವಾಗುತ್ತವೆ. ಆದರೆ, ಆಕಸ್ಮಿಕವಾಗಿ ಒಂದು ಟ್ಯಾಬ್ ಅನ್ನು ಕ್ಲೋಸ್ ಮಾಡಿದರೆ, ಅದರಲ್ಲಿ ನೋಡಲು ಏನೋ ಬಾಕಿಯಾಗಿದೆ ಎಂದುಕೊಂಡರೆ ಆ ವೆಬ್ ಪುಟವನ್ನು ಮರಳಿ ನೋಡುವುದು ಹೇಗೆ? ಕಂಟ್ರೋಲ್ ಶಿಫ್ಟ್ ಟಿ (Ctrl+Shift+t) ಅಂತ ಒತ್ತಿದರೆ, ಕೊನೆಯದಾಗಿ ಕ್ಲೋಸ್ ಮಾಡಿದ ಟ್ಯಾಬ್‌ನಲ್ಲಿದ್ದ ವೆಬ್ ಪುಟ ಪುನಃ ತೆರೆದುಕೊಳ್ಳುತ್ತದೆ. ಮತ್ತೊಂದು ಸಲ ಕಂಟ್ರೋಲ್ ಶಿಫ್ಟ್ ಟಿ ಒತ್ತಿದರೆ, ಅದಕ್ಕೂ ಹಿಂದೆ ಕ್ಲೋಸ್ ಮಾಡಿದ್ದ ವೆಬ್ ಪುಟ ಓಪನ್ ಆಗುತ್ತದೆ. ಈ ಕಮಾಂಡ್ ಉಪಯೋಗಿಸದಿದ್ದರೆ, ಹಿಸ್ಟರಿ ಎಂಬಲ್ಲಿ ಹೋಗಿ, ಈಗಷ್ಟೇ ಕ್ಲೋಸ್ ಮಾಡಿದ ಟ್ಯಾಬ್ ಯಾವುದು ಅಂತೆಲ್ಲಾ ಹುಡುಕಬಹುದು. ಆದರೆ ಇದಕ್ಕೆ ತಗುಲುವ ಸಮಯವು ಈ ಶಾರ್ಟ್‌ಕಟ್ ಮೂಲಕ ಉಳಿತಾಯವಾಗುತ್ತದೆ.