ಜನ ಸಾಮಾನ್ಯರತ್ತ ತಂತ್ರಜ್ಞಾನ – Gadget-Technology Info Towards Common Man

Archive for the ‘computer’ Category

ಕಂಪ್ಯೂಟರನ್ನು ದುರಸ್ತಿಗೆ ಒಯ್ಯುವ ಮುನ್ನ ಇವನ್ನೊಮ್ಮೆ ಟ್ರೈ ಮಾಡಿ…

ವಿಜಯ ಕರ್ನಾಟಕ ಮಾಹಿತಿ@ತಂತ್ರಜ್ಞಾನ ಅಂಕಣ-99: 27 ಅಕ್ಟೋಬರ್ 2014
Avinash Column-Newಕಂಪ್ಯೂಟರು ಸಿಕ್ಕಾಪಟ್ಟೆ ಸ್ಲೋ ಆಗಿದೆ, ವೆಬ್ ಬ್ರೌಸ್ ಮಾಡುವುದಕ್ಕೇ ಆಗುತ್ತಿಲ್ಲ, ಒಂದು ಪೇಜ್ ಓಪನ್ ಆಗಬೇಕಿದ್ದರೆ ಅರ್ಧ ಗಂಟೆ ಬೇಕು ಎಂಬೆಲ್ಲಾ ಹತಾಶೆಯ ಮಾತುಗಳನ್ನು ನಾವು ನೀವೆಲ್ಲ ಕೇಳಿದ್ದೇವೆ. ಕಂಪ್ಯೂಟರ್ ತಜ್ಞರನ್ನು ಕರೆಸುವ ಮುನ್ನ, ಕೆಲವು ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ನಾವೇ ಮಾಡಿ ನೋಡಬಹುದಾದ ಒಂದಿಷ್ಟು ಸುಲಭೋಪಾಯಗಳು ಇಲ್ಲಿವೆ.

ಕಂಪ್ಯೂಟರಲ್ಲಿನ ಸಮಸ್ಯೆ ಹೇಳಿಕೊಂಡಾಗ ನಮ್ಮ ಕಚೇರಿಯಲ್ಲಿರುವ ಸಿಸ್ಟಂ ತಜ್ಞರು, “ರೀಸ್ಟಾರ್ಟ್ ಮಾಡಿ, ಸರಿ ಹೋಗುತ್ತದೆ” ಎನ್ನುವುದನ್ನು ಕೇಳಿಸಿಕೊಂಡಿರಬಹುದು. ನಾವೆಲ್ಲಾ ಇದನ್ನು ಕೇಳಿ ನಕ್ಕಿದ್ದೇವಾದರೂ, ಇದು ಜೋಕಂತೂ ಅಲ್ಲ. ರೀಸ್ಟಾರ್ಟ್ ಮಾಡಿದ ಬಳಿಕ ಅದೆಷ್ಟೋ ಪ್ರೋಗ್ರಾಂಗಳು ಸರಿಯಾಗಿ ಕೆಲಸ ಮಾಡುತ್ತಿದ್ದುದು ನನ್ನ ಅನುಭವಕ್ಕೂ ಬಂದಿದೆ. ಶಟ್‍ಡೌನ್ ಮಾಡಿ, ಪುನಃ ಆನ್ ಮಾಡಿದಾಗ ಅದರ ಮೆಮೊರಿಯೆಲ್ಲವೂ ಕ್ಲಿಯರ್ ಆಗಿ ಎಲ್ಲ ಪ್ರಕ್ರಿಯೆಗಳೂ ಹೊಸದಾಗಿ ಆರಂಭವಾಗುವುದರಿಂದ ಇದು ಕಂಪ್ಯೂಟರಿಗೆ ಒಂದು ರೀತಿಯಲ್ಲಿ ಪುನಶ್ಚೇತನ ನೀಡಿದಂತೆ. ಹೀಗಾಗಿ ಸಮಸ್ಯೆ ಸರಿಹೋಗಲೂಬಹುದು. ರೀಸ್ಟಾರ್ಟ್ ಮಾಡಲೂ ಆಗುತ್ತಿಲ್ಲ, ಹ್ಯಾಂಗ್ ಆಗಿಬಿಟ್ಟಿದೆ ಎಂದಾದರೆ ಪವರ್ ಬಟನ್ ಆಫ್ ಮಾಡಿ. ಆದರೆ ಪದೇ ಪದೇ ನೇರವಾಗಿ ಸ್ವಿಚ್ ಆಫ್ ಮಾಡುವುದರಿಂದ ಸಿಸ್ಟಂಗೆ ಸಮಸ್ಯೆಯಾಗುತ್ತದೆ ಎಂಬುದು ನೆನಪಿರಲಿ.

ಇಂಟರ್ನೆಟ್ ಸ್ಲೋ ಅಂತ ದೂರಿದಾಗ ಕಂಪ್ಯೂಟರ್ ಪರಿಣತರು ಹೇಳುವ ಇನ್ನೊಂದು ಮಾತು, ‘ಬ್ರೌಸರ್ ಕ್ಯಾಶ್/ಕುಕೀಸ್ ಕ್ಲಿಯರ್ ಮಾಡಿ’ ಅಂತ. ಈ ಕ್ಯಾಶ್ (cache) ಎಂದರೇನು? ನಾವು ಇಂಟರ್ನೆಟ್ ಜಾಲಾಡುತ್ತಿರುವಾಗ, ಆಯಾ ಪುಟಗಳನ್ನು ತೋರಿಸುವ ಸಲುವಾಗಿ ಅವುಗಳಲ್ಲಿರುವ ಎಲ್ಲ ಫೋಟೋ, ಟೆಕ್ಸ್ಟ್, ವೀಡಿಯೋ ಇತ್ಯಾದಿಗಳನ್ನು ಬ್ರೌಸರ್ ನಮ್ಮ ಲೋಕಲ್ ಹಾರ್ಡ್ ಡ್ರೈವ್‌ನ ತಾತ್ಕಾಲಿಕ ಪೋಲ್ಡರ್ ಒಂದಕ್ಕೆ ಡೌನ್‌ಲೋಡ್ ಮಾಡಿಕೊಂಡಿರುತ್ತದೆ. ಅಂತೆಯೇ ನಮ್ಮ ಲಾಗಿನ್ ಹೆಸರು, ಪಾಸ್ವರ್ಡ್, ಇತ್ತೀಚೆಗೆ ಭೇಟಿ ಕೊಟ್ಟ ವೆಬ್‌ಸೈಟುಗಳ ವಿಳಾಸಗಳು ಕೂಡ ಬ್ರೌಸರಿನಲ್ಲಿ ಸೇವ್ ಆಗಿರುತ್ತವೆ. ಇವೆಲ್ಲ ನಮ್ಮ ಹಾರ್ಡ್ ಡ್ರೈವ್‌ನ ಸ್ಥಳವನ್ನು ಆವರಿಸಿಕೊಳ್ಳುತ್ತವೆ. ಅವುಗಳನ್ನು ನಿವಾರಿಸಿದರೆ, ಕಸ ಗುಡಿಸಿದಂತೆ; ವೆಬ್ ಜಾಲಾಟ ವೇಗವಾಗುತ್ತದೆ.

ಇನ್ನು, ನಮ್ಮ ಪಿಸಿಗಳಲ್ಲಿ ನಾವು ಹೆಚ್ಚು ನಿರ್ಲಕ್ಷ್ಯ ವಹಿಸುವುದೆಂದರೆ, ಆ್ಯಂಟಿ ಮಾಲ್‌ವೇರ್ (ಅಥವಾ ಆ್ಯಂಟಿ ವೈರಸ್) ತಂತ್ರಾಂಶದ ಬಗ್ಗೆ. ಹ್ಯಾಂಗ್ ಆಗುವುದು, ವಿಂಡೋ ದಿಢೀರನೇ ಮುಚ್ಚುವುದು, ಕೆಲಸ ಮಾಡುತ್ತಿದ್ದ ಫೈಲ್ ಕ್ಲೋಸ್ ಆಗುವುದು, ಕಂಪ್ಯೂಟರ್ ಕೆಲಸ ನಿಧಾನವಾಗುವುದು… ಮುಂತಾದ ಪ್ರಕ್ರಿಯೆಗಳೆಲ್ಲವೂ ವೈರಸ್ ಎಂಬ ಹಾನಿಕಾರಕ ತಂತ್ರಾಂಶದ ಬಾಧೆಯ ಪರಿಣಾಮ ಆಗಿರಲೂಬಹುದು. ವಾರಕ್ಕೊಮ್ಮೆಯಾದರೂ ಒಳ್ಳೆಯ ಆ್ಯಂಟಿ ವೈರಸ್ ತಂತ್ರಾಂಶದ ಮೂಲಕ ಕಂಪ್ಯೂಟರನ್ನು ಸ್ಕ್ಯಾನ್ ಮಾಡುತ್ತಿರಬೇಕು. ಕೆಲವು ಸಮಸ್ಯೆಗಳನ್ನು ಸರಿಪಡಿಸುವ ವ್ಯವಸ್ಥೆಯೂ ಈ ತಂತ್ರಾಂಶದಲ್ಲಿರುತ್ತದೆ. ಅಲ್ಲದೆ, ನಿರ್ದಿಷ್ಟ ದಿನದಂದು ಸ್ವಯಂಚಾಲಿತವಾಗಿ ಸ್ಕ್ಯಾನ್ ಮಾಡುವಂತೆ ಶೆಡ್ಯೂಲ್ ಮಾಡುವ ವ್ಯವಸ್ಥೆಯೂ ಇಲ್ಲಿರುತ್ತದೆ.

ಇನ್ನೊಂದು ವಿಷಯ. ನಿಮ್ಮ ಕಂಪ್ಯೂಟರ್‌ನ ಯಾವುದೇ ಪ್ರೋಗ್ರಾಂ ಸರಿಯಾಗಿ ಕೆಲಸ ಮಾಡುತ್ತಿಲ್ಲವೆಂದಾದರೆ, ನಿರ್ದಿಷ್ಟ ಸಾಫ್ಟ್‌ವೇರ್‌ನಲ್ಲಿ ಸಮಸ್ಯೆಯಿದ್ದರೂ ಕೂಡ, ಇಡೀ ಕಂಪ್ಯೂಟರೇ ಕೆಟ್ಟುಹೋಗಿದೆ ಎಂಬ ಭಾವನೆ ಮೂಡಿಸಬಹುದು. ಅದರ ಎಕ್ಸಿಕ್ಯೂಟೆಬಲ್ ಫೈಲ್ (exe ಫೈಲ್) ಇದೆ ಎಂಬುದನ್ನು ಖಾತ್ರಿ ಮಾಡಿಕೊಂಡು, ಪ್ರೋಗ್ರಾಮನ್ನು ಅನ್‌ಇನ್‌ಸ್ಟಾಲ್ ಮಾಡಿ, ಪುನಃ ಇನ್‌ಸ್ಟಾಲ್ ಮಾಡುವ ಪ್ರಯತ್ನ ಮಾಡಿ. ಆದರೆ, ಅನ್‌ಇನ್‌ಸ್ಟಾಲ್ ಬಳಿಕ ಕಂಪ್ಯೂಟರ್ ರೀಸ್ಟಾರ್ಟ್ ಮಾಡಿದ ನಂತರವಷ್ಟೇ ಹೊಸದಾಗಿ ಪ್ರೋಗ್ರಾಂ ಇನ್‌ಸ್ಟಾಲ್ ಮಾಡಿ. ಹಳೆಯ ತಾತ್ಕಾಲಿಕ ಫೈಲುಗಳ ನಿರ್ಮೂಲನೆಗೆ ಈ ಹಂತ ಅನುಸರಿಬೇಕಾಗುತ್ತದೆ.

ಇಷ್ಟೆಲ್ಲ ಮಾಡಿಯೂ ನಿಮ್ಮ ಕಂಪ್ಯೂಟರ್ ಅಥವಾ ಅದರ ಯಾವುದೇ ಪ್ರೋಗ್ರಾಂ ಸರಿಯಾಗಿ ಕೆಲಸ ಮಾಡುತ್ತಿಲ್ಲವೆಂದಾದರೆ ಮಾತ್ರ, ದುರಸ್ತಿಗೆ ಒಯ್ಯಿರಿ.

ನೆನಪಿಡಿ, ಯಾವತ್ತೂ ಯಾವುದೇ ಫೈಲುಗಳನ್ನು ನಿಮ್ಮ ಕಂಪ್ಯೂಟರಿನ ‘ಸಿ’ ಡ್ರೈವ್‌ನಲ್ಲಿ (ಡೆಸ್ಕ್‌ಟಾಪ್, ಮೈ ಡಾಕ್ಯುಮೆಂಟ್ಸ್, ಮೈ ಫೋಟೋಸ್, ಮೈ ವೀಡಿಯೋಸ್, ಮೈ ಮ್ಯೂಸಿಕ್ ಮುಂತಾದ ಫೋಲ್ಡರುಗಳು) ಉಳಿಸಬೇಡಿ. ಡಿ (ಅಥವಾ ಇ, ಎಫ್… ನಿಮ್ಮ ಸಿಸ್ಟಂನಲ್ಲಿರುವ ಪಾರ್ಟಿಷನ್‌ಗಳಿಗೆ ತಕ್ಕಂತೆ) ಡ್ರೈವ್‌ಗಳಲ್ಲಿ ಫೈಲುಗಳನ್ನು ಸೇವ್ ಮಾಡಿಡಿ. ಯಾಕೆಂದರೆ, ಇಡೀ ಆಪರೇಟಿಂಗ್ ಸಿಸ್ಟಂ ರೀ-ಇನ್‌ಸ್ಟಾಲ್ ಮಾಡಬೇಕಾಗಿ ಬಂದಲ್ಲಿ, ಸಿ ಡ್ರೈವ್‌ನಲ್ಲಿರುವ ಯಾವುದೇ ಫೈಲುಗಳು ನಿಮಗೆ ಸಿಗಲಾರವು.

ಟೆಕ್ ಟಾನಿಕ್: ಲ್ಯಾಪ್‌ಟಾಪ್ ಶಟ್‌ಡೌನ್ ಅನಗತ್ಯ
ದಿನಂಪ್ರತಿ ಲ್ಯಾಪ್‌ಟಾಪ್ ಬಳಸುತ್ತಿರುವವರಿಗೊಂದು ಸಲಹೆ. ಮನೆಯಲ್ಲಿಯೂ ಕಚೇರಿಯಲ್ಲಿಯೂ ಲ್ಯಾಪ್‌ಟಾಪ್ ಮತ್ತೆ ಮತ್ತೆ ಬಳಸಬೇಕಾಗಿದ್ದರೆ, ಕೆಲಸ ಮುಗಿದ ಬಳಿಕ ಅದನ್ನು ನೀವು ಶಟ್‌ಡೌನ್ ಮಾಡಲೇಬೇಕೆಂದಿಲ್ಲ ಎಂಬುದು ಗೊತ್ತೇ? ತುಂಬಾ ಬ್ರೌಸರುಗಳನ್ನು ಓಪನ್ ಮಾಡಿದ್ದರೆ, ಇವನ್ನು ನಾಳೆ ಸರಿಯಾಗಿ ನೋಡೋಣ ಎಂದುಕೊಂಡರೆ, ಅವೆಲ್ಲವನ್ನೂ ತೆರೆದೇ ಇಟ್ಟಿರಬಹುದು. ಲ್ಯಾಪ್‌ಟಾಪ್ ಆನ್ ಇರುವಂತೆಯೇ ಅದರ ಸ್ಕ್ರೀನ್ ಭಾಗವನ್ನು ಮುಚ್ಚಿಬಿಟ್ಟರಾಯಿತು. ಸ್ವಯಂಚಾಲಿತವಾಗಿ ಅದು ಸ್ಲೀಪ್ ಮೋಡ್‌ಗೆ ಹೊರಟುಹೋಗುತ್ತದೆ. ನಿಮಗೆ ಮತ್ತೆ ಬೇಕಾದಾಗ, ಲಿಡ್ ಓಪನ್ ಮಾಡಿ ಸಿಸ್ಟಂಗೆ ಲಾಗಿನ್ ಆದರೆ ಸಾಕು. ಹೆಚ್ಚೇನೂ ಬ್ಯಾಟರಿ ಖರ್ಚಾಗುವುದಿಲ್ಲ. ಆದರೆ ಸಿಸ್ಟಂನ ಕ್ಷಮತೆಯ ದೃಷ್ಟಿಯಿಂದ ವಾರಕ್ಕೊಮ್ಮೆಯಾದರೂ ಶಟ್‌ಡೌನ್ ಮಾಡಬೇಕೆಂಬುದು ನೆನಪಿನಲ್ಲಿರಲಿ.

ಕಂಪ್ಯೂಟರ್, ಮೊಬೈಲ್ ವೇಗ ಹೆಚ್ಚಿಸಲು, ಸೇಫ್ ಮೋಡ್ ಬಳಸಿ

ಮಾಹಿತಿ@ತಂತ್ರಜ್ಞಾನ ಅಂಕಣ – 97: ಅವಿನಾಶ್ ಬಿ. (ವಿಜಯ ಕರ್ನಾಟಕ, ಅಕ್ಟೋಬರ್ 13, 2014)

ಇತ್ತೀಚೆಗೆ ನನ್ನ ಸ್ಮಾರ್ಟ್‌ಫೋನ್ ಪದೇ ಪದೇ ರೀಸ್ಟಾರ್ಟ್ ಆಗುವ ಸಮಸ್ಯೆಗೆ ಸಿಲುಕಿತ್ತು. ಈ ಸಮಸ್ಯೆಗೆ ಕಾರಣ ಮತ್ತು ಪರಿಹಾರ ಕಂಡುಹಿಡಿಯಲು ಅಂತರ್ಜಾಲದಲ್ಲಿ ಜಾಲಾಡಿದಾಗ ಮತ್ತು ಕಸ್ಟಮರ್ ಕೇರ್‌ಗೆ ಇಮೇಲ್ ಮೂಲಕ ಸಂಪರ್ಕಿಸಿದ ಬಳಿಕ ಉತ್ತರ ಸಿಕ್ಕಿತು. ವಿಂಡೋಸ್ ಅಥವಾ ಮ್ಯಾಕ್ ಕಂಪ್ಯೂಟರ್‌ಗಳಲ್ಲಿ ಕೂಡ ಯಾವುದೇ ಸಮಸ್ಯೆ ಬಂದಾಗ, ಅದರಲ್ಲಿನ ತಾಂತ್ರಿಕ ದೋಷಗಳನ್ನು ಪತ್ತೆ ಮಾಡಿ ಸರಿಪಡಿಸುವ ನಿಟ್ಟಿನಲ್ಲಿ (ಟ್ರಬಲ್ ಶೂಟಿಂಗ್ ಎನ್ನುತ್ತಾರೆ) “ಸೇಫ್ ಮೋಡ್”ನಲ್ಲಿ ರೀಬೂಟ್ ಅಥವಾ ರೀಸ್ಟಾರ್ಟ್ ಮಾಡಲಾಗುತ್ತದೆ ಮತ್ತು ವೈರಸ್ ಸ್ಕ್ಯಾನ್ ಮಾಡಲಾಗುತ್ತದೆ. ಆಂಡ್ರಾಯ್ಡ್ ಮೊಬೈಲ್ ಫೋನ್‌ಗಳನ್ನು ಕೂಡ ಸೇಫ್ ಮೋಡ್‌ನಲ್ಲಿ ಆನ್ ಮಾಡಬಹುದು ಎಂಬುದು ಆಗಲೇ ನನಗೆ ಗೊತ್ತಾಗಿದ್ದು. ನಿಮ್ಮ ಸಾಧನದ ವೇಗ ಹೆಚ್ಚಿಸಲು ತೀರಾ ಸುಲಭವಾದ ವಿಧಾನವನ್ನು ನೀವೂ ಮಾಡಿ ನೋಡಬಹುದು.

