ಜನ ಸಾಮಾನ್ಯರತ್ತ ತಂತ್ರಜ್ಞಾನ – Gadget-Technology Info Towards Common Man

Archive for the ‘Web’ Category

ಜಿಮೇಲ್‌ನಲ್ಲೇ ಬೇರೆ ಇಮೇಲ್ ಐಡಿ ಮೂಲಕ ಮೇಲ್ ಕಳುಹಿಸಿ

ವಿಜಯ ಕರ್ನಾಟಕ ಮಾಹಿತಿ@ತಂತ್ರಜ್ಞಾನ ಅಂಕಣ -89 ಆಗಸ್ಟ್ 18, 2014
Avinash Column-1ಮಾಹಿತಿಯ ಅಬ್ಬರದ ಯುಗದಲ್ಲಿ ಒಂದೇ ಒಂದು ಇಮೇಲ್ ಖಾತೆ ಮಾತ್ರ ಹೊಂದಿದ್ದರೆ ಸಾಕಾಗುವುದಿಲ್ಲ. ಹಲವರು ಔಟ್‌ಲುಕ್, ಯಾಹೂ, ರಿಡಿಫ್ ಮುಂತಾದವುಗಳಲ್ಲಿ ಇಮೇಲ್ ಖಾತೆಗಳನ್ನು ಹೊಂದಿರುತ್ತಾರೆ. ಅಲ್ಲದೆ, ನಮ್ಮದೇ ಆದ ಆಫೀಸ್ ಇಮೇಲ್ ಕೂಡ ಜತೆಗಿರುತ್ತದೆ. ಪ್ರತಿಯೊಂದು ಇಮೇಲ್ ಖಾತೆಗೂ ಕಂಪ್ಯೂಟರಿನಲ್ಲಿ ಪ್ರತ್ಯೇಕವಾಗಿ ಲಾಗಿನ್ ಆಗುವುದು ಕಷ್ಟವಾಗಿದ್ದರೆ, ಸ್ಮಾರ್ಟ್‌ಫೋನ್‌ನಲ್ಲಿ ಪ್ರತ್ಯೇಕ ಅಪ್ಲಿಕೇಶನ್‌ಗಳನ್ನು ಸ್ಥಾಪಿಸಿಕೊಳ್ಳಬೇಕಾಗುತ್ತದೆ. ಹೀಗಿರುವಾಗ, ಒಂದು ಜಿಮೇಲ್ ಖಾತೆ ಹೊಂದಿದ್ದರೆ, ಹಲವಾರು ಖಾತೆಗಳನ್ನು ಅದರಿಂದಲೇ ನಿಭಾಯಿಸಬಹುದು. ಅಂದರೆ, ಜಿಮೇಲ್ ಖಾತೆಗೆ ಲಾಗಿನ್ ಆದರೆ, ಬೇರೆ ಯಾವುದೇ ಖಾತೆಗಳ ಮೂಲಕ ಇಮೇಲ್ ಕಳುಹಿಸಬಹುದು ಎಂಬುದು ನಿಮಗೆ ಗೊತ್ತೇ?

ಇದರಲ್ಲಿ ಒಂದಿಷ್ಟು ಸುಲಭವಾದ ಕಸರತ್ತು ಮಾಡಬೇಕಾಗುತ್ತದೆ ಮತ್ತು ಒಂದು ಬಾರಿ ಇದಕ್ಕಾಗಿ ಸಮಯ ವ್ಯಯಿಸಿದರೆ ಸಾಕಾಗುತ್ತದೆ. ಬಳಿಕ ಎಲ್ಲ ಮೇಲ್‌ಗಳನ್ನೂ ಜಿಮೇಲ್ ಖಾತೆಯಿಂದಲೇ ಕಳುಹಿಸಬಹುದು. ಅಂದರೆ ನೀವು ಜಿಮೇಲ್ ಮೂಲಕವಾಗಿ ಉತ್ತರಿಸಿದರೂ, ಅದು ಆಯಾ ಇಮೇಲ್ ಐಡಿಗಳ (ಯಾಹೂ, ಕಚೇರಿ ಮೇಲ್, ಔಟ್‌ಲುಕ್ ಇತ್ಯಾದಿ) ಮೂಲಕವೇ ಸಂಬಂಧಪಟ್ಟವರಿಗೆ ತಲುಪುತ್ತದೆ. ಇಲ್ಲವಾದರೆ, ಪ್ರತ್ಯೇಕ ಆ್ಯಪ್‌ಗಳನ್ನು ತೆರೆದುಕೊಂಡು, ಮತ್ತು ಹಲವಾರು ವಿಂಡೋಗಳನ್ನು ತೆರೆದಿಟ್ಟುಕೊಂಡು ಒಂದೊಂದಾಗಿ ಮೇಲ್ ಕಳುಹಿಸಬೇಕಾಗುತ್ತದೆ.

ಜಿಮೇಲ್ ಖಾತೆಯೊಳಗಿನಿಂದಲೇ ನಿಮ್ಮ ಎಲ್ಲ ಇಮೇಲ್ ವಿಳಾಸಗಳ ಮೂಲಕವಾಗಿ ಮೇಲ್ ಕಳುಹಿಸಬೇಕಿದ್ದರೆ ಅದರಲ್ಲಿಯೇ ಒಂದು ಆಯ್ಕೆ ಇದೆ. ಅಂದರೆ, ನೀವು ಜಿಮೇಲ್ ಖಾತೆಯಿಂದ ಇಮೇಲ್ ಕಳುಹಿಸಿದರೂ, ಅದು ನಿಮ್ಮ ಬೇರೆ ಮೇಲ್ ಸರ್ವರ್ ಮೂಲಕವೇ ಕಳುಹಿಸಿದ್ದೆಂಬಂತೆ ಬೇರೆಯವರಿಗೆ ಕಾಣಿಸುತ್ತದೆ. ಇದಕ್ಕಾಗಿ ಕಂಪ್ಯೂಟರಿನಲ್ಲಿ ಜಿಮೇಲ್‌ಗೆ ಲಾಗಿನ್ ಆಗಿ, ಬಲ ಮೇಲ್ಭಾಗದಲ್ಲಿ ಕಾಣಿಸುವ ಗಿಯರ್ ಐಕಾನ್ ಕ್ಲಿಕ್ ಮಾಡಿ, ಸೆಟ್ಟಿಂಗ್ಸ್ ಆಯ್ಕೆ ಮಾಡಿಕೊಳ್ಳಿ. ಅದರಲ್ಲಿ ಹಲವಾರು ಟ್ಯಾಬ್‌ಗಳಿರುತ್ತವೆ. General, Labels, Inbox ಆದಮೇಲೆ ಕಾಣಿಸುವ Accounts and Import ಎಂಬ ಟ್ಯಾಬ್ ಆಯ್ಕೆ ಮಾಡಿಕೊಳ್ಳಿ.

ಕೆಳಗೆ ನೋಡಿದರೆ, Send mail as ಎಂಬ ವಿಭಾಗ ಕಾಣಿಸುತ್ತದೆ. ಅದರಲ್ಲಿ, Add another email address you own ಎಂಬ ಆಯ್ಕೆ ಲಭ್ಯವಾಗುತ್ತದೆ. ಅದನ್ನು ಕ್ಲಿಕ್ ಮಾಡಿ. ಅಲ್ಲಿ ನಿಮ್ಮ ಇಮೇಲ್ ಐಡಿ ದಾಖಲಿಸಿ. ಮುಂದಿನ ಹಂತಕ್ಕೆ ಹೋಗಿ. ನಿಮ್ಮ ಹೆಸರು ನಮೂದಿಸಬೇಕಾಗುತ್ತದೆ. ನಿಮ್ಮ ಇಮೇಲ್ ವಿಳಾಸವೂ ಇರುತ್ತದೆ. ಆದರೆ, ಈ ವಿಳಾಸವನ್ನು ಆಲಿಯಾಸ್ ವಿಳಾಸ ಎಂದು ಪರಿಗಣಿಸಲಾಗುತ್ತದೆ. ಸಾಮಾನ್ಯವಾಗಿ ಯಾಹೂ, ರಿಡಿಫ್, ಔಟ್‌ಲುಕ್ ಮುಂತಾದ ಇಮೇಲ್ ಪ್ರೊವೈಡರ್‌ಗಳಲ್ಲಿರುವ ಖಾತೆಗಳನ್ನು ಜಿಮೇಲ್ ತಾನಾಗಿಯೇ ಕಾನ್ಫಿಗರ್ ಮಾಡಿಕೊಳ್ಳುತ್ತದೆ. ನೀವು ಆ ಅನ್ಯ ಇಮೇಲ್ ಖಾತೆಯ ಪಾಸ್‌ವರ್ಡ್ ದಾಖಲಿಸಬೇಕಾಗುತ್ತದೆ. ಮುಂದಿನ ಹಂತಗಳನ್ನು ನಿಧಾನವಾಗಿ ಓದಿಯೇ ಕ್ಲಿಕ್ ಮಾಡುತ್ತಾ ಹೋಗಿ. Add Account ಅಂತ ಕ್ಲಿಕ್ ಮಾಡಬೇಕು. ಆಗ, ನಿಮ್ಮ ಅನ್ಯ ಇಮೇಲ್ ಖಾತೆಗೊಂದು ದೃಢೀಕರಣ ಇಮೇಲ್ ಕಳುಹಿಸಲಾಗುತ್ತದೆ. ಅದನ್ನು ತೆರೆದು, ಲಿಂಕ್ ಕ್ಲಿಕ್ ಮಾಡಬಹುದು ಅಥವಾ ಅದರಲ್ಲಿರುವ ಕೋಡ್ ಅನ್ನು ಇಲ್ಲಿನ ಸೆಟ್ಟಿಂಗ್‌ನಲ್ಲಿ ನಮೂದಿಸಿದರೂ ಸಾಕಾಗುತ್ತದೆ. ಇದು ಯಾಕೆಂದರೆ, ನೀವು ನಮೂದಿಸಿರುವ ಇಮೇಲ್ ಖಾತೆಯು ನಿಜವಾಗಿಯೂ ನಿಮ್ಮದೇ ಒಡೆತನದಲ್ಲಿದೆ ಎಂಬುದನ್ನು ಗೂಗಲ್ ಖಚಿತಪಡಿಸಿಕೊಳ್ಳಲು. ಇದು ಕೆಲವೊಮ್ಮೆ Spam ಫೋಲ್ಡರ್‌ನಲ್ಲೂ ಇರುವ ಸಾಧ್ಯತೆಗಳಿವೆ. ಸರಿಯಾಗಿ ನೋಡಿಕೊಳ್ಳಿ.

ಈಗ ಸೆಟಪ್ ಪೂರ್ಣಗೊಂಡಿತು. ಇನ್ನು ಜಿಮೇಲ್ ಒಳಗಿನಿಂದಲೇ ನೀವು ನಿಮ್ಮ ಮತ್ತೊಂದು ಇಮೇಲ್ ವಿಳಾಸವನ್ನು ಆಯ್ದುಕೊಂಡು, ಅದರ ಪರವಾಗಿ ಇಮೇಲ್ ಕಳುಹಿಸಬಹುದಾಗಿದೆ.

ಆದರೆ ನೆನಪಿಡಿ, ನೀವು ಜಿಮೇಲ್ ಮೂಲಕ ಕಳುಹಿಸುವ ಇಮೇಲ್, ನಿಮ್ಮ ಬೇರೆ ಖಾತೆಯಲ್ಲಿ ಸಿಂಕ್ರನೈಜ್ ಆಗಿರುವುದಿಲ್ಲ. ಅತ್ಯಂತ ಅಗತ್ಯ ಬಿದ್ದಾಗ, ನಿಮ್ಮ ಅನ್ಯ ಮೇಲ್ ಖಾತೆಯಿಂದ ಸಂದೇಶ ಕಳುಹಿಸಲು ಈ ವ್ಯವಸ್ಥೆಯನ್ನು ಬಳಸಬಹುದು.

ಈ ರೀತಿ ಕಂಪ್ಯೂಟರ್ ಬ್ರೌಸರ್‌ನಲ್ಲಿ ಒಮ್ಮೆ ಸೆಟ್ಟಿಂಗ್ ಮಾಡಿಕೊಂಡರೆ, ಸ್ಮಾರ್ಟ್‌ಫೋನ್‌ಗಳಲ್ಲಿ ಕೂಡ ಮೇಲ್ ಕಳುಹಿಸುವಾಗ, ಯಾವ ಮೇಲ್ ಐಡಿಯಿಂದ ಕಳುಹಿಸಬೇಕು ಎಂದು ಆಯ್ಕೆ ಮಾಡುವ ಅವಕಾಶ ದೊರೆಯುತ್ತದೆ.


ಟೆಕ್-ಟಾನಿಕ್
ಆ್ಯಪ್‌ಗಳನ್ನು ಗುಂಪುಗೂಡಿಸಿ

ಆಂಡ್ರಾಯ್ಡ್‌ನ ಇತ್ತೀಚಿನ ಆವೃತ್ತಿಯ ಸ್ಮಾರ್ಟ್‌ಫೋನ್‌ಗಳಲ್ಲಿ ಹೋಂ ಸ್ಕ್ರೀನ್‌ನಲ್ಲಿ ಆ್ಯಪ್‌ಗಳ ಸಂಖ್ಯೆ ಕಡಿಮೆ ಮಾಡಿ, ಬ್ಯಾಕ್‌ಗ್ರೌಂಡ್ ಚಿತ್ರ ಚೆನ್ನಾಗಿ ಕಾಣಿಸುವಂತೆ ಮಾಡಬಹುದು. ಸಂಬಂಧಿತ ಆ್ಯಪ್‌ಗಳನ್ನು ಗುಂಪುಗೂಡಿಸುವ ಮೂಲಕ ಇದು ಸಾಧ್ಯ. ಉದಾಹರಣೆಗೆ, ಎಲ್ಲ ಇಮೇಲ್ ಆ್ಯಪ್‌ಗಳು ಅಥವಾ ಮೆಸೇಜಿಂಗ್ ಆ್ಯಪ್‌ಗಳನ್ನು ಗುಂಪು ಮಾಡಿ, ಅದಕ್ಕೆ ಇಮೇಲ್ ಅಥವಾ ಮೆಸೇಜ್ ಅಂತ ಹೆಸರಿಡಬಹುದು. ಇದನ್ನು ಮಾಡಲು, ನಿಮಗೆ ಅಗತ್ಯವಿರುವ ಎಲ್ಲ ಆ್ಯಪ್‌ಗಳನ್ನು ಹೋಂ ಸ್ಕ್ರೀನ್‌ಗೆ ತನ್ನಿ. ಅಲ್ಲಿ ಒಂದೇ ರೀತಿಯ ಆ್ಯಪ್‌ಗಳನ್ನು ಡ್ರ್ಯಾಗ್ ಮಾಡಿ, ಒಂದರ ಮೇಲೊಂದರಂತೆ ಎಳೆದು ಬಿಡಿ. ಅವುಗಳು ಎಲ್ಲವೂ ಒಂದೇ ಆ್ಯಪ್‌ನ ಜಾಗದಲ್ಲಷ್ಟೇ ಗುಂಪಾಗಿರುತ್ತವೆ. ಆ ಗುಂಪಿನ ಹೆಸರು ಟಚ್ ಮಾಡಿದರೆ, ಅದನ್ನು ನಿಮಗೆ ಬೇಕಾದಂತೆ ಬದಲಿಸಲು ಅವಕಾಶ ಲಭ್ಯವಾಗುತ್ತದೆ.

ಕಂಪ್ಯೂಟರ್ ಬಳಸುವಾಗ ಕಣ್ಣುಗಳನ್ನು ರಕ್ಷಿಸಿಕೊಳ್ಳಿ

ವಿಜಯ ಕರ್ನಾಟಕದಲ್ಲಿ ಮಾಹಿತಿ@ ತಂತ್ರಜ್ಞಾನ ಅಂಕಣ 87: ಆಗಸ್ಟ್ 4, 2014

Avinash Column-1ಕಂಪ್ಯೂಟರ್‌ನಲ್ಲಿ ಕೆಲಸ ಮಾಡುವುದು ಈಗ ಅನಿವಾರ್ಯ ಎಂಬ ಮಟ್ಟಕ್ಕೆ ತಲುಪಿದೆ. ಪ್ರತಿಯೊಂದು ಕ್ಷೇತ್ರವನ್ನೂ ಕಂಪ್ಯೂಟರ್ ಆವರಿಸಿಕೊಂಡಿದೆ. ಉದ್ಯೋಗದಲ್ಲಿ ಮಾತ್ರವೇ ಅಲ್ಲ, ಮನರಂಜನೆ, ಗೇಮ್ಸ್, ಚಾಟಿಂಗ್… ಇತ್ಯಾದಿಗಳಿಗಾಗಿಯೂ ಸತತವಾಗಿ ಕಂಪ್ಯೂಟರ್ ಸ್ಕ್ರೀನ್ ಅನ್ನು ನೋಡುತ್ತಿರಬೇಕಾಗುತ್ತದೆ. ಇಂತಹಾ ಪರಿಸ್ಥಿತಿಯಲ್ಲಿ ತಲೆನೋವು, ಕಣ್ಣುರಿ, ಬೆನ್ನು ನೋವು… ಮುಂತಾದವುಗಳ ಬಗ್ಗೆ ಜನ, ವಿಶೇಷವಾಗಿ ಕಂಪ್ಯೂಟರ್ ಬಳಸುತ್ತಿರುವವರು ದೂರುತ್ತಿರುವುದನ್ನು ಕೇಳಿರುತ್ತೀರಿ.

ಕಂಪ್ಯೂಟರ್ ಸ್ಕ್ರೀನ್‌ಗಳಿಂದ ಹೊರಹೊಮ್ಮುವ ಬೆಳಕು ಕಣ್ಣಿಗೆ ಕಂಟಕ. ದೀರ್ಘಕಾಲ ಕಂಪ್ಯೂಟರ್ ಪರದೆಯನ್ನು ನೋಡುತ್ತಿದ್ದರೆ ಉಂಟಾಗುವ ಹಾನಿಕಾರಕ ಪರಿಣಾಮವನ್ನು ವೈದ್ಯಕೀಯ ಪರಿಭಾಷೆಯಲ್ಲಿ ‘ಡಿಜಿಟಲ್ ಐ ಸ್ಟ್ರೈನ್’ ಎಂದೇ ಕರೆಯುತ್ತಾರೆ. ಆ ಬೆಳಕಿನ ಕಿರಣಗಳು, ವಿಕಿರಣಗಳನ್ನು ತಡೆಯಲು ಕಂಪ್ಯೂಟರ್ ಪರದೆಯನ್ನು ನಿಮ್ಮ ಕಣ್ಣಿಗೆ ನೇರವಾಗಿ ಬೆಳಕು ಬೀರದಂತೆ ಹೊಂದಿಸಿಕೊಳ್ಳುವುದು ಹಾಗೂ ಆ್ಯಂಟಿ-ಗ್ಲೇರ್ ಕನ್ನಡಕಗಳನ್ನು ಧರಿಸುವುದು ಉತ್ತಮ ಅಭ್ಯಾಸ. ಈಗಾಗಲೇ ಕನ್ನಡಕ ಬಳಸುತ್ತಿದ್ದರೆ, ಆ್ಯಂಟಿ-ಗ್ಲೇರ್ ಕೋಟಿಂಗ್ ಇರುವಂಥವುಗಳನ್ನೇ ಬಳಸಿದರೆ ಉತ್ತಮ. ಅವುಗಳ ಹೊರತಾಗಿ ಕೆಲವೊಂದು ಮೂಲಭೂತ ಮತ್ತು ಖರ್ಚಿಲ್ಲದ ಕ್ರಮಗಳನ್ನು ಅನುಸರಿಸುವುದರಿಂದ ಸತತ ಕಂಪ್ಯೂಟರ್ ಬಳಕೆ ಮಾಡಿದರೂ ಕೂಡ ಆರೋಗ್ಯದ ಸಮಸ್ಯೆಗಳನ್ನು ತಪ್ಪಿಸಿಕೊಳ್ಳಬಹುದು. ಈ ಬಗ್ಗೆ ಮುಂದೆ ಓದಿ.

ಕಂಪ್ಯೂಟರೇ ಪ್ರಧಾನವಾಗಿರುವ ಉದ್ಯೋಗ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವವರನ್ನು ಟೆಕ್ಕಿಗಳೆನ್ನುತ್ತಾರೆ. ಅವರಿಗೆ ಕಂಪನಿಗಳಲ್ಲಿ ಮೊದಲು ಸೇರ್ಪಡೆಯಾದಾಗ 20-20-20-20 ಎಂಬ ಸೂತ್ರವೊಂದನ್ನು ಹೇಳಿಕೊಟ್ಟಿರುತ್ತಾರೆ. ಅಂದರೆ, ಕಂಪ್ಯೂಟರ್‌ನಲ್ಲಿ ಕೆಲಸ ಮಾಡುತ್ತಿರುವಾಗ ಪ್ರತೀ 20 ನಿಮಿಷಕ್ಕೊಮ್ಮೆ ಕಣ್ಣಿಗೆ 20 ಸೆಕೆಂಡ್ ವಿರಾಮ ನೀಡಬೇಕು. ಅಂದರೆ 20 ಅಡಿ ದೂರದಲ್ಲಿರುವ ಬಿಳಿ ಜಾಗವನ್ನು ಆ ಸಮಯದಲ್ಲಿ ನೋಡಬೇಕು. ಮತ್ತು ಯಾವಾಗಲೂ ಕಂಪ್ಯೂಟರ್ ಪರದೆಯು ನಿಮ್ಮ ಕಣ್ಣಿನಿಂದ ಕನಿಷ್ಠ 20 ಇಂಚು ದೂರದಲ್ಲಿರಬೇಕು. ಕಣ್ಣಿನ ಶ್ರಮವನ್ನು ಇದು ಸಾಕಷ್ಟು ದೂರ ಮಾಡುತ್ತದೆ ಮತ್ತು ಕಣ್ಣುಗಳ ತೇವಾಂಶವೂ ಉಳಿಯುತ್ತದೆ, ಕಣ್ಣುಗಳ ಆರೋಗ್ಯಕ್ಕೆ ಪೂರಕವಾಗುತ್ತದೆ.

ಆಫೀಸಲ್ಲಿ ಕೆಲಸ ಮಾಡುವಾಗ ಕಂಪ್ಯೂಟರ್ ಬಳಕೆಗೆ ಸೂಕ್ತವಾದ ಬೆಳಕಿನ ವ್ಯವಸ್ಥೆ ಇರುತ್ತದೆ. ಆದರೆ ಮನೆಯಲ್ಲಿ? ನೀವು ಈ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ, ಮನೆಯಲ್ಲೂ ಸಂಜೆ ಹೆಚ್ಚು ಹೊತ್ತು ಕಂಪ್ಯೂಟರ್ ಕೆಲಸ ಮಾಡುತ್ತಿದ್ದರೆ, ಕತ್ತಲಲ್ಲಿ ಕುಳಿತು ಬರೇ ಕಂಪ್ಯೂಟರ್ ಸ್ಕ್ರೀನ್ ಬೆಳಕಲ್ಲಿ ಕೆಲಸ ಮಾಡಬಾರದು. ಹಿತವಾದ ಬೆಳಕು ಬಲ್ಬ್‌ನಿಂದಾಗಲೀ, ಕಿಟಕಿಯಿಂದಾಗಲೀ ಬರುತ್ತಿರಲಿ. ಆದರೆ, ಎದುರು ಭಾಗದಿಂದ ಅಥವಾ ಹಿಂಭಾಗದಿಂದ ಬೆಳಕು ಬಾರದಂತೆ ನೋಡಿಕೊಳ್ಳಿ. ಯಾಕೆಂದರೆ, ಸ್ಕ್ರೀನ್ ಮೇಲೆ ಬೀಳುವ ಬೆಳಕಿನಿಂದ ಅದರಲ್ಲಿ ಓದಲು, ನೋಡಲು ಕಷ್ಟವಾಗುತ್ತದೆ ಮತ್ತು ಎದುರಿನಿಂದ ಬೆಳಕಿದ್ದರೆ ಕಣ್ಣುಗಳಿಗೆ ತ್ರಾಸವಾಗುತ್ತದೆ. ಬಿಸಿಲಿನಲ್ಲಿ ಕಂಪ್ಯೂಟರ್ ಕೆಲಸ ಬೇಡ. ಮತ್ತೊಂದು ನೆನಪಿಡಬೇಕಾದ, ಹೆಚ್ಚಿನವರು ಕೆಲವೊಮ್ಮೆ ಮರೆತೇಬಿಡುವ ಸಂಗತಿಯೆಂದರೆ, ಕಂಪ್ಯೂಟರ್ ನೋಡುತ್ತಿರುವಾಗ ಆಗಾಗ್ಗೆ ಕಣ್ಣುರೆಪ್ಪೆಯನ್ನು ಮುಚ್ಚಿ-ತೆರೆಯುವುದು. ಈ ರೀತಿ ಮಾಡುವುದರಿಂದ ಕಣ್ಣುಗಳ ಪಸೆ ಆರುವುದನ್ನು, ಅದರಿಂದ ಕಿರಿಕಿರಿಯೆನ್ನಿಸಿ, ತಲೆಶೂಲೆ ಬರುವುದನ್ನು ಸ್ವಲ್ಪಮಟ್ಟಿಗೆ ತಡೆಯಬಹುದು.

ಹೆಚ್ಚಿನವರು ಮರೆತುಬಿಡುವ ಮತ್ತೊಂದು ಅಂಶವಿದೆ. ಅದೆಂದರೆ ಸ್ಕ್ರೀನನ್ನು ಸ್ವಚ್ಛವಾಗಿಟ್ಟಿರುವುದು. ಇತ್ತೀಚೆಗೆ ಟಚ್ ಸ್ಕ್ರೀನ್ ಕಂಪ್ಯೂಟರ್/ಲ್ಯಾಪ್‌ಟಾಪ್‌ಗಳು ಬಂದ ಮೇಲಂತೂ, ಸ್ಕ್ರೀನ್ ಮೇಲೆ ಬೆರಳಚ್ಚು, ಧೂಳು, ಕೊಳೆ ಇರುವುದು ಜಾಸ್ತಿಯಾಗಿಬಿಟ್ಟಿದೆ. ಅಕ್ಷರಗಳನ್ನು ಅಥವಾ ಚಿತ್ರವನ್ನು ನೋಡಲು ಈ ಧೂಳಿನಿಂದ ನಿಮಗರಿವಿಲ್ಲದಂತೆಯೇ ಅಡ್ಡಿಯಾಗಬಹುದು. ಒಂದು ಸಲ, ಧೂಳು, ಕೊಳೆ, ಬೆರಳಚ್ಚನ್ನೆಲ್ಲಾ ನಿರ್ಲಕ್ಷಿಸಿಬಿಟ್ಟರೆ, ಅದುವೇ ಅಭ್ಯಾಸವಾಗಬಹುದು. ಸ್ಕ್ರೀನ್ ತುಂಬಾ ಧೂಳು, ಕೊಳೆ ತುಂಬಿ, ಅಸ್ಪಷ್ಟವಾಗಬಹುದು. ಸರಿಯಾಗಿ ಕಾಣಿಸುವುದಿಲ್ಲವೆಂಬ ಕಾರಣಕ್ಕೆ ನಿಮ್ಮ ಕಣ್ಣುಗಳು ತನ್ನನ್ನು ತಾನೇ ಹೊಂದಿಸಿಕೊಳ್ಳುವಾಗ ಕಣ್ಣುಪಾಪೆಗಳಿಗೆ ಶ್ರಮ ಹೆಚ್ಚಾಗಬಹುದು. ಈ ಬಗ್ಗೆ ಎಚ್ಚರಿಕೆ ತೆಗೆದುಕೊಳ್ಳಬೇಕಾಗುತ್ತದೆ.

ಇನ್ನೊಂದಿಷ್ಟು ಉಪಯುಕ್ತ ಸಲಹೆಗಳೆಂದರೆ, ಕುಳಿತುಕೊಳ್ಳುವ ಭಂಗಿಯು ಕತ್ತು, ಸೊಂಟ, ಕಣ್ಣು, ಕೈ ಮುಂತಾಗಿ ದೇಹದ ಯಾವುದೇ ಭಾಗಕ್ಕೆ ತ್ರಾಸವಾಗದಂತೆ ಇರಲಿ. ಹೆಚ್ಚು ಓದುವುದಿದ್ದರೆ, ಸ್ಕ್ರೀನ್‌ನಲ್ಲಿ ಅಕ್ಷರಗಳ ಗಾತ್ರ ದೊಡ್ಡದಾಗಿಸಿಯೇ ಓದಿಕೊಳ್ಳಿ; ಡೆಸ್ಕ್‌ಟಾಪ್‌ಗಿಂತಲೂ ಲ್ಯಾಪ್‌ಟಾಪ್ ಕಣ್ಣುಗಳಿಗೆ ಕಡಿಮೆ ಶ್ರಮ ನೀಡುತ್ತದೆ; ಕಣ್ಣು ಒಣಗಿದಂತಿದ್ದರೆ, ವೈದ್ಯರಲ್ಲಿ ವಿಚಾರಿಸಿ ಸೂಕ್ತವಾದ ಐ ಡ್ರಾಪ್ಸ್ ಬಳಸಿ; ಹೆಚ್ಚು ಹಸಿರು ಸೊಪ್ಪು, ತರಕಾರಿ ಸೇವಿಸಿ.

ಈ ಮೇಲಿನ ಅಂಶಗಳಲ್ಲಿ ಕೆಲವಂತೂ ಸ್ಮಾರ್ಟ್‌ಫೋನ್, ಟ್ಯಾಬ್ಲೆಟ್‌ಗಳಿಗೂ ಅನ್ವಯವಾಗುತ್ತವೆ. ನೆನಪಿಡಿ, ನಮ್ಮ ಕಣ್ಣುಗಳು ನಮಗೆ ಅನುಕೂಲ ಮಾಡಿಕೊಟ್ಟರೆ ಮಾತ್ರವೇ ಗ್ಯಾಜೆಟ್‌ಗಳನ್ನು ನಾವು ಪರಿಪೂರ್ಣವಾಗಿ ಆನಂದಿಸಬಹುದು.

ಟೆಕ್-ಟಾನಿಕ್
ರೈಲ್ವೇ ಟಿಕೆಟ್ ಬುಕ್ ಮಾಡಲು

ಯಾವುದೇ ಊರಿಗೆ ಹೋಗಲು ಟಿಕೆಟ್‌ಗಳನ್ನು ಮುಂಗಡ ಕಾಯ್ದಿರಿಸಲು ಉದ್ದುದ್ದ ಸರತಿ ಸಾಲುಗಳಲ್ಲಿ ನಿಲ್ಲುವ ಬದಲು, ಕುಳಿತಲ್ಲೇ ಟಿಕೆಟ್ ಕಾಯ್ದಿರಿಸಬಹುದಾದ ವ್ಯವಸ್ಥೆಯನ್ನು ಭಾರತೀಯ ರೈಲ್ವೇ ಇಲಾಖೆ irctc.co.in ಮೂಲಕ ಒದಗಿಸಿದೆ. ಹಿಂದೆ ಈ ತಾಣವು ಸಿಕ್ಕಾಪಟ್ಟೆ ನಿಧಾನ ಅಂತೆಲ್ಲಾ ದೂರುಗಳು ಬಂದಿದ್ದ ಹಿನ್ನೆಲೆಯಲ್ಲಿ ಸರಕಾರವು ಈ ಬಗ್ಗೆ ಗಮನ ಹರಿಸಿದೆ. ತತ್ಪರಿಣಾಮವಾಗಿ ಈ ತಾಣವು ವೇಗವಾಗಿ ಬುಕಿಂಗ್ ಮಾಡಲು ಸಹಕರಿಸುತ್ತಿದೆ. ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಅಥವಾ ನೆಟ್‌ಬ್ಯಾಂಕಿಂಗ್ ಬಳಸಿ ನಾವೇ ಲಾಗಿನ್ ಆಗಿ ಟಿಕೆಟ್ ಬುಕ್ ಮಾಡಬಹುದು. ಪ್ರಯಾಣಿಕರ ಪಟ್ಟಿಯನ್ನು ಒಮ್ಮೆ ಸೇವ್ ಮಾಡಿಟ್ಟುಕೊಂಡರೆ, ಪದೇ ಪದೇ ಎಲ್ಲ ವಿವರ ದಾಖಲಿಸುವ ಶ್ರಮ ಇರುವುದಿಲ್ಲ. ಟಿಕೆಟ್ ರದ್ದುಪಡಿಸುವ ವ್ಯವಸ್ಥೆಯೂ ಇದೆ.

ಗ್ರಾಹಕ ಸಾಮಗ್ರಿ ಖರೀದಿಸುವ ಮುನ್ನ ಇಂಟರ್ನೆಟ್ ಜಾಲಾಡಿ

ಮಾಹಿತಿ@ತಂತ್ರಜ್ಞಾನ ವಿಜಯ ಕರ್ನಾಟಕ ಅಂಕಣ 85, ಜುಲೈ 21, 2014:

Avinash Column-1ಪೆನ್ನಿನಿಂದ ಹಿಡಿದು ಟಿವಿ, ವಾಷಿಂಗ್ ಮೆಷಿನ್, ಫ್ರಿಜ್‌ವರೆಗೆ ಯಾವುದೇ ವಸ್ತುಗಳನ್ನು ಇಂಟರ್ನೆಟ್ ಮೂಲಕವೇ ಖರೀದಿಸುವ ಪ್ರಕ್ರಿಯೆಯೊಂದು ಭಾರತದಲ್ಲಿ ಈಗ ನಿಧಾನಕ್ಕೆ ವೇಗ ಪಡೆದುಕೊಳ್ಳುತ್ತಿದೆ. ಕುಳಿತಲ್ಲಿಂದಲೇ ಎಲ್ಲವನ್ನೂ ನೋಡಿ ಖರೀದಿ ಮಾಡಬಹುದಾದ ಅನುಕೂಲತೆ ಮತ್ತು ಸಮಯದ ಉಳಿತಾಯದಿಂದಾಗಿ ಇದು ಸಾಧ್ಯವಾಗುತ್ತಿದೆ.

ಕೆಲವೊಂದು ಉತ್ಪನ್ನಗಳು ಆನ್‌ಲೈನ್‌ನಲ್ಲಿ ಮಾತ್ರ ಲಭ್ಯ. ಉದಾಹರಣೆಗೆ, ಮೋಟೋರೋಲದ ಕೆಲವು ಸ್ಮಾರ್ಟ್‌ಫೋನ್ ಮಾಡೆಲ್‌ಗಳು ಭಾರತದಲ್ಲಿ ಬಿಡುಗಡೆಯಾಗಿದ್ದು ಆನ್‌ಲೈನ್‌ನಲ್ಲಿ ಫ್ಲಿಪ್‌ಕಾರ್ಟ್ ಡಾಟ್ ಕಾಂ ಎಂಬ ಜಾಲತಾಣದ ಮೂಲಕ. ಅವೆಲ್ಲವೂ ಆ ತಾಣದಲ್ಲಿ ಮಾತ್ರ ಲಭ್ಯ, ಬೇರೆ ಅಂತರ್ಜಾಲ ತಾಣಗಳಲ್ಲಾಗಲೀ, ಹೊರಗೆ ಮಳಿಗೆಗಳಲ್ಲಾಗಲೀ ದೊರೆಯುವುದಿಲ್ಲ. ಬೇಡಿಕೆಯೂ ಸಾಕಷ್ಟಿದೆ ಎಂದು ಹೇಳಲಾಗುತ್ತಿತ್ತು. ‘ಸ್ಟಾಕ್ ಇಲ್ಲ, ಬಂದಾಗ ತಿಳಿಸುತ್ತೇವೆ, ನಿಮ್ಮ ಇಮೇಲ್ ವಿಳಾಸ ದಾಖಲಿಸಿ’ ಅಥವಾ ‘ಈಗಲೇ ಬುಕ್ ಮಾಡಿ’ ಎಂಬ ಸಂದೇಶಗಳು ಸಾಮಾನ್ಯವಾಗಿದ್ದವು. ಇದು ಉದಾಹರಣೆಯಷ್ಟೆ. ಇದರ ಹಿಂದೆ ಅತ್ಯುತ್ತಮ ಮಾರುಕಟ್ಟೆ ತಂತ್ರಗಳಿರುತ್ತವೆ. ಆನ್‌ಲೈನ್‌ನಲ್ಲಿ ಮಾತ್ರ ಲಭ್ಯ ಎಂಬ ಈ ಮಾರಾಟ ತಂತ್ರವು ಭಾರತಕ್ಕೂ ಬಂದಿದೆ.

ಫ್ಲಿಪ್‌ಕಾರ್ಟ್, ಇ-ಬೇ, ಇಂಡಿಯಾಟೈಮ್ಸ್, ಅಮೆಜಾನ್ ಮುಂತಾದ ಪ್ರಸಿದ್ಧ ಇ-ಕಾಮರ್ಸ್ ತಾಣಗಳು ವೈವಿಧ್ಯಮಯ ವಸ್ತುಗಳನ್ನು ಮಾರಾಟ ಮಾಡುವಲ್ಲಿ ಜನಪ್ರಿಯವಾಗಿವೆ. ಕ್ರೆಡಿಟ್ ಕಾರ್ಡ್ ಅಥವಾ ನೆಟ್ ಬ್ಯಾಂಕಿಂಗ್ ಮೂಲಕ ಹಣ ಪಾವತಿಸುವ ವ್ಯವಸ್ಥೆ ಇಲ್ಲಿರುತ್ತದೆ. ಇವೆಲ್ಲ ವಹಿವಾಟುಗಳೂ ನಂಬಿಕೆಯ ಆಧಾರದಲ್ಲೇ ನಡೆಯುವುದರಿಂದ ಹಣ ಪಾವತಿಗಾಗಿ ಸುರಕ್ಷಿತ ಮಾರ್ಗವೊಂದಿದೆ. ಅದಕ್ಕೆ ಗೇಟ್‌ವೇ ಎನ್ನುತ್ತಾರೆ ಮತ್ತು ಸರಕಾರದ ಮಾನ್ಯತೆಯೂ ಇದೆ. ಬ್ಯಾಂಕಿಂಗ್ ಸಂಸ್ಥೆಗಳು, ಕ್ರೆಡಿಟ್ ಕಾರ್ಡ್-ಡೆಬಿಟ್ ಕಾರ್ಡ್ ವಿತರಿಸುವ ಕಂಪನಿಗಳು ಈ ಸುರಕ್ಷಿತವಾದ ಗೇಟ್‌ವೇಯಲ್ಲಿ ನೋಂದಾಯಿಸಿಕೊಂಡಿರುತ್ತವೆ. ಇನ್ನು, ಆನ್‌ಲೈನ್‌ನಲ್ಲಿ ಖರೀದಿಸುವ ಕುರಿತು ಸಂದೇಹ ಇರುವವರಿಗಾಗಿಯೇ ಕ್ಯಾಶ್ ಆನ್ ಡೆಲಿವರಿ (ನಾವು ಖರೀದಿ ಮಾಡುವ ಸಾಧನ ಕೈಗೆ ಸಿಕ್ಕಮೇಲಷ್ಟೇ ಹಣ ನೀಡುವ) ವ್ಯವಸ್ಥೆಯೂ ಇದೆ.

ಆನ್‌ಲೈನ್ ತಾಣಗಳಲ್ಲಿನ ಅತಿದೊಡ್ಡ ಅನುಕೂಲವೆಂದರೆ, ವಿಶ್ವಾಸಾರ್ಹ ಜಾಲ ತಾಣಗಳಲ್ಲಿ ಖರೀದಿ ಮಾಡಿದವರು ಈ ಜಾಲ ತಾಣದ ಸೇವೆ ಹೇಗಿದೆ ಮತ್ತು ಅವರು ಖರೀದಿಸಿದ ವಸ್ತು ಹೇಗಿದೆ ಎಂಬುದರ ಕುರಿತು ಸುದೀರ್ಘ ವಿಮರ್ಶೆ ಮಾಡಿರುತ್ತಾರೆ. ಆಯಾ ಉತ್ಪನ್ನದ ಕೆಳಗೆ ಬಳಕೆದಾರರ ವಿಮರ್ಶೆ/ಕಾಮೆಂಟ್ ದಾಖಲಿಸುವ ಸ್ಥಳದಲ್ಲಿ ಇವೆಲ್ಲವೂ ಲಭ್ಯ. ಕೆಲವೊಂದು ವಿಮರ್ಶೆಗಳು (ರಿವ್ಯೆ) ಮಾರುಕಟ್ಟೆ ತಂತ್ರದ ಭಾಗ ಎಂದು ತೋರುತ್ತವೆಯಾದರೂ, ಮತ್ತೆ ಕೆಲವು ಪ್ರಾಮಾಣಿಕ ವಿಮರ್ಶೆಗಳಿರುತ್ತವೆ. ತಾವು ಖರೀದಿಸಿದ ಸಾಧನವನ್ನು ಒಂದಷ್ಟು ದಿನಗಳ ಕಾಲ ಬಳಸಿದವರು ಅದರ ಒಳ್ಳೆಯ ಅಂಶಗಳು, ಕೆಟ್ಟ ಅಂಶಗಳನ್ನು ಪಟ್ಟಿ ಮಾಡಿ ಅಲ್ಲಿ ನಮೂದಿಸಿರುತ್ತಾರೆ. ಸಾಧನ ಚೆನ್ನಾಗಿಲ್ಲದಿದ್ದರೆ ಖಡಕ್ ಆಗಿ ಹೇಳಿರುತ್ತಾರೆ.

ನಿರ್ದಿಷ್ಟ ಉತ್ಪನ್ನದ ಕುರಿತಾಗಿ ಕೇವಲ ಒಂದು ಜಾಲತಾಣದಲ್ಲಿನ ವಿಮರ್ಶೆ ನೋಡಬಾರದು. ಹಲವು ವೆಬ್‌ಸೈಟ್‌ಗಳಲ್ಲಿರುವ ತಜ್ಞರ ವಿಮರ್ಶೆಗಳನ್ನು ಓದಿದರೆ ಜತೆಗೆ, ಅದಕ್ಕೆ ಬಂದಿರುವ ನೈಜ ಬಳಕೆದಾರರ ಕಾಮೆಂಟ್‌ಗಳನ್ನೂ ನೋಡಿದರೆ ನಿರ್ದಿಷ್ಟ ವಸ್ತುವನ್ನು ಖರೀದಿಸಬಹುದೇ ಬೇಡವೇ ಎಂಬ ಬಗ್ಗೆ ಅಳೆದು ತೂಗಿ ನಿರ್ಧಾರಕ್ಕೆ ಬರಲು ನೆರವಾಗುತ್ತವೆ. ಒಂದು ಸ್ಮಾರ್ಟ್‌ಫೋನನ್ನೇ ಉದಾಹರಣೆಗೆ ತೆಗೆದುಕೊಂಡರೆ, ಅದರ ಕ್ಯಾಮರಾ ಹೇಗೆ ಕೆಲಸ ಮಾಡುತ್ತದೆ, ಅದರ ಆನ್/ಆಫ್ ಸ್ವಿಚ್ ಹೇಗಿರುತ್ತದೆ, ಮ್ಯೂಸಿಕ್ ಹೇಗೆ ಕೇಳಿಸುತ್ತದೆ, ವೀಡಿಯೋ ಪ್ಲೇ ಮಾಡುವಾಗ ಚೆನ್ನಾಗಿ ಕಾಣಿಸುತ್ತದೆಯೇ ಅಥವಾ ಹ್ಯಾಂಗ್ ಆಗುತ್ತದೆಯೇ, ಹಲವು ಕಾರ್ಯಗಳನ್ನು ಒಂದೇ ಸಲ ಮಾಡುವಾಗ ಸಾಧನವು ಬಿಸಿಯಾಗುತ್ತದೆಯೇ ಎಂಬಿತ್ಯಾದಿ ವಿವರ ಅಲ್ಲಿ ಲಭ್ಯವಾಗುತ್ತದೆ.

ಸರಕು ಮಾರುವ ತಾಣಗಳಲ್ಲಿಯೂ ಆಯಾ ವಸ್ತುಗಳ ಪುಟದಲ್ಲಿ ಬಳಕೆದಾರರು ಮಾಡಿದ ಕಾಮೆಂಟ್‌ಗಳನ್ನು ನೋಡಿದರೆ ಮತ್ತಷ್ಟು ಮಾಹಿತಿ ನಿಮಗೆ ದೊರೆಯುತ್ತದೆ. ನಿಮ್ಮಲ್ಲಿರಬಹುದಾದ ಸಂದೇಹಗಳು ಬೇರೆಯವರಿಗೂ ಬಂದಿರಬಹುದು, ಅವರು ಅದನ್ನು ಅಲ್ಲಿ ದಾಖಲಿಸಿದಾಗ, ತಿಳಿದವರು ಉತ್ತರಿಸಿರುತ್ತಾರೆ. ಅಲ್ಲೇ ಸಾಧನದ ಒಳಿತು-ಕೆಡುಕುಗಳ ಕುರಿತು ಚರ್ಚೆ, ವಾದ-ಪ್ರತಿವಾದಗಳೂ ನಡೆಯುತ್ತವೆ. ಇವುಗಳಿಂದ ನೀವು ಖರೀದಿಸಬೇಕೆಂದಿರುವ ಸಾಧನವು ನಿಮ್ಮ ಹಣಕ್ಕೆ ತಕ್ಕ ಮೌಲ್ಯ ಕೊಡಬಲ್ಲುದೇ ಎಂದು ನಿರ್ಧರಿಸಲು ನಿಮಗೆ ಅನುಕೂಲವಾಗುತ್ತದೆ. ಹೀಗಾಗಿ, ಯಾವುದೇ ವಸ್ತು ಖರೀದಿಸುವ ಮುನ್ನ ಆನ್‌ಲೈನ್‌ನಲ್ಲಿ ರಿಸರ್ಚ್ ಮಾಡಿದರೆ, ಸಾಕಷ್ಟು ಹಣ ಉಳಿತಾಯ ಮಾಡಬಹುದು ಮತ್ತು ಒಳಿತು ಕೆಡುಕುಗಳ ಕುರಿತು ಸ್ಪಷ್ಟ ಮಾಹಿತಿ ತಿಳಿದುಕೊಳ್ಳಬಹುದು.

ಫೇಸ್‌ಬುಕ್‌ನಲ್ಲಿ ಆಡಲು ಕರೆಯುತ್ತಿದ್ದಾರೆಯೇ?

ಮಾಹಿತಿ@ತಂತ್ರಜ್ಞಾನ: ವಿಜಯ ಕರ್ನಾಟಕ ಅಂಕಣ, ಜೂನ್ 30, 2014

ಫೇಸ್‌ಬುಕ್ ಸಾಮಾಜಿಕ ಜಾಲತಾಣದಲ್ಲಿ ಈಗೀಗ ಸ್ನೇಹಿತರ ಸಂಖ್ಯೆ ಹೆಚ್ಚಾಗಿ, ಗೇಮ್ಸ್ ಆಡಲು ಆಹ್ವಾನ ನೀಡುತ್ತಿರುವವರ ಕಾಟದಿಂದಾಗಿಯೋ, ಸಾಕಪ್ಪಾ ಸಾಕು ಈ ಫೇಸ್‌ಬುಕ್ ಅಂತ ಕೆಲವರಿಗೆ ಅನ್ನಿಸಿರಬಹುದು. ಅದೇ ರೀತಿ, ಅನಗತ್ಯ ಸಂದೇಶಗಳು ಎಫ್‌ಬಿ ಮೆಸೆಂಜರ್ ಮೂಲಕ ಕಿರಿಕಿರಿಯುಂಟು ಮಾಡಬಹುದು. ಇದರ ಕಾಟದಿಂದ ಪಾರಾಗುವುದು ಹೇಗೆಂಬ ಬಗ್ಗೆ ಯೋಚಿಸುವವರು ಮುಂದೆ ಓದಿ.

ಯಾವುದೇ ಆಟದ ರಿಕ್ವೆಸ್ಟ್ ಬಂದ್ರೆ (ಉದಾಹರಣೆಗೆ, ಇತ್ತೀಚೆಗೆ ಹೆಚ್ಚು ಕಾಟ ಕೊಡುತ್ತಾ ಇರೋದು ಕ್ಯಾಂಡಿ ಕ್ರಶ್ ಸಾಗಾ ಎಂಬ ಆನ್‌ಲೈನ್ ಆಟ) ಅಲ್ಲೊಂದು ನೋಟಿಫಿಕೇಶನ್, ಟ್ರಿಣ್ ಎಂಬ ಸದ್ದಿನೊಂದಿಗೆ ನಿಮ್ಮ ಮೊಬೈಲ್ ಪರದೆಯಲ್ಲಿ ಕಿರಿಕಿರಿ ಮಾಡುತ್ತದೆ. ಅದನ್ನು ಆಡುವ ಮನಸ್ಸಿಲ್ಲ, ಆದರೂ ನೋಟಿಫಿಕೇಶನ್ ನೋಡದಿರಲು ಸಾಧ್ಯವಿಲ್ಲ. ನೋಡಿದ ಮೇಲೆ ಸಮಯ ವ್ಯರ್ಥವಾಗಿರುವುದು ಅರಿವಾಗುತ್ತದೆ. ಪ್ರತಿಯೊಂದು ಆಟದ ಆಹ್ವಾನಕ್ಕೂ ನೋಟಿಫಿಕೇಶನ್, ಪ್ರತಿಯೊಂದು ಲೈಕ್‌ಗೂ ಟ್ರಿಣ್ ಸದ್ದು… ಇತ್ಯಾದಿ ನಮ್ಮ ಗಮನ ಬೇರೆಡೆ ಸೆಳೆಯುತ್ತವೆ ಮತ್ತು ಏಕಾಗ್ರತೆಗೆ ಭಂಗವುಂಟು ಮಾಡುತ್ತವೆ. ಆ ಆಟಗಳನ್ನೇ ಕ್ರಶ್ ಮಾಡುವುದು ಹೇಗೆ?

ನೀವು ಫೇಸ್‌ಬುಕ್‌ಗೆ ಲಾಗಿನ್ ಆಗಿರುವಾಗ ನಿಮಗೆ ಬಂದಿರುವ ನೋಟಿಫಿಕೇಶನ್ ಕ್ಲಿಕ್ ಮಾಡಿ…
ಪ್ಲೇ ನೌ ಎಂಬ ಬಟನ್ ಅನ್ನು ಕಣ್ಣೆತ್ತಿಯೂ ನೋಡಬೇಡಿ. ಹಾಗೆಯೇ ಕೆಳಗೆ ನೋಡಿ, ಕೆಳ ಬಲಭಾಗದಲ್ಲಿ View in App Centre ಎಂಬ ಲಿಂಕ್ ಇದೆ, ಅದನ್ನು ಕ್ಲಿಕ್ ಮಾಡಿ.
ಬಲ ಭಾಗದಲ್ಲಿ Visit App Website, Visit App Page, Share, Block, Report a Problem ಮುಂತಾದ ಲಿಂಕ್‌ಗಳಿರುತ್ತವೆ. ನಿಮಗೆ ಬೇಕಾದ ಲಿಂಕ್ ಸಿಕ್ಕಿಯೇಬಿಟ್ಟಿತಲ್ಲವೇ? ಬ್ಲಾಕ್ ಒತ್ತಿ, Confirm ಮಾಡಿಬಿಡಿ. ಮತ್ತೆ ನಿಮಗೆ ಆ ಆಟಕ್ಕೆ ಯಾರೇ ಕರೆದರೂ, ಅವುಗಳ ನೋಟಿಫಿಕೇಶನ್ ಬರುವುದಿಲ್ಲ. ಆದರೆ, ಪ್ರತಿಯೊಂದು ಆಟಕ್ಕೂ ಪ್ರತ್ಯೇಕವಾಗಿ ನೀವು ಹೀಗೆಯೇ ಮಾಡಬೇಕಾಗುತ್ತದೆ ಎಂಬುದೊಂದು ತ್ರಾಸ ತೆಗೆದುಕೊಳ್ಳಲೇಬೇಕು. ಹಾಗಿದ್ದರೆ ಮಾತ್ರ, ಆ ಆಟಕ್ಕೆ ಕರೆಯುವ ನೂರಾರು ಮಂದಿಯಿಂದ ಪಾರಾಗಬಹುದು.

ಇನ್ನು, ಯಾರೋ ಯಾವುದೋ ಪೋಸ್ಟ್‌ಗೆ ಕಾಮೆಂಟ್ ಮಾಡಿದ್ದಕ್ಕೆ, ಯಾರೋ ಯಾರ ಜತೆನೋ ಫ್ರೆಂಡ್‌ಶಿಪ್ ಮಾಡಿಕೊಂಡಿದ್ದಕ್ಕೆ, ಬೇರೆಯವರ ಫೋಟೋವನ್ನು ಶೇರ್ ಮಾಡಿದ್ದಕ್ಕೆ, ಬೇರೆಯವರ ಪೋಸ್ಟನ್ನು ಲೈಕ್ ಮಾಡಿದ್ದಕ್ಕೆ ನಿಮಗೆ ನೋಟಿಫಿಕೇಶನ್ ಬಂದು ಕಿರಿಕಿರಿಯಾಗುತ್ತಿದೆಯೇ?

ಅವರನ್ನು ನಿಮ್ಮ ಸ್ನೇಹಿತರಾಗಿಯೇ ಉಳಿಸಿಕೊಂಡು ನೀವು ಈ ನೋಟಿಫಿಕೇಶನ್‌ಗಳನ್ನು ಇಲ್ಲವಾಗಿಸಬಹುದು. ಹೇಗೆಂದರೆ, ಯಾರ ಫೇಸ್‌ಬುಕ್ ಚಟುವಟಿಕೆಗಳ ಕುರಿತಾಗಿ ನಿಮಗೆ ನೋಟಿಫಿಕೇಶನ್‌ಗಳು ಬರುತ್ತಿವೆಯೋ, ಅಂಥವರ ಹೆಸರಿನ ಮೇಲೆ ಅಥವಾ ಗ್ರೂಪ್‌ನ ಮೇಲೆ ಮೌಸ್ ಪಾಯಿಂಟರ್ ಹೋವರ್ ಮಾಡಿ (ಕ್ಲಿಕ್ ಮಾಡೋದಲ್ಲ, ತೋರಿಸೋದು ಮಾತ್ರ). Following ಎಂಬ ಬಟನ್ ಕಾಣಿಸುತ್ತದೆ. ಕ್ಲಿಕ್ ಮಾಡಿ. ರೈಟ್ ಗುರುತು ಹೋಗುತ್ತದೆ. ಆಗ ನೀವು ಅವರ ಫೇಸ್‌ಬುಕ್ ಚಟುವಟಿಕೆಗಳನ್ನು ಫಾಲೋ ಮಾಡುತ್ತಿಲ್ಲ ಎಂದಾಗುತ್ತದೆ. ನೋಟಿಫಿಕೇಶನ್‌ಗಳು ಬರುವುದಿಲ್ಲ.

ಈ ರೀತಿ ಮಾಡುವುದರಿಂದ, ನಿಮ್ಮ ಸ್ನೇಹಿತರ ಪ್ರೈವೆಸಿಗೆ ರಕ್ಷಣೆ ದೊರೆತಂತಾಗುತ್ತದೆ ಅಂತಲೂ ಮನಸ್ಸು ಉದಾರ ಮಾಡಿಕೊಂಡರೆ ನಿಮಗೂ ಒಳಿತು. ನೋಟಿಫಿಕೇಶನ್‌ಗಳ ಕಿರಿಕಿರಿ ಇರುವುದಿಲ್ಲ.

ಅದೇ ರೀತಿ, ಯಾರೋ ನಿಮ್ಮನ್ನು ನಿಮಗಿಷ್ಟವಿಲ್ಲದ ಗ್ರೂಪ್‌ಗೆ ಸೇರಿಸಿಬಿಟ್ಟಿರುತ್ತಾರೆ. ಅದು ಬಿಡಲು ಮನಸ್ಸಿಲ್ಲದ ಗ್ರೂಪ್ ಕೂಡ ಆಗಿರಬಹುದು. ಆ ಗ್ರೂಪ್‌ನ ಪುಟದಲ್ಲಿ ಯಾರೇ ಪೋಸ್ಟ್ ಮಾಡಿದರೂ ನಿಮಗೆ ನೋಟಿಫಿಕೇಶನ್ ಬರುತ್ತದೆ. ಇದನ್ನು ತಡೆಯಲು ಎರಡು ವಿಧಾನಗಳಿವೆ. ಒಂದನೆಯದು ಆ ಗ್ರೂಪ್‌ನ ಪುಟಕ್ಕೆ ಹೋಗುವುದು ಮತ್ತು ಗ್ರೂಪ್‌ನ ಕವರ್ ಫೋಟೋದ ಕೆಳ-ಬಲಭಾಗದಲ್ಲಿ ನೋಟಿಫಿಕೇಶನ್ಸ್ ಎಂಬ ಬಟನ್ ಇರುತ್ತದೆ. ಅದನ್ನು ಕ್ಲಿಕ್ ಮಾಡಿದರೆ All Posts, Friends Posts ಮತ್ತು Off ಎಂಬ ಮೆನು ಕಾಣಿಸುತ್ತದೆ. ನಿಮಗೆ ಬೇಕಾಗಿರುವುದನ್ನು ಕ್ಲಿಕ್ ಮಾಡಿ. ಗ್ರೂಪ್ ಅಥವಾ ಪುಟವೇ ನಿಮಗಿಷ್ಟವಿಲ್ಲವೆಂದಾದರೆ, ಕವರ್ ಫೋಟೋದ ಕೆಳಗೆ ಬಲ ತುದಿಯಲ್ಲಿ ಚಕ್ರದ (ಗಿಯರ್) ಐಕಾನ್ ಇರುವ ಬಟನ್ ಇರುತ್ತದೆ. ಅದು ಸೆಟ್ಟಿಂಗ್ಸ್ ಎಂಬುದರ ಸೂಚನೆ. ಅದನ್ನು ಕ್ಲಿಕ್ ಮಾಡಿದಾಗ ಡ್ರಾಪ್‌ಡೌನ್ ಮೆನು ಕಾಣಿಸಿಕೊಳ್ಳುತ್ತದೆ, ತಳ ಭಾಗದಲ್ಲಿ, Leave Group ಎಂಬ ಬಟನ್ ಕ್ಲಿಕ್ ಮಾಡಿದರಾಯಿತು.

ಆನ್‌ಲೈನ್ ಪಾಸ್‌ವರ್ಡ್: ದುಪ್ಪಟ್ಟು ಹುಷಾರಾಗಿರಿ

ಮಾಹಿತಿ@ತಂತ್ರಜ್ಞಾನ: ವಿಜಯ ಕರ್ನಾಟಕ ಅಂಕಣ: ಮೇ 26, 2014
ಫೇಸ್‌ಬುಕ್, ಟ್ವಿಟರ್ ಮಾತ್ರವಲ್ಲದೆ, ಬ್ಲಾಗ್ ಮಾಡಲು, ಇಮೇಲ್ ಸಂವಹನ, ಚಾಟಿಂಗ್, ಆನ್‌ಲೈನ್ ಗೇಮಿಂಗ್, ಆನ್‌ಲೈನ್ ಶಾಪಿಂಗ್, ಬ್ಯಾಂಕಿಂಗ್ ವಹಿವಾಟು, ಆನ್‌ಲೈನ್ ಟಿಕೆಟ್ ಬುಕಿಂಗ್ ಇತ್ಯಾದಿ ದಿನವಹಿ ಚಟುವಟಿಕೆಗಳು ಈಗ ಇಂಟರ್ನೆಟ್‌ನಲ್ಲಿ ಜನಸಾಮಾನ್ಯರಲ್ಲೂ ಜನಪ್ರಿಯವಾಗುತ್ತಿವೆ. ಇದಕ್ಕೆ ಪ್ರಮುಖ ಕಾರಣ, ಸಮಯದ ಉಳಿತಾಯ ಒಂದೆಡೆಯಾದರೆ, ಈ ತಂತ್ರಜ್ಞಾನವೆಂಬುದು ನಾವು ತಿಳಿದಷ್ಟು ಕಷ್ಟವೇನಲ್ಲ ಎಂಬ ಅರಿವು ಮತ್ತೊಂದೆಡೆ.

ಯಾವುದೇ ಆನ್‌ಲೈನ್ ಚಟುವಟಿಕೆಗಳಿಗೆ ಯೂಸರ್‌ನೇಮ್ (ಬಳಕೆದಾರ ಐಡಿ) ಹಾಗೂ ಪಾಸ್‌ವರ್ಡ್ (ಗುಪ್ತ ಪದ) ಅತ್ಯಂತ ಮುಖ್ಯವಾಗುತ್ತವೆ. ಇವಿಲ್ಲದೆ ಯಾವುದೇ ಚಟುವಟಿಕೆ ನಡೆಯುವುದಿಲ್ಲ. ಸೈಬರ್ ಜಗತ್ತಿನಲ್ಲಿ ಅಕೌಂಟ್ ಹ್ಯಾಕಿಂಗ್ ಮೂಲಕವಾಗಿ ಸಾಕಷ್ಟು ಅಪರಾಧ ಚಟುವಟಿಕೆಗಳು ನಡೆಯುತ್ತಿರುವುದರಿಂದ ಈ ನಿಟ್ಟಿನಲ್ಲಿ ಜಾಗೃತರಾಗಬೇಕಿರುವುದು ಹಾಗೂ ಪಾಸ್‌ವರ್ಡ್ ಕಳ್ಳರ ಕೈಯಿಂದ ತಪ್ಪಿಸಿಕೊಳ್ಳುವುದರ ಬಗ್ಗೆ ಹೆಚ್ಚು ಎಚ್ಚರ ವಹಿಸಬೇಕಾಗುತ್ತದೆ.

ಈ ಕಾರಣಕ್ಕಾಗಿಯೇ ಬ್ಯಾಂಕಿಂಗ್ ಸಹಿತ ಹಲವು ಜಾಲ ತಾಣಗಳು ಎರಡು ಹಂತದ ಭದ್ರತಾ ದೃಢೀಕರಣ ಕ್ರಮಗಳನ್ನು ಅನುಸರಿಸುತ್ತಿವೆ. ಇಂಥದ್ದೇ ವೆರಿಫಿಕೇಶನ್ ವ್ಯವಸ್ಥೆ ಇಮೇಲ್‌ಗಳಿಗೆ, ಕ್ರೆಡಿಟ್ ಕಾರ್ಡ್‌ಗಳಿಗೆ ಬಂದಿವೆ. ಅವುಗಳನ್ನು ನಾವು ಬಳಸಿಕೊಳ್ಳಬೇಕಷ್ಟೆ.

ಎರಡು ಹಂತದ ಭದ್ರತಾ ದೃಢೀಕರಣ ಎಂದರೇನು?: ಈ ಕ್ರಮ ಅನುಸರಣೆಯಿಂದ ನಮ್ಮ ಆನ್‌ಲೈನ್ ಖಾತೆಗಳಿಗೆ ಮತ್ತು ವಹಿವಾಟುಗಳಿಗೆ ದುಪ್ಪಟ್ಟು ಭದ್ರತೆ ಸಿಗುತ್ತದೆ ಎಂಬುದು ಸ್ಥೂಲ ಅರ್ಥ. ಉದಾಹರಣೆಗೆ, ನೀವು ಕ್ರೆಡಿಟ್ ಕಾರ್ಡ್ ಬಳಸುತ್ತೀರಿ. ಅಲ್ಲಿ ಪಿನ್ ನಂಬರ್ ಒತ್ತುವುದು ಒಂದನೇ ಹಂತವಾದರೆ, ಬಂದಿರುವ ರಶೀದಿಗೆ ನಿಮ್ಮ ಸಹಿ ಬೇಕಾಗಿರುವುದು ಎರಡನೇ ಭದ್ರತಾ ಹಂತ. ಅದೇ ರೀತಿ, ಯಾವುದೇ ಆನ್‌ಲೈನ್ ಬ್ಯಾಂಕಿಂಗ್ ವಹಿವಾಟು ನಡೆಸುವಾಗ, ನಿಮ್ಮ ಬ್ಯಾಂಕಿಂಗ್ ಖಾತೆಗೆ ಲಾಗಿನ್ ನೇಮ್-ಪಾಸ್‌ವರ್ಡ್ ನಮೂದಿಸುವುದು ಒಂದನೇ ಭದ್ರತೆಯಾದರೆ, ಏಕ ಕಾಲಿಕ ಪಿನ್/ಪಾಸ್‌ವರ್ಡ್ (ಒಟಿಪಿ) ಎಂಬ ಎರಡನೇ ಹಂತದ ಭದ್ರತಾ ಕೋಡ್ ಒಂದು ನಿಮ್ಮ ಮೊಬೈಲ್‌ಗೆ ರವಾನೆಯಾಗುತ್ತದೆ. ಮೊಬೈಲ್ ಫೋನ್‌ಗೆ ಬಂದಿರುವ ಸಂದೇಶದಲ್ಲಿರುವ ಪಿನ್ ಸಂಖ್ಯೆಯನ್ನು ನೀವು ಪೇಮೆಂಟ್ ದೃಢೀಕರಣಕ್ಕಾಗಿ ಆಯಾ ತಾಣದಲ್ಲಿ ನಮೂದಿಸಬೇಕಾಗುತ್ತದೆ. ಈ ಪಿನ್ ಸಂಖ್ಯೆಗೂ ಸಮಯ ಮಿತಿ ಇರುತ್ತದೆ. ಉದಾಹರಣೆಗೆ, ಅರ್ಧ ಗಂಟೆಯ ನಂತರ ಆ ಪಿನ್ ಸಂಖ್ಯೆಯ ಅವಧಿ ಮುಗಿಯುತ್ತದೆ. ನಂತರ, ನೀವು ಬೇರೆಯೇ ಪಿನ್ ನಂಬರ್‌ಗೆ ಕೋರಿಕೆ ಸಲ್ಲಿಸಬೇಕಾಗುತ್ತದೆ.

ಇಷ್ಟು ಭದ್ರತಾ ವ್ಯವಸ್ಥೆಯೊಂದಿಗೆ ಆನ್‌ಲೈನ್ ವಹಿವಾಟುಗಳು ಸುರಕ್ಷಿತವೇ ಆಗಿರುತ್ತವೆ. ಆನ್‌ಲೈನ್ ಟಿಕೆಟ್ ಬುಕಿಂಗ್ ಮಾಡುವಾಗಲೋ, ಆನ್‌ಲೈನ್‌ನಲ್ಲಿ ಯಾವುದಾದರೂ ವಸ್ತುಗಳನ್ನು ಖರೀದಿಸುವಾಗಲೋ, ಈ ರೀತಿಯ ದುಪ್ಪಟ್ಟು ಭದ್ರತಾ ವ್ಯವಸ್ಥೆ ತುಂಬ ಅನುಕೂಲಕರ. ನಿಮ್ಮ ಮೊಬೈಲ್ ಸಂಖ್ಯೆಯನ್ನು ಬ್ಯಾಂಕಿಂಗ್ ಮತ್ತು ಕ್ರೆಡಿಟ್ ಕಾರ್ಡ್ ಖಾತೆಯೊಂದಿಗೆ ಮೊದಲೇ ಲಿಂಕ್ ಮಾಡಬೇಕಾಗಿರುತ್ತದೆ. ಮೊಬೈಲ್ ಫೋನ್ ಸದಾ ಕಾಲ ನಿಮ್ಮ ಬಳಿಯೇ ಇರುತ್ತದೆಯಾದುದರಿಂದ, ಒಂದೊಮ್ಮೆ ಯಾರಾದರೂ ನಿಮ್ಮ ಖಾತೆಯ ಮೂಲಕ ವಹಿವಾಟು ನಡೆಸುತ್ತಾರೆಂದಾದರೆ, ತಕ್ಷಣವೇ ಮೊಬೈಲ್ ಫೋನ್‌ಗೆ ಸಂದೇಶ ಬರುತ್ತದೆ. ಅನುಮಾನಾಸ್ಪದ ಚಟುವಟಿಕೆ ಕಂಡುಬಂದರೆ ತಕ್ಷಣವೇ ಎಚ್ಚೆತ್ತುಕೊಂಡು ನಾವು ಆ ವ್ಯವಹಾರವನ್ನು ಕಸ್ಟಮರ್ ಕೇರ್‌ಗೆ ಕರೆ ಮಾಡುವ ಮೂಲಕ ತಡೆಯಬಹುದಾಗಿದೆ.

ಯಾವುದೇ ಆನ್‌ಲೈನ್ ಖರೀದಿ ತಾಣಗಳಾಗಲೀ, ಫೇಸ್‌ಬುಕ್‌ನಂತಹಾ ಸಾಮಾಜಿಕ ಜಾಲತಾಣಗಳಾಗಲಿ, ನಮ್ಮ ಮೊಬೈಲ್ ಸಂಖ್ಯೆ ಹಾಗೂ ಇಮೇಲ್ ವಿಳಾಸವನ್ನು ಕೇಳುತ್ತವೆ. ಇದರ ಹಿಂದೆ ಎರಡು ಕಾರಣಗಳಿರುತ್ತವೆ, ಮೊದಲನೆಯದಾಗಿ ನಿಮ್ಮನ್ನು ನೇರವಾಗಿ ಸಂಪರ್ಕಿಸಲು ಮತ್ತು ದೃಢೀಕರಿಸಿಕೊಳ್ಳಲು, ಮತ್ತು ಎರಡನೆಯದು ಭವಿಷ್ಯದಲ್ಲಿ ತಮ್ಮ ಉತ್ಪನ್ನಗಳ ಕುರಿತು ನಿಮಗೆ ಮಾಹಿತಿ ನೀಡುವುದಕ್ಕಾಗಿ. ಪಾಸ್‌ವರ್ಡ್ ಮರೆತುಹೋದರೆ ಕೂಡ, ನೀವೇ ಆಯ್ದುಕೊಂಡಿರುವ ಒಂದು ಭದ್ರತಾ ಪ್ರಶ್ನೆಗೆ (ಉದಾಹರಣೆಗೆ, ನಿಮ್ಮ ಮೊದಲ ಟೀಚರ್ ಹೆಸರೇನು, ನಿಮ್ಮ ತಾಯಿಯ ವಿವಾಹಪೂರ್ವ ಹೆಸರೇನು ಇತ್ಯಾದಿ) ಉತ್ತರ ನೀಡಿದರೆ ಸಾಕಾಗುತ್ತದೆ. ಇಲ್ಲವೇ ನಿಮ್ಮ ಬೇರೊಂದು ಇಮೇಲ್ ವಿಳಾಸಕ್ಕೋ, ಮೊಬೈಲ್ ನಂಬರಿಗೋ ಪಾಸ್‌ವರ್ಡ್, ಅದರ ಲಿಂಕ್ ಅಥವಾ ಸುಳಿವು ರವಾನಿಸಲಾಗುತ್ತದೆ. ಈ ರೀತಿಯಾಗಿ ಕಳೆದು ಹೋದ ಪಾಸ್‌ವರ್ಡ್ ರೀಸೆಟ್ ಮಾಡಿಕೊಳ್ಳಲು ಅನುಕೂಲವಾಗುತ್ತದೆ.

ಆದರೆ, ಬೇರೆ ಬೇರೆ ನೂರಾರು ಜಾಲ ತಾಣಗಳಿಗೆ ಇಮೇಲ್ ವಿಳಾಸ, ಮೊಬೈಲ್ ಸಂಖ್ಯೆಯನ್ನು ನೀಡುವಾಗ, ಅವುಗಳು ಹ್ಯಾಕರ್‌ಗಳ ಕೈಗೆ ಸಿಗುವ ಸಾಧ್ಯತೆಗಳೂ ಹೆಚ್ಚಾಗಿಬಿಡುತ್ತವೆ. ಈ ಹಿನ್ನೆಲೆಯಲ್ಲಿ ಮತ್ತು ಈಗ ಎರಡೆರಡು ಇಮೇಲ್ ವಿಳಾಸ, ಎರಡೆರಡು ಮೊಬೈಲ್ ಸಿಮ್ ಕಾರ್ಡ್ ಹೊಂದಿರುವುದು ಸಾಮಾನ್ಯವಾಗಿಬಿಟ್ಟಿರುವುದರಿಂದಾಗಿ ಈ ಪರಿಸ್ಥಿತಿಯನ್ನು ಸಮರ್ಪಕವಾಗಿ ಬಳಸಿಕೊಳ್ಳಬಹುದು. ಹೇಗೆಂದರೆ, ವಿಶ್ವಾಸಾರ್ಹವಾದ ಬ್ಯಾಂಕಿಂಗ್, ಕ್ರೆಡಿಟ್ ಕಾರ್ಡ್ ವ್ಯವಹಾರಗಳಿಗಾಗಿಯೇ ಒಂದು ಇಮೇಲ್ ಖಾತೆ ಹಾಗೂ ಒಂದು ಮೊಬೈಲ್ ಸಂಖ್ಯೆಯನ್ನು ಮೀಸಲಿಡಿ. ಇವುಗಳನ್ನು ಬೇರೆಲ್ಲಿಯೂ ನಮೂದಿಸಬೇಡಿ ಅಥವಾ ಯಾರೊಂದಿಗೂ ಹಂಚಿಕೊಳ್ಳಬೇಡಿ. ಇದು ಕೇವಲ ನಿಮಗೆ ಮಾತ್ರ. ಪಾಸ್‌ವರ್ಡ್ ಮರೆತುಹೋದಲ್ಲಿ, ಅದನ್ನು ಮರಳಿ ಪಡೆಯುವ ‘ರಿಕವರಿ ಇಮೇಲ್’ ವಿಳಾಸವಾಗಿ ಈ ನಿರ್ದಿಷ್ಟ ಇಮೇಲ್ ಬಳಸಬಹುದು. ಈ ಇಮೇಲ್ ವಿಳಾಸ ಹಾಗೂ ಫೋನ್ ಸಂಖ್ಯೆಗಳು ಬೇರೆಯವರೊಂದಿಗೆ ಹಂಚಿಕೊಳ್ಳದೇ ಇರುವುದರಿಂದಾಗಿ, ಹ್ಯಾಕರ್‌ಗಳ ಕೈಗೆ ಸಿಗುವ ಸಾಧ್ಯತೆಗಳೂ ತೀರಾ ತೀರಾ ಕ್ಷೀಣವಾಗಿರುತ್ತವೆ. ಹೀಗಾಗಿ ನಿಮ್ಮ ಬ್ಯಾಂಕ್ ಖಾತೆ ಮತ್ತು ಕ್ರೆಡಿಟ್ ಕಾರ್ಡ್ ಹೆಚ್ಚು ಸುರಕ್ಷಿತ.

ದೊಡ್ಡ ಪುಸ್ತಕ ಒಯ್ಯುವ ಬದಲು ಇ-ಪುಸ್ತಕ ಓದುವುದು ಹೇಗೆ…

ಮಾಹಿತಿ@ತಂತ್ರಜ್ಞಾನ: ವಿಜಯ ಕರ್ನಾಟಕ ಅಂಕಣ, ಮೇ 12, 2014
ನವೀನ ತಂತ್ರಜ್ಞಾನಗಳಿಂದ ಎಷ್ಟು ಲಾಭವಿದೆಯೋ, ಸಮರ್ಪಕವಾಗಿ ಬಳಸದಿದ್ದರೆ ಅವು ನಮ್ಮ ಭವಿಷ್ಯವನ್ನೇ ಹಾಳುಗೆಡಹಬಲ್ಲವು. ಟಿವಿ, ಮೊಬೈಲ್, ಇಂಟರ್ನೆಟ್ ಬಂದಮೇಲೆ ಮೆದುಳಿಗೆ ಕೆಲಸ ಕಡಿಮೆಯಾಗತೊಡಗಿದೆ ಎಂಬುದು ಎಲ್ಲರೂ ಒಪ್ಪಿಕೊಳ್ಳಬೇಕಾದ ಸತ್ಯ. ಭವಿಷ್ಯದ ಪ್ರಜೆಗಳಾಗಿರುವ ಮಕ್ಕಳಲ್ಲಿಯೂ ಇವುಗಳ ಆಕರ್ಷಣೆ ಹೆಚ್ಚಾಗುತ್ತಿರುವುದು ಒಳ್ಳೆಯದೇ ಆಗಿದ್ದರೂ, ಅತಿಯಾದರೆ ಆತಂಕಪಡಬೇಕಾದ ವಿಷಯ. ಹಿಂದೆ ಕಾದಂಬರಿಗಳನ್ನು, ಕಥೆ ಪುಸ್ತಕಗಳನ್ನು ಅಥವಾ ಒಳ್ಳೆಯ ಸಾಹಿತ್ಯಕ ಪುಸ್ತಕಗಳನ್ನು ಓದುವುದೇ ಸಮಯ ಕಳೆಯಲು, ಜ್ಞಾನವರ್ಧನೆಗೆ ಇರುವ ಅತ್ಯಂತ ಆಪ್ಯಾಯಮಾನವಾದ ವಿಚಾರವಾಗಿತ್ತು. ಇಂದು ಟಿವಿ, ಮೊಬೈಲ್, ಇಂಟರ್ನೆಟ್ ಈ ಜಾಗವನ್ನು ಅತಿಕ್ರಮಿಸಿದೆ.

ವಿಶೇಷವಾಗಿ ಪುಸ್ತಕಗಳ ಓದಿನಿಂದ ನಮ್ಮಲ್ಲಿನ ಭಾವನೆಗಳಿಗೆ ಒಳ್ಳೆಯ ರೂಪ ಸಿಗುತ್ತದೆ, ಅಕ್ಷರ ಸಂಪತ್ತು, ಪದ ಸಂಪತ್ತು, ಜ್ಞಾನವು ಉತ್ತಮಗೊಳ್ಳುತ್ತದೆ. ಇಷ್ಟಲ್ಲದೆ, ಅರಿವಿಲ್ಲದಂತೆಯೇ ನಮ್ಮೊಳಗೊಬ್ಬ ಸಾಹಿತಿಯನ್ನು ಹುಟ್ಟುಹಾಕುವ ಸಾಮರ್ಥ್ಯ ಈ ಪುಸ್ತಕಗಳಿಗಿವೆ. ಆದರೆ ತಂತ್ರಜ್ಞಾನ ಮುಂದುವರಿದಂತೆ ಗ್ರಂಥಾಲಯ ಸಂದರ್ಶಕರ ಸಂಖ್ಯೆ, ಓದುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಆದರೂ, ಇದೇ ತಂತ್ರಜ್ಞಾನವು ಓದುವ ಹಂಬಲವುಳ್ಳವರಿಗೆ ಒಂದೆಡೆಯಿಂದ ಒಳ್ಳೆಯ ವೇದಿಕೆಯನ್ನು ಒದಗಿಸಿಕೊಡುತ್ತಿದೆ ಮತ್ತು ಭವಿಷ್ಯದಲ್ಲಿ ಸಾಹಿತ್ಯ ಲೋಕದ ಸ್ಥಿತಿಗತಿಗೆ ಕೈಗನ್ನಡಿ ಹಿಡಿಯುತ್ತಿವೆ. ಇವುಗಳೇ ಇ-ಪುಸ್ತಕಗಳು ಅಥವಾ ಎಲೆಕ್ಟ್ರಾನಿಕ್ ಪುಸ್ತಕಗಳು. ಇವುಗಳು ಪಿಡಿಎಫ್, ಇಪಬ್ ಅಥವಾ ಮೊಬಿ ಎಂಬ ನಮೂನೆಗಳಲ್ಲಿರುತ್ತವೆ.

ಪ್ರಕಟಿತ ಕೃತಿಗಳೇ ಇ-ಪುಸ್ತಕಗಳ ಮೂಲಕ, ಎಲ್ಲಿಯೂ, ಯಾವುದೇ ಸ್ಮಾರ್ಟ್‌ಫೋನ್ ಅಥವಾ ಇ-ಬುಕ್ ರೀಡರ್‌ಗಳ ಮೂಲಕವೂ ಓದಬಹುದಾದ ಪಿಡಿಎಫ್ ರೂಪದಲ್ಲಿ ದೊರೆಯುತ್ತವೆ. ಆನ್‌ಲೈನ್‌ನಲ್ಲಿ ಈ ನಿಟ್ಟಿನಲ್ಲಿ ಸಾಕಷ್ಟು ಸಂಗ್ರಹಣಾಗಾರಗಳೇ ಇವೆ. ಇಂಟರ್ನೆಟ್ ಸರ್ಚ್ ಮಾಡಿದರೆ ನಿಮಗಿಷ್ಟದ ಪುಸ್ತಕಗಳ ಡಿಜಿಟಲ್ ರೂಪಗಳು ಲಭ್ಯವಿರುತ್ತವೆ. ಕೆಲವೊಂದು ಪುಸ್ತಕಗಳು ಉಚಿತವಾಗಿಯೂ, ಮತ್ತೆ ಕೆಲವು ಹಣ ಪಾವತಿ ಮಾಡುವ ಮೂಲಕವೂ ದೊರೆಯುತ್ತವೆ.

ಸ್ಮಾರ್ಟ್ ಫೋನ್ ಅಥವಾ ಟ್ಯಾಬ್ಲೆಟ್‌ಗಳಲ್ಲಿ ಇವುಗಳನ್ನು ಓದುವುದಕ್ಕಾಗಿಯೇ ಹಲವಾರು ಆ್ಯಪ್‌ಗಳು ಲಭ್ಯ ಇವೆ. ಉದಾಹರಣೆಗೆ, ಯುಬಿ ರೀಡರ್, ವಾಟ್ಎಪ್ಯಾಡ್, ಮೂನ್ ರೀಡರ್, ಕಿಂಡಲ್, ಗೂಗಲ್‌ನ ಪ್ಲೇ ಬುಕ್ಸ್, ಮೂನ್ ಪ್ಲಸ್ ರೀಡರ್, ಕೋಬೋ, ನೂಕ್, ಬ್ಲೂಫೈರ್ ರೀಡರ್ ಮುಂತಾದ ಉಚಿತ ಆ್ಯಪ್‌ಗಳು ಮೊಬೈಲ್‌ಗಳ ಆ್ಯಪ್ ಸ್ಟೋರ್‌ಗಳಲ್ಲಿ ದೊರೆಯುತ್ತವೆ. Book Reader ಅಂತ ಆ್ಯಪ್ ಸ್ಟೋರ್‌ಗಳಲ್ಲಿ ಸರ್ಚ್ ಮಾಡಿದರೆ, ಇವುಗಳ ಪಟ್ಟಿಯೇ ದೊರೆಯುತ್ತದೆ. ಕೆಲವಂತೂ ನೂರಾರು ಪುಸ್ತಕಗಳನ್ನು ಉಚಿತವಾಗಿ ನೀಡುತ್ತಿವೆ. ಈ ಇ-ಪುಸ್ತಕಗಳನ್ನು ಇನ್‌ಸ್ಟಾಲ್ ಮಾಡಿಕೊಂಡು ಒಳಹೊಕ್ಕರೆ, ಉತ್ತಮ ಪುಸ್ತಕಗಳನ್ನು ಡೌನ್‌ಲೋಡ್ ಮಾಡಿಕೊಂಡು ಓದಬಹುದು. ನಮ್ಮ ಬಾಲ್ಯವನ್ನು ಬೆಳಗಿಸಿ, ಓದುವ ಹವ್ಯಾಸವನ್ನು ಬೆಳೆಸಿದ ಅಮರಚಿತ್ರ ಕಥೆ ಎಂಬ ಕಾಮಿಕ್ಸ್ ಪುಸ್ತಕಗಳಿಗೂ ಅದರದ್ದೇ ಆದ ಆ್ಯಪ್ (ACK Comics) ಇದೆ. ಇದರಲ್ಲಿ ಕೆಲವು ಪುಸ್ತಕಗಳನ್ನು ಸದ್ಯ ಉಚಿತವಾಗಿ ನೀಡುತ್ತಿದ್ದು, ಉಳಿದವುಗಳನ್ನು ಖರೀದಿಸಬೇಕಾಗುತ್ತದೆ. ಪಿಡಿಎಫ್ ರೂಪದಲ್ಲಿರುವ ಪುಸ್ತಕಗಳನ್ನು ಕೂಡ ಈ ಇ-ಬುಕ್ ರೀಡರ್‌ಗಳ ಮೂಲಕವಾಗಿ ಓದುವ ಸೌಕರ್ಯವೂ ಕೆಲವು ಆ್ಯಪ್‌ಗಳಲ್ಲಿವೆ. ಇದೂ ಅಲ್ಲದೆ, ಬಸ್ ಅಥವಾ ರೈಲಿನಲ್ಲಿದ್ದರೆ ಕುಲುಕಾಟದಲ್ಲಿ ಓದುವುದು ಕಷ್ಟವೆಂದಾದರೆ, ಕೆಲವು ರೀಡರ್‌ಗಳಂತೂ ಪುಸ್ತಕಗಳನ್ನು ಓದಿ ಹೇಳುತ್ತವೆ. ಕಿವಿಗೆ ಇಯರ್‌ಫೋನ್ ಇಟ್ಟು ಕೇಳುತ್ತಾ ಇರಬಹುದು.

ಟ್ಯಾಬ್ಲೆಟ್‌ಗಳಲ್ಲಿ ಇಂತಹಾ ಪುಸ್ತಕಗಳನ್ನು ಓದುವುದು ತುಂಬಾ ಅನುಕೂಲ. ಪುಟಗಳನ್ನು ತಿರುವಿದಂತೆಯೇ ಟ್ಯಾಬ್ಲೆಟ್‌ನ ಸ್ಕ್ರೀನ್ ಮೇಲೆ ಸ್ವೈಪ್ ಮಾಡಿದರೆ, ಪುಟಗಳು ಬದಲಾಗುತ್ತವೆ. ಅಕ್ಷರಗಳು ಕಾಣಿಸದೇ ಇದ್ದರೆ, ಝೂಮ್ ಮಾಡಿ ದೊಡ್ಡದಾಗಿಸಿ ಓದಬಹುದಾಗಿದೆ. ಮನೆಯಲ್ಲಿರುವ ಪುಸ್ತಕದ ಶೆಲ್ಫ್ (ಕಪಾಟು) ಮಾದರಿಯಲ್ಲೇ ನಮ್ಮ ಸಾಧನದಲ್ಲಿರುವ ಇ-ಪುಸ್ತಕಗಳನ್ನು ಜೋಡಿಸಿಡಬಹುದಾಗಿದೆ.

ಇಂತಹಾ ಡಿಜಿಟಲ್ ರೂಪದ ಪುಸ್ತಕಗಳ ಲಭ್ಯತೆ, ಸಾಮರ್ಥ್ಯ, ಅನುಕೂಲ… ಇವುಗಳನ್ನೆಲ್ಲಾ ಗಮನಿಸಿದರೆ, ಹೊಸ ತಂತ್ರಜ್ಞಾನವು ಪುಸ್ತಕ ಲೋಕವನ್ನು ನಿಧಾನವಾಗಿ ಆವರಿಸಿಕೊಳ್ಳುತ್ತಿದ್ದು, ಇವುಗಳೇ ಭವಿಷ್ಯದ ಗ್ರಂಥಾಲಯಗಳು ಎಂಬುದು ಭಾಸವಾಗುತ್ತದೆ.

ಕಿಂಡಲ್ ಎಂಬುದು ಇ-ಪುಸ್ತಕ ಓದುವುದಕ್ಕಾಗಿಯೇ ಇರುವ ಟ್ಯಾಬ್ಲೆಟ್ ಮಾದರಿಯ ರೀಡರ್ ಸಾಧನ. ಅದರ ಸ್ಕ್ರೀನ್‌ನಲ್ಲಿ ಬೆಳಕಿನ ಪ್ರಖರತೆ ಕಡಿಮೆಯಾಗಿದ್ದು, ಓದಲು ಅತ್ಯಂತ ಅನುಕೂಲಕರವಾಗಿರುತ್ತದೆ. ಟ್ಯಾಬ್ಲೆಟ್‌ಗಳೂ ಈಗ ಅಗ್ಗದ ದರದಲ್ಲಿ ಲಭ್ಯವಾಗುತ್ತಿವೆ. ಟ್ಯಾಬ್ಲೆಟ್‌ಗಳನ್ನು ಕರೆ ಮಾಡುವುದಕ್ಕೆ ಬಳಸುವುದು ಅಷ್ಟೇನೂ ಹಿತಕರವಲ್ಲ, ಆದರೆ ಪುಸ್ತಕ ಓದಲು ಧಾರಾಳವಾಗಿ ಬಳಸಬಹುದು. ಸಿಮ್ ಇಲ್ಲದೆ, ಬರೇ ವೈಫೈ ಮೂಲಕ ಕೆಲಸ ಮಾಡುವ ಟ್ಯಾಬ್ಲೆಟ್‌ಗಳು ಸಿಮ್ ಇರುವವುಗಳಿಗಿಂತ ಅಗ್ಗ. ಪ್ರಯಾಣದ ಸಂದರ್ಭದಲ್ಲಿ ದೊಡ್ಡ ದೊಡ್ಡ ಪುಸ್ತಕಗಳನ್ನು ಒಯ್ಯುವುದಕ್ಕಿಂತ, ಟ್ಯಾಬ್ಲೆಟ್ ಹಿಡಿದುಕೊಳ್ಳುವುದು ಅನುಕೂಲಕರ.

ವೈರ್ ಇಲ್ಲದೆಯೇ ಮೊಬೈಲ್ ಫೋನನ್ನು ಕಂಪ್ಯೂಟರಿಗೆ ಸಂಪರ್ಕಿಸಿ!

ಮಾಹಿತಿ@ತಂತ್ರಜ್ಞಾನ ಅಂಕಣ: ವಿಜಯ ಕರ್ನಾಟಕ ಏಪ್ರಿಲ್ 28, 2014
ನಿಮ್ಮಲ್ಲಿ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಅಥವಾ ಟ್ಯಾಬ್ಲೆಟ್ಟೋ ಇದೆ, ಅದರಲ್ಲಿರುವ ಹಾಡು, ವೀಡಿಯೋ, ಫೋಟೋ ಅಥವಾ ಬೇರಾವುದೇ ಫೈಲುಗಳನ್ನು ನಿಮ್ಮ ಕಂಪ್ಯೂಟರ್‌ನಲ್ಲಿ ಸೇವ್ ಮಾಡಿಕೊಳ್ಳಲು ಇಚ್ಛಿಸುತ್ತೀರಿ. ಅಥವಾ ಕಂಪ್ಯೂಟರಿನಲ್ಲಿರುವ ಹಾಡುಗಳನ್ನು ಮೊಬೈಲ್‌ನಲ್ಲಿ ಕೇಳಲು ಇಚ್ಛಿಸುತ್ತೀರಿ. ಆದರೆ ಇದಕ್ಕಾಗಿ ಡೇಟಾ ಕೇಬಲ್ ಮೂಲಕ ಎರಡೂ ಸಾಧನಗಳನ್ನು ಸಂಪರ್ಕಿಸುವುದು ಒಂದು ದೊಡ್ಡ ಕಿರಿಕಿರಿ ಅಥವಾ ಯುಎಸ್‌ಬಿ ಕೇಬಲ್ಲೇ ಇಲ್ಲ ಅಂತಿಟ್ಟುಕೊಳ್ಳಿ. ಅಂಥವರಿಗಾಗಿಯೇ ಇದೆ ಏರ್‌ಡ್ರಾಯ್ಡ್ (Airdroid) ಎಂಬ ಒಂದು ಅತ್ಯುತ್ತಮ ಆ್ಯಪ್.

ಆಂಡ್ರಾಯ್ಡ್ ಬಳಕೆದಾರರಿಗೆ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಈ ಆ್ಯಪ್ ಉಚಿತವಾಗಿ ಲಭ್ಯವಿದೆ. ಇಂಟರ್ನೆಟ್ ಎಂಬ ದೈತ್ಯಶಕ್ತಿ ನಿಮ್ಮ ಸ್ಮಾರ್ಟ್‌ಫೋನ್ ಹಾಗೂ ಕಂಪ್ಯೂಟರ್‌ನಲ್ಲಿದೆಯೆಂದಾದರೆ, ಎಲ್ಲ ಫೈಲುಗಳನ್ನು ಅಕ್ಷರಶಃ ‘ಗಾಳಿಯಲ್ಲೇ (ಏರ್)’ ಅತ್ತಿಂದಿತ್ತ ನಕಲು ಮಾಡಿಕೊಳ್ಳಬಹುದು. ಈ ರೀತಿಯಾಗಿ ಪರಸ್ಪರ ಹಂಚಿಕೊಳ್ಳಲು ಏರ್‌ಡ್ರಾಯ್ಡ್ ಅತ್ಯಂತ ಸರಳವೂ, ಬಳಕೆಗೆ ಸುಲಭವೂ ಆಗಿದೆ.

ಸಾಮಾನ್ಯವಾಗಿ ಫೈಲುಗಳ ವರ್ಗಾವಣೆಗೆ ಸಣ್ಣ ಡೇಟಾ ಕೇಬಲ್ ಅಥವಾ ಯುಎಸ್‌ಬಿ ಕೇಬಲ್ ಬಳಸುತ್ತೇವೆ. ಇಲ್ಲವೆಂದಾದರೆ, ಮೊಬೈಲ್‌ನಿಂದ ನಮ್ಮ ಹೆಸರಿಗೇ ಇಮೇಲ್‌ನಲ್ಲಿ ಆ ಫೈಲನ್ನು ಲಗತ್ತಿಸಿ ಕಳುಹಿಸಿಕೊಳ್ಳುತ್ತೇವೆ. ಅದೂ ಇಲ್ಲವೆಂದಾದರೆ, ಬ್ಲೂಟೂತ್ ವ್ಯವಸ್ಥೆ (ಕಂಪ್ಯೂಟರಿನಲ್ಲಿಯೂ ಬ್ಲೂಟೂತ್ ಇರಬೇಕು) ಬಳಸುತ್ತೇವೆ. ಮತ್ತೊಂದು ವಿಧಾನವೂ ಇದೆ. ಫೋನ್‌ನ ಮೆಮೊರಿ ಕಾರ್ಡ್‌ಗೆ ಆ ಫೈಲನ್ನು ಸೇವ್ ಮಾಡಿ, ಬಳಿಕ ಅದನ್ನು ತೆಗೆದು ಮೆಮೊರಿ ಕಾರ್ಡ್ ರೀಡರ್ ಮೂಲಕ ಕಂಪ್ಯೂಟರಿಗೆ ಲಗತ್ತಿಸಿ, ಫೈಲುಗಳನ್ನು ನಕಲು ಮಾಡುವುದು. ಇದಂತೂ ತೀರಾ ಗೊಂದಲದ ಕೆಲಸ.

ಈ ರೀತಿಯ ಗೊಂದಲಗಳನ್ನು ಸುಲಭವಾಗಿಸಲು ಮತ್ತು ಸಮಯ ಉಳಿತಾಯ ಮಾಡಲು ನೆರವಾಗುವ ಆ್ಯಪ್ ಏರ್‌ಡ್ರಾಯ್ಡ್. ಯಾವುದೇ ರೀತಿಯ ಫೈಲುಗಳನ್ನೂ ನೀವು ಮೊಬೈಲ್ ಮತ್ತು ಕಂಪ್ಯೂಟರ್ ನಡುವೆ ವಿನಿಮಯ ಮಾಡಿಕೊಳ್ಳಬಹುದಷ್ಟೇ ಅಲ್ಲ; ಫೋನನ್ನು ಎಲ್ಲೋ ಇರಿಸಿದರೆ, ಅದನ್ನು ನಿಮ್ಮ ಕಂಪ್ಯೂಟರಿನಿಂದಲೇ ನಿಯಂತ್ರಿಸಬಹುದು; ಕರೆಯನ್ನೂ ಮಾಡಬಹುದು, ಎಸ್ಎಂಎಸ್ ಸಂದೇಶವನ್ನೂ ಕಳುಹಿಸಬಹುದು!

ಹೌದು ಇದು ಸಾಧ್ಯ. ಇದಕ್ಕೆ ಬೇಕಾಗಿರುವುದು ಕಂಪ್ಯೂಟರ್ ಹಾಗೂ ಮೊಬೈಲ್ ಸಾಧನಗಳೆರಡರಲ್ಲೂ ಇಂಟರ್ನೆಟ್ ಸಂಪರ್ಕ (ವೈಫೈ ಅಥವಾ ಮೊಬೈಲ್ ಇಂಟರ್ನೆಟ್). ಮೊಬೈಲ್ ಸಾಧನದಲ್ಲಿ AirDroid ಆ್ಯಪ್ ಅನ್ನು ಡೌನ್‌ಲೋಡ್ ಮಾಡಿಕೊಂಡ ಬಳಿಕ ಅದಕ್ಕೆ ಸೈನ್ ಇನ್ ಆಗಬೇಕು. ಸೈನ್ ಇನ್ ಆಗಲು ನೀವು ನಿಮ್ಮ ಫೇಸ್‌ಬುಕ್, ಜಿಮೇಲ್ ಅಥವಾ ಟ್ವಿಟರ್ ಐಡಿ ಬಳಸಬಹುದು. AirDroid ಗಾಗಿಯೇ ಒಂದು ಪಾಸ್‌ವರ್ಡ್ ರಚಿಸಿ. ಇದನ್ನು ನೆನಪಿಟ್ಟುಕೊಳ್ಳಿ.

ಇಷ್ಟಾದ ಬಳಿಕ ನಿಮ್ಮ ಕಂಪ್ಯೂಟರ್‌ನಲ್ಲಿ http://web.airdroid.com/ ಎಂಬ ತಾಣಕ್ಕೆ ಹೋಗಿ, ಅಲ್ಲಿ ಕೂಡ ಇದೇ ಸೈನ್-ಇನ್ ಐಡಿ ಹಾಗೂ ಪಾಸ್‌ವರ್ಡ್‌ಗಳನ್ನು ಬಳಸಿ. ಹಲವು ಆಂಡ್ರಾಯ್ಡ್ ಸಾಧನಗಳಿದ್ದರೆ ಅವುಗಳನ್ನೂ ಸೇರಿಸಿಕೊಳ್ಳಬಹುದು. ಈಗ ನಿಮ್ಮ ಸಾಧನದಲ್ಲಿರುವ ಎಲ್ಲ ಫೋಲ್ಡರ್‌ಗಳನ್ನು ನೀವು ಕಂಪ್ಯೂಟರ್ ಪರದೆಯಲ್ಲೇ ನೋಡಬಹುದು. ಬೇಕಾದ ಫೋಲ್ಡರ್‌ನ ಐಕಾನ್ ಮೇಲೆ ಕ್ಲಿಕ್ ಮಾಡಿದರೆ, ನಿಮ್ಮ ಮೊಬೈಲ್‌ನ ಸಂಪೂರ್ಣ ನಿಯಂತ್ರಣ ನಿಮ್ಮ ಕಂಪ್ಯೂಟರ್ ಪರದೆಯಿಂದಲೇ ಸಾಧ್ಯ. ಮೊಬೈಲಿಗೆ ಕರೆ ಬಂದರೆ, ಎಸ್ಎಂಎಸ್ ಬಂದರೆ, ನಿಮ್ಮ ಕಂಪ್ಯೂಟರ್ ಪರದೆ ಮೇಲೆ ನೋಟಿಫಿಕೇಶನ್ ಕಾಣಿಸುತ್ತದೆ!

ಮೊಬೈಲ್ ಮತ್ತು ಕಂಪ್ಯೂಟರುಗಳ ಮಧ್ಯೆ ಫೈಲುಗಳನ್ನು Drag and Drop (ಅಂದರೆ ಮೌಸ್‌ನ ಪಾಯಿಂಟರ್ ಒತ್ತಿಹಿಡಿಯುತ್ತಾ ಬೇಕಾಗಿರುವ ಫೋಲ್ಡರ್‌ಗೆ ಎಳೆದು ಬಿಡುವುದು) ಮೂಲಕ ವಿನಿಮಯ ಮಾಡಿಕೊಳ್ಳಬಹುದು. ಕಂಪ್ಯೂಟರ್‌ಗೆ ಮೈಕ್ ಇರುವ ಹೆಡ್‌ಫೋನ್ ತಗುಲಿಸಿದರೆ, ಕಂಪ್ಯೂಟರಿನಿಂದಲೇ ಕರೆಗಳನ್ನು ಮಾಡಬಹುದು; ಎಸ್ಎಂಎಸ್ ಕಳುಹಿಸಬಹುದು; ಮೊಬೈಲ್‌ನಲ್ಲಿರುವ ಸಂಗೀತ ಅಥವಾ ಎಫ್ಎಂ ರೇಡಿಯೋ ಆಲಿಸಬಹುದು. ಅಷ್ಟೇ ಅಲ್ಲ, ಮೊಬೈಲ್‌ನಲ್ಲಿರುವ ಕ್ಯಾಮರಾ ಬಳಸಿ ಚಿತ್ರವನ್ನೂ ತೆಗೆಯಬಹುದು! ಜತೆಗೆ ಕಾಂಟಾಕ್ಟ್ ನಂಬರ್‌ಗಳ, ಹೆಸರಿನ ತಿದ್ದುಪಡಿಯನ್ನೂ ಕಂಪ್ಯೂಟರಿನಲ್ಲೇ ನಿಭಾಯಿಸಬಹುದು.

ಮೊಬೈಲ್ ಸಾಧನವನ್ನು ಇಂಟರ್ನೆಟ್ ಸಿಗ್ನಲ್ ಇರುವ ಸ್ಥಳದಲ್ಲಿ ಇಟ್ಟುಬಿಟ್ಟರಾಯಿತು. ಅದಕ್ಕೆ ಸಂಬಂಧಿಸಿದ ಎಲ್ಲ ಕೆಲಸವನ್ನೂ ಕಂಪ್ಯೂಟರಿನಿಂದ ಕುಳಿತಲ್ಲೇ ನಿಭಾಯಿಸಬಹುದು. ಇದೊಂದು ರೀತಿಯಲ್ಲಿ ವೈಫೈ (ವೈರ್‌ಲೆಸ್) ಸಂಪರ್ಕದಂತೆಯೇ ಕೆಲಸ ಮಾಡುತ್ತದೆ.

ಆದರೊಂದು ವಿಷಯ ನೆನಪಿಡಬೇಕು. ಫೈಲ್ ನಕಲು ಮಾಡುವುದು, ಕರೆ ಮಾಡುವುದು ಎಲ್ಲವೂ ಇಂಟರ್ನೆಟ್ ಸಂಪರ್ಕದ ಮೂಲಕವೇ ಆಗುತ್ತದೆ. ಭಾರದ ಫೈಲುಗಳನ್ನು ಅತ್ತಿಂದಿತ್ತ ವರ್ಗಾಯಿಸಿದರೆ, ಅಪ್‌ಲೋಡ್/ಡೌನ್‌ಲೋಡ್ ಆಗುವುದರಿಂದ ಇಂಟರ್ನೆಟ್ ವೆಚ್ಚವು ಮಿತಿ ಮೀರಬಹುದು. ಆದರೆ, ತುರ್ತು ಸಂದರ್ಭಗಳಲ್ಲಿ ಮಾತ್ರ, ಅಥವಾ ಅಪರಿಮಿತ (ಅನ್‌ಲಿಮಿಟೆಡ್) ಇಂಟರ್ನೆಟ್ ಸಂಪರ್ಕವಿದ್ದರೆ ಎಲ್ಲವನ್ನೂ ನಿಶ್ಚಿಂತೆಯಿಂದ ಮಾಡಬಹುದು.

ಮೊಬೈಲ್, ಕಂಪ್ಯೂಟರಲ್ಲಿ ಕನ್ನಡದಲ್ಲಿ ಬರೆಯೋದು ಈಗ ತುಂಬಾ ಸುಲಭ

ಮಾಹಿತಿ@ತಂತ್ರಜ್ಞಾನ: ವಿಜಯ ಕರ್ನಾಟಕ ಅಂಕಣ, ಮಾರ್ಚ್ 03, 2014
ಅಂತರ್ಜಾಲದಲ್ಲಿ ಕನ್ನಡದ ಬಳಕೆ ಹೆಚ್ಚಾದರೆ, ಕನ್ನಡಕ್ಕೆ ಶ್ರೇಯಸ್ಸು. ಆದರೆ, ಇಂಟರ್ನೆಟ್‌ನಲ್ಲಿ ಕಂಗ್ಲಿಷ್ (ಕನ್ನಡವನ್ನು ಓದಲು ತ್ರಾಸವಾಗುವ ರೀತಿಯಲ್ಲಿ ಇಂಗ್ಲಿಷ್‌ನಲ್ಲಿ ಬರೆಯುವ ವಿಧಾನ) ಬಳಕೆ ಆತಂಕಕಾರಿಯಾಗಿ ಹೆಚ್ಚಾಗುತ್ತಿದೆ. ಇದಕ್ಕೆ ಕಾರಣಗಳು ಹಲವು. ಕನ್ನಡ ಬಳಕೆ ತುಂಬಾ ಸುಲಭವೆಂಬ ಜ್ಞಾನವಿಲ್ಲದಿರುವುದು; ಅದಕ್ಕೆ ದೊಡ್ಡ ತಂತ್ರಾಂಶವೇ ಬೇಕೆಂಬ ಅಜ್ಞಾನ; ಇಂಗ್ಲಿಷ್ ಅಕ್ಷರಗಳಿರುವ ಕೀಬೋರ್ಡ್‌ನಲ್ಲಿ ಇಂಗ್ಲಿಷ್ ಬದಲು ಕನ್ನಡವನ್ನು ಟೈಪ್ ಮಾಡುವುದು (ಲಿಪ್ಯಂತರಣ) ತೀರಾ ಕಷ್ಟ ಎಂಬ ಭಾವನೆ. ಆದರೆ ಇಂಗ್ಲಿಷಿನಲ್ಲಿಯೇ ಕನ್ನಡವನ್ನು ಬರೆದರೆ ಎಲ್ಲರಿಗೂ ಓದಲು ತ್ರಾಸ ಆಗುತ್ತದೆ. ಬಹುಶಃ ಅಂಥವರಿಗಾಗಿಯೇ ಇರಬಹುದು, ಒಂದು ಕೀಬೋರ್ಡ್ ರೂಪಿಸಲಾಗಿದೆ. ಅಂದರೆ ಇಂಗ್ಲಿಷಿನಲ್ಲೇ ಕನ್ನಡ ಬರೆಯುತ್ತಾ ಹೋದರೂ, ಅಕ್ಷರವು ಕನ್ನಡದಲ್ಲೇ ಮೂಡುತ್ತದೆ. ಇದು ತೀರಾ ಸುಲಭ ಮತ್ತು ಉಚಿತ.

ಜನರು ಕಂಗ್ಲಿಷ್ ಟೈಪ್ ಮಾಡದಿರಲೆಂದೇ ‘ವಿಕಿಮೀಡಿಯಾ’ದವರು ಉಚಿತವಾಗಿ ಕೊಟ್ಟಿರುವ ಕೀಬೋರ್ಡನ್ನು (ಎಕ್ಸ್‌ಟೆನ್ಷನ್ ರೂಪದಲ್ಲಿ) ಗೂಗಲ್ ಕ್ರೋಮ್ ಎಂಬ ಬ್ರೌಸರ್‌ಗೆ ಅಳವಡಿಸಿಕೊಂಡರಾಯಿತು. ಕಂಗ್ಲಿಷಿನಲ್ಲೇ ಬರೆದುದನ್ನು ಅದು ಕನ್ನಡಕ್ಕೆ ಪರಿವರ್ತಿಸಿ ತೋರಿಸಿ, ಕನ್ನಡದಲ್ಲೇ ಬರೆಯಿರಿ ಎಂಬ ಬಗ್ಗೆ ಜಾಗೃತಿ ಮೂಡಿಸುತ್ತದೆ. ನೀವು ಮಾಡಬೇಕಾದುದಿಷ್ಟೆ. ಇಂಟರ್ನೆಟ್ ಜಾಲಾಡಲು ಕ್ರೋಮ್ (Chrome) ಎಂಬ ಬ್ರೌಸರ್ ಬಳಸಿ. (http://goo.gl/kH4Q ಎಂಬಲ್ಲಿ ಡೌನ್‌ಲೋಡ್ ಮಾಡಿಕೊಂಡು ಇನ್‌ಸ್ಟಾಲ್ ಮಾಡಿಕೊಳ್ಳಿ). ಅದೇ ಕ್ರೋಮ್ ಬ್ರೌಸರ್‌ನಲ್ಲಿ http://goo.gl/NrVKGJ ವಿಳಾಸವನ್ನು ಹಾಕಿದಾಗ, ಬಲ ಮೇಲ್ಭಾಗದಲ್ಲಿ +FREE ಎಂಬ ನೀಲಿ ಬಣ್ಣದ ಬಟನ್ ಇರುತ್ತದೆ. ಕ್ಲಿಕ್ ಮಾಡಿ. ಪಾಪ್-ಅಪ್ ವಿಂಡೋ ಒಂದು ಕಾಣಿಸಿ, ನಿಮ್ಮಿಂದ ಕನ್ಫರ್ಮೇಶನ್ ಕೇಳುತ್ತದೆ. Add ಎಂಬ ಬಟನ್ ಒತ್ತಿದರಾಯಿತು. ಸ್ವಲ್ಪ ಹೊತ್ತಿನಲ್ಲೇ ಹಸಿರು ಬಣ್ಣದಲ್ಲಿ Added to Chrome ಎಂಬ ಸಂದೇಶ ಬರುತ್ತದೆ.

ನಂತರ ನೀವು ಇಂಟರ್ನೆಟ್‌ನಲ್ಲಿ ಎಲ್ಲೇ ಕನ್ನಡ ಬರೆಯಬೇಕಿದ್ದರೂ, ಆ ಬಾಕ್ಸ್‌ನ ಬಲತುದಿಯಲ್ಲಿ ಪುಟ್ಟ ಕೀಬೋರ್ಡ್ ಚಿಹ್ನೆಯೊಂದು ಕಾಣಿಸುತ್ತದೆ. ಅದನ್ನು ಕ್ಲಿಕ್ ಮಾಡಿ. ಮೂಲತಃ ಇಂಗ್ಲಿಷ್ ತೋರಿಸುತ್ತದೆ. ಅದರಲ್ಲಿ Other Languages ಬರೆದಿರುವುದರ ಕೆಳಗೆ ಇರುವ ಡಾಟ್‌ಗಳನ್ನು ಕ್ಲಿಕ್ ಮಾಡಿದಾಗ, ನಿಮ್ಮ ಭಾಷೆ ಆಯ್ದುಕೊಳ್ಳಲು ವಿಂಡೋ ಗೋಚರಿಸುತ್ತದೆ. ಕೆಳಗೆ ಸ್ಕ್ರಾಲ್ ಮಾಡಿದರೆ, Asia ಭಾಷೆಗಳ ಅಡಿಯಲ್ಲಿ, ಅಚ್ಚ ಕನ್ನಡದಲ್ಲಿ ಬರೆದಿರುವ ‘ಕನ್ನಡ’ ಎಂಬುದನ್ನು ಆಯ್ಕೆ ಮಾಡಿಕೊಳ್ಳಿ.

ಕಾಮೆಂಟ್ ಮಾಡಲು, ಫೇಸ್‌ಬುಕ್‌ನ ವಾಲ್‌ನಲ್ಲಿ ಬರೆಯಲು ಹೋದಾಗ ಕಾಣಿಸಿಕೊಳ್ಳುವ ಪುಟ್ಟ ಕೀಬೋರ್ಡ್ ಚಿಹ್ನೆಯನ್ನು ಒತ್ತಿದಾಗ, ಕನ್ನಡದಲ್ಲೇ ಲಿಪ್ಯಂತರಣ (ಇಂಗ್ಲಿಷಿನಲ್ಲಿ ಬರೆದುದನ್ನು ಕನ್ನಡಕ್ಕೆ ಪರಿವರ್ತಿಸುವುದು) ಆಯ್ದುಕೊಳ್ಳಬಹುದು ಅಥವಾ ಈಗಾಗಲೇ ಕೆಜಿಪಿ, ನುಡಿ, ಕೆ.ಪಿ.ರಾವ್ ಮಾದರಿಯ ಕೀಬೋರ್ಡ್‌ನಲ್ಲಿ ಟೈಪ್ ಮಾಡುತ್ತಿದ್ದವರಿಗಾಗಿ ಆಯಾ ಕೀಬೋರ್ಡ್ ಶೈಲಿಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಇಂಗ್ಲಿಷಿನಲ್ಲಿಯೇ ಕನ್ನಡ ಟೈಪ್ ಮಾಡುವ ಅಭ್ಯಾಸವಿದ್ದರೆ ಲಿಪ್ಯಂತರಣ ಆಯ್ಕೆ ಮಾಡಿಬಿಡಿ. ಈ ಸೆಟ್ಟಿಂಗ್ ಅನ್ನು ಒಂದು ಸಲ ಮಾಡಿಟ್ಟುಕೊಂಡರೆ ಆಯಿತು, ಪದೇ ಪದೇ ಮಾಡಿಕೊಳ್ಳಬೇಕಾಗಿಲ್ಲ.

ನಂತರ ಬರೆಯಬೇಕಾದಾಗಲೆಲ್ಲಾ Ctrl+M (ಕಂಟ್ರೋಲ್ ಮತ್ತು M) ಬಟನ್‌ಗಳನ್ನು ಒಮ್ಮೆ ಒತ್ತಿದಾಗ ಕನ್ನಡಕ್ಕೂ, ಮತ್ತೊಮ್ಮೆ Ctrl+M ಒತ್ತಿದರೆ ಇಂಗ್ಲಿಷ್‌ಗೂ ಬದಲಾಗುತ್ತದೆ. ಈ ಟೂಲ್ ಇದೆಯೆಂದಾದರೆ, ಬ್ಲಾಗುಗಳಿಗೆ, ಫೇಸ್‌ಬುಕ್ ಪೋಸ್ಟ್‌ಗಳಿಗೆ, ಸುದ್ದಿ-ಲೇಖನ ವಿಭಾಗಗಳಿಗೆ ಕಾಮೆಂಟ್ ಮಾಡಲು ಈ ಕಂಗ್ಲಿಷ್ ಭೂತ ಅಡ್ಡ ಬರುವುದೇ ಇಲ್ಲ.

ಮೊಬೈಲ್‌ನಲ್ಲಿ: ಯಾವುದೇ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲಿ ಕನ್ನಡದಲ್ಲಿ ಬರೆಯಲು ಪಾಣಿನಿ, ಎನಿಸಾಫ್ಟ್, ಸ್ವರಚಕ್ರ, ಮಲ್ಟಿಲಿಂಗ್ ಕೀಬೋರ್ಡ್ ಮುಂತಾದ ಹಲವು ಆ್ಯಪ್‌ಗಳು ಗೂಗಲ್‌ನ ಪ್ಲೇ ಸ್ಟೋರ್‌ನಲ್ಲಿ ಲಭ್ಯ ಇವೆಯಾದರೂ, ಜಸ್ಟ್ ಕನ್ನಡ ಎಂಬ ಆ್ಯಪ್ ಇವೆಲ್ಲವುಗಳ ಸಾಲಿನಲ್ಲಿ ಎದ್ದು ನಿಲ್ಲುತ್ತದೆ. ಬೆಂಗಳೂರಿನ ಯುವ ಟೆಕ್ಕಿ ಶ್ರೀಧರ್ ಎನ್.ಆರ್. ಇದನ್ನು ನಿರ್ಮಿಸಿದ್ದಾರೆ ಮತ್ತು ಬಂದ ಸಲಹೆಗಳ ಆಧಾರದಲ್ಲಿ ಇತ್ತೀಚೆಗೆ ಅಪ್‌ಡೇಟ್ ಕೂಡ ಮಾಡಿದ್ದಾರೆ. ತತ್ಫಲವಾಗಿ ಮೊಬೈಲ್‌ನಲ್ಲಿ ಕನ್ನಡ ಟೈಪ್ ಮಾಡುವುದು ಇನ್ನಷ್ಟು ಸುಲಭವಾಗಿದೆ. ಪ್ಲೇಸ್ಟೋರ್‌ನಲ್ಲಿ Just Kannada ಅಂತ ಸರ್ಚ್ ಮಾಡಿದರೆ ಇದು ನಿಮಗೆ ಲಭ್ಯ. ಅತ್ಯಂತ ಕಡಿಮೆ ಕೀಲಿಗಳನ್ನು ಬಳಸಿ ಕನ್ನಡ ಬರೆಯುವ ಸಾಧ್ಯತೆ ಇದರ ಹೆಗ್ಗಳಿಕೆ. ಇದರ ಬಳಕೆಯನ್ನು ಮತ್ತಷ್ಟು ಸುಲಭವಾಗಿಸಲು ಶ್ರೀಧರ್ ಹಾಗೂ ಮತ್ತೊಬ್ಬ ಕನ್ನಡದ ಮನಸ್ಸಿನ ಟೆಕ್ಕೀ ಓಂಶಿವಪ್ರಕಾಶ್ ಹೆಚ್.ಎಲ್. ಸೇರಿಕೊಂಡು ಇದರ ಸುಧಾರಿತ ರೂಪವನ್ನು ಶೀಘ್ರದಲ್ಲೇ ಹೊರತರುತ್ತಿದ್ದಾರೆ. ಟ್ಯಾಬ್ಲೆಟ್‌ಗಳಲ್ಲಿಯೂ ಕೆಲಸ ಮಾಡುವ ಈ ಉಚಿತ ಆ್ಯಪ್‌ನ ಸದುಪಯೋಗಪಡಿಸಿಕೊಳ್ಳಿ.

ಸ್ಮಾರ್ಟ್‌ಫೋನ್ ಬದಲಿಸುತ್ತಿದ್ದರೆ ಫೋನ್ ನಂಬರ್, ಹೆಸರು ಉಳಿಸಿಕೊಳ್ಳಿ

ವಿಜಯ ಕರ್ನಾಟಕ ಅಂಕಣ: ಮಾಹಿತಿ@ತಂತ್ರಜ್ಞಾನ: ಅವಿನಾಶ್ ಬಿ. (ಫೆಬ್ರವರಿ 17, 2014 )
ಇತ್ತೀಚೆಗೆ ಸಾಕಷ್ಟು ಮೊಬೈಲ್ ಫೋನ್ ಎಕ್ಸ್‌ಚೇಂಜ್ ಆಫರ್‌ಗಳು ಬರುತ್ತಿವೆ. ನೋಡಿದಾಗ ಕೊಂಡುಕೊಳ್ಳೋಣವೆನಿಸುತ್ತದೆ. ಹಳೆಯ ಆಂಡ್ರಾಯ್ಡ್ ಅಥವಾ ಬೇರಾವುದೇ ಫೋನನ್ನು ಎಕ್ಸ್‌ಚೇಂಜ್ ಮಾಡಿಯೋ, ಅಥವಾ ಬೇರೆಯವರಿಗೆ ಮಾರಾಟ ಮಾಡಿಯೋ, ಹೊಸದನ್ನು ಕೊಳ್ಳಬೇಕೆಂದಿದ್ದೀರಾದರೆ, ಎರಡು ವಿಷಯಗಳನ್ನು ಪ್ರಮುಖವಾಗಿ ನೆನಪಿಡಿ. ಮೊದಲನೆಯದು ಆ ಫೋನಿನಲ್ಲಿರುವ ಮೆಮೊರಿ ಕಾರ್ಡ್ ತೆಗೆದಿರಿಸಬೇಕು ಅಥವಾ ಫಾರ್ಮ್ಯಾಟ್ ಮಾಡಬೇಕು ಮತ್ತು ಎರಡನೆಯದು ಮೊಬೈಲ್ ಸಾಧನದ ಮೆಮೊರಿಯಲ್ಲಿರುವ ಎಲ್ಲ ವೈಯಕ್ತಿಕ ಮಾಹಿತಿಗಳೆಲ್ಲವನ್ನೂ (ಡೇಟಾ) ಅಳಿಸಿಬಿಡಬೇಕು.

ಫೋನ್ ಖರೀದಿಸಿದ ಮೇಲೆ ಅದಕ್ಕೆ ಯಾವ್ಯಾವುದೋ ಆ್ಯಪ್‌ಗಳನ್ನು ಸೇರಿಸಿ, ಅದನ್ನು ನಿಮಗೆ ಬೇಕಾದಂತೆ ಬದಲಾಯಿಸಿಕೊಂಡಿರುತ್ತೀರಿ. ಆ ಬದಲಾವಣೆಗಳನ್ನೆಲ್ಲಾ ಸೆಟ್ಟಿಂಗ್‌ನಲ್ಲಿರುವ ‘ಫ್ಯಾಕ್ಟರಿ ಡೇಟಾ ರೀಸೆಟ್’ ಮಾಡುವ ಮೂಲಕ ಅಳಿಸಬಹುದು. ಮೊಬೈಲ್‌ನಲ್ಲಿ ಸೇವ್ ಆಗಿರುವ ನಿಮ್ಮ ಜಿಮೇಲ್ ಮತ್ತು ಇತರ ಆ್ಯಪ್‌ಗಳಿಗೆ ನೀವು ಲಾಗ್ ಇನ್ ಆಗಲು ನಮೂದಿಸಿರುವ ಐಡಿ ಹಾಗೂ ಪಾಸ್‌ವರ್ಡ್‌ಗಳೆಲ್ಲವೂ ಆ ಫೋನ್‌ನಿಂದ ಅಳಿಸಿಹೋಗುವ ಮೂಲಕ ನಿಮ್ಮ ಖಾತೆಯನ್ನು ಬೇರೆಯವರು ಬಳಸದಂತೆ ಮಾಡಲು, ಅದರ ದುರ್ಬಳಕೆ ತಡೆಯಲು ಸಾಧ್ಯ.

ಫೋನ್ ನಂಬರ್ ಕಾಪಿ ಮಾಡುವುದು: ಹೊಸದಾಗಿ ಮೊಬೈಲ್ ಫೋನ್ ಕೊಂಡಾಗ ಹಳೆಯ ಫೋನ್‌ನಲ್ಲಿರುವ ಕಾಂಟ್ಯಾಕ್ಟ್‌ಗಳನ್ನು (ಫೋನ್ ನಂಬರ್ ಮತ್ತು ಹೆಸರು) ಕಾಪಿ ಮಾಡುವುದು, ಪುನಃ ಟೈಪ್ ಮಾಡುವುದು ಹರ ಸಾಹಸವೇ ಸರಿ. ಇದಕ್ಕಾಗಿ ಉಪಾಯ ಇಲ್ಲಿದೆ.

ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ನ ಪರಿಪೂರ್ಣ ಪ್ರಯೋಜನ ಪಡೆಯಬೇಕಿದ್ದರೆ ನೀವು ಅದಕ್ಕೆ ಜಿಮೇಲ್ ಮೂಲಕ ಲಾಗ್ ಇನ್ ಆಗಲೇಬೇಕಾಗುತ್ತದೆಯಲ್ಲವೇ? ಲಾಗಿನ್ ಆದ ಬಳಿಕ ಸೆಟ್ಟಿಂಗ್ಸ್‌ಗೆ ಹೋಗಿ, ಅಲ್ಲಿ Accounts ಎಂದಿರುವಲ್ಲಿ, ನೀವು ಯಾವೆಲ್ಲಾ ಖಾತೆಗಳಿಗೆ ನಿಮ್ಮ ಫೋನ್‌ನಲ್ಲಿ ಲಾಗ್‌-ಇನ್ ಆಗಿದ್ದೀರಿ ಎಂಬ ಪಟ್ಟಿ ಇರುತ್ತದೆ. ಗೂಗಲ್ ಆಯ್ದುಕೊಳ್ಳಿ. ಆಗ ನಿಮ್ಮ ಇಮೇಲ್ ಐಡಿ ಕಾಣಿಸುತ್ತದೆ. Sync is Off ಅಂತ ಇದ್ದರೆ, ಆ ಬಟನ್ ಕ್ಲಿಕ್ ಮಾಡಿ.

ಯಾವುದನ್ನೆಲ್ಲಾ ಸಿಂಕ್ ಮಾಡಬೇಕು ಅಂತ ಅದುವೇ ಒಂದು ಪಟ್ಟಿ ತೋರಿಸುತ್ತದೆ. ಅದರಲ್ಲಿ App Data, Browser, Calendar, Contacts ಅಂತೆಲ್ಲಾ ಇರುತ್ತದೆ. ಕಾಂಟಾಕ್ಟ್ಸ್ ಒತ್ತಿದರೆ, ನಿಮ್ಮ ಫೋನ್‌ನಲ್ಲಿ ಮತ್ತು ಜಿಮೇಲ್‌ನಲ್ಲಿರುವ ಕಾಂಟಾಕ್ಟ್‌ಗಳ ಪಟ್ಟಿ ಪರಸ್ಪರ ಸಮ್ಮಿಳಿತವಾಗುತ್ತವೆ. ಇದು ಒಂದು ರೀತಿಯಲ್ಲಿ ಕಾಂಟಾಕ್ಟ್‌ಗಳನ್ನು ಬ್ಯಾಕಪ್ ಮಾಡಿಡುವ ವ್ಯವಸ್ಥೆಯಂತೆಯೂ ಕೆಲಸ ಮಾಡುತ್ತದೆ.

ಈಗ ಹೊಸದಾಗಿ ನೀವು ಖರೀದಿಸಿರುವ ಫೋನ್‌ನಲ್ಲಿ ಅದೇ ಜಿಮೇಲ್ ಐಡಿ ಮೂಲಕ ಲಾಗಿನ್ ಆದರೆ, ಮೇಲಿನ ಮಾದರಿಯಲ್ಲೇ ಕಾಂಟಾಕ್ಟ್‌ಗಳ ಸಿಂಕ್ರನೈಜ್ ಮಾಡಿದರೆ ಆಯಿತು. ಎಲ್ಲ ಫೋನ್ ನಂಬರ್‌ಗಳು ಹೆಸರಿನೊಂದಿಗೆ ನಿಮ್ಮ ಮೊಬೈಲ್ ಫೋನ್‌ನಲ್ಲಿಯೂ ಲಭ್ಯವಾಗುತ್ತವೆ.

ಫೋನ್ ಸ್ಟೋರೇಜ್ ಖಾಲಿ ಇರಿಸಿ
ಸ್ಮಾರ್ಟ್‌ಫೋನ್‌ಗಳಲ್ಲಿ RAM ಎಂಬ ಮೆಮೊರಿ ಸ್ಥಳವು ಅತ್ಯಂತ ಮಹತ್ವವಾದದ್ದು. ಈಗಿನ ಫೋನ್‌ಗಳಲ್ಲಿ ಕನಿಷ್ಠ 1 ಅಥವಾ 2 ಜಿಬಿ RAM ಇರಬಹುದು. ಇದು ಖಾಲಿ ಇದ್ದಷ್ಟೂ ನಿಮ್ಮ ಫೋನ್ ವೇಗವಾಗಿ ಕೆಲಸ ಮಾಡಬಲ್ಲುದು. ಇದರಲ್ಲಿ ಸಿಸ್ಟಂ ಮತ್ತು ಮೊದಲೇ ಅಳವಡಿಕೆಯಾಗಿರುವ ಆ್ಯಪ್‌ಗಳು ಮಾತ್ರ ಇರಲಿ. ಮುಂದೆ ನೀವು ಇನ್‌ಸ್ಟಾಲ್ ಮಾಡಿಕೊಳ್ಳುವ ಯಾವುದೇ ಆ್ಯಪ್‌ಗಳನ್ನು, ತೆಗೆದ ಚಿತ್ರ ಅಥವಾ ವೀಡಿಯೋಗಳನ್ನು, ರೆಕಾರ್ಡಿಂಗ್‌ಗಳನ್ನು… ಎಲ್ಲವನ್ನೂ ಮೆಮೊರಿ ಕಾರ್ಡ್‌ನಲ್ಲಿ (ಎಸ್‌ಡಿ ಕಾರ್ಡ್, ಬಾಹ್ಯ ಮೆಮೊರಿ ಕಾರ್ಡ್) ಸೇವ್ ಆಗುವಂತೆ ನೋಡಿಕೊಳ್ಳಿ. RAM ಅಲ್ಲದೆ, ಕೆಲವು ಸ್ಮಾರ್ಟ್‌ಫೋನ್‌ಗಳಲ್ಲಿ ಇಂಟರ್ನಲ್ ಮೆಮೊರಿ ಅಥವಾ ಫೋನ್ ಸ್ಟೋರೇಜ್ ಎಂಬ ಸ್ಥಳವೂ ಇರುತ್ತದೆ. ಪ್ರಮುಖ ಆ್ಯಪ್‌ಗಳನ್ನು ಮಾತ್ರ ಇದರಲ್ಲಿ ಸ್ಥಾಪಿಸಿಕೊಂಡು, ಆದಷ್ಟೂ ಖಾಲಿ ಇರಿಸಿ, ಎಲ್ಲವನ್ನೂ ಎಸ್‌ಡಿ ಕಾರ್ಡ್‌ನಲ್ಲೇ ಉಳಿಸಿಕೊಳ್ಳುವುದು ಜಾಣತನ.

ಬ್ಲೂಟೂತ್‌ನಿಂದ ಬಂದ ಅಥವಾ ನೀವು ತೆಗೆದ ಫೋಟೋ, ವೀಡಿಯೋಗಳು ಫೋನ್ ಸ್ಟೋರೇಜ್ ಬದಲಾಗಿ ಬಾಹ್ಯ ಮೆಮೊರಿ ಕಾರ್ಡ್‌ನಲ್ಲೇ ಸೇವ್ ಆಗುವಂತೆ ಮಾಡಲು ಹೀಗೆ ಮಾಡಿ: ಸೆಟ್ಟಿಂಗ್ಸ್‌ನಲ್ಲಿ ಸ್ಟೋರೇಜ್ ಎಂಬುದನ್ನು ಕ್ಲಿಕ್ ಮಾಡಿದರೆ, ಡೀಫಾಲ್ಟ್ ಆಗಿ ಸಂಗ್ರಹವಾಗಬೇಕಿರುವ ಸ್ಥಳ ಆಯ್ದುಕೊಳ್ಳಲು ಫೋನ್ ಸ್ಟೋರೇಜ್ ಅಥವಾ ಎಸ್‌ಡಿ ಕಾರ್ಡ್ ಆಯ್ಕೆಗಳು ಕಾಣಿಸುತ್ತವೆ. ಎಸ್‌ಡಿ ಕಾರ್ಡ್ ಕ್ಲಿಕ್ ಮಾಡಿದರೆ, ನಿಮ್ಮ ಕೆಲಸ ಮುಗಿಯಿತು. ಡೌನ್‌ಲೋಡ್ ಆಗುವ ಎಲ್ಲವೂ ಮೆಮೊರಿ ಕಾರ್ಡ್‌ನಲ್ಲೇ ಉಳಿಯುತ್ತವೆ.

ಫೇಸ್‌ಬುಕ್‌ನಲ್ಲಿ ಟ್ಯಾಗ್ ಮಾಡಿದರೆ ಏನು ಮಾಡುತ್ತೀರಿ?

ಮಾಹಿತಿ@ತಂತ್ರಜ್ಞಾನ: ಅವಿನಾಶ್ ಬಿ. (ಜನವರಿ 20, 2014)
ಸಾಮಾಜಿಕ ಜಾಲ ತಾಣಗಳಲ್ಲಿ ಯಾರ್ಯಾರೋ ಫ್ರೆಂಡ್ ಆಗ್ತಾರೆ, ದೂರದಲ್ಲೆಲ್ಲೋ ಇದ್ದವರು ಆತ್ಮೀಯರಾಗಿಬಿಡುತ್ತಾರೆ, ನಿಮ್ಮ ಪೋಸ್ಟ್‌ಗಳಿಗೆ ಕಾಮೆಂಟ್ ಮಾಡುತ್ತಾರೆ, ಒಂದೊಳ್ಳೆಯ ಚರ್ಚೆ ನಡೆಯುತ್ತದೆ. ಸಮಾಜದ ಆಗುಹೋಗುಗಳ ಬಗ್ಗೆ, ಒಳಿತು ಕೆಡುಕುಗಳ ಬಗ್ಗೆ ಪರ-ವಿರೋಧ ಚರ್ಚೆಯಾಗುತ್ತದೆ ಮತ್ತು ಅಲ್ಲೊಂದು ಅವಾಸ್ತವಿಕ ಸಾಮಾಜಿಕ ಜಗತ್ತು ಸೃಷ್ಟಿಯಾಗಿರುತ್ತದೆ.

ಇಷ್ಟೆಲ್ಲಾ ಆಗುವ ಹೊತ್ತಿಗೆ, ಯಾವಾಗ ಫೋಟೋಗಳನ್ನೂ ಸಾಮಾಜಿಕ ತಾಣದಲ್ಲಿ ಹಂಚಿಕೊಳ್ಳುವ ಆಯ್ಕೆ ಬಂದಿತೋ, ಆಗಿನಿಂದ ಫೇಸ್‌ಬುಕ್ ಬಳಕೆದಾರರದು ಒಂದೇ ವೇದನೆ, ರೋದನೆ… ಫೋಟೋಗಳಿಗೆ ಟ್ಯಾಗ್ ಮಾಡಿದರೆ ಜೋಕೆ ಎಂಬ ಸಾರಾಂಶವುಳ್ಳ ಎಚ್ಚರಿಕೆ. ಈ ಎಚ್ಚರಿಕೆ ಸಾತ್ವಿಕವಾಗಿಯೂ ಇರಬಹುದು, ವ್ಯಂಗ್ಯವಾಗಿಯೂ ಇರಬಹುದು, ರೋಷಭರಿತವಾಗಿಯೂ ಇರಬಹುದು.

ಕಾರಣವಿಷ್ಟೆ. ಯಾರಾದರೂ ತಮ್ಮ ಟೈಮ್‌ಲೈನ್‌ನಲ್ಲಿ ತಮಗಿಷ್ಟವಾದ ಫೋಟೋ ಅಪ್‌ಲೋಡ್ ಮಾಡುತ್ತಾರೆ. ಅಷ್ಟೇ ಆದರೆ ಸುಮ್ಮನಿರಬಹುದಿತ್ತು. ಆದರೆ, ಆ ಫೋಟೋಗಳನ್ನು ಅಪ್‌ಲೋಡ್ ಮಾಡುವಾಗಲೇ, “ನಿಮ್ಮ ಮಿತ್ರರನ್ನು ಟ್ಯಾಗ್ ಮಾಡಿ” ಎನ್ನುವ ಆಯ್ಕೆಯೊಂದನ್ನು ಒತ್ತಿ, ಫ್ರೆಂಡ್ಸ್ ಪಟ್ಟಿಯಲ್ಲಿರುವ ಹಲವಾರು ಹೆಸರುಗಳನ್ನು ಸೇರಿಸುತ್ತಾ ಹೋಗುತ್ತಾರೆ.

ಇದರ ಬಗ್ಗೆ ಒಂದು ನೋಟಿಫಿಕೇಶನ್ (ಸೂಚನಾ ಸಂದೇಶ) ಆಯಾ ಹೆಸರಿನವರಿಗೆ ಹೋಗುತ್ತದೆ. ಅಷ್ಟೇ ಆದರೂ ತೊಂದರೆಯಿರಲಿಲ್ಲ. ಅವರ ಸ್ನೇಹಿತರು ಸಾವಿರ ಸಾವಿರ ಸಂಖ್ಯೆಯಲ್ಲಿ ಆ ಫೋಟೋ ಲೈಕ್ ಮಾಡಿದರೆ, ಕಾಮೆಂಟ್ ಮಾಡಿದರೆ, ಬೈದಾಡಿದರೆ… ಹೊಗಳಿದರೆ… ಎಲ್ಲದಕ್ಕೂ ನೋಟಿಫಿಕೇಶನ್ ಬರುತ್ತಲೇ ಇರುತ್ತವೆ! ಮೊಬೈಲ್‌ನಲ್ಲಿ ಫೇಸ್‌ಬುಕ್ ಲಾಗಿನ್ ಆಗಿದ್ದರಂತೂ ಫೇಸ್‌ಬುಕ್ ಸೂಚನಾ ಸಂದೇಶ ಬಂತೆಂಬ ಧ್ವನಿ ಪದೇ ಪದೇ ಗುಂಯ್‌ಗುಡುತ್ತಲೇ ಇರುತ್ತದೆ. ಕಚೇರಿಯಲ್ಲಿದ್ದಾಗ ಇದರಷ್ಟು ಕಿರಿಕಿರಿ ಬೇರೆ ಇರಲಾರದು. ಸಂಬಂಧವೇ ಇಲ್ಲದ ಫೋಟೋಗಳಿಗೆ ಟ್ಯಾಗ್ ಆಗಿದ್ದನ್ನು ನೋಡಿದಾಗ ಮನಸ್ಸು ಆಕ್ರೋಶಿತವಾಗುತ್ತದೆ, ವಿಶೇಷವಾಗಿ ಮಿತ್ರವರ್ಗದ ಸಂಖ್ಯೆ ಹೆಚ್ಚಿರುವ ಫೇಸ್‌ಬುಕ್ ಬಳಕೆದಾರರಿಗೆ.

ಈ ‘ತಾಗಿಸುವ’ ಪ್ರಕ್ರಿಯೆಯಿಂದಾಗಿಯೇ ಹಲವು ‘ಫೇಸ್‌ಬುಕ್’ ಸ್ನೇಹಗಳು ಮುರಿದುಬಿದ್ದದ್ದೂ ಇವೆ ಎಂದರೆ ಖಂಡಿತಾ ಉತ್ಪ್ರೇಕ್ಷೆಯಾಗಲಾರದು. ಫೇಸ್‌ಬುಕ್ಕಿಗರ ಮೊರೆಗೆ ಓಗೊಟ್ಟಿರುವ ಫೇಸ್‌ಬುಕ್, ಟ್ಯಾಗ್ ಮಾಡದಂತೆ ಪೂರ್ತಿಯಾಗಿ ತಡೆಯುವ ಆಯುಧ ನೀಡಿಲ್ಲವಾದರೂ, ಟ್ಯಾಗ್ ಮಾಡುವವರಿಗೆ ಸುಲಭವಾಗಿ ಶಾಸ್ತಿ ಮಾಡುವ ಆಯ್ಕೆಯೊಂದನ್ನು ತೀರಾ ಇತ್ತೀಚೆಗೆ ನೀಡಿದೆ.

ಮೊದಲು ನೀವು ಮಾಡಬೇಕಾದದ್ದೆಂದರೆ, ಫೇಸ್‌ಬುಕ್‌ನ ಸೆಟ್ಟಿಂಗ್ಸ್‌ನಲ್ಲಿ, ಪ್ರೈವೆಸಿ ಸೆಟ್ಟಿಂಗ್ಸ್ ಎಂಬಲ್ಲಿ ಹೋಗಿ. ಎಡಭಾಗದಲ್ಲಿ Timeline and Tagging ಅಂತ ಇರುತ್ತದೆ. ಅದರಲ್ಲಿ ಸಾಕಷ್ಟು ಆಯ್ಕೆಗಳು ಕಾಣಿಸಿಕೊಳ್ಳುತ್ತವೆ. Who can add things to my timeline? ಎಂಬುದರ ಅಡಿ, ಯಾರು ನಿಮ್ಮ ಟೈಮ್‌ಲೈನ್‌ಗೆ ಪೋಸ್ಟ್ ಮಾಡಬಹುದು ಅಂತ ಇರುವಲ್ಲಿ “Only Me” ಅಥವಾ “Friends” ಆಯ್ಕೆ ಮಾಡಿ. ಎರಡನೆಯದು, ಈ ಪೋಸ್ಟನ್ನು ರಿವ್ಯೂ ಮಾಡಬೇಕೇ ಎಂಬ ಆಯ್ಕೆ. ಅದನ್ನು “ಆನ್” ಇರುವಂತೆ ನೋಡಿಕೊಳ್ಳಿ. ಅಲ್ಲೇ ಕೆಳಗೆ, ‘ಜನ ಟ್ಯಾಗ್ ಮಾಡಿದರೆ ಹೇಗೆ ನಿಭಾಯಿಸಲಿ’ ಎಂಬ ಶೀರ್ಷಿಕೆಯಲ್ಲಿ, ಫೇಸ್‌ಬುಕ್‌ನಲ್ಲಿ ನಿಮ್ಮ ಹೆಸರಿನ ಟ್ಯಾಗ್ ಕಾಣಿಸಿಕೊಳ್ಳುವ ಮೊದಲು ಮರುವಿಮರ್ಶಿಸುವ (review) ಆಯ್ಕೆಯನ್ನು ‘ON’ ಮಾಡಿಕೊಳ್ಳಿ. ಇಷ್ಟು ಪೂರ್ವ ತಯಾರಿ.

ಈಗ, ನಿಮ್ಮನ್ನು ಯಾವುದೋ ಫೋಟೋಗೆ ತಾಗಿಸಿದ್ದಾರೆ (ಟ್ಯಾಗ್ ಮಾಡಿದ್ದಾರೆ) ಅಂತ ನಿಮಗೆ ಸೂಚನೆ ಬಂದೇ ಬರುತ್ತದೆ. ಆ ಸೂಚನಾ ಸಂದೇಶವನ್ನು ಕ್ಲಿಕ್ ಮಾಡಿದರೆ ನೇರವಾಗಿ ಟೈಮ್‌ಲೈನ್ ಮರುಪರಿಶೀಲಿಸುವ ಆಯ್ಕೆ ದೊರೆಯುತ್ತದೆ. ಅಲ್ಲಿ ಕಾಣಿಸುವ ಎರಡು ಬಟನ್‌ಗಳಲ್ಲಿ ‘Hide’ ಒತ್ತಿದರೆ, ಈ ಚಿತ್ರವು ನಿಮ್ಮ ಟೈಮ್‌ಲೈನ್‌ನಿಂದ (ಟೈಮ್‌ಲೈನ್ ಎಂದರೆ, ನಿಮ್ಮದೇ ವಾಲ್, ನೀವು ಏನನ್ನು ಪೋಸ್ಟ್ ಮಾಡುತ್ತೀರೋ, ಅವೆಲ್ಲವೂ ಕಾಣಿಸಿಕೊಳ್ಳುವ ಸ್ಥಳ) ಮರೆಯಾಗುತ್ತದೆ. ಬೇರೆಯವರಿಗೂ ಯಾರಿಗೂ ಕಾಣಿಸುವುದಿಲ್ಲ. Hide ಮಾಡಿದ ತಕ್ಷಣ Report/Remove Tag ಎಂಬ ಕೊಂಡಿಯೊಂದು ಗೋಚರಿಸುತ್ತದೆ.

ನೀವು ಕರುಣಾಮಯಿಯಾದರೆ, ಮೊದಲ ಆಯ್ಕೆ (I want to remove this tag) ಕ್ಲಿಕ್ ಮಾಡಿ ಸುಮ್ಮನಿರಬಹುದು. ಅದಕ್ಕೆ ಬರುವ ಯಾವುದೇ ಲೈಕ್‌ಗಳು ಅಥವಾ ಕಾಮೆಂಟ್‌ಗಳ ಬಗ್ಗೆ ನೋಟಿಫಿಕೇಶನ್ ನಿಮ್ಮ ಬಳಿ ಸುಳಿಯುವುದಿಲ್ಲ. ಕಂಟಿನ್ಯೂ ಅಂತ ಒತ್ತಿದರೆ, ಮತ್ತೆ ಮೂರು ಆಯ್ಕೆಗಳು ದೊರೆಯುತ್ತವೆ – ಟ್ಯಾಗ್ ತೆಗೆಯುವ, ಈ ಪೋಸ್ಟನ್ನು ತೆಗೆಯಲು ನಿಮ್ಮ ಸ್ನೇಹಿತರಿಗೆ ಸೂಚನೆ ನೀಡುವ ಮತ್ತು ನೇರವಾಗಿ ಬ್ಲಾಕ್ ಮಾಡುವ ಆಯ್ಕೆಗಳವು. ಬೇಕಾದುದನ್ನು ಆಯ್ದುಕೊಳ್ಳಿ.

ಮೇಲೆ ಹೇಳಿದ ಮೊದಲ ಆಯ್ಕೆಯ ಬಳಿಕ, ಉಳಿದವು ನಿಜಕ್ಕೂ ನಿಮಗೆ ಸಿಕ್ಕಾಪಟ್ಟೆ ಕೋಪ ಬಂದಿದ್ದರೆ ಪ್ರಯೋಗಿಸಲು ಇರುವಂಥವು. ಕಿರಿಕಿರಿಯುಂಟು ಮಾಡುವ, ಅಸಭ್ಯ, ದ್ವೇಷಪೂರಿತ, ಹಾನಿಕಾರಕ ಫೋಟೋಗಳ ಬಗ್ಗೆ ನೇರವಾಗಿ ಫೇಸ್‌ಬುಕ್‌ಗೆ ಸುಳಿವು ನೀಡುವುದಕ್ಕಾಗಿಯೇ ಇವು ಇವೆ. ಅವುಗಳನ್ನು ಕ್ಲಿಕ್ ಮಾಡಿದರೆ, ಫೇಸ್‌ಬುಕ್ಕೇ ಅಂತಹಾ ವ್ಯಕ್ತಿಯ ಮೇಲೆ ಕ್ರಮ ಕೈಗೊಳ್ಳುವ ಸಾಧ್ಯತೆಗಳೂ ಇವೆ.

ಟ್ಯಾಗ್ ಮಾಡದಂತೆ ತಡೆಯುವ ಯಾವುದೇ ಆಯುಧವನ್ನು ಫೇಸ್‌ಬುಕ್ ಇನ್ನೂ ಕೊಟ್ಟಿಲ್ಲವಾದರೂ, ಟ್ಯಾಗ್ ಮಾಡಿದ ವ್ಯಕ್ತಿಗೆ ನೇರವಾಗಿ ಮನವಿ ಮಾಡುವ, ಎಚ್ಚರಿಕೆ ನೀಡುವ ಆಯ್ಕೆ ದೊರೆತಿದೆ.