ಜನ ಸಾಮಾನ್ಯರತ್ತ ತಂತ್ರಜ್ಞಾನ – Gadget-Technology Info Towards Common Man

Posts tagged ‘Internet’

‌ವೈಫೈ ಡೇಟಾ ಕಾರ್ಡ್: ಒಂದೇ ಸಿಮ್‌, ಹಲವು ಸಾಧನಗಳಿಗೆ ಇಂಟರ್ನೆಟ್‌

ಮಾಹಿತಿ@ತಂತ್ರಜ್ಞಾನ ಅಂಕಣ – 96: ಅವಿನಾಶ್ ಬಿ. (ವಿಜಯ ಕರ್ನಾಟಕ, ಅಕ್ಟೋಬರ್ 06, 2014)

ಅಂತರ್ಜಾಲ ಈಗ ಬದುಕಿನ ಅವಿಭಾಜ್ಯ ಅಂಗವಾಗಿರುವ ಕಾರಣಕ್ಕೆ ಹೆಚ್ಚಾಗಿ ಮನೆಗಳಲ್ಲಿ, ಕಚೇರಿಗಳಲ್ಲಿ ಬ್ರಾಡ್‌ಬ್ಯಾಂಡ್ ಇಂಟರ್ನೆಟ್ ಸಂಪರ್ಕ ಇರುತ್ತದೆ. ಮನೆಯಲ್ಲಾದರೆ ಅದಕ್ಕೆ ವೈರ್‌ಗಳು, ಕೇಬಲ್‌ಗಳ ಕಿರಿಕಿರಿ. ಹೀಗಾಗಿಯೇ ಪುಟ್ಟದಾದ ಇಂಟರ್ನೆಟ್ ಡಾಂಗಲ್‌ಗಳು ಎಂದು ಕರೆಯಲಾಗುವ, ಎಲ್ಲಿ ಬೇಕಾದರೂ ಹೊತ್ತೊಯ್ಯಬಹುದಾದ ಯುಎಸ್‌ಬಿ ಡೇಟಾ ಕಾರ್ಡ್‌ಗಳು ಜನಪ್ರಿಯವಾಗಿವೆ. ಈ ನಿಟ್ಟಿನಲ್ಲಿ ಬಿಎಸ್ಸೆನ್ನೆಲ್, ಏರ್‌ಟೆಲ್, ವೊಡಾಫೋನ್, ಟಾಟಾ ಡೊಕೊಮೊ, ರಿಲಯನ್ಸ್, ಎಂಟಿಎಸ್, ಐಡಿಯಾ, ಏರ್‌ಸೆಲ್ ಮುಂತಾದ ಎಲ್ಲ ಮೊಬೈಲ್ ಆಪರೇಟರ್ ಕಂಪನಿಗಳೂ ತಮ್ಮದೇ ಡಾಂಗಲ್‌ಗಳನ್ನು ಮಾರುಕಟ್ಟೆಗಿಳಿಸಿವೆ. ಅವುಗಳಲ್ಲಿ ಹೊಸ ಟ್ರೆಂಡ್ ಎಂದರೆ ಪ್ಲಗ್-ಆ್ಯಂಡ್-ಪ್ಲೇ ವ್ಯವಸ್ಥೆಯ ವೈ-ಫೈ ಡಾಂಗಲ್‌ಗಳು ಕಮ್ ರೌಟರ್‌ಗಳು.

ಇಂತಹಾ ಉಪಯುಕ್ತ ವೈಫೈ ತಂತ್ರಜ್ಞಾನದ ಬಗ್ಗೆ ಅರಿವಿಲ್ಲದವರಿಗೆ, ವಿಶೇಷವಾಗಿ ಗ್ರಾಮೀಣ ಭಾಗದವರಿಗಾಗಿ ಈ ಸಲಹೆ.

ಮುಖ್ಯವಾಗಿ ನಾಲ್ಕು ವಿಧದ ವೈ-ಫೈ ಡಾಂಗಲ್‌ಗಳಿವೆ. 1. ಸಿಮ್ ಆಧಾರಿತ ವೈಫೈ ಡಾಂಗಲ್, 2. ಯುಎಸ್‌ಬಿ/ಡೇಟಾ ಕಾರ್ಡ್ ಆಧಾರಿತ ವೈಫೈ ಸಾಧನ, 3. ವೈಫೈ ಹಾಟ್‌ಸ್ಪಾಟ್ ಅವಕಾಶವಿರುವ ಯುಎಸ್‌ಬಿ ಡೇಟಾ ಕಾರ್ಡ್ ಮತ್ತು 4. ಯಾವುದೇ (ಯೂನಿವರ್ಸಲ್) ಸಿಮ್, ಬ್ಯಾಟರಿ, ಮೆಮೊರಿ ಕಾರ್ಡ್ ಸ್ಲಾಟ್ ಇರುವ ಪ್ಲಗ್-ಆ್ಯಂಡ್-ಪ್ಲೇ ಕೂಡ ಆಗಬಲ್ಲ ವೈಫೈ ಡಾಂಗಲ್.

ಇಂಟರ್ನೆಟ್ ಸಂಪರ್ಕಕ್ಕಾಗಿ ಮೋಡೆಮ್, ಕಂಪ್ಯೂಟರ್ ಆನ್ ಮಾಡುವುದು, ಆಫ್ ಮಾಡುವುದು ದೊಡ್ಡ ಕಿರಿಕಿರಿ. ಕರೆಂಟ್ ಹೋದಾಗಲಂತೂ ಮತ್ತಷ್ಟು ಸಮಸ್ಯೆ. ಬದಲಾಗಿ, ಪ್ಲಗ್‌ಗೆ ಒಂದು ಡಾಂಗಲ್ ಸಿಕ್ಕಿಸಿದರೆ, ಅದನ್ನೇ ವೈ-ಫೈ ಹಾಟ್‌ಸ್ಪಾಟ್ ಆಗಿಸಿ ಮೊಬೈಲ್, ಕಂಪ್ಯೂಟರ್, ಲ್ಯಾಪ್‌ಟಾಪ್ ಎಲ್ಲದಕ್ಕೂ ಸಂಪರ್ಕ ದೊರೆಯುವಂತಾದರೆ? ಒಂದು ಇಂಟರ್ನೆಟ್ ಸಂಪರ್ಕ ಪಡೆದುಕೊಂಡು ಅದನ್ನೇ ನೀವು ಹಾಗೂ ಮನೆಯವರಲ್ಲಿರುವ ಎಲ್ಲರ ಮೊಬೈಲ್/ಲ್ಯಾಪ್‌ಟಾಪ್/ಟ್ಯಾಬ್ಲೆಟ್ ಸಾಧನಗಳೂ ಬಳಸುವಂತಾದರೆ?

ಇದಕ್ಕೆ ನೆರವಿಗೆ ಬರುವುದೇ ಪ್ಲಗ್-ಆ್ಯಂಡ್-ಪ್ಲೇ ವೈಫೈ ಇಂಟರ್ನೆಟ್ ಡಾಂಗಲ್ ಅಥವಾ ಡೇಟಾ ಕಾರ್ಡ್. ಈ ಡಾಂಗಲ್ ಅನ್ನು ಅದರ ಜತೆಗೆ ಬರುವ ಅಡಾಪ್ಟರ್ ಮೂಲಕ ಕರೆಂಟ್ ಪ್ಲಗ್‌ಗೆ ಸಿಕ್ಕಿಸಿದರೆ ಸಾಕು, ಇಂಟರ್ನೆಟ್ ಸಂಪರ್ಕ ಆನ್ ಆಗುತ್ತದೆ ಮತ್ತು ವೈ-ಫೈ ಮೂಲಕ ಈ ಡಾಂಗಲ್‌ಗೆ ಕನಿಷ್ಠ ಐದು ಸಾಧನಗಳನ್ನು (ಸ್ಮಾರ್ಟ್‌ಫೋನ್, ಟ್ಯಾಬ್ಲೆಟ್, ಕಂಪ್ಯೂಟರ್ ಇತ್ಯಾದಿ) ಸಂಪರ್ಕಿಸಬಹುದು. ಇದಕ್ಕೆ ಪಾಸ್‌ವರ್ಡ್ ರಕ್ಷಣೆ ಇರುತ್ತದೆ. ಆದರೆ ಎಲ್ಲ ಸಾಧನಗಳಲ್ಲೂ ವೈ-ಫೈ ಸೌಲಭ್ಯ ಇರಬೇಕು. ಈ ಡೇಟಾ ಕಾರ್ಡ್‌ಗೆ ಅಪರಿಮಿತ ಡೇಟಾ (ಅನ್‌ಲಿಮಿಟೆಡ್ ಇಂಟರ್ನೆಟ್) ಸೌಕರ್ಯವಿರುವ ಒಂದು ಸಿಮ್ ಕಾರ್ಡ್ ಅಳವಡಿಸಿದರಾಯಿತು. ಕೆಲವು ಡಾಂಗಲ್‌ಗಳಲ್ಲಿ ರೀಚಾರ್ಜೆಬಲ್ ಬ್ಯಾಟರಿಯೂ ಇರುತ್ತದೆ. ಪವರ್ ಕಟ್ ಸಂದರ್ಭ ಸುಮಾರು ನಾಲ್ಕು ಗಂಟೆ ಇದು ಅನುಕೂಲ ಕಲ್ಪಿಸುತ್ತದೆ.

ಬಹುತೇಕ ಎಲ್ಲ ಮೊಬೈಲ್ ಆಪರೇಟರ್‌ಗಳೂ ಇಂತಹಾ ವೈ-ಫೈ ಡಾಂಗಲ್ ಮಾರುಕಟ್ಟೆಗೆ ಬಿಟ್ಟಿದ್ದಾರಾದರೂ, ನಿರ್ದಿಷ್ಟ ನೆಟ್‌ವರ್ಕ್‌ಗೆ ಸೀಮಿತವಾಗದೆ, ಹೆಚ್ಚುವರಿ ಅನುಕೂಲಗಳಿರುವ ಡಾಂಗಲ್ ನೀವು ಖರೀದಿಸಬೇಕೆಂದರೆ, ಅಂಗಡಿಯಾತನಲ್ಲಿ ನೀವು ಕೇಳಬೇಕಾದ ವಿಷಯಗಳು – ವೈ-ಫೈ ಹಾಟ್‌ಸ್ಪಾಟ್, ರೀಚಾರ್ಜೆಬಲ್ ಬ್ಯಾಟರಿ, ಮೆಮೊರಿ ಕಾರ್ಡ್ ಸ್ಲಾಟ್, ಯೂನಿವರ್ಸಲ್ ಡಾಂಗಲ್ (ಇದರಲ್ಲಿ ಯಾವುದೇ ಕಂಪನಿಯ ಸಿಮ್ ಕಾರ್ಡ್ ಹಾಕಬಹುದು). ಹ್ಯುವೈ (Huawei), ಬೀಟೆಲ್, ಇಂಟೆಕ್ಸ್, ಅಲ್ಕಾಟೆಲ್, ಡಿ-ಲಿಂಕ್ ಮುಂತಾದ ಕಂಪನಿಗಳ ಡೇಟಾ ಕಾರ್ಡ್‌ಗಳನ್ನು ಪರಿಗಣಿಸಬಹುದು. 3-4 ಸಾವಿರ ರೂ. ಆಸುಪಾಸಿನಲ್ಲಿ ಈ ಸೌಕರ್ಯಗಳಿರುವ ಡಾಂಗಲ್ ಸಿಗುತ್ತದೆ.

ಹಳೆಯ ಸ್ಮಾರ್ಟ್‌ಫೋನ್ ಇದೆಯೇ? ಅದೇ ಸಾಕು: ನಿಮ್ಮಲ್ಲಿ ಹಳೆಯ ಸ್ಮಾರ್ಟ್‌ಫೋನ್ ಇದ್ದರೆ ಅದನ್ನೂ ವೈಫೈ ಹಾಟ್‌ಸ್ಪಾಟ್ ಆಗಿ ಬಳಸಿ ಸದುಪಯೋಗ ಮಾಡಿಕೊಳ್ಳಬಹುದು. ಅದರಲ್ಲಿರುವ ಟಿದರಿಂಗ್ ಆ್ಯಂಡ್ ಹಾಟ್‌ಸ್ಪಾಟ್ ಎಂಬ ಸೌಕರ್ಯವನ್ನು ಉಪಯೋಗಿಸಿಕೊಳ್ಳಬೇಕು. ಆ ಮೊಬೈಲಿಗೊಂದು ಅನ್‌ಲಿಮಿಟೆಡ್ ಇಂಟರ್ನೆಟ್ ಪ್ಯಾಕ್ ಹಾಕಿಸಿಕೊಂಡರೆ ಸಾಕು. ಅದರ ಸಂಪರ್ಕವನ್ನೇ ವೈಫೈ ಮೂಲಕ ಬೇರೆ 4-5 ಸಾಧನಗಳಿಗೆ ಹಂಚಬಹುದು.

ಇನ್ನು, ಈಗಾಗಲೇ ಬ್ರಾಡ್‌ಬ್ಯಾಂಡ್ ಸಂಪರ್ಕ ಪಡೆದುಕೊಂಡವರು ಕೂಡ ವೈಫೈ ಮೂಲಕ ವಿವಿಧ ಸಾಧನಗಳನ್ನು ಸಂಪರ್ಕಿಸಿಕೊಳ್ಳಬಹುದು. ಇದಕ್ಕಾಗಿಯೇ ಮೋಡೆಮ್‌ಗೆ ಅಳವಡಿಸುವ ಮತ್ತು ಬೇರೆ ಡೇಟಾ ಕಾರ್ಡನ್ನೂ ಅಳವಡಿಸಬಹುದಾದ ವೈಫೈ ರೌಟರ್‌ಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ.

ಟೆಕ್ ಟಾನಿಕ್
ಆನ್‌ಲೈನ್‌ನಲ್ಲಿರುವಾಗ ಬುದ್ಧಿಮತ್ತೆ ಹೆಚ್ಚಿಸಿಕೊಳ್ಳಿ:
ಫೇಸ್‌ಬುಕ್, ಟ್ವಿಟರ್ ಮತ್ತು ಮೆಸೇಜಿಂಗ್ ಮುಂತಾದ ಇಂಟರ್ನೆಟ್ ಜಮಾನದಲ್ಲಿ ಹಾಗೂ ಎಲ್ಲದಕ್ಕೂ ಗೂಗಲ್ ಇದೆ ಎಂಬ ಭರವಸೆಯ ನಡುವೆ ನಮ್ಮ ಐಕ್ಯೂ ಅಂದರೆ ಬೌದ್ಧಿಕ ಕೌಶಲ್ಯ ಅಥವಾ ಜಾಣ್ಮೆ ತುಕ್ಕು ಹಿಡಿಯುತ್ತಿದೆ ಎಂಬ ಮಾತುಗಳನ್ನಿಂದು ಕೇಳುತ್ತಿದ್ದೇವೆ. ಮೆದುಳಿಗೆ ಕೆಲಸ ಕೊಟ್ಟರೆ ಮಾತ್ರ ಅದು ಹರಿತವಾಗಿರುತ್ತದೆ. ಹೀಗಾಗಿ ಇಂಟರ್ನೆಟ್‌ನಲ್ಲಿರುವಾಗ ಸಮಯ ಮಾಡಿಕೊಂಡು ಈ ತಾಣಕ್ಕೆ ಭೇಟಿ ನೀಡಿದರೆ, ಬುದ್ಧಿಮತ್ತೆಯನ್ನು ಒರೆಗೆ ಹಚ್ಚಬಹುದು. ಮಕ್ಕಳಿಗೆ ಅತ್ಯಂತ ಸೂಕ್ತ ತಾಣವಿದು. ದೊಡ್ಡವರಿಗೂ ಕೂಡ. https://memorado.com/

ಇಂಟರ್ನೆಟ್ ಇಲ್ಲದೆ ಗೂಗಲ್ ಮೇಲ್ ಉಪಯೋಗಿಸುವುದು

ವಿಜಯ ಕರ್ನಾಟಕ ಅಂಕಣ ಮಾಹಿತಿ@ತಂತ್ರಜ್ಞಾನ 91- ಸೆಪ್ಟೆಂಬರ್ 1, 2014
Avinash Column-1ಎಲ್ಲಾದರೂ ದೂರ ಅಂದರೆ ಇಂಟರ್ನೆಟ್ ಸಂಪರ್ಕವಿಲ್ಲದ ರಿಮೋಟ್ ಪ್ರದೇಶಕ್ಕೆ ಹೋಗಿರುತ್ತೀರಿ ಅಥವಾ ವಿಮಾನದಲ್ಲೋ, ರೈಲಿನಲ್ಲೋ ಪ್ರಯಾಣಿಸುತ್ತಿರುವಾಗ, ಪ್ರಯಾಣದ ಸಮಯವನ್ನು ಸದುಪಯೋಗ ಮಾಡಿಕೊಳ್ಳಬೇಕೆಂಬ ಕಾರಣಕ್ಕೆ, ಲ್ಯಾಪ್‌ಟಾಪ್ ಮೂಲಕ ಜಿಮೇಲ್‌ನಲ್ಲಿರುವ ಇಮೇಲ್‌ಗಳನ್ನು ಚೆಕ್ ಮಾಡಬೇಕು, ಅದರಲ್ಲಿನ ವಿವರಗಳನ್ನು ಓದಬೇಕು ಎಂದು ಅನ್ನಿಸುತ್ತಿದೆ. ಆದರೆ ಇಂಟರ್ನೆಟ್ ಇಲ್ಲದ ಚಿಂತೆ. ಹೀಗಿರುವಾಗ ಏನು ಮಾಡಬಹುದು? ಇಂಥವರಿಗಾಗಿಯೇ ಗೂಗಲ್‌ನ ಜಿಮೇಲ್ ತಂಡವು ಒಂದು ಆಯ್ಕೆಯನ್ನು ಒದಗಿಸಿದೆ. ಅದೇ ಆಫ್‌ಲೈನ್ ಜಿಮೇಲ್.