ಸೇಫ್ ಮೋಡ್ ಯಾಕೆ: ಕಂಪ್ಯೂಟರ್ ಅಥವಾ ಯಾವುದೇ ಸಾಧನವನ್ನು ಸೀಮಿತ ಬಳಕೆಗೆ ಆನ್ ಮಾಡುವ ಮೂಲಕ, ಸಮಸ್ಯೆಗಳನ್ನು ಪತ್ತೆ ಹಚ್ಚಲು ಸೇಫ್ ಮೋಡ್ ಅಥವಾ ಸುರಕ್ಷಿತ ಮೋಡ್ ಸಹಕಾರಿ. ಈ ಮೋಡ್‌ನಲ್ಲಿ ಕಂಪ್ಯೂಟರ್ ಆನ್ ಚಾಲನೆಯಾಗಲು ಅಗತ್ಯವಿರುವ ಮೂಲಭೂತ ಫೈಲುಗಳು, ಡ್ರೈವರ್‌ಗಳು ಮಾತ್ರ ಸ್ಟಾರ್ಟ್ ಆಗುತ್ತವೆ. ಈ ಮೋಡ್‌ನಲ್ಲಿರುವಾಗ ಸ್ಕ್ರೀನ್‌ನ ನಾಲ್ಕೂ ಮೂಲೆಗಳಲ್ಲಿ Safe Mode ಎಂಬ ಪದಗಳು ಕಾಣಿಸುತ್ತವೆ. ಸಾಮಾನ್ಯ ಮೋಡ್‌ನಲ್ಲಿ ಕಾಣಿಸಿಕೊಂಡ ದೋಷಗಳು ಸೇಫ್ ಮೋಡ್‌ನಲ್ಲಿ ಬರುವುದಿಲ್ಲ ಎಂದಾದರೆ, ಕಂಪ್ಯೂಟರಿನಲ್ಲಿನ ಮೂಲ ಡ್ರೈವರ್‌ಗಳು ಹಾಗೂ ಸೆಟ್ಟಿಂಗ್‌ಗಳಿಂದಾಗಿ ಏನೂ ಸಮಸ್ಯೆ ಇಲ್ಲ ಎಂದರ್ಥ. ಬಳಿಕ, ನಿಮ್ಮ ಸಿಸ್ಟಂಗೆ ನೀವಾಗಿಯೇ ಇನ್‌ಸ್ಟಾಲ್ ಮಾಡಿದ್ದ ಪ್ರೋಗ್ರಾಂ, ಆ್ಯಪ್ ಅಥವಾ ಸಾಫ್ಟ್‌ವೇರ್‌ಗಳನ್ನು ಒಂದೊಂದಾಗಿ ರನ್ ಮಾಡಿ ನೋಡಿದರೆ, ಯಾವುದು ಲಾಂಚ್ ಆಗುವುದಿಲ್ಲವೋ ಅಥವಾ ಕ್ರ್ಯಾಶ್ ಆಗುತ್ತದೆಯೋ ಅದುವೇ ಸಮಸ್ಯೆ ಮೂಲ ಎಂದು ತಿಳಿದುಕೊಳ್ಳಬಹುದು.

ಹೇಗೆ: ವಿಂಡೋಸ್ ಎಕ್ಸ್‌ಪಿ ಮತ್ತು ವಿಂಡೋಸ್ 7ರಲ್ಲಾದರೆ, ಸ್ವಿಚ್ ಆನ್ ಮಾಡಿದಾಗ ವಿಂಡೋಸ್ ಲೋಗೋ ಕಾಣಿಸಿಕೊಳ್ಳುವ ಮೊದಲು F8 ಒತ್ತಿ ಹಿಡಿದುಕೊಂಡರೆ, ಅದು ಸೇಫ್ ಮೋಡ್‌ನಲ್ಲಿ ಸ್ಟಾರ್ಟ್ ಆಗುತ್ತದೆ. ವಿಂಡೋಸ್ 8ರಲ್ಲಾದರೆ, ಸ್ಕ್ರೀನ್ ಮೇಲೆ ಪವರ್ ಬಟನ್ ಕ್ಲಿಕ್ ಮಾಡಿ, ರೀಸ್ಟಾರ್ಟ್ ಎಂಬ ಆಯ್ಕೆಯನ್ನು ಒತ್ತುವ ಮುನ್ನ ಕೀಬೋರ್ಡ್‌ನಲ್ಲಿ ಶಿಫ್ಟ್ ಕೀಲಿ ಒತ್ತಿ ಹಿಡಿದುಕೊಂಡರಾಯಿತು.

ಇದೇ ರೀತಿ ಆಂಡ್ರಾಯ್ಡ್ ಫೋನನ್ನು ಸೇಫ್ ಮೋಡ್‌ನಲ್ಲಿ ಆನ್ ಮಾಡಲು, ಪವರ್ ಬಟನ್ ಒತ್ತಿ ಹಿಡಿದಾಗ, ಪವರ್ ಆಫ್ ಎಂಬ ಬಟನ್ ಗೋಚರಿಸುತ್ತದೆ. ಅದನ್ನು ಒತ್ತಿ ಹಿಡಿದುಕೊಳ್ಳಿ. ಸೇಫ್‌ಮೋಡ್‌ನಲ್ಲಿ ರೀಸ್ಟಾರ್ಟ್ ಆಗುತ್ತದೆ.

ಪ್ರಯೋಜನಗಳು: ಮುಖ್ಯವಾಗಿ ಈ ಮೋಡ್ ನಿಮ್ಮ ಸಿಸ್ಟಂ ಅನ್ನು ಸಂಪೂರ್ಣವಾಗಿ ರೀಫ್ರೆಶ್ ಮಾಡುತ್ತದೆ. ಡ್ರೈವರ್‌ಗಳೇನಾದರೂ ದೋಷಪೂರಿತವಾಗಿದ್ದರೆ (ಕರಪ್ಟ್), ಸೇಫ್ ಮೋಡ್‌ನಲ್ಲಿ ಸರಿಯಾಗುವ ಸಾಧ್ಯತೆಗಳಿವೆ. ಸೇಫ್ ಮೋಡ್‌ನಿಂದ ನಿರ್ಗಮಿಸಲು ಶಟ್ ಡೌನ್ ಮಾಡಿ ರೀಸ್ಟಾರ್ಟ್ ಮಾಡಿ; ನಾರ್ಮಲ್ ಮೋಡ್‌ಗೆ ಮರಳುತ್ತದೆ. ಸಿಸ್ಟಂ ಹಿಂದಿಗಿಂತ ವೇಗವಾಗಿ ಕಾರ್ಯಾಚರಿಸುತ್ತದೆ. ಯಾಕೆಂದರೆ ಅದರ ಡ್ರೈವರ್‌ಗಳು, ಅಪ್ಲಿಕೇಶನ್‌ಗಳು ಪುನಶ್ಚೇತನಗೊಂಡಿರುತ್ತವೆ. ಕೆಲವೊಂದು ಆ್ಯಂಟಿ ವೈರಸ್ ತಂತ್ರಾಂಶಗಳನ್ನು ಸೇಫ್ ಮೋಡ್‌ನಲ್ಲೇ ರನ್ ಮಾಡಿ ಸಿಸ್ಟಂ ಸ್ಕ್ಯಾನ್ ಮಾಡಿಸಬೇಕೆಂದು ಕಡ್ಡಾಯವಾಗಿ ಸೂಚಿಸಿರುತ್ತಾರೆ.

ಸ್ಮಾರ್ಟ್‌ಫೋನ್ ಸೇಫ್ ಮೋಡ್‌ನಲ್ಲಿ ರೀಬೂಟ್ ಆದಾಗ, ಫ್ಯಾಕ್ಟರಿ ಇನ್‌ಸ್ಟಾಲ್ ಮಾಡಿರುವ ಆ್ಯಪ್‌ಗಳು ಮಾತ್ರ ಗೋಚರಿಸುತ್ತವೆ. ಉಳಿದವನ್ನು ನೋಡಲು ಸೆಟ್ಟಿಂಗ್ಸ್‌ನಲ್ಲಿ ಆ್ಯಪ್ಸ್ ಅಂತ ಇರುವಲ್ಲಿ ಹೋಗಿ ನೋಡಿದರಾಯಿತು. ನಿಮ್ಮ ಸ್ಮಾರ್ಟ್‌ಫೋನ್ ನಿಧಾನವಾಗಿ ಕೆಲಸ ಮಾಡುತ್ತಿದೆಯೆಂದಾದರೆ, ಅದನ್ನು ವೇಗವಾಗಿಸಲು, ಫ್ಯಾಕ್ಟರಿ ಡೇಟಾ ರೀಸೆಟ್ ಎಂಬ ಆಯ್ಕೆಯ (ಇದರಲ್ಲಿ, ನೀವು ಇನ್‌ಸ್ಟಾಲ್ ಮಾಡಿದ ಎಲ್ಲ ಆಯ್ಕೆಗಳು, ನಿಮ್ಮ ಎಲ್ಲ ಮಾಹಿತಿ, ಸಂಪರ್ಕ, ಫೈಲ್‌ಗಳು ಡಿಲೀಟ್ ಆಗಿಬಿಡುತ್ತವೆ) ಬದಲಾಗಿ, ಸೇಫ್ ಮೋಡ್‌ನಲ್ಲಿ ಒಮ್ಮೆ ರೀಬೂಟ್ ಮಾಡಿದರೆ ಸಾಕಾಗಬಹುದು. ನಂತರ ಸಾಮಾನ್ಯ ಮೋಡ್‌ನಲ್ಲಿ ರೀಸ್ಟಾರ್ಟ್ ಮಾಡಿದಾಗ, ಗೂಗಲ್‌ನ ಆ್ಯಪ್‌ಗಳನ್ನು ಹೊರತುಪಡಿಸಿ, ಬೇರೆಲ್ಲಾ ಆ್ಯಪ್‌ಗಳಿಗೆ (ಫೇಸ್‌ಬುಕ್, ಟ್ವಿಟರ್ ಇತ್ಯಾದಿ) ನೀವು ಪುನಃ ಲಾಗಿನ್ ಮಾಡಬೇಕಾಗುತ್ತದೆ ಎಂಬುದು ನೆನಪಿರಲಿ.

ಟೆಕ್ ಟಾನಿಕ್
ಮಂಗಳನಲ್ಲಿಗೆ ಹೋಗಲು ಎಲ್ಲರಿಗೂ ಸಾಧ್ಯವಾಗದಿದ್ದರೂ, ಕನಿಷ್ಠ ನಮ್ಮ ಹೆಸರನ್ನಾದರೂ ಮೈಕ್ರೋಚಿಪ್ ಮೂಲಕ ಬಾಹ್ಯಾಕಾಶಕ್ಕೆ ತಲುಪಿಸುವ ಅವಕಾಶವೊಂದನ್ನು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಮಾಡಿಕೊಟ್ಟಿದೆ. ಜಾಗತಿಕ ಬಾಹ್ಯಾಕಾಶ ಆಸಕ್ತರ ಸಮಾಜ ರಚಿಸುವ ಗುರಿ ನಾಸಾ ಸಂಸ್ಥೆಯದು. ಓರಿಯಾನ್ ಎಂಬ ಬಾಹ್ಯಾಕಾಶ ನೌಕೆಯ ಪರೀಕ್ಷಾ ಪ್ರಯೋಗ ಡಿ.4ರಂದು ನಡೆಯಲಿದ್ದು, ಆ ನೌಕೆ ಪೆಸಿಫಿಕ್ ಸಾಗರಕ್ಕೆ ಬೀಳುತ್ತದೆಯಾದರೂ, ಮುಂದೆ ಮಂಗಳನತ್ತ ಯಾವುದೇ ನೌಕೆಯನ್ನು ಹಾರಿಬಿಟ್ಟಾಗ ನಿಮ್ಮ ಹೆಸರಿಗೆ ಇಂತಿಷ್ಟು ಮೈಲುಗಳು ಸೇರ್ಪಡೆಯಾಗುತ್ತವೆ. ಇದಕ್ಕಾಗಿ ನಿಮ್ಮ ಹೆಸರಿಗೆ ಬಾಹ್ಯಾಕಾಶ ಯಾನದ ಬೋರ್ಡಿಂಗ್ ಪಾಸ್ ದೊರೆಯಬೇಕಿದ್ದರೆ go.usa.gov/vcpz ಎಂಬಲ್ಲಿ ಹೋಗಿ ಹೆಸರು ದಾಖಲಿಸಿ.

‌ವೈಫೈ ಡೇಟಾ ಕಾರ್ಡ್: ಒಂದೇ ಸಿಮ್‌, ಹಲವು ಸಾಧನಗಳಿಗೆ ಇಂಟರ್ನೆಟ್‌

ಮಾಹಿತಿ@ತಂತ್ರಜ್ಞಾನ ಅಂಕಣ – 96: ಅವಿನಾಶ್ ಬಿ. (ವಿಜಯ ಕರ್ನಾಟಕ, ಅಕ್ಟೋಬರ್ 06, 2014)

ಅಂತರ್ಜಾಲ ಈಗ ಬದುಕಿನ ಅವಿಭಾಜ್ಯ ಅಂಗವಾಗಿರುವ ಕಾರಣಕ್ಕೆ ಹೆಚ್ಚಾಗಿ ಮನೆಗಳಲ್ಲಿ, ಕಚೇರಿಗಳಲ್ಲಿ ಬ್ರಾಡ್‌ಬ್ಯಾಂಡ್ ಇಂಟರ್ನೆಟ್ ಸಂಪರ್ಕ ಇರುತ್ತದೆ. ಮನೆಯಲ್ಲಾದರೆ ಅದಕ್ಕೆ ವೈರ್‌ಗಳು, ಕೇಬಲ್‌ಗಳ ಕಿರಿಕಿರಿ. ಹೀಗಾಗಿಯೇ ಪುಟ್ಟದಾದ ಇಂಟರ್ನೆಟ್ ಡಾಂಗಲ್‌ಗಳು ಎಂದು ಕರೆಯಲಾಗುವ, ಎಲ್ಲಿ ಬೇಕಾದರೂ ಹೊತ್ತೊಯ್ಯಬಹುದಾದ ಯುಎಸ್‌ಬಿ ಡೇಟಾ ಕಾರ್ಡ್‌ಗಳು ಜನಪ್ರಿಯವಾಗಿವೆ. ಈ ನಿಟ್ಟಿನಲ್ಲಿ ಬಿಎಸ್ಸೆನ್ನೆಲ್, ಏರ್‌ಟೆಲ್, ವೊಡಾಫೋನ್, ಟಾಟಾ ಡೊಕೊಮೊ, ರಿಲಯನ್ಸ್, ಎಂಟಿಎಸ್, ಐಡಿಯಾ, ಏರ್‌ಸೆಲ್ ಮುಂತಾದ ಎಲ್ಲ ಮೊಬೈಲ್ ಆಪರೇಟರ್ ಕಂಪನಿಗಳೂ ತಮ್ಮದೇ ಡಾಂಗಲ್‌ಗಳನ್ನು ಮಾರುಕಟ್ಟೆಗಿಳಿಸಿವೆ. ಅವುಗಳಲ್ಲಿ ಹೊಸ ಟ್ರೆಂಡ್ ಎಂದರೆ ಪ್ಲಗ್-ಆ್ಯಂಡ್-ಪ್ಲೇ ವ್ಯವಸ್ಥೆಯ ವೈ-ಫೈ ಡಾಂಗಲ್‌ಗಳು ಕಮ್ ರೌಟರ್‌ಗಳು.

ಇಂತಹಾ ಉಪಯುಕ್ತ ವೈಫೈ ತಂತ್ರಜ್ಞಾನದ ಬಗ್ಗೆ ಅರಿವಿಲ್ಲದವರಿಗೆ, ವಿಶೇಷವಾಗಿ ಗ್ರಾಮೀಣ ಭಾಗದವರಿಗಾಗಿ ಈ ಸಲಹೆ.

ಮುಖ್ಯವಾಗಿ ನಾಲ್ಕು ವಿಧದ ವೈ-ಫೈ ಡಾಂಗಲ್‌ಗಳಿವೆ. 1. ಸಿಮ್ ಆಧಾರಿತ ವೈಫೈ ಡಾಂಗಲ್, 2. ಯುಎಸ್‌ಬಿ/ಡೇಟಾ ಕಾರ್ಡ್ ಆಧಾರಿತ ವೈಫೈ ಸಾಧನ, 3. ವೈಫೈ ಹಾಟ್‌ಸ್ಪಾಟ್ ಅವಕಾಶವಿರುವ ಯುಎಸ್‌ಬಿ ಡೇಟಾ ಕಾರ್ಡ್ ಮತ್ತು 4. ಯಾವುದೇ (ಯೂನಿವರ್ಸಲ್) ಸಿಮ್, ಬ್ಯಾಟರಿ, ಮೆಮೊರಿ ಕಾರ್ಡ್ ಸ್ಲಾಟ್ ಇರುವ ಪ್ಲಗ್-ಆ್ಯಂಡ್-ಪ್ಲೇ ಕೂಡ ಆಗಬಲ್ಲ ವೈಫೈ ಡಾಂಗಲ್.

ಇಂಟರ್ನೆಟ್ ಸಂಪರ್ಕಕ್ಕಾಗಿ ಮೋಡೆಮ್, ಕಂಪ್ಯೂಟರ್ ಆನ್ ಮಾಡುವುದು, ಆಫ್ ಮಾಡುವುದು ದೊಡ್ಡ ಕಿರಿಕಿರಿ. ಕರೆಂಟ್ ಹೋದಾಗಲಂತೂ ಮತ್ತಷ್ಟು ಸಮಸ್ಯೆ. ಬದಲಾಗಿ, ಪ್ಲಗ್‌ಗೆ ಒಂದು ಡಾಂಗಲ್ ಸಿಕ್ಕಿಸಿದರೆ, ಅದನ್ನೇ ವೈ-ಫೈ ಹಾಟ್‌ಸ್ಪಾಟ್ ಆಗಿಸಿ ಮೊಬೈಲ್, ಕಂಪ್ಯೂಟರ್, ಲ್ಯಾಪ್‌ಟಾಪ್ ಎಲ್ಲದಕ್ಕೂ ಸಂಪರ್ಕ ದೊರೆಯುವಂತಾದರೆ? ಒಂದು ಇಂಟರ್ನೆಟ್ ಸಂಪರ್ಕ ಪಡೆದುಕೊಂಡು ಅದನ್ನೇ ನೀವು ಹಾಗೂ ಮನೆಯವರಲ್ಲಿರುವ ಎಲ್ಲರ ಮೊಬೈಲ್/ಲ್ಯಾಪ್‌ಟಾಪ್/ಟ್ಯಾಬ್ಲೆಟ್ ಸಾಧನಗಳೂ ಬಳಸುವಂತಾದರೆ?

ಇದಕ್ಕೆ ನೆರವಿಗೆ ಬರುವುದೇ ಪ್ಲಗ್-ಆ್ಯಂಡ್-ಪ್ಲೇ ವೈಫೈ ಇಂಟರ್ನೆಟ್ ಡಾಂಗಲ್ ಅಥವಾ ಡೇಟಾ ಕಾರ್ಡ್. ಈ ಡಾಂಗಲ್ ಅನ್ನು ಅದರ ಜತೆಗೆ ಬರುವ ಅಡಾಪ್ಟರ್ ಮೂಲಕ ಕರೆಂಟ್ ಪ್ಲಗ್‌ಗೆ ಸಿಕ್ಕಿಸಿದರೆ ಸಾಕು, ಇಂಟರ್ನೆಟ್ ಸಂಪರ್ಕ ಆನ್ ಆಗುತ್ತದೆ ಮತ್ತು ವೈ-ಫೈ ಮೂಲಕ ಈ ಡಾಂಗಲ್‌ಗೆ ಕನಿಷ್ಠ ಐದು ಸಾಧನಗಳನ್ನು (ಸ್ಮಾರ್ಟ್‌ಫೋನ್, ಟ್ಯಾಬ್ಲೆಟ್, ಕಂಪ್ಯೂಟರ್ ಇತ್ಯಾದಿ) ಸಂಪರ್ಕಿಸಬಹುದು. ಇದಕ್ಕೆ ಪಾಸ್‌ವರ್ಡ್ ರಕ್ಷಣೆ ಇರುತ್ತದೆ. ಆದರೆ ಎಲ್ಲ ಸಾಧನಗಳಲ್ಲೂ ವೈ-ಫೈ ಸೌಲಭ್ಯ ಇರಬೇಕು. ಈ ಡೇಟಾ ಕಾರ್ಡ್‌ಗೆ ಅಪರಿಮಿತ ಡೇಟಾ (ಅನ್‌ಲಿಮಿಟೆಡ್ ಇಂಟರ್ನೆಟ್) ಸೌಕರ್ಯವಿರುವ ಒಂದು ಸಿಮ್ ಕಾರ್ಡ್ ಅಳವಡಿಸಿದರಾಯಿತು. ಕೆಲವು ಡಾಂಗಲ್‌ಗಳಲ್ಲಿ ರೀಚಾರ್ಜೆಬಲ್ ಬ್ಯಾಟರಿಯೂ ಇರುತ್ತದೆ. ಪವರ್ ಕಟ್ ಸಂದರ್ಭ ಸುಮಾರು ನಾಲ್ಕು ಗಂಟೆ ಇದು ಅನುಕೂಲ ಕಲ್ಪಿಸುತ್ತದೆ.