ಇದರ ಮೂಲಕ, ಇಂಟರ್ನೆಟ್ ಸಂಪರ್ಕವಿಲ್ಲದಿದ್ದರೂ ಕೂಡ ಈಗಾಗಲೇ ಇರುವ ಮೇಲ್‌ಗಳನ್ನು ಓದಬಹುದು ಮತ್ತು ಹೊಸದಾಗಿ ಮೇಲ್ ಬರೆಯಬೇಕಿದ್ದರೆ ಕಂಪೋಸ್ ಮಾಡಬಹುದು. ಇಂಟರ್ನೆಟ್ ಸಂಪರ್ಕ ನಿಧಾನವಾಗಿದ್ದರೂ ಕೂಡ ಆಫ್‌ಲೈನ್ ಜಿಮೇಲ್ ಉಪಯೋಗಕ್ಕೆ ಬರುತ್ತದೆ. ಮತ್ತೆ ಸಂಪರ್ಕ ದೊರೆತಾಗ, ನೀವು ಕಳುಹಿಸಿದ ಮೇಲ್‌ಗಳು ರವಾನೆಯಾಗುತ್ತವೆ.

ಇಂಟರ್ನೆಟ್ ಸಂಪರ್ಕವಿದ್ದರೆ ಆನ್‌ಲೈನ್ ಅಂತ ಅರ್ಥ. ಆಫ್‌ಲೈನ್‌ನಲ್ಲಿ ಇಮೇಲ್‌ಗಳನ್ನು ನೋಡಲು ಈಗಾಗಲೇ ಸಾಕಷ್ಟು ಥರ್ಡ್ ಪಾರ್ಟಿ ತಂತ್ರಾಂಶಗಳಿವೆ. ಉದಾಹರಣೆಗೆ, ಔಟ್‌ಲುಕ್, ಥಂಡರ್‌ಬರ್ಡ್ ಇತ್ಯಾದಿ ಇಮೇಲ್ ಪ್ರೋಗ್ರಾಂಗಳನ್ನು ಇನ್‌ಸ್ಟಾಲ್ ಮಾಡಿಕೊಳ್ಳಬೇಕಾಗುತ್ತದೆ. ಅದಿಲ್ಲದೆಯೇ, ಬರೇ ಒಂದು ಬ್ರೌಸರ್ ಪ್ಲಗ್-ಇನ್ (ಅಂದರೆ ಕಿರು ತಂತ್ರಾಂಶ) ಬಳಸಿದರೆ ಆಫ್‌ಲೈನ್ ಜಿಮೇಲ್ ಉಪಯೋಗಿಸಬಹುದಾಗಿದೆ.

ಅದಕ್ಕೆ ನೀವು ಮಾಡಬೇಕಾಗಿರುವುದಿಷ್ಟೆ. ಇಂಟರ್ನೆಟ್ ಸಂಪರ್ಕವಿರಲಿ. ಬಳಿಕ ಗೂಗಲ್ ಕ್ರೋಮ್ ಬ್ರೌಸರ್ ತೆರೆಯಿರಿ. ಅದರಲ್ಲಿ ಕೆಳ ಭಾಗದಲ್ಲಿ ಬಲ ಮೂಲೆಯಲ್ಲಿ ವೆಬ್ ಸ್ಟೋರ್ ಎಂದು ಬರೆದಿರುವುದನ್ನು ಕ್ಲಿಕ್ ಮಾಡಿ. ಆಗ ನಿಮಗೆ ವೈವಿಧ್ಯಮಯ ಆ್ಯಪ್‌ಗಳಿರುವ ಪುಟ ಗೋಚರಿಸುತ್ತದೆ. ಅಲ್ಲಿರುವ ಸರ್ಚ್ ಬಾರ್‌ನಲ್ಲಿ Gmail Offline ಅಂತ ಸರ್ಚ್ ಮಾಡಿ. ಅಲ್ಲಿ ನಿಮಗೆ ಅದರ ಆ್ಯಪ್ ದೊರೆಯುತ್ತದೆ. ನಿಮ್ಮ ಬ್ರೌಸರ್‌ಗೆ ಅಳವಡಿಸಿಕೊಳ್ಳಲು ಇರುವ ಬಟನ್ ಕ್ಲಿಕ್ ಮಾಡಿ. ಆ್ಯಪ್ ಸಿಗದೇ ಇದ್ದರೆ, http://bit.ly/GmailOfflline ಎಂಬಲ್ಲಿ ಹೋಗಿ. ಇನ್‌ಸ್ಟಾಲ್ ಮಾಡಿಕೊಳ್ಳಿ. ನಂತರ ಕ್ರೋಮ್ ಬ್ರೌಸರ್ ಓಪನ್ ಮಾಡಿ. ಒಂದೋ ಎಡ ಮೇಲ್ಭಾಗದ ಮೂಲೆಯಲ್ಲಿರುವ Apps ಎಂಬ ಬಣ್ಣಬಣ್ಣದ ಚೌಕಗಳಿರುವ ಬಟನ್ ಕ್ಲಿಕ್ ಮಾಡಿ ಅಥವಾ ಅಡ್ರೆಸ್ ಬಾರ್‌ನಲ್ಲಿ chrome://apps/ ಎಂಬ ಯುಆರ್‌ಎಲ್ ಟೈಪ್ ಮಾಡಿ ಎಂಟರ್ ಕೊಡಿ. ಆಗ ನಿಮಗೆ ಕ್ರೋಮ್ ಬ್ರೌಸರ್‌ನಲ್ಲಿ ಇನ್‌ಸ್ಟಾಲ್ ಆಗಿರುವ ಎಲ್ಲ ಆ್ಯಪ್‌ಗಳು, ಪ್ಲಗಿನ್‌ಗಳ ಬಟನ್‌ಗಳು ಗೋಚರಿಸುತ್ತವೆ. ಅಲ್ಲೇ Gmail Offline ಅಂತ ಇರೋದನ್ನು ಕ್ಲಿಕ್ ಮಾಡಿ. ಲಾಗಿನ್ ಆಗಿ. ನಿಮ್ಮ ಹಳೆಯ ಮೇಲ್‌ಗಳೆಲ್ಲವೂ ಒಂದು ಬಾರಿ ನಿಮ್ಮ ಕಂಪ್ಯೂಟರಿಗೆ ಡೌನ್‌ಲೋಡ್ ಆಗುತ್ತವೆ. ಪದೇ ಪದೇ ಹಳೆಯದೆಲ್ಲವೂ ಡೌನ್‌ಲೋಡ್ ಆಗುವುದಿಲ್ಲ.

ಇಷ್ಟಾದರೆ ಆಯಿತು. ಇಂಟರ್ನೆಟ್ ಸಂಪರ್ಕವಿಲ್ಲದಿದ್ದರೂ ಕೂಡ ನೀವು ಆಫ್‌ಲೈನ್ ಜಿಮೇಲ್ ಓಪನ್ ಮಾಡಿಕೊಂಡು, ಬೇಕಾದ ಕೆಲಸಗಳನ್ನು ಮಾಡಬಹುದು. ಮತ್ತೆ ಆನ್‌ಲೈನ್ ಆದಾಗ, ಅಂದರೆ ಇಂಟರ್ನೆಟ್ ಸಂಪರ್ಕ ದೊರೆತಾಗ, ಈ ಫೋಲ್ಡರ್‌ನಲ್ಲಿರುವ ಎಲ್ಲ ಮೇಲ್‌ಗಳೂ ಸಿಂಕ್ರನೈಸ್ ಆಗುತ್ತವೆ. ಆಫ್‌ಲೈನ್ ಜಿಮೇಲ್‌ನಲ್ಲಿ, ಒಂದು ವಾರ ಅಥವಾ ಒಂದು ತಿಂಗಳ ಮೇಲ್‌ಗಳು ಮಾತ್ರ ಲಭ್ಯವಾಗಲಿ ಅಂತ ಆಯ್ಕೆ ಮಾಡಿಕೊಳ್ಳಲೂಬಹುದು. ಸೆಟ್ಟಿಂಗ್ಸ್ ಬಟನ್ ಕ್ಲಿಕ್ ಮಾಡಿದರೆ, Download mails from past week, 2 weeks, month ಅನ್ನುವ ಆಯ್ಕೆಗಳಿವೆ. ಈ ರೀತಿ ಮಾಡುವುದರಿಂದ, ಡೇಟಾ ವೆಚ್ಚವನ್ನೂ, ಕಂಪ್ಯೂಟರಿನಲ್ಲಿರುವ ಮೆಮೊರಿ ಸ್ಪೇಸ್ ಅನ್ನೂ ಉಳಿಸಬಹುದಾಗಿದೆ.

ಆದರೆ ನೆನಪಿಟ್ಟುಕೊಳ್ಳಲೇಬೇಕಾದ ವಿಷಯ ಎಂದರೆ, ನಿಮ್ಮ ಸ್ವಂತ ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್ ಆಗಿದ್ದರೆ ಮಾತ್ರ ಆಫ್‌ಲೈನ್ ಜಿಮೇಲ್ ಬಳಸಿ. ಬೇರೆಯವರ ಕಂಪ್ಯೂಟರ್/ಲ್ಯಾಪ್‌ಟಾಪಲ್ಲಿ ಬಳಸಬೇಡಿ. ಯಾಕೆಂದರೆ, ಈ ಸಂದೇಶಗಳು ಡೌನ್‌ಲೋಡ್ ಆಗುವುದು ಆಯಾ ಕಂಪ್ಯೂಟರುಗಳಿಗೆ. ಹೀಗಾಗಿ, ಬೇರೆಯವರು ಈ ಕಂಪ್ಯೂಟರ್ ಬಳಸುತ್ತಾರೆಂದಾದರೆ, ಅವರು ನಿಮ್ಮ ಇಮೇಲ್ ಸಂದೇಶಗಳನ್ನು ಓದುವ ಸಾಧ್ಯತೆ ಇರುತ್ತದೆ. ಹಾಗಾಗದಂತೆ ನೋಡಿಕೊಳ್ಳಿ.

ಟೆಕ್ ಟಾನಿಕ್
ಕ್ಲೋಸ್ ಮಾಡಿದ ಬ್ರೌಸರ್ ತೆರೆಯಲು

ಹೆಚ್ಚಿನವರು ಇಂಟರ್ನೆಟ್ ಜಾಲಾಡಲು ವೇಗವಾಗಿ ಕಾರ್ಯಾಚರಿಸುತ್ತದೆ ಎಂಬ ಕಾರಣಕ್ಕೆ ಗೂಗಲ್‌ನ ಕ್ರೋಮ್ ಅಥವಾ ಫೈರ್‌ಫಾಕ್ಸ್ ಬ್ರೌಸರನ್ನು ಇನ್‌ಸ್ಟಾಲ್ ಮಾಡಿಕೊಂಡು ಬಳಸುತ್ತಾರೆ. ಏಕ ಕಾಲಕ್ಕೆ ಹಲವು ವೆಬ್ ಪುಟಗಳನ್ನು ತೆರೆದಿಡಲು ಇಲ್ಲಿರುವ ಟ್ಯಾಬ್‌ಗಳು ನೆರವಾಗುತ್ತವೆ. ಆದರೆ, ಆಕಸ್ಮಿಕವಾಗಿ ಒಂದು ಟ್ಯಾಬ್ ಅನ್ನು ಕ್ಲೋಸ್ ಮಾಡಿದರೆ, ಅದರಲ್ಲಿ ನೋಡಲು ಏನೋ ಬಾಕಿಯಾಗಿದೆ ಎಂದುಕೊಂಡರೆ ಆ ವೆಬ್ ಪುಟವನ್ನು ಮರಳಿ ನೋಡುವುದು ಹೇಗೆ? ಕಂಟ್ರೋಲ್ ಶಿಫ್ಟ್ ಟಿ (Ctrl+Shift+t) ಅಂತ ಒತ್ತಿದರೆ, ಕೊನೆಯದಾಗಿ ಕ್ಲೋಸ್ ಮಾಡಿದ ಟ್ಯಾಬ್‌ನಲ್ಲಿದ್ದ ವೆಬ್ ಪುಟ ಪುನಃ ತೆರೆದುಕೊಳ್ಳುತ್ತದೆ. ಮತ್ತೊಂದು ಸಲ ಕಂಟ್ರೋಲ್ ಶಿಫ್ಟ್ ಟಿ ಒತ್ತಿದರೆ, ಅದಕ್ಕೂ ಹಿಂದೆ ಕ್ಲೋಸ್ ಮಾಡಿದ್ದ ವೆಬ್ ಪುಟ ಓಪನ್ ಆಗುತ್ತದೆ. ಈ ಕಮಾಂಡ್ ಉಪಯೋಗಿಸದಿದ್ದರೆ, ಹಿಸ್ಟರಿ ಎಂಬಲ್ಲಿ ಹೋಗಿ, ಈಗಷ್ಟೇ ಕ್ಲೋಸ್ ಮಾಡಿದ ಟ್ಯಾಬ್ ಯಾವುದು ಅಂತೆಲ್ಲಾ ಹುಡುಕಬಹುದು. ಆದರೆ ಇದಕ್ಕೆ ತಗುಲುವ ಸಮಯವು ಈ ಶಾರ್ಟ್‌ಕಟ್ ಮೂಲಕ ಉಳಿತಾಯವಾಗುತ್ತದೆ.

ಗ್ರಾಹಕ ಸಾಮಗ್ರಿ ಖರೀದಿಸುವ ಮುನ್ನ ಇಂಟರ್ನೆಟ್ ಜಾಲಾಡಿ

ಮಾಹಿತಿ@ತಂತ್ರಜ್ಞಾನ ವಿಜಯ ಕರ್ನಾಟಕ ಅಂಕಣ 85, ಜುಲೈ 21, 2014:

Avinash Column-1ಪೆನ್ನಿನಿಂದ ಹಿಡಿದು ಟಿವಿ, ವಾಷಿಂಗ್ ಮೆಷಿನ್, ಫ್ರಿಜ್‌ವರೆಗೆ ಯಾವುದೇ ವಸ್ತುಗಳನ್ನು ಇಂಟರ್ನೆಟ್ ಮೂಲಕವೇ ಖರೀದಿಸುವ ಪ್ರಕ್ರಿಯೆಯೊಂದು ಭಾರತದಲ್ಲಿ ಈಗ ನಿಧಾನಕ್ಕೆ ವೇಗ ಪಡೆದುಕೊಳ್ಳುತ್ತಿದೆ. ಕುಳಿತಲ್ಲಿಂದಲೇ ಎಲ್ಲವನ್ನೂ ನೋಡಿ ಖರೀದಿ ಮಾಡಬಹುದಾದ ಅನುಕೂಲತೆ ಮತ್ತು ಸಮಯದ ಉಳಿತಾಯದಿಂದಾಗಿ ಇದು ಸಾಧ್ಯವಾಗುತ್ತಿದೆ.

ಕೆಲವೊಂದು ಉತ್ಪನ್ನಗಳು ಆನ್‌ಲೈನ್‌ನಲ್ಲಿ ಮಾತ್ರ ಲಭ್ಯ. ಉದಾಹರಣೆಗೆ, ಮೋಟೋರೋಲದ ಕೆಲವು ಸ್ಮಾರ್ಟ್‌ಫೋನ್ ಮಾಡೆಲ್‌ಗಳು ಭಾರತದಲ್ಲಿ ಬಿಡುಗಡೆಯಾಗಿದ್ದು ಆನ್‌ಲೈನ್‌ನಲ್ಲಿ ಫ್ಲಿಪ್‌ಕಾರ್ಟ್ ಡಾಟ್ ಕಾಂ ಎಂಬ ಜಾಲತಾಣದ ಮೂಲಕ. ಅವೆಲ್ಲವೂ ಆ ತಾಣದಲ್ಲಿ ಮಾತ್ರ ಲಭ್ಯ, ಬೇರೆ ಅಂತರ್ಜಾಲ ತಾಣಗಳಲ್ಲಾಗಲೀ, ಹೊರಗೆ ಮಳಿಗೆಗಳಲ್ಲಾಗಲೀ ದೊರೆಯುವುದಿಲ್ಲ. ಬೇಡಿಕೆಯೂ ಸಾಕಷ್ಟಿದೆ ಎಂದು ಹೇಳಲಾಗುತ್ತಿತ್ತು. ‘ಸ್ಟಾಕ್ ಇಲ್ಲ, ಬಂದಾಗ ತಿಳಿಸುತ್ತೇವೆ, ನಿಮ್ಮ ಇಮೇಲ್ ವಿಳಾಸ ದಾಖಲಿಸಿ’ ಅಥವಾ ‘ಈಗಲೇ ಬುಕ್ ಮಾಡಿ’ ಎಂಬ ಸಂದೇಶಗಳು ಸಾಮಾನ್ಯವಾಗಿದ್ದವು. ಇದು ಉದಾಹರಣೆಯಷ್ಟೆ. ಇದರ ಹಿಂದೆ ಅತ್ಯುತ್ತಮ ಮಾರುಕಟ್ಟೆ ತಂತ್ರಗಳಿರುತ್ತವೆ. ಆನ್‌ಲೈನ್‌ನಲ್ಲಿ ಮಾತ್ರ ಲಭ್ಯ ಎಂಬ ಈ ಮಾರಾಟ ತಂತ್ರವು ಭಾರತಕ್ಕೂ ಬಂದಿದೆ.

ಫ್ಲಿಪ್‌ಕಾರ್ಟ್, ಇ-ಬೇ, ಇಂಡಿಯಾಟೈಮ್ಸ್, ಅಮೆಜಾನ್ ಮುಂತಾದ ಪ್ರಸಿದ್ಧ ಇ-ಕಾಮರ್ಸ್ ತಾಣಗಳು ವೈವಿಧ್ಯಮಯ ವಸ್ತುಗಳನ್ನು ಮಾರಾಟ ಮಾಡುವಲ್ಲಿ ಜನಪ್ರಿಯವಾಗಿವೆ. ಕ್ರೆಡಿಟ್ ಕಾರ್ಡ್ ಅಥವಾ ನೆಟ್ ಬ್ಯಾಂಕಿಂಗ್ ಮೂಲಕ ಹಣ ಪಾವತಿಸುವ ವ್ಯವಸ್ಥೆ ಇಲ್ಲಿರುತ್ತದೆ. ಇವೆಲ್ಲ ವಹಿವಾಟುಗಳೂ ನಂಬಿಕೆಯ ಆಧಾರದಲ್ಲೇ ನಡೆಯುವುದರಿಂದ ಹಣ ಪಾವತಿಗಾಗಿ ಸುರಕ್ಷಿತ ಮಾರ್ಗವೊಂದಿದೆ. ಅದಕ್ಕೆ ಗೇಟ್‌ವೇ ಎನ್ನುತ್ತಾರೆ ಮತ್ತು ಸರಕಾರದ ಮಾನ್ಯತೆಯೂ ಇದೆ. ಬ್ಯಾಂಕಿಂಗ್ ಸಂಸ್ಥೆಗಳು, ಕ್ರೆಡಿಟ್ ಕಾರ್ಡ್-ಡೆಬಿಟ್ ಕಾರ್ಡ್ ವಿತರಿಸುವ ಕಂಪನಿಗಳು ಈ ಸುರಕ್ಷಿತವಾದ ಗೇಟ್‌ವೇಯಲ್ಲಿ ನೋಂದಾಯಿಸಿಕೊಂಡಿರುತ್ತವೆ. ಇನ್ನು, ಆನ್‌ಲೈನ್‌ನಲ್ಲಿ ಖರೀದಿಸುವ ಕುರಿತು ಸಂದೇಹ ಇರುವವರಿಗಾಗಿಯೇ ಕ್ಯಾಶ್ ಆನ್ ಡೆಲಿವರಿ (ನಾವು ಖರೀದಿ ಮಾಡುವ ಸಾಧನ ಕೈಗೆ ಸಿಕ್ಕಮೇಲಷ್ಟೇ ಹಣ ನೀಡುವ) ವ್ಯವಸ್ಥೆಯೂ ಇದೆ.

ಆನ್‌ಲೈನ್ ತಾಣಗಳಲ್ಲಿನ ಅತಿದೊಡ್ಡ ಅನುಕೂಲವೆಂದರೆ, ವಿಶ್ವಾಸಾರ್ಹ ಜಾಲ ತಾಣಗಳಲ್ಲಿ ಖರೀದಿ ಮಾಡಿದವರು ಈ ಜಾಲ ತಾಣದ ಸೇವೆ ಹೇಗಿದೆ ಮತ್ತು ಅವರು ಖರೀದಿಸಿದ ವಸ್ತು ಹೇಗಿದೆ ಎಂಬುದರ ಕುರಿತು ಸುದೀರ್ಘ ವಿಮರ್ಶೆ ಮಾಡಿರುತ್ತಾರೆ. ಆಯಾ ಉತ್ಪನ್ನದ ಕೆಳಗೆ ಬಳಕೆದಾರರ ವಿಮರ್ಶೆ/ಕಾಮೆಂಟ್ ದಾಖಲಿಸುವ ಸ್ಥಳದಲ್ಲಿ ಇವೆಲ್ಲವೂ ಲಭ್ಯ. ಕೆಲವೊಂದು ವಿಮರ್ಶೆಗಳು (ರಿವ್ಯೆ) ಮಾರುಕಟ್ಟೆ ತಂತ್ರದ ಭಾಗ ಎಂದು ತೋರುತ್ತವೆಯಾದರೂ, ಮತ್ತೆ ಕೆಲವು ಪ್ರಾಮಾಣಿಕ ವಿಮರ್ಶೆಗಳಿರುತ್ತವೆ. ತಾವು ಖರೀದಿಸಿದ ಸಾಧನವನ್ನು ಒಂದಷ್ಟು ದಿನಗಳ ಕಾಲ ಬಳಸಿದವರು ಅದರ ಒಳ್ಳೆಯ ಅಂಶಗಳು, ಕೆಟ್ಟ ಅಂಶಗಳನ್ನು ಪಟ್ಟಿ ಮಾಡಿ ಅಲ್ಲಿ ನಮೂದಿಸಿರುತ್ತಾರೆ. ಸಾಧನ ಚೆನ್ನಾಗಿಲ್ಲದಿದ್ದರೆ ಖಡಕ್ ಆಗಿ ಹೇಳಿರುತ್ತಾರೆ.

ನಿರ್ದಿಷ್ಟ ಉತ್ಪನ್ನದ ಕುರಿತಾಗಿ ಕೇವಲ ಒಂದು ಜಾಲತಾಣದಲ್ಲಿನ ವಿಮರ್ಶೆ ನೋಡಬಾರದು. ಹಲವು ವೆಬ್‌ಸೈಟ್‌ಗಳಲ್ಲಿರುವ ತಜ್ಞರ ವಿಮರ್ಶೆಗಳನ್ನು ಓದಿದರೆ ಜತೆಗೆ, ಅದಕ್ಕೆ ಬಂದಿರುವ ನೈಜ ಬಳಕೆದಾರರ ಕಾಮೆಂಟ್‌ಗಳನ್ನೂ ನೋಡಿದರೆ ನಿರ್ದಿಷ್ಟ ವಸ್ತುವನ್ನು ಖರೀದಿಸಬಹುದೇ ಬೇಡವೇ ಎಂಬ ಬಗ್ಗೆ ಅಳೆದು ತೂಗಿ ನಿರ್ಧಾರಕ್ಕೆ ಬರಲು ನೆರವಾಗುತ್ತವೆ. ಒಂದು ಸ್ಮಾರ್ಟ್‌ಫೋನನ್ನೇ ಉದಾಹರಣೆಗೆ ತೆಗೆದುಕೊಂಡರೆ, ಅದರ ಕ್ಯಾಮರಾ ಹೇಗೆ ಕೆಲಸ ಮಾಡುತ್ತದೆ, ಅದರ ಆನ್/ಆಫ್ ಸ್ವಿಚ್ ಹೇಗಿರುತ್ತದೆ, ಮ್ಯೂಸಿಕ್ ಹೇಗೆ ಕೇಳಿಸುತ್ತದೆ, ವೀಡಿಯೋ ಪ್ಲೇ ಮಾಡುವಾಗ ಚೆನ್ನಾಗಿ ಕಾಣಿಸುತ್ತದೆಯೇ ಅಥವಾ ಹ್ಯಾಂಗ್ ಆಗುತ್ತದೆಯೇ, ಹಲವು ಕಾರ್ಯಗಳನ್ನು ಒಂದೇ ಸಲ ಮಾಡುವಾಗ ಸಾಧನವು ಬಿಸಿಯಾಗುತ್ತದೆಯೇ ಎಂಬಿತ್ಯಾದಿ ವಿವರ ಅಲ್ಲಿ ಲಭ್ಯವಾಗುತ್ತದೆ.

ಸರಕು ಮಾರುವ ತಾಣಗಳಲ್ಲಿಯೂ ಆಯಾ ವಸ್ತುಗಳ ಪುಟದಲ್ಲಿ ಬಳಕೆದಾರರು ಮಾಡಿದ ಕಾಮೆಂಟ್‌ಗಳನ್ನು ನೋಡಿದರೆ ಮತ್ತಷ್ಟು ಮಾಹಿತಿ ನಿಮಗೆ ದೊರೆಯುತ್ತದೆ. ನಿಮ್ಮಲ್ಲಿರಬಹುದಾದ ಸಂದೇಹಗಳು ಬೇರೆಯವರಿಗೂ ಬಂದಿರಬಹುದು, ಅವರು ಅದನ್ನು ಅಲ್ಲಿ ದಾಖಲಿಸಿದಾಗ, ತಿಳಿದವರು ಉತ್ತರಿಸಿರುತ್ತಾರೆ. ಅಲ್ಲೇ ಸಾಧನದ ಒಳಿತು-ಕೆಡುಕುಗಳ ಕುರಿತು ಚರ್ಚೆ, ವಾದ-ಪ್ರತಿವಾದಗಳೂ ನಡೆಯುತ್ತವೆ. ಇವುಗಳಿಂದ ನೀವು ಖರೀದಿಸಬೇಕೆಂದಿರುವ ಸಾಧನವು ನಿಮ್ಮ ಹಣಕ್ಕೆ ತಕ್ಕ ಮೌಲ್ಯ ಕೊಡಬಲ್ಲುದೇ ಎಂದು ನಿರ್ಧರಿಸಲು ನಿಮಗೆ ಅನುಕೂಲವಾಗುತ್ತದೆ. ಹೀಗಾಗಿ, ಯಾವುದೇ ವಸ್ತು ಖರೀದಿಸುವ ಮುನ್ನ ಆನ್‌ಲೈನ್‌ನಲ್ಲಿ ರಿಸರ್ಚ್ ಮಾಡಿದರೆ, ಸಾಕಷ್ಟು ಹಣ ಉಳಿತಾಯ ಮಾಡಬಹುದು ಮತ್ತು ಒಳಿತು ಕೆಡುಕುಗಳ ಕುರಿತು ಸ್ಪಷ್ಟ ಮಾಹಿತಿ ತಿಳಿದುಕೊಳ್ಳಬಹುದು.

ಮೊಬೈಲ್, ಕಂಪ್ಯೂಟರಲ್ಲಿ ಕನ್ನಡದಲ್ಲಿ ಬರೆಯೋದು ಈಗ ತುಂಬಾ ಸುಲಭ

ಮಾಹಿತಿ@ತಂತ್ರಜ್ಞಾನ: ವಿಜಯ ಕರ್ನಾಟಕ ಅಂಕಣ, ಮಾರ್ಚ್ 03, 2014
ಅಂತರ್ಜಾಲದಲ್ಲಿ ಕನ್ನಡದ ಬಳಕೆ ಹೆಚ್ಚಾದರೆ, ಕನ್ನಡಕ್ಕೆ ಶ್ರೇಯಸ್ಸು. ಆದರೆ, ಇಂಟರ್ನೆಟ್‌ನಲ್ಲಿ ಕಂಗ್ಲಿಷ್ (ಕನ್ನಡವನ್ನು ಓದಲು ತ್ರಾಸವಾಗುವ ರೀತಿಯಲ್ಲಿ ಇಂಗ್ಲಿಷ್‌ನಲ್ಲಿ ಬರೆಯುವ ವಿಧಾನ) ಬಳಕೆ ಆತಂಕಕಾರಿಯಾಗಿ ಹೆಚ್ಚಾಗುತ್ತಿದೆ. ಇದಕ್ಕೆ ಕಾರಣಗಳು ಹಲವು. ಕನ್ನಡ ಬಳಕೆ ತುಂಬಾ ಸುಲಭವೆಂಬ ಜ್ಞಾನವಿಲ್ಲದಿರುವುದು; ಅದಕ್ಕೆ ದೊಡ್ಡ ತಂತ್ರಾಂಶವೇ ಬೇಕೆಂಬ ಅಜ್ಞಾನ; ಇಂಗ್ಲಿಷ್ ಅಕ್ಷರಗಳಿರುವ ಕೀಬೋರ್ಡ್‌ನಲ್ಲಿ ಇಂಗ್ಲಿಷ್ ಬದಲು ಕನ್ನಡವನ್ನು ಟೈಪ್ ಮಾಡುವುದು (ಲಿಪ್ಯಂತರಣ) ತೀರಾ ಕಷ್ಟ ಎಂಬ ಭಾವನೆ. ಆದರೆ ಇಂಗ್ಲಿಷಿನಲ್ಲಿಯೇ ಕನ್ನಡವನ್ನು ಬರೆದರೆ ಎಲ್ಲರಿಗೂ ಓದಲು ತ್ರಾಸ ಆಗುತ್ತದೆ. ಬಹುಶಃ ಅಂಥವರಿಗಾಗಿಯೇ ಇರಬಹುದು, ಒಂದು ಕೀಬೋರ್ಡ್ ರೂಪಿಸಲಾಗಿದೆ. ಅಂದರೆ ಇಂಗ್ಲಿಷಿನಲ್ಲೇ ಕನ್ನಡ ಬರೆಯುತ್ತಾ ಹೋದರೂ, ಅಕ್ಷರವು ಕನ್ನಡದಲ್ಲೇ ಮೂಡುತ್ತದೆ. ಇದು ತೀರಾ ಸುಲಭ ಮತ್ತು ಉಚಿತ.

ಜನರು ಕಂಗ್ಲಿಷ್ ಟೈಪ್ ಮಾಡದಿರಲೆಂದೇ ‘ವಿಕಿಮೀಡಿಯಾ’ದವರು ಉಚಿತವಾಗಿ ಕೊಟ್ಟಿರುವ ಕೀಬೋರ್ಡನ್ನು (ಎಕ್ಸ್‌ಟೆನ್ಷನ್ ರೂಪದಲ್ಲಿ) ಗೂಗಲ್ ಕ್ರೋಮ್ ಎಂಬ ಬ್ರೌಸರ್‌ಗೆ ಅಳವಡಿಸಿಕೊಂಡರಾಯಿತು. ಕಂಗ್ಲಿಷಿನಲ್ಲೇ ಬರೆದುದನ್ನು ಅದು ಕನ್ನಡಕ್ಕೆ ಪರಿವರ್ತಿಸಿ ತೋರಿಸಿ, ಕನ್ನಡದಲ್ಲೇ ಬರೆಯಿರಿ ಎಂಬ ಬಗ್ಗೆ ಜಾಗೃತಿ ಮೂಡಿಸುತ್ತದೆ. ನೀವು ಮಾಡಬೇಕಾದುದಿಷ್ಟೆ. ಇಂಟರ್ನೆಟ್ ಜಾಲಾಡಲು ಕ್ರೋಮ್ (Chrome) ಎಂಬ ಬ್ರೌಸರ್ ಬಳಸಿ. (http://goo.gl/kH4Q ಎಂಬಲ್ಲಿ ಡೌನ್‌ಲೋಡ್ ಮಾಡಿಕೊಂಡು ಇನ್‌ಸ್ಟಾಲ್ ಮಾಡಿಕೊಳ್ಳಿ). ಅದೇ ಕ್ರೋಮ್ ಬ್ರೌಸರ್‌ನಲ್ಲಿ http://goo.gl/NrVKGJ ವಿಳಾಸವನ್ನು ಹಾಕಿದಾಗ, ಬಲ ಮೇಲ್ಭಾಗದಲ್ಲಿ +FREE ಎಂಬ ನೀಲಿ ಬಣ್ಣದ ಬಟನ್ ಇರುತ್ತದೆ. ಕ್ಲಿಕ್ ಮಾಡಿ. ಪಾಪ್-ಅಪ್ ವಿಂಡೋ ಒಂದು ಕಾಣಿಸಿ, ನಿಮ್ಮಿಂದ ಕನ್ಫರ್ಮೇಶನ್ ಕೇಳುತ್ತದೆ. Add ಎಂಬ ಬಟನ್ ಒತ್ತಿದರಾಯಿತು. ಸ್ವಲ್ಪ ಹೊತ್ತಿನಲ್ಲೇ ಹಸಿರು ಬಣ್ಣದಲ್ಲಿ Added to Chrome ಎಂಬ ಸಂದೇಶ ಬರುತ್ತದೆ.

ನಂತರ ನೀವು ಇಂಟರ್ನೆಟ್‌ನಲ್ಲಿ ಎಲ್ಲೇ ಕನ್ನಡ ಬರೆಯಬೇಕಿದ್ದರೂ, ಆ ಬಾಕ್ಸ್‌ನ ಬಲತುದಿಯಲ್ಲಿ ಪುಟ್ಟ ಕೀಬೋರ್ಡ್ ಚಿಹ್ನೆಯೊಂದು ಕಾಣಿಸುತ್ತದೆ. ಅದನ್ನು ಕ್ಲಿಕ್ ಮಾಡಿ. ಮೂಲತಃ ಇಂಗ್ಲಿಷ್ ತೋರಿಸುತ್ತದೆ. ಅದರಲ್ಲಿ Other Languages ಬರೆದಿರುವುದರ ಕೆಳಗೆ ಇರುವ ಡಾಟ್‌ಗಳನ್ನು ಕ್ಲಿಕ್ ಮಾಡಿದಾಗ, ನಿಮ್ಮ ಭಾಷೆ ಆಯ್ದುಕೊಳ್ಳಲು ವಿಂಡೋ ಗೋಚರಿಸುತ್ತದೆ. ಕೆಳಗೆ ಸ್ಕ್ರಾಲ್ ಮಾಡಿದರೆ, Asia ಭಾಷೆಗಳ ಅಡಿಯಲ್ಲಿ, ಅಚ್ಚ ಕನ್ನಡದಲ್ಲಿ ಬರೆದಿರುವ ‘ಕನ್ನಡ’ ಎಂಬುದನ್ನು ಆಯ್ಕೆ ಮಾಡಿಕೊಳ್ಳಿ.

ಕಾಮೆಂಟ್ ಮಾಡಲು, ಫೇಸ್‌ಬುಕ್‌ನ ವಾಲ್‌ನಲ್ಲಿ ಬರೆಯಲು ಹೋದಾಗ ಕಾಣಿಸಿಕೊಳ್ಳುವ ಪುಟ್ಟ ಕೀಬೋರ್ಡ್ ಚಿಹ್ನೆಯನ್ನು ಒತ್ತಿದಾಗ, ಕನ್ನಡದಲ್ಲೇ ಲಿಪ್ಯಂತರಣ (ಇಂಗ್ಲಿಷಿನಲ್ಲಿ ಬರೆದುದನ್ನು ಕನ್ನಡಕ್ಕೆ ಪರಿವರ್ತಿಸುವುದು) ಆಯ್ದುಕೊಳ್ಳಬಹುದು ಅಥವಾ ಈಗಾಗಲೇ ಕೆಜಿಪಿ, ನುಡಿ, ಕೆ.ಪಿ.ರಾವ್ ಮಾದರಿಯ ಕೀಬೋರ್ಡ್‌ನಲ್ಲಿ ಟೈಪ್ ಮಾಡುತ್ತಿದ್ದವರಿಗಾಗಿ ಆಯಾ ಕೀಬೋರ್ಡ್ ಶೈಲಿಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಇಂಗ್ಲಿಷಿನಲ್ಲಿಯೇ ಕನ್ನಡ ಟೈಪ್ ಮಾಡುವ ಅಭ್ಯಾಸವಿದ್ದರೆ ಲಿಪ್ಯಂತರಣ ಆಯ್ಕೆ ಮಾಡಿಬಿಡಿ. ಈ ಸೆಟ್ಟಿಂಗ್ ಅನ್ನು ಒಂದು ಸಲ ಮಾಡಿಟ್ಟುಕೊಂಡರೆ ಆಯಿತು, ಪದೇ ಪದೇ ಮಾಡಿಕೊಳ್ಳಬೇಕಾಗಿಲ್ಲ.

ನಂತರ ಬರೆಯಬೇಕಾದಾಗಲೆಲ್ಲಾ Ctrl+M (ಕಂಟ್ರೋಲ್ ಮತ್ತು M) ಬಟನ್‌ಗಳನ್ನು ಒಮ್ಮೆ ಒತ್ತಿದಾಗ ಕನ್ನಡಕ್ಕೂ, ಮತ್ತೊಮ್ಮೆ Ctrl+M ಒತ್ತಿದರೆ ಇಂಗ್ಲಿಷ್‌ಗೂ ಬದಲಾಗುತ್ತದೆ. ಈ ಟೂಲ್ ಇದೆಯೆಂದಾದರೆ, ಬ್ಲಾಗುಗಳಿಗೆ, ಫೇಸ್‌ಬುಕ್ ಪೋಸ್ಟ್‌ಗಳಿಗೆ, ಸುದ್ದಿ-ಲೇಖನ ವಿಭಾಗಗಳಿಗೆ ಕಾಮೆಂಟ್ ಮಾಡಲು ಈ ಕಂಗ್ಲಿಷ್ ಭೂತ ಅಡ್ಡ ಬರುವುದೇ ಇಲ್ಲ.

ಮೊಬೈಲ್‌ನಲ್ಲಿ: ಯಾವುದೇ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲಿ ಕನ್ನಡದಲ್ಲಿ ಬರೆಯಲು ಪಾಣಿನಿ, ಎನಿಸಾಫ್ಟ್, ಸ್ವರಚಕ್ರ, ಮಲ್ಟಿಲಿಂಗ್ ಕೀಬೋರ್ಡ್ ಮುಂತಾದ ಹಲವು ಆ್ಯಪ್‌ಗಳು ಗೂಗಲ್‌ನ ಪ್ಲೇ ಸ್ಟೋರ್‌ನಲ್ಲಿ ಲಭ್ಯ ಇವೆಯಾದರೂ, ಜಸ್ಟ್ ಕನ್ನಡ ಎಂಬ ಆ್ಯಪ್ ಇವೆಲ್ಲವುಗಳ ಸಾಲಿನಲ್ಲಿ ಎದ್ದು ನಿಲ್ಲುತ್ತದೆ. ಬೆಂಗಳೂರಿನ ಯುವ ಟೆಕ್ಕಿ ಶ್ರೀಧರ್ ಎನ್.ಆರ್. ಇದನ್ನು ನಿರ್ಮಿಸಿದ್ದಾರೆ ಮತ್ತು ಬಂದ ಸಲಹೆಗಳ ಆಧಾರದಲ್ಲಿ ಇತ್ತೀಚೆಗೆ ಅಪ್‌ಡೇಟ್ ಕೂಡ ಮಾಡಿದ್ದಾರೆ. ತತ್ಫಲವಾಗಿ ಮೊಬೈಲ್‌ನಲ್ಲಿ ಕನ್ನಡ ಟೈಪ್ ಮಾಡುವುದು ಇನ್ನಷ್ಟು ಸುಲಭವಾಗಿದೆ. ಪ್ಲೇಸ್ಟೋರ್‌ನಲ್ಲಿ Just Kannada ಅಂತ ಸರ್ಚ್ ಮಾಡಿದರೆ ಇದು ನಿಮಗೆ ಲಭ್ಯ. ಅತ್ಯಂತ ಕಡಿಮೆ ಕೀಲಿಗಳನ್ನು ಬಳಸಿ ಕನ್ನಡ ಬರೆಯುವ ಸಾಧ್ಯತೆ ಇದರ ಹೆಗ್ಗಳಿಕೆ. ಇದರ ಬಳಕೆಯನ್ನು ಮತ್ತಷ್ಟು ಸುಲಭವಾಗಿಸಲು ಶ್ರೀಧರ್ ಹಾಗೂ ಮತ್ತೊಬ್ಬ ಕನ್ನಡದ ಮನಸ್ಸಿನ ಟೆಕ್ಕೀ ಓಂಶಿವಪ್ರಕಾಶ್ ಹೆಚ್.ಎಲ್. ಸೇರಿಕೊಂಡು ಇದರ ಸುಧಾರಿತ ರೂಪವನ್ನು ಶೀಘ್ರದಲ್ಲೇ ಹೊರತರುತ್ತಿದ್ದಾರೆ. ಟ್ಯಾಬ್ಲೆಟ್‌ಗಳಲ್ಲಿಯೂ ಕೆಲಸ ಮಾಡುವ ಈ ಉಚಿತ ಆ್ಯಪ್‌ನ ಸದುಪಯೋಗಪಡಿಸಿಕೊಳ್ಳಿ.

ಒಂದು ಮೊಬೈಲ್‌ನ ಇಂಟರ್ನೆಟ್ ಸಂಪರ್ಕ ಮತ್ತೊಂದರಲ್ಲಿ ಬಳಸುವ ಬಗೆ

ವಿಜಯ ಕರ್ನಾಟಕ ಅಂಕಣ, ಮಾಹಿತಿ@ತಂತ್ರಜ್ಞಾನ: ನವೆಂಬರ್ 18, 2013

ಹೊಸದಾಗಿ ಮಾರುಕಟ್ಟೆಗೆ ಬರುತ್ತಿರುವ ಸ್ಮಾರ್ಟ್‌ಫೋನ್‌ಗಳಲ್ಲಿ ಇಂಟರ್ನೆಟ್‌ನ ಅದ್ಭುತ ಪ್ರಯೋಜನವೊಂದು ಇದೆ ಎಂಬುದು ಬಹುತೇಕರಿಗೆ ಗೊತ್ತಿರಲಾರದು. ಈ ಸ್ಮಾರ್ಟ್‌ಫೋನ್‌ಗಳು ಇಮೇಲ್, ಚಾಟಿಂಗ್, ಫೇಸ್‌ಬುಕ್-ಇಂಟರ್ನೆಟ್ ಬ್ರೌಸಿಂಗ್, ಗೇಮ್ಸ್ ಇವುಗಳ ಹೊರತಾಗಿ ಟಿದರಿಂಗ್ (Tethering) ಎಂಬ ಒಂದು ವ್ಯವಸ್ಥೆಯನ್ನು ಹೊಂದಿರುತ್ತವೆ. ಟಿದರಿಂಗ್ ಅಂದರೆ, ನಿಮ್ಮ ಮೊಬೈಲ್‌ನಲ್ಲಿರುವ ಇಂಟರ್ನೆಟ್ ಸಂಪರ್ಕವನ್ನು ಬೇರೆ ಮೊಬೈಲ್ ಅಥವಾ ವೈ-ಫೈ ಸೌಲಭ್ಯವುಳ್ಳ ಕಂಪ್ಯೂಟರಿಗೆ ಹಂಚಲು ಅನುಕೂಲ ಮಾಡಿಕೊಡುವ ವ್ಯವಸ್ಥೆ.

ಇದರಿಂದೇನು ಪ್ರಯೋಜನ ಎಂಬ ಕುತೂಹಲವೇ? ಮುಂದೆ ಓದಿ. ಇತ್ತೀಚೆಗೆ ಮೊಬೈಲ್ ಫೋನ್‌ಗಳ ಆಕರ್ಷಣೆ ಹೆಚ್ಚಾಗುತ್ತಿದೆ. ಒಂದಲ್ಲ, ಕನಿಷ್ಠ ಎರಡು ಸಿಮ್ ಕಾರ್ಡ್‌ಗಳನ್ನು ಹೊಂದುವುದೂ ಒಂದು ಕ್ರೇಜ್ ಆಗಿಬಿಟ್ಟಿದೆ. ಎರಡೆರಡು ಸಂಖ್ಯೆಗಳಲ್ಲಿ ಮಾತನಾಡಬಹುದು ಅಥವಾ ಒಂದನ್ನು ಇಂಟರ್ನೆಟ್ ಸಂಪರ್ಕಕ್ಕಾಗಿ ಹಾಗೂ ಇನ್ನೊಂದನ್ನು ಕರೆ, ಎಸ್ಎಂಎಸ್ ಮುಂತಾದ ಕಾರ್ಯಗಳಿಗಾಗಿ ಬಳಸಬಹುದು ಎಂಬ ಆಲೋಚನೆ. ಇದಕ್ಕಾಗಿಯೇ ಡ್ಯುಯಲ್ ಸಿಮ್ (ಎರಡು ಸಿಮ್ ಕಾರ್ಡ್) ಹಾಕಬಲ್ಲ ಮೊಬೈಲ್/ಸ್ಮಾರ್ಟ್‌ಫೋನ್‌ಗಳು ಬಂದಿವೆಯಾದರೂ, ಅದರ ಕಾರ್ಯಕ್ಷಮತೆ ಮತ್ತು ಕಾರ್ಯವಿಧಾನದ ಬಗ್ಗೆ ಸಂದೇಹಗಳು ಮತ್ತು ಅಪಸ್ವರಗಳು ಕೇಳಿಬರುತ್ತಿರುವುದರಿಂದ ಎರಡೆರಡು ಪ್ರತ್ಯೇಕ ಮೊಬೈಲ್ ಫೋನ್‌ಗಳನ್ನೇ ಇಟ್ಟುಕೊಳ್ಳುವವರೂ ಇದ್ದಾರೆ.

ಒಂದು ಸ್ಮಾರ್ಟ್ ಫೋನ್‌ನಲ್ಲಿ ಇಂಟರ್ನೆಟ್ ಸಂಪರ್ಕವನ್ನೇ ಮುಖ್ಯ ಕಾರ್ಯವಾಗಿ ಬಳಸಿಕೊಂಡು, ಅದಕ್ಕೆ ತಕ್ಕಂತೆ ಅನ್‌ಲಿಮಿಟೆಡ್ ಡೇಟಾ ವರ್ಗಾವಣೆಯ ಪ್ಯಾಕ್ (ಅಂದರೆ ಎಷ್ಟು ಬೇಕಾದರೂ ಇಂಟರ್ನೆಟ್ ಬಳಸಬಹುದಾದ, ಮಾಸಿಕ ನಿಗದಿತ ಶುಲ್ಕವಿರುವ ಪ್ಯಾಕೇಜ್) ಹಾಕಿಸಿಕೊಂಡರೆ ಎರಡೂ ಮೊಬೈಲ್‌ಗಳಲ್ಲಿ ಹಾಗೂ ಬೇಕಿದ್ದರೆ ನಿಮ್ಮ ಕಂಪ್ಯೂಟರಿನಲ್ಲಿಯೂ ಇದರ ಮೂಲಕ ಇಂಟರ್ನೆಟ್ ಜಾಲಾಡಬಹುದು. ಯಾವುದೇ ಹೆಚ್ಚುವರಿ ಸಾಧನ ಖರೀದಿಸಬೇಕಾಗಿಲ್ಲ. ಇದರಿಂದ, ಎರಡೆರಡು ಮೊಬೈಲ್/ಸ್ಮಾರ್ಟ್ ಫೋನ್‌ಗಳಿಗೆ ಇಂಟರ್ನೆಟ್ ಪ್ಯಾಕ್ ಹಾಕಿಸುವ ಶ್ರಮ/ಹಣ ವ್ಯಯ ತಪ್ಪುತ್ತದೆ.

ಒಂದು ಫೋನಿನಲ್ಲಿರುವ ಇಂಟರ್ನೆಟ್ ಸಂಪರ್ಕವನ್ನು ಬೇರೆ ಫೋನ್/ಅಥವಾ ಕಂಪ್ಯೂಟರಿನಲ್ಲಿ ಬಳಸಿಕೊಳ್ಳಲು ಹೀಗೆ ಮಾಡಿ.

ಸೆಟ್ಟಿಂಗ್ಸ್‌ನಲ್ಲಿ Wireless & Networks ಎಂಬ ವಿಭಾಗದ ಅಡಿಯಲ್ಲಿ Tethering & Portable Hotspot ಎಂದು ಬರೆದಿರುತ್ತದೆ (ಕೆಲವು ಸ್ಮಾರ್ಟ್‌ಫೋನ್‌ಗಳಲ್ಲಿ More ಎಂದು ಕ್ಲಿಕ್ ಮಾಡಿದರೆ ಈ ಸೌಲಭ್ಯ ಕಾಣಿಸುತ್ತದೆ). ಅದನ್ನು ಕ್ಲಿಕ್ ಮಾಡಿದಾಗ, ಅದರ ಬೇಸಿಕ್ ಸೆಟ್ಟಿಂಗ್ಸ್ ಎಂದಿರುವಲ್ಲಿ ಹಲವು ಆಯ್ಕೆಗಳು ಗೋಚರಿಸುತ್ತವೆ.

ಅದರಲ್ಲಿ, Set up Wi-Fi hotspot ಎಂದಿರುವಲ್ಲಿ, Network SSID ಜಾಗದಲ್ಲಿ ನಿಮ್ಮದೇ ವೈ-ಫೈ ಹಾಟ್‌ಸ್ಪಾಟ್‌ಗೊಂದು ಹೆಸರು ಕೊಡಿ (ಉದಾ. Avinash-Wi-Fi). ನಂತರ, Security ಅಂತ ಇರುವಲ್ಲಿ, WPA PSK ಅಥವಾ WPA2 PSK ಅಂತ ಆಯ್ಕೆ ಮಾಡಿ. ಮುಂದಿನ ಸಾಲಿನಲ್ಲಿ, ನಿಮ್ಮದೇ ಪಾಸ್‌ವರ್ಡ್ ಒಂದನ್ನು ಕ್ರಿಯೇಟ್ ಮಾಡಿಕೊಳ್ಳಿ. ಈ ವೈ-ಫೈ ಪಾಸ್‌ವರ್ಡ್ ನಿಮ್ಮ ಮೊಬೈಲ್‌ಗೆ ಸಂಪರ್ಕಿಸಲಿರುವ ಮತ್ತೊಂದು ಸಾಧನಕ್ಕೆ ಬೇಕಾಗುತ್ತದೆ. ಈ ಪಾಸ್‌ವರ್ಡನ್ನು ಎಲ್ಲಾದರೂ ಬರೆದಿಟ್ಟುಕೊಳ್ಳಿ. ಇದಾದ ನಂತರ, ಎಷ್ಟು ಬಳಕೆದಾರರು ನಿಮ್ಮ ಮೊಬೈಲ್‌ನಲ್ಲಿರುವ ಇಂಟರ್ನೆಟ್ ಸಂಪರ್ಕವನ್ನು ಬಳಸಿಕೊಳ್ಳಬೇಕೆಂಬ ಸಂಖ್ಯೆಯನ್ನೂ ಆಯ್ಕೆ ಮಾಡಿಕೊಳ್ಳಬಹುದು. ಕೊನೆಯಲ್ಲಿ Save ಬಟನ್ ಒತ್ತಿಬಿಡಿ. ಬಳಿಕ ಹಿಂದಕ್ಕೆ ಹೋಗಿ, Wi-Fi Hotspot ಎದುರಿರುವ ಬಟನ್ ಒತ್ತುವ ಮೂಲಕ ಆನ್ ಮಾಡಿ.

ಈಗ, ಇನ್ನೊಂದು ಮೊಬೈಲ್‌ನಲ್ಲಿ ವೈಫೈ ಆನ್ ಮಾಡಿದ ತಕ್ಷಣ, ಲಭ್ಯವಿರುವ ವೈ-ಫೈ ಸಂಪರ್ಕಗಳಿಗಾಗಿ ಅದು ಸ್ವಯಂ ಆಗಿ ಹುಡುಕಾಡುತ್ತದೆ. ಮೊದಲ ಮೊಬೈಲ್‌ಗೆ ನೀವು ಕೊಟ್ಟಿರುವ ಹೆಸರು (ಉದಾ. Avinash-Wi-Fi) ಅಲ್ಲಿ ಗೋಚರಿಸುತ್ತದೆ. ಅದನ್ನು ಕ್ಲಿಕ್ ಮಾಡಿದ ತಕ್ಷಣ, ಪಾಸ್‌ವರ್ಡ್ ಕೇಳುತ್ತದೆ. ನೀವೇ ಕ್ರಿಯೇಟ್ ಮಾಡಿರುವ ಪಾಸ್‌ವರ್ಡ್ ಹಾಕಿದ ತಕ್ಷಣ, ಮೊದಲಿನ ಫೋನ್‌ನ ಇಂಟರ್ನೆಟ್ ಸಂಪರ್ಕವನ್ನು, ಎರಡನೇ ಫೋನ್‌ನಲ್ಲಿ ವೆಬ್ ಬ್ರೌಸಿಂಗ್, ಚಾಟಿಂಗ್, ಇಮೇಲ್, ಸಾಫ್ಟ್‌ವೇರ್ ಅಪ್‌ಡೇಟ್ ಮುಂತಾದವುಗಳಿಗೆ ಸುಲಭವಾಗಿ ಬಳಸಬಹುದು.

ಇದರ ಪಾಸ್‌ವರ್ಡನ್ನು ನಿಮ್ಮ ಸ್ನೇಹಿತರಿಗೆ ನೀಡಿದರೆ, ಅವರು ಕೂಡ ನಿಮ್ಮ ಇಂಟರ್ನೆಟ್ ಸಂಪರ್ಕ ಬಳಸಿ ತಮ್ಮ ಮೊಬೈಲ್‌ಗಳಲ್ಲಿ ಅಂತರ್ಜಾಲ ಜಾಲಾಡಬಹುದು. ಪಾಸ್‌ವರ್ಡನ್ನು ಬದಲಾಯಿಸುವ ಆಯ್ಕೆಯೂ ಇದೆ. ಮತ್ತು ನಿಮ್ಮ ಕೆಲಸವಾದ ಬಳಿಕ Wi-Fi hotspot ಆಫ್ ಮಾಡುವುದನ್ನು ಮರೆಯಬೇಡಿ. ಯಾಕೆಂದರೆ, ವೈಫೈ ಆನ್ ಇದ್ದರೆ, ಬ್ಯಾಟರಿ ಬಳಕೆ ಹೆಚ್ಚು.

2ಜಿ ಡೇಟಾ ದರ ಕಡಿತ – ನಿಮಗೆ ಸಿಕ್ಕಿದ್ದೇನು?

ವಿಜಯ ಕರ್ನಾಟಕ ಅಂಕಣ ಮಾಹಿತಿ @ ತಂತ್ರಜ್ಞಾನ: 8 ಜುಲೈ 2013

ಮೊಬೈಲ್ ಇಂಟರ್ನೆಟ್ ಈಗ ಹೆಚ್ಚಿನವರ ಕೈಗೆಟಕುವ ಸ್ಥಿತಿಗೆ ಬಂದಿರುವ ಹಂತದಲ್ಲಿಯೇ, ಇತ್ತೀಚೆಗೆ ಡೇಟಾ ಶುಲ್ಕ 80ರಿಂದ 90 ಶೇಕಡಾದಷ್ಟು ಕಡಿತಗೊಳಿಸಿದ್ದೇವೆ ಎಂದು ಮೊಬೈಲ್ ಸೇವೆ ಒದಗಿಸುತ್ತಿರುವ ಕಂಪನಿಗಳು (ಏರ್‌ಟೆಲ್, ವೊಡಾಫೋನ್, ಐಡಿಯಾ ಮತ್ತು ಟಾಟಾ ಡೊಕೊಮೊ) ಹೇಳಿಕೊಂಡವು. ಅಂದರೆ, 10 ಕೆಬಿ (ಕಿಲೋಬೈಟ್)ಗೆ 10 ಪೈಸೆ ಇದ್ದ ಶುಲ್ಕವನ್ನು ಈಗ 10 ಕೆಬಿಗೆ 1 ಪೈಸೆ ಅಥವಾ 2 ಪೈಸೆಗೆ ಇಳಿಸಿದ್ದೇವೆ ಅಂತ ಅವರು ಘೋಷಿಸಿದ್ದಾರೆ. ಇದರಿಂದ ನಮಗೇನು ಲಾಭ ಅಂತ ಗೊಂದಲಕ್ಕೀಡಾದವರಿಗೆ ಈ ಮಾಹಿತಿ.

ವಾಸ್ತವವಾಗಿ ಮೊಬೈಲ್‌ನಲ್ಲಿ ಇಂಟರ್ನೆಟ್ (2ಜಿ ಅಥವಾ 3ಜಿ) ಸಂಪರ್ಕಕ್ಕೆ ಹಲವಾರು ಪ್ಲ್ಯಾನ್‌ಗಳನ್ನು (ತಿಂಗಳಿಗೆ ಎಷ್ಟು ಎಂಬಿ ಅಥವಾ ಜಿಬಿ ಡೇಟಾ ಬಳಕೆ) ಮೊಬೈಲ್ ಸೇವೆಯ ಪೂರೈಕೆದಾರರು ನೀಡುತ್ತಿದ್ದಾರೆ. ತಿಂಗಳಿಗೆ 100 ಎಂಬಿ ಡೇಟಾಕ್ಕೆ ಇಂತಿಷ್ಟು, 1 ಜಿಬಿಗೆ ಇಷ್ಟು, 2 ಜಿಬಿಗೆ ಜಾಸ್ತಿ, ಹಾಗೂ ಅನ್‌ಲಿಮಿಟೆಡ್ ಡೇಟಾಕ್ಕೆ ಇಂತಿಷ್ಟು ಅಂತ ದರ ನಿಗದಿಪಡಿಸಿರುತ್ತಾರೆ. ಈ ರೀತಿಯ ನಿಗದಿತ ಇಂಟರ್ನೆಟ್ ಪ್ಯಾಕ್‌ಗಳನ್ನು ಬಳಸುತ್ತಿರುವವರಿಗೆ ಇದರಿಂದ ಯಾವುದೇ ರೀತಿಯ ಲಾಭವಾಗಿಲ್ಲ. ಲಾಭವಾಗುವುದು ಎಂದರೆ, ತಮ್ಮ ಮೊಬೈಲ್‌ನಲ್ಲಿ ಇಂತಹಾ ಯಾವುದೇ ಇಂಟರ್ನೆಟ್ ಪ್ಯಾಕ್‌ಗಳನ್ನು ಅಳವಡಿಸಿಕೊಳ್ಳದೆ, ‘ಎಷ್ಟು ಬೇಕೋ ಅಷ್ಟು ಮತ್ತು ಯಾವಾಗ ಬೇಕೋ ಆವಾಗ’ ಮಾತ್ರ ಇಂಟರ್ನೆಟ್ ಬಳಸುವವರಿಗೆ (Pay as you use) ಮಾತ್ರ. ಅಂದರೆ ತೀರಾ ಕಡಿಮೆ ಪ್ರಮಾಣದಲ್ಲಿ ಇಂಟರ್ನೆಟ್ ಬಳಸುವವರಿಗೆ ಮಾತ್ರ.

ಉದಾಹರಣೆಗೆ, ನೀವು ಒಂದು ವೆಬ್ ಸೈಟನ್ನು ಮೊಬೈಲ್‌ನಲ್ಲಿ ನೋಡುತ್ತೀರಿ ಅಂತಿಟ್ಕೊಳ್ಳಿ. ಪುಟ ಓಪನ್ ಆಗಲು ಸುಮಾರು 10 ರಿಂದ 50 ಕೆಬಿ ಅಥವಾ ಹೆಚ್ಚು (ಪುಟದಲ್ಲಿರುವ ಡೇಟಾ ಅಂದರೆ – ಚಿತ್ರ, ಲೇಖನ ಇತ್ಯಾದಿಯನ್ನು ಅವಲಂಬಿಸಿ) ಡೇಟಾ ಡೌನ್‌ಲೋಡ್ ಆಗಬೇಕಾಗುತ್ತದೆ. ಹತ್ತು ಕೆಬಿಗೆ 1 ಪೈಸೆ ಎಂದಾದರೆ, 50 ಕೆಬಿಯ ಒಂದು ಪುಟವನ್ನು ನೋಡಿದ ಬಳಿಕ, ನಿಮ್ಮ ಮೊಬೈಲ್ ಡೇಟಾ ಸಂಪರ್ಕವನ್ನು ಆಫ್ ಮಾಡಿದರೆ, ನಿಮಗೆ 5 ಪೈಸೆ ಶುಲ್ಕ ವಿಧಿಸಲಾಗುತ್ತದೆ. (ಪ್ರೀಪೇಯ್ಡ್ ಮೊಬೈಲ್‌ನಲ್ಲಾದರೆ ಇದ್ದ ಹಣವೇ ಕಟ್ ಆಗುತ್ತದೆ, ಪೋಸ್ಟ್‌ಪೇಯ್ಡ್‌ನಲ್ಲಾದರೆ ಬಿಲ್‌ಗೆ ಸೇರ್ಪಡೆಯಾಗುತ್ತದೆ.)

1024 ಕೆಬಿ (ಕಿಲೋಬೈಟ್) ಎಂದರೆ 1 ಎಂಬಿ (ಮೆಗಾಬೈಟ್). ಈಗ 120 ರೂ. ಆಸುಪಾಸಿನ ಡೇಟಾ ಪ್ಯಾಕ್ ಖರೀದಿಸಿದರೆ, ನಿಮಗೆ 1 ಜಿಬಿ (1024 ಎಂಬಿ) ಪ್ರಮಾಣದ 2ಜಿ ಡೇಟಾ ಸಿಗುತ್ತದೆ. Pay as you go ಶುಲ್ಕದ ಪ್ರಕಾರ, 120 ರೂ.ಗೆ ನಿಮಗೆ ಸಿಗುವ ಡೇಟಾ ಪ್ರಮಾಣ ಸುಮಾರು 100 ಎಂಬಿಯಷ್ಟು ಮಾತ್ರ. ಹೀಗಾಗಿ ಡೇಟಾ ಪ್ಯಾಕ್ ಹಾಕಿಸಿಕೊಳ್ಳುವುದೇ ಸೂಕ್ತ. ಡೇಟಾ ಪ್ಯಾಕ್ ಇಲ್ಲದಿದ್ದರೆ, ಈ ಯೋಜನೆ ಪ್ರಕಾರ 1 ಜಿಬಿ ಡೇಟಾಕ್ಕೆ ನೀವು ತೆರಬೇಕಾಗಿರುವ ಹಣ ಸಾವಿರ ರೂಪಾಯಿಗೂ ಹೆಚ್ಚು. ಡೇಟಾ ಪ್ಯಾಕ್ ಮಿತಿ ಮುಗಿದ ಬಳಿಕ ಆ ತಿಂಗಳ ಉಳಿದ ದಿನಗಳಲ್ಲಿ ಡೇಟಾ ಬಳಕೆ ಸೀಮಿತಗೊಳಿಸಿದರೆ ಮಾತ್ರ ಇದರ ಲಾಭ ಪಡೆಯಬಹುದು. ಬದಲಾಗಿ, ಸಣ್ಣ ಪ್ರಮಾಣದ ಡೇಟಾ ಪ್ಯಾಕ್‌ಗಳೂ ಲಭ್ಯವಿರುತ್ತವೆ.

ಇದೆಲ್ಲಾ ಮಾರ್ಕೆಟಿಂಗ್ ಗಿಮಿಕ್‌ಗಳಷ್ಟೇ. ಸರಕಾರಿ ಸ್ವಾಮ್ಯದ ಬಿಎಸ್ಸೆನ್ನೆಲ್ ಇದೇ ವ್ಯವಸ್ಥೆಯನ್ನು ಹಿಂದೆಯೇ ಜಾರಿಗೆ ತಂದಿತ್ತು. ಖಾಸಗಿ ಮೊಬೈಲ್ ಸೇವಾ ಕಂಪನಿಗಳು ಈಗಷ್ಟೇ ಅವುಗಳನ್ನು ಘೋಷಿಸಿವೆ.

ನೆನಪಿಡಿ: ನೀವು ಯಾವುದೇ ಫೋಟೋ, ವೀಡಿಯೋ ಅಥವಾ ಯಾವುದೇ ಫೈಲನ್ನು ಡೌನ್‌ಲೋಡ್ ಮಾಡಿದರೆ ಮಾತ್ರ ಡೇಟಾ ಬಳಕೆ ಎಂದರ್ಥವಲ್ಲ. ಯಾವುದೇ ವೆಬ್‌ಸೈಟಿನ ಪುಟ ಓಪನ್ ಮಾಡಿದರೂ ಕೂಡ, ಅದು ಕೂಡ ಡೇಟಾ ಡೌನ್‌ಲೋಡ್ ಆದಂತೆಯೇ. ಅಂದರೆ, ನಿಮಗೆ ಸರಿಯಾಗಿ ಕಾಣಿಸಬೇಕಿದ್ದರೆ ಆ ಪುಟದಲ್ಲಿರುವ ಎಲ್ಲ ಫೈಲುಗಳು (ಚಿತ್ರ, ಅಕ್ಷರಗಳು, ಲಿಂಕ್‌ಗಳು) ಇತ್ಯಾದಿ ನಿಮ್ಮ ಸಾಧನಕ್ಕೆ (ಸ್ಕ್ರೀನ್ ಅಳತೆಗೆ ಅನುಗುಣವಾಗಿ) ಡೌನ್‌ಲೋಡ್ ಆಗಿ, Cache ಎಂಬ ತಾತ್ಕಾಲಿಕ ಮೆಮೊರಿಯಲ್ಲಿ ಸೇವ್ ಆಗಿರುತ್ತವೆ. ಇವೆಲ್ಲವೂ ಡೇಟಾದ ಪರಿಧಿಯಲ್ಲೇ ಇರುವುದರಿಂದ, ತುಂಬಾ ಹೆಚ್ಚು ರೆಸೊಲ್ಯುಶನ್ ಇರುವ ಚಿತ್ರಗಳನ್ನು ನೋಡಿದರೆ, ಹೆಚ್ಚು ಡೇಟಾ ಖರ್ಚಾಗುತ್ತದೆ. ವೀಡಿಯೋ ವೀಕ್ಷಿಸಿದರೆ ಕೂಡ ಅದಕ್ಕೆ ಖರ್ಚಾಗುವ ಡೇಟಾ ಪ್ರಮಾಣ ಹೆಚ್ಚು. ಇದೇ ಕಾರಣಕ್ಕಾಗಿ, ಹೆಚ್ಚಿನ ಕಂಪನಿಗಳು ಮೊಬೈಲ್‌ಗಾಗಿಯೇ ಪ್ರತ್ಯೇಕ ವೆಬ್‌ಸೈಟುಗಳನ್ನು ಸಿದ್ಧಪಡಿಸಿರುತ್ತವೆ. ಅಂದರೆ ಬೇಗನೇ ಪುಟವು ಲೋಡ್ ಆಗುವಂತಾಗಲು (ನಿಮ್ಮ ಸಾಧನಕ್ಕೆ ತಾತ್ಕಾಲಿಕವಾಗಿ ಡೌನ್‌ಲೋಡ್ ಆಗುವಂತಾಗಲು), ಕಡಿಮೆ ರೆಸೊಲ್ಯುಶನ್ ಚಿತ್ರಗಳನ್ನು, ಅಥವಾ ಚಿತ್ರಗಳ ಸಂಖ್ಯೆಯನ್ನೇ ಕಡಿಮೆ ಬಳಸುತ್ತವೆ.

ಇಂಟರ್ನೆಟ್ ಜಾಲಾಡಲು ಬ್ರೌಸರ್‌ಗಳು

ಜನ ಸಾಮಾನ್ಯರಿಗಾಗಿ ಮಾಹಿತಿ@ತಂತ್ರಜ್ಞಾನ- ವಿ.ಕ.ಅಂಕಣ-21 (ಜನವರಿ 21, 2013)

ಇಂಟರ್ನೆಟ್‌ನಲ್ಲಿ ವಿವಿಧ ವೆಬ್‌ತಾಣಗಳನ್ನು ಜಾಲಾಡಬೇಕಿದ್ದರೆ, ಕಂಪ್ಯೂಟರ್ ಜೊತೆಗೆ ಇಂಟರ್ನೆಟ್ ಸಂಪರ್ಕವೊಂದು ಎಷ್ಟು ಮೂಲಭೂತ ಆವಶ್ಯಕತೆಯೋ, ಅದನ್ನು ಜಾಲಾಡಲು ಬ್ರೌಸರ್ ಎಂಬ ತಂತ್ರಾಂಶ ಬೇಕಿರುವುದೂ ಅಷ್ಟೇ ಮುಖ್ಯ. ಯಾವುದೇ ಇಂಟರ್ನೆಟ್ ಕೆಫೆಗೋ, ಅಥವಾ ನೀವು ಹೊಸದಾಗಿ ಕೊಂಡುಕೊಂಡ ಕಂಪ್ಯೂಟರಿನೊಳಗೋ, ಇಂಟರ್ನೆಟ್ ಜಾಲಾಡುವುದಕ್ಕೆ ಇಂಗ್ಲಿಷಿನಲ್ಲಿ e ಎಂದು ಬರೆದಿರುವ ಐಕಾನ್ ಒಂದನ್ನು ಕ್ಲಿಕ್ ಮಾಡಿದರೆ, ಅದರಲ್ಲಿ ನಿಮಗೆ ಬೇಕಾದ ಸೈಟುಗಳ ಯುಆರ್‌ಎಲ್ (ವೆಬ್ ವಿಳಾಸ) ಹಾಕಿ ಎಂಟರ್ ಕೊಟ್ಟರೆ ಅದು ಆಯಾ ತಾಣಗಳಿಗೆ ನಿಮ್ಮನ್ನು ಕರೆದೊಯ್ದು ವಿಶ್ವರೂಪ ದರ್ಶನ ಮಾಡಿಸುತ್ತದೆ. ಇಂಟರ್ನೆಟ್ ಜಾಲಾಡಲು ಸಹಾಯವಾಗುವ ಈ ಬ್ರೌಸರ್‌ಗಳಲ್ಲಿಯೂ ಸಾಕಷ್ಟು ವಿಧಗಳಿವೆ ಎಂಬುದು ಬಹುತೇಕರಿಗೆ ತಿಳಿದಿರಲಾರದು. ಇದನ್ನು ಪರಿಚಯಿಸುವುದು ಈ ಲೇಖನದ ಉದ್ದೇಶ.

ಅಂತರ್ಜಾಲದಲ್ಲಿ ಹೋಗಿ ಗೂಗಲ್‌ನಲ್ಲಿ ವೆಬ್ ಬ್ರೌಸರ್ ಅಂತ ಹುಡುಕಾಡಿದರೆ, ಲಕ್ಷಾಂತರ ಪುಟಗಳು ತೆರೆದುಕೊಳ್ಳುತ್ತವೆ. ವೆಬ್ ಬ್ರೌಸ್ ಮಾಡುವುದಕ್ಕೆ ಸಾಕಷ್ಟು ತಂತ್ರಾಂಶಗಳಿವೆ. ಆದರೆ ಇಲ್ಲಿ ಭಾರತದಲ್ಲಿ ಹೆಚ್ಚು ಜನಪ್ರಿಯವಾಗಿರುವ ಮತ್ತು ಹೆಚ್ಚು ಬಳಕೆಯಲ್ಲಿರುವ ಕೆಲವನ್ನು ಮಾತ್ರ ಇಲ್ಲಿ ಪರಿಗಣಿಸೋಣ.

ಎಲ್ಲರಿಗೂ ತಿಳಿದಿರುವಂತೆ ಮೊದಲನೆಯದು ಇಂಟರ್ನೆಟ್ ಎಕ್ಸ್‌ಪ್ಲೋರರ್. ಇದು ನಮ್ಮಲ್ಲಿ ಅತೀ ಹೆಚ್ಚು ಬಳಕೆಯಲ್ಲಿರುವ ಮೈಕ್ರೋಸಾಫ್ಟ್ ಕಂಪನಿಯ ವಿಂಡೋಸ್ ಕಾರ್ಯಾಚರಣಾ ವ್ಯವಸ್ಥೆಯಲ್ಲಿ ಡೀಫಾಲ್ಟ್ ಆಗಿ ಬಂದಿರುತ್ತದೆ. ನೀಲಿ ಬಣ್ಣದಲ್ಲಿ ‘e’ ಎಂಬಂತೆ ಕಾಣಿಸುವ ಇದನ್ನು ಶಾರ್ಟ್ ಆಗಿ IE ಎಂದೂ ಕರೆಯಲಾಗುತ್ತದೆ. ಜಗತ್ತಿನಲ್ಲಿ ಇದುವೇ ಇತ್ತೀಚಿನವರೆಗೂ ಪಾರಮ್ಯ ಸ್ಥಾಪಿಸಿತ್ತು. ಆದರೆ, ಅದರ ಏಕಚಕ್ರಾಧಿಪತ್ಯಕ್ಕೆ ಸಾಕಷ್ಟು ಅನ್ಯ ಬ್ರೌಸರುಗಳಿಂದ ಧಕ್ಕೆ ಬಂದಿದೆ. ಬ್ರೌಸಿಂಗ್ ವೇಗವು ಬ್ರೌಸರ್ ಬಳಕೆಯ ವೇಳೆ ಹೆಚ್ಚು ಪ್ರಭಾವ ಬೀರುವುದರಿಂದ ಮತ್ತು ವೆಬ್ ಪುಟಗಳನ್ನು ಯಾವ ರೀತಿ ತೋರಿಸುತ್ತದೆ ಎಂಬ ಮಾನದಂಡಗಳಿಂದ ಜನರು ಈಗ ಬೇರೆ ಬ್ರೌಸರುಗಳ ಮೊರೆ ಹೋಗುತ್ತಿದ್ದಾರೆ. ಆದರೂ ಮೈಕ್ರೋಸಾಫ್ಟ್ ಕಂಪನಿಯು ತಮ್ಮ ಬ್ರೌಸರ್‌ರನ್ನು ಆಗಾಗ್ಗೆ ಅಭಿವೃದ್ಧಿಗೊಳಿಸುತ್ತಲೇ ಬಂದಿದ್ದು, ಸ್ಫರ್ಧಾತ್ಮಕ ಯುಗದಲ್ಲಿ ತನ್ನ ಅಸ್ತಿತ್ವವನ್ನು ಕಾಪಾಡಿಕೊಳ್ಳಲು ಪ್ರಯತ್ನಿಸುತ್ತಲೇ ಇದೆ.

ಎರಡನೆಯದು ಮೈಕ್ರೋಸಾಫ್ಟ್‌ನ ಪ್ರತಿಸ್ಫರ್ಧಿ ಕಂಪನಿ ಗೂಗಲ್ ಹೊರತಂದಿರುವ ಗೂಗಲ್ ಕ್ರೋಮ್ ಎಂಬ ಬ್ರೌಸರ್. ಇದು ಕಡಿಮೆ ತೂಕದ್ದು ಅಂತ ಅನ್ನಿಸುತ್ತಿದ್ದು, ಪುಟಗಳು ಫಾಸ್ಟಾಗಿ ಲೋಡ್ ಆಗುತ್ತವೆ ಎಂಬುದು ಹಲವು ಬಳಕೆದಾರರ ಅಭಿಪ್ರಾಯ. ಇದು ಯುಟ್ಯೂಬ್, ಜಿಮೇಲ್, ಮ್ಯಾಪ್, ಗೂಗಲ್ ಸರ್ಚ್ ಎಂಜಿನ್ ಮತ್ತಿತರ ಗೂಗಲ್ ಉತ್ಪನ್ನಗಳಿಗೆ ಅತ್ಯುತ್ತಮ ನೆರವು ನೀಡುತ್ತದೆ ಎಂಬುದು ಬಳಸಿದವರ ಅಭಿಪ್ರಾಯ.

ಮೂರನೆಯದು ಎಂದರೆ ಮೋಝಿಲ್ಲಾ ಎಂಬ ಮುಕ್ತತಂತ್ರಾಂಶ ಕಂಪನಿಯು ಹೊರತಂದಿರುವ ಫೈರ್‌ಫಾಕ್ಸ್ ಎಂಬ ಬ್ರೌಸರ್. ಇದು ಕೂಡ ಜನಪ್ರಿಯವಾಗಿದೆ. ಇದಲ್ಲದೆ, ಒಪೆರಾ ಮತ್ತು ಹೆಚ್ಚಾಗಿ ಆಪಲ್ ಕಾರ್ಯಾಚರಣಾ ವ್ಯವಸ್ಥೆ ಬಳಸುವ ಕಂಪ್ಯೂಟರುಗಳಲ್ಲಿ ಸಫಾರಿ ಎಂಬ ಬ್ರೌಸರ್ ಕೂಡ ಜನಪ್ರಿಯವಾಗಿವೆ. ಇವೆಲ್ಲವನ್ನು ಕೂಡ ನಾವು ನಮ್ಮ ಕಂಪ್ಯೂಟರಿನಲ್ಲಿ ಅಳವಡಿಸಿಕೊಳ್ಳಬಹುದು. ಆಯಾ ಬ್ರೌಸರ್‌ಗಳ ವೆಬ್ ತಾಣಗಳಿಂದ ತಂತ್ರಾಂಶವನ್ನು ಡೌನ್‌ಲೋಡ್ ಮಾಡಿಕೊಂಡ ತಕ್ಷಣ exe ಫೈಲ್ ಕ್ಲಿಕ್ ಮಾಡಿದರೆ, ಅದನ್ನು ನಿಮ್ಮ ಡೀಫಾಲ್ಟ್ ಬ್ರೌಸರ್ ಮಾಡಬೇಕೇ ಅಂತ ನಿಮ್ಮನ್ನು ಕೇಳುತ್ತದೆ, ಬೇಕಿದ್ದರೆ yes ಕ್ಲಿಕ್ ಮಾಡಿ ಮುಂದುವರಿದರಾಯಿತು.

ಬ್ರೌಸರ್‌ಗಳಲ್ಲಿ ಆಡ್-ಆನ್ ಅಂತ ಕರೆಯಲಾಗುವ ಸಾಕಷ್ಟು ಕಿರು ತಂತ್ರಾಂಶಗಳು ಲಭ್ಯವಿರುತ್ತವೆ. ಮತ್ತು ಅಕ್ಷರಗಳು (ಯುನಿಕೋಡ್ ಮತ್ತು ಇತರ ಫಾಂಟ್‌ಗಳು) ಕಾಣಿಸುವ ರೀತಿ, ವೀಡಿಯೋ ಅಥವಾ ಫೋಟೋಗಳ ವೀಕ್ಷಣೆಯ ಅನುಕೂಲ, ಟ್ಯಾಬ್‌ಗಳು ತೆರೆದುಕೊಳ್ಳುವ ವೇಗ, ಅದರೊಳಗೆ ವಿಭಿನ್ನ ಕಿರು ತಂತ್ರಾಂಶಗಳನ್ನು ಅಳವಡಿಸಿಕೊಳ್ಳುವ ಸೌಕರ್ಯ … ಇವೆಲ್ಲವನ್ನೂ ನೋಡಿ ಬಳಕೆದಾರರು ಆಯಾ ಬ್ರೌಸರುಗಳನ್ನು ಇಷ್ಟಪಡುತ್ತಾರೆ. ಸದ್ಯದ ಸ್ಥಿತಿಯಂತೆ, ಗೂಗಲ್ ಕ್ರೋಮ್ ಶೇ.37 ಜಾಗತಿಕ ಬಳಕೆದಾರರೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ಇಂಟರ್ನೆಟ್ ಎಕ್ಸ್‌ಪ್ಲೋರರ್ ಶೇ.26, ಫೈರ್‌ಫಾಕ್ಸ್ ಶೇ.23, ಸಫಾರಿ ಶೇ.7, ಒಪೆರಾ ಶೇ.4 ಹಾಗೂ ಇತರ ಬ್ರೌಸರುಗಳು ಶೇ.3 ಪ್ರಮಾಣದಲ್ಲಿ ಬಳಕೆಯಲ್ಲಿವೆ.

ಇಂಗ್ಲಿಷ್‌ಗಿಂತ ಪ್ರಾದೇಶಿಕ ಭಾಷೆಗಳ ಅಂತರ್‌‘ಜಾಲ’ ದೊಡ್ಡದು!

01-13-13-InternetInIndia-P113-01-13ರಂದು ವಿಜಯ ಕರ್ನಾಟಕ ಮುಖಪುಟದಲ್ಲಿ ಪ್ರಕಟವಾದ ನನ್ನ ಲೇಖನ
ಬೆಂಗಳೂರು: ‘ಇಂಗ್ಲಿಷ್ ಗೊತ್ತಿರುವವರಿಗೆ ಮಾತ್ರವೇ ಇಂಟರ್ನೆಟ್’ ಎಂಬ ಮಿಥ್ಯೆಗೆ ಪ್ರತಿಯಾಗಿ, ಗ್ರಾಮಾಂತರ ಪ್ರದೇಶವಾಸಿಗಳೂ ಅಂತರ್ಜಾಲವನ್ನು ಹೆಚ್ಚು ಹೆಚ್ಚು ಜಾಲಾಡತೊಡಗುತ್ತಿದ್ದಾರೆ. ಗ್ರಾಮಾಂತರ ಪ್ರದೇಶಗಳಲ್ಲಿ ಇಂಟರ್ನೆಟ್ ಬಳಕೆ ಹೆಚ್ಚಾಗುತ್ತಿರುವ ಕುರಿತು ಭಾರತೀಯ ಇಂಟರ್ನೆಟ್ ಮತ್ತು ಮೊಬೈಲ್ ಒಕ್ಕೂಟ (ಐಎಎಂಎಐ) ಬಿಡುಗಡೆಗೊಳಿಸಿದ ವರದಿಯು ಬೆಳಕು ಚೆಲ್ಲಿದೆ.

ಇಂಗ್ಲಿಷ್ ತಿಳಿವಳಿಕೆ ಕಡಿಮೆ ಇರುವುದರಿಂದಾಗಿ, ಪ್ರಾದೇಶಿಕ ಭಾಷೆಗಳ ವೆಬ್ ಸೈಟ್ ವೀಕ್ಷಿಸುವವರ ಸಂಖ್ಯೆ ವೃದ್ಧಿಯ ವೇಗವು ನಗರ ಪ್ರದೇಶಕ್ಕಿಂತಲೂ ಗ್ರಾಮಾಂತರ ಭಾರತದಲ್ಲಿ ಹೆಚ್ಚಾಗುತ್ತಿದೆ ಎಂದಿದೆ ಈ ವರದಿ. ಇದು ಭಾಷಾ ವೆಬ್‌ಸೈಟ್‌ಗಳಿಗೆ ಶುಭ ಸುದ್ದಿಯಾದರೆ, ಆದಷ್ಟು ಶೀಘ್ರದಲ್ಲೇ ಎಲ್ಲ ಅಂತರಜಾಲ ಆಧಾರಿತ ಸೇವೆಗಳನ್ನು ಆಯಾ ಭಾಷೆಗಳಲ್ಲೇ ನೀಡುವಂತಾಗಲು ಸರಕಾರಕ್ಕೊಂದು ಎಚ್ಚರಿಕೆಯ ಕರೆಗಂಟೆ.

ಐಎಎಂಎಐ ಈ ವಾರಾರಂಭದಲ್ಲಿ ಬಿಡುಗಡೆಗೊಳಿಸಿದ ‘ಪ್ರಾದೇಶಿಕ ಭಾಷಾ ವರದಿ- 2012’ ಅನುಸಾರ, ನಮ್ಮ ಕನ್ನಡದಲ್ಲೇ (ನಮ್ಮ ಭಾಷೆಯಲ್ಲೇ) ಇಂಟರ್ನೆಟ್ ಸೌಲಭ್ಯಗಳು ದೊರೆಯುತ್ತವೆ ಎಂಬ ಅರಿವು ನಗರ ಪ್ರದೇಶದ ನಾಗರಿಕರಿಗಿಂತಲೂ ಗ್ರಾಮಾಂತರ ವಾಸಿಗಳಲ್ಲಿ ಹೆಚ್ಚಿದೆ.

‘ಇಂಟರ್ನೆಟ್ ಜಾಲಾಡಬೇಕಿದ್ದರೆ ಇಂಗ್ಲಿಷ್ ತಿಳಿದಿರಬೇಕು, ಮಾತೃ ಭಾಷೆಯಲ್ಲಿ ಏನೂ ಸಿಗುವುದಿಲ್ಲ’ ಎಂಬ ತಪ್ಪು ನಂಬಿಕೆಗಳನ್ನು ಹೋಗಲಾಡಿಸಿ, ಸೂಕ್ತ ಮೂಲಸೌಕರ್ಯ ಮತ್ತು ಒಂದಿಷ್ಟು ಜಾಗೃತಿ ಮೂಡಿಸಿದಲ್ಲಿ ಈ ಮಾಹಿತಿ ತಂತ್ರಜ್ಞಾನ ಲೋಕವು ಮತ್ತಷ್ಟು ವ್ಯಾಪಕವಾಗಿ ವಿಸ್ತಾರವಾಗಲಿದೆ ಎಂಬ ಅಂಶವು ಈ ಸಮೀಕ್ಷಾ ವರದಿಯಿಂದ ವ್ಯಕ್ತವಾಗಿದೆ.

2006ರ ರಾಷ್ಟ್ರೀಯ ಓದುಗರ ಸಮೀಕ್ಷೆ (ಎನ್‌ಆರ್‌ಎಸ್)ಯಿಂದ ತಿಳಿದುಬಂದ ಅಂಶದ ಪ್ರಕಾರ, ಭಾರತದಲ್ಲಿ ಕೇವಲ ಶೇ.18.2 ಮಂದಿ ಇಂಗ್ಲಿಷ್-ಬಲ್ಲವರು. ಅದರಲ್ಲಿ ಶೇ.34 ನಗರದವರು, ಶೇ.11 ಮಾತ್ರ ಗ್ರಾಮೀಣ ಭಾಗದವರು. ಹೀಗಾಗಿ ಈ ಇಂಗ್ಲಿಷ್ ಗುಮ್ಮನಿಂದಾಗಿಯೂ ಗ್ರಾಮೀಣ ಭಾಗದವರು ತಮ್ಮ ಮಾತೃಭಾಷೆಯಲ್ಲೇ ಇಂಟರ್ನೆಟ್ ಬಳಸಲು ಇಚ್ಛಿಸುತ್ತಾರೆ.

ಇಂಟರ್ನೆಟ್‌ನಲ್ಲಿ ಏನು ಇಷ್ಟ?
01-13-13-InternetInIndiaಗರಿಷ್ಠ ಪ್ರಮಾಣದಲ್ಲಿ ಆಯಾ ಭಾಷೆಯಲ್ಲಿ ಇಂಟರ್ನೆಟ್ ಬಳಸುತ್ತಿರುವುದು ಇಮೇಲ್, ಸರ್ಚ್ ಎಂಜಿನ್, ಸುದ್ದಿ, ಚಾಟಿಂಗ್… ಇತ್ಯಾದಿಗಳಿಗಾಗಿ. ಇದಲ್ಲದೆ ಉದ್ಯೋಗ ಹುಡುಕಾಟ, ರೈಲು ಟಿಕೆಟ್ ಬುಕಿಂಗ್, ವೈವಾಹಿಕ ಸೇವೆಗಳು ಮತ್ತು ಆನ್‌ಲೈನ್ ಬ್ಯಾಂಕಿಂಗ್ ವಿಭಾಗದಲ್ಲಿಯೂ ಸಾಕಷ್ಟು ಪ್ರಗತಿಯ ಅವಕಾಶಗಳಿವೆ. ಇವುಗಳೆಲ್ಲ ಸ್ಥಳೀಯ ಭಾಷೆಯಲ್ಲಿ ಲಭ್ಯವಾದಲ್ಲಿ ಹೆಚ್ಚು ಹೆಚ್ಚು ಅಂತರ್ಜಾಲ ಬಳಸುವುದಾಗಿ 35 ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಭಾಗವಹಿಸಿದವರು ಹೇಳಿದ್ದಾರೆ.

ಇನ್ನು ಗ್ರಾಮಾಂತರ ಬಳಕೆದಾರರನ್ನು ಪರಿಗಣಿಸಿದರೆ, ಅವರು ಮೇಲಿನವುಗಳೆಲ್ಲವನ್ನೂ ತಮ್ಮ ಭಾಷೆಯಲ್ಲೇ ನೋಡಬಯಸುತ್ತಿದ್ದು, ಅಂತರಜಾಲದಲ್ಲಿ ಹೆಚ್ಚಾಗಿ ಸರಕಾರಿ ಸೇವೆಗಳು, ಕೃಷಿ, ಜಮೀನಿನ ದಾಖಲೆ, ರೈತರಿಗೆ ನೆರವಾಗುವ ಮಾಹಿತಿ ಇತ್ಯಾದಿಗಳಿಗಾಗಿಯೇ ಅವರ ಮನಸ್ಸು ತುಡಿಯುತ್ತದೆ.

ಪ್ರಾದೇಶಿಕ ಭಾಷೆಗಳ ಪಾರಮ್ಯ
ಒಟ್ಟು 4.5 ಕೋಟಿ ಮಂದಿ ಭಾರತೀಯ ಇಂಟರ್ನೆಟ್ ಬಳಕೆದಾರರು ತಮ್ಮದೇ ಭಾಷೆಗಳಲ್ಲಿ ಇಂಟರ್ನೆಟ್ ವಿಷಯವನ್ನು ನೋಡುತ್ತಾರೆ. ಗ್ರಾಮಾಂತರ ಭಾಗದಲ್ಲಿ ಇಂಟರ್ನೆಟ್ ಬಳಸುತ್ತಿರುವ 3.8 ಕೋಟಿಯಲ್ಲಿ ಶೇ.64ರಷ್ಟು ಮಂದಿ (2.43 ಕೋಟಿ) ತಮ್ಮ ಭಾಷೆಯಲ್ಲೇ ಅಂತರಜಾಲದಲ್ಲಿ ವ್ಯವಹರಿಸುತ್ತಾರೆ. ನಗರ ಪ್ರದೇಶದಲ್ಲಿ ಇದರ ಪ್ರಮಾಣ ಶೇ.25 ಮಾತ್ರ. ಅಂದರೆ, ನಗರ ಭಾಗದಲ್ಲಿ ಇಂಟರ್ನೆಟ್ ಬಳಸುವ ಒಟ್ಟು 8.4 ಕೋಟಿಯಲ್ಲಿ 2.09 ಕೋಟಿ ಮಂದಿ ಮಾತ್ರವೇ ತಮ್ಮ ಭಾಷೆಯ ವೆಬ್ ಸೈಟುಗಳನ್ನು ಸಂದರ್ಶಿಸುತ್ತಾರೆ.

ಕನ್ನಡವೂ ಬೆಳೆದಿದೆ
ಕನ್ನಡದ ಮಟ್ಟಿಗೆ ಹೇಳುವುದಾದರೆ, ಇಂಟರ್ನೆಟ್‌ನಲ್ಲಿ ಕನ್ನಡ ಓದಲು ಮತ್ತು ಬರೆಯಲು ಹಿಂದೆ ತಾಂತ್ರಿಕ ಸಮಸ್ಯೆಯಿತ್ತು. ಯುನಿಕೋಡ್ ಎಂಬ ಸಾರ್ವತ್ರಿಕ ವ್ಯವಸ್ಥೆಯೊಂದು ಓದುವ ಸಮಸ್ಯೆಯಂತೂ ಬಹುತೇಕ ನಿವಾರಣೆಯಾಗಿದೆ ಎನ್ನಬಹುದು.

ಕನ್ನಡ ಬರವಣಿಗೆಗೆ ಕೂಡ ಸಾಕಷ್ಟು ಟೂಲ್‌ಗಳು ಆನ್‌ಲೈನ್‌ನಲ್ಲಿ (ಮೊಬೈಲ್‌ಗೆ ಮತ್ತು ಕಂಪ್ಯೂಟರ್‌ಗೆ) ದೊರೆಯುತ್ತಿರುವುದರಿಂದ ಬರವಣಿಗೆ ಸಮಸ್ಯೆಯೂ ನಿಧಾನವಾಗಿ ಮರೆಯಾಗುತ್ತಿದೆ.

ಇತ್ತೀಚೆಗೆ ಕರ್ನಾಟಕ ಸರಕಾರ ಯುನಿಕೋಡ್ ಶಿಷ್ಟತೆಗೆ ಮನ್ನಣೆ ನೀಡಿರುವುದರಿಂದ, ಎಲ್ಲ ಸರಕಾರಿ ಅಂತರಜಾಲ ತಾಣಗಳು ಇನ್ನು ಯುನಿಕೋಡ್‌ನಲ್ಲೇ ಓದಲು-ಬರೆಯಲು ಲಭ್ಯವಾಗಲಿವೆ. ಇದರಿಂದ ಗ್ರಾಮೀಣ ಭಾಗದಲ್ಲಿ ಇಂಟರ್ನೆಟ್ ಬಳಕೆ ಮತ್ತಷ್ಟು ಹೆಚ್ಚಾಗಲಿದೆ.

ಇದರೊಂದಿಗೆ ಮುಂದಿನ ದಿನಗಳಲ್ಲಿ ಪ್ರಾದೇಶಿಕ ಭಾಷೆಯ ವಿಷಯಗಳು ಭರಪೂರ ಲಭ್ಯವಾಗುತ್ತವಷ್ಟೇ ಅಲ್ಲದೆ, ಹೆಚ್ಚು ಹೆಚ್ಚು ಜನರು ತಮ್ಮದೇ ವಿಷಯಗಳನ್ನು ಅಪ್‌ಲೋಡ್ ಮಾಡುವಲ್ಲಿಯೂ ತೊಡಗುತ್ತಾರೆ.

ಸಾಧ್ಯತೆಗಳು ಸಾಕಷ್ಟಿವೆ
01-13-13-InternetInIndia-Rural-Urbanಡಿಜಿಟಲ್ ಜಗತ್ತಿನ ದೈತ್ಯ, ಅಗ್ರ ಸರ್ಚ್ ಎಂಜಿನ್ ‘ಗೂಗಲ್’ ಕಂಪನಿಯೇ ಇತ್ತೀಚೆಗೆ ‘ಭಾರತದಲ್ಲಿ ಇಂಗ್ಲಿಷಿನಲ್ಲಿ ಅಂತರಜಾಲ ತಾಣವನ್ನು ಜಾಲಾಡುವವರ ಸಂಖ್ಯೆ 15 ಕೋಟಿಯ ಗಡಿರೇಖೆಯನ್ನು ದಾಟುವುದಿಲ್ಲ’ ಎಂದು ಹೇಳಿತ್ತು.

ಮುಂದೆ 30ರಿಂದ 40 ಕೋಟಿ ಮಂದಿ ಆನ್‌ಲೈನ್‌ಗೆ ಬರಲಿದ್ದಾರೆ, ಅವರೆಲ್ಲರೂ ಸ್ಥಳೀಯ ಭಾಷೆಗಳಲ್ಲೇ ಅಂತರಜಾಲ ಜಾಲಾಡುವವರಾಗಿರುತ್ತಾರೆ ಅಂತ ಗೂಗಲ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ರಾಜನ್ ಆನಂದನ್ ಅವರು ಹೈದರಾಬಾದ್‌ನಲ್ಲಿ ಕಳೆದ ನವೆಂಬರ್ ತಿಂಗಳಲ್ಲಿ ನಡೆದ ವಿಚಾರ ಸಂಕಿರಣವೊಂದರಲ್ಲಿ ಹೇಳಿದ್ದರು.

ಹೀಗಾಗಿ ಇಂಟರ್ನೆಟ್ ಎಂಬುದು ಇಂಗ್ಲಿಷೇತರ ಜನ ಸಾಮಾನ್ಯರನ್ನು ತಲುಪಬೇಕಿದ್ದರೆ, ಹೆಚ್ಚು ಹೆಚ್ಚು ವಿಷಯಗಳು ಪ್ರಾದೇಶಿಕ ಭಾಷೆಗಳಲ್ಲಿ ಲಭ್ಯವಾಗಬೇಕಾಗುತ್ತದೆ.

ಗ್ರಾಮೀಣ ಭಾರತದಲ್ಲೇ ಇಂಟರ್ನೆಟ್ ಪ್ರಗತಿಯ ವೇಗ ಹೆಚ್ಚು
ವರದಿಯಲ್ಲಿ 2012ರ ಡಿಸೆಂಬರ್‌ನಲ್ಲಿ ಕಲೆಹಾಕಿದ ಅಂಕಿ ಅಂಶದ ಪ್ರಕಾರ, ನಗರ ಭಾರತದಲ್ಲಿ 10.50 ಕೋಟಿ ಮತ್ತು ಗ್ರಾಮೀಣ ಭಾರತದಲ್ಲಿ 4.50 ಕೋಟಿ ಇಂಟರ್ನೆಟ್ ಬಳಕೆದಾರರಿದ್ದಾರೆ. ಇಂಟರ್ನೆಟ್ ಬಳಕೆಯು ನಗರ ಪ್ರದೇಶದಲ್ಲಿ ಶೇ.7ರ ವೇಗದಲ್ಲಿಯೂ, ಗ್ರಾಮಾಂತರ ಭಾರತದಲ್ಲಿ ಶೇ.31ರ ವೇಗದಲ್ಲಿಯೂ ಬೆಳೆಯುತ್ತಿದೆ.

ಮಾತೃಭಾಷೆಯಲ್ಲೇ ಆನ್‌ಲೈನ್‌ನಲ್ಲಿ ವ್ಯವಹರಿಸಲು ಜನರು ತುಡಿಯುತ್ತಿದ್ದಾರೆ ಎಂದರೆ, ಇಲ್ಲಿ ಭಾಷಾ ವಿಷಯಕ್ಕೆ ಸಾಕಷ್ಟು ಅವಕಾಶಗಳಿವೆ ಅಂತಲೇ ಅರ್ಥ. ಈ ನಿಟ್ಟಿನಲ್ಲಿ ಸರಕಾರವು ಪ್ರಮುಖವಾಗಿ ಮೂರು ಅಂಶಗಳನ್ನು ಪರಿಗಣಿಸಬೇಕಿದೆ – ಮೊದಲು ತನ್ನೆಲ್ಲಾ ಇಲಾಖೆಗಳ ವೆಬ್ ತಾಣಗಳನ್ನು ಕನ್ನಡದಲ್ಲೇ ಇರುವಂತೆ ನೋಡಿಕೊಳ್ಳುವುದು, ಮೂಲಸೌಕರ್ಯ ಒದಗಿಸುವುದು, ಇಂಟರ್ನೆಟ್ ಅಗತ್ಯವಿಲ್ಲ ಎಂಬ ಜನರ ಭಾವನೆಯನ್ನು ಹೋಗಲಾಡಿಸುವುದು ಮತ್ತು ಇಂಟರ್ನೆಟ್ ಎಂದರೇನೆಂದೇ ಗೊತ್ತಿಲ್ಲದವರಿಗೂ ಅರಿವು ಮೂಡಿಸುವುದು.

ಮಾಹಿತಿ@ತಂತ್ರಜ್ಞಾನ-4: ಮನೆಯಲ್ಲಿ ಲೆಸ್ ವೈರ್- Wi-Fi

ವಿಜಯ ಕರ್ನಾಟಕ ಅಂಕಣ 17 ಸೆಪ್ಟೆಂಬರ್ 12
ಯಾವುದೇ ಮೊಬೈಲ್ ಅಥವಾ ಕಂಪ್ಯೂಟರ್ ಕೊಳ್ಳಲು ಹೋದಾಗ Wi-Fi (Wireless Fidelity) ಅಥವಾ WLAN (Wireless Local Area Network) ಎಂದರೇನೆಂದು ತಲೆಕೆಡಿಸಿಕೊಂಡಿದ್ದೀರಾ? ಹಾಗಿದ್ದರೆ ಇಲ್ಲಿದೆ ಆ ಕುರಿತು ಉಪಯುಕ್ತ ಮಾಹಿತಿ.

ಮೊಬೈಲ್ ಫೋನ್ ಮಾತುಕತೆ ಹೇಗೆ ವೈರ್ ಇಲ್ಲದ ಸಂವಹನವೋ, ಅದರಂತೆಯೇ ಹಾಡು, ಚಿತ್ರ, ವೀಡಿಯೋಗಳನ್ನು ಕೂಡ ವೈರ್ ಇಲ್ಲದೆಯೇ ವಿನಿಮಯ ಮಾಡಿಕೊಳ್ಳುವ ವ್ಯವಸ್ಥೆಯ ಆಧುನಿಕ ರೂಪ ವೈ-ಫೈ. ಹಿಂದಿನ ಮೊಬೈಲ್ ಫೋನ್‌ಗಳಲ್ಲಿ IR (Infrared) Port ಎಂಬುದನ್ನು ನೀವು ನೋಡಿದ್ದಿರಬಹುದು. ಅದರ ಮುಂದುವರಿದ ಭಾಗವೇ ಬ್ಲೂಟೂತ್ ಮತ್ತು ವೈ-ಫೈ. ಬ್ಲೂಟೂತ್ ಕೂಡ ವೈ-ಫೈಯಂತೆಯೇ ಎರಡು (ಕಂಪ್ಯೂಟರ್, ಮೊಬೈಲ್, ಪ್ರಿಂಟರ್ ಇತ್ಯಾದಿ) ಸಾಧನಗಳನ್ನು ಬೆಸೆಯುವ ಕೆಲಸ ಮಾಡುತ್ತದೆಯಾದರೂ, ಅದರ ವ್ಯಾಪ್ತಿ ಹತ್ತಾರು ಮೀಟರ್ ಮಾತ್ರ. ಆದರೆ ವೈ-ಫೈಯ ರೇಡಿಯೋ ಸಿಗ್ನಲ್‌ಗಳಿಗೆ ಈ ದೂರದ ‘ಮಿತಿ’ ಇರುವುದಿಲ್ಲ.

ನಿಮಗೂ ವೈ-ಫೈ
ಮನೆ/ಕಚೇರಿಯಲ್ಲಿ ಬ್ರಾಡ್‌ಬ್ಯಾಂಡ್ ಸಂಪರ್ಕವಿದ್ದರೆ, ಕಂಪ್ಯೂಟರ್ ಇಲ್ಲದೆಯೂ, ಮೋಡೆಮ್ ಮಾತ್ರ ಆನ್ ಮಾಡಿ ಲ್ಯಾಪ್‌ಟಾಪ್, ಮೊಬೈಲ್‌ನಲ್ಲಿ ವೆಬ್ ಬ್ರೌಸ್ ಮಾಡಬಹುದು; ವೀಡಿಯೋ/ಆಡಿಯೋ, ಫೋಟೋ ಫೈಲ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು; ಮೊಬೈಲ್‌ನ ಸಾಫ್ಟ್‌ವೇರ್ ಅಪ್‌ಡೇಟ್ ಮಾಡಿಕೊಳ್ಳಬಹುದು. ಹೀಗೆ ಮೊಬೈಲ್ ಇಂಟರ್ನೆಟ್ ವೆಚ್ಚವನ್ನು (ತಾಂತ್ರಿಕ ಭಾಷೆಯಲ್ಲಿ ‘ಡೇಟಾ ವೆಚ್ಚ’ – ಮೊಬೈಲಿನಲ್ಲಿ ಇಂಟರ್ನೆಟ್ ಸಂಪರ್ಕಿಸಬೇಕಿದ್ದರೆ ಮೊಬೈಲ್ ಆಪರೇಟರುಗಳು ವಿಧಿಸುವ ಶುಲ್ಕ) ಉಳಿಸಬಹುದು.

ಇದು ನಿಮಗೂ ಸಾಧ್ಯ. ಮಾರುಕಟ್ಟೆಯಲ್ಲಿ ಬ್ರಾಡ್‌ಬ್ಯಾಂಡ್ ವೈ-ಫೈ ರೌಟರ್‌ಗಳು (ಒಂದುವರೆಯಿಂದ 4 ಸಾವಿರ ರೂ. ಒಳಗೆ) ಸಿಗುತ್ತವೆ. ಈ ರೌಟರ್, ಬ್ರಾಡ್‌ಬ್ಯಾಂಡ್‌ನ ಇಂಟರ್ನೆಟ್ ಸಂಪರ್ಕವನ್ನು ರೇಡಿಯೋ ತರಂಗಗಳ ಮೂಲಕ ಪ್ರಸಾರ ಮಾಡುತ್ತದೆ. ಯಾರು ಬೇಕಾದರೂ ಈ ಸಿಗ್ನಲ್‌ಗಳನ್ನು ಬಳಸಿಕೊಳ್ಳಬಹುದು ಮತ್ತು ಒಂದಕ್ಕಿಂತ ಹೆಚ್ಚು ಉಪಕರಣಗಳನ್ನು ಕೂಡ ಸಂಪರ್ಕಿಸಬಹುದು (ಅದಕ್ಕನುಗುಣವಾದ ಸಾಮರ್ಥ್ಯದ ರೌಟರ್‌ಗಳಿರುತ್ತವೆ). ಮೊಬೈಲ್ ನೆಟ್‌ವರ್ಕ್ ಸಿಗ್ನಲ್ ಇಲ್ಲದಿದ್ದರೂ ನೀವು ವೈ-ಫೈ ಬಳಸಿ ಇಂಟರ್ನೆಟ್ ಜಾಲಾಡಬಹುದು.

ಎಚ್ಚರವಿರಲಿ
ಆದರೆ, ನಿಮ್ಮ ಮನೆಯ ವೈ-ಫೈ ಸಿಗ್ನಲ್ಲನ್ನು ಪಕ್ಕದ ಮನೆಯವರು ಬಳಸಿ, ನಿಮ್ಮ ಬ್ರಾಡ್‌ಬ್ಯಾಂಡ್ ಬಿಲ್ ಹೆಚ್ಚಿಸುವಂತೆ ಮಾಡಬಲ್ಲರು! ಹೀಗಾಗದಂತೆ ತಡೆಯಲು, ಎರಡೂ ಸಾಧನಗಳಲ್ಲಿ ವೈ-ಫೈ ಸಂಪರ್ಕವನ್ನು ಪಾಸ್‌ವರ್ಡ್ ಮೂಲಕ ಸುರಕ್ಷಿತವಾಗಿರಿಸಿಕೊಳ್ಳಬೇಕು. ಭಯೋತ್ಪಾದಕರು ಇಂತಹಾ ವೈ-ಫೈ ಬಳಸುತ್ತಾರೆ ಎಂಬ ಎಚ್ಚರಿಕೆಯೂ ಇರಬೇಕಾಗುತ್ತದೆ.

ಹಾಟ್‌ಸ್ಪಾಟ್
ಆಗೀಗ್ಗೆ ಮಾತ್ರ ಇಂಟರ್ನೆಟ್ ಬಳಸುವವರು ನೀವಾಗಿದ್ದರೆ, ಮೊಬೈಲ್ ಆಪರೇಟರ್‌ಗಳು ನೂರು ರೂಪಾಯಿಯೊಳಗೆ ಮಾಸಿಕ 1ಜಿಬಿ ಡೇಟಾ ಬಳಕೆಯ ವ್ಯವಸ್ಥೆಯನ್ನು ನೀಡುತ್ತಿದ್ದಾರೆ. ಮೊಬೈಲ್ ಇಂಟರ್ನೆಟ್ ಆನ್ ಮಾಡಿ, ಅದನು ವೈ-ಫೈ ಮೂಲಕ ಕಂಪ್ಯೂಟರಿಗೆ ಹಾಯಿಸಿ ಅಂತರಜಾಲ ಜಾಲಾಡಬಹುದು. ಇಂಟರ್ನೆಟ್ ಬಳಕೆಗೆ 2ಜಿಗಿಂತ, ವೇಗವೂ ಹೆಚ್ಚು, ಸ್ವಲ್ಪ ಶುಲ್ಕಲವೂ ಹೆಚ್ಚಿರುವ 3ಜಿ ಮೊಬೈಲ್ ಸಂಪರ್ಕ ಒಳಿತು.

ನಿಮಗೆ ತಿರುಗಾಟ ಜಾಸ್ತಿ ಎಂದಾದರೆ, ಕಚೇರಿಗಳಲ್ಲಿ, ವಿಮಾನ ನಿಲ್ದಾಣಗಳಲ್ಲಿ, ವಿಮಾನಗಳೊಳಗೆ, ಬಸ್ಸುಗಳೊಳಗೆ, ರೈಲಿನಲ್ಲಿ, ಹೋಟೆಲ್‌ಗಳಲ್ಲಿ… ಹೀಗೆ ಎಲ್ಲ ಕಡೆ ವೈ-ಫೈ ಹಾಟ್‌ಸ್ಪಾಟ್‌ಗಳು ಎಂಬೊಂದು ವ್ಯವಸ್ಥೆ ಇರುತ್ತದೆ. ಈ ಹಾಟ್‌ಸ್ಪಾಟ್‌ಗೆ ನಿಮ್ಮ ಮೊಬೈಲ್ ಅಥವಾ ಲ್ಯಾಪ್‌ಟಾಪ್ ಸಂಪರ್ಕಿಸಿ ನೀವು ಸದಾ ಆನ್‌ಲೈನ್ ಆಗಿರಬಹುದು. ಹೆಚ್ಚಿನೆಡೆ ಇವು ಉಚಿತ.

ವೈರ್‌ಲೆಸ್ ಜಗತ್ತು
ವೈ-ಫೈ ಮೌಸ್, ವೈ-ಫೈ ಕೀಬೋರ್ಡ್, ವೈ-ಫೈ ಗೇಮ್ ಉಪಕರಣಗಳು, ವೈರ್‌ಲೆಸ್ ಹಾರ್ಡ್ ಡ್ರೈವ್ ಎಲ್ಲವೂ ಬಂದಿದೆ. ಹಿಂದೆಲ್ಲಾ ಗ್ಯಾಜೆಟ್ ಬಳಸುತ್ತಿರುವವರನ್ನು Wired ಅಂತ ಕರೆಯುತ್ತಿದ್ದರು. ಆದರೆ ಈಗ ಎಲ್ಲರೂ ವೈರ್‌ಲೆಸ್ ಆಗುತ್ತಿದ್ದಾರೆ! ಹೀಗಾಗಿ ಭವಿಷ್ಯದಲ್ಲಿ ನೀವು ತೆಗೆದುಕೊಳ್ಳುವ ಯಾವುದೇ ಉಪಕರಣದಲ್ಲಿ ವೈ-ಫೈ ಸೌಲಭ್ಯ ಖಾತ್ರಿಪಡಿಸಿಕೊಳ್ಳುವುದು ಒಳಿತು.