ಬಹುತೇಕ ಎಲ್ಲ ಮೊಬೈಲ್ ಆಪರೇಟರ್‌ಗಳೂ ಇಂತಹಾ ವೈ-ಫೈ ಡಾಂಗಲ್ ಮಾರುಕಟ್ಟೆಗೆ ಬಿಟ್ಟಿದ್ದಾರಾದರೂ, ನಿರ್ದಿಷ್ಟ ನೆಟ್‌ವರ್ಕ್‌ಗೆ ಸೀಮಿತವಾಗದೆ, ಹೆಚ್ಚುವರಿ ಅನುಕೂಲಗಳಿರುವ ಡಾಂಗಲ್ ನೀವು ಖರೀದಿಸಬೇಕೆಂದರೆ, ಅಂಗಡಿಯಾತನಲ್ಲಿ ನೀವು ಕೇಳಬೇಕಾದ ವಿಷಯಗಳು – ವೈ-ಫೈ ಹಾಟ್‌ಸ್ಪಾಟ್, ರೀಚಾರ್ಜೆಬಲ್ ಬ್ಯಾಟರಿ, ಮೆಮೊರಿ ಕಾರ್ಡ್ ಸ್ಲಾಟ್, ಯೂನಿವರ್ಸಲ್ ಡಾಂಗಲ್ (ಇದರಲ್ಲಿ ಯಾವುದೇ ಕಂಪನಿಯ ಸಿಮ್ ಕಾರ್ಡ್ ಹಾಕಬಹುದು). ಹ್ಯುವೈ (Huawei), ಬೀಟೆಲ್, ಇಂಟೆಕ್ಸ್, ಅಲ್ಕಾಟೆಲ್, ಡಿ-ಲಿಂಕ್ ಮುಂತಾದ ಕಂಪನಿಗಳ ಡೇಟಾ ಕಾರ್ಡ್‌ಗಳನ್ನು ಪರಿಗಣಿಸಬಹುದು. 3-4 ಸಾವಿರ ರೂ. ಆಸುಪಾಸಿನಲ್ಲಿ ಈ ಸೌಕರ್ಯಗಳಿರುವ ಡಾಂಗಲ್ ಸಿಗುತ್ತದೆ.

ಹಳೆಯ ಸ್ಮಾರ್ಟ್‌ಫೋನ್ ಇದೆಯೇ? ಅದೇ ಸಾಕು: ನಿಮ್ಮಲ್ಲಿ ಹಳೆಯ ಸ್ಮಾರ್ಟ್‌ಫೋನ್ ಇದ್ದರೆ ಅದನ್ನೂ ವೈಫೈ ಹಾಟ್‌ಸ್ಪಾಟ್ ಆಗಿ ಬಳಸಿ ಸದುಪಯೋಗ ಮಾಡಿಕೊಳ್ಳಬಹುದು. ಅದರಲ್ಲಿರುವ ಟಿದರಿಂಗ್ ಆ್ಯಂಡ್ ಹಾಟ್‌ಸ್ಪಾಟ್ ಎಂಬ ಸೌಕರ್ಯವನ್ನು ಉಪಯೋಗಿಸಿಕೊಳ್ಳಬೇಕು. ಆ ಮೊಬೈಲಿಗೊಂದು ಅನ್‌ಲಿಮಿಟೆಡ್ ಇಂಟರ್ನೆಟ್ ಪ್ಯಾಕ್ ಹಾಕಿಸಿಕೊಂಡರೆ ಸಾಕು. ಅದರ ಸಂಪರ್ಕವನ್ನೇ ವೈಫೈ ಮೂಲಕ ಬೇರೆ 4-5 ಸಾಧನಗಳಿಗೆ ಹಂಚಬಹುದು.

ಇನ್ನು, ಈಗಾಗಲೇ ಬ್ರಾಡ್‌ಬ್ಯಾಂಡ್ ಸಂಪರ್ಕ ಪಡೆದುಕೊಂಡವರು ಕೂಡ ವೈಫೈ ಮೂಲಕ ವಿವಿಧ ಸಾಧನಗಳನ್ನು ಸಂಪರ್ಕಿಸಿಕೊಳ್ಳಬಹುದು. ಇದಕ್ಕಾಗಿಯೇ ಮೋಡೆಮ್‌ಗೆ ಅಳವಡಿಸುವ ಮತ್ತು ಬೇರೆ ಡೇಟಾ ಕಾರ್ಡನ್ನೂ ಅಳವಡಿಸಬಹುದಾದ ವೈಫೈ ರೌಟರ್‌ಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ.

ಟೆಕ್ ಟಾನಿಕ್
ಆನ್‌ಲೈನ್‌ನಲ್ಲಿರುವಾಗ ಬುದ್ಧಿಮತ್ತೆ ಹೆಚ್ಚಿಸಿಕೊಳ್ಳಿ:
ಫೇಸ್‌ಬುಕ್, ಟ್ವಿಟರ್ ಮತ್ತು ಮೆಸೇಜಿಂಗ್ ಮುಂತಾದ ಇಂಟರ್ನೆಟ್ ಜಮಾನದಲ್ಲಿ ಹಾಗೂ ಎಲ್ಲದಕ್ಕೂ ಗೂಗಲ್ ಇದೆ ಎಂಬ ಭರವಸೆಯ ನಡುವೆ ನಮ್ಮ ಐಕ್ಯೂ ಅಂದರೆ ಬೌದ್ಧಿಕ ಕೌಶಲ್ಯ ಅಥವಾ ಜಾಣ್ಮೆ ತುಕ್ಕು ಹಿಡಿಯುತ್ತಿದೆ ಎಂಬ ಮಾತುಗಳನ್ನಿಂದು ಕೇಳುತ್ತಿದ್ದೇವೆ. ಮೆದುಳಿಗೆ ಕೆಲಸ ಕೊಟ್ಟರೆ ಮಾತ್ರ ಅದು ಹರಿತವಾಗಿರುತ್ತದೆ. ಹೀಗಾಗಿ ಇಂಟರ್ನೆಟ್‌ನಲ್ಲಿರುವಾಗ ಸಮಯ ಮಾಡಿಕೊಂಡು ಈ ತಾಣಕ್ಕೆ ಭೇಟಿ ನೀಡಿದರೆ, ಬುದ್ಧಿಮತ್ತೆಯನ್ನು ಒರೆಗೆ ಹಚ್ಚಬಹುದು. ಮಕ್ಕಳಿಗೆ ಅತ್ಯಂತ ಸೂಕ್ತ ತಾಣವಿದು. ದೊಡ್ಡವರಿಗೂ ಕೂಡ. https://memorado.com/

ಸ್ಲೋ ಆಗಿರುವ ಕಂಪ್ಯೂಟರಿನ ವೇಗ ಹೆಚ್ಚಿಸಬೇಕೇ? ನೀವೇ ಮಾಡಿನೋಡಿ!

ಮಾಹಿತಿ@ತಂತ್ರಜ್ಞಾನ – ವಿಜಯ ಕರ್ನಾಟಕ ಅಂಕಣ-93, ಸೆಪ್ಟೆಂಬರ್ 15, 2014
Avinash Column-1ಸಮಯ ಕಳೆದಂತೆ ನಮ್ಮ ಡೆಸ್ಕ್‌ಟಾಪ್ ಅಥವಾ ಲ್ಯಾಪ್‌ಟಾಪ್ ಸ್ಲೋ ಆಗುವುದು ಸಹಜ. ಆರಂಭದಲ್ಲಿದ್ದಷ್ಟು ವೇಗದಲ್ಲಿ ಕೆಲಸ ಮಾಡುವುದು ಸಾಧ್ಯವಾಗದು. ಈ ರೀತಿ ನಿಧಾನಗತಿಗೆ ಸಾಕಷ್ಟು ಕಾರಣಗಳಿರುತ್ತವೆ. ಸಾಮಾನ್ಯವಾದವೆಂದರೆ, ಮೆಮೊರಿ (ಅಂದರೆ ಆಂತರಿಕ ಸ್ಟೋರೇಜ್, RAM) ಕಡಿಮೆ ಇರುವುದು, ಮಾಲ್‌ವೇರ್/ವೈರಸ್ ಬಾಧೆ, ಹಿನ್ನೆಲೆಯಲ್ಲಿ ಸಾಕಷ್ಟು ಪ್ರೋಗ್ರಾಂಗಳು ರನ್ ಆಗುತ್ತಿರುವುದು, ಹಾರ್ಡ್ ಡ್ರೈವ್‌ನಲ್ಲಿ ಸಾಕಷ್ಟು ಸ್ಥಳ ಇಲ್ಲದಿರುವುದು, ಕರಪ್ಟ್ (ದೋಷಪೂರಿತ) ಅಥವಾ ಫ್ರಾಗ್ಮೆಂಟ್ ಆಗಿರುವ ಹಾರ್ಡ್‌ಡ್ರೈವ್ ಇತ್ಯಾದಿ.

ಆದರೆ, ಕಂಪ್ಯೂಟರ್ ಸರ್ವಿಸ್ ಸೆಂಟರಿಗೆ ಹೋಗದೆ ಕೆಲವೊಂದನ್ನು ನಾವೇ ಹೆಚ್ಚು ಶ್ರಮವಿಲ್ಲದೆ ಪ್ರಯತ್ನಿಸಬಹುದು ಎಂಬುದು ಗೊತ್ತೇ? ಈ ಸರಳ, ಉಪಯುಕ್ತ ಸಲಹೆಗಳು ನಿಮಗೂ ಇಷ್ಟವಾಗಬಹುದು. ಮಾಡಿ ನೋಡಿ.

ಹಾರ್ಡ್ ಡಿಸ್ಕ್ ಡೀಫ್ರ್ಯಾಗ್ಮೆಂಟ್: ನಿಮ್ಮ ಕಂಪ್ಯೂಟರ್‌ನಲ್ಲಿ ವಿಂಡೋಸ್ (ಸ್ಟಾರ್ಟ್) ಬಟನ್ ಒತ್ತಿದ ಬಳಿಕ ಪ್ರೋಗ್ರಾಮ್ಸ್‌ನಲ್ಲಿ, ಆ್ಯಕ್ಸಸರೀಸ್ ಎಂಬಲ್ಲಿ, ಸಿಸ್ಟಂ ಟೂಲ್ಸ್ ಎಂಬ ಫೋಲ್ಡರ್ ಇರುತ್ತದೆ. ಅದರಲ್ಲಿರುವ ಡಿಸ್ಕ್ ಡೀಫ್ರ್ಯಾಗ್ಮೆಂಟರ್ ಎಂಬುದನ್ನು ಆಯ್ಕೆ ಮಾಡಿದರೆ, ಯಾವ ಡ್ರೈವ್ (ಸಿ, ಡಿ, ಇ, ಎಫ್ ಇತ್ಯಾದಿ) ಅನ್ನು ಆಯ್ಕೆ ಮಾಡಿಕೊಂಡು, ಚದುರಿಹೋದ ಸಿಸ್ಟಂ ಫೈಲ್‌ಗಳನ್ನು ವ್ಯವಸ್ಥಿತವಾಗಿರಿಸಿದರೆ, ವೇಗ ವರ್ಧಿಸುತ್ತದೆ.

ಸ್ಟಾರ್ಟ್-ಅಪ್‌ನಲ್ಲಿ ಕಡಿಮೆ ಪ್ರೋಗ್ರಾಂ ಇರಲಿ: ಕಂಪ್ಯೂಟರ್ ಪ್ರಾರಂಭಗೊಳ್ಳುವಾಗ ಆರಂಭವಾಗುವ ಪ್ರೋಗ್ರಾಂಗಳು ನಿಮ್ಮ ಕಂಪ್ಯೂಟರ್ ನಿಧಾನ ಬೂಟ್ ಆಗಲು ಕಾರಣವಾಗಬಹುದು. Start > Start Up ಫೋಲ್ಡರ್‌ನಲ್ಲಿರಬಹುದಾದ ಈ ಪ್ರೋಗ್ರಾಂಗಳನ್ನು ಕನಿಷ್ಠ ಸಂಖ್ಯೆಯಲ್ಲಿಟ್ಟುಕೊಳ್ಳಿ. ಅಗತ್ಯವಿಲ್ಲದಿರುವುದನ್ನು ಡಿಸೇಬಲ್ ಮಾಡಿಬಿಡಿ. ಬೇಕಾಗಿರುವುದನ್ನು ಬೇಕಾದಾಗ ಮಾತ್ರ ತೆರೆಯಬಹುದು,

ತಂತ್ರಾಂಶ ಅಪ್‌ಡೇಟ್ ಮಾಡಿ: ಕಂಪನಿಯೇ ಆಗಾಗ್ಗೆ ರಿಲೀಸ್ ಮಾಡುವ ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್ ಅಪ್‌ಡೇಟ್ ಮಾಡಿಕೊಳ್ಳುತ್ತಾ ಇರುವುದರಿಂದ ಪಿಸಿಯನ್ನು ಸುರಕ್ಷಿತವಾಗಿರಿಸಿಕೊಳ್ಳಬಹುದು ಮತ್ತು ವೇಗವಾಗಿಯೂ ಕಾರ್ಯನಿರ್ವಹಿಸುವಂತೆ ಮಾಡಬಹುದು. ಇದರಿಂದ ಪಿಸಿಯ ಕಾರ್ಯಕ್ಷಮತೆಯೂ ಹೆಚ್ಚುತ್ತದೆ.

ಅನಗತ್ಯ ಟೂಲ್‌ಬಾರ್‌ಗಳು ಬೇಡ: ಯಾವುದೇ ಹೊಸ ತಂತ್ರಾಂಶ ಅಳವಡಿಸಿಕೊಳ್ಳುವಾಗ ವಿಭಿನ್ನ ಟೂಲ್‌ಬಾರ್‌ಗಳನ್ನು ಇನ್‌ಸ್ಟಾಲ್ ಮಾಡಿಕೊಳ್ಳುವಂತೆ ಪಾಪ್-ಅಪ್ ಸೂಚನೆಗಳು ಬರುತ್ತವೆ. ಏನೆಂದು ನೋಡದೆ ಎಲ್ಲದಕ್ಕೂ ‘ಓಕೆ’ ಎಂದು ಕ್ಲಿಕ್ ಮಾಡುತ್ತಾ ಹೋದರೆ, ಅನಗತ್ಯ ತಂತ್ರಾಂಶಗಳು ನಿಮಗೆ ತಿಳಿಯದೆಯೇ ಇನ್‌ಸ್ಟಾಲ್ ಆಗಿ, ಕಂಪ್ಯೂಟರನ್ನು ಸ್ಲೋ ಮಾಡಬಹುದು. ಹಾಗಾಗಿ ಅವನ್ನು ಗಮನವಿಟ್ಟು ಓದಿಕೊಳ್ಳಬೇಕು.

ಡೆಸ್ಕ್‌ಟಾಪ್ ಕ್ಲೀನ್ ಆಗಿರಲಿ: ಹೆಚ್ಚಿನವರು ಎಲ್ಲವನ್ನೂ ಡೆಸ್ಕ್‌ಟಾಪ್‌ನಲ್ಲೇ ಇರಿಸಿಕೊಳ್ಳುವ ಅಭ್ಯಾಸ ಹೊಂದಿರುತ್ತಾರೆ. ಇದನ್ನು ತಪ್ಪಿಸಬೇಕು ಹಾಗೂ ಸಿ ಡ್ರೈವ್‌ನಲ್ಲಿರುವ “ಮೈ ಡಾಕ್ಯುಮೆಂಟ್ಸ್” ವಿಭಾಗದಲ್ಲಿರುವ ಎಲ್ಲ ಐಟಂಗಳನ್ನೂ (ಉದಾ: ಚಿತ್ರಗಳು, ಆಡಿಯೋ, ವೀಡಿಯೋ ಫೈಲ್‌ಗಳು ಇತ್ಯಾಗಿ) ಬೇರೆ ಡ್ರೈವ್‌ಗೆ ವರ್ಗಾಯಿಸಬೇಕು. ಸಿ ಡ್ರೈವ್ ಸಾಧ್ಯಲಿದ್ದಷ್ಟೂ ಖಾಲಿ ಇರಿಸಿಕೊಂಡರೆ ಸಿಸ್ಟಂ ಸ್ಲೋ ಆಗುವುದನ್ನು ಸ್ವಲ್ಪ ಮಟ್ಟಿಗೆ ತಡೆಯಬಹುದು.

ಕುಕೀಗಳು ಮತ್ತು ಟೆಂಪರರಿ ಫೈಲ್‌ಗಳನ್ನು ನಿವಾರಿಸಿ: ಬ್ರೌಸರ್‌ನಲ್ಲಿ ನಿಯಮಿತವಾಗಿ ಕುಕೀಗಳು ಹಾಗೂ ಟೆಂಪರರಿ ಫೈಲ್‌ಗಳನ್ನು (cache) ಡಿಲೀಟ್ ಮಾಡುತ್ತಿರಬೇಕು. (ಕ್ರೋಮ್ ಮತ್ತು ಫೈರ್‌ಫಾಕ್ಸ್‌ನಲ್ಲಿ ಶಿಫ್ಟ್+ಕಂಟ್ರೋಲ್+ಡಿಲೀಟ್ ಬಟನ್ ಒತ್ತಿ). ಇಲ್ಲವಾದಲ್ಲಿ, ಈ ಕೆಲಸ ಸುಲಭವಾಗಿಸುವ CCleaner ಎಂಬ ಉಚಿತ ತಂತ್ರಾಂಶ ಬಳಸಿ.

ಹಾರ್ಡ್ ಡಿಸ್ಕ್ ಕ್ಲೀನ್ ಮಾಡಿ: ಹಾರ್ಡ್ ಡಿಸ್ಕ್‌ನಲ್ಲಿ ಎಲ್ಲ ರೀತಿಯ ಜಂಕ್ ಫೈಲ್‌ಗಳೂ ಇರುತ್ತವೆ. ಕಣ್ಣಿಗೆ ಕಾಣಿಸುವ ಅನಗತ್ಯ ಫೈಲ್‌ಗಳನ್ನು ನೀವೇ ಡಿಲೀಟ್ ಮಾಡಿ. ಇಲ್ಲಿ ಸ್ಥಳಾವಕಾಶ ಹೆಚ್ಚು ಮಾಡಿಸುವ ನಿಟ್ಟಿನಲ್ಲಿ, ಪ್ರೋಗ್ರಾಮ್ಸ್ > ಆ್ಯಕ್ಸಸರೀಸ್ > ಸಿಸ್ಟಂ ಟೂಲ್ಸ್‌ನಲ್ಲಿರುವ ಡಿಸ್ಕ್ ಕ್ಲೀನಪ್ ಎಂಬ ತಂತ್ರಾಂಶವನ್ನು ತಿಂಗಳು-ಎರಡು ತಿಂಗಳಿಗೊಮ್ಮೆ ರನ್ ಮಾಡುತ್ತಾ ಇರಿ. ನಿಮಗೆ ತಿಳಿಯದ ಫೈಲುಗಳನ್ನು ಅದು ವ್ಯವಸ್ಥಿತವಾಗಿರಿಸುತ್ತದೆ.

ಅನಗತ್ಯ ಪ್ರೋಗ್ರಾಂಗಳನ್ನು ತೆಗೆದುಬಿಡಿ: ನಿಮ್ಮ ಪಿಸಿಯಲ್ಲಿರುವ ಎಲ್ಲ ಪ್ರೋಗ್ರಾಂಗಳೂ ಉಪಯೋಗಕ್ಕೆ ಬರಲಾರವು. ಬೇಡದೇ ಇರುವುದನ್ನು ನಿರ್ದಾಕ್ಷಿಣ್ಯವಾಗಿ ಅನ್‌ಇನ್‌ಸ್ಟಾಲ್ ಮಾಡಿಬಿಡಿ. ಇನ್‌ಸ್ಟಾಲ್ ಮಾಡಿಕೊಳ್ಳುವಾಗಲೇ, ಅದರ ಅಗತ್ಯ ಇದೆಯೇ ಎಂದು ಎರಡೆರಡು ಬಾರಿ ಯೋಚಿಸಿ. ವಿಶ್ವಾಸಾರ್ಹವಲ್ಲದ ಕಡೆಯಿಂದ ತಂತ್ರಾಂಶ ಸ್ಥಾಪಿಸಿಕೊಂಡರೆ, ಅದರಲ್ಲಿ ವೈರಸ್/ಮಾಲ್‌ವೇರ್ ಇರುವ ಸಾಧ್ಯತೆಗಳಿರುವುದರಿಂದ, ಎಚ್ಚರ ವಹಿಸಿ.

ಶಂಕಾಸ್ಪದ ಲಿಂಕ್/ವೆಬ್ ತಾಣಗಳ ಬಗ್ಗೆ ಎಚ್ಚರ: ವೈರಸ್ ಸಹಿತ ಮಾಲ್‌ವೇರ್‌ಗಳು ನಿಮ್ಮ ಕಂಪ್ಯೂಟರನ್ನು ನಿಧಾನವಾಗಿಸುತ್ತವಷ್ಟೇ ಅಲ್ಲದೆ, ಹಾನಿಯನ್ನೂ ಉಂಟು ಮಾಡುತ್ತವೆ. ಹೀಗಾಗಿ ಶಂಕಾಸ್ಪದ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ ಮತ್ತು ಅಂತಹ ವೆಬ್ ತಾಣಗಳಿಗೆ ಹೋದರೆ ಯಾವುದೇ ಲಿಂಕ್‌ಗಳನ್ನೂ ಕ್ಲಿಕ್ ಮಾಡಬಾರದು. ವಾರಕ್ಕೊಮ್ಮೆ ಕಂಪ್ಯೂಟರನ್ನು ಒಳ್ಳೆಯ ಆ್ಯಂಟಿವೈರಸ್ ಮೂಲಕ ಸ್ಕ್ಯಾನ್ ಮಾಡಿಸಿಕೊಳ್ಳಬೇಕು. ಇದರಿಂದಲೂ ಕಂಪ್ಯೂಟರ್ ನಿಧಾನವಾಗುವುದನ್ನು ತಡೆಯಬಹುದು.

ಆಪರೇಟಿಂಗ್ ಸಿಸ್ಟಂ ಪುನಃಸ್ಥಾಪನೆ: ಏನೇ ಮಾಡಿದರೂ ಕಂಪ್ಯೂಟರ್ ವೇಗವಾಗಿ ಕೆಲಸ ಮಾಡುತ್ತಿಲ್ಲ ಎಂದಾದಲ್ಲಿ, ಒಳ್ಳೆಯ ನುರಿತವರ ಸಲಹೆ ಪಡೆದು ಆಪರೇಟಿಂಗ್ ಸಿಸ್ಟಂ ಅನ್ನು ರಿಇನ್‌ಸ್ಟಾಲ್ ಮಾಡಿಕೊಳ್ಳಬೇಕು (ಫಾರ್ಮ್ಯಾಟ್ ಮಾಡುವುದು). ಇದು ಸಂಕೀರ್ಣವಾಗಿದ್ದು, ಸ್ವಲ್ಪ ಹೆಚ್ಚು ಸಮಯ ಬೇಕಾಗುತ್ತದೆ. ಕಂಪ್ಯೂಟರ್‌ನ ತಂತ್ರಾಂಶವು ಹೊಚ್ಚ ಹೊಸದರಂತೆ ಆಗುತ್ತದೆ. ಪರಿಣಿತರ ಸಲಹೆ ಪಡೆಯುವುದು ಕಡ್ಡಾಯ.

ಟೆಕ್ ಟಾನಿಕ್
ನಿಮ್ಮ ಪಾಸ್‌ವರ್ಡ್ ಕದ್ದಿದ್ದಾರೆಯೇ?

ಕಳೆದ ವಾರ ಸುದ್ದಿ ಮಾಡಿದ್ದು, ವಿಶ್ವಾದ್ಯಂತ 50 ಲಕ್ಷದಷ್ಟು ಜಿಮೇಲ್ ಬಳಕೆದಾರರ ಪಾಸ್‌ವರ್ಡ್ ಮಾಹಿತಿಯು ಸೋರಿ ಹೋಗಿದೆ ಅಂತ. ಜನರೆಲ್ಲಾ ಬೆಚ್ಚಿ ಬಿದ್ದರು. ಕೆಲವರೆಲ್ಲ ಸುದ್ದಿ ತಿಳಿದಾಕ್ಷಣ ತಮ್ಮ ಇಮೇಲ್ ಪಾಸ್‌ವರ್ಡ್ ಬದಲಾಯಿಸಿಕೊಂಡರು. ಭದ್ರತೆಗಾಗಿ ನಮ್ಮ ಪಾಸ್‌ವರ್ಡ್ ಆಗಾಗ್ಗೆ ಬದಲಾಯಿಸಿಕೊಳ್ಳುತ್ತಿರುವುದು ಸೂಕ್ತವೇ ಆಗಿದ್ದರೂ, ಇಲ್ಲೊಂದು ವೆಬ್ ತಾಣವಿದೆ. https://isleaked.com/en ಎಂಬಲ್ಲಿ ನಿಮ್ಮ ಇಮೇಲ್ ಐಡಿ ದಾಖಲಿಸಿ, ಪಾಸ್‌ವರ್ಡ್ ಸೋರಿ ಹೋಗಿದೆಯೇ ಎಂದು ತಿಳಿದುಕೊಳ್ಳಬಹುದು. ಇದು ಉಚಿತ ಸೇವೆ. ಸ್ಪ್ಯಾಮ್ ಮೇಲ್ ಕಳುಹಿಸುತ್ತಾರೆ ಎಂಬ ಆತಂಕವಿದ್ದರೆ, ನಿಮ್ಮ ಇಮೇಲ್ ಐಡಿಯಲ್ಲಿರುವ 2-3 ಅಕ್ಷರಗಳ ಬದಲು ಅಷ್ಟೇ ಸಂಖ್ಯೆಯ * ಚಿಹ್ನೆ ಹಾಕಿಯೂ ನೋಡಬಹುದು. ಉದಾಹರಣೆಗೆ, abcdefg@gmail.com ಇದ್ದರೆ, ab***fg@gmail.com ಅಂತ.

ಇಂಟರ್ನೆಟ್ ಇಲ್ಲದೆ ಗೂಗಲ್ ಮೇಲ್ ಉಪಯೋಗಿಸುವುದು

ವಿಜಯ ಕರ್ನಾಟಕ ಅಂಕಣ ಮಾಹಿತಿ@ತಂತ್ರಜ್ಞಾನ 91- ಸೆಪ್ಟೆಂಬರ್ 1, 2014
Avinash Column-1ಎಲ್ಲಾದರೂ ದೂರ ಅಂದರೆ ಇಂಟರ್ನೆಟ್ ಸಂಪರ್ಕವಿಲ್ಲದ ರಿಮೋಟ್ ಪ್ರದೇಶಕ್ಕೆ ಹೋಗಿರುತ್ತೀರಿ ಅಥವಾ ವಿಮಾನದಲ್ಲೋ, ರೈಲಿನಲ್ಲೋ ಪ್ರಯಾಣಿಸುತ್ತಿರುವಾಗ, ಪ್ರಯಾಣದ ಸಮಯವನ್ನು ಸದುಪಯೋಗ ಮಾಡಿಕೊಳ್ಳಬೇಕೆಂಬ ಕಾರಣಕ್ಕೆ, ಲ್ಯಾಪ್‌ಟಾಪ್ ಮೂಲಕ ಜಿಮೇಲ್‌ನಲ್ಲಿರುವ ಇಮೇಲ್‌ಗಳನ್ನು ಚೆಕ್ ಮಾಡಬೇಕು, ಅದರಲ್ಲಿನ ವಿವರಗಳನ್ನು ಓದಬೇಕು ಎಂದು ಅನ್ನಿಸುತ್ತಿದೆ. ಆದರೆ ಇಂಟರ್ನೆಟ್ ಇಲ್ಲದ ಚಿಂತೆ. ಹೀಗಿರುವಾಗ ಏನು ಮಾಡಬಹುದು? ಇಂಥವರಿಗಾಗಿಯೇ ಗೂಗಲ್‌ನ ಜಿಮೇಲ್ ತಂಡವು ಒಂದು ಆಯ್ಕೆಯನ್ನು ಒದಗಿಸಿದೆ. ಅದೇ ಆಫ್‌ಲೈನ್ ಜಿಮೇಲ್.

ಇದರ ಮೂಲಕ, ಇಂಟರ್ನೆಟ್ ಸಂಪರ್ಕವಿಲ್ಲದಿದ್ದರೂ ಕೂಡ ಈಗಾಗಲೇ ಇರುವ ಮೇಲ್‌ಗಳನ್ನು ಓದಬಹುದು ಮತ್ತು ಹೊಸದಾಗಿ ಮೇಲ್ ಬರೆಯಬೇಕಿದ್ದರೆ ಕಂಪೋಸ್ ಮಾಡಬಹುದು. ಇಂಟರ್ನೆಟ್ ಸಂಪರ್ಕ ನಿಧಾನವಾಗಿದ್ದರೂ ಕೂಡ ಆಫ್‌ಲೈನ್ ಜಿಮೇಲ್ ಉಪಯೋಗಕ್ಕೆ ಬರುತ್ತದೆ. ಮತ್ತೆ ಸಂಪರ್ಕ ದೊರೆತಾಗ, ನೀವು ಕಳುಹಿಸಿದ ಮೇಲ್‌ಗಳು ರವಾನೆಯಾಗುತ್ತವೆ.

ಇಂಟರ್ನೆಟ್ ಸಂಪರ್ಕವಿದ್ದರೆ ಆನ್‌ಲೈನ್ ಅಂತ ಅರ್ಥ. ಆಫ್‌ಲೈನ್‌ನಲ್ಲಿ ಇಮೇಲ್‌ಗಳನ್ನು ನೋಡಲು ಈಗಾಗಲೇ ಸಾಕಷ್ಟು ಥರ್ಡ್ ಪಾರ್ಟಿ ತಂತ್ರಾಂಶಗಳಿವೆ. ಉದಾಹರಣೆಗೆ, ಔಟ್‌ಲುಕ್, ಥಂಡರ್‌ಬರ್ಡ್ ಇತ್ಯಾದಿ ಇಮೇಲ್ ಪ್ರೋಗ್ರಾಂಗಳನ್ನು ಇನ್‌ಸ್ಟಾಲ್ ಮಾಡಿಕೊಳ್ಳಬೇಕಾಗುತ್ತದೆ. ಅದಿಲ್ಲದೆಯೇ, ಬರೇ ಒಂದು ಬ್ರೌಸರ್ ಪ್ಲಗ್-ಇನ್ (ಅಂದರೆ ಕಿರು ತಂತ್ರಾಂಶ) ಬಳಸಿದರೆ ಆಫ್‌ಲೈನ್ ಜಿಮೇಲ್ ಉಪಯೋಗಿಸಬಹುದಾಗಿದೆ.

ಅದಕ್ಕೆ ನೀವು ಮಾಡಬೇಕಾಗಿರುವುದಿಷ್ಟೆ. ಇಂಟರ್ನೆಟ್ ಸಂಪರ್ಕವಿರಲಿ. ಬಳಿಕ ಗೂಗಲ್ ಕ್ರೋಮ್ ಬ್ರೌಸರ್ ತೆರೆಯಿರಿ. ಅದರಲ್ಲಿ ಕೆಳ ಭಾಗದಲ್ಲಿ ಬಲ ಮೂಲೆಯಲ್ಲಿ ವೆಬ್ ಸ್ಟೋರ್ ಎಂದು ಬರೆದಿರುವುದನ್ನು ಕ್ಲಿಕ್ ಮಾಡಿ. ಆಗ ನಿಮಗೆ ವೈವಿಧ್ಯಮಯ ಆ್ಯಪ್‌ಗಳಿರುವ ಪುಟ ಗೋಚರಿಸುತ್ತದೆ. ಅಲ್ಲಿರುವ ಸರ್ಚ್ ಬಾರ್‌ನಲ್ಲಿ Gmail Offline ಅಂತ ಸರ್ಚ್ ಮಾಡಿ. ಅಲ್ಲಿ ನಿಮಗೆ ಅದರ ಆ್ಯಪ್ ದೊರೆಯುತ್ತದೆ. ನಿಮ್ಮ ಬ್ರೌಸರ್‌ಗೆ ಅಳವಡಿಸಿಕೊಳ್ಳಲು ಇರುವ ಬಟನ್ ಕ್ಲಿಕ್ ಮಾಡಿ. ಆ್ಯಪ್ ಸಿಗದೇ ಇದ್ದರೆ, http://bit.ly/GmailOfflline ಎಂಬಲ್ಲಿ ಹೋಗಿ. ಇನ್‌ಸ್ಟಾಲ್ ಮಾಡಿಕೊಳ್ಳಿ. ನಂತರ ಕ್ರೋಮ್ ಬ್ರೌಸರ್ ಓಪನ್ ಮಾಡಿ. ಒಂದೋ ಎಡ ಮೇಲ್ಭಾಗದ ಮೂಲೆಯಲ್ಲಿರುವ Apps ಎಂಬ ಬಣ್ಣಬಣ್ಣದ ಚೌಕಗಳಿರುವ ಬಟನ್ ಕ್ಲಿಕ್ ಮಾಡಿ ಅಥವಾ ಅಡ್ರೆಸ್ ಬಾರ್‌ನಲ್ಲಿ chrome://apps/ ಎಂಬ ಯುಆರ್‌ಎಲ್ ಟೈಪ್ ಮಾಡಿ ಎಂಟರ್ ಕೊಡಿ. ಆಗ ನಿಮಗೆ ಕ್ರೋಮ್ ಬ್ರೌಸರ್‌ನಲ್ಲಿ ಇನ್‌ಸ್ಟಾಲ್ ಆಗಿರುವ ಎಲ್ಲ ಆ್ಯಪ್‌ಗಳು, ಪ್ಲಗಿನ್‌ಗಳ ಬಟನ್‌ಗಳು ಗೋಚರಿಸುತ್ತವೆ. ಅಲ್ಲೇ Gmail Offline ಅಂತ ಇರೋದನ್ನು ಕ್ಲಿಕ್ ಮಾಡಿ. ಲಾಗಿನ್ ಆಗಿ. ನಿಮ್ಮ ಹಳೆಯ ಮೇಲ್‌ಗಳೆಲ್ಲವೂ ಒಂದು ಬಾರಿ ನಿಮ್ಮ ಕಂಪ್ಯೂಟರಿಗೆ ಡೌನ್‌ಲೋಡ್ ಆಗುತ್ತವೆ. ಪದೇ ಪದೇ ಹಳೆಯದೆಲ್ಲವೂ ಡೌನ್‌ಲೋಡ್ ಆಗುವುದಿಲ್ಲ.

ಇಷ್ಟಾದರೆ ಆಯಿತು. ಇಂಟರ್ನೆಟ್ ಸಂಪರ್ಕವಿಲ್ಲದಿದ್ದರೂ ಕೂಡ ನೀವು ಆಫ್‌ಲೈನ್ ಜಿಮೇಲ್ ಓಪನ್ ಮಾಡಿಕೊಂಡು, ಬೇಕಾದ ಕೆಲಸಗಳನ್ನು ಮಾಡಬಹುದು. ಮತ್ತೆ ಆನ್‌ಲೈನ್ ಆದಾಗ, ಅಂದರೆ ಇಂಟರ್ನೆಟ್ ಸಂಪರ್ಕ ದೊರೆತಾಗ, ಈ ಫೋಲ್ಡರ್‌ನಲ್ಲಿರುವ ಎಲ್ಲ ಮೇಲ್‌ಗಳೂ ಸಿಂಕ್ರನೈಸ್ ಆಗುತ್ತವೆ. ಆಫ್‌ಲೈನ್ ಜಿಮೇಲ್‌ನಲ್ಲಿ, ಒಂದು ವಾರ ಅಥವಾ ಒಂದು ತಿಂಗಳ ಮೇಲ್‌ಗಳು ಮಾತ್ರ ಲಭ್ಯವಾಗಲಿ ಅಂತ ಆಯ್ಕೆ ಮಾಡಿಕೊಳ್ಳಲೂಬಹುದು. ಸೆಟ್ಟಿಂಗ್ಸ್ ಬಟನ್ ಕ್ಲಿಕ್ ಮಾಡಿದರೆ, Download mails from past week, 2 weeks, month ಅನ್ನುವ ಆಯ್ಕೆಗಳಿವೆ. ಈ ರೀತಿ ಮಾಡುವುದರಿಂದ, ಡೇಟಾ ವೆಚ್ಚವನ್ನೂ, ಕಂಪ್ಯೂಟರಿನಲ್ಲಿರುವ ಮೆಮೊರಿ ಸ್ಪೇಸ್ ಅನ್ನೂ ಉಳಿಸಬಹುದಾಗಿದೆ.

ಆದರೆ ನೆನಪಿಟ್ಟುಕೊಳ್ಳಲೇಬೇಕಾದ ವಿಷಯ ಎಂದರೆ, ನಿಮ್ಮ ಸ್ವಂತ ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್ ಆಗಿದ್ದರೆ ಮಾತ್ರ ಆಫ್‌ಲೈನ್ ಜಿಮೇಲ್ ಬಳಸಿ. ಬೇರೆಯವರ ಕಂಪ್ಯೂಟರ್/ಲ್ಯಾಪ್‌ಟಾಪಲ್ಲಿ ಬಳಸಬೇಡಿ. ಯಾಕೆಂದರೆ, ಈ ಸಂದೇಶಗಳು ಡೌನ್‌ಲೋಡ್ ಆಗುವುದು ಆಯಾ ಕಂಪ್ಯೂಟರುಗಳಿಗೆ. ಹೀಗಾಗಿ, ಬೇರೆಯವರು ಈ ಕಂಪ್ಯೂಟರ್ ಬಳಸುತ್ತಾರೆಂದಾದರೆ, ಅವರು ನಿಮ್ಮ ಇಮೇಲ್ ಸಂದೇಶಗಳನ್ನು ಓದುವ ಸಾಧ್ಯತೆ ಇರುತ್ತದೆ. ಹಾಗಾಗದಂತೆ ನೋಡಿಕೊಳ್ಳಿ.

ಟೆಕ್ ಟಾನಿಕ್
ಕ್ಲೋಸ್ ಮಾಡಿದ ಬ್ರೌಸರ್ ತೆರೆಯಲು

ಹೆಚ್ಚಿನವರು ಇಂಟರ್ನೆಟ್ ಜಾಲಾಡಲು ವೇಗವಾಗಿ ಕಾರ್ಯಾಚರಿಸುತ್ತದೆ ಎಂಬ ಕಾರಣಕ್ಕೆ ಗೂಗಲ್‌ನ ಕ್ರೋಮ್ ಅಥವಾ ಫೈರ್‌ಫಾಕ್ಸ್ ಬ್ರೌಸರನ್ನು ಇನ್‌ಸ್ಟಾಲ್ ಮಾಡಿಕೊಂಡು ಬಳಸುತ್ತಾರೆ. ಏಕ ಕಾಲಕ್ಕೆ ಹಲವು ವೆಬ್ ಪುಟಗಳನ್ನು ತೆರೆದಿಡಲು ಇಲ್ಲಿರುವ ಟ್ಯಾಬ್‌ಗಳು ನೆರವಾಗುತ್ತವೆ. ಆದರೆ, ಆಕಸ್ಮಿಕವಾಗಿ ಒಂದು ಟ್ಯಾಬ್ ಅನ್ನು ಕ್ಲೋಸ್ ಮಾಡಿದರೆ, ಅದರಲ್ಲಿ ನೋಡಲು ಏನೋ ಬಾಕಿಯಾಗಿದೆ ಎಂದುಕೊಂಡರೆ ಆ ವೆಬ್ ಪುಟವನ್ನು ಮರಳಿ ನೋಡುವುದು ಹೇಗೆ? ಕಂಟ್ರೋಲ್ ಶಿಫ್ಟ್ ಟಿ (Ctrl+Shift+t) ಅಂತ ಒತ್ತಿದರೆ, ಕೊನೆಯದಾಗಿ ಕ್ಲೋಸ್ ಮಾಡಿದ ಟ್ಯಾಬ್‌ನಲ್ಲಿದ್ದ ವೆಬ್ ಪುಟ ಪುನಃ ತೆರೆದುಕೊಳ್ಳುತ್ತದೆ. ಮತ್ತೊಂದು ಸಲ ಕಂಟ್ರೋಲ್ ಶಿಫ್ಟ್ ಟಿ ಒತ್ತಿದರೆ, ಅದಕ್ಕೂ ಹಿಂದೆ ಕ್ಲೋಸ್ ಮಾಡಿದ್ದ ವೆಬ್ ಪುಟ ಓಪನ್ ಆಗುತ್ತದೆ. ಈ ಕಮಾಂಡ್ ಉಪಯೋಗಿಸದಿದ್ದರೆ, ಹಿಸ್ಟರಿ ಎಂಬಲ್ಲಿ ಹೋಗಿ, ಈಗಷ್ಟೇ ಕ್ಲೋಸ್ ಮಾಡಿದ ಟ್ಯಾಬ್ ಯಾವುದು ಅಂತೆಲ್ಲಾ ಹುಡುಕಬಹುದು. ಆದರೆ ಇದಕ್ಕೆ ತಗುಲುವ ಸಮಯವು ಈ ಶಾರ್ಟ್‌ಕಟ್ ಮೂಲಕ ಉಳಿತಾಯವಾಗುತ್ತದೆ.

ಒಂದು ಫೋನ್‌ನಿಂದ ಮತ್ತೊಂದಕ್ಕೆ ಕಾಂಟಾಕ್ಟ್ಸ್ ವರ್ಗಾಯಿಸಲು

ವಿಜಯ ಕರ್ನಾಟಕ ಮಾಹಿತಿ@ತಂತ್ರಜ್ಞಾನ ಅಂಕಣ -90 ಆಗಸ್ಟ್ 25, 2014
Avinash Column-1ಸ್ಮಾರ್ಟ್‌ಫೋನ್ ಬದಲಾಯಿಸುವಾಗ ಹಳೆಯ ಫೋನ್‌ನಲ್ಲಿರುವ ಕಾಂಟಾಕ್ಟ್‌ಗಳನ್ನು (ಸ್ನೇಹಿತರ ಸಂಪರ್ಕ ಸಂಖ್ಯೆ) ಹೊಸ ಫೋನ್‌ಗೆ ವರ್ಗಾಯಿಸುವುದೇ ಸಮಸ್ಯೆ. ಆದರೆ, ಇಂಟರ್ನೆಟ್ ಸಂಪರ್ಕ ಇದ್ದರೆ ಇದು ತೀರಾ ಸುಲಭ ಎಂಬುದು ಹೆಚ್ಚಿನವರಿಗೆ ತಿಳಿದಿರಲಾರದು. ಹೇಗೆಂಬುದು ತಿಳಿಯದವರಿಗಾಗಿ ಮಾಹಿತಿ ಇಲ್ಲಿದೆ.

ಈ ಅಂಕಣದಲ್ಲಿ ಆಂಡ್ರಾಯ್ಡ್ ಕಾರ್ಯಾಚರಣಾ ವ್ಯವಸ್ಥೆಯ ಫೋನ್‌ಗಳು ಹಾಗೂ ಜಿಮೇಲ್ ಐಡಿಯನ್ನು ಉದಾಹರಣೆಯಾಗಿ ತೆಗೆದುಕೊಳ್ಳಲಾಗಿದೆ. ಐಫೋನ್, ವಿಂಡೋಸ್ ಫೋನ್, ಬ್ಲ್ಯಾಕ್‌ಬೆರಿ ಫೋನ್‌ಗಳಿಗೂ ಇದು ಒಂದಿಷ್ಟು ಸಣ್ಣಪುಟ್ಟ ಬದಲಾವಣೆಗಳೊಂದಿಗೆ ಅನ್ವಯವಾಗಬಹುದು.

ಗೂಗಲ್ ಸರ್ವರ್‌ನಲ್ಲಿ: ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲಿ ಗಮನಿಸಬೇಕಾದ ಸಂಗತಿಯೆಂದರೆ, ಅದರಲ್ಲಿ ಗೂಗಲ್ ಐಡಿ (ಜಿಮೇಲ್) ಮೂಲಕ ಹೇಗೂ ಲಾಗಿನ್ ಆಗಬೇಕಾಗುತ್ತದೆ ಮತ್ತು ಎಲ್ಲ ಸಂಪರ್ಕಗಳೂ ಆನ್‌ಲೈನ್‌ನಲ್ಲಿ ಅಂದರೆ ಗೂಗಲ್ ಸರ್ವರ್‌ನಲ್ಲಿ ಬ್ಯಾಕಪ್ (ನಕಲು ಪ್ರತಿಗಳು) ಇರಿಸುವ ವ್ಯವಸ್ಥೆ ಇದೆ. ಈ ರೀತಿ ಆನ್‌ಲೈನ್‌ನಲ್ಲಿ ಮಾಹಿತಿಯನ್ನು ಕಾಯ್ದಿಡಲು, ಸೆಟ್ಟಿಂಗ್ಸ್ ಮೆನುವಿಗೆ ಹೋಗಿ, Backup & Restore ಎಂಬಲ್ಲಿ Back up My data ಕ್ಲಿಕ್ ಮಾಡಿ. ನಿಮ್ಮ ಸಂಪರ್ಕ ಸಂಖ್ಯೆಗಳಷ್ಟೇ ಅಲ್ಲದೆ, ಎಲ್ಲ ಆ್ಯಪ್‌ಗಳ ಬ್ಯಾಕಪ್ ಕೂಡ ಗೂಗಲ್ ಸರ್ವರ್‌ನಲ್ಲಿ ಉಳಿಯುತ್ತದೆ.

ಮೆಮೊರಿ ಕಾರ್ಡ್‌ನಲ್ಲಿ: ಸಂಪರ್ಕ ಸಂಖ್ಯೆಗಳನ್ನು ಸೇವ್ ಮಾಡಿಡುವ ಮತ್ತೊಂದು ವಿಧಾನವೆಂದರೆ, ಕಾಂಟ್ಯಾಕ್ಟ್ಸ್ ಆಯ್ಕೆ ಮಾಡಿಕೊಂಡು, ಅದರಲ್ಲಿನ Option ಮೆನು (ಹೊಸ ಫೋನ್‌ಗಳಲ್ಲಿ ಚುಕ್ಕಿಗಳನ್ನು [….] ತೋರಿಸಲಾಗುತ್ತದೆ) ಕ್ಲಿಕ್ ಮಾಡಿದ ಬಳಿಕ, Export/Import ಆಯ್ಕೆ ಇರುತ್ತದೆ. SD ಕಾರ್ಡ್‌ಗೆ Export ಮಾಡುವುದನ್ನು ಕ್ಲಿಕ್ ಮಾಡಿದಲ್ಲಿ, ನಿಮ್ಮ ಮೆಮೊರಿ ಕಾರ್ಡ್‌ನಲ್ಲಿ ಎಲ್ಲ ಸಂಪರ್ಕಗಳೂ ಉಳಿಕೆಯಾಗುತ್ತವೆ. ಹೊಸ ಫೋನ್ ಬಂದಾಗ, ಅದಕ್ಕೆ ಈ ಮೆಮೊರಿ ಕಾರ್ಡ್ ಸೇರಿಸಿ, ಕಾಂಟ್ಯಾಕ್ಟ್ಸ್‌ನ Option ಮೆನುವಿಗೆ ಹೋಗಿ, Import from SD Card ಅಂತ ಮಾಡಿದರೆ, ಎಲ್ಲ ಸಂಪರ್ಕ ಸಂಖ್ಯೆಗಳೂ ಹೊಸ ಫೋನ್‌ನಲ್ಲಿ ಸೇವ್ ಆಗುತ್ತವೆ.

ಕಂಪ್ಯೂಟರ್ ಮೂಲಕ: ಆಂಡ್ರಾಯ್ಡ್ ಅಲ್ಲದೆ ಬೇರೆ ಫೋನ್ ಅಂದರೆ ನೋಕಿಯಾ, ವಿಂಡೋಸ್ ಫೋನ್, ಆ್ಯಪಲ್ ಫೋನ್ ಬಳಸುತ್ತಿರುವರು ಕೂಡ ತಮ್ಮ ಸಂಪರ್ಕ ಸಂಖ್ಯೆಗಳನ್ನು ಆಂಡ್ರಾಯ್ಡ್‌ಗೆ ವರ್ಗಾಯಿಸಬಹುದು. ಆಯಾ ಫೋನ್‌ಗಳಲ್ಲಿ ಜಿಮೇಲ್ ಬಳಸುತ್ತಿದ್ದರೆ ಸಂಪರ್ಕ ಸಂಖ್ಯೆಗಳನ್ನು ಅದಕ್ಕೆ ಸಿಂಕ್ (ಸಿಂಕ್ರನೈಜ್) ಮಾಡಿಕೊಳ್ಳುವ ಅವಕಾಶ ಇದೆ.

ಸಿಂಕ್ರನೈಜ್ ಆದಮೇಲೆ, ಕಂಪ್ಯೂಟರಿನಲ್ಲಿ ಜಿಮೇಲ್‌ಗೆ ಲಾಗಿನ್ ಆಗಿ. ಚಿತ್ರದಲ್ಲಿರುವಂತೆ, ಎಡ ಮೇಲ್ಭಾಗದಲ್ಲಿ Google ಲೋಗೋದ ಕೆಳಗೆ Gmail ಎಂಬುದನ್ನು ಕ್ಲಿಕ್ ಮಾಡಿದಾಗ, Contacts ಮತ್ತು Task ಎಂಬ ಆಯ್ಕೆಗಳು ಕಾಣಿಸುತ್ತವೆ. Contacts ಕ್ಲಿಕ್ ಮಾಡಿ. ಸ್ವಲ್ಪ ಬಲಭಾಗದಲ್ಲಿ ನೋಡಿದರೆ More ಎಂಬ ಆಯ್ಕೆ ಇರುತ್ತದೆ. ಅದನ್ನು ಕ್ಲಿಕ್ ಮಾಡಿದರೆ, import ಮಾಡುವ, export ಮಾಡುವ, ಒಂದೇ ರೀತಿಯ ಸಂಪರ್ಕಗಳನ್ನು ವಿಲೀನ ಮಾಡುವ ಆಯ್ಕೆಗಳಿರುತ್ತವೆ. ಇಲ್ಲಿಂದಲೇ ಎಲ್ಲ ಸಂಪರ್ಕಗಳನ್ನೂ ಎಡಿಟ್ ಕೂಡ ಮಾಡಬಹುದು.

ಎಕ್ಸೆಲ್ ರೂಪದಲ್ಲಿ ಅಂದರೆ .csv ಫಾರ್ಮ್ಯಾಟ್‌ನಲ್ಲಿ ನಿಮ್ಮ ಕಂಪ್ಯೂಟರಿಗೆ ಸಂಪರ್ಕಗಳನ್ನು Export ಮಾಡಿಕೊಳ್ಳಿ. ಸಂಪರ್ಕ ಸಂಖ್ಯೆಗಳನ್ನು google csv ಅಥವಾ outlook CSV ಇಲ್ಲವೇ vCard ರೂಪಗಳಿಗೆ (ಆಯಾ ಫೋನ್‌ಗಳು ಯಾವುವನ್ನು ಬೆಂಬಲಿಸುತ್ತವೆ ಎಂಬುದನ್ನು ನೋಡಿಕೊಂಡು) export ಮಾಡುವ ಆಯ್ಕೆ ಲಭ್ಯವಿರುತ್ತದೆ. ಯುಎಸ್‌ಬಿ ಕೇಬಲ್ ಮೂಲಕ ಕಂಪ್ಯೂಟರಿಗೆ ಮೊಬೈಲನ್ನು ಸಂಪರ್ಕಿಸಿ, ಅದರ ಮೆಮೊರಿ ಕಾರ್ಡ್‌ಗೆ ಈ ಫೈಲನ್ನು ವರ್ಗಾಯಿಸಿ. ನಂತರ ನಿಮ್ಮ ಮೊಬೈಲ್‌ನ ಕಾಂಟ್ಯಾಕ್ಟ್ಸ್ ವಿಭಾಗಕ್ಕೆ ಹೋಗಿ, options ನೋಡಿದರೆ, Import/Export ಎಂದಿರುವಲ್ಲಿ, Import from SD Card ಎಂದು ಸೆಲೆಕ್ಟ್ ಮಾಡಿದರೆ ಎಲ್ಲ ಸಂಪರ್ಕಗಳು ಈ ಫೋನ್‌ಗೆ ಕಾಪಿ ಆಗುತ್ತವೆ.

ಏನೋ ಸಮಸ್ಯೆ ಬಂದು ನಿಮ್ಮ ಫೋನನ್ನು ಪೂರ್ತಿಯಾಗಿ ರೀಸೆಟ್ (ಫ್ಯಾಕ್ಟರಿ ಡೇಟಾ ರೀಸೆಟ್) ಮಾಡಬೇಕಾಗಿ ಬರಬಹುದು. ಹಾಗಾದಾಗ, ಎಲ್ಲ ಮಾಹಿತಿಗಳೂ ಡಿಲೀಟ್ ಆಗಿಬಿಡುತ್ತವೆ. ರೀಸೆಟ್ ಮಾಡಿದ ಮೇಲೆ ಇಲ್ಲವೇ ಫೋನ್ ಕಳೆದು ಹೋದರೆ ಅಥವಾ ಹೊಸ ಫೋನ್ ಕೊಳ್ಳಬೇಕೆಂದಿದ್ದರೆ, ಪುನಃ ಅದೇ ಗೂಗಲ್ ಖಾತೆಗೆ ಲಾಗಿನ್ ಆದಾಗ, ಇಲ್ಲಿ ಎಲ್ಲ ಮಾಹಿತಿಯನ್ನು ಪುನಃ ಪಡೆಯುವ (ರೀಸ್ಟೋರ್ ಮಾಡುವ) ಆಯ್ಕೆ ಇರುತ್ತದೆ. ಹೊಸ ಫೋನ್‌ನಲ್ಲಿ ಲಾಗಿನ್ ಆದ ಮೇಲೆ, ಸೆಟ್ಟಿಂಗ್ಸ್‌ನಲ್ಲಿರುವ ಬ್ಯಾಕಪ್ ಮತ್ತು ರೀಸೆಟ್ ಎಂಬಲ್ಲಿಗೆ ಹೋಗಿ, “ರೀಸ್ಟೋರ್” ಬಟನ್ ಕ್ಲಿಕ್ ಮಾಡಿದರಾಯಿತು. ಎಲ್ಲ ಸಂಪರ್ಕಗಳೂ ಬಂದುಬಿಡುತ್ತವೆ.

ಟೆಕ್ ಟಾನಿಕ್
ಯೂಟ್ಯೂಬ್‌ನಿಂದ ಜಿಫ್ ಪರಿವರ್ತಿಸಿ

ಯೂಟ್ಯೂಬ್ ವೀಡಿಯೋಗಳನ್ನು ಹೆಚ್ಚಿನವರು ನೋಡುತ್ತೀರಿ. ಈ ವೀಡಿಯೋಗಳ ಕೆಲವು ತುಣುಕುಗಳನ್ನು ನಮ್ಮ ವೆಬ್‌ಸೈಟ್‌ಗಳಲ್ಲಿ ಅಥವಾ ಬ್ಲಾಗ್‌ಗಳಲ್ಲಿ ಅಳವಡಿಸಲು, ಕಡಿಮೆ ತೂಕವಿರುವ ಚಲಿಸುವ ಚಿತ್ರಗಳ ರೂಪಕ್ಕೆ ಅಂದರೆ .GIF (ಜಿಫ್) ಫಾರ್ಮ್ಯಾಟ್‌ಗೆ ಪರಿವರ್ತಿಸುವಂತಾದರೆ? ಇದನ್ನು ಮಾಡುವುದು ತೀರಾ ಸುಲಭ. ಯಾವುದೇ ಯೂಟ್ಯೂಬ್ ವೀಡಿಯೋ ಆಯ್ಕೆ ಮಾಡಿ. ಅದರ ಯುಆರ್‌ಎಲ್ (ವಿಳಾಸ)ದಲ್ಲಿ www. ನಂತರ ಹಾಗೂ youtube ಎಂದು ಆರಂಭವಾಗುವ ಮುನ್ನ gif ಅಂತ ಸೇರಿಸಿ, ಎಂಟರ್ ಕೊಡಿ. ಅಷ್ಟೆ. ವೀಡಿಯೋದ ಯಾವುದೇ ಭಾಗದಿಂದ ಆರಂಭವಾಗಿ ಗರಿಷ್ಠ 10 ಸೆಕೆಂಡುಗಳ ಜಿಫ್ ಚಿತ್ರವನ್ನು ಪಡೆಯಬಹುದು. ಇದಲ್ಲವಾದರೆ, https://gifyoutube.com/ ಎಂಬಲ್ಲಿ ಯೂಟ್ಯೂಬ್ ಯುಆರ್‌ಎಲ್ ಕಾಪಿ ಪೇಸ್ಟ್ ಮಾಡಿದರೆ ಜಿಫ್ ರೂಪದ ಚಿತ್ರ ದೊರೆಯುತ್ತದೆ.

ಕಂಪ್ಯೂಟರ್ ಬಳಸುವಾಗ ಕಣ್ಣುಗಳನ್ನು ರಕ್ಷಿಸಿಕೊಳ್ಳಿ

ವಿಜಯ ಕರ್ನಾಟಕದಲ್ಲಿ ಮಾಹಿತಿ@ ತಂತ್ರಜ್ಞಾನ ಅಂಕಣ 87: ಆಗಸ್ಟ್ 4, 2014

Avinash Column-1ಕಂಪ್ಯೂಟರ್‌ನಲ್ಲಿ ಕೆಲಸ ಮಾಡುವುದು ಈಗ ಅನಿವಾರ್ಯ ಎಂಬ ಮಟ್ಟಕ್ಕೆ ತಲುಪಿದೆ. ಪ್ರತಿಯೊಂದು ಕ್ಷೇತ್ರವನ್ನೂ ಕಂಪ್ಯೂಟರ್ ಆವರಿಸಿಕೊಂಡಿದೆ. ಉದ್ಯೋಗದಲ್ಲಿ ಮಾತ್ರವೇ ಅಲ್ಲ, ಮನರಂಜನೆ, ಗೇಮ್ಸ್, ಚಾಟಿಂಗ್… ಇತ್ಯಾದಿಗಳಿಗಾಗಿಯೂ ಸತತವಾಗಿ ಕಂಪ್ಯೂಟರ್ ಸ್ಕ್ರೀನ್ ಅನ್ನು ನೋಡುತ್ತಿರಬೇಕಾಗುತ್ತದೆ. ಇಂತಹಾ ಪರಿಸ್ಥಿತಿಯಲ್ಲಿ ತಲೆನೋವು, ಕಣ್ಣುರಿ, ಬೆನ್ನು ನೋವು… ಮುಂತಾದವುಗಳ ಬಗ್ಗೆ ಜನ, ವಿಶೇಷವಾಗಿ ಕಂಪ್ಯೂಟರ್ ಬಳಸುತ್ತಿರುವವರು ದೂರುತ್ತಿರುವುದನ್ನು ಕೇಳಿರುತ್ತೀರಿ.

ಕಂಪ್ಯೂಟರ್ ಸ್ಕ್ರೀನ್‌ಗಳಿಂದ ಹೊರಹೊಮ್ಮುವ ಬೆಳಕು ಕಣ್ಣಿಗೆ ಕಂಟಕ. ದೀರ್ಘಕಾಲ ಕಂಪ್ಯೂಟರ್ ಪರದೆಯನ್ನು ನೋಡುತ್ತಿದ್ದರೆ ಉಂಟಾಗುವ ಹಾನಿಕಾರಕ ಪರಿಣಾಮವನ್ನು ವೈದ್ಯಕೀಯ ಪರಿಭಾಷೆಯಲ್ಲಿ ‘ಡಿಜಿಟಲ್ ಐ ಸ್ಟ್ರೈನ್’ ಎಂದೇ ಕರೆಯುತ್ತಾರೆ. ಆ ಬೆಳಕಿನ ಕಿರಣಗಳು, ವಿಕಿರಣಗಳನ್ನು ತಡೆಯಲು ಕಂಪ್ಯೂಟರ್ ಪರದೆಯನ್ನು ನಿಮ್ಮ ಕಣ್ಣಿಗೆ ನೇರವಾಗಿ ಬೆಳಕು ಬೀರದಂತೆ ಹೊಂದಿಸಿಕೊಳ್ಳುವುದು ಹಾಗೂ ಆ್ಯಂಟಿ-ಗ್ಲೇರ್ ಕನ್ನಡಕಗಳನ್ನು ಧರಿಸುವುದು ಉತ್ತಮ ಅಭ್ಯಾಸ. ಈಗಾಗಲೇ ಕನ್ನಡಕ ಬಳಸುತ್ತಿದ್ದರೆ, ಆ್ಯಂಟಿ-ಗ್ಲೇರ್ ಕೋಟಿಂಗ್ ಇರುವಂಥವುಗಳನ್ನೇ ಬಳಸಿದರೆ ಉತ್ತಮ. ಅವುಗಳ ಹೊರತಾಗಿ ಕೆಲವೊಂದು ಮೂಲಭೂತ ಮತ್ತು ಖರ್ಚಿಲ್ಲದ ಕ್ರಮಗಳನ್ನು ಅನುಸರಿಸುವುದರಿಂದ ಸತತ ಕಂಪ್ಯೂಟರ್ ಬಳಕೆ ಮಾಡಿದರೂ ಕೂಡ ಆರೋಗ್ಯದ ಸಮಸ್ಯೆಗಳನ್ನು ತಪ್ಪಿಸಿಕೊಳ್ಳಬಹುದು. ಈ ಬಗ್ಗೆ ಮುಂದೆ ಓದಿ.

ಕಂಪ್ಯೂಟರೇ ಪ್ರಧಾನವಾಗಿರುವ ಉದ್ಯೋಗ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವವರನ್ನು ಟೆಕ್ಕಿಗಳೆನ್ನುತ್ತಾರೆ. ಅವರಿಗೆ ಕಂಪನಿಗಳಲ್ಲಿ ಮೊದಲು ಸೇರ್ಪಡೆಯಾದಾಗ 20-20-20-20 ಎಂಬ ಸೂತ್ರವೊಂದನ್ನು ಹೇಳಿಕೊಟ್ಟಿರುತ್ತಾರೆ. ಅಂದರೆ, ಕಂಪ್ಯೂಟರ್‌ನಲ್ಲಿ ಕೆಲಸ ಮಾಡುತ್ತಿರುವಾಗ ಪ್ರತೀ 20 ನಿಮಿಷಕ್ಕೊಮ್ಮೆ ಕಣ್ಣಿಗೆ 20 ಸೆಕೆಂಡ್ ವಿರಾಮ ನೀಡಬೇಕು. ಅಂದರೆ 20 ಅಡಿ ದೂರದಲ್ಲಿರುವ ಬಿಳಿ ಜಾಗವನ್ನು ಆ ಸಮಯದಲ್ಲಿ ನೋಡಬೇಕು. ಮತ್ತು ಯಾವಾಗಲೂ ಕಂಪ್ಯೂಟರ್ ಪರದೆಯು ನಿಮ್ಮ ಕಣ್ಣಿನಿಂದ ಕನಿಷ್ಠ 20 ಇಂಚು ದೂರದಲ್ಲಿರಬೇಕು. ಕಣ್ಣಿನ ಶ್ರಮವನ್ನು ಇದು ಸಾಕಷ್ಟು ದೂರ ಮಾಡುತ್ತದೆ ಮತ್ತು ಕಣ್ಣುಗಳ ತೇವಾಂಶವೂ ಉಳಿಯುತ್ತದೆ, ಕಣ್ಣುಗಳ ಆರೋಗ್ಯಕ್ಕೆ ಪೂರಕವಾಗುತ್ತದೆ.

ಆಫೀಸಲ್ಲಿ ಕೆಲಸ ಮಾಡುವಾಗ ಕಂಪ್ಯೂಟರ್ ಬಳಕೆಗೆ ಸೂಕ್ತವಾದ ಬೆಳಕಿನ ವ್ಯವಸ್ಥೆ ಇರುತ್ತದೆ. ಆದರೆ ಮನೆಯಲ್ಲಿ? ನೀವು ಈ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ, ಮನೆಯಲ್ಲೂ ಸಂಜೆ ಹೆಚ್ಚು ಹೊತ್ತು ಕಂಪ್ಯೂಟರ್ ಕೆಲಸ ಮಾಡುತ್ತಿದ್ದರೆ, ಕತ್ತಲಲ್ಲಿ ಕುಳಿತು ಬರೇ ಕಂಪ್ಯೂಟರ್ ಸ್ಕ್ರೀನ್ ಬೆಳಕಲ್ಲಿ ಕೆಲಸ ಮಾಡಬಾರದು. ಹಿತವಾದ ಬೆಳಕು ಬಲ್ಬ್‌ನಿಂದಾಗಲೀ, ಕಿಟಕಿಯಿಂದಾಗಲೀ ಬರುತ್ತಿರಲಿ. ಆದರೆ, ಎದುರು ಭಾಗದಿಂದ ಅಥವಾ ಹಿಂಭಾಗದಿಂದ ಬೆಳಕು ಬಾರದಂತೆ ನೋಡಿಕೊಳ್ಳಿ. ಯಾಕೆಂದರೆ, ಸ್ಕ್ರೀನ್ ಮೇಲೆ ಬೀಳುವ ಬೆಳಕಿನಿಂದ ಅದರಲ್ಲಿ ಓದಲು, ನೋಡಲು ಕಷ್ಟವಾಗುತ್ತದೆ ಮತ್ತು ಎದುರಿನಿಂದ ಬೆಳಕಿದ್ದರೆ ಕಣ್ಣುಗಳಿಗೆ ತ್ರಾಸವಾಗುತ್ತದೆ. ಬಿಸಿಲಿನಲ್ಲಿ ಕಂಪ್ಯೂಟರ್ ಕೆಲಸ ಬೇಡ. ಮತ್ತೊಂದು ನೆನಪಿಡಬೇಕಾದ, ಹೆಚ್ಚಿನವರು ಕೆಲವೊಮ್ಮೆ ಮರೆತೇಬಿಡುವ ಸಂಗತಿಯೆಂದರೆ, ಕಂಪ್ಯೂಟರ್ ನೋಡುತ್ತಿರುವಾಗ ಆಗಾಗ್ಗೆ ಕಣ್ಣುರೆಪ್ಪೆಯನ್ನು ಮುಚ್ಚಿ-ತೆರೆಯುವುದು. ಈ ರೀತಿ ಮಾಡುವುದರಿಂದ ಕಣ್ಣುಗಳ ಪಸೆ ಆರುವುದನ್ನು, ಅದರಿಂದ ಕಿರಿಕಿರಿಯೆನ್ನಿಸಿ, ತಲೆಶೂಲೆ ಬರುವುದನ್ನು ಸ್ವಲ್ಪಮಟ್ಟಿಗೆ ತಡೆಯಬಹುದು.

ಹೆಚ್ಚಿನವರು ಮರೆತುಬಿಡುವ ಮತ್ತೊಂದು ಅಂಶವಿದೆ. ಅದೆಂದರೆ ಸ್ಕ್ರೀನನ್ನು ಸ್ವಚ್ಛವಾಗಿಟ್ಟಿರುವುದು. ಇತ್ತೀಚೆಗೆ ಟಚ್ ಸ್ಕ್ರೀನ್ ಕಂಪ್ಯೂಟರ್/ಲ್ಯಾಪ್‌ಟಾಪ್‌ಗಳು ಬಂದ ಮೇಲಂತೂ, ಸ್ಕ್ರೀನ್ ಮೇಲೆ ಬೆರಳಚ್ಚು, ಧೂಳು, ಕೊಳೆ ಇರುವುದು ಜಾಸ್ತಿಯಾಗಿಬಿಟ್ಟಿದೆ. ಅಕ್ಷರಗಳನ್ನು ಅಥವಾ ಚಿತ್ರವನ್ನು ನೋಡಲು ಈ ಧೂಳಿನಿಂದ ನಿಮಗರಿವಿಲ್ಲದಂತೆಯೇ ಅಡ್ಡಿಯಾಗಬಹುದು. ಒಂದು ಸಲ, ಧೂಳು, ಕೊಳೆ, ಬೆರಳಚ್ಚನ್ನೆಲ್ಲಾ ನಿರ್ಲಕ್ಷಿಸಿಬಿಟ್ಟರೆ, ಅದುವೇ ಅಭ್ಯಾಸವಾಗಬಹುದು. ಸ್ಕ್ರೀನ್ ತುಂಬಾ ಧೂಳು, ಕೊಳೆ ತುಂಬಿ, ಅಸ್ಪಷ್ಟವಾಗಬಹುದು. ಸರಿಯಾಗಿ ಕಾಣಿಸುವುದಿಲ್ಲವೆಂಬ ಕಾರಣಕ್ಕೆ ನಿಮ್ಮ ಕಣ್ಣುಗಳು ತನ್ನನ್ನು ತಾನೇ ಹೊಂದಿಸಿಕೊಳ್ಳುವಾಗ ಕಣ್ಣುಪಾಪೆಗಳಿಗೆ ಶ್ರಮ ಹೆಚ್ಚಾಗಬಹುದು. ಈ ಬಗ್ಗೆ ಎಚ್ಚರಿಕೆ ತೆಗೆದುಕೊಳ್ಳಬೇಕಾಗುತ್ತದೆ.

ಇನ್ನೊಂದಿಷ್ಟು ಉಪಯುಕ್ತ ಸಲಹೆಗಳೆಂದರೆ, ಕುಳಿತುಕೊಳ್ಳುವ ಭಂಗಿಯು ಕತ್ತು, ಸೊಂಟ, ಕಣ್ಣು, ಕೈ ಮುಂತಾಗಿ ದೇಹದ ಯಾವುದೇ ಭಾಗಕ್ಕೆ ತ್ರಾಸವಾಗದಂತೆ ಇರಲಿ. ಹೆಚ್ಚು ಓದುವುದಿದ್ದರೆ, ಸ್ಕ್ರೀನ್‌ನಲ್ಲಿ ಅಕ್ಷರಗಳ ಗಾತ್ರ ದೊಡ್ಡದಾಗಿಸಿಯೇ ಓದಿಕೊಳ್ಳಿ; ಡೆಸ್ಕ್‌ಟಾಪ್‌ಗಿಂತಲೂ ಲ್ಯಾಪ್‌ಟಾಪ್ ಕಣ್ಣುಗಳಿಗೆ ಕಡಿಮೆ ಶ್ರಮ ನೀಡುತ್ತದೆ; ಕಣ್ಣು ಒಣಗಿದಂತಿದ್ದರೆ, ವೈದ್ಯರಲ್ಲಿ ವಿಚಾರಿಸಿ ಸೂಕ್ತವಾದ ಐ ಡ್ರಾಪ್ಸ್ ಬಳಸಿ; ಹೆಚ್ಚು ಹಸಿರು ಸೊಪ್ಪು, ತರಕಾರಿ ಸೇವಿಸಿ.

ಈ ಮೇಲಿನ ಅಂಶಗಳಲ್ಲಿ ಕೆಲವಂತೂ ಸ್ಮಾರ್ಟ್‌ಫೋನ್, ಟ್ಯಾಬ್ಲೆಟ್‌ಗಳಿಗೂ ಅನ್ವಯವಾಗುತ್ತವೆ. ನೆನಪಿಡಿ, ನಮ್ಮ ಕಣ್ಣುಗಳು ನಮಗೆ ಅನುಕೂಲ ಮಾಡಿಕೊಟ್ಟರೆ ಮಾತ್ರವೇ ಗ್ಯಾಜೆಟ್‌ಗಳನ್ನು ನಾವು ಪರಿಪೂರ್ಣವಾಗಿ ಆನಂದಿಸಬಹುದು.

ಟೆಕ್-ಟಾನಿಕ್
ರೈಲ್ವೇ ಟಿಕೆಟ್ ಬುಕ್ ಮಾಡಲು

ಯಾವುದೇ ಊರಿಗೆ ಹೋಗಲು ಟಿಕೆಟ್‌ಗಳನ್ನು ಮುಂಗಡ ಕಾಯ್ದಿರಿಸಲು ಉದ್ದುದ್ದ ಸರತಿ ಸಾಲುಗಳಲ್ಲಿ ನಿಲ್ಲುವ ಬದಲು, ಕುಳಿತಲ್ಲೇ ಟಿಕೆಟ್ ಕಾಯ್ದಿರಿಸಬಹುದಾದ ವ್ಯವಸ್ಥೆಯನ್ನು ಭಾರತೀಯ ರೈಲ್ವೇ ಇಲಾಖೆ irctc.co.in ಮೂಲಕ ಒದಗಿಸಿದೆ. ಹಿಂದೆ ಈ ತಾಣವು ಸಿಕ್ಕಾಪಟ್ಟೆ ನಿಧಾನ ಅಂತೆಲ್ಲಾ ದೂರುಗಳು ಬಂದಿದ್ದ ಹಿನ್ನೆಲೆಯಲ್ಲಿ ಸರಕಾರವು ಈ ಬಗ್ಗೆ ಗಮನ ಹರಿಸಿದೆ. ತತ್ಪರಿಣಾಮವಾಗಿ ಈ ತಾಣವು ವೇಗವಾಗಿ ಬುಕಿಂಗ್ ಮಾಡಲು ಸಹಕರಿಸುತ್ತಿದೆ. ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಅಥವಾ ನೆಟ್‌ಬ್ಯಾಂಕಿಂಗ್ ಬಳಸಿ ನಾವೇ ಲಾಗಿನ್ ಆಗಿ ಟಿಕೆಟ್ ಬುಕ್ ಮಾಡಬಹುದು. ಪ್ರಯಾಣಿಕರ ಪಟ್ಟಿಯನ್ನು ಒಮ್ಮೆ ಸೇವ್ ಮಾಡಿಟ್ಟುಕೊಂಡರೆ, ಪದೇ ಪದೇ ಎಲ್ಲ ವಿವರ ದಾಖಲಿಸುವ ಶ್ರಮ ಇರುವುದಿಲ್ಲ. ಟಿಕೆಟ್ ರದ್ದುಪಡಿಸುವ ವ್ಯವಸ್ಥೆಯೂ ಇದೆ.

ಗ್ರಾಹಕ ಸಾಮಗ್ರಿ ಖರೀದಿಸುವ ಮುನ್ನ ಇಂಟರ್ನೆಟ್ ಜಾಲಾಡಿ

ಮಾಹಿತಿ@ತಂತ್ರಜ್ಞಾನ ವಿಜಯ ಕರ್ನಾಟಕ ಅಂಕಣ 85, ಜುಲೈ 21, 2014:

Avinash Column-1ಪೆನ್ನಿನಿಂದ ಹಿಡಿದು ಟಿವಿ, ವಾಷಿಂಗ್ ಮೆಷಿನ್, ಫ್ರಿಜ್‌ವರೆಗೆ ಯಾವುದೇ ವಸ್ತುಗಳನ್ನು ಇಂಟರ್ನೆಟ್ ಮೂಲಕವೇ ಖರೀದಿಸುವ ಪ್ರಕ್ರಿಯೆಯೊಂದು ಭಾರತದಲ್ಲಿ ಈಗ ನಿಧಾನಕ್ಕೆ ವೇಗ ಪಡೆದುಕೊಳ್ಳುತ್ತಿದೆ. ಕುಳಿತಲ್ಲಿಂದಲೇ ಎಲ್ಲವನ್ನೂ ನೋಡಿ ಖರೀದಿ ಮಾಡಬಹುದಾದ ಅನುಕೂಲತೆ ಮತ್ತು ಸಮಯದ ಉಳಿತಾಯದಿಂದಾಗಿ ಇದು ಸಾಧ್ಯವಾಗುತ್ತಿದೆ.

ಕೆಲವೊಂದು ಉತ್ಪನ್ನಗಳು ಆನ್‌ಲೈನ್‌ನಲ್ಲಿ ಮಾತ್ರ ಲಭ್ಯ. ಉದಾಹರಣೆಗೆ, ಮೋಟೋರೋಲದ ಕೆಲವು ಸ್ಮಾರ್ಟ್‌ಫೋನ್ ಮಾಡೆಲ್‌ಗಳು ಭಾರತದಲ್ಲಿ ಬಿಡುಗಡೆಯಾಗಿದ್ದು ಆನ್‌ಲೈನ್‌ನಲ್ಲಿ ಫ್ಲಿಪ್‌ಕಾರ್ಟ್ ಡಾಟ್ ಕಾಂ ಎಂಬ ಜಾಲತಾಣದ ಮೂಲಕ. ಅವೆಲ್ಲವೂ ಆ ತಾಣದಲ್ಲಿ ಮಾತ್ರ ಲಭ್ಯ, ಬೇರೆ ಅಂತರ್ಜಾಲ ತಾಣಗಳಲ್ಲಾಗಲೀ, ಹೊರಗೆ ಮಳಿಗೆಗಳಲ್ಲಾಗಲೀ ದೊರೆಯುವುದಿಲ್ಲ. ಬೇಡಿಕೆಯೂ ಸಾಕಷ್ಟಿದೆ ಎಂದು ಹೇಳಲಾಗುತ್ತಿತ್ತು. ‘ಸ್ಟಾಕ್ ಇಲ್ಲ, ಬಂದಾಗ ತಿಳಿಸುತ್ತೇವೆ, ನಿಮ್ಮ ಇಮೇಲ್ ವಿಳಾಸ ದಾಖಲಿಸಿ’ ಅಥವಾ ‘ಈಗಲೇ ಬುಕ್ ಮಾಡಿ’ ಎಂಬ ಸಂದೇಶಗಳು ಸಾಮಾನ್ಯವಾಗಿದ್ದವು. ಇದು ಉದಾಹರಣೆಯಷ್ಟೆ. ಇದರ ಹಿಂದೆ ಅತ್ಯುತ್ತಮ ಮಾರುಕಟ್ಟೆ ತಂತ್ರಗಳಿರುತ್ತವೆ. ಆನ್‌ಲೈನ್‌ನಲ್ಲಿ ಮಾತ್ರ ಲಭ್ಯ ಎಂಬ ಈ ಮಾರಾಟ ತಂತ್ರವು ಭಾರತಕ್ಕೂ ಬಂದಿದೆ.

ಫ್ಲಿಪ್‌ಕಾರ್ಟ್, ಇ-ಬೇ, ಇಂಡಿಯಾಟೈಮ್ಸ್, ಅಮೆಜಾನ್ ಮುಂತಾದ ಪ್ರಸಿದ್ಧ ಇ-ಕಾಮರ್ಸ್ ತಾಣಗಳು ವೈವಿಧ್ಯಮಯ ವಸ್ತುಗಳನ್ನು ಮಾರಾಟ ಮಾಡುವಲ್ಲಿ ಜನಪ್ರಿಯವಾಗಿವೆ. ಕ್ರೆಡಿಟ್ ಕಾರ್ಡ್ ಅಥವಾ ನೆಟ್ ಬ್ಯಾಂಕಿಂಗ್ ಮೂಲಕ ಹಣ ಪಾವತಿಸುವ ವ್ಯವಸ್ಥೆ ಇಲ್ಲಿರುತ್ತದೆ. ಇವೆಲ್ಲ ವಹಿವಾಟುಗಳೂ ನಂಬಿಕೆಯ ಆಧಾರದಲ್ಲೇ ನಡೆಯುವುದರಿಂದ ಹಣ ಪಾವತಿಗಾಗಿ ಸುರಕ್ಷಿತ ಮಾರ್ಗವೊಂದಿದೆ. ಅದಕ್ಕೆ ಗೇಟ್‌ವೇ ಎನ್ನುತ್ತಾರೆ ಮತ್ತು ಸರಕಾರದ ಮಾನ್ಯತೆಯೂ ಇದೆ. ಬ್ಯಾಂಕಿಂಗ್ ಸಂಸ್ಥೆಗಳು, ಕ್ರೆಡಿಟ್ ಕಾರ್ಡ್-ಡೆಬಿಟ್ ಕಾರ್ಡ್ ವಿತರಿಸುವ ಕಂಪನಿಗಳು ಈ ಸುರಕ್ಷಿತವಾದ ಗೇಟ್‌ವೇಯಲ್ಲಿ ನೋಂದಾಯಿಸಿಕೊಂಡಿರುತ್ತವೆ. ಇನ್ನು, ಆನ್‌ಲೈನ್‌ನಲ್ಲಿ ಖರೀದಿಸುವ ಕುರಿತು ಸಂದೇಹ ಇರುವವರಿಗಾಗಿಯೇ ಕ್ಯಾಶ್ ಆನ್ ಡೆಲಿವರಿ (ನಾವು ಖರೀದಿ ಮಾಡುವ ಸಾಧನ ಕೈಗೆ ಸಿಕ್ಕಮೇಲಷ್ಟೇ ಹಣ ನೀಡುವ) ವ್ಯವಸ್ಥೆಯೂ ಇದೆ.

ಆನ್‌ಲೈನ್ ತಾಣಗಳಲ್ಲಿನ ಅತಿದೊಡ್ಡ ಅನುಕೂಲವೆಂದರೆ, ವಿಶ್ವಾಸಾರ್ಹ ಜಾಲ ತಾಣಗಳಲ್ಲಿ ಖರೀದಿ ಮಾಡಿದವರು ಈ ಜಾಲ ತಾಣದ ಸೇವೆ ಹೇಗಿದೆ ಮತ್ತು ಅವರು ಖರೀದಿಸಿದ ವಸ್ತು ಹೇಗಿದೆ ಎಂಬುದರ ಕುರಿತು ಸುದೀರ್ಘ ವಿಮರ್ಶೆ ಮಾಡಿರುತ್ತಾರೆ. ಆಯಾ ಉತ್ಪನ್ನದ ಕೆಳಗೆ ಬಳಕೆದಾರರ ವಿಮರ್ಶೆ/ಕಾಮೆಂಟ್ ದಾಖಲಿಸುವ ಸ್ಥಳದಲ್ಲಿ ಇವೆಲ್ಲವೂ ಲಭ್ಯ. ಕೆಲವೊಂದು ವಿಮರ್ಶೆಗಳು (ರಿವ್ಯೆ) ಮಾರುಕಟ್ಟೆ ತಂತ್ರದ ಭಾಗ ಎಂದು ತೋರುತ್ತವೆಯಾದರೂ, ಮತ್ತೆ ಕೆಲವು ಪ್ರಾಮಾಣಿಕ ವಿಮರ್ಶೆಗಳಿರುತ್ತವೆ. ತಾವು ಖರೀದಿಸಿದ ಸಾಧನವನ್ನು ಒಂದಷ್ಟು ದಿನಗಳ ಕಾಲ ಬಳಸಿದವರು ಅದರ ಒಳ್ಳೆಯ ಅಂಶಗಳು, ಕೆಟ್ಟ ಅಂಶಗಳನ್ನು ಪಟ್ಟಿ ಮಾಡಿ ಅಲ್ಲಿ ನಮೂದಿಸಿರುತ್ತಾರೆ. ಸಾಧನ ಚೆನ್ನಾಗಿಲ್ಲದಿದ್ದರೆ ಖಡಕ್ ಆಗಿ ಹೇಳಿರುತ್ತಾರೆ.

ನಿರ್ದಿಷ್ಟ ಉತ್ಪನ್ನದ ಕುರಿತಾಗಿ ಕೇವಲ ಒಂದು ಜಾಲತಾಣದಲ್ಲಿನ ವಿಮರ್ಶೆ ನೋಡಬಾರದು. ಹಲವು ವೆಬ್‌ಸೈಟ್‌ಗಳಲ್ಲಿರುವ ತಜ್ಞರ ವಿಮರ್ಶೆಗಳನ್ನು ಓದಿದರೆ ಜತೆಗೆ, ಅದಕ್ಕೆ ಬಂದಿರುವ ನೈಜ ಬಳಕೆದಾರರ ಕಾಮೆಂಟ್‌ಗಳನ್ನೂ ನೋಡಿದರೆ ನಿರ್ದಿಷ್ಟ ವಸ್ತುವನ್ನು ಖರೀದಿಸಬಹುದೇ ಬೇಡವೇ ಎಂಬ ಬಗ್ಗೆ ಅಳೆದು ತೂಗಿ ನಿರ್ಧಾರಕ್ಕೆ ಬರಲು ನೆರವಾಗುತ್ತವೆ. ಒಂದು ಸ್ಮಾರ್ಟ್‌ಫೋನನ್ನೇ ಉದಾಹರಣೆಗೆ ತೆಗೆದುಕೊಂಡರೆ, ಅದರ ಕ್ಯಾಮರಾ ಹೇಗೆ ಕೆಲಸ ಮಾಡುತ್ತದೆ, ಅದರ ಆನ್/ಆಫ್ ಸ್ವಿಚ್ ಹೇಗಿರುತ್ತದೆ, ಮ್ಯೂಸಿಕ್ ಹೇಗೆ ಕೇಳಿಸುತ್ತದೆ, ವೀಡಿಯೋ ಪ್ಲೇ ಮಾಡುವಾಗ ಚೆನ್ನಾಗಿ ಕಾಣಿಸುತ್ತದೆಯೇ ಅಥವಾ ಹ್ಯಾಂಗ್ ಆಗುತ್ತದೆಯೇ, ಹಲವು ಕಾರ್ಯಗಳನ್ನು ಒಂದೇ ಸಲ ಮಾಡುವಾಗ ಸಾಧನವು ಬಿಸಿಯಾಗುತ್ತದೆಯೇ ಎಂಬಿತ್ಯಾದಿ ವಿವರ ಅಲ್ಲಿ ಲಭ್ಯವಾಗುತ್ತದೆ.

ಸರಕು ಮಾರುವ ತಾಣಗಳಲ್ಲಿಯೂ ಆಯಾ ವಸ್ತುಗಳ ಪುಟದಲ್ಲಿ ಬಳಕೆದಾರರು ಮಾಡಿದ ಕಾಮೆಂಟ್‌ಗಳನ್ನು ನೋಡಿದರೆ ಮತ್ತಷ್ಟು ಮಾಹಿತಿ ನಿಮಗೆ ದೊರೆಯುತ್ತದೆ. ನಿಮ್ಮಲ್ಲಿರಬಹುದಾದ ಸಂದೇಹಗಳು ಬೇರೆಯವರಿಗೂ ಬಂದಿರಬಹುದು, ಅವರು ಅದನ್ನು ಅಲ್ಲಿ ದಾಖಲಿಸಿದಾಗ, ತಿಳಿದವರು ಉತ್ತರಿಸಿರುತ್ತಾರೆ. ಅಲ್ಲೇ ಸಾಧನದ ಒಳಿತು-ಕೆಡುಕುಗಳ ಕುರಿತು ಚರ್ಚೆ, ವಾದ-ಪ್ರತಿವಾದಗಳೂ ನಡೆಯುತ್ತವೆ. ಇವುಗಳಿಂದ ನೀವು ಖರೀದಿಸಬೇಕೆಂದಿರುವ ಸಾಧನವು ನಿಮ್ಮ ಹಣಕ್ಕೆ ತಕ್ಕ ಮೌಲ್ಯ ಕೊಡಬಲ್ಲುದೇ ಎಂದು ನಿರ್ಧರಿಸಲು ನಿಮಗೆ ಅನುಕೂಲವಾಗುತ್ತದೆ. ಹೀಗಾಗಿ, ಯಾವುದೇ ವಸ್ತು ಖರೀದಿಸುವ ಮುನ್ನ ಆನ್‌ಲೈನ್‌ನಲ್ಲಿ ರಿಸರ್ಚ್ ಮಾಡಿದರೆ, ಸಾಕಷ್ಟು ಹಣ ಉಳಿತಾಯ ಮಾಡಬಹುದು ಮತ್ತು ಒಳಿತು ಕೆಡುಕುಗಳ ಕುರಿತು ಸ್ಪಷ್ಟ ಮಾಹಿತಿ ತಿಳಿದುಕೊಳ್ಳಬಹುದು.

ಏನಿದು ಮಾಲ್‌ವೇರ್, ವೈರಸ್?

ವಿಜಯ ಕರ್ನಾಟಕ ಮಾಹಿತಿ@ತಂತ್ರಜ್ಞಾನ ಅಂಕಣ – 83: ಜುಲೈ 07, 2014
ಕಂಪ್ಯೂಟರ್‌ನಲ್ಲಿ ಕೆಲಸ ಮಾಡುತ್ತಿರುವರು ಸ್ಪೈವೇರ್, ಮಾಲ್‌ವೇರ್, ವೈರಸ್ ಎಂಬಿತ್ಯಾದಿ ಪದಗಳ ಬಗ್ಗೆ ಕೇಳಿದ್ದೀರಿ. ಹೀಗೆಂದರೆ ಏನು ಮತ್ತು ಹೇಗೆ ನಿಮ್ಮ ಕಂಪ್ಯೂಟರಿಗೆ ಹಾನಿಕಾರಕ ಎಂಬ ಬಗ್ಗೆ ಗೊಂದಲದಲ್ಲಿದ್ದೀರಾ? ಇಲ್ಲಿದೆ ಒಂದಿಷ್ಟು ಉಪಯುಕ್ತ ಮಾಹಿತಿ.

ವೈರಸ್ ನಮ್ಮ ದೇಹಕ್ಕೂ ಸೋಂಕುತ್ತದೆ. ಹೀಗೆ ಸೋಂಕುವ ಅವು ದೇಹದ ಜೀವಕೋಶಗಳನ್ನೇ ತದ್ರೂಪಿ ವೈರಸ್ ಸೃಷ್ಟಿಯ ಫ್ಯಾಕ್ಟರಿಗಳಾಗಿ ಪರಿವರ್ತಿಸಿ ದೇಹವಿಡೀ ಜ್ವರವೋ ಅಥವಾ ಬೇರಾವುದೋ ಕಾಯಿಲೆಯೋ ಹರಡಲು ಕಾರಣವಾಗುತ್ತದೆ. ಅದೇ ರೀತಿ ಈ ತಾಂತ್ರಿಕ ವೈರಸ್ ಕೋಡ್ ಕೂಡ ಏನೂ ತಿಳಿಯದ ಪ್ರೋಗ್ರಾಂನೊಳಗೆ ಪ್ರವೇಶಿಸಿ, ಆ ಪ್ರೋಗ್ರಾಂ ರನ್ ಆಗುವಾಗ ಈ ವೈರಸ್ ಕೂಡ ರನ್ ಆಗಿ, ಬೇರೆ ಪ್ರೋಗ್ರಾಂಗಳಿಗೆ, ಅಪ್ಲಿಕೇಶನ್‌ಗಳಿಗೆ ಅಥವಾ ಇಡೀ ಕಂಪ್ಯೂಟರಿಗೆ ಹರಡುತ್ತದೆ.

ತಾಂತ್ರಿಕ ಭಾಷೆಯಲ್ಲಿ ವೈರಸ್ ಎಂದರೆ, ನಾವು ಸೋಂಕುಪೀಡಿತ ಪ್ರೋಗ್ರಾಂ ಚಲಾಯಿಸಿದಾಗ ತಾನು ಕೂಡ ಸಕ್ರಿಯವಾಗುವ ಒಂದು ತಂತ್ರಾಂಶ. ಹೆಚ್ಚಾಗಿ, ಪೂರ್ವನಿರ್ಧರಿತ ದಿನದಂದು ಈ ವೈರಸ್ ಕೋಡ್ ಸಕ್ರಿಯಗೊಳ್ಳುವಂತೆ ಪ್ರೋಗ್ರಾಂ ಮಾಡಬಹುದಾಗಿದೆ. ಹಿಂದೆಲ್ಲಾ ವೈರಸ್‌ಗಳು ಕಂಪ್ಯೂಟರನ್ನು ಹಾಳುಗೆಡಹುವಂತೆ ಕಿಲಾಡಿಗಳು, ಕಿಡಿಗೇಡಿಗಳ ಮೂಲಕ ಸೃಷ್ಟಿಯಾಗುತ್ತಿದ್ದವು. ಆದರೆ ಈಗ ಅವು ಮಾಹಿತಿ ಕದಿಯುವ ತಂತ್ರಜ್ಞಾನವಾಗಿ ಬೆಳೆದುಬಿಟ್ಟಿದೆ.

ವರ್ಮ್ಸ್ ಕೂಡ ವೈರಸ್‌ನಂತೆಯೇ ಇರುವ ಕೋಡ್, ಆದರೆ ಇಲ್ಲಿ ನಾವು ಸೋಂಕುಪೀಡಿತ ಪ್ರೋಗ್ರಾಂ ಅನ್ನು ರನ್ ಮಾಡಲೇಬೇಕೆಂದಿಲ್ಲ. ತಾನಾಗಿಯೇ ಬೇರೆ ಕಂಪ್ಯೂಟರಿಗೆ ನಕಲಾಗುವ ಇದು, ಸ್ವಯಂ ಆಗಿ ರನ್ ಆಗುತ್ತದೆ ಮತ್ತು ತದ್ರೂಪಿ ಫೈಲ್‌ಗಳನ್ನು ಸೃಷ್ಟಿಸಿಕೊಳ್ಳುತ್ತಾ ಹೋಗುತ್ತದೆ. ಇದು ಇಂಟರ್ನೆಟ್‌ನಲ್ಲಿ ಸಾಕಷ್ಟು ಬ್ಯಾಂಡ್‌ವಿಡ್ತ್ ಕಬಳಿಸುತ್ತದೆ. ಇದರಿಂದ ವೆಬ್ ಬ್ರೌಸಿಂಗ್ ನಿಧಾನವಾಗುತ್ತದೆ ಮತ್ತು ಸಾಕಷ್ಟು ಡೇಟಾ (ಇಂಟರ್ನೆಟ್ ದತ್ತಾಂಶ) ನಷ್ಟವಾಗುತ್ತದೆ. ನೆಟ್‌ವರ್ಕ್‌ಗೆ ಕನೆಕ್ಟ್ ಆಗಿದ್ದರೆ, ಕೆಲಸ ಸ್ಲೋ ಆಗುತ್ತದೆ.

ಟ್ರೋಜನ್ ಎಂಬ ಹಾನಿಕಾರಕ ಪ್ರೋಗ್ರಾಂಗಳು, ನೋಡಲು ನಮಗೆ ಪರಿಚಯವಿರುವ ಅಪ್ಲಿಕೇಶನ್‌ಗಳಂತೆಯೇ ಕಾಣಿಸುತ್ತವೆ. ಓಪನ್ ಮಾಡಿದರೂ ಕೆಲವೊಮ್ಮೆ ಆಯಾ ಪ್ರೋಗ್ರಾಂನಂತೆಯೇ ಆರಂಭದಲ್ಲಿ ಕೆಲಸ ಮಾಡುತ್ತದೆ, ಆದರೆ ನಿಧಾನವಾಗಿ ತನ್ನ ಅಸಲಿ ಮುಖ ತೋರಿಸಲಾರಂಭಿಸುತ್ತದೆ. ಅದಕ್ಕೇ ಹೇಳುವುದು, ಇಮೇಲ್ ಅಥವಾ ಸಂದೇಶ ಸೇವೆಗಳ ಮೂಲಕವಾಗಿ ಯಾವುದೇ ಫೈಲ್ (ಫೋಟೋ, ಡಾಕ್ಯುಮೆಂಟ್, ವೀಡಿಯೋ, ಆಡಿಯೋ… ಇತ್ಯಾದಿ) ಬಂದರೆ, ಅದನ್ನು ಓಪನ್ ಮಾಡುವ ಮುನ್ನ ಎರಡೆರಡು ಬಾರಿ ಯೋಚಿಸಬೇಕು. ಅಪರಿಚಿತರು ಕಳುಹಿಸಿದ ಇಮೇಲ್‌ಗಳಲ್ಲಿ ‘ಈ ಅಟ್ಯಾಚ್‌ಮೆಂಟ್ ಓಪನ್ ಮಾಡಿ’ ಎಂಬ ಸಂದೇಶದೊಂದಿಗೆ, “ನಿಮ್ಮ ಬಿಲ್ ಲಗತ್ತಿಸಿದ್ದೇನೆ, ಓಪನ್ ಮಾಡಿ, ಚೆಕ್ ಮಾಡಿಕೊಳ್ಳಿ” ಎಂದೋ, “ಅಟ್ಯಾಚ್‌ಮೆಂಟ್ ಓಪನ್ ಮಾಡಿ, ಉಚಿತ ಬಹುಮಾನದ ವಿವರಗಳಿವೆ” ಎಂದೋ, ಅಥವಾ ‘ಈ ಫಾರ್ಮ್ ಭರ್ತಿ ಮಾಡಿ ತಕ್ಷಣ ಕಳುಹಿಸಿ’ ಎಂಬಂತೆಯೋ, ವಿಭಿನ್ನ ರೀತಿಯ ಪ್ರಚೋದನಾತ್ಮಕ ಸಂದೇಶಗಳಿರಬಹುದು. ಇವುಗಳನ್ನಂತೂ ಸಾರಾಸಗಟಾಗಿ ನಿರ್ಲಕ್ಷಿಸಬಹುದು. ಯಾಕೆಂದರೆ, ಯಾವುದೇ ಕಂಪನಿ ಗುರುತು ಪರಿಚಯವಿಲ್ಲದ ವ್ಯಕ್ತಿಗೆ ವಿನಾ ಕಾರಣ ಉಚಿತ ಕೊಡುಗೆ ನೀಡುವುದಾದರೂ ಯಾಕೆ? ಎಂದೊಮ್ಮೆ ಯೋಚಿಸಿದರೆ ಸಾಕು.

ವೈರಸ್‌ಗಳು, ವರ್ಮ್‌ಗಳು ಹಾಗೂ ಟ್ರೋಜನ್ ಎಂಬ ಹೆಸರುಗಳು ಈ ಹಾನಿಕಾರಕ ಪ್ರೋಗ್ರಾಂಗಳು ಹೇಗೆ ಪ್ರಸಾರವಾಗುತ್ತವೆ ಎಂಬುದನ್ನು ಅವಲಂಬಿಸಿವೆ. ಉಳಿದವೆಲ್ಲಾ, ಏನು ಮಾಡಬಲ್ಲವು ಎಂಬುದರ ಆಧಾರದಲ್ಲಿ ಹೆಸರು ಗಳಿಸಿಕೊಂಡಿರುತ್ತವೆ. ಉದಾಹರಣೆಗೆ, ಸ್ಪೈವೇರ್ ಎಂಬ ಪ್ರೋಗ್ರಾಂ ನಿಮ್ಮ ಕಂಪ್ಯೂಟರಿನ ಮೇಲೆ ಕಳ್ಳಗಣ್ಣಿಡುತ್ತದೆ, ಗೌಪ್ಯವಾಗಿ ಸ್ಪೈ (ಗೂಢಚರ) ಮಾದರಿಯಲ್ಲಿ ಸೇರಿಕೊಂಡು, ನಿಮ್ಮ ಎಲೆಕ್ಟ್ರಾನಿಕ್ ಸಾಧನದಲ್ಲಿ ಸಂಗ್ರಹವಾಗಿರುವ ಪಾಸ್‌ವರ್ಡ್ ಮತ್ತಿತರ ವೈಯಕ್ತಿಕ ಮಾಹಿತಿಯನ್ನು ಕದ್ದು, ಸಂಬಂಧಪಟ್ಟ ಗಮ್ಯ ಸ್ಥಾನಕ್ಕೆ ರವಾನಿಸುತ್ತದೆ.

ಅದೇ ರೀತಿಯಾಗಿ ಆ್ಯಡ್‌ವೇರ್‌ಗಳೂ ಇವೆ. ಯಾವುದೇ ವೆಬ್ ಪುಟ ತೆರೆದಾಗ ಜಾಹೀರಾತಿನ ವಿಂಡೋ ಪಾಪ್-ಅಪ್ ಆಗುತ್ತದೆ. “ಉಚಿತ ಅದ್ಭುತ ತಂತ್ರಾಂಶ, ಇಲ್ಲಿ ಡೌನ್‌ಲೋಡ್ ಮಾಡಿ” ಎಂದೋ, “ನಿಮಗೆ ಲಾಟರಿ ಹೊಡೆದಿದೆ, ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ” ಎಂದೋ ಪ್ರೇರೇಪಣೆ ನೀಡುತ್ತವೆ. ಕ್ಲಿಕ್ ಮಾಡಿದರೆ, ಅದರ ಜತೆಗೆ ಸೇರಿಕೊಂಡಿರುವ ಸ್ಪೈವೇರ್ ನಿಮ್ಮ ಮಾಹಿತಿಯನ್ನು ಕದಿಯಬಲ್ಲುದು (ಎಲ್ಲ ಜಾಹೀರಾತುಗಳು ಹೀಗಿರಲೇಬೇಕಿಲ್ಲ, ಸಾಚಾ ಜಾಹೀರಾತುಗಳೂ ಇರುತ್ತವೆ).

ಇದೂ ಅಲ್ಲದೆ, ಸ್ಕೇರ್‌ವೇರ್, ರ‍್ಯಾನ್ಸಮ್‌ವೇರ್, ಬಾಟ್, ರೂಟ್‌ಕಿಟ್ ಮುಂತಾದವು ಕೂಡ ಇದ್ದು, ಅವು ಹೆಸರಿಗೆ ತಕ್ಕಂತೆ ಹಾನಿ ಮಾಡುತ್ತವೆ. ಇನ್ನು ಮಾಲ್‌ವೇರ್ ಎಂದರೇನು? ಈ ಮೇಲಿನ ಎಲ್ಲ ದುರುದ್ದೇಶಪೂರಿತ, ಹಾನಿಕಾರಕ ತಂತ್ರಾಂಶಗಳನ್ನು ಒಟ್ಟಾಗಿ ಮಾಲ್‌ವೇರ್‌ಗಳೆನ್ನುತ್ತಾರೆ. ಇಂಗ್ಲಿಷಿನ ಮಲೀಷಿಯಸ್ ಸಾಫ್ಟ್‌ವೇರ್ ಎಂಬುದರ ಹೃಸ್ವರೂಪವಿದು. ಇವೆಲ್ಲವುಗಳಿಂದ ಪಾರಾಗಲು ನಾವು ಆ್ಯಂಟಿವೈರಸ್ ತಂತ್ರಾಂಶ ಬೇಕೆಂದು ಹೇಳುತ್ತೇವೆ. ಆದರೆ, ಅದು ನಿಜಕ್ಕೂ ಆ್ಯಂಟಿ-ಮಾಲ್‌ವೇರ್ ಆಗಿರಬೇಕು, ಅಂದರೆ, ಎಲ್ಲ ರೀತಿಯ ಹಾನಿಕಾರಕ ತಂತ್ರಾಂಶಗಳಿಂದ ರಕ್ಷಣೆ ನೀಡುವಂತಿರಬೇಕು ಎಂಬುದು ಗಮನದಲ್ಲಿರಲಿ.

ಟೆಕ್-ಟಾನಿಕ್: ಕಂಪ್ಯೂಟರ್ ಸ್ಲೋ ಆಗಿದೆಯಾ?
ಕಂಪ್ಯೂಟರ್ ಕ್ಯಾಬಿನೆಟ್ ಅನ್ನು ಯಾರು ಕೂಡ ಓಪನ್ ಮಾಡಬಹುದು. ಆದರೆ, ನಮಗೆ ತಿಳಿದಿಲ್ಲದ ಭಾಗಗಳನ್ನು ಮುಟ್ಟಲು ಹೋಗಬಾರದು ಎಂಬ ಮೂಲಭೂತ ಪರಿಜ್ಞಾನ ಇರಲಿ. ಕಂಪ್ಯೂಟರಿಗೆ ಧೂಳು ಹಿಡಿದಿದ್ದರೆ, ಅದಕ್ಕಾಗಿಯೇ ಲಭ್ಯವಿರುವ ಸಣ್ಣ ವಾಕ್ಯೂಮ್ ಕ್ಲೀನರ್ ಮೂಲಕ ಅಥವಾ ಪುಟ್ಟ ಬ್ರಶ್/ಹತ್ತಿಬಟ್ಟೆಯ ಮೂಲಕ ಧೂಳು ತೆಗೆಯಿರಿ. ಅದರೊಳಗಿರುವ ಫ್ಯಾನ್ ಸರಿಯಾಗಿ ತಿರುಗುತ್ತಿದೆಯೇ ಪರೀಕ್ಷಿಸಿಕೊಳ್ಳಿ. ಅಂತೆಯೇ, ನಿಮ್ಮ ಕಂಪ್ಯೂಟರಿನ ರೀಸೈಕಲ್ ಬಿನ್, ಇಂಟರ್ನೆಟ್ ಟೆಂಪರರಿ ಫೈಲ್‌ಗಳು, ಟೆಂಪ್ ಫೈಲ್‌ಗಳನ್ನು ಡಿಲೀಟ್ ಮಾಡಿ. ಮತ್ತು, ಪಿಸಿ ಕ್ಯಾಬಿನೆಟ್ ಸುತ್ತಮುತ್ತ ಗಾಳಿಯಾಡಲು ಸಾಕಷ್ಟು ಜಾಗವಿರುವುದನ್ನು ಖಾತ್ರಿಪಡಿಸಿಕೊಳ್ಳಿ.

ನಿಮ್ಮ ಡೆಸ್ಕ್‌ಟಾಪ್ ಕ್ಲೀನ್ ಇರಲಿ

ಮಾಹಿತಿ@ತಂತ್ರಜ್ಞಾನ: ವಿಜಯ ಕರ್ನಾಟಕ ಅಂಕಣ: ಮೇ 19, 2014
ಸದಾ ಕಾಲ ನೀವು ಕಂಪ್ಯೂಟರ್ ಮುಂದೆಯೇ ಕೂರುತ್ತಾ ಕೆಲಸ ಮಾಡುವವರಾದರೆ ನಿಮ್ಮ ಕೆಲಸ ಕಾರ್ಯಗಳನ್ನು ಎಷ್ಟರ ಮಟ್ಟಿಗೆ ಅಚ್ಚುಕಟ್ಟಾಗಿ, ಸಂಘಟಿತವಾಗಿ ಮತ್ತು ಯೋಜಿತ ರೀತಿಯಲ್ಲಿ ಮಾಡುತ್ತೀರಿ ಎಂಬುದನ್ನು ನಿಮ್ಮ ಕಂಪ್ಯೂಟರ್ ಪರದೆಯ ಡೆಸ್ಕ್‌ಟಾಪ್ ಹೇಳುತ್ತದೆ. ಡೆಸ್ಕ್‌ಟಾಪ್‌ನಲ್ಲೇ ಸಾಕಷ್ಟು ಫೈಲ್‌ಗಳನ್ನು ಸೇವ್ ಮಾಡುತ್ತೀರೆಂದಾದರೆ, ಒಂದೋ ನೀವು ಬಿಡುವಿಲ್ಲದೆ ಕೆಲಸ ಮಾಡುತ್ತೀರಿ ಎಂದು ತಿಳಿದುಕೊಂಡು ಸುಮ್ಮನಾಗಬಹುದು; ಇಲ್ಲವೇ, ನಿಮ್ಮಷ್ಟು ಉದಾಸೀನತೆ ತೋರುವವರು ಯಾರೂ ಇಲ್ಲ, ಕಂಪ್ಯೂಟರ್‌ನ ಬಗ್ಗೆ ನಿಮಗೆ ಕಾಳಜಿಯೇ ಇಲ್ಲ, ಕೆಲಸದಲ್ಲಿ ಅಶಿಸ್ತು ಎಂದು ಕೂಡ ಅಂದುಕೊಳ್ಳಬಹುದು.

ಈ ಮಾತು ಯಾಕೆಂದರೆ, ಡೆಸ್ಕ್‌ಟಾಪ್‌ನಲ್ಲಿ ಸೇವ್ ಮಾಡಿಡುವ ಯಾವುದೇ ಫೈಲ್‌ಗಳಿಗೆ ರಕ್ಷಣೆ ಇರುವುದಿಲ್ಲ ಎಂಬುದು ನೆನಪಿರಲಿ. ಡೆಸ್ಕ್‌ಟಾಪ್ ಮೇಲೆ ಸೇವ್ ಮಾಡಿಡುವ ಫೈಲ್‌ಗಳು ದಿಢೀರನೇ ನಾಪತ್ತೆಯಾಗಬಹುದು, ಡಿಲೀಟ್ ಆಗಿಬಿಡಬಹುದು, ಡೆಸ್ಕ್‌ಟಾಪ್‌ನಾದ್ಯಂತ ತುಂಬಿಹೋಗಿರುವ ಫೈಲ್‌ಗಳ ಮಧ್ಯೆ ನಿಮಗೆ ಬೇಕಾಗಿರುವುದನ್ನು ಹುಡುಕುವುದೇ ಕಷ್ಟವಾಗಬಹುದು, ತುರ್ತು ಏನಾದರೂ ಕೆಲಸ ಮಾಡಬೇಕಿರುವ ಸಂದರ್ಭದಲ್ಲಿ ಇವುಗಳಿಂದಾಗಿ ಮಾನಸಿಕವಾಗಿಯೂ ಒತ್ತಡ ಹೆಚ್ಚಾಗಬಹುದು. ಈ ರೀತಿ ಆಗದಂತೆ ತಡೆಯುವುದೇ ಜಾಣತನ.

ಡೆಸ್ಕ್‌ಟಾಪ್‌ನಲ್ಲೇ ಜನ ಯಾಕೆ ಫೈಲ್‌ಗಳನ್ನು ಸೇವ್ ಮಾಡುತ್ತಾರೆಂದರೆ, ಅಲ್ಲಿ ನೇರವಾಗಿ ಸೇವ್ ಮಾಡಿದರೆ ನಮ್ಮ ಕೆಲಸವನ್ನು ಸುಲಭಗೊಳಿಸಲು, ಸಮಯ ಉಳಿಸಲು ಸಾಕಷ್ಟು ಮಟ್ಟಿಗೆ ನೆರವಾಗುತ್ತದೆ ಎಂಬ ಭಾವನೆ. ಇಮೇಲ್/ಇಂಟರ್ನೆಟ್‌ನಿಂದ ಡೌನ್‌ಲೋಡ್ ಮಾಡಿದ ಯಾವುದೇ ಫೋಟೋ, ವೀಡಿಯೋ, ಆಡಿಯೋ ಫೈಲ್‌ಗಳು ಅಥವಾ ವರ್ಡ್/ಎಕ್ಸೆಲ್/ಪವರ್ ಪಾಯಿಂಟ್ ಫೈಲುಗಳು ಇಲ್ಲವೇ ಯಾವುದೇ ಪ್ರೋಗ್ರಾಂಗಳ exe ಫೈಲ್‌ಗಳು… ಹೀಗೆ ಡೆಸ್ಕ್‌ಟಾಪ್ ತುಂಬಿಸಲು ಸಾಕಷ್ಟು ಮಾರ್ಗೋಪಾಯಗಳಿರುತ್ತವೆ. ತತ್‌ಕ್ಷಣಕ್ಕೆ ಬೇಕಾಗುತ್ತದೆ ಎಂಬ ಉದ್ದೇಶದಿಂದ ನಾವು ಅವುಗಳೆಲ್ಲವನ್ನೂ ಈ ಡೆಸ್ಕ್‌ಟಾಪ್ ಮೇಲೆಯೇ ಉಳಿಸಿಕೊಳ್ಳುತ್ತೇವೆ, ತನ್ಮೂಲಕ ನಾವಾಗಿಯೇ ಗೊಂದಲದ ಜಾಲದಲ್ಲಿ ಸಿಲುಕುತ್ತೇವೆ.

ಡೆಸ್ಕ್‌ಟಾಪ್ ಮೇಲೆ ಸೇವ್ ಮಾಡುವುದು ತೀರಾ ಸರಳ, ಸುಲಭವಾದರೂ, ಅದು ಸುರಕ್ಷಿತವಲ್ಲವೆಂಬ, ಅದರಿಂದಾಗುವ ನಷ್ಟ ಮತ್ತು ಸಮಸ್ಯೆಗಳ ಕುರಿತ ಅರಿವು ಹೆಚ್ಚಿನವರಿಗೆ ಇರಲಾರದು.

ಸುರಕ್ಷಿತವಲ್ಲ ಹೇಗೆ?: ಮೊದಲನೆಯದಾಗಿ, ನಮ್ಮ ಕಂಪ್ಯೂಟರಿನಲ್ಲಿರುವ ಹಾರ್ಡ್ ಡಿಸ್ಕ್ ಅನ್ನು ಸಿ, ಡಿ, ಇ, ಎಫ್ ಇತ್ಯಾದಿ… ಹಲವಾರು ಡ್ರೈವ್‌ಗಳಾಗಿ ವಿಭಾಗಿಸಲಾಗಿರುತ್ತದೆ. ಕಂಪ್ಯೂಟರಿನ ಕಾರ್ಯಾಚರಣಾ ವ್ಯವಸ್ಥೆ (ಆಪರೇಟಿಂಗ್ ಸಿಸ್ಟಂ) ಹಾಗೂ ಬಹುತೇಕ ಎಲ್ಲ ಪ್ರೋಗ್ರಾಂಗಳು, ತಂತ್ರಾಂಶಗಳು ಇನ್‌ಸ್ಟಾಲ್ ಆಗಿರುವುದು ಮತ್ತು ಕೆಲಸ ಮಾಡುವುದು ‘ಸಿ’ ಡ್ರೈವ್‌ನಲ್ಲಿ. ಉಳಿದ ಡ್ರೈವ್‌ಗಳಲ್ಲಿ ನಮ್ಮ ಯಾವುದೇ ಫೈಲ್‌ಗಳನ್ನು ಸಂಗ್ರಹಿಸಲಾಗುತ್ತದೆ.

ಗಮನಿಸಬೇಕಾದ ಅಂಶವೆಂದರೆ, ವಿಂಡೋಸ್ ಕಾರ್ಯಾಚರಣಾ ವ್ಯವಸ್ಥೆಯಿರುವ ಕಂಪ್ಯೂಟರುಗಳಲ್ಲಿ ಮೈ ಡಾಕ್ಯುಮೆಂಟ್ಸ್, ಮೈ ಪಿಕ್ಚರ್ಸ್, ಮೈ ವೀಡಿಯೋಸ್ ಮುಂತಾದ ಫೋಲ್ಡರ್‌ಗಳಿರುತ್ತವೆ. ಅಂದರೆ ಡೀಫಾಲ್ಟ್ ಆಗಿ ಫೈಲುಗಳು, ಫೋಟೋಗಳು, ವೀಡಿಯೋಗಳು, ಹಾಡುಗಳು ಆಯಾ ಫೋಲ್ಡರ್‌ಗಳಲ್ಲಿ ಸೇವ್ ಆಗಲು ಪ್ರೇರೇಪಿಸುತ್ತವೆ. ಈ ಎಲ್ಲ ಫೋಲ್ಡರ್‌ಗಳು ಹಾಗೂ ಡೆಸ್ಕ್‌ಟಾಪ್ ಕೂಡ ಇರುವುದು ಕಂಪ್ಯೂಟರಿನ ಪ್ರಧಾನ ಭಾಗವಾಗಿರುವ ‘ಸಿ’ ಡ್ರೈವ್‌ನಲ್ಲೇ. ಹೀಗಾಗಿ ಈ ಫೋಲ್ಡರ್‌ಗಳಲ್ಲಿ ಫೈಲುಗಳನ್ನು ಇರಿಸಿದರೆ, ನಿಮ್ಮ ಕಂಪ್ಯೂಟರಿನ ಕಾರ್ಯಾಚರಣೆಯಂತೂ ನಿಧಾನವಾಗಿಬಿಡುತ್ತದೆ. ‘ಸಿ’ ಡ್ರೈವ್‌ನಲ್ಲಿ ಫೈಲುಗಳು ಕಡಿಮೆಯಿದ್ದಷ್ಟೂ ಕಂಪ್ಯೂಟರ್ ಚೆನ್ನಾಗಿ, ವೇಗವಾಗಿ ಕಾರ್ಯನಿರ್ವಹಿಸುತ್ತದೆ.

ಇದೂ ಅಲ್ಲದೆ, ಒಂದೊಮ್ಮೆ ಕಾರ್ಯಾಚರಣಾ ವ್ಯವಸ್ಥೆಯೇ ಕರಪ್ಟ್ (ದೋಷಪೂರಿತ) ಆಗಿಬಿಟ್ಟರೆ, ಮತ್ತು ಸಿಸ್ಟಂ ಅನ್ನು ಫಾರ್ಮ್ಯಾಟ್ ಮಾಡಬೇಕಾಗಿ ಬಂದರೆ, ‘ಸಿ’ ಡ್ರೈವ್‌ನಲ್ಲಿರುವ ಎಲ್ಲ ಫೈಲುಗಳನ್ನೂ ಸುರಕ್ಷಿತವಾಗಿ ಮರಳಿ ಪಡೆಯುವುದು ಅಸಾಧ್ಯ. ಅಥವಾ ಯಾವುದೋ ಫೈಲಲ್ಲಿ ಕೆಲಸ ಮಾಡುತ್ತಿರುತ್ತೀರಿ ಎಂದಿಟ್ಟುಕೊಳ್ಳಿ, ದಿಢೀರನೇ ಅದು ಹ್ಯಾಂಗ್ ಆಗಿಬಿಡುತ್ತದೆ, ಫೈಲ್‌ನಲ್ಲಿರುವ ಅಂಶಗಳೆಲ್ಲವೂ ನಿಮಗೆ ಗೊತ್ತಿಲ್ಲದಂತೆಯೇ ಆಕಸ್ಮಿಕವಾಗಿ ಅಳಿಸಿಹೋಗಿರುತ್ತವೆ. ಇಂತಹಾ ಸಮಸ್ಯೆಗಳನ್ನು ತಪ್ಪಿಸಲು ಫೈಲುಗಳನ್ನು ‘ಸಿ’ ಡ್ರೈವ್‌ನಿಂದ ದೂರ ಇರಿಸಿ.

ಅದಕ್ಕೇನು ಮಾಡಬೇಕು: ಪಾರ್ಟಿಷನ್ ಆಗಿರುವ ಈ ಡ್ರೈವ್‌ಗಳಿಂದಲೇ ನಮ್ಮ ವ್ಯವಸ್ಥಿತಗೊಳಿಸುವಿಕೆ ಪ್ರಕ್ರಿಯೆ ಆರಂಭಿಸಬೇಕು. ಡಿ ಡ್ರೈವ್‌ನಲ್ಲಿ ಹಾಡು, ಸಂಗೀತ, ಫೋಟೋ ಮಾತ್ರವೆಂದೋ, ಎಫ್ ಡ್ರೈವ್‌ನಲ್ಲಿ ಕಚೇರಿಗೆ ಸಂಬಂಧಪಟ್ಟ ಫೈಲುಗಳು ಮಾತ್ರವೆಂದೋ ಅಥವಾ ಜಿ ಡ್ರೈವ್‌ನಲ್ಲಿ ಬೇರೆ ಖಾಸಗಿ ಫೈಲುಗಳು… ಹೀಗೆ ನಿಮಗೆ ಬೇಕಾದಂತೆ ನಿರ್ಧಾರ ಮಾಡಿಕೊಂಡು ಬಿಡಿ.

ಅದರಲ್ಲಿ ಅತೀ ಹೆಚ್ಚು ಮತ್ತು ಪ್ರತಿ ದಿನವೂ ಬಳಕೆಯಾಗುವ ಫೈಲುಗಳಿಗಾಗಿ ಒಂದು ಪ್ರತ್ಯೇಕ ಫೋಲ್ಡರ್ ರಚಿಸಿಟ್ಟುಕೊಳ್ಳಿ. ಡೆಸ್ಕ್‌ಟಾಪ್‌ನಲ್ಲಿ ಈ ಫೋಲ್ಡರ್‌ನ ಶಾರ್ಟ್‌ಕಟ್ ಮಾಡಿಟ್ಟುಕೊಂಡುಬಿಡಿ. ಇದರಿಂದ ಪ್ರತಿ ಬಾರಿಯೂ ಮೈ ಕಂಪ್ಯೂಟರ್‌ಗೆ ಹೋಗಿ, ಅಲ್ಲಿಂದ ನಮಗೆ ಬೇಕಾದ ಡ್ರೈವ್ ಮೂಲಕ ಸಂಬಂಧಪಟ್ಟ ಫೋಲ್ಡರ್‌ಗೆ ನ್ಯಾವಿಗೇಶನ್ ಮಾಡುವ ಕೆಲಸ ತಪ್ಪುತ್ತದೆ. ಡೆಸ್ಕ್‌ಟಾಪ್‌ನಿಂದ ನೇರವಾಗಿ ಶಾರ್ಟ್‌ಕಟ್ ಕ್ಲಿಕ್ ಮಾಡಿದರಾಯಿತು. ಡೆಸ್ಕ್‌ಟಾಪ್‌ನಲ್ಲಿ ಸೇವ್ ಮಾಡಿದಷ್ಟೇ ಸುಲಭ ಮಾರ್ಗವಿದು